ಕಂ || ಶ್ರೀಸಕಳಮಂಗಳಾನಕ
ಮಾಸಮಯದೊಳೆಸೆಯಲೆಸಗಿದಂ ಮುಕ್ತಿರಮಾ
ವಾಸಂಗರ್ಘ್ಯಾದಿಯನು
ರ್ವೀಸೇವ್ಯಂ ಪ್ರಭುಗುಣಾಬ್ಜಿನೀ ಕಳಹಂಸಂ     ೧

ವ || ಅನಂತರಮಾ ಪ್ರಥಮ ದ್ವಿತೀಯ ಕಲ್ಪಾಮರೇಂದ್ರರಿರ್ವರುಂ ಸರ್ವಜ್ಞನು ಭಯಪಾರ್ಶ್ವದೊಳುತ್ತರದಕ್ಷಿಣಾಭಿಮುಖರಾಗಿ ಸಜ್ಜೀಕೃತಮಜ್ಜನೋಪಕರಣರಿರ್ದು ಮಜ್ಜನಕುಜ್ಜುಗಂಗೆಯ್ದು

ಉ || ಮಂಗಳತೂರ್ಯಕೋಟಿ ಮೊೞಗುತ್ತಿರೆ ಮಂಗಳಗೇಯಮುಣ್ಮೆ ದೇ
ವಾಂಗನೆಯರ್ ಪಲರ್ ಪರಸೆ ಮಂಗಳವಾಕ್ಯಮನೋದೆ ಪಾಠಕರ್
ಮಂಗಳಮಂ ಸಮಂತು ಕಳಶೋದ್ಧರಣೋಚಿತ ಮಂತ್ರಪೂರ್ವಕಂ
ಪೊಂಗಳಸಂಗಳಂ ನೆಗಪಿ ಸಪ್ರಣವೋಚ್ಚರಣಾನನಾಂಬುಜರ್        ೨

ಕಂ || ಬೇರ್ವರಿವ ಪುಣ್ಯವಿಟಪಿಗೆ
ನೀರ್ವೊಯ್ವಂತನಘಜಿನನ ಮಸ್ತಕದೊಳ್ ಪೊ
ಯ್ದರ್ ವಿಪುಳ ಹರ್ಷದಿಂ ನಲಿ
ದಾರ್ವಮರದ ಬೊಬ್ಬೆ ಮಿಗೆ ಪಯೋಧಾರೆಗಳಂ            ೩

ಜಯ ಜಯ ಜಿತದುರಿತ ಜಗ
ತ್ರಯವಲ್ಲಭ ದೇವದೇವ ಪರಮೇಷ್ಠಿ ದಯಾ
ಶ್ರಯ ಶರಣಮೆಂಬ ಸುರಕೋ
ಟಿಯ ಕಳಕಳಮೆಸೆದುದೆಸೆಯ ನೊಸಲೊಳ್ ಕೆಯ್ಗಳ್      ೪

ಮ || ಇದು ಮುಕ್ತಿಪ್ರಮದಾಸ್ವಯಂವರದ ಮಲ್ಲೀಮಾಲೆ ಮೇಣಿಂತಿದಾ
ಸುದತೀಕೇಕರ ಕಾಂತಿಜಾಳಮಿದು ಮೇಣ್ ತತ್ಕಾಂತೆ ಲಂಚಂಗುಡಲ್
ಪದೆಪಿಂದಟ್ಟಿದ ಹಾರಯಷ್ಟಿ ಸುಭಗಂಗೀ ಸ್ವಾಮಿಗೆಂಬಂತಿರೊ
ಪ್ಪಿದುದಿಂದ್ರಚ್ಯುತದುಗ್ಧಧಾರೆ ಸವನಪ್ರಾರಂಭ ಸಂರಂಭದೊಳ್   ೫

ವ || ಆನಂತರಂ ಶಂಖ ಕಾಹಳಾ ಮೃದಂಗ ಝಲ್ಲರೀ ದುಂದುಭಿಗಭೀರ ತೂರ್ಯಸ್ವನಂಗಳುಮಖರ್ವ ಗೀರ್ವಾಣ ಗಂಧರ್ವಗಾಯಿನೀ ಶ್ರುತಿಸುಖಾಧೇಯ ಗೇಯನಾ ದಂಗಳುಮನೇಕ ಲೋಕಪಾಳಕನಿಕಾಯ ಜಯಜಯಾನಂದಸಂದರ್ಭಿತಾಶೀರವಂಗಳು ಮಶೇಷಾನಿಮಿಷಮುಖ ಮುಖರೀಜನಿತಜಿನಗುಣಸ್ತವಾಲಾಪಕೋಳಾಹಳಂಗಳುಂ ಬಧಿರಿತ ಬ್ರಹ್ಮಾಂಡದಿಙ್ಮಂಡಳಂಗಳಾಗೆ

ಮ || ವರ ಪದ್ಮಾದಿ ಪವಿತ್ರತೀರ್ಥಸರಸೀ ಪುಣ್ಯೋದಕಸ್ನಾನಮುಂ
ನಿರವದ್ಯಾಮಳ ನಾಳಿಕೇರಫಲ ತೋಯಸ್ನಾನಮುಂ ನಿರ್ಮಳೇ
ಕ್ಷುರಸಸ್ನಾನಮುಮತ್ಯುದಾರ ಸಹಕಾರೋದ್ಯತ್ಘಳವ್ರಾತಜಾ
ತರಸಸ್ನಾನಮುಮಾಯ್ತುಪಾತ್ತ ಸುರಸೇನಾಚಕ್ರನಿಂ ಶಕ್ರನಿಂ          ೬

ವ || ಅನಂತರಂ

ಕಂ || ಪಂಚಮಜಲನಿಧಿಯಲ್ಲದೆ
ಪಂಚಮಗತಿಪತಿಯ ಸವನಕೆಯ್ದಿಸವು ಪಯಃ
ಸಂಚಯಮನುೞಿದ ತೊಱೆ ಕೆಱೆ
ಬೆಂಚೆ ಕೊಳಂ ಕೂಪಮೆಂದು ಹರಿ ಬೆಸಸುವುದುಂ            ೭

ಎಱವೆಸನಾದೊಡಮಕ್ಕೆಮ
ಗಱವೆಸನೆನೆ ಜಿನನ ಸವನಮಿಂದ್ರನ ಬೆಸನಿ
ರ್ತೆಱದಿಂ ನಿಷ್ಫಲಮಲ್ತೆಮ
ಗುಱುವುದಿದೆಂದುಲಿದು ನಲಿದು ದೇವಸಮೂಹಂ          ೮

ಅಮೃತಾರ್ಣವಮನೆ ಮೇರುವಿ
ನಮೇಖಳಾವನಕೆ ತಿರ್ದಿ ಪರಿಯಿಸಲಿಂದ್ರಂ
ಸಮೆದೇಱೆವೊಲೆರಡೋಳಿಯೆ
ನಿಮಿರ್ದೆಸೆದುದು ಹಾರಿಗೊಂಡು ಕೇರ್ಗಟ್ಟಿದವೋಲ್      ೯

ಮ || ಚಳಬಾಹಾಲಹರೀಸಹಸ್ರಲಲಿತಂ ದೃಙ್ಮೀನಸಂತಾನಸಂ
ವಳಿತಂ ಕುಂಭಕುಳಾದ್ರಿಕೋಟಿಕಳಿತಂ ಭೂಷಾಮಣಿಶ್ರೇಣಿರು
ಙ್ಮಿಳಿತಂ ಸ್ಫಾರಗಭೀರಘೋಷಲುಳಿತಂ ದೇವಾಳಿ ಕಣ್ಗೊಪ್ಪಿತಾ
ಗಳಿದೊಂದಿಂಗಡಲಿಂಗಡಲ್ಗೆ ಬಳವಂದೊತ್ತೊಯ್ಕನೆಂಬನ್ನೆಗಂ      ೧೦

ವ || ಆ ಪ್ರಸ್ತಾವದೊಳ್

ಮ.ಸ್ರ || ಅತುಳ ಸ್ವಚ್ಛಾಂಬುವಿಂ ವಾಃಕಣಗಣಸಿತಶೇಷಾಕ್ಷತ ಶ್ರೇಣಿಯಿಂ ಫೇ
ನತತಿಶ್ರೀಖಂಡಪಿಂಡದ್ರವದಿನಖಿಳ ರತ್ನಾಂಶುಪುಷ್ಪಂಗಳಿಂ ನಿ
ರ್ವೃತಿನಾಥಂಗರ್ಘ್ಯಮಂ ತತ್ಸವನವಿಧಿಯೊಳೀವತುಂಟಾಯ್ತುತ್ತರಂಗಾ
ಯತಹಸ್ತಂ ಸ್ತೋತ್ರಮಂತ್ರಸ್ವನವೆನಿಸೆ ಘನದ್ವಾನಮಂಭೋನಿಧಾನಂ         ೧೧

ಮ || ಭಗವನ್ಮಜ್ಜನಯೋಗ್ಯಮಾದ ಕಡಲೆನ್ನಂತಾವುದೆಂದುರ್ವಿ ಭೂ
ರಿಗಭೀರಸ್ವನದಿಂದೆ ಪೆರ್ಚಿ ನುಡಿವಂತಾ ಶುಕ್ತಿ ಮುಕ್ತಾಂಶುವಿಂ
ನಗುವಂತುನ್ಮುಖಪದ್ಮರಾಗರುಚಿಯಿಂ ರಾಗಾರ್ಥಮಾದಂತೆ ವೀ
ಚಿಗಳಿಂ ಕೆಯ್ನಿಱಿದಾಡುವಂತೆಸೆದುದೀ ಸುಸ್ನಿಗ್ಧ ದುಗ್ಧಾರ್ಣವಂ  ೧೨

ವ || ಮತ್ತಂ

ಚಂ || ಕವಿದು ನಿಳಿಂಪಕೋಟಿ ಮೊಗೆಯುತ್ತಿರೆ ಶಂಖದ ಬಳ್ಳಿ ತಳ್ತುದೋ
ಪವಳದ ಬಳ್ಳಿ ಪರ್ವಿದುದೊ ಪಾವಸೆಬಳ್ಳಿ ಪಗಿಲ್ತುದೋ ಸಮು
ದ್ರವನೆನೆ ಚಂದ್ರಕಾಂತಕಲಶಾಂಶುಗಳುಂ ಕಿಸುಗಲ್ಲ ಕರ್ಕರ
ಚ್ಛವಿಗಳುಮಶ್ಮಗರ್ಭಘಟರಶ್ಮಿಗಳುಂ ಪುದಿದಿರ್ದುವಬ್ಧಿಯಂ      ೧೩

ಕಂ || ತುಂಗಘಟಕೋಟಿಮೊಗೆಯೆ ತ
ರಂಗಪರಂಪರೆ ಪೊದೞ್ದು ನಿಮಿರ್ದುದು ಯುಕ್ತಂ
ಭಂಗಂ ನಿಮಿರ್ವುದು ಕಡಲೋಳ್
ಸಂಗತಮೆನೆ ಕುಂಭಸಂಭವ ವ್ಯತಿಕರದಿಂ           ೧೪

ಮ.ಸ್ರ || ಕಡಲೊಳ್ ನೀರ್ದರ್ಪುದಭ್ಯಾಸಿಗಳಿವು ನೆರವಕ್ಕೆಂದು ಶಕ್ರಂ ಬೆಸಂಬೇ
ೞ್ದೊಡೆ ನಾನಾವರ್ಣದಭ್ರಾವಳಿ ನೆರೆದು ನಿಜಾಧೀಶನಾದೇಶದಿಂ ತ
ಮ್ಮೊಡನಧ್ಯಕ್ಷಂ ಬರಲ್ಕೀ ನಡೆದಪುದೆನೆ ಚೆಲ್ವಾದವಾಕಾಶದೊಳ್ ನೇ
ರ್ಪಡೆ ದೇವರ್ ತರ್ಪ ನಾನಾಮಣಿಕನಕಘಟಂಗಳ್ ಪಯಃಪೂರಿತಂಗಳ್        ೧೫

ಮ || ಪಗೆಗೊಂಡಾಡದೆ ದೇವನಿರ್ದ ಸಭೆಯೊಳ್ ಕಾರುಣ್ಯಮಂ ವಜ್ರಿ ಮಾ
ಡುಗುವಾಂ ಸಂಧಿಪೊಡಿಂದಿನೀಪದನೆ ಲೇಸೆಂದಬ್ಧಿ ತನ್ನಾಶ್ರಿತಾ
ದ್ರಿಗಳಂ ಕಾಣಿಸಲಿಂದ್ರನಲ್ಲಿಗೆ ತರುತ್ತಿರ್ದಪ್ಪುದೆಂಬಂತೆ ಮೇ
ರುಗಿರೀಂದ್ರಾಗತ ದೇವಕೋಟಿ ಘಟಕೋಟೀಯೂಥಮೇನೊಪ್ಪಿತೋ         ೧೬

ಚಂ || ಸದಮಳಚಂದ್ರಕಾಂತಮಣಿಕುಂಭದ ರುಂದ್ರಮಹೇಂದ್ರನೀಲಕುಂ
ಭದ ನುತಶಾತಕುಂಭಮಯಕುಂಭದ ಮೊತ್ತದ ಮಾಲೆ ಲೀಲೆವೆ
ತ್ತುದು ಬಹುರಾಜರಾಹುರವಿಮಂಡಳ ಮಂಡಳಿ ನಣ್ಪುಗೊಂಡು ತಂ
ಡದೆ ನಡೆಗೊಂಡುದೀಗಳೆನೆ ನಿಂದಮರಾವಳಿ ನೀಡೆ ಹಾರಿಯೊಳ್     ೧೭

ವ || ಅದಲ್ಲದೆಯುಂ

ಮ || ಕೆಲರೋರೊರ್ವರೆ ಪೋಪ ಪೋಗಿ ಕಡಲಂ ಕೆಯ್ಕೊಳ್ವ ಕೆಯ್ಕೊಂಡು ತ
ಜ್ವಲಮಂ ತೀವುದ ತೀವಿ ಪೊಂಗೊಡನ ನಣ್ಪಿಂದೆತ್ತಿಕೊಳ್ವೆತ್ತಿಕೊಂ
ಡೊಲವಿಂ ಮೇರುಗೆ ಬರ್ಪ ಬಂದು ಮಘವಂಗೀವುತ್ತು ಮತ್ತಾಗಳಂ
ತೊಲೆದಲ್ಲಿಂ ಮಗುೞ್ವೊಂದು ದಂದುಗದಿನಾಟಂದರ್ ಮನೋವೇಗದಿಂ   ೧೮

ಚಂ || ಉದಧಿಯನೆಯ್ದುವಲ್ಲಿ ಮೊಗೆವಲ್ಲಿ ಘಟಂಗಳನೆತ್ತುವಲ್ಲಿ ನಿ
ಲ್ಲದೆ ಮಗುೞ್ವಲ್ಲಿ ಪೊತ್ತು ಪರಿವಲ್ಲಿ ಸುರಾದ್ರಿಯನೇಱುವಲ್ಲಿ ತಂ
ದಿದಿರೊಳಿಳೞಿಪ್ಪುವಲ್ಲಿ ಕುಡುವಲ್ಲಿ ಕೆಲರ್ ಮನದಿಂದೆ ಮುಂಚುವರ್
ತ್ರಿದಶಮಹೇಂದ್ರಜಾಲಮೆನೆ ತನ್ಮಯಮಾಗಿರೆ ರೂಪುದೋಱುತುಂ ೧೯

ಕಂ || ಎಸೆವಭವಸವನವಿಭವಮ
ನುಸಿರ್ದೇವಣ್ಣಿಪುದೊ ನೆಱೆಯೆ ಬಳೆದಪುದೆನಿಸಿ
ತ್ತೊಸೆದಡಕುವಮರರಿಂ ಕ್ಷೀ
ರಸಮುದ್ರಂ ದಧಿಸಮುದ್ರವಾಜ್ಯಸಮುದ್ರಂ     ೨೦

ಅಂತಮರಸೇನೆ ತಂದು ನಿ
ರಂತರಮೆನೆ ನೀಡೆ ಕನಕಘಟಕೋಟಿಯನೊ
ಲ್ದಾಂತನನಿತರ್ಕೆ ವನಿತೆ ಭು
ಜಾಂತರಮನಗುರ್ವಿನಿಂ ವಿಗುರ್ವಿಸೆ ಶಕ್ರಂ         ೨೧

ಚಂ || ತೊಳಗುವ ಜಂಘೆ ಜಂಘೆಗೆ ಮುಖಂ ಮುಖಶೋಭೆಗೆ ತಾರಹಾರಮು
ಜ್ವಳಮಣಿತೋರಣಕ್ಕೆ ಶಿಖೆ ತಾಂ ಶಿಖರಕ್ಕೆ ಚಳಾಂಚಳಂ ಧ್ವಜಾಂ
ಚಳಕೆಣೆಯಾಗೆ ಸತ್ಕಳಶವೃಂದಮನಾತ್ಮಭುಜಾಸಹಸ್ರದೊಳ್
ತಳೆದು ಸಹಸ್ರಕೂಟಜಿನಮಂದಿರದಂತೆಸೆದಂ ಪುರಂದರಂ   ೨೨

ವ || ಅಂತೆಸೆದು

ಕಂ || ನಿರ್ಭರಜಲವೃಷ್ಟಿಯನಾ
ವಿರ್ಭೂಷಣವಿದ್ಯುದುಜ್ವಳಂ ಪರ್ಜನ್ಯಂ
ಭೋರ್ಭೋರೆನೆ ಸುರಿಯಲ್ಕೆ ಜಿ
ನಾರ್ಭಕನೊದವಿದನಗಣ್ಯ ಪುಣ್ಯಕ್ಷೇತ್ರಂ          ೨೩

ವ || ಆಗಳಖಿಳ ಮಜ್ಜನೋಪಕರಣಸರಣಿಯರಪ್ಪ ಸುರಪುರಂಧ್ರಿಕಾಜನಪುರಸ್ಸರೆಯಾಗಿರ್ದು

ಉ || ಕೆಂದಳಿರೆನ್ನ ಕೆಂದಳಕೆ ಪೊಂಗೊಡನೆನ್ನ ಘನಸ್ತನಕ್ಕೆ ಚೆ
ಲ್ವಿಂದೆಣೆಯಾಗಲಾರ್ತಪುವೆ ನೋಡೆನುತುಂ ಪಡಿಗಟ್ಟಿ ತೋರ್ಪವೋಲ್
ಕೆಂದಳಂದಿಂದಮೆತ್ತಿ ಕುಚಕುಂಭದೊಳಾಂತು ವಿಳಾಸದಿಂ ಶಚೀ
ಸೌಂದರಿ ಪಲ್ಲವಾಂಜಿತಘಟಂಗಳಿನಿಂದ್ರನ ಕೆಯ್ಗೆ ನೀಡಿದಳ್         ೨೪

ಕಂ || ಪೊಂಗಳಸಂಗಳ ರುಚಿಯಿಂ
ಪಿಂಗಳರುಚಿವಡೆಯೆ ಪಾಲಧಾರೆ ಜಿನೇಂದ್ರಂ
ಗೇಂ ಗಳ ಘೃತಾಭಿಷೇಕದ
ಮಂಗಳಮಿದು ಮೊದಲೊಳೆನಿಸಲಾರ್ತುದೊ ಸುರರಿಂ      ೨೫

ಚಂ || ಪಳಿಕಿನ ಕುಂಭದಿಂ ಕುಳಿಶಿ ಪೊಯ್ವ ಪಯೋರಸಧಾರೆ ಚಂದ್ರಮಂ
ಡಳದಿನುದೀರ್ಣಮಾಗಿ ನಿಮಿರ್ವುಜ್ವಳಚಂದ್ರಿಕೆಯೆಂಬಿನಂ ಸುರ
ರ್ಕಳ ನಯನೋತ್ಪಳಂಗಳಲರ್ವಂತು ಸುಖಾಂಬುಧಿ ಕೊರ್ವುವಂತು ಕೋ
ಮಳಕರಕಂಜಕೋಟಿ ಮುಗಿವಂತೆಸೆದತ್ತು ಜಿನಾಭಿಷೇಕದೊಳ್        ೨೬

ಕಂ || ಅರುಣಮಣಿಕಳಶದಿಂ ಹರಿ
ಸುರಿವ ಸುಧಾಧಾರೆ ತನ್ಮಯೂಖಾಹತಿಯಿಂ
ತರುಣಾರ್ಕಬಿಂಬದಿಂ ಬಿ
ತ್ತರಿಪೆಳೆಬಿಸಿಲೆನಿಸಿ ಕಳೆದುದಘತಾಮಸಮಂ      ೨೭

ತುಂಗಹರಿನೀಳಕಳಶಮು
ಖಂಗಳ ಜಳಧಾರೆ ಧಾರ್ತರಾಷ್ಟ್ರಮರಾಳಂ
ನುಂಗಿ ಮಗುೞ್ದುಗುಳ್ವ ಬಿಸದಂ
ಡಂಗಳನಭಿನಯಿಸಿತಭವನಭಿಷವವಿಧಿಯೊಳ್    ೨೮

ವ || ಆಗಳ್

ಚಂ || ತ್ರಿದಶಗಣಾಧಿಪರ್ ಸುರಿಯುತಿರ್ಪತಿನಿರ್ಮಳ ದುಗ್ಧವಾರಿಪೂ
ರದೊಳಚಳಾತ್ಮನುಂ ಸಹಜಭದ್ರನುಮಪ್ಪ ವಿಶುದ್ಧಮೂರ್ತಿ ತಾಂ
ಪುದಿದ ತುಷಾರಪುಂಜದೊಳಗಿರ್ಪ ಹಿಮಾದ್ರಿವೊಲಿಂದ್ರಸಿಂಧುಪೂ
ರದೊಳವಗಾಹಮಿರ್ಪ ಸುರದಂತಿವೊಲೊಪ್ಪಿದನಿಂದ್ರವಂದಿತಂ      ೨೯

ವ || ಅಂತುಮಲ್ಲದೆಯುಂ

ಕಂ || ಇಂದ್ರಕರಕಳಿತಕಳಶದೆ
ರುಂದ್ರತರಕ್ಷೀರಪೂರಮಾವರಿಸೆ ಶರ
ಚ್ಚಂದ್ರಿಕೆಯ ಬಳಸಿನೊಳಗಣ
ಚಂದ್ರಮನಂತಿರ್ದನನುಪಮಂ ಜಿನಚಂದ್ರಂ       ೩೦

ವ || ಆ ಸಮಯದೊಳ್

ಚಂ || ಅಱಿಯನನಂತಕುಂಭಶತಮಂ ಪಸುಗೂಪಿನ ಮೇಲೆ ಪೊಯ್ದಪಂ
ನೆಱೆ ಮರುಳಿಂದ್ರನೆಂದೊಣರ್ವ ಮುಗ್ಧನಿಳಿಂಪರ ಶಂಕೆ ಚಿತ್ತದಿಂ
ಪಱಿಪಡುವಂತು ಬಾಲನಿನಿಸಂ ತಱಿಸಂದೊಡೆ ವಕ್ತ್ರವಾಯುವಿಂ
ತಱಗೆಲೆಯಂತೆ ಪಾಱಿದುವು ರುಂದ್ರಸುರೇಂದ್ರವಿಮಾನಕೋಟಿಗಳ್ ೩೧

ವ || ಅನ್ನೆಗಂ

ಕಂ || ಆಕಾಶಕ್ಕುಚ್ಚಳಿಪಭಿ
ಷೇಕದ ಜಲಬಿಂದುಮಾಲೆಯದುತಾಂ ಮುಕ್ತಾ
ನೀಕದ ತೆಱದಿಂ ಜ್ಯೋತಿ
ರ್ಲೋಕವಿಮಾನಕ್ಕೆ ಪಡೆದುದಿರ್ಮಡಿಚೆಲ್ವಂ    ೩೨

ಮ || ಅಮರಶ್ರೇಣಿಗೆ ಮುತ್ತಿನಾಭರಣಮಂ ದಿಗ್ದಂತಿಯೂಥಕ್ಕೆ ಚಿ
ಬ್ಬುಮನುದ್ಯಾನವನಕ್ಕೆ ಪೂದುಱುಗಲಂ ವ್ಯೋಮಕ್ಕೆ ತಾರಾಸಮೂ
ಹಮನಭ್ರಾವಳಿಗಾಲಿಗಲ್ಲ ಸಿರಿಯಂ ಮೆಯ್ವೆರ್ಚಿಸಲ್ ಸಾಲ್ದು ತ
ಳ್ತಮರ್ದೊಪ್ಪಿರ್ದುದುದೀರ್ಣಕೀರ್ಣಪವನಾಂಭಃಶೀಕರಂ ಶ್ರೀಕರಂ  ೩೩

ವ || ಅಂತುಮಲ್ಲದೆಯುಂ

ಕಂ || ಸ್ವೇದಾಂಬುಬಿಂದು ಪುಟ್ಟಿದು
ವೀದಿವಿಜರ್ಗಿದು ವಿಚಿತ್ರಮೆನೆ ಕಿಱುಮುತ್ತಂ
ಕೋದಂತೆ ಸಿಡಿಲ್ದಡರ್ದಿಂ
ಬಾದುವು ಜಿನಸವನಜನಿತ ಜಲಲವಮವರೊಳ್            ೩೪

ವ || ಅನ್ನೆಗಂ

ಚ || ಕಡೆದು ಕಲಂಕಿ ಮುನ್ನಖಿಳ ವಸ್ತುಗಳಂ ಪೊಱಗಿಕ್ಕಿ ಸಂಪದಂ
ಗಿಡಿಸಿದ ಮೇರು ದೈವದಿನಿದಿಂದೊಳಗಾಯ್ತೆನಗೆಂದು ಬಂದು ಪಾ
ಲ್ಗಡಲಮರಾದ್ರಿಯಂ ಮುಳಿದು ಮುತ್ತಿದುದೆಂಬಿನಮೊಪ್ಪಿತೆತ್ತ ನೋ
ೞ್ಪೊಡಮಭವಾಭಿಷೇಕವಿಧಿಯೊಳ್ ಪೊಱಸೂಸುವ ಪಾಲ ಕಾೞ್ಪುರಂ       ೩೫

ಕಂ || ಗಲ್ಗಲನೆ ಪರಿವ ಪಾಲ ಪೊ
ನಲ್ಗಳೊಳೊಳಗಾಗಿ ನಗದ ನಾಲ್ದೆಸೆಗಳ ತ
ೞ್ಪಲ್ಗಳೊಳೆಸೆದುವು ತೇಂಕುವ
ರಲ್ಗಳ ಸಂಕರಮಿದೆನಿಸಿ ತಾರಾವಳಿಗಳ್           ೩೬

ಜಿನಮಜ್ಜನಾಂಬುವಿಂದಂ
ಕನಕಾಚಳತಳದೊಳಿರ್ದು ಬಿಸುಪೞೆದು ಬೆಳ
ರ್ಪಿನಬಿಂಬವಾಗಳಾಗಳೆ
ವನಧಿಯೊಳೊಗೆವಿಂದುಬಿಂಬಮೆನಿಸಿದುದೆನಸುಂ            ೩೭

ಪೊನಲೊಳ್ ಮುಱುಗಿಸಿ ಹಿಮಕರ
ದಿನಕರರಂ ಮಸುಳಿಸಿತ್ತು ಜಿನಸವನಪಯೊಂ
ಬುನಿಕಾಯಂ ದೋಷಾಕರ
ನೆನಿಪನ ಭೂತಾಪಕಾರಿಯೆನಿಪನ ಸಿರಿಯೇಂ       ೩೮

ವ || ಅದಲ್ಲದೆಯುಂ
ಕಂ || ಜಿನಸವನಸಲಿಲದಿಂ ಬೆ
ಳ್ಪನಾಳ್ದುವರ್ಜುನಕುಜಂಗಳೆನಿಸವೆ ಚಿತ್ರಂ
ನನೆವಡೆದು ಪಾಂಡುಕದ ಸೌ
ಮನಸದ ನಂದನದ ಭದ್ರಶಾಲದ ತರುಗಳ್       ೩೯

ಮುಗ್ಧಜನದಱಿತಮೆನಿಸಿ ವಿ
ದಗ್ಧರುಮಿದು ಕನಕಗಿರಿಯೊ ರಜತಾದ್ರಿಯೊ ಸಂ
ದಿಗ್ಧಮೆನಿಸಿದುದು ಸುರಗಿರಿ
ದುಗ್ಧಪ್ರಸರೋಪದಿಗ್ಧಮಧಿಕಸ್ನಿಗ್ಧಂ           ೪೦

ವ || ಅದಲ್ಲದೆಯುಂ

ಕಂ || ಆ ಹೇಮಗಿರಿಯ ವಿಟಪಸ
ಮೂಹದೊಳಿರದೋಡಿದುವು ಪೊನಲ್ಗಳ್ ದಿಕ್ಸಂ
ದೋಹಕ್ಕೆನಿತಾದೊಡಮೇಂ
ವಾಹಂಗಳ್ ಕುಂಜರಾಜಿಯೊಳ್ ನಿಂದಪುದೇ     ೪೧

ವ || ಮತ್ತಂ

ಕಂ || ನೊರೆವಾಲ ಮೊಸರ ತುಪ್ಪದ
ಪರಿವೊನಲಾ ಗಿರಿಯ ಪಿರಿಯ ಸಾನುಗಳೊಳ್ ನಿ
ರ್ಝರಮೆಂಬ ನೆವದಿನಿನ್ನುಂ
ಪರಿದಪುವೇಂ ಪಿರದೊ ಜಿನನ ಜನ್ಮಸ್ನಾನಂ      ೪೨

ವ || ಆಗಳ್

ಮ || ಅಕಳಂಕಾಕೃತಿವರ್ತನಂಗೆ ಘನಕಲ್ಕೋದ್ವರ್ತನಂ ವೀತಸ
ರ್ವಕಷಾಯಂಗೆ ಕಷಾಯತೋಯಸವನಂ ದೇಹೋಲ್ಲಸದ್ದಿವ್ಯಗಂ
ಧಕದಂಬಂಗೆ ಸುಗಂಧಬಂಧುರಜಳಸ್ನಾನಂ ಸ್ಫುರದ್ವರ್ಣಪೂ
ರ್ಣ ಕನನ್ಮೂರ್ತಿಗೆ ವರ್ಣಪೂರವಿಳಸನ್ನೀರಾಜನಂ ಮಾೞ್ಕುಮೇ    ೪೩

ವ || ಆದೊಡಂ ಮಂಗಳೋಪಚಾರಮಿಲ್ಲಿಗವಸರೋಚಿತಂ ಬೇೞ್ಕುಮೆಂದು ವಿವಿಧನವವರ್ಣ ಚೂರ್ಣ ಪಿಷ್ಟೋಪಘೃಷ್ಟಿಯುಮನಕ್ಷರೀ ಕ್ಷೀರವೃಕ್ಷಸಂಸ್ಕಾರವಾರಿಸವನಮು ಮನವನಮ್ನ ಭುವನಂಗೆ ಮಾಡಿದಿಂ ಬೞಿಯಂ

ಕಂ || ನಂದನವನಸಂಭವ ಹರಿ
ಚಂದನಸಂತಾನ ಪಾರಿಜಾತಕ ವಿಲಸ
ನ್ಮಂದಾರ ನಮೇರುದ್ರುಮ
ಸಂದೋಹದ ಕುಸುಮಕೋಟಿಯಂ ವಾಸಿತಮಂ ೪೪

ಮಳಯಜ ಕುಂಕುಮಜಾತೀ
ಫಳ ಜಾತೀಪತ್ರ [ಕಂ] ತುರುಷ್ಕ ತುಷಾರೋ
ಪಳ ಕಾಳಾಗರುತಕ್ಕೋ
ಳ ಲವಂಗ ಪ್ರಮುಖಸುರಭಿಪರಿಕರಯುತಮಂ   ೪೫

ಮ || ಜಳಮಂ ಶೀತಳಮಂ ನಿರಸ್ತಮಳಮಂ ತೀವಿರ್ದ ಕುಂಭಂಗಳಾ
ಗಳೆ ಗಂಧಾಂಧಮದಾಳಿಗಳ್ ಮುಸುಱೆ ನೀಲಿವಸ್ತ್ರಸಂಛಾದಿತಂ
ಗಳವೋಲ್ ತೋರ್ಪಿನಮೆತ್ತಿ ಬಿತ್ತರಿಸಿದರ್ ಗಂಧೋರಕಸ್ನಾನಮಂ
ಗಳಮಂ ತೀರ್ಥಕರಂಗೆ ಮಂಗಳರವಂ ಕೆಯ್ಗಣ್ಮೆ ಕಲ್ಪೇಶ್ವರರ್      ೪೬

ವ || ಆಗಳ್

ಮ || ನವಗಂಧೋದಕಪೂರದೊಳ್ ಪುದಿದು ಪೂವುಂ ತುಂಬಿವಿಂಡುಂ ತೆರ
ಳ್ದುವು ಪೇೞ್ ಪುಷ್ಪಶಿಳೀಮುಖಂ ಮಧುಯುತಂ ಭಂಗಕ್ಕೆ ಪಕ್ಕಕ್ಕುವ
ಲ್ಲವಱೊಳ್ ಕೂಡವು ಕಾಂತಿಗುಂದವು ಪರಾಗೋದ್ಭಾಸಿಯರ್ ಪಾಡಿ ತೇಂ
ಕುವ ಜಾಡ್ಯಕ್ಕೆಡೆಯಾಗದೊಡ್ಡುಗುಮೆ ಮೋಹಧ್ವಂಜಸನಾಸ್ಥಾನದೊಳ್   ೪೭

ಕಂ || ಬಂಧುರಸವನೋತ್ಸವ ಸುರ
ಸಿಂಧುವಿನೊಳ್ ಪುಟ್ಟಿ ಜಗಮನಾಱಿಪ ಪೂರ್ಣೋ
ದ್ಗಂಧಿಯನೇವೊಗೞ್ವುದೊ ಜಿನ
ಗಂಧೋದಕಮಂ ಭವಾಗ್ನಿ ವಿಚ್ಛೇದಕಮಂ      ೪೮

ಉ || ಆದುದು ಕರ್ಮಘರ್ಮದ ಪೊಡರ್ಪನಡಂಗಿಸಲತ್ಯಗಣ್ಯಪು
ಣ್ಯೋದಯಸಸ್ಯಮಂ ಬೆಳೆಯಿಸಲ್ ಕುಚರಿತ್ರಕಳಂಕಪಂಕಮಂ
ಛೇದಿಸಲಿಂತಿದೆಂದು ದಿವಿಜರ್ ನೆರೆದೀೞ್ಕುಳಿಗೊಂಡು ಕೊಂಡ ಗಂ
ಧೋದಕದಿಂದೆ ತಮ್ಮ ತನುವಂ ಶುಚಿಮಾಡಿದರಿಂಡೆಯಾಡಿದರ್    ೪೯

ಕಂ || ಅಗವೆಲ್ಲಂ ನಗವೆಲ್ಲಂ
ಮೃಗವೆಲ್ಲಂ ನದಿಗಳೆಲ್ಲಮುದಧಿಗಳೆಲ್ಲಂ
ಖಗಮೆಲ್ಲಂ ದೆಸೆಯೆಲ್ಲಂ
ಭಗವಜ್ಜಿನಸವನಜಲದಿನಾಯ್ತು ಪವಿತ್ರಂ        ೫೦

ವ || ಅಂತು

ಉ || ಕೂಡೆ ಪವಿತ್ರಮಾಯ್ತು ಜಲಮೊಂದೆಡೆ ಮಾಡುವ ವಜ್ರಪಾಣಿ ಕೆ
ಯ್ಗೂಡಿದ ವಸ್ತು ನೀಡಿದಮರಾವಳಿ ನೋಡಿದ ಲೋಕಪಾಲರೋ
ಲಾಡಿದ ಮೇರು ಪಾಡಿದಮರೀಜನಮೆಯ್ದೆ ಪವಿತ್ರವೃತ್ತಿಯೊಳ್
ಕೂಡುವುದಾವ ಪಂಗೆನಿಸಿತೇವೊಗೞ್ವೆಂ ಜಿನಪಾಭಿಷೇಕಮಂ          ೫೧

ವ || ಆಗಳಿಂದ್ರಂಗಿಂದ್ರಾಣಿ ಮುಂದೆ ತಂದವಟಯ್ಸುವುದುಂ

ಕಂ || ಬಹುಕುಸುಮಬಹುಫಲಾನ್ವಿತ
ಬಹುತಂಡುಳವರ್ಣಹಾರದಿಂದವತಾರಂ
ವಿಹಿತಕ್ರಮಸಹಿತಂ ಮಳ
ರಹಿತಂಗೆಸೆವಂತು ಮಾಡಿದಂ ಸುರಮಹಿತಂ      ೫೨

ವ || ಅದಱೊಡನೆ

ಕಂ || ಆ ರಾಜನ ಪಕ್ಕದೆ ನುತ
ರಾರಾಜಿಪ ಭಗಣಮೆನಿಸೆ ಮಂಗಳದೀಪಂ
ನೀರಾಜನಮುಂ ಮುಕ್ತಿ
ಶ್ರೀರಾಜನ ಮುಂದೆ ನೆಗೞ್ದುದಮರಾಧಿಪನಿಂ    ೫೩

ವ || ಅಂತಘಶಾಸನಂಗೆ ಪಾಕಶಾಸನಂ ಮಾೞ್ಪ ಜನ್ಮಾಭಿಷೇಕವಿಧಾನಮಂ ನಿರ್ವರ್ತಿಸಿ ತದನಂತರಂ

ಮ || ಹರಿಣಾಂಕದ್ಯುತಿಹಾರಿ ವಾರಿ ಸುರಭಿಶ್ರೀನಂದನಂ ಚಂದನಂ
ಪರಿಮುಕ್ತಾಕ್ಷತಮಕ್ಷತಂ ಪರಿಮಳಾಸ್ಥಾನಂ ಪ್ರಸೂನಂ ಮನೋ
ಹರರೂಪಂ ಹಿಮಧೂಪಮುದ್ಧೃತ ಕಳಾಪಂ ರತ್ನದೀಪಂ ಸುಧಾ
ಗುರು ಭಾಸ್ವಚ್ಚರು ನಿರ್ಮಳಂ ಪಳಮೆನುತ್ತೀ ಮಂಗಳದ್ರವ್ಯದಿಂ   ೫೪

ಕಂ || ಅಷ್ಟಾರ್ಧಘಾತಿಮಥನಂ
ಗಷ್ಟಾಪದಶಿಖರಿಶಿಖರಶೇಖರರೂಪಂ
ಗಷ್ಟಾಪದರಿಪುಪೀಠಂ
ಗಷ್ಟವಿಧಾರ್ಚನೆಗಳೆಸೆಯೆ ಪದೆದರ್ಚಿಸಿದಂ       ೫೫

ಮ || ಕ್ರಮದಿಂ ಪೂಜಿಸುವಂ ಶತಕ್ರತುವೆ ಪೂಜಾವಸ್ತು ಕಲ್ಪದ್ರುಜಾ
ತಮೆ ಪೂಜ್ಯಂ ಭುವನತ್ರಯೇಶ್ವರನೆ ಪೂಜಾಲಭ್ಯಮಕ್ಷೂಣಮೋ
ಕ್ಷಮೆ ತಾನೆಂದೆನಲಾವನಿನ್ನಱ ಪೆಂಪಂ ಸಾಗರಂ ಸಾಗರೋ
ಪಮಮೆಂದೆಂದಿರಲಲ್ಲದೆಯ್ದೆ ಪೊಗಱಲ್ಕುಂತಾರ್ಗುಮೇಂ ತೀರ್ಗುಮೇ      ೫೬

ವ || ಎಂದು ಬಣ್ಣಿಸುತ್ತೆ ಜಯಜಯಘೋಷಮುಖರಮುಖದ ದೇವಕೋಟಿ ವೆರಸು ನಿಟಿಲತಟಘಟಿಕ ಕರಸರೋಜನಾಗಿ

ನಮೋ ಜಿನಾಯ ತೇ ತಸ್ಮೈ ಸರ್ವಸತ್ವಾತ್ರಯಾತ್ಮನೇ
ಸನ್ಮತಾಂಭೋಧಯೇ ಯಸ್ಮಾದ್ಧತ್ತೇ ಧರ್ಮಾಮೃತಂ ಜಗತ್     ೧

ನಮೋ ಜಿನಾಯ ತೇ ತಸ್ಮೈ ಸತ್ಪಾತ್ರಸ್ನೇಹವರ್ತಿನೇ
ಸುತಪೋದೀಪ್ರದೀಪಾಯ ಯತ್ರಾನಂಗಃ ಪತಂಗವತ್     ೨

ನಮೋ ಜಿನಾಯ ತೇ ತಸ್ಮೈ ದೋಷಾದೋಷವಿಲೋಪಿನೇ
ಕಾಲವ್ಯಾಳೇಭಸಿಂಹಾಯ ಭಾತಿಯತ್ ಸೂಕ್ತಿವರ್ಜಿತಃ     ೩

ನಮೋ ಜಿನಾಯ ತೇ ತಸ್ಮೈ ಕಾಂತಾರಾಗಕ್ಷಯಾತ್ಮನೇ
ಸದ್ಜ್ಞಾನಭಾನವೇ ಯಸ್ಯ ಪ್ರಕಾಶೇ ನಿಸ್ತಮೋ ಜಗತ್    ೪

ನಮೋ ಜಿನಾಯ ತೇ ತಸ್ಮೈ ಸರ್ವಾಂಶಾಂಬರಭಾಸಿನೇ
ಭವ್ಯೋತ್ಪಲೇಂದವೇಯೇನ ಕರ್ಮಘರ್ಮಾತಪೋ ಹೃತಃ            ೫

ಕಂ || ಜಿನ ನಿನ್ನ ಮೂರ್ತಿ ಜಿನ ನಿ
ನ್ನ ನಯಂ ಜಿನ ನಿನ್ನ ಸಮತೆ ಜಿನ ನಿನ್ನೆಸಕಂ
ಜಿನ ನಿನ್ನ ಮಹಿಮೆ ಜಿನ ನಿ
ನ್ನನಘತೆ ಜಿನ ನಿನ್ನ ಕಾಣ್ಕೆ ವರ್ಣಿಸಲಳವೇ      ೫೭

ವ || ಎಂದು

ಕಂ || ಇವು ಮೊದಲಾಗಿರೆ ವಸ್ತು
ಸ್ತವ ರೂಪಸ್ತವ ಗುಣಸ್ತವಂಗಳಿನಿಂದ್ರಂ
ಭವರಿಪುವಂ ಸ್ತುತಿಯಿಸಿ ಮಕು
ಟವಿಘಟ್ಟಿತಪಾದನಾದನನುನಯದಿಂದಂ         ೫೮

ವ || ತದನಂತರಂ

ಕಂ || ಚಂದನಲತೆ ಕಿಸಲಯಚಯ
ದಿಂದಂ ತೊಡೆದಪುದು ಮಲಯನಗನಿರ್ಝರನಿ
ಷ್ಯಂದಮನೆನೆ ದಿವ್ಯಾಂಬರ
ದಿಂ ಶಚಿ ತೊಡೆದಳಭವಸನದ್ರವಮಂ  ೫೯

ವ || ಆಗಳ್

ಕಂ || ಜಿನತನುಬಿಂಬಿತ ನೀರಾ
ಜನದೀಪಕಳಾಪರುಚಿಗಳೊಪ್ಪಿದುವು ಜಲ
ಕ್ಕನೆ ಚಿತ್ತದೊಳಗೆ ಬೆಳಗುವ
ಘನಧರ್ಮಧ್ಯಾನದೀಪ್ತಿ ಪೊಱಪೊಣ್ಮುವವೋಲ್         ೬೦

ವ || ಅನಂತರಂ ಶಿರೀಷಧಾಮಕೋಮಳಂಗಳಪ್ಪ ನಿಜಭುಜಂಗಳ್ಗೆ ರೋಮಾಂಚ ಸಂಚಯಂ ನೆಗೆಯೆ ನೆಗಪಿಕೊಂಡು

ಮ || ಉದಯಾದ್ರೀಂದ್ರದೊಳಿಂದ್ರದಿಗ್ವಧು ಲಸದ್ಬಾಳಾರ್ಕನಂ ತಾಳ್ದುವಂ
ದದಿನಿಂದ್ರಾಣಿ ಜಿನೇಂದ್ರಬಾಳಕನನಾತ್ಮೋತ್ಸಂಗದೊಳ್ ತಾಳ್ದಿ ರಾ
ಗದಿನಿರ್ದಂದಿನ ಮೈಮೆಗಂದಿನ ವಿಳಾಸಕ್ಕಂದಿನಾನಂದದೊಂ
ದೊದವಿಂಗಂದಿನ ಪುಣ್ಯಕಂದಿನೆಸಕಕ್ಕಂತಾವಳುಂ ನೋಂತಳೇ         ೬೧

ವ || ಎನಿಸಿರ್ದನಂತರಂ

ಕಂ || ಪರಮ ಜಿನದಿವ್ಯಗಂಧದ
ಪರಿಚಯದಿಂ ಸಕಳ ಸಾರಸೌರಭ್ಯಮನಾ
ಳ್ದಿರಲಿವು ನೋಂತುವೆನುತ್ತಿರೆ
ವಿರಚಿಸಿದಳ್ ಶಚಿ ಸುಗಂಧಲೇಪನವಿಧಿಯಂ     ೬೨

ವ || ಮತ್ತಂ ಮುಕ್ತಿಲಲನಾಲಲಾಟತಿಲಕನುಂ ಪಂಚಮಭೂಮಿಭಾಮಿನೀವ ಶ್ಯಾಂಜನನುಂ ಅಪವರ್ಗಸಂಪದ್ವಿಳಾಸಿನೀಲಲಾಮನುಂ ಅಕ್ಷಯರಮಾಂಗನಾಸುವರ್ಣ ಕುಂಡಲನುಂ ಆತ್ಯಂತಿಕಗತಿಗ್ರೈವೇಕನುಂ ಅಮೃತಕಾಮಿನೀಕನಕಕಂಕಣನುಂ ನಿಶ್ರೇಯಸಶ್ರೀಪ್ರಿಯಾರತ್ನ ಕೇಯೂರನುಂ ಮೋಕ್ಷಲಕ್ಷ್ಮೀಕರಾಂಗುಲೀಯಕನುಂ ನಿರ್ವೃತಿವಧೂಪದವಿಲಾಸನೂಪುರನುಂ ನಿರ್ವಾಣನಿತಂಬಿನೀನಿತಂಬಸೂತ್ರನುಮೆನಿಸಿದೀ ತ್ರಿಭುವನೈಕಭೂಷಣವಿಳಾಸಂಗೆ ಭೂಷಣವಿಳಾಸಮಖಿಳ ಲೋಕಲೋಚನಲೋಭನೀಯ ಸಹಜಾಂಗ ಸೌಂದರ್ಯಸಂಪತ್ತಿಯಂ ಮಱೆಯಿಸಲಲ್ಲದೆ ಮೆಱೆಯಿಸಲ್ ನಿಮಿತ್ತಮಲ್ತು ಆವೆಡೆಗಂ ಮಂಗಳೋಪಚಾರಮಿಲ್ಲಿ ಕರಣೀಯಂ ಎಂದು ಸಂಕ್ರಂದನಂ ಬೆಸಸೆ

ಚಂ || ತಿಳಕಮನಿಟ್ಟು ಕಜ್ಜಳಮನೆಚ್ಚಿ ಲಲಾಮಮನಪ್ಪುಕೆಯ್ಸಿ ಕುಂ
ಡಳಮನಮರ್ಚಿ ಕಂಠಿಕೆಯನರ್ಪಿಸಿ ಕಂಕಣಮಂ ತಗುಳ್ಚಿ ದೋ
ರ್ವಳಯಮನಿಕ್ಕಿ ಮುದ್ರಿಕೆಯನೇಱಿಸಿ ನೂಪುರಮಂ ತೊಡರ್ಚಿ ಮಂ
ಜುಳ ಕಟಿಸೂತ್ರಮಂ ತುಡಿಸಿ ಕೆಯ್ಗೆಯೆ ಕಣ್ಗೆಸೆದಂ ಜಿನಾರ್ಭಕಂ     ೬೩

ಕಂ || ಸುರನೇತ್ರ ಪ್ರತಿಬಿಂಬಂ
ಸ್ವರುಚಿಯೊಳಾವರಿಸೆ ತಾನೆ ತನ್ನಂ ನೋಡಲ್
ಪೊರಮನ ತನು ಕಣ್ದೆಱೆದಂ
ತಿರೆ ಸೊಗಯಿಸಿ ಪೋಲ್ತುದಲರ್ದ ತಾವರೆಗೊಳನಂ         ೬೪

ವ || ಆಗಳ್

ಮ || ವರಭೂಷಾಬಲದಿಂದೆ ಶೋಭೆವಡೆದನ್ಯಾಕಾರದಂತಲ್ಲದಾ
ಭರಣಕ್ಕಾಭರಣಂ ಜಿತಸ್ಮರನ ರೂಪೆಂದೀಕ್ಷಿಸಲ್ ತನ್ನ ಸಾ
ಸಿರ ಕಣ್ದೆಯ್ದದೆ ಕೋಟಿ ಕಣ್ಗೆ ಬಯಸುತ್ತೞ್ಕರ್ತು ತೞ್ಕೆಯ್ಸುತು
ದ್ಧರಿಸಿರ್ದಂ ಹರಿ ಕಾಂಕ್ಷಿಸುತ್ತೊಲವಿನಿಂ ಶ್ರೀ ಭವ್ಯರತ್ನಾಕರಂ       ೬೫

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತ ಸೂಕ್ತಿಚಂದ್ರಿಕಾಪಾನ ಪರಿಪುಷ್ಪಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತಪುರಾಣದೊಳ್ ಜನ್ಮಾಭಿಷೇಕೋತ್ಸವಸಂಪದ್ವರ್ಣನಂ ಏಕಾದಶಾಶ್ವಾಸಂ