ಮ್ಮಡಿ ಗುಣವರ್ಮ – ಪಾಶ್ವಪಂಡಿತ ಸಂಪುಟ ವೈಶಿಷ್ಟ್ಯಪೂರ್ಣವಾದ ಸಂಪುಟವಾಗಿದೆ. ಇದು ಒಂಬತ್ತನೆಯ ತೀರ್ಥಂಕರರಾದ ಪುಷ್ಪದಂತ ಮತ್ತು ಇಪ್ಪತ್ಮೂರನೆಯ ತೀರ್ಥಂಕರರಾದ ಪಾರ್ಶ್ವನಾಥರ ಪುರಾಣಗಳನ್ನು ಒಳಗೊಂಡಿದೆ. ಈ ಎರಡೂ ಪುರಾಣಗಳಿಗೆ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇದೆ. ಇವುಗಳನ್ನು ಇಬ್ಬರು ಸಮಕಾಲೀನ ಕವಿಗಳು ರಚಿಸಿದ್ದಾರೆ.

ಈ ಸಂಪುಟದ ಎರಡೂ ಪುರಾಣಗಳು ಚಾರಿತ್ರಿಕವಾಗಿಯೂ ಮುಖ್ಯವಾಗಿವೆ. ಪುಷ್ಪದಂತ ಪುರಾಣವನ್ನು ರಚಿಸಿದ ಗುಣವರ್ಮ ರಟ್ಟರ ನಾಲ್ಕನೆಯ ಕಾರ್ತವೀರ್ಯನ ಕೈಕೆಳಗಿದ್ದ ನಾಡಪ್ರಭು ಶಾಂತಿವರ್ಮನಿಂದ ಪ್ರೇರಣೆ ಪಡೆದರೆ, ಪಾರ್ಶ್ವನಾಥಪುರಾಣ ರಚಿಸಿದ ಪಾರ್ಶ್ವಪಂಡಿತ ರಟ್ಟರ ನಾಲ್ಕನೆಯ ಕಾರ್ತವೀರ್ಯನ ಆಸ್ಥಾನದಲ್ಲಿಯೇ ಇದ್ದು ಆಶ್ರಯ ಪಡೆದವನು. ಇಬ್ಬರೂ ತಂತಮ್ಮ ಆಶ್ರಯದಾತರನ್ನು ಕಥಾನಾಯಕರೊಂದಿಗೆ ಸಮೀಕರಿಸಿದ್ದಾರೆ. ಆಶ್ರಯದಾತರ ವ್ಯಕ್ತಿಚಿತ್ರವನ್ನು ಕೃತಿಗಳಲ್ಲಿ ಕಡೆದು ನಿಲ್ಲಿಸಿದ್ದಾರೆ. ಹಾಗಾಗಿ ಪ್ರಸ್ತುತ ಸಂಪುಟವು ರಟ್ಟ ಅರಸರ ಕಾಲದ ಸಾಹಿತ್ಯವಾಗಿದೆ. ಈ ಅರಸು ಜೈನಧರ್ಮದ ಅನುಯಾಯಿಗಳಾಗಿದ್ದರು.

ಇಮ್ಮಡಿ ಗುಣವರ್ಮ ಚಂದ್ರನಾಥಾಷ್ಟಕ ಎಂಬ ಕಿರು ಕೃತಿಯನ್ನೂ ಬರೆದಿದ್ದಾನೆ. ಪಾರ್ಶ್ವಪಂಡಿತನು ಕಲ್ಪೊಳೆ ಶಾಸನದ ಕರ್ತೃವಾಗಿದ್ದಾನೆ. ಈ ಸಂಪುಟದ ಇಬ್ಬರು ಕವಿಗಳೂ ಉತ್ತಮ ಪಾಂಡಿತ್ಯ ಉಳ್ಳವರಾಗಿದ್ದರು. ಹಾಗಾಗಿ ಎರಡು ಕಾವ್ಯಗಳು ಪ್ರೌಢವಾಗಿದ್ದು ಆ ಕಾಲದ ಪಾಂಡಿತ್ಯಕ್ಕೆ ನಿದರ್ಶನಗಳಾಗಿವೆ. ಆ ಕಾಲದಲ್ಲಿ ಜೈನಕಾವ್ಯಗಳು ಪಡೆದುಕೊಂಡ ಬದಲಾದ ಪಥದ ಕುರುಹೂ ಆಗಿವೆ.

ಹೀಗೆ ಹಲವು ವಿಶಿಷ್ಟಗಳಿಗೆ ಕಾರಣವಾದ ಪ್ರಸ್ತುತ ಸಂಪುಟದ ಕೃತಿಗಳು ಈಚಿನ ದಶಕಗಳಲ್ಲಿ ಪುನರ್ ಪರಿಷ್ಕರಣೆಗೆ ಒಳಗಾಗಿರಲಿಲ್ಲ. ಪುಷ್ಪದಂತಪುರಾಣ ಸಂಪಾದಿತವಾಗಿ ೭೪ ವರ್ಷಗಳೇ ಕಳೆದುಹೋಗಿವೆ. ಈ ಕಾವ್ಯವನ್ನು ಅಧ್ಯಯನ ಮಾಡಿದವರೂ ವಿರಳ ಎನ್ನಬಹುದು. ವೆಂಕಟರಾವ್ ಮತ್ತು ಶೇಷಯ್ಯಂಗಾರ್ಯರ ಪರಿಷ್ಕರಣವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದ ಡಿ.ಎಲ್. ನರಸಿಂಹಾಚಾರ್ಯರು ಒಂದು ಲೇಖನವನ್ನು ಬರೆದಿದ್ದರು. ಅದು ಪೀಠಿಕೆಗಳು ಲೇಖನಗಳು ಸಂಪುಟದಲ್ಲಿ ಅಚ್ಚಾಗಿದೆ. ಅನಂತರದಲ್ಲಿ ಈ ಪುರಾಣವನ್ನು ಆಳವಾಗಿ ಅಭ್ಯಾಸ ಮಾಡಿದವರೆಂದರೆ ಪ್ರೊ. ಬಿ.ಎ.ವಿವೇಕ ರೈ ಅವರು. ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ನಾಲ್ಕನೆಯ ಸಂಪುಟಕ್ಕಾಗಿ ವಿವೇಕ ರೈ ಅವರು ೧೯೭೭ರಲ್ಲಿ ಇಮ್ಮಡಿ ಗುಣವರ್ಮನನ್ನು ಕುರಿತು ಸುದೀರ್ಘವಾದ ಬರೆದ ಲೇಖನವೇ ಪುಷ್ಪದಂತ ಪುರಾಣದ ಮೇಲೆ ಬಂದ ಏಕೈಕ ಸಮಗ್ರ ಬರಹವಾಗಿದೆ.

ಪಾರ್ಶ್ವನಾಥ ಪುರಾಣವು ೧೯೫೪ರಲ್ಲಿ ಎಂ.ಮರಿಯಪ್ಪಭಟ್ಟ ಮತ್ತು ಎಂ.ಗೋವಿಂದ ರಾವ್ ಅವರಿಂದ, ೧೯೫೬ರಲ್ಲಿ ಎಸ್.ಬೊಮ್ಮರಸ ಪಂಡಿತರಿಂದ, ೧೯೬೦ ರಲ್ಲಿ ಎಚ್.ಶೇಷಯ್ಯಂಗಾರ್ಯರಿಂದ ಮೂರು ಪರಿಷ್ಕರಣಗಳನ್ನು ಕಂಡಿದೆ. ಬೊಮ್ಮರಸ ಪಂಡಿತರಿಂದ ಗದ್ಯಾನುವಾದವೂ ದಕ್ಕಿದೆ. ರಾಜಶೇಖರ ಇಚ್ಚಂಗಿ ಅವರು ‘ಪಾರ್ಶ್ವನಾಥ ಪುರಾಣ ಒಂದು ತೌಲನಿಕ ಅಧ್ಯಯನ’ ಎಂಬ ತಮ್ಮ ಪಿಎಚ್.ಡಿ. ಪ್ರಬಂಧದಲ್ಲಿ ಪಾರ್ಶ್ವಪಂಡಿತನನ್ನು ಅಭ್ಯಾಸ ಮಾಡಿದ್ದಾರೆ. ತೀ.ನಂ. ಶಂಕರನಾರಾಯಣ ಅವರು ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆಗೆಂದು ಲೇಖನ ಬರೆದಿದ್ದಾರೆ.

ಹೀಗೆ ದಶಕಗಳ ಬಳಿಕ ಪ್ರಸ್ತುತ ಸಂಪುಟದ ಕಾವ್ಯಗಳು ಓದುಗರಿಗೆ ಲಭಿಸುತ್ತಿವೆ. ಈ ಸಂಪುಟವನ್ನು ಸಂಪಾದಿಸಲು ಅವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ನನ್ನ ವಿದ್ಯಾಗುರುಗಳೂ ಆದ ಪ್ರೊ.ಬಿ.ಎ.ವಿವೇಕರೈ ಅವರಿಗೆ ವಂದನೆಗಳು. ಹಾಗೆಯೇ ಅವರು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ನೀಡಿದ ಸಹಕಾರ ದೊಡ್ಡದು. ಇವರಿಗೆ ನಾನು ಅತ್ಯಂತ ಆಭಾರಿಯಾಗಿದ್ದೇನೆ. ಕೆಲವೊಂದು ಉತ್ತಮ ಸಲಹೆ ಸೂಚನೆಗಳನ್ನು ನೀಡಿದ ಶ್ರೀ ಜಿ.ಜಿ. ಮಂಜುನಾಥನ್ ಅವರನ್ನೂ ಈ ಸಂದರ್ಭದಲ್ಲಿ ನೆನೆಯುತ್ತೇನೆ.

 – ವೈ.ಸಿ.ಭಾನುಮತಿ