ಕಂ || ಆತತಮದನಿರತಂ ಪುರು
ಹೂತಗಜಂ ಕರ್ಣತಾಳಪವನಾಹತಿಯಿಂ
ಜ್ಯೋತಿರ್ಲೋಕವಿಮಾನ
ವ್ರಾತದ ಜೀಮೂತದೊಡ್ಡನಧರಿಸಿತೆನಸುಂ      ೫೧

ವ || ಅಂತು ಬರೆವರೆ

ಕಂ || ತಪನೀಯಶೈಲಮಮರಾ
ಧಿಪನಕ್ಷಿಗೆ ಲಕ್ಷ್ಯಮಾಗೆ ಸೊಗಯಿಸಿದುದು ರಾ
ಜಿಪ ಋತುವಿಮಾನಮೆಂಬಾ
ತಪತ್ರದುದ್ದಾಮ ಹೇಮದಂಡಾಕೃತಿಯಿಂ       ೫೨

ವ || ಆ ಸಮಯದೊಳ್

ಮ || ಪದುಳಂ ನಿರ್ಝರವಾರಿಯಂ ತಳಿಯುತುಂ ಮಂದಾರಕಾಗಂಧಮಂ
ಕೆದಱತ್ತುಂ ಮುಗಿಲಚ್ಚಮುತ್ತನುಗುತಂ ಪುಷ್ಪಂಗಳಂ ಸೂಸುತಂ
ತ್ರಿದಶಾರಾಧ್ಯನನರ್ಘ್ಯಪೂರ್ವಮಿದಿರ್ಗೊಳ್ವಂತಾಗಿ ಬಂದಾ ನಗೇಂ
ದ್ರದ ಮಂದಾನಿಳನಾಱಿಸಿತ್ತು ನಯದಿಂ ದೇವಾಗಮಶ್ರಾಂತಿಯಂ    ೫೩

ವಿಳಸನ್ನಿರ್ಝರನೀರಸಾರಮುಪಕಂಠಾಂಭೋಜಿನೀಗಂಧಸಿಂ
ಧುಲತಾಕುಟ್ಮಳಜಾಳಶಾಳಿನಿಕಟೋದ್ಯಾನಪ್ರಸೂನಾನ್ವಿತಂ
ಜಳಗಂಧಾಕ್ಷತಪುಷ್ಪದಿಂದಮಿದಿರ್ಗೊಂಡಿಂದ್ರಾರ್ಚಿತಂಗರ್ಘ್ಯಮಂ
ಗಳಮಂ ಮಾೞ್ಪವೊಲಾಯ್ತು ಮಂದರನಗೇಂದ್ರಾಯಾತಶೀತಾನಿಳಂ           ೫೪

ವ || ಅಂತು ಬಂದು ಕಂಡೈಸಿದ ಮಂದಪವನನಿಂದಮಖಿಳ ಬೃಂದಾರಕಬೃಂದಂ ಬೆರಸಾನಂದಿತಾಂಗನಾಗಿ ತದನಂತರಂ ಪುರುಹೂತನಿಂದ್ರಾಣಿಗಾ ಗಿರೀಂದ್ರಮಂ ತೋಱೆ

ಚಂ || ಬಹುತರಸಾನುಶಾಖೆಗಳಿನುನ್ಮುಖರತ್ನಮಯೂಖಮಂಡಳೀ
ಬಹಳವಿಚಿತ್ರಪತ್ರಚಯದಿಂ ಭಗಣೋಜ್ವಳಪುಷ್ಪದಿಂ ನವ
ಗ್ರಹಫಳವೃಂದದಿಂ ದಿವಿಜಯುಗ್ಮವಿಹಂಗಮರಾವದಿಂ ಮಹೀ
ಮಹಿತಮಿದಲ್ತೆ ಮೇರುನಗಮೆಂಬ ನಮೇರುನಗಂ ಮೃಗೇಕ್ಷಣೇ     ೫೫

ಕಂ || ಪವಣಿಸಿ ಜಿನೇಂದ್ರಮತದಿಂ
ನವನವತಿಸಹಸ್ರಯೋಜನೋಚ್ಛ್ರಯದಿಂ ಸಂ
ಭವಿಸಿದ ಸಹಸ್ರಯೋಜನ
ದವಗಾಹದಿನೆಸೆವುದೀ ನಗಂ ಶಶಿವದನೇ           ೫೬

ಜಿನಭವನಚತುಷ್ಟಯನೀ
ವನಮೊಂದೊಂದೆನಿಸಿ ಮಿಸುಪ ಮೇಖಳೆ ನಾಲ್ಕುಂ
ತನಗಮರೆ ನಿಮಿರ್ದುದೀ ಕಾಂ
ಚನಶೈಳಂ ಋತುವಿಮಾನಚುಂಬಿತಚೂಳಂ       ೫೭

ಮ || ವಿನುತೋದ್ಯತ್ಫಲಭದ್ರಶಾಲೆಯೆಸೆದತ್ತೀ ಭದ್ರಶಾಲಂ ಸುನಂ
ದನವಾಗಿರ್ದುದು ದಿವ್ಯನಂದನವಿದಿಂತೊಪ್ಪಿರ್ದುದೀ ಸಾರಸೌ
ಮನಸಂ ಸೌಮನಸಂ ವಿಕಾಸಿಕುಸುಮಶ್ರೀಪಾಂಡುಕಂ ಪಾಂಡುಕಂ
ಮನಕಿಂಬಾಯ್ತದೆ ನೋಡ ತನ್ವಿ ಗಿರಿಗೀ ನಾಲ್ಕುಂ ಬನಂ ಜವ್ವನಂ  ೫೮

ವ || ಅದಲ್ಲದೆಯುಂ

ಮ || ವಿಳಸತ್ಪಾಂಡುಕ ಪಾಂಡುಕಂಬಳಶಿಲಾಪಟ್ಟಂ ಶಿಲಾಪಟ್ಟಕಂ
ಬಳಸತ್ಕಾಂತ್ಯತಿರತ್ನಸಂಚಳಶಿಲಾಪಟ್ಟಂಗಳಂ ನಾಲ್ಕುಕೋ
ಣ್ಗಳೊಳೊಪ್ಪಿರ್ಪುವು ಭಾರತಾಪರವಿದೇಹೈರಾವತಪ್ರಾಗ್ವಿದೇ
ಹ ಲಸದ್ಭೂತಜಿನವ್ರಜಕ್ಕೆ ಸವನಸ್ಥಾನಂಗಳೀ ಶೈಳದೊಳ್          ೫೯

ವ || ಎಂದು ವಸ್ತುಕಥನಂ ಮೆಱೆದು

ಕಂ || ಈನಗದ ನಿಶಿತವಜ್ರದ
ಸಾನುಗಳಿಂದೊಗೆದ ಚಂದ್ರಬಿಂಬದಿನಮೃತಂ
ಸೋನೆ ಸುರಿವಂತು ಸುರಿತರೆ
ಮಾನವರುಂತಮರರಕ್ಕುಮೆಂದಪೆನಬಳೇ        ೬೦

ಮೆಚ್ಚಿ ಜಿನಜನ್ಮದೊಸಗೆಯ
ನಚ್ಚರಿವಟ್ಟೀಸುರಾದ್ರಿ ತಲೆದೂಗುವವೋಲ್
ನಿಚ್ಚಮೆಸೆದಪುದು ನೋಡ ಮ
ರುಚ್ಚಂಚಳ ಮೇಘ ಪಟಳ ಪರಿವೃತ ಶಿಖರಂ    ೬೧

ಮ || ಪರಮಶ್ರೀಪತಿ ಬಂದೊಡಿಂದೊಸಗೆಯೊಳ್ ಸೇಸಿಕ್ಕುತುಂ ಪಾಡುತುಂ
ಪರಸುತ್ತುಂ ನಲಿದಾಡುತುಂ ನಗುತುಮಿರ್ಪಂತಲ್ಲುಗುತ್ತಿರ್ಪ ಪೂ
ಮರದಿಂ ತುಂಬಿಯ ಗೇಯದಿಂ ಬಹುವಿಹಂಗಾಳಾಪದಿಂ ಲೋಲವ
ಲ್ಲರಿಯಿಂ ಪುಷ್ಪವಿಕಾಸದಿಂ ಸೊಗಯಿಕುಂ ನೋಡೀ ನಗೋಪತ್ಯಕಂ           ೬೨

ವ || ಎಂದು ಪೊಗೞ್ದನಂತರಂ

ಮ || ಕ್ಷಮೆಯಂ ತಾಳ್ದಿದ ಪೆಂಪು ಗೋತ್ರನುತಮಪ್ಪಾತ್ಮೋದಯಂ ಮಂದರಾ
ಗಮೆನಿಪ್ಪುನ್ನತಿ ಜಾತರೂಪಧರಮಾಗಿರ್ಪೊಳ್ವು ಲೋಕತ್ರಯಾ
ಪ್ತಮಹತ್ವಂ ಹರಿವಿಷ್ಟರಾರ್ಹಮಹಿಮಾವಷ್ಟಂಭಮೊಪ್ಪಲ್ಕದೇಂ
ಸಮನಾದತ್ತೊ ಜಿನಂಗೆನುತ್ತೆಱಗಿದಂ ಲೇಖಾದ್ರಿಗಾಖಂಡಳಂ          ೬೩

ವ || ಅನಂತರಂ

ಕಂ || ಅಭಿಷವಮಂಗಳಪೀಠಂ
ತ್ರಿಭುವನಗುರುಗಿಂತೆಂದು ಮಂದರಕ್ಕೆ ಶಚೀ
ಪ್ರಭು ಮಾಡೆ ಭಕ್ತಿಯಿಂದೇಂ
ಪ್ರಭವಿಸಿತೊತ್ರಿಃಪ್ರದಕ್ಷಿಣೈಕವಿಧಾನಂ  ೬೪

ಭೂಷಾಂಶುರುಚಿರಮಪ್ಪನಿ
ಮೇಷಗಣಂ ಬಲಗೊಳುತ್ತುಮಿರ್ಪೆಡೆಯೊಳ್ ಲಂ
ಬೂಷನಗಮೊಪ್ಪಿದುದು ಪರಿ
ವೇಷಂಗೊಂಡರುಣತರಣಿಬಿಂಬದ ತೆಱದಿಂ       ೬೫

ವ || ಅಂತು ಬಲಗೊಂಡು ತದನಂತರಂ

ಮ || ಗುರುಪಾದಂ ಕಳಧೌತಗೌರರುಚಿರಚ್ಛಾಯಂ ಕರಕ್ರಾಂತಪು
ಷ್ಕರದೇಶಂ ಪೃಥುಚೂಳಿಕಾವಿಳಸಿತಂ ನಕ್ಷತ್ರಮಾಳಾವೃತಂ
ಧರಣೀಂದ್ರಂ ಬಹುಕುಂಜರಾಜಿತವಿಳಾಸಂ ತನ್ಮರುದ್ದಂತಿ ಮಂ
ದರಮಂ ಮಂದರವೇಱಿದಪ್ಪುದಿದು ಬೇಱೆಂಬಂತದೇನೇಱಿತೋ  ೬೬

ವ || ಅಂತುಮಲ್ಲದೆಯುಂ

ಕಂ || ಕಾಂಚನಘಂಟಾದ್ಯುತಿ ಕುಡು
ಮಿಂಚೆನಲಾ ಬೃಂಹಿತದ ಮೊೞಗು ಮೊೞಗೆನೆ ಭೂ
ಷಾಂಚಿತ ರುಚಿ ಸುರಧನುವೆನೆ
ಸಂಚಿತಶರದಭ್ರಮೆನಿಸಿತಡರ್ವಭ್ರಗಜಂ            ೬೭

ಉ || ಲೋಲತೆಯಿಂ ಸುರಾಗದ ಸುರಾಗದ ಪೂವನುದಿರ್ಚುತಂ ಲತಾ
ಜಾಳಕಜಾಳಕಂಗಳನೇೞಲ್ಚುತವಳ್ಳಿಱಿದಭ್ರದಭ್ರಮಂ
ಚಾಳಿಸುತುಂ ಮದಾಳಿಯ ಮದಾಳಿಯನೋವದೆ ಸೋವುತುಂ ಸುರ
ವ್ಯಾಳಗಜಂ ವಿನೋದಿತ ವಿನೋದಿತ ಸಮ್ಮದವೇಱಿತದ್ರಿಯಂ      ೬೮

ಕಂ || ವಾಸವಗಜದೊಡನಡರ್ವ ವಿ
ಳಾಸದ ಸುರಜನದ ಹಾರಿ ಪೋಲ್ತುದು ಗಿರಿಗ
ಬ್ಜಾಸನನೆ ಪಂಚರತ್ನದ
ಸೂಸಕಮಂ ಮಾಲೆವೂವ ನೆೞಲಿಕ್ಕಿದವೋಲ್   ೬೯

ಚಂ || ಸ್ಫುರಿಪ ನಿತಂಬದಿಂ ಗುರಪಯೋಧರದಿಂ ಸುಮನೋವಿಳಾಸದಿಂ
ಪರಿಚಿತರಾಜಹಂಸಗತಿಯಿಂ ನುತಪಾದದಿನುದ್ಘ ಮೇಖಳಾ
ಭರಣದಿನೆಮ್ಮೊಳೊಡ್ಡಿಪುದಿದೆಂದುಱದೀಕೆಗಳಿಕ್ಕಿ ಮೆಟ್ಟಿದರ್
ಪುರುಡಿನೊಳೀ ನಗೇಂದ್ರಮನೆನಲ್ಕಡರ್ದೆಱಿದರಿಂದ್ರಕಾಂತೆಯರ್    ೭೦

ಅನಿಮಿಷಕಾಂತೆಯರ್ ಪರಿದನುಕ್ರಮದಿಂದಮೆ ಭದ್ರಶಾಲದೊಳ್
ನನೆಗಳನಾಯ್ದು ನಂದನದ ಕೆಂದಳಿರಂತಳವಾರೆ ಕೊಯ್ದು ಸೌ
ಮನಸದ ಪೊಗಳಂ ತಿಱಿದು ಪಾಂಡುಕದೊಳ್ ಮಿಡಿಯಂ ತೆರಳ್ಚಿ ಮಂ
ಡನಕೆ ವಿನೋದಮಂ ಮೆಱೆದು ತೀರ್ಚಿದರಾತ್ಮಮನೋರಥಂಗಳಂ  ೭೧

ವ || ಆಗಳಾ ಸುಪರ್ವಪರ್ವತದ ನಾಲ್ಕನೆಯ ಮೇಖಳೆಗೆ ಮೇಖಲೆಯಂತಿರ್ದ ಪಾಂಡುಕವನ ಪ್ರದೇಶಮಂ ವಾಸವಂ ಮುಟ್ಟೆವರ್ಪುದುಂ ಅದಱ ಪೂರ್ವದಿಗ್ಭಾಗದೊಳ್ ಭರತಕ್ಷೇತ್ರ ಜನಿತ ಜಿನಜನನದ ಜನನಸವನಕ್ಕೆ ಯೋಗ್ಯಮಾಗಿರ್ದು

ಕಂ || ತನಗೆಸೆಯೆ ನೂಱುಯೋಜನ
ದ ನೀಳ್ಪುಮದಱರ್ಧಮೆನಿಸಿದಗಲಮುಮಱೆಯೋ
ಜನಮೆನಿಪುನ್ನತಿಯುಂ ಚೆ
ಲ್ವೆನಿಸಿತು ಪಾಂಡುಕಶಿಳಾತಳಂ ಸಮಪಟ್ಟಂ     ೭೨

ಅದು ಶರದಭ್ರದ ಶಶಿಬಿಂ
ಬದ ಶಂಖದ ರಸದ ಬಿಸದ ಬೆಳ್ಳಿಯ ಬೆಳ್ಪಿಂ
ಬಿದಿ ಸಮೆದಂತಿರೆ ಥಳಥಳಿ
ಪುದು ವಿಮಳದ್ಯುತಿಯಿನರ್ಧಚಂದ್ರಾಕೃತಿಯಿಂ  ೭೩

ಚಂ || ಪೊಳೆವಲರ್ಗಣ್ಗಳುನ್ನತಕುಚಂಗಳ ಮುದ್ದುಮೊಗಂಗಳೊಳ್ಗುರು
ಳ್ಗಳ ನಳಿತೋಳ್ಗಳಚ್ಚರಿಯರಿಂ ಪ್ರತಿಬಿಂಬಿತಮಾಗಿ ಬಾಳಮೀಂ
ಗಳ ಪೊಣರ್ವಕ್ಕಿವಿಂಡುಗಳ ತಾವರೆವೂಗಳ ತುಂಬಿವೆಣ್ಗಳು
ದ್ವಳಿಗಳ ಸಂಗದಿಂದೆಸೆವ ಗಂಗೆವೊಲೊಪ್ಪಿದುದಾ ಶಿಳಾತಳಂ         ೭೪

ವ || ಅಲ್ಲಿ

ಮ.ಸ್ರ || ಅತುಳಶ್ರೀದಂಡಿಕಾಮಂಡಿತಮಮರಮಣಿಸ್ತಂಭಸಂಭಾರಮಾಳಾಂ
ಚಿತ ಘಂಟಾಜಾಳಲೀಲಂ ರುಚಿನಿಚಿತವಿಚಿತ್ರಾಂಬರೋದ್ಯದ್ವಿತಾನಂ
ನುತ ಮುಕ್ತಾಲಂಬಚುಂಬಂ ಧೃತವಿತತಪತಾಕಾಳಿ ಸೌಧರ್ಮನಿರ್ಮಾ
ಪಿತಮುತ್ತುಂಗಂ ಬೆಡಂಗಾಯ್ತಭಿಷವಣ ಮಹಾಮಂಡಪಂ ದಿವ್ಯಸೇವ್ಯಂ      ೭೫

ಕಂ || ಆ ಮಂಡಪ ಮಧ್ಯದೊಳು
ದ್ದಾಮ ಮೃಗೇಂದ್ರಾಸನಂ ಕನನ್ಮಣಿಕಿರಣ
ಶ್ರೀಮಸೃಣಮೆಸೆದುದಚ್ಛಸ
ರೋಮಧ್ಯದೊಳಲರ್ದಮಲರ್ದ ಪೊಂದಾವರೆವೋಲ್    ೭೬

ಹರಿಪೀಠಕನಕರುಚಿಯಂ
ವರ ಪಾಂಡುಕಪಾಂಡುರುಚಿಯುಮೊಂದೊಂದರ್ಕೋ
ಸರಿಸದೆ ಮಲೆದು ಪಳಂಚುವ
ಪರಿ ಪೋರ್ಕುಳಿಯಾಡುವರ್ಕಶಶಿರುಚಿಯೆನಿಕುಂ ೭೭

ಅದಱೊಳ್ ಸುರಪತಿ ತಂದಿರಿ
ಸಿದೊಡತಿತೇಜಸ್ವಿ ಪೂರ್ವಮುಖನಾಗಿರ್ದೊ
ಪ್ಪಿದನಾಗಳುದಯಗಿರಿಶಿಖ
ರದ ತರುಣದಿನೇಶನಂತೆ ತರುಣಜಿನೇಶಂ          ೭೮

ಮ || ಜಯರಾಮಾಂಗನೆಯುಂ ಸುರದ್ವಿಪಮುಮಾನುಂ ನೋಂತೆವೆಮ್ಮಂತು ಪೆ
ರ್ಮೆಯಿನಿಂತಾಂತುವೆ ಬೇಱೆ ಮತ್ತಿನ ವಧೂಗರ್ಭಾಶಯಂ ಮತ್ತಿನಾ
ನೆಯ ಬೆನ್ಮತ್ತಿನ ಪೀಠಮೀ ಜಿನನನೆಂದಕ್ಷೂಣಮಾಣಿಕ್ಯರ
ಶ್ಮಿಯಿನಾವಿಷ್ಕೃತರಾಗವಾದುದೆನಿಸಿತ್ತುತ್ತುಂಗಸಿಂಹಾಸನಂ          ೭೯

ಕಂ || ಅದಱಿರ್ಕೆಲದೊಳ್ ನಸುದ
ಗ್ಗಿ ದಲಿರೆ ಭದ್ರಾಸನಂಗಳುನ್ಮಖರುಚಿಗಳ್
ಮುದದಿಂ ನೆಲಸಿದರದಱೊಳ್
ಪದುಳಂ ಪ್ರಥಮದ್ವಿತೀಯಕಲ್ಪಾಧೀಶರ್       ೮೦

ವ || ಅವರೊಡನೆ ಮತ್ತಮಿತರಕಲ್ಪಾಧಿನಾಯಕರ್ ಬೆಸಸೆ

ಕಂ || ನುತಸುರಪತಿಯುಂ ಸ್ವಾಹಾ
ಪತಿಯುಂ ಪಿತೃಪತಿಯುಮಸುರಪತಿಯುಂ ಯಾದಃ
ಪತಿಯುಂ ರಯಪತಿಯುಂ ಧನ
ಪತಿಯುಂ ಪಶುಪತಿಯುಮೆನಿಸಿದಾಶಾಪತಿಗಳ್ ೮೧

ತಂತಮ್ಮ ವಾಹನಾಯುಧ
ಕಾಂತಾಜನ ಪರಿಜನ ಪ್ರಸಾಧನಚಿಹ್ನಾ
ನಂತ ವಿಭೂತಿಯಿನುಚಿತ ದಿ
ಗಂತದೊಳಚಿತಾಸನಪ್ರದೇಶದೊಳಿರ್ದರ್         ೮೨

ವ || ಮತ್ತಂ

ಕಂ || ಪರಿಚಾರಕರೆಸೆದಂದಿ
ರ್ದರಮರವೈರೋಚನಾದಿ ಸತ್ಪುರುಷ ಮಹಾ
ಪುರುಷಾದಿ ಚಂದ್ರಸೂರ್ಯಾ
ದಿ ರೂಢಭಾವನವನಾಶ್ರಯ ಜ್ಯೋತಿಷ್ಕರ್     ೮೩

ಜಿನಸಭೆಯೊಳಗನ್ಯೋನ್ಯಂ
ಮುನಿಸಿರ್ಕುಮೆ ನೋಡ ಬಿಸಿಲ ಬೆಳ್ದಿಂಗಳ ಮ
ರ್ಬಿನ ನೆರವಿ ನೆರೆದುದೆನಿಸಿದು
ವನೇಕ ಮಣಿಮಕುಟರುಚಿಗಳಮರಾಧಿಪರಾ     ೮೪

ವ || ಮತ್ತಮಲ್ಲಿ

ಮ || ಕಳಶಂ ಪೆರ್ಮೊಲೆ ರನ್ನಗನ್ನಡಿ ಕಪೋಲಂ ಲಾಜೆ ದಂತಾಂಶು ಕೋ
ಮಳದೂರ್ವಾಲತೆ ಪುರ್ವು ದೀಪಮಧರಂ ಪೂಮಾಲೆ ದೃಗ್ದೀಪ್ತಿ ಕೆಂ
ದಳಿರ್ಗಳ್ ಕೆಂದಳಮಾಗೆ ಮಂಗಳ[ಮೆ] ಮೆಯ್ವೆತ್ತಂತೆ ಬಂದಿರ್ದ ಮಂ
ಗಳ ವಸ್ತುಪ್ರಕರಂಗಳಂ ಪಸರಿಸುತ್ತಿಂದ್ರಾಣಿ ಕಣ್ಗೊಪ್ಪಿದಳ್         ೮೫

ವ || ಆಗಳಾಸಭೆಯ ಸನ್ನಿಧಿಯೊಳುಚಿತ ಪರಿಚಾರಿಕಾನಿಯೋಗದೊಳ್ ನೆರೆದು

ಮ || ಕುಮುದಂ ದೃಷ್ಟಿ ಶಿರೀಷಮಾಲೆ ನಳಿತೋಳ್ ಬಂಧೂಕವೋಷ್ಠಂ ಮುಖಂ
ಕಮಳಂ ಸಂಪಗೆ ಮೂಗು ಕೇದಗೆ ನಖಂ ಕುಂದೋದ್ಗಮಂ ದಂತವಿ
ಭ್ರಮಮಂಗಚ್ಛವಿ ಕರ್ಣಿಕಾರಮೆನೆ ಮೆಯ್ಯಾಂತಿರ್ದ ಸೌಂದರ್ಯದಿಂ
ಸುಮನಸ್ತ್ರೀಯರೆನಿಪ್ಪುದಪ್ಪುದವರ್ಗೆಂಬಂತೊಪ್ಪಿದರ್ ದೇವಿಯರ್           ೮೬

ಕಂ || ಕಳಶಂ ಕನ್ನಡಿ ಸೊಡರೆಳ
ದಳಿರಚ್ಚಗಱುಂಕೆ ಲಾಜೆ ಪೂಮಾಲೆ ಮೊಸರ್
ಫಳವಕ್ಷತೆ ಜಾಗಂ ಮಂ
ಗಳಪರಿಕರಮೆಸೆದುವಿಂದ್ರಸತಿಯರ ಕೆಯ್ಯೊಳ್   ೮೭

ಉತ್ಸಾಹಂ || ಚಾರುಚಾಮರಾತಪತ್ರಪಾಳಿಕೇತು ಕಳಶ ಭೃಂ
ಗಾರಮುಕುರಸುಪ್ರತಿಷ್ಠತಾಳವೃಂದಮೆಂಬ ವಿ
ಸ್ತಾರಿತಾಷ್ಟಮಂಗಳಂಗಳೆಸೆದುವಷ್ಟಕರ್ಮಕಾಂ
ತಾರದಾವದಹನಮಪ್ಪ ದೇವನೊಸಗೆಯೆಸಕದೊಳ್       ೮೮

ಕಂ || ಅಷ್ಟೋತ್ತರದಶ(ಸ)ಮಿತಿಗ
ಳಷ್ಟೋತ್ತರಮೂರ್ತಿಗಷ್ಟಯೋಜನಗಾಹ
ಕ್ಕಷ್ಟಾರ್ಧಕೋಣಶೋಭೆಗೆ
ವಿಷ್ಟರಮಾದೇಕಯೋಜನಾಸ್ಯಘಟಂಗಳ್       ೮೯

ಮಂಗಳಜಲಪೂರ್ಣಂಗಳ್
ಸಂಗತಮಣಿಭೂಷನಂಗಳುರುಚಂದನಚ
ರ್ಚಂಗಳ್ ಪಲ್ಲವವಿಹಿತಮು
ಖಂಗಳ್ ಸೊಗಯಿಸಿದುವಮಳಸೂತ್ರವೃತಂಗಳ್           ೯೦

ಮ || ಅಮರೀಬಂಧುರದೇಹಗಂಧಮಮಳ ಶ್ರೀಖಂಡ ಕರ್ಪೂರ ಕುಂ
ಕುಮ ಸೌರಭ್ಯಮನಲ್ಪಕಲ್ಪಲಲಿತಿಕಾ ಪುಷ್ಪಸ್ರಜಾಮೋದಮು
ತ್ತಮಕೃಷ್ಣಾಗರು ಧೂಪ ಧೂಮಪಟಳೀಸೌಗಂಧ್ಯಮಂದೀಕೃತ
ಭ್ರಮರಂ ತೆಕ್ಕನೆ ತೀವೆ ಗಂಧಮಯಮಾಯ್ತಂದಾ ಮಹಾಮಂಡಪಂ            ೯೧

ಕಂ || ಕಾಳಾಗರುವಿನ ಹೊಗೆ ಹರಿ
ನೀಳಸ್ತಂಭದ ಮರೀಚಿಯಿಂ ಸುೞೆವಳಿನೀ
ಜಾಳದ ಕರ್ಪಿಂ ಕೊರ್ವಿ ತ
ಮಾಳದ ಲತೆಯೆನಿಸಿ ಪರ್ವಿತಾ ಮಂಡಪಮಂ    ೯೨

ಶಾ || ನಾನಾ ಮಂಗಳವಸ್ತ್ರ ಭೂಷಣ ಶುಚೀಭೂತಂ ಶಚೀನಾಥನೀ
ಶಾನೇಂದ್ರಂ ಬೆರಸಿರ್ದು ಪಾವನಪಯೋಗಂಧಾಕ್ಷತೋತ್ಫುಲ್ಲ ಪು
ಷ್ಪಾನೀಕಂಗಳಿನಂದು ಮಾಡಿದನುದಂಚನ್ಮಂತ್ರಪೂತಾನನಂ
ತಾನರ್ಘ್ಯೋದ್ಧರಣೋಚಿತಕ್ರಿಯೆಯನಾದಂ ಭವ್ಯರತ್ನಾರ್ಣವಂ   ೯೩

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತ ಸೂಕ್ತಿ ಚಂದ್ರಿಕಾಪಾನ ಪುರಿಪುಷ್ಟಮಾನಸಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ದೇವಾಗಮವರ್ಣನಂ ದಶಮಾಶ್ವಾಸಂ