ಕಂ || ಶ್ರೀವಿದ್ಯಾಧರಪತಿಯ ಕ
ಥಾವಿತತಕ್ಷೀರಮಂ ನಿಜಶ್ರುತಿಮುಖದಿಂ
ಸೇವಿಸಿದಂ ಲುಪ್ತಿರಿಪು
ಶ್ರೀವನಜಂ ಪ್ರಭುಗುಣಾಬ್ಜಿನೀಕಳಹಂಸಂ        ೧

ವ || ಅದೆಂತೆಂದೊಡೆ

ಮ || ಇದನೇವೇೞ್ವೆನೊ ದೇವ ಭಾವಿಸೆ ಕರಂ ಲಜ್ಜಾವಹಂ ಹೇಮಕೂ
ಟದ ವಿದ್ಯಾಧರರಾಜನಂ ಪೆಸರೊಳಂ ಚಿತ್ರಾಂಗನೆಂಬೆಂ ಮನೋ
ಮುದದಿಂ ಮಂದರಕಂದರಕ್ಕೆ ಪುರದಿಂ ಬಂದಾನುಮೆನ್ನೋಪಳುಮ
ಪದುಳಂ ಕ್ರೀಡಿಸುತಿರ್ದೆವಂದು ವಿಲಸತ್ಕಲ್ಪದ್ರುಮೋದ್ಯಾನದೊಳ್            ೨

ವ || ಅಂತು ಯೌವನೋಚಿತಕ್ರೀಡಾವಿನೋದದಿಂದಮಿರ್ದು ಪರಿಶ್ರಾಂತನಂ ಬಾಳುಂಬೇಳು ಮಾಡಿ

ಮ.ಸ್ರ || ತೆಱಪಂ ಪಾರುತ್ತುಮಿರ್ದೆನ್ನಯ ರಿಪುವನುಪಾಯಜ್ಞನಂ ಸ್ತ್ರೈಣದಿಂ ಮು
ನ್ನುಱೆ ಬನ್ನಂಬೆತ್ತನಂ ಪುಷ್ಕಲಪುರದ ಹಯಗ್ರೀವನಂ ಕರ್ಮದಿಂದಂ
ಮಱೆದಾಂ ಮೆಯ್ವಿಟ್ಟು ನಿದ್ರಾಸುಕದಿನೞಲೆ ಬಂದೆನ್ನನೀ ವಿದ್ಯೆಯಿಂದ
ಳ್ಕುಱೆ ಕಟ್ಟಿಟ್ಟಿಲ್ಲಿಗೀಡಾಡಿಸಿ ಖಳನವನೆನ್ನೋಪಳಂ ಕೊಂಡುಪೋದಂ      ೩

ಕಂ || ಕುತ್ತದ ಬಿತ್ತು ವಿಮೋಹದ
ಪುತ್ತು ವಿವೇಕದ ವಿನಾಶವೆನಿಸುವ ನಿದ್ರಾ
ವೃತ್ತಿಯಿನೀ ಪರಿಭವಮಾ
ದತ್ತಲ್ಲದೊಡವನ ದೊರೆಯರೆನಗಣ್ಮುವರೇ   ೪

ವ || ಆದೊಡಂ

ಕಂ || ಅವನೆನಗಪಕಾರಂಗೆ
ಯ್ದವನಲ್ತುಪಕಾರಿಯಾದನೆಂತೆನೆ ಗುಣಗೌ
ರವನಿಧಿಯ ನಿನ್ನ ದರ್ಶನ
ಮವನಯೆ ಕಾರಣದಿನೆನಗೆ ದೊರೆಕೊಂಡುದಱಿಂ            ೫

ವ || ಅಂತು ನಿಜಪ್ರಪಂಚಮಂ ಪೇೞೆ ಶೌರ್ಯಸನ್ನಾಹನಾದಂ ಹಯಗ್ರೀವನ ದುರಾತ್ಮವೃತ್ತಿಗೆ ಕುಪಿತಹೃದಯನಾಗಿ ತನಗೆ ಚಕ್ರವಾಲಪುರದ ವಿದ್ಯಾಧರಾಧಿಪತಿಯಪ್ಪ ಬಳಾಹಕಂ ಪರಮಪ್ರೀತನಪ್ಪುದಱೆಂ ಚಿತ್ರಾಂಗಂಗಿಂತೆಂದಂ

ಕಂ || ನಿನಗೊರ್ವಖಚರಪತಿಯಂ
ಮೊನೆಗೆ ನೆರಂಬೇೞ್ವೆನೆಯ್ದಿ ತತ್ಖಳನಂ ನೀಂ
ಮುನಿಸಾಱೆ ಕೊಂದು ವಿಜಯಾಂ
ಗನೆಯಂ ನಿಜವಧುಗೆ ಸವತಿಯಾಗಿಸು ರಣದೊಳ್          ೬

ಉ || ದೇವ ನಿಜಪ್ರಸಾದಮೆ ನೆರಂ ನೆರಮೆಂಬುದನೊಲ್ಲೆನಿಲ್ಲಿಗಾ
ನಾವುದುಮಂ ಮದುದ್ಧತಬಳಂ ಬೆರಸೀಗಳೆ ಪೋಗಿ ಬೇಗಮಾರ್
ಕಾವೊಡೆ ಮಿಕ್ಕಿ ಪುಷ್ಕರಪುರಾಧಿಪನಂ ಮಗುೞ್ದಾನುವೆನ್ನ ಮಾ
ದೇವಿಯುಮೆಯ್ದಿ ನೀಂ ಕಳಿಪಿದಿಂ ಬೞಿಕೆನ್ನ ಪೊೞಲ್ಗೆ ಪೋದಪೆಂ ೭

ವ || ಎಂದು ಮತ್ತಮನೇಕವಿದ್ಯಾಬಲದೊಳಂ ಭುಜಬಲದೊಳಂ ಸುಭಟಬಲದೊಳಂ ಗೆಲಲಾರ್ಪ ನಂಬುಗೆ ನುಡಿದು ಬೀೞ್ಕೊಂಡು ಚಿತ್ರಾಂಗನತ್ತ ಪೋಪುದುಮಿತ್ತಲಾ ಕಾಂತಾರಮಂ ದಾಂಟಿ ಬರ್ಪಲ್ಲಿ

ಉ || ಸಾಮಜಸಂಕುಲಂ ಪೆಡೆ ಚಮೂಪತಿ ನೆತ್ತಿಯ ಮಾಣಿಕಂ ಹಯ
ಸ್ತೋಮ ಮುದಗ್ರಜಿಹ್ವೆ ಸುಭಟಾವಳಿ ನಂಜಿನ ದಾಡೆಯೆಂಬಿನಂ
ಭೀಮಪುರಕ್ಕೆ ಕೋೞ್ಮಸಗಿ ನೀೞ್ದೆಱೆಗೊಂಡುದು ಪದ್ಮಪುತ್ರಸೇ
ನಾಮುಖಮೆಂಬ ಭೀಮಭುಜಗಂ ಮಲೆದಿರ್ದ ಮತಂಗರಾಜನಂ      ೮

ವ || ಅಂತು ಮಂಗಳನಾಯಕವ್ರಜಮೇ ನಿಜಭುಜಕ್ಕೆ ಮತಂಗನನಾ ಪತಂಗಮಂ ಮಾಡಿ ತತ್ಪುರಮಂ ಕೈಕೊಂಡಿರ್ಪುದುಮಲ್ಲಿಗೆಯ್ದೆವಂದು ಸೌಂದರ್ಯಕಂದರ್ಪಗಾಸನ್ನಮಾಗಿ

ಚಂ || ತರುಣತಮಾಳಕಾಳಿಮವರಚ್ಛವಿವೆತ್ತುಪಕಂಠದೊತ್ತನಾ
ವರಿಸಿ ಶಿಖಂಡಿಮಂಡಲದೊಳೊಂದಿ ಲಸದ್ಘನಪುಷ್ಪದಿಂದಲಂ
ಕರಿಸಿ ಸಲೀಲಭಂಗಮನುಪಾರ್ಜಿಸಿ ಭಂಗುರವೇಣಿಯೆಂಬ ಬಂ
ಧುರನದಿ ರಂಜಿಸಿತ್ತು ಮಹಿಕಾಂತೆಯ ಭಂಗುರವೇಣಿಯೆಂಬಿನಂ      ೯

ಮ || ಕಳಹಂಸೀರವದಿಂದಮಾದರಿಸಿ ವೀಚೀಬಾಹುವಿಂ ಕಾಲ್ಗಳಂ
ತೊಳೆದಂಭಃಕಣಸೇಸೆಯಿಂ ಸರಸಿಜಶ್ರೀಗಂಧದಿಂ ಫೇನನಿ
ರ್ಮಳವಸ್ತ್ರಂಗಳಿನರ್ಘ್ಯಮಂಗಳಮನಿಂಬಿಂ ಮಾಡಲುತ್ಕಂಠೆಯಾ
ದಳಿಳಾನಾಥಸುತಂಗೆ ಸಿಂಧುನದಿಯಂತಭ್ಯಾಗತಪ್ರೀತಿಯೊಳ್         ೧೦

ಕಂ || ಎನಸುಂ ನೀರ್ಪಿರಲ್ ಬಂ
ದ ನವಾಭ್ರದಿನೆಸೆವ ವನಧಿವೇಳೆಯ ತೆಱನಂ
ನೆನೆಯಿಸಿದತ್ತಾ ನದಿ ಮ
ಜ್ಜನಕೇಳಿಯೊಳಿರ್ದ ಕಟಕದಾನಗಳಿಂದಂ          ೧೧

ಕರಿಗಳವಗಾಹಮಿರೆ ಸಿಂ
ಧುರದ ರಜಂಬೊರೆದು ರಂಜಿಸಿತ್ತು ಕರಂ ಸೌಂ
ದರಿಯ ತನು ಸತ್ಯಾಕರನೆ
ೞ್ತರುತಿರೆ ತಾಂ ಕೂಡೆ ರಾಗವೇಱಿದೆ ತೆಱದಿಂ    ೧೨

ಅೞಿಪಿಂದ ವರುಣವಸ್ತ್ರದ
ಪೞಯಿಗೆಗಳ ನೆೞಲ ನೆರೆಗಳೆಂದೆಳಮೀಂಗಳ್
ಘೞಿಲನೆ ಪಾಯ್ದಡಿಗಡಿಗಳ
ವೞಿಯೆ ಬೞಲ್ದೞಲುತಿರ್ದುವೋರೊಂದೆಡೆಯೊಳ್       ೧೩

ಚಂ || ಅಮರೆ ಮಡಲ್ತು ಪರ್ವಿದ ತಮಾಳವನಂ ಜಳಬುದ್ಬುದ ಪ್ರಘೋ
ಷಮನೊಳಕೊಂಡು ಕೞ್ತಲಿಸೆ ಕಂಡು ಘನಾಗಮಮಾದುದೆಂದು ಸಂ
ಭ್ರಮಿಸಿ ಪಿಕಾಳಿ ಮೂಗುವಡೆ ಚಾದಗೆ ರಾಗಿಸೆ ಕೇಕಿತಾಂಡವಂ
ನಿಮಿರೆ ಮರಾಳಮಳ್ಕೆ ತಟಿನೀತಟಿ ರಂಜಿಸಿದತ್ತು ಸುತ್ತಲುಮ        ೧೪

ವ || ಮತ್ತಂ

ಚಂ || ಒದವಿಸಲಾರ್ತುದಲ್ಲಿ ಜಳಕೇಳಿಯೊಳಿರ್ದ ನಿತಂಬಿನೀಕದಂ
ಬದ ಮುಖವಬ್ಜಮಂ ನಯನಮುತ್ಪಲಮಂ ಮೊಲೆ ಚಕ್ರವಾಕಮಂ
ಸದಮಲಹಾರಯಷ್ಟಿ ಜಳಶೀಕರಮಂ ನಳಿತೋಳ್ ತರಂಗಮಮ
ಮೃದುನಿನದಂ ವಿಹಂಗರವಮಂ ದಶನಾವಳಿ ಫೇನಪಿಂಡಮಂ        ೧೫

ವ || ಆಗಳಾ ತರಂಗಿಣೀತಟದೊಳವನೀಶನಂದನಂಗೆ ವೃಷಸೇನನೆಂಬ ವೃದ್ಧಪುರೋಹಿತಂ

ಮ || ನಿರುತಂ ತ್ವತ್ಪಿತೃ ಮುನ್ನಮಿಲ್ಲಿವರಮಾಜ್ಞಾನಮ್ರರಂ ಮಾಡಿ ಭೂ
ಪರನೀ ಸಿಂಧುವ ತೀರದೊಳ್ ನಿಱಿಸಿ ಕೀರ್ತಿಸ್ತಂಭಮಂ ಲೀಲೆಯಿಂ
ಚರಿತಾರ್ಥಂ ಮಗುೞ್ದಂ ಪುರಕ್ಕೆ ವಿಜಯಶ್ರೀಕಾಂತನೀಮುಂ ಮನೋ
ಹರಮಪ್ಪಿಲ್ಲಿಯೆ ಬೀಡುವಿಟ್ಟು ನಿಱೆಸಲ್ವೇೞ್ಕುಂ ಯಶಸ್ತಂಭಮಂ          ೧೬

ಕಂ || ಅಟವೀಸಮೀಪಮತ್ಯು
ತ್ಕಟ ತೃಣಜಳ ಬಹಳಮೀ ಪ್ರದೇಶಂ ದಿಕ್ಪ
ರ್ಯಟನಶ್ರಮಮಾಱುವಿನಂ
ಕಟಕಂ ವಿಶ್ರಮಿಸುಗಿಲ್ಲಿ ಕತಿಪಯದಿವಸಂ         ೧೭

ವ || ಅದಲ್ಲದೆಯುಂ ಬೇಱೊಂದು ಸಕಲಸೌಖ್ಯಹೇತುಮಪ್ಪ ಮುಖ್ಯಪ್ರಯೋಜನ ಮುಂಟದಾವುದೆಂದೊಡೆ ಮಹಾಪುಣ್ಯಸಿಂಧುಗಾತ್ಮಗಂಭೀರನಾಭಿಮಂಡಳಮುಂ ಜನ್ಮಸ್ಥಾನಮು ಮಾಗೆ ರಂಜಿಪ ಸುಪಾರ್ಶ್ವಪರಮೇಶ್ವರರಿಂದಲಂಕರಿಸಿ ನೆಟ್ಟನಿಲ್ಲಿಗೇಕಗವ್ಯೂತಿಪ್ರಮಾಣಾಂತರದೊಳ್

ಮ || ಸುರವಿದ್ಯಾಧರಮಾನವೋರಗಜನಾರಾಧ್ಯಂ ವಿನಿರ್ಧೂತದು
ರ್ಧರಪಾಪಪ್ರಸರಂ ಜಗತ್ರಯಮಹಾತಾಪತ್ರಯೋದ್ರೇಕಸಂ
ಹರಮೀ ತೋಱುವ ಚಿತ್ರಕೂಟಗಿರಿಯೊಳ್ ಚೈರಂತನಂ ಸಿದ್ಧಶೇ
ಖರಮೆಂಬುನ್ನತೀರ್ಥಮೊಂದೆಸೆಯುತಿರ್ಕುಂ ತ್ರೈಜಗತ್ಪಾವನಂ      ೧೮

ವ || ಅಲ್ಲಿ

ಕಂ || ಬರಿಸಕ್ಕಂ ಭವ್ಯೋತ್ಸವ
ಕರಮೆನಿಸಲ್ ಬರ್ಪ ಸರ್ವಫಾಲ್ಗುಣನಂದೀ
ಶ್ವರಪೂಜೆಗೆ ಖೇಚರಭೂ
ಚರರ ಮಹಾಯಾತ್ರೆ ನೆರೆವುದಷ್ಟಾಹ್ನಿಕದೋಳ್           ೧೯

ಆ ದಿವಸಕ್ಕಲ್ಲಿಗೆ ಪು
ಣ್ಯೋದಯ ನೀಂ ಪೋಗಿ ಜಿನಮಹಾಮಹಿಮೆಯನಾ
ಹ್ಲಾದದೆ ಮಾಡಿಸಿ ಬರೆ ನಿ
ನ್ನೀ ದಿಗ್ವಿಜಯಾಗಮಕ್ಕೆ ಸಫಲತೆ ಸಾರ್ಗುಂ     ೨೦

ವ || ಎಂದು ಬಿನ್ನಪಂಗೆಯ್ದ ಪುರೋಹಿತವಚನಮನೊಡಂಬಟ್ಟ ಗುಣತುಂಗನಾ ದೇಶದಿಂ ಭಂಗುರವೇಣೀತರಂಗಿಣಿಯ ಬಡಗಣ ತಡಿಯೊಳ್ ಪಡೆವಳರ್ ಬೀಡುವಿಡಿಸೆ

ಮ || ಕರಿಣೀಕುಂಜರವಾಜಿವೇಸರ ರಥಾಂದೋಳಾದಿ ಯಾನಂಗಳು
ಬ್ಬರಮುಂ ರಾಸಭಸೈರಿಭೋಕ್ಷಕರಭವ್ರಾತಂಗಳೊತ್ತೊತ್ತೆಯುಂ
ನರನಾರೀಜನದೊಂದುಗೊಂದಣಮುಮಂದೆತ್ತಂ ಚತುರ್ಯೋಜನಾಂ
ತರದೊಳ್ ತೀವಿರೆ ಬಿಟ್ಟುದಲ್ಲಿ ಕಟಕಂ ವ್ಯಾಲೋಲಕೋಲಾಹಲಂ           ೨೧

ಶಾ || ಆಗಳ್ ಸೆಜ್ಜೆಗೆ ಮಜ್ಜನಕ್ಕೆ ಪಚನಕ್ಕೊಡ್ಡೋಲಗಕ್ಕಾಯುಧಾ
ಭೋಗಕ್ಕಶ್ವಗಣಕ್ಕಿಭಾವಳಿಗೆ ಭಂಡಾರಕ್ಕೆ ಮಂತ್ರಕ್ಕೆ ಕೋ
ಟ್ಟಾಗಾರಕ್ಕನುಮಂಡನಕ್ರಿಯೆಗೆ ಕೀಲಾರಕ್ಕೆ ದೇವಾರ್ಚನೋ
ದ್ಯೋಗಕ್ಕೆಂದಳವಟ್ಟ ಮಂಡವಿಗೆ ಗುಡಾರಂ ಕುಟೀಮಂಡಳಂ       ೨೨

ಕಂ || ವರವೇಲಿ ತಟ್ಟಿ ತಳೆ ಗೋ
ಪುರವಾಳ್ವೇಱಿಪಡಿ ತವಂಗವಂಕದ ಕಳನೋ
ವರಿ ಸೀಯಬಾರವಂತಃ
ಪುರಮುಯ್ಯಲ್ ಕೃತಕಶಿಖರಿಯುದ್ಯಾನವನಂ  ೨೩

ಎಂಬಿವು ಮೊದಲಾಗಿರೆ ಮ
ತ್ತಂ ಬಹುವಿಧಪರಿಕರಂಗಳೊರ್ಮೆಯೆ ನೆರೆದಾ
ಡಂಬರದಿಂ ತುಱಿಗಿರೆ ಬಂ
ದಿಂಬಿಂದರಮನೆಯೊಳವನಿಪತಿ ನೆಲಸಿರ್ದಂ       ೨೪

ವ || ಅನ್ನೆಗಮಿತ್ತಲ್

ಮ || ವನದೊಳ್ ನೆಟ್ಟನೆ ಕಟ್ಟುಪಟ್ಟ ಸೆಱೆಯುಂ ಕೋೞ್ವೆತ್ತಂ ತನ್ನೇವಮಿಂ
ಧನಮುಂ ಗಾಳಿಯುಮಾಗಿ ಪೆರ್ಚಿಸೆ ನಿಜಕ್ರೋಧಾಗ್ನಿಯಂ ತಂತ್ರಮಂ
ಮನದಿಂ ಮುಂ ಬರವೇೞ್ದು ಪುಷ್ಕರಪುರಕ್ಕೊಟ್ಟೈಸಿ ಧಾಳಿಟ್ಟು ಕಾ
ಪಿನ ಬಲ್ಲಾಳ್ಗನಿಕ್ಕಿ ಪೊಕ್ಕಿಱಿದು ಚಿತ್ರಾಂಗಂ ಹಯಗ್ರೀವನಣ       ೨೫

ಚಂ || ತೊಲತೊಲಗೊಪ್ಪಿಸೊಪ್ಪಿಸು ಲತಾಂಗಿಯನೊಪ್ಪಿಸದಣ್ಮೆ ನೀಗುವೆಂ
ಲಲನೆಯ ದೂಸಱಿಂ ಪಡೆದ ಮುನ್ನಿನ ಬನ್ನಮನೆಂಬೆಯಪ್ಪೊಡಿ
ನ್ನೆಲೆಯೆಲೆಯಿತ್ತಲಿತ್ತಲಿದಿರಾಗಿದಿರಾಗೆನಗೆಂದು ಮುಟ್ಟಿಮೂ
ದಲಿಸುತವಾಂ ಲತಾಂಗಿಯನೊಪ್ಪಿಸದಣ್ಮೆ ನೀಗುವೆಂ
ಲಲನೆಯ ದೂಸಱಿಂ ಪಡೆದ ಮುನ್ನಿನ ಬನ್ನಮನೆಂಬೆಯಪ್ಪೊಡಿ
ನ್ನೆಲೆಯೆಲೆಯಿತ್ತಲಿತ್ತಲಿದಿರಾಗಿದಿರಾಗೆನಗೆಂದು ಮುಟ್ಟಿಮೂ
ದಲಿಸುತವಾಂತನಾಂಪ ತೆಱದಿಂ ಶರಭಂ ಸಮದೇಭವೈರಿಯಂ        ೨೬

ವ || ಅಂತಾಂತು

ಮ || ಬಹುವಿದ್ಯಾಬಲದಿಂದಮಿರ್ವರುಮಗುರ್ವುವೇೞ್ದಿನಂ ಕಾದುವ
ಲ್ಲಿ ಹಿತಂಗೆಯ್ಯದೆ ಪುಣ್ಯಹಾನಿಯೊಳೆ ವಿದ್ಯಾದೇವತಾಶ್ರೇಣಿ ಪೋ
ಹೆ ಹಯಗ್ರೀವನಧಃಪ್ರಭಾವನೆರ್ದೆಗೆಟ್ಟಿರ್ದೋಡಿದಂ ವಿಸ್ಮಯಾ
ವಹಮಲ್ತನ್ಯಕಳತ್ರಕಾತರಮನಂಗಾರುಂ ಹಿತಂಗೆಯ್ವರೇ  ೨೭

ವ || ಅನಂತರಮವನ ಕುಲಧನಮಂ ಸೂಱೆಗೊಂಡು ನಿಜಪ್ರಿಯೆಯನೊಡಗೊಂಡು ವಿಮಾನಾಧಿರೂಢನಾಗಿ ಪುಷ್ಕರಪುರಪ್ರದೇಶದಿಂ ತಳರ್ದು ಹಿಮಕೂಟಕ್ಕೆ ಪೋಗದೆ ಸಕಲಸಾಮಗ್ರಿವೆರಸು ಯುವರಾಜಸಿಬಿರನಿವೇಶಪ್ರದೇಶಮಂ ಗಗನಮನದಿಂದೆಯ್ದೆವರ್ಪುದುಂ

ಕಂ || ಅಂಬರತಳದರ್ಪಣದೊಳ್
ಬಿಂಬಿಪ ಗುಣತುಂಗನೃಪನ ಪಡೆಯ ನೆೞಲ್ ತಾ
ನೆಂಬಿನಮೊರ್ಮೆಯೆ ತೋರ್ಪ ತ
ದಂಬರಚರಸೈನ್ಯಮಿತ್ತುದತಿವಿಸ್ಮಯಮಂ       ೨೮

ವ || ಆಗಳದಂ ಕಂಡೊಡಾವನಾನುಮೊರ್ವ ಗರ್ವಿತ ವಿಯಚ್ಚರೇಂದ್ರಂ ಕಾಳಗಕ್ಕೆ ಮೇಲೆತ್ತಿ ಬಂದನಕ್ಕುಮೆಂದು ಪೞಯಿಗೆಯ ಪದಿರ ಪಱೆಯ ಕಹಳೆಯ ಕುಱಿಪನಱಿಯದೆ ಕಟಕದ ಜನಮದಿಲ್ಲಿ ಯುದ್ಧಸನ್ನದ್ಧಮಾಗುತ್ತಿರೆ

ಚಂ || ಪೆಸರ ಗಜಂಗಳಂ ಬಿಸುಗೆವೇಱಿಸವೇೞೆನೆ ಯುದ್ಧಮುಖ್ಯರಂ
ಬೆಸಸೆನ ಸಿಂಹವಿಷ್ಟರದಿನೇೞೆನೆ ಚಾರುಕಳಾಕಳಾಪಮಂ
ಬಿಸುಡೆನೆ ಹಸ್ತಮಸ್ತ್ರನಿಬಿಡಗ್ರಹಣಕ್ಕನುವಲ್ತು ಮುದ್ರಿಕಾ
ಪ್ರಸರಮನೊಯ್ಯನುರ್ಚಿ ಕಳೆದಂ ಗುಣತುಂಗನದೇನುದಾತ್ತನೋ   ೨೯

ವ || ಆ ಸಮಯದೊಳ್ ತನ್ನ ಬರವನರಸಂಗೆ ಮುಂದಱಿಪಲಟ್ಟಿ ಗಗನತಳದಿನ ವನೀತಳಕ್ಕವತರಿಸಿ ಸಮುಚಿತಪರಿಗ್ರಹಂಬೆರಸು ದೌವಾರಿಕನಿವೇದಿತನಾಗಿ

ಕಂ || ಚಿತ್ರಾಂಗಂ ಮಣಿಭೂಷಣ
ಚಿತ್ರಾಂಗಂ ಪ್ರಬಳಶಬಳರುಗ್ಮಂಜರಿಗಳ್
ಚಿತ್ರಿಸೆ ಸಭೆಯಂ ಪೊಕ್ಕು ಧ
ರಿತ್ರೀನಾಥಂಗೆ ವಿನತಮಸ್ತಕನಾದಂ     ೩೦

ಮ || ಇದಿರೆೞ್ದೞ್ಕಱೊಳಪ್ಪಿಕೊಂಡುಚಿತ ಬಂಧುಪ್ರೀತಿಯಿಂದೇಱಲಿ
ಕ್ಕಿದ ಸಿಂಹಾಸನದೇಶದೊಳ್ ವಿನಯದಿಂ ಕುಳ್ಳಿರ್ದು ಸಂಭಾಷಿತಂ
ಕದನಕ್ರೀಡೆಯೊಳಾತ್ಮಕಾಂತೆಯನಗುರ್ವಿಂ ತಂದ ವೃತ್ತಾಂತಮಂ
ಮೊದಲಿಂದೆಯ್ದೆ ನೃಪಂಗೆ ಸೂಚಿಸಿ ಮನಃಸಂತೋಷಮಂ ಮಾಡಿದಂ           ೩೧

ವ || ಮಾಡಿ ತನ್ನ ನಚ್ಚಿನ ಕುಲಧನಂಗಳಪ್ಪುಪಾಯನಂಗಳಂ ತರಿಸಿ ನೃಪನ ಮುಂದೊಟ್ಟೈಸಿ ಮುಕುಳಿತಕರಸರೋಜನಾಗಿ

ಕಂ || ಜಿತಮದನ ಸಕಳ ಲೋಕ
ಸ್ತುತ ನಿರ್ಮಲಬೋಧ ನಿರಘ ನೀನೆನಗರ್ಹ
ತ್ಪತಿಯಂತೆ ಮೋಕ್ಷಮಂ ಮಾ
ಡಿತನಕ್ಷಯಪದದೊಳಿರ್ದುವಾಂ ಮಱೆದಪೆನೇ  ೩೨

ವ || ಅದಱಿಂದಂ

ಉ || ಪ್ರತ್ಯುಪಕಾರಮಂ ನಿನಗೆ ಮಾಡುವ ಸೈಪೆನಗಿಲ್ಲ ಭಕ್ತಿಗೌ
ಚಿತ್ಯಮಿದೊಪ್ಪುಗೊಳ್ವುದು ಮದನ್ವಯಸಂಚಿತಸಾರವಸ್ತು ವೀ
ಸ್ತುತ್ಯಕೃಪಾಣಮೀಲಸತನುಚ್ಛದಮೀ ನುತಚಾಪಮೀ ಜಯ
ಪ್ರತ್ಯಯಬಾಣಮೀ ತರಳಹಾರಕಮೀ ಕಳವೀಣೆ ಭೂಪತೀ            ೩೩

ಎಂದು ನೃಪಂಗೆ ಪೇೞ್ದು ಖಚರೋತ್ತಮನಿತ್ತನವದ್ಯಕೋಪಮೆಂ
ಬೊಂದು ಕೃಪಾಣಮಂ ಸಮರಸಾಧಕಮೆಂಬ ತನುತ್ರಮಂ ಜಯಾ
ನಂದಕಮೆಂಬ ಕಾರ್ಮುಕಮನಾಹವದೋಹಳಮೆಂಬ ಬಾಣಮಂ
ನಂದಿನಿಯೆಂಬ ಹಾರಲತೆಯಂ ಕಳಭಾಷಿಣಿಯೆಂಬ ವೀಣೆಯಂ        ೩೪

ವ || ಇತ್ತು ಮತ್ತಂ ಪರವಿದ್ಯಾಚ್ಛೇದಿನಿಯುಂ ಮೋಹಿನಿಯುಂ ಬಹುರೂಪಿಣಿಯುಮೆಂಬ ಮೂಱುಂ ವಿದ್ಯೆಗಳುಮಂ ತನ್ನುಮನುಚಿತಪ್ರಯೋಜನಕ್ಕೆ ನೆನೆದು ಬರಿಸುವಂತೊಡಂಬಡಿಸಿ ತನಗೆ ಮಾಡಿದಭ್ಯಾಗತ ಪ್ರತಿಪತ್ತಿಯೊಳಮನೂನದಾನಸನ್ಮಾನದಿಂ ಹೃಷ್ಟನಾಗಿ ಬೀೞ್ಕೊಂಡು ನಿಜಪುರಕ್ಕೆ ಚಿತ್ರಾಂಗದಂ ಪೋಪುದುಂ ಇತ್ತ ಚಿತ್ರಭಾನುಮಿತ್ರನಾತನಿತ್ತ ತರವಾರಿ ಸೇವ್ಯತರವಾರಿಯಂತೆಯುಂ ಕವಚಂ ಸತ್ಕವಿಕದಂಬಕವಚನದಂತೆಯುಮಾ ಚಾಪಲತೆ ಕೂರ್ಪ ಕೋಮಳೆಯ ಚಾಪಲತೆಯಂತೆಯುಮಾ ಬಾಣಮುಳ್ಳಲರ್ದಲರ ಬಾಣದಂತೆಯುಮಾ ವೀಣೆ ಸುರತಪ್ರವೀಣೆಯಂತೆಯುಮನುದಿನಂ ಮನಂಗೊಳಿಸೆ ವಿನೋದಿಸುತ್ತುಮಿರ್ಪನ್ನೆಗಂ

ಚಂ || ಶರದದೊಳಾದ ಖೇದಮನಿಳೇಶನ ಸೈನ್ಯಜನಕ್ಕೆ ಮಾಣಿಪಂ
ತಿರೆಹಿಮವಂದು ಬಂದುದೆಳನೆಯ್ದಿಲ ಮೆಯ್ದೆಗೆದುರ್ವಗಲ್ದ ನ
ಲ್ಲರ ನರಸುಕ್ಕು ಕೋೞ್ಮಿಗದ ಕೋಟಲೆ ಕಂಜದ ಬಂಜೆವರ್ದು ಪಾಂ
ಥರ ಪಗೆ ಕೋಕಿಳಾಕುಳಕೆ ನೇಸಱನಿಗ್ರಹಮೈಕಿಲಾಕರಂ     ೩೫

ವ || ಆ ಸಮಯದೊಳ್

ಮ.ಸ್ರ || ಕರಿಯೂಥಂ ಭೂರಿಭೂಭೃದ್ವಿಕಟನಿಕಟಮಂ ಭಿಲ್ಲಪಲ್ಲೀಗಣಂ ಭೂ
ಧರಕುಂಜಾಭ್ಯರ್ಣಮಂ ಶ್ವಾಪದಸಮಿತಿದರೀ ದೇಶಮಂ ಪಕ್ಷಿವೃಂದಂ
ತರುನೀಡಕ್ರೋಡಮಂ ಪನ್ನಗವಿತತಿ ರಸಾರಂಧ್ರಮಂ ಪಾಂಥವರ್ಗಂ
ವರ ಕಾಂತಾಶ್ಲೇಷಮಂ ಕೆಯ್ಕೊಳಲಲೆದುದುದೀಚೀಭವಂ ಶೀತವಾತಂ         ೩೬

ಕಂ || ಮಸುಮಸುಳನಾಯ್ತು ಚಂದ್ರಿಕೆ
ಬಿಸುಪೞಿದುದು ಬಿಸಿಲಶೇಷಭುವನದ ಘರ್ಮ
ಪಸರಮುಡುಗಿದುದು ಹಿಮಸಮ
ಯಸಮೀರಂ ಪಾಱಿ ಬೀಸಿ ತೂಱಿದ ತೆಱದಿಂ    ೩೭

ಚಂ || ಇದು ತಳರ್ದೆಚತ್ತಿ ಬರ್ಪ ಹಿಮಕಾಲನೃಪಾಲನ ಸೈನ್ಯಚಕ್ರಘಾ
ತದ ಭರದಿಂ ಹಿಮಾದ್ರಿಪಥದೊಳ್ ನೆಗೆದುರ್ವಿದ ಧೂಳಿಜಾಳ ಮ
ಲ್ಲಿದು ತಗುಳ್ದೈಕಿಲಾಕ್ರಮಿಸೆ ಲೋಕಮನೆಯ್ದೆ ಸರೋಜಸಂಭವಂ
ಪೊದಿಸಿದ ಪಾಂಡುಕಂಬಳಮಿದೆಂಬವೊಲಾದುದು ಮಂಜಿನುರ್ವರಂ ೩೮

ಬಳಸಿದ ಮಂಜು ಚಂದ್ರಿಕೆ ರಥಾಶ್ವದ ಮೆಯ್ವಸುರೇಣಲಕ್ಷ್ಮಮು
ರ್ಕಳವೞಿದರ್ಕಬಿಂಬಮಮೃತಾಂಶುವೆನಲ್ಕಿರುಳಂದಮಾಗೆ ಪ
ಜ್ಜಳಿಪ ನೆಗೞ್ತಿಗೆಟ್ಟು ಪಗಲಬ್ಜಿನಿ ಕಾಮಶಿಳೀಮುಖಕ್ಕೆ ಕೋ
ಮಳೆ ಸುಗಿದಿರ್ದಳೋಪನ ತೆಱಂ ಪೆಱತಾದೊಡೆ ಮುಗ್ಧೆ ನಿಲ್ವಳೇ   ೩೯

ಮ || ಪಗೆ ನೆಯ್ದಿಲ್ ನಗುವಂತು ದೀನತೆ ದಿನಕ್ಕಪ್ಪಂತು ಕೂರ್ಪಂಬುಜಂ
ಸುಗಿವಂತಾಯ್ತು ಸಖಂಗೆ ಕಾಲವಶದಿಂ ತೇಜಃಕ್ಷಯಂ ಭಾನುಗೆಂ
ದಗಿದಾರ್ಗಂಬಡುವಂತೆ ಕೋಡಿ ಹಿಮದಿಂ ಚಕ್ರಾಂಕಮಳ್ಕಿರ್ದುವೀ
ಜಗದೊಳ್ ಮಿತ್ರವಿಪತ್ತಿಗಾರ ಬಗೆಯುಂ ದುಃಖಕ್ಕೆ ಪಕ್ಕಾಗದೇ      ೪೦

ಕಂ || ಪೊಸತಲರ್ದ ಸಿಂಧುವಾರದ
ಕುಸುಮಸ್ತಬಕಂಗಳೆಂದು ನೀಲದ ಪರಲಿಂ
ಮಿಸುಗುವ ವನದೇವತೆಯರ
ಪೊಸಮುತ್ತಿನ ದಂಡೆಯೆನಿಸಿ ರಂಜಿಸಿ ತೋರ್ಕುಂ ೪೧

ಕಳಿಕೆ ನನೆ ಮೊಗ್ಗೆ ಬಿರಿಮುಗು
ಳಲರೆಂಬಯ್ದುಂ ಮನೋಜನಯ್ದುಂ ಸರಲ್ಗಂ
ತೊಳಗುವಲಗಾಗೆ ವಿರಹಿಯ
ನಳಱಿಸಿದುದುಮುದಿತಮಧುಪವೃಂದಂ ಕುಂದಂ          ೪೨

ವನದೇವತೆ ಹಿಮಸಮಯ
ಕ್ಕನುನಯದಿಂ ಸೇಸೆದಳಿದ ಕಳಮಾಕ್ಷತಮಂ
ನೆನೆಯಿಸಿದುವು ನಿಳ್ಪಿನ ಬೆ
ಳ್ಪಿನ ಜಾದಿಯ ನನೆಗಳಳಿಕುಲೋಚ್ಚಲಿತಂಗಳ್ ೪೩

ಹಿಮಸಮಯಪತಿಯ ರೂಪಂ
ಕುಮುದಿನಿ ನೋಡಲ್ಕೆ ಪಲವು ಕಣ್ಬಡೆದಂತೇಂ
ರಮಣೀಯಮಾಯ್ತೊ ವಿದಳಿತ
ಕುಮುದಂಗಳ ಮಿಸುಗುವೆಸಳ ಮಸಕಂ ಕೊಳದೊಳ್       ೪೪

ಚಂ || ತರಳಕಟಾಕ್ಷಚಂದ್ರಿಕೆ ಮುಖಾಂಬುರುಹಂ ನಯನೋತ್ಪಳಂ ಪಯೋ
ಧರಮಮೃತಾಧರಂ ಚರಣಪಲ್ಲವಮೆಂಬತಿ ಶೀತಳಸ್ಥಳಾಂ
ತರದನುಬಂಧದಿಂ ಕುಸುಮಕೋಮಳೆಯರ್ಕಳೊಳೊಂದಿ ತಣ್ಣಗಿ
ರ್ದರೆಬರ ಬಿಟ್ಟು ಚೋದ್ಯಮೆನೆ ಪೀಡಿಸಿತೈಕಿಲನಂಗ ತಪ್ತರಂ        ೪೫

ಕಂ || ಹಿಮಮೆಂಬ ಸುರತಸುಖಸಂ
ಭ್ರಮದೊಳ್ ಜನಮಪ್ಪುಕೆಯ್ದುದುದ್ಗತರೋಮೋ
ದ್ಗಮಮನುಪಜಾತಸೀತ್ಕಾ
ರಮನುತ್ಕಂಪನಮನುದ್ಯದಧರಭ್ರಮಮಂ       ೪೬

ಉ || ಓತೊಡನಿರ್ಪ ನಲ್ಲರ ಮುಖಾಂಬುರುಹಂ ಪೊಱಗಾಗಿ ಮಿಕ್ಕ ಕಂ
ಜಾತಮಿದಾದ ಲೆಕ್ಕಮಸುರಾರಿಯ ಪೊರ್ಕುೞ ಪದ್ಮಮಂ ಖರ
ದ್ಯೋತಿಯ ಕೆಯ್ಯ ಕಂಜಮನಿದೆಯ್ದೆ ಸುರುಳ್ಚುಗುಮೆಂಬಿನಂ ಜಗ
ತ್ಕೌತುಕಮಾಯ್ತನುಷ್ಣಮಹಿಮಂ ಜನಿತೋತ್ಪಲಬಂಹಿಮಂ ಹಿಮಂ           ೪೭

ವ || ಎನಿಸಿ

ಚಂ || ಇರೆಯಿರೆ ಪಾವೆ ಕಾಲಗತಿಯಿಂ ನೆಲಮುಕ್ಕೆನಿಪಂದದಿಂ ಹಿಮಂ
ಬರೆಬರೆ ಬೆರ್ಚಿನಿಂ ಶಿಶಿರಮಾಗಿ ನಿಮಿರ್ಚಿದುದಾಸೆಯಂಕದಂ
ತಿರೆ ನರಸುರ್ಕಮತ್ಕಳಿಕೆಯಂತಿರೆ ಮೆಯ್ಗೆ ವಿಪಾಂಡುವೃತ್ತಿಯಂ
ಪರಮಸುಖಾಪ್ತಿಯಂತಿರೆ ಜನಕ್ಕೆನಸುಂ ಪುಳಕೋದ್ಗಮಂಗಳಂ      ೪೮

ಮ || ರಥಮಂ ವಾರ್ಧ್ಯುಪಕಂಠದೊಳ್ ತರುತುಮೈಕಿಲ್ಗೋಡೆ ಸೇಡಿಂದೆ ಸಾ
ರಥಿ ಕಾಲ್ಗೆಟ್ಟಿರೆ ಕಂಡು ಸುರ್ಕುಗಿಡೆ ಕಿಚ್ಚಂ ಕಾಸಿ ತಿರ್ದಲ್ ತಮೋ
ರಥಮಂ ಸಾರ್ದಪನಾತ್ಮಪಾದಮುಮನಾದಂ ನೀಡಲಂಜುತ್ತಿನಂ
ಪೃಥುನೀಹಾರನಿರುದ್ಧಭಾನುವೊಗೆವಂ ಸಾರ್ದಗ್ನಿದಿಗ್ಭಾಗಮಂ    ೪೯

ಚಂ || ಕಡಲೊಳಗಿರ್ಪ ವಿಷ್ಣುವನಿಶಂ ಬಡಬಾಗ್ನಿಯ ಪೆರ್ಚುಮಿಲ್ಲದಿ
ರ್ದೊಡೆ ಸುರಸಿಂಧುವಂ ತಳೆದ ಶಂಭು ನಿಜಾಕ್ಷಿಯ ಬೆಂಕಿ ಸೋಂಕದಿ
ರ್ದೊಡೆ ಪವನಾಧ್ವದೊಳ್ ಸುೞಿವ ಭಾನು ಕೃಶಾನುವಿನಾಶೆಯಂ ಪಗಲ್
ನಡೆಯದೊಡೆಂತು ನಿತ್ತರಪರೆಂಬನಿತಾದುದು ಮಾಘಡಂಬರಂ       ೫೦

ಕಂ || ಬಿತ್ತರಿಪ ಶಿಶಿರದೊಳ್ ಜನ
ಚಿತ್ತಮನೞ್ದಿದೊಡೆ ಪೊಕ್ಕು ನೆಲಸಿರ್ದುದಱಿಂ
ಚಿತ್ತಶಯನಾಮಮಂ ಪುರು
ಷೋತ್ತಮಸುತನಾಳ್ದನೆನಿಸಿತದನೇವೊಗೞ್ವೆ    ೫೧

ಪಸರಿಸೆ ಜಾದಿಯ ಜೊಂಪಂ
ಮಿಸುಪಲ್ ಪಱೆಗುಟ್ಟಿ ಕೊರಳಸರಮಂ ಕುಕಿಲೆಂ
ದೆಸಗೆ ಕೊಳರ್ವಕ್ಕಿ ಶಿಶಿರಂ
ಪಸದನವಾಡಿದುದು ಕುಂದದುತ್ಸವಮದಱೊಳ್         ೫೨

ಸೆಗಳಿಗೆಪೆಂಡಿರ ಮೊಲೆ ಕಿ
ಚ್ಚಗರುವ ಪೊಗೆ ಕುಂಕುಮಾಂಕಮೋವರಿ ನೆಲವಾ
ಳಿಗೆ ದಡ್ಡಿಯೆಂಬಿವಮರ್ದರ
ನಗಲ್ದುದು ಪೊಲೆಯಾಳ ತೆಱದೆ ಮುಟ್ಟದೆ ಶಿಶಿರಂ        ೫೩

ಚಂ || ಕರಮೆಸೆದಿರ್ದರಂದು ಸಮಯೋಚಿತದಣ್ಪಿನ ಕುಂಕುಮಾಂಕಮೊ
ಪ್ಪಿರೆ ನವಸಿಂಧುವಾರದಲರ್ದೊಂಗಲ ಕೋಮಲಕರ್ಣಪೂರಮೊ
ಪ್ಪಿರೆ ನವಮಾಳಿಕಾಕುಸುಮಶೇಖರಮೊಪ್ಪಿರೆ ಲೋಧ್ರಪುಷ್ಪವಿ
ಸ್ಫುರಿತಪರಾಗಚಂದ್ರಕಬಳಚ್ಛವಿಯೊಪ್ಪಿರೆ ಪೌರನಾರಿಯರ್        ೫೪

ಮ || ಪರಿತಾಪಚ್ಯುತಿ ವಾಸರಕ್ಕೆ ಸುಮನಃಶ್ರೀಸಂಪದಂ ಕುಂದವ
ಲ್ಲರಿಗತ್ಯೂರ್ಜಿತಬೋಧಮುತ್ಪಳಿನಿಗುದ್ಯದ್ವೀತರಾಗತ್ವಮಂ
ಬುರುಹಶ್ರೇಣಿಗುದಾತ್ತಮೋಕ್ಷಗತಿ ಪೌಷ್ಯಕ್ಕಾದುದಾದಂ ದಿಗಂ
ಬರಸಾಂಗತ್ಯತಪಃಪ್ರಭಾವಮೆನಸುಂ ಮೆಯ್ವೆತ್ತೊಡೇನಾಗದೋ    ೫೫

ವ || ಅಂತೆನಿಸಿದ ಶಿಶಿರಸಮಯಕ್ಕಲಂಕಾರಮಾದ ಫಾಲ್ಗುಣದ ಶುಕ್ಲಾಷ್ಟಮಿ ಯಂದು ನಂದೀಶ್ವರಪೂಜೆಗೆಂದು ಸಿದ್ಧಶೇಖರಜಿನಾಲಯಕ್ಕೆ ಮನುಜೇಂದ್ರಮಂದರಂ ಪುರಂದರಗಜೇಂದ್ರರುಂದ್ರ ಲೀಲೆಯಂ ತಳೆದ ನಿಜಗಜೇಂದ್ರಾರೂಢಂ ಸಮಸ್ತ ಮಂಡಳಿಕ ದಂಡನಾಥ ಸಾಮಂತ ಮಂತ್ರಿ ಪುರೋಹಿತಾದ್ಯನೇಕ ಪರಿವಾರ ಜನಪರೀತನಾಗಿ ಪೋಗಿ

ಚಂ || ನಿಜಗಜರಾಜದಿಂದಿೞಿದು ಭಕ್ತಿಭರಾನತಮಸ್ತಕನಾಗಿ ದಿ
ಗ್ವಿಜಯಜಯಾಗ್ರಗಣ್ಯನಧಿಕೋತ್ಸವದಿಂ ಬಲಗೊಂಡು ಮೂಱುಸೂೞ್
ತ್ರಿಜಗದಧೀಶಚೈತ್ಯಗೃಹಮಂ ತ್ರಿಜಗಜ್ಜನತಾರ್ಚಿತಾಂಘ್ರಿಪಂ
ಕಜನ ಪದಾಂಬುಜಕ್ಕೆಱಗಿ ಬಂದಿಸಿದಂ ಗುಣರತ್ನಭೂಷಣಂ          ೫೬

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯ ಮಾಣಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರ ಪಂಡಿತದೇವ ಸುವ್ಯಕ್ತಸೂಕ್ತಿ ಚಂದ್ರಿಕಾಪಾನಪರಿಪುಷ್ಟಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಶಿಶಿರಸಮಯವರ್ಣನಂ ಷಷ್ಠಾಶ್ವಾಸಂ