ಕಂ || ಶ್ರೀಪೃಥುಳೈಶ್ವರ್ಯನಗತ
ಲೇಪನ ದರ್ಶನದೊಳಾದ ಪರಮಾನಂದ
ಶ್ರೀಪದದೊಳ್ ರಂಜಿಸಿದನಿ
ಳಾಪೂಜ್ಯಂ ಪ್ರಭುಗುಣಾಬ್ಜವನಕಳಹಂಸಂ      ೧

ವ || ಅಂತು ಜನ್ಮಾಭಿಷೇಕೋತ್ಸವವ್ಯಾಪಾರಮಂ ತೀರ್ಚಿ ಮಾರಮದವಾರಣಂ ಬೆರಸು ಮದವಾರಣಸ್ಕಂಧಮನಲಂಕರಿಸಿ ಸರ್ವಗೀರ್ವಾಣ ಸೈನಿಕಸಹಸ್ರಪರಿವೃತಂ ಸಹಸ್ರಲೋಚನಾಮರಂ ಧರಾಮರನಂತೆ ದಕ್ಷಿಣಾಭಿಮುಖನಾಗಿ ತಳರೆ

ಕಂ || ನೆಲಸಿರ್ದ ಪಕ್ಕಿವಿಂಡುಗ
ಳುಲಿದೆೞ್ದು ವಿಭಾತಸಮಯದೊಳ್ ಪೋಗಲೊಡಂ
ಗೆಲೆ ಬಿನ್ನನಪ್ಪ ವೃಕ್ಷಂ
ಬೊಲಿರ್ದುದಮರಾದ್ರಿ ದಿವಿಜಕಳಕಳಶೂನ್ಯಂ    ೨

ವ || ಆಗಳ್

ಮ || ಭುವನಾಭೋಗಮನೆಯ್ದೆ ತೀವಿದಳಿದರ್ಹನ್ಮಜ್ಜನಕ್ಷೀರಪೂ
ರವೆನಲ್ಕಭ್ರಗಜೇಂದ್ರಶುಭ್ರರುಚಿಯುಂ ದೇವೀದೃಗಾಲೋಕಮುಂ
ಧವಳಚ್ಛತ್ರಚಯಾಂಶುವುಂ ಜಿನತನುಪ್ರದ್ಯೋತಿಯುಂ ಪರ್ವೆ ತ
ತ್ಪ್ಲವದೊಳ್ ವಾಸವನೀಸುವಂತೆ ತಳರ್ದೆೞ್ತಂದಂ ತದದ್ರೀಂದ್ರದಿಂ            ೩

ವ || ಅಂತು

ಮ || ಅಮರಾನೀಕವಿಮಾನವಿಸ್ತೃತವಿಯಚ್ಚಕ್ರಂ ಶಚೀಲೋಚನ
ಭ್ರಮರಾನಂದಜಿನೇಂದ್ರವಕ್ತ್ರಕಮಳಾಲೋಕೈಕಲಗ್ನಂ ದಿಶಾ
ರಮಣೀಕರ್ಣವಿಹಾರಿತೂರ್ಯರಭಸಂ ಮಾಂಗಲ್ಯಸಾಕಲ್ಯಸಂ
ಭ್ರಮಿ ಕಾಕಂದಿಯನೆಯ್ದಿ ಪೊಕ್ಕನವನೀಶಾವಾಸವಂ ವಾಸವಂ       ೪

ವ || ಅಂತು ಪೊಕ್ಕು

ಉ || ತನ್ನ ನಿಯೋಗದಿಂ ದಿವಿಜಶಿಲ್ಪಿಗಳಿರ್ದು ಸಮಸ್ತವಸ್ತುಸಂ
ಛನ್ನಮತಿಪ್ರಶಸ್ತರಚನಾಂಚಿತಮುರ್ವಿಗಪೂರ್ವಮೆಂಬಿನಂ
ಮುನ್ನಮೆ ನಿರ್ಮಿಸಿಟ್ಟ ಮಣಿಮಂಟಪಮಧ್ಯದ ಸಿಂಹಪೀಠದೊಳ್
ಸನ್ನುತಲೀಲೆಯಿಂದಿರಿಸಿ ಬಾಲಕನಂ ಸುರಲೋಕಪಾಲಕನಂ           ೫

ಕಂ || ಚಂದ್ರನ ಪಕ್ಕದ ಭಗಣ ಮ
ಗೇಂದ್ರನ ಪಕ್ಕದ ಕುಳಾದ್ರಿಕುಳಮೆನಿಸಿರೆ ಕ
ಲ್ಪೇಂದ್ರತತಿ ಜಿನನ ಪಕ್ಕದೊ
ಳಿಂದ್ರಾಣಿಸಹಿತಮಿರ್ದುದುಚಿತಾಸನದೊಳ್      ೬

ವ || ಆಗಳತಿಬಳಕೋಳಾಹಳಕುಳನಿಳಿಂಪಜನದನೇಕ ಮಂಗಳಾನಕಸಮುದ್ರ ಸದ್ರಭಸದಿಂದಮುನ್ನಿದ್ರೆಯಾದ ಮಹಾದೇವಿವೆರಸು ಪುತ್ರಮುಖದರ್ಶನೋತ್ಕಂಠಸುಕಂಠರಾಜ ನೆರಡನೆಯ ದಿವಿಜರಾಜನಂತೆ ಮಹನೀಯಮಹಿಮನಾ ಮಹಾಮಂಪಟಕ್ಕೆವಂದು ಸಮುಚಿತಾಸನಾಸೀನನಾದಲ್ಲಿ

ಕಂ || ನರಪತಿಯುಂ ಸುರಪತಿಯುಂ
ನರೇಂದ್ರವಧುವುಂ ಸುರೇಂದ್ರವಧುವುಂ ನರರುಂ
ಸುರರುಮಣಮಱಿಯಲಾಗದೆ
ಸಿರಿಯೊಳ್ ಮೆಯ್ಸಿರಿಯೊಳವರದೇನನುಪಮರೋ        ೭

ವ || ಆ ಸಮಯದೊಳ್

ಕಂ || ಭುವನತ್ರಯಸಾಮ್ರಾಜ್ಯಮ
ದಿವರ್ಗೇಕಚ್ಛತ್ರಮಾದುದೆನಿಪನಿತು ಮಹೋ
ತ್ಸವಮಾದುದವರ್ಗೆ ಲೋಚನ
ಕುವಳಯಮನಲರ್ಚೆ ಪುತ್ರಮುಖಶಶಿಬಿಂಬಂ     ೮

ಬಾಳಕನಂ ವಿಲುಳಿತಲಂ
ಬಾಳಕನಂ ನೋಡುವಲ್ಲಿ ಸುಗ್ರೀವನ ತ
ದ್ಬಾಳೆಯ ನಿಡುನಿಡುಗಣ್ಗಳ್
ಬಾಳೆಯನಿೞಿಸಿದುವು ಹರ್ಷರಸಮಗ್ನಂಗಳ್    ೯

ವ || ಅನಂತರಂ

ಕಂ || ಆಜಂಪತಿಗಳ ವದನಾಂ
ಭೋಜಂಗಳನಾತ್ಮ ದೃಕ್ಸಹಸ್ರ ಭ್ರಮರೀ
ರಾಜಿಗೆಡೆಮಾಡಿನೋಡಿ ಬಿ
ಡೌಜಂ ದಶನಾಂಶುರಾಜಿ ರಾಜಿಸೆ ನುಡಿದಂ       ೧೦

ಹರಿಣೀ || ನಿಮಗೆ ತನಯಂ ತ್ರೈಲೋಕ್ಯಾಧೀಶನೀ ಜಿನನಾಥನಾ
ನಮರಗಿರಿಗೊಯ್ದೀಗಳ್ ಜನ್ಮಾಭಿಷೇಕ ವಿಭೂತಿಯಂ
ನಮೆದು ಸುಕೃತಂಬೆತ್ತೆೞ್ತಂದೆಂ ಕೃತಾರ್ಥನೇನಾದೆ ನಿ
ನ್ನಿಮತು ದೆಸೆಯಿಂದನ್ಯರ್ ನಿಮ್ಮಂತು ಮಾನ್ಯರೆ ಧನ್ಯರೇ           ೧೧

ಕಂ || ಗುರುಗಳ್ ನೀಮೀ ತ್ರಿಭುವನ
ಗುರುಗದಱಿಂದೆಮಗೆ ಗುರುಗಳಖಿಳಜನಕ್ಕಂ
ಗುರುಗಳ್ ನೀಮೆ ಗುರೋರಪಿ
ಗುರುವೆಂಬೀ ನುಡಿಯ ಪೆಂಪನಾಂತಿರ್ ನೋಂತಿರ್         ೧೨

ವ || ಎಂದು ವಿನಯೋಕ್ತಿಪೂರ್ವಕಮಿರ್ವರುಮಂ ಸ್ತುತಿಯಿಸಿ

ಮ || ಇದು ಸರ್ವೋರ್ವಿಗಮತ್ಯಪೂರ್ವಮೆನೆ ಗೀರ್ವಾಣವ್ರಜಂ ತಂದು ನೀ
ಡಿದ ವಸ್ತ್ರಾಂಗವಿಭೂಷಣಾಂಗವಿಕಸನ್ಮಾಲ್ಯಾಂಗದೀಪಾಂಗವೃ
ಕ್ಷದ ದಿವ್ಯಾಂಬರದಿಂದಲಂಕರಣದಿಂ ಪೂಮಾಲೆಯಿಂದಂಗರಾ
ಗದಿನುದ್ಭ್ರಾಜಿಸುವಂತು ಪೂಜಿಸಿದನಿಂದ್ರಂ ತತ್ಫಿದ್ವಂದ್ವಮಂ      ೧೩

ಕಂ || ಪುರದೊಳಗಿನ್ನುಂ ರನ್ನದ
ಸರಿ ಸುರಿದಪುದಿಂದ್ರನಿಂತು ಬಂದೋಲಗಿಪಂ
ನರಲೋಕದೊಳಿವರ್ಗಳೆ ನೋಂ
ತರಿಂತು ಪಡೆದನ್ನರಾರೊ ಕುಳದೀಪಕನಂ         ೧೪

ಚಂ || ಕರಿರಿಪು ಪುಟ್ಟಿ ವಿಂಧ್ಯಗಿರಿ ತಾವರೆ ಪುಟ್ಟಿ ಸರೋವರಂ ಮನೋ
ಹರಮಣಿ ಪುಟ್ಟಿ ರೋಹಣಮಹಾದ್ರಿಸುಧಾರುಚಿ ಪುಟ್ಟಿ ಪಾಲ್ಗಡಲ್
ಸುರತರು ಪುಟ್ಟಿ ನಂದನವಭಿಷ್ಟುತಮಪ್ಪವೋಲಾದುದೀಗಳೀ
ಸ್ಮರರಿಪು ಪುಟ್ಟಿ ಧಾರಿಣಿಗೆ ಕಾಶ್ಯಪಗೋತ್ರವಿದೇಂ ಪವಿತ್ರಮೋ     ೧೫

ವ || ಎಂದು ಸುರಜನಂಗಳುಂ ಪುರಜನಂಗಳುಂ ಪೊಗೞೆ ಪರಮಾನಂದ ಪರವಶೀಭೂತ ಚೇತಸ್ಕರಾಗಿರ್ದು ಜಾತಕರ್ಮಕಲ್ಯಾಣದೊಸಗೆಯಂ ಮಾಡಿಸಿ

ಕಂ || ನಗರದ ಮನೆಮನೆದಪ್ಪದೆ
ಸೊಗಯಿಸೆ ಬಹುವರ್ಣ ವಿವಿಧ ಪಟದೊಳ್ಗುಡಿಗಳ್
ನೆಗೞ್ದಿರೆ ಬಹುಪ್ರಕಾರದ
ಮುಗಿಲೊಗೆದಪುವೆನಿಸಿತಾಗಳಾಕಾಶತಳಂ         ೧೬

ಒಸೆದು ದಿಗಧೀಶ್ವರರ್ ಜಿನ
ನೊಸಗೆಗೆ ಬರ್ಪಲ್ಲಿ ತಚ್ಚಮೂಪದಹತಿಯಿಂ
ಮುಸುಕಿದ ಕೆಂಧೂಳಿಯಿದೆನೆ
ಪಸರಿಸಿ ಪಟವಾಸಚೂರ್ಣಮೆಸೆದುವು ದೆಸೆಯೊಳ್          ೧೭

ಎಡೆವಱಿಯದಂತಪುರದೊಳ್
ಕಡೆಯಿಕ್ಕುವ ತೋರಮುತ್ತು ಕಟ್ಟುವ ಗುಡಿ ನೇ
ರ್ಪಡೆ ಚೆಲ್ವೆತ್ತುವ ತೋರಣ
ವಡಿಗಡಿಗುತ್ಸವದೆ ತಳಿವ ಪಟವಾಸಚಯಂ      ೧೮

ಅವರಿಸುವ ಪೂವಲಿ ತ
ಳ್ತಾವಗಮಿರದುಣ್ಮುವುಚಿತ ಮಂಗಳರುಚಿ ಸ
ದ್ಭಾವದೊಳೆ ಕುಣಿವ ಪೆಕ್ಕಣ
ಮಾವೃತಶುಭನಿಧಿಗಳೀವ ಬಾಯಿನಮೆಸೆಗುಂ    ೧೯

ಚಂ || ಸುದತಿಯರಾಸ್ಯಗಂಧಮನಪೂರ್ವಮದೆಂದು ನಮೇರುಪುಷ್ಟವ
ರ್ಷದ ಬೞಿಸಂದು ಬಂದ ಸುರಲೋಕದ ತುಂಬಿಗಳಾಸೆಗೆಯ್ದು ಮ
ಚ್ಚಿದುವು ತದಾನನಾಂಬುಜದ ತುಂಬಿಗಳಂ ಸುರಪುಷ್ಪವೃಷ್ಟಿ ತಾಂ
ಪದನಿಸಲಾರ್ತುದಿಲ್ಲ ನಿಜಗಂಧದಿನೇನದಱೊಳ್ಪಳುಂಬಮೋ      ೨೦

ಸುರವನಿತಾಜನಂಗಳೆ ಸುರೂಪವಿಳಾಸೆಯರೆಂದು ಬೀಗಿ ಧಿ
ಕ್ಕರಿಸುವನಿಂದ್ರನೆಮ್ಮುಮನವಂದಿರುಮಂ ಪಡಿಗಟ್ಟಿ ನೋಡುಗೀ
ಬರವಿನೊಳಾದ ಚೆಲ್ವು ಮಿಗಿಲಿಲ್ಲಿಯೆ ಕಂಡಪನೆಂದು ತೋರ್ಪವೋಲ್
ನೆರೆದುದು ಪೆಂಡವಾಸದೆಳವೆಂಡಿರ ತಂಡಮದಿಂಡೆಯಾಟದೊಳ್     ೨೧

ಕಂ || ಒಸಗೆ ಮರುಳ್ಗೊಂಡಾಡುವ
ರಸಭಾವಾತ್ಮೆಯರ ನೂಪುರಂಗಳ ದನಿಯುಂ
ಕುಸುಮೋಪಹಾರದಳಿಗಳ
ರಸಿತಮುಮೊದವಿಸಿತು ಮದನಚಾಪಧ್ವನಿಯಂ ೨೨

ವ || ಅಂತಶೇಷ ಪುರಜನಾತಃಪುರಜನಪ್ರಮೋದಸಮುದ್ಗೀರ್ಣಘೂರ್ಣಿತಾರ್ಣವಕ್ಷೋಭ ಶೋಭಾವಳಂಬಿಯಾದ ತನ್ನಹೋತ್ಸವದೊಳ್

ಕಂ || ಆಡುವರಂ ಕಂಡಾಡುವ
ಪಾಡುವರಂ ಕಂಡು ಪಾಡುವಂದಾನಂದ
ಕ್ರೀಡೆಗೆ ಮಘವನ ಬಗೆಯುಂ
ತೀಡಿದುದೇಂ ಪಿರಿದೊ ಜಿನನ ಪುಣ್ಯಾತಿಶಯಂ  ೨೩

ವ || ಅಂತು ಜಗತ್ತ್ರಯಪವಿತ್ರಸುಕೃತ ಸೂತ್ರಧಾರನ ಮುಂದೆ ಸುತ್ರಾಮನುದ್ಧಾಮ ಸಂಗೀತಕ ಪ್ರಸಂಗಮಂ ಮೆಱೆಯಲ್ ಮನಂದಂದು ತಮ್ಮ ಮೊಗಮಂ ನೋೞ್ಪುದುಂ ಕಲ್ಪಾಮರಮುಖರಿಗಳ್ ತಮಗವಸರಂಬಡೆದು ಸಂಕ್ರಮಿಸೆ

ಮ || ಸ್ವರವರ್ಣಶ್ರುತಿಮೂರ್ಛನಾಗತಿಯತಿಸ್ಥಾನಪ್ರಯೋಗಕ್ರಿಯಾ
ನಿರತಂ ತಾಳಲಯಾಶ್ರಯಪ್ರಣಯ ನಾನಾ ವೇಣುವೀಣಾನುಗಂ
ಸರಸಂ ಸಂಗತ ಮಾರ್ಗದೇಸಿಯೆನೆ ರಾಗಪ್ರೌಢಿಯಂ ಬೀಱಿ ಬಿ
ತ್ತರದಿಂ ಪಾಡಿದರೋಜೆಯಿಂ ಶ್ರುತಿಸುಖಶ್ರೀದಾಯಕರ್ ಗಾಯಕರ್            ೨೪

ಉ || ಇಂತಿದು ಕಾಮಕಾರ್ಮುಕಲತಾಗುಣದಿಂಚರಮೆಂಬ ಕಾಂತಿವೆ
ತ್ತಿಂತಿದು ವಿಶ್ವಲೋಕಜನಮೋಹನಮಂತ್ರನಿನಾದಮೆಂಬ ಮ
ತ್ತಿಂತಿದು ಕಾೞ್ಪುರಂಬರಿವ ಕರ್ಣರಸಾಯನಮೆಂಬ ನುಣ್ಪಿನಿಂ
ಪಿಂ ತಲೆತೂಗಿಸಿತ್ತು ರಸತುಷ್ಟನರಾಮರರೊಂದು ಗಾವರಂ          ೨೫

ವ || ಅದಱೊಡನೆ

ಚಂ || ಬಹುಲಯಭೇದದೋಜೆ ಗತಿಭೇದದೊಡಂಬಡು ಚಾರಿ ಭೇದದು
ರ್ವಹಿತೆ ತಗುಳ್ದಳಂಕರಣಭೇದದಮರ್ಕೆ ನಿಮಿರ್ಕೆಯಿಂ ರಸಾ
ವಹಮೆನೆ ಕೆಯ್ಗೆ ನಾಲಗೆ ಕವಲ್ತವೊಲಾಗಿರೆ ಹೃದ್ಯವಾದ್ಯಮಂ
ಬಹಳಿಕೆವೆತ್ತು ಬಿತ್ತರಿಸಿ ಬಾಜಿಸಿದರೆ ದಿವಿಜೇಂದ್ರವಾದಕರ್           ೨೬

ಕಂ || ಕಂಕರಿಯ ಸಿವಿಱ ಪೆಂಪಿನ
ಝೆಂಕಟ ಬೊಂಬುೞಿಯ ಪೞವದುಳಿಕೆಯ ಢಕ್ಕಾ
ಸಂಕುಳದ ತಾಳದುಲಿ ನೆಗ
ೞ್ದೇಂ ಕರ್ಣಾಮೃತಸಮುದ್ರಘೂರ್ಣನಮಾಯ್ತೋ        ೨೭

ವ || ಅಂತು ವಸ್ತುಗೀತಂ ವಿಸ್ತರಿಸೆಯುಂ ನಿರವದ್ಯಂ ನಿರವದ್ಯವಾದ್ಯಂ ಚೋದ್ಯ ಮಾಗೆಯುಂ ರಾಗರಸರಂಜಿತಾಂತರಂಗನಾಗಿ

ಮಾಲಿನಿ || ರಚಿತರುಚಿರನೇಪಥ್ಯಂ ಬೆಡಂಗಾಗೆ ಮಂತ್ರೋ
ಪಚಿತ ಬಲಿವಿಧಾನಂ ಪೂರ್ವರಂಗಪ್ರಸಂಗಂ
ರುಚಿರಮೆನಿಸೆ ನಾಂದೀಪೂಜೆಯಂ ಮಾಡಿ ಚೆಲ್ವಿಂ
ಶಚಿಪತಿ ಕೃತಸತ್ಪುಷ್ಪಾಂಜಲಿಕ್ಷೇಪನಾದಂ       ೨೮

ವ || ಆಗಿ ರಂಗಂಬೊಕ್ಕು

ಕಂ || ಆಖಂಡಳಂ ಸಹಸ್ರಮ
ಯೂಖನ ತೆಱದಿಂ ಪ್ರಕೀರ್ಣಪಾದನ್ಯಾಸಂ
ವ್ಯಾಖಂಡಿತಮೆನಿಸಿದ ವೈ
ಶಾಖಸ್ಥಾನದೊಳಳುರ್ಕೆವೆತ್ತೆಸೆದಿರ್ದಂ ೨೯

ಕಟಿಸೂತ್ರಮೆಸೆದುದಿಂದ್ರನ
ಕಟಿತಟವಿನ್ಯಸ್ತಹಸ್ತನಖರುಚಿಯಿನದಂ
ತುಟೆ ಪುಣ್ಯಾತ್ಮಕರಾಶ್ರಯ
ಘಟನೆಯಿನೆಸೆದಿರ್ಕುಮಲ್ತೆ ಮಧ್ಯಸ್ಥಗುಣಂ     ೩೦

ವ || ಆಗಳ್

ಕಂ || ದೇವೇಂದ್ರನಿೞಿಯಿಸಿದನು
ದ್ಭ್ರೂವಿಭ್ರಮವಿಕಚಕುಂಚಿತಾಲಸದೃಷ್ಟಿ
ಶ್ರೀವಿಭವದಿನೊಳ್ಗಾವಿನ
ಪೂವಿನ ಬಿರಿಮುಗುಳ ನೆಲೆಯ ನೆಯ್ದಿಲ್ಗೊಳನಂ           ೩೧

ಭಾವಂಗಳ ವಿಭವಮನನು
ಭಾವಂಗಳ ತುಱುಗಲಂ ವಿಭಾವಂಗಳ ಸ
ದ್ಭಾವಮನಖಿಳರಸಂಗಳ
ಜೀವನಗಳಿವೆನಿಸಿ ಮೆಱೆದನಿಂದ್ರನತಂದ್ರಂ        ೩೨

ಶತಮುಖನ ಸಂಯುತಾಸಂ
ಯುತಂಗಳಱುವತ್ತುನಾಲ್ಕು ಹಸ್ತಂಗಳುಮಾ
ಯತಭುಜದೊಳೆಸೆಯೆ ಕುಣಿವ
ಲ್ಲಿ ತಳಿರ್ತುಮಡಲ್ತಶೋಕತರುವಂ ಪೋಲ್ತಂ  ೩೩

ಉರಚಲ್ಲಿಯ ಕಟಿಚಲ್ಲಿಯ
ಕರಣದ ರೇಚಕದ ಕಣ್ಣ ಕಾಲ್ದುಱುಗಲ ಕಂ
ಧರವಳಯದ ಭುಜಚಳನದ
ಪರಿಣತಿಯಂ ನಾಟ್ಯವೇದಮೂರ್ತಿವೊಲೆಸೆದಂ  ೩೪

ಮ| ಸ್ರ || ಜಿನಪೂಜಾನಂದಮಂದಾನಿಲನಲೆಪದಿನಂದಾಡುತಿರ್ಪೊಂದು ಸಂಕ್ರಂ
ದನ ಕಲ್ಪೋರ್ವೀಜದೊಳ್ ರಾಜಿಸಿದುದು ವಿಲಸದ್ಬಾಹುಸಂದೋಹಶಾಖಾ
ವನನಂ ಪಾಣಿಪ್ರವಾಳಪ್ರಚಯವಿಚಳನಂ ಸ್ಪಷ್ಟದೃಷ್ಟಿಪ್ರಭಾಪು
ಷ್ಪನಿಕಾಯೋಲ್ಲಾಸಮುದ್ಯನ್ಮಕುಟಮಣಿಫಳಾತುಚ್ಛಗುಚ್ಛಪ್ರಕಂಪಂ       ೩೫

ಮ || ಪದವಿನ್ಯಾಸದಿನೆಯ್ದಿ ಕಂಪಿಸೆ ಮಹೀಚಕ್ರಂ ಮಹೀಚಕ್ರಭಾ
ರದಿನದ್ರಿವ್ರಜಮದ್ರಿಸಂಚಳನದಿಂ ದಿಗ್ದಂತಿ ದಿಗ್ದಂತಿ ಜೋ
ಲ್ದುದಱಿಂ ವಾಸುಗಿ ವಾಸುಗಿಕ್ಷುಭಿತದಿಂದಾ ಕೂರ್ಮನಾ ಕೂರ್ಮಕಂ
ಪದಿನಂಭೋಧಿ ಕಲಂಕಿದತ್ತೆನಿಸಿತೇನುಚ್ಚಂಡಮೋ ತಾಂಡವಂ        ೩೬

ವ || ಅಂತುಮಲ್ಲದೆಯುಂ

ಮ || ವಿಭುಲೋಕಂ ವಿಹಟತ್ಕಿರೀಟಹತಿಯಿಂದತ್ತತ್ತ ದಿಗ್ಭಿತ್ತಿ ಭೂ
ರಿಭುಜಾದಂಡಸಹಸ್ರಸಂವಳನದಿಂದತ್ತತ್ತ ಭೂಭಾಗಮಂ
ಘ್ರಿಭವಸ್ಫೀತನಿಘಾತದಿಂ ತಳರ್ದುದತ್ತತ್ತೆಂಬಿನಂ ರಂಜಿಪಾ
ರಭಟೀವೃತ್ತಿಯೊಳುದ್ಧತಾಭಿನಯದಿಂ ಕಣ್ಗೊಂಡನಾಖಂಡಳಂ     ೩೭

ಕಂ || ದ್ವಿಗುಣಿಸಿದುವು ಶಕ್ರನ ನಿಮಿ
ರ್ದೊಗೆವ ಭುಜಂಗಳ ನಖಂಗಳಿಂ ಭಗಣಂಗಳ್
ನೆಗೆದ ನವಗ್ರಹಕಂಕಣ
ದ ಗಭಸ್ತಿಗಳಿಂ ನವಗ್ರಹಂಗಳ ರುಚಿಗಳ್          ೩೮

ವ || ಅಂತು ನರ್ತಿಸುತ್ತವಂತಂತೆ ಪರಮಹರ್ಷ ಪ್ರಕರ್ಷ ಪ್ರಮತ್ತಚಿತ್ತ ನಾವಿರ್ಭೂತ ವೈಕುರ್ವಣಾಕರಣನಾಗಿ

ಕಂ || ಎಮೆಯಿಕ್ಕುವನಿತುಬೇಗ
ಕ್ಕೆ ಮರುತ್ಪಥದೊಳ್ ದಿಗಂತದೊಳ್ ನೆಲದೊಳ್ ತೋ
ರ್ಪಮರೇಂದ್ರನೊಂದೆ ರೂಪಿಂ
ದಮೆ ತನ್ಮಯಮಾಯ್ತು ಜಗದ ಸಚರಾಚರಮುಂ          ೩೯

ವಸುಧಾಗಗನಸ್ಥತೆ ದೂ
ರಸಮೀಪತೆ ಸೂಕ್ಷ್ಮಗುರುತೆ ಶಾಂತೋಗ್ರತೆ ನೀ
ಚಸಮುಚ್ಚತೆ ಯುವತರುಣತೆ
ಪಸರಿಸಿತೇಂ ಪಿರಿದೊ ಶಕ್ರವಿಕ್ರಿಯೆಯೆಸಕಂ        ೪೦

ಭ್ರಮೆಗೊಂಡು ಸುಕೇಶಿ ತಿಲೋ
ತ್ತಮೆ ಮೇನಕಿ ಮಂಜುಘೋಷೆಯೂರ್ವಶಿಯೆಂಬೀ
ಪ್ರಮದೆಯರಮದೆಯರಾದರ್
ತಮಗಿಂದ್ರನ ನಾಟ್ಯಮೀಯೆ ಹೃತ್ಕೌತುಕಮಂ   ೪೧

ಬಳರಿಪುವ ನಾಟ್ಯರಸದೊಳೆ
ಬಳೆದಳಲತೆಗಳವೊಲೊಡನೆ ಕುಣಿವಮರ ನಟೀ
ಕುಳಮೆಸೆದುದಳಿಗಳಳಕಂ
ತಳಿರ್ಗಳ್ ತಳಮಲರ್ಗಳಕ್ಷಿಯೆನೆ ಜಿನಸಭೆಯೊಳ್            ೪೨

ಗೊಂದಣವೆಕ್ಕಣದಮರೀ
ವೃಂದಗಳ ಬಿಳಿಯ ನಿಡಿಯ ಕಣ್ಗಳ ಬೆಳ್ಪುಂ
ಕೆಂದಳದ ಕೆಂಪುಮಾಂತುವು
ಚಂದನಸಿಂಧುರರಸದ ಪೊಸಕಾೞ್ಪುರಮಂ       ೪೩

ಶತಮಖನುಮಮರಿಯರುಮಾ
ಡೆ ತಗುಳ್ದಾರಭಟಿಯಿಂದೆ ಕೈಶಿಕೆಯಿಂದು
ದ್ಧತಮೆನಿಪ ಲಲಿತಮೆನಿಪಭಿ
ನುತ ತಾಂಡವಲಾಸ್ಯವೊಡನೆ ತೋಱಿದುವೆರಡುಂ         ೪೪

ನಿಜದಿಂ ಪುಳೋಮಬಳಪಾ
ಕಜಂಭನಮುಚಿಗಳನಲೆದ ಜಿಷ್ಣುವ ಪಲರುಂ
ವಿಜಯಶ್ರೀದೇವಿಗಳೆನೆ
ಭುಜಕೋಟಿಯೊಳಿರ್ದು ಕುಣಿದರಮರಿಯರರೆಬರ್         ೪೫

ರೋಚಿಸೆ ನಾನಾರಸ ಭಾ
ವೋಚಿತಕರಣಾಂಗಹಾರವಿಧವಲ್ಲಿ ಕೆಲರ್
ಸೂಚಿಸೆ ನಾಟ್ಯಮನಾಡಿದ
ರಾ ಚತುರಾಮರಿಯರರೆಬರಿಂದ್ರನ ನಖದೊಳ್  ೪೬

ವ || ಮತ್ತಂ

ಕಂ || ಕೆಲವಱೊಳಮರಕುಮಾರರ್
ಕೆಲವಱೊಳಚ್ಚರಸಿಯರ್ಕಳಾಡೆ ಭುಜಾಸಂ
ಕುಲದೊಳ್ ಪುಂಸ್ತ್ರೀಜನಮಯ
ಫಲಪನಸಮಿದೊಂದಪೂರ್ವಮೆನಿಸಿದನಿಂದ್ರಂ    ೪೭

ವ || ಅಂತುಮಲ್ಲದೆಯುಂ

ಮ || ಅಳಿಯಿಂ ಶಕ್ರನ ವಿಕ್ರಮಾಂಗದ ಪದಪ್ರಾಗ್ಭಾಗದೊಳ್ ಜಾನುಮಂ
ಡಳದೊಳ್ ಸಿಂಹಕಟೀಪ್ರದೇಶದೊಳುರೋವಿಸ್ತಾರದೊಳ್ ಬಾಹುಸಮ
ಕುಳದೊಳ್ ಕೆಂದಳದೊಳ್ ಕರಾಂಗುಲಿಗಳೊಳ್ ನಿಂದಾಡೆ ದೇವಾಂಗನಾ
ಕುಳಮುಂ ಸ್ತ್ರೀಮಯಮಾಗಿಸಿತ್ತೊ ಮಹಿದಿಗ್ಬ್ರಹ್ಮಾಂಡಮಂ ತಾಂಡವಂ     ೪೮

ಉ || ಆಡುವ ನಾಕನಾಯಕನ ಬಾಹುಸಮೂಹದ ಮೇಲೆ ಲೀಲೆವೆ
ತ್ತಾಡುವ ದೇವಕನ್ನೆಯರ ಭೂಷಣರಶ್ಮಿ ಕಟಾಕ್ಷಕಾಂತಿ ಕೈ
ಗೂಡಿದ ದೇಹದೀಪ್ತಿ ನಭಮಂ ಬಳಸುತ್ತಿರೆ ಲೋಕಮೆಲ್ಲಮೋ
ಲಾಡುವ ಮಾೞ್ಕೆಯಾಯ್ತು ನವನಾಟ್ಯರಸಾಮೃತಸಾರಪೂರದೊಳ್         ೪೯

ವ || ಅಂತು

ಮ || ಪ್ರ || ಜನಹರ್ಷೋದಾರಕೇದಾರದ ಶಶಿಗೆ ಸುಧಾಸಾರಮಂ ಸೂಸೆ ದೇವೀ
ಜನಗೇಯಂ ಗೇಯಮಂ ನೋಯಿಸಿದನುನಯದಿಂ ಪೊಣ್ಮೆ ನಾನಾಲಯಾಲಂ
ಬನವಾದ್ಯಂ ವಾದ್ಯಮಂ ಹೃದ್ಯಮನನುಗತಮಂ ಮಾಡೆ ಗೀರ್ವಾಣವಾಕ್ಯಾ
ಭಿನುತ ಶ್ರೀಲಾಸ್ಯಮಂ ಲಾಸ್ಯದೊಳಮರ್ದೆಸೆದತ್ತಿಂದ್ರನಾನಂದನೃತ್ಯಂ         ೫೦

ವ || ಅಂತು

ಮ || ರಸಿಕರ್ ಬಣ್ಣಿಪೆ ಭಾವಕರ್ ಪೊಗೞೆ ಜಾಯಾಜೀವಿಗಳ್ ಕೂರ್ತು ಕೀ
ರ್ತಿಸೆ ತಜ್ಞರ್ ತಲೆದೂಗೆ ದೇವಸಭೆ ಸಂತೋಷಕ್ಕೆ ಪಕ್ಕಾಗೆ ತ
ದ್ವಸುಧೇಶಂ ಬೆಱಗಾಗೆ ಮಚ್ಚಿ ಮೆಱೆದಂ ಮಿಕ್ಕಿಂತು ಸಂಕ್ರಂದನಂ
ರಸಭಾವಾಂಗಿಕ ವಾಚಿಕಾಭಿನಯ ಲೀಲೋತ್ಪಾಟ್ಯಮಂ ನಾಟ್ಯಮಂ            ೫೧

ಕಂ || ಮಚ್ಚುಮುಳಿಸಿಲ್ಲದಭವಂ
ಮಚ್ಚುವುದದು ಕೂಡದೆನಗೆ ನಟವೃತ್ತಿ ಕರಂ
ತುಚ್ಚತನವೆನ್ನದಾಡಿದ
ನಚ್ಚರಿಯೆನೆ ವಜ್ರಿ ಭಕ್ತಿವಶರೇಗೆಯ್ಯರ್          ೫೨

ವ || ಅಂತು ನರ್ತಿಸಿದ ನರ್ತನದನಂತರಮನಂತ ಮಂಗಳೋಪಕರಣಪರಿಚಿತ ಮಾಗೆ ನಾಮಕರಣಕಲ್ಯಾಣದೊಸಗೆಯುಮನಸದಳಂ ಮಾಡಿ

ಕಂ || ಪ್ರವಿತತ ಪುಣ್ಯೋದಯದಿಂ
ಭುವನಸ್ತುತಿಸುಕೃತಿಯೆನಿಪ ಕುವಳಯಕಮಳೋ
ತ್ಸವಕರನೆನಿಪೀ ಸ್ವಾಮಿಗೆ
ಸುವಿಧಿವೆಸರ್ ಪುಷ್ಪದಂತವೆಸರನ್ವರ್ಥಂ         ೫೩

ವ || ಎಂದು ಪೆಸರನಿಟ್ಟು

ಕಂ || ಗೋತ್ರಾರಿ ಬೆಸಸೆ ನೆಗೞ್ದಪ
ಗೋತ್ರಾರಿಯ ಶೈಶವೋಚಿತಕ್ರಿಯೆಗೆಲ್ಲಂ
ಧಾತ್ರೀಜನಮಾಗಿಸಿದಂ
ಧಾತ್ರೀಜನಚಾರುಚತುರದೇವೀಜನಮಂ          ೫೪

ವ || ಮತ್ತಂ

ಕಂ || ಓರಗೆಗಳಪ್ಪ ಬಹುವೃಂ
ದಾರಕದಾರಕರನಂದು ಸಹಪಾಂಸುಕ್ರೀ
ಡಾರಸದೊಳ್‌ಸಮುಚಿತಸೇ
ಪಾರತಿಯೊಳ್ ನೆಱೆದು ನೆಗೞೆ ನಿರವಿಸಿ ಮತ್ತಂ            ೫೫

ಸೆಜ್ಜೆವಳರ್ ಬಾಣಸಿಗರ್
ಮಜ್ಜುನವಳರಣಿಗರಂಗರಕ್ಷಕರಾಗಿ
ರ್ಪುಜ್ಜುಗಕಮರರ ಗಣಮನೆ
ಪಜ್ಜತಿಯಿಂದಿರಿಸಿ ಶತಮಖಂ ಕೃತಕೃತ್ಯಂ       ೫೬

ಹರಿಣೀ || ಪರಮಗುರುವಂ ಬೀೞ್ಕೊಂಡಿಂದ್ರರ್ಕಳಂ ಗೆಡೆಗೊಂಡು ಸೌಂ
ದರಿಯನೊಡಗೊಂಡೆಡ್ಡಂ ಕೈಕೊಂಡು ನಾಕದ ಬಟ್ಟೆಗೊಂ
ಡಿರದೆ ನಡೆಗೊಂಡಾರೂಢೈರಾವತದ್ವಿಪನೆಯ್ದಿದಂ
ತ್ವರಿತಗತಿಯಿಂ ಶ್ರೇಯಶ್ಶ್ರೀತಲ್ಪಮಂ ನಿಜಕಲ್ಪಮಂ      ೫೭

ವ || ಅಂತಿಂದ್ರನಿಂದ್ರಲೋಕಕ್ಕೆ ಪೋಪುದುಮಿತ್ತಲ್

ಚಂ || ಭುವನದ ಪಾಪತಾಪಮಗಿಯಲ್ ಮುಗಿಯಲ್ ಕರಕಂಜಪುಂಜಮೊ
ಪ್ಪುವ ವೃಷವಾರ್ದ್ಧಿ ವೃದ್ಧಿವಡೆಯಲ್ ಸೆಡೆಯಲ್ ದುರಿತಾಂಧಕಾರ ಗೌ
ರವಮಿರೆ ತನ್ನ ಶೈಶವಗುಣೋದ್ಗಮದಿಂ ಕ್ರಮದಿಂದಮೇೞ್ಗೆವಾ
ಡಿವದೆಳದಿಂಗಳಂತೆ ಬಳೆದಂ ತಳೆದೊಂದೊದವಂ ಜಿನಾರ್ಭಕಂ         ೫೮

ಕಂ || ಸಂಕ್ರಂದನನಿಹಿತ ಸುಧಾ
ಸಂಕ್ರಮಣಮನಾತ್ಮಹಸ್ತ ಮಧ್ಯಾಂಗುಳಿಯಂ
ತಾಂ ಕ್ರಮದೆ ಪೀರುತಂ ತಣಿ
ದಂ ಕ್ರೀಡಾಮುದಿತಜನಕನನೀ ಹೃದಯಂ        ೫೯

ಕೆಂದಾವರೆಯೆಳವಳ್ಳಿಯ
ಗೊಂದಣದೊಳ್ ಸುೞಿವ ಹಂಸಬಾಲಕನವೊಲಾ
ನಂದದೆ ತಮತಮಗೆತ್ತುವ
ಕೆಂದಳದಮರಿಯರ ತೋಳ ತುಱುಗಲೊಳೆಸೆದಂ            ೬೦