ಕಂ || ಅಹಿಯಂತೆ ವಿಷೋದ್ಗಾರಿಗ
ಳಹರ್ನಿಶಪ್ರಹರದಂತೆ ಘಟಿಕಾತ್ಮಂಗಳ್
ರಹಟಘಟೀಯಂತ್ರಂಗಳ್
ಬಹುವಿಧವಿಭ್ರಮದಿನೆಸೆವುಪಶಲ್ಯಕದೊಳ್       ೫೧

ಚಂ || ವಿಳಸದನಂತಪದ್ಮವಸುರಾಂತಕನಂ ಫಣಿವಂಶಮಂ ಸದಾ
ನಳಕುಮುದಾವಭಾಸಿ ದೆಸೆಯಂ ರಘುನಂದನಸೈನ್ಯಮಂ ನಿರಾ
ಕುಳಕವಿರಾಜಹಂಸಸುಭಗಂ ನಭಮಂ ನೃಪಗೇಹಮಂ ಸಮಂ
ತಿಳಿಪುಗುಮಲ್ಲಿ ಮಂದಪವನೋಚ್ಚಳಶೀಕರಮಂಬುಜಾಕರಂ       ೫೨

ವ || ಮತ್ತಂ

ಉ || ಪಾವಕದಿಕ್ಕಿನಂತೆ ವನದಂತೆ ವಿಜೃಂಭಿತಪುಂಡರೀಕವಿಂ
ದೀವರನಾಭರಮ್ಯಸಭೆಯಂತೆ ರಸಾತಳದಂತನಂತ ಪ
ದ್ಮಾವಹಮುರ್ವಿಯಂತೆ ನಭದಂತವಲಂಬಿತರಾಜಹಂಸ ವಾ
ಮ್ರಾವಳಿಯಂತೆ ಕಾಮಿಜನದಂತೆ ಸಮುತ್ಕಳಿಕಾಕುಳಂ ಕೊಳಂ         ೫೩

ವ || ಮತ್ತವಲ್ಲಿ

ಚಂ || ನೆಗೞ್ದನವದ್ಯವಿದ್ಯರ ಕಳಾವನದಂತೆ ಪರೋಪಭೋಗವೃ
ತ್ತಿಗಳೆನಿತಕ್ಕುವಂತನಿತು ಕುಂದದೆ ಪೆರ್ಚುವ ತೋಯದಿಂದಮಾ
ನಗರದ ಬಾವಿ ವೊಕ್ಕರಣೆ ದೀರ್ಘಿಕೆ ಪೆರ್ಗೆಱೆ ದೊಣ್ಣೆ ಪೂಗೊಳಂ
ಬಗರಗೆ ಬೆಂಚೆ ಪಳ್ಳ ಮೊಱವೆಂಬ ಜಲಾಶಯಮಿಂತು ಸುತ್ತಲುಂ    ೫೪

ಕಂ || ನೀಡಿರದೆ ಪಿರಿಯಕರಿ ಸೆಂ
ಡಾಡೆ ನೃಪಂ ನಿಚ್ಚಮತುಳಜನಕಳಕಳದಿಂ
ಕೂಡಿ ಸೊಗಯಿಪುವು ನಗರದ
ಮೂಡಣ ಪಡುವಣ ವಿಭಾಗದೊಳ್ ವೈಹಳಿಗಳ್          ೫೫

ನಯನಿಪುಣಸೂತ್ರಧಾರರ್
ನಿಯಮಿಸುವರ್ ಭದ್ರಮಂದಮೃಗಸಂಕೀರ್ಣಾ
ನ್ವಯದ ನೃಪಕರಿಗಳಂ ಪ್ರಣಿ
ಧಿಯೊಡಂಬಡೆ ಸಕಳಶಿಕ್ಷೆಕಣ್ದೋಱುವಿನಂ        ೫೬

ಉ || ವರ್ತಿಪ ಬೃಂಹಿತಂಗಳೊಳೊಳಸೋರ್ವ ಮದನಸ್ರವದಂಬು ಕೊಂಬು ಸಂ
ವರ್ತದ ಬಲ್ಸಿಡಿಲ್ಗಳೆನೆ ವಜ್ರಧರಂ ಸೆಱೆಗೆಯ್ದ ಪುಷ್ಕಳಾ
ವರ್ತ ಘನಾಘನಂಗಳವೊಲಂಜನಕಾಂತಿಗಳುಗ್ರ ದಂತಿಗಳ್
ಮಾರ್ತುಡುಗೀಗವೇೞನೆಯಮಂ ತಡವಂದಮನಾಂತು ಕಂಭದೊಳ್            ೫೭

ವ || ಅದಲ್ಲದೆಯುಂ

ಮ || ನವರತ್ನೋತ್ಕರದಿಂ ಸುರೇಂದ್ರಧನುವಂ ಮೆಯ್ವಣ್ಣದಿಂ ತಾರ್ಕ್ಷ್ಯನಂ
ಪವಮಾನಾತ್ಮಜನಂ ಜವಪ್ರಸರದಿಂ ಸೂರ್ಯಾಶ್ವಮಂ ಶಕ್ರವಾ
ಹವನಕ್ಷೂಣಗುಣಂಗಳಿಂ ಮಿಗುವ ಜಾತ್ಯಶ್ವಂಗಳಂ ತಿರ್ದುತಿ
ಪ್ಪವರ್ಗೇಂ ಸಾರ್ದುವೊ ಶಾಲಿಹೋತ್ರರವಿಪುತ್ರಾರೋಹಣಪ್ರೌಢಿಗಳ್         ೫೮

ವ || ಆ ಪ್ರದೇಶಕ್ಕಾಸನ್ನಮಾಗಿ ವಿಹಿತಲೋಹಪಟಪ್ರಮುಖಬಹುವೇಧ್ಯಸಾನ್ನಿಧ್ಯಪರುವಿರ ಚಿತಾಂಗುಳಿತ್ರಾಣರಪ್ಪ ಶಿಷ್ಯರಂ

ಕಂ || ನಿಯಮಿಸವರ್ ತ್ರಿವಿಧಧನುಃ
ಪ್ರಯೋಗದೊಳ್ ದೃಷ್ಟಿ ಮುಷ್ಟಿ ಶರಸಂಧಾನ
ಕ್ರಿಯೆ ಲಕ್ಷ್ಯಸಿದ್ಧಿ ನಿಜಶಿ
ಕ್ಷೆಯಿನನುಪಮಮಾಗೆ ಚತುರಚಾಪಾಚಾರ್ಯರ್            ೫೯

ವ || ಮತ್ತಮಲ್ಲಿ

ಚಂ || ಒದವಿ ಪೊದಳ್ದ ಮೇಳೆಯದ ಕೇತನಮಾಳಿಕೆ ವೀರಲಕ್ಷ್ಮಿ ದೂ
ರದ ಭಟರಂ ನಿಜೋಚ್ಚಲಪಟಾಂಚಲದಿಂ ಕರೆವಂತುಟಾಗೆ ಮ
ತ್ತದು ಭೃಗುದೇವತಾಕಟಕಪರ್ವತಮೆಂಬಿನಮೊಪ್ಪುತಿರ್ಪುದಂ
ಕದ ಕಳನಲ್ಲಿ ಬಿನ್ನಣದ ಬೀರರಿಳಾಪತಿ ಮೆಚ್ಚೆ ಕಾದುವರ್          ೬೦

ವ || ಆ ಕಳದ ಕೆಲದೊಳ್ ಸಾರಿಯಂ ಕೋಲೊಡ್ಡಿ ಗೆಲ್ವ ನಿಗೞನ ನೆಗೞ್ತೆಗಿಡಿಪ ಭೃಗುವಂ ನಗುವ ಬೇತಾಳನಂ ಬೇಡೆನಿಪ ತಕ್ಕು ಮಿಕ್ಕುವರೆ ಕಲ್ತ ಬಿನ್ನಣಿಗಳಿರ್ದು

ಚಂ || ಕಿಱೆಪುವ ಗೇಣ ಕೇಣಮಿವರಿಂ ನವಯೌವನಯೋಗ್ಯಮಾಯ್ತು ಕ
ಣ್ದೆಱೆದುದು ರೂಪುಗೊಂಡುದೆನೆ ಚಾರಿ ಪುಗಿಲ್ ನೆಲೆ ನೋರ್ಪು ದಂಡೆ ಸೂೞ್
ನಿಱೆಸು ನಿಘಾತ ಮಾಂಕೆ ಬಗೆ ಬಗ್ಗಣೆ ವಂಚನೆ ಬಂಧಮೆಂಬಿವಂ
ಮೆಱೆವೊವಜರ್ಕಳೇಂ ಕಲಿಸುತಿರ್ಪರೊ ಚಟ್ಟರನೞ್ತೆವಟ್ಟರಂ       ೬೧

ವ || ಇಂತನೇಕ ಜನಮನೋಹಾರಿ ಸೌಂದರ್ಯವೃತ್ತಿಗವಕಾಶಮಾದ ವಿವಿಧ ಪ್ರದೇಶದಿಂದೊಳಗೆ ವಿಷಮವಿಷಲತಾ ಗುಲ್ಮಕಂಟಕವಿಕೀರ್ಣಮಾಗಿ ಬಳಸಿ ಬಳ್ವಳಿಪ ಬಾೞ್ವೇಲಿಗನತಿದೂರದೊಳ್

ಮ || ಪರಿವೇಷಂ ರವಿಬಿಂಬಮಂ ಜಳಧಿ ಜಂಬೂದ್ವೀಪಮಂ ಸುತ್ತಿ ಸೌಂ
ದರಮಾಗಿರ್ಪವೊಲಿರ್ಪುದಪ್ರತಿಮಕೋಟಾಚಕ್ರಮಂ ಸುತ್ತಿ ಕಂ
ಜರಜಃಪುಂಜವಿಚಿತ್ರವೀಚಿರುಚಿರಂ ಪರ್ಯಂತಹಂಸಂ ನಿರಂ
ತರಕಾಂತಂ ಪರಿಖಾಂತರಂ ಪುರವಧೂಚೀನೋತ್ತರೀಯೋಪಮಂ   ೬೨

ಕಂ || ಪೊಱವೊೞಳ ಬನದ ಕೞ್ತಲೆ
ಮಱೆದುಂಬಿಗಳಿಂದೆ ಬಯ್ದು ಪಾಡಿಸಿ ಸಾರ್ತಂ
ದುಱದೊಡ್ಡಿದರ್ಕಬಿಂಬದ
ತಱುಗಲದೆನಿಸುವುದು ಕಾಂಚನಪ್ರಾಕಾರಂ        ೬೩

ಚಂ || ಇದು ತೆಱೆದಿರ್ದ ರಾಹುಮುಖಮೆಂಬ ವಿಶಂಕೆಯಿನಿಂದ್ರನೀಲರ
ತ್ನದ ತೆನೆಯಂಬುಗಡಿಯೊಳಗಂ ಪುಗಲಂಜಿ ನಭಂಬರಂ ಪೊದ
ೞ್ದೊದವಿದ ಕೋಂಟೆಯಂ ನುಗುಳ್ದು ಪೋಗಲಹಃಪತಿ ಬೇಱೆ ಬಟ್ಟೆಗಾ
ಣದೆ ತಡೆದಿರ್ಪನಲ್ಲಿ ಪೊಣರ್ವಕ್ಕಿಗೆ ಸಂತಸಮಾಗೆ ಸಂತತಂ          ೬೪

ಕಂ || ಪ್ರತ್ಯಾಸನ್ನದೆ ನಡೆವಾ
ದಿತ್ಯನ ರುಚಿ ಪೊನ್ನ ಕೋಂಟೆಯಂ ಕರಗಿಸಿದಂ
ತತ್ಯುಚ್ಚಕೂಟಹತಿಯಿಂ
ನಿತ್ಯಂ ಪಱಿಪಱಿದು ಸಾರ್ವುವಲ್ಲಿಯ ಮುಗಿಲ್ಗಳ್       ೬೫

ಮುಗಿಲಟ್ಟಳೆಗಳ ಪಚ್ಚೆಯ
ಪೊಗರ್ವೆಳಗಿಡಿದಡರ್ವಪಾಂಗು ಗಗನಾಪಗೆಯಂ
ಜಗುನೆಯ ಕರ್ಮಡುವಱಸಲ್
ನೆಗೆವಂತೊಪ್ಪುವುದು ಕಣ್ಗೆ ತತ್ಪುರಜನದಾ     ೬೬

ಕಂ || ಪ್ರಣಿಹಿತಕಲಶಾವಳಿ ಕಿಂ
ಕಿಣಿಯೊಳ್ ಪೊಱಮಡುವ ಪುಗುವ ಜನದುಲಿಯುಲಿಯೊಳ್
ತೊಣೆಯಾಗೆ ನಗರಲಕ್ಷ್ಮಿಯ
ಮಣಿನೂಪುರದಂತೆ ಗೋಪುರಂ ಸೊಗಯಿಸುಗುಂ           ೬೭

ತುಂಗತರಂಗಂ ಸುೞಿವ ತು
ರಂಗಂ ನೊರೆವಿಂಡು ನೃಪರ ಬೆಳ್ಗೊಡೆಯಾಗಲ್
ಗಂಗಾಪ್ರವಾಹಮೆನಿಪುದು
ಸಂಗತಜನಕಳಕಳಂ ಪ್ರತೋಳೀವಳಯಂ           ೬೮

ಮ || ಪುರಪೂರ್ವಾಪರ ದಕ್ಷಿಣೋತ್ತರ ದಿಶಾಖಂಡಂಗಳೊಳ್ ನೀಳ್ದು ಬಿ
ತ್ತರದಿಂದೊಪ್ಪುವ ಬೀದಿಗಳ್ ಸುಜನಚಿತ್ತಾಹ್ಲಾದಿಗಳ್ ಕೀರ್ಣಪು
ಷ್ಪರಸಾಮೋದಿಗಳೋಳಿಯೊಳ್ ಸ್ಫಟಿಕಲೀಲಾವೇದಿಗಳ್ ಗೋತ್ರಭಿ
ತ್ಪುರಸಂವಾದಿಗಳುದ್ಘತೋರಣಪತಾಕಾಸ್ತಂಭಸಂಭೇದಿಗಳ್       ೬೯

ಚಂ || ದ್ವಿಗುಣಿಸೆ ಬಣ್ಣವಿಂದುಮಣಿಮಂಡಪಕಾಂತಿಗಳಿಂ ಮುಗುಳ್ತ ಮ
ಲ್ಲಿಗೆಗೆ ಹರೀತರತ್ನ ಭವನಾಂಶುಗಳಿಂದೆಳವಾೞೆಗಿಂದ್ರನೀ
ಲಗೃಹಮರೀಚಿಯಿಂ ಮಧುಕರಪ್ರಕರಕ್ಕರುಣಾಶ್ಮವೇಶ್ವರ
ಶ್ಮಿಗಳಿನಶೋಕೆಗೀವುವು ಗೃಹೋಪವನಾವಳಿ ಕೇರಿಗೇರಿಯೊಳ್      ೭೦

ಕಂ || ಬಾಂದೊಱೆಯೊಳೊಗೆದ ನೊರೆವಿಂ
ಡೆಂದು ಪುರಶ್ರೀಗೆ ಪಿಡಿದ ಬೆಳ್ಗೊಡೆಯ ತಗು
ಳ್ಪೆಂದು ನೆಗೆತಂದ ಬೆಳ್ಮುಗಿ
ಲೆಂದೆನಿಸುವುವಭ್ರಚುಂಬಿ ಸೌಧತಳಂಗಳ್         ೭೧

ಪುರವರದ ಸೌಧತಳದೊಳ್
ಕರುವಿನ ಚಿತ್ರದ ಬಿಡಾಲಮಂ ಕಂಡೊಡೆ ಚೆ
ಚ್ಚರಮೆ ಪುಲಿಗೆತ್ತು ಚಂದ್ರನ
ಹರಿಣಂ ಬಿಱುತೋಡಿ ನಗಿಸದಿರ್ಕುಮೆ ಜನಮಂ  ೭೨

ಮ || ಕಳಶಂ ಕನ್ನಡಿ ರಂಗವಲ್ಲಿ ರಸವದ್ಗೀತಂ ವರಸ್ತ್ರೀಜನಂ
ತಳಿರುಯ್ಯಲ್ ಮಣಿದೀಪರಾಜಿ ಗುಡಿ ಮಾಂಗಲ್ಯಸ್ವನಂ ವೇದಿಕಾ
ವಳಯಂ ಪೂವಲಿ ಮತ್ತವಾರಣಮುದಂಚತ್ತೋರಣಂ ಚಿತ್ರಭಿ
ತ್ತಿಳತಾಮಂಟಪವೆಂಬಿವಿಲ್ಲದ ಜಿನಾವಾಸಂಗಳಿಲ್ಲೆಲ್ಲಿಯುಂ       ೭೩

ಶಾ || ಶ್ರೀನೀಡಂ ಪುರಮಬ್ಧಿ ತತ್ವನಯಘೋಷಂ ಕರ್ಣಧಾರಂ ಮಹಾ
ಮಾನಸ್ತಂಭಕುಳಂ ಶಿಳಂ ಪರಮಧರ್ಮವ್ಯಾಪ್ತಿ ಬಿಣ್ಗುಂಡು ಭ
ವ್ಯಾನೀಕಂ ಶುಭಲಾಭಲಂಪಟಮನಸ್ಸಾಂಯಾತ್ರಿಕವ್ರಾತಮಾ
ಗೇನೊಪ್ಪಿರ್ಪುವೊ ಪೋಲ್ತು ದಿವ್ಯಜಿನಚೈತ್ಯಂಗಳ್ ಬಹಿತ್ರಂಗಳಂ  ೭೪

ಮ || ಗುರುಧರ್ಮಶ್ರವಣಾವಭಾಸಿ ನಭದೊಳ್ ನಿಷ್ಕಲ್ಮಷಾಶಾಂಬರ
ಸ್ಫುರಿತಂ ಶಾರದದೊಳ್ ಸುಧಾಧವಳಧಾಮಂ ಸೋಮನೊಳ್ ಚಿತ್ರವಿ
ಚ್ಛುರಿತಂ ಮಂಡಿತಮಾನಿನೀನಿಟಿಲದೊಳ್ ನಿರ್ವಾಣಸೌಖ್ಯಪ್ರಿಯಾ
ನಿರತಂ ಸಾಮಜದೊಳ್ ಸಮಾನಮೆನಿಕುಂ ಪ್ರೋತ್ತುಂಗಚೈತ್ಯಾಲಯಂ         ೭೫

ವ || ಎನಿಸಿದುತ್ಥಂಭಿತ ಮಾನಸ್ತಂಭಮಕರತೋರಣವಿರಚಿತಂಗಳುಂ ಅನೇಕಮಣಿ ಕೂಟಕೋಟಿ ವಿಟಂಕಟಂಕಿತವಿಯತ್ತಳಂಗಳುಂ ಜಿನರಾಜಪೂಜಾನುರಕ್ತ ಪುರಜನಪ್ರವೇಶ ನಿಸ್ಸರಸಂಕೀರ್ಣಗೋಪುರಂಗಳುಂ ಅಂತರಾಂತರವಿಕೀರ್ಣ ಸೌವರ್ಣ ಕಳಶ ಮುಕುರ ಚಾಮರ ವ್ಯಜನ ಧೂಪ ದೀಪಾದ್ಯುಪಕರಣ ವಿಳಸಿತಂಗಳುಂ ಪ್ರಚಂಡಪಂಡಿತಸ್ಯಾದ್ವಾದವಿದ್ಯಾನುವಾದ ಶಬ್ದಾರ್ಥನಯಪ್ರಮಾಣವಾಣೀವಿಳಾಸಿಗಳುಮಪ್ಪ ಜಿನನಿವಾಸಂಗಳಲ್ಲದೆಯುಂ

ಕಂ || ಮನಸಿಜನ ಭುವನಸಮ್ಮೋ
ಹನ ವಿದ್ಯಾಪೀಠವೆನಿಸಿ ರಂಜಿಪುದು ವಿಯೋ
ಗಿನಿಕಾಯ ಕಾಳಕೂಟಂ
ಘನಕನಕಕವಾಟಮಲ್ಲಿ ಗಣಿಕಾವಾಟಂ            ೭೬

ಉ || ಮೇನಕೆ ರಂಭೆಯೂರ್ವಶಿ ಸುಕೇಶಿ ತಿಲೋತ್ತಮೆ ಮಂಜಘೋಷೆಯೆಂ
ಬೀ ನೆಗೞ್ದದಚ್ಚರಿಯರಚ್ಚರಿಯಪ್ಪ ವಿಳಾಸಮಂ ನಿಜ
ಭ್ರೂನಟನೈಕದೇಶಮೆ ತಱುಂಬಿದುದೆಂಬ ಸುರೂಪವಿಭ್ರಮೆ
ಶ್ರೀನಿಜಮಾಗೆ ರಂಜಿಸುವರಲ್ಲಿಯ ರೂಢಿಯ ಗಾಡಿಗಾರ್ತಿಯರ್    ೭೭

ವ || ಎನಿಪಗಣ್ಯ ಲಾವಣ್ಯ ಪಣ್ಯಾಂಗನಾಜನದ ಭಾಗ್ಯದ ಸೌಭಾಗ್ಯದ ನಯದ ಬೀಯದ ಚಾಗದುಪಭೋಗದೆಸಕದೊಳಂ ಬರ್ದುಗಾರ್ತಿಯರ ಬಹಿರಂಗಣಂಗಳೊಳ್ ಅಳವಟ್ಟ ಕಂಭಂಗಳಲ್ಲಿ ನೆಗೞ್ತೆಗೆತ್ತಿ ತೆತ್ತಿಸಿದ ಸೌಭಾಗ್ಯಘಂಟೆಗಳೊಳಂ ಸೌಧತಳಂಗಳ ವಿನೋದವೇದಿಕೆಯ ಮತ್ತವಾರಣದ ಮಲಂಗಂ ಮಲಂಗಿ ಚದುರ ಚಾಗದ ದಗುಂತಿಯಂ ಮೆಱೆವ ವಿವಿಧ ವಿಟರೊಳಂ ಚತುರಚತುರಿಕೆಯರೋದಿಸಿದ ಮದನಾಗಮಂಗಳಂ ಪದಂಗುಟ್ಟಿ ಪರಮಪಂಡಿತಂಗಳೆನಿಪ ಪಂಜರದ ಪಂಡಿತವಕ್ಕಿಗಳೊಳಮತಿಮನೋಹಾರಿಯಪ್ಪ ಸೂೞೆಗೇರಿಗಾಸನ್ನಮಾದ ವಿಪಣಿವೀಥಿಯೊಳ್

ಚಂ || ಬಳಸುವ ತುಂಬಿವಿಂಡು ಜಲದಾವಳಿ ಸೂಸುವ ಬೆಳ್ಮುಗುಳ್ ಘನೋ
ಪಳತತಿ ಮಾೞ್ಕೆಯಿಂದೊಸರ್ವ ಪುಷ್ಪರಸಂ ಮೞೆ ಮಾಳೆಗಾರ್ತಿಯ
ರ್ಕಳ ಕಡೆಗಣ್ಣ ಬೆಳ್ಪು ಕುಡುಮಿಂಚು ಕನನ್ಮಣಿಕಂಕಣಸ್ವನಂ
ಗಳೆ ಮೊೞಗಾಗೆ ಕಾರ್ಮೋಗಮನಲ್ಲಿಯ ಪೂವಿನ ಸಂತೆ ತೋಱುಗುಂ          ೭೮

ಕಂ || ಬಿರಯಿಗಳನಿಸಲನಂಗಂ
ಗರಲಂಬಿನ ಪೊದೆಯನಖಿಳವನದೇವತೆಯರ್
ವಿರಿಚಿಸಿ ನೀಡಲ್ ಬಂದಂ
ತಿರಲೆಸೆವರ್ ಪುಷ್ಪಮಾಲಿಕಾಧಾರಿಣಿಯರ್      ೭೯

ಚಂ || ಶ್ವಸಿತದ ಕಂಪು ಕಂಪನಭಿವರ್ಧಿಸೆ ಬಣ್ಣದ ಸೊಂಪು ಬಣ್ಣವೇ
ಱೆಸೆ ಮಧುರಸ್ಮಿತಾಂಶು ಮಧುರಸ್ಮಿತಲೀಲೆಯನೀಯೆ ಮಾಲೆಗೇ
ನೆಸೆದುವೊ ಮಾಲೆಗಾರ್ತಿಯರ ವರ್ತನೆ ಮಾಱುಗಳಂತೆ ಮಾಱುಗಳ್
ರಸಿಕರನೊತ್ತೆ ಬಾಸಿಗಮನೆತ್ತುವ ಚೆಲ್ವಗೆಯೆತ್ತೆ ಚಿತ್ತಮಂ            ೮೦

ವ || ಅದಲ್ಲದೆಯುಂ ಅತಿಮಧುರಪೂಗಫಲಂಗಳೊಳಂ ಸರಸನಾಗವಲ್ಲೀದಳಂಗಳೊಳ ಮೆಸೆವ ತಾಂಬೂಲಿಕಾನಿಕೇತನಂಗಳೊಳ್

ಕಂ || ಪೊಸಮುತ್ತಿನ ಸಿಪ್ಪುಗಳಂ
ತೆಸೆದಪುವೆಂಬವರ ನೀರಸೋಕ್ತಿಯ ಪುರುಳೇಂ
ವಸುಧೆಗಿೞಿದಿಂದುಕಳೆಗಳ
ಪೊಸಬೆಳಸೆನಿಪುವು ಪೊದೞ್ದ ಬೆಳ್ಪಿಡಿದೆಲೆಗಳ್  ೮೧

ವ || ಅದಲ್ಲದೆಯುಂ

ಕಂ || ವಿರಹಭರೋತ್ಕಂಠಮನೋ
ಹರಿಯ ಕಪೋಳಂಗಳಂತೆ ನಿಬ್ಬರಿಸಿದ ಬೆ
ಳ್ಕರಿಸಿದೆಲೆಗಳಿನದೆಲೆಗಳ
ಬರಿಸುವುದನುನಯದೆ ಪೆಂಟೆ ಗೆಂಟರ ವಿಟರಂ   ೮೨

ವ || ಅದಱ ಕೆಲದೊಳ್

ಕಂ || ನೆರೆವ ದಳದರೆವ ಸಾಂದಿನ
ಮೊರೆವಳಿಗಳ ಪರೆವ ಕಂಪನೆರೆವನಿಳನ ಮು
ಯ್ಯೊರೆವ ವಿಟಭೋಗಿಗಳ ವಿ
ಸ್ತರದಿಂ ಸೊಗಯಿಪುವು ಘಟ್ಟಿವಳರಂಗಡಿಗಳ್  ೮೩

ವ || ಅದಲ್ಲದೆಯುಂ

ಕಂ || ಉಂಡೊಡೆ ಕಿಡುವುದು ಪಿರಿದೇಂ
ಕಂಡೊಡೆ ಪೆಸರ್ಗೊಂಡೊಡೊರ್ಮೆ ನೆನೆದೊಡೆ ಕಿಡುಗುಂ
ಚಂಡಾಮಯಮೆನಿಪೌಷಧ
ಮಂಡಳಿಯಿಂ ಸೇವ್ಯಮಲ್ಲಿ ಗಂದಿಗವಸರಂ      ೮೪

ಇದು ಪೂವಲಿಗೆದಱಿದ ನೀ
ಲದ ರಂಗಂ ಭಗಣಬಿಂಬಚುಂಬಿತಯಮುನಾ
ಹ್ರದಮೆನಿಪುದುಚಿತಮಣಿಗಳ
ಪುದುವಿಂ ಮಣಿಗಾಱವಸರಮಸಿತಾಂಬರದೊಳ್            ೮೫

ತರಳ || ಕಮಳವೃಂದಮನಾವಿರಲ್ ಪಗಲುಂ ಪಳಂಚಲೆವೀ ಪುರೋ
ತ್ತಮವಧೂವನೇಂದುಗಳ್ಕಿದುವುಂತು ಮಾಣಿಪ ಶಕ್ತಿಯಿ
ಲ್ಲೆಮಗವಂ ಕೆಳೆಗೊಂಡು ಮಾಣಿಪೆವೆಂದು ಬಂದ ದಿನೇಶರಂ
ತಮರ್ದ ಭಂಡದ ಸೊಂಪು ಪೊಂಪುೞೆ ಕಂಚುಗಾಱರ ಪಟ್ಟದೊಳ್ ೮೬

ಕಂ || ಧನದನ ಕಾಂಚನಮಿವರನು
ದಿನಮೊರೆವ ಸುವರ್ಣರಜದ ತೂಕಕ್ಕೆ ವರಲ್
ಕನಸಿನೊಳಮಾಱದೆನಿಸುವ
ಧನಪತಿಗಳ ಬಚ್ಚ ರಾಪಣಂಗಳಳುಂಬಂ          ೮೭

ಉ || ವಲ್ಲಭಮಂತ್ರತಂತ್ರ ಪರಿರಕ್ಷೆಯಿದೆಂದುಮಬಾಧ್ಯಮಿಂತಿದೆಂ
ದಿಲ್ಲಿಯೆ ರತ್ನಮಂ ಧರಣಿ ಬಯ್ತಳೊ ಮೇಣ್ ವಡಬಾಗ್ನಿಗಳ್ಕಿ ತ
ನ್ನಿಲ್ಲಿಯ ರತ್ನಮಂ ಕಳಿಪಿತೋ ಕಡಲೀಪುರಿಗೆಂಬ ಮಾತನ
ಲ್ಲಲ್ಲಿ ನಿಮಿರ್ಚುಗುಂ ವಿಪ ಣಿವೀಧಿಯೊಳೊಪ್ಪುವ ರತ್ನರಾಶಿಗಳ್            ೮೮

ವ || ಅದಲ್ಲದೆಯುಂ

ಕಂ || ನಾನಾಜನಬಹಳತೆಯಿಂ
ನಾನಾಮಣಿಕನಕವಸ್ತುವಿಸ್ತೀರ್ಣತೆಯಿಂ
ನಾನಾಕ್ರಯವಿಕ್ರಯದಿನ
ನೂನಮೆನಲ್ ಪಣ್ಯಮಾರ್ಗಮಾರ್ಗಂ ಸೇವ್ಯಂ  ೮೯

ವ || ಆ ವಿಪಣಿವೀಧಿಯೆಂಬ ಬಿಸಜನಾಳಕ್ಕೆ ವಿಚಿತ್ರಪತ್ರದಂತೆ ರಾಜಭವನಮಂ ಬಳಸಿ

ಮುದ್ರಿಕೆ || ನಗರನಾಯಕನುನ್ನತಿ ತನ್ನಂ ಮುನ್ನಲೆಯುತ್ತಿರೆ ಮಂದರಂ
ಬಗೆಯೊಳೊಡ್ಡಿಸಲಣ್ಮದೆ ಸೇವಾವೃತ್ತಿಗೆ ಪೂಣ್ದು ನಿತಾಂತಮೋ
ಲಗಿಸಲಟ್ಟಿದ ಸಾನುವದೆತ್ತಂ ಬಂದೆಳಸಿರ್ದಪುದೆಂಬಿನಂ
ಸೊಗಯಿಪ್ಪುದು ಪೊಮ್ಮದಿಲುಗ್ರಾಂಶೂದ್ಗತಮಾಗಿರೆ ಕೆಮ್ಮುಗಿಲ್           ೯೦

ವ || ಅಲ್ಲಿಂದೊಳಗೆ ವಿಚಿತ್ರಚೀನಾಂಬರಾವಳಂಬಿತಸಂಭೃತಮಾಗಿ

ಚಂ || ಜಲಧಿಯೊಳಿಪ್ಪ ಕಾಲಮೊಡಗೂಡಿದ ಬಂಧುಗಳಪ್ಪ ರತ್ನಮಂ
ಡಳಗಳಿಳೇಶಮಂದಿರದೊಳಿರ್ದೊಡವಂ ನೆನೆದೞ್ಕಱೆಂದೆ ಬಂ
ದೊಳಪುಗಲಾಱದಾ ವರುಣವಾಹಮೀಕ್ಷಿಸಿಲೇಱೆ ನಿಂದುದುದ್ದ
ದೊಳೆನೆ ರಂಜಿಕುಂ ಮಕರತೋರಣಮೀಕ್ಷಣ ಸೌಖ್ಯಕಾರಣಂ          ೯೧

ವ || ಮತ್ತಮನವರತಮೋಲಗಿಸಲೆಂದೊಳಪುಗುವ ಮಂಡಳಿಕ ದಂಡನಾಥ ಸಾಮಂತವೃಂದದಂದಣದ ಸತ್ತಿಗೆಯ ಸಂದಣಿಯಿನೊಂದಿದುತ್ತರಾಭಿಮುಖಮಪ್ಪ ಬಾಗಿಲ್ವಾಡಮುಂ ಮದಪರಿಮಳಕ್ಕೆಳಸಿ ಬಳಸುವಳಿಮಾಲೆ ಮೇಲೆ ಪೀಲಿದೞೆಯ ಲೀಲೆಯನೊಡರ್ಚೆ ಬಾಳ್ಗಂಬದೊಳನೇಕನಿಗಳನಿಯಮಮಂ ತಳೆದು ಗರಳಗಳನಿಂದೆ ಸೆಱೆವಟ್ಟ ಗಜದನುಜನಂತಿರ್ದ ಪಟ್ಟವರ್ಧನಗಜೇಂದ್ರಮಿರ್ಪಾನೆಶಾಲೆಯುಂ ಜವದ ಜಗಳಕ್ಕೆ ಪುರುಡಿಸುವ ಗುರುಡನಂ ಗಜಱುವಂತೆ ದುಂದುಭಿಗಭೀರಹೇಷಾರವಂಗಳೊಗೆಯೆ ಸೊಗಯಿಸುವ ನಿತ್ಯನೀರಾಜನವಿರಾಜಮಾನವಾಜಿರಾಜಿಗವಕಾಶಮಪ್ಪ ಮಂದುರಮುಂ ಒಳಗೆ ತಳತಳಿಸಿ ಪೊಳೆವ ಕೆಯ್ದುಗಳ ಬಳಗಮಂ ತಳೆದ ವಿಷಮವಿಷಧರಪೂರ್ಣಮಪ್ಪ ವಿಕೀರ್ಣಮಪ್ಪ ಪಾತಾಳಕುಹರದಂತಗುರ್ವಿಸುವ ಶಸ್ತ್ರಶಾಲೆಯುಂ ಸುರುಚಿರಪರಾರ್ಧ್ಯಮಣಿಕನಕ ವಸ್ತುವಿಸ್ತಾರಮೆಸೆಯೆ ನಿಜಕವಾಟಘಟಿತಕುಳಿಶಮಣಿಕಿರಣದಿಂ ಹಿಮಕಿರಣವಿಭೂತಿಯಂ ನಗುವಂತೆ ರಂಜಿಸುವ ಕೋಶಭವನಮುಂ ಕುಬ್ಜ ವಾಮನ ಕಿರಾತ ವರ್ಷಧರ ಬರ್ಬರ ಪ್ರಾಯಪುರುಷಪರಿವೃತೆಯರಾಗಿ ಗಿಡುಗಳ ಕಂಟಕಿತಜರತ್ತರುಗ ಳೊಳಗೆಳಲತೆಗಳಂತೆ ಕಣ್ಗೊಳಿಪ ಶುದ್ಧಾಂತಕಾಂತೆಯರಿನೊಪ್ಪುವಂತವುರದಾವಾಸಮುಂ ನೃಪವಿಭೂತಿಯಂ ಕಣ್ಣಾರೆ ನೋೞ್ಪ ಜಲದೇವಿಯರ್ಕಳಲರ್ಗಣ್ಣ ಬಳಗಂಗಳಂತಲರ್ದ ಕುಮುದವನಂಗಳಿಂ ಮನಂಗೊಳಿಪ ಭವನದೀರ್ಘಿಕಾನಿಕರಮುಂ ನಿಜಸ್ಫುರಿತ ಹರಿತಕಿರಣಂಗಳಿಂ ಕಳಧೌತವಿಳಸಿತ ಪ್ರಾಸಾದ ಪಙ್ತೆಯಿಂ ಮಾಯಂ ಮಾೞ್ಪುಪವನಂಗಳುಮಳುಂಬಮಾಗೆ ತದನಂತರೋದ್ದೇಶದೊಳ್

ಚಂ || ಬರೆವೊಡೆ ಚೀರಘಟ್ಟಿ ಕರುವಿಟ್ಟಪನೆಂದೊಡೆ ಪದ್ಮಯೋನಿ ಕಂ
ಡರಿಪೊಡೆ ವಿಶ್ವಕರ್ಮನಱೆಗುಂ ನೆಱೆಯಂ ಪೆಱನಿಂತಿದಂ ಸುರೇ
ಶ್ವರಭವನಕ್ಕೆ ತಾನೆ ಪಡಿಚಂದಮಿದೆಂಬಿನ ಮೆಚ್ಚರಕ್ಕೆ ತಾ
ಯ್ಗರು ಕರುಮಾಡವೊಪ್ಪುವುದಳಂಕೃತ ಸಪ್ತತಳಂ ನಿರಾಕುಳಂ      ೯೨

ಅದು ಪೊಸಮೊನ್ನಘಂಟೆಯ ದುಕೂಲವಿತಾನದ ಮೌಕ್ತಿಕಪ್ರಲಂ
ಬದ ಬಹುಭೂಮಿಕಾಗಣದ ಕುಟ್ಟಿಮರಂಗದ ಚಿತ್ರಭಿತ್ತಿಭಾ
ಗದ ನವರತ್ನಪುತ್ರಿಕೆಯ ಚಿನ್ನದ ಕಂಬದ ರಮ್ಯಜಾಳಮಾ
ರ್ಗದ ವಿಳಸತ್ಕವಾಟದ ವಿಚಿತ್ರವಿಭೂತಿಗೆ ಜನ್ಮಮಂದಿರಂ ೯೩

ಕಂ || ಲಲನೆಯರ ಬಳ್ಳಿಮಾಡದ
ನೆಲೆಮಾಡದ ಕನ್ನೆಮಾಡದೊದವಿದ ಬಳಸಿಂ
ನೆಲಸಿ ಕರುಮಾಡಮಿಳಿಪುದು
ಕುಲಗಿರಿಗಳ್ ಬಳಸಿ ನಿಂದ ಮಂದರಗಿರಿಯಂ     ೯೪

ಚಂ || ಸೊಗಯಿಪ ನಾಟ್ಯಶಾಲೆಗೆ ವಿರಾಜಿಪ ಮಜ್ಜನಶಾಲೆಗೊಳ್ಪಿನಿಂ
ಸೊಗಯಿಪ ಮಂತ್ರಶಾಲೆಗೆಸವೋಲಗಶಾಲೆಗೆ ರಂಜಿಪಾನೆಶಾ
ಲೆಗೆ ಮಿಸುಪಸ್ತ್ರಶಾಲೆಗಮರ್ದೊಪ್ಪುವ ಜೇವಣಶಾಲೆಗುನ್ಮಣಿ
ಸ್ಥಗಿತತಟಾಂಶುವಿಂದಮದು ಮಾೞ್ಪುದಕೃತ್ಯವಿಚಿತ್ರಶೋಭೆಯಂ ೯೫

ಮ.ಸ್ರ || ಅದಱೊಳ್ ಸಾಮ್ರಾಜ್ಯಲಕ್ಷ್ಮೀವಿಳಸಿತವಿಪುಳೋರುಸ್ಥಳಂ ವೀರಲಕ್ಷ್ಮೀ
ಸದನಪ್ರೋಚ್ಚಂಡದೋರ್ಮಂಡನನಮಳಿನಸತ್ಯೋಕ್ತಿ ಲಕ್ಷ್ಮೀವಿಭಾಸ್ವ
ದ್ವದನಂ ಸತ್ಕೀರ್ತಿಲಕ್ಷ್ಮೀಪರಿಚಿತ ನಿಖಿಲಾಶಾಮುಖಂ ದಾನಲಕ್ಷ್ಮೀ
ಮುದಿತಾರ್ಥವ್ರಾತನಿರ್ಪಂ ನೃಪಕುಳತಿಲಕಂ ಪದ್ಮನುತ್ಸಾಹಸದ್ಮಂ            ೯೬

ಚಂ || ಅತನುಸಮರ್ಥತಾಪಮೊಡಗೂಡಿದ ಕೂಡದ ಪೆಂಡಿರೊಳ್ ಕುಳ
ಕ್ಷಿತಿಸಹವರ್ತನಂ ಪದನತಾನತಭೂಪರೊಳುದ್ಘದಾನಸಂ
ಗತಿ ಬಹುಶಿಷ್ಟದುಷ್ಟರೊಳೊಡಂಬಡುತಿರ್ಪನಿದೇನೊ ಚಿತ್ರಮೀ
ಕ್ಷಿತಿಪಚರಿತ್ರಮೆನ್ನದವರಾರ್ ಗಳ ನಾೞ್ಪ್ರಭುವಂಶಮೇರುವಂ        ೯೭

ಗದ್ಯ

ಇದು ಸಮಸ್ತಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತಸೂಕ್ತಿ ಚಂದ್ರಿಕಾಪಾನ ಪರಿಪುಷ್ಪಮಾನಸ ಮರಾಳ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ನಗರ ಸಂಪದ್ವರ್ಣನಂ ದ್ವಿತೀಯಾಶ್ವಾಸಂ