ಸ್ರ || ಶ್ರೀ ವಾಚಾಸಿದ್ಧಿಗಂ ನಿರ್ಮಳನಿಖಿಳಕಳಾವೃದ್ಧಿಗಂ ಶುದ್ಧ ಚಾರಿ
ತ್ರಾವಷ್ಟಂಭಕ್ಕಮಾದರ್ಪಿತಮದನಲ ಸನ್ಮೂರ್ತಿಗಂ ತನ್ನೊಳೇಕೀ
ಭಾವಕ್ಕಂ ಮಚ್ಚಿ ಮುಕ್ತ್ಯಂಗನೆ ವರಿಯಿಸೆ ಸತ್ಸೌಖ್ಯದೊಳ್ ನಿಂದು ಸಂದಾ
ದೇವೇಂದ್ರಾಹೀಂದ್ರವಂದ್ಯಂ ಕುಡುಗೆ ನಮಗಭೀಷ್ಟಾರ್ಥಮಂ ಪಾರ್ಶ್ವನಾಥಂ           ೧

ಮ || ಪರಮಾಗಿರ್ದಘಮೆಯ್ದೆ ಪಿಂಗೆ ನಿಜಮಾದಾತ್ಮೀಯ ನಾನಾಗುಣಂ
ಪರಮಾನಂದದೊಳೊಂದಿ ನಿಂದಖಿಳಲೋಕೋತ್ತಂಸರಾಗಿರ್ದ ಸಿ
ದ್ಧರ ಸಂಯೋಗವಿದೇಹಸಿದ್ಧಿಗೆ ನಿಜಧ್ಯಾನಂ ದಲೆಂಬೀ ಪ್ರಸಿ
ದ್ಧರಸಂಖ್ಯರ್ ನಮಗೀಗೆ ಸಿದ್ಧರನಘಶ್ರೀಶುದ್ಧ ಸಂಸಿದ್ಧಿಯಂ     ೨

ಸ್ರ || ಮಾರಂಗಂ ಕಾಮಚಾರಂ ನಡೆಗಿಡೆ ವಿಷಯೇಭಂಗಳಂ ಗೆಲ್ದು ಪಂಚಾ
ಚಾರಂ ಪಂಚಾಸ್ಯದಂತೊಪ್ಪಿರೆ ಧೃತಿಗಿರಿಯಂ ಸಾರ್ದು ಶಿಷ್ಯರ್ಕಳಂ ಸ
ಚ್ಚಾರಿತ್ರೋದ್ಯುಕ್ತರಪ್ಪಂತಿರೆ ನಿಯಮಿಸುವಾಚಾರ್ಯರತ್ಯುನ್ನತರ್ ಸಂ
ಸಾರಾಂಭೋರಾಶಿಯಂ ದಾಂಟಿಸುಗೆ ಚರಣಸತ್ಪೋತದಿಂ ಖ್ಯಾತರೆಮ್ಮಂ     ೩

ಶಾ || ನ್ಯಾಯಂ ಸ್ಯಾತ್ಪದಯುಕ್ತ ಸೂಕ್ತಮಿತರೈಕಾಂತಪ್ರಯುಕ್ತೋಕ್ತಮ
ನ್ಯಾಯಂ ಭಾವಿಪೊಡೆಂದು ಭವ್ಯನಿಕರಕ್ಕಾದೇಯ ನಿಶ್ರೇಯಸೋ
ಪಾಯಂ ನೋೞ್ಪೊಡದೊಂದು ಸಂಸೃತಿಗಪಾಯಮ ನಂಬಿದಂದೆಂಬುಪಾ
ಧ್ಯಾಯರ್ ನ್ಯಾಯಪಥಾಗ್ರದೊಳ್ ನಿಱಿಸುಗೆಮ್ಮಂ ತಮ್ಮ ಕಾರುಣ್ಯದಿಂ    ೪

ಮ || ಸಮಪೀಯೂಷಕಳಾಭಿವೃದ್ಧಿತಮಮಂ ನಿರ್ಮೂಳನಂ ಮಾೞ್ಪ ವೃ
ತ್ತಮನುಜ್ಜೀವಿಸಿ ಸಜ್ಜನಪ್ರಕರ ಸಮ್ಯಗ್ಧರ್ಶನಶ್ರೀಯನೀ
ವ ಮುನಿಪ್ರಸ್ತುತಮಾದ ಸಾಧುನಿವಹೋದ್ಯಚ್ಚಂದ್ರಪಾದಂಗಳೆ
ಮ್ಮ ಮನೋನಿರ್ಮಳಕೈರವಕ್ಕೆ ಪಡೆಯುತ್ತಿರ್ಕೆಂದುಮಾನಂದಮಂ ೫

ಕಂ || ಮಳವಿರಹಿತರತಿಶಯಕೇ
ವಳಿಗಳ ನಿರತಿಶಯಪುಣ್ಯಸಂಪೂರ್ಣರ ಕೇ
ವಳಿಗಳ ವಿತತ ಶ್ರುತಕೇ
ವಳಿಗಳ ಚರಣಂಗಳೀಗೆ ಶಾಶ್ವತಸುಖಮಂ        ೬

ಉ || ಧಾತ್ರಿಗೆ ಚಕ್ರರತ್ನಮಧಿಪತ್ವಮನೀಶನೊಳೆಂತು ಮಾೞ್ಕುಮಂ
ತೀ ತ್ರಿಜಗತ್ಪತಿತ್ವಮುಮನಾತ್ಮನೊಳುದ್ಭವಿಪಂತೆ ಮಾೞ್ಪ ರ
ತ್ನ ತ್ರಯಮೆಮ್ಮ ಚಿತ್ತಗೃಹದೊಳ್ ನೆಲಸಿರ್ದು ಸಮೀಹಿತಾರ್ಥಮಂ
ಸೂತ್ರಿಸುತಿರ್ಕೆ ದುಷ್ಟದುರಿತಾರಿಸಮೂಹಮನೆಯ್ದೆ ತೂಳ್ದುತುಂ  ೭

ಉ || ಭಾವಿಸೆ ಕುಂಕುಮೋಪಮ ತನುಪ್ರಭೆ ಸೂಚಿಸೆ ರಾಗಸಾಗರ
ಶ್ರೀವಧುವೀಕೆಯೆಂದು ಪುರುಷಾರ್ಥಚತುಷ್ಟಯಮಂ ಪದಾನತ
ರ್ಗೀವುದನೆಯ್ದೆ ಸೂಚಿಸೆ ಚತುರ್ಭುಜಮೊಪ್ಪುವ ಪುಣ್ಯಮೂರ್ತಿ ಪ
ದ್ಮಾವತೀದೇವಿ ಮಾೞ್ಕೆಮಗೆ ಸೌಖ್ಯಸಮಾಗಮ ಧರ್ಮರಾಗಮಂ ೮

ಚಂ || ಅಗಣಿತ ಸಾಹಸೈಕನಿಧಿ ಸಜ್ಜನಪೂಜ್ಯ ಗುಣಪ್ರಕಾಶಕಂ
ಮಿಗೆ ಕಮಠೋಪಸರ್ಗಮನಡಂಗಿಸಿ ಪಾರ್ಶ್ವಜಿನಪ್ರಬೋಧಸಿ
ದ್ಧಿಗೆ ನೆರಮಾದ ಮಾೞ್ಕೆಯೊಳೆ ತಜ್ಜಿನನಾಥಕಥಾಪ್ರಬಂಧ ಸಿ
ದ್ಧಿಗೆ ನೆರಮಕ್ಕೆ ನಾಗಪತಿ ಮಾಡೆ ಮದೀಯಮನಃಪ್ರಸಕ್ತಿಯಂ       ೯

ಉ || ಶ್ರೀವಧು ವಿಶ್ವವಿಶ್ರುತಯಶೋವಧು ನಿರ್ವೃತಿಲಕ್ಷ್ಮಿಯೆಂಬಿವರ್
ಮೂವರುಮಾವಗಂ ವಿಶದವಾಗ್ವದು ಪೊರ್ದಿದಳಾತನಂ ಸಮಂ
ತಾವಗಮೋಲಗಿಪ್ಪರೆನಿಪಳ್ ಜಿನವಾಣಿಯೆನಿಪ್ಪ ಭಾರತೀ
ದೇವಿಯತಿಪ್ರಸನ್ನೆ ನೆಲಸಿರ್ಕೆ ಮದೀಯಮುಖಾರವಿಂದದೊಳ್      ೧೦

ಕಂ || ವಿರಚಿಸಿ ಕೃತಿಯೊಂದಂ ಕವಿ
ವರರೆನಿಸುವರೆಂದೊಡಪರಿಮಿತಮಂ ಶ್ರುತಮಂ
ವಿರಚಿಸಿದ ಗಣಧರರ್ ಕವಿ
ಪರಮೇಷ್ಠಿಗಳೆನಿಸಿ ನೆಗೞ್ವುದೊಂದಚ್ಚರಿಯೇ  ೧೧

ದುರಿತೋದ್ಭವಶಿಖಿಯಿಂದೊಗೆ
ದುರಿ ತಮ್ಮಂ ಪೊರ್ದದಂತು ಕಿಡೆ ಶಾಂತರಸಂ
ಕರಮೆಸೆಯೆ ಬುಧರ್ ಮುಕುಳಿತ
ಕರರೆಸೆದಿರೆ ಪೊಗೞ್ವ ಗುಣಿಗಳೀಗೆಮಗಱಿವಂ   ೧೨

ಅನುಪಮ ತತ್ವಾರ್ಥಂ ಪು
ಣ್ಯನಿಬಂಧನಮಪ್ಪುದೆಂತು ಮನಮನದೊಳ್ ನೆ
ಟ್ಟನೆ ನೆಲಸಿತಂತೆ ನೆಲಸಿ
ರ್ಕನಿಶಮುಮಾಸ್ವಾತಿಪಾದ ಯತಿಪಾದಯುಗಂ            ೧೩

ಬಿದಿರ ಪೊದರ್ ತೊಲೆಯೆನೆ ತೂ
ಗಿದೊಡಾ ಬಿದಿರಿಂ ಮುನಿಪ ಜಟಾಚಾರ್ಯರ ಧೈ
ರ್ಯದ ಪೆಂಪು ಗೆಲ್ದುದುಪಸ
ರ್ಗದಳುರ್ಕೆಯನೆನೆ ನೆಗೞ್ದು ಮಿಗೆ ಸೊಗಯಿಸಿದಂ           ೧೪

ಮುನಿರಾಜಹಂಸರೆನಿಸಿಯು
ಮನುಪಮಸುಚರಿತ್ರ ಕುಂದಕುಂದಾಚಾರ್ಯರ್
ಜಿನಚರಣದ್ವಂದ್ವಸ್ಮಿತ
ವನರುಹ ಷಟ್ಚರಣರೆನಿಪರೆನಗಿದು ಚಿತ್ರಂ        ೧೫

ಉ || ಜಿತ್ವರಶಾಸ್ತ್ರವೇದಿ ಗಮಕಿತ್ವಮುಮಂ ಪರವಾದಿಭೇದಿ ವಾ
ದಿತ್ವಮುಮಂ ರಸಾವಹ ಕವಿತ್ವಮುಮಂ ಬುಧಚಿತ್ತಹಾರಿ ವಾ
ಗ್ಮಿತ್ವಮುಮಂ ನೃಪಾಳಸಭೆ ಮಚ್ಚೆ ಸಮರ್ಥಿಸಿ ರಂಜಿಪಂ ಮಹಾ
ಸತ್ವ ಸಮಂತಭದ್ರನುರುಶೀಲಸಮುದ್ರನಿಳಾತಳಾಗ್ರದೊಳ್          ೧೬

ಕಂ || ನಿಷ್ಠಾಪರತ್ವದಿಂ ಪರ
ಮೇಷ್ಠಿಸ್ತವನಮನನೂನಮಂ ಮಾಡಿ ಗುಣ
ಜ್ಯೇಷ್ಠನೆನಿಸಿರ್ದ ಕವಿಪರ
ಮೇಷ್ಠಿ ಗುಣಸ್ತವನಮೆಮಗೆ ದಲ್ ಕರಣೀಯಂ ೧೭

ಮ || ಸಕಳೋರ್ವೀನುತ ಪೂಜ್ಯಪಾದಮುನಿಪಂ ತಾಂ ಪೇೞ್ದ ಕಲ್ಯಾಣಕಾ
ರಕದಿಂ ದೇಹದ ದೋಷಮಂ ವಿತತ ವಾಚಾದೋಷಮಂ ಶಬ್ದಸಾ
ಧಕಜೈನೇಂದ್ರದಿನೀ ಜಗಜ್ಜನದ ಮಿಥ್ಯಾದೋಷಮಂ ತತ್ತ್ವಬೋ
ಧಕ ತತ್ತ್ವಾರ್ಥದ ವೃತ್ತಿಯಿಂದೆ ಕಳೆದಂ ಕಾರುಣ್ಯದುಗ್ಧಾರ್ಣವಂ   ೧೮

ಮ || ಸುಕರಶ್ರೀನಯಶಾಸ್ತ್ರ ವಿಶ್ರುತ ವಚಶ್ಚಂದ್ರಾಂಶುವಿಂ ದುಃಖದಾ
ಯಕ ಮಿಥ್ಯಾತ್ವಕಳಂಕಮಂ ಕಿಡಿಸಿ ಸನ್ಮಾರ್ಗಪ್ರವೃತ್ತಿಪ್ರಭಾ
ವಕರಾಗಿರ್ದಕಳಂಕದೇವರಮಳಾತ್ಮೀಯಾಖ್ಯೆಯಂ ನನ್ನಿಮಾ
ಡಿ ಕವೀಂದ್ರಸ್ತುತರಾದರೀಗೆಮಗೆ ಸಮ್ಯಗ್ದರ್ಶನಪ್ರಾಪ್ತಿಯಂ         ೧೯

ಶಾ || ಶ್ರೀನಿಷ್ಪನ್ನ ಸಮಂತಭದ್ರತೆಯನೆಮ್ಮೊಳ್ ಮಾಡುತಿರ್ಕೊರ್ಮೆಯುಂ
ಜ್ಞಾನಾಂಬೋಧಿ ಸಮಂತಭದ್ರನಕಳಂಕಂ ನಿಷ್ಕಳಂಕತ್ವಮಂ
ನಾನಾವಾದಿ ವಿಭೇದಿ ಭೂವಿದಿತವಿದ್ಯಾನಂದಮಂ ಹೃದ್ಯವಿ
ದ್ಯಾನಂದಪ್ರಭು ಪೂಜ್ಯಪಾದಮುನಿಪಂ ಸತ್ಪೂಜ್ಯಸಂಪತ್ತಿಯಂ   ೨೦

ಕಂ || ರತಿಪತಿಯಂ ಬೆದಱಿಪ ಸುಚ
ರಿತದಿಂದಂ ವೀರನೆನಿಸುಗಚ್ಚರಿ ಗಣಿತಾ
ನ್ವಿತಬುದ್ಧಿಯೆನಿಸಿ ಮತ್ತಗ
ಣಿತಬುದ್ಧಿಯೆನಿಪ್ಪನಿಳೆಗೆ ವೀರಾಚಾರ್ಯಂ      ೨೧

ಶುದ್ಧಾಂತರಂಗನಂ ವಾ
ಕ್ಸಿದ್ಧ ಶ್ರೀವೀರಸೇನಮುನಿಪೋತ್ತಮನಂ
ಸಿದ್ಧಾಂತಕರ್ತೃವೆನೆ ಸಮ
ಯೋದ್ಧಾರಕನೆಂದು ಪೊಗೞದಿರ್ಪರೆ ವಿಬುಧರ್            ೨೨

ಉ || ಶ್ರೀನರಪಾಳಮೌಳಿಮಣಿದೀಪ್ತಿವೃತಾಂಘ್ರಿ ನಖಾಳಿಕಾಂತಿಸಂ
ತಾನರನನ್ವಿತಾರ್ಥ ರಸಭಾವ ವಿಶೇಷಕವಿತ್ವರಂಜಿತಾ
ಸ್ಥಾನರನಾರು ಬಣ್ಣಿಸರೊ ಶೀಲನಿಧಾನರನತ್ಯನೂನ ವಿ
ಜ್ಞಾನರನಾತ್ತವೃತ್ತ ಜಿನಸೇನರನಾರ್ಯಗಣಪ್ರಧಾನರಂ    ೨೩

ಮ || ವಿನುತ ಶ್ರೀಗುಣಭದ್ರದೇವಮುನಿಪರ್ ದುರ್ಮೋಹಸಂದೋಹನಾ
ಶನಮಂ ಧರ್ಮಗುಣಪ್ರಕಾಶನಮನಾತ್ಮೀಯೋದ್ಘ ವೈರಾಗ್ಯಶಾ
ಸನಮಂ ಸಚ್ಚರಿತ ಪ್ರಭಾಸನಮನತ್ಯಾನಂದದಾತ್ಮಾನುಶಾ
ಸನಮಂ ಪೇೞ್ದು ವಿನೇಯರಲ್ಲಿ ಮೆಱೆದರ್ ತಮ್ಮೊಂದು ಕಾರುಣ್ಯಮಂ     ೨೪

ಶಾ || ಸ್ವಾದ್ವಾದಾಚಳಸಿಂಹನೆನ್ನ ತಪದೋಪನ್ಯಾಸದಿಂ ನ್ಯಾಯಸಂ
ಪದ್ಮಜ್ರಾಭನಖಂಗಳಿಂ ಮಹಿಭೃದುದ್ಘಾಸ್ಥಾನದೊಳ್ ನಿಚ್ಚಲುಂ
ವಿದ್ವಿಷ್ಟಾಖಿಳ ದುಷ್ಟವಾದಿಗಜಮಂ ನಿರ್ಭೇದನಂ ಮಾಡುವಂ
ಸ್ಯಾದ್ವಾದೀಶ್ವರಸೋಮದೇವಮುನಿಪಂ ಸಾಹಿತ್ಯವಿದ್ಯಾಧಿಪಂ    ೨೫

ಕಂ || ಶ್ರೀವಾದಿರಾಜದೇವವ
ಚೋವಿನ್ಯಾಸಕ್ಕೆ ಭಾರತೀಶನೆ ದೊರೆಯೆಂ
ದೀ ವಸುಧೆ ನುಡಿವುದೆನೆ ಪರಿ
ಭಾವಿಸುವಂದವರ ವಿದ್ಯೆ ಬುಧಜನಹೃದ್ಯಂ     ೨೬

ಸೂತ್ರಿಸಿದ ಸದುತ್ತರತ
ರ್ಕತ್ರಯದಿಂ ವಾದಿರಾಜನೆನಿಸಿದ ತೆಱದಿಂ
ಚಿತ್ರಮೆನೆ ವಿರಚಿಸಿದ ಕಾ
ವ್ಯತ್ರಯದಿಂ ಸುಕವಿರಾಜನಾ ಮುನಿರಾಜಂ       ೨೭

ಯಾವಂತಿ ಗಣಿತಭಾಸ್ಕರ
ಪಾವನಮುನಿಚಂದ್ರನುದಯನಮಳಿನ ಗುಣಿ ಸ
ದ್ಭಾವ ದಿಗಂಬರಕುಳರಂ
ಭಾವಿಸೆ ಬೆಳಗುವುದು ಯುಕ್ತಮವನೀವ್ಯಕ್ತಂ    ೨೮

ಶ್ರುತದಿಂದಮುಪಾರ್ಜಿಸಿ ವಿ
ಶ್ರುತಕೀರ್ತಿಯನಾತ್ಮನಾಮವಂ ಶ್ರುತಕೀರ್ತಿ
ವ್ರತಿ ಕಟಕೋಪಾಧ್ಯಾಯಂ
ಪ್ರತೀತಮೆನೆ ಮೆಱೆದನಿಳೆಗೆ ಸಿದ್ಧಾಂತೇಶಂ       ೨೯

ಅತನುಪಟುಭಟನನದಟಲೆ
ದತನು ತಪಃಶ್ರೀಯನಾಂತ ತತ್ಪತಿಮೋಹ
ಕ್ಷಿತಿಪತಿಯುಮನಲೆದವರಂ
ಸ್ತುತಿಯಿಸರಾರ್ ನೇಮಿಚಂದ್ರಭಟ್ಟಾರಕರಂ     ೩೦

ಭಾವತಪದಿಂದೆ ಬೆದಱಿಸಿ
ಭಾವಜನಂ ಪರಮ ಸಂಯಮೋಪಾಯಮನು
ಜ್ಜೀವಿಸಿದ ವಾಸುಪೂಜ್ಯ
ತ್ರೈವಿದ್ಯಪದಂಗಳಲ್ತೆ ಲೋಕನುತಂಗಳ್          ೩೧

ಏವೊಗೞ್ವೆ ವಾಸುಪೂಜ್ಯ
ತ್ರೈವಿದ್ಯರ ವಿದ್ಯೆಯೇೞ್ಗೆಯಂ ಶ್ರುತಕೀರ್ತಿ
ತ್ರೈವಿದ್ಯರ್ ಸಕಳಕಳಾ
ಕೋವಿದರೆನೆ ನೆಗೞ್ದ ಗುಣಿಗಳವರ್ಗಳ ಶಿಷ್ಯರ್  ೩೨

ಉ || ಮುಂ ತಿಳಿವಂದು ಚಕ್ರಧರನಂದನರಾದವರುಂಟೆ ಚಕ್ರಿಗಳ್
ಕಂತುವಿರೋಧಿ ಜಾವಳಿಗೆಯಾ ಮುನಿಚಂದ್ರಮಹೀಪ್ರಸಿದ್ಧಸೈ
ದ್ಧಾಂತಿಕಚಕ್ರವರ್ತಿಯ ಸುತಂ ಬುಧವಂದಿತ ವೀರನಂದಿ ಸೈ
ದ್ಧಾಂತಿಕಚಕ್ರವರ್ತಿಯೆನಿಪಂದದಿನಂದಿಳೆ ಕೂರ್ತು ಕೀರ್ತಿಕುಂ          ೩೩

ಭ್ರಾಂತಿವಿಹೀನಜೈನಸಮಯಪ್ರವಿಕಾಸನದಿಂ ಸುಖಪ್ರದಾ
ನಂತಗುಣಾಬ್ಧಿಧರ್ಮರಥವರ್ತನದಿಂ ಬುಧಸಸ್ಯವೃದ್ಧಿಯಿಂ
ಕಾಂತಸುಬೋಧದಿಂ ನಿಜಸಮಾಖ್ಯೆಯನನ್ವಿತಮಾಗೆ ಮಾಡಿ ಸೈ
ದ್ಧಾಂತಿಕನೇಮಿಚಂದ್ರಮುನಿಪಂ ಪೆಸರ್ವೆತ್ತನಶೇಷಧಾತ್ರಿಯೊಳ್     ೩೪

ಕಂ || ಶ್ರೀಶಾರದೇಂದುಕೈರವ
ಕಾಶಸಮುತ್ಪುಲ್ಲ ಮಲ್ಲಿಕಾಸಂಕುಳಸಂ
ಕಾಶವಿಶುದ್ಧಯಶೋಗಂ
ಗೇಶಂ ಮುನಿ ನೇಮಿಚಂದ್ರಸೈದ್ಧಾಂತೇಶಂ       ೩೫

ಉ || ಆರ ಗಭೀರಮುಂ ತನಗೆ ಕಾಲ್ವೊೞೆಯೆಂಬಸಮಾಸ್ತ್ರನಂ ಬಲಾ
ತ್ಕಾರದೆ ಗೆಲ್ದು ಸಂದುದಯಚಂದ್ರಮುನೀಂದ್ರನೊಳೊಪ್ಪದೇ ಬಲಾ
ತ್ಕಾರಗಣಾಗ್ರಗಣ್ಯನೆನಿಪುನ್ನತಿಯೆಂದು ತಪಶ್ಚಯೋರ್ವರಾ
ವಾರಿಧಿಯಂ ದಯಾತುಳಸುಧಾನಿಧಿಯಂ ಪೊಗೞ್ಗುಂ ಜಗಜ್ಜನಂ  ೩೬

ಕಂ || ನಿರತಿಶಯಪಾದಸೇವಾ
ಪರಿಣತ ಪುಣ್ಯಾಂಬುರಾಶಿಯಂ ಪೆರ್ಚಿಪುದ
ಚ್ಚರಿಯಲ್ತು ರಾಗದಿಂದಂ
ಪೊರೆವನಿದಚ್ಚರಿ ದಲುದಯಚಂದ್ರಮುನೀಂದ್ರಂ           ೩೭

ಉ || ಚಾರುಚರಿತ್ರನಿರ್ಮಳಿನದರ್ಶನ ವಿಶ್ರುತಬೋಧಶಸ್ತ್ರದಿಂ
ಮಾರನನಿಕ್ಕಿ ಮಾರನುಮೋಹಮನಿಕ್ಕಿ ವಿಮೋಹನಾದ ಭ
ಟ್ಟಾರಕ ನೇಮಿಚಂದ್ರಮುನಿಪಾದಚಕೋರಕ ವಾಸುಪೂಜ್ಯ ಭ
ಟ್ಟಾರಕರಂಘ್ರಿಪದ್ಮಮಿರೆ ಮಾನಸಮೇಂ ನಯದೊಪ್ಪದಿರ್ಪುದೇ   ೩೮

ಕಂ || ಏನಿದು ಚೋದ್ಯಮೊ ಬುಧರು
ರ್ವ್ವೀನುತ ಮಧ್ಯಾಹ್ನ ಕಲ್ಪವೃಕ್ಷಮಿದೆಂಗುಂ
ಭೂನಾಥ ಪೂಜ್ಯ ಪರಮ ತ
ಪೋನಿಧಿಯಂ ವಾಸುಪೂಜ್ಯಭಟ್ಟಾರಕನಂ       ೩೯

ಮ || ಸುಮತಾಭಾವನೆ ತನ್ನೊಳೊಪ್ಪೆ ಪರಮ ಧ್ಯಾನಾರ್ಥಿಯಷ್ಟೋಪವಾ
ಸಮುಮಂ ಪಕ್ಷ ದಿನೋಪವಾಸಮುಮನಂತೋರಂತೆ ಮಾಸೋಪವಾಸ
ಮುಮಂ ಮಾಡಿಯುಮೇನೊ ಮತ್ತತನುಪೀಡಾಪ್ರೌಢಿಯಿಂ ರಾಮಚಂ
ದ್ರಮುನೀಂದ್ರಂ ದೊರೆವೆತ್ತನಚ್ಚರಿ ಕರಂ ಚಾರಿತ್ರಚಕ್ರೇಶ್ವರಂ        ೪೦

ಮ.ಸ್ರ || ನಿಯತಂ ಯೋಗೀಂದ್ರರೇಕೇಂದ್ರಿಯಮುಮನೆನಸುಂ ಬಾಧಿಸಲ್ಕಾಗದೆಂಬು
ಕ್ತಿಯನೆಲ್ಲಾ ಶಿಷ್ಯವರ್ಗಕ್ಕನುಪಮ ದಯೆಯಿಂ ಶಿಕ್ಷಿಪರ್ ತಾಮೆ ಪಂಚೇಂ
ದ್ರಿಯಮಂ ನಿರ್ವಂದದಿಂ ನಿಗ್ರಹಿಸಿಯುಮತುಳ ಸ್ವಾಂತರಾಂತರ್ ಕರಂ ಶಾಂ
ತಿಯನಾ ಶ್ರೀನಂದಿಯೋಗೀಶ್ವರರವರ ಚರಿತ್ರಂ ಧರಿತ್ರೀವಿಚಿತ್ರಂ     ೪೧

ಕಂ || ಶ್ರೀನಂದಿಮುನೀಂದ್ರಂ ಸು
ಜ್ಞಾನತಪೋವಿಭವದಿಂದೆ ಭಟ್ಟಾರಕನೆಂ
ಬೀ ನಾಮಕ್ಕನುಗುಣಮೆನೆ
ನಾನಾ ನೃಪಪೂಜ್ಯನೆನಿಸಿ ನೆಗೞ್ದಂ ಜಗದೊಳ್  ೪೨

ಶುಭಚಂದ್ರತ್ರೈವಿದ್ಯರ
ನಭಿನವ ಗಣಧರರನಖಿಳ ಶಾಸ್ತ್ರಜ್ಞತೆಯಿಂ
ತ್ರಿಭುವನವಿದ್ಯಾಗುರುಗಳ
ನಭಿವರ್ಣಿಪ ಭಕ್ತಿವೆತ್ತ ಕೃತಿಯೆ ಕೃತಾರ್ಥಂ       ೪೩

ಸೂರಿಪ್ರಭು ಶುಭಚಂದ್ರೋ
ದಾರಯಶಶ್ಚಂದ್ರದೀಪ್ತಿ ಸತ್ಪರ್ಥದೊಳ್ ವಿ
ಸ್ತಾರಿಸುತಿರೆ ಪರದರ್ಶನ
ಮೋರಂತಿರೆ ಮುಂದುಗಿಡುವುದೆನಗಿದು ಚಿತ್ರಂ   ೪೪

ಉ || ಸ್ತ್ರೀಜಿತರಾರುಮಂ ತೊಱೆವರೆಂಬಿದು ನಿಶ್ಚಯಮಾದುದೀ ಜಗ
ತ್ಪೂಜಿತವೃತ್ತದಿಂ ಕುಮುದಚಂದ್ರಮಹಾಮುನಿನಾಥನಿಂತತಿ
ಸ್ತ್ರೀಜಿತನಾಗಿ ಮುಂ ನಿಜಪರಿಗ್ರಹಮಂ ತೊಱೆದೆಯ್ದೆ ತೂಳ್ದಿರಂ
ರಾಜಿಸುತಿರ್ಪ ತನ್ನ ಹೃದಯಂಗಮನಂ ವಿದಿತಾಂಗಜನ್ಮನಂ         ೪೫

ಕಂ || ಅತಿಚಿತ್ರತರಂ ಗುಪ್ತಿ
ತ್ರಿತಯಮುಮಿರೆ ಕುಮುದಚಂದ್ರಯತಿಪತಿ ತತ್ತ್ವಾ
ನ್ವಿತಮತಿಯೆೞ್ಚತ್ತಿರೆಯುಂ
ರತಿವೆರಸಿರದೋಡಿದಂ ಮನೋಜಂ ಮನದಿಂ    ೪೬

ಚಾರುಗುಣನಿಳಯರಂ ವಿ
ಸ್ತಾರಿಯಶಃಪೂತಭುವನವಳಯರನೊಲವಿಂ
ದಾರಭಿವರ್ಣಿಸರಯನಿ
ಸ್ತಾರಕರಂ ಕಮಳಸೇನಭಟ್ಟಾರಕರಂ   ೪೭

ಮ.ಸ್ರ || ಅಕಳಂಕಾಕಾರಜಾತಂ ತ್ರಿಭುವನವಳವ್ಯಾಪ್ತಬೋಧಪ್ರಭೂತಂ
ಸಕಳ ತ್ಯಾಗಪ್ರಸೂತಂ ವಿಧುವಿಹರತೆಯಂ ತಾಳ್ದಿ ಮೂಲೋಕಮಂ ಸು
ತ್ತಿ ಕರಂ ಸರ್ವೋರ್ವರಾ ಸಂಸ್ತುತಮೆನಿಸಿದುದೇಂ ಚೋದ್ಯಮೋ ಮಾಧವೇಂದು
ಪ್ರಕಟತ್ಯ್ರೆವಿದ್ಯವಿದ್ಯಾಧಿಪ ವಿಶದಯಶಂ ಶಂಭುಹಾಸಪ್ರಕಾಶಂ      ೪೮

ಮ || ಎನಸುಂ ಕಾಮನಧರ್ಮಮಂ ನಿಜಸುಧರ್ಮಂ ಬಾಣಮಂ ಬಾಣಮಂ
ತೆನೆ ಬಿಲ್ಲೊಳ್ಗುಣಮಂ ಗುಣಂ ಕಿಡಿಸೆ ಪೆಂಪಂ ತಾಳ್ದಿದಂ ಭಾವಜಾ
ತನನಾ ಭಾವತಪಃಪ್ರಭಾವಮನಿಶಂ ನಿರ್ಮೂಳನಂ ಮಾಡೆ ಭೂ
ವಿನುತಂ ಮಾಧವಚಂದ್ರದಿವ್ಯಮುನಿಪಂ ತ್ರೈವಿದ್ಯವಿದ್ಯಾಧಿಪಂ     ೪೯

ಉ || ಚಾರುಚರಿತ್ರಕೈರವವಿಕಾಸಿ ವಿನಿರ್ಮಳವರ್ತಿಚಂದ್ರಿಕಾ
ಶ್ರೀರುಚಿ ಸತ್ಪಥೋಚಿತಕಳಾವಿಳಸಚ್ಛುಭಚಂದ್ರದೇವಭ
ಟ್ಟಾರಕಗೌರವೋನ್ನತಿ ಶರತ್ಸಮಯರ್ ಸಮಯಾಬ್ಧಿಚಂದ್ರಭ
ಟ್ಟಾರಕುರೊಪ್ಪುವರ್ ಲಲಿತಕೀರ್ತಿಗಳಾಶ್ರಿತಪುಣ್ಯಮೂರ್ತಿಗಳ್    ೫೦

ಶಾ || ಶ್ರೀನಂದಿವ್ರತಿನಾಥಶಿಷ್ಯತಿಳಕಂ ಪ್ರಸ್ತುತ್ಯಸಾಹಿತ್ಯ ವಿ
ದ್ಯಾನಿಸ್ತಾರಕದೇವನಂದಿಪದವಿದ್ಯಾಪ್ರೌಢಿಯಿಂ ಭೂನುತಾ
ಖ್ಯಾನ ಶ್ರೀಪ್ರಭುಪೂಜ್ಯಪಾದನೆನಿಪಂದಾಶ್ಚರ್ಯಮೇಂ ತರ್ಕವಿ
ದ್ಯಾನಂದಪ್ರಭುವಾದನಚ್ಚರಿ ಕರಂ ತ್ರೈವಿದ್ಯಚಕ್ರೇಶ್ವರಂ ೫೧

ಸ್ರ || ಏವೇೞ್ವೆಂ ವಾಕ್ಯವಜ್ರಾಂಕುಶವಿದಳಿತವಾದಿದ್ವಿಪಂ ಸುಪ್ರಮೇಯ
ಪ್ರಾವೀಣ್ಯಶ್ರೀಯನಾರ್ಯಪ್ರತತಿ ಪೋಗೞ್ವಿನಂ ತಾಳ್ದಿಯುಂ ಮತ್ತಮೇಯ
ಪ್ರಾವೀಣ್ಯಶ್ರೀಯನಾಂತಂ ಸ್ವಪರಸಮಯತರ್ಕಂಗಳೊಳ್ ಭಾವಸೇನ
ತ್ರೈವಿದ್ಯಂ ಚೋದ್ಯಮಾದ್ಯಪ್ರತಿಮಪೃಥುಯಶಂ ಹೃದ್ಯಸಾಹಿತ್ಯವಿದ್ಯಂ    ೫೨

ಉ || ತತ್ತ್ವವಿಚಾರಮಾಚರಣಮುಂ ಸುಕವಿತ್ವಮತಿಪ್ರಸನ್ನ ವಾ
ಗ್ಮಿತ್ವಮನಪ್ರತರ್ಕ್ಯ ಸುವಿತರ್ಕ ವಿವೇಕ ವಿಶೇಷಬುದ್ಧಿ ವಾ
ದಿತ್ವಮನೊಂದಿ ನಿಂದೆಸೆಯೆ ಸಜ್ಜನವಂದಿತ ವೀರನಂದಿ ಸಾ
ಧುತ್ವಮನೊಂದಿದಂ ಕುಮುದಚಂದ್ರಮುನೀಂದ್ರ ಸಮಗ್ರನಂದನಂ  ೫೩

ಕಂ || ಕ್ಷೋಣಿನುತ ಧರ್ಮಜಾತ
ಪ್ರೀಣಂ ಗುಣಧಾರಿ ಧೀರನತಿಶಯಲಕ್ಷಾ
ಕ್ಷೂಣಂ ಪರಹೃದಯಂಗಮ
ಬಾಣಾಳಿ ಧನಂಜಯಂ ಧನಂಜಯನೆ ವಲಂ      ೫೪

ಭೂಪಾಳವಂದ್ಯಚರಿತಂ
ಭೂಪಾಳಾಸ್ಥಾನಹೃದ್ಯವಿದ್ಯಾಸ್ಥಾನಂ
ಜ್ಞಾಪಿಸಿದನಿಂತು ಕೃತಿಕುಲ
ದೀಪಂ ಭೂಪಾಳದೇವನೆಂಬೀ ಪೆಸರಂ ೫೫

ಶ್ರೀಗುಣಗರ್ಭಂ ಕೀರ್ತಿಕ
ಳಾಗರ್ಭಂ ಸೂಕ್ತಿಸಂಗತಾಧ್ಯಾತ್ಮಂ ಜೈ
ನಾಗಮಗರ್ಭಮಿದೆನೆ ಜಗ
ತೀಗುರು ನೆಗೞ್ದಂ ಪ್ರಸನ್ನಗುಣನಾಚಣ್ಣಂ      ೫೬

ನವರಸದೊಳಮಿತರ ರಸ
ಕ್ಕವಕಾಶಂ ಗುಡದೆ ತಳೆಯೆ ಶಾಂತರಸಮನಂ
ತವಿಚಳನಮವುಂ ಕರೆಗ
ಣ್ಮುವುವೆನೆ ಪೃಥುಹೃದಯನಾದನೆಂತಾಚಣ್ಣಂ            ೫೭

ಗುಣವರ್ಮಂ ಸತ್ಕವಿತಾ
ಗುಣಮುಂ ಭವ್ಯತ್ವಗುಣಮುಮಾತ್ಮಯಶೋರ
ಕ್ಷಣಮೆನೆ ಮೆಱೆದಂ ಪೆಸರಂ
ಪ್ರಣೂತಮೆನೆ ಪೇೞ್ದು ನೇಮಿನಾಥಾನ್ವಯಮಂ           ೫೮

ಚದುರರೆನಿಸಿದರ ಚಿತ್ತ
ಕ್ಕಿದು ಪೊಸತೆನಿಸಿರ್ದ ರೀತಿಯಂ ನಿರ್ವಹಿಪ
ಗ್ಗದ ಬಲ್ಮೆ ಬಗೆಯೆ ತನಗ
ಲ್ಲದೆ ಪೆಱರ್ಗಿಲ್ಲೆನಿಪ ಪೊನ್ನನಂ ಪೊಗೞದರಾರ್         ೫೯

ಚತುರಚಮತ್ಕೃತಿಯುದ್ಘಾ
ಟಿತರಮಣೀಯಂ ದಿಟಕ್ಕೆ ಪಂಪನ ಕೃತಿ ಮಿ
ಕ್ಕಿತರರ ಕೃತಿತತಿಯವಿಜಾ
ರಿತ ರಮಣೀಯಂ ವಿದಗ್ಧರಂ ಮೆಚ್ಚಿಕುಮೇ    ೬೦

ರತ್ನಕೃತಿಪದಕಮಂ ನುತ
ನೂತ್ನಾರ್ಥವ್ಯಕ್ತಿಯುಕ್ತಮಂ ಸತ್ಕೃತಿಯಂ
ಯತ್ನದೆ ಸುಜನರ್ ವಿಜಿತಸ
ಪತ್ನಮನತಿಪೃಥುಳಹೃದಯದೊಳ್ ತಳೆಯದರಾರ್     ೬೧

ವಾಸ್ತವಭಕ್ತಿಯುತಂ ರೂ
ಪಸ್ತವನ ಮಣಿಪ್ರವಾಳಮಂ ಜಿನನಾಸ್ಥಾ
ನಸ್ತವನಮನೊದವಿಸಿ ಭುವ
ನಸ್ತುತನಾದಗ್ಗಳಂಗಮಗ್ಗಳರೊಳರೇ ೬೨

ಇಂಪೆಸೆಯೆ ವಿಪಂಚಿಯ ದನಿ
ಯಂ ಪೋಲ್ತಿರೆ ಸುಕರ ಸರಸ ಸೂಕ್ತಿವಿಳಾಸಂ
ಪಂಪನೆ ನುಡಿದಂತಭಿನವ
ಪಂಪನೆ ನುಡಿದಂ ಬೞಿಕ್ಕೆ ಕಳಕಂಠನವೋಲ್    ೬೩

ಘನಕಲೆಗೆ ಮಾಣಿಕಮನೀ
ವನ ತೆಱದಿಂ ಪೆಱರ್ಗೆ ಕಾವ್ಯಮಂ ಕುಡದೆ ಯಶೋ
ಧನಕ್ಕೆ ಬುಧಜನಕೆ ಕೊಟ್ಟೊ
ರ್ವನೆ ಸುಜನೋತ್ತಂಸನೆನಿಸಿದಂ ಬೊಪ್ಪಣ್ಣಂ   ೬೪

ಅಂಹಮನಪಹರಿಸುವ ಗುಣ
ಸಂಹತಿಯಂ ತಳೆದ ಕೇಶಿಯಣ್ಣಂ ಬುಧವೃಂ
ದಂ ಪೊಗೞೆ ಸುಕೃತಸಿಂಹಂ
ಸಿಂಹಪ್ರಾಯೋಪಗಮನಮಂ ವಿರಚಿಸಿದಂ        ೬೫

ಕಾಮನ ಬಾಣಕ್ಕಂ ಕವಿ
ಕಾಮನ ಬಾಣಕ್ಕಮಿಲ್ಲ ಭೇದಂ ಸುಮನೋ
ರಾಮತೆಯಿಂ ಸ್ತನಶತಕೋ
ದ್ದಾಮತೆಯಿಂ ಭುವನಮಂ ವಶಂ ಮಾೞ್ಪುದಱಿಂ        ೬೬

ಜಿನಚಂದ್ರಸ್ತವನದೆ ಪಾ
ವನಮೆನಿಸುವ ಸೂಕ್ತಿ ಕೀರ್ತಿದೀಪಿಕೆಗುಜ್ಜೀ
ವನಕರಮೆನೆ ಕೌತುಕಮಂ
ಜನಿಯಿಸುಗುಂ ಕವಿಗಳೊಳಗೆ ನೆಗೞ್ದಗ್ಗಳನಾ    ೬೭

ಸುಮನೋಧರ್ಮಗುಣಂಗಳೊ
ಳಮರ್ದಮರ್ದಂ ಕಱೆವ ನೇಮಿಚಂದ್ರನ ಬಾಣಂ
ಭ್ರಮರಹಿತಂ ಮೃದುಹೃದಯಂ
ಗಮಮೆನಿಪುದಿದಾವ ಕೌತುಕಂ ಬುಧಜನದಾ     ೬೮

ವಕ್ರೋಕ್ತಿಭವಯಶೋಜ್ಯೋ
ತ್ಸ್ನಾಕ್ರಾಂತಪರಾವಲೇಪಮಿರಂ ಧರಣೀ
ಚಕ್ರದೊಳತಿಚಿತ್ರಂ ಕವಿ
ಚಕ್ರಪ್ರಿಯನೆನಿಸಿ ಬಾಳಚಂದ್ರಂ ನೆಗೞ್ದಂ           ೬೯

ಶ್ರುತಿನೂತ್ನಾರ್ಥೋತ್ಪಾದನ
ಚತುರತೆಯುಂ ವಿವಿಧಕೀರ್ತಿಲಕ್ಷ್ಮೀಸತಿಯಂ
ಕ್ಷಿತಿತಳದೊಳ್ ಕಾವ್ಯಕಳಾಪಂ
ಚತುರ್ಮುಖಂಗೆಸೆವ ವಾಸುದೇವಂಗರಿದೇ        ೭೦