ವ || ಅಂತೆನಿಸಿದ ಸುಗ್ರೀವಮಹಾರಾಜಂಗೆ ಸುಗ್ರೀವಕಂಠಿಕೆಯೆನಿಪ್ಪ ಶೋಭಾಸಮೃದ್ಧಿಯುಮ ನಾ ಕಾಶ್ಯಪಗೋತ್ರಪ್ರದೀಪಂಗೆ ದೀಪ್ತಿಮಾಳಿಕೆಯೆನಿಪ್ಪಸಹಜಪ್ರಕಾಶಮುಮಮಾ ಸತ್ಯ ರತ್ನಾಕರಂಗೆ ಜಾಹ್ನವಿಯೆನಿಪ್ಪ ಜಗತ್ಪವಿತ್ರವೃತ್ತಿಯುಮನಾ ಮನುಜೇಂದ್ರಚಂದ್ರಮಂಗೆ ಚಂದ್ರಿಕೆಯೆನಿಪ್ಪ ಕಾಂತಿಯುಮನಾಯಿಕ್ಷ್ವಾಕುವಂಶಮಾರ್ತಂಡಂಗೆ ದಿನಶ್ರೀಯೆನಿಪ್ಪ ತೇಜಮುಮನಾಪ್ರತಿಪನ್ನಮಂದರಂಗೆ ರುಚಿರಮೇಖಳೆಯೆನಿಪ್ಪ ಮಹಿಮೆಯುಮನಾ ಪರಾರ್ಥಪಾರಿಜಾತಂಗೆ ಕಲ್ಪಲತೆಯೆನಿಪ್ಪನೂನದಾನಮುಮನಾ ವಿವೇಕಚತುರಾನನಂಗೆ ವಾಗ್ವಧುವೆನಿಪ್ಪ ಚಾತುರ್ಯವಿಭವಮುಮನಾ ಸೌಂದರ್ಯಕಂದರ್ಪಂಗೆ ರತಿಯೆನಿಪ್ಪ ಸೌಭಾಗ್ಯಗುಣಮುಮಂ ಸಹಜಾನುಬಂಧ ಬಂಧುಪ್ರೇಮದಿಂದಮಪ್ಪುಕೆಯ್ದು

ಉ || ಸಾಮಜಮಂದಗಾಮಿನಿ ಜಿತಾಮರಕಾಮಿನಿ ಭವ್ಯಲೋಕರ
ಕ್ಷಾಮಣಿ ಮಾನಿನೀಜನಶಿರೋಮಣಿ ಸದ್ಗುಣಭೂಮಿ ಭಾಗ್ಯಪೌ
ಳೋಮಿ ವಿಶುದ್ಧಗೋತ್ರ ಸುಚರಿತ್ರಪವಿತ್ರೆ ವಿವೇಕದೃಷ್ಟಿ ಧ
ರ್ಮಾಮೃತಸಾರಯಷ್ಟಿ ಜಯರಾಮೆ ಸುಶೀಲದ ಸೀಮೆ ರಂಜಿಪಳ್            ೪೧

ಕಂ || ಅನುರಕ್ತೆ ನಚ್ಚಿನಸಿಯವ
ಳನುಪಮವಿಗ್ರಹವಿಳಾಸೆ ತೋಳ್ಪತ್ತುಗೆಯಿಂ
ದೆನೆಗೆ ಸವೞಿಕೆಯ್ಯೆಂದಧಿ
ಪನೀಯ ಜಯರಾಮೆವೆಸರನಾ ಸತಿ ತಳೆದಳ್    ೪೨

ಚಂ || ನಡು ಮಡು ಲೋಕಲೋಚನಝಷಕ್ಕೆ ಬೆರಲ್ ಸರಲಂಗಜಂಗೆ ಮೆ
ಲ್ಲಡಿ ಪಡಿ ಪಲ್ಲವಕ್ಕೆ ವದನಂ ಸದನಂ ಸಿರಿಗಕ್ಷಿಪಕ್ಷಿ ಚೆ
ಲ್ವಿಡಿದಲರ್ವಿಲ್ಗೆ ಸೋರ್ಮುಡಿ ಪದಿರ್ಮಡಿ ಸೋಗೆಗೆ ಪುರ್ವು ಕೊರ್ವು ಚೆ
ಲ್ನಡೆಗೆ ನಖಂ ಮುಖಂ ಪತಿಗೆ ತೋಳ್ ಕರವಾಳ್ ಮದನಂಗೆ ಕಾಂತೆಯಾ      ೪೩

ವ || ಅಂತುಮಲ್ಲದೆಯುಂ

ಚಂ || ನೆಲೆಮೊಲೆ ಕೊತ್ತಳಂ ಜಘನ ವಟ್ಟಳೆ ಮೇಲುದು ಪೊನ್ನಗೋಂಟೆ ಮೇ
ಖಲೆ ಪರಿಖಾಂಬು ನಾಭಿ ನಡುವೀಥಿ ಮುಖಂ ರಣಮಂಡಲಂ ಕಚಂ
ಲಲಿತಪತಾಕೆ ಕಾಂತಿ ಜಳಸಂಪದಮಕ್ಷಿ ಮರೀಚಿ ಶಸ್ತ್ರಸಂ
ಕುಲಮೆನೆ ನೀಱೆ ತೋಱುವಳನಂಗನ ಜಂಗಮದುರ್ಗಲಕ್ಷ್ಮಿವೋಲ್ ೪೪

ವ || ಮತ್ತಂ

ಚಂ || ಕಣೆಯದ ಚೆಲ್ವು ಕಂಪಣಮಡಂಗದ ಸುಯ್ ಪದೆಯಿಪ್ಪ ಶಕ್ತಿ ಕ
ಣ್ಬೊಣರ್ಗಳವಟ್ಟ ಚಾಪಲತೆ ಮಿಕ್ಕ ಸರಂ ಕಟಿಮಂಡಲಾಗ್ರದು
ಲ್ಬಣತೆ ಲತಾಂಗಯಷ್ಟಿ ಕುಚಚಕ್ರದ ಮಂಡಲಸದ್ವಿಳಾಸದೊ
ಳ್ಪಣಿಯರವಾದುದಾ ರಮಣಿ ಬಾಲೆಯೊ ಕಾಮನ ಜೇಣಶಾಲೆಯೋ            ೪೫

ಮ || ಜಗದಾಲೋಕಸುಖಕ್ಕೆ ಕಣ್ದೆಱೆವಿನಂ ಸಂಸಾರಸಾಫಲ್ಯಮು
ರ್ವಿಗೆ ಸರ್ವಾಭರಣಂ ಸ್ಮರಂಗೆ ವಿಜಯಾಸ್ತ್ರಂ(ಸಾರ)ಸೌಂದರ್ಯಸೃ
ಷ್ಟಿಗೆ ಬೀಜಂ ಸೊಬಗಿಂಗೆ ತಾಯ್ವನೆ ವಿಳಾಸಕ್ಕೋಜೆ ಲಾವಣ್ಯಲ
ಕ್ಷ್ಮಿಗೆ ಸಂಕೇತನಿಕೇತಮೆಂಬುದು ಜನಂ ರೂಪಂ ಮಹಾದೇವಿಯಾ    ೪೬

ವ || ಅದಲ್ಲದೆಯುಂ

ಚಂ || ಅರಸನ ತೇಜಮಾಕ್ರಮಿಸೆ ಬೇವಸಮುತ್ತರಿಭೂಪಕೋಟಿ ವಿ
ಸ್ತರಿಸುವುದಾ ಲತಾಂಗಿಯ ಪದಾಶ್ರಯಮಂ ಗೆಡೆಗೊಂಡು ಚೋದ್ಯಮ
ಲ್ತುರಿವರಿವುಗ್ರರೋಚಿಯ ಬಿಸಿಲ್ ಸುಡೆ ಬೇವಸಮುತ್ತು ಬಂದು ಪಾಂ
ಥರ ಪಡೆ ಪೊರ್ದಿ ತತ್ಪ್ರಿಯಪಯೋಜಿನಿಯಂ ಸುಖಿಯಾಗಲಾಗದೇ  ೪೭

ವ || ಇಂತೆನಿಸಿದನುಪಮಪ್ರಭಾವಮಂ ತಾಳ್ದಿದಾ ಮಹಾದೇವಿಯೊಡನೆ

ಕಂ || ಕೂರ್ಮೆಯೊಳನುಭವಿಸುತ್ತುಮ
ದೊರ್ಮೆಯುಮವಚಱದೆ ಕಾಮಸುಖದಿಂ ಜನಪಂ
ಪೆರ್ಮೆಗಿಡದಿರ್ದನಂತಿದು
ಧರ್ಮಾರ್ಥವಿರುದ್ಧಮಲ್ಲದೆನೆ ನಯನಿಪುಣರ್            ೪೮

ಮ || ಪ್ರಜೆಯಂ ಪಾಲಿಸಿ ಸತ್ಪರಿಗ್ರಹದ ಪೆರ್ಚಂ ಮಾಡಿ ದುಷ್ಟಾವನೀ
ಭುಜರಂ ಮರ್ದಿಸಿ ದಾನಧರ್ಮರುಚಿಯೊಳ್ ತಳ್ಪೊಯ್ದು ಯೋಗ್ಯಪ್ರಧಾ
ನಜನನ್ಯಸ್ತ ಸಮಸ್ತ ರಾಜ್ಯಭರನಾಗಿರ್ದಾ ನೃಪಾಲಂಬೊಲಂ
ಗಜಕೇಳೀರತನಪ್ಪುದಲ್ಲದೆನಗಂ ಕೊಂಡಾಡೆ ಹಾಸ್ಯಾಸ್ಪದಂ         ೪೯

ವ || ಎನಿಸಿ ಸುಖಸಂಕಥಾವಿನೋದದಿಂದಿರ್ಪನ್ನೆಗಮಿತ್ತಲ್

ಕಂ || ಗೀರ್ವಾಣಲೋಕಸುಖಮಂ
ಪೂರ್ವೋಕ್ತಪ್ರಾಣತೇಂದ್ರನುಪಭೋಗಿಸಿ ತೀ
ರ್ದುರ್ವಿಗೆ ಬರಲಿರೆ ಮುಂಚಿ ಸು
ಪರ್ವಾಗ್ರಣಿಗಾಯ್ತು ವಜ್ರಿಗಾಸನಕಂಪಂ          ೫೦

ವ || ಅಂತು ತನಗಾಸನಕಂಪಮಾಗೆ ಪಾಕಶಾಸನಂ ಭರತಕ್ಷೇತ್ರದೊಳ್ ಪರಮೇಶ್ವರ ಸ್ವರ್ಗಾವತರಣಕಲ್ಯಾಣಮಿನ್ನಱದಿಂಗಳಕ್ಕುಮೆಂಬುದಂ ಜಲಕ್ಕನವಧಿಬೋಧದಿಂದಮಱಿದು

ಕಂ || ಧನಪತಿಯಂ ನಿತ್ಯಾರ್ಚಿತ
ಜಿನಪತಿಯಂ ಭವ್ಯಜನಮನೋರಥನಳಿನೀ
ದಿನಪತಿಯಂ ಕಿಂಪುರುಷ
ಜ್ಜನಪತಿಯಂ ಬರಿಸಿ ಪೇೞ್ದು ಮನದುತ್ಸವಮಂ          ೫೧

ಮ.ಸ್ರ || ಜಿನಪಸ್ವರ್ಗಾವತಾರೋದ್ಯಮಮಿದು ಮೞೆಗಾಲಂ ಭವದ್ಭಕ್ತಿ ಕಾದಂ
ಬಿನಿ ಹೇಮದ್ಯೋತಿ ಸೌದಾಮಿನಿ ಮಣಿನಿಚಯಚ್ಛಾಯೆ ಗೀರ್ವಾಣಬಾಣಾ
ಸನಭಾಗಂ ತೂರ್ಯಘೋಷಂ ಸ್ತನಿತಮೆನಿಪ ಕಾಕಂದಿಯೊಳ್ ಭವ್ಯಸಸ್ಯಾ
ವನಿಯೊಳ್ ರತ್ನೋತ್ಕರಾಸಾರಮನಖಿಲ ರಜೋಧೂಮಮಂ ಮಾಡೆನೀಡುಂ            ೫೨

ಮ || ವರ ಕಾದಂಬಿನಿ ನಿನ್ನ ಭಕ್ತಿ ಮೞೆಗಾಲಂ ಮತ್ಕೃತಾದೇಶಬಂ
ಧುರವಂ ಘೂರ್ಣಿಪ ದಿವ್ಯತೂರ್ಯವೆಳಮಿಂಚುದ್ದಾಮ ಹೇಮಾಂಶುಗಳ್
ಸುರಚಾಪಪ್ರಭೆ ರತ್ನರಶ್ಮಿಯೆನೆ ನೀಂ ಸುಗ್ರೀವರಾಜೇಂದ್ರಮಂ
ದಿರದೊಳ್ ಮಾಡಱುದಿಂಗಳಪ್ಪಿನೆಗಮಿಂ ಮೆಯ್ವೆರ್ಚೆ ರೈವೃಷ್ಟಿಯಂ        ೫೩

ವ || ಎಂದು ಬೆಸಸಲೊಡಂ

ಕಂ || ಶತಮಖನನುಮತವೆಂಬೆಲ
ರ ತೀಟದಿಂ ಯಕ್ಷಕಲ್ಪವೃಕ್ಷದ ಕುಸುಮಂ
ಕ್ಷಿತಿಗಲ್ಲೊಕ್ಕಪುದೆನೆ ಸೂ
ಸಿತಂದು ಸಾರ್ಧತ್ರಿಕೋಟಿ ರತ್ನಾಸಾರಂ           ೫೪

ವ || ಅಂತುಮಲ್ಲದೆಯುಂ

ಮ || ಸುರಿಯತ್ತಿರ್ದಪುವೀಗಳಭ್ರನದಿಯಂಭೋಧಾರೆ ಶೈವಾಲವ
ಲ್ಲರಿ ರಕ್ತೋತ್ಪಲದಂಡಮಂಡಳಿ ಮೃಣಾಲಶ್ರೇಣಿ ಭೃಂಗೀಪರಂ
ಪರೆಯೆಂಬಂತಿರೆ ಮುತ್ತು ಪಚ್ಚೆ ಪವಳಂ ವಜ್ರಂ ಸುನೀಲಂ ತರಂ
ತರದಿಂ ಸಾಲಿಡೆ ಪಂಚರತ್ನಮಯಧಾರಾಸರಮೇನೊಪ್ಪಿತೋ       ೫೫

ವ || ಅಂತು

ಕಂ || ಪಂಚಾಶ್ಚರ್ಯಸಮೇತಂ
ಪಂಚಮವಸುಧಾರೆ ಮೂಱುಪೊೞ್ತುಂ ಕಱೆಯ
ಲ್ಕೇಂ ಚೋದ್ಯಮಾಯ್ತೊ ಜಿನವರ
ಸಂಚಿತಪುಣ್ಯಪ್ರಭಾವದಿಂದಾ ಪೊೞಲೊಳ್      ೫೬

ವ || ಮತ್ತಂ

ಚಂ || ಅನಿಮಿಷರಾಜನಾ ನೆಗೞ್ದ ಭಾವಿಜಿನಾಂಬಿಕೆಯಪ್ಪ ಪುಣ್ಯ ಭಾ
ಗಿನಿಯ ಸುಕಂಠವಲ್ಲಭೆಯ ವಿಭ್ರಮವರ್ಧನಕಂಗಕಾಂತಿವ
ರ್ಧನಕೆ ವಿಳಾಸವರ್ಧನಕೆ ಪುಷ್ಟಿವಿವರ್ಧನಕುದ್ಘ ದಾನವ
ರ್ಧನಕೆ ವಿನೋದವರ್ಧನಕೆ ಕಾರಣಭೂತೆಯರಾಗೆ ಭಾವಿಸಲ್         ೫೭

ವ || ಕುಳಾಚಳೋತ್ತುಂಗಶೃಂಗಸದ್ಮಪದ್ಮಾದಿಸರೋವರನಿವಾಸಿನಿಯರಪ್ಪಱುವರಂ ದೇವಿಯರುಮಂ

ಕಂ || ಆ ಹ್ರಸವಿಳಾಸಿನಿಯರಂ
ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಯುಮಂ ಗಂ
ಗಾಹ್ರದವಿಮಳೆಯರಂ ಕಾಂ
ತಾಹ್ರಾದಿನಿಗಮಳತನುಗಳಂ ಬೆಸವೇೞ್ದಂ        ೫೮

ವ || ಮತ್ತಂ

ಕಂ || ಪ್ರಣುತಾಕೃತ್ರಿಮಚೈತ್ಯೋ
ಲ್ಬಣಮಣಿರುಚಿರಮಪ್ಪ ರುಚಕಾದ್ರಿಯ ಮೂ
ಡಣ ತೆಂಕಣ ಪಡುವಣ ಬಡ
ಗಣ ದೆಸೆಗಳೊಳೊಗೆದುವಂದನುಕ್ರಮದಿಂದಂ    ೫೯

ವ || ಒಪ್ಪುತಿರ್ಪ ವೈಡೂರ್ಯಕಾಂಚನಪ್ರಮುಖ ಕೂಟಾಷ್ಟಕಂಗಳೊಳ್ ರಮಿಯಿಸುವ ವಿಜಯೆ ವೈಜಯಂತೆ ಮೊದಲಾಗೆಯುಂ ಅಮೋಘ ಸುಪ್ರಬುದ್ಧ ಪ್ರಮುಖಶಿಖರಾಷ್ಟಂಗಳೊಳ್ ವಸಿಯಿಸುವ ಪ್ರತಿಷ್ಠೆ ಸುಪ್ರಣಿಧಿ ಮೊದಲಾಗೆಯುಂ, ಲೋಹಿತಾಕ್ಷಜಗತ್ಕುಸುಮ ಪ್ರಮುಖಚೂಡಾಷ್ಟಕಂಗಳೊಳ್ ಕ್ರೀಡಿಸುವಿಳಾದೇವಿ [ಸುರಾದೇವಿ] ಮೊದಲಾಗೆಯುಂ ಸ್ಫಟಿಕಕಾಂಚನಪ್ರಮುಖಶೃಂಗಾಷ್ಟಕಂಗಳೊಳ್ ವರ್ತಿಸುವ ಲಂಬೂಷೆಚಿತ್ರಲೇಖೆ ಮೊದಲಾಗೆಯುಂ ನೆಗೞ್ತೆವೆತ್ತ ಮೂವತ್ತಿರ್ಬರ್ ದಿಕ್ಕುಮಾರಿಯರುಮಂ ಮತ್ತಮಾ ನಗದ ವಿಮಳನಿತ್ಯಾಲೋಕ ಪ್ರಭೃತಿಗಳುಂ ವೈಡೂರ್ಯ ರುಚಕಪ್ರಭೃತಿಗಳುಂ ರತ್ನ [ಕೂಟ] ರತ್ನಪ್ರಭಪ್ರಭೃತಿಗಳುಮಪ್ಪ ಪೆಱಪೆಱವುಮಱೆ ಕೆವೆಸರನೇಕಕೂಟಕೋಟಿಗಳೊಳಿರ್ಪ ಚಿತ್ರೆ ಕನಕಚಿತ್ರೆ ಮೊದಲಾದ ವಿದ್ಯತ್ಕುಮಾರಿಕೆಯರುಮಂ ರುಚಕೆ ರುಚಕಾಂತೆ ಮೊದಲಾದ ದಿಕ್ಕನ್ಯಕಾಮಹತ್ತರಿಯರುಮಂ ವಿಜಯೆ ವೈಜಯಂತಿ ಮೊದಲಾದತಿಪ್ರಬುದ್ಧೆಯರೆನಿಪ ದೇವಿಯರನಿಬರುಮುಂ ಬರಿಸಿ

ಕಂ || ಜಿನಮಾತೃಗರ್ಭಸಂಶೋ
ಧನಾದಿರಮಣೀರಹಸ್ಯಕುಶಲಕ್ರಿಯೆಗಂ
ಬಿನದಕ್ಕಂ ಬೆಸಕಂ ಮಂ
ಡನವಿಧಿಗಂ ನೆರೆದು ನೆಗೞೆಮೆಲ್ಲಂದದೊಳಂ   ೬೦

ವ || ಎಂದು ಬೆಸಸಿ ಮತ್ತಂ

ರಗಳೆ || ಅವರೊಡನನೇಕನಗನಿವಾಸಿನಿಯರಪ್ಪ
ವಿವಿಧ ರಮ್ಯಪ್ರದೇಶಂಗಳೊಳ್ ರಮಿಯಿಪ್ಪ ||
ಮಾಳಿನಿ ಕನತ್ಕನಕದೇವಿ ಮಾಳಿನಿ ಚಿತ್ರೆ
ಮಾಳಾವತಿ ತ್ರಿಸರೆ ಕನಕಚಿತ್ರೆ ಸುಚಿತ್ರೆ ||
ಪುಷ್ಪಮಾಳಿಕೆ ಸುರಾದೇವಿ ಕಾಂಚನಮಾಳೆ
ಪುಷ್ಟಿಕೆಯಿಳಾದೇವಿ ರುಚಕೆ ವಿದ್ಯುನ್ಮಾಳೆ ||
ರತ್ನಪ್ರಭೆಯುಮಾ ಜಯಾನಂದೆ ಮಣಿಮಾಲೆ
ರತ್ನಮಾಳಿಕೆ ಚಂದ್ರರೇಖೆ ಚಂದ್ರಸುಮಾಲೆ ||
ಮದಿರೆ ಮದಲೇಖೆ ಮಂದಾರಿಕೆ ಲತಾಕಳಿಕೆ
ಮದನಿಕೆ ಮರಾಳಿಕೆ ಲವಂಗಿಕೆ ಮಹೋತ್ಪಳಿಕೆ ||
ತರಳಿಕೆ ತಮಾಳಿಕೆ ತರಂಗಿಕೆ ವಿಚಿತ್ರಲತೆ
ಪರಿಮಳಿಕೆ ಗಂಧವಾಹಿನಿ ಪದ್ಮೆ ಪತ್ರಲತೆ ||
ಗಂಧರ್ವಸೇನೆ ಮನ್ಮಥಸೇನೆ ಬಂಧೂಕೆ ಕಳಿಕೆ
….ಮಹಾಸೇನೆತಾಂಬೂಲಕಳಿಕೆ ||
ಎಂಬ ಪೆಱಪೆಱವುಮಱೆಕೆಯ ಪೆಸರ್ಗಳಮರಿಯರ್
ಅಂಬುಜಸುಗಂಧ ಬಂಧುರಭ್ರಮರಿಯರ್ ||
ಇಸುವೆಸಕ್ಕಮರಪತಿ ಬೆಸವೇೞೆ ರಾಗದಿಂ
ಬೆಸಕೆಯ್ದು ಜಿನಜನನಿಗೆಱಗುವುದ್ಯೋಗದಿಂ ||
ಪೊಳೆವ ಕಣ್ಗಳ ಬೆಳಗು ಬೆಳ್ದಿಂಗಳಂ ಬೀಱೆ
ಮಿಳಿರ್ವ ಸುೞಿಗುರುಳ ರುಚಿ ಕಾಳದಿರುಳಂ ಕಾಱೆ ||
ಕೆಂದಳಿರ ಕೆಂಪು ಕೆಂದಳಿರ ಚೆಲ್ವಂ ಪರಪೆ
ಮಂದಹಾಸದ ಕಾಂತಿ ವಜ್ರರುಚಿಯಂ ನೆರಪೆ ||
ನಗೆಮೊಗದ ಚೆಲ್ವು ಶಶಿಬಿಂಬಶತಮಂ ಕೆದಱೆ ||
ಘನಜಘನವಿಭಕುಂಭವಿಭ್ರಮನತಿಗೞೆಯೆ
ತನುಲತೆಯ ಕಾಂತಿ ಸೊಡರ್ಗುಡಿಯ ಚೆಲ್ವಂ ಪೞೆಯೆ ||
ತೊಳಪ ತೊಡವಿನ ಬೆಳಗು ದೆಸೆದೆಸೆಗೆ ನೆಱೆನಿಮಿರೆ
ಕಳನೂಪುರಂ ನೂಲ ತೊಂಗಲೊಡನುಲಿದಮರೆ ||
ಸೌಂದರ್ಯಸಾರಸದನಂಗಳಿವರೆಂಬಂತೆ
ಕಂದರ್ಪಭುಜವಿಜಯವಧುಗಳಿವರೆಂಬಂತೆ ||
ಮನಸಿಜನ ಮಂತ್ರದೇವತೆಯರಿವರೆಂಬಂತೆ
ನನೆಗಣೆಯ ಮೋಹನಕ್ರಿಯೆಗಳಿವರೆಂಬಂತೆ ||
ಶೃಂಗಾರರಸತರಂಗಿಣಿಯರಿವರೆಂಬಂತೆ
ಮಾಂಗಲ್ಯಲಕ್ಷಣದ ಕಳೆಗಳಿವರೆಂಬಂತೆ ||
ಕರಮೊಸೆದು ದೆಸೆ ಬೆಸಲೆಯಾದುದಬಲೆಯರನೆನೆ
ಧರಣಿಸಕಳಂ ವಿವಿಧಯುವತಿಮಯಮಾದುದೆನೆ ||
ಬಂದು ಕಾಕಂದೀಪುರಕ್ಕೆ ಸೋತ್ಸಾಹಮಂ
ಗೊಂದಣಿಸಿ ಪೊಕ್ಕರ್ ಸುಕಂಠನೃಪಗೇಹಮಂ ||            ೬೧

ವ || ಅಂತು ಪೊಕ್ಕು ಭಕ್ತಿಭರದಿಂದಮೆಱಗಿ
ಮ.ಸ್ರ || ದೊರೆವೆತ್ತಷ್ಟಾರ್ಘ್ಯಮಂ ಮಾಡಿದುದಡಿ ಮೊದಲೊಳ್ ಮಂದಹಾಸಂ ಜಳಂ ಬಂ
ದುರಗಂಧಂ ಶ್ವಾಸಗಂಧಂ ತಲೆದುಡುಗೆಯ ಮುತ್ತಕ್ಷತಂ ಚೆನ್ನಪೂ ಪೂ
ಕುರುಳ್ಗರ್ಪುಂ ಧೂಪಮಂಗಾಭರಣ ರುಚಿ ಸೊಡರ್ ಕೇಕರಕ್ಷೀರಧಾರಾ
ಚರು ಬಿಂಬೋಷ್ಠಂ ಫಳಂ ತಾನೆನಿಸಿ ಜಿನನ ತಾಯ್ಗಿಂದ್ರಕಾಂತಾಕದಂಬಂ       ೬೨

ವ || ಅಂತು ಪುರಂದರಂ ಸುರಪುರಂಧ್ರಿಕಾಮಹತ್ತರಿಯರ್ಗೆ ಸಮುಚಿತ ಕ್ರಿಯಾನುಯೋಗಂಗಳಂ ನಿಯಮಿಸಿ

ಕಂ || ಅರಮನೆಯೊಳತ್ತಲಿತ್ತಂ
ಚರಿಯಿಪ ದೇವಿಯರ ಪದತಳಾಂಶು ಬಯಲ್ದಾ
ವರೆಯೆಸಳನೆಸಗಿದುವು ನೂ
ಪುರತತಿ ಬೀಱೆದುವು ಮದನಮೌರ್ವೀರುತಿಯಂ           ೬೩

ವ || ಅವರೊಳೊರ್ವಳ್

ಕಂ || ಸತಿಯ ಕುಚಕೋಚಮಂ ಮುಖ
ಶತಪತ್ರಮನೊಲ್ದಲರ್ಚಲೆಯ್ತಂದನಹ
ಸ್ಪತಿ ಬಿಸುಪನುೞಿದು ಕೆಲಕೆನೆ
ಶತಮಖವಧು ಪಿಡಿದಳೊಪ್ಪೆ ಮುತ್ತಿನ ಕೊಡೆಯಂ        ೬೪

ವದನೇಂದುವಿನುದಯದೊಳೊದ
ವಿದ ಲಾವಣ್ಯಾಂಬುನಿಧಿಯ ನೊರೆದೊಂಗಲಿವೆಂ
ಬುದನೆನಿಸಿ ಜಿನಾಂಬಿಕೆಗಿ
ಕ್ಕಿದರಮರಿಯರಮರೆ ಧವಳಚಮರೀರುಹಮಂ ೬೫

ನಱುಸುಯ್ಗೆ ಸುೞಿವ ತುಂಬಿಯ
ಮಱಿವಕ್ಕಿಯೊ ಕೇಶಕೃಷ್ಣಭುಜಗಿಗೆ ಕಡುಪಿಂ
ದೆಱಗುವೆಳನವಿಲೋ ಪೇೞೆನೆ
ಮೆಱೆದುದು ಜಯರಾಮೆಗಮರಿ ಬೀಸುವ ಕುಂಚಂ         ೬೬

ಮ || ಈ ಪ್ರಕಾರದಿಂ ಅಮರಸ್ತ್ರೀನಿವಹಂ ದೇವಿಯ ಸನ್ನಿಧಿಯೊಳ್ ಭಕ್ತಿಪೂರ್ವಕವಾಗಿ ಸೇವೆಯಂಗೆಯ್ಯುತಂ

ಕಂ || ಇಂದೆಮ್ಮೊಡನೋಲಗಿಸಲ್
ಬಂದಂ ವಿಧು ದೇವಿ ನಿಮ್ಮನಾದರಿಸುವುದೆಂ
ದಿಂದುವನೆ ತಂದು ಕಾಣಿಸು
ವಂದಮಿದೆನೆ ಕಾಂತೆಗಮರಿ ಕನ್ನಡಿವಿಡಿದಳ್      ೬೭

ಎಳಲತೆಯ ಕುಡಿಯ ತಳಿರೊಳ್
ಬಳೆದುದು ಕಾವುಳ್ಳ ಕನಕಕಮಳಂ ಕೌತೂ
ಹಳಮಿದೆನೆ ಪೊನ್ನ ಡವಕೆಯ
ನೆಳೆಯಳ್ ನಳಿತೋಳ ತಳದೊಳಳವಡೆ ಪಿಡಿದಳ್            ೬೮

ಅನುಭವಿಸುವ ಶಶಿಕಳೆಗಳ
ನಿನಿಸಂ ಸವಿದೋಱಲೆಂದು ನೀಡಿದಪಳ್ ಮಾ
ನಿನಿಗೆನೆ ಬಿಳಿಯೆಲೆಯಂ ಗೞೆ
ಸಿ ನೀಡುತಿರ್ಪಮರಿ ಪಡೆದಳೀಕ್ಷಣಸುಖಮಂ     ೬೯

ಎಳಮಿಂಚುಂ ಸಿಡಿಲುಂ ಬಂ
ದೆಳಸಿದ ಘನಮಾಳೆ ರಂಜಿಪಂಜಿಪ ತೆಱನಂ
ಲಳಿತೆಯ ರಕ್ಷಾಮರಿಯರ್
ತಳೆದರ್ ಭೂಷಣದ ಬಾಳ ಪೊಳೆಪುಗಳಿಂದಂ     ೭೦

ರಮಣಿಗೆ ಪಡಿಯಱವೆಸಗೆ
ಯ್ವಮರಿಯರ ವಿಚಿತ್ರವೇತ್ರದಂಡಂಗಳವೇ
ನಮರ್ದುವೊ ಮದನಜಯಶ್ರೀ
ರಮಣಿಯ ಕೆಳದಿಯರ ಕೆಯ್ಯ ಕರ್ಕಡೆಗಳವೋಲ್           ೭೧

ಅಂಗರುಚಿಭೂಷಣಾಂಶುವ
ನಂಗಪ್ರಭೆ ಮಿಸಿಸೆ ಮತ್ತೆ ಮಜ್ಜನವಿಧಿ ತ
ನ್ವಂಗಿಗೆ ಪುನರುಕ್ತಮಿದೆಂ
ದೆಂಗೆ ಜನಂ ದಿವಿಜಯುವತಿಕೃತಮಜ್ಜನಮಂ   ೭೨

ಯುವತಿಗೆ ನಿಱಿವಿಡಿದು ದುಕೂ
ಲವನುಡಿಸುವ ದಿವಿಜೆ ಕನಕನಗಮೇಖಳೆಯಂ
ಧವಳಾಭ್ರಮಾಲೆಯಂ ಸು
ತ್ತುವ ವಾರಿದಲಕ್ಷ್ಮಿಯೆಸಕಮಂ ಪೊಸೆಯಿಸಿದಳ್            ೭೩

ಜಿನಜನನಿಯ ಪದಸೇವೆಗೆ
ಘನಸಂಧ್ಯಾರಾಗಲಕ್ಷ್ಮಿಯಂ ತಂದೀಗಳ್
ದಿನಲಕ್ಷ್ಮಿ ಸಮರ್ಪಿಸಿದಪ
ಳೆನಿಸಿದಳಡಿಯೂಡುವಮರಿಯಾವಕರಸದಿಂ     ೭೪

ಅಳಿಮಾಳೆಯನರುಣಾಂಬುಜ
ದಳದೊಳ್ ತಂದಿರಿಸುವಂತಿರಿರಿಸಿದಳೊರ್ವಳ್
ಜಳಜಾಕ್ಷಿಯರುಣಚರಣದೊ
ಳಳವಡೆ ರಣಿತೇಂದ್ರನೀಲಮಣಿನೂಪುರಮಂ     ೭೫

ಮೇಖಳೆಯಿದತನುಶೈಲದ
ಮೇಖಳೆಯೆನೆ ಸತಿಯ ಗುರುನಿತಂಬದೊಳಳುರ್ವಂ
ತಾಖಂಡಲವಧು ರತ್ನಮ
ಯೂಖೋಜ್ವಳಕಾಂಚಿಯಂ ತೊಡರ್ಚಿದಳೊರ್ವಳ್       ೭೬

ವ || ಮತ್ತೊರ್ವಳ್

ಕಂ || ಒಗೆದ ಪಯೋಧರತಟದೊಳ್
ಸೊಗಯಿಪ ನಕ್ಷತ್ರಮಾಲೆಯೆನೆ ಬಾಲೆಯ ಮೇ
ಲೊಗೆದ ಪಯೋಧರತಟದೊಳ್
ಸೊಗಯಿಪ ನಕ್ಷತ್ರಮಾಲೆಯಂ ಯೋಜಿಸಿದಳ್   ೭೭

ನನೆಗಣ್ ಮೀಂಗಳಿನೊಪ್ಪುವ
ಮೊಗಮೆಂಬಲರ್ಗೊಳದ ತಡಿಯೊಳಿರಿಸಿದಳಿವಳಂ
ಚೆಗಳನೆನೆ ಸತಿಯ ಕಿವಿಯೊಳ್
ತಗುಳಿಸಿದಳ್ ಹಂಸರಚನೆಯೋಲೆಯನೊರ್ವಳ್ ೭೮

ಸ್ಮರಮೋಹನಮಂತ್ರಮನು
ದ್ಧರಿಸಿದಳಿವಳಮಳಕನಕಪಟ್ಟದೊಳೆನೆ ಸೌಂ
ದರಿಯ ಕದಪುಗಳೊಳೊರ್ವಳ್
ಸುರವಧು ಬರೆದಳ್ ವಿಚಿತ್ರಪತ್ರಾವಳಿಯಂ       ೭೯

ಪೆಱೆಯಂ ಮುಸುಕುವ ಮುಗಿಲಂ
ಪೆಱಪಿಂಗಿಪಳೀ ಮರುತ್ಕುಮಾರಿಕೆಯೆನೆ ಚೆ
ಲ್ವೆಱಗಿಸೆ ಸಮಱಿದಳರಸಿಯ
ಮಿಱುಗುವ ಪೆಱೆನೊಸಲ ಕುರುಳ ಬಂಬಲನೊರ್ವಳ್     ೮೦