ಕಂ || ಶ್ರೀಜಯರಾಮೆ ಮನೋಜ
ಶ್ರೀಜಯರಾಮೆಯವೊಲೆಸೆದಳಿನಿಯಂಗುದ್ಯ
ತ್ತೇಜಂ ಬಳೆದಿರೆ ಗರ್ಭಸ
ರೋಜಿನಿಯೊಳ್ ಪ್ರಭುಗುಣಾಬ್ಜಿನೀಕಳಹಂಸಂ ೧

ವ || ಅಂತಾವಿರ್ಭೂತ ಗರ್ಭನಿರ್ಭರವಿಕಾಸೆಯುಮ ಸಫಳೀಕೃತಗರ್ಭದೋಹಳ ಪ್ರಕಾರೆಯುಮಾಗುತ್ತುಮಿರ್ದ ತನ್ಮಹಾದೇವಿಯ ಪರಿಪೂರ್ಣಪ್ರಸವಸಮಯಂ ಮಾರ್ಗಶಿರಬಹುಳ ದಶಮಿಯಾಗೆ

ಮ || ಒದವಂ ಭವ್ಯಮುಖಾಂಬುಜಕ್ಕೆ ಮುದಮಂ ಸದ್ಧರ್ಮಚಕ್ರಕ್ಕೆ ಸಂ
ಪದಮಂ ಲೋಕದ ದೃಷ್ಟಿಗಸ್ತಪದಮಂ ದೋಷಾವಕಾಶಕ್ಕೆ ಹೃ
ದ್ಗದಮಂ ದುರ್ಮತಕೌಶಿಕಕ್ಕೆ ಪಡೆಯುತ್ತಿಕ್ಷ್ವಾಕುವಂಶೇಂದ್ರಶೈ
ಲದಿನತ್ಯೂರ್ಜಿತತೇಜನುದ್ಭವಿಸಿದಂ ತ್ರೈಲೋಕ್ಯನಾಥಂ ಜಿನಂ      ೨

ವ || ಆ ಪ್ರಸ್ತಾವದೊಳ್

ಮ || ಕುಜ ವಲ್ಲೀ ಫಲ ಪುಷ್ಪ ಸಂಪ್ರಯುತಮಾಯ್ತುರ್ವೀತಳಂ ಸ್ವಚ್ಛಮಾ
ಯ್ತು ಜಳಂ ಪ್ರಜ್ವಳಮಾಯ್ತು ವಹ್ನಿ ಹಿಮಗಂಧೋದ್ಗಾರಿಯಾಯ್ತಂದು ಗಾ
ಳಿ ಜಿತಾಂಭೋದಕಳಂಕಮಾಯ್ತು ನಭಮೆಂತುಂ ಸರ್ವಭೂತೋಪಕಾ
ರಿ ಜಿನಂ ಪುಟ್ಟಿದೊಡೊಳ್ಪು ಪುಟ್ಟುವುದು ಪಂಗೇ ಪಂಚಭೂತಂಗಳೊಳ್     ೩

ಕಂ || ಅೞಿಪಿಂದೆ ಬೞಿಯ ನುೞೆಯದೆ
ಸುೞಿದುಗುಳುವ ತುಂಬಿವಿಂಡನೆಳೆತರುತುಂ ಪೊಂ
ಪುೞಿವೋಗೆ ಕಂಪು ಪೂಮೞೆ
ಘೞಿವೋಗೆ ಕಂಪು ಪೂಮೞೆ
ಘೞಿಲನೆ ದೞದೞಿಸಿ ಸುರಿಯೆ ದೆಸೆಗಳೊಳೆಲ್ಲಂ           ೪

ವ || ಆಗಳಾ ಸೌಧರ್ಮೇದ್ರಂ ತನಗಾಸನಕಂಪಮಾಗಲೊಡಂ ಅವಧಿಬೋಧದಿಂ ತೀರ್ಥಕರೋತ್ಪತ್ತಿಯಂ ಜಲಕ್ಕನೞಿದು

ಚಂ || ತಡೆದಿರದೆೞ್ದು ವಿಷ್ಟರದಿನಾನತಮಸ್ತಕನಾಗಿ ಮೂಱುಸೂೞ್
ಪೊಡೆವಡುವಲ್ಲಿ ಮಾಣಿಕದ ಮೌಳಿಮರೀಚಿ ಸಭಾವಿಭಾಗದೊಳ್
ಪೊಡರ್ದು ಪೊದೞ್ದು ರಾಗರಸಾಪಗೆ ಬಂದು ನಿಂದ ಪೆ
ರ್ಮಡುವಿನೊಳಂದು ಮೂಡಿ ಮುೞುಗಿರ್ಪವೊಲಂದೆಸೆದಂ ಪುರಂದರಂ        ೫

ವ || ಅನಂತರಂ ಪರಮೇಶ್ವರದ್ವಿತೀಯಕಲ್ಯಾಣಕರಣೋತ್ಸುಕಾಂತಃಕರಣ ನೈರಾವಣಾರೂಢಂ ಶಚೀಸಮೇತನುಂ ಚತುರ್ವಿಧಾಮರಪರೀತನುಮಾಗಿ ಪೊಱಮಡುವುದಂ ನಿಜಮಹಾವಿಭೂತಿಯಂ

ಕಂ || ಪ್ರಕಟಿಸೆ ನೆರೆದುದು ಸಾಮಾ
ನಿಕತ್ರಯತ್ರಿಂಶದಾತ್ಮರಕ್ಷಕ ದಿಕ್ಪಾ
ಲಕ ಪರಿಷದಾಭಿಯೋಗ್ಯ
ಪ್ರಕೀರ್ಣಕಿಲ್ಮಿಷಕಭೇದ ಸುರಪರಿವಾರಂ          ೬

ವ || ಮತ್ತಂ

ಕಂ || ಘನಚಂದ್ರೋದಯದಬ್ಧಿಗ
ಳೆನಿಸಿದುವತಿರಭಸಮೆಸೆಯೆ ಕರಿ ತುರಗ ಸ್ಯಂ
ದನ ಪತ್ತಿ ವೃಷಭ ಗಂಧ
ರ್ವನರ್ತಕೀಪ್ರಕರಯುತಸುರಾನೀಕಿನಿಗಳ್         ೭

ವ || ಅಂತು ನೆರೆದತಿಬಹುಳಕೋಳಾಹಳಕ್ಷೋಭ ಶೋಭಾವಳಂಬಿಯಾದ ಮರಸೇನಾಸಹಸ್ರ ಸಮಿತಿವೆರಸು

ಸ್ರ || ವ್ಯೋಮಂ ಚಿತ್ರಾತಪತ್ರಂಗಳಿನತುಳಪತಾಕಾಪಟಶ್ರೇಣಿಯಿಂ ಪೌ
ಲೋಮೀ ದೃಕ್ಷಂದ್ರಿಕಾಜಾಲದಿನನಿಮಿಷಕಾಂತಾಂಗಶೃಂಗಾರದಿಂ ನಾ
ನಾ ಮಾಂಗಲ್ಯಾನಕ ಧ್ವಾನದಿನಮರ ಗಜೋದ್ಯನ್ಮದಾಮೋದದಿಂ ದಿ
ಕ್ಸೀಮಾ ಪ್ರಾಂತಂಬರಂ ತಿಂತಿಣಿಯೆನಿಸಿರೆ ಕಾಕಂದಿಗೆೞ್ತಂದನಿಂದ್ರಂ  ೮

ವ || ಅಂತು ಬಂದು ತತ್ಪುರಬಹಿರ್ಭಾಗದೊಳ್ ಸಕಳ ದೇವಕೋಟಿಯಂ ನಿಱಿಸಿ ಬರೆ ಪೊೞಲೊಳ್

ಕಂ || ಪಸರಿಪ ಪೂಮೞೆಯೊಡನೊಡ
ನೆಸೆವುತ್ಸವತೂರ್ಯನಿನದಮೊಡನೊಡನಲೆದಾ
ಱಿಸುವ ಹಿಮಾನಿಳಮೊಡನೊಡ
ನೆಸೆದುದು ಜಯ ಜೀವ ನಂದ ವರ್ಧಸ್ವರವಂ    ೯

ಪರಮೇಶ್ವರನುದಯಿಸಿದಂ
ನೆರೆದೆಲ್ಲರುಮೆಱಗಿಮೀಗಳೆಂದು ಪುರಶ್ರೀ
ಸುರನರಖಚರೋಗರಂ
ಕರೆವಂತೊಪ್ಪಿದುವಸಂಖ್ಯತೂರ್ಯರವಂಗಳ್   ೧೦

ವ || ಮತ್ತಮಾ ಸಮಯದೊಳ್

ಮ || ತ್ರಿದಶರ್ ಬಾಜಿಪ ದಿವ್ಯತೂರ್ಯರವಮಂ ನಿಷ್ಕಂಪಕರ್ಣಂಗಳಾ
ಗಿ ದಿಶಾದಂತಿಗಳಾಲಿಪಲ್ಲಿ ಮದಮಂ ಗಂಡಸ್ಥಳೋದೀರ್ಣಕಂ
ಪದೊಳಂ ಸೇವಿಸಿ ತುಂಬಿಗಳ್ ತಣಿದುವೇನುತ್ಸಾಹಮಂ ಮಾಡದಿ
ರ್ಪುದೆ ಸನ್ಮಾರ್ಗದೊಳಂ ಕ್ರಮಾಧಿಕರೊಳುದ್ಯದ್ದಾನ ಸಂಪ್ರೀತಿಯುಂ          ೧೧

ವ || ಅನ್ನೆಗಮಿತ್ತ ದೇವಲೋಕದೊಳ್

ಹರಿಣೀ || ಅಮರಪಟಹಧ್ವಾನಂ ತನ್ನಿಂದೆ ತಾನೆ ವಿಘೂರ್ಣಿಸಿ
ತ್ತಮರ ಮಕುಟಾನೀಕಂ ತನ್ನಿಂದೆ ತಾನೆ ವಿನಮ್ರಮಾ
ಯ್ತಮರ ಕುಸುಮಾಸಾರಂ ತನ್ನಿಂದೆ ತಾನೆ ಪೊದೞ್ದುದಂ
ದಮರನುತನಪ್ಪರ್ಹತ್ಪುಣ್ಯಪ್ರಭಾವದಿನೆತ್ತಲುಂ          ೧೨

ಮ || ನಿರುತಂ ಭಾವನರುಂ ವನಾವಸಥರುಂ ಜ್ಯೋತಿಷ್ಕರುಂ ಕಲ್ಪವಾ
ಸರುಮಾಗಿರ್ದ ಚತುರ್ವಿಧಾಮರರುದಾರರ್ ಸ್ತೋಮದೊಳ್ ಕೂಡೆ ಭೋ
ರ್ಗರೆಯುತ್ತಿರ್ದುವನೇಕ ಶಂಖರವಭೇರೀಘೋಷಕಂಠೀರವ
ಸ್ವರಘಂಟಾರುತಿಗಳ್ ಯಥಾಕ್ರಮದಿನತ್ಯಾಶ್ಚರ್ಯಮೆಂಬನ್ನೆಗಂ  ೧೩

ಕಂ || ಸ್ಮರಹರನುದಯಮನಪ್ಪುವ
ಸುರವಿಷ್ಟರದೊಡನೆ ನಡುಗಿತಲರ್ವಿಲ್ಲುಮಿದ
ಚ್ಚರಿ ನೇಣ ಭೇದವತನುವ
ಶರಾಸನಕ್ಕಂ ಸುರಾಸನಕ್ಕಮದೊಂದೇ            ೧೪

ವ || ಅಂತು ಸಮುಚಿತಾಮರೇಂದ್ರಸಮಿತಿವೆರಸು ಬಂದು ನಿಜನಿಳಯ ನಿರ್ವಿಶೇಷ ಲೀಲಾವಿಲಾಸಮಂ ವಿವಿಧ ಮಂಗಳ ಪರಂಪರಾ ಪರಿಕರವಿಭಾಸಮಂ ಸುಗ್ರೀವನಿವಾಸಮಂ ಪೊಕ್ಕು ನಿಯಮಿಸೆ

ಕಂ || ಶತಮಖನನುಮತೆ ದಿಗ್ಗಜ
ಪತಿಯಿಂದಿೞಿದುಚಿತದೇವಿಯರ್ವೆರಸು ತಿರೋ
ಹಿತದೇಹೆಯಾಗಿ ನಯವಿನಿ
ಭೃತೆ ಪೊಕ್ಕಿಂದ್ರಾಣಿ ಸೂತಿಕಾಮಂದಿರಮಂ      ೧೫

ಉ || ಸ್ಫಾರಶರೀರಕಾಂತಿ ಜನನೀ ನಯನಾಬ್ಜಮನುಳ್ಳಲರ್ಚಿ ವಿ
ಸ್ತಾರ ಮನೋರಥಾಂಗಮನೊಣರ್ಚೆ ಬೆಳರ್ಪೆಳನೇಸಱಂತೆ ತೇ
ಜೋರುಚಿರಾತ್ಮನಲ್ಲಿರೆ ಜಿನಾರ್ಭಕನೊರ್ಮೆಯೆ ಕಂಡು ನಿಂದು ಕ
ಣ್ಣಾರೆ ಪುಳೋಮಪುತ್ರಿ ನಡೆನೋಡಿದಳೞ್ಕಱನುಂಟುಮಾಡಿದಳ್  ೧೬

ವ || ಅಂತು ನೋಡಿ ತನಗದೃಷ್ಟಪೂರ್ವಮಪ್ಪ ಜಿನಾರ್ಭಕನ ಸರ್ವಾಂಗ ಸೌಂದರ್ಯಮುಂ ಸರ್ವಲಕ್ಷಣಸಂಪತ್ತಿಯುಂ ಚಿತ್ತಮಂ ಕೌತುಕಂಗೊಳಿಸೆ ನಿಟಿಳತಟಘಟಿತ ಕರಸರೋಜೆಯಾಗಿ

ಕಂ || ಜಿನನಿರ್ದ ಶಯನ ಸದನಮ
ನನಿಮಿಷವಧು ಮೂಮೆ ಭಕ್ತಿಯಿಂ ಬಲಗೊಳುತಂ
ಕನಕಾಬ್ಜಮೊಳಗೆ ಸರಸಿಯ
ನನುನಯದಿಂ ಬಳಸುವಂಚೆಯಂ ನೆನೆಯಿಸಿದಳ್ ೧೭

ವ || ಅನಂತರಂ ತಾಯ ಮುಂದೆ ಮಾಯಾಶಿಶುವನಿರಿಸಿ

ಕಂ || ಅಂಜಿಯುಮಂಜದೆ ತೆಗೆದಳ್
ರಂಜಿಪ ಜಿನಶಿಶುವನಂದು ಶಚಿಶುಚಿ ತೆಗೆವಂ
ತಂಜಿಯುಮಂಜದೆ ದಿವ್ಯಮ
ನಂಜದರಾರ್ ಮುಟ್ಟುವಲ್ಲಿ ತೇಜಸ್ವಿಗಳಂ     ೧೮

ವ || ಅಂತು ತೆಗೆದೆತ್ತಿಕೊಂಡು ದೇವಾಂಗನಾಮಂಗಳ ರವಂಗಳುಂ ಮಂಗಳಾನ ಕಂಗಳುಂ ಭೋರ್ಗರೆಯೆ ಪೊಱಮಟ್ಟು ಬರ್ಪಲ್ಲಿ

ಉ || ಭಾಸ್ವರಭಕ್ತಿಯಿಂದೆಱಗೆ ದೇವಗಣಂ ಜಯ ಜೀವ ನಂದ ವ
ರ್ಧಸ್ವ ಘನಸ್ವನಂ ನೆಗೞೆ ಬೀಸುವ ಸೀಗುರಿ ಸೋಗೆಯಾಗೆ ಕಾ
ರ್ತಸ್ವರಮೌಳಿಮಾಳೆ ಕುಡುಮಿಂಚಿನ ಗೊಂಚಲ ಕಾಂತಿ ಸಾರಸ
ರ್ವಸ್ವಮನೀಯೆ ಪೋಲ್ತೆಸೆದುದಂದು ಘನಾಗಮಮಂ ಜಿನಾಗಮಂ ೧೯

ವ || ಆಗಳತಿ ಭಕ್ತಿಯಿಂದಱಗುವಂತೆಱಗುವಿಭಪತಿಯ ಮೇಗಣ್ಗೆ ದಿಕ್ಕರಿಕರಾನು ಕಾರಿ ನಿಜಭುಜಾದಂಡಂಗಳಂ ನೀಡಿ ಶಚೀದೇವಿಯಿಂ ತೆಗೆದು ತತ್ಕರಸರೋಜಂಗಳತ್ತಣಿಂ ದೆತ್ತಿಕೊಂಡು

ಕಂ || ತಲೆಯೊಳ್ ತಾಳ್ದುವ ನೊಸಲೊಳ್
ನಿಲಿಪೆರ್ದೆಯೊಳ್ ತಳೆವ ಕುಳಿಶಿ ಚೂಡಾಮಣಿಗಂ
ತಿಲಕಕ್ಕಮೆಸ್ಕಸರಕಂ
ನಲಿನಲಿದೆಣೆಮಾಡಿದಂ ಜಿನೇಂದ್ರಾರ್ಭಕನಂ       ೨೦

ವ || ಆನಂತರಂ ತದಂಗಸಂಗಸಂಜನಿತ ಪರಮಾನಂದ ರೋಮಾಂಚಕಂಚುಕಿತ ಗಾತ್ರಂ ಸಹಸ್ರನೇತ್ರಂ ನಿಜೋತ್ಸಂಗತುಂಗಸಿಂಹಾಸನಸ್ಥಿತಂ ಮಾಡಿದಾಗಳ್

ಕಂ || ಇನ್ನೆವರಮಫಳಮೆನಿಸಿದು
ದೆನ್ನಕ್ಷಿಸಹಸ್ರದೊಂದು ಜನ್ಮಮುಮನಿಮೇ
ಷೋನ್ನತಿಯುಮೀಗಳುಂ ಜಿನ
ನನ್ನೋಡುವ ಸಯ್ಪಿನಿಂದಮಾಯ್ತೀ ಸಫಳಂ   ೨೧

ವ || ಎಂದು ಪರಿತೋಷಪರಾಕಾಷ್ಠೆಯೊಳ್ ನಿಷ್ಠಿತಾತ್ಮನಾಗುತ್ತುಂ

ಚಂ || ತಳೆದು ನಿಜಾಂಗಪೀಠತಟದೊಳ್ ಜಿನನಂ ತನಿಸೋಂಕಿ ಹಸ್ತದಿಂ
ಪುಳಕಿತಗಾತ್ರನಾಗಿ ಮಘವಂ ಮೆಱೆದಂ ಪೆಱಗೇಱಿ ಬರ್ಪ ನ
ಲ್ಲಳ ಕುಚಕುಂಭದೊಂದು ತನಿಸೋಂಕಿನ ಸೌಖ್ಯಮದಿಂತೆನಲ್ ಮನಂ
ಗೊಳೆ ತವರಾಜದಿಂಪನಱಿದಿಂ ಬೞಕಂ ಪರಿಗಿಂಬು ಸೇವ್ಯಮೇ       ೨೨

ವ || ಆಗಳತ್ಯಂತ ಕಳಧೌತಶೈಲಸನ್ನಿಧಿಯ ಕುಳಗಿರಿಗಳೆನಿಸಿದ ನಿಜನಿಜಗಜಂಗಳಂ ಸೌಧಮೇಂದ್ರನೇಱಿದೈರಾವತಕ್ಕೆ ಪಕ್ಕುಮಾಡಿ

ಕಂ || ಮುತ್ತಿನಬಿಂಬದ ಜಾಳದ
ಮುತ್ತಿನವಿಭ್ರಮದಿನೆಸೆವ ಬೆಳ್ಗೊಡೆ ಭಗಣಂ
ಸುತ್ತಿರೆ ಮಿಸುಗುವ ಶಶಿಯೆನಿ
ಸುತ್ತಿರೆ ಜಿನಪತಿಗೆ ಪಿಡಿದನೀಶಾನೇಂದ್ರಂ          ೨೩

ಮ || ನೆಗೞ್ದಸ್ಮಜ್ಜಳಮಂ ಜಿನಾಭಿಷವಣಕ್ಕೊಯ್ದೆಮ್ಮ ಜನ್ಮಕ್ಕೆ ಮಾ
ಡುಗೆ ಸಾಫಲ್ಯಮನಿಂದ್ರನೆಂದೆರೆದು ಗಂಗಾದೇವಿ ಪೇೞ್ದಟ್ಟಿದಂ
ಚೆಗಳೆಂಬಂತೆಸೆವಂತು ಚಾಮರಮನತ್ಯುತ್ಸಾಹದಿಂದಿಕ್ಕಿದರ್
ಜಗದೀಶಂಗೆ ಸನತ್ಕುಮಾರಪತಿಯುಂ ಮಾಹೇಂದ್ರಕಲ್ಪೇಂದ್ರನುಂ  ೨೪

ಕಂ || ಬಿತ್ತರದಿನಿಕ್ಕಿದರ್ ಭಗ
ವತ್ತೀರ್ಥಕರಂಗೆ ಕುಂಚಮಂ ಬ್ರಹ್ಮಬ್ರ
ಹ್ಮೋತ್ತರಲಾಂತವಕಾಪಿ
ಷ್ಠೋತ್ತಮ ಕಲ್ಪಾಮರೇಂದ್ರರಿಂದ್ರನ ಕೆಲದೊಳ್          ೨೫

ವ || ಮತ್ತಿತ್ತಮಿತರಕಲ್ಪಂಗಳಪ್ಪ

ಕಂ || ನುತಶುಕ್ರಮಹಾಶುಕ್ರದ
ಶತಾರಸಹಸ್ರಾರದಾನತಪ್ರಾಣತದಾ
ವಿತತಾರಣಾಚ್ಯುತೇಂದ್ರರ್
ಪತಿಭಕ್ತಿಗೆ ಪಡೆ ಪಿಡಿದರಖಿಳಪಾಳಿಧ್ವಜಮಂ    ೨೬

ವ || ಅಂತು ತಮತಮಗೆ ವೀತರಾಗಸೇವಾನುರಾಗರಸರಂಜನಾಯತಚಿತ್ತರ್ ಸುತ್ತಿಮುತ್ತಿ ಸಮುಚಿತಯೋಗದಿಂ ನೆಗೆದು ನಿಂದನೇಕನಾಕನಾಯಕರ್ಬೆರಸು

ಕಂ || ಜಿನವರನಂ ಮದುವೆಗೆ ಮು
ಕ್ತಿನಿತಂಬಿನಿಯತ್ತಲೊಯ್ವ ನಿಚ್ಚಣಿಗಳವೋಲ್
ಜನದೊಸಗೆ ನೆಗೞೆ ಪುಟ್ಟಿದ
ಮನೆಯಂ ಮುಂದಿಟ್ಟುಕೊಂಡು ಹರಿ ಪೊಱಮಟ್ಟಂ       ೨೭

ವ || ಆ ಸಮಯದೊಳ್

ಕಂ || ಸಕಳ ಜಗಮಿಂದೆ ಶಬ್ದಾ
ತ್ಮಕಮಾಯ್ತೆನೆ ಮೊೞಗೆ ಬಧಿರಿತಾಶಾಕರಿಗಳ್
ಪ್ರಕಟಿಸಿದುವಮರತೂರ್ಯ
ಪ್ರಕರಂಗಳ್ ಸಾರ್ಧಸಪ್ತಕೋಟಿಮಿತಂಗಳ್       ೨೮

ವ || ಅನಂತರಂ

ಮ || ಜಗತೀವಿಶ್ರುತಮಂದರಕ್ಕೆ ನಡೆಯಲ್ ಪೇೞ್ದಿಂದ್ರನಾತ್ಮೀಯ ಸೇ
ನೆಗೆ ಸಂರಂಭದೆ ಸನ್ನೆಗೆಯ್ಯೆ ಜಿನಯಾತ್ರಾಯೋಗ್ಯಮಾಗಧ್ವಶು
ದ್ಧಿಗೆ ಗಂಗಾಂಬುಪವಿತ್ರಪಾಣಿತಳದಿಂದಭ್ಯುಕ್ಷಣಂ ಮಾಡುವಂ
ತೊಗೆದಿಂಬಾದುದು ಕೆಯ್ಯ ಚಾಮರಚಳತ್ಪಾಂಡುಪ್ರಭಾಮಂಡಳಂ ೨೯

ವ || ಅಂತು ಸನ್ನೆಗೆಯ್ಯಲೊಡಂ

ಕಂ || ಬಡಗಣ ದೆಸೆಗೆ ತೆರಳ್ದಾ
ಗಡೆ ಮಂದರದತ್ತ ಮೊಗಸಿ ಗಗನಮನೋರಂ
ತೆಡೆಗೊಂಡುದು ಗೆಡೆಗೊಂಡುದು
ನಡೆಗೊಂಡುದು ಹಾದಿಗೊಂಡುದಮರಾನೀಕಂ  ೩೦

ಚಂ || ತಳರ್ವ ವಿಮಾನಕೋಟಿ ನಡೆದೊಪ್ಪುವ ವಾರಣಕೋಟಿ ಬಾಜಿಪ
ಗ್ಗಳಿಕೆಯ ತೂರ್ಯಕೋಟಿ ನೆಗೆವಾತಪವಾರಣಕೋಟಿ ಬೀಸುವು
ಜ್ವಳ ಚಮರೀಜಕೋಟಿ ಮಿಳಿರ್ವುಚ್ಚಮಹಾಧ್ವಜಕೋಟಿ ಮಿಂಚಿ ಸಂ
ಚಳಿಸುವ ಶಸ್ತ್ರಕೋಟಿ ಬಗೆಗೊಂಡುದು ತಂಡದೆ ದೇವಕೋಟಿಯಾ  ೩೧

ಅನಿಮಿಷದೇಹದೀಪ್ತಿ ಜಳಮೆತ್ತಿದ ಸತ್ತಿಗೆ ಫೇನರಾಜಿ ಕೇ
ತನಚಯಮೂರ್ಮಿಮಾಳೆ ಬಹುವಾಹನಸಂತತಿ ನಕ್ರಚಕ್ರವಂ
ಗನೆಯರ ಕಣ್ಬೊಣರ್ ಪೊಳೆವ ಮೀಂಬೊಣರೆಂಬಿನಮಾಗಳಿಂದ್ರವಾ
ಹಿನಿಯವೊಲಿಂದ್ರವಾಹಿನಿ ಮನೋಹರಮಾಯ್ತು ನಭೋವಿಭಾಗದೊಳ್      ೩೨

ಉ || ಈ ನಿಖಿಳಾಮರರ್ಗೆ ಜಿನಯಾತ್ರೆಯೊಳಾಗದು ಪಾಱುಗೆಯ್ತಮ
ಧ್ವಾನಮನಿಂಬುಮಾಡಿ ನಡಿಯಿಪ್ಪನೆನುತ್ತುಮೆ ಶಕ್ರವಿಕ್ರಿತಂ
ಶ್ರೀ ನಿಱಿಸಿಟ್ಟ ನಿಚ್ಚಣಿಗೆಯೆಂಬಿನೆಗಂ ಸ್ಫಟಿಕೇಂದ್ರನೀಲಸೋ
ಪಾನದ ಮೂಱುಪಂಕ್ತಿ ನಿಮಿರ್ದೇನೆಸೆದಿರ್ದುದೊ ಮಂದರಂಬರಂ   ೩೩

ಕಂ || ಸ್ಫುರಯಿಪ ತಮಾಳವೀಥಿಗ
ಳೆರಡಱ ನಡುವಲರ್ದ ಕುಂದವನದವೊಲೆನಿಸಿ
ತ್ತೆರಡುಂ ನೀಲದ ಸೋಪಾ
ನ ರಾಜಿಗಳ ನಡುವಣಿಂದುಮಣಿ ಸೋಪಾನಂ   ೩೪

ವ || ಅಲ್ಲಿ

ಕಂ || ಅಂಚೆಯ ನಡೆಯ ಬೆಡಂಗಂ
ಮುಂಚಲ್ಪಿಡಿದಿರ್ದರಿವರ್ಗಳೆನೆ ಮೃದುಗತಿಯಿಂ
ಕಾಂಚೀಕಳರುತಿ ನಿಮಿರ್ವಿನೆ
ಗಂ ಚೆಲ್ವಂ ಮೆಱೆದರಾಗಳಮರಾಂಗನೆಯರ್   ೩೫

ಚಂ || ಅಳಿಕುಳಕುಂತಳಂಗಳ ರಥಾಂಗಕುಚಂಗಳ ಕೋಕಿಳಸ್ವನಂ
ಗಳ ಕಳಹಂಸಮಂದಗಮನಂಗಳ ಚಾರುಚಕೋರಲೋಚನಂ
ಗಳ ಶಶಿಮಂಡಲಾನನೆಯರೀಕೆಗಳೀ ಗುಣಪಕ್ಷದಿಂ ವಿಯ
ತ್ತಳಗಮನಕ್ಕೆ ತಕ್ಕರೆನೆ ಹಾರುವೊಲೊಪ್ಪಿದರಿಂದ್ರನಾರಿಯರ್       ೩೬

ಸುರುಚಿರ ವಿದ್ರುಮಾಧರದಿನುತ್ತಮ ಮೌಕ್ತಿಕದಂತದಿಂ ಮನೋ
ಹರ ಹರಿನೀಳಕುಂತಳದಿನುಜ್ವಳ ವಜ್ರನಖಂಗಳಿಂ ಸ್ಫುರ
ನ್ಮರಕತವರ್ಣದಿಂದೆಸೆದುದಂದಮರೀತತಿ ಪಂಚರತ್ನದಿಂ
ವಿರಚಿಸಿ ಕೊಟ್ಟ ಬಣ್ಣಸರಮಂಬರಲಕ್ಷ್ಮಿಗಿದೆಂಬಿನಂ ಜನಂ            ೩೭

ಸ್ಫುರಿತಪಯೋಧರಂಗಳೆ ಪಯೋಧರಮಂ ಮರಲೊತ್ತೆ ಸತ್ಪ್ರಭಾ
ಚರಣಮೆ ಸತ್ಪ್ರಭಾಚರಣಶೋಭೆಯನೀಯೆ ಚಳದ್ವಿಚಿತ್ರಿತಾಂ
ಬರಮೆ ವಿಚಿತ್ರಿತಾಂಬರಮದಾಗೆ ಮುಖಾಬ್ಜಮದಬ್ಜಲೀಲೆಯಂ
ತಿರೆ ಸುರಕಾಂತೆಯರ್ ಸಜಳಕಾಂತೆಯರೊಪ್ಪಿದರಾ ಪ್ರಯಾಣದೊಳ್          ೩೮

ಕಂ || ಮುಳಿವುೞಿವ ಬಯ್ವ ಬಗ್ಗಿಸು
ವೆಳಸುವ ತಿಳಿವೆರೆವನೆರೆವ ಬಸನದ ಬಿನದಂ
ಗಳನೆ ಮಱೆದಭವನೊಸಗೆಗೆ
ತಳರ್ದುದದೇಂ ಭಕ್ತಿ ಪಿರಿದೊ ಸುರದಂಪತಿಯಾ            ೩೯

ವ || ಆಗಳ್

ಕಂ || ಎಡವಕ್ಕದ ಬಲವಕ್ಕದ
ಪಡಿಯಱಿದೆಡೆಯಱಿದು ನಡೆಯಿಪಿಂದ್ರನ ಪಲರುಂ
ಪಡೆವಳರ ಜಡಿದು ನಡೆಯಿಪ
ಪಡಿಯಱರುಲಿ ಗೆಲಿದುದುಲಿವ ಜಲನಿಧಿಯುಲಿಯಂ      ೪೦

ವ || ಮತ್ತಂ

ಮ || ಪುದಿದಲ್ಲಲ್ಲಿ ಮನೋಜ್ಞವಾದ್ಯರವದಿಂದಲ್ಲಲ್ಲಿ ಮಾಂಗಲ್ಯಗೇ
ಯದಿನಲ್ಲಲ್ಲಿ ಸುರಾಂಗನಾಲಟಹದಿಂದಲ್ಲಲ್ಲಿ ಸದ್ವಂದಿಘೋ
ಷದಿನಲ್ಲಲ್ಲಿನತಾಮರಸ್ತುತಿಗಳಿಂದಲ್ಲಲ್ಲಿ ಪುಷ್ಪೋಪಹಾ
ರದಿನಲ್ಲಲ್ಲಿ ವಿಕೀರ್ಣವರ್ಣರಜದಿಂ ಚೆಲ್ವಾಯ್ತು ದೇವಾಗಮಂ   ೪೧

ಕಂ || ಪೊೞಲ ವಿಳಾಸಿಜನಂಗಳ
ನೆೞಲ್ ನಭೋಮುಕುರತಳದೊಳೆಸೆದಪುದೆನೆ ಪೊಂ
ಪುೞಿಯಿಂ ನಿಳಿಂಪಸೈನ್ಯಂ
ಕೆೞಗಿರ್ದೀಕ್ಷಿಪರ ಕಣ್ಗೆ ತೋೞಿದುದಿನಿಸಂ        ೪೨

ಅಂತಂತೆ ನಡೆಯೆ ನಡೆಯೆ ನ
ಭಾಂತರದೊಳ್ ರೂಪುದೋರ್ಪುದುಂ ಮಾಣ್ಬ ಮರು
ತ್ಸಂತಾನದ ಕಳಕಳಮೆ ನಿ
ರಂತರಿತಂ ಕೇಳಲಾಗಿ ಭಾವಿಸಿತು ಜನಂ            ೪೩

ವ || ಆಗಳುತ್ಸಾಹಗೇಹದಂತೆ ಧೃತಪೂರ್ಣಕುಂಭಮುಂ ರವಿಮಧ್ಯಸಮಯದಂತೆ ನವಗ್ರಹ ವಿಭಾಸಿಯುಂ ಪಿಪ್ಪಳಮಹೀಜದಂತೆ ಮದವತ್ಕರಟಮುಂ ಜಿನಭವನದಂತೆ ಶ್ರವಣ ಸಂಗಿಯುಂ ವೈದ್ಯಜನದಂತೆ ಸಗರಾನುವರ್ತಿಯುಂ ನರೇಂದ್ರಭವನದಂತಂತಃಪುರಪ್ರಭಾವ ಮುಂ ಮುಕುರದಂತೆ ಸಂಗತಪ್ರಿಮಾನಮುಂ ಮದಿರಾಂಗವೃಕ್ಷದಂತೆ ಶುಂಡಾನುಬಂಧಿ ಯುಂ ದೇವಮುಖದಂತೆ ಪುಷ್ಕರಸ್ಫುರಿತಮುಂ ವಿಳಾಸಿನೀಕರ್ಣದಂತೆ ಕರ್ಣಿಕಾಕಳಿತಮುಂ ಬಾಳಾಸ್ಪದವಿಳಾಸದಂತೆ ಸಲಿಲತಾಳುತಳಲಾಲಿತಮುಂ ಜಯರಾಮಾಮಹಾದೇವಿಯಂತೆ ಸುಗ್ರೀವಾವಳಂಬಿಯುಂ ವನಪ್ರವೇಶದಂತೆ ವಿಪುಳಾಸನ ಪ್ರಭಾಸಿಯುಂ ದ್ವಿಜನ್ಮನಂತೆ ಸಮುತ್ತುಂಗವಂಶಮುಂ ಸುಕೇಶಿಯಂತೆ ಸಂಸ್ನಿಗ್ಧಜಾಲಮುಂ ಹಿರಣ್ಯದಂತಜಕುಕ್ಷಿಲಕ್ಷ್ಯಮುಂ ಪ್ರವೀಣೇಶಭವನದಂತೆ ಶುಚಿರೋಮಾಂಗಸಂಗಿಯುಂ ನಿಧಿಯಂತನಂತ ಪದ್ಮಾವಳಂಬಿಯುಂ ಬಲಭದ್ರನಂತೆ ದಾನವಾರಿಪ್ರಯುಕ್ತಮುಂ ತಿಮಿರದಂತೆ ಬಹುಲಕ್ಷಣಾವಲಂಬಿತಮುಮೆನಿಸಿ

ಉ || ತೋಳ ಕಪೋಲ ಕರ್ಣ ಕರಚೂಚಕ ಲೋಚನ ಕೇಶ ರೋಮಕೂ
ಪಾಳಿಗಳಿನುಣ್ಮಿ ಪೊಣ್ಮುವ ಮದಪ್ರಸರಂ ಲವಲೀಲವಂಗ ತ
ಕ್ಕೋಳಿ ತಮಾಳಸಪ್ತದಳ ಸೌರಭಮಂಗರಸಾಳಿಗಂ ವಿಲೋ
ಳಾಳಿಗಮೊಪ್ಪಿತಲ್ಲಿ ಮಣಿಕುಂಡನ ಬಂಧುರವಿಂದ್ರಸಿಂಧುರಂ        ೪೪

ರಗಳೆ || ಆ ನೆಗೞ್ದ ನಿಳಿಂಪಮದದ್ವಿಪಕ್ಕೆ
ಪಕ್ಕೆನೆ ಮಣಿಘಂಟಾಗಣದ ಮಸಕ
ಮಸಕೞೆದ ರವಂಗಳಿನಂದೆಸೆಯೆ
ದೆಸೆಯೆಲ್ಲಂ ಬಧಿರಿತಮೆನಿಸುವನ್ನ
ವನ್ನೆಗ ಮಚ್ಚರದ ವಿವಿಧಶೋಭಿ
ಶೋಭಿಸೆ ಮೂವತ್ತೆರಡೊಗೆದುವಾಸ್ಯ
ವಾಸ್ಯದೊಳೋರೊಂದಱೊಳೆಂಟು ಕೊಂಬು
ಕೊಂಬುಗಳೋರೊಂದಱೊಳೆರಡು ಸರಸಿ
ಸರಸಿಗಳೋರೊಂದಱೊಳೋರೊಂದು ನಳಿನಿ
ನಳಿನಿಗಾಳೋರೊಂದಱೊಳಾದಮಲರ್ದು
ಮಲರ್ದಿರೆ ಮೂವತ್ತೆರಡೊಪ್ಪುವಬ್ಜ
ವಬ್ಜದೊಳೋರೊಂದಱೊಳೆಸಳ ರಾಜಿ
ರಾಜಿಸೆ ಮೂವತ್ತೆರಡದ[ಱ] ಮೇಲೆ
ಮೇಲೆನೆ ಚೆಲ್ವುಮದರ್ಕೆ ಮತ್ತೆ
ಮತ್ತೆನಿಸದೆ ಮೂವತ್ತಿರ್ವರಾಗಿ
ರಾಗಿಸಿ ನಲಿದಮರಿಯರಾಡುವಲ್ಲಿ
ವಲ್ಲಿಗಳೆನೆ ನಳಿತೋಳ್ಗಳ್ ತುಱುಗೆ
ತುಱುಗೆವೆಗಣ್ಗಗಳ್ ಮಿಗೆ ತೊಳಗಿ ಬೆಳಗೆ
ಬೆಳಗೆಯ ರಸಭಾವಕ್ಕನಿಸೆ ಮಾರ್ಗ
ಮಾರ್ಗಂ ಮುದೆಮಂ ದೇಸಿ ಪಡೆಯೆ
ಪಡೆಯೆಲ್ಲಂ ಮೆಚ್ಚಿದುದಮರಪತಿಯ
ಪತಿಯೊಸಗೆಯನೊದವಿಪ ವಿಮಳಮತಿಯ      ೪೫

ಚಂ || ಜಳರುಹಪತ್ರಪತ್ರಗಳ ಮೇಲೆನಸುಂ ಕುಣಿವಂಗನಾಜನಂ
ಗಳ ನಳಿತೋಳ ತೆಕ್ಕೆ ಬಿಸವಲ್ಲಿಗಳಂ ಪದಪಾಣಿ ಪಲ್ಲವಂ
ಗಳ ಮುಖವಂಬುಜಂಗಳೊದವಂ ತರಳಾಳಕಜಾಳಕಂಗಳು
ಚ್ಚಳದಳಿಮಾಳೆಯಂ ದ್ವಿಗುಣಿಸಲ್ ನೆಱೆದಿರ್ದುವು ತತ್ಪ್ರದೇಶದೊಳ್         ೪೬

ಕಂ || ಓವದೆ ತುೞಿದೇಕೇಂದ್ರಿಯ
ಜೀವಮನೀ ಜಳಕುಳಮನಳಱಿಸೆ ಸಾರ್ಗುಂ
ಸಾವದ್ಯವೆಮ್ಮನೆಂಬವೊ
ಲಾ ವನಿತೆಯರೆಸಳನಿನಿಸು ಮುಟ್ಟದೆ ಕುಣಿದರ್            ೪೭

ವ || ಅಂತುಮಲ್ಲದೆಯುಂ

ಚಂ || ಅಮಳಜಿನೋತ್ಸವಾಗಮನದೊಳ್ ಸುಪವಿತ್ರೆಯರೇಕೆ ಮೆಟ್ಟುವರ್
ಕಮಳಮನೀರಜೋಧಿಕಮನಾಱಡಿದಾಣಮನಪ್ರಶಸ್ತಜ
ನ್ಮಮನಧರೀಕೃತಾರ್ಥಗುಣಮಂ ಮಧುಪಾತ್ರಮನುಗ್ರರುಕ್ಸಹಾ
ಯಮನುರುಕಂಟಕಾಂಗಮನೆನುತ್ತಿರೆ ಮೆಟ್ಟಿದರಿಲ್ಲ ನೃತ್ಯದೊಳ್  ೪೮

ಕಂ || ಆಕೆಗಳಿಂ ತುಱುಗಿದ ತ
ನ್ನಾಕೃತಿ ಬರೆದಣ್ಕೆಗೆಯ್ದ ರಸಚಿತ್ರಗತ
ಸ್ತ್ರೀಕುಂಜರಮಂ ಪೋಲ್ತ
ತ್ತಾ ಕುಂಜರಮಮಳಗಗನಫಳಕಸ್ಥಳದೊಳ್     ೪೯

ವ || ಅದಲ್ಲದೆಯುಂ

ಮ || ಪಲವುಂ ಕಣ್ಗಳಿನೆಯ್ದೆ ನೋೞ್ಪ ಪಲವುಂ ಹಸ್ತಂಗಳಿಂದರ್ಘ್ಯಮಂ
ಗಲಮಂ ಮಾೞ್ಪಿನಿತಿಲ್ಲದಾಂತಱಿನೀ ತೀರ್ಥೇಶನುತ್ಸಾಹದೊಳ್
ನಲಿದೆಂಬಂತಱುವತ್ತುನಾಲ್ಕುನಯನಂ ಮೂವತ್ತೆರೞ್ಕೆಯ್ ಕುತೂ
ಹಲಮಂ ಪುಟ್ಟಿಸೆ ತಾಳ್ದಿ ವಿಕ್ರಿಯೆಯನೇಂ ಶಕ್ರೇಭಮೊಪ್ಪಿರ್ದುದೋ          ೫೦