ಮಿಱುಪಲರ್ಗೊಂಚಲಿನೊಪ್ಪುವ
ನಿಱಿದಳಿರ ತಮಾಳಶೋಭೆಯೆನೆ ಬಾಸಿಗದಿಂ
ನಿಱಿಗೆ ಸಲೆಯೆಸೆಯೆ ಮುಡಿಸಿದ
ಳೆಱಕದಿನೊರ್ವಳ್ ಸುಪರ್ವವಧು ನೃಪವಧುವಂ            ೮೧

ಉಡಿಸುವ ವಿಚಿತ್ರವಸ್ತ್ರಂ
ಮುಡಿಸುವ ಮಂದಾರಮಾಲೆ ತನುಲತೆಯೊಳ್ ನೇ
ರ್ಪಡಿಸುವ ನವಾಂಗರಾಗಂ
ತುಡಿಸುವ ತೊಡವರಸಿಗಮರ್ದುವಮರಿಯರಿಂದಂ         ೮೨

ವ || ಅದಲ್ಲದೆಯುಂ

ಕಂ || ಡೋಳಾಕೇಳಿಯ ಕಂದುಕ
ಕೇಳಿಯ ಪರಿಹಾಸಕೇಳಿಯತಿಕುಶಲಕಳಾ
ಕೇಳಿಯ ವನಕೇಳಿಯ [ಜಲ
ಕೇಳಿಯ] ಬಿನದದೊಳೆ ಸತಿಯನವರೊಸೆಯಿಸಿದರ್         ೮೩

ಈಪರಿಯೊಳಮರಸ್ತ್ರೀಯರ್
ತಾ ಪರಿತೋಷದೊ[ಳೆ ವರ]ಜಿನಾಂಬಿಕೆಪದನಂ
ಶ್ರೀಪಯಕೆಱಗಿ ನುತಿಸುತೆ
ತಾ ಪರಿತೋಷದೊಳೆ ಭಕ್ತಿಯಿಂದಿರುತಾಗಳ್    ೮೪

ವ || ಮತ್ತಂ

ಚಂ || ಅಮರ್ದಿನ ಸೋನೆ ಜೇನಮೞೆ ಕರ್ಣರಸಾಯನಮಿಂತಿದೆಂಬಿನಂ
ಗಮಕದುಪಾಂಗದೊಟ್ಟಜೆಯ ರೀತಿಯ ಕಾಕಿನ ನುಣ್ಪಿನೋಜೆಯಾ
ಕ್ರಮಣೆಯ ಭಂಗಿ ಸಂಗಳಿಸಿದಿಂಪಿನ ಸೊಂಪಿನ ಸುಪ್ರತೀತಗೀ
ತಮನನಿಶಂ ಜಿನಾಂಬಿಕೆಗೆ ಬೀಱಿದುದಿಂದ್ರನ ಗಾಯಿಕಾಜನಂ          ೮೫

ಕಂ || ಯುವತಿ ತತ ವಿತತ ಘನಸುಷಿ
ರವಾದ್ಯವಿದ್ಯಾವಿನೋದದಿಂ ಸುರವಧುವಿರ್
ಸವಿಯಂ ಕಿವಿಗೀಯೆ ಸುಖಾ
ರ್ಣವದೊಳಗೋಲಾಡಲಾರ್ತಳಿರುಳುಂ ಪಗಲುಂ           ೮೬

ಕಂ || ಕರಣಾಂಗಹಾರಪರಿಣತಿ
ನಿರುಪಮ ರಸಭಾವವಸಮಮಾಗಿರೆ ಚೆಲ್ವೊ
ತ್ತರಿಸೆ ನೃಪಸತಿಯ ಸಭೆಯೊಳ್
ಸುರನಟಿಯರ್ ನರ್ತಿಪಂದಮೇನೊಪ್ಪಿದುದೋ            ೮೭

ವ || ಅದಲ್ಲದೆಯುಂ

ಕಂ || ಶ್ರುತದೇವಿಯೆ ಓಲಗಿಸಿದ
ಳತನುಹರಾಂಬಿಕೆಯನೆನಿಸಿ ಪುಸ್ತಕಹಸ್ತಾ
ನ್ವಿತೆ ಪುಣ್ಯಕಥೆಯನೊರ್ವಳ್
ಚತುರಾಸ್ಯಪ್ರಿಯೆ ಸುರಾಗದಿಂ ವಾಚಿಸಿದಳ್      ೮೮

ವ || ಮತ್ತಂ

ಚಂ || ಮಡದಿಗೆ ಬೋನವೆತ್ತುವೆಡೆಯಾಡುವ ಬಡ್ಡಿಪ ಸೋದಿಪೊಳ್ಳಿತಂ
ನುಡಿಸುವ ಕಂಚನುಘ್ಘಡಿಪ ಕೆಯ್ಗೆಱೆವಾರತಿದೋರ್ಪ ಕೆಂದಳಂ
ದೊಡೆವನುಲೇಪನಂಗುಡುವ ವೀಳೆಯಮಂ ತೆಗೆದೀವ ದಂದುಗಂ
ತೊಡರೆ ಮನಂಗೊಳಲ್ ನೆರೆದರಿಂದ್ರಲತಾಂಗಿಯರನ್ನವಾಸದೊಳ್ ೮೯

ಕಂ || ಅರುಣಮಣಿಕಂಕಣಪ್ರಭೆ
ಪರೆದಿರೆ ಪಚ್ಚಡಿಸುವಲ್ಲಿ ಕುಂಕುಮರಸದೊಳ್
ಪೊರೆದುದು ಪಚ್ಚಡಮೆಂದೋ
ಸರಿಯಿಸಿದಳೆ ಸಜ್ಜೆವಳ್ತಿತನಮೇಂ ಮುದ್ದೋ   ೯೦

ಅಮಳಾಂಗಪ್ರಭೆ ಮುನ್ನಮೆ
ತಮಮಂ ಬೆದಱಿಸೆಯುಮರಸಿಗಿರುಳಾಸ್ಥಾನೀ
ಸಮಯೋಚಿತಮೆಂದು ತಟಿ
ತ್ಕುಮಾರಿಯರ್ ಪಿಡಿವರುಂತೆ ಕೆಯ್ದೀವಿಗೆಯಂ            ೯೧

ವ || ಆ ಸಮಯದೊಳ್

ಉ || ಮಂಗಳಗರ್ಭಶೋಧನಮನಿಂದ್ರನಿವಾಸದ ದಿವ್ಯವಸ್ತುವ
ರ್ಗಂಗಳಿನಂದು ಮಾಡೆ ಸುರಸುಂದರಿಯರ್ ಪೆಱತೊಂದು ಚೆಲ್ವುತ
ನ್ನಂಗದೊಳಾಗೆ ಕಾಂತಿಯ ದಗುಂತಿಯನಾಂತವಲೋಹಮಾವಗಂ
ಪಿಂಗಿದ ಪೊನ್ನ ಪುತ್ತಳಿವೊಲೊಪ್ಪಿದಳಾ ವಧುವಚ್ಚಭಾವದೊಳ್  ೯೨

ವ || ಅಂತು ಬಹುವಿಧ ವ್ಯಾಪಾರಪರಿಕರಪರಿಭ್ರಾಂತೆಯರುಂ ವಿವಿಧ ವಿನೋದವಿರಚನೈಕತತ್ಪರಸ್ವಾಂತೆಯರುಮಾಗಿ ದಿವಿಜಕಾಂತೆಯರ್ ಕಣ್ಣಱಿದು ಮನಮಱಿದು ಸಮಯವಱಿದು ಇಚ್ಛೆಯನಱಿದು ನಿಚ್ಚಮೋಲಗಿಸುತಿರ್ಪಿನಂ ಮತ್ತೊಂದು ಪುಣ್ಯದಿನದೊಳಂ

ಚಂ || ಸೆಳೆ ಬಿಸನಾಳಮಾಗಿರೆ ತಳಂದಳಮಾಗಿರೆ ಲೋಳನೀಳಕುಂ
ತಳಮಳಿಮಾಳೆಯಾಗಿರೆ ಪರಿಚ್ಛದಮಾದರುಣಾಂಬರಂ ಸಮಂ
ತೆಳೆಸಿದ ಬಾಳಭಾನುರುಚಿಯಾಗಿರೆ ಪುಷ್ಟಿತೆಯಾಗಿ ಪುಷ್ಟಕೋ
ಮಳೆ ಜಯರಾಮೆ ಕಾಮಕಮಳಾಕರದಬ್ಜಿನಿಯಂತಿರೊಪ್ಪಿದಳ್     ೯೩

ಕೃತಸಹಕಾರನಂದನವಿಳಾಸೆ ಲತಾರುಣಪಾದಪದ್ಮರಾ
ಜಿತೆ ಘನಸೌಮ್ಯನಿರ್ಗತಪಯೋಧರೆ ಪೂರ್ಣಹಿಮಪ್ರಭಾಸ್ಯೆ ಸಂ
ಗತಮಹಿಕಾಂತೆ ಮಾಸದ ವಿಳಾಸಮೆ ಮೆಯ್ವೞಿಯಾದ ದೇವಿ ತಾಂ
ಋತುಮತಿಯಪ್ಪುದಚ್ಚರಿಯೆ ವತ್ಸರಲಕ್ಷ್ಮಿವೊಲಿರ್ಪ ದೂಸಱಿಂ  ೯೪

ವ || ಎನಿಸಿರ್ದನಂತರಂ ನಿರ್ವರ್ತಿತ ಚತುರ್ಥಸ್ನಾನೆಯಾಗಿ

ಚಂ || ವನಿತೆ ವಿಳಾಸದಿಂ ಸುಲಿದ ದಂತಚಯಂ ನಿಜರಾಗದಿಂ ಘನ
ಸ್ತನಕಳಶಾಗ್ರಿಮಕ್ಕರುಣಪಲ್ಲವಲೀಲೆಯನೀವುತಿರ್ಪ ಮು
ನ್ನಿನ ಬೆಸನಂ ಬಿಸುಟ್ಟು ನವಚಂದನಚರ್ಚೆಯನಿತ್ತುವೇನವ
ಕ್ಕನುಪಮ ಮಂಗಳೋಪಕರಣಪ್ರತಿಹಾರನ ಕೇಳಿ ಸಾಜಮೋ         ೯೫

ವ || ಅದಲ್ಲದೆಯುಂ

ಮ || ಧೃತಮುಕ್ತಾಭರಣಂ ಪಯಃಕಣಗಣಂ ಶ್ರೀಖಂಡಲಿಪ್ತಾಂಗದೀ
ಧಿತಿ ತೋಯಪ್ರಸರಂ ದುಕೂಲವಸನಂ ಫೇನೋದ್ಗಮಂ ಮಲ್ಲಿಕಾ
ಸ್ಮಿತದಾಮಂ ತೆರೆಮಾಲೆಯಾಗೆ ವಿಮಳಕ್ಷೀರಾರ್ಣವಶ್ರೀಯನಾ
ಶತಪತ್ರಾನನೆ ಪೋಲ್ತು ಬೆಳ್ವಸದನಂಗೊಂಡೇಂ ಮನಂಗೊಂಡಳೋ            ೯೬

ವ || ತದನಂತರಂ

ಚಂ || ಅಳವಡೆ ತನ್ನ ಮೆಯ್ಯೊಳಭಿರಾಮತೆಯಿಂ ಧವಳಪ್ರಸಾಧನಂ
ಪಳಿಕಿನ ಪೆಣ್ದೊ ಕರ್ಪುರದ ಪೆಣ್ಣೊ ಸುರೂಪ್ಯದ ಪೆಣ್ಣೊ ಮಲ್ಲಿಕಾ
ಕಳಿಕೆಯ ಪೆಣ್ಣೊ ಮೌಕ್ತಿಕದ ಪೆಣ್ಣೊ [ಸುವಜ್ರದ ಪೆಣ್ಣೊ] ಪೇೞಿಮಾ
ವಳೊ ದಿಟಮೆಂಬಿನಂ ರಮಣಿ ರಂಜಿಸಿ ಭೂಪನ ಸೂೞ್ಗೆವಂದಪಳ್ ೯೭

ಶಾ || ಮಾಳಾಭೃಂಗನಿನಾದದಿಂದಗುರುಧೂಪಾಮೋದದಿಂ ಸಾರತಾಂ
ಬೂಳಾಸ್ವಾದದಿನುದ್ಗವಾಕ್ಷದೆಲರಿಂದಾಹ್ಲಾದದಿಂ ಭಿತ್ತಿಚಿ
ತ್ರಾಳೋಕೈಕವಿನೋದದಿಂದಿದು ಮೊದಲ್ ಪಂಚೇಂದ್ರಿಯ ಪ್ರೀತಿಗೆಂ
ಬಾಳೋಚಕ್ಕೆಡೆಯಾಗಿ ರಯ್ಯಮೆನಿಸಿತ್ತುರ್ವೀಶ ಶಯ್ಯಾಗೃಹಂ      ೯೮

ವ || ಅಲ್ಲಿ

ಚಂ || ನವಮಣಿಮಂಚದಿಂದೆ ಮಿಸುಪಂಚೆಯ ತುಪ್ಪುೞ ತೂಳೆಯಿಂದೆ ಪ
ಚ್ಚವಡಿಸಿದಚ್ಚನುಣ್ದುಗುಲದಿಂದೆ ವಿಚಿತ್ರವಿತಾನದಿಂದಮು
ಣ್ಮುವ ತೊಡವಿಂದೆ ಪೊನ್ನ ಪೞವಾವುಗೆಯಿಂದೆಸೆದಿರ್ದ ಸೆಜ್ಜೆಯೊಳ್
ಪವಡಿಸಿ ವಲ್ಲಭಂಬೆರಸು ಸಲ್ಲಲಿತಾಂಗಿ ನಿಶಾವಸಾನದೊಳ್       ೯೯

ನಿಜಗಮನಕ್ಕೆ ಮಚ್ಚರಿಪ ಮಂಥರಯಾನದ ದಾನದಂತಿಯಂ
ನಿಜಪತಿಕಂಧರಕ್ಕೆ ದೊರೆಯಾದುರುಕಂದದ ವಕ್ಷರಾಜನಂ
ನಿಜವಿಭುವಿಭ್ರಮಕ್ಕೆಡರುತಿರ್ಪ ತೊಡರ್ಪಿನ ಸಿಂಹಪೋತಮಂ
ನಿಜನೃಪವಕ್ಷದಿಂದಿರೆಗೆ ತಾಂ ದೊರೆಯಾದರವಿಂದವಾಸೆಯಂ         ೧೦೦

ಉ || ತನ್ನಯ ನೀಳ್ದ ತೋಳ್ಗಳ ವಿಳಾಸಮನಾಂತ ಲತಾಂಶಮಾಲೆಯಂ
ತನ್ನಯ ವಕ್ತ್ರಕಾಂತಿಯದಗುಂತಿಯನಾಂತ ಸುಧಾಂಶುಬಿಂಬಮಂ
ತನ್ನಯ ಭರ್ತೃತೇಜಮನುದಾಹರಿಪುದ್ಗತ ಭಾನುಬಿಂಬಮಂ
ತನ್ನಯ ಚೆಲ್ಲಗಣ್ಬೊಣರ ಲೀಲೆಯನೇೞಿಪ ಬಾಳೆಮೀನ್ಗಳಂ     ೧೦೧

ಚಂ || ಬಿಗಿದೊಗೆದಾತ್ಮತುಂಗಕುಚಕುಂಭಮನೊಡ್ಡಿಪ ಪೂರ್ಣಕುಂಭಮಂ
ಸೊಗಯಿಸುವಾತ್ಮಕೇಳಿಕಮಳಾಕರಮಂ ನಗುವಬ್ಜಷಂಡಮಂ
ಪೊಗೞಿಸುವಾತ್ಮಮಾನಸಭೀರತೆಯಂ ಮಿಗುವಂಬುರಾಶಿಯಂ
ಬಗೆಗೊಳಿಪಾತ್ಮಪೀನಕಟಿಯಂ ಸರಿಮಾೞ್ಪ ಮೃಗೇಂದ್ರಪೀಠಮಂ  ೧೦೨

ತನತುವಿಚಿತ್ರಮಪ್ಪ ನಡೆಮಾಡದ ಗಾಡಿಯ ಸದ್ವಿಮಾನಮಂ
ತನತು ಸುರಮ್ಯಹರ್ಮ್ಯದ ವಿಳಾಸದ ರುಂದ್ರಫಣೀಂದ್ರಗೇಹಮಂ
ತನತು ವಿಚಿತ್ರಶೀಲಗುಣರತ್ನವಿಭಾಸುರರತ್ನರಾಶಿಯಂ
ತನತು ಪತಿವ್ರತಾಪದದ ರೂಪದುದಗ್ರಶಿಖಾಮುಖಾಗ್ನಿಯಂ        ೧೦೩

ಕಂ || ನಿಜಮುಖದೊಳ್ ಪುಗುವ ಮತಂ
ಗಜಪತಿವೆರಸಿಂತು ಕನಸು ಪದಿನಾಱುಮನಂ
ಬುಜವದನೆ ಕಂಡಳಪಗತ
ವೃಜಿನಂಗಳನಖಿಳ ಮಂಗಳೋದ್ಭಾಸಿಗಳಂ       ೧೦೪

ವ || ಆ ಪ್ರಸ್ತಾವದೊಳ್

ಮ || ಎಳಬಿಂದುಶ್ರೀಯನುಚ್ಛಾಟಿಸಿ ರತಿರಭಸಕ್ಲಾಂತಕಾಂತಾನುಲೇಪಂ
ಗಳ ಕಂಪಂ ಪೊತ್ತು ಪೊಂದಾವರೆಯೆಸಳ್ವೊರೆಯೊಳ್ ಸೊರ್ಕಿ ಸಿಲ್ಕಿರ್ದ ಭೃಂಗಂ
ಗಳ ನಾಟಂದೆತ್ತಿ ನಿದ್ರಾಭರನಿರತಚಕೋರಂಗಳಂ ಸೋಂಕಿ ನೆಯ್ದಿ
ಲ್ಗೊಳದೊಳ್ ಮಿಂದಾಡಿ ತೀಡಿತ್ತಪಹೃತಜನತಾಸುಪ್ತಿಭಾರಂ ಸಮೀರಂ      ೧೦೫

ವ || ಅನಂತರಂ

ಕಂ || ನಿಖಿಳಸರೋರುಹ ಕುಟ್ಮಳ
ಮುಖಲಗ್ನ ಮಯೂಖಲೇಖೆಯಿಂ ಸುಪ್ತಶಿಳೀ
ಮುಖಕಳಮನುರ್ಚಿ ರವಿ ಶತ
ಮಖದಿಙ್ಮುಖಶಿಖರಿಶಿಖರಶೇಖರನಾದಂ         ೧೦೬

ವ || ಆಗಳ್

ಕಂ || ಪಪ್ಪವರ ಮಂಗಳೋಕ್ತಿಯಿ
ನುಪ್ಪವಡಿಸಿ ನೀರೆ ಕೃತ್ಸ್ನಮಂಗಳಮಂ ಸೂ
ೞ್ಪಪ್ಪದೆ ನಿರ್ವರ್ತಿಸಿ ಕ
ಣ್ಗೊಪ್ಪಿರೆ ಕೆಯ್ಗೆಯ್ದು ದೇವಿ ಪರಿಜನಸಹಿತಂ            ೧೦೭

ತಿರುವಿಂ ಪೊಳಕಿದ ಕಾಮನ
ಸರಲಂತಿರೆ ಬಂದಳೆಸೆಯೆ ಪಕ್ಷಾಳಿಯ ಮೆ
ಯ್ಸಿರಿಯುಂ ಋಜತ್ವಮುಂ ಗುಣ
ಪರಿಚಯಮುಂ ಧರ್ಮಸೇವ್ಯಮುಂ ಸಫಲತೆಯುಂ         ೧೦೮

ಉ || ಅವಳೊ ರೂಪಿನಿಂ ಸೊಬಗಿನಿಂ ಗುಣದಿಂ ಪೊಣರ್ವನ್ನಳೀ ಮಹಾ
ದೇವಿಯೊಳೆಂದು ಕಾಳೆವಿಡಿಸುತ್ತುಱಸಲ್ಬಿರುದಿಂಗೆ ಕಂತು ಕೆ
ಯ್ದೀವಿಗೆಯಂ ಪಗಲ್ವಿಡಿದು ಬರ್ಪವೊಳಾಯ್ತುಡೆನೊಲ ಕಿಂಕಿಣೀ
ರಾವಮುಮಂಗಕಾಂತಿಯದಗುಂತಿಯುಮಂಗನೆ ಬರ್ಪ ತಾಣದೊಳ್            ೧೦೯

ವ || ಅಂತು ಬಂದು

ಮ || ಧರಣೀಪಾಳಕ ದಂಡನಾಯಕ ಮಹಾಸಾಮಂತ ಮಂತ್ರಿವ್ರಜಂ
ಬೆರಸಾಸಾಸ್ಥಾನದೊಳಿರ್ದುಪೇಂದ್ರನಿಭನಂ ರುಂದ್ರದ್ವಿಪದ್ವಿಷ್ಟವಿ
ಷ್ಟರವಿಶ್ರಾಂತನನಾತ್ಮಕಾಂತನಮಪಾಂತೋದ್ದಾಮಸೀಮಂತಿನೀ
ಕರ ಚಾಮೀಕರ ಚಾಮರೋತ್ಕರ ಮರುದ್ವ್ಯಾಕೀರ್ಣ ಕರ್ಣಾಬ್ಜನಂ            ೧೧೦

ವ || ಸಾರ್ತಂದು ತದರ್ಧಾಸನಪ್ರದೇಶಮನಳಂಕರಿಸಿ

ಚಂ || ಇದು ವದನೇಂದುಬಿಂಬದಿನೊಸರ್ವ ಮರ್ದೆಂಬಿನಮುಣ್ಮಿಪೊಣ್ಮೆ ದಂ
ತದ ರುಚಿ ಕಾಮಕಾರ್ಮುಕಗುಣಧ್ವನಿಯೆಂಬಿನಮುಣ್ಮಿಪೊಣ್ಮೆ ಸ
ನ್ಮೃದುರುತಿ ತನ್ನ ಕಂಡ ಕನಸೆಲ್ಲಮನಂಗನೆ ಪೇೞೆ ಕೇಳ್ದು ರಾ
ಗದಿನಱೆದೆಂದನಂದವಧಿಬೋಧದಿನಾ ವಿಭು ತತ್ಫಲಂಗಳಂ           ೧೧೧

ವ || ದೇವಿ ನೀನಿಂದು ವಿದಿತ ರಜತಾಚಳೋಪಮಶೋಭಮಂ ಮಹಾಮದೇಭಮಂ ಕಂಡುದಱಿನಖಿಳ ಭದ್ರಲಕ್ಷಣಾಸ್ಥಾನನುಮನೂನ ದಾನನುಂ ಹಿಮಧವಳೋದ್ದಾಮ ರುಂದ್ರನಂ ಗವೇಂದ್ರನಂ ಕಂಡುದಱೆನುನ್ನತ ಲಲಾಮನುಂ ವೃಷಭಾಭಿರಾಮನುಂ ಸ್ಫುರದರುಣಕೇಸರ ಪೀಠಾಗ್ರಮಂ ಸಿಂಗಮಂ ಕಂಡುದಱೆನನೇಕ ಪಾಪಹರಣನುಮಂ ಮಹಾಮಹೀಭೃಚ್ಚರಣನುಂ ನಿಜಕೃತಾಭಿಮತಕಮಳೆಯಂ ವಿಮಳೆಯಂ ಕಂಡುದಱಿನಚ್ಯುತ ಸುಖೈಕಸದ್ಮನುಂ ಪ್ರಶಸ್ತಪದ್ಮನುಂ ಬಂಧುರಸುಗಂಧದಾಮಂಗಳಂ ಕುಸುಮದಾಮಂಗಳುಂ ಕಂಡುದಱಿನಮಳ ಸುಮನೋಗುಣಾನು ಬಂಧಮಹಿತನುಂ ಭ್ರಮರಹಿತನುಂ ಶಿಶಿರಧವಳಚಂದ್ರಿಕಾಸಾಂದ್ರನಂ ಚಂದ್ರನಂ ಕಂಡುದಱಿನುನ್ನತಲಕ್ಷ್ಮಿ ವಿಳಾಸಿಯುಂ ದಿಗಂಬರಪ್ರಕಾಶಿಯುಂ ಉದಯಗಿರಿಶಿಖಿರಾಭರಣನಂ ಸಹಸ್ರಕಿರಣನಂ ಕಂಡುದಱಿನಪಗತಾಶೇಷದೋಷಾನುವೃತ್ತನುಂ ಸಮ್ಯಗ್ದರ್ಶನನಿಮಿತ್ತನುಂ ಜಲಕೇಳೀಲುಳಿತ ಸರಸೀಬಿಸಂಗಳಂ ಝಷಂಗಳಂ ಕಂಡುದಱಿನಮಳಾಪ್ಸರಗೀತಜನ್ಮೋತ್ಸವ ಪ್ರಸಂಗನುಂ ಅನಿಮಿಷೋತ್ತುಂಗನುಂ ಪುಣ್ಯಾಂಬುಪೂರ್ಣಸೌವರ್ಣಕಾಂತಿಸ್ಫುಟಂಗಳಂ ಘಟಂಗಳಂ ಕಂಡುದಱಿನನ್ಯ ಸುಭಟಪ್ರಭಾವಭಾರನುಂ ಜಾತರೂಪಸಾರಮಂ ಲಾಲಿತಮೃಣಾಳ ದಂಡಮಂ ಕಮಳಷಂಡಮಂ ಕಂಡುದಱಿನುದ್ದಂಡಪುಂಡರೀಕಲಕ್ಷ್ಮಿವೀಳಾಸಿಯುಂ ಗುಣವಿಭಾಸಿಯುಂ ವಿಲೋಲಕಲ್ಲೋಲ ಭದ್ರಮಂ ಸಮುದ್ರಮಂ ಕಂಡುದಱಿನಶೇಷ ಭುವನಾಶ್ರಮಮಹತ್ವನುಂ ಸಂತರ್ಪಿತ ಸಕಳಸತ್ವನುಂ ಕನತ್ಕನಕರುಚಿ ವಿಲುಠಮಂ ಸಿಂಹಪೀಠಮಂ ಕಂಡುದಱಿಂ ರುಚಿರರಚನಾಪ್ರಚುರಕಲ್ಯಾಣಾನುವೃತ್ತಿಯುಂ ಹರಿಪೂಜ್ಯಮೂರ್ತಿಯುಂ ನಿರುಪಮನಿಳಿಂಪದಂಪತೀವಿಭಾವಮಂ ಸುರವಿಮಾನಮಂ ಕಂಡುದಱೆನಖಿಲವೈಮಾನಿಕ ಸ್ತೋತ್ರಪಾತ್ರನುಂ ಸತ್ವಥಚರಿತ್ರನುಂ ಪರಿಹಾಸಿತ ಕೈಳಾಸ ವಿಳಾಸನಗಮಂ ಫಣಿಪತಿನಿವಾಸಮಂ ಕಂಡುದಱಿನಶೇಷ ಭೋಗಾನುಭವರಕ್ತನುಂ ಕುಸುಮತೋನ್ನತಿರಿಕ್ತನುಂ ಸ್ಫುರಿತಕಿರಣಪ್ರಕಾಶಿಯಂ ರತ್ನರಾಶಿಯಂ ಕಂಡುದಱಿನತಿ ಮಹಾರ್ಘ್ಯಾಯೋಜ್ಯನುಂ ಸದಾಲೋಕಪೂಜ್ಯನುಂ ನಿರ್ಧೂಮಶಿಖಾಳಿಯಂ ಜ್ವಾಳಿಯಂ ಕಂಡುದಱಿನಾಶ್ರಿತ ಸಂತರ್ಪಣಪ್ರಚಂಡತೇಜಃಪವಿತ್ರನುಂ ಜಗತ್ಪ್ರಾಣನುಮಪ್ಪಂ

ಕಂ || ತೀರ್ಥಕರಂ ಭವ್ಯಜನ
ಸ್ವಾರ್ಥಕರಂ ನಮಗೆ ಪುತ್ರನಾದಪನಿದು ಸ
ತ್ಯಾರ್ಥಂ ಭಾವಿಸೆ ನಾಮೆ ಕೃ
ತಾರ್ಥರೆಮಿನ್ನಖಿಳ ಜಗದೊಳನುಪಮಚರಿತೇ   ೧೧೨

ಸ್ವಾಗತಂ || ಅಲ್ಲದೊಂದು ನಿಜಸಸ್ಮಿತವಕ್ತ್ರೋ
ತ್ಫುಲ್ಲ ಪಂಕುರುಹದೊಳ್ ಪುಗುತರ್ಪಿಂ
ದ್ರೋಲ್ಲಸದ್ಗಜಮುಮಂ ಕನಸಿಂ ನೀ
ನಲ್ಲದಂಗನೆಗೆ ಕಾಣ್ಬುದು ಮೊಗ್ಗೇ   ೧೧೩

ಎಂದು ಪೇೞ್ದ ಜಿನನಾಥನ ಮಾತೆಂ
ಬಿಂದುರೋಚಿ ಕುಡೆ ಹೃತ್ಕುಮುದಶ್ರೀ
ಗೆಂದುಮಿಲ್ಲದ ಮಹೋತ್ಸವಮಂ ಕೇ
ಳ್ದಂದು ದೇವಿ ಪುಳಕಾಂಕಿತೆಯಾದಳ್  ೧೧೪

ವ || ಆಗಿ ಸಂತೋಷಂಬಟ್ಟನಂತರಮುಚಿತ ತಾಂಬೂಲದಾನಸಮನ್ವಿತೆ ನಿಜನಿವಾಸಕ್ಕೆ ಬಂದು ಸುಖದಿನಿರೆ

ಮ || ನಿರುತಂ ಫಾಲ್ಗುಣಮಾಸ ಕೃಷ್ಣ ನವಮೀ ರಾತ್ರ್ಯಂತದೊಳ್ ಮೂಲಮಾ
ಗಿರೆ ನಕ್ಷತ್ರಮುಮರ್ತ್ಯನಾಯಕಕೃತಸ್ವರ್ಗಾವತಾರೋತ್ಸವಂ
ಪರಮಂ ಪ್ರಾಣತಕಲ್ಪದಾರುಣವಿಮಾನೋದ್ದೇಶದಿಂ ಬಂದು ಬಂ
ಧುರ ವಕ್ತ್ರಾಬ್ಜನಿವಿಷ್ಟನಾಶ್ರಯಿಸಿದಂ ರಾಮಾಂಬಿಕಾಗರ್ಭಮಂ     ೧೧೫

ವ || ಅಂತಶ್ರಯಿಸಿ ಸುಗ್ರೀವನೆಂಬ ಧರ್ಮರತ್ನಾಕರಗರ್ಭಶುಕ್ತಿ ಸಂಪುಟದೊಳ್ ಸುವೃತ್ತ ಮೌಕ್ತಿಕರತ್ನದಂತೆಯುಂ ಜಠರಜಾಹ್ನವೀಜಳದೊಳಮಳಕಮಳದಂತೆಯುಂ ಪ್ರವರ್ಧಮಾನನಾಗಿ ಬಳೆವಲ್ಲಿ

ಕಂ || ನಿಳಯದ ದುಗುಲದ ಜವನಿಕೆ
ಯೊಳಗಣ ಮಾಣಿಕದ ಸೊಡರ ಕುಡಿ ಬೆಳಗುವವೋಲ್
ಬೆಳಗಿದುದು ತಾಯ ತೆಳ್ವಸಿ
ಱೊಳಗಣ ಘನದಿನದ ತೇಜಮಱಿವಿನ ಬೀಜಂ ೧೧೬

ನಳಿನೀವನ ಕಿಂಜಲ್ಕದೊ
ಳೆಳಸಿಯುಮೆಳನೇಸಱಂತೆ ಪೀಡೆಯನವ್ಯಾ
ಕುಳಮೀಯದಂತಿರೀಯನೆ
ಲಳಿತೆಯ ಗರ್ಭದೊಳಗಿರ್ದುಮೂರ್ಜಿತತೇಜಂ   ೧೧೭

ವ || ಅದಲ್ಲದೆಯುಂ

ಮ || ತನುರೋಮಾವಳಿಗೊಯ್ಯನೊಯ್ಯನೆ ಪಸುರ್ಪಂ ಚೂಚಕಕ್ಕೊಯ್ಯನೊ
ಯ್ಯನೆ ಕರ್ಪಂ ವಳಿಗೊಯ್ಯನೊಯ್ಯನೞಿವಂ ಶಾತೋದರಕ್ಕೊಯ್ಯನೊ
ಯ್ಯನೆ ಕೊರ್ವಂ ಮೊಗಕೊಯ್ಯನೊಯ್ಯನೆ ಬೆಳರ್ಪಂ ಕುಂತಳಕ್ಕೊಯ್ಯನೊ
ಯ್ಯನೆ ನೀಳ್ಪಂ ಮಿಗೆ ಮಾಡುವಾ ಸತಿಯ ಗರ್ಭಾಧಾನಮೇನೊಪ್ಪಿತೋ      ೧೧೮

ವ || ಮತ್ತಂ

ಕಂ || ತನು ಬಡವಪ್ಪ ತೂಂಕಡಿಸುವಾಗುಳಿ ಪುಟ್ಟಿ ಕನಲ್ದೊನಲ್ದು ಸುಯ್
ಜನಿಯಿಸುವಂಘ್ರಿ ಝೊಮ್ಮಡರ್ವ ಪೊಂಗಿ ಬಸಿಱ್ ಬಿಗಿದನ್ಯಗರ್ಭಿಣೀ
ಜನದ ವಿಕಾರಮಾ ಸತಿಯೊಳಾಗವೆ ತಾಂ ನೆಲಸಿರ್ಪ ತಾಣದೊಳ್
ಜಿನನವಿಕಾರಿ ಜಾಡ್ಯದ ವಿಕಾರಮನೇಕಿರಲೀವನೆಂಬಿನಂ     ೧೧೯

ವ || ಅದಲ್ಲದೆಯುಂ

ಕಂ || ಸ್ಮರರಾಗೋದ್ರೇಕಂ ವೀ
ತರಾಗನಿರ್ದೆಡೆಯೊಳೇಕೆ ಪುಟ್ಟುಗುಮೆನೆ ತ
ತ್ಪರತೆಯಿನಂತರ್ವತ್ನಿಯೊ
ಳರಸನಪೇಕ್ಷಿಸನೆ ರತಿರಹಸ್ಯೋತ್ಸವಮಂ         ೧೨೦

ವ || ಮತ್ತಂ

ಮ || ಘನಸಂಭೋಗಸುಖಂ ವಿರಾಮವಿರಸಂ ಭಾವಿಪ್ಪೊಡಿಂಬಿಲ್ಲದೆಂ
ದು ನೃಪಂ ಮಾಣ್ದಹಮಿಂದ್ರನಂತೆ ತಣಿವಂ ಕಾಯಪ್ರವೀಚಾರದೂ
ರನೊಱಲ್ದೋಪಳ ರೂಪನೀಕ್ಷಿಪ ವಿದಗ್ಧಾಳಾಪಮಂ ಕೇಳ್ವ ಸಾ
ರ್ದಿನಿಸಂ ಬಾಯ್ಸವಿವಾನನಾಂಬುಜದ ಕಂಪಂ ಕೊಳ್ವ ಸಂಪ್ರೀತಿಯಿಂ           ೧೨೧

ವ || ಆ ಸಮಯದೊಳ್

ಮ || ಸುರಲೋಕೋದ್ಗತಸಾರವಸ್ತುಶತಮಂ ಶಕ್ರಾಂಗನಾಕೋಟಿಯುಂ
ನರಲೋಕೋದ್ಗತಸಾರವಸ್ತುಶತಮಂ ಸುಗ್ರೀವರಾಜೇಂದ್ರನುಂ
ತರವೇೞ್ದಾಗಳೆ ತಂದು ಕೂಡೆ ನೆಱೆ ಸಾಫಲ್ಯಕ್ಕೆ ಪಕ್ಕಾದಳಾ
ಹರಿಣೀಲೋಚನೆ ಗರ್ಭದೊಳ್ ಬಳೆಯೆ ಭಾಸ್ವದ್ಭವ್ಯರತ್ನಾರ್ಣವಂ           ೧೨೨

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತಸೂಕ್ತಿಚಂದ್ರಿಕಾ ಪಾನಪರಿಪುಷ್ಪಮಾನಸಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತಪುರಾಣದೊಳ್ ಗರ್ಭಾವತರಣಂ ನವಮಾಶ್ವಾಸಂ