ಕಂ || ಶ್ರೀಗೆ ಜಯಲಕ್ಷ್ಮಿಯಂ ಸಮ
ಮಾಗಿಸಲುದ್ಯಮಿಸುವೆನಗೆ ನೆರಮಾದುದಿದೆಂ
ದಾಗಳೆರ್ದೆಗೊಂಡನಾ ಶರ
ದಾಗಮಮಂ ಪ್ರಭುಗಣಾಬ್ಜಿನೀಕಳಹಂಸಂ       ೧

ವ || ಅಂತೆರ್ದೆಗೊಂಡು ತತ್ಸಮಯದೊಳೆ ತನ್ನ ಮನದ ಕಜ್ಜದುಜ್ಜುಗಮನಱಿ ಪಲೆಂದು ಚಿತ್ರಭಾನುದ್ವಿತೀಯನಾಗಿ ಬಂದಾಸ್ಥಾನಮಂಟಪದೊಳನೇಕ ಮಂಡಳಿಕ ದಂಡನಾಥ ಸಾಮಂತ ಮಂತ್ರಮಂಡಳ ಪ್ರಮುಖ ಪರಿಜನಸಮೇತಮೊಡ್ಡೋಲಗಂಗೊಟ್ಟಿರ್ದ ನಿಜಜನಕನಂಘ್ರಿವನಜಕ್ಕೆ ವಿನಯದಿಂದೆಱಗಿ ಸಮುಚಿತಾಸನಪ್ರದೇಶಮನಲಂಕರಿಸಿ

ಕಂ || ಕನಕಾದ್ರಿಯನೆಳಸುವ ನೂ
ತನಚಂದ್ರಿಕೆಯಂತಿರೆಳಸೆ ದಶನದ್ಯುತಿಗಳ್
ಜನಪತಿಯಂ ನುಡಿದಂ ಮೆ
ಲ್ಲನೆ ಮುಕುಳಿತಕರಸರೋಜನಾ ಯುವರಾಜಂ ೨

ಮ || ಪೊಡರ್ವತ್ಯುದ್ಧತರಾಜವಂಶವನಮಂ ನಿರ್ಮೂಲಿಸಲ್ ಪೋಪಮೆಂ
ಬೊಡದಂ ಮುನ್ನಮೆ ನಿಮ್ಮ ವಿಕ್ರಮದ ವಹ್ನಿಜ್ವಾಲೆ ತಳ್ತಿರ್ದುದಾ
ಪಡೆಮಾತಿರ್ಕೆ ಭವತ್ಪ್ರತಾಪಕಥೆಯಂ ಪ್ರತ್ಯಂತಭೂಚಕ್ರದೊಳ್
ಬಿಡೆ ಕೇಳ್ವಾಗ್ರಹಮಾಯ್ತನುಗ್ರಹಿಪುದೆನ್ನಂ ದೇವ ಕಾರುಣ್ಯದಿಂ    ೩

ವ || ಎಂದು ವಿನಯೋಕ್ತಿಯನೆ ಮುಂದಿಟ್ಟು ನುಡಿದ ಚಾತುರ್ಯಚತುರಾನನ ನುಡಿಗೆ ಚತುರ್ಮುಕಸಾಧನೋದ್ಯೋಗಗರ್ಭಮಪ್ಪಭಿಪ್ರಾಯಮಂ ಜಲಕ್ಕನಱಿದು ಪದ್ಮರಾಜಂ ವಿಕೀರ್ಣದರಹಾಸನಿಂತೆಂದಂ

ಉ || ನಿಮ್ಮ ಭುಜಪ್ರತಾಪವನವಹ್ನಿಗೆ ಮುನ್ನೊಳಗಾದ ವೈರಿವಂ
ಶಮ್ಮಗುೞ್ದರ್ವಿ ಕೊರ್ವುಗುಮದಂ ನಿಶಿತಾಸಿಕುಠಾರದಿಂ ಪೊಡ
ರ್ಪಮ್ಮೆಱೆದಾಂ ಪಡಲ್ವಡಿಪೆನೆಂದು ಜಲಕ್ಕನೆ ಪೇೞಲೊಲ್ಲದೇ
ನಮ್ಮ ಯಥಾರ್ಥಮಂ ಮಱೆಸಿ ಮತ್ತಿನ ಸುತ್ತಿನ ಮಾತನಾಡುವೈ  ೪

ಮ || ವಿಹಿತಂ ಕ್ಷತ್ರಿಯನಂದನಂಗೆ ದಿಟಮಂತುಂ ನೀತಿಯೊಳ್ ದುಷ್ಟನಿ
ಗ್ರಹಶಿಷ್ಟಪ್ರತಿಪಾಲನಂಗಳದಱೆಂ ನಿನ್ನುದ್ಯಮಂ ಮಾಣಿಪಾ
ಗ್ರಹಮಂ ಪುಟ್ಟಿಸುವಂತುಟಲ್ತು ವಿಜಯಂಗೆಯ್ದಪ್ಪುಗೆಯ್ ನೀಂ ಮಹಾ
ಮಹಿಪಶ್ರೀಗೆಡೆಯಾಗಿ ವಿಶ್ರುತಜಯಶ್ರೀಯಂ ಯಶಶ್ಶ್ರೀಯುಮಂ  ೫

ವ || ಎಂದಿಂತು ನುಡಿದ ಬುದ್ಧಿಗೆ ವಿನಯಮುಂ ಪ್ರಿಯಮುಮಪ್ಪುದಱೆನಾಳೋಚಿತಮಂತ್ರಿ ಜನನಾಗಿ ತನ್ನೆಂದುದನೊಡಂಬಟ್ಟು ತದನಂತರಂ ವೈಶ್ರವಣಸಹಿತಂ ಬಹುಪ್ರಕಾರ ಕಥಿತ ನೃಪನೀತಿ ವಿಭೂತಿಯಿಂ ಮನೋದರ್ಪಣಮನುಜ್ಚಳಿಸಿದಾತ್ಮಜನಕನಂ ಬೀೞ್ಕೊಂಡು ಪರಮಪರಿತೋಷದಿಂದಮಾಸ್ಥಾನಭವನಮಂ ಪೊಱಮಟ್ಟಂತಃಪುರಕ್ಕೆವಂದು ವನಮಾಳಿಕಾಮಹಾದೇವಿಗವನತೋತ್ತ ಮಾಂಗನುಂ ನಿವೇದಿತನಿಜಪ್ರಯಾಣಾಭಿಪ್ರಾಯನುಮಾಗಿ ತದಾಶೀರ್ವಾದನಿರ್ಘೋಷಶೇಷಾಕ್ಷತಂಗಳಂ ತಳೆದಲ್ಲಿಂದಮಾತ್ಮಭವನಕ್ಕೆ ಬಿಜಯಂಗೆಯ್ದು ಶುಭಮುಹೂರ್ತದೊಳ್

ಕಂ || ನೆರಪಲ್ ವೇೞ್ದಂ ಕೃತರಿಪು
ನರೇಂದ್ರಭಂಗಮನುದಗ್ರ ಜಯತುಂಗಮನು
ದ್ಧುರ ಸುಭಟಸಂಗಮಂ ಚಾ
ತುರಂಗಮಂ ನಿಜಬಳಾಧಿಪತಿಗೆ ಕುಮಾರಂ        ೬

ವ || ಆ ಪ್ರಸ್ತಾವದೊಳ್

ಮ || ಪರವಾಚಾಳನೃಪಾಳಜಾಳಕುಳನಾಶೋತ್ಪಾತನಿರ್ಘಾತವಾ
ತರವಂ ವಿಕ್ರಮನಾಟಕಾಭಿನಯನಾಂದೀಮಂಗಳಾತೋದ್ಯಹೃ
ದ್ಯರವಂ ತಾನೆನೆ ಘೂರ್ಣಿಸಿತ್ತು ವಿಲಸತ್ಸೌವರ್ಣಕೋಣಾಹತಿ
ಸ್ಫುರಿತಂ ಶ್ರೀ ಯುವರಾಜದೇವವಿಜಯದಪ್ರಸ್ಥಾನಭೇರೀರವಂ    ೭

ಚಂ || ಬೆದಱಿದುದಭ್ರಮೂರಮಣಯೊಟ್ಟಜೆಗೆಟ್ಟುದು ಪುಂಡರೀಕಮ
ೞ್ದುದು ಕುಮುದಂ ತಡಂಗೆಡೆದುದಂಜನಮುರ್ಕುಡುಗಿತ್ತು ವಾಮನಂ
ಬಿದಿರ್ದುದು ಪುಷ್ಪದಂತಮತಿವಿಹ್ವಲಮಾದುದು ಸಾರ್ವಭೌಮಮೆಂ
ದದಿರ್ದುದು ಸುಪ್ರತೀಕಮಿರದಾಲಿಸಿ ತತ್ಪಟಹಪ್ರಣಾದಮಂ         ೮

ವ || ಎನಿಸಿ ಗಗನದಿಗವನೀವ್ಯಾಪ್ತಮಾದ ವಿಜಯಪ್ರಯಾಣ ದುಂದುಭಿಧ್ವಾನ ಮೆಸೆಯಲೊಡಂ

ಮ.ಸ್ರ || ಮದಧಾರಾವೃಷ್ಟಿ ಪಂಕಂ ಮಸಗಿಸೆ ನೆಲನಂ ಘೋಷಘಂಟಾರವಂ ದಿ
ಗ್ರದನೀಶ್ರೋತ್ರಕ್ಕೆ ಸಂಪಾದಿಸೆ ಬಧಿರತೆಯಂ ಪುಷ್ಪಕಾನದ್ಧ ನಾನಾ
ಕದಳೀಜಾಳಾಂಬರಂ ಚುಂಬಿಸೆ ಘನಪಥಮಂ ಬಂದುದಂದನ್ಯಚಕ್ರ
ಕ್ಕಿದು ಕಲ್ಪಾಂತಾಭ್ರಮೆಂಬಂತುದಿತರಿಪುಮನೋದೈನ್ಯಮುಗ್ರೇಭಸೈನ್ಯಂ     ೯

ಮ.ಸ್ರ || ಜವದಿಂ ಸೌಪರ್ಣನಂ ಮಾರುತಸುತನನನೂನಾನ್ವಯಶ್ರೀಯಿನುಚ್ಚೈ
ಶ್ರವಮಂ ಸೂರ್ಯಾಶ್ವಮಂವರ್ಣದಿನಮರಧನುರ್ದ್ಯೋತಿಯಂ ಪಂಚರತ್ನ
ಚ್ಛವಿಯಿಂ ಕೀೞ್ಮಾೞ್ಪ ಸಲ್ಲಕ್ಷಣಗುಣನಿಧಿಗಳ್ ಪಲ್ಲಣಂಗಟ್ಟಿ ಬಂದಿ
ರ್ದುವು ಹೇಷಾಘೋಷ ವಿ‌ದ್ರಾವಿತರಿಪುಮಹಿಭೃಚ್ಚಾತುರಂಗಂ ತುರಂಗಂ     ೧೦

ಪರಚಕ್ರಕ್ಕೀಗಳೀ ಪಲ್ಮೊರೆದನೆ ಜವನೆಂಬಂತತಿಸ್ಕಾರ ಚೀತ್ಕಾ
ರರವಂ ದಿಕ್ಪಾಲರಂ ಕೇಳಿಸೆ ವಿನಿಹಿತಸೂತಂ ಪ್ರಪೂರ್ಣಸ್ತ್ರಜಾತಂ
ಗುರುಚಕ್ರಕ್ಷುಣ್ಣಮಾರ್ಗಂ ಸಮಧಿಕರಥಿಸಂಸರ್ಗಮುದ್ಯತ್ಪತಾಕಾಂ
ಬರಮುಗ್ರಾಡಂಬರಂ ಬಂದುದು ವಿಧೃತಮಹಾವಾಜಿಯೂಥಂ ವರೂಥಂ    ೧೧

ಚಂ || ಮಣಿಯದೆ ಬಂದು ಗೊಂದಣಿಸಿದಡ್ಡಣದೊಡ್ಡಣದುರ್ಬು ಬಿಲ್ಲ ಬ
ಲ್ಲಣಿಯ ತೆರಳ್ಕೆ ಭಾರ್ಗವರ ಮೊಗ್ಗರದೊಬ್ಬುಳಿ ಕುಂತದಾಳ ತಿಂ
ತಿಣಿ ನೆಱೆ ತಮ್ಮತಮ್ಮ ಬಿರುದಂ ಪಱೆಯುಂ ಕಹಳಾರವಂಗಳುಂ
ಪ್ರಣಿಹಿತಕೇತುಚಿಹ್ನಮುಮಿಳಾವಳಯಕ್ಕಱಿಪುತ್ತುಮಿರ್ಪಿನಂ       ೧೨

ವ || ಅಂತತಿ ಪ್ರಬಳಮಾಗಿ ನೆಱೆದು

ಮ || ಗಣನಾತೀತಮದೇನದೇನೆಸೆದುದೋ ಪಾದಾಭಿಘಾತಸ್ಫುರ
ತ್ಫಣಿರಾಜಸ್ಫಟೆಗಳ್ ಮದೇಭಘಟೆಗಳ್ ಜೈತ್ರಾಜಿಗಳ್ ವಾಜಿಗಳ್
ರಣಕೇಳೀರಸರಕ್ತಸೂತರಥಿಯೂಥಂಗಳ್ ವರೂಥಂಗಳು
ಲ್ಬಣಶಸ್ತ್ರಾಸ್ತ್ರಗಭಸ್ತ್ರಗಭಸ್ತಿವಿಸ್ತೃತ ವಿಯದ್ದಿಗ್ಭಿತ್ತಿಗಳ್ ಪತ್ತಿಗಳ್          ೧೩

ವ || ಆಗಳಾ ಚತುರಂಗಬಲಜಲಧಿಯೊಳಗೆ ನೆಗೆದ ತೆರೆದುಱುಗಲಂತೆ ಮಿಱುಪ ಬೆಳ್ಗೊಡೆಯ ಬಳಗಮುಂ ಮಿಳಿರ್ದು ಪೊಳೆವ ಸಪ್ತರ್ಷಿಸಮಾಜದಂತೆ ಸಂಚರಿಸಿ ಮಿಂಚುವಲಗುಗಳಿನೆಸೆವ ಪೆಸರ ಕೆಯ್ದುಗಳುಂ ಉಜ್ಜಳಿಪ ವಿದ್ರುಮಲತಾಂಕುರದಂತೆ ಕೆಂದಳಿರ ತೊಂಗಲಂತೆ ಪಸರಿಸುವ ಪದ್ಮರಾಗಮುಕುಟಮುಂ ಪ್ರಬಲಪವಮಾನಸಮುದೀರ್ಣಘೂರ್ಣನ ಧ್ವಾನದಂತೆ ನೆಗೞ್ವ ವಿವಿಧಪದಿಱ ಪಱೆಗಳಬ್ಬರಮುಮಾತ್ಮೀಯ ರಾಜಲೀಲೆಯಂ ನೆಱೆಯೆ ಮೆಱೆಯೆ ಬಂದು ಬಾಗಿಲ್ವಾಡದೊಳ್ ತಂತಮ್ಮ ವಾಹನಂಗಳಿನಿೞಿದು

ಕಂ || ಯುವರಾಜಂ ಬಿಜಯಂಗೆ
ಯ್ವವಸರಮನೆ ಪಾರ್ದು ಪೊಱಗೆ ಪೊಡವಡುವಳಿಪಿಂ
ತವತವಗೆ ಮುಂಚಲಿರ್ದರ್
ವಿವಿಧ ನೃಪೋತ್ತುಂಗ ರುಚಿತ ಕವಚಭೃತಾಂಗರ್          ೧೪

ವ || ಅನ್ನೆಗಮಿತ್ತಲರ್ಚಿತ ಜಿನೇಂದ್ರಚರಣಾರವಿಂದದ್ವಂದ್ವನುಂ ವಂದಿತಾರ್ಯಜನಸಮಾಜನುಂ ಪ್ರವರ್ತಿತಪಾತ್ರದಾನವಿಧಾನನುಂ ನಿರ್ವರ್ತಿತಗಜವಾಜಿನೀರಾಜನನುಂ ಅಂಗೀಕೃತಶೃಂಗಾರ ಮಾಂಗಲ್ಯವೇಷನುಮಾಗಿಗಣಕಗಣಗಣಿತಪ್ರಶಸ್ತಲಗ್ನದೊಳ್ನಿಜೋತ್ತುಂಗಸಿಂಹಾಸನದೊಳಿರ್ದು ಪರಸುವರಸುಗುಲದಾರ್ಯಕುಲದ ಜಯ ಜೀವನಂದ ರಭಸಂಗಳುಂ ಪಠಿಯಿಸುವ ಚಾರಣಮಂಗಳೋಚ್ಚಾರಣಂಗಳುಂ ಸೇಸೆಯಿಕ್ಕುವುನ್ಮದವಿಳಾಸಿನೀಜನದ ಮಣಿಕಂಕಣಕ್ವಣಿ ತಂಗಳುಂ ನೆಲನನುಗ್ಘಡಿಪ ಪಡಿಯಱರ ಸಡಗರಂಗಳುಂ ಪೂರಿಸುವ ಧವಳಶಂಖ ಭಾಂಕಾರರುತಿಗಳುಂ ಬಾಜಿಸುವ ವಿವಿಧಪ್ರಯಾಣಪಟಹಂಗಳುತ್ಸವಧ್ವನಿಗಳು ಮೊತ್ತುವ ಪೊನ್ನ ಸನ್ನೆಗಾಳೆಗಳ ಕೋಳಾಹಳಂಗಳುಮಳುಂಬಮಾಗೆ ಚಿತ್ರಭಾನುದತ್ತ ಹಸ್ತಾವಳಂಬನಾಗಿ ಕತಿಪಯ ಪದಂಗಳಂ ತಳರ್ದು ನಿಜಪ್ರಸಾದಪುರೋಭಾಗದೊಳ್

ಮ || ವಿಲಸತ್ಪುಷ್ಕರಶೀಕರಪ್ರಸರದಿಂ ಸೇಸಿಕ್ಕುತಿರ್ಪಂತೆ ಮಂ
ಜುಳಘಂಟಾರವದಿಂದಮೊಲ್ದು ಪರಸುತ್ತಿರ್ಪಂತೆ ದಾನಭ್ರಮ
ತ್ಕಳಭೃಂಗೀರವದಿಂದೆ ಗಾವರಿಸುತಿರ್ಪಂತುದ್ಘಮಾಂಗಲ್ಯಮಂ
ತಳೆದೊಪ್ಪಿರ್ದುದನೇಱಿದಂ ದ್ವಿರದಮಂ ವ್ಯಾಳೇಭವಜ್ರಾಂಕುಶಂ ೧೫

ವ || ಆಗಳ್

ಚಂ || ಅಮಳಮುಖೇಂದುಗಳ್ಕಿ ನಭಮಂ ಪುಗೆ ಕೀರ್ತಿಯನಟ್ಟಿ ಮತ್ತಮಾ
ಕ್ರಮಿಸುವ ನೀತನಲ್ಲಿ ಪಗೆ ಪೊಲ್ಲದು ಕಾಣ್ಬುದು ಕಜ್ಜಮೆಂದು ಬಂ
ದಮೃತಮರೀಚಿ ಕಂಡು ನಡೆದರ್ಪನೆನಲ್ ಮನುಜೇಂದ್ರಮಂದರಂ
ಗಮರ್ದೆಸೆದಿರ್ದುದಾದಲೆಯೊಳೆತ್ತಿದ [ಮುತ್ತಿನ] ಮೇಘಡಂಬರಂ   ೧೬

ಕಂ || ನವರಾಜ್ಯನಳಿನವನದೊಳ
ಗವಯವದಿಂ ನಲಿದು ನರ್ತಿಪಂಚೆಗಳೆನೆ ಬೀ
ಸುವ ಧವಳಚಾಮರಂಗಳ್
ಯುವರಾಜನ ಕೆಲದೊಳೆಸೆದುವತಿ ಲಲಿತಂಗಳ್ ೧೭

ವ || ತದನಂತರ ಮುಖಂಡನಾಯೋಗಮಂಡಿತಂಗಳು ಮಾರೂಢ ಮಹಾಮಾತ್ರವಿಚಿತ್ರಾಂಕುಶ ಪ್ರಚಾರಣಮುಮಪ್ಪ ವಲ್ಲಭಗಜವ್ರಜಂಗಳುಂ ಖಣಖಣಾಯಿತ ಖಲೀನಕಷಣಗಳಿತಲಪನಲಾಲಾಂಬುಫೇನಪಲ್ಲವಸ್ತಬಕಿತಮುಖಂಗಳುಂ ನಿಬದ್ಧಮಣಿ ಮಯಾಭರಣಕಿರಣಕಿಮ್ಮೀರಕಾಯಕಮನೀಯಾಕಾರಮುಮಪ್ಪ ಪಟ್ಟಸಾಹಣಹಯಚಯಂಗಳುಂ ಬಳಸಿ ಗೊಂದಣಿಸೆ ರಾಜಗೇಹಮಂ ಪೊಱಮಟ್ಟು ಪೊಱಗೆ ತಮತಮಗೆ ವಿನಯವಿನ ಮಿತೋತ್ತಮಾಂಗರಾದರಸುಮಕ್ಕಳಂ ಸದಯಾವಳೋಕನದಿಂದ ಪರಸಿ ನಿಜನಿಜವಾಹನಂಗಳ ಮೇಱಿಮೆಂದು ಬೆಸಸಿ

ಮ || ವಿಲಸದ್ಭೂಭುಜಕೋಟಿ ಮುಂದೆವರೆ ವಾರಸ್ತ್ರೀಜನಂ ಪಿಂದೆ ದೋ
ರ್ವಳದೃಪ್ತಂ ತಳತಂತ್ರಮಿರ್ಕೆಲದೊಳಿಂಬಾಗಿರ್ಪಿನಂ ಲೀಲೆಯಿಂ
ತಳರ್ದಂ ಕೆಮ್ಮುಗಿಲಂ ಮುಸುಂಕುವೆಳಮಿಂಚೆಂಬಂತೆ ಸುತ್ತುತ್ತಿರಲ್
ಪೊಳಯಿಪ್ಪಂಕುಶಕಾಂತಿದಾನಗಜಮಂ ವ್ಯಾಳೇಭವಜ್ರಾಂಕುಶಂ     ೧೮

ಮ || ಪಿಡಿ ಪೇರಾನೆ ಸುಖಾಸನಂ ಸಿವಿಗೆ ಲೀಲಾವಾಜಿ ರಾರಾಜಿಸಲ್
ಕೊಡೆ ಕುಂಚಂ ತೞೆ ಕುರುಳಕೊಂತಂ ತಳ್ತಿರಲ್ ತಂಡದಿಂ
ದೊಡೆನೆೞ್ತಂದುದು ಪೆಂಡವಾಸದಬಲಾನೀಕಂ ಜನಾಲೋಕಮಂ
ಕಡುಚೆಲ್ವಿಂ ತಣಿಪುತ್ತುಮಂಗಜನ ಬಲ್ದಂಡೆತ್ತಿ ಬರ್ಪಂದದಿಂ        ೧೯

ವ || ಮತ್ತಂ

ಕಂ || ಬಾಸಣಿಸಿದ ಮದನನ ಬಾ
ಣಾಸನದವೊಲೆಸೆವ ಚಾರುಝಂಪಾಣದೊಳು
ದ್ಭಾಸಿನಿಯರ್ ನೃಪಸುತನ ವಿ
ಳಾಸಿನಿಯರ್ ಬಂದರೇಱಿ ಪೊನ್ನಂದಣಮಂ     ೨೦

ಚಂ || ಪ್ರಕಟಿಸಿದತ್ತು ಪದ್ಮಜನ ಪಕ್ಕದೊಳೆೞ್ತರದಾತ್ಮಲೀಲೆಯಿಂ
ಸುಕವಿಕದಂಬಕಂ ಕಥಕಸಂಹತಿ ವಾಚಕಕೋಟಿ ಪುಣ್ಯಪಾ
ಠಕತತಿ ಗಾಯಕಪ್ರತತಿ ವಾದಕಮಂಡಳಿ ನರ್ತಕಾಳಿ ವಾಂ
ಶಿಕಕುಳಮಿಂದ್ರಜಾಲಿಕಗಣಂ ಗಣಕಾವಳಿ ಚಿತ್ರಕವ್ರಜಂ      ೨೧

ವ || ತದನಂತರಂ ನೂತ್ನರತ್ನಾಕರಪ್ರದೇಶದೊಳೆ ನಡೆವ ವರುಣನಂತೆ ಧರಣೀಶ ನಂದನಂ ಚಂಚತ್ಪಂಚರತ್ನತೋರಣವಿರಾಜಮಾನಮಪ್ಪ ರಾಜಮಾರ್ಗದೊಳೆ ಬರ್ಪ ಸಮಯದೊಳ್

ಕಂ || ತೊಡುವುಡುವ ತುಡುವ ಪೂಮುಡಿ
ವಡಿಯೂಡುವ ನೆತ್ತವಾಡುವೋಪರೊಳೊಲವಿಂ
ದೊಡಗೂಡುವ ದಂದುಗಮಿರೆ
ನಡೆತಂದರ್ ನೋೞ್ಪ ತವಕದಿಂದೊಳ್ವೆಂಡಿರ್   ೨೨

ವ || ಅಂತು ನಿಜವ್ಯಾಪಾರಪರಂಪರೆಯನುೞಿದು ಕೆಲರ್ ಬಣ್ಣವಿಟ್ಟ ಲೆಪ್ಪದ ತಿಣ್ಣ ರೂಪುಗಳಂತೆ ಸೌಧಶಿಖಿರಂಗಳನಲಂಕರಿಸಿಯುಂ ಕೆಲಬರ್ ತೆತ್ತಿಸಿದ ಪುತ್ತಳಿಗಳಂತೆ ಪೊನ್ನಮಾಡದ ನೆಲೆಗಳೊಳ್ ನೆಲಸಿಯುಂ ಕೆಲರ್ ಜಿನಶಾಸನದೇವತೆಯರಂತೆ ಚೈತ್ಯಕೂಟಂಗಳೊಳ್ ಮನಂಗೊಳಿಸಿಯುಂ ಕೆಲರ್ ವಸಂತಕಾಂತೆಯರಂತೆ ಭವನವನತರುಸ್ಕಂಧದೊಳ್ ನಿಂದುಂ ಕೆಲರ್ ಗಗನಚರಿಯರಂತೆ ಮುಗಿಲಟ್ಟಳೆಗಳೊಳ್ ಸೊಗಯಿಸಿರ್ದುಂ ಕೆಲಬರ್ ಪುರಮುಖಶ್ರೀಕಳೆಗಳಂತೆ ಗೋಪುರಾಗ್ರಂಗಳೊಳ್ ಸಂಗತೆಯರಾಗಿಯುಂ ಮನದೆಗೊಂಡು ಸಂದಣಿಸಿ ನೋಡುವಲ್ಲಿ

ಕಂ || ಎಳಮಿಂಚಿನ ನನೆಯಂಬಿನ
ಜಳಜದ ಕರ್ನೆಯ್ದಿಲೆಸಳ ಬೆಳ್ದಿಂಗಳ ಮೀಂ
ಗಳ ಚೆಲ್ವನುಗುೞ್ದುವಾ ಕೋ
ಮಳೆಯರ ತಳತಳಿಸಿ ಪೊಳೆವ ತುಱುಗೆಮೆಗಣ್ಗಳ್          ೨೩

ಚಂ || ಬೆಳತಿಗೆಗಣ್ಣ ಬೆಳ್ಪು ನನೆಗಣ್ಣ ಮುಗುಳ್ನಗೆ ಚೆಲ್ಲಗಣ್ಣ ಚಾ
ಪಳಮಲರ್ಗಣ್ಣ ಬಳ್ವಳಿಕೆ ಮೀಂಬೊಣರ್ಗಣ್ಣ ನಿಮಿರ್ಕೆ ಸೊರ್ಕುಗ
ಣ್ಣಳಸತೆ ಪುಲ್ಲೆಗಣ್ಣೆಳತೆ ತಳ್ತೆಮೆಗಣ್ಣ ತೆಗುಳ್ಪು ತೋಱೆಗ
ಣ್ಬೆಳಸಿದ ಸುಗ್ಗಿಗಾಣಲಣಮಾಯ್ತು ಪುರಪ್ರಮದಾಜನಂಗಳೊಳ್  ೨೪

ತಿಳಿಗೊಳದಂತೆ ರಮ್ಯವನದಂತೆ ರವಿದ್ಯುತಿಯಂತೆ ಜೊನ್ನದಂ
ತೆಳಸಿರಿಸಿತ್ತವಳ್ದಿರ ಲಸಜ್ಝಷನೇತ್ರಮನೇಣನೇತ್ರಮಂ
ಜಳರುಹನೇತ್ರಮಂ ಕುಮುದನೇತ್ರಮನಾ ಯುವರಾಜ ಯವ್ವನೋ
ಜ್ವಳತನುಮೆಲ್ಲಿ ಸಾಧಿಸಿದುದೋ ಬಹುರೂಪಿಣಿಯೆಂಬ ವಿದ್ಯೆಯಂ           ೨೫

ವ || ಆಗಳೊರ್ವಳ್

ಮ || ವಿಸರನ್ಮೌಕ್ತಿಕಮಂಡನಪ್ರಭೆ ನಿಜಾಂಗಕ್ಕೀಯೆ ಬೆಳ್ಪಂ ಮದಾ
ಲಸಕಾಂತಾಜನಲೋಚನಂ ತನುಲತಾಲಾವಣ್ಯದೊಳ ತೀವಿ ಬಿಂ
ಬೆಸೆ ತತ್ಪದ್ಮನರೇಂದ್ರನಂದನನನಂದೈರಾವತಾರೂಢನಾ
ದ ಸಹಸ್ರಾಕ್ಷನೆಗೆತ್ತು ಮಾನಿನಿ ಮನೋವಿಭ್ರಾಂತಿಯಿಂ ನೋಡಿದಳ್ ೨೬

ಮ || ಮತ್ತಮೋರ್ವಳಭಿನವ ಮದೋನ್ಮತ್ತೆಯೆನಿಸಿ

ಮ || ಉಗಿಯಲ್ಕಂಕುಶದಿಂದ ತೊಡಂಕಿ ಪಱಿದೆತ್ತಂ ಸೋರ್ವ ನಕ್ಷತ್ರಮಾ
ಲೆಗಡಪಾದ ಮನೋಜಸಾಮಜಲಸತ್ಕುಂಭಂಗಳೆಂಬಂತೆ ಹಾ
ರಗಳನ್ಮೌಕ್ತಿಕದಿಂ ನಖಕ್ಷತಯುತಂ ವಕ್ಷೋಜಯುಗ್ಮಂ ಮನಂ
ಬುಗೆ ರಾಗಂ ಮಿಗೆ ಮೇಲುದಂ ಮಱೆದು ನೋೞ್ಪಬ್ಜಾಕ್ಷಿ ಕಣ್ಗೊಪ್ಪಿದಳ್   ೨೭

ವ || ಮತ್ತಮೊಂದು ರಮ್ಯಹರ್ಮ್ಯತಲದೊಳಗಣಿಂದೆಱಗಿ ನೋಡಲ್ ಪೊಱಮಟ್ಟು

ಮ.ಸ್ರ || ಕೃತಸದ್ಯಃಕಾಮಕೇಳೀಭರವಿರಮಣಮಂ ಮಂದನಿಶ್ವಾಸಮಾಕಂ
ಪಿತಗಾತ್ರಂ ರಕ್ತನೇತ್ರಂ ನವನಖಲಿಖಿತಕ್ಷುಣ್ಣವಕ್ಷಸ್ತಳಂ ವಿ
ಸ್ತೃತಕೇಶಂ ಕೀರ್ಣನೀಲಾಳಕಮುದಿತಮುಖಸ್ವೇದಮುಕ್ಷಿಪ್ತಕಾಂಚೀ
ಲತೆ ಸಂದಷ್ಟಾಧರಂ ಸೂಚಿಸೆ ನೃಪಸುತನಂ ನೋಡಲೆಯ್ತಂದಳೊರ್ವಳ್      ೨೮

ವ || ಮತ್ತಮೊರ್ವಳಾ ಕುಮಾರಕನ ಗಾಡಿಯಂ ನಡೆ ನೋಡಿ ತಣಿಯದೆ ಬೆಂಬಿಡಿದು ಪರಿವ ಮುಗ್ಧನಿತಂಬಿನಿಯ ಕೆಯ್ಯಂ ಪಿಡಿದು

ಉ || ಸಾಲದೆ ನೋಟದಿಂ ಪರಿದು ನೊೞ್ಪೊಡೆ ನಿನ್ನ ನಿತುಂಬ ಭೂರಿಭಾ
ರಾಲಸಯಾನಮೆಯ್ದಿಸದದಲ್ಲದೆಯುಂ ಮಗುೞ್ದೇ ಸಡಿಲ್ವ ಕಾಂ
ಚೀಳತೆ ಬೇಱೆ ತಳ್ತು ತೊಡೆ ಸಂಕಲೆಯಾದವುದೆಂತು ಪೋಪೆ ನಿಲ್
ಬಾಲಿಕೆ ಪದ್ಮಜಂ ಮಗುೞೆ ಬಂದಪನಿಲ್ಲಿಯೆ ನಿಂದು ನೋಡುವಂ ೨೯

ಕಂ || ಗಾಡಿ ಕಡೆಗಣ್ಮೆ ಪೊಸಪೊ
ಮ್ಮಾಡದ ಮೇಗಿರ್ದು ನೋೞ್ಪ ಸತಿಯ ಮೊಗಂ ಕೀ
ೞ್ಮಾಡಿದುದು ಮಂದರಾಚಲ
ಚೂಡಾಸನ್ನಿಧಿಯೊಳಿರ್ದ ಶಶಿಮಂಡಲಮಂ      ೩೦

ವ || ಮತ್ತಮೊಂದೆಡೆಯೊಳ್

ಕಂ || ಮುಡಿ ಬಿಟ್ಟು ಪಿಂದೆ ಸಸಿನಂ
ಮಡಗಾಲ್ಗಿೞಿದಿರೆ ಮೃಗಾಕ್ಷಿ ನಿಂದೀಕ್ಷಿಸುತಿ
ರ್ಪೆಡೆಯೊಳ್ ಪೋಲ್ತಳ್ ನೀಲದ
ನಿಡುಗಂಬದೊಳಮರ್ದ ಪೊನ್ನ ಪೊಸಪುತ್ತಳಿಯಂ          ೩೧

ವ || ಆಕರ್ಣಿಕಾರವರ್ಣಿಯ ಪಕ್ಕದೊಳ್

ಮ || ಕಳಶಂ ಪೆರ್ಮೊಳೆ ರನ್ನಗನ್ನಡಿ ಲಲಾಟಂ ಲಾಜದಂತಾಂಶು ಕೆಂ
ದಳಿರ್ಗಳ್ ಕೆಂದಳಮಂಚಳಂ ಗುಡಿ ಕಟಾಕ್ಷಶ್ರೇಣಿ ಪೂಮಾಲೆ ನಿ
ರ್ಮಳಹಾರಂ ಮಣಿತೋರಣಂ ಸುಲಲಿತಭ್ರೂ ದೂರ್ವೆಯಾಗಲ್ಕೆ ಕೋ
ಮಳೆಯೊರ್ವಳ್ ನೃಪನಂದನಂಗೆ ಮೆಱೆದಳ್ ಮೆಯ್ವೆತ್ತ ಮಾಂಗಲ್ಯಮಂ     ೩೨

ವ || ಮತ್ತಮೊರ್ವಳ್ ವಿನಯಪ್ರಾಕಾರನಾಕಾರಮಂ ಕಂಡು ಕಣ್ಸೋಲ್ತು ಕಾಮಪರವಶತೆಯಿಂ ಸಂಕಲ್ಪಸಂಭೋಗಕ್ರೀಡೆಗೆ ಮೆಯ್ದಂದು ಬಹಳಜನನಿರ್ದಯ ಪ್ರಮರ್ದದೊಳ್ ನಿಷ್ಫಲಾರಂಭಸುಭಗೆಯಾಗುತ್ತಿರ್ದೊಡವಳ ಕೆಳದಿಯಿಂತೆಂದಳ್

ಚಂ || ನನೆಗಣೆ ನಾಂಟೆ ನಾಣೞಿದು ನೋಟದ ದಂದುಗಮಂ ಬಿಸುಟ್ಟು ನೀಂ
ನೆನಪದೊಳೀ ಕುಮಾರನೊಡಗೂಡಲಪೇಕ್ಷಿಸಿ ಮುಚ್ಚಿ ಕಳ್ಗಳಂ
ಮನದೊಳಿದೇಕೆ ಜಾನಿಸುವೆ ಮಂದಿಯೊಳಾಗದು ಚಿತ್ತಶುದ್ಧಿ ಮು
ನ್ನನುಭವಿಸಕ್ಕ ಕಣ್ದೆಱೆದು ದರ್ಶನಸೌಖ್ಯಮನೀಗಳನ್ನೆಗಂ           ೩೩

ವ || ಎಂದು ಬಾರಿಸಿದಳತ್ತ ಮಂದಿಯೊಳಿರ್ದು ನೋೞ್ಪ ಕುಲವಧೂಕದಂಬದೊಳ್

ಚಂ || ಚಕಿತಮೃಗಾಕ್ಷಿ ನೀನೆಳಸಿ ಕೆಮ್ಮನೆ ಜೊಮ್ಮೆನೆವೋಗಿ ಭಾವದಿಂ
ಪ್ರಕಟಿಸಲೇಕೆ ಪಾಱುತನಮಂ ನಿನಗೀ ಗುಣತುಂಗನಲ್ಲಿ ವ
ರ್ತಕಮಿದು ಸಲ್ಲದೆಲ್ಲೆಡೆಯೊಳಂ ಸಲುತಿರ್ಪವೊಲೀಗಳೆಂದು ಭಾ
ವಕಸಖಿ ಸೋಲ್ತ ಕಣ್ಣಱಿದು ಪುಂಶ್ಚಲಿಯಂ ಜಡಿದಳ್ ರಹಸ್ಯದೊಳ್        ೩೪

ವ || ಅಂತು ಸಸಂಭ್ರಮ ಸಲೀಲ ಸಪ್ರೇಮ ಸವಿಸ್ಮಯ ಸಹರ್ಷ ಪ್ರಕರ್ಷದರ್ಶನ ಭ್ರಾಂತಮಾದ ನಗರನಾರೀಕದಂಬದ ಸೋರ್ಮುಡಿಯ ಸೊಂಪು ಕಾರ್ಮುಗಿಲ ತಗುಳ್ಪುಮಂ ನೆಗೞ್ಚೆಯುಂ ಕಡೆಗಣ್ಣ ಕುಡುಮಿಂಚು ಸಂಚಳಿಸಿಮಿಳಿರೆಯುಂ ಕಳಕಾಂಚಿಯಿಂಚರದ ಸಡಗರಂ ಮೊೞಗನಳವಡಿಸೆಯುಂ ನಗೆಮೊಗದ ಮಂದಹಾಸರಸವೃಷ್ಟಿ ಬಿಸಿಲ ಬಿಸುಪನುಡುಗಿಸೆಯುಂ ಆಭರಣಕಿರಣಮಮರಚಾಪಮಂ ನಿಮಿರ್ಚೆಯುಂ ಲಾವಣ್ಯರಸದ ಪೊನಲ್ ಜನಲೋಚನಪಾಠೀನಮಂ ತೇಂಕಿಸೆಯುಂ ಉಜ್ಜಳಿಪ ಪೊಚ್ಚಪೊಸಮುತ್ತಿನಚ್ಚಸೇಸೆ ಸೂಸುವಾಲಿವರಲನಭಿನಯಿಸೆಯುಂ ಮನಂಗೊಳಿಸುತ್ತಿರ್ದ ಪುರದ ಪರಿಶೋಧೆಯೆಂಬ ಪೊಸಗಾರ ಪಸರಮಂ ಪೆಱಗುಮಾಡಿ ಪೊಱಮಟ್ಟು ಮನುಜೇಂದ್ರಮಂದರಂ ಪುರಂದರದಿಶಾಭಿಮುಖನಾಗಿ ನಡೆಯೆ

ಮ.ಸ್ರ || ಧರೆಯೆಲ್ಲಂ ಸ್ಯಂದನಾಶ್ವದ್ವಿಪಭಟಬಳದಿಂ ವ್ಯೋಮಮೆಲ್ಲಂ ಚಳಚ್ಚಾ
ಮರಕೇತುಚ್ಛತ್ರಶಸ್ತ್ರಪ್ರಕರದಿನಖಿಲಾಶಾಂತಮೆಲ್ಲಂ ಹಯೇಭೋ
ತ್ಕರ ಹೇಷಾಬೃಂಹಿತೋನ್ಮಿಶ್ರಿತ ಬಹಿಕಹಳಾಶಂಕಭೇರೀಮೃದಂಗ
ಸ್ವರದಿಂದೋರಂತೆ ತೀವಲ್ ನಡೆದುದು ಕಟಕಂ ಕಂಪಿತಕ್ಷೋಣಿಭಾಗಂ         ೩೫

ವ || ಆಗಳ್

ಚಂ || ಬಲಭರದಿಂ ನೆಲಂ ಕುಸಿಯೆ ಶೇಷನೆ ಪೆರ್ವೆಡೆ ತರ್ಗಿ ಕಂಠಕಂ
ಧರದೊಳಗೞ್ದಡಂಗಿದುದು ಕೂರ್ಮನ ಖರ್ಪರದೆಲ್ವು ನುರ್ಗಿ ಬೆ
ನ್ನೊಳಗುೞಿದತ್ತು ಬೆಟ್ಟುಗಳ ಮೂಲಶಿಲಾತಳಸಂಧಿ ಬಿಟ್ಟು ವಾ
ಕುಳತೆಯನಾಳ್ದು ಕಿೞ್ತಲೆ ಕಿೞಂದಲೆಯಾದುದು ತರ್ಗಿ ದಿಗ್ಗಜಂ      ೩೬

ಮ || ಭರದಿಂ ಭೋಂಕೆನೆ ತರ್ಗಿ ಭೂಮಿ ಫಣರತ್ನಂ ನೆತ್ತಿಯೊಳ್ ಬೆಟ್ಟಿದಂ
ತಿರೆ ನಟ್ಟಿರ್ದೊಡೆ ಮುಚ್ಚೇವೋಗಿ ಫಣಿಪಂ ಪಾತಾಳದೊಳ್ ಕೂರ್ಮಖ
ರ್ಪರಮಂ ನೆಮ್ಮಿ ತದೀಯನಿಶ್ವಸಿತದಿಂ ಮೂರ್ಛಾಭರಂ ಪಿಂಗೆ ಮ
ತ್ತಿರದೆೞ್ದಾಂತನುದಾತ್ತನೇಂ ಬಿಡುವನೇಕೆನ್ನಂ ಮಹಾಸತ್ವಮಂ    ೩೭

ಕಂ || ಪಡೆ ನಡೆವಲ್ಲಿಯೆ ಪಲವುಂ
ಪೆಡೆಗಳನಾನುತ್ತೆ ಕಮಠನನುಮತದಿಂದಂ
ನಡೆದನೊಡನೊಡನೆ ನೆಲನೋ
ರ್ಗುಡಿಸುಗುವೆಂದುರಗಪತಿ ರಸಾತಳತಟದೊಳ್            ೩೮

ವ || ಆಗಳಲ್ಲಿಯುಂ

ಮ || ಭರದಿಂ ಶೇಷನನೆತ್ತಿ ಪೊತ್ತಿ ಪೊಗೆಯಲ್ಕುಚ್ಛ್ವಾಸದಿಂದುಣ್ಮುವು
ದ್ಧುರಧುಮೌಘವೊ ಮೇಣ್ ನಿಜಪ್ರಿಯತಮಂ ಸೌಂದರ್ಯಕಂದರ್ಪನೆ
ೞ್ತರೆ ಭುವಲ್ಲಭೆ ಬೆನ್ನೊಳೆೞ್ದು ಪದೆಪಿಂ ಬರ್ಪಂದಮೋ ಪೇೞಿಮೆಂ
ಬರ ಮಾತೊಪ್ಪೆ ಪೊದೞ್ದುದಂದು ಬಲಪಾದೋತ್ಥಂ ರಜೋಮಂಡಳಂ    ೩೯

ಕಂ || ಪೆಸರಿಸುವ ಪಾಂಸುಪಟಲಂ
ಮಸುಳಿಸೆ ಮಸಮಸನೆ ತೋಱುವವಸರದೊಳ್ ಪೋ
ಲ್ತೆಸೆದುದು ಧರಿತ್ರಿ ಪೊಗೆ ಪುಗೆ
ನಸುಮಾಸಿದ ಪೊಗೆಯ ಚಿತ್ರಭಿತ್ತಿಯ ತೆಱದಿಂ   ೪೦

ವ || ಮತ್ತಂ

ಕಂ || ಲೋಕೈಕಮಿತ್ರನಿರೆ ಪೆಱ
ರ್ಗೇಕೆಯೊ ಪೃಥುತೇಜಮೆಂದು ಸೈರಿಸದವೊಲ
ತ್ಯಾಕೀರ್ಣಂ ಮಸುಳಿಸಿತು ದಿ
ವಾಕರಕಿರಣಮನುದಗ್ರ ಧೂಳೀಪಟಲಂ           ೪೧

ಮ || ಪಿರಿದುಂ ಮುನ್ನಮನೇಕಪಾಪಹಿತಮಪ್ಪುದ್ಯನ್ಮದೋದ್ರೇಕದೊಳ್
ಪೊರೆಯುತ್ತಿರ್ದ ಮಳೀಮಸಾಕೃತಿ ಕುಜಾತಂ ಧೂಳಿಜಾಳಂ ದಿಗಂ
ಬರಸಾಂಗತ್ಯಮನಪ್ಪುಗೆಯ್ದು ಬೞಿಕಂ ಸದ್ವರ್ತನಂಬೆತ್ತುದೆ
ನ್ನರುಮಂ ಪೊರ್ದಿಸದೇ ದಿಗಂಬರಸಮಾಯೋಗಂ ಸದಾಚಾರಮಂ  ೪೨

ವ || ಅಂತುಮಲ್ಲದೆಯುಂ

ಕಂ || ಎಡೆ ನೆಱೆಯದೀ ಬಲಕ್ಕಾ
ನೆಡೆಮಾಡುವೆನೆಂದು ನೆಲನನೊದವಿಪ ತೆಱದಿಂ
ಕಡಲಂ ಪೀರ್ದುದು ರಜಮೇಂ
ಪಡೆದುದೊ ಯುವರಾಜನಲ್ಲಿ ಪಡೆವಳವೆಸರಂ ೪೩

ವ || ತದನಂತರಂ

ಕಂ || ಕರಗಿಸಿದುದು ರಜಮಂ ಚಾ
ಮರಪವನಂ ವಾಜಿವದನವಾಯು ಪತಾಕಾಂ
ಬರಮಾತರಿಶ್ವನನುಗತ
ಮರುತಂ ಮತ್ತೇಭಕರ್ಣತಾಳಸಮೀರಂ           ೪೪

ವ || ಮತ್ತಂ

ಮ || ಹಯಲಾಳಾಜಮುಂ ಮದೇಭಮದಮೂತ್ರಾಸಾರಮುಂ ರೇಣುಸಂ
ಚಯಮಂ ತರ್ಗಿಸಿ ಮುಂದುಗಾಣಿಸಿತನಧ್ವಾಲೋಕಮಾಗಿರ್ದ ಸೇ
ನೆಯನಧ್ವಾನದೊಳಂತದೇನನಿತಱಿಂ ಮಾಣ್ದಿರ್ದುದೇ ಯಾನಲೀ
ಲೆಯುಮಂ ನೋೞ್ಪ ವಿಯಚ್ಚರರ್ಗೆ ತೆಱಪಂ ಮಾಡಿತ್ತು ಕಣ್ಣೂರ್ವಿನಂ      ೪೫

ವ || ತದನಂತಂ

ಚಂ || ಬಳೆದುದೊ ಭೂತಳಂ ಸುರಿದುದೋ ನಭ ಮೀಂದುದೊ ದಿಕ್ತಟಂ ಬಳಂ
ಗಳನೆನೆ ಪರ್ವಿದಾ ಪಡೆಯ ತೊೞ್ತುೞಿಯಿಂ ಗಿಡು ಬಳ್ಳಿ ಭೂರುಹಾ
ವಳಿ ಪೊದಱುಳ್ಳ ಬಲ್ಲಡವಿ ಪೆರ್ವಯಲಾಯ್ತು ನದೀನದೌಘಮಾ
ಗಳೆ ಬಱುಗಂಪಲಾಯ್ತು ಕುೞಿಯುಂ ತೆವಱುಂ ಸಮನಾಯ್ತದೆತ್ತಲುಂ         ೪೬

ವ || ಎನಿಸಿ ನಡೆವಲ್ಲಿ

ಉ || ಆ ಗುಣತುಂಗದೇವನ ಮಹಾಕಟಕಂ ನಡೆವುತ್ಸವಕ್ಕೆ ಪ
ಕ್ಕಾಗಿ ಜಗಕ್ಕೆ ಬೀಱಿದುವು ಪೆಂಪನನೇಕನಗೋಪಕಂಠಭೂ
ಭಾಗಮನೇಕ ರಮ್ಯತರುಷಂಡಮನೇಕ ನದೀನದಾಂತಿಕಾ
ಭೋಗಮನೇಕ ದಿವ್ಯಜನತೀರ್ಥನಿವಾಸಮನೇಕನಂದನಂ   ೪೭

ವ || ಅಂತು ವಿವಿಧ ರಮ್ಯಪ್ರದೇಶವಿಶ್ರಾಂತಶಿಬಿರನಾಗುತ್ತಲೆತ್ತಿಬರ್ಪ ವಿಕ್ರಮ ವಿನೋದನೆೞ್ತರವನಾಪ್ತ ಗುಪ್ತಚರರಿಂದಮಱಿದು ಕೆಲದ ನೆಲದ ಮಂಡಳಿಕವರ್ಗಮೆಲ್ಲಂ ತಲ್ಲಣಿಸಿ ಸುವಿಟಜನದಂತೆ ವಿದಿತ ಭೀರುಭಾವಮುಂ ವಾದಕನಿಕಾಯದಂತೆ ಘನಕಂಪಮುಂ ಕ್ಷೀಣಶಶಿಯಂತೆ ವಿಕಳಾತ್ಮಮುಂ ನಿದಾಘದಂತೆ ಶೋಷಿತಜಲಾಶಯಮುಂ ಸ್ನಪನಜಲದಂತೆ ಗಳಿತಾವಲೇಪಮುಂ ಶುಷ್ಕಕುಸುಮದಂತಪರಾಗರಸಮುಂ ಅರ್ಕರಿಪುವಿನಂತೆ ನಿರ್ಮುಕ್ತಭೋಗಮುಂ ಮೃಗಯಾವಿನೋದದಂತೆ ಧೃತರಾತ್ರಿಜಾಗರಮುಂ ಉತ್ಖಾತಖೞ್ಗದಂತೆ ಶೂನ್ಯೀಕೃತಕೋಶಮುಂ ಯೋಗಿಗಣದಂತೆ ವಿಷಯತ್ಯಾಗನಿರತಮುಂ ಖೇಡದಂತೆ ಗೋತ್ರವಾಹಿನೀವಳಯಿತಮುಂ ಅಸಿತಕಂಠಚರಿತ್ರದಂತೆ ದುರ್ಗೋಪಗತಮುಂ ಇಂದ್ರತನುವಿನಂತೆ ಧೃತಮಹಾಲೋಚನಸಹಸ್ರಮುಮಾಗುತ್ತುಮಿರಲಲ್ಲಿ ಕೆಲಬರ್ ಮುನ್ನ ಪದ್ಮರಾಜದಿಗ್ವಿಜಯದೊಳ್ ತಾಗಿ ಬಾಗಿದನುಭೂತ ಪರಿಪ್ಲವರ್

ಚಂ || ಬಗೆಯದಿದಿರ್ಚಿ ಸಾವುದು ಮರುಳ್ತನಮುಳ್ಳುದನಿತ್ತು ತೆತ್ತು ಕೆ
ಯ್ಮುಗಿದು ಬರ್ದುಂಕುವಂ ಹರಣಮುಳ್ಳೊಡೆ ಹಾಡಿಯುಣಲ್ಕೆ ಬರ್ಪುದೊ
ಮ್ಮೆಗೆ ತಲೆಸುತ್ತುವೋಗಿ ತಲೆಯಿರ್ದೊಡೆ ಸೋಲ್ವುದು ಕಾದಿ ಸತ್ತೊಡೆ
ತ್ತುಗುಮೆ ಸಮಸ್ತ ವಸ್ತುತತಿ ಸಾವುದಱಿಂ ಸಿರಿವೋಗಲಾಗದೇ      ೪೮

ನಯಮಿದು ನಮ್ಮ ನಾಡ ಗಡಿಯಂ ಪುಗದಲ್ಲಿಯೆ ಬಂದು ಮುತ್ತದ
ಲ್ಲಿಯೆ ಬೆದಱಟ್ಟಿ ಸಂಹರಿಸದಲ್ಲಿಯೆ ರಾಜ್ಯಮನೀೞ್ದುಕೊಳ್ಳದ
ಲ್ಲಿಯೆ ಬೆಸಕೆಯ್ವಮೆಂದು ನಿಜಸಾರಧನಂಗಳನಟ್ಟಿ ಮುಂದೆ ಭೀ
ತಿಯಿನಿದಿರ್ವಂದು ಕಂಡರಸುವಿಟ್ಟವರೇನುಚಿತಪ್ರವೀಣರೋ         ೪೯

ವ || ಅಂತು ಕಂಡ ಪರಪುರಾಧಿಪರ ವಿವಿಧ ವಸ್ತುಸದ್ಭಾವಮಂ ಕೆಯ್ಕೊಂಡು ತದೀಯ ಮಂಡಳಂಗಳನುೞಿದ ರಿಪುಮಂಡಳಕ್ಕೆ ನಡೆದು

ಮ || ಅನತಕ್ಷತ್ರಿಯರೊತ್ತುಗೊಂಡ ಗಿರಿದುರ್ಗಕ್ಕುಗ್ರವಜ್ರಾಗ್ನಿ ಕಾ
ನನದುರ್ಗಕ್ಕೆ ಮಹಾದವಾಗ್ನಿ ಜಲದುರ್ಗಕ್ಕುರ್ವಿದೌರ್ವಾಗ್ನಿ ಧಾ
ನ್ವನದುರ್ಗಕ್ಕೆ ಬೃಹಲ್ಲಯಾಗ್ನಿಯೆನೆ ತನ್ನುದ್ಯತ್ಪ್ರತಾಪಾಗ್ನಿ ನೀ
ೞ್ದೆನಸುಂ ಪರ್ವಿ ವಿಗುರ್ವಿಸಲ್ ನೃಪಸುತಂ ವಿಕ್ರಾಂತಮಂ ತೋಱಿದಂ        ೫೦