ಕಂ || ಶ್ರೀಜಯಲಕ್ಷ್ಮೀವದನಸ
ರೋಜಾರ್ಕಂ ದೂತವಚನಮೆರ್ದೆವುಗೆ ನುಡಿದಂ
ರಾಜಶಿಖಾಮಣಿ ವಿಬುಧಸ
ಮಾಜನುತಂ ಪ್ರಭು ಗುಣಾಬ್ಜಿನೀಕಳಹಂಸಂ    ೧

ಅಮರ್ದಿನ ಮೞೆಯುಂ ಸಿಡಿಲುಂ
ನಿಮಿರ್ದುದು ಪೆಡೆವರಲ ಬೆಳಗುಮುರಗನ ವಿಷಮುಂ
ನಿಮಿರ್ದುದೆನೆ ರಾಗಖೇದಮ
ನೆಮಗಿತ್ತುದು ನಿನ್ನ ನುಡಿಯ ಮೊದಲುಂ ತುದಿಯುಂ     ೨

ವ || ಆದೊಡೇನಾದುದು

ಚಂ || ಪಲರನದಿರ್ಪಿದುರ್ಕುಮೆಸೆಗುಂ ತನಗೀಯದೆಯೆಂದು ಬಂದು ದೋ
ರ್ವಲದಿನವುಂಕಿಬಿಟ್ಟ ಗಜಕರ್ಣನ[ನೇಂ ಗ] ಜಕರ್ಣದಂತೆ ಸಂ
ಚಲತೆಯೊಳೊಂದೆ ತೂಳ್ದಿ ಜಯವರ್ಮನೃಪಂಗೆ ಜಯಪ್ರಮೋದಮಂ
ಚಲಮುಮನುಂಟುಮಾಡದೊಡೆ ಮತ್ಕುಲಕೀರ್ತಿ ಕಿಲುಂಬುಗೊಳ್ಳದೇ        ೩

ಶರಣಾಯಾತರ್ಕಳಂ ಕಾವುದುಮೆರೆದವರ್ಗಾರ್ತೀವುದುಂ ಕ್ಷತ್ರಧರ್ಮಂ
ನರಪಂಗೆಂತೆಂದೊಡಂ ಲೋಗನೆ ಗಡ ಜನನೀಭ್ರಾತೃವಾ ಭೂಪನೀಗಳ್
ಪರಭೂಪಂ ಮುತ್ತೆ ಪೇೞ್ದಟ್ಟಿದನೆನಗೆನೆ ಮುಳ್ಗೀಳಲಾಳೋಚಿಸುತ್ತಾ
ನಿರಲುಂಟೇಂ ಪಂಥವಿನ್ನಾರದೊ ಪರಿಭವವೇಕಿರ್ಪೆ ನಾನಿಂದೆ ಬರ್ಪೆಂ           ೪

ವ || ಇಂತೆಂದು ತಱಿಸಂದು ಪೂಣ್ದು ತತ್ಸಮಯದೊಳ್ ಜಯಪ್ರಯಾಣಮಂ ಪಡೆಗೆ ಪಡೆವಳನಿಂ ಸಾಱಿಸಿ (ವಿಸ) ರ್ಜಿತರಾಜಲೋಕನಾಸ್ಥಾನಮಂಟಪದಿನೆೞ್ದು ಮಜ್ಜನಭೋಜನಾದ್ಯುಚಿತದಿಂದಂ

ಕಂ || ದಮನನನಧ್ವಶ್ರಮಸಂ
ಕ್ರಮನನನಾತ್ಮೀಯ ಮಾತುಳಾದೇಶಕೃತಾ
ಗಮನನನಾಹಿತಚಿಂತಾ
ಸುಮನನನಾಱಿಸಿದನರಸನಂದಿನ ದಿನದೊಳ್    ೫

ವ || ಅನ್ನೆಗಂ

ಚಂ || ಅಗಲೆ ನಿಜೇಷ್ಟಚಕ್ರಮೆಸಕಂಗಿಡೆ ಮಂಡಲದೇೞ್ಗೆ ಚಂಡಹೇ
ತಿಗಳ ಪೊಡರ್ಪುಕುಂದೆ ಕಮಲಂ ಕಿಡಲಂಬರಮಂ ಬಿಸುಟ್ಟು ಶ
ತ್ರುಗಳದಿರ್ದೋಡುಗುಂ ನೃಪತಿಯೆತ್ತಿದೊಡೀ ತೆಱದಿಂದಮೆಂದು ಧಾ
ತ್ರಿಗೆ ಹರಿ ಮುನ್ನುದಾಹರಿಸಿ ತೋರ್ಪವೊಲೆಯ್ದಿದನಸ್ತಶೈಲಮಂ  ೬

ವ || ಅಂತು ನೇಸರ್ಪಡಲೊಡಂ

ಚಂ || ನೆಗೞೆ ದಿನಾವಸಾನಪಟಹಧ್ವನಿ ರಂಜಿಸೆ ಸಂಜೆಗೆಂಪು ಸ
ಯ್ತಗಲೆ ರಥಾಂಗಯುಗ್ಮತತಿ ಪೞ್ಕೆಗೆ ಸಾರೆ ವಿಹಂಗಜಾತಿ ಕಾ
ಡಿಗೆವೊಗರೇಱೆ ಮೂಡದೆಸೆ ಪುಟ್ಟೆ ವಿಟೀವಿಟಸಂಧಿವಿಗ್ರಹಂ
ಮುಗಿಯೆ ಸರೋಜರಾಜಿ ದಳವೇಱೆ ಖಳರ್ ಮೊಗಸಿತ್ತು ಮುನ್ನಿರುಳ್       ೭

ವ || ಆ ಸಮಯದೊಳ್

ಉ || ಮಂಗಳತೂರ್ಯನಾದವಭಿರಂಜಿಸೆ ಮಂಗಳದೀಪಪಾತ್ರಹ
ಸ್ತಂಗಳ ಕಾಮಿನೀತತಿ ನಿವಾಳಿಸೆ ಮಂಗಳಪಾಠಕೋಕ್ತಿ ಚಿ
ತ್ತಂಗೊಳೆ ಮಂಗಳಾರ್ಹದಿನದಂದಪರಾಹ್ನಿಕ[ಸಂತತ]ಕ್ರಿಯಾ
ಮಂಗಳವಾಗೆ ಮಂಗಳಪರಂಪರೆವೆತ್ತೆಸೆದಂ ಮಹೀಭುಜಂ೮

ವ || ತದನಂತರಂ

ಮ.ಸ್ರ || ಗಿರಿಗಳ್ ನೀಳಾದ್ರಿಯೆಂಬಂತಿರೆ ನಿಖಿಳನದೀರಾಜಿ ಕಾಳಿಂದಿಯೆಂಬಂ
ತಿರೆ ವೃಕ್ಷಂಗಳ್ ತಮಾಳಾಕೃತಿಯಿನಿರೆ ಮೃಗಶ್ರೇಣಿ ಋಕ್ಷಂಗಳೆಂಬಂ
ತಿರೆ ನಾನಾಪಕ್ಷಿಗಳ್ ಕೋಗಿಲೆವೊಲಿರೆ ನಭಂ ಕಾರ್ಮುಗಿಲ್ ಮುಚ್ಚಿದಂತಾ
ಗಿರೆ ಭೂ ನೀಳಸ್ಥಳೀಕುಟ್ಟಿಮಮೆನಿಸಿರೆ ಪರ್ವಿತ್ತು ಘೋರಾಂಧಕಾರಂ          ೯

ವ || ಆಗಳ್

ಕಂ || ಜನಪದ ಜಯಪ್ರಶಸ್ತಿಯ
ನನಿಮಿಷಪಥಮೆಂಬ ನೀಳಪಟದೊಳ್ ರಾತ್ರ್ಯಂ
ಗನೆ ಬರೆದ ಬರೆಪದಕ್ಕರ
ಮೆನೆ ತೊಳಗಿದುದು ವಿದಿತ ತಾರಾನಿಕರಂ         ೧೦

ವ || ಮತ್ತಂ

ಕಂ || ಸಂಕಳಿತಬಹುಳತಾರಾ
ಸಂಕುಳದಿಂ ಪೋಲ್ತುದಭ್ರಮಾವೃತತಿಮಿರಂ
ತೇಂಕುವ ಮಲ್ಲೀಮುಕುಳದ
ಸಂಕುಳಮಂ ತಳೆದು ನಿಂದ ಜಗುನೆಯ ಮಡುವಂ           ೧೧

ವ || ಅವಱೊಡನೆ ಬೆಳಗನೊಳಕೊಂಡು ಮನೆಮನೆ ದಪ್ಪದೊಪ್ಪಿ

ಕಂ || ಮುನಿದು ತವೆ ನುಂಗಿ ತಿಮಿರಮ
ನಿನಿತೞ್ಕಿಸಲಾಱದಡರೆ ಕಾಱಿದಪುವಿವೆಂ
ಬಿನಮೆಸೆದುವು ಸೊಡರ್ಗಳ್ ಜಲ
ಕೆನೆ ನಿಜಚೂಳಿಕೆಯಿನೊಗೆವ ಕಾಳಿಕೆಯಿಂದಂ       ೧೨

ವ || ಅನಂತರಮುದಯಸಮಯದರುಣಕಿರಣಪ್ರವಾಳದಿಂದಮಿಂದ್ರದಿಗ್ವಧೂ ಶಿಖಂಡಮಂಡನವಿಳಾಸನಮಂ ತಳೆದು

ಶಿಖರಿಣೀ || ಕಳಾರುಂದ್ರಂ ಚಂದ್ರಂ ಬೆಳಗೆ ನಭಮಂ ಕಾಂತಿವಿಸರಂ
ಗಳಿಂ ನೆಯ್ದಿಲ್ಗೆಯ್ದಲ್ ಮೊಗಸಿ ನಳಿನೀವೃಂದದಳಿನೀ
ಕುಳಂ ಕೋಕಂ ಶೋಕಂಬಡೆಯೆ ಮನದೊಳ್ ಪುಟ್ಟಿ ಜಗದೊಳ್
ಬಳೋತ್ಕಾರಂ ಮಾರಂಗದಟಿನತಿರುಳ್ ರಂಜಿಸಿತಿರುಳ್    ೧೩

ವ || ಅಂತು

ಕಂ || ತೊಳಗುವ ನಕ್ಷತ್ರಂಗಳ
ಬೆಳಗಿಂ ಸುರಲೋಕಚಂದ್ರನೊಪ್ಪಿದನತ್ತಲ್
ಬೆಳಗುವ ಕೈದೀವಿಗೆಗಳ
ಬೆಳಗಿಂ ನರಲೋಕಚಂದ್ರನೊಪ್ಪಿದನಿತ್ತಲ್       ೧೪

ವಿಲಸಿತಚಂದ್ರಾಲೋಕದಿ
ನಲರ್ದುವು ಕುಮುದಂಗಳತ್ತಮಿತ್ತಲ್ ನೃಪನ
ಗ್ಗಲಿಪ ಸದಯಾವಲೋಕದಿ
ನಲರ್ದುವು ಸೇವಕರ ನಯನಹೃತ್ಕುಮುದಂಗಳ್           ೧೫

ವ || ಅಂತು ಪಳಚ್ಚನಾದಚ್ಚವೆಳ್ದಿಂಗಳೊಳ್ ವಸ್ತುಕಕವಿಗಳ ಕಾವ್ಯಗೋಷ್ಠಿಯುಂ ವರ್ಣಕಕವಿಗಳ ಗೀತಗೋಷ್ಠಿಯುಂ ಮನಂಗೊಳಿಸೆ ಯಾಮಿನೀಪ್ರಥಮಯಾಮಮಂ ಕಳಿಪಿ ಬಳಿಕ್ಕಮೋಲಗಮಂ ವಿಸರ್ಜಿಸಿ ಸೆಜ್ಜೆವನೆಗೆ ಬಿಜಯಂಗೆಯ್ದು

ಕಂ || ಅಮೃತಾಣಾವದೊಳ್ ಸಿರಿವೆರ

ಸು ಮುಕುಂದಂ ಪವಡಿಪಂದದಿಂ ಪವಡಿಸಿದಂ
ಹಿಮಧವಳಧಾಮಶಯನದೊ
ಳಮರ್ದಿರೆ ಸೂೞರಸಿವೆರಸು ರಾಜಮನೋಜಂ  ೧೬

ವ || ಅಂತು ಸುಖಸುಪ್ತನಾಗಿರೆ ನಿಶಾವಸಾನಸಮಯದೊಳ್

ಕಂ || ಸೊಡರ್ಗಳಿರುಳೆಣ್ಣೆಯಂ ನಿಲೆ
ಕುಡಿದೞ್ಕಮೆವಟ್ಟುವೆನಿಸಿ ನಮೆದುವು ತನುಗಳ್
ಜಡತೆಯಿನದಂತೆ ಪೊಡರಲ್
ಕುಡುಗುಮೆ ದೋಷಾತಿರೇಕಮರುಚಿನಿಮಿತ್ತಂ   ೧೭

ಇದು ತಳರ್ವ ನಿಶಾಸುದತಿಯ
ಮೃದುಪದನೂಪುರದ ನೂಲ ತೊಂಗಲ ದನಿಯೆಂ
ಬುದನೆನಿಸಿ ಪೊಣ್ಮಿದುದು ನಿ
ದ್ದೆದಿಳಿದು ನಲಿದುಲಿಪುತಿರ್ಪ ವಿಹಗರವಂಗಳ್  ೧೮

ಉತ್ಸಾಹ || ಎತ್ತಿ ನಡೆಯಲೊಡರಿಪೀತನೆನ್ನುಮಂ ಸದೋಷನು
ದ್ವೃತ್ತನೆಂದು ಮುಳಿದು ಕಿಡುಗುಮೆಂಬ ಶಂಕೆಗುಮ್ಮಳಂ
ಬೆತ್ತನೆನಿಸಿ ಮಸುಳ್ದು ನಿಂದು ತನ್ನ ಹೃದಯದೊಳ್ ಭಯಾ
ಯತ್ತನೆರಳೆವುಳ್ಳಜಡನತಿ ಪ್ರತಾಪಧೀರನೇ       ೧೯

ವ || ಮತ್ತಮುತ್ತುಂಗಚೈತ್ಯಭವನಂಗಳೊಳಗೆ ಮೊೞಗುವ ವಿಭಾತ ಪೂಜಾಪಂಚ ಮಹಾಶಬ್ದ ಘೋಷಮಂ ಸಂವೇದಿಸಿಯುಮತಿ ರಮ್ಯಹರ್ಮ್ಯನಿವಹನೀಡದೊಳ್ ನಿದ್ದೆಗೆಯ್ದ ಪಾರಾವತಂಗಳನೆೞ್ಚಱಿಸಿಯುಂ ಪಕ್ಕದಲೆಯನೆಕ್ಕೆಯಿಂದಮರ್ದೆಱಂಕೆವಿಡಿರ್ದೆೞ್ದು ಕೂಗುತಿರ್ಪ ಕುಕ್ಕುಟಕುಳಂಗಳ ಸರಂಗಳಂ ಸಂಗಳಿಸಿಯುಂ ಕುಳಿರ್ವಬೆಳ್ದಿಂಗಳಂ ಬಿಡದಡರೆ ಕುಡಿದು ಸೊಕ್ಕಿ ಜೋಂಪಿಸುವಲಂಪಿನ ಚಕೋರಂಗಳನೆಳಸಿರ್ದು ನಸುನಿದ್ರೆಗೆಯ್ಸಿಯುಂ ಮೇಳಿಸಿದ ಸೆಜ್ಜರದಿನೇೞಲುಜ್ಜುಗಂಗೆಯ್ವ ವಿಜಯಕುಂಜರದ ಮಂಜೀರಸಿಂಜಿತಕ್ಕೆ ಪಕ್ಕಾಗಿಯುಂ ಸಪ್ರಭವ ಸುಪ್ರಭಾತ ಮಂಗಳಮೋದುತಿರ್ಪ ವರಗಾಯನಿಯನಪ್ಪುಗೆಯ್ದುಂ ವಿನೋದಕಲಹದಿಂದ ವಿನತಾದಿನಿಯರ ನಯಕ್ಕೆ ತಿಳಿಯದಿರ್ದ ಬರ್ದೆಯರ ಮುದ್ದುತನದ ಮುಳಿಸಂ ಬೞಿಕ್ಕೆ ಬಱಿದೆ ನೆಱವುಗಿಡಿಸಿಯುಂ ಸುಸಿಲಮಸಕದಿಂ ಬಸವೞಿದು ನಸುನಿದ್ದೆಗೆಯ್ದ ದಂಪತಿಗಳ ಪೀನಕದಂಬವಂ ತುಱುಂಬಿಯುಂ ಗೃಹೋಪವನದ ತಿಳಿಗೊಳದ ನಳಿನೀದಳದ ಸಂಪುಟಪುಟೀಕೋಟರದೊಳೆಱಗಿಪ ಮಱಿದುಂಬಿವಿಂಡನೆೞ್ಚಱಿಸಿಯುಂ ಸಂಪ್ರಾಪ್ತಸುಪ್ತಿ ಜಾತಜಾಡ್ಯಮೂಢರಾಗಿರ್ದ ಸುಕವಿಗಳ ಮತಿಯನತಿ ಸಿತಮಾಗಿಸಿಯುಂ ಮದಗಜಗ ಮನದಿನೆಯ್ತಂದು

ಕಂ || ಶಯ್ಯಾಸದನಗವಾಕ್ಷಮ
ನೊಯ್ಯನೆ ಪೊಕ್ಕುಲಿದು ನೃಪನ ಸುಖನಿದ್ರೆಯುಮಂ
ಕೆಯ್ಯಿಂ ತೊಲಗಿಸಿತು ಮಿಗೆ ಪೞ
ಮೆಯ್ಯ ಪಸಾಯಿತರವೋಲ್ ಪ್ರಭಾತಸಮೀರಂ            ೨೦

ವ || ಅನ್ನೆಗಂ

ಕಂ || ಆದಪುದು ಯಾನದೊಳ್ ಮಿ
ತ್ರೋದಯ ಮೀತೆಱದಿ ಭುವನಮಿತ್ರಂಗೆಂದಾ
ವೇದಿಸುವಂತಾದುದು ಮಿ
ತ್ರೋದಯಮಗ್ಗಳಿಸೆ ರಾಗಮುದಯಿಸೆ ತೇಜಂ  ೨೧

ವ || ಅಂತು

ಕಂ || ಚಂಡಕರಂ ಪ್ರಾಕ್ಘೈಲಶಿ
ಖಂಡಮನೇಱಿದೊಡಖಂಡಮಂಡಲಮಮರ್ದಾ
ಖಂಡಳದಿಗಂಗನಾಮಣಿ
ಕುಂಡಳಮೆನಿಸಿರ್ದುದರುಣಕಿರಣಚ್ಛವಿಯಿಂ     ೨೨

ಮ || ಮಸಕಂಗುಂದೆ ನಿಶಾಟಕೋಟಿ ಕಿಡೆ ಶುಕ್ರಾಳೋಕಸಂಪತ್ತಿ ಪು
ಟ್ಟೆ ಸುರೇಂದ್ರಾಶೆಗೆ ರಾಗಮೆಂದು ಹರಿ ಪದ್ಮಾನಂದಿ ಪೀತಾಂಬರೋ
ಲ್ಲಸಿತಂ ಚಕ್ರಸಹಾಯನಾಕ್ರಮಿಸಿದಂ ಭೂಚಕ್ರಮಂ ಪಾದದಿಂ
ರಸೆಗಾಗಳ್ ಬಲಿದುಸ್ತಮಂ ತಳರ್ವಿನಂ ದಾನಪ್ರಬದ್ಧಾಕುಳಂ        ೨೩

ಕಂ || ಮಾಗಧಮಂಗಳಗೀತಾ
ಭೋಗದಿನುನ್ಮದ್ರನಾಗಿ ಸಲ್ಲಲಿತ ಮನೋ
ರಾಗಂ ನೃಪನೊಡರಿಸಿದಂ
ಬೇಗಂ ಪ್ರತ್ಯೂಷಕೃತ್ಯಮಂಗಳವಿಧಿಯಂ         ೨೪

ವ || ಆ ಪ್ರಸ್ತಾವದೊಳ್

ಮ || ದೆಸೆಯೊಳ್ ದಿಗ್ಗಜಬೃಂಹಿತಂ ಗಗನದೊಳ್ ಸೂರ್ಯಾಶ್ವಹೇಷಾರವಂ
ವಸುಧಾಭೃತ್ಕುಳದೊಳ್ ವಿನಿರ್ಜರರವಂ ವಾರಾಸಿಯೊಳ್ ಘೂರ್ಣನ
ಪ್ರಸರಂ ಕಾನನದೊಳ್ ಮೃಗೇಂದ್ರರುತಿ ಮೆಯ್ವೆರ್ಚಲ್ಕತಿವ್ಯಾಪ್ತಿಯಾ
ಯ್ತು ಸುಹೃಚ್ಚಕ್ರಮಯಂ ಕರಂ ನೃಪಜಯಪ್ರಸ್ಥಾನಭೇರೀರವಂ  ೨೫

ವ || ಆಗಳಾ ಘೋಷದ ಮಸಕಮಂ ಕೇಳಲೊಡನೆ ಮಂದರಾದ್ರಿಮಥನಸಮಯಸ ಮುದ್ಗೀರ್ಣ ಗುಣಾರ್ಣವಕ್ಷೋಭರಭಸಮಂ ತಳೆದು ಬಳೆದು ಚತುರಂಗಬಳದ ಕಳಕಳ ಮಳುಂಬಮಾಗೆ

ಮ || ಲಲಿತಾಂತಃಪುರಕೋಟಿ ಪಿಂದೆ ತಳತಂತ್ರಂ ಮುಂದೆ ಸಾಮಂತಸಂ
ಕುಳ ವಿರ್ವಕ್ಕದೊಳಂತೆ ಪತ್ತಿಬರೆ ನಾನಾನೂರ ಯಾನಂಗಳಿಂ
ತಳರ್ದಂ ಕಾರ್ಮುಗಿಲಂ ಮುಸುಂಕುವೆಳಮಿಂಚೆಂಬಂತೆ ತಂದಾನೆಯಂ
ಪೊಳಯಿಪ್ಪಂಕುಶಕಾಂತಿಗಳ್ ಪುದುವಿನಂ ಸದ್ಭವ್ಯಸಂಕ್ರಂದನಂ     ೨೬

ಕಂ || ಅತಿಸೌಮ್ಯಸಿತಾಸಿತಲೋ
ಹಿತಚಿತ್ರಾಂಕುಶದಿನೆಸೆವ ಕೇತುಗಳಿಂ ಮಾ
ರುತವೀಥಿಯಂತೆ ನೃಪವೀ
ಥಿ ತೋಱೆ ನರಲೋಕಚಂದ್ರನೆಯ್ದಿದನದಱೊಳ್         ೨೭

ವ || ಅಂತು ವಿವಿಧ ಧ್ವಜರಾಜಿವಿರಾಜಮಾನಮಾದ ರಾಜಮಾರ್ಗದೊಳಗಣ ವಿಚಿತ್ರಾಂಶುಕ ನಿಚಯರಚಿತಂಗಳುಂ ಸಲ್ಲಲಿತಪಲ್ಲವೋಲ್ಲಲಿತಂಗಳುಂ ಚಂಚತ್ಪಂಚರತ್ನಾಂಚಿತಮುಮಪ್ಪ ವಿವಿಧ ತೋರಣಂಗಳಂ ನುಸುಳುತ್ತುಂ ಬಂದು

ಕಂ || ನಾನಾವಸ್ತುವಿತಾನದೆ
ನಾನಾನೃಪಕುಳಜಯಾಂಗನಾ ಪರಿಣಯನಾ
ಸ್ಥಾನಮೆನಿಸಿದ ಜಯಪ್ರ
ಸ್ಥಾನಶ್ರೀಶಿಬಿರಮಂ ಮಹೀಪತಿ ಪೊಕ್ಕಂ         ೨೮

ವ || ಪೊಕ್ಕಂದಿನ ದಿವಸಮಲ್ಲಲ್ಲಿ ವಲ್ಲಭತುಂಗವಿಜಯಗಜಸಂಚಯಕ್ಕೆ ತಕ್ಕ ಪಲ್ಲಣದ ಬಿಸುಗೆಯ ಮೊಗವಡದಗುೞದಳವಡಿಕೆಯಂ ತೋರ್ಪ ಸಾಹಣವೆಗ್ಗಡೆಗಳ ಸಂಸರ್ಗದೊಳಂ ಅಸಿ ಮುಸಲ ಕಣಯ ಕಂಪಣ ಗದಾದಂಡ ಕೋದಂಡ ತೋಮರಾದ್ಯಾ ಮುಕ್ತಾಮುಕ್ತ ಪಾಣಿಮುಕ್ತ ಯಂತ್ರಮುಕ್ತಂಗಳಪ್ಪ ನಿಜನಿಶಿತ ನಿಖಿಳಾಯುಧಂಗಳಮ ವಿಳೋಕಿಪ ಕುತೂಹಳದೊಳಂ ಹರಿಕರಿಕರೇಣು ವೇಸರಾಂದೊಳ ಶಿಬಿಕಾದಿಯಾನಸಂತಾನಮಂ ತಾನೆ ನಿರವಿಸಿ ನಿಜಾಂತಃಪುರವಿಳಾಸಿನೀಜನಕ್ಕಂ ಪಸಾಯಿತವರ್ಗಕ್ಕಂ ಎಸೆವ ಸಮಪ್ರಸಾದರಸವಿ ನೋದದೊಳಮಿರ್ದು ಮಱುದೆವಸಂ ಮಾರ್ತಂಡಮಂಡಲೋದಯದೊಳ್ ವಿಚಿತ್ರಕ್ರಿಯಾನಿ ಯಾವ ನಿರ್ವರ್ತನಾನಂತರಂ ಪ್ರಯಾಣೋತ್ಸುಕನಾಗಿ

ಚಂ || ಕೃತಯುಗಚಕ್ರವರ್ತಿ ಭರತೇಶ್ವರನಂತನುಬದ್ಧವಾಜಿ ರಾ
ಜಿತಫಳಭೂಜದಂತೆ ಧೃತಭಾಸುರಹೇತಿಸಹಸ್ರಮರ್ಕನಂ
ತತಿಧೃತರಶ್ಮಿ ರತ್ನಗಣದಂತೆ ಸಮಾಶ್ರಿತಸೂನಮೀಶನಂ
ತತಿಶಯಕೇತುಶೋಭಿ ನಭದಂತೆನೆ ರಂಜಿಪ ತೇರನೇಱಿದಂ            ೨೯

ವ || ಅಂತು ಜಯಮನೋರಥಾರೂಢಂ ರಥಾರೂಢನಾಗಿ ಸಹಾಯ ರಾಜನ್ಯರಾಜಿವೆರಸು ಅಪಾರಪರಿವಾರಪರಿವೃತಂ ಪ್ರಸ್ಥಾನಶಿಬಿರನಿಳಯದಿಂ ತಳರ್ವುದುಂ

ಉ || ಆಂಕೆಯ ಗಂಡನಾವನುಱದೀ ನಡೆತಂದನೆ ವೀರವೈರಿವ
ಜ್ರಾಂಕುಶನಿತ್ತು ತೆತ್ತು ಬೆಸಕೆಯ್ದು ಬರ್ದುಂಕಿಮರಾತಿಗಳ್ ಭಯಾ
ತಂಕದಿನೆಂದು ಸಾಱುವವೋಲಾಯ್ತು ಘನಧ್ವನಿತಾಭಿರಾಮನಾ
ಮಾಂಕಿತ ಕಾಹಳಂ ವಿಜಯದೋಹಳಮಾತ್ತ ಜಗತ್ಕುತೂಹಳಂ      ೩೦

ವ || ಆಗಳಾ ನಿನಾದಮಂ ಕೇಳಲೊಡಂ

ಕಂ || ಸಮುದೀರ್ಣಘೂರ್ಣಿತಾರ್ಣವ
ಸಮಮಾದುದನೂರ ಯಾನಸರಭಸಜನಸಂ
ಭ್ರಮಕಳಕಳದಿಂ ನೃಪವಿ
ಕ್ರಮಲಕ್ಷ್ಮೀರತ್ನಹಸ್ತ ಕಟಕಂ ಕಟಕಂ   ೩೧

ವ || ಅಂತೆತ್ತಿ ತಳರ್ವುದುಂ

ಮ || ಹರಿಹೇಷಾಧ್ವನಿ ಗಂಧಸಿಂಧುರಘಟಾಘಂಟಾಸ್ವನಂ ಸ್ಯಂದನೋ
ತ್ಕರಚೀತ್ಕಾರರವಂ ಭಟೋದ್ಭಟರಟತ್ಕೋಳಾಹಳಂ ಶಂಖಪು
ಷ್ಕರಭೇರೀ ಕಹಳಾಮೃದಂಗಬಹಳಪ್ರಧ್ವಾನಮಾಘೂರ್ಣ ದಿ
ಕ್ಕರಿಕರ್ಣಾಂತರಮಾಗೆ ನೀಳ್ದುದು ನೃಪಶ್ರೀಜೈತ್ರಯಾತ್ರೋತ್ಸವಂ            ೩೨

ಚಂ || ಬಳೆದುದೊ ಭೂತಳಂ ಬೆಸಲೆಯಾಯ್ತೊ ದಿಶಾವಳಿ ಮೇರೆದಪ್ಪಿತೋ
ಜಳಮಯಮಾಗಿ ವಾರ್ಧಿ ಭುವನತ್ರಯವಾಸಿಗಳೆಲ್ಲಮಿಲ್ಲಿಗೀ
ಗಳೆ ನೆರವಾಗಿ ಬಂದು ನಡೆವಂದಮೊ ಪೇೞಿಮೆನಲ್ಕಗುರ್ವನಾ
ಳ್ದಳವಿಗಳುಂಬಮಾದುದು ಬಳಪ್ರಚಳಂ ಜಯತುಂಗದೇವನಾ       ೩೩

ವ || ಇಂತು ಸಕಳ ಕ್ಷೋಣೀತಳಕ್ಷೋಭಕಾರಿಯಾಗಿ ನಡೆವಲ್ಲಿ

ಮ || ಭರದಿಂ ಶೇಷನನೆತ್ತಿ ಪೊತ್ತಿ ಪೊಗೆಯಲ್ಕುಚ್ಛ್ವಾಸದಿಂದುರ್ವಿಗು
ಬ್ಬರಿಪುದ್ದಾಮ ನಿಕಾಮ ಧುಮಚಯಮೆಂಬಂತಾಗಿ ಮಾಣ್ದಿರ್ದುದೇ
ಪರತೇಜಸ್ವಿಯನೇಕೆ ಸೈರಿಪುದಿದೆಂಬಂತುಷ್ಣರುಗ್ಬಿಂಬಡಂ
ಬರಮಂ ಪೂೞ್ದುದು ತದ್ಭಟಪ್ರಬಳ ಪಾದೋದ್ಧೂತ ಧೂಳೀಚಯಂ        ೩೪

ವ || ಮತ್ತಂ

ಮ || ಅದು ಸನ್ಮಾರ್ಗವಿಶುದ್ಧಿಯಂ ಕೆಡಿಸಿತಾಶಾಂತಸ್ಫುಟಸ್ವಚ್ಛಭಾ
ವದ ಪೆಂಪಂ ಪೆಱಗಾಗಿಸಿತ್ತು ಜನಸಮ್ಯಗ್ಧರ್ಶನಜ್ಞಾನಂ
ಪದಮಂ ಕೀೞ್ಪಸಿಸಿತ್ತು ತಾಂ ಜಡಧಿಗಳ್ಗಂತಸ್ಥಮಾಗಿರ್ದುದೆಂ
ಬಿದು ಯುಕ್ತೋಕ್ತಿ ಕುಮಾರ್ಗನಿರ್ಗತ ರಜೋಜಾಳಕ್ಕಿದಾಶ್ಚರ್ಯಮೇಂ       ೩೫

ಚಂ || ಪೆಸರನರೇಂದ್ರನಂದನರ ಚಾಮರವಾಯು ಕೞಲ್ಚೆ ಸಾಮಜ
ಪ್ರಸರದ ಕರ್ಣತಾಳಮರುತಂ ಮರಳೊತ್ತೆ ಮದಾಂಬುಶೀಕರಂ
ಪಸರಿಸಿ ಪೀರೆ ವಾಜಿಗಳಲೋಳೆಯ ಫೇನವಿತಾನವೀಂಟೆ ನಿ
ಶ್ವಸಿತದ ಗಾಳಿ ಚಾಳಿಸೆ ತೆರಳ್ಗಡಿಗೞ್ಗಿತು ಧೂಳಿಜಾಳಮುಂ         ೩೬

ಕಂ || ಕರಿಯಮದಪಂಕಜಳಮಾ
ವರಿಸಿದ ವಾಹಿನಿಯೊಳಲೆಯೆ ಮಾರುತರಜಕಂ
ಪರೆದ ರಜದಿಂದೆ ಮಾಸಿದ
ಹರಿದಂಬರಮೆಯ್ದೆ ಜಲಕನಾಯ್ತಿದು ಚಿತ್ತಂ    ೩೭

ವ || ಅಂತು ಜಗತೀದಿಗಂತಗಗನತಳವಳಯಮತಿ ವಿವಿಧ ಪಾಂಸುಪಟಲಮಾಗೆ

ಕಂ || ಶತ್ರುಕ್ಷತ್ರಿಯಮುಖ ಶತ
ಪತ್ರಗ್ಲಾನಿಯಿನತುಚ್ಛನೃಪಕಟಕ ಮಹಾ
ಯಾತ್ರಾವಿಳಾಸಚಂದ್ರಿಕೆ
ನೇತ್ರೋತ್ಪಳ ಶುಭದಮಾಯ್ತು ನೋೞ್ಪರ್ಗೆನಸುಂ        ೩೮

ವ || ಆಗಳಲ್ಲಿ

ಮ || ಮುದದಿಂ ಯಾನವಿಳಾಸಮೊಪ್ಪೆ ಮೆಱೆದರ್ ತಂತಮ್ಮ ಸಂಪತ್ತಿಯಂ
ಕದನೋಚ್ಚಂಡಭುಜರ್ ಮಹಾಮಹಿಭುಜರ್ ಶೌರ್ಯೋಗ್ರಧೀಮಂತರಂ
ಕದ ಸಾಮಂತರುದಾರ ವೀರವಿಭವಶ್ರೀಮನ್ನೆಯರ್ ಮನ್ನೆಯರ್
ಮದವದ್ವೈರಿವಿಮರ್ದನಿರ್ದಯ ಕನತ್ಕೌಕ್ಷೇಯಕರ್ ನಾಯಕರ್     ೨೯

ಕ್ರಮಸಿಂಹಾಸನಮೊಂದೆ ಭೇದಮಿವರ್ಗಂ ಭೂಪಂಗ ಮಂತಾವಭೇ
ದಮುಮಿಲ್ಲಾಸ್ಮವಿಳಾಸದಿಂ ವಿಭವದಿಂ ಸಾಮಗ್ರಿಯಿಂ ತೇಜದಿಮ
ಸಮನೆಂಬಂತಿರಶೇಷ ರಾಜ್ಯಭರಧುರ್ಯರ್ ಪೂರ್ಣಕಾರ್ಯರ್ ನಯಾ
ಗಮವಿದ್ಯಾಪುರುಷರ್ ಪ್ರಧಾನಪುರುಷರ್ ಬಂದರ್ ನಿಜಾನಂದದಿಂ೪೦

ಉ || ಪೊನ್ನೊಱೆ ಚಿಕ್ಕಗೇಣ್ ಪೞೆಯ ಟೊಪ್ಪಿಗೆ ಬೆಳ್ಮೊಗಸುತ್ತು ನೇಲ್ದಗ
ಡ್ಡನ್ನಸುಜೋಲ್ದ ಡೊಳ್ಳು ಪುಟದಂಗಿಗೆ ಶಿಷ್ಟಪರಿಗ್ರಹಂ ಬುಧೋ
ತ್ಪನ್ನ ಸುಭಾಷಿತಂ ತೞೆಯ ತಣ್ಣೆೞಲಂದಣಕಾರ್ಯವೇಷಮಂ
ಕನ್ನಡಿಸಲ್ಕೆ ಬಂದರವನೀಶ ನಿಯೋಗಿಗಳುದ್ಘಭೋಗಿಗಳ್           ೪೧

ಚಂ || ನಿರುಪಮಲೀಲೆ ಕಣ್ದೆಱೆಯೆ ಬೆಜ್ಜರುಮಜ್ಜರುಮಂಗರಕ್ಕರುಂ
ಕರವಳರುಮ ವಿಳಾಸಿನಿಯರುಂ ನಗೆಕಾಱರುಮಿಚ್ಚೆಕಾಱುರುಂ
ಸರಸವಿನೋದಿಗಳ್ ಸುಮನದೀಮನೆವಕ್ಕಳುಮಿರ್ಕೆಲಂಗಳೊಳ್
ಬರೆ ನಡೆತಂದರಂದಿರದೆ ರಾಜಕುಮಾರರುದಾರರೞ್ತಿಯಿಂ            ೪೨

ಶಾ || ಕಾಳ ವ್ಯಾಳ ಕರಾಳಚಾಪಚಟುಳಂ ಸದ್ಬಾಣತೂಣೀರಬ
ದ್ಧಾಳಂಬಂ ಗುಣಕೃಷ್ಟ ನಿಷ್ಠುರ ಕಿಣಭ್ರಾಜದ್ಭುಜಂ ಬಂಧುರಾ
ಭೀಳಜ್ಯಾರವಭೈರವಂ ಸಚಳಿತಂ ವಿಂಧ್ಯಾಟವೀಯಾಟನೋ
ಲ್ಲೀಳಂ ಬಿಲ್ವಡೆ ಕಾದಿ ಗೆಲ್ವೊಡೆ ಜವಂಗಂ ಮೊಗ್ಗೆ ಪೇಳೆಂಬಿನಂ   ೪೩

ಕಂ || ಮೊೞಗುವ ಪರಿಗೆಯ ರಭಸಂ
ಮೊೞಗುವ ವಿಳಯಾಪ್ರಘಟೆಯ ಘರ್ಜನವೆನಲಿಂ
ಮೊೞಗುವ ದನಿಗೆಣೆಯೆನೆ ತ
ಕ್ಕೞಿಯದೆ ನಡೆತಂದುದಂದು ನೃಪತಳತಂತ್ರಂ  ೪೪

ಕಡಿತಲೆಯವರೇೞ್ಗೆಗೆ ನಾ
ಲ್ಕಡಿತಲೆಗೆಟ್ಟೋದ ದೂತರಾರೆನೆ ನಡೆದರ್
ಕಡಿತಲೆಯ ಭಟರ್ ಮುಂಡದ
ಕಡಿ ತಲೆಯೊಡನುರುಳೆ ಪೊ‌ಯ್ದ ಕಡುವಿನ್ನಣಿಗರ್         ೪೫

ವ || ಅಂತುಗ್ರೋಗ್ರತರ ಸಮಗ್ರಸಾಮಗ್ರಿವೆರಸು ವಿಗ್ರಹೋದಗ್ರಭುಪಾಗ್ರಿಮಂ ಕತಿಪಯ ಪ್ರಯಾಣಂಗಳಿಂ ಭದ್ರಾವತಿಪುರಮನೆಯ್ದಿ

ಕಂ || ಮೇಲೆತ್ತಿ ಮಹಾಪದ್ಮನೃ
ಪಾಲಕನೆೞ್ತಂದನೆಂದೊಡಗಿದೋಡಿದನಾ
ಲೋಲಬಲಂ ಗತಭುಜಬಲ
ನಾಲಾಪಂಗೆಟ್ಟು ಬಿಟ್ಟವಂ ಗಜಕರ್ಣಂ           ೪೬

ವ || ಆಗಳವನಖರ್ವಚಾತುರ್ಬಲಮನೆೞ್ಬಟ್ಟಿ ಸರ್ವಸ್ವಮಂ ಸೂಱೆಗೊಂಡು ಗಜಕರ್ಣನಂ ಪಿಡಿಮೊಲಂಗೊಂಡು ಜಯಶ್ರೀಯಂ ಕೈಕೊಂಡು ಭದ್ರಾವತೀಪುರಮಂ ಪುಗುವಲ್ಲಿ

ಮ || ಲಲಿತೋತ್ತುಂಗವಿಳಾಸದೇವಭವನವ್ರಾತಂಗಳೊಳ್ ನಿಂದು ನಿ
ರ್ಮಲಹರ್ಮ್ಯಂಗಳನೇಱಿ ಸೌಧಶಿಖರಪ್ರಾಗ್ಭಾಗಮಂ ಪತ್ತಿ ಪಾ
ಗಲನಾಶ್ರೈಸಿ ನಿಜಾಂಗಸಂತತಿಗೆ ಸಾರ್ದಟ್ಟಾಳಮಂ ಮೆಟ್ಟಿ ನೋ
ೞ್ಪ ಲತಾತನ್ವಿಯರಂಬರೇಚರಿಯರೆಂಬಾಶಂಕೆಯಂ ಮಾಡಿದರ್    ೪೭

ವ || ಅಂತು ತಂತಮ್ಮ ಬಹುವಿಧವ್ಯಾಪಾರಂಗಳಂ ಪರಿಹರಿಸಿ ಪರಿತಂದು ಪುರಮಶೇಷಂ ಪುರಂಧ್ರೀನಿಕರಮಯಮಾದುದೆಂಬಿನಂ ನೆರೆದು ನೆರವಿಗೊಂಡು ಕೌತುಕಂಗೊಂಡು ಕಾಮರಾಗಸಾಗರದ ಬಹಳಲಹರೀಸಹಸ್ರಂಗಳೆನಿಪನೇಕಭಾವಂಗಳುದಯಿಸೆ ಬಯಸಿ ನೋೞ್ಪ ನಗರೀನಾರೀಕದಂಬಕದ ನಗೆಮೊಗದ ಕಾಂತಿ ಮೃಗಧರನ ಚೆಲ್ವಂ ತಗುಳ್ಚೆಯುಂ ಕಡೆಗಣ್ಣಕಾಂತಿಯ ಜೊನ್ನದಚೆನ್ನನೀಯೆಯುಂ ಕಂಕಣದ ನುಣ್ಚರದ ನುಣ್ಪು ಕಳಕಂಠಸ್ವನಮನವಟಮ್ಸೆಯುಂ ಸುಲಿಪಲ್ಲ ಪೊಳೆಪು ಮಲ್ಲಿಕಾಕುಟ್ಮಳಮನುಜ್ವಳಿಸೆಯುಂ ಭದ್ರಾವತೀಪುರದ ಪರಮೋತ್ಸವಕ್ಷೋಭಶೋಭೆಯಂ ಬಸಂತಸಮಯವನೊಳಗುಮಾಡಿ ಯುಧಿರಾಜಂ ರಾಜಮಾರ್ಗದೊಳಗಣಿಂದಗಣ್ಯಪುಣ್ಯಾಂಗನಾಕರಕಮಳವಿಕೀರ್ಯ ಮಾಣಮಂಗಳಲಾಜಾಕ್ಷತಂಗಳುಮಂ ಕುಸುಮೋಪಹಾರಂಗಳುಮಂ ನಿರೀಕ್ಷಿಸುತುಂ ನಡೆತಂದು ನವಾಮ್ರ ಚಂಪಕಾಶೋಕಪಲ್ಲವೋಲ್ಲಸಿತ ಮಣಿತೋರಣಂಗಳೊಳಂ ಣಂಗಳೊಳಂ ಪರಿಮುಕ್ತ ಮುಕ್ತಾದಾಮ ಕಮನೀಯ ವಿಚಿತ್ರನೇತ್ರದೇವಾಂಗವಿತಾನದೊಳಂ ಆ ಬದ್ಧರತ್ನರಾಜಿವಿರಾಜಿತ ಶಾತಕುಂಭ ಕುಂಭಂಗಳೊಳಮಾಲಿಖಿತ ವಿಚಿತ್ರ ಚಿತ್ರಭಿತ್ತಿಗಳೊಳಮಾಮೋದಿತ ಮೃಗಮದ ಕರ್ದಮಾಲಿಪ್ತಮಣಿಕುಟ್ಟಿಮರಚಿತ ಕರ್ಪೂರಪರಾಗ ರಂಗವಲ್ಲೀ ವಿತಾನದೊಳ ಮಾಕೀರ್ಣ ಸುವರ್ಣ ಕಲಶಶೋಭಿತಶಿಖರಂಗಳೊಳೆಸೆವ ಸೌಧಾಲಯಂಗಳನೊಳಕೊಂಡ ರಾಜಭವನದ ರಾಜಾಂಗಣಮಂ ಪೊಕ್ಕು

ಕಂ || ಸಮುದಗಜದ್ವಿಪದಿಂದಿೞಿ
ದು ಮಹಾಪದ್ಮಾವನೀಶ್ವರಂ ತಾಂ ಕರುಮಾ
ಡಮನೇಱಿದನನುನಯದಿಂ
ಕಮಳಪ್ರಿಯನೇಱುವಂತಿರುದಯಾಚಲಮಂ     ೪೮

ವ || ಈ ಪ್ರಕಾರದಿಂ ಕಱುಮಾಡದುಪ್ಪರಿಗೆಯನೇಱಿ

ಕಂ || ನಾನಾಮಂಗಳವಸ್ತುವಿ
ತಾನದಿನೊಪ್ಪುವ ಜಯಾಂಗನಾಪರಿಣಯನಾ
ಸ್ಥನಮೆನಿಸಿರ್ಪ ಜಯವ
ರ್ಮಾನೂನಾವಾಸಮಂ ಮಹೀಶಂ ಪೊಕ್ಕಂ       ೪೯

ವ || ಪೊಕ್ಕು ಮಾತುಳಂಗಂ ಮಾತುಳಾನಿಗಂ ತುೞಿಲ್ಗೆಯ್ವುದುಮವರನೇಕ ನಲ್ವರಕೆಗಳ್ವೆರಸು ಪರಮೋತ್ಸವಪರಂಪರೆಯನೆಯ್ದಿ ಮಱುದೆವಸಂ ಮೌಹೂರ್ತಿಕರಂ ಬರಿಸಿ ತಾಂಬೂಲಮಾಲ್ಯಾದಿ ಪುರಸ್ಸರಂ ವಿವಾಹಲಗ್ನಮಂ ಬೆಸಗೊಳ್ವುದುಂ ನವಗ್ರಹಂಗಳೆಲ್ಲಂ ಸ್ವೋಚ್ಚಸ್ವಕ್ಷೇತ್ರಮಿತ್ರಸ್ಥಾನಂಗಳೊಳೇಕಾದಶಫಳಪ್ರದಂಗಳಾಗೆ ಲಗ್ನಮಂ ನಿಶ್ಚೈಸಿ ಪೇೞ್ವುದುಮಾ ಕ್ಷಣದೊಳೆ ಪುರದೊಳಷ್ಟಶೋಭೆಯಂ ಮಾಡಲುಂ ವಿವಾಹಮಂಟಪಮಂ ಸಮೆಯಿಸಲುಂ ಗೃಹಮಹತ್ತರಂಗೆ ಬೆಸಸುವುದು

ಚಂ || ಪುರಜನಮಾಗಳೊಂದಿ ಪರಮೋತ್ಸವದಿಂ ವರಮಾಲ್ಯಮಂಜುಳಾ
ಭರಣ ನವಾಂಗರಾಗ ವಿವಿಧಾಂಶುಕಲೀಲೆಯನೆಯ್ದಿ ತಾಳ್ದಿತಾ
ಪುರದೊಳಗುಣ್ಮಿ ಪೊಣ್ಮೆ ಕೃತಮಂಗಲತೂರ್ಯನಿನಾದವೆತ್ತಲುಂ

ಸುರುಚಿತೋರಣಂ ತುಱುಗೆ ತಳ್ತಿರೆ ನೇತ್ರಚಿತ್ರಕೇತನಂ     ೫೦