ಕಂ || ಶ್ರೀಜಿನಪತಿಗೆ ನತಾಮರ
ಭೂಜನಪತಿಗಾತ್ಮನಿಟಿಲದೊಳ್ ಕರಕಮಳಂ
ರಾಜಿಸಲೆಱಗಿದನರ್ಥಿಸ
ರೋಜಾರ್ಕಂ ಪ್ರಭುಗುಣಾಬ್ಜಿನೀಕಳಹಂಸಂ     ೧

ವ || ಆಗಳ್

ಮ.ಸ್ರ || ಘನಘಂಟಾಜಾಳನಾದಪ್ರಸರಮೆಸೆಯೆ ನಾನಾ ಲಸದ್ವಾದ್ಯ ಶುಂಭ
ದ್ಧ್ವನಿಯೆತ್ತಂ ಪೊಣ್ಮೆ ಶಂಖ ಪ್ರಕರವಿರುತಿ ತಳ್ತುಣ್ಮೆ ಗಂಭೀರಭೇರೀ
ನಿನದಂ ಮೆಯ್ವೆರ್ಚೆ ಶಕ್ರಾರ್ಚಿತಜಿನಪತಿಗತ್ಯತ್ಸವೋದಾತ್ತ ಚಿತ್ತಂ
ವಿನಯಪ್ರಾಕಾರಭೂಮೀಶ್ವರಭಿಷವಮಂ ಮಾಡಲುದ್ಯುಕ್ತನಾದಂ ೨

ವ || ಆಗಿ

ಮ || ಮೊದಲೊಳ್ ತೀರ್ಥಕರಂಗೆ ತೀರ್ಥಜಲದಿಂದ ಸ್ನಾನಕ್ರಿಯಾರಂಭಸಂ
ಪದಮಂ ಪಾರ್ಥಿವತುಂಗನರ್ಥಿಜನತಾದೇಯಾರ್ಥನಾದಂ ಮನೋ
ಮುದದಿಂದಷ್ಟವಿಧಾರ್ಚನಾವಿಧಿಗಳಿಂದಭ್ಯರ್ಚನಂ ಮಾಡಿ ನೋ
ಡಿದನತ್ಯೂರ್ಜಿತನತ್ಯನೂನಚರಿತಂ ಶ್ರೀರಾಜವಿದ್ಯಾಧರಂ ೩

ಮ.ಸ್ರ || ಕಳಧೌತೋದ್ದಾಮಕುಂಭಪ್ರತತಿ ಮಣಿಗಣಾಕೀರ್ಣಸೌವರ್ಣಕುಂಭಾ
ವಳಿ ಚಂಚಚ್ಚಾರುಚಂದ್ರೋಪಳ ವಿಪುಳಹಟತ್ಕುಂಭಸಂದೋಹದೊಳ್ ಭೂ
ತಳನಾಥಂ ರಾಗದಿಂದಂ ಘೃತಮಮೃತದಧಿಸ್ತೋಮಮಂ ತೀವಿ ನಿತ್ಯೋ
ಜ್ವಳತೇಜಂ ದೇವದೇವಂಗಭಿಷವವಿಧಿಯಂ ಮಾಡಿ ಸಂತುಷ್ಟನಾದಂ          ೪

ಮ || ಘನಸಾರದ್ರವಮಿಶ್ರಿತಾರ್ದ್ರ ಘಸೃಣಪ್ರೋನ್ಮಿಶ್ರಸಂಸೇವ್ಯ ಚಂ
ದನದಿಂ ತ್ರೈಭುವನೋನ್ನತೈಕತಿಲಕಂಗಷ್ಟಾರ್ಧಘಾತಿಕ್ಷಯಂ
ಗನುಲೇಪಕ್ರಿಯೆಯಂ ವಿನಿರ್ಮಿಸಿ ಬೞಿಕ್ಕಚ್ಛಾಂಬುವಿಂ ಮಾಡಿದಂ
ಜನನಾಥಂ ನೃಪನೀತಿಶಾಸ್ತ್ರನಿಪುಣಂ ಗಂಧೋದಕಸ್ನಾನಮಂ         ೫

ಕಂ || ಅಷ್ಟವಿಧಕರ್ಮರಿಪುವಿಂ
ಗಷ್ಟೋತ್ತರಶತಸಹಸ್ರಲಕ್ಷಣಗಾತ್ರಂ
ಗಷ್ಟವಿಧಾರ್ಚನೆ ನೆಗೞ್ದಿರ
ಲಷ್ಟಾಹ್ನಿಕಪೂಜೆಯಂ ನೃಪಂ ನಿರ್ಮಿಸಿದಂ      ೬

ನಿರ್ಮಿಸಿದನಂತರಂ ಘನ
ಘರ್ಮಚ್ಛೇದಕಮಿದೆಂದು ಗಂಧೋದಕಮಂ
ಧರ್ಮಪ್ರತಿಪಾದನ ಪಟು
ನಿರ್ಮಲಗುಣರತ್ನರಾಶಿ ಕೊಂಡುತ್ಸವದಿಂ       ೭

ಮ.ಸ್ರ || ಪರಮಶ್ರೀತೀರ್ಥನಾಥಸ್ನಪನಸಲಿಲದಿಂದೆನ್ನ ಗಾತ್ರಂ ಪವಿತ್ರೀ
ಕರಮಕ್ಕೆಂದೞ್ಕರಿಂದಂ ಜನಪತಿ ನಯನದ್ವಂದ್ವದೊಳ್ ವಕ್ತ್ರದೊಳ್ ಬಂ
ಧುರಚೂಡಾಪಟ್ಟದೊಳ್ ವಕ್ಷದೊಳವಯವದೊಳ್ ಕೂಡೆ ಗಂಧೋದಕಪ್ರೋ
ತ್ಕರಮಂ ಹರ್ಷಾಶ್ರು ಪೊಣ್ಮತ್ತಿರೆ ತಳಿದುಕೊಳುತ್ತಿರ್ದನಾನಂದಿದಿಂದಂ        ೮

ವ || ಅಂತನಂತಸಂತೋಷದಿಂ ಮುಕ್ತಿಕಾಂತಾಕಾಂತನ ಕಾಂತಚೈತ್ಯಾಲಯಮಂ ತ್ರಿಃಪ್ರದಕ್ಷಿಣಂಗೆಯ್ದು ತ್ರಿಲೋಕೈಕನಾಥಭಿಮುಖನಾಗಿ ಕರಕಮಳಮಂ ಮುಗಿದು

ಉ || ಶ್ರೀವಧುಗಿತ್ತುದಾತ್ತಪದಮಂ ವರಮುಕ್ತಿಗೆ ಕೊಟ್ಟು ವಸ್ತ್ರಭೂ
ಷಾವಳಿಯಂ ಸರಸ್ವತಿಗೆ ಸಾರ್ಚಿ ಪದಾರ್ಥಮನೊಲ್ದು ಕೂಡಿಯುಂ
ದೇವ ನಿರಸ್ತರಾಗನೆನಿಪೈ ಜಿನ ನಿನ್ನ ವಿರುದ್ಧಮಾರ್ಗಿಯೆಂ
ದಾವ ಸುಬೋಧರುಂ ಪೊಗೞ್ವರೇಕೆಯೊ ಚಿತ್ರಮಿದಿಂದ್ರವಂದಿತಾ   ೯

ಚಂ || ಜನಿಯಿಸೆ ನೀಂ ಪೊದೞ್ದೊಸಗೆಗಾಗಳೆ ಮಜ್ಜನಪೀಠಮಾಗೆ ಮ
ಜ್ಜನವಳನಾಗೆ ಮಜ್ಜನಪಯೋರಸದಾಯಕವಾಗೆ ಪೆಂಪುವೆ
ತ್ತನಿಮಿಷಶೈಲದೊಳ್ಪನಿಮಿಷಾಧಿಪನೊಳ್ಪನಿಮೇಷವತ್ಪಯೋ
ವನನಿಧಿಯೊಳ್ಪು ಪೇೞವೆ ನಿಜೋನ್ನತಿಯಂ ಧರೆಗಿಂದ್ರವಂದಿತಾ    ೧೦

ಒದವಿದ ಘೋರಸಂಸೃತಿಯ ಬಾಧೆಗೆ ತಲ್ಲಣದಿಂದಮನ್ಯತ
ತ್ವದ ಮಱೆವೊಕ್ಕ ಮೂಢಜನದಾಚರಣಂ ಪುಲಿಗಂಜಿ ಪುತ್ತ ನೇ
ಱಿದೊಡರವಾವುಕೊಂಡುದೆನೆ ಬೇವಸಮಂ ಬಿಡದೀವುದೊಲ್ಲೆ ನಾ
ನದನೆಳಸಲ್ಕೆ ರಕ್ಷಿಸು ಭವಚ್ಚರಣಂ ಶರಣಿಂದ್ರವಂದಿತಾ    ೧೧

ಉ || ಆರುಮಸತ್ಯದೊಳ್ ಕಡವಿನೊಳ್ ಕೊಲೆಯೊಳ್ ಧನಮೋಹದೊಳ್ ಪರ
ಸ್ತ್ರೀರತಿಯೊಳ್ ತೊಡಂಕದಿರವೆಂಬುದು ನಿನ್ನ ಮತಂ ಕುತತ್ವಸಂ
ಸ್ಕಾರಜನಕ್ಕೆ ದುಸ್ಸಹಮದಂತುಟೆ ಭಾವಿಸೆ ಪಿತ್ತದೋಷದು
ರ್ವಾರನ ಬಾಯ್ಗೆ ದುಗ್ಧವಿನಿದಪ್ಪುದೆ ಸೇವಿಪೊಡಿಂದ್ರವಂದಿತಾ     ೧೨

ರೋಗಿಗೆ ದೇವ ನಿಮ್ಮ ಚರಣಸ್ಮರಣಂ ಪರಮೌಷಧಂ ವಿಷಾ
ವೇಗಿಗೆ ದೇವ ನಿಮ್ಮ ಪದದಕ್ಕರಮಾಲೆ ವಿಷಾಪಹಾರಮು
ದ್ವೇಗಿಗೆ ದೇವ ನಿನ್ನಖಿಳರೂಪಗುಣಸ್ತುತಿ ಹರ್ಷಹೇತುವೆಂ
ದಾಗಳುಮೆನ್ನ ನಂಬುಗೆ ಮನಂಬುಗೆ ಭಾವಿಪೆನಿಂದ್ರವಂದಿತಾ         ೧೩

ಚಂ || ಮುಳಿಯದೆಯುಂ ಮನೋಭವನನಿಕ್ಕಿದೆ ಕೂರದೆಯುಂ ವಿನೇಯಮಂ
ಡಳಿಗಭಿವೃದ್ಧಿಯಂ ಕುಡುವೆ ರಾಗದೊಳೊಂದದೆಯುಂ ವಿಮುಕ್ತಿಕೋ
ಮಳೆಗೆಳಸಿರ್ಪೆ ಮೋಹವಶನಲ್ಲದೆಯುಂ ತ್ರಿಜಗತ್ಪತಿತ್ವದ
ಗ್ಗಳಿಕೆಯನಪ್ಪುಕೆಯ್ದೆ ಬಿಡೆ ನಿನ್ನೆಸಕಂ ಪೊಸತಿಂದ್ರವಂದಿತಾ          ೧೪

ಮುಳಿವೊಸೆವನ್ಯರೋಜೆ ನಿನಗಿಲ್ಲದೆಯುಂ ಹಗೆ ಹಾಱಿ ತೂಱುಗುಂ
ಕೆಳೆ ದಳವೇಱುಗುಂ ಬಗೆದು ಭಾವಿಸೆ ಧಾತ್ರಿಗೆ ಚಿತ್ರಮಲ್ತೆ ತಿಂ
ಗಳ ಬೆಳಗಂತೆ ರಂಜಿಸೆ ರಜೋಧಿಕಮಂಬುರುಹಂ ಸುರುಳ್ಗುಮು
ತ್ಪಳಮಲರ್ಗುಂ ನಿಸರ್ಗಮಿದು ನಿನ್ನ ಮಹೋನ್ನತಿಗಿಂದ್ರವಂದಿತಾ ೧೫

ಸದಮಳಬೋಧಭಾನುವಿನ ಬಂಧುರಬಂಧು ಸುಧರ್ಮಸೂತ್ರಕಾಂ
ಡದ ಕಣಿ ಪುಣ್ಯಲಕ್ಷ್ಮಿಯ ತವರ್ಮನೆ ಭವ್ಯಜನಾಂತರಂಗಭೃಂ
ಗದ ನೆಲೆ ತತ್ವವಾಸನೆಯ ಗೊತ್ತು ದಯಾರಸದಾಗರಂ ಭವ
ತ್ಪದಶಪತ್ರಮಾಱಿಸುಗೆ ಮದ್ಭವತಾಪಮನಿಂದ್ರವಂದಿತಾ           ೧೬

ವ || ಎಂದನೇಕಸ್ತುತಿಗಳಿಂ ತ್ರಿಭುವನಸ್ತುತ್ಯನಂ ಸ್ತುತಿಯಿಸಿ ಭಕ್ತಿಯಿಂದೆಱಗಿ ಪೊಡೆವಟ್ಟು ಸಿದ್ಧರೇಷೆಯಂ ಕೊಂಡು ಬೀೞ್ಕೊಂಡನಂತರಂ

ಕಂ || ಸಕಳಪ್ರಾಣಿದಯಾಪರ
ರಕಳಂಕರನಂತಬೋಧರೆನಿಸಿದ ದುರಿತ
ಕ್ರಕಚಮುನಿವರಗೆ ಬುಧಜನ
ನಿಕರಸ್ತುತನೆಱಗಿ ಭಕ್ತಿಯಿಂ ವಂದಿಸಿದಂ            ೧೭

ವ || ಅನಂತರಂ

ಮ.ಸ್ರ || ಪರಮಾಶೀರ್ವಾದನಾದಂ ಜನಿಯಿಸೆ ಪರಮೋತ್ಸಾಹಮಾಂಗಲ್ಯ ತೂರ್ಯೋ
ತ್ಕರ ನಾದಂ ಪೊಣ್ಮಿ ರಾರಾಜಿಸೆ ಸುರಗಜಮಂ ಲೀಲೆಯಿಂ ಪೋಲ್ವುದೆಂಬಂ
ತಿರೆ ಪೆಂಪಂ ತಾಳ್ದ ಮತ್ತದ್ವಿರದಮನಧಿಕಪ್ರೀತಿಯಿಂದೇಱಿ ಧಾತ್ರೀ
ಶ್ವರಮಸ್ತನ್ಯಸ್ತಪಾದಂ ತಳರ್ದಪನರಸಂ ರಾಜವಿದ್ಯಾಲಲಾಮಂ    ೧೮

ಲಳಿತಶ್ವೇತಾತಪತ್ರಂ ಚಮರಸಮಿತಿ ಕೇತುವ್ರಜಂ ತೂರ್ಯಮಾಲಾ
ವಳಿ ಹಸ್ತಿಸ್ತೋಮವುಷ್ಟ್ರಪ್ರತತಿ ತುರಗವೃಂದಂ ಪದಾತ್ಯಾಳಿ ಸನ್ಮಂ
ಗಳಭೇರೀಸಂಕುಲಂ ರಾಜಿಸೆ ಚಟುಲರಿಪುವ್ರಾತಚೈತ್ರಧ್ವಜಂ ನಿ
ಶ್ಚಳತೇಜಂ ಬಂದು ಪೊಕ್ಕಂ ಕಟಕಮನವನೀನಾಥನಾನಂದದಿಂದಂ  ೧೯

ವ || ಅಂತು ಪೊಕ್ಕು ನಿಜರಾಜಮಂದಿರದ ಬಾಗಿಲ್ವಾಡದೊಳ್ ಬಂದು ಮದಾಂಧರಬಂಧುರ ಸಿಂಧುರಸ್ಕಂಧದಿಂ ವಸುಂಧರಾಧಿಪನಿೞಿದು

ಮ || ಪ್ರಣತಕ್ಷತ್ರಿಯಪುತ್ರರಂ ಸಚಿವರಂ ಸಾಮಂತರಂ ಶೌರ್ಯಭೂ
ಷಣರಂ ಸಾಹಸತುಂಗರಂ ಸುಭಟರಂ ತಾಂಬೂಲದಾನಾದಿಯಿಂ
ಗುಣತುಂಗಕ್ಷಿತಿಪಾಳನೂರ್ಜಿತಯಶಂ ಸಂತುಷ್ಟರಂ ಮಾಡಿ ಧಾ
ರಿಣಿ ಸಂವರ್ಣಿಸಿ ರಾಗದಿಂ ಕಳಿಪಿದಂ ಶ್ರೀರಾಜಕಂಠೀರವಂ  ೨೦

ವ || ತದನಂತರಂ ಚಿತ್ರಭಾನುದತ್ತಹಸ್ತಾವಳಂಬನಾಸ್ತಾನಮಂಟಪಕ್ಕೆ ಬಿಜಯಂ ಗೆಯ್ದು ಸಿಂಹಾಸನಾಸೀನನಾಗಿ ಜಿನರಾಜಪೂಜಾಸಮಾಜಸಂಜಾತ ಹಷೋತ್ಕರಚಿತ್ತ ನಿರ್ಪುದುಮಾ ಸಮಯದೊಳ್

ಮ || ಘನಬಾಹಾಬಲದಿಂದಿದಿರ್ಚಿದ ಸುಹೃದ್ಭೂಪಾಳರಂ ಘಣ್ಮುಘ
ಣ್ಮೆನೆ ಕೊಂದಿಕ್ಕಿ ಸಮಸ್ತ ರಾಜ್ಯಪದಮಂ ವಿಕ್ರಾಂತದಿಂ ತಂದು ನ
ಚ್ಚಿನ ಸೇನಾಪತಿ ಕೀರ್ತಿವರ್ಮನಮಲಶ್ರೀಕೀರ್ತಿಗಾಣ್ಮಂ ಜಗ
ಜ್ಜನರಕ್ಷಾಮಣಿಗಾಗಳೋಲಗಿಸಿದಂ ದಂಡೇಶದಿಕ್ಕುಂಜರಂ            ೨೧

ವ || ಅಂತೋಲಗಿಸಿ ನಿಜೋಚಿತಾಸನದೊಳ್ ಕುಳ್ಳಿರ್ಪುದುಂ ವಿಜಯಸೇನನೆಂಬ ಹಿತಪುರೋಹಿತನಿಂತೆಂದಂ

ಉ || ದೇವ ಭವತ್ಪ್ರತಾಪನಿತಾಸ್ತ್ರದಿನುದ್ಧತ ವೀರವೈರಿ ಪೃ
ಥ್ವೀವರರಂ ಕಱುತ್ತಿಱಿದು ಪಂದಲೆಯಂ ಗಗನಕ್ಕಡುರ್ತು ಕೊಂ
ಡೋವದೆ ಸೆಂಡನಾಡಿ ಜಯಮಂ ಗೆಡೆಗೊಂಡು ಸಮಸ್ತವಸ್ತುಸ
ದ್ಭಾವಮನೀೞ್ದುಕೊಂಡು ಮೆಱೆದಂ ನಿಜಶೌರ್ಯಮನಾಜಿರಂಗದೊಳ್       ೨೨

ವ || ಎಂದು ಬಿನ್ನಪಂಗೆಯ್ದು ಪುರೋಹಿತನ ವಚನರಚನಾಪ್ರಪಂಚಮನವಧರಿಸಿ ಸೇನಾಧಿನಾಥ ಕೀರ್ತಿವರ್ಮನಂ ಸಮಸ್ತಸಾರವಸ್ತುಗಳಿಂ ತಣಿಪಿ ಬೀಡಿಂಗೆ ಕಳಿಪಿ

ಮ.ಸ್ರ || ಘನಗಂಭೀರಸ್ವನಂ ಮಂಗಳಪಟಹರವಂ ಗಾಯಿನೀಗೇಯಮಂದ್ರ
ಧ್ವನಿ ಜೈತ್ರೋತ್ಸಾಹಭೇರೀವಿರುತಿ ವಿವಿಧತೂರ್ಯೋತ್ಕರಧ್ಯಾನಮುರ್ವೀ
ಜನತಾನಂದ ಪ್ರಘೋಷಂ ನೆಗೞ್ದೆಸೆಯೆ ಜಯಶ್ರೀವಧೂವಲ್ಲಭಂ ಭೂ
ಜನನೇತ್ರೇಂದೀವರೋನ್ಮೀಳನಕರ ವಿಳಸಚ್ಚಾರುಚಂದ್ರಂ ನರೇಂದ್ರಂ           ೨೩

ಪ್ರತಿಪಕ್ಷೋರ್ವೀಶವಂಶಕ್ಷಿತಿರುಹತತಿಯಂ ಕಿೞ್ತು ಬೇರಿಂದೆ ಭೀತ್ಯಾ
ನತ ಧಾತ್ರೀನಾಥರಂ ಮನ್ನಿಸಿ ನಿಜನಿಜರಾಜ್ಯಸ್ಥರಂ ಮಾಡಿ ನಿತ್ಯೋ
ರ್ಜಿತತೇಜಂ ಧಾತ್ರಿ ಜೀಯೆಂಬಿನಮುದಿತ ಯಶಸ್ತಂಭಮಂ ವಂದಿವೃಂದ
ಸ್ತುತನತ್ಯಾನಂದದಿಂದಂ ನಿಱಿಸಿದನಧಿಕಂ ರಾಜವಿದ್ಯಾಲಲಾಮಂ   ೨೪

ವ || ಅಂತು ಶುಂಭಜ್ವಯಸ್ತಂಭಮನುತ್ತಂಭಿತಂ ಮಾಡಿ ಮತ್ತಮೊಂದು ದೆವಸಂ

ಉ || ಸಂತತಮೋಲಗಿಪ್ಪಖಿಳ ಮಂತ್ರಿ ಪುರೋಹಿತ ದಂಡನಾಥ ಸಾ
ಮಂತನಿಯೋಗಿವರ್ಗ ಬುಧ ಗಾಯಕ ವಾದಕರೊಪ್ಪೆ ಸುತ್ತಿ ಶು
ದ್ಧಾಂತವಿಳಾಸಿನೀಜನಸಮೇತನಿಳಾಪತಿ ರಂಜಿಸಿರ್ದನ
ತ್ಯಂತವಿಚಿತ್ರಶೋಭೆವಡೆದೋಲಗಶಾಲೆಯೊಳಿಂದ್ರಲೀಲೆಯಿಂ        ೨೫

ಕಂ || ವಿಕ್ರಮಮತ್ಸರದಿಂದುರಿ
ದಾಕ್ರಮಿಸಿದೊಡಗಿದು ಸುಗಿದು ಬಂದಡಿಮೊದಲೊಳ್
ವಕ್ರತೆಗೆಟ್ಟಿರ್ದಿಭರಿಪು
ಚಕ್ರಮಿದೆನಿಸಿದುದು ನೃಪನ ಕೇಸರಿಪೀಠಂ        ೨೬

ಇಂಗಡಲೊಳಮರ್ದುವು ನೊರೆ
ದೊಂಗಲ್ ಮಂದರಮನೆನೆ ಮನಂಗೊಂಡುವು ತ
ನ್ವಂಗಿಯರಿಕ್ಕುವ ಚಮರೀ
ಜಂಗಳ್ ಮನುಜೇಂದ್ರಮಂದರಂಗೋಲಗದೊಳ್           ೨೭

ಪಾಣಿತಳಪ್ರಭೆ ಪಸರಿಸೆ
ಶೋಣಿತಚಮರೀಜಮೆನಿಸಿದುವು ಸಿತಚಮರ
ಶ್ರೇಣಿಗಳದಂತೆ ಪೊರ್ದಿದೊ
ಡೇಣಾಕ್ಷಿಯರಂ ಸರಾಗಮಾಗದುದುಂಟೇ        ೨೮

ವ || ಮತ್ತಂ

ಮ.ಸ್ರ || ನಳಿದೋಳ್ಗಳ್ ಶಾಖೆಯಂ ಕೆಂದಳವೆಳದಳಿರಂ ಭ್ರೂಲತಾಭಂಗಿಭಂಗಂ
ಗಳನಾ ಲೋಳಾಕ್ಷಿಗಳ್ ನೀಳ್ದಲರ್ಗಳನಳಕಂ ತುಂಬಿವಿಂಡಂ ಕುಚಂಗಳ್
ಫಲಮಂ ಸುಯ್ಗಂಪು ಕಂಪಂ ಮಿಗೆ ಸೊಗಯಿಸಿತಂಗೋದ್ಭವ ಶ್ರೀಜಗನ್ಮಂ
ಗಳ ಶೃಂಗಾರಾಬ್ಧಿವೇಳಾವನಲತೆಯೆನೆ ಶುದ್ಧಾಂತಕಾಂತಾಕದಂಬಂ            ೨೯

ಉ || ತೋಳಮೊದಲ್ ಮೊದಲ್ಗಿಡಿಸೆ ಸೋರ್ಮುಡಿ ಸುತ್ತೆ ಕುಚೋರುಮೂಳಮು
ನ್ಮೀಳಿಸೆ ನಾಭಿ ನಾಣ್ಗಿಡಿಸೆ ಬಾಯ್ದೆರೆ ಬಲ್ಸೆಱೆಗೆಯ್ಯೆ ಚೆಲ್ಲಗಣ್
ಚಾಳಿಸೆ ಭಂಗಿ ಭಂಗಿಸೆ ಜನಂಗಳ ಚಿತ್ತಮನಿರ್ದರೊಪ್ಪೆ ಭೂ
ಪಾಳನ ಪಕ್ಕದೊಳ್ ಪಲರುಮೋಲಗಕಾರ್ತಿಯರಿಚ್ಚೆಕಾರ್ತಿಯರ್   ೩೦

ಕಂ || ತರುಣಿಯರಮುಡಿಯ ಪುಡಿಗ
ತ್ತುರಿ ಸೂಡಿದಮಾಲೆ ಘಸೃಣಲೇಪಂ ನಱುಸುಯ್
ಪರೆದ ಹಿಮರಜಮವಿಂತೈ
ವೆರಕೆಯ ಕಂಪಿಂ ಮದಾಳಿಗಿತ್ತುವು ಮದಮಂ    ೩೧

ರಾಣೀವಾಸದ ತುಡುಗೆಯ
ಮಾಣಿಕದೆಳವಿಸಿಲುಮೆಸೆವ ಧವಳಕಟಾಕ್ಷ
ಶ್ರೇಣಿಯ ಬೆಳ್ದಿಂಗಳುಮ
ಕ್ಷೂಣಮವೊಂದೊಂದನೊತ್ತಲಾಱವೆ ಸಭೆಯೊಳ್          ೩೨

ಚಂ || ಅಣಕಮಿದೇನೊ ಪೀಲಿದೞೆ ರನ್ನದ ಸತ್ತಿಗೆ ತಳ್ತುವೀ ಸಭಾಂ
ಗಣದೊಳೆನಲ್ಕೆ ಶೇಖರದ ಮಾಳೆಗೆ ಸಾರ್ವಳಿಮಾಲೆ ಮೇಲೆ ಸಂ
ದಣಿಸಿದ ಲೀಲೆಯಂ ಮುಕುಟದುನ್ಮುಖರತ್ನಮರೀಚಿಮಾಲೆಗಳ್
ಪೆಣೆದಡರ್ದೇಱೆ ವಿಭ್ರಮಮುಮೊಪ್ಪಿತು ಸುತ್ತಿದ ರಾಜಲೋಕದೊಳ್        ೩೩

ಮ || ನೆಱೆ ಕರ್ಣಾಮೃತವೃಷ್ಟಿಯಪ್ಪ ರಸರಾಗೋಪೇತಮಂ ಗೀತಮಂ
ಮೆಱೆಯಲ್ಕಂಗಜವಾರ್ಧಿಘೋಷಮೆನಿಪುರ್ವೀಹೃದ್ಯಮಂ ವಾದ್ಯಮಂ
ಮೆಱೆಯಲ್ಕಾಂಗಿಕ ವಾಚಿಕಾಭಿನಯ ಭಾವಸ್ತುತ್ಯಮಂ ನೃತ್ಯಮಂ
ಮೆಱೆಯಲ್ಕುರ್ದುದು ಬಂದು ಭಾರತಿಕವೃಂದಂ ಭೂಪನಾಸ್ಥಾನದೊಳ್     ೩೪

ಉ || ಬಾರಿಪ ನಿನ್ನ ತರ್ಜನದಿನೀಜನದೊಂದುಲಿ ಮಾಣ್ಗೆ ಮಾಣೆವಾ
ವಾರೆಮಗಿಲ್ಲ ವಾರಕರೆನುತ್ತುಮೆಮಾರ್ಜಡಿವಂದದಿಂ ಪ್ರತೀ
ಹಾರಿಯರಂ ಪೊದೞ್ದುವೆಳವೆಂಡಿರ ನೂಪುರದಿಂಚರಂ ಮುಖಾಂ
ಭೋರುಹಭೃಂಗನಾದಮುಡೆನೂಲ ಕಳಧ್ವನಿ ಕಂಕಣಸ್ವನಂ          ೩೫

ವ || ಅಂತೋಲಗಂಗೊಟ್ಟು ಸೌಂದರ್ಯಕಂದರ್ಪನಿರ್ಪುದುಮನಂತಮಹಿಮಾವ ಲಂಬಿಯಾಗಿ

ಮ || ಕಮನೀಯಂ ಸಭೆ ಶೋಭಿಸಿತ್ತು ರಮಣೀಲಾವಣ್ಯಲಕ್ಷ್ಮೀಮಯಂ
ಸಮದಾಪಾಂಗಮಯಂ ವಿಭೂಷಣಮಯಂ ಜ್ಯೋತಿರ್ಮಯಂ ಚಾರುಗಂ
ಧಮಯಂ ಕಂಕಣಕಿಂಕಿಣೀರವಮಯಂ ಕರ್ಪೂರಧೂಳೀಮಯಂ
ಭ್ರಮರೀಗೇಯಮಯಂ ಸ್ಮರೋತ್ಸವಮಯಂ ತೇಜೋಮಯಂ ಶ್ರೀಮಯಂ            ೩೬

ವ || ಆ ಪ್ರಸ್ತಾವದೊಳ್ ವಿಚಿತ್ರವೇತ್ರಹಸ್ತನುಮಾರ್ಯವೇಷಪ್ರಶಸ್ತನುಮಪ್ಪ ಪ್ರತೀಹಾರನೊರ್ವನುರ್ವೀಶ್ವರಂಗೆ ಪೊಡೆವಟ್ಟು ಕುಟ್ಮಳಿತಕರಸರೋಜನಾಗಿ

ಮ || ಧರಣೀವಲ್ಲಭ ಬಿನ್ನಪಂ ಕುರುಕುಳಪ್ರೋದ್ಭಾಸಿ ಭದ್ರಾವತೀ
ಪುರನಾಥಂ ಭವದೀಯತಾಸಹಜಂ ಶ್ರೀಚಂದ್ರಿಕಾರಾಗಸಾ
ಗರಚಂದ್ರಂ ನೃಪನೀತಿಶಾಲಿ ಜಯವರ್ಮಂ ಸಾರಸದ್ಧರ್ಮನಾ
ದರದಿಂದಟ್ಟಿನ ರಾಯಭಾರಿ ದಮನಂ ಬಂದಿರ್ದಪಂ ಬಾಗಿಲೊಳ್   ೩೭

ವ || ಎಂದು ಬಿನ್ನಪಂಗೆಯ್ದು ಮಹೀಶಲಬ್ಧಾದೇಶನಾಗಿ ಪೋಗಿ ತಂದು ಕಾಣಿಸುವುದುಂ ದಮನನತಿ ಸುಮನಸನಾಸ್ಥಾನಕುಟ್ಟಿಮ ಪ್ರಘಟ್ಟಿತೋತ್ತಮಾಂಗನಾಗಿ ಪೊಡೆವಟ್ಟು ನಿಜೋಚಿತಾಸನದೊಳಿರೆ ನರೇಂದ್ರನಾ ನರೇಂದ್ರನಟ್ಟಿದ ದೂತನನತಿಪ್ರಸಾದದೃಷ್ಟಿಯಿಂ ನೋಡಿ

ಚಂ || ಕುಶಳಮೆ ಮಾತುಳಂಗೆ ಜಯವರ್ಮನೃಪಂಗೆ ಪರಿಗ್ರಹಪ್ರಜಾ
ಕುಶಲವಿಧಾಯಿಗೆಂದು ಬೆಸಗೊಂಡೊಡವಂ ಪ್ರಭುಗೆಂದನಿನ್ನೆಗಂ
ಕುಶಲಮೆ ದೇವ ನಿಮ್ಮ ಬಲವರ್ಗದಿನೀಗಳದೊಂದು ಕಾರ್ಯಕ
ರ್ಕಶಭರಮಾಗೆ ಬೇಗಮಱಿಪಲ್ ನಿಜಸನ್ನಿಧಿಗೆನ್ನನಟ್ಟಿದಂ          ೩೮

ವ || ಅದಾವುದೆನೆ ದೇವ ಭವದೀಯಜನಕನನುಜಾತೆಯಪ್ಪ ಸೌಂದರ್ಯಶೀಲಗುಣ ರುಂದ್ರಚಂದ್ರಿಕಾದೇವಿಗಂ ಸಕಲರಾಜಗುಣಭದ್ರ (ನಪ್ಪ) ಭದ್ರಾವತೀಪುರನಾಥನಪ್ಪ ಜಯವರ್ಮ ನೃಪತಿಗಂ ಪುಟ್ಟಿ

ಕಂ || ಅಮಳಕುಳವಾಹಿನೀಸತಿ
ಗೆ ಮಹಾಬ್ಧಿಗೆ ಪುಟ್ಟಿದಬ್ಜಾವಾಸಿನಿಯ ವಿಳಾ
ಸಮನಾಳ್ದು ನೆಗೞ್ದಳತಿವಿ
ಭ್ರಮವತಿ ಭಾನುಮತಿಯೆಂಬ ಕನ್ಯಾರತ್ನಂ       ೩೯

ಮ || ನಿನಗೇವೇೞ್ವೆನಭೂತಪೂರ್ವಮನಿಳಾಲಂಕಾರಮಂ ನೀರಜಾ
ಸನನಿಷ್ಟಾದಿತ ವಸ್ತುಸಾರಮನನಂಗಪ್ರಾಜ್ಯರಾಜ್ಯಾಭಿವ
ರ್ಧನಮಂ ಮಂಗಳಲಕ್ಷಣೈಕನಿಧಿಯಂ ಸಂಸಾರಸಾಫಲ್ಯಸಾ
ಧನಮಂ ಲೋಚನಲೋಚನೀಯರುಚಿಯಂ ತತ್ಕನ್ಯಕಾರೂಪಮಂ  ೪೦

ಕಂ || ಲಪನೇಂದುರುಚಿಗೆ ಮಱೆಗೆ
ಯ್ದುಪಕರಿಸಿದ ಘನಪಯೋಧರಂಗಳನೊಸೆದೀ
ಕ್ಷಿಪ ಪದಪಯೋಜಲಕ್ಷ್ಮಿಯ
ಚಪಳಾಕ್ಷಿಗಳೆನಿಪುವವಳ ಚರಣನಖಂಗಳ್         ೪೧

ಆ ಕನ್ನಿಕೆಯಂ ಬೇಡಲ್
ಸಾಕಾಂಕ್ಷಂ ಕನಕಪುರದ ಗಜಕರ್ಣಂ ಮ
ದ್ಭೂಕಾಂತನಲ್ಲಿಗಟ್ಟೆ ವಿ
ವೇಕಿ ನಿಸೃಷ್ಟಾರ್ಥನೆನಿಪ ದೂತಂ ಖ್ಯಾತಂ       ೪೨

ಬಂದು ನೃಪದರ್ಶನಂ ತನ
ಗಂದಾಗಿರೆ ತಂದ ಪಾಗುಡಂಗಳನಿಂಬಿಂ
ಮುಂದಿಟ್ಟು ವಿನಯನತವಾ
ನಂದಮನಾದರದೊಳೆಯ್ದ ಬೞಿಕಂ ನುಡಿದಂ   ೪೩

ಮ.ಸ್ರ || ಹರಿವಂಶೋತ್ತಂಸಹಂಸಂ ಕನಕಪುರವರಾಧೀಶನುದ್ದಾಮತೇಜಂ
ಪರಭೂಪಶ್ರೀಸಮಾಕರ್ಷಣಪಟು ಗಜಕರ್ಣಂ ನಯಾಕೀರ್ಣನೊಲ್ದೆ
ಮ್ಮರಸಂ ತತ್ಕನ್ಯೆಯಂ ಭಾನುಮತಿಯನೆರೆದಿಂದಟ್ಟಿದಂ ಕೊಟ್ಟು ಸಯ್ಪಂ
ಪರಮ ಪ್ರೇಮಾನುಬಂಧಕ್ಕೆಡೆಗುಡುವುದು ನೀಂ ದೇವ ಸೌಜನ್ಯಶಾಳೀ         ೪೪

ಕಂ || ಮಾದೇವಿಪಟ್ಟಮಂ ನೃಪ
ನಾದರದಿಂ ಕುಡೆ ನಿಜಾತ್ಮಜತೆಗೆ ನೆಗೞ್ದೆ
ರ್ದಾ ದಿವ್ಯಮಾಲೆ ಶೇಖರ
ಮಾದಪ್ಪುದನೇಕನೃಪರ್ಗದೇಂ ಕೇವಳಮೇ       ೪೫

ಆ ದೊರೆಯ ವಲ್ಲಭಂ ತನ
ಗಾದೊಡೆ ನಿಜಕನ್ನೆಗನ್ನೆಯೆಂಬಿನಿತಲ್ಲೇ
ನಾ ದೊರೆಯಳಿಯಂ ನೃಪ ನಿನ
ಗಾದೊಡೆ ಭುವನದೊಳಸಾಧ್ಯಮಾವುದುಮುಂಟೇ         ೪೬

ಎಱಗುಗುಮೆಯ್ಮರಸಂ ಮನ
ದೆಱಕದಿನೀ ಭಾನುಮತಿಗಮೆಂಬಿನಿತೇಂ ನಿನ
ಗೆಱಗಿಸುಗುಮೆಱಗದಹಿತರ
ನೆಱಗಿಸದೊಡೆಱಗಿಸುಗುಮಮರಿಯರ್ಕಳನವರ್ಗಂ           ೪೭

ಮ || ಅನತೋರ್ವೀಶರ ದಂತಿದಂತವಳಯಾಳಂಕಾರದಿಂ ವೀರವೈ
ರಿನೃಪಾಲದ್ವಿಪಮೌಕ್ತಿಕಾವಳಿಗಳಿಂ ಕೆಯ್ಗೆಯ್ಸುಗುಂ ನಿನ್ನ ನಂ
ದನೆಯಂ ಪೇೞ್ ಪೆಱರಂತೆ ಮಿಕ್ಕ ಬಳೆಯಿಂದಂ ಮಿಕ್ಕ ಮುತ್ತಿಂದವಂ
ಗನೆಯರ್ಗಾಹವಧೀರನಾ ನೃಪವರಂ ನೇಪಥ್ಯಮಂ ಮಾೞ್ಪನೇ      ೪೮

ವ || ಎಂದು ಬಿನ್ನಪಂಗೆಯ್ದು ದೂತನ ನಿಜೇಶವಿಕ್ರಮಪ್ರಕಾಶಕರಮಪ್ಪ ಬಂಧುಕೃತ್ಯ ಸಂಬಂಧ ಬಂಧರಾಳಾಪಂಗಳಂ ಕೇಳ್ದು ಪರಿತೋಷದರಹಸಿತಲಸಿತವದನಾರವಿಂದನಾಗಿ

ಕಂ || ತನ್ನನ್ನನ ಗುಣವೃದ್ಧನ
ಸನ್ನುತನ ಕುಲೀನನೊಂದು ಸೌಹೃದಮಿೞಿದೆಂ
ಬನ್ನನೆ ಕನ್ನೆಗೆ ಯೋಗ್ಯನೆ
ನಿನ್ನೆಂದುದೆ ಯೋಗ್ಯಮಲ್ಲದಿದು ಕರಣೀಯಂ ೪೯

ವ || ಇಂತೆಂದು ಭಂಗಿಭಾಷಿತದಿನಾತನಂ ಪ್ರೀತನಂಮಾಡಿ ಬೀಡಿಂಗೆ ಕಳಿಪಿ ವಿಸರ್ಜಿತಾಸ್ಥಾನದಿಂದಮೆೞ್ದು

ಕಂ || ಕೃತಮತಿಗಳನ್ವಯಾಗತ
ರತಿಮೋಹಿತರಖಿಳ ನೀತಿಶಾಸ್ತ್ರಕಳಾಪಂ
ಡಿತರೆನಿಪ ಸಚಿವರೊಡವರೆ
ಪತಿ ಮಂತ್ರಾಲಯಕೆ ಬಂದು ಮಂತಣವಿರ್ದಂ    ೫೦