ವ || ಅದಲ್ಲದೆಯುಂ

ಉಡೆವಣಿಗಟ್ಟುವಂದೆ ರಿಪುದಂತಿಘಟಂ ಮದವೆತ್ತಿ ಕಟ್ಟೆ ದ
ಟ್ಟಡಿಯಿಡುವಂದೆ ವೈರಿಧರೆ ಗೋೞಿಡೆ ತೊಟ್ಟಿಲನೇಱುವಂದೆ ಮಾ
ರ್ಪಡೆ ಗಿರಿದುರ್ಗಮೇಱೆ ತೊದಳಂ ನುಡಿವಂದೆ ವಿರೋಧಿ ಕಪ್ಪಮಂ
ನುಡಿಯೆ ಜಗಕ್ಕ ಬಾಲ್ಯದೊಳೆ ಸೂಚಿಸಿದಂ ಶಿಶು ತೀವ್ರತೇಜಮಂ   ೫೧

ವ || ಅಂತೆನಿಸಿ ನೆಗೞ್ದ ಶತ್ರು ಶಾಸನಂಗನ್ನಪ್ರಾಶನಮುಂ ಬಂಧುಜನವರ್ಧನಂಗೆ ವರುಷವರ್ಧನಮುಂ ಭುವನಚೂಡಾಭರಣಂಗೆ ಚೂಡಾಕರಣಮುಂ ಮೊದಲಾದ ಸಮುಚಿತಕ್ರಿಯೆಗಳಂ ಯಥಾಕಾಲದೊಳ್ ಮಹೀಪಾಲಕಂ ಮಾಡಿಸಿ ತದನಂತರಂ ಕ್ರಮಕ್ರಮದಿ ನಂತಃಪುರಪ್ರಚಾರಮಾ ಸೇವ್ಯವೃತ್ತಿ ಸಮನಿಸೆ

ಕಂ || ಸಹಪಾಂಶುಖೇಳರೆನಿಸಿದ
ಬಹುನೃಪದಾರಕರ ನಡುವೆ ದಾಸೀಕರರಿಂ
ಗೃಹಿತಮಣಿಕನಕಮಂಡನ
ಸಹಿತಂ ಮಾರ್ಗಜಱಿ ನೂಂಕಿ ಪೊಕ್ಕುಪವನಮಂ            ೫೨

ಚಂ || ತಿಳಿಗೊಳನಂ ವಿರೋಧಿಜಲದುರ್ಗಮಿದೆಂದು ಕಲಂಕಿ ಪಂಕಜಂ
ಗಳನವಿಧೇಯವೀರಶಿರಮೆಂದು ಕಿಮುೞ್ಚೆ ಮೃಣಾಳಮಂ ಖಳ
ರ್ಕಳ ಕರುಳೆಂದು ಕಿೞ್ತು ಜಳಪಕ್ಷಿಯನನ್ಯಕುಟುಂಬಮೆಂದಸುಂ
ಗೂಳೆ ಸೆಱೆಗೆಯ್ದು ಸೂಚಿಸಿದನೇಬೆಸನಂ ಶಿಶು ಬಾಲಕೇಳಿಯೊಳ್   ೫೩

ವ || ಅಂತಗಣ್ಯ ತಾರುಣ್ಯಲಕ್ಷ್ಮಿಯಂ ತಳೆದು ಗುರುಜನದ ಪರಿಜನದ ಮನಮೆಂಬ ನಿಮ್ನಗೆಯಿಂದತಿಬಹುಳ ಮೋಹರಸಮನೋರಂತೆ ತೀವಿ ಕಱೆವ ನೀರ್ವಂದ ನೀರದರಮೆನಿಸಿ ತತ್ಕುಮಾರನಿರ್ಪನ್ನೆಗಂ

ಮ || ದ್ವಿರದಾರೋಹಣಯೋಗ್ಯವೀಧಿ ಹಯವೈಹಾಳಿಪ್ರದೇಶಂ ನಿರಂ
ತರಶಸ್ತ್ರಶ್ರಮಭೂಮಿ ಶಾಸ್ತ್ರಸಮಿತಿವ್ಯಾಖ್ಯಾನಶಾಲಾಪರಂಸ
ಪರೆ ಸುತ್ತಿರ್ಪಿನೆಗಂ ನೃಪಂ ನಿಜಸುತಂಗಾನಂದದಿಂ ಮಾಡಿಸಲ್
ಕರಮೊಪ್ಪಿತ್ತು ಸಲೀಲಕೇಳಿವನದೊಳ್ ವಿದ್ಯಾಮಹಾಮಂಡಪಂ    ೫೪

ವ || ಆ ಮಹೀಮಂಡನಾಯಮಾನಮಂಟಪಕ್ಕೆ ಪದ್ಮರಾಜಂ ನಿಜತನೂಜನಪ್ಪ ಲೋಕೈಕಮಿತ್ರನಂ ವೈಶ್ರವಣಪುತ್ರನಪ್ಪ ಚಿತ್ರಭಾನುವೆರಸು ಮಂಗಳಾನಕರವಂಗಳೆಸೆಯೆ ಶುಭಮು ಹೂರ್ತದೊಳೊಂದುದಿವಸಂ ಮುಂದಿಟ್ಟೊಡಗೊಂಡು ಬಂದು ಸಕಳ ವಿದ್ಯಾದೇವತಾ ಪೂಜೆಯನಖಿಳವಿದ್ಯಾಚಾರ್ಯಪೂಜೆಯುಮಂ ನಿರ್ವರ್ತಿಸಿ ವಿದ್ಯಾಪ್ರಾರಂಭದೊಳ್ ನಿಯೋಜಿಸಿ

ಕಂ || ಮನಮೆಳಸಿದಾಗಳಲ್ಲಿಗೆ
ವನಮಾಳಿಕೆವೆರಸು ವಿರಳಪರಿಜನವೃತ ನಿಂ
ಬೆನೆ ಬಂದು ನಿಚ್ಚನಿಚ್ಚಂ
ತನಯಮುಖಾಲೋಕಸುಖಮನೆಯ್ದುತ್ತಿರ್ದಂ  ೫೫

ವರ ಗುರು ತನ್ನಂ ಸುದ್ದಗೆ
ವರೆಯಿಸೆ ಮೂಱನೆಯ ತಾಣದೆರಡಕ್ಕರಮಂ
ಸ್ವರದೊಳಮಂತಸ್ಥೆಯೊಳಂ
ಬರೆಯೆನೆ ವಿತರಣವಿನೋದನದನೇಕಱಿವಂ      ೫೬

ಗುರುಮುಖದೊಳಾ ಕುಮಾರಂ
ಪರಿವಿಡಿಗೆಯ್ದಪನತೀತ ಜನ್ಮಾಭ್ಯಾಸ
ಸ್ಫುರದಖಿಳವಿದ್ಯೆಗಳನೆನೆ
ಪರಿಣಮಿಸೆ ಕಳಾಕಳಾಪಮತಿ ಪಟುವಾದಂ       ೫೭

ವ || ಆಗಿ

ಕಂ || ಲಿಪಿ ಶಬ್ದಶಾಸ್ತ್ರಮಭಿಧಾ
ನಪರಂಪರೆ ನಾಟಕಪ್ರಯೋಗಂ ಕಾವ್ಯಂ
ನೃಪನೀತಿ ಜೋಯಿಸಂ ರ
ತ್ನಪರೀಕ್ಷೆ ವಿಷಾಪಹರಣಮಾಯುರ್ವೇದಂ      ೫೮

ಮ || ಬರೆಪಂ ಬಾಜನೆ ಗಂಧಯುಕ್ತಿ ಗಣಿತಂ ಗಂಧರ್ವಮಾಖ್ಯಾನಕಂ
ಭರತಾಭ್ಯಾಸಮಿಭೇಂದ್ರಶಿಕ್ಷೆ ಹಯಶಾಸ್ತ್ರಂ ಸೂಪಶಾಸ್ತ್ರಂ ನದೀ
ತರಣಂ ತಾಪನಮಿಂದ್ರಜಾಲಮೆಱಕಂ ಲೆಪ್ಪಂ ಶಿಲಾಕರ್ಮಮು
ತ್ಕಿರಣಂ ಚಿತ್ರವಿವಕ್ಷೆ ವಾಸ್ತು ಶಕುನಜ್ಞಾನಂ ರಥಾರೋಹಣಂ         ೫೯

ಕಂ || ಸ್ಮರಮಂತ್ರಂ ಬಹುಭಾಷಾ
ಪರಿಚಿತಿ ಯಂತ್ರಪ್ರಯೋಗಮಖಿಲ ವ್ಯೂಹೋ
ತ್ಕರಮೆಂಬಿನಿತಱೊಳಂ ಬ
ಲ್ಲರೆಲ್ಲರುಂ ಮೆಚ್ಚೆ ಪಡೆದನತಿಕೌಶಲಮಂ     ೬೦

ಮ || ಅದಲ್ಲದೆಯುಂ

ಕಂ || ಕರವಾಳ ಕಣೆಯ ಕಂಪನ
ಪರಶು ಶರಾಶನ ಮುಸುಂಡಿ ಮುಸಲ ಗದಾ ತೋ
ಮರ ಶಂಕು ಶಕ್ತಿ ಚಕ್ರ
ಚ್ಛುರಿಕಾದ್ಯಾಯುಧದೊಳಧಿಗತಶ್ರಮನಾದಂ   ೬೧

ವ || ಆಗಿ ಕೀರ್ತಿಪತಾಕನಗಣ್ಯ ಪುಣ್ಯಲಕ್ಷ್ಮೀಸದನವಕ್ಷಸ್ಥಳ ಪುರುಷಪುರುಷೋತ್ತಮ ಸರಸ್ವತೀಕರ್ಣಪೂರ ಸತ್ಯರಾಧೇಯ ಗಂಭೀರನೀರಾಕರ ಕದನಕಂಠೀರವ ಪ್ರಭುಕುಲೈಕರೋದೋ
ಮಣಿಯೆಂಬ ಗುಣನಾಮಂಗಳಂ ವಿವಿಧ ವಿದ್ಯೋಪಾಧ್ಯಾಯರ್ಕಳತ್ತಣಿಂ ಪೆತ್ತು ನೆಗೞ್ತೆವಡೆದ ಮಹಾಪದ್ಮನೊಡನೆ ಕೂಡಿ

ಕಂ || ಪರಿಣತಿವಡೆದಂ ವಿದ್ಯಾ
ಪರಿಕರದೊಳಮಾತ್ಯಸುತನುವಿದು ಚೋದ್ಯಮೆ ಪೇೞ್
ಧರೆಯೊಳ್ ಪದ್ಮಜನೊಡನನ
ವರತ ಕೃತಾಭ್ಯಾಸನಾದ ವಿಭುವೆಂಬಿನೆಗಂ        ೬೨

ವ || ಅಂತು ಪದ್ಮರಾಜುಪುತ್ರಂಗೆ ಚಿತ್ರಭಾನು ಸಮವಿದ್ಯನಾದನಲ್ಲದೆಯುಂ

ಕಂ || ಎಳವೆಯೊಳಂ ಭಕ್ತಿಯೊಳಂ
ಬೞಿವಿಡದೆ ನೆೞಲ್ವೊಲಿರ್ಪ ಸಂಗತಿಯೊಳಮೊ
ಳ್ಪೞಿಯದೆ ಬಗೆಗೊಂಡಂ ಮನ
ದೞೆಪಿನ ಸಖನಾಗಿ ಭವ್ಯಚೂಢಾಮಣಿಯಂ     ೬೩

ಕೌತುಕಮೇಂ ಕೇವಳಮೇ
ಪ್ರೀತಿ ಮಹಾಪದ್ಮಚಿತ್ರಭಾನುಗಳೊಳ್ ಶ್ರೀ
ಹೇತುವದು ಚಕ್ರವರ್ತಿವಿ
ಭೂತಿಗೆ ಮೊದಲದು ನಿರಸ್ತದೋಷಮದೆಂತುಂ  ೬೪

ವ || ಎಂಬಿನಮಂತವರ್ಗಳಿರ್ವರುಂ ಸಕಳಕಳೆಯುಮಂ ಕೆಳೆಯುಮನೊಡ ನೊಡನೆ ಬಳೆಯಿಸುತ್ತಮಿರ್ಪಲ್ಲಿ

ಉ || ಜೊನ್ನದ ರಾತ್ರಿ ನೇತ್ರಕುಮುದಕ್ಕಿನನಂಶು ಮುಖಾಂಬುಜಕ್ಕೆ ತೈ
ಲನ್ನವ ಕಾಂತಿದೀಪಿಕೆಗೆ ಕಾರ್ಮುಕದೇಱ್ಗೆ ಶಿರೋಜಕೇಕಿಗು
ತ್ಪನ್ನವಸಂತ ಮಂಗಲತೆಗುಗ್ರಮದಂ ಭುಜದರ್ಪದಂತಿಗೆಂ
ಬನ್ನೆಗವಂದು ತಂದುದು ಕುಮಾರನ ಜವ್ವನದೇೞ್ಗೆ ಲೀಲೆಯಂ    ೬೫

ಮ || ತರುಣೀಮೋಹನಮಂತ್ರಮಂ ಮನಸಿಜಂ ಕಸ್ತೂರಿಕಾಪಂಕದಿಂ
ಬರೆದಂತಿರ್ದುವು ಬರ್ಪ ಮೀಸೆ ವಿಜಯಶ್ರೀಯಂ ಬಹುಕ್ಷಪ್ರಭು
ತ್ರರ ಸುತ್ತಿಂಗೊಳಗಾಗದಿರ್ದಱಿಕೆಯಿಂ ಸುತ್ತಲ್ಕೆ ನೀೞ್ದಂತೆ ಬಿ
ತ್ತರದಿಂ ದೀರ್ಘತರಂಗಳಾದುವು ಭುಜಂ ಸೌಂದರ್ಯಕಂದರ್ಪನಾ    ೬೬

ಮ || ವಿಳಸನ್ಮಜ್ಜನಪೀಠಮಾದುದು ಜಿನಂಗೆಂಬೊಳ್ಪಿನಿಂ ಪೆರ್ಮೆಯಂ
ತಳೆದತ್ತಲ್ಲದೊಡೆಂತದೆನ್ನೊಳೆಣೆಯೇ ಸನ್ಮಿತ್ರರಾಜಭ್ರಮಾ
ಕಳಿತಂ ನಂದಿತಗೋತ್ರವೈರಿಯೆನುತುಂ ಹೇಮಾಚಲಶ್ರೀಶಿಲಾ
ತಳಮಂ ಮೆಚ್ಚಿಯುಮೆಂದು ಮೆಚ್ಚದೆ ಬೃಹದಕ್ಷಂ ಮಹಾಪದ್ಮನಾ           ೬೭

ವ || ಅಂತು

ಮ.ಸ್ರ || ಘನಕೇಶಂ ಪೂರ್ಣಭಾಳಂ ಕುವಲಯನಯನಂ ತುಂಗಘೋಣಂ ಗಂಭೀರ
ಧ್ವನಿ ಸೂಕ್ಷ್ಮಶ್ಶತ್ರು ಬಿಂಬಾಧರವತಿಕಠಿಣಸ್ಕಂಧವಕ್ಷೂಣವಕ್ಷಂ
ತನುಮಧ್ಯಂ ದೀರ್ಘಬಾಹುದ್ವಯಮರುಣನಖಂ ರಮ್ಯರಂಭೋರುವಂಭೋ
ಜನಿಭಶ್ರೀಪಾದಮಂತಂತೆಸೆಯೆ ನೃಪಸುತಂ ನೋಡೆ ಕಣ್ಗೆಡ್ಡಮಾದಂ          ೬೮

ಚಂ || ಮನಮೊಸೆದಾ ಕುಮಾರನ ವಿಳಾಸಮನೊಯ್ಯನೆ ಕಂಡ ವಾರಿಜಾ
ನನೆಗೆ ಮರಾಳಗಾಮಿನಿಗೆ ಮೀನನಿಭಾಕ್ಷಿಗೆ ಸಾರಸೀಕಳ
ಸ್ವನೆಗೆ ರಥಾಂಗತುಂಗಕುಚೆಗುತ್ಪಲಗಂಧಿಗೆ ಸೀಮೆಯಾಯ್ತು ಜೀ
ವನದಭಿಲಾಷೆ ಕಂತುಪರಿತಾಪದೊಳಿಂತಿದು ಚಿತ್ರಮೆಂಬಿನಂ           ೬೯

ಪರನೃಪಮಂಡಳಕ್ಕೆ ಭಯಮಂ ರಮಣೀನಿವಹಕ್ಕೆ ಕಾಮಕಾ
ತರತೆಯನಂಗಜಂಗೆ ಮದಮಂ ಜನದೃಷ್ಟಿಗಪೂರ್ವತುಷ್ಟಿಯಂ
ಸರಸಕವೀಂದ್ರಜಿಹ್ವೆಗೆಭಿವರ್ಣನಕಾಂಕ್ಷೆಯನಿತ್ತನಂದು ಬಿ
ತ್ತರಿಸೆ ಸನತ್ಕುಮಾರ ನಳಕೂಬರ ಕಂತುನಿಭಂ ನೃಪಾತ್ಮಜಂ          ೭೦

ವ || ಅಂತು ವಿದ್ಯಾಲಕ್ಷ್ಮಿಯೊಡನೆ ತನಗೆಳಸಿರ್ದ ನವಯೌವನಲಕ್ಷ್ಮಿಯ ಸಮಾಯೋಗದೊಳ್ ಸವಿಲಾಸರೂಪವಿಭ್ರಮಮಂ ಸಹಜಾತಸೌಭಾಗ್ಯನುಂ ಸಮಗ್ರಸತ್ವಾವಲಂಬನುಂ ಸಾಶ್ಚರ್ಯಶೌರ್ಯಾವಲೇಪನುಮಾದ ಕುಮಾರನಂ ನೀತಿರತ್ನಾಕರಾವನೀಶ್ವರಾದೇಶದಿಂದಮೊಂದು ದಿವಸಮಖಿಲವಿದ್ಯಾಚಾರ್ಯರಂ ಮುಂದಿಟ್ಟೊಡಗೊಂಡು ಬರ್ಪುದುಂ ಪಂಜರ ವಿಮುಕ್ತಿ ಕುಂಜರಾರಾತಿಯಂತೆ ಮಂಟಪದಿಂ ನೃಪನಿವಾಸಕ್ಕೆ ಬಂದು ಸಭಾಸದನಮಂ ಪೊಕ್ಕು

ಕಂ || ತನಗಹಮಿಕೆಯಿಂದಿರದೆಱ
ಪ ನೃಪಾಳರ ಮೌಳಿಮಾಲೆ ಕುಟ್ಟಿಮ ಸಂಘ
ಟ್ಟನದಿನತಿಮುಖರಮಾಗಿ
ರ್ಪಿನೆಗಂ ಸಾರ್ತಂದು ತಂದೆಗವನತನಾದಂ         ೭೧

ವ || ಆಗಿ ದೌವಾರಿಕದತ್ತಕನಕವಿಷ್ಟರಮನಗಲೆ ನೂಂಕಿ

ಮ || ವಿನಯಂಗುಂದದೆ ಪಾದಪೀಠತದೊಳ್ ಕುಳ್ಳಿರ್ಪ ಲೋಕೈಕಮಿ
ತ್ರನನೊತ್ತಂಬದಿನೆತ್ತಿ ನೇತ್ರಯುಗದಿಂದಾನಂದಬಾಷ್ಪಾಂಬು ಝು
ಮ್ಮನುಗಲ್ ನೀನೆಮಗಿನ್ನುವಮ್ಮ ಪಸುಗೂಸೆಂದಪ್ಪಿ ಬಾಯ್ವಾಯೊಳಿಂ
ಬಿನೆ ತಾಂಬೂಲಮನಿಕ್ಕಿ ಪೊಣ್ಮೆ ಪುೞಕಂ ಮುಂಡಾಡಿದಂ ಭೂಭುಜಂ          ೭೨

ವ || ತದನಂತರಂ ನಿಜಪಾದಪೀಠಘಟಿತೋತ್ತಮಾಂಗನಾದ ಚಿತ್ರಭಾನುವಂ ಪುತ್ರನಿರ್ವಿಶೇಷಮೋಹದಿಂದಮಾದರಿಸಿ ತತ್ಸಮಯದೊಳಮಾತ್ಯ ವೈಶ್ರವಣಂಗೆ ಪೊಡವಡಿಸೆ ಪೊಡವಟ್ಟು ತದಾಶೀರ್ವಾದಜನಿತಪ್ರಮೋದನಾಗಿ

ಚಂ || ಅವಿಕಳರಾಜ್ಯಸಿಂಹದೆರಡುಂಕುಡುದಾಡೆವೊಲಿರ್ದು ಭೂಪ ವೈ
ಶ್ರವಣತನೂಜರಿರ್ವರುಮಖಂಡಿತ ವೃದ್ಧಿಯಿನಿರ್ವರುಂ ಕಳಾ
ನಿವಹದಿನಿರ್ವರುಂ ಲಲಿತಯೌವನಲೀಲೆಯಿನಿರ್ವರುಂ ಗುಣ
ದ್ರವಿಣದಿನಿರ್ವರುಂ ವಿನಯದಿಂ ಸಭೆಗುತ್ಸವಮಂ ನಿಮಿರ್ಚಿದರ್    ೭೩

ವ || ಅನಂತರಂ ಜನತಾನುಮತದಿನಾರ್ಯಕುಳಪರಿಜನಪರೀತನಾಗಿ ಬಂದು ಮುನ್ನೆ ತನ್ನ ಬರವಿಂಗೆ ವಿರಚಿಸಿದ ಮಾಂಗಲ್ಯಪರಿಕರದಿನೊಪ್ಪುವಂತಃಪುರಮಂ ಪುಗುವುದುಮಾ ಸಮಯದೊಳ್ ವನಮಾಳಿಕಾಮಹಾದೇವಿ

ಕಂ || ಎನ್ನಯ್ಯನೆನ್ನ ಮದಗಜ
ನೆನ್ನಾಳ್ದಂ ಬಂದನೆಂದು ಮುದದಿಂದಿದಿರ್ವಂ
ದುನ್ನತ ನೃಪಾಂಗನಾವೃತೆ
ಮನ್ನಿಸಿ ತಳಿದಳ್ ಸುತಂಗೆ ಶೇಷಾಕ್ಷತೆಯಂ       ೭೪

ವ || ಅಂತು ಸೇಸೆಯಿಕ್ಕಿ ನಿಜಪಾದಾರವಿಂದದ್ವಂದ್ವಮಂ ಚಳಾಳಕಮಧುವ್ರತಂಗಳಿ ನಳಂಕರಿಸಿರ್ದ ಚಿತ್ರಭಾನುಮಿತ್ರನಂ ಪರಮಪರಿತೋಷದಿಂ ಪರಸಿ

ಕಂ || ನೆಲೆಮೊಲೆಯಿಂ ಕ್ಷೀರಂಕ
ಣ್ಮಲರಿಂ ಬಾಷ್ಟಾಂಬು ಪೊಣ್ಮೆ ಪುೞಕಸ್ವೇದಾ
ರ್ದ್ರಲತಾಂಗಿ ತನಯನಂ ನಲಿ
ನಲಿದೞ್ಕಱೊಳಪ್ಪಿ ತಣಿದಳಿಲ್ಲಾ ಕ್ಷಣದೊಳ್ ೭೫

ವ || ಅಲ್ಲಿಂ ಬೞೆಕ್ಕಮಾತ್ಮಾಂಬಿಕಾದೇಶದಿಂದಮಖಿಳಜನನೀಜನಂಗಳ ನಿವಾಸಂಗಳ್ಗೆ ಪೋಗಿ ಪೊಡವಟ್ಟು ಪರಕೆವೆರಸು ಸೇಸೆಗೊಂಡತಃಪುರನಿಷ್ಕ್ರಾಂತನಾಗಿ ಸರಸ್ವತೀಕರ್ಣಪೂರಂ ಬಂದು

ಮ.ಸ್ರ || ತನಗೆಂದುರ್ವೀಶ್ವರಂ ಮುನ್ನಮೆ ಸಮೆಯಿಸಿದುತ್ಕೃಷ್ಟಕೋಷ್ಠಾಂತರೋದ್ಭಾ
ಸಿ ನಿಶುಂಭಚ್ಚಂದ್ರಶಾಲಾಮಣಿಮಯವಿಲಸತ್ಪುತ್ರಿಕೋತ್ತಂಭಿತಸ್ತಂ
ಭನಿಕಾಯಂ ಚಿತ್ರಭಿತ್ತಿಸ್ಥಿತಯುತಮಧಿಕೃತ್ತೋರಣಾಭಂ ಕನತ್ಕಾಂ
ಚನಚೂಡಂ ಮಾಡಮೊಪ್ಪುತ್ತಿರೆ ಗೃಹಸಚಿವಪ್ರೇರಿತಂ ಪೊಕ್ಕನಾಗಳ್          ೭೬

ವ || ಪೊಕ್ಕು ತದನಂತರೋದ್ದೇಶನಿಹಿತಚಂಚದ್ರತ್ಯಪರ್ಯಂಕಿಕಾಪ್ರದೇಶಮನಲಂ ಕರಿಸಿ ಭವನಪ್ರವೇಶಮಾಂಗಲ್ಯಶೇಷಾಕ್ಷತಂಗಳಂ ತಳಿದು ತದನಂತರಂ ಮಜ್ಜನಭೋಜನಾದಿ ದಿವಸವ್ಯಾಪಾರಂಗಳಂ ತೀರ್ಚಿಸಿ ನಿಜಪಿತೃಸಮರ್ಪಿತಸಮಗ್ರಕುಳ ರೂಪವಿಭವವಿದ್ಯಾವಿಳಾಸ ಚಾತುರ್ಯವರ್ಯರಪ್ಪ ನೃಪಕುಮಾರಕರೆ ಸತತಸನ್ನಿಹಿತಪರಿವಾರಮಾಗೆ

ಮ || ಕವಿತಾಗೋಷ್ಠಿಯೊಳಾದಿರಾಜಕಥೆಯೊಳ್ ತತ್ವೋಕ್ತಿನಿರ್ಣೀತಿಯೊಳ್
ನವಸಂಗೀತಕಸಂಗದೊಳ್ ವನಜಳವ್ಯಾಯಾಮದೊಳ್ ಮನ್ಮಥೋ
ತ್ಸವದೊಳ್ ಕಂದುಕಕೇಳಿಯೊಳ್ ಮಹಿಷಮಲ್ಲದ್ವಂದ್ವಯುದ್ಧಾವಲೋ
ಕವಿನೋದಂಗಳೊಳೆಯ್ದೆ ಪೊೞ್ತುಗಳೆವುತ್ತಿರ್ದಂ ನರೇಂದ್ರಾತ್ಮಜಂ  ೭೭

ವ || ಅಂತಿರ್ಪುದುಮೊಂದುದಿವಸಂ ಪದ್ಮರಾಜಂ ತನೂಜಂಗೆ ಯುವರಾಜ ಪಟ್ಟಬಂಧಮಂ ಮಾಡಲ್ ಮನಂದಂದು ಸಮಾಳೋಚಿತ ಸಚಿವಸಂದೋಹನಾಗಿ ಮಾಂಗಲ್ಯ ಮಂಟಪಮಂ ಗೃಹಮಹತ್ತರಂಗೆ ಬೆಸಸಿ ಸಮೆಯಿಸುವುದುಂ

ಉ || ಸುತ್ತಿದ ಚಿತ್ರಕಾಂಡಪಟಮಿಕ್ಕಿದ ಮಂಗಳವೇದಿ ಕಂಬದೊಳ್
ಪತ್ತಿದ ಪೊನ್ನಮ ಪುತ್ತಳಿ ತೊಡರ್ಚಿದ ಮುತ್ತಿನ ಸೂಸಕಂ ತಗು
ಳ್ದೆತ್ತಿದ ತೋರಣಂ ಪುದಿದ ಪೂವಲಿ ತಳ್ತ ವಿತಾನವಿಸ್ತರಂ
ಚಿತ್ತದ ಜಾಗಮುಜ್ಜಳಿಪ ಕನ್ನಡಿ ತೀವಿ ಪೊದೞ್ದ ಪೊಂಗೊಡಂ     ೭೮

ಕಂ || ಒಸಗೆವಱೆ ಸರ್ವಧಾನ್ಯಂ
ಮೊಸರಣ್ಕೆ ಕಱುಂಕೆ ರಂಗವಲಿ ಭೃಂಗಾರಂ
ಪಸೆ ರನ್ನದ ಸೊಡರೆಂಬಿವ
ಱೆಸಕಂ ಕಣ್ಗೊಳಿಸುತಿರ್ದುವಾ ಮಂಟಪದೊಳ್            ೭೯

ವ || ತದನಂತರಂ ಮೌಹೂರ್ತಿಕೋಪದಿಷ್ಟ ಶುಭಮುಹೂರ್ತದೊಳನೇಕ ಶಂಕ ಕಹಳ ಮೃದಂಗ ಭೇರೀ ಕಾಂಸ್ಯತಾಳರವರಭಸಮುಮಾರ್ಯಜನಮುಖೋಚ್ಚಾರ್ಯಮಾಣ ಮಂಗಳವಚೋ ನಿಚಯಮುಮತಿಬಹುಳಕುಸುಮಫಳಹಸ್ತವಿಸ್ತಾರಿವಾರನಾರೀಸಮೂಹಮುಂ ವಿಚಿತ್ರ ಪಾತ್ರನೃತ್ಯವರ್ತನಮುಮೆಸೆಯೆ ವೈಶ್ರವಣನೊಡಂಗೊಂಡು ತರ್ಪುದುಂ

ಮ || ಜನಕಾದೇಶದೆ ಬಂದನಲ್ಲಿಗೆ ಪಕ್ವಬಿಂಬಾಧರಂ
ತನಿಗೆಂಪಿಂ ಕಿಸುಸಂಜೆಯಂ ಕೆದಱೆ ಲಾವಣ್ಯಾಮೃತಂ ಲೋಕಲೋ
ಚನಮಂ ತೇಂಕಿಸೆ ಮುತ್ತಿನೊಳ್ದೊಡವುಗಳ್ ಬೆಳ್ದಿಂಗಳಂ ಬೀಱೆ ಯೌ
ವನದರ್ಪಂ ಸ್ಮರನಂ ಮಗುೞ್ಗೆ ಘನತೇಜಂ ತಿಟ್ಟೆ ತಿಗ್ಮಾಂಶುವಂ   ೮೦

ವ || ಆಗಳನೇಕ ಮೂರ್ಧಾಭಿಷಿಕ್ತಮಂಡಳಿಕ ಮಂಡಳೀಪರಿವೃತನಾಗಿ ಪದ್ಮರಾಜನಾ ರಾಜವಿದ್ಯಾವಿಳಾಸನಂ ಮಂಗಳಾನಕರವಂಗಳೆಸೆಯೆ ಕಮನೀಯಕಲ್ಯಾಣ ಪೀಠನಿಷ್ಠಿತನಂ ಮಾಡಿ

ಮ || ನವಸರ್ವೌಷಧಿ ಸರ್ವರತ್ನಪರಿಮಿಶ್ರಾಶೇಷತೀರ್ಥಾಂಬು ಪೂ
ರ್ಣವನುತ್ಸಾಹದಿನೆತ್ತಿ ಪೊಂಗಳಸಮಂ ಹರ್ಷಾಶ್ರುಗಳ್ ಕೂಡೆ ಪೊ
ಣ್ಮುವಿನಂ ಮಾಡಿದನಾತ್ಮಮಂತ್ರಿಜನಯುಕ್ತಂ ಯೌವರಾಜ್ಯಾಭಿಷೇ
ಕವನಾನಂದಿತಮಿತ್ರಲೋಕಮನತಿತ್ರಸ್ತಾಹಿತಾನೀಕಮಂ    ೮೧

ವ || ತದನಂತರಮಿಂಗಡಲ ತೆರೆಯ ದೊರೆಯ ದುಕೂಲದೊಳಮಾಗಳಾಗಳೆ ನಿಶಾಮುಖದೊಳ್ ನೆಗೆದ ತಾರಗೆಗಳೋರಗೆಗಳೆನಿಪ ಪೊಚ್ಚ ಪೊಸಮುತ್ತಿನ ಪಚ್ಚದೊಡವಿನೊಳಂ ಮನಕ್ಕೆ ಮಚ್ಚರಿಪ ಚೆಲ್ವಿಂ ಬಳ್ವಲಾದ ಮಲ್ಲಿಗೆಯ ಮುಗುಳ ತಗುಲದಿಂದೆಸೆವ ಬಾಸಿಗಂಗಳೊಳ ಮಳಂಕರಿಸೆ

ಕಂ || ಅಭಿನವಸಂಗೋತ್ಕಂಠೆಯಿ
ನಭಿವೀಕ್ಷಿಪ ಯೌವರಾಜ್ಯಲಕ್ಷ್ಮಿಯ ನಯನ
ಪ್ರಭೆ ಪೆರ್ಚಿತೆನಿಸಿದತ್ತತಿ
ಶುಭದಂ ಪದ್ಮಜನ ಧವಳಮಂಗಳವೇಷಂ        ೮೨

ವ || ಅಂತಲಂಕೃತನಾದ ಭವ್ಯರತ್ನಾಕರನಂ ಸಮುತ್ತುಂಗ ಮಾಂಗಲ್ಯ ಮಂಡಪಮಂಡ ನೀಭೂತ ಮೃಗರಾಜವಿಷ್ಪರದೊಳಿರಿಸಿ

ಕಂ || ಯುವರಾಜಕಂಠಿಕಾಬಂ
ಧವನಖಿಲ ಜನಾನುಬಂಧವಂ ರಿಪುದರ್ಪಾ
ರ್ಣವ ಸೇತುಬಂಧವಂ ಶಿ
ಷ್ಟವಿಪತ್ಪ್ರತಿಬಂಧವಂ ನೃಪಂ ನಿರ್ಮಿಸಿದಂ      ೮೩

ಹರಿಣ || ಭುವನನುತವಿಕ್ರಾಂತಂ ಪ್ರಾಣೇಶ್ವರಪ್ರಭವಂ ಕಳಾ
ಭವನನವನೀರಕ್ಷಾದಕ್ಷಾತ್ಮನೆಂದು ಸಮಸ್ತ ರಾ
ಜ್ಯವನೆ ತನಯಂಗೀಯಲ್‌ವೇಡಿತ್ತೆನಲ್ ಯುವರಾಜವೈ
ಭವಮನದನಾ ಭೂಪಂ ಕೂರ್ತೀವುದಾವುದು ಕೌತುಕಂ     ೮೪

ವ || ಎನಿಸಿದ ನವಕಂಠೀರವಂಗೆ ಯುವರಾಜಕಂಠಿಕಾಬಂಧಮಂ ಮಾಡಿ

ಮ || ನೆಗೞ್ದುನ್ಮತ್ತಜಂಗಳಂ ಪ್ರಬಳಜಾತ್ಯಶ್ವಂಗಳಂ ಸಾರವ
ಸ್ತುಗಳಂ ಸದ್ಗುಣವದ್ವಿಳಾಸಿನಿಯರಂ ಪ್ರೋದ್ದಾಮಸಾಮಂತರಂ
ಮಿಗಿಲಪ್ಪೂರ್ಗಳನನ್ವಯಾಗತ ಸಮಗ್ರಾಮಾತ್ಯರಂ ಕೊಟ್ಟು ನೆ
ಟ್ಟನೆ ಭೂಪಂ ಯುವರಾಜನಂ ವಿಭವದಿಂ ತನ್ನೊಳ್ ಸಮಂ ಮಾಡಿದಂ       ೮೫

ವ || ಆಗಳ್

ಚಂ || ಹಿಮಕರನಿಂ ನೆಲಕ್ಕೆ ನಿಮಿರ್ವುಜ್ವಳಚಂದ್ರಿಕೆಯಂತಧೀಶನಿಂ
ನಿಮಿರ್ದು ಕುಮಾರನತ್ತಲೇಸಿರ್ದಳಭಿನ್ನಪರಸ್ವರೂಪದಿಂ
ಕುಮುದವನಾಭಿರಾಮೆ ಪರಚಕ್ರಭಯಂಕರಶೀಲೆ ವಾಹಿನೀ
ರಮಣಸಮೃದ್ಧಿಸಲ್ಲಲಿತೆ ರಾಜ್ಯರಮಾವಧುವಂದು ಲೀಲೆಯಿಂ   ೮೬

ವ || ಅಂತಾ ಮನುಜೇಂದ್ರಮಂದರಂ ತಂದೆ ಕೊಟ್ಟ ಯುವರಾಜಲಕ್ಷ್ಮಿಯ ನವಪ್ರಸಂಗದಿಂ ರಾಗರಸರಂಜಿತಾಂತಃಕರಣನಾಗಿ ತದುತ್ಸವದೊಳಾರ್ಯಜನಮನರ್ಘಿಸಿಯುಂ ಪೂಜ್ಯಜನಮಂ ಪೂಜಿಸಿಯುಂ ಮಾನ್ಯಜನಮಂ ಮನ್ನಿಸಿಯುಂ ಇಷ್ಟಜನಮಂ ತುಷ್ಟಿವಡಿಸಿಯುಂ ಪರಿಜನಮಂ ಪರಿವರ್ಧಿಸಿಯುಂ ಅಖಿಳಜನವಂದ್ಯನಾಗಿ ಪರಚಕ್ರಮನಾಕ್ರಮಿಸಲುಪಕ್ರಮಿಸುತ್ತಿರ್ಪ‌ನ್ನೆಗಂ

ಮ || ಸಮದಾರಾತಿಜಯೋತ್ಸುಕಂಗೆ ಯುವರಾಜಂಗೆತ್ತಲತ್ಯಂಶ ದು
ರ್ಗಮಮಾದಧ್ವವನಿಂದೆ ನೇರ್ಪಡಿಪೆನೆಂಬಂತುರ್ವರಾಭಾಗದು
ರ್ದಮಮಂ ಕರ್ದಮಮಂ ಕೞಲ್ಚಲತುಳೋದ್ಯತ್ಫೇನಮಂ ಸಿಂಧುಯೂ
ಥಮನೋರಂತಿರೆ ಮಾಡಲಾದುದೆನಸುಂ ನಿರ್ನೀರದಂ ಶಾರದಂ      ೮೭

ಚಂ || ಸೊಗಯಿಪ ಕೇತಕೀವಿಭವಮೇೞೆಲೆವಾೞೆಗೆ ನೀಪದೇೞ್ಗೆ ಪೊ
ನ್ನೆಗೆ ಕುಟಜೋಪಶೋಭೆ ಕುಮುದಕ್ಕೆ ಕದಂಬದ ಸೊಂಪು ನೆಯ್ದಿಲೊ
ಳ್ಮುಗುಳ್ಗೆ ಮಯೂರದಭ್ಯುದಯವಂಚೆಗೆ ಚಾದಗೆಯುತ್ಸವಂ ಚಕೋ
ರಿಗೆ ತಳರ್ದೊಪ್ಪಲೊಪ್ಪಿದುದು ನೀರದ ಶಾರದನಿರ್ಗಮಾಗಮಂ    ೮೮

ವ || ಮತ್ತಂ

ಚಂ || ಕಲುಷತೆಯಂ ನಿಮಿರ್ಚಿ ತಿಳಿಪಲ್ಕಣಮಾಱದೆ ಮೇಘವಲ್ಲಭಂ
ತಳರ್ದೊಡೆ ಪೆರ್ಚಿ ತೀವ್ರತಪನಂ ಬಡವಟ್ಟನುಕೂಲೆಯರ್ ನದೀ
ಲಲನೆಯರಂದು ಕಂಠಗತಜೀವನವೃತ್ತಿಯನಾಳ್ದ [ರಿಂ] ಭೃಶೋ
ತ್ಕಳಿಕೆಯರೆಂತು ಸೈರಿಸುವರೋ ಸರಸಾತ್ಮನಿನಾದಗಲ್ಕೆಯಂ        ೮೯

ಕಂ || ಶರದಂಗನೆ ನಿಜಮುಖಹಿಮ
ಕರಬಿಂಬಮನಡರೆ ನೋಡಲುಜ್ವಳಿಸಿದ ಭಾ
ಸುರ ಚಂದ್ರಕಾಂತಮುಕುರೋ
ತ್ಕರಮೆನೆ ಸೊಗಯಿಸಿದುದಂದು ತಿಳಿದ ಕೊಳಂಗಳ್        ೯೦

ಚಂ || ಶರಧಿಯ ರತ್ನಮಂ ನೆಱೆಯೆ ಕಳ್ದು ಜಳಾಹರಣಕ್ಕೆ ಬರ್ಪ ವಾ
ರ್ಧರಕುಳಮೊಯ್ದು ಕೊಟ್ಟೊಡವಱೆಂದಮಲಮಂಕೃತಮಾದುದಕ್ಕುಮಂ
ಬರತಳಮೆಂಬ ಶಂಕೆ ಸುರಚಾಪದಿನಾದೊಡೆ ನೋಡಲಿಂಗಡಲ್
ತೆರೆಗಳನಟ್ಟಿದಂ ವರುಣನೆಂಬವೊಲೊಪ್ಪಿದುವೆೞ್ದ ಬೆಳ್ಮುಗಿಲ್    ೯೧

ಶರದದ ಪೆರ್ವಿಸಿಲ್ಗಗಿದು ಬಾಂದೊಱೆಯೊಳ್ ಸಲಿಲಾವಗಾಹತ
ತ್ಪರತೆಯಿನಿರ್ದ ವಾಸವಗಜೇಂದ್ರದ ಪುಷ್ಕರರಂಧ್ರರುಂದ್ರಶ್ರೀ
ಕರಮೊ ಬೆಮರ್ಪ ಮೇಘಪಥಲಕ್ಷ್ಮಿಯ ನಿರ್ಮಲ ಘರ್ಮಬಿಂದುವೋ
ಸುರಿದಪುವೆಂಬಿನಂ ಸುರಿವ ಬೆಳ್ಸರಿಗಳ್ ಬಗೆಗೊಂಡುವಾರುಮಂ    ೯೨

ಕಂ || ನವರಾಜಲಕ್ಷ್ಮಿಯಂ ಶರ
ದವನೀಶಂ ಪಡೆದು ಬರೆ ದಿಶಾಧೀಶ್ವರರು
ತ್ಸವದಿಂ ಕಟ್ಟಿದೊಡಮರ್ದೊ
ಪ್ಪುವ ಮಣಿತೋರಣಮಿದೆನಿಸಿದುದು ಸುರಚಾಪಂ         ೯೩

ಚಂ || ಬೆಳೆದು ಪೊದೞ್ದು ನೀೞ್ದರುಣಶಾಲಿಯ ಸತ್ಕಣಿಶಾಳಿಯಂ ಶುಕಾ
ವಳಿ ನಡೆಗರ್ಚಿ ಬೆಡೆಂಗೆಸೆದಿರ್ದುದು ಚಂಡಭಾನುಮಂ
ಡಳೆಪರಿತಾಪವೆಯ್ದಿರ ಶರದ್ವಧುವಿಂಗೆ ಹರೀತದಂಡದಿಂ
ತೊಳಗುವ ಹೇಮಚಾಮರಮನಿಕ್ಕಿದಪರ್ ದೆಸೆವೆಣ್ಗಳೆಂಬಿನಂ       ೯೪

ಮ || ಕಳಮಕ್ಷೇತ್ರಸಮೂಹದೊಳ್ ಸುೞಿದು ನಾನಾಜಾತಿಸಪ್ತಚ್ಛದೋ
ತ್ಪಳ ಪುನ್ನಾಗಪಯೋಜಕುಂದಕುಸುಮಾಮೋದಂಗಳಂ ಪೇಱಿ ನಿ
ರ್ಮಳಮೇಘಂ ಬಿಡುತಿರ್ಪ ಬೆಳ್ಸರಿಗಳಿಂದಂ ನಾಂದದೇಂ ಪಾಂಥ ಸಂ
ಕುಳಯಾನಶ್ರಮಹಾರಿಯಾದುದೊ ಶರತ್ಸಂಭೂತಶೀತಾನಿಳಂ       ೯೫

ವ || ಮತ್ತಂ ತತ್ಸಮಯ ಸಮಭಿರಾಮಸಂಧ್ಯಾಸಮಯದೊಳ್

ಕಂ || ವಿಪುಲಜಳಧರಕಳಂಕಮ
ನಪಹರಿಸಿದ ಗಗನಮೆಂಬ ಮುಕುರಮನಾಳೋ
ಕಿಪ ಯುವರಾಜನ ಕೀರ್ತಿಯ
ಲಪನಪ್ರತಿಬಿಂಬಮೆನಿಸಿದುದು ಶಶಿಬಿಂಬಂ        ೯೬

ವ || ಅಂತು ಸಕಲಭುವನಪ್ರಸನ್ನಶೋಭಾವಭಾಸಿಯಾಗಿ

ಚಂ || ಎಸೆದಿರೆ ಮಿತ್ರಮಂಡಳಮುದಗ್ರ ಕದಂಬಮಡಂಗೆ ಕುಂದದೊ
ಳ್ಪಸದಳಮಾಗೆ ಮೀಱದಿರೆ ವಾಹಿನಿ ರಂಜಿಸೆ ರಾಜಲೀಲೆ ನ
ರ್ತಿಸೆ ಕಮಲೋದಯಂ ಕುವಲಯಂ ಸುವಿಕಾಸಮನುಂಟುಮಾಡೆ ಪೋ
ಲ್ತೆಸೆದುದು ಶಾರದೀವಿಭವಮುಂ ಸಲೆ ನಾೞ್ಪ್ರಭುವಂಶಮೇರುವಂ  ೯೭

ಗದ್ಯ

ಇದು ಸಮಸ್ತಭುವನಜನಸಂಸ್ತುತ ಜಿನಾಗಮ ಕುಮುದ್ವತೀಚಾರುಚಂದ್ರಾಯಮಾಣಮಾನಿತ ಶ್ರೀಮದುಭಯಕವಿಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತ ಸೂಕ್ತಿ ಚಂದ್ರಿಕಾಪಾನಪರಿ ಪುಷ್ಟ ಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಕುಮಾರೋದಯವರ್ಣನಂ ಚತುರ್ಥಾಶ್ವಾಸಂ