ಕಂ || ಶ್ರೀಕಾಂತೆ ತನ್ನುರಃಪ
ದ್ಮಾಕರದೊಳ್ ಹಂಸಿಯಂತೆ ನೆಲಸಿರೆ ಪುಣ್ಯ
ಶ್ರೀಕಾಂತನೆಸೆದನಖಿಳ ಕ
ಳಾಕಾಂತಂ ಪ್ರಭುಗುಣಾಬ್ಜವನಕಳಹಂಸಂ       ೧

ಧರೆಯಂ ಸ್ಥಿರೆಯೆನಿಸಿದನಿಂ
ದಿರೆಯಂ ಪದ್ಮಾಲಯಾಖ್ಯೆಯೆಂದೆನಿಸಿದನಾ
ಸರಸತಿಯಂ ಚತುರಾನನ
ಪರಿಚಿತೆಯೆನಿಸಿದನದೇಂ ಸಮರ್ಥನೊ ಪದ್ಮಂ   ೨

ಚಂ || ಪರಿವೃತ ರಾಜಹಂಸಕೃತಸೇವೆಯುಮುದ್ಗತಮಾದ ಸದ್ಗುಣೋ
ತ್ಕರಮುಮನೂನಲಕ್ಷ್ಮಿ ನೆಲೆಗೊಂಡಿರವುಂ ದೊರೆವೆತ್ತು ತನ್ನೊಳೊಂ
ದಿರೆ ಜಡಸಂಗಮುಂ ಪುದಿದ ಕಂಟಕಮುಂ ರಜಮುಣ್ಮಿ ತೋರ್ಪುದುಂ
ಪರಿಕಿಪೊಡಿಲ್ಲೆನಿಪ್ಪೆಸಕಮೇಂ ದೊರೆಯೆಂದೆನಿಸಿತ್ತೊ ಪದ್ಮನಾ      ೩

ತೆಗೆದತಿನಿಷ್ಠುರಂ ತಳೆಯಲಾ ಕಮಠಂ ವಿಷವಕ್ತ್ರನಾಗಿ ನಾ
ಲಗೆಯೆರಡಾದ ವಾಸುಗಿ ಕರಂ ತಲೆವಾಗಿಯುಮಾವಗಂ ಮದಂ
ಜಗುೞದಿಭಂಗಳಾಂತ ಪೊರೆ ನಿಲ್ಲಳೆ ವಕ್ಷದ ಲಕ್ಷ್ಮಿ ಕೂರ್ತು ಪ
ತ್ತುಗೆಗೊಳೆ ಸತ್ತು ತೋಳೊಳೆಸೆದಳ್ ಧರಣೀವಧು ಪದ್ಮಭೂಪನಾ            ೪

ಕಂ || ಸ್ವವಶಮನಿರದಿಂದ್ರಿಯವ
ರ್ಗವನೆಡಱೆದರಾತಿವರ್ಗಮುಮನೆಯ್ದಿಸಿ ತ
ದ್ವಿವಿಧವಿಷಯೋಪಭೋಗಮ
ನವಿರುದ್ಧಕ್ರಮದೆ ಸಲಿಸಿದಂ ನೃಪನುಚಿತಂ       ೫

ಸತ್ಯಂ ಸಾತ್ವಿಕಗುಣಕೆ ಮ
ಹಾತ್ಯಾಗಂ ರಾಜಸಕ್ಕೆ ವಿಕ್ರಮಮಧಿಕೋ
ದ್ಧತ್ಯಂ ತಮಕ್ಕೆ ನೆಲೆಯಾ
ಯ್ತತ್ಯಂತಂ ನೃಪನಿದೇಂ ತ್ರಿಮೂರ್ತ್ಯಾತ್ಮಕನೋ           ೬

ನಯದೊದವಿಂ ನೆಗೞ್ದಪನಪ
ಜಯಮಂ ನೃಪತಿಲಕನಾಱುಮೊಳ್ವಗೆಗಳ್ಗಾ
ರಯೆ ಗೆಲ್ಲನೆ ನಯಶೌರ್ಯ
ದ್ವಯದಿಂ ಪೊಱವಗೆಯ ರಾಜಕದ್ವಾದಶಮಂ  ೭

ರಿಪುರಾಜಮಂಡಳಂ ಕುಂ
ದಿ ಪದ್ಮತೇಜದಿನದೊರ್ಮೆಯುಂ ಪೆರ್ಚದು ಭಾ
ವಿಪೊಡೆಯ್ದಿ ಮಿತ್ರಮಂಡಳ
ಮುಪಚಯಮಂ ತಾಳ್ವುದಂತದುಚಿತಂ ಚಿತ್ರಂ  ೮

ವಸುವಂ ಸನ್ಮಾರ್ಗದೊಳಾ
ರ್ಜಿಸುವಂ ವರ್ಧಿಸುವನೆಯ್ದೆ ರಕ್ಷಿಸದೀವಂ
ನಿಸದಂ ವಿಬುಧರ್ಗಿದು ಭಾ
ವಿಸೆ ಚಿತ್ರಂ ರಾಜವೃತ್ತಮಾಯ್ತನ್ಯೂನಂ          ೯

ಪ್ರಜೆಗಳದೃಷ್ಟೋಪಾದಾ
ನಜದುಃಖಪ್ರಾಪ್ತಿಗಾವಗಂ ಪ್ರತಿಕೃತಿಯಂ
ಸೃಜಿಯಿಸುವ ನೃಪಂ ಸ್ವನಿಮಿ
ತ್ತಜದುಃಖಮನೆಂತುಮೆಂದುಮೇಂ ಮಾಡುಗುಮೇ         ೧೦

ಗುಣಮೇಱೆದ ಧರ್ಮಂ ಮಾ
ರ್ಗಣತತಿಯಂ ಲಕ್ಷ್ಯಸಿದ್ಧಿಯೊಳ್ ಕೂಡಿ ನೃಪಾ
ಗ್ರಣಿಯನಿಹಸೌಖ್ಯದಿಂದಮೆ
ತಣಿಪುದದೆ ಪರಮಸುಖೈಕಕಾರಣಮಲ್ತೇ        ೧೧

ಧರೆಯೊಳಗುಳ್ಳಖಿಲಾರ್ಥಿಗ
ಳೆರೆದರ್ಥಮನೇನನಿತ್ತೊಡಂ ತವೆಯದ ಮೆ
ಯ್ಸಿರಿಯುಂ ಸಿರಿಯುಂ ಪದ್ಮಂ
ಗೆರವೇ ನೃಪನಿಧಿಯೆನಿಪ್ಪ ಪೆಸರನ್ವರ್ಥಂ         ೧೨

ಚಂ || ವಿತರಣಲಕ್ಷ್ಮಿಗಿತ್ತು ಬೆರಲಂ ಜಯಲಕ್ಷ್ಮಿಗೆ ಮುಯ್ವನಿತ್ತು ಸಂ
ಗತಮೆನೆ ಲಕ್ಷ್ಮಿಗಿತ್ತು ರಮನಾನನಮಂ ವರವಾಣಿಗಿತ್ತು ಕೂ
ರ್ಪತಿಶಯಮಾಗೆ ಮಾಡಿ ಕಡುಗೂರ್ತ ಯಶೋವಧುಗೇಕದೇಶಸಂ
ಸ್ಥಿತಿಯುಮನಿತ್ತನಿಲ್ಲ ನೃಪನೊಲ್ದಬಲಾವಳಿಗಾಸೆಮುಟ್ಟದೇ     ೧೩

ಮ.ಸ್ರ || ಜಗಮೆಲ್ಲಂ ಗಂಗೆಯಂ ಮಿಂದುದೊ ದುಗುಲದೆ ಮೇಲ್ಕೊಂಡುದೊ ಕೂಡೆ ಮೆಯ್ಗ
ಣ್ಪುಗಳಂ ಶ್ರೀಖಂಡಕರ್ಪೂರದೆ ರಚಿಸಿತೊ ಮುಕ್ತಾಳಿಯಂ ತೊಟ್ಟುದೋ ಮ
ಲ್ಲಿಗೆಯಂ ಸೂಡಿತ್ತೊ ಪೀಯೂಷದೆ ತಣಿದುದೊ ಬೆಳ್ದಿಂಗಳೊಳ್ ಸಂದುದೋ ಸಂ
ದೆಗಮೇನೆಂಬಂತದೇಂ ಪರ್ವಿದುದೊ ನೃಪನತಿಸ್ಫೂರ್ತಿಕೀರ್ತಿಪ್ರತಾನಂ         ೧೪

ಮ || ನಿಡುದೋಳುರ್ವಿದ ಮುಯ್ವು ಕೊರ್ವಿದ ಪೆಗಲ್ ತಾಮ್ರಾಧರಂ ನಾಡೆ ಕೆಂ
ಪೆಡೆಗೊಂಡಾಯತನೇತ್ರ ವೊಡ್ಡಿದ ನೊಸಲ್ ವಿಸ್ತೀರ್ಣವಕ್ಷಸ್ಸ್ಥಲಂ
ಪೊಡೆವುತ್ತುಂಗಕಟೀತಟಂ ಕಡುಪುವೆತ್ತೂರುದ್ವಯಂ ಕೂರ್ಮೆಯಂ
ಪಡೆಗುಂ ಲಕ್ಷ್ಮಿಯೊಳಿನ್ನದಾರ್ ನೃಪನ ರೂಪಿಂ ಸೋಲದಬ್ಜಾಕ್ಷಿಯರ್       ೧೫

ಕಂ || ಎಡೆಗೊಂಡಿರೆ ತನ್ನಯ ತೋ
ಳೆಡೆಯಂ ಜಯಲಕ್ಷ್ಮಿ ಮೊಗದ ಪೊಗರಿಂದತಿನೀ
ಳ್ದೊಡನೊಡನೆ ನೃಪನ ಜಡಿಪದೆ
ನಡುಗುವಳಸಿಕಾಂತೆ ಕೂರ್ಪಿದೇಂ ಕೈವಸಮೋ   ೧೬

ಚಂ || ಹರಿ ಮದಸಿಂಧುರಂಗಳ ಜಯಕ್ಕೆ ನೆರಂ ಮೃಗಯೂಥಮೆಂದವಂ
ಪೊರೆವುದೆ ಚಂದ್ರನಂಧತಮಮಂ ಕಿಡಿಸಲ್ ನೆರಮೆಂದು ತಾರಕೋ
ತ್ಕರಮನದೆಂದುಮುಜ್ಜಳಿಪನೇ ರಿಪುಸಂತತಿಯುಂ ಗೆಲಲ್ ನೃಪಂ
ಪೊರೆವನೆ ಚಾತುರಂಗಬಲಮಂ ಪುಸಿ ಪೆರ್ಮೆಗೆ ಕಾಣ ನಿಶ್ಚಯಂ      ೧೭

ಮ || ಕದನಕ್ಷೇತ್ರದೊಳಾಂತ ಶತ್ರು ಪಿಡಿಪಟ್ಟಂ ಕೂಡೆ ಕಣ್ಗೆಟ್ಟ ನೋ
ಡಿದನೞ್ಕಾಡಿದನೆಂಬ ಮಾತವನ ವಂಶಕ್ಕೆಯ್ದುಗುಂ ತಳ್ತು ಕಾ
ದಿದನಾದಂ ಸರಿವೋದನೆಂಬ ನುಡಿ ತಾನಿಲ್ಲೆಂದೊಡೆಲ್ಲಿತ್ತೊ ಗೆ
ಲ್ಲದ ಮಾತಿಂತುಟು ಪದ್ಮರಾಜನರಿದುಷ್ಟ್ರಾಪಪ್ರತಾಪೋದಯಂ ೧೮

ಉ || ಆತನ ದಿಗ್ಗಯೋದ್ಯಮಮನಾಂ ಮಿಗೆ ಪೇೞದೊಡೇನೊ ಶತ್ರುಸಂ
ಘಾತಮಿದಿರ್ಚಿ ದೀಪ್ತಿಗಿದಿರಾದ ಪತಂಗದ ಮಾಳ್ಕೆಯಾದುದುಂ
ಭೀತನೃಪಾಲರಿತ್ತೆರೆದುದುಂ ಮಿಗೆ ಬಾೞ್ವುದು ಮುಂತೆ ಕೈತವೋ
ಪೇತರಡುರ್ತು ಬೆರ್ಚಿ ಬೆಸಕೆಯ್ದು ಬೞಲ್ದುದುಮೆಯ್ದೆ ಪೇೞವೇ  ೧೯

ಕಿನ್ನರಗಾಣರಾ ನೃಪನ ಗೀತಮನೊಪ್ಪಿರೆ ಪಾಡುವಾಗಳುಂ
ತನ್ನ ಸುಖಾಶ್ರುವಿಂದೆಸೆಯೆ ನೇತ್ರಸಹಸ್ರವಱಲ್ದು ಕೇಳುತಾಂ
ಪನ್ನಗರಾಜನಾಗೆ ಸಫಳಂವಗಳ ಜನ್ಮಮೆನುತ್ತೆ ವಾಸವಂ
ಮನ್ನಿಸಿ ಮಾತನಾಡಿ ಪರಿತೋಷಿಸುವಂ ದಿವಿಜಪ್ರಧಾನರಂ           ೨೦

ಉ        ಸಮದಾರಾತಿಗಳಂ ಪಡಲ್ವಡಿಸಿ ಭೀತವ್ರಾತಮಂ ಕಾಯ್ದು ಕಾ
ರ್ಯಮನಾಳೋಚಿಸಿ ಮಾಡಿ ಮಾಡಿದನಿತುಂ ಧರ್ಮಾರ್ಥಕಾಮಂಗಳಂ
ಕ್ರಮದಿಂ ಪೆರ್ಚಿಸಿ ಪೆತ್ತು ನಿತ್ಯಸುಖಮಂ ಸತ್ಕೀರ್ತಿಯಂ ತಾಳ್ದು ರಾ
ಜ್ಯಮನಾರಾಳ್ದರೊ ಪದ್ಮರಾಜನವೊಲುರ್ವೀಭಾಗದೊಳ್ ಭೂಭುಜರ್     ೨೧

ವ || ಮತ್ತಮಾ ನರೇಂದ್ರನನೂನದಾನವಿಧಾನನಾಗಿಯುಮುದಿತಮದೋದ್ರೇಕನಲ್ಲದ ರಾಜದಿಕ್ಕುಂಜರನುಂ ಅಹೀನವೃತ್ತಿಪ್ರವರ್ತಕನಾಗಿಯುಂ ವಿನತಾನಂದವಿದ್ವೇಷಿಯಲ್ಲದ ಭೋಗೀಶ್ವರನುಂ ಜಗತ್ಪ್ರೀತಿಕರಪರಿಗೃಹೀತನಾಗಿಯುಂ ದೋಷಾನುವರ್ತನೆಗೊಳಗಾಗದ ಕಳಂಕರಾಜನುಂ ಅತುಳಪ್ರತಾಪತೇಜಃಸಮಾಜನಾಗಿಯುಂ ನಿಮಗ್ನಕುಲಗೋತ್ರನಲ್ಲದ ಮಹಿಜೀವನಾಧಾರ ಭೂತನುಂ ನಿರಂತರಲಕ್ಷ್ಮೀನಿವಾಸನಾಗಿಯುಂ ವಿರಥವೃತ್ತಿಯೊಳ್ ವರ್ತಿಸದ ಪುರುಷೋತ್ತಮನುಂ ಅಧಿಗತ ಸ್ವಾಮಿಸಂಪತ್ಪ್ರಮೋದಿತನಾಗಿಯುಂ ದುರ್ಗಾಶ್ರಯವಿಗ್ರಹನಲ್ಲದ ವಿಭೂತಿಭೂಷಿತನುಂ ಸರಸ ಸರಸ್ವತೀಸುಂದರಮುಖಾರವಿಂದನಾಗಿಯುಂ ತ್ರಿದಿವಪರಿಪ್ರಾಪ್ತ ಪರಮೈಶ್ವರ್ಯನಲ್ಲದ ವಿಬುಧಪತಿಯುಂ ಸಮವರ್ತಿಯಾಗಿಯುಂ ಕೃತಾಂತನಲ್ಲದ ಧರ್ಮರಾಜನುಂ ಅನೇಕರತ್ನಾಕರಾಧಿಪತಿಯಾಗಿಯುಂ ಜಡಾಶ್ರಯನಲ್ಲದ ಪ್ರಚೇತಸನುಂ ಶಿವಾನುಬಂಧಸಯುಕ್ತನಾಗಿಯುಂ ದಶಾನನಾಸ್ತಂಗತಪ್ರಾಭವನಲ್ಲದ ಪುಣ್ಯಜನೇಶ್ವರನುಮೆನಿಸಿ ದೇವತಾಸ್ವರೂಪನಾದನಾ ಮಹೀಕಾಂತಂಗೆ

ಕಂ || ಶ್ರೀಧರನೆನೆ ಸಕಳ ಧರಿ
ತ್ರೀಧರನೆನೆ ಸಂದದೊಂದು ಸೊಬಗಿಂ ವನಮಾ
ಲಾಧರನಾದನೆನಲ್ ಮಧು
ರಾಧರೆ ವನಮಾಲೆ ವಲ್ಲಭಾಗ್ರಣಿಯಾದಳ್     ೨೨

ಮ.ಸ || ಯುವತೀನಿರ್ಮಾಣನಂ ಕರ್ಮದ ವಿಧಿಕೃತಮೇಂ ಬಾೞ್ತೆ ಲೋಕತ್ರಯೀಜಿ
ಷ್ಣುವನೆನ್ನಂ ಭೂಪನಂದಂ ತೃಣವೆನೆ ಲಘುವಂ ಮಾಡಿತೆಂದೇವದಿಂ ಕಂ
ತುವೆ ತಾಂ ಪದ್ಮೋದ್ಭವತ್ವಂಬಡೆದುಲಿದು ತಪಸ್ತಪ್ತನಾಕಾಂತೆಯಂ ಸಾ
ರವಿಲಾಸಾಕ್ರಾಂತೆಯಂ ನಿರ್ಮಿಸಿ ಜಯಿಸಿದನಿಂ ಬಣ್ಣಿಸಲ್ ಬಲ್ಲನಾವಂ       ೨೩

ಕಂ || ಶೃಂಗಾರಾಬ್ಧಿಯೊಳೊಗೆತಂ
ದಂಗಜಜಯಲಕ್ಷ್ಮಿಯೆನೆ ಕಳಾನಿಧಿಸಹಿತಂ
ಸಂಗಳಿಸಿ ಚೆಲ್ವನಾಕೆ ಬೆ
ಡಂಗಿಂ ಪದ್ಮಾಂತರಂಗದೊಳ್ ರಂಜಿಸಿದಳ್      ೨೪

ಮ.ಸ್ರ || ರತಿಯಿಂ ಸೌಂದರ್ಯಸೌಭಾಗ್ಯಮನೊಸಗೆಯ ಪೌಲೋಮಿಯಿಂ ಭಾಗ್ಯಮಂ ಭಾ
ರತಿಯಿಂ ನಾನಾಕಳಾಕೌಶಲಮನತಿಶಯಂಬೆತ್ತಿರಲ್ ಮೈಮೆಯಂ ಪಾ
ರ್ವತಿಯಿಂದೀೞ್ಕೊಂಡು ಮೂಲೋಕದೊಳನುಪಮಮೀ ಕಾಂತೆಯೆಂದಂತಪೂರ್ವಾ
ಕೃತಿಯಿಂ ಕೆಯ್ಗೆಯ್ದು ಕಣ್ಣಿಟ್ಟವೊಲರರೆ ಮಹಾದೇವಿ ಕಣ್ಗೆಡ್ಡಮಾದಳ್  ೨೫

ಕಂ || ಅಡಿಗಿಕ್ಕಿ ಮೆಟ್ಟಿ ತಮ್ಮಿ
ಟ್ಟೆಡೆವಡೆದನುರಾಗಮೆಲ್ಲಮಂ ಕಾಂತೆಯ ಮೆ
ಲ್ಲಡಿಯಡಿಯೆನಿಸಿರ್ದನಿತಱೊ
ಳೆಡೆಗೊಂಡುದೆ ಗೆಲ್ಲವರುಣಪಲ್ಲವತತಿಯೊಳ್           ೨೬

ಮೃಗನೇತ್ರೆಯ ತೊಳಗುವ ಕಾ
ಲುಗುರಿಂ ಕಂಗೊಳಿಪ ಕೋಮಲಾಂಗುಳಿಗಳದೇಂ
ಬಗೆಯಂ ಬೆದಱೆಪುವೊ ಪುಣಂ
ಬುಗಳೆಂಬಂತಿಂಬುವೆತ್ತು ವಿಷಮಾಯುಧನಾ    ೨೭

ಒದವಿದ ಲಾವಣ್ಯರಸಂ
ಪುದಿದೆತ್ತಂ ತುಳ್ಕಿ ತೋರ್ಪ ಕುಪ್ಪಿಗೆಯಿವೆ ದಲ್
ಮದನನ ಮೋಹನಭಂಡಾ
ರದ ಬಾೞ್ಮೊದಲೆನಿಸಿ ಸತಿಯ ಪೊಱ ಅಡಿಯೆಸೆಗುಂ      ೨೮

ಪಡೆದುನೆ ನಮ್ಮುನ್ನತಿಯಂ
ಮಡದಿಯ ಪಾದಾಶ್ರಿತಂಗಳಾಗಿಯುಮಿಂತೀ
ಮಡಮುಂ ಬೆರಲ್ಗಳುಂ ಕಿ
ತ್ತಡಿಯುಮೆನುತ್ತುರ್ವಿದಂತೆ ಮೇಂಗಾಲೆಸೆಗುಂ  ೨೯

ಕಳನೂಪುರಕೀಲಿತಮಣಿ
ಗಳಿನೊಗೆದುದು ಮನ್ಮಯೂಖ ಲೇಖೆಗಳಿಂ ಕ
ಣ್ಗೊಳಿಪುದೊ ಬರ್ಚಿಸೆ ರತಿಯೋ
ಕುಳಿಯಯಾಡುವ ಕನಕಶೃಂಗಮಂ ಕಿಱುದೊಡೆಗಳ್        ೩೦

ಒಳಕೆಯ್ದುವು ಗಡ ರಂಭಾ
ವಿಳಸನಮಂ ಸತಿಯ ಬಟ್ಟನುಣ್ದೊಡೆಗಳದಿ
ನ್ನೆಳಕೊಳಿಸುವುದರಿದೇ ಕ
ಣ್ಣೊಳೆ ನಿಟ್ಟಿಪ ಸತಿಯ ದಿಟ್ಟಿಗೆಮೆಯಿಕ್ಕದುದಂ          ೩೧

ಇನಿಯನ ಮನಮಂ ಪೊಱನಾ
ಱನೆಂದುಮೆಯ್ದಿಸದ ಸತಿಯ ಪೊಱವಾಱಂ ಕಾ
ಮನ ಕೇಳೀನಗಮೆಂದೆಂ
ಬನ ನುಡಿಯೇನುಚಿತಮಾಯ್ತೊ ಮಣಿಮೇಖಲೆಯಿಂ       ೩೨

ಇಲ್ಲದೊಡಗ್ರವಿಭಾಗ
ಕ್ಕೆಲ್ಲಿಯದಾಧಾರವದಱೆನುಂಟಾದೊಡೆ ತೋ
ಱೆಲ್ಲಿರ್ದುದೆನಿಪ್ಪೂಹೆಯ
ಸೊಲ್ಲಿಂಗೆಡೆಯಾದುದಸಿಯ ನಡು ಕಾಮಿನಿಯಾ           ೩೩

ಬಳವಳಿಯಿಂದಿವು ಸೊಬಗಿನ
ಬಳವಳಿಯೆಂದೆನಿಸಿ ಮಿಸುಪ ಲಾವಣ್ಯರಸೋ
ತ್ಕಳಿಕೆಗಳ ತಪ್ಪದೆನಲು
ತ್ಕಳಿಕೆಯನಿನಿಯಂಗೆ ಮಾೞ್ಪುವಾಕೆಯ ವಳಿಗಳ್           ೩೪

ಇನಿಯನ ಮನೋಮದೇಭವ
ನೆನಸುಂ ಕೆಡಪಲ್ಕೆವೇಡಿ ಕಾಮಕಿರಾತಂ
ಮುನಿಸಿಂ ಮಾಡಿದ ಕುೞೆಯೆಂ
ದೆನೆ ವನಿತೆಯ ನಿಮ್ನನಾಭಿಯೇನೊಪ್ಪಿದುದೋ            ೩೫

ಮದನದ ಕಟ್ಟಿದ ಕಿಱುಗೇ
ಣಿದು ಸಂದೆಯಮಾವುದೆನಿಸಿ ನುಣ್ಗರ್ಪಿಂದು
ಣ್ಮಿದ ಬಾಸೆಯ ದೇಸಿಗೆವ
ರ್ಪುದೆ ಮಿಕ್ಕುಪಮಾನವರ್ಗಮಾ ಕಾಮಿನಿಯಾ  ೩೬

ಒತ್ತಿದುವಿರ್ಕೆಲದ ಮದು
ದ್ವೃತ್ತತೆಯಿಂದೆಯ್ದಿ ತಮ್ಮೊಳಿದಿರೆೞ್ದು ಮೊಗ
ಕ್ಕೆತ್ತಂ ಪಾಯ್ದಪುವೀಯು
ದ್ವೃತ್ತಕೆ ಕಠಿಣತೆ ಕುಚಕ್ಕೆ ಸಹಜಂ ಸತಿಯಾ      ೩೭

ಮನಸಿಜ ಸಿದ್ಧನ ವಿವಿಧಾ
ರ್ಚನೆಗೆಯ್ದಿರಿಸಿಟ್ಟ ಯಂತ್ರಮೆನೆ ಮಾೞ್ಪುದು ಕಂ
ಪಿನ ಸೊಂಪಿನ ಪೊಗರಿಂದಂ
ವನಿತೆಯ ಕಕ್ಷಪುಟಮೀಕ್ಷಣಾಕರ್ಷಣಮಂ          ೩೮

ಇದೆ ಪೋ ಕಂದರ್ಪನ ಬಾ
ೞ್ಮೊದಲೆಂದು ವಿದಗ್ಧರಾಡೆ ತೋಳ್ಮೊದಲಂತ
ಪ್ಪುದು ಬಾಳೆಂದರ್ ಚದುರರ್
ಸುದತಿಯ ತೋಳ್ಗಳನದಾವ ಬಾೞೆಂದೆಂಬೆಂ   ೩೯

ಬಾಡುವ ಕೆಂದಳಿರಂ ನೀ
ರೋಡುವ ತಾವರೆಯನೇಕೆ ಪಡಿಯಿಡುವರವೇಂ
ತೋಡಪ್ಪುವೆ ಕರತಳದೊಳ
[ಗೂಡಿ]ದ ಸೌಭಾಗ್ಯರೇಖೆಯೊಂದಱೊಳವಳಾ  ೪೦

ಸುದತಿಯ ಬೆರಲಿಂ ಮೂವಡಿ
ಸಿದುವು ಸರಲ್ ಗೆಲ್ದನಾಗಾಳೊಂದೊಂದಱೆನಿಂ
ಪದಿನಾಲ್ಕುಜಗವನಂಗಜ
ನದೊಂದೆ ಕಿಱುಗುಣಿಕೆಯಿಂದೆ ಗೆಲ್ಲನೆ ಪತಿಯಂ ೪೧

ಲಳನೆಯ ಕರಜಂಗಳ್ ಕೆಂ
ಬೆಳಗಂ ದೆಸೆದೆಸೆಗೆ ಪಸರಿಸುತ್ತೊಪ್ಪಿದುವು
ಜ್ವಳಿಸುವ ತೇಜದ ಕೀರ್ತಿಯ
ಬೆಳಸಿನ ಬಿತ್ತುಗಳ ತೆಱದೆ ಕುಸುಮಾಯುಧನಾ  ೪೨

ಸುರ ನರ ಪನ್ನಗ ವನಿತೋ
ತ್ಕರ ಸೌಭಾಗ್ಯಮನೆ ಗೆಲ್ದ ಮೂರೇಖೆಯ ಸುಂ
ದರಿಯೊಪ್ಪುವ ಕೊರಲೇಂ ಬಿ
ತ್ತರಿಸಿದುದೋ ಹಾರಲತೆಯ ಕಂದದ ಚೆಲ್ವಂ   ೪೩

ಯುವತಿಯ ನಗೆಮೊಗಮಂ ಮಿಸು
ಗುವ ಭಾವಿಸೆ ದರ್ಪಣೇಂದುಜಳಜಂಗಳ್ ಸೋ
ಲವನಾಂತುವು ಗಡ ಮುನ್ನವ
ಱವಯವಮೊಂದೊಂದಱೊಡನೆ ತಮ್ಮೊಂದೊಂದುಂ     ೪೪

ರದನಂಗಳೋಳಿಯಿಂ ತೀ
ವಿದ ಪಳಿಕಂ ಪೋಲೆ ಸತಿಯ ಬಾಯ್ದೆಱೆ ಪೋಲ್ಗುಂ
ಮದನಂ ತನ್ನೞ್ತೆಗೆ ಮಾ
ಡಿದ ಮಾಣಿಕವೆಸದ ಕಪ್ಪುರದ ಕರಡಿಗೆಯಂ      ೪೫

ವದನಂ ಗೆಲವಿಂ ವಿಧುಬಿಂ
ಬದ ಕಳೆಗಳನೊಳಗೆ ಪಾಯ್ಸಿಕೊಂಡುದೆನಲ್ ಕುಂ
ದದ ಕಾಂತಿಯಿನಾ ಕಾಂತೆಯ
ರದನಾವಳಿಯೇಂ ಕರಂ ತಳತ್ತಳಿಸಿದುದೋ       ೪೬

ಮನಸಿಜನರ್ಚಿಸಿ ಸಮ್ಮೋ
ಹನದ ಮರ್ದಂ ಮಣಿಯ ಭರಣಿಯೊಳ್ ತೀವಿಯೆ ನ
ಚ್ಚಿನ ನಿಧಿಯ ಮೊಗದೊಳಿರಿಸಿದ
ನೆನಲ್ಕೆ ಮಧುರಾಧರಂ ಮನೋಹರಮವಳಾ    ೪೭

ಲಾವಣ್ಯಾಮೃತರಸದೊಳ್
ತೀವಿದ ಪೊಸಪೊನ್ನ ಮಿಸುಪ ಶುಕ್ತಿಕೆಗಳೆನಲ್
ದೇವಿಯ ತಾಂಬೂಲಚ್ಛಾ
ಯಾವಿಷ್ಕೃತಮಾದ ತೆಳ್ಗದಂಪುಗಳೆಸೆಗುಂ       ೪೮

ಅನುಪಮಸುಗಂಧಿ ವನಜಾ
ನನಮಂ ಪರಿಮುತ್ತುಗೊಳ್ವ ತುಂಬಿಯ ರಕ್ಷಾ
ವಿನಿಯೋಗಕ್ಕಿಕ್ಕಿದ ಕಾಂ
ಚನಚಂಪಕಮಲ್ತೆ ಸತಿಯ ನಾಸಾಮುಕುಳಂ       ೪೯

ಎಡಬಲನಲ್ಲದೆ ಭೇದಂ
ಬೆಡಂಗಿನಿಂ ಕೂರ್ಪಿನಿಂ ಬೆಳರ್ಪಿಂದಿಲ್ಲಾ
ಗಡುಮಾಕೆಯ ಕಣ್ಣೇಕೆಯೊ
ಗಡ ಕಿವಿವರ್ಚಿರ್ಪುವೆತ್ತರೊಂದೊಂದಿತ್ತಂ          ೫೦

ಪೆಱಮೆಟ್ಟಿ ತುಱುಗಿ ಮಿಗೆ ತ
ಳ್ತಿಱೆದಪ್ಪುವೊಡನೊಡನೆ ತಮ್ಮೊಳೀಕಾಂತೆಯ ನು
ಣ್ದುಱುಗೆವೆಗ[ಣ್ಣ]ಳ್ಕೀಗಿನ
ಕೊಱತೆಗೆ ದಲ್ಪಾಱುಗಣ್ಣಬೞೆಗದು ಸಹಜಂ   ೫೧

ಮೋಹನಲಕ್ಷಣರೇಖೆಗ
ಳೀ ಹರಿಣಾಕ್ಷಿಯ ಮುಖಾಮೃತಾಂಶುಗಿವೆಂದೇ
ನಾಹಾರವದಿಂ ಮನ್ಮಥ
ನೂಹಿಸಿ ನಲಿವನೊ ಸವಿಭ್ರಮಭ್ರೂಯುಗಮಂ  ೫೨

ಪರಿಪೂರ್ಣೇಂದುವ ಗೆಲವಿಂ
ದರಸ್ಮಿತಸ್ಮೇರವಕ್ತ್ರಶಶಿಯೊಳ್ ಮತ್ತೊಂ
ದರರೆ ಕಲೆಯೆನಿಸಿತೆನೆ ಸುಂ
ದರಮಾಯ್ತನ್ವರ್ಥಮಾಗಿ ಪೆಱೆನೊಸಲವಳಾ   ೫೩

ಅವತಂಸಲಕ್ಷ್ಮಿಗಿಂತಿದೆ
ಸವತಿಯೆನಲ್ ಮೇಲೆ ವಂದಪಾಂಗಶ್ರೀಯು
ತ್ಸವಲೀಲಾಗ್ರಹಮೆಂಬೆಂ
ಕಿವಿಯಂ ಪೆಱತೇನನೆಂಬೆನಾ ಕೋಮಳೆಯಾ       ೫೪

ಎಂತೋ ಕಾಂತೆಯ ವರಸೀ
ಮಂತಂ ಕೆಳೆಗೊಂಡಿದಿರ್ಕೆಲದ ಕುಟಿಲಾಂತಃ
ಕುಂತಳಮಂ ಸ್ನಿಗ್ಧಮೃದು
ತ್ವಂ ತೋಱಲ್ ಪೊಱಗೆ ರುಜುಗಳೇನಂ ಬಲ್ಲರ್          ೫೫

ತಲೆವೊತ್ತೆ ತಾರಕಾವಳಿ
ತಲೆಗರೆದಿವೆ ರಾಹು ವದನಶಶಿಬಿಂಬದ ಪಿಂ
ದಲೆಯೊಳಗೆ ತೋರಮುತ್ತಿನ
ತಲೆದುಡುಗೆಯಿನೆಸೆದುದಲರ ಸೋರ್ಮುಡಿ ಸತಿಯಾ      ೫೬

ಮದನನ ದಿಗ್ವಿಜಯದೊಳಿಂ
ತಿದೆ ಬೆನ್ನಾಗಿರ್ದುದೆಂಬ ಚೆನ್ನಿಂದೆಸೆಗುಂ
ಸುದತಿಯ ಸೊಬಗಿನ ರ್ಸ
ಸ್ವದ ಭಾಗಂಗೊಂಡಪೂರ್ವ ಭಾಗಾಭೋಗಂ    ೫೭

ಮ || ಮೃಗಭೂಕುಂಕುಮಚಂದನಾಗರುವಿಲೇಪಕ್ಕಂಗಸೌರಭ್ಯವೊಂ
ದುಗೆಯಂ ಮಾೞ್ಪುದಪೂರ್ವಗಂಧಮನುದಂಚದ್ರತ್ನ ನಾನಾವಿಭೂ
ಷೆಗಳಂ ದೇಹದ ಕಾಂತಿ ರಂಜಿಪುದಪೂರ್ವಚ್ಛಾಯೆಯಿಂ ಮಾಲ್ಯಲ
ಕ್ಷ್ಮಿಗೆ ಕೆಯ್ಗೆಯ್ದುದು ಕೇಶಸಂಚಯಮಪೂರ್ವಸ್ಮೇರಮಾ ಕಾಂತೆಯಾ         ೫೮

ಕಂ || ವನಮಾಲೆ ವನಕ್ರೀಡೆಗೆ
ವನಮಾಲೆಯೆ ಪದ್ಮನೊಳ್ ಜಲಕ್ರೀಡೆಗೆ ತ
ದ್ವನಮಾಲೆ ರತಿಕ್ರೀಡೆಗೆ
ಮನೋಜ್ಞಮನುಕೂಲಮುಚಿತಮೆನೆ ರಂಜಿಸಿದಳ್           ೫೯

ವ || ಮತ್ತಮಾ ಮದನಮೋಹನವಿದ್ಯಾಲಕ್ಷ್ಮಿಯಾ ಚತುಷಷ್ಟಿವಿದ್ಯಾಚಾತುರ್ಯ ಚತುರಾನನ ಸಹಜಪ್ರಸನ್ನಸುಂದರದರವಿಕಸಿತಾನನಸರಸಿರುಹದೊಳ್ ನಲಿದು ನೆಲಸಿ ನೆಲೆಗೊಂಡ ಹಿತಮಿತಾನ್ವಿತೋದಾರ ಗಂಭೀರತಾಸಾರ ಸಾರಸ್ವತಲಕ್ಷ್ಮಿಯಂ ತನ್ನ ನಿರತಿಶಯ ರೂಪ ಯೌವನ ವಿಳಾಸ ವಿಭ್ರಮ ಸೌಭಾಗ್ಯ ಭಾಗ್ಯಾದಿ ನಿಖಿಳಗುಣಗಣ ವರ್ಣನವ್ಯಾಪಾರದೊಳ್ ನಿತ್ಯನಿಯಮದಿಂ ನಿರವಿಸಿ ಸುಸ್ಥಮಿರಿಸಿಯುಂ ಆ ಕಾಮಸಾಮ್ರಾಜ್ಯಲೀಲಾಲಕ್ಷ್ಮಿಯಾ ಪರಮಪುರುಷೋತ್ತಮಾವತಾರನ ವಿಶಾಲೋರಸ್ಥಳಪದ್ಮಪೀಠದೊಳವಿಚಳಸ್ಥಿತಿಲೀಲೆಯಂ ತಳೆದ ಸಕಳ ಸುರಾಸುರಲೋಕ ವಿಸ್ಮಯಾವಹಾನೇಕ ವಿಪಕ್ಷ ಕ್ಷತ್ರಿಯಾವಹ ಪಾರಾವಾರ ಮಹಾಮಥನಪರಿಲಬ್ಧ ಮಹನೀಯ ಮಹಾಲಕ್ಷ್ಮಿಯಂ ಸ್ವಕೀಯನಿತ್ಯನೈಮಿತ್ತಿಕ ದಾನ ಪೂಜಾ ತ್ಯಾಗ ಭೋಗೋಚಿತ ಪರಿಮಿತದ್ರವ್ಯದತ್ತಿ ಯೊಳೊಡಂಬಡಿಸಿ ಸಂಭಾವಿಸಿಯುಂ ಆ ಸಂಕಲ್ಪಜನ್ಮನ ಮನೋರಥ ಜನ್ಮಭೂಮಿಯಾ ಮಹೇಶ್ವರಮಹಾವರಾಹೋತ್ಖಾತ ತೀಕ್ಷ್ಣ ಕೌಕ್ಷೇಯಕಂದಷ್ಟ್ರಾ ಸಮುದ್ಧರಣಪ್ರೀತಿಯಿಂ ಪ್ರಚಂಡದೋರ್ದಂಡ ಪರಿರಂಭಸಂಭವ ಸುಖಾನುಭವಲಂಪಟೆ ಯಾದಕ್ಷೂಣಕ್ಷೋಣಿಯಂ ತನ್ನಾಣತಿಯೊಳ್ ತೊಡರ್ಚಿ ವಿನಯಮನೊಡರ್ಚಿಯುಂ ಆ ಮನೋ[ಜ]ರಾಜ ವಿಜಯಲಕ್ಷ್ಮಿಯಾ ವಿಕ್ರಾಂತಕಂಠೀರವನ ಮೆಯ್ಯೊಳ್ ಸಕಲ ದಿಗ್ವಿಜಯ ಯಾತ್ರಾಸಮಯ ಸಮುಜೃಂಭಿತ ಸಂಕ್ಷುಬ್ಧಸೈನ್ಯ ಕೋಳಾಹಳಾಭೀಳ ಭೇರೀಭಾಂಕಾರ ಕ್ಷ್ವೇಡಾಕ್ರೀಡಾತಿಚಕಿತನಿಶ್ಚಳ ಕರ್ಣತಾಳದಿಕ್ಕುಂಡಳಾ ಮಂಡಳೆಯೆನಿಸಿ ಮೆಯ್ವತ್ತಿದ ವೀರಲಕ್ಷ್ಮಿಯನಸಿಧಾರಾ ಚರಣಪರಿಣತೆಯೊಳ್ ಪತ್ತಿಸಿ ಮುದಂಬೆತ್ತುಂ ಆ ಮದನಮಂಗಳ ಯಶೋಲಕ್ಷ್ಮಿಯಾ ರಾಜೇಂದ್ರಚಂದ್ರನ ವಂದಿ ಚಕೋರವೃಂದಾರ ಮಂದಾನಂದಕರಣ ವಿತರಣಕರಣಪ್ರಭೂತೆಯೆನಿಖಿಳ ದಿಗ್ದಂತಿದಂತದಂಡಾಂದೋಳ ಡೋಳಾವಿನೋದ ವಿಶ್ರಾಂತ ವಿಹಾರಕೇಳಿಯೊಳ್ ಮನಂಗೊಡ ವಿಶದ ಯಶಶ್ಚಂದ್ರಿಕಾಲಕ್ಷ್ಮಿಯಾ ನಿಜಮನೋರಾಗಸುಧಾಸಾಗರಮಂ ನೆಱೆ ಪೆರ್ಚಿಸುವಂತು ನಿರಂತರಂ ಸಂತಮಿರಿಸೆಯುಂ ಇಂತು ನಿಸ್ಸಪತ್ನೀವೃತ್ತಿಯೊಳ್ ನೆಗೞ್ತೆವೆತ್ತುಂ ಸಪತ್ನೀಜನಾನುಕೂಲ್ಯದಿಂ ಬೇಱೊಂದು ಪೊಗೞ್ತೆವೆತ್ತಳಂತು ಮಲ್ಲದೆಯುಂ

ಚಂ || ಜಿತರತಿಕಾಮಿನೀಲಲಿತಲೀಲೆ ಮನೋಭವಮೋಹನಾಕ್ಷರಾಂ
ಚಿತನುಬಾಲೆ ವಿಶ್ರುತಕಳಾನವನರ್ತನಶಾಲೆ ಸಂತತಂ
ಪತಿಚರಿತಾನುಕೂಲೆ ಘನರಾಗರಸಾರ್ಣವವೇಲೆ ಲೋಕಸಂ
ಸ್ತುತಿಯುತಪುಣ್ಯಶೀಲೆ ಗುಣಮಾಲೆಯೆನಲ್ ವನಮಾಲೆ ರಂಜಿಪಳ್           ೬೦

ಉ || ಆ ಸತಿಯೊಳ್ ಮಹೀರಮಣನುತ್ಕಟರಾಗದೆ ಭೋಗಗಂಧಸಂ
ವಾಸಿತನಾಗಿ ಧರ್ಮದೊಳಮರ್ಥದೊಳಂ ಬಗೆಯಂ ಕೞಲ್ವದು
ದ್ಭಾಸಿಸಿದಂ ಗಡಂತವನವರ್ಕೆ ಫಲಂ ಸುಖಮೆಂದು ಬಲ್ಲವಂ
ಬೇಸಱನಾಳ್ವನೇ ಬೆಳೆವ ಬಿತ್ತಿನ ಸಂಕ್ರಮದೊಳ್ ಫಲೋತ್ಸುಕಂ    ೬೧

ಕಂ || ಪಲಬರವರೋಧಕಾಂತೆಯ
ರೊಲವಿಂ ಪತ್ತಿರೆಯುಮಾಕೆಯೊಳ್ ನೃಪನನಿಶಂ
ನಲಿದೊಂದಿರ್ಪಂ ತಾರಾ
ವಲಿ ತಳ್ತಿರಲಿಂದು ಚಂದ್ರಿಕೆಯೊಳೊಂದುವೋಲ್           ೬೨

ಚಂ || ಚತುರುಪಧಾವಿಶುದ್ಧನನವದ್ಯಚರಿತ್ರನನೂನವಂಶನ
ನ್ವಿತಮಹಿಮಾವಭಾಸಿ ಸಕಳಕ್ಷಿತಿಭಾರಧರೀಣನನ್ವಯಾ
ಗತನೆನೆ ಸಂದ ವೈಶ್ರವಣಮಂತ್ರಿವರೇಣ್ಯನ ಮೇಲೆ ರಾಜ್ಯಸಂ
ಸ್ಥಿತಿಗೆಡೆಮಾಡಿ ತದ್ವನಿತೆಯೊಳ್ ನಲಿವಂ ನೃಪನೇಂ ವಿವೇಕಿಯೋ  ೬೩

ವ || ಇಂತಿಷ್ಟವಿಷಯೋಪಭೋಗಂಗಳಿಂದನೇಕ ಸಂವತ್ಸರಂಗಳೇಕೈಕ ಕ್ಷಣಂಗಳಂತೆ ವಿದಿತ ಸ್ವರೂಪಂಗಳಾಗಿ ಸಲುತುಮಿರ್ಪಿನಮೊಂದುದೆವಸಂ

ಚಂ || ತುಱುಗಿ ತುರಂಗಮಂ ಪೊಳೆದು ಮೆಟ್ಟುವ ದೆಸೆಯನಾಡಿ ತೋರ್ಪವೋಲ್
ತುಱುಗಿ ಕಪೋಲರಂಗತಟದೊಳ್ ಕುಣಿಯಲ್ ಮಣಿಕುಂಡಳದ್ವಯಂ
ತುಱುಗಿ ಕರಂಗಳಂ ಕೆದಱೆ ವಕ್ಷದೊಳುಜ್ವಳತಾರಹಾರಮೇಂ
ಮೆಱೆದನೋ ಭೂಪನುತ್ಸವದಿನೆೞ್ತರುತುಂ ಮನೆಗಾಗಿ ದೇವಿಯಾ ೬೪

ವ || ಅಂತಂತಃಪುರಮಂ ಪೊಕ್ಕಾ ಕಾಂತೆಯಂತಿಕಕ್ಕಾ ಮಹೀಕಾಂತನೆಯ್ದೆವಂದಾಗಳ್

ಕಂ || ಎಂದಿನ ತೆಱನಲ್ಲದಿದೇ
ನಿಂದೀ ವಲ್ಲಭೆಯ ವದನವನಜಂ ಕೊರಗಿ
ತ್ತೆಂದದನೆ ಪೆರ್ಚುಗೊಳ್ಪೊಂ
ದಂದದಿನೇನರಸನಾಸನಂ ಕೊರಗಿದುದೋ        ೬೫

ಚಿಂತಾಪರವಶತೆಯಿನಿನಿ
ಸಂ ತಡೆದಿದಿರೇೞದಾತ್ಮಪರ್ಯಂಕದೊಳಾ
ಕಾಂತಂ ಕುಳ್ಳಿರೆ ಕಂಡು ಕ
ರಂ ತಳವೆಳಗಾಗಿ ಸಖಿಯನೇಂ ನೋಡಿದಳೋ    ೬೬

ವ || ಆಗಳಾ ವಿಳೋಕನಾಮಳಜಳಕ್ಷಾಳಿತಾತ್ಮಹೃದಯಸರಃಶಂಕಾಪಂಕನಾಗಿ ಭೂಕಾಂತಂ ಮೆಲ್ಲನಿಂತೆಂದಂ

ಕಂ || ಪೊಗಸಿನ ಚಂದ್ರನ ತೆಱದಿಂ
ನಗೆಮೊಗಮೇಕಾಂತುದುಬ್ಬರಂ ಬಿರಿವಿನ ಮೇ
ಕುಗುತಿರ್ದುವು ತುಱುಗೆಮೆ ದುಂ
ಬಿಗಳುಳ್ಳಲರ್ದಕ್ಷಿಕುಮುದ ಮಧುಬಿಂದುಗಳಂ  ೬೭

ಕದಪನದೇಕೆಯೊ ಪತ್ತಿ
ರ್ದುದು ಕೆಂದಳದೊಂದು ಪಜ್ಜೆ ತದ್ವರ್ಣಮನಾಂ
ತುದು ತಮದ ಮಱೆಯ ಮುತ್ತಿಗೆ
ಯೊದವೆನೆ ಮುಖಶಶಿಗಿದೇಕೆ ಕುರುಳಿೞಿದಪುದೋ         ೬೮

ಚಂ || ಒಸರದಿದೇಕೆ ನಿನ್ನ ವದನೇಂದು ವಚೋಮೃತಮಂ ಸುಕೇಸರ
ಪ್ರಸವಮನೇಕೆ ಚುಂಬಿಸವು ತುಂಬಿಗುರುಳ್ ತನುವಲ್ಲಿ ಪಲ್ಲವ
ಪ್ರಸರಮನೇಕೆ ಸಂಗಳಿಸದುನ್ಮಣಿಭೂಷಣದಿಂದಮೇಕೆ ಸಂ
ತಸಮನೊಡರ್ಚೆಯೆನ್ನ ಮನದಂಚೆಗೆ ಪೇೞ್ ದರಹಾಸದುಗ್ಧದಿಂ  ೬೯

ಕಂ || ಅಂತಸ್ತಾಪಂ ತನುಲತೆ
ಯಂ ತವೆ ಕೊರಗಿಸಿದುದೆಯ್ದೆ ನೀಂ ಬಿಸುಸುಯ್ಯಿಂ
ದಿಂತೇಕೆ ತಿಱೆದ ತಳಿರೆಂ
ಬಂತಿರೆ ಕೊರಗಿಸುವೆಯಧರ ನವಪಲ್ಲವಮಂ   ೭೦