ಉಱದುದ್ವೃತ್ತರ ಮೊತ್ತಮಂ ತಱಿದು ಗೆಲ್ಲಂಗೊಂಡು ವೃಂದಂಗಳಂ
ಸೆಱೆಗೊಂಡುಟ್ಟುದ ನೀೞ್ದುಕೊಂಡು ಬಳಮಂ ಬೆಂಗೊಂಡು ದುರ್ಗಂಗಳಂ
ಕುಱುಪಿಂದಂ ಪರಿಮುತ್ತುಗೊಂಡು ಪುರಮಂ ಕೆಯ್ಕೊಂಡು ನಾನಾರ್ಥಮಂ
ಸೆಱೆಗೊಂಡಾಯ್ಕುಳಿಗೊಂಡನುದ್ಘಯಶಮಂ ವಿಕ್ರಾಂತಕಾಳಾನಳಂ            ೫೧

ವ || ಮತ್ತಮಾಳ್ವಲದ ತೋಳ್ವಲದ ಬಾಳ್ವಲದ ಗರ್ವದಿಂದುರ್ವಿ ಮಲೆದ ಗುರ್ವಿತೋರ್ವೀಶ ಬಳಮನೆೞ್ಬಟ್ಟಿ

ಮ || ಅನಲಂ ಕಾನನಮಂ ಕಱುತ್ತಡಗಿಡಲ್ ಸುಟ್ಟುಂ ಬೞಿಕ್ಕಲ್ಲಿ ನೂ
ತನ ಬೀಜಾಂಕುರವೃದ್ಧಿಯಂ ನೆಗೞಿಪಂತುದ್ಪೃತ ಭೂಪಾಲರಂ
ಮುನಿಸಿಂ ಕೊಂದು ಬೞಿಕ್ಕೆ ತತ್ಪದವಿಯೊಳ್ ತದ್ವಂಶಮಂ ಧಾತ್ರಿ ಜೀ
ಯೆನೆ ಸಂಸ್ಥಾಪಿಸಿ ಪದ್ಮಸೂನು ಮೆಱೆದಂ ಕೋಪಪ್ರಸಾದಂಗಳಂ   ೫೨

ಉ || ಆನತರಾಗಿ ಜೀವಿಸದೆ ದುಷ್ಟನೃಪರ್ ಕೆಲರೋಡಿ ಪೋಗೆ ಪಾ
ಥೋನಿಧಿಯಲ್ಲಿ ಪೊಕ್ಕೊಡವರಂ ತವಿಸಲ್ ಬೞಿಸಂದು ನಿಂದುವಂ
ದಾ ನೃಪಸೂನುವಿಕ್ರಮಶಾನುವದಲ್ಲದೊಡೆಲ್ಲಿ ಬೇಱೆ ನೀ
ರ್ವಾನಿಸರೆಂಬರಾರೊ ಬಡವಾನಳನೆಂಬುದದೇನೊ ತೋಱಿರೇ       ೫೩

ವ || ಮತ್ತಮಲ್ಲಿ ಕೆಲರ್ ವಿದೇಶಗಮನಕ್ಕೆ ಸಲ್ಲದೆಯುಮನುಪ್ರವೇಶಗಮನಕ್ಷೇಶದಿಂ ನೆಗೞ್ದು

ಕಂ || ಅನುನಯದಿಂ ಭೂಮ್ಯುಪನತ
ಜನಪರ್ ಕೋಶೋಪನತ ಮಹೀಶರ್ ದೇಶೋ
ಪನತ ಕ್ಷಿತಿಪರ್ ಸರ್ವೋ
ಪನತ ನೃಪರ್ ತನ್ಮಹೀಶ ದಯೆಗೆಡೆಯಾದರ್  ೫೪

ಚಂ || ಬೆದಱದ ರಾಜಧಾನಿ ಬೆಸಕೆಯ್ಯದ ಬಲ್ಲಿದರೊಡ್ಡಿ ಕಾದಿ ಸಾ
ಯದ ಸಮರೋದ್ಧತರ್ ಕಿಡದ ಕಂಟಕರೋಡದ ಬೇಡವಟ್ಟು ಪೋ
ಗದ ಕಲಿಗೋಂಟೆ ಸಿಲ್ಕದ ವಿರೋಧಿಕುಟುಂಬಮಿಱುಂಬುಗೊಂಡಡಂ
ಗದ ಖಳರನ್ಯಮಂಡಳದೊಳಿಲ್ಲ ಕುಮಾರನಿದೇನುದಗ್ರನೋ         ೫೫

ಮ || ನೆಗೞ್ದುದ್ದಂಡತೆ ಕಂಟಕಸ್ಥಿತಿ ಸರೋಜವ್ರಾತದೊಳ್ ರಾಜಲೀ
ಲೆಗುರುಸ್ಫೂರ್ತಿ ನಭೋಗ್ರದೊಳ್ ಚಪಲತಾಸಂಗಂ ವಿಪತ್ಪಕ್ಷಮ
ದ್ರಿಗಳೊಳ್ ಕೋಶವಿಭೂತಿ ವಿಕ್ರಮದ ಸೊಂಪು ಧ್ಯಾನದೊಳ್ ಪೀನಮೊ
ಪ್ಪುಗುಮುರ್ವೀಶರೊಳೊಪ್ಪದೆಂದೆನಿಸಿದಂ ತನ್ನೇೞ್ಗೆಯಿಂ ಪದ್ಮಜಂ         ೫೬

ಜಗತೀಪಾಲರನೊತ್ತಿಕೊಂಡು ಪಿತೃಗಟ್ಟುತ್ತಂ ಬಹುಶ್ಲಾಘ್ಯವ
ಸ್ತುಗಳಂ ಬಿಣ್ಣಿದುವಾಗಿ ಭಾವಿಸದೆ ಪುಣ್ಯಕ್ಷೇತ್ರದೊಳ್ ಚೈತ್ಯಕೋ
ಟಿಗಳಂ ಮಾಡಿಸಿ ಸಿದ್ಧಸೇಸೆಗಳನಟ್ಟುತ್ತುಂ ತ್ರಿಲೋಕೀವಿಭೂ
ತಿಗವಂ ಮೆಯ್ಸಿರಿಯಾಗಿ ಭಾವಿಸಿದನೇಂ ಪದ್ಮೋದ್ಭವಂ ಭವ್ಯನೋ          ೫೭

ವ || ಅಂತು ಮೂಡಣಿಂ ಮೊದಲ್ಗೊಂಡು ಪುಷ್ಕಲಾವತೀವಿಷಯದೊಳಗಣ ರವಿಂದಪುರದ ಮಾಳಿನೀಪುರದ ವಸುಮತೀಪುರದ ಮೇಖಳಾಪುರದ ಪುರಂದರಪುರದ ಮಣಿಪುರದ ಸೀಮಂತಪುರದ ಪಾಂಚಾಲಪುರದ ಮಂದರಾಪುರದ ಮಳೆಯಪುರದ ಸಿಂಹಪುರದ ಪಾಟಳಾವತೀಪುರದ ಭದ್ರಾಂಗಪುರದ ರತ್ನಖೇಟಪುರದ ಛತ್ರಾಕಪುರದ ಕನಕಪುರದರಸುಗಳನಾಕ್ರಮಿಸುತ್ತಂ

ಕಂ || ಪಾಳಿಸುತುಂ ಧರ್ಮಮನು
ನ್ಮೂಳಿಸುತುಂ ದ್ರೋಹರಂ ಯಶೋರಸದಿಂ ಪ್ರ
ಕ್ಷಾಳಿಸುತುಂ ದಿಙ್ಮುಖಮಂ
ಮೇಳಿಸುತುಂ ಚಂಡವಿಕ್ರಮಾಡಂಬರಮಂ         ೫೮

ವಂದಿಸುತುಂ ವಂದ್ಯರನಭಿ
ವಂದಿಸುತುಂ ಬುಧರನಱಿಕೆದಾಣದೊಳೆಸೆವಂ
ತೊಂದಿಸುತುಂ ವಿಜಯಧ್ವಜ
ವೃಂದಮನುತ್ತರದಿಗಂತಮಂ ಸಾರ್ತಂದಂ        ೫೯

ವ || ಅಂತು ವಸಂತಕಾಲಾದಿತ್ಯನಂತೆ ಲೋಕೈಕಮಿತ್ರನುತ್ತರಾಯಣಪ್ರವೃತ್ತನಾಗಿ ತದ್ದಿಶಾದೇಶಂಗಳರಸುಗಳನವತರ್ಮಾಡುತ್ತಿಳಾವಿಳಾಸಿನಿಯ ಶಿಖಂಡಮಂಡನದಂತಿರ್ದ ಶಿಖಂಡಮೆಂಬ ಮಂಡಳದೊಳಗೆ ಬರೆವರೆ

ಉ || ಭಾಸುರ ನಾಗಪೂಗಮವಳಂಬಿತವಾಜಿಸಮಾಜಮಾತ್ತಭಾ
ಣಾಸನಖಡ್ಗಧೇನುಬಹುಭಲ್ಲಚಯಂ ವಿಜಯಾಭಿರಾಮ ಮ
ಧ್ಯಾಸಿತವೃದ್ಧಕಂಚುಕಿಕುಳಂ ವಿವಿಧಕ್ಷಿತಿಭೃದ್ವಿಳಾಸಿಸಂ
ತ್ರಾಸಕಮೆಂಬರಣ್ಯಮಸೆದತ್ತು ಕುಮಾರನ ಸೈನ್ಯದಂದದಿಂ           ೬೦

ವ || ಆಗಳಾ ವಿಪುಳವಿಪಿನದೊಳ್ ಬಹುವಿಧಶ್ವಾಪದೋಪಪ್ಲವಕ್ಕೆ ಪಕ್ಕಾಗದಂತು ಸುಭಟ ಸಂರಕ್ಷಿತಮಾಗಿ ಕಟಕಮಂ ಸೇನಾನಿ ನಡೆಯಿಸೆ ರಥಾಧಿರೂಢನಾಗಿ ಬರ್ಪ ಚಿತ್ರಭಾನುಮಿತ್ರಂಗೆ ಚಿತ್ರಸೇನನೆಂಬ ಸಾರಥಿಯಿಂತೆಂದಂ

ಮ || ಇದು ಸಂತ್ರಾಸಕಮೆಂಬರಣ್ಯಮಿದಱೊಳ್ ತಾನುರ್ವಿ ಕಾರಂಗನೆಂ
ಬದಟಂ ಲುಬ್ಧಕರಾಜನುಗ್ರಬಲಸಂಪನ್ನಂ ತಗುಳ್ದೀ ಪ್ರದೇ
ಶದ ನಾಡೆಲ್ಲಮನೊತ್ತಿ ಪೀಡಿಸುತುಮನ್ಯಾಸಾಧ್ಯನಾಗಿರ್ದು ಪೊ
ರ್ದಿದನುರ್ಕಿಂ ನಿಜತಾತದಿಗ್ವಿಜಯದೊಳ್ ನಿಂದಾಂತು ಕಾಲಾಂತಮಂ           ೬೧

ವ || ಆದಱಿಂದೆ

ಚಂ || ಅದಟಿನೊಳಂದು ನಿನ್ನ ಪಿತೃಗೊಡ್ಡಿಸಿ ಸತ್ತರ ನೆತ್ತರೆತ್ತಲುಂ
ಪುದಿದಭಿವರ್ಧಿಸಲ್ ಬೆಳಗುವೆಂಬಿನಮಿಲ್ಲಿ ತಳಿರ್ತಶೋಕೆ ಪೂ
ವೊದವಿದ ದಾಸವರ್ಣಮಲರೇಱಿದ ಪಾದರಿ ಪಣ್ತ ತೊಂಡೆಕೊ
ರ್ವಿದ ಕಿಸುಚಂದನಂ ಬೆಳೆದ ಬಂದುಗೆಯೆಂಬಿವಳುಂಬವಾಗುಳುಂ     ೬೨

ವ || ಅದಲ್ಲದೆಯುಂ

ಕಂ || ಪುದಿದೆಸೆದುವು ನಿಜಪಿತೃವಂ
ಕದ ಕರಿಗಳ ಮದದ ಸೊವಡು ಮುನ್ನಿನ ಸಪ್ತ
ಚ್ಛದಗಂಧದಿನೇಳಾಗಂ
ಧದಿನೆಸೆವುದು ದೇವ ಭಾವಿಸೀ ಕಾನನಮಂ        ೬೩

ವ || ಎಂದು ತದ್ಗಹನಮಹಿಮಾಭಿವರ್ಣನವ್ಯಾಜದಿಂ ಪದ್ಮರಾಜದಿಗ್ವಿಜಯವಿಜಯ ವೃತ್ತಾಂತಮಂ ನೂತನವಚನದಿಂ ನಿಜಗುರುಪರಾಕ್ರಮಾಕೀರ್ಣನೋದೀರ್ಣ ಪುಳಕಾವತಂ ಸಕರ್ಣನಾದ ಲೋಕೈಕಮಿತ್ರಂಗೆ ಚಿತ್ರಭಾನುವಭಿಮುಖನಾಗಿ

ಕಂ || ತಾಳಪ್ರಪಂಚದಿಂದೆ ಮ
ದೇಳಾಜಾತಿಗಳಿನೆಸೆದು ಸರಸನಟಶ್ರೀ
ಗಾಳಂಬಮಾಗಿ ಭರತದ
ಲೀಲೆಯನಾಳ್ದಪುದರಣ್ಯಸಂತತಿ ವಿಪಿನಂ         ೬೪

ಅಮೃತಾಶ್ರಯಮಿಂದ್ರಾಣೀ
ಸಮೇತಮಮರೀವಿಳಾಸಿರಂಭಾರಮ್ಯಂ
ಸುಮನೋನಿಳಯಂ ವಜ್ರ
ಪ್ರಮುಖಮಿದಿಳೆಗಿೞಿದ ಸಗ್ಗಮೆನಿಪುದು ದುರ್ಗಂ          ೬೫

ವ || ಮತ್ತಂ

ಕಂ || ಕಮಳಾಶ್ರಯಮಿದು ನಿನ್ನಮ
ದ್ಯುಮಣಿಯನತಿ ಲಲಿತತಿಳಕಮಿದು ನಿನ್ನಂ ದ್ವಿಜೋ
ತ್ತಮನಂ ಭುವನಾದ್ಭುತ ವಿ
ಭ್ರಮಮಿದು ನಿನ್ನಂ ಪಯೋಧಿಯಂ ಪೋಲ್ತಿರ್ಕುಂ          ೬೬

ಪುನ್ನಾಗವಿರಾಜಿತಮಿದು
ಪನ್ನಗವಧುವಂ ಕರೇಣುವಂ ಕೇಸರಸಂ
ಪನ್ನಮಿದು ಹರಿಯನಂಬುಜ
ಮನ್ನೆನೆಯಿಪುದಖಿಳ ಮೃಗಶರಣ್ಯಮರಣ್ಯಂ    ೬೭

ಮ || ಇದು ದೇಹಾರದ ಗೇಹದಂತೆ ಹರಿಣೀರಮ್ಯಂ ಗ್ರಹಗ್ರಾಮದಂ
ತುದಿತ ಕ್ರೋಡವಿಭಾಸಿ ಕೋಶಗೃಹದಂತಷ್ಟಾಪದಾಧಿಷ್ಠಿತಂ
ಕದನೋರ್ವೀತಳದಂತೆ ದಾರುನಚಮೂರವಸ್ಥಿತಕ್ಷೋಭಿತಂ
ಮದವತ್ಕುಂಜರಗಾತ್ರದಂತೆ ವಿಳಸದ್ಭಭ್ರೂಪ್ರಭಾವಿಭ್ರಮಂ          ೬೮

ವ || ಅದಲ್ಲದೆಯುಂ ಮಾತಂಗಸಂಗಿಯಾಗಿಯುಂ ಸದ್ವಂಶವಿರಹಿತಮಲ್ತು ಬಂಧುಜೀವಹಾರಿಯಾಗಿಯು ವಧೀಕೃತಗೋತ್ರಮಲ್ತು ಮದನವಿಜಯಾಭಿವೃದ್ಧಿಕರಮಾಗಿಯುಂ ವಿರಾಗದೂರಮಲ್ತು ವಿವಿಧಶಬ್ಧರಚಿತಮಾಗಿಯುಂ ಶಬ್ದಾವಕಾಶಮಲ್ತೆನಿಪ ವಿರುದ್ಧಗುಣ ಮನವಲಂಬಿಸಿತ್ತು ಮತ್ತಂ

ಮ.ಸ್ರ || ಮರಿಚವ್ಯಾಕೀರ್ಣಕರ್ಣಂಖರರ ತನುವ್ರತಗ್ರಂಥಿಪರ್ಣಚ್ಛದಂಕ
ತ್ತುರಿವೆಕ್ಕಂ ಸಲ್ಲಕೀಪಲ್ಲವಮಿಭಶಿಶುವಂ ಶ್ರೀಫಳೋದ್ಯತ್ಫಳಂ ಬಂ
ಧುರಗೋಲಾಂಗೂಲಮಂ ಕೊರ್ವಿಸೆ ಸೊಗಯಿಪುದೀ ಕಾನನೋದ್ದೇಶಮೋರಂ
ತಿರೆ ನಾನಾ ಭಿಲ್ಲಪಲ್ಲೀಖಗಮೃಗಲತಿಕಾವೃಕ್ಷಗುಲ್ಮಾವಕಾಶಂ    ೬೯

ವ || ಎಂದಿಂತು ವಿವಿಧವಚನಮಂ ಮೆಱೆದು ಮಚ್ಚಿಸುತ್ತುಂ ಬರ್ಪಲ್ಲಿ

ಶಾ || ರಂಗತ್ಪಿಂಗಳಲೋಚನಂ ಘುಳುಘುಳುಪ್ರಧ್ವಾನರೌದ್ರಾನನಂ
ಲಾಂಗೂಲಾಹತಭೂತಳಂ ರುಚಿರದಂಷ್ಟ್ರಾಯುಗ್ಮತಿಗ್ಮಂ ಕುರುಂ
ಗಾಂಗೋಜೃಂಭಿತರಕ್ತಸಿಕ್ತನಖರಂ ವ್ಯಾಕೀರ್ಣಕರ್ಣಂ ಕುಮಾ
ರಂಗಾಶ್ಚರ್ಯಮುಮಾರ್ಗಮಾದುದು ಭಯಂ ಶಾರ್ದೂಲವಿಕ್ರೀಡಿತಂ          ೭೦

ವ || ಅದಲ್ಲದೆಯುಂ

ಮ || ವದನೋಗ್ರಸ್ವನದಿಂದಮೊಂದೆರಡು ವಾಲೋದ್ಭಾತದಿಂ ಮೂಱುನಾ
ಲ್ಕುದಿತಕ್ರೂರನಖಪ್ರಹಾರಭರದಿಂದೈದಾಱು ದಂಷ್ಟ್ರೋಗ್ರಪಾ
ತದಿನೇೞೆಂಟು ಸುರುಳ್ದುರುಳ್ವಿನೆಗ ವೇಣಶ್ರೇಣಿಯಂ ಪಾಯ್ದು ಕೊಂ
ದುದನೇವೇೞ್ವುದೊ ಶತ್ರುಸಂಹರಣಕೇಳೀಶೀಘ್ರಮಂ ವ್ಯಾಘ್ರಮಂ            ೭೧

ಉ || ಆಳಿ ನಿಜಾಸ್ಯದಿಂದ ನಿಮಿರೆ ಪುತ್ತಿನ ಬಾಯ್ದಲೆಯೊಳ್ ಪಿಪೀಲಿಕಾ
ಮಾಳೆಗೆ ಪಾಸಿ ನಾಲಗೆಯನೊಂದು ಭಯಂಕರಭಲ್ಲಮುಲ್ಲಸ
ದ್ಬಾಳ ತಮಾಳ ಗುಲ್ಮದೊಳಗಿರ್ಪುದುಮಾ ಸೊವಡಿಂಗೆ ಕಾಯ್ಪಿನಿಂ
ಕಾಳಿಗನಾಗನಿರ್ದಪುದಿದೊಂದು ತಮಾಳದ ಬಳ್ಳಿಯೆಂಬಿನಂ           ೭೨

ವ || ಮತ್ತೊಂದು ಪೆರ್ಮೆಳೆಯ ಸುತ್ತುಮುತ್ತಿನೊಳ್

ಚಂ || ಮುನಿದಿಸೆ ಪಂದಿ ನೊಂದೊಳಱಿ ಕಾಯ್ಪಿನೊಳಳ್ಕುಱೆ ದಾಡೆಗುಟ್ಟಿ ತೊ
ಟ್ಟನೆ ಪರಿತಂದು ಮುಟ್ಟಿದೊಡಿಸಲ್ ತೆಱಪಿಲ್ಲದೆ ಬಿಲ್ಲನಿಕ್ಕಿ ಡೊ
ಕ್ಕನೆ ನಡೆ ಪಾಯ್ದು ಮೆಯ್ವೊಣರ್ದು ಕಣ್ಪೊಱಪಾಯ್ವಿನಮೊತ್ತಿ ಗಂಟಲಂ
ವನಚರನಾರ್ದು ಕೊಂದು ಮೆಱೆದಂ ಭುಜವೀರ್ಯಮನುಗ್ರಶೌರ್ಯಮಂ      ೭೩

ಮ || ಭರದಿಂದುರ್ವಿದ ನಾಯ್ಗಳವ್ವಳಿಸೆ ಭಿಲ್ಲಂ ಬಿಲ್ಲನಾಕೃಷ್ಟಿಗೆ
ಯ್ದಿರೆ ಕಂಡಳ್ಕಿ ಕುನುಂಗಿ ಪೊಂಗಿ ಮೆಳೆಯಂ ಸಂರಂಭದಿಂ ಱೊಪ್ಪುಗೊಂ
ಡಿರುತಂ ಗರ್ಜಿಸಿ ದಾಡೆಗುಟ್ಟಿದುದು ಧಾತ್ರೀಭೀಕರಂ ವಿಕ್ರಮಾ
ಕರಮವ್ಯಾಕುಳಕೇಕರಂ ಪೃಥುಕಲಾಲಾಶೀಕರಂ ಸೂಕರಂ  ೭೪

ವ || ಅದಂ ನೋಡುತ್ತುಂ ಬರೆ ಮುಂದೊಂದೆಡೆಯೊಳ್

ಮ.ಸ್ರ || ಅಮಿತೋದ್ಯದ್ಗುಲ್ಮವಲ್ಮೀಕಮನುಡಿದಿಱಿಯುತ್ತಂ ಜರತ್ಕಂಟಕೋಗ್ರ
ದ್ರುಮದಿಂದಂ ತನ್ನ ತೀನೆರ್ದೆಡೆಯನೊರಸುತಂ ಪ್ರೋದ್ವಿಷಾಣಂ ಸ್ಫುರದ್ಘ್ರಾ
ಣಮತುಚ್ಛಂ ಲೋಲಪುಚ್ಛಂ ಭೃಕುಟಿಕುಟಿಲಭಾಳಂ ಸರಕ್ತಾಕ್ಷಿಲೀಳಂ
ಯಮವೇಷಂ ಘೋರಘೋಷಂ ನಡೆದುದು ಬಳವತ್ಕಾಳಕಾಯಂ ಲುಲಾಯಂ           ೭೫

ವ || ಮತ್ತೊಂದು ಜಲಾರ್ದ್ರಕರ್ದಮೊದ್ದೇಶದೊಳ್

ಕಂ || ಕಱಿಕೊರ್ವಿಪಂದಿಗಡ್ಡೆಯ
ಮಱೆಗೊಂಡಿರದೆತ್ತುತಿರ್ದ ಸೂಕರನಂ ಕೆ
ಯ್ಪಱಿದ ಕರಿಕಳಭಮೆಂದ
ಳ್ಕುಱೆ ಪಾಯಲ್ ಬಗೆದುದೊಂದು ಸಿಂಹಕಿಶೋರಂ       ೭೬

ವ || ಅದಕ್ಕನತಿದೂರದೊಳ್

ಉ || ಪಾಯ್ದೊಡೆ ಕೋಡನೂಱಿ ನಡೆಬಿೞ್ದ ಮದೇಭದ ದಂತದಿಂ ಭರಂ
ಗೆಯ್ದಡೆಯುೞ್ತಿ ಕಾಡನರುಣಾಂಬುಗಳಿಂ ಬೆದೆಗೂಡಿ ತಾಯ್ನೆಲ
ಕ್ಕೆಯ್ದಿರಲೆಂದು ಬಿತ್ತಿದುದದೊಂದು ಮೃಗಾರಿ ತದುತ್ತಮಾಂಗದಿಂ
ಸಯ್ದನೆ ಸೋರ್ವ ಮುತ್ತುಗಳೆ ಬಿತ್ತುಗಳಾಗಿರೆ ತನ್ನ ಬೀರಮಂ      ೭೭

ವ || ಆ ವಿಕ್ರಮಾರಂಭನಿಪುಣಕಂಠೀರವಮಲ್ಲದೆಯುಂ

ಚಂ || ಶರಭಮಿದಿರ್ಚೆ ಸಾರ್ಚಿ ಗೆಲಲುಂ ಕೊಲಲುಂ ನೆರವಿಲ್ಲದಿರ್ದೊಡಂ
ಹರಿ ಮೃಗರಾಜನಾಮವೞಿಗುಂ ಪೞಿಗುಂ ಜಗಮೋಡಿ ಬಿೞ್ದೊಡೆಂ
ದಿರದಿದಿರಾಗಿ ಸತ್ತು ಜಸಮಂ ಗೆಡೆಗೊಂಡುದದಂತೆ ಲೋಕದೊಳ್
ಧರೆ ಪೊಗೞ್ವಂತು ಸತ್ತ ಕಲಿಯುನ್ನತಿ ಗೆಲ್ಲದಿನಗ್ಗವಲ್ಲವೇ       ೭೮

ವ || ಮತ್ತಮೊಂದು ಸರಳ ಸಲ್ಲಕೀ ತಮಾಳ ಲವಂಗಸಂಗತಪ್ರದೇಶದೊಳ್

ಮ || ಪರಿವಚ್ಛಾಂಬುವನೂಡಿ ಪೂಗವನಮಂ ಕಿೞ್ತಿಕ್ಕಿ ಕರ್ಪೂರಭೂ
ಜರಜೋರಾಜಿತಮಾಗಿ ಕೋಡೆ ಹೊಗೆ ಕಾಡಂ ಸುತ್ತೆ ಮಾಱಾನೆಯೊಳ್
ಭರದಿಂದಂ ಮೊಗಮಿಕ್ಕಿ ಪೋರ್ದು ಶಬರೀಗೇಯಂಗಳಂ ಸೋಲದಿಂ
ಮರವಟ್ಟಾಲಿಸಿ ಲೀಲೆಯಂ ಮೆಱೆದುದುರ್ವೀಬಂಧುರಂ ಸಿಂಧುರಂ            ೭೯

ವ || ಅದಲ್ಲದೆಯುಂ

ಚಂ || ವನಮೃಗಕೋಟಿ ನೋೞ್ಪ ಜನಮಾಗೆ ಮದಂ ತಿಮಿರಾಗೆ ಕೋಡು ಕೂ
ರ್ಮೊನೆಯಲಗಾಗೆ ಕಾಡು ಕಳನಾಗೆ ಮದಭ್ರಮರಾಳಿ ರಕ್ಕೆಗಂ
ಟಿನ ಮಣಿಯಾಗೆ ತಕ್ಕೞಿಯದೆಕ್ಕತುಳಂ ಪೊಣರ್ದಂಕದಂತೆ ಬ
ಲ್ಮುನಿಸಿನೊಳೊಂದನೊಂದಿಱಿಯಲಿರ್ದುವು ತಳ್ತೆರಡುಗ್ರದಂತಿಗಳ್            ೮೦

ವ || ಮತ್ತಮೊಂದೆಡೆಯೊಳ್

ಚಂ || ಉಡಿದರೆಮೆಲ್ದು ಮೆಲ್ದಳಿರನಿಕ್ಕುವ ಬಲ್ದಲಿರ್ಗೊಂಬನಿಂಬಿನಿಂ
ಕೊಡೆವಿಡಿವಗ್ರಹಸ್ತಜಳಮಂ ನಸುವಿಂಡುವ ಕೋಡನಿಟ್ಟು ತೀಂ
ಗಿಡಿಪುವ ಕರ್ಣತಾಳದೆಲರಿಂ ಬೆಮರಾಱಿಪ ಕೆಯ್ತಮೊಪ್ಪೆ ಬ
ಲ್ಪಿಡಿ ಪಿಡಿದಿರ್ದುದಂಗಜನ ಕಯ್ಪಿಡಿಯಂ ಪಿಡಿಯಂ ಮತಂಗಜಂ   ೮೧

ವ || ಮತ್ತಮೊಂದೆಡೆಯೊಳ್

ಉ || ಬೇನೆಯಿನಕ್ಷಿಗಳ್ ನಸು ಮುಗುಳ್ತಿರೆ ಪಿಂತು ಕುನುಂಗಿ ಜೋಲೆ ಪೇ
ರಾನೆಯ ಕರ್ಣವಾಯು ಬೆಮರಾಱಿಸೆ ತಾಯ್ಪಿಡಿ ನೀಡೆ ಹಸ್ತದಿಂ
ತಾನವಳಂಬಿಸಿರ್ದು ತಟಭೂಜದೊಳೊಂದು ಕರೇಣು ಸೂಲಿಸು
ತ್ತೇನಣದಲ್ಲಿ ಮಾಡಿದುದೊ ಬೇಡರೊಳಂ ಕರುಣಾನುಭಾವಮಂ  ೮೨

ವ || ಅದಲ್ಲದೆಯುಂ

ಕ || ಪರಿಕಲಿತ ಗಂಡಶೈಲೋ
ತ್ಕರಮಧ್ಯದೊಳಮರ್ದು ರಂಜಿಪಂಜನಗಿರಿಯಂ
ಕರಿ ಪೋಲ್ತಿರಲೆಸೆದುದು ಬಳ
ಸಿರೆ ಪೋತಕಲಾಪವಲ್ಲಿ ಯೂಥಸನಾಥಂ        ೮೩

ವ || ಮತ್ತೊಂದು ಸಪ್ತಶಾಲ್ಮಲೀಷಂಡದೊಳ್

ಕಂ || ಎಲೆವರಸು ಗಾಳಿಯಿಂ ಪಱಿ
ದೆಲವದ ಪಸುರ್ಗಾಯ್ಗಳುರುಳೆ ಮೂಗೂಱಿ ಶುಕಾ
ವಲಿ ಬಿೞ್ದುವೆಂದು ಬಿಡೆ ನುಂ
ಗಲೊಡರ್ಚುವುವದಱ ಪೊದಱ ಬಾಳಬಿಡಾಳಂ  ೮೪

ತುಱುಗಿದ ತೂಱಲ್ಗೊಂಬಿನ
ತೆಱಪುಗಳೊಳ್ ಕೂಡಿ ನುಸುಳಲಾಱದೆ ಸಿಲ್ಕಿಂ
ಪಱಿದಿರ್ದ ಬೆಳ್ಮುಗಿಲ್ಗಳ
ಮುಱಿಗಳಿವೆನಿಸಿದುವು ಶಾಳ್ಮಳೀಫಳತೂಳಂ    ೮೫

ವ || ಮತ್ತಮೊಂದೆಡೆಯೊಳ್

ಕಂ || ಮರಗೊಂಬಿಂದಂ ನೇಲ್ದೆಲೆ
ಯುರಗನ ಪಜ್ಜಳಿಪ ಪಡೆಯ ಮಾಣಿಕಕವೆಳಗೇಂ
ಕರಮೆಸೆದುದೊ ವನದೇವತೆ
ಯರಮನೆಯೊಳ್ ನೇಲಿದಲೆಯ ಸೊಡರೆಂಬಿನಗಂ           ೮೬

ವ || ಅದಲ್ಲದೆಯುಂ

ಚಂ || ಬಿರಿಕಿನೊಳೊಯ್ಯನೊಯ್ಯನರೆದೋಱುವ ಬಿತ್ತುಗಳಿಂ ವಿಳಾಸಮಾ
ವರಿಸಿದ ದಾಡಿಮೀಫಳಮನೊಯ್ಯನೆ ಚುಂಬಿಸಿ ಬರ್ಪ ಕಾಂತನಂ
ತರುಚರಕಾಂತೆ ಕಂಡು ಪುರುಡಿಂ ಬಡಿಯಲ್ ಪಡಿಗೊಂಡುದೀೞ್ದು ಬ
ಲ್ಪರಿದು ಬಲೀಮುಖೀಮುಖಮನಿಂಬೆನೆ ಚುಂಬಿಸೆ ತೇಂಕಿ ಕೋಪಮಂ          ೮೭

ವ || ಮತ್ತಮನೇಕ ಪನಸ ಜಂಬೀರ ನಾರಿಕೇಳ ಸಹಕಾರ ಕದಳೀ ಪ್ರಮುಖಫಲಿತ ಭೂಜರಾಜಿಗಳ್

ಕಂ || ಅನುಭವಿಸುವ ಜನಮಂ ನೆ
ಟ್ಟನೆ ಪಡೆಯದೆ ಬಱಿದೆ ಕಿಡುವ ವಿವಿಧ ಫಲಂಗಳ್
ನೆನೆಯಿಸಿದುವಲ್ಲಿ ದುರ್ಭಗ
ವನಿತೆಯ ರಮಣೀಯರೂಪಯೌವನದೊದವಂ            ೮೮

ವ || ಅಂತವಂ ನೋಡುತ್ತುಂ ಬರೆವರೆ ಮುಂದೊಂದು ಶಬರ ಶಿಬಿರದೊಳ್

ಚಂ || ಬಿದಿರಿದ ಮುತ್ತುವಲ್ಲ ಮುರಿಮೂಗಿನ ಬೊಂದಿಗೆವಾಯಪೊಂಗುಗ
ಲ್ಲದ ಪಸುರ್ಗಣ್ಣ ಕೆಂದಲೆಯ ಕಾಳಿಗವರ್ಣದ ಬೀಡೆಗಾಲ ಜೋ
ಲ್ದುದರದ ಕಂಬಿಗಯ್ಯ ಸಿರೆಮೆಯ್ಸುೞಿಗಡ್ಡದ ಕೂನಬೆನ್ನ ನು
ರ್ಗಿದ ಕೊರಲೞ್ದ ಪೇರುರದ ಲುಬ್ಧಕರಿರ್ದರಲಬ್ಧಮಾರ್ದವರ್   ೮೯

ವ || ಅದರೊಳಗೆ

ಚಂ || ಸುಡುರ್ದಲೆ ಸಣ್ಣವುರ್ವೊಳುಮೊಗಂ ಬೆಳರ್ವಾಯ್ ಮಿಳಿರ್ವೊಳ್ಗುರುಳ್ ತೊದ
ಳ್ನುಡಿ ನಿಡುಗಣ್ ತೊಳರ್ಪ ಕದಪುದ್ದನೊಸಲ್ ಸುಲಿಪಲ್ ಘನಸ್ತನಂ
ಬಡನಡು ನೀೞ್ದ ತೋಳ್ ಪೊಳೆವನುಣ್ದೊಡೆ ಮೆಲ್ಲಡಿ ಕೊಲ್ಲಿನೋಟಿಮು
ಗ್ಗಡದ ಸುವರ್ಣಮೆಂಬಿನಱಿನೊಪ್ಪಿದುದಿರ್ದ ವನೇಚರೀಜನಂ      ೯೦

ವ || ಆಗಳಾ ಕಿರಾತರ ದುರ್ದರ್ಶನೀಯತೆಯುಮನಾ ಕಿರಾತೆಯರ ಸಹಜಾಮಳಾಂಗ ರಮಣೀಯತೆಯುಮಂ ಚಾತುರ್ಯಚತುರಾನನಂ ಕಂಡು ಚಿತ್ರಭಾನುಗಿಂತೆಂದಂ

ಕಂ || ಈ ಚಾರುರೂಪಲಲಿತವ
ನೇಚರಿಯರನೀ ಕುರೂಪರೊಳ್ ಕೂಡಿ ನಿರಾ
ಲೋಚಕನಾ ಬಿದಿ ವೇದಜ
ಡೋಚಿತವೃತ್ತಿಯನದಿಂತು ಕನ್ನಡಿಸುವನೇ      ೯೧

ವ || ಎಂದು ನುಡಿಯುತ್ತುಂ ಬರ್ಪನ್ನೆಗಮೊಂದು ಪೆಕ್ಕಣಪ್ರಾಂತದೊಳ್ ಮಿನುಪ ಕಿಸುಚಂದನದೊರಲ್ ಸ್ವರ್ಣದಿಂದಮುಜ್ಜಳಿಸೆ

ಚಂ || ಮದಗಜದಂತಕಾಂತ ಮುಸಳಂಬಿಡಿದೆತ್ತುವ ತೋಳ ನುಣ್ಬೊಗರ್
ಮದನನ ಬಾಳ ನುಣ್ಬೊಗರನೇೞಿಸೆ ಗಾವರದಿಂಪು ವಲ್ಲಕೀ
ಮೃದುರವದಿಂಪನೀಯೆ ಬಿದಿರಕ್ಕಿಗಳಂ ಚಳಿಸುತ್ತೆ ಪಾಡಿದರ್
ಮದವತಿಯರ್ ಕಿರಾತಸತಿಯರ್ ಪ್ರಭುಮೇರುವ ಲೀಲೆಯೇೞ್ಗೆಯಂ         ೯೨

ವ || ಮತ್ತಮೊರ್ವಳ್

ಚಂ || ಒನಕೆ ಕೊನರ್ತು ಪಲ್ಲವಿಸಿದಪ್ಪುದೊರಲ್ ನಸುದೇಂಕಿದಪ್ಪುದೆಂ
ಬನಿತುವರಂ ಪೊದೞ್ದ ಕಳಗೀತರಸಂ ಕವಿತಂದಡರ್ದವೋಲ್
ವನಮೃಗಮೆತ್ತಲುಂ ತಳರಲಾಱದೞಲ್ದಿರೆ ವೇಣುಬೀಜಮಂ
ವನಚರಿ ಕುಟ್ಟುತಂ ಪದೆದು ಪಾಡಿದಳಾ ಪ್ರಭುವಂಶಮೇರುವಂ     ೯೩

ವ || ಅದಲ್ಲದೆಯುಂ

ಚಂ || ಮೃದುತಳತಾಳಕೀಪ್ರಹತಿ ಕಂಕಣಝಂಕೃತಿಯಕ್ಕುತಪ್ಪದೀ
ವದನವಿಳಾಸಮಂ ಶಬರಿ ತೋರ್ಪೆಡೆಯೊಳ್ ಮುಱಿದೇಱೆ ನೋೞ್ಪುದುಂ
ಪುದಿದ ಕಟಾಕ್ಷಕಾಂತಿಗಳಿನೇನಮರ್ದಿರ್ದನೊ ಚಂದ್ರಕಾಂತಿಗೋ
ಡದೆ ಮಲೆದಿರ್ದ ಕೞ್ತಲೆಯ ಮೊತ್ತಮಿದೆಂಬಿನಮೊರ್ವ ಲುಬ್ಧಕಂ    ೯೪

ವ || ಮತ್ತಮೊಂದೆಡೆಯೊಳ್ ಅನೇಕಮಂಡನಮಂಡಿತೆಯರ್ ನೆರೆದಿರ್ದಲ್ಲಿ

ಚಂ || ವನಚರರೆಚ್ಚು ಕೊಂದಿಭದ ಮುತ್ತಿನ ಹಾರಮನಾಳ್ದ ತತ್ಪ್ರಿಯಾಂ
ಗನೆಯರ ಯೌವನೋನ್ಮುದವನೊರ್ವಳ ಯವ್ವನರ್ಗಮೆಂದು ತ
ನ್ನನುಭವದಿಂದ ಹೀನಬಳನಾದ ವನೇಚರನಾಯ್ದು ತಂದು ಕೊ
ಟ್ಟನುಪಮ ಮೌಕ್ತಿಕಾಭರಣಕಾಂತಿಯದೇಂ ನಗುವಂತಾಟಾದುದೋ           ೯೫

ವ || ಅದಲ್ಲದೆಯುಂ

ಕಂ || ಪಗೆಯನುೞಿದಪ್ಪಿದುದು ಕಾ
ಳಿಗನಾಗನನೊಂದು ಸೋಗೆನವಿಲೆನೆ ಕಣ್ಬೀ
ಲಿಗಳ ಪಸದನದೆ ಕೋಮಳೆ
ಸೊಗಯಿಸಿದಳ್ ಶಬರಿ ಕಬರಿ ಬೆಂಬಿಡದೆಸೆಯಲ್           ೯೬

ಚಂ || ನಿಯಮದಿನಾಗಳುಂ ವನದೊಳಿರ್ಪವಳೀಕ್ಷಿಸಿ ಕಲ್ತಳಕ್ಕುಮೀ
ಕ್ರಿಯೆಗಳನೆಂಬಿನಂ ಶಬರಿ ತಾಳ್ದಿದ ಪುಲ್ಲೆಯ ಕೊಲ್ಲಿನೋಟಮಂ
ಚೆಯ ನಿಮಿರ್ದಿಂಚರಂ ಗಿಳಿಯ ಚುಂಬನವಾನೆಯ ಸೋಂಕು ವಾನರ
ಕ್ರಿಯೆಯಮರ್ದಪ್ಪು ನೋಟದೊಳೊಱಲ್ಚಿತು ಕೂವದೊಳೊರ್ವ ಭಿಲ್ಲನಂ   ೯೭

ವ || ಬೇಱೊಂದು ಮಧುಪಾನಗೋಷ್ಠಿಯೊಳನೇಕ ಶಬರೀಜನಂಗಳಿರ್ದಲ್ಲಿ

ಕಂ || ಓರಂತೆ ತಾಳ ತೆಂಗಿನ
ಸೀರೆಯ ಕಳ್ಗಳ್ ಕಳರ್ಚಿ ನಿತ್ಯಗ್ರಹಮಂ
ಪಾರಯ್ಸೆ ಕುಣಿದರರೆಬರ್
ಭೋರೆನೆ ಕೆಯ್ಪೞೆಯ ರಂಜೆವಱೆಯೆನೆ ವನದೊಳ್       ೯೮

ವ || ಅದಲ್ಲದೆಯುಂ

ಉ || ಕಾಸಿನ ಕಂಬಿ ಜಾಳವಲೆ ಗಾಳದ ಕಟ್ಟಿಗೆ ಸೊರ್ಕುಬೆಂಡು ಬಿಲ್
ಹಾಸದ ಕುನ್ನಿ ದೀವದ ಮೃಗಂ ಬಲೆ ಪೆರ್ವಡಿ ಗೋರಿಗಾಣವೆಂ
ಬೀ ಸಮಕಟ್ಟು ಪಾಪದೆಱೆವೆಟ್ಟು ಜಳಸ್ಥಳಪಾಱದಿಂ ಕ್ರಿಯೋ
ಲ್ಲಾಸಮನುಂಟುಮಾಡಿ ಪೊಱಮಟ್ಟುದು ಬೇಂಟೆಗೆ ಲುಬ್ಧಕವ್ರಜಂ          ೯೯

ವ || ಮತ್ತಮೊಂದು ಪುಳಿಂದಮಂದಿರದ ಮುಂದೆ ಚಮೂರಚರ್ಮ ಚಮರವಾಳ ಗಜದಂತಾಳಿಗಳನೊಟ್ಟಿದ ದುಷ್ಕೃತಕದ ಬೆಟ್ಟಮೆನಪಟ್ಟದಿಂದಂ

ಉ || ತೊಟ್ಟನೆ ಬೀೞೆ ಮೇಲೆ ಪುಲಿದೋಲ್ ನಿಜದೀವದ ಪುಲ್ಲೆ ಬೆರ್ಚಿ ಧಿಂ
ಕಿಟ್ಟು ಚಮೂರವೆಂದು ಬಿಱುತೋಡೆ ಬಹಿರ್ಮೃಗಿಯಂದದಂ ತಗು
ಳ್ದಟ್ಟುವ ವಿಶ್ವಕದ್ರುವನಭೀಕ್ಷಿಸಿ ಸಿಂಹಕಿಶೋರಮೆಂದು ಬೆಂ
ಗೂಟ್ಟುವಿಭಂಗಳೇನದು ನಿಮಿರ್ಚಿತೊ ಬೆರ್ಚಿನ ಬಳ್ಳವಳ್ಳಿಯಂ     ೧೦೦

ವ || ಅಂತವಂ ನೋಡುತ್ತುವೆಯ್ದಿ ಬರ್ಪುದುಂ ತತ್ಸಮಯದೊಳ್ ಸೇನಾಪತಿಪ್ರೇಷಿತ ಪ್ರೇಷ್ಯಜನದೆ ಬೞಿಸಂದು

ಮ.ಸ್ರ || ಪಣೆಕಟ್ಟೊಳ್ವೀಲಿಯಿಂದುಟ್ಟುದು ಪೊಸದಳಿರಿಂ ಹಾರಮುಗ್ರೇಭಮುಕ್ತಾ
ಗಣದಿಂ ಕರ್ಣಾವತಂಸಂ ಫಣಿಫಣಮಣಿಯಿಂ ಸ್ಥಾಸಕಂ ದಂತಿದಾನೋ
ಕ್ಷಣಕಂ ಮೆಯ್ವತ್ತಿರಲ್ ಬಂದೆಱಗಿದನಧಿಕಪ್ರೀತಿಭೀತಾಂತರಂಗಂ
ಗುಣತುಂಗಶ್ರೀಪದಕ್ಕಾ ಗಹನದ ಶಬರಾಧೀಶ್ವರಂ ಶಂಬನೆಂಬಂ     ೧೦೧

ವ || ಎಱಗಿ

ಮ || ಕರಿದಂತಂ ಚಮರೀರುಹಂ ಪುಲಿದೊವಲ್ ಹಂಸಚ್ಛದಂ ಪೀಲಿ ಕ
ತ್ತುರಿ ಕಾಲಾಗುರು ಚಂದನಂ ಹಿಮಕರಂ ಜಾತೀಫಳಂ ಪೂತಿ ಸೂದ
ಕರಮುಕ್ತಾಮಣಿಯಬ್ಜಪತ್ರಮಣಿ ಚೂಡಾರತ್ನಮೆಂಬೀ ವನಾಂ
ತರಸಂಜಾತಮನಾತನೋಲಗಿಸಿದಂ ಸದ್ವಸ್ತುಸಂಘಾತಮಂ           ೧೦೨

ವ || ಅಂತೋಲಗಿಸಿ ನಿಟಿಲತಟಘಟಿತಕರಯುಗಳನಾಗಿ

ಕಂ || ಕಾಡಮೃಗದೊಡನೆ ಮೃಗದವೊ
ಲಾಡುವ ಜಡಮತಿಯೊಳೆನ್ನೊಳಾವುದಮೂಣಂ
ನೋಡದಿನಿಸೊಸೆದು ದೇವರ್
ನೋಡುಗೆ ಭಯಭಕ್ತಿಗಿರದೆ ನಡೆವಾಳ್ವೆಸನಂ     ೧೦೩

ವ || ಎಂದು ಬಿನ್ನಪಂಗೆಯ್ಯಲ್ ಕೇವಳಭೃತ್ಯಭಾವಾವಳಂಬನಂ ಶಂಬನಂ ಸಮುಚಿತಪ್ರಸಾದದಿಂ ಮನ್ನಿಸಿ ನಡೆವ ಯುವರಾಜಂಗೆ ಮುಂದೊಂದೆಡೆಯೊಳ್

ಮ.ಸ್ರ || ಅದಟಂ ಲೋಕೈಕಮಿತ್ರಂ ಬರೆ ಪುಗಲೆಡೆಯಂ ಕಾಣದುಳ್ಳಳ್ಕಿ ಬಂದ
ಪ್ಪುದು ಕಾಣ್ಬುದ್ಯೋಗದಿಂದೀ ಗಹನದ ಬಹಳಧ್ವಾಂತಮೆಂಬಂತೆ ತಾತ್ಪ
ರ್ಯದಿನಾದಾಶ್ಚರ್ಯಗಂಧಕ್ಕೆಳಸೆಯಳಿಕುಳಂ ಕೂಡೆ ಮಂದೈಸಿ ತನ್ನೊಳ್
ಪುದಿದೆತ್ತಂ ಬರ್ಪಿನಂ ಬಂದುದು ವನದಿನದೊಂದದ್ಭುತಂ ಮಾತರಿಶ್ವಂ        ೧೦೪

ವ || ಆಗಳಾ ಸಮೀರಸೌರಭಂ ತನಗನಾಘ್ರಾತಪೂರ್ವಮುಮತಿಮನೋಹರಮು ಮಪ್ಪುದಱಿಂ ತದ್ಗತಚಿತ್ತನುಂ ನಿಮೀಲಿತಲೋಚನನುಮಾಗಿ ಕಿಱಿದುವೇಗಮಾ ಗಾಳಿವೆಱಗಿನೊಳೆ ರಥಮಂ ನಿಲಿಸಿ ವಿಸ್ಮಯಂಬಡುತ್ತೆ ನಿಂದಿರ್ದ ಯುವರಾಜನಾದೇಶದಿಂ ವಾಸ್ತವ್ಯನಪ್ಪ ಪುಳಿಂದಂ ಮಿಳಿಂದನಂತೆ ವನಜಾತಕುಸುಮಗಂಧಮನಾರಯ್ದು ಎಡೆಮಾಡಿ ಬಂದು ಬಿನ್ನವಿಸಿ ಕುತೂಹಳಂ ಬೆರಸು ತತ್ಪ್ರದೇಶಕ್ಕೊಡಗೊಂಡೊಯ್ದು ತೋರ್ಪುದುಂ

ಕ || ಸ್ವೀಕೃತ ಶುಭಲಕ್ಷಣನಂ
ಗೀಕೃತ ರಮಣೀಯ ರೂಪ ಯವ್ವನ ಮತ್ತಂ
ಸ್ವೀಕೃತ ನಮೇರು ಚಾರುಲ
ತಾಕುಸುಮಂ ಖಚರನೊರ್ವನಪಗತಗರ್ವಂ       ೧೦೫

ಚಂ || ಪೊಸಸಿರಿಖಂಡದಿಂದಮೆಸೆವಣ್ಪಿನ ಕಂಪಿನಲಂಪೊಳೆಕ್ಕೆಯಿಂ
ಮುಸುಱಿದುವೀತನಂ ಫಣಿಗಳೆಂಬಿನಮೊಂದಿದ ನಾಗಪಾಶದಿಂ
ಮಿಸುಕದೆ ಕಟ್ಟುಪಟ್ಟು ಮಣಿಭೂಷಣಕಾಂತಿ ಕುಜಾತಕುಂಜ ತಾ
ಮಸಮನಗಲ್ಚೆ ದೀನಮುಖನಿರ್ದನದೊಂದು ಮಹಾಕ್ಷವೃಕ್ಷದೊಳ್೧೦೬

ವ || ಅಂತಿರ್ದ ವಿಯಚ್ಚರನನಚ್ಚರಿವಟ್ಟು ನೋಡುವಲ್ಲಿ

ಚಂ || ಇದು ವಿಪರೀತಮೀ ದೊರೆತನಾಳ್ದುದು ಬಂಧುರಗಂಧಮಂ ತಮಾ
ಳದ ತಳಿರ್ಗೊಂಚಲೆಂಬಮತಿಮೋಹಮನೀಕ್ಷಿಪ ಪದ್ಮಸೂನುಗಿ
ತ್ತುದು ತನಿಗರ್ಪುವೋಲ್ ಮುಸುಱಿ ನಿಂದೆಳದುಂಬಿಯ ಬಂಬಲಿಂ ಕಱಂ
ಗಿದ ನವಪಾರಿಜಾತದಲರ್ದೊಂಗಲ ಕರ್ಣಿಕ ತತ್ಕಪೋಲದೊಳ್      ೧೦೭

ವ || ಆಗಳ್

ಮಾಲಿನೀ || ಬೞಿಯನುೞಿಯದುನ್ಮತ್ತಾಳಿ ತಣ್ಗಾಳಿಯೊಳ್ ಸೈ
ತೞಿಸಿ ಬರೆ ತೆರಳ್ದೆಯ್ದೆಯ್ದಸೌಗಂಧ್ಯಮೀಚೆ
ಲ್ವೞಿಯದೆಸೆವ ಕರ್ಣೋತ್ತಂಸದಿಂ ಬಂದುದೆಂದಂ
ದುೞಿದನಿರದೆ ಚಿತ್ತಭ್ರಾಂತಿಯಂ ರಾಜಪುತ್ರಂ    ೧೦೮

ವ || ತದನಂತರಂ ದೃಢಪ್ರಣದ್ಧನಾಗಪಾಶಮನಿವಂಗಿದು ವಿರೋಧಿಕೃತ ಮೆಂದಿಂಗಿತದಿನಱಿದು ಚಾತುರ್ಯಚತುರಾನನಂ ತನ್ನ ಮನವಾತನ ಶರೀರಸಹಜ ಸೌಕುಮಾರ್ಯಮಂ ತತ್ಪುರುಷೋಪಲಕ್ಷಿತಾಕಾರಮುಮನಱಿದು ಆಗ್ರಹಂಗೆಯ್ಯೆ

ಚಂ || ತನಗೆ ಭವಾಂತರಪ್ರಿಯತೆಯಿಂದೆ ಬಳಾಹಕನೆಂಬ ಖೇಚರಂ
ಮನಮೊಸೆದೀಯೆ ಮುಂ ಪಡೆದು ಬಂದ ವಿಮೋಚನಿಯೆಂಬ ವಿದ್ಯೆಯಂ
ನೆನೆದು ಪಿನದ್ಧನಂ ಬಿಡಿಸಿದಂ ಖಗವಂಶನನಪ್ಪುದಲ್ತೆ ಭೂ
ವಿನುತ ಪರೋಪಕಾರಗುಣರೆಂತುಮುಪೇಕ್ಷಿಪರೇ ವಿಷಣ್ಣರಂ        ೧೦೯

ವ || ಆಗಳ್ ಮುಕ್ತನಾಗಪಾಶನುಮುದ್ಗತಾಕ್ಷವೃಕ್ಷನುಮಾಗಿ

ಕಂ || ಸ್ಫುರಿತಮುಖಾಲೋಕಂ ಸ್ನೇ
ಹರಸಾರ್ದ್ರತೆ ಪಾತ್ರವೃತ್ತಿಯೆಂಬಿವು ತನಗೊ
ಪ್ಪಿರೆ ದೀಪವರ್ತಿಯಂತಿರೆ
ಪರಹಿತನಿಧಿಗೆಱಗಿ ನುಡಿದನಾ ಖಚರೇಂದ್ರಂ      ೧೧೦

ಉ || ಆರೊಳರೀ ಮಹಾಟವಿಯೊಳಿಲ್ಲಿಗೆ ಮತ್ಕೃತಪುಣ್ಯದೇವತಾ
ಕಾರದೆ ಬಂದು ಬಂಧಮನಗಲ್ಚಿದೆ ನಿನ್ನ ಹಸಾದದಿಂದಮಾ
ವೈರಿಯನಿಂದೆ ಪೋಗಿ ಮಡಿಪಲ್ ಪಡೆದೆಂ ಪಡೆಮಾತದೇನೊ ನಿ
ಷ್ಕಾರಣಬಂಧು ನೀನೆನಗೆ ಗೆಯ್ದುಪಕಾರಮನೆಂತು ನೀಗುವೆಂ        ೧೧೧

ವ || ಎಂದು ನುಡಿದತಿವಿನತನನಾತನಂ ನೋಡಿ ಹರುಷದಿಂ

ಕಂ || ನೀನಾರ್ಗೆ ನಿನ್ನ ನಾಮವ
ದೇನಿಲ್ಲಿಗದೇಕೆ ಬಂದೆ ನಿನಗಿಂತೆಂತಾ
ಯ್ತೀ ನಾಗಪಾಶಬಂಧವಿ
ಧಾನದ ಬಲುಸಿಲ್ಕು ವೈರಿಯೆಂಬವನಾವಂ       ೧೧೨

ವ || ಎಂದು ಬೆಸಗೊಳ್ವುದುಂ

ಮ || ಅಮೃತಸ್ಯಂದಮನಬ್ಜಕಂದಮನುದಂಚತ್ಕುಂಚಮಂ ಸಂದ ಕುಂ
ದಮನಿಂದುದ್ಯುತಿವೃಂದಮಂ ನಿಜಯಶಃಶ್ರೀಕಾಂತಿಸಂತಾನಮಾ
ಕ್ರಮಿಸಲ್ ಸದ್ಗುಣಧಾಮನಾದ ವಿನಯಾಲಂಕಾರನಂ ಸತ್ಯಸಂ
ಯಮನಂ ಸಾರ ಪರೋಪಕಾರಧನನಂ ಸೌಂದರ್ಯಕಂದರ್ಪನಂ      ೧೧೩

ಉ || ಭೂಪ ಶಿಖಂಡಖೇಚರನನಾಹವದೋಹಳನಂ ಜಿನೇಶ್ವರ
ಶ್ರೀಪದಹೇಮತಾಮರಸಮಂಡಿತಮಾನಸನಂ ವಿವೇಕವಿ
ದ್ಯಾಪತಿಯಂ ಖಗಾಧಿಪತಿ ಕೇಳಿಸಲುದ್ಯತನಾದನಿಂತು ಸಂ
ಕ್ಷೇಪದಿನಾತ್ಮವೃತ್ತಕಮನಂದೊಲವಿಂ ಪ್ರಭುವಂಶಮೇರುವಂ       ೧೧೪

ಗದ್ಯ

ಇದು ಸಕಳ ಭುವನಸಂಸ್ತುತ ಜಿನಾಗಮಕುಮುದ್ವತೀ ಚಾರುಚಂದ್ರಾಯ ಮಾಣಮಾನಿತ ಶ್ರೀಮದುಭಯಕವಿ ಕಮಳಗರ್ಭಮುನಿಚಂದ್ರ ಪಂಡಿತದೇವ ಸುವ್ಯಕ್ತ ಸೂಕ್ತಿ ಚಂದ್ರಿಕಾಪಾನ ಪರಿಪುಷ್ಪಮಾನಸ ಮರಾಳ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಯುವರಾಜದಿಗ್ವಿಜಯವರ್ಣನಂ ಪಂಚಮಾಶ್ವಾಸಂ