ಕಂ || ಶ್ರೀನಿರತಿಶಯಗಭೀರನಿ
ನಾದಂ ಸೌಜನ್ಯಮಂಡನಂ ಜಿನನಿರ್ದು
ದ್ಯಾನವನಕ್ಕೆಯ್ತಂದಂ
ಮಾನಧನಂ ಪ್ರಭು ಗುಣಾಬ್ಜವನಕಳಹಂಸಂ     ೧

ವ || ಅಂತು ಬಂದು

ಕಂ || ಬಲಗೊಂಡನಮರನಗಮಂ
ಬಲಗೊಳ್ವಿನನಂತಗಣ್ಯಪುಣ್ಯಾವಸಥಂ
ಬಲರಿಪು ಪರಿಪೂಜಿತ ಜಿನ
ನಿಲಯಮನನುನಯದಿನೆಸೆವ ಭವ್ಯೋತ್ತಮನಂ ೨

ವ || ಅಂತು ಬಲಗೊಂಡೊಳಗಂ ಪೊಕ್ಕು ಪ್ರಗಲ್ಭನಿರ್ಭರಭಕ್ತಿಯಿಂ ನಿಟಿಳತಟಘಟಿತಕರ ಸರೋಜನಾಗಿ

ಚಂ || ಅತನುಮದಪ್ರಭಂಜನ ಜನಸ್ತುತಸೂಕ್ತಿನಿವಾಸ ವಾಸವಾ
ರ್ಚಿತಪದಪದ್ಮ ಪದ್ಮಸದನಾಸ್ಪದವಿಕ್ರಮ ವಿಕ್ರಮಾಂಗಜ
ಕ್ಷಿತಿಧರವಜ್ರ ವಜ್ರಿರಚಿತಪ್ರಥಿತಾಯತತೂರ್ಯಘೋಷ ಘೋ
ಷಿತನವತತ್ವ ತತ್ವರಸವಾರಿಧಿ ನೀನೆ ವಲಂ ಜಿನೇಶ್ವರಾ   ೩

ಮ || ಸಕಳಜ್ಞಾನಸುಖೈಕಮೂರ್ತಿ ಜಿನ ನಿನ್ನಂ ಕೀರ್ತಿಸಲ್ ನಾಕನಾ
ಯಕರುಂ ಶಕ್ತಿ ವಿಮುಕ್ತರಾದರದಱೆಂದಾವೇವೆವೆಂಬೀ ನಿರ
ರ್ಥಕ ವಾಗ್ಜಾಣಿಕೆವೇಡ ಪೂರ್ಣಮತಿವಿಸ್ತೀರ್ಣಂ ಪ್ರಸನ್ನಂ ಯಶೋ
ಧಿಕಮಾಗಿರ್ದೊಡಮಬ್ಧಿಗೇವಿರಿದೊ ಪೆಂಪಿಂ ಪೇೞ್ ಸರೋಜಾಕರಂ          ೪

ವ || ಎಂದಿವು ಮೊದಲಾದನೇಕ ವಸ್ತುಸ್ತವ ಗುಣಸ್ತವ ರೂಪಸ್ತವಂಗಳಿಂ ಜಗತ್ಪ್ರಣೂತ ಭೂತಹಿತ ಜಿನರಂ ಸ್ತುತಿಯಿಸಿ ಪೊಡವಟ್ಟು ತದನಂತರಂ

ರಗಳೆ || ಶ್ರೀಕನಕಕಲಶಭೃತನಿರ್ಮಳಜಲಂಗಳಿಂ
ಹಿಮಘಸೃಣ ಸಮ್ಮಿಶ್ರಮಳಯಜರಸಂಗಳಿಂ ||
ಸುರಭಿಪರಿಮಳವಿರಳಕಳಮಾಕ್ಷತಂಗಳಿಂ
ಮಂದಾರಸಿಂಧುವಾರಾದಿಕುಸುಮಂಗಳಿಂ ||
ಸರಸಮೃದುಭಕ್ಷ್ಯಯುತದಿವ್ಯಚರುಕಂಗಳಿಂ
ಶೋಣಮಣಿಕಿರಣರುಚಿರಚಿತದೀಪಂಗಳಿಂ ||
ಕಾಳಾಗರುಪ್ರಮುಖ ಧೂಪ ಧೂಮಂಗಳಿಂ
ಪನಸಾಮ್ರ ನಾರಂಗೆ ದಾಡಿಮ ಫಲಂಗಳಿಂ ||
ಮತ್ತಮೆನಿತೊಳವೆಸೆವ ಬಹುವಿಧಾರ್ಚನೆಗಳಿಂ
ಪೂಜಿಸಿದನನಘಜಿನಪಾದಯುಗಳಂಗಳಂ ||
ಭಾರತೀಚರಣಸರಸಿರುಹಯುಗ್ಮಂಗಳಂ
ಜಿನಮುನಿಪದಾಂಬುಜಯುಂಗಳಂ ಮಂಗಳಂ ||             ೫

ವ || ಅಂತರ್ಚಿಸಿ ಗುರುಭಕ್ತಿಪೂರ್ವ ಕಂ ಪಂಚಮುಷ್ಟಿಯಿಂ ವಂದಿಸುವುದುಂ

ಕಂ || ಕಾರುಣ್ಯಾಂಭೋನಿಧಿಗಂ
ಭೀರರವಂ ಪುದಿದುದೆನಿಸಿ ರಾರಾಜಿಸಿದ
ತ್ತಾ ರಾಜಸಭೆಗೆ ನಿರುಪಮ
ಸೂರಿಜನಂ ಪರಸೆ ಧರ್ಮವೃದ್ಧಿಯ ಘೋಷಂ  ೬

ವ || ಅಂತು ಪರಸುವುದುಂ ಮಹಾಪದ್ಮರಾಜಂ ಪರಮಾನಂದಮಂ ಪಡೆವಂತೆ ಪರಮಾನಂದ ಪರಂಪರೆಯನೆಯ್ದಿ ಸಮುಚಿತಾಸನದೊಳ್ ಕುಳ್ಳಿರ್ಪುದುಂ ಅವರ್ ಸದ್ಧರ್ಮಸ್ವರೂಪಮಂ ಸಂಕ್ಷಿಪ್ತಮುದಿತನತ್ಯಾಸನ್ನಭವ್ಯನೆಂಬುದನಗಾಧ ಕೇವಳಬೋಧದಿಂದಱೆದು ಪಂಚಾಸ್ತಿಕಾಯ ಷಡ್ದ್ರವ್ಯ ಸಪ್ತತತ್ವ ನವಪದಾರ್ಥ ಸ್ವರೂಪಮಂ ನಿರೂಪಿಸುವುದುಂ ಕೇಳ್ದು ತತ್ವಭಾವನೆಯಂ ಪರಿಭಾವಿಸುತ್ತುಮಿರಲದುವೆ ವೈರಾಗ್ಯಹೇತುವಾಗೆ ಸಂಸಾರಶರೀರಭೋಗ ವಿರಕ್ತನಾಗಿ ತನ್ನ ರಾಜ್ಯಮಂ ಧನದೇವಂಗೆ ಕೊಟ್ಟು

ಕಂ || ಒಡಲಂ ಸಂಸೃತಿಲತಿಕೆಯ
ಮಡಿಲಂ ಸಂಸಾರದುಃಖಲಹರಿಕೆಗಳ ಪೆ
ರ್ಗಡಲಂ ಸುಖಮುಖನಿದ್ರೆಯ
ವೊಡಲಂ ಬಿಡಲಱಿಯದಂಗೆ ನಿರ್ವೃತಿಯುಂಟೇ            ೭

ವ || ಎಂದು ಸಂಸಾರಭೀರುತ್ವದಿಂ ಸಂಸಾರಭೀರುಗಳುಮಪ್ಪ ಸಾಸಿರ್ವರರ ಸುಮಕ್ಕಳ್ವೆರಸು ದೀಕ್ಷೆಯಂ ಕೆಯ್ಕೊಂಡು

ಮ || ಜಿನನಂ ನಮ್ರಮರಾಸುರೇಂದ್ರಜಿನನಂ ದುರ್ವಾರಮಾರಪ್ರಭಂ
ಜನನಂ ಶಾಶ್ವತ ವಿಶ್ವತತ್ವಮನನಂ ಮಾಂಗಲ್ಯಕೈವಲ್ಯಲೋ
ಚನನಂ ಸದ್ವಿನತೋಪಶಾಂತಮನನಂ ಮುಕ್ತ್ಯಂಗನಾಲೋಚನಾಂ
ಜನನಂ ತಾಳ್ದಿದನಾತ್ಮಹೃತ್ಕಮಳದೊಳ್ ಯೋಗೀಂದ್ರವೃಂದಾರಕಂ          ೮

ಕಂ || ನೆಱೆ ನೃಪತಿ ದೀಕ್ಷೆಗೊಂಡೊಡೆ
ಜಱೆಗೊಂಡಂ ಗೂಡುಗೊಂಡನಾರ್ತಂಗೊಂಡಂ
ಮಱೆಗೊಂಡನೊತ್ತುಗೊಂಡಂ
ಪೇಱೆತೇಂ ಸ್ಮರನಸ್ತಕಾಂಡನಪಕೋದಂಡಂ     ೯

ವ || ಅಂತು ದೀಕ್ಷೆಯಂ ಕೆಯ್ಕೊಂಡು ಗ್ರಾಮ ನಗರ ಖೇಡ ಖರ್ವಡ ಮಡಂಬಾದಿಗಳಂ ವಿಹಾರಿಸುತ್ತುಂ ಚಿರಕಾಲಮಿರ್ದುಯೇಕಾದಶಾಂಗಧರಂ ಷೋಡಶ ಭಾವನೆಗಳಿಂ ತೀರ್ಥಕರಪುಣ್ಯಮಂ ಕಟ್ಟಿ ತದನಂತರದೊಳಾರಾಧನಾವಿಧಿಯಿಂ ಮುಡಿಪಿ ವಿಂಶತಿ ಸಾಗರೋಪಮಾನಾಯುಷ್ಯನುಂ ಮೂಱುಮೊೞನರೆನಿಡಿಯನುಮಾಗಿ

ಕಂ || ಪ್ರಾಣತಕಲ್ಪದೊಳತುಳ
ಪ್ರಾಣತ ಸುರರಾಜನಾಗಿ ಪಂಚಮಪೃಥ್ವೀ
ಪ್ರಾಣಾವಧಿಬೋಧದಿನ
ಕ್ಷೂಣತರಾರಣವಿಮಾನದೊಳ್ ಸುಖಮಿರ್ದಂ   ೧೦

ವ || ಅನ್ನೆಗಮಿತ್ತಲ್ ಜಂಬೂದ್ವೀಪಲಕ್ಷ್ಮಿಗೆ ವಿಲಾಸೋಪಕರಣಮೆನಿಸಿರ್ಪ

ಮ || ಸದಯಾರತ್ನಕಂಡದೊಳ್ ಭರತಧಾತ್ರೀಖಂಡದೊಳ್ ರಂಜಿಸಿ
ರ್ಪುದು ಕಾಶೀವಿಷಯಂ ಮನೋಜವಿಷಯಾರಮ್ಯಂ ಜಗತ್ಕಾಮ್ಯಮಂ
ತದು ಪೃಥ್ವೀತಿಳಕಂ ಕ್ಷಮಾಕಟಕಮುರ್ವೀಕಾಂಚಿ ವಿಶ್ವಂಭರಾ
ವಿದಿತೋತ್ತಂಸಮಿಳಾವತಂಸಮವನೀಹಾರಂ ಮಹೀನೂಪುರಂ       ೧೧

ಮ.ಸ್ರ || ನವರತ್ನೋತ್ಪತ್ತಿಯಿಂ ಬೆಟ್ಟುಗಳಖಿಳಕುಜೋತ್ಪತ್ತಿಯ ಕಾಡುಗಳ್ ಕೈ
ರವ ಕಂಜೋತ್ಪತ್ತಿಯಿಂ ಸಿಂಧುಗಳನಘಜನೋತ್ಪತ್ತಿಯಿಂದೂರ್ಗಳಂಗೋ
ದ್ಭವ ಬೀಜೋತ್ಪತ್ತಿಯಿಂ ಭೋಗಿಗಳಖಿಳ ಫಳೋತ್ಪತ್ತಿಯಿಂ ಕೆಯ್ವೊಲಂಗಳ್
ಧ್ರುವಸತೋದೃತ್ತಿಯಿಂ ಕ್ಷತ್ರಿಯರೆಸೆದು ಸುಖೋತ್ಪತ್ತಿಯಂ ಬೀಱುತಿರ್ಕುಂ  ೧೨

ಕಂ || ಪ್ರಕಟಿಸುವುವಖಿಳಧಾನ್ಯ
ಪ್ರಕರಂಗಳ್ ಕೆಲದ ಪೊಲದ ಸಿರಿಯಂ ಜನತಾ
ಸುಕೃತಂ ಬೆಳೆವಂತಿರೆ ಬೆಳೆ
ದಕೃಷ್ಟಪಚ್ಯಂಗಳತುಳಫಳ ರುಚ್ಯಂಗಳ್         ೧೩

ಚಂ || ಕಳಮವನಕ್ಕೆ ಬಂದೆಱಪ ಕೀರದೆಱಂಕೆಯ ಗಾಳಿಯಿಂ ಶ್ರಮಂ
ಗಳೆದಪೆವೆಂದು ನಿಂದು ನೆವದಿಂ ಪಥಿಕರ್ ಗಿಳಿ ಸೋವ ಪಾಮರೀ
ಕುಳಮನಗಲ್ದು ಪೋಗಲಣಮಾಱದೆ ಸೋಲ್ತೆಳೆಸಿರ್ಪರಾ ಲಸ
ಲ್ಲಳನೆಯರಂಗಮೇಂ ಸ್ಮರವಿಳಾಸಕಳಾಪಮೊ ವಜ್ರಲೇಪಮೋ     ೧೪

ವ || ಮತ್ತಮಲ್ಲಿ

ಮ.ಸ್ರ || ಸಕಳೋದ್ಯಾನಂಗಳೊಳ್ ಸಂತತಸರಳಫಳವ್ರಾತದಿಂ ಸೇವ್ಯಮಲ್ಲ
ಲ್ಲಿ ಕರಂ ಖರ್ಜೂರವೃಂದಂ ಕ್ರಮುಕಸಮಿತಿ ನೀಪವ್ರಜಂ ಬೀಜಪೂರ
ಪ್ರಕರಂ ನಾರಂಗಸಂಘಂ ಕದಳಿಸಮುದಯಂ ನಾಳಿಕೇರಾವನೀಭೂ
ನಿಕರಂ ಚೂತೋತ್ಕರಂ ದಾಡಿಮತತಿ ಪನಸಶ್ರೇಣಿ ಜಂಬೀರಜಾಳಮ            ೧೫

ಚಂ || ಎನಸುಮಶೋಕಭಾಗಿವನಮುಂ ಜನಮುಂ ಸುಮನಶ್ಶಿಳೀಮುಖಾ
ಸನ ಮದನಾನುಷಂಗಿ ವನಮುಂ ಜನಮುಂ ಸುಮನೋವಿಳಾಸನೂ
ತನತಿಲಕಾವಿಶೋಭಿ ವನಮುಂ ಜನಮುಂ ಕಮಳಾಕರಾವಲಂ
ಬನ ಜನಿತಾರ್ದ್ರಭಾವಮಹಿತಂ ವನಮುಂ ಜನಮುಂ ತದುರ್ವಿಯೊಳ್          ೧೬

ನಯವಿದರೆಲ್ಲಮಲ್ಲಿಯೆ ಕಳಾನ್ವಿತರಲ್ಲಿಯೆ ಪುಣ್ಯವಂತರ
ಲ್ಲಿಯೆ ಸಿರಿವಂತರಲ್ಲಿಯೆ ಸುರೂಪಿಗಳಲ್ಲಿಯೆ ದಾನಶೂರರ
ಲ್ಲಿಯೆ ರಣಶೂರರಲ್ಲಿಯೆ ವಿಭೋಗಿಗಳಲ್ಲಿಯೆ ಚಾಗಿವೃಂದವ
ಲ್ಲಿಯೆ ಎನೆ ಸಾರಮೆಂಬಿನಗಮಾ ಮಹಿ ಪೋಲ್ವುದು ಭೋಗಭೂಮಿಯಂ   ೧೭

ವ || ಅಂತೆನಿಸಿ

ಉ || ಕೂಡೆ ಸಮಸ್ತವಸ್ತು ಶತಸಾರಸಮೃದ್ಧಿಯಿನೊಪ್ಪುತಿರ್ಪುದಾ
ನಾಡು ದಿವಕ್ಕೆ ತೋಡು ಕುಸುಮೇಷುಗೆ ಬೀಡು ವೃಷದ್ವಿಪಕ್ಕೆ ತಾ
ಯ್ಗಾಡು ನಯಕ್ಕೆ ಪಾಡು ವಿಭವಕ್ಕಮರ್ದೂಡು ಸುಖಾಮೃತಕ್ಕೆ ನೀ
ರ್ಗೋಡು ತಮಕ್ಕೆ ನೀಡು ನಯನಕ್ಕೆಳದಿಂಗಳ ಕಾಡಿದೆಂಬಿನಂ         ೧೮

ಶಾ || ಆ ನಾಡೆಂಬ ಸರೋವರಕ್ಕೆ ವಿಕಸತ್ಪಂಕೇಜಮೆಂಬಂತೆ ಲ
ಕ್ಷ್ಮೀನೀಡಂ ಭುವನೋನ್ನತಂ ಸುವಿಧಿಜನ್ಮಾವಾಸಮುದ್ಯದ್ಗುಣ
ಸ್ಥಾನಂ ಶಶ್ವದಿನಪ್ರತಾಪಮುದಿತಂ ದೋಷಾಕರದ್ವೇಷಿ ನಿ
ತ್ಯಾನಂದಂ ಕವಿರಾಜಹಂಸರುಚಿರಂ ಕಾಕಂದಿನಾಮಂ ಪುರಂ            ೧೯

ಹರಿಣೀ || ಅದಱ ಬಹಿರುದ್ಯಾನಂ ನಾನಾ ಕುಜಾತನಿಕೇತನಂ
ಮದವದಳಿನೀಗಾನಸ್ಥಾನಂ ಸದಾನಿಲವಾರಣಾ
ಭ್ಯುದಯವಿಪಿನಂ ಮಲ್ಲೀವಲ್ಲೀನಟೀನಟನಾಂಗಣಂ
ಮದನಕದನಕ್ರೀಡಾನೀಡಂ ವಿಯೋಗಿಭಯಂಕರಂ            ೨೦

ಕಂ || ವನರಾಶಿಯೊಳಗೆ ಬೆಳೆದೆಸೆ
ವನೇಕ ವಿದ್ರುಮದ ಲತೆಯ ಪೊಂಪುೞಿಯವೊಲಾ
ವನರಾಶಿಯೊಳಗೆ ಬೆಳೆದೆಸೆ
ವನೇಕ ವಿದ್ರುಮದ ಲತೆಯ ಪೊಂಪುೞಿ ರಯ್ಯಂ            ೨೧

ವ || ಮತ್ತಮಲ್ಲಿ ಮನಸಿಜನಬಿಲ್ಲಬೀಜದಿಂ ಬೆಳೆಯದಿಕ್ಷುದಂಡಮಿಲ್ಲ ಪಂಚಬಾಣಕ್ಕೆ ತಕ್ಕ ಕುಸುಮಶರಮಂ ಬೆಸಲೆಯಾಗದ ಮಲ್ಲೀವಲ್ಲರಿಗಳಿಲ್ಲ ಹರಿಸುತಂಗೆ ಗಿರಿದುರ್ಗಮಾಗಿ ಪಾಳಿಸದ ಕೃತಕಶೈಲಮಿಲ್ಲ ಪದ್ಮಾಸನಸರಸೀದಳನರಸುತನದಿಂದಾ ಕ್ರಮಿಸದಬ್ಜಿನಿಗಳಿಲ್ಲ ದಿನಕರನ ಕರದ ಕಮಳದೊಡವುಟ್ಟದ ಕಮಳವನಂಗಳಿಲ್ಲ ವಸಂತಸಖಿಯರ ನಖನಿಕರಮಂ ನೆನೆಯಿಸದ ಕೇದಗೆಯಿಲ್ಲ ಪಗೆಯನೆನಸುಂ ತುಂಬಿಗಳಂ ಪಲುಂಬಿಸದ ಸಂಪಗೆಗಳಿಲ್ಲ ಮಂದಾರಮಹೀಜಮಂ ನಿಂದಿಸದ ಮಾಕಂದಮಿಲ್ಲ ನನೆವಿಲ್ಲ ಪೞಯಿಗೆಗೆ ತಕ್ಕ ಸುೞಿದಳಿರನೊಳಪೊಯ್ದು ಮಿಸುಗದಶೋಕಮಿಲ್ಲ ಕಾಮಕಾಮಿನಿಯರ ಕಡೆಗಣ್ಣ ನೋಟದಿಂ ಪುಳಕಿಸದ ತಿಳಕಮಿಲ್ಲ ವನದೇವತಾನಯನಾಂಶು ಕ್ಷೀರರಸನಿಷೇಕದಿಂ ಮುಕ್ಕುಳಿಸದ ವಕುಳಮಿಲ್ಲ ಮಧುವಧುವನಪ್ಪಿ ತಳ್ವಿನಂ ಕುಸುಮಿಸದ ಕುರವಕಂಗಳಿಲ್ಲ ಅಗ್ನಿಶಾಪವರೆಯಾಗದರಗಿಳಿಗಳಿಲ್ಲ ಶಂಬರಾರಿಯ ಕರ್ವುವಿಲ್ಲಿನ ಮೌರ್ವಿಯಾಗದಳಿಮಾಲೆಯ ಝಂಕಾರಮಿಲ್ಲ ವಿರಂಚನಂಚೆಯಂ ಪಳಂಚಲೆಯದಂಚೆಯಿಲ್ಲ ಕುಮಾರನ ಮಯೂರಮಂ ಕೂರಿಸದ ಸೋಗೆವೆಣ್ಣಿಲ್ಲ ರತಿಯಕೃತಕಾಚಳಂಗಳೊಪ್ಪಮನದಿರ್ಪದ ಕೃತಕಾಚಳಂಗಳಿಲ್ಲದಲ್ಲದೆಯುಂ

ಕಂ || ಭೂರಮಣಿಯ ಶೃಂಗಾರಾ
ಗಾರಮಿದೆನೆ ವಿರಹಿಜನಕೆ ಮದನನ ಕಾರಾ
ಗಾರಮಿದೆನೆ ಬಗೆಗೊಳ್ವುವು
ಹಾರಿದ್ರಕ ಜೀರಕಾರ್ದ್ರಕೇಕ್ಷುವನಂಗಳ್            ೨೨

ವ || ಮತ್ತಮುತ್ತರಳ ಜಳಚರಾನೀಕಂಗಳೆನಿಸುವ ತಟಾಕಂಗಳುಂ ಸಲ್ಲಲಿತ ಮೃದುಮೃಣಾಳೆ ದಂಡಂಗಳೆನಿಪ ಕಮಲಷಂಡಂಗಳುಂ ವಿರಹಿಜನಭೀಕರಂಗಳೆನಿಸುವ ಕುಮುದಾಕರಂಗಳುಮ ಅವಗಾಹಿತಪಥಿಕಜನಮನಕರುಣಿಗಳೆನಿಪ ಪುಷ್ಕರಿಣಿಗಳುಂ ವಿಮಳರತ್ನಸೋಪಾನಕಳಾಪಂಗಳೆನಿಪ ಕೂಪಂಗಳುಂ ಸರಸಸಾರಸಕಳಾಪಿಗಳೆನಿಪ ವಾಪಿಗಳುಂ ವನವನಿತೆಯ ದುಕೂಲದಂಚೆಯೆನಿಪ ಬೆಂಚೆಗಳುಂ ಸಂತತಸಂತೃಪ್ತಗೋಕುಲಶ್ರೇಣಿಗಳೆನಿಪ್ಪ ದ್ರೋಣಿಗಳುಂ ಮದನರಾಜ ವಿಜಯತಂತ್ರಂಗಳೆನಿಪ ಘಟೀಯತ್ರಂಗಳುಂ ನದೀಲತಾಂಗಿಯ ಮೇಗಾಲ್ಗಳೆನಿಪ್ಪ ಪರಿಕಾಲ್ಗಳಂ ಅನಂಗಶೃಂಗಾರಲೀಲೆಗಳೆನಿಪ್ಪ ಪಾನೀಯಶಾಲೆಗಳುಂ ಅಧಿಕಸೌಗಂಧಕೋಟಿಗಳೆನಿಪ್ಪ ಪುಷ್ಪವಾಟಿಗಳುಂ ಪರಿಮಳಿತಮಂದಪವನಂಗಳೆನಿಪು ಪವನಂಗಳುಂ ಪೌರಜನಮನೋಭಿರಾಮಂಗಳೆನಿಸುವಾರಾಮಂಗಳುಮ ಆಶ್ರಿತಜನಕ್ಕಶೋಕ ನಿಳಯಮೆನಿಸಿದ ಸತ್ರನಿಳಯಂಗಳುಂ ವಿವಿಧಲೋಕವಿಶ್ರ ಮಣಸುಖಪರಿಣತಂಗಳೆನಿಪ ಬೀಡುದಾಣಂಗಳುಂ ಸಂಚಾರಿತತುರಗಪರಿಮಳಗ್ರಾಹ್ಯಾಳಿಗಳೆನಿಪ ಬಾಹ್ಯಾಳಿಗಳುಂ ಅನುದಿನವಿನೋದಿತಾನೇಕ ಕರಿಗಳೆನಿಸುವಾನೆವಱಿಗಳುಂ ಸತತಾಭ್ಯಾಸನಿರತ ಜನಾನುಗಾಮಿ ಗಳೆನಿಪ್ಪಾಯುಧಶ್ರಮಭೂಮಿಗಳುಂ ಬೀರಸಿರಿಯ ಬಿಂಕದ ಬಳಗಂಗಳೆನಿಸುವವಂ ಕಂಗಳುಂ ವಿವಿಧ ಗೋಕುಲಶ್ರೇಷ್ಠಂಗಳೆನಿಪ ಗೋಷ್ಠಂಗಳುಂ ತನಗನೂನಶೋಭೆಯಂ ಪಡೆಯೆ

ಕಂ || ಅಪರಿಮಿತಪೌರಕಳಕಳ
ಮಪೇತಬಾಳಾಪ್ರಪಂಚಮತಿವಿಶ್ರುತಮಿಂ
ತುಪಶಲ್ಯಂ ವಿರಹಿಗಳೆರ್ದೆ
ಗುಪಶಲ್ಯಮಿದೆನಿಸಿ ಸಂತತಂ ಸೊಗಯಿಸುಗುಂ   ೨೩

ವ || ಅದಕ್ಕನತಿದೂರಮಾಗಿ

ಚಂ || ಜಲವಿಹಗೀಸಹಸ್ರವಿರುತಂ ಮರುತಂ ಮರುತಂಗೆ ಕಂಪನೀ
ವಲರ್ಗಳಿನೊಪ್ಪೆ ವಾತಚಳಿತಂ ಲುಳಿತಂ ವಳಿತಮ್ಮೊಳುಣ್ಮಿ ನಿ
ಚ್ಚಲುವೆಸೆದತ್ತು ಮತ್ಸ್ಯಮಕರಂ ಸುಕರಂ ಮಕರಂದರೇಣುವಿಂ
ಕಲಸಿ ಮಹಾಂಬುಖಾತಿ ಮೆಱೆಗುಂ ನೆಱೆಗುಂ ಕಱೆಗುಂ ಸುಶೋಭೆಯಂ       ೨೪

ವ || ಅಲ್ಲಿಂದಮೊಳಗೆ

ಕಂ || ಪ್ರಾಕಾರಂ ಕಾಂಚನರಚಿ
ತಾಕಾರಂ ಲಬ್ಧಲಲಿತಮಣಿತತಿಶೀರ್ಷ
ಸ್ವೀಕಾರಂ ಧೃತವಿತತಪ
ತಾಕಾರಂಜಿತವಿಯತ್ತಳಂ ಸೊಗಯಿಸುಗುಮ     ೨೫

ಮ || ಬಲವದ್ವಜ್ರಮಹಾಕವಾಟಮೆರ್ದೆಗೞ್ಕಾಟಂ ರಿಪುಶ್ರೇಣಿಗ
ಟ್ಟಲೆಮಾಕಟ್ಟಳೆ ವೈರಿವೀರರಸಮಂ ತೂಗಲ್ ಚತುರ್ಗೋಪುರಂ
ವಿಲಸನ್ನೂಪುರವಾಳ್ವ ಭೂಭುಜದ ವೀರಶ್ರೀಗೆ ವಂಕಂ ಯುಗ
ಪ್ರಲಯಾತಂಕಮರಾತಿಗಳ್ಗೆನಿಸಿ ಚೆಲ್ವಾಕೋಟೆ ಸಂಗೀಕೃತಂ          ೨೬

ಚಂ || ತೊಳಗುವ ಪೊನ್ನ ಕೋಟೆಯ ಹರಿನ್ಮಣಿಗೋಪುರದಿಂದ್ರನೀಲದ
ಟ್ಟಳೆಗಳ ಪದ್ಮರಾಗ ಜಿನಗೇಹದ ಸೌಧಗೃಹಂಗಳಂಶುಮಂ
ಡಳಿ ನೆಗೆದಲ್ಲಿ ಮಂಡಳಿಸೆ ಪೌರಜನಕ್ಕೆಸೆಗುಂ ವಿತಾನಮಾ
ಗಳವಡೆ ಪಂಚವರ್ಣದಿನಜಂ ಸಮೆದಂಬರದಂತಿರಂಬರಂ   ೨೭

ವ || ಅದಱೊಳಗೆ

ಚಂ || ಪ್ರಣುತವನಪ್ರದೇಶದೊಳಗಿರ್ಪ ನಮೇರುವಿನಂತೆ ಪೊನ್ನ ಕೇ
ವಣದೊಳಗಿರ್ಪನರ್ಘ್ಯಮಣಿನಾಯಕದಂತೆ ವಿರಾಜಿಸಲ್ ನಭೋಂ
ಗಣದೊಳಗಿರ್ಪ ಪೂರ್ಣಶಶಿಮಂಡಳದಂತೆ ಸಮಸ್ತವಸ್ತುಲ
ಕ್ಷಣರಚಿತಾಭಿರಾಜಮೆಸೆದಿರ್ಪುದು ಬಂಧುರರಾಜಮಂದಿರಂ           ೨೮

ವ || ಅಲ್ಲಿ ಸಲ್ಲಲಿತಸಪ್ತತಳವಿಳಾಸಾವಾಸಮುಂ ವಿಚಿತ್ರಚಿತ್ರಕರ್ಮನಿರ್ಮಾಪಣ ಸೌಮ್ಯಮುಂ ಸಕಳರತ್ನಸಂದರ್ಭಸಾರಸೌಂದರ್ಯಸಂಪೂರ್ಣಮುಂ ಸಮಸ್ತವಸ್ತು ವಿಸ್ತೀರ್ಣ ಮುಮಾಗಿ

ಮ.ಸ್ರ || ನಿರುತಂ ಶುದ್ಧಾಂತಕಾಂತಾಗೃಹಪರಿವೃತಿಯಿಂ ಹಸ್ತಿಶಾಲಾದಿ ನಾನಾ
ಪರಿವಾರಾವಾಸವಿನ್ಯಾಸದಿನತುಳ ಪತಾಕಾವಳೀಲೀಲೆಯಿಂ ಭಾ
ಸುರಘಂಟಾಜಾಲದಿಂ ತೋರಣರುಚಿನಿಚಿತದ್ವಾರದಿಂ ರಂಜಿಸಿರ್ಕುಂ
ಕರುಮಾಡಂ ಕಾಂತಿನೀಡಂ ಮಣಿಮಯಕಳಶಾಪೀಡಮುತ್ತುಂಗಚೂಡಂ        ೨೯

ಚಂ || ಅಸುಗೆಯ ಕೆಂಪು ಬಾಳೆಯ ಪಸುರ್ಪು ತಮಾಳದ ಕರ್ಪು ಚಂಪಕ
ಪ್ರಸರದ ಪೊನ್ನಬಣ್ಣವರೆಗುಂದದ ಕುಂದದ ಬೆಳ್ಪು ಸುತ್ತಲುಂ
ಪಸರಿಸಿ ಪರ್ವಿ ಮಾಣಿಕದ ಪಚ್ಚೆಯ ನೀಳದ ಪೊನ್ನ ಬೆಳ್ಳಿಯಾ
ಪಸರದ ಚೆಲ್ವನಿಮ್ಮಡಿಸೆ ಭೂಪಗೃಹೋಪವನಂಗಳೊಪ್ಪುಗುಂ     ೩೦

ವ || ಅಂತು ಮಗಧವಿಷಯದಂತೆ ರಾಜಗೃಹಸನಾಥಮುಂ ನಾಟಕಪ್ರಕರದಂತೆ ವಿಪುಳವೀಥೀವಿಭಾಸಿಯುಂ ಮೇಘಪಟಳದಂತೆ ತಟಿಚ್ಛೃಂಗಾಟನಿರತಮುಂ ಸಿತಪಕ್ಷದಂತೆ ಚಂದ್ರಕಿರಣಾಂಕಿತ ನಿಶಾಂತಮುಂ ಗ್ರಹಗ್ರಾಮದಂತೆ ವಿತತಕೇತುಶತಶೋಭೆಯುಂ ಸೌಪರ್ಣನಂತೆ ಸಮಗ್ರ ಸಚಿವ ರಾಜಿತಪ್ರಭಾವಮುಂ ವಿಜಯಾರ್ಧಕುಧರದಂತೆ ಅಶೇಷವಿದ್ಯಾಧರನಿವಾಸಮುಂ ಮುಖಕಮಳದಂತೆ ಸದ್ವಿಜಕುಳೋಪಶೋಭಿಯುಂ ದಕ್ಷಿಣಕ್ಷೋಣಿಯಂತೆ ಭರತಜನ ಪರೀತಮುಂ ಚಾಪಗುಣದಂತೆ ಮಾರ್ಗಣನಿಷೇವ್ಯಮುಂ ಸಮುದ್ರದಂತೆ ಸಹಜಲಾವಣ್ಯಕಾಂತಾ ರಾಗರಮ್ಯಮುಂ ಪಾತಾಳದಂತೆ ಬಹುಭುಜಂಗಗಣಭೋಗಭಾಗಿಯುಂ ಪವನಪಥದಂತೆ ದಿವ್ಯಸಿಂಧುರವಿಭಾಸಿಯುಂ ಫಲಿತವನದಂತೆ ಬಹುರಾಜಿವಾಚಿತಮುಂ ಆದಿತ್ಯನಂತೆ ವಿವಿಧಗೋಕುಲಪ್ರಶಸ್ತಮುಂ ಶುದ್ಧಾಂತನಿಳಯದಂತನೇಕಮಹಿಷೀಸಮೇತಮುಂ ನೀಳಾಬ್ಜನಾಳದಂತೆ ನಿಷ್ಕಂಟಕಾತ್ಮಮುಂ ಸತ್ಪುರುಷನಂತೆ ನಿಷ್ಕಪಟಮಹಿಮಾವಳಂಬಿಯುಂ ಯಾವ್ಯದಿಶೆಯಂತೆ ಧರ್ಮಪ್ರಭಾವವಿಭಾವಿತಮುಮೆಂಬ ಮಹನೀಯಮಹಿಮೆಯಂ ತಳೆದು

ಮ.ಸ್ರ || ಅತಿಲಾವಣ್ಯಾಪ್ಸರಃಸಂತತಿಗೆ ನೆಲೆ ಸುರಾಸೇವಿತಾನಂತದಾನಾ
ನ್ವಿತ ಮಾಧುರ್ಯಾಪ್ಸರಃಸಂತತಿಗೆ ನೆಲೆ ಸದಾಸೇವಿತಾನಿಂದ್ರಜನ್ಮಾ
ತತಮಿಂದ್ರಾರಾಧ್ಯಜನ್ಮಪ್ರತಿತಮಹಿಮ ನಾನೆಂದು ಕಾಕಂದಿ ನಾಕೋ
ನ್ನತಿಯಂ ಪ್ರೋತ್ತುಂಗ ಸೌಧಾಂಶುಗಳೊಳೆ ನಗುವಂತಿರ್ಪುದಾಧಿಕ್ಯದಿಂದಂ    ೩೧

ಚಂ || ಅದು ಸಲೆ ರಾಜಶೂನ್ಯಮುರುರಾಜವಿಭಾಸಿಯೆನಾಂ ದ್ವಿಜಿಹ್ವಸಂ
ಪದಮದು ಸಜ್ಜನಕ್ಕೆ ಶರಣಾನವಿಚಾರಿನಿಪೃಷ್ಠಮಂತದಾಂ
ಸದಮಳಧರ್ಮಮಾರ್ಗಿಯೆನೆ ಭೋಗವತೀಪುರಮೆನ್ನನೆಂತು ಪೋ
ಲ್ವುದು ಚಿರಮೆಂದಧಃಕರಿಸುವಂತಿರೆ ಮೇಲೆನಿಸಿರ್ಪುದಾ ಪುರಂ       ೩೨

ಮ || ಅದನಾಳ್ವಂ ಶರಣಾರ್ಥಿಪಾರ್ಥಿವಕುಳಕ್ಷೋಣೀಧರಂ ಬೋಧಿದು
ರ್ಮದಭೂಪಾಳಮದಾಂಧಸಿಂಧುರದಳತ್ಕಂಠೀರವಂ ಧರ್ಮಸಂ
ಪದುದೀರ್ಣಾರ್ಣವಪೂರ್ಣಚಂದ್ರನೆನಿಸಿರ್ಪಿಕ್ಷ್ವಾಕುವಂಶೋನ್ನತಂ
ಸದಯಂ ಕಾಶ್ಯಪಗೋತ್ರ ಪೂಜ್ಯತಿಲಕಂ ಸುಗ್ರೀವಭೂಪಾಲಕಂ      ೩೩

ಕಂ || ಜಗಮೆಲಮೊಂದೆ ಕೊರಲೊಳ್
ಪೊಗೞೆ ಕೊರಲ್ಕೊಂಡು ಧರೆಯನುದ್ಧರಿಸಿ ಸಮಂ
ತಗಲದೆ ಸಿರಿಕೊರಲೊಪ್ಪಿರೆ
ಸೊಗಯಿಸಿ ಸುಗ್ರೀವವೆಸರೊಳಾ ನೃಪನೆಸೆದಂ    ೩೪

ಎರೆದರ್ಥಿಗೀವ ದಾನದೊ
ಳರಿವಂಶಮನಡಸಿ ಕಡಿವ ದಾನದೊಳಿಳೆಯಂ
ಪರಿಪಾಲಿಪ ದಾನದೊಳೇಂ
ಕರಿಯಂತಿರನಂತದಾನನೆನಿಸಿದನೊ ನೃಪಂ         ೩೫

ಆಹವದೊಳಹಿತನೃಪಸಂ
ದೋಹಮನಾಕ್ರಮಿಸೆ ಬೀರಸಿರಿ ಜಯಲಕ್ಷ್ಮೀ
ಗೇಹನೆನಿಸಿದ ಸುಕಂಠನ
ಬಾಹಾಬಳವಿಳೆಗೆ ಪೊಗೞಲೇನೆನ್ನಳವೇ           ೩೬

ವ || ಮತ್ತಂ

ಚಂ || ಅರಿಹರಿಣಂಗಳಂಗಜಱಿ ಬೆರ್ಚಿಸಿ ವೀರವಿರೋಧಿ ಗಂಧಸಿಂ
ಧುರಗಣಮಂ ಪಡಲ್ಪಡಿಸಿ ಕೂರಸಿದಾಡೆಯನೂನಸನ್ನಖೋ
ತ್ಕರಮಹಿತಾರುಣಾಂಬುರುಚಿ ಕೇಸರಮಾಗಿರೆ ವೀರಲಕ್ಷ್ಮಿಯೆಂ
ಬುರುವನಸಿಂಹಿಯಂ ಸ್ವಭುಜಪಂಜರದೊಳ್ ಸೆಱೆಗೆಯ್ದನಾ ನೃಪಂ          ೩೭

ಕಂ || ಘನಸಮಯದೊಳಗೆ ಘರ್ಮಂ
ಜನಿಯಿಸುವುದಾಗಳಂತೆ ಮೞೆಕೊಳ್ವವೊಲಾ
ಜನಪನ ಕೋಪದ ಬೞೆಯೊಳೆ
ಜನಿಯಿಸಿ ಜನಮಂ ಪ್ರಸಾದರಸವಾಱೆಸುಗುಂ   ೩೮

ಅನತರೊಳಂ ವಿನತರೊಳಂ
ಘನರಕ್ಷಾನಿಧಿಯಿನಧಿಕಸರಣಂ ತಾನೆಂ
ಬಿನಮೊದವಿಸಿ ಚೋದ್ಯಮಿದೆನೆ
ಮುನಿಸುಮನೊಸಗೆಯುಮನೊಡನೆ ಮೆಱೆವಂ ಭೂಪಂ   ೩೯

ವ || ಮತ್ತಮಾ ನೃಪಂ ಸಪ್ತಾಂಗಸಂಗಿಯಾಗಿಯುಂ ಸಪ್ತಾಂಗಸಂಗಿಯಲ್ತು ಸಕಳ ಭೂತಳೋಪಕಾರಿಯಾಗಿಯುಂ ಸಕಳ ಭೂತಳೋಪಕಾರಿಯಲ್ತು ಸಮದನಾಗಿಯುಂ ಸಮದನಲ್ತು ವಿಗ್ರಹಕರಾಳನಾಗಿಯುಂ ವಿಗ್ರಹಕರಾಳನಲ್ತು ಮಾರ್ಗಣಾನುರಕ್ತನಾಗಿಯುಂ ಮಾರ್ಗಣಾನುರಕ್ತನಲ್ತು ಪಟುಪ್ರತಾಪನಾಗಿಯುಂ ಪಟುಪ್ರತಾಪಿಯಲ್ತು ವಿದಗ್ಧ ಶರಣನಾಗಿಯುಂ ವಿದಗ್ಧ ಶರಣನಲ್ತು ಮಾನವಾಹಿತನಾಗಿಯುಂ ಮಾನವಾಹಿತನಲ್ತು ಮಾತಂಗಚರಿತನಾಗಿಯುಂ ಮಾತಂಗಚರಿತನಲ್ತು ಕ್ಷಿತಿನಾಥನಾಗಿಯುಂ ಕ್ಷಿತಿನಾಥನಲ್ತು ಅನಂಗಸುಭಗನಾಗಿಯುಂ ಅನಂಗಸುಭಗನಲ್ತು ಪರಾರ್ಥಪರನಾಗಿಯುಂ ಪರಾರ್ಥಪರನಲ್ತು ಅನೀತಿರಹಿತನಾಗಿಯುಂ ಅನೀತಿರಹಿತನಲ್ತು ವಿದಿತಭೀರುಭಾವನಾಗಿಯುಂ ವಿದಿತಭೀರುಭಾವನಲ್ತು ಎಂಬ ವಿರುದ್ಧಗುಣವನಳವಡಿಸಿ

ಕಂ || ಭ್ರಮರಹಿತಂ ಗುಣಸಹಿತಂ
ಸುಮನೋರಹಿತಂ ನಿಜಾಜ್ಞೆ ಪೂಮಾಲೆಯವೋ
ಲೆ ಮಹೀಶಮಸ್ತಕಾಗ್ರದೊ
ಳಮರ್ದಿರೆ ಸುಗ್ರೀವನೇನಳಂಕರಿಸಿದನೋ          ೪೦