ವ || ಇರ್ದು ಶಕ್ರಗುರು ಶುಕ್ರಕಾಮಂದಕಾದಿ ನಯವೃದ್ಧರಿಂ ನಿಬದ್ಧಮಾದ ನೀತಿಶಾಸ್ತ್ರ ಪಟುಗಳೊಳಾಳೋಚನಂಗೆಯ್ದಲ್ಲಿ

ಕಂ || ಕನಕಪುರಸ್ಥನ ಹರಿವಂ
ಶನ ಗಜಕರ್ಣನ ನಿಸರ್ಗದುನ್ಮತ್ತತೆಯಾ
ರ್ಪಿನ ವಿಕೃತಿ ತರಳಭಾವಂ
ಮನದೊಳಿರಲ್ಕೇವನುಱನೆ ಕೊಳುಕೊಡೆಗೆ ನೃಪಂ           ೫೧

ವ || ಅಂತುಱದೆ

ಚಂ || ನಿನಗನುರೂಪೆಯೆಂಬುದನೆ ಕಂಡೊಡೆಯಂ ವಧುಗೆಂತುಮೆಂಬುದುಂ
ನೆನೆದು ಕುಮಾರಿ ಭಾನುಮತಿಯಂ ಕುಡಲೊಲ್ಲದನಾದನಾಜಡಾ
ತ್ಮನುಚಿತಮಲ್ತು ಮನ್ಮಥನಿರಲ್ ರತಿ ವಿಷ್ಣುವಿರಲ್ ಸರೋಜವಾ
ಸಿನಿ ದಿವಿಜಾಧಿನಾಯಕನಿರಲ್ ಶಚಿ ಪೇೞ್ ಪೆಱರ್ಗೊಲ್ದು ಸಾರ್ಗುಮೇ       ೫೨

ವ || ಅಂತು ಮಂತ್ರಿಗಳ್ವೆರಸು ನಿರ್ನಿಕ್ತಕಾರ್ಯನಾಗಿ ಮಱುದಿವಸಮವಸರಂಗೊಟ್ಟು ಗಜಕರ್ಣದೂತನ ಮುಖಾವಲೋಕನಂ ಮಾಡಿ

ಕಂ || ಶ್ರೀಪತಿ ಜನಪತಿಮದ್ಭಗಿ
ನೀಪುತ್ರಂ ಪುಂಡರೀಕಿಣೀಶ್ವರನಖಿಲ
ದ್ವೀಪಾಂತವರ್ತಿಕೀರ್ತಿ ಮ
ಹಾಪದ್ಮಂ ಭಾನುಮತಿಗೆ ವರನೇತೆಱದಿಂ         ೫೩

ವ || ಅದಱಿಂದಮಲಭ್ಯಮಾನಮಪ್ಪಕನ್ಯಕಾವೃತ್ತಕಂ ಮಾಣ್ಗೆ ಮತ್ತ ಮೊಂದುಪಕ್ಷಮುಂಟದಾವುದೆಂದೊಡೆ

ಚಂ || ಬಳೆವನುರಾಗಮಂ ಬಯಸಿ ಕೊಳ್ಕೊಡೆಗಟ್ಟಿದ ತನ್ನ ಮಾತ ನಾ
ಮಿಳಿಪುದು ಪೆರ್ಮೆಯಲ್ಲದೆರ್ದೆವತ್ತುಗೆತೆತ್ತುಗೆವೆತ್ತ ಮಕ್ಕಳೊಳ್
ಗೆಳೆಯಳನಾಕೆಯಂ ಕಿಱಿಯಳಂ ಮದಲೇಖೆಯನುನ್ಮಯೂಖೆಯಂ
ವಿಳಸಿತ ಕಾಮಕಲ್ಪತರುಶಾಖೆಯನಾ ವಿಭುಗೀವೆವೞ್ಕಱಿಂ           ೫೪

ವ || ಎಂದು ನಿಜಪುತ್ರಿಯಂ ಧಾತ್ರೀತನೂಜೆಯಪ್ಪ ಮದಲೇಖೆಯಂ ತೋಱಿ

ಕಂ || ಈಕೆ ಮದಲೇಖೆ ತಾನವ
ಳೋಕಿಸೆ ಗಜಕರ್ನನಿದಱಿನೀಯನುಬಂಧಂ
ಲೋಕದೊಳನುಕ್ತಸಿದ್ಧಮ
ದೇಕೆಡೆಗಟ್ಟಲ್ತು ತಣಿಪುಗಾಪ್ತಾಳಿಗಳಂ            ೫೫

ವ || ಎಂಬುದುಂ ದೂತಂ ವೀತಾಕೂತನಾಗಿ ಮನಮೊಲ್ದು

ಕಂ || ದೇವಭವತ್ಪಟ್ಟಮಹಾ
ದೇವಿಯ ಸುತೆ ಭಾನುಮತಿಯಧೀಶನ ಹೃದಯೇಂ
ದೀವರಮನಲರ್ಚುಗುಮಿವ
ಳೇವಳೊ ನೀರಡಸಿದಂಗೆ ತುಪ್ಪಂ ಮರ್ದೇ        ೫೬

ಚಂ || ಲಳಿತವಿಳಾಸವಿಭ್ರಮಕಳಾವತಿಯರ್ ತನಗಿಲ್ಲದೆಮ್ಮ ಭೂ
ತಳಪತಿಬೇಡಿಯಟ್ಟಿದನೆ ಕೂಸನನೇಕನೃಪಾಲರಂ ಭುಜಾ
ಬಳದಿನದಿರ್ಪಿ ತತ್ಕುಲಧನಂ ಬೆರಸೀೞ್ಕುಳಿಗೊಂಡ ಕನ್ಯಕಾ
ಕುಳದೊಳಗಾರ ಪೋಲ್ವೆಯವಳೀಕೆಯನೇಕೆಯೊ ಪಾಟಿದೋಱುವಿರ್          ೫೭

ಕಂ || ಮತ್ತಿನ ಬಿಱುನುಡಿಗಳ ಹುಸಿ
ಸುತ್ತಿನೊಳೇನವಳನೀವೊಡೀವುದು ಕುಡೆವೆಂ
ಬುತ್ತರಮನೆ ಕುಡುವುದು ಮೇ
ಣುತ್ತರದೊಳ್ ಕಾಣಲಕ್ಕುಮಲ್ಲಿಯ ಫಳಮಂ ೫೮

ಮ || ಇದನಿನ್ನೊಂದನೆ ನಂಬು ಕನ್ನಿಕೆಯನೆನ್ನಾಳ್ದಂಗೆ ನೀನೀಯಲೊ
ಲ್ಲದೆ ಪೇೞ್ದೈ ನೃಪ ನೀಂ ಕುಮಂತ್ರಿಗಳ ಮಾತಂ ಕೇಳ್ದು ಬೇಳಾಗಿ ನಾ
ಳೆ ದುರಂತಾಂತಕಕೋಪನೆತ್ತಿ ಗಜಕರ್ಣಂ ಬಂದೊಡಾಂತಿಲ್ಲಿದ
ರ್ಪದಿನಡ್ಡೈಸುವ ಕೆಯ್ದುಗೆಯ್ವ ಕಡುಕೆಯ್ದೊಟ್ಟಯ್ಯ ಕಟ್ಟಾಳ್ಗಳಾರ್      ೬೦

ಕಂ || ಇನ್ನೊಲ್ದ ಕನ್ನೆಯೊರ್ವಳ
ನೆನ್ನಾಳ್ದಂ ಕೊಳ್ವನಲ್ತು ನಿನ್ನೀ ಪೊೞಲಂ
ನಿನ್ನೀ ರಾಜ್ಯದ ಸಿರಿಯಂ
ನಿನ್ನೀ ಕುಲಧನಮನೊಡನೆ ಬೞಿವೞಿಗೊಳ್ವಂ ೬೧

ವ || ಎಂದತಿಕ್ರಮಿಸಿ ವಿಕ್ರಮದಿನಡರೆ ನುಡಿದ ದೂತನ ದುರುಕ್ತಿಗೆ ಮಹೀಶ ನೀಷದುದ್ಗತ ಭೃಕುಟಿಯುಂ ಕಿಂಚಿದಾರಕ್ತಮುಕ್ತನೇತ್ರನುಂ ಸ್ವಲ್ಪನಿಷ್ಪಂದಿತಾಧರನುಮಾಗಿ ನುಡಿಯಲೊಡರಿಸುವುದುಂ ಅದಂ ಕಂಡು ಮನಮಱಿದು ಮಂತ್ರಿಗಳ್ ಮಾರ್ಕೊಂಡು

ಕಂ || ಏಂ ಗಳ ಬಾಯುಂಟೆಂದು ಕ
ರಂ ಗಳಪುವೆ ಬಱಿದೆ ನಿನ್ನ ಪವಣಱಿಯದೆ ವೃ
ದ್ಧಂಗೆ ಖಳಂಗೀವುದೆ ಲಲಿ
ತಾಂಗಿಯನೀವಂತೆ ರಾಹುವಿಂಗೆಳವೆಱೆಯಂ      ೬೨

ತಾವರೆಯಲ್ಲದೆ ಸಿರಿಗಂ
ತಾವಲೆ ನೆಲೆಯಕ್ಕುಮೇ ಮಹಾಪದ್ಮನೆ ಲೀ
ಲಾವತಿಗೆ ಭಾನುಮತಿಗೆ ಮ
ನೋವಲ್ಲಭನಕ್ಕುಮಕ್ಕುಮೇ ನಿನ್ನರಸಂ        ೬೩

ಹೃದ್ಯಗುಣನಿಳಯನಾ ವಿಭು
ಸದ್ಯಶನಿರೆ ಕನ್ನೆ ನಿನ್ನ ಪತಿಗೆಳಸುವಳೇ
ಪ್ರದ್ಯೋತದ್ಯುತಿಗಲ್ಲದೆ
ಖದ್ಯೋತದ್ಯುತಿಗೆ ನಳಿನಿ ಮೊಗಮಿತ್ತಪಳೇ      ೬೪

ವ || ಮತ್ತಮೀ ಭಾನುಮತಿಯನಾ ತಮೋಮೂರ್ತಿಯನುವರ್ತನಕ್ಕಮೀ ಹರಿಣಲೋಚನೆಯನಾ ಚಮೂರಾತಿರೌದ್ರಮದನಮದೋತ್ಸವಕ್ಕಮೀ ಕುಮುದಗಂಧಿನಿಯನಾ ಖರದಂಡಸಖನ ಸುಖಸಂಗಮಕ್ಕಮೀ ಚಂಪಕವಿಕಾಸನಾಸಿಕೆಯನಾ ಮಧುಪವೃತ್ತಮನೋ ವೃತ್ತಿಗಮೀ ಮಯೂರಕಚಭಾರವತಿಯನಾ ದ್ವಿಜಿಹ್ವವಲ್ಲಭನ ನಲ್ಲಳುತನಕ್ಕಮೀ ಮರಾಳ ಗಾಮಿನಿಯುಮನಾ ಘನವಿಳಾಸನಭಿಲಾಷಾಪೋಷಣಕ್ಕಮೀ ಮದನಚಾಪಲತೆಯನಾ ವಿರೂಪಾಕ್ಷನೀಕ್ಷಣಕ್ಕಮೀ ರಾಜಕಂಠೀರವಾರ್ಹಕೇಸರಿಣಿಯನಾ ಗಜಕರ್ಣನಭ್ಯರ್ಣಕೇಳಿಗಂ ಮೇಳಿಸುವದಘಟಮಾನಮನ್ಯೋನ್ಯವಿರುದ್ಧಮೆಂಬುದನಱಿಯದಾಗ್ರಹಿಪ ನಿನ್ನ ನಿರ್ಬುದ್ಧಿತನಮೇ ನಿನ್ನರಸನ ವಿವೇಕವಿಕಳತೆಯನಱಿಪಿದಪ್ಪುದೆಂಬಂತೆ

ಕಂ || ನಿಜದಿಂ ಮದಮಳಿನಂ ಧೃತ
ರಜನುರುಮಾತಂಗಧರ್ಮನಾಱಡಿದಾಣಂ
ಸಜಡಾತ್ಮಚರಿತನೆನಿಸುವ
ಗಜಕರ್ಣಂ ಹಸ್ತಿಮೂರ್ಖನೇನೆತ್ತರಱಿವಂ        ೬೫

ವ || ಅದಲ್ಲದೆಯುಂ

ಮ || ಪಿರಿದುಂ ಬೀರಮನಾಡಿ ಗರ್ಜಿಸುವ ನಿನ್ನೀ ಗಂಡವಾತಿಂಗೆ ಕಾ
ತರನುಂ ಬೆರ್ಚಿಸು ಬೆರ್ಚನಪ್ರತಮಶೌರ್ಯಾಟೋಪನೀ ಭೂಪನೇಂ
ಭರದಿಂದಂ ಬಿಱುಗಾಳಿ ಬೀಸೆ ಮರನಂತಳ್ಳಾಡುಗುಂ ಮೇರುಭೂ
ಧರಮಳ್ಳಾಡುಗುಮೇ ಮಹಾಪ್ರಳಯವಾತಾಘಾತನಿಷ್ಕಂಪಿತಂ     ೬೬

ಉ || ಬಂದಪನೆತ್ತಿ ವಿಕ್ರಮದಿನೀೞ್ಕುಳಿಗೊಂಡಪನಂತೆ ಕೂಸ ನಿ
ನ್ನಿಂದೆಮಗೊಳ್ಳೆಯಂ ಬಿಡುವೆ ಪೇೞ್ ತನಗಿಕ್ಕಿದ ಕೋಂಟೆ ತಾಂ ಜಡಂ
ಬಂದು ನಿಜೇಶನಾತಕೊಱೆಯಂತಿಱಿವಂ ಗಳಪಲ್ಕೆಬೇಡ ಪೋ
ಗೆಂದುಱದೊತ್ತಿ ಚಪ್ಪರಿಸೆ ಪೋದನವಂ ಪಗೆ ಸಾಱೆ ಕೋಪದಿಂ     ೬೭

ವ || ಅಂತು ಪೋಗಿ ತತ್ಪ್ರಪಂಚಮೆಲ್ಲಮಂ ಗಜಕರ್ಣಂಗೆ ಕರ್ಣಗೋಚರಂ ಮಾೞ್ಪುದುಮುದೀರ್ಣಕೋಪಾಟೋಪನಾಗಿ

ಉ || ಮನ್ನಿಸದೆನ್ನ ಬಾಹುಬಲಮಂ ಕುಲಮಂ ಚಲಮಂ ಸಗರ್ವದಿಂ
ಕನ್ನೆಯನೀಯದಿರ್ದ ನೃಪನಂ ಲಪನಂ ಗ್ನಪನಂಕೊಳಲ್ಕೆ ತೂ
ಳ್ದೆನ್ನ ತೊಡರ್ಪುದೋಱದಿನಿಸಂ ಮುನಿಸಂ ಮುನಿಸಾಂಪದಂತೆ ಬಿ
ಟ್ಟಿನ್ನಿರೆ ಕೀರ್ತಿಲಕ್ಷ್ಮಿ ಬಿಡುಗುಂ ಕಿಡುಗುಂ ಕಡುಪೆಂಪಿನೆೞ್ತರಂ        ೬೮

ವ || ಎಂದಾಡಿ ಸಮಗ್ರಸಾಮಗ್ರಿವೆರಸು ತಳರ್ದು

ಮ || ಕರಿವೃಂದಂ ಗಿರಿವೃಂದಮಾಗಿರೆ ತುರಂಗಂಗಳ್ ತರಂಗಂಗಳಾ
ಗಿರೆ ನಕ್ರಾರಥಚಕ್ರಮಾಗಿರೆ ಪಯೋಮತ್ಸ್ಯಾಳಿ ಭೃತ್ಯಾಳಿಯಾ
ಗಿರೆ ತಾಂ ವಾರಿಧಿ ಮೇರೆದಪ್ಪಿ ಕವಿವಂತೆೞ್ತಂದು ಭದ್ರಾವತೀ
ಪುರಮಂ ಮುತ್ತಿದನತ್ಯುದಗ್ರಚತುರಂಗಾಭೀಳಕೋಳಾಹಳಂ         ೬೯

ವ || ಅನ್ನೆಗಂ ತನ್ನ ಬರವನಱಿದು ಮುನ್ನಮೆ ಜಳಖಾತಿಕಾವಳಯಮನಳುಂಬ ಮಾಗೆ ತಿಂಬಿಸಿಯುಮತಿಸ್ಥೂಳತರ ಜಾಳಂಗಳಿಂ ಮೇಳೆಯಮನೋಳಿಗೊಳಿಸಿಯುಂ ವಿಷಮವಿಷವಿಟಂಕಂದಷ್ಟ್ರಾಂಕುರದಂತಗುರ್ವಿಸುವ ವಿಷಲತಾಗುಲ್ಮಕಂಟಕಂಗಳಂ ಗಾಡಿಯಿನಳವಡಿಸಿಯುಂ ಪರಪತಾಕಿನೀಸುಭಟಜನಜಾನು ಭಂಜನಂಗಳಾಗೆ ದಸಿಗಳಂ ಬಸಿದು ನೆಡಿಸಿಯುಂ ಚರಣಸಂಚರಣ ವರ್ಜನೀಯಂಗಳಾಗೆ ವಜ್ರಸೂಚಿಗಳನುಜೃಂಭಿತಂ ಗಳಾಗಿಸಿಯುಂ ಮದಮತಂಗಜಾಂಘ್ರಿ ತಳಮನೆಳಱಿಸುವ ಶೃಂಗಾಟಕಂಗಳಂ ಸಂಗಳಿಸಿಯುಂ ಪ್ರಳಯಶಿಖಿಯ ದಳ್ಳುರಿಯ ಬಳ್ಳಿಯಂತೆ ಮಿಳ್ಳಿಸುವ ಮಸಕದುರಿಯೆಣ್ಣೆಯಂ ಪಣ್ಣಿಸಿಯುಂ ಅರಿಬಳಪ್ರಹರಣನಿವಾರಂಗಳಪ್ಪಾಳ್ವೇಱೆ ತುಱುಗಲಂ ತುಱುಂಬುಗೊಳಿಸಿಯುಂ ಲಗ್ಗೆಯೊಳ್ ಮೊಗ್ಗರದ ಗಿಗ್ಗಿರಿಗೆ ನಡೆವಂದರೆಂಬಿನವನಿಱುಂಕೆ ತೆಗೆವಂಕುಶಂಗಲನಳಂಕೆಗೊಳಿಸಿಯುಂ ಬೆಂಗುಂಡುಗೊಂಡ ಗಂಡಗತ್ತರಿಯ ಸಂಸರ್ಗದರ್ಗಳಮನಮರೆ ಸಾರ್ಚಿಯುಂ ಕುಳಿಸಿವಿಳಸಿತತಾಂಭೋದಮಂ ದುರ್ಗಮಂ ದುರ್ಘಾಟಮಪ್ಪಂತುಗೋಪುರಾದ ಘಾಟನಮಂ ಮಾಡಿಸಿಯುಂ ಪರಬಳದ ಪಿರಿಯ ಸಿರಿಯನಱಿದಳವಿಗೞಿಯೆ ಕಟ್ಟನಿಟ್ಟಳಂ ಮಾಡಿಸಿಯುಂ ಅಲ್ಲಲ್ಲಿ ಜಾವಮುಕ್ಕಡರವಟಿಗೆ ತಳವಱೆಕೆಯಮೆಕ್ಕೆಕ್ಕೆಯೊಳಂ ಠಾಣಾಂತರಮಂ ನಿರವಿಸೆಯುಂ ಅಂತು ಕೆಯ್ಗೆಯ್ಸಿದಾಗಳ್

ಕಂ || ವಿಳಸಿತವಿಯತ್ತಳಂ ಕೊ
ತ್ತಳಮಧಟರ ಗಂಡಗುಂಡಕಟ್ಟಳೆ ಮುಗಿಲ
ಟ್ಟಳೆ ಪಗೆವರಾಳ್ವಱೆ ಬೀ
ಳ್ವಳೆ ಬಗೆದಾಳ್ವಱೆ ಮೆಱೆದುವರಿವಿಟಂಕ ವಂಕಂ           ೭೦

ವ || ಅದಲ್ಲದೆಯುಂ

ಕಂ || ಕೂಡೆ ವಿಗುರ್ವಿಸಿದುವು ನಿಮಿ
ರ್ದಾಡುವ ಪೞಯಿಗೆಗಳಹಿತಬಮಲಂ ನುಂಗ
ಲ್ವೇಡಿ ಪೊೞಲೆಂಬ ರಕ್ಕಸಿ
ನೀಡುವ ನಾಲಗೆಗಳೆನಿಸಿ ಲೋಹಿತರುಚಿಗಳ್     ೭೧

ವ || ಅಂತು

ಮ || ಇದನಾಟಂದಪನೆಂದು ಚಿಂತಿಸುವ ಚಿತ್ತಂ ಪೊತ್ತುಗುಂ ಮಾತನಾ
ಡಿದ ಬಾಯ್ ಬತ್ತುಗುಮೇಱೆ ನೋಡಿದೆಮೆ ಸೀಗುಂ ಸಾರ್ದ ಮೆಯ್ ಬೇಗುಮೆಂ
ಬುದನೆಂಬೂಷ್ಮೆಯನಾಳ್ದಗುರ್ವಿಸುವ ಕೋಟಾಚಕ್ರದೊಳ್ ನಿಂದನೋ
ವದೆ ಕಾದಲ್ ನೃಪ ನಿನ್ನ ಮೆಚ್ಚಿನ ಮನಃಪ್ರೇಮಾತುಳಂ ಮಾತುಳಂ           ೭೨

ಕಂ || ನಿಂದೊಡೆ ಕರಿಗೊಳ್ಗುಂ ರಣ
ಮಿಂದೀಗಳೆ ಕೊಳ್ವಮೆಂದು ಬೊಬಿಱೆದಾರ್ದೆ
ಯ್ತಂದು ಬಳಸಿದುದು ಕೋಂಟೆಯ
ನಂದರಿಬಳಮೊಡನೆಮೊೞಗೆ ಲಗ್ಗೆಯ ಪಱೆಗಳ್            ೭೩

ವ || ಆಗಳೊಳಗಣಿಂದಂ

ಮ || ಕವಿದಿಸುವಂಬು ಪಾರ್ದಿಸುವ ಕಕ್ಕಡೆ ಕುತ್ತುವ ಕೊಂತವಿಕ್ಕುವೊ
ಳ್ಗವಣೆಯ ಗುಂಡು ತೂಳ್ದಿಡುವ ಡೆಂಕಣಿ ಪೊಯ್ವುರಿಯೆಣ್ಣೆ ಕಾಸಿ ಸೂ
ಸುವ ಮೞಲೆಂಬಿವೆತ್ತಲುಮಗುರ್ವಿಸೆ ಪೋಗದೆ ಪತ್ತಿ ಲಗ್ಗೆಮಾ
ಡುವ ಭಟಕೋಟಿ ಕೋಟಲೆಯನಾಳ್ದಿರೆ ನೀಳ್ದುದು ಕೋಂಟೆಗಾಳಗಂ          ೭೪

ಚಂ || ಪೆಣದ ಬಣಂಬೆ ಕೊತ್ತಳದೊಳತ್ತಳಗಂ ತನಿಗಂಡದಿಂಡೆ ಸು
ತ್ತಣ ಪೊಱಕೋಂಟೆಯಟ್ಟಳೆಯೊಳಿಟ್ಟಳಮಾಡುವ ಬೀರರಟ್ಟೆ ಸಂ
ದಣಿಸಿದ ವಂಕದಾರದೊಳಪಾರ ಮಸೃಗ್ಜಲದುಗ್ರಪೂರಪೂ
ರಣ ಮಗುೞಂತರಾಳದೊಳಗುರ್ವೆನೆ ಸತ್ತುದು ಶತ್ರುಸಾಧನಂ        ೭೫

ಕಂ || ಅವಲವಲೆನೆ ಮರ್ಗುವ ಮು
ಗ್ಗುವ ತಗ್ಗುವ ನುಗ್ಗುವಾತ್ಮತಂತ್ರದ ಕೇಡಿಂ
ಗವನಳ್ಕದೆ ಕಾದಿಸುತಿರೆ
ಜವವಳಿದುದು ಪಗಲುಮಿರುಳುಮೆರಡುಂ ತಂತ್ರಂ         ೭೬

ವ || ಅಂತು ನಿಚ್ಚಗಾಳೆಗದೊಳುಬ್ಬೆಗಂಬಟ್ಟು ಸುರ್ವಿಯೞಿವ ಪರಿಜನಂಗಳುಂ ಸರ್ವನಿರೋಧದಿಂದುಬ್ಬೆಗಂಬಡುವ ಪುರಜನಂಗಳುಂ ತನ್ನ ಮನಮನನುವಿಸೆ

ಚಂ || ಪಶು ಶಿಶು ಸಾಮಜಾಶ್ವ ವನಿತಾದಿಗಳುಮ್ಮಳಿಪಂತು ಕೋಂಟೆಯೊಳ್
ಪ್ರಶಮಿತಶೌರ್ಯನಾಗಿ ಮಱೆಗೊಂಡುಱದಿರ್ಪುದು ಕಷ್ಟಮಾ ಮಹಾ
ವಿಶಸನಕೇಳಿಯಂ ಮೆಱೆದು ತೂಳ್ದುವೆನೆಂದು ಪೊದೞ್ದು ಪೂಣ್ದು ಕ
ರ್ಕಶಭುಜವಿಕ್ರಮಂ ಪೊಱಮಡಲ್ ಬಗೆದಂ ಜಯವರ್ಮಭೂಭುಜಂ            ೭೭

ವ || ಆಗಳಾ ಮಂತ್ರಿಗಳ್ ಕಂಡು ಮಾರ್ಕೊಂಡು

ಮ || ಅಸಮಾನೋಗ್ರಸಮಗ್ರಸೈನ್ಯಬಳನಪ್ಪೀತಂಗೆ ನಾಮೋಡಿ ಘ
ರ್ಜಿಸೆ ಮೇಲ್ವಾಯಲೊಡರ್ಚುವೀ ಶರಭಶೌರ್ಯಾದನ್ವಯಶ್ರೇಯಮು
ಬ್ಬಸಮಾಯ್ತಿನ್ನವನಂ ಕೞಲ್ಚು ನಡೆ ನೀಂ ಪೇೞ್ದಟ್ಟು ಬಂದಪ್ಪನು
ಬ್ಬಸದಿಂ ನಿನ್ನಳಿಯಂ ಪ್ರತಾಪನಿಳಯಂ ಶ್ರೀರಾಜಕಂಠೀರವಂ         ೭೮

ಮದವತ್ಸಿಂಹದಿನಪ್ಪ ತನ್ನ ಕಡುಗೇಡಂ ಕಾಡ ಸೊರ್ಕಾನೆ ನೋ
ಡದೆ ತದ್ಗೋಚರಮಪ್ಪರಣ್ಯನಳಿನೀಕಾಸಾರಮಂ ಸಾರ್ವವೋಲ್
ಕದಡಲ್ ಸಾರ್ದವನಿಂತುಟೀತನಳವೀದರ್ಪಕ್ಕೆ ತಕ್ಕಂತುಟಂ
ಕದನಕ್ಷೋಣಿಯೊಳೆಯ್ದುಗಾ ನೃಪಭುಜಪ್ರೋತ್ಖಾತಶಾತಾಸಿಯಿಂ  ೭೯

ವ || ಎಂದು ಬಗೆಗೆವರೆ ನುಡಿವುದುಮದನೊಡಂಬಟ್ಟು

ಶಿಖರಿಣೀ || ಬಲಂಗೊಂಡಂ ತೊಂಡಂಬಿಡದೆ ಗಜಕರ್ಣಾವನಿಭುಜಂ
ಬಲಂ ಪೋಗಂ ಬೇಗಂ ಬಗೆವೊಡೆಮಗಿನ್ನಾರೋ ಶರಣಿಂ
ಬಲೋದ್ವೃತ್ತಂಪುತ್ರಂಗೆಸಗುಗೆ ಮಹಾಪದ್ಮನೃಪನುಂ
ಬಲಕ್ಷಾಮಂ ಮಾಮಂ ನಿಮಗೆ ಮೊಱೆವೇೞ್ದಟ್ಟಿದನಿದಂ  ೮೦

ಕಂ || ಆ ಸತಿವಸನಾ ಧರೆಗೊಸೆ
ದೀ ಸಮಯದೊಳೆಮ್ಮನಧಿಪ ಕಾವುದು ಶೌರ್ಯೋ
ದ್ಭಾಸಿಗಳ ನಿಮ್ಮ ದೊರೆಯರ
ಮೈಸಿರಿ ಪರಹಿತಚರಿತ್ರಸೂತ್ರಿತಮಲ್ತೇ           ೮೧

ಉ || ಎಂದು ಸಮಸ್ತ ಕಾರ್ಯಭರಮಂ ದಮನಂ ಸುಮನಂ ಜಗಜ್ಜನಾ
ನಂದಕನಂ ಪ್ರಶಸ್ತಯಶನಂ ರಿಪುವಂಶವಿನಾಶನಂ ದಯಾ
ನಂದಕಶಸ್ತ್ರಭೂಷಿತವಿಶೇಷ ಕರಾಳಕರಾಗ್ರನಂ ನರೇಂ
ದ್ರೇಂದುವನೆಯ್ದೆ ಕೇಳಿಸಿದಪಂ ಮಿಗೆ ನಾೞ್ಪ್ರಭುವಂಶಮೇರುವಂ    ೮೨

ಗದ್ಯಂ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತಸೂಕ್ತಿ ಚಂದ್ರಿಕಾಪಾನ ಪರಿಪುಷ್ಪಮಾನಸ ಮರಾಳಂ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ದೂತವರ್ಣನಂ ಸಪ್ತಮಾಶ್ವಾಸಂ