ವ || ಅಂತುಮಲ್ಲದೆಯುಂ ಪದ್ಮರಾಗದ ನೆಲೆಗಟ್ಟಿನೊಳಂ ಪಳುಕಿನ ಕಂಬಂಗಳೊಳಂ ಹರಿವೀಲದ ನಾಗವೇದಿಕೆಯೊಳಂ ವೈಡೂರ್ಯದ ತೊಲೆಯೊಳಂ ಪವಳದ ಜಂತೆಯೊಳಂ ಕರ್ಕೇತನದ ಸಾಲಭಂಜಿಕೆಗಳೊಳಂ ಗೋಮೇಧಿಕದ ಭಿತ್ತಿಯೊಳಂ ಕಂಬಕಂಬಕೆ ಬಂಗಾರದ ಪುತ್ತಳಿಗಳಂ ಮುತ್ತಿನ ಕುಚ್ಚುಗಳಿಂ ಶೋಭಾಯಮಾನ ಪುಷ್ಯರಾಗದ ಮೊಗಶಾಲೆಗಳೊಳಂ ಚಂದ್ರಕಾಂತದ ಗವಾಕ್ಷಂಗಳೊಳಂ ಕೋದ ಮುತ್ತಿನ ಸೂಸಕದೊಳಂ ಚೆಂಬೊನ್ನ ತಿಂಗಿಣಿಯೊಳಂ ಚೀನದ ದೇವಾಂಗದ ನೇತ್ರದ ಮೇಲ್ಕಟ್ಟಿನೊಳಂ ವಿರಚಿಸಿದ ವಿವಿಧ ಕುಸುಮದಾಮಂಗಳೊಳಂ ಸರಸಸಹಕಾರ ನಾರಂಗ ಮಾತುಳುಂಗ ನಾಳಿಕೇರ ಕದಳೀಫಲಾವಳಿಗಳೊಳಂ ಕತ್ತುರಿನೀರಚಳೆಯದೊಳಂ ಬಿಡುಮುತ್ತಿನ ರಂಗವಲ್ಲಿಯೊಳಂ ವಿಚಿತ್ರಾಂಶುಕ ವಿವಿಧಧ್ವಜಂಗಳೊಳಂ ಬಹುವಿಧನೂತ್ನರತ್ನತೋರಣಂಗಳೊಳಂ ನೆಱೆದು

ಕಂ || ಶತಮಖನಿಲ್ಲಿರಿಸಿಟ್ಟಂ
ಕೃತಿಮತಿನುತ ಋತುವಿಮಾನಮಂ ದೈತ್ಯರ ವಿ
ಸ್ತೃತಬಾಧೆಗಳ್ಕಿ ತಾನೆನ
ಲತಿಶಯಮಾದತ್ತು ಪರಮ ಪರಿಣಯನಗೃಹಂ೫೧

ವ || ಅನಂತರಂ ಮಹಾಪದ್ಮರಾಜಂ ಮಾಂಗಲ್ಯಪ್ರಸಾಧನೋಚಿತಾಲಂಕೃತನಾದಾಗಳ್

ಕಂ || ಪೇರುರಮೆಂಬಬ್ಜಿನಿಯೊಳ್
ರಾರಾಜಿಪ ಪಿರಿಯ ಸಿರಿಯ ತರಳೇಕ್ಷಣನೀ
ಹಾರದ ರುಚಿಯೆನೆ ಸುರುಚಿರ
ಹಾರಂ ಸೊಗಯಿಸಿತು ತನ್ನರೇಂದ್ರನ ಕೊರಲೊಳ್         ೫೨

ಮಿಸುಗುವ ಮಣಿಮಯಮಂಡನ
ವಿಸರಪ್ರಭೆಯೊಳ್ ಪಳಂಚಿ ತನುರುಚಿ ಚೆಲ್ವಂ
ಪಸರಿಸಿ ದೆಸೆದೆಸೆಯೊಳ್ ಕರ
ಮೆಸೆದಿರಲೆಸೆದಂ ನರೇಂದ್ರಚೂಡಾರತ್ನಂ         ೫೩

ವ || ಮತ್ತಮಿತ್ತ ಚತುರಚತುರಿಕೆಯರಪ್ಪ ಪರಿಚಾರಕಿಯರುಂ ವಿದಗ್ಧಸೀಮಂತಿ ನೀಕದಂಬಮುಂ ಭಾನುಮತಿಯಂ ಮಂಗಳವಸದನಂಗೊಳಿಸಲವಸರಂಬಡೆದು

ಮ || ನವನೀಳಾಭರಣಾಂಶುಗಳ್ ಮೃಗಮದವ್ಯಾಲೇಪಮಂ ಮೌಕ್ತಿಕಾ
ನಿವಹಾಳಂಕೃತಿರಶ್ಮಿಗಳ್ ಮಳಯಜವ್ಯಾಲೇಪಮಂ ಪದ್ಮರಾ
ಗವಿಭೂಷಾಕಿರಣಂಗಳಾರ್ದ್ರಕುಸುಮವ್ಯಾಲೇಪಮಂ ಬೀಱೆ ಬೀ
ಱೆ ವಧೂವೃಂದಕವಂದು ಬಂದು ಪದಪಿಂ ಕೆಯ್ಗೆಯ್ಸಿದರ್ ದೇವಿಯಂ       ೫೪

ಕಂ || ಪೊಸಮುತ್ತಿನ ತಲೆದುಡುಗೆಯ
ಪಸರಿಪ ಕಾಂತಿಯದಗುಂತಿಮಾಲೆವೊಲಿರೆ ಕಂ
ಡು ಸಮಂತು ಮುಗ್ಧೆಯರ್ ಮುಡಿ
ಯಿಸರೆ ಕೆಲರ್ ಮುಂಚಿ ಮುಡಿದರೆಂಬೀ ಭ್ರಮೆಯಿಂ        ೫೫

ಕಟಕಂದಳಿಂ ಸುರಾದ್ರಿಯ
ಕಟಕಂಗಳ ತೆಱದೆ ರುಚಿರಕಲ್ಯಾಣ ಪ್ರಾ
ಕಟಕರಮೆನುತ್ತುಮರೆಬರ್
ಕುಟಿಳಾಳಕಿಗೊಲ್ದು ಕಂಕಣಂಗಳನಿಟ್ಟರ್         ೫೬

ಕುಚಕೋಕಂಗಳ್ ದಶನಾಂ
ಶು ಚಳಚ್ಚಂದ್ರಿಕೆಯಿನಗಲದಂತು ಮುಖಾಗ್ರ
ಪ್ರಚುರಶ್ರೀಬಿಸಲತೆಯನೆ
ಖಚಿಯಿಸಿದವೊಲಿಕ್ಕೆ ಹಾರಮೆಸೆದುದು ಕೊರಲೊಳ್       ೫೭

ಅರುಣಾಧರರುಚಿಯಿನಧಃ
ಕರಿಸದಿರಿನ್ನೆಮ್ಮನೆಂದು ಕಾಲ್ವಿಡಿದಿರ್ಪಂ
ತಿರೆ ಪದ್ಮರಾಗಮಣಿನೂ
ಪುರಮಂ ನೃಪವಧುಗೆ ತುಡಿಸಿದಳ್ ಮತ್ತೊರ್ವಳ್         ೫೮

ಏಱಿಸದಿಕ್ಷುಶರಾಸನ
ವೇಱಿಸಿದಪುದೀಗಳಂಗಭವನಿಂದೆನೆ ನೀ
ಱೇಱಿದ ಮಂಗಳವಸದನ
ಮೇಱೆ ಮನಂಗೊಳಿಸಲಾರ್ತುದಾ ಕೋಮಳೆಯಾ          ೫೯

ವ || ಅಂತು ಕೆಯ್ಗೆಯ್ಸಿ ಭಾನುಮತಿಯಂ ಮಂಗಳಾಚರಣೋಚ್ಚಾರಣರವಂಗಳುಮ ಮಂಗಳಗೇಯರವಂಗಳುಂ ಮಂಗಳತೂರ್ಯಸ್ವನಂಗಳುಂ ಪುಣ್ಯಾಹಘೋಷಂಗಳುಮೆಸೆಯೆ ವೃದ್ಧಕಂಚುಕಿಪುರಸ್ಸರಮೊಡಗೊಂಡುಬಂದು ವಿವಾಹಮಂಟಪಮಧ್ಯಸ್ಥಿತ ವೇದಿಕಾತಳ ಮನಳಂಕರಿಸಿದ ಮಣಿಮಯಪೀಠದೊಳಿರಿಸಿ ಮಹಾಪದ್ಮರಾಜನಂ ಬರಿಸಿ

ಕಂ || ಪುರಿಪುಂಡರೀಕಿಣೀಶಂ
ಗುರುತರಶೌರ್ಯಂಬುನಿಧಿಗೆ ಜಯವರ್ಮನೃಪಂ
ಪರಮೋತ್ಸುವದ ಪುರೋಹಿತ
ಪುರಸ್ಸರಂ ತಾನೆ ಬಂದು ಕೆಯ್ನೀರೆಱೆದಂ        ೬೦

ರತಿಪತಿಯುಂ ರತಿಯುಂ ಜನ
ನುತರಕ್ತಾಶೋಕಮಹಿಜಮ ಬಲಗೊಳ್ವಂ
ತತಿಶಯದಿಂ ಬಲಗೊಂಡರ್
ಕ್ಷಿತಿಪತಿಯುಂ ಸತಿಯುಮೊಗೆದ ಹೋಮಾನಲನಂ          ೬೧

ಭೂಪತಿ ತಳೆದಂ ಪ್ರಗುಣಗು
ಣೋಪೇತಂ ಭಾನುಮತಿಯನುತ್ಸವತೂರ್ಯಂ
ವ್ಯಾಪಿಸೆ ದೆಸೆಯಂ ನೃಪತಿ ಮ
ಹಾಪದ್ಮಂಗಿತ್ತು ಪೆರ್ಮೆಯಂ ಜಯವರ್ಮಂ     ೬೨

ವ || ಅಂತು ವಿವಾಹೋತ್ಸವಂ ಸಕಳಜನಮನೋತ್ಸವಮಾಗೆ ತದನಂತರಮನಂತ ಸಾಮಂತಸೀಮಂತಿನೀಪ್ರಮುಖವೃದ್ಧಕಂಚುಕಿಸಹಿತಂ ಪುರಪುರಂಧ್ರಿಯರುಂ ಪುರೋಹಿತ ಪುರಸ್ಸರಂ ಧರಾಮರರುಂ ಪರಸಿ ಸೇಸೆಯನಿಕ್ಕೆ ಮಂಗಳಪಾಠಕರ್ ನಿಂದು

ಕಂ || ಆಯುಂ ಶ್ರೀಯುಂ ವಿಜಯಮು
ಮಾಯತಿಯುಂ ನಿಮ್ಮೊಳೊದವಿ ಸುಸ್ಥಿರಮಪ್ಪಂ
ತೀಯುತ್ತುಮಿರ್ಕೆ ಕಾಂಚನ
ಕಾಯಂ ಪ್ರಭು ಶಾಂತಿ ನಿನಗೆ ವಿಭುಶಾಂತಿಜಿನಂ  ೬೩

ಮ || ದಿನಪಾಬ್ಜಾರಬುಧಾಮರೇಜ್ಯಸಿತಮಂದಾಹೀಂದ್ರಕೇತುವ್ರಜಂ
ನಿನಗೇಕಾದಶರಕ್ಕೆ ಸೂಕ್ತಿಸತಿಯುಂ ಶ್ರೀಕಾಂತೆಯುಂ ಜೈನಶಾ
ಸನದೇವೀಕುಳಮುಂ ಸಮಂತು ಸಮಸಂದಿಷ್ಟಾರ್ಥಮಂ ಮಾೞ್ಕೆ ಕಾಂ
ತ ನೃಲೋಕಸ್ತುತ ನಿಮ್ಮೊಳಿಂದು ವಿಜಯಂ ಭದ್ರಂ ಶುಭಂ ಮಂಗಳಂ           ೬೪

ಮ.ಸ್ರ || ಸ್ಥಿರಲಕ್ಷ್ಮೀಲಾಸ್ಯಲೀಲಾಭವನಮಗಲ್ದುರಂ ಭಾರತೀಚಂದ್ರಿಕಾಭಾ
ಸುರಚಂದ್ರಂ ಚಾರುವಕ್ತ್ರಂ ಸ್ಮರವಿಜಯವಧೂಕೇಳಿಶೈಳಂ ಭುಜಾಗ್ರಂ
ಪರಮಶ್ರೀಲಕ್ಷ್ಯಸಲ್ಲಕ್ಷಣಮಣಿಗಣಗರ್ಭಾರ್ಣವಂ ಮೂರ್ತಿಯೆಂಬಂ
ತಿರೆ ಪೆಂಪಂ ತಾಳ್ದಿದಂ ನಾೞ್ಪ್ರಭು ಗುಣನಿಳಯಂ ಶಾಂತನುತ್ಕೀರ್ತಿಕಾಂತಂ    ೬೫

ಚಂ || ಪರಹಿತದೊಳ್ ನಯಕ್ರಮದೊಳಾಯತಿದೊಳ್ ಸುಚರಿತ್ರೆಯೊಳ್ ದಯಾ
ಪರಿಣತೆಯೊಳ್ ಕಾಳವಿಭವದೊಳ್ ಭುಜವಿಕ್ರಮದೊಳ್ ಗಭೀರದೊಳ್
ಗರಿಮೆಯೊಳೂರ್ಜಿತಪ್ರಭುತೆಯೊಳ್ ಪ್ರಭುಮಂಡನ ಶಾಂತಿವರ್ಮ ಸಾ
ಕ್ಷರಸಮಯಾವಳಂಬ ನಿನಗಾರ್ ದೊರೆ ಮಾನವರೀ ಧರಿತ್ರಿಯೊಳ್  ೬೬

ಮ || ಜನಕಂ ವಿಶ್ರುತವಂದಿವೃಂದಜನಕಂ ಬಪ್ಪಂ ಲಸನ್ಮಾತೆ ಮಾ
ನಿನಿ ಮಾದಾಂಬಿಕೆ ಭಾಮೆ ಭಾಮಲೆ ಜಿನೇಂದ್ರಂ ದೈವರಮ್ಮಮ್ಮ ಕೀ
ರ್ತಿನಿದಾನಂ ನೃಪಕಾರ್ತವೀರ್ಯನಹಿತಕ್ಷ್ಮಾಭೃದ್ಬೃಹದ್ವಜ್ರನಾ
ಳ್ದನೆನಲ್ ನಾೞ್ಪ್ರಭು ಶಾಂತಿವರ್ಮನನದಿನ್ನೇವಣ್ಣಿಪಂ ಬಣ್ಣಿಪಂ೬೭

ಕಂ || ಸಾಸಿರದೈತ್ಯಾಧಿಪರೆ
ಣ್ಫಾಸಿರ ಖಚರೇಂದ್ರರೀವ ಗುಣದೊಳ್ ಪದಿನೆ
ಣ್ಫಾಸಿರರವಿನಂದನರೇಂ
ಪಾಸಟಿಯಾದಪರೆ ಭವ್ಯ ಚೂಡಾಮಣಿಯೊಳ್೬೮

ಪೊಳೆವಮೃತಕರನ ಕಿರಣದ
ಬಳಲಿಗೆ ಮಚ್ಚರಿಸುವಂತಿರೆಣ್ದೆಸೆಗಂ ಬ
ಳ್ವಳನೀಳ್ದು ಬಳೆದು ಚೆಲ್ವಂ
ತಳೆದುದು ಸಲೆ ಶಾಂತಿವರ್ಮಕೀರ್ತಿಪ್ರಸರಂ       ೬೯

ವ || ಎಂದು ಮಂಗಳವೃತ್ತಂಗಳನೋದಿಸುವ ಕವಿಜನನಲ್ಪಕಲ್ಪದ್ರುಮನ ಚತುರ ವಿತರಣದಿಂ ಸಂತೃಪ್ತರಾದರನ್ನೆಗಮಿತ್ತಲ್

ಕಂ || ಭೂಪತಿ ತಳೆದಂ ಪ್ರಗುಣಗು
ಣೋಪೇತಂ ಭಾನುಮತಿಯನುತ್ಸವತೂರ್ಯಂ
ವ್ಯಾಪಿಸೆ ದೆಸೆಯಂ ನೃಪತಿಮ
ಹಾಪದ್ಮಂಗಿತ್ತು ಪೆರ್ಮೆಯಂ ಜಯವರ್ಮಂ     ೭೦

ಸಗರಂ ಪೃಥುಚಕ್ರವರ್ತಿ
ಭಗೀರಥ ಯಯಾತಿ ನಳ ಹರಿಶ್ಚಂದ್ರ ಭರತ
ನೃಗ ಹರುಷ ಬಾಣ ಬಲಿ ದಶ
ಕಂಠರ್ ಪಾಸಟಿಯೆ ನಿನಗೆ ಜಿನೇಂದ್ರಚರಣಕಮಲಭೃಂಗಾ೭೧

ವ || ಅಂತು ಬೀಯದ ಚಾಗದ ಪೆರ್ಮೆಯಂ ಮೆಱೆದು ಮದುವೆಯಂ ಮಾಡಿ ಕತಿಪಯದಿನಂಗಳಿಂ ಮಗಳನಳಿಯನುಮಂ ಪುಂಡರೀಕಿಣಿಗೆ ಕಳಿಪಿ ಬರ್ಪಾಗಳ್

ಮ || ಕಮಳಾನಂದಮನುಂಟುಮಾಡಿದುದು ಭಾಸ್ವನ್ಮಂಡಳಾಗ್ರಪ್ರಭಾ
ವಮನಂಗೀಕರಿಸಿತ್ತುದಗ್ರ ಧರಣೀ ಭೃದ್ವಾಹಿನೀಜೀವನೋ
ದ್ಯಮಮಂ ಪೀರ್ದುದು ವಿದ್ವಿಷತ್ಕುವಳಯಶ್ರೀಯಂ ಕೞಲ್ವಿತ್ತದೇ
ನೊ ಮಹಾಪದ್ಮನೃಪಪ್ರತಾಪದಹನಜ್ವಾಳೋಷ್ಮಮೋ ಗ್ರೀಷ್ಮಮೋ        ೭೨

ಚಂ || ನಗಕುಳ ಕುಂಜರಂ ಜಳಧಿ ಕಾನನಮುರ್ವರೆಯೆಂಬಿವೆಲ್ಲಮಾ
ವಗಮೊಳಗಾದುದೊ ಕುಳಿಶವಹ್ನಿಗೆ ವಾರಿದ ವಹ್ನಿಗೌರ್ವವ
ಹ್ನಿಗೆ ವನವಹ್ನಿಗುಗ್ರವಿಷವಹ್ನಿಗೆನಲ್ ಕಡುಕಾಯ್ವಗುರ್ವಿಪಲ್
ಪುಗಲೆಡೆವೆತ್ತುದಿಲ್ಲ ಖಗಮುಂ ಮೃಗಮುಂ ಪರಿತಾಪದೇೞ್ಗೆಯೊಳ್         ೭೩

ಉ || ಪುತ್ತಿನ ಬಾಯ್ಗಳಿಂದುಗುವ ಚಂಡಮರೀಚಿಮರೀಚಿ ಧಳ್ಳೆನಲ್
ಕುತ್ತಿದ ಕೊಳ್ಳಿಯಂತೆ ಸುಡೆ ನೆತ್ತಿವರಲ್ಗಳರಲ್ಗಳಂದದಿಂ
ಪೊತ್ತಿ ಸಿಡಿಲ್ದು ಪಾಱಿದುವು ವಕ್ತ್ರವಿಷಾನಲವಿಸ್ಫುಲಿಂಗಮು
ಣ್ಮುತ್ತಿರೆ ಕೋಪದಿಂ ವಿಷಧರಂಗಳೊಳೆಂಬಿನಮಾ ನಿದಾಘದೊಳ್   ೭೪

ಕಂ || ಕೆಂಡದ ಮೞೆ ಕೊಂಡಪ್ಪುದ
ಜಾಂಡದಿನಿಳೆ ದುವೆಗಿಚ್ಚನುಗುೞ್ದಪ್ಪುದು ದಿ
ಙ್ಮಂಡಲಮಿಂದುರಿಗೊಳ್ಳಿಯ
ತಂಡದಿ ಕೇರ್ಗಟ್ಟಿತೆನಿಸಿ ತೋಱಿತ್ತದಱೊಳ್   ೭೫

ಉ || ತಾಱದ ಬಳ್ಳಿ ಮೀಱದ ದವಾನಲನಾಱದ ಬೆಂಚೆ ತಾಯ್ಮಣ
ಲ್ದೋಱದ ಸಿಂಧು ಬೆಂದೊಡೆದು ಪಾಱದ ಬೆಟ್ಟು ಕರಿಂಕುವೋಗಿ ಕ
ರ್ಪೇಱದರಣ್ಯಭೂಮಿ ಬೆಮರೇಱದೆ ದೇಹಿಸಮೂಹಮೂಷ್ಮೆಯಂ
ಪೇಱದ ಭಾನು ಭಾನುಬಿಸುಪೇಱದಿಳಾತಳಮಿಲ್ಲದೆಲ್ಲಿಯುಂ       ೭೬

ಕಂ || ನಡುವಗಲ ಪುಗಿಲ ಬಿಸಿಲೊಳ್
ಬಿಡೆ ನಾಲಗೆಗಿೞ್ತು ತೇಂಕಿ ತನ್ನಯ ನೆೞಲಂ
ಕಡುಗಪ್ಪಲೆಂದು ಪೊರಳ
ಲ್ಕೊಡರಸಿ ಮೆಯ್ಯಿಕ್ಕಿಲಿರ್ದ ವನ್ಯಲುಲಾಯಂ  ೭೭

ನೋಡಿದೆಮೆ ಸೀಗುಮೊಯ್ಕನೆ
ತೀಡಿದ ಬಗೆ ಬೇಗುಮುರಿದೊಡುಗ್ರತೆಯಿಂ ಮಾ
ತಾಡಿದ ಬಾಯ್ ಪೊತ್ತುಗುಮನೆ
ನಾಡೆಯಗುರ್ವಿಸಿದುದನುಗತೋಷ್ಮಂ ಗ್ರೀಷ್ಮಂ            ೭೮

ವ || ಅಂತೆನಿಸಿದ ನಿದಾಘದೊಳ್ ಬರುತ್ತಿರೆಯಿರೆ ಮುಂದೊಂದೆಡೆಯೊಳ್

ಕಂ || ವನಮಿರ್ದುದತನುಗಿದ ಜೀ
ವನಮಂ ಗಜಲಕ್ಷ್ಮಿಗಿದುದೆ ಪುದಿದೇಱುಂಜ
ವ್ವನವಖಿಳಜಗತ್ರಯವಾ
ವನಮೆನೆ ರತಿಯ ನವಲಾಸ್ಯಲೀಲಾಭವನಂ      ೭೯

ಮ || ವನಮಾಲಾಕಳಿತಂ ಸುಪರ್ಣಮಿಳಿತಂ ಸತ್ಕಾಂಶಪೀತಾಂಬರಂ
ಘನಸುಚ್ಛಾಯನನಂತಭೋಗನಿಲಯಂ ಲಕ್ಷ್ಮೀಸಮೇತಂ ಸುದ
ರ್ಶನಸೇವ್ಯಂ ಸಮನಃಪ್ರತಾನನಿಚಿತಂ ತೋಡಾಯ್ತುಪೇಂದ್ರಂಗೆ ಮ
ಜ್ಜನಕಂಗೀಮರನೆಂದು ಮಾಮರಕೆ ಕಾಮಂ ಕೊಟ್ಟನಾತಿಥ್ಯಮಂ    ೮೦

ಉ || ಕಾದಲರಂ ಪಳಂಚಲೆವ ಪಂಚಶರಕ್ಕದಱಂಕುರಂ ಪಳುಂ
ಬಾದುದು ಕೆಂದಳಿರ್ ಮಿಸುಪ ಕೆಂಗಱಿಯಾದುದು ಹೂದೊಡಂಬೆ ಪಿ
ೞ್ಕೀದುದು ಕೊಂಬು ಕೋಲಕುಟಿಲತ್ವಮನೋಜೆಗೆ ತಿರ್ದಲೊತ್ತುಗೊಂ
ಬಾದುದು ಬೞ್ದೆನೆಂದು ನಲಿದಂ ನುಡಿದಂ ನಡೆ ನೋಡಿ ಚೂತಮಂ೮೧

ವ || ಅದಲ್ಲದೆಯುಂ

ಮ || ಮೊದಲೊಳ್ ಕೂರಿಸಿ ಕೂರ್ತವರ್ ಬೞಿಕಗಲ್ದಿರ್ದಂತೆ ಕೊಲ್ ಹಂದಿ ಸ
ತ್ತುದು ನಾಯ್ ಸತ್ತುದು ಪಾಪಮಿಲ್ಲ ಪೞಿಯಿಲ್ಲೆಂದಂಗಜಂ ತೋಳ ನೀ
ಳದ ಪತ್ರಂ ಬರೆದೀಯೆ ಕೊಂಡು ಮಧುಚೌತಂ ಪೂಸಿ ನೇರಿಟ್ಟ ಮಾ ರ್ಗದೆ ಕಂಕೆಲ್ಲದ ಶೋಣಪಲ್ಲವಚಯಂ ಚೆಲ್ವಾದುವುದ್ಯಾನದೊಳ್         ೮೨

ವ || ಅಂತು ನಯನಾನಂದಮಪ್ಪ ನಂದನಮಂ ನೋಡುತ್ತುಂ ಬರ್ಪಲ್ಲಿ ಆತ್ಮೀಯಸುರಭಿ ನಿಶ್ವಾಸಂಗಳಿಂದಮುದ್ಯಾನಮಂ ಸುರಭಿಸುತ್ತುಂ ಪುಷ್ಪಾಪಚಯನಿರತರಾದಲ್ಲಿ

ಕಂ || ರಂಜಿತಮಧುಮಧುಕರಚಯ
ಮಂ ಜಿತನಾನಾಪ್ರಸೂನಚಯಮಂ ಮದವ
ತ್ಕುಂಜರಗಾಮಿನಿ ಪೆಱಳೇ
ಱುಂಜವ್ವನೆ ಕೊಯ್ದಳೊಸೆದು ಪೊಸಮಲ್ಲಿಗೆಯಂ       ೮೩

ವ || ಮತ್ತಮೊಂದೆಡೆಯೊಳವಧಾರಿತ ವಿದ್ಯಾವಿಳಾಸಿನೀ ವಿಭ್ರಮೆಯುಮು ಪಹಸಿತಪುರಂದರ ಕಾಮಿನೀಸೌಂದರ್ಯರೂಪಕೃತ ಸೌಭಾಗ್ಯವತಿಯುಮೆನಿಸಿದಾಕೆ

ಕಂ || ತರಳತರ ತಾರಹಾರೋ
ತ್ಕರರಚನೆಗೆ ಸುಟ್ಟಿದೋಱಿ ನೀರೇರುಹಬಂ
ಧುರಗಂಧಿ ರಮಣನಿಂದಂ
ಸುರಹೊನ್ನೆಯ ನನೆಯನೆಸೆಯೆ ಕೊಯ್ಸಿದಳೊರ್ವಳ್     ೮೪

ವ || ಮತ್ತಮೊಂದೆಡೆಯೊಳ್ ಅವಿರಳಕುಸುಮಪರಿಮಳಮುದಿತ ಮದವದಳಿಕುಲ ಮೃದುಮಧುರ ರವದಿಂ ಸುರಭಿತ ಸಹಕಾರ ಭೂರುಹಾಂತರದೊಳ್

ಕಂ || ಉಪರಿಜಕುಸುಮಮನೋಪನ
ನಪೂರ್ವಮಂ ತನಗೆ ಬೇಡಲಾಲಿಂಗನಲೋ
ಲುಪನೆತ್ತಿ ನೀನೆ ಕೊಯ್ಯೆಂ
ದುಪಾಯದಿಂದಪ್ಪಿಕೊಂಡನಲಘುಸ್ತನಿಯಂ    ೮೫

ವ || ಮತ್ತಮೊಂದೆಡೆಯೊಳಖಿಳ ಯೌವನೋದ್ದಾಮರಾಮಾಭಿರಾಮ ಕಾಮಿನಿ ಯೆನಿಸಿದಾಕೆ

ಕಂ || ಬೆನ್ನಂ ಸೋರ್ಮುಡಿ ಮುಟ್ಟೆ ಸ
ಮುನ್ನತಕುಚೆ ಮರನನಡರ್ವ ಸೋಗೆಯ ತೆಱದಿಂ
ಪುನ್ನಾಗದ ಬಿರಿಮುಗುಳಂ
ತನ್ನಿನಿಯನ ಪೆಗಲನೇಱಿ ಕೊಯ್ದಳದೊರ್ವಳ್೮೬

ವ || ಮತ್ತಮೊಂದೆಡೆಯೊಳೊರ್ವಳ್

ಕಂ || ಎಳಮಾವಿನ ತಳಿರಂ ಕೊಳ
ಲೆಳೆಯಳ್ ಕೆಂದಳಮನೊಯ್ಯೆ ತಳಮಂ ತಳಿರ್ಗೆ
ತ್ತೆಳಸಿ ಗಿಳಿ ಕರ್ದುಕೆ ಭಯವಿ
ಹ್ವಳೆ ಚೆಚ್ಚರಮಪ್ಪಿದಳ್ ನಿಜೇಶನ ಕೊರಲಂ   ೮೭

ವ || ಆಗಳ್

ಕಂ || ಖರಕರತಾಪಂ ಕರಮು
ಬ್ಬರಿಸೆ ತರತ್ತರಳ ತಾರ ಹಾರಾವಳಿಯಂ
ತಿರೆ ಘರ್ಮಬಿಂದುಚಯಮಂ
ಕುರಿಸಿದುವಬಲೆಯರ ತನುಲತಾವಿತತಿಗಳೊಳ್೮೮

ವ || ಅಂತೊಗೆದ ಘರ್ಮೋದಬಿಂದುವಿಂ ಪರೆದಂಗರಾಗಮುಂ ನಸುಗುಂದಿದ ಕುಸುಮವಿಭೂಷಣಂಗಳುಂ ಬೆರಸು ಮದಾಲಸಮರಾಳಗತಿಯಿಂ ಬಂದು ವನಲತಾ ಗೃಹಂಗಳೊಳ್ ವಿಶ್ರಮಿಸುತ್ತೆ ರೂಪಹೃತವನವಿಹರಣರಾಗಿ ಭಾನುಮತಿಪುರಸ್ಸರಂ ಸಕಳ ಪೆಂಡವಾಸಮೊಡವರೆ ಜಲಕೇಳೀಲೋಲನೆನಿಸಿದ ಯೂಥಪತಿ ಕರೇಣುಯೂಥಂ ಬೆರಸು ಬರ್ಪಂತೆ ಬಂದು

ಕಂ || ಮುರಹರನಂತೆ ರಥಾಂಗ
ಸ್ಫುರಿತಂ ನಕ್ಷತ್ರದಂತೆ ಮೀನಾನ್ವಿತಮಂ
ಬರದಂತೆ ರಾಜಹಂಸೋ
ದ್ಧುರಶೋಭಾಕರಮೆನಿಪ್ಪ ಕಮಳಾಕರಮಂ     ೮೯

ವ || ಅದಂ ಕಂಡೆಯ್ದೆವೆಂದು ಜಳಕೇಳೀವಿಳಾಸೋದ್ಯುಕ್ತನಾದಾಗಳ್

ಉ || ಆ ಲಲನಾಕದಂಬಕ ವಿಶಾಲನಿತಂಬುಸುಪೀರವರಸ್ತನಾ
ಸ್ಫಾಲನದಿಂದಮಬ್ಜಿನಿ ಕಲಂಕಿ ತರತ್ತರಳೋರ್ಮಿಮಾಲೆಯಂ
ಲೀಲೆಯಿನಾಂತುದಂತುಟೆ ಮಹದ್ವಿಮಳತ್ವ ಗಭೀರವೃತ್ತಮಾ
ಬಾಲೆಯ ತೋಳ್ ತಗುಳ್ತರೆ ವಿಕಾರಮನೆಯ್ದುವುದಾವ ವಿಸ್ಮಯಂ            ೯೦

ಕಂ || ಮತ್ತಗಜಕುಂಭರಸದೃಶಕು
ಚಾತ್ತಪಯಃಕ್ಷೋಭದಿಂ ರಥಾಂಗಯುಗಂ ಮೆ
ಯ್ವೆತ್ತಿರ್ದಗಲ್ದುದೇನು
ದ್ವೃತ್ತ ಕೃತಾನ್ಯಪ್ರಸಾದಮೆಂಬುದುಮುಂಟೇ   ೯೧

ವ || ಅದಲ್ಲದೆಯುಂ

ಕಂ || ಇನಿಯಳ್ ಮುನಿದೊಡೆ ತಿಳಿಪ
ಲ್ಕಿನಿಯಂ ಕಾಲ್ವಿಡಿಯಲೆಂದು ಮುೞುಗಿದನಾ ಕಾ
ಮಿನಿಗೆ ಜಲದಿವ್ಯದಿಂ ಶು
ದ್ಧನಪ್ಪ ಬಗೆಬಗೆಯೊಳೊಂದಿ ಮುೞುಗುವ ತೆಱದಿಂ      ೯೨

ವ || ಅದಲ್ಲದೆಯುಂ

ಕಂ || ಇದು ವದನಮಿದು ಸರೋರುಹ
ಮಿದು ಕುಚಮಿದು ಚಕ್ರವಾಕಮಿದು ಕಣ್ಣಿದು ಮೀ
ನಿದು ಕುರುಳಿದು ಮಧುಕರಮೆಂ
ಬುದನಱಿಯಲ್ ಬಂದುದಿಲ್ಲ ಕಮಳಾಕರದೊಳ್         ೯೩

ಪಸರಿಸಿದ ಕೃತಕಸೌಂದ
ರ್ಯಸೌರಭಂ ಪಿಂಗೆ ಪಿಂಗದಂಗಂಗಳೊಳೇ
ನೆಸೆದುದೊ ಹೃದಯಂಗಮಮಾ
ಯ್ತಸದಳಾತ್ಮಾಂಗಸೌರಭಂ ಲಲನೆಯರಾ        ೯೪

ವ || ಅಂತು ಜಲಕೇಳೀವಿನೋದದಿಂ ನೀಡುಂಪೊೞ್ತುಗಳೆದಂದಿನ ದಿನಮಲ್ಲಿರ್ದು ಮಱುದಿವಸಂ ಪುಂಡರೀಕಿಣಿಗೆ ನಿಚ್ಚವಯಣಂ ಬಂದು

ಕಂ || ಮಂಗಳತೂರ್ಯರವಂ ಮಿಗೆ
ಮಂಗಳಗಾಯಕನಿನಾದಮೊಡರಿಸೆ ಭಾಸ್ವ
ನ್ಮಂಗಳಪಾಠಕನಿನದಂ
ಸಂಗಳಿಸಿರೆ ನೃಪತಿ ರಾಜಗೃಹಮಂ ಪೊಕ್ಕಂ      ೯೫

ವ || ಪೊಕ್ಕು ಪದ್ಮರಾಜಂಗಂ ವನಮಾಳಿಕಾಮಹಾದೇವಿಗಂ ನಿರ್ಭರಭಕ್ತಿಭರದಿಂ ಪೊಡಮಡುವುದುಮವರ್ ತೆಗೆದು ತೞ್ಕೈಸಿಕೊಂಡು ಪಲವು ನಲ್ವರಕೆಗಳಿಂ ಪರಸಿ ಪರಮೋತ್ಸವ ಪರಂಪರೆಯನೆಯ್ದಿ ಸುಖಮಿರ್ಪುದುಂ ಕತಿಪಯದಿನಂಗಳಿಂ ಮಹಾಪದ್ಮರಾಜನ ಮಹಾದೇವಿಯೆನಿಸಿದ ಭಾನುಮತಿಯ ಗರ್ಭದೊಳ್ ಪೂರ್ವಜನ್ಮಸಂಚಿತಾಗಣ್ಯ ಪುಣ್ಯಪ್ರಭಾವದಿಂ

ಕಂ || ಜಿನವಾಕ್ಯಾಮೃತಮಣಿಭಾ
ಜನನಭಿನುತವಂಶವಾರ್ಧಿವರ್ಧನಲೀಲಾ
ವನಧಿಸುತನರ್ಥಿಜನನಂ
ದನನಾ ಧನದೇವನೆಂಬ ಸುತನುದಯಿಸಿದಂ       ೯೬

ವ || ಅಂತಿರ್ಪುದುಮೊಂದುದಿವಸಂ ಮಹಾಪದ್ಮನಾಭಂ ಮಂಟಪಮಧ್ಯಸ್ಥಿತ ಸಿಂಹಾಸನಾಸೀನನೊಡ್ಡೋಲಗಂಗೊಟ್ಟಿರೆ

ಕಂ || ದಿನಲಕ್ಷ್ಮಿ ವಾರುಣೀಸೇ
ವನೆಗಿರದೆೞ್ತರ್ಪ ಪದದೊಳವಳಡಿಯಿಂ ಬಿ
ೞ್ದನುಪಮಮಣಿಮಂಜೀರಕ
ವೆನಲಿನನಪರಾದ್ರಿಶಿಖರಶೇಖರನಾದಂ೯೭

ಚಂ || ಕಮಳಿನಿಯಂ ವಿಯೋಗಿನಿಯನೀಕ್ಷಿಸಿ ಮತ್ತೆ ಬೃಹದ್ವಿಯೋಗವೇ
ಗಮನೊಳಕೊಳ್ಗುಮೀಗಳೆ ಮದಾಗಮನೋತ್ಸವಮಂ ನಿವೇದಿಸೆಂ
ದಮೃತಮರೀಚಿ ಪೇೞ್ದು ನಿಜದೂತಿಯನುತ್ಪಳಲಕ್ಷ್ಮಿಗಟ್ಟಿದಂ
ತಮರ್ದೆಸೆದಿರ್ದ ಸಂಜೆ ಪರಿರಂಜಿಸುತಿರ್ದುದಪೂರ್ವಶೋಭೆಯಿಂ    ೯೮

ಮ || ಇನನೆನ್ನಾಸೆಯನೊಲ್ಲದೀಗಳಪರಾಶಾಯೋಷಿದಾಸಕ್ತನಾ
ದನವಂ ಸಂಚಳನೆನ್ನ ಪಕ್ಕದೊಳಗಿರ್ದುಂ ಸಯ್ತಿರಂ ಪೋಗಿ ಪ
ದ್ಮಿನಿಯಂ ಪೊರ್ದುವೆನೆಂದು ನೊಂದು ಹರಿದಿಕ್ಕಾಂತಾನನಂ ಕಂದಿತೆಂ
ಬಿನೆಗಂ ಮರ್ಬು ಪೊದೞ್ದು ಪರ್ವಿದುದಗುರ್ವಿಂ ಪೂರ್ವದಿಗ್ಭಾಗಮಂ         ೯೯

ಕಂ || ಕಾಲಿಂದಿಯನಮರಾಪಗೆ
ನೀಲಾದ್ರಿಯನಾ ಹರಾದ್ರಿಯಸಿತಾಬ್ಜಿನಿಯಂ
ಪೋಲೆ ಸಿತಾಬ್ಜಿನಿ ಪೋಲ್ತಿರೆ
ಕಾಲದ ಮರ್ವುರ್ವಿ ಪರ್ವಿತುರ್ವಿತಳಮಂ          ೧೦೦

ಅ || ಅಲ್ಲಿ

ಮ || ದೆಸೆಯಂ ನೋಡದಿರಕ್ಕ ನಿನ್ನ ಧವಳಾಪಾಂಗಂ ಪೊದೞ್ದಪ್ಪುದಿ
ನ್ನುಸಿರಲ್ವೇಡೆಗೆ ಮುಗ್ಧೆ ನಿನ್ನ ದಶನಾಂಶುಜ್ಯೋತ್ಸ್ನೆ ನೀಳ್ದಪ್ಪುದೆಂ
ದು ಸಮಾಲಿಂಗಿತಮೌನೆಮಾಡಿ ಸಖಿಯಂ ಸಂಕೇತಸದ್ಮಕ್ಕೆ ಪ
ಲ್ಲಿಸರಂದೋಱುತೆ ಮುಂತೆಮುಂತೆ ನಡೆದೊಯ್ದಳ್ ದೂತಿ ಚಾತುರ್ಯದಿಂ೧೦೧

ಕಂ || ಇದು ಸಾಂಧ್ಯತಾಂಡವಾರಂ
ಭದೊಳೀಶ್ವರಬಾಹುನರ್ತನಕ್ಷೇಪದೊಳು
ಣ್ಮಿದ ಪುಷ್ಪಾಂಜಳಿಯೆನಲೇ
ನುದಯಿಸಿದುದೋ ಗಗನದೊಳಗೆ ತಾರಾನಿಕರಂ೧೦೨

ಇನಿ(ಸಿನಿ) ಸಂ ತಮದೊಡ್ಡೊ
ಯ್ಯನೆ ತಾನೊರಸಿತಮ(ರೇಶ್ವ) ರಾಶಾವನಿತಾ
ನನಮಿನಿಸಿನಿಸಂ ಬೆಳ್ಪಂ
ಜನಿಯಿಸಿದುದಯಾದ್ರಿಯಂ ಸುಧಾಕರನಡರ್ದಂ೧೦೩

ವ || ಆ ಪ್ರಸ್ತಾವದೊಳ್

ಮ || ಅಮರಾಧೀಶ್ವರಗಂಧಸಿಂಧುರ ಶಿರಸ್ಸಿಂಧೂರಮಿಂದ್ರಾಲಯಾ
ಗ್ರಿಮಲೀಲಾರುಣನೂತ್ನ ರತ್ನಕಳಶಂ ಜಂಭಾರಿಶುಂಭತ್ಸರಾ
ಗಮಯೈಕಾತಪವಾರಣಂ ಶತಮಖಶ್ರೀವಕ್ತ್ರಕಾಶ್ಮೀರರಾ
ಗಮಿದೆಂಬೇೞ್ಗೆಯನಾಂತು ರಕ್ತರುಚಿಯಿಂ ಚೆಲ್ವಾಯ್ತು ಚಂದ್ರೋದಯಂ    ೧೦೪

ವ || ಅದಲ್ಲದೆಯುಂ

ಮ || ಅನಿಮೇಷಧ್ವಜವಶ್ಯಯಂತ್ರವಲಯಂ ಕಂದರ್ಪಶೌರ್ಯಪ್ರಶ
ಸ್ತಿನಿಯುಕ್ತಸ್ಥಿತಶಾಸನೈಕಫಳಕಂ ಪುಷ್ಪಾಸ್ತ್ರಕೇಳೀಲತಾ
ವನಪುಷ್ಪಸ್ತಬಕಂ ಮನೋಜವಿಜಯಪ್ರಸ್ಥಾನಮಾಂಗಲ್ಯಪಾ
ವನಪುಣ್ಯಾಮೃತಕುಂಭಮೆಂಬೆಸಕಮಂ ತಾಳ್ದಿತ್ತು ಚೆಲ್ವಿಂದುವಾ   ೧೦೫

ಮ.ಸ್ರ || ಗಗನಂ ತೀವಲ್ಕೆ ಮೇಣ್ಕೊರ್ವಿದುದೊ ತುಹಿನಕೃದ್ಬಿಂಬವಾ ಶಾಂತಮಂ ಕೆ
ಯ್ಮಿಗೆ ಮೇಣ್ ದುಗ್ಧಾಬ್ಧಿ ಬೆಳ್ಳಂಗೆಡೆದು ಕವಿದುದೋ ಲೀಲೆಯಮ ತಾಳ್ದಿ ಮೇಣೀ
ಜಗಮಂ ಶ್ರೀಶಾಮತಿವರ್ಮ ಪ್ರಥಿತಯಶಮೆ ತಾಳ್ದಿರ್ದುದೋ ಪೇೞಿಮೆಂಬ
ನ್ನೆಗಮುರ್ವೀಚಕ್ರಮಂ ಕಣ್ಗೊಳಿಸಿದುದು ಲಸಚ್ಚಂದ್ರಿಕಾಶ್ರೀವಿಳಾಸಂ         ೧೦೬

ವ || ಆಗಳೋಲಗಮಂ ವಿಸರ್ಜಿಸಿ ಸಂಧ್ಯಾಸಮಯ ಸಮುಚಿತ ನಿತ್ಯನಿಯಮಮಂ ನಿರ್ವರ್ತಿಸಿ ಪ್ರಭುಗುಣಾರ್ಣವಪೂರ್ಣಚಂದ್ರಂ ಚಂದ್ರಿಕಾಶ್ರೀಯಂ ನೋಡಿ ಪುರಮಂ ತೊೞಲ್ದು ನೋಡುವ ಬಗೆಯಿಂ ನಾಗರಿಕವಿಟವಿದೂಷಕಾದಿಗಳ್ವೆರಸು ರಾಜಭವನಮಂ ಪೊಱಮಟ್ಟು

ಕಂ || ಅಂಗಜನಿಭನೆಯ್ದಿದನರ
ಸಂ ಗಣಿಕಾವಾಟಮಂ ವಿಟೀವಿಟಜನತಾ
ಸಂಗತ ಮಧುರವಚಸ್ತಬ
ಕಂಗಳನಾತ್ಮೀಯ ಕರ್ಣಪೂರಂ ಮಾಡಲ್        ೧೦೭

ವ || ಆ ಪ್ರಸ್ತಾವದೊಳ್

ಮ.ಸ್ರ || ಲಳನಾಧಮ್ಮಿಲ್ಲಮಾಳಾಕುಸುಮ ಪರಿಮಳಾಮೋದಿ ಕಂದರ್ಪಕೇಳೀ
ಚಳಿತ ಸ್ತ್ರೀಪುಂಸಘರ್ಮೋದಕಲವಶಿಶಿರಂ ಸೌಧವಾತಾಯನಪ್ರೋ
ಚ್ಚಳಿತೋದ್ಯದ್ಧೂಪಧೂಮ ಪ್ರಬಳವಿಲುಳಿತ ಶ್ಯಾಮಳಾಲೀಲೆಯಿಂದಂ
ಸುೞಿಗುಂ ಸೌಭಾಗ್ಯಘಂಟಾರವಮುಖರಿತಮಂದಪ್ರಚಾರಂ ಸಮೀರಂ         ೧೦೮

ಮ || ವನಿತಾನೂಪುರಜಾಲಚಾರುನಿನದಂ ಸೌಭಾಗ್ಯಘಂಟಾಚಳ
ನ್ನಿನದಂ ಪಂಜರಕೀರಮಂಜುನಿನದಂ ಕಾಂಚೀಕನತ್ಕಿಂಕಿಣೀ
ನಿನದಂ ರಂಜಿತಗೀತವಾದ್ಯನಿನದಂ ಮಾಧುರ್ಯವೀಣಾಲಸ
ನ್ನಿನದಂ ಪೊಂಪುೞಿಯಾದುದಚ್ಚರಿಯೆನಲ್ ವೇಶ್ಯಾಲಯಾನೀಕದೊಳ್     ೧೦೯

ವ || ಅಂತು ಮನೋಜರಾಜಲೀಲಾಕರಸೌಧಕೂಟದೊಳ್ ಬರ್ಪಾಗಳ್ ವಿವಿಧ ವಿಚಿತ್ರಭಿತ್ತಿ ಸಂಪತ್ತಿರಮ್ಯಹರ್ಮ್ಯತಳಖಚಿತ ಮರಕತಕುಟ್ಟಿಮಪ್ರಾಂಗಣವಿರಚಿತ ಮತ್ತವಾರಣಂಗಳಂ ನೆಮ್ಮಿ

ಚಂ || ಚಲನ ನಿತಂಬಬಿಂಬ ಕುಚ ಕರ್ಣ ಕಪೋಲ ಲಲಾಟದೇಶದೊಳ್
ತೊಲಗಿ ಪಿನದ್ಧನೂತ್ನಮಣಿನೂಪುರ ಕಾಂಚನಸೂತ್ರಹಾರಮಂ
ಡಲಮಕರಾಂಕಪತ್ರತಿಳಕಾವಳಿಗಳ್ ವಿಟಕೋಟಿಯಂ ಪಳಂ
ಚಲೆಯೆ ವಿಳಾಸಮಂ ತಳೆದುದೊತ್ತೆಗೆ ನಿಂದ ವಿಳಾಸಿನೀಜನಂ         ೧೧೦

ವ || ಮತ್ತಮೊಂದೆಡೆಯೊಳೊರ್ವ ಚಪಳಚತುರವಿಟಂ

ಮ || ವನಜಾತಾನನೆ ಪೇೞ್ ಸುಧಾಂಶುಯಶ ಕೇಳ್ ಹಂಸಾಂಗನಾಯಾನೆ ಪೇೞ್
ಘನನಾದಾನ್ವಿತ ಕೇಳ್ ಮದದ್ವಿರದಕುಂಭೋರೋಜೆ ಪೇೞ್ ಸಿಂಹಶೌ
ರ್ಯನಿಭಾ ಕೇಳಳಿಮಾಳಿಕಾ ಕಬರಿ ಪೇೞ್ ಸಚ್ಚಂಪಕಾಮೋದ ಕೇ
ಳೆನಲಾ ಕಾಂತೆಯನಂತೆ ಬಿಟ್ಟನದನಿನ್ನೇನೆಂಬೆನಾಶ್ಚರ್ಯಮಂ        ೧೧೧

ವ || ಮತ್ತಮೊಂದೆಡೆಯೊಳೊರ್ವಂ ತನ್ನ ಕೆಳದಿಗಿಂತೆಂದಂ

ಚಂ || ಅರಸೆನೆ ರಂಜದಾನೆಹರಿದೆಯ್ದಿದೊಡಾಗಳೆ ನೂಂಕುತಿರ್ದುವಾ
ತುರಗಮನಕ್ಕೆ ಸೈರಿಸದೆ ಹೆಗ್ಗಡೆಗಂಜಿರೆ ಮನ್ಮನೋರಥಂ
ವಿರಥಮನೆಯ್ದಲಾಂ ದ್ವಿವೆದೆಯ್ದಿದೆನಾ ಚತುರಂಗಯುಕ್ತಿ ಬೇ
ರ್ವರಿದಿರೆ ಪೆಂಡಿರೊಲ್ದೊಲವನೇೞಿಸುವಾತನೆ ಗಾಂಪನಲ್ಲನೇ     ೧೧೨

ವ || ಮತ್ತಮೊಂದೆಡೆಯೊಳೊರ್ವಳ್

ಮ || ಇನಿಯಂ ಮೆಲ್ಲನೆ ತುಗೆ ಬಣ್ಣಿಸೆ ಜನಂ ತನ್ನಂ ಮನೋರಾಗದಿಂ
ಕನಕಾಂದೋಳಮನೇಱಿ ಮನ್ಮಥಧನುಜ್ಯಾರ್ಯರಾವಮಂ ಪೋಲ್ತು ಗೀ
ತನಿನಾದಂ ಬಗೆಗೊಂಡು ಕಾಮುಕಜನಪ್ರಕ್ಷೋಭಮಂ ಮಾಡೆ ಕಾ
ಮಿನಿಯೊರ್ವಳ್ ಪ್ರಭುಶಾಂತಿವರ್ಮನ ಯಶಶ್ರೀಲೇಲೆಯಂ ಪಾಡಿದಳ್         ೧೧೩

ವ || ಮತ್ತಮೊಂದೆಡೆಯೊಳವಿರಳ ಕುಸುಮಮಾಳಾನಿಚಯರಚಿತ ವಿವಿಧಮಣಿಗಣ ಖಚಿತ ವಿಚಿತ್ರಚೀನಾಂಬರಾಡಂಬರ ಲೀಲಾಂದೋಳಕೇಳಿಯೊಳ್

ಚಂ || ಪದಕೊರಲೊಳ್ಪು ಕಣ್ಣೞಿವು ಕೆತ್ತು ತೊದಳ್ ಗಮಕಂ ನಯಂ ಬೆಡಂ
ಗೊದವೆ ಮರಲ್ದು ವಾರವಧು ವಾರವಧೂತ್ತಮೆ ಪಾಡಿದಳ್ ವಿಳಾ
ಸದೆ ತೆರೆಯಲ್ಕೆ ಮೇಲುದಲೆದೆತ್ತಿದ ಸುತ್ತಿದ ಸೀಯನಪ್ಪ ಗೇ
ಯದ ಪೊಸಬಣ್ಣದೊಳ್ ಸೊಬಗೆ ಶಾಂತನನೂರ್ಜಿತ ಕೀರ್ತಿಕಾಂತನಂ          ೧೧೪

ವ || ಮತ್ತಮೊರ್ವಳ್ ತನ್ನಿನಿಯಂ ತಡೆದು ಬಂದುದರ್ಕೇವಯ್ಸಿ

ಕಂ || ಮಾಣ್ಚಕ್ಕನೆ ನೀನವಳೊಳ್
ಕಣ್ಚಲ್ಲದೆ ಪೋಗಿ ನೆರೆದು ಮೆಲ್ಲನೆ ಬಂದೈ
ನಾಣ್ಚುವೆಯಲ್ಲೆನುತಂ ಕಿಸು
ಗಣ್ಚಿ ಸರೋಜಾಕ್ಷಿ ಬಡಿದಳಾತ್ಮಪ್ರಿಯನಂ       ೧೧೫

ಪೋಗದೆ ತಡೆದಿರ್ದಗಣಿತ
ಭೋಗಾಮರ ಭಾನುಮತಿಯ ಪದಹತದೊಳ್ ಪ
ಕ್ಕಾಗದೆ ನೀಂ ನೃಪ ಸೆಜ್ಜೆಗೆ
ಪೋಗೆಂದೆಂಬಂತೆ ಘೞಿಗೆ ಮೊೞಗಿತ್ತಾಗಳ್      ೧೧೬

ವ || ಅಂತು ರಾತ್ರಿಸಂಭೋಗಸ್ವೀಕೃತಮನೋರಾಗನುಮಾಗಿ

ಮ || ಮನಮೊಲ್ದಾನಿರೆ ತಾರಕಾನಿಕರದೊಳ್ ಕೂಡಿರ್ಪೆ ನೀನೆಂದು ಯಾ
ಮಿನಿ ಮೆಯ್ವೆರ್ಚಿದ ಕೋಪದಿಂ ವಿಕಳಭಾಷಾವೇಷಮುಣ್ಮಲ್ಕೆ ಪೋ
ಗೆ ನತಾಸ್ಯಂ ವಿಗತಾಂಬರಂ ಶಶಿ ವಿಕಾಸಂಗೆಟ್ಟು ಬೆಂಬಿೞ್ದು ಪೋ
ದನದೇಂ ಚೋದ್ಯಮೊ ನೋೞ್ಪೊಡಂತುಟೆ ವಿಯೋಗೋದ್ಯೋಗಮೇಗೆಯ್ಯದೋ   ೧೧೭

ಚಂ || ಹಿಮರುಚಿರಾಗದಿಂ ನೆರೆದು ಸತ್ಪಥಲಕ್ಷ್ಮಿಯನಸ್ತಶೈಲದೊಳ್
ಸಮರತದಿಂ ಬೞಲ್ದೊಱಗಲಾಕೆಯ ಮೆಯ್ವಿಡಿದಾಱುತಿರ್ಪ ಮೆ
ಯ್ಬೆಮರ್ವನಿಯಂತೆ ಬಾಂದೊಱೆಯೊಳೊಂದೆರಡಿರ್ದುವು ತಾರೆ ಬಿೞ್ದ ಕುಂ
ಕುಮರುಚಿರಾಂಬರಂಬೊಲೆಸೆದಿರ್ದುದು ಪೂರ್ವದಿಶಾರುಣಾಂಬರಂ            ೧೧೮

ವ || ತದನಂತರಂ

ಕಂ || ಜಳಜಭವಂ ಮಾನಸುರಾ
ಚಳದ ಸುರಾಚಳದ ಮೈಮೆಯಂ ತೂಗೆ ಸುರಾ
ಚಳದಡರ್ದ ಕೊಱತೆಗಿಕ್ಕಿದ
ತೊಳಗುವ ಗುಂಜಿಯೆನೆ ರಂಜಿಸಿದನುದಯಾರ್ಕಂ            ೧೧೯

ವ || ಆಗಳ್ ನಿರ್ವರ್ತಿತನಿತ್ಯನಿಯಮನುಂ ಕೃತದೇವತಾರ್ಚನನುಮಾಗಿ ಮಹಾಪದ್ಮನಾಸ್ಥಾನಮಂಟಪದೊಳಿರ್ಪುದುಂ ಋಷಿನಿವೇದಕನೊರ್ವಂ ಪರಿತಂದು ನಿಟಿಳತಟಘಟಿತಕರಸರೋಜನಾಗಿ ಸಾಷ್ಟಾಂಗವೆಱಗಿ ಪೊಡೆವಟ್ಟು ದೇವ ನಿಮ್ಮ ಬಹಿರುದ್ಯಾನದೊಳ್ ಭೂತಹಿತಜಿನರ್ ಬಿಜಯಂಗೆಯ್ದರೆಂದು ಬಿನ್ನಪಂಗೆಯ್ಯಲವರಿರ್ದ ದೆಸೆಗೇೞಡಿಯಂ ನಡೆದು ಸಾಷ್ಟಾಂಗಪ್ರಣತನಾಗಿ ಋಷಿನಿವೇದಕಂಗಂಗಚಿತ್ತಮಂ ಕೊಟ್ಟು ಸನ್ನಾಹಭೇರಿಯಂ ಪೊಯ್ಸಿ

ಮ || ಧರಣೀಶಸ್ತ ಸಮಸ್ತ ಮಂಡಳಿಕ ದಂಡಾಧೀಶ ಸಾಮಂತ ಸಾ
ಕ್ಷರ ಪೌರೋಹಿತ ಪೆಂಡವಾಸಲಲನಾಶುದ್ಧಾಂತಕಾಂತಾಲಸ
ತ್ಪರಿವಾರಂ ಬೆರಸರ್ಚನಾವಳಿ ಸಮೇತಂ ನೂತನಾನಂದದಿಂ
ನರನಾಥಂ ಪೊಱಮಟ್ಟನಂದು ಪದೆಪಿಂ ಶ್ರೀಭವ್ಯರತ್ನಾರ್ಣವಂ     ೧೨೦

ಗದ್ಯಂ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮಕುಮುದ್ವತೀ ಚಾರುಚಂದ್ರಾಯ ಮಾಣ ಮಾನಿತ ಶ್ರೀಮದುಭಯಕವಿಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತಸೂಕ್ತಿ ಚಂದ್ರಿಕಾಪಾನ ಪರಿಪುಷ್ಪಮಾನಸಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಜಳಕೇಳೀವರ್ಣನಂ ಅಷ್ಟಮಾಶ್ವಾಸಂ