ಕಂ || ಶ್ರೀರಾಜಲಕ್ಷ್ಮೀ ತನ್ನಯ
ಪೇರುರದೊಳ್ ತಾರಹಾರಲತೆಯವೊಲತಿವಿ
ಸ್ತಾರಿಸಿರೆ ಶೋಭೆವೆತ್ತನಿ
ಳಾರಾಧ್ಯಂ ಪ್ರಭುಗುಣಾಬ್ಜವನಕಳಹಂಸಂ      ೧

ವ || ಆ ಸಮಯದೊಳ್

ಚಂ || ಪಿತೃ ಕೃತಕೃತ್ಯನಾಗೆ ಪಸವಂ ಜನಸಂತತಿ ನೀಗೆ ಶತ್ರುಸಂ
ತತಿ ತಲೆವಾಗೆ ಶಿಷ್ಟಜನದಾಱಡಿ ನಾೞ್ಕಡಿವೋಗೆ ತೇಜಮು
ದ್ಧತರನೆ ಕೊಂದುಕೂಗೆ ಸಕಳಾವನಿ ರಾಗಿಸಿ ಬೀಗೆ ಕೀರ್ತಿ ದಿ
ಕ್ತತಿಗಳ ಮೇಗೆ ತೇಗೆ ತಳೆದಂ ಭುವನಪ್ರಭು ರಾಜ್ಯಲಕ್ಷ್ಮಿಯಂ        ೨

ಮ || ಸ್ಥಿರಮೂಲಂ ಪತಿ ಶಾಖೆ ಮಂತ್ರಿನಿಚಯಂ ಕಂದಂ ಮಹೀಚಕ್ರಮಂ
ಕುರಜಾಲಂ ಜಯಸೇನೆ ಪತ್ರನಿವಹಂ ಮಿತ್ರವ್ರಜಂ ಪುಷ್ಟಮಂ
ಜರಿ ದುರ್ಗಂ ಫಲಕೋಟಿ ಕೋಶಮೆನೆ ಮೆಯ್ವೆತ್ತಿರ್ದ ಸಪ್ತಾಂಗಬಂ
ಧುರಲಕ್ಷ್ಮೀಲತೆ ಪತ್ತೆ ತನ್ನನೆಸೆದಂ ಸಮ್ಯಕ್ತ್ವರತ್ನಾರ್ಣವಂ          ೩

ಅತಿಶಾಂತಾತ್ಮಕನಾದೊಡಂ ಹಿಮಕರಂ ಪಂಕೇಜಸಂಕೋಚನ
ಸ್ಥಿತಿಯಂ ಕೌಮುದಸೌಮುದಸ್ಥಿತಿಯನೌದಾಸೀನ್ಯದಿಂ ಮಾೞ್ಪವೋಲ್
ಸತತಂ ಮಾಡಿದನೇಕರೂಪಮಹಿಮಂ ದುಷ್ಟರ್ಗೆ ಶಿಷ್ಟರ್ಗೆ ದು
ಸ್ಥಿತಿಯಂ ಸುಸ್ಥಿತಿಯಂ ನಿಜಂ ಸುವಿಧಿಗಿಂತೀ ವಿಕ್ರಮಂ ಪ್ರಕ್ರಮಂ   ೪

ವ || ಅಂತುಮಲ್ಲದೆಯುಂ

ಕಂ || ಮೃದುಭಾವನಾಗಿಯುಂ ನೃಪ
ನುದಗ್ರವಿಗ್ರಹಕಠೋರರಂ ಬಾಧಿಸಿದಂ
ಮೃದುಶೀತವಚ್ಛವಾಗಿಯು
ಮುದಕಂ ಬಾಧಿಪವೊಲಧಿಕ ವಾತಾತ್ಮಕರಂ      ೫

ವ || ಮತ್ತಂ

ಚಂ || ಎಱಗದ ತೀರಭೂರುಹಮನೆಯ್ದೆ ಮೊದಲ್ಗಿಡೆ ಕೀೞ್ವ ಬೆಂಗೆ ಬಿ
ೞ್ದೆಱಗಿದ ವಂಜುಳಪ್ರಕರಮಂ ಪರಿವರ್ಧಿಪ ಸಿಂಧುತೋಯದಂ
ತೆಱಗದರಂ ತಳಂಗಿಡಿಪ ನಮ್ರರನುರ್ವಿಪ ರಾಜಲೀಲೆ ಕ
ಣ್ದೆಱೆದುದು ಪುಷ್ಪದಂತಮಹಿಪಾಳನೊಳತ್ಯಮಲಾರ್ದ್ರಶೀಲನೊಳ್         ೬

ಕುವಳಯಬಂಧುವಾಗಿಯುಮಿನಂ ನವಯವ್ವನನಾಗಿಯುಂ ದಶೋ
ದ್ಭವತನು ಸೌಮ್ಯನಾಗಿಯುಮಶೇಷಜಗದ್ಗುರು ಭೋಗಿಯಾಗಿಯುಂ
ಪ್ರವಿಗತ ವಕ್ರಮಾರ್ಗನಚಳಾತ್ಮಕನಾಗಿಯುಮತ್ಯುದಾತ್ತಸಂ
ಭವನೆನಿಸಿರ್ದು ಮತ್ತಮವಿರುದ್ಧಗುಣೋನ್ನತನಾದನಾ ನೃಪಂ     ೭

ವ || ಅಂತು ಗುರುಜನೋಪರೋಧದಿಂ ತನಗಿನಿಸನುಭೂಯಮಾನೆಯಾದ ರಾಜ್ಯಲಕ್ಷ್ಮಿಯಂ ಸಮಧಿಕೈಶ್ವರ್ಯಮದಮತ್ತೆಯೆಂದು ಸಮದಮಾತಂಗಸಂಪತ್ಪ್ರದಾನೆಯೆಂದು ನಿಸರ್ಗದುರ್ಗೋಪ ಸಂಚಿತಾರ್ಥಪ್ರಪಂಚೆಯೆಂದು ಗುರುಜನೌಚಿತ್ಯ ವಿನಯೋಪಚಾರ ದೂರೆಯೆಂದು ಪ್ರತಿಕೂಲ ರಾಜವಿಷಯೋಪಭೋಗಲಂಪಟಾತ್ಮೆಯೆಂದು ದುಸ್ಸಹಮಹಾಕ ಲಹಕಲುಷಿತಸ್ವಭಾವೆಯೆಂದು ಪರಪುರುಷಕಂಠಗ್ರಹಾನುರಕ್ತಭಾವರಸಿಕೆಯೆಂದು ಮನದೊಳೇವಯಿಸಿ ಪುರುಡು ಪುಟ್ಟಿ ಮೇಗುದೋಱಿ ಸವತಿ ಮಾಡುವಂತೆ

ಉ || ಭೂವರನಪ್ಪ ಚಂದ್ರಿಳಪುರಾಧಿಪನಪ್ಪಿನವಂಶನಪ್ಪ ಶೌ
ರ್ಯಾವಹನಪ್ಪ ಸಿಂಹರಥರಾಜನನಂದನೆಗೆಂದು ಚಂದ್ರಿಕಾ
ದೇವಿಗೆ ರೂಪವಿಭ್ರವಿಲಾಸಗುಣಾನ್ವಿತ ಸಚ್ಚರಿತ್ರ ಲೀ
ಲಾವತಿಗಿತ್ತನಗ್ರಮಹಿಷೀಪದಮಂ ಮನುಜೇಂದ್ರಚಂದ್ರಮಂ         ೮

ಮ || ವಿನಯಂ ರೂಪು ವಿವೇಕಮನ್ವಯದ ಪೆಂಪೊಳ್ಪಾರ್ಪು ಸೌಭಾಗ್ಯಮೆಂ
ಬಿನಿತುಂ ರಾಣಿಯರ್ಗೆಲ್ಲಮುಳ್ಳೊಡಮಧೀಶಂ ಚಂದ್ರಿಕಾದೇವಿಗಿ
ತ್ತನತಿಸ್ನೇಹದಿನಾಣೆಗೋಸಣೆಯನೇಂ ಸದ್ಗಣ್ಯಪುಣ್ಯಪ್ರಭಾ
ವನೆ ಮೆಯ್ವೆತ್ತ ಮಹಾಸತೀಜಯಮನಾರ್ ಕೊಂಡಾಡರಾರ್ ಮನ್ನಿಸರ್     ೯

ವ || ಅಂತಾ ಜಗತ್ಪವಿತ್ರ ಚಾರಿತ್ರವಾರ್ಧಿಗರ್ಧಾಂಗಲಕ್ಷ್ಮಿಯಾದಾ ಮಹಾದೇವಿಯ ಗರ್ಭದೊಳ್ ಪೂರ್ವಜನ್ಮಸಂಚಿತಾಗಣ್ಯಪುಣ್ಯಪ್ರಭಾವದಿಂ

ಮ || ಸ್ಮರಸೌಮ್ಯಾಕೃತಿ ವಿಶ್ರುತಂ ಶ್ರುತಕಳಾನಾಥಂ ಕಳಾನಾಥಭಾ
ಸುರವಕ್ತ್ರಂ ಸುರವಕ್ತ್ರಪಾವನಸದಾಚಾರಂ ಸದಾಚಾರಚ
ಕ್ಷುರಭಿವ್ಯಕ್ತಪರಕ್ಷಿತೀಶಗೃಹವೃತ್ತಂ ವೃತ್ತದೋರ್ಬಂಧುರಂ
ಧುರಶೌರ್ಯಾರ್ಜಿತಕೀರ್ತಿ ಕೀರ್ತಿಧರನೆಂಬಂ ನಂದನಂ ಪುಟ್ಟಿದಂ     ೧೦

ವ || ಆತನಿಂ ಬೞಿಕ್ಕೆ ಮಳಯಾನಿಲೆ ಮಣಿಮಾಲೆ ಮದನಲತೆ ಮಹಾನಂದೆ ಜಯನಂದೆ ಚಿತ್ರಲೇಖೆ ಕನಕಲತೆವೆಸರ ಪೆಱಪೆಱರುಮಱಿಕೆಯರಸಿಯರ್ಗೆ

ಕಂ || ನರದೇವನಿಂದ್ರವರ್ಮಂ
ಹರಿಷೇಣಂ ವಿಜಯನಶನಿಘೋಷನನಂತಂ
ವರುಣನಜಬಾಹು ಸಂಜಯ
ನರನು ಪ್ರಾಣಜಯಮುಖ್ಯವೀರರುದಾರರ್     ೧೧

ಅಂಶುಪ್ರಭರುದ್ಯೋತಿಯ
ವಂಶರ್ ಪುಟ್ಟಿದರಪತ್ಯರನುಪಮ ಪುರುಪು
ಣ್ಯಾಂಶರ್ ದ್ವಿಗುಣಿಸಿದ ಚತು
ರ್ವಿಂಶತಿತೀರ್ಥಕರರೆನಿಸಿ ನಾಲ್ವತ್ತೆಣ್ಬರ್         ೧೨

ಚಂ || ಅವರ ವಿಳಾಸದೊಳ್ಪವರ ಮಾಂತನದೊಳ್ಪವರಾಭಿಜಾತ್ಯದೊ
ಳ್ಪವರ ವಿವೇಕದೊಳ್ಪವರ ವಿಕ್ರಮದೊಳ್ಪವರೀವ ಚಾಗದೊ
ಳ್ಪವರ ಚರಿತ್ರದೊಳ್ಪು ಪೊಗೞ್ವಾಗಳಚಿಂತ್ಯಮತರ್ಕ್ಯವತ್ಯಸಂ
ಭವಗಣನಾರ್ಹಮಪ್ರತಿಚಕಲ್ಪಮಜೇಯಮಮೇಯಮಕ್ಷಯಂ      ೧೩

ಕಂ || ಪರಮೌದರಿಕಮೂರ್ತಿಗೆ
ಚರಮಾಂಗಂಗಖಿಳಗುರುಗೆ ಪುಟ್ಟಿದರೆನೆ ಮೆ
ಯ್ಸಿರಿ ತೇಜಮಳವು ಪುಣ್ಯಂ
ಪುರುಷಾರ್ಥಂ ಮಹಿಮೆಯೆಂಬಿವರ್ಗಚ್ಚರಿಯೇ  ೧೪

ವ || ಎನಿಸಿದಾ ಕುಮಾರಕರೊಳಗ್ರಗಣ್ಯನುಮಗಣ್ಯವಿಕ್ರಮನುಂ ಕ್ರಮಾರ್ಹನುಮಪ್ಪ

ಕಂ || ಶ್ರೀಕೀರ್ತಿವರಕುಮಾರಂ
ಗಾಕಂಪಿತರಿಪುನೃಪಂಗೆ ಪರಿಜನಚೇತೋ
ಮಾಕಂದವಸಂತಂಗೆ ಮ
ಹೀಕಾಂತಂ ಯೌವರಾಜ್ಯಪದವಿಯನಿತ್ತಂ        ೧೫

ವ || ಅಂತಿತ್ತು

ಮ || ಪ್ರಿಯದಿಂ ಸೂಡಿದ ಪುಷ್ಪಮಾಳಿಕೆವೊಲಾಜ್ಞಾಲಕ್ಷ್ಮಿಯ ಕೀರ್ತಿಲ
ಕ್ಷ್ಮಿಯುಮುರ್ವೀಶ ದಿಗೀಶಮಸ್ತಕದೊಳೊಳ್ಪಿಂ ನಿಲ್ವಿನಂ ರಾಜ್ಯಲ
ಕ್ಷ್ಮಿಯನಯ್ವತ್ತುಸಹಸ್ರಪೂರ್ವದೊಡವಿಪ್ಪತ್ತಯ್ದುಪೂರ್ವಾಂಗಸಂ
ಖ್ಯೆಯ ಕಾಲಂ ಸಲೆ ತಾಳ್ದಿ ಭೋಗಿಸಿದನಿಂತಿಕ್ಷ್ವಾಕುವಂಶೋನ್ನತಂ  ೧೬

ಮ.ಸ್ರ || ಸ್ಫುರಿತೋಷ್ಣಾಂಶುಪ್ರಕಾಶಂ ದವದಹನಶಿಖಾಕ್ರಾಂತಕಾಂತಾರದೇಶಂ
ಪರಿಪುಷ್ಯತ್ಸಿಂಧುಪಾಥಂ ಸಲಿಲವಿಹರಣಾಸಕ್ತವನ್ಯೇಭಯೂಥಂ
ನರನಾರೀಸ್ವೇದಬಿಂದುಪ್ರವಣಗುರು ನಿರಾರ್ದ್ರೀಕೃತಾರಣ್ಯವಲ್ಲೀ
ತರು ಬಂದತ್ತಂದು ಸಂತಾಪದೆ ಸಕಳಮೃಗಗ್ಲಾನಿ ದಾಘಂ ನಿದಾಘಂ           ೧೭

ವ || ಅಂತು ತನ್ನ ಭಾಸ್ವತ್ತೇಜದೊಡನೆ ಭಾಸ್ವತ್ತೇಜಮೆಸೆಯೆಯುಂ ತನ್ನ ಸನ್ಮಾರ್ಗದೊಡನೆ ಸನ್ಮಾರ್ಗಮುಜ್ವಳಿಸೆಯುಂ ತನ್ನ ವೈರಿಭೂಭೃತ್ಕಂಟಕದೊಡನೆ ಭೂಭೃತ್ಕಂಟಕ ಮುಪತಾಪತಪ್ತಮಾಗೆಯುಂ ತನ್ನ ಶತ್ರುವಾಹಿನಿಗಳೊಡನೆ ವಾಹಿನಿಗಳಂದವೞಿದು ಕುಂದೆಯುಂ ತನ್ನ ನಂದನಸಮೂಹದೊಡನೆ ನಂದನಸಮೂಹಮಾಶ್ರಿತಜನೋಪತಾಪ ಲೋಪಮಾಗೆಯುಂ ಬಂದ ಬೇಸಗೆಯನವನೀಶ್ವರಂ ಕಂಡು ಬಗೆಗೊಂಡು

ಚಂ || ವನದೊಳೆ ಪೊಕ್ಕು ವರ್ತಿಸೆ ಜನಂ ಶಿಖಿಗಾಗೆ ಶಿಖಾಕಳಾಪವ
ರ್ಧನಮಿನನಂ ಘನಸ್ಫುರಣಮಾವರಿಸುತ್ತಿರೆ ಬೆಂಚೆಗಂಚೆಗಳ್
ಕಿನಿಸಿ ವಿಮುಗ್ಧಮಾನಸದೊಳೊಂದೆ ಚರತ್ಪಥಿಕರ್ಗೆ ಬೇವಸಂ
ಜನಿಯಿಸೆ ಬಂದು ಮುಟ್ಟಿದುದಿದೇಂ ಘನಕಾಲವೊ ಘರ್ಮಕಾಲಮೋ          ೧೮

ವ || ಎಂದುತ್ಪ್ರೇಕ್ಷಿಸಿ ನಿಜಾಂತಃಪುರದ ವಿಗ್ರಹಾಗ್ರಹದಿನುಪವನವಿಹಾರ ಶಿಶಿರೋಪ ಕೇಳೀ ಲೀಲೆಯಿಂ ಕಾಲೋಚಿತಕ್ರಿಯೆಯನಾಚರಿಸುತ್ತಿರ್ದೊಂದುದೆವಸಂ

ಮ || ಸಿರಿಯುಂ ತೇಜಮುಮಿಷ್ಟವರ್ಗದೊಲವುಂ ಸ್ತ್ರೀಸ್ನೇಹಮುಂ ದೇಹಮುಂ
ಸ್ಥಿರಮಲ್ಲೆಂದು ನಿವೇದಿಪಂತೆ ಕಿರಣಶ್ರೀತಾೞಿ ಕಾಯ್ಪೇಱೆ ರ
ಕ್ತರಥಾಂಗಕ್ಕೆ ವಿಯೋಗಮಾಗೆ ನಳಿನೀರಾಗೋದಯಂ ಪೋಗೆ ಮೆ
ಯ್ಗರೆದಿರ್ದಂ ರವಿ ವಾರ್ಧಿಯೊಳ್ ಭುವನತಾಪೋತ್ಪಾದಿಗಿಂಬಕ್ಕುಮೇ       ೧೯

ವ || ಅನಂತರಂ

ಕಂ || ರಾಗಮೆ ದೊರೆಕೊಳಿಕುಂ ದೋ
ಷಾಗಮನಮನೆಂದು ಪೇೞ್ವ ತೆಱದಿಂ ಸಂಧ್ಯಾ
ರಾಗಮೆ ದೊರೆಕೊಳಿಸಿತು ತಿಮಿ
ರಾಗಮಮಂ ಜಾರಚೋರಜನವಲ್ಲಭಮಂ      ೨೦

ದಿವಸದವಸಾನದೊಳ್ ಕಮ
ಳವನಂ ನೀರೋಡಿ ನಾಡೆ ಬಾಡಿದುದೇಂ ಚಿ
ತ್ರವೊ ಮಿತ್ರವಿರಹದೊಳ್ ಕೊರ
ಗುವುದೆರವೆ ರಜೋಧಿಕಂ ಜಡಾಶಯನನಿಳಯಂ ೨೧

ಉ || ಬೇ[1][ರ]1ದಿಬೇಗದಿ ವರ್ಕನಸ್ತಮಿಸಿದಂ ಸುಗಿದತ್ತು ತದಿಷ್ಟಕೋಕಪಂ
ಕೇರುಹಮೆಂದು ಬೀಗದಿರು ಗೂಗೆ ಮಲಂಗದಿರುತ್ಪಳಾಳಿ ಸಂ
ಸಾರಿಗೆ ನಿಟ್ಟೆಯಲ್ಲದು ಸುಖಂ ನಿಮಗಂ ಮಗುೞುಂತೆ ನಾಳೆ ದಲ್
ದಾರುಣದುಃಖಮೆಂದುಲಿವವೋಲ್ ಕೊಳರ್ವಕ್ಕಿಯಿನಾದುದುಬ್ಬರಂ          ೨೨

ಕಂ || ಜಿನಮತಮಿಲ್ಲದ ಪದದೊಳ್
ಜನಿಯಿಪ ಕುಮತದೊಳೆ ಯುಕ್ತಿವಲಮೇನಾನುಂ
ಮನಕೆಸೆವಂತೆಸೆದುವು ಪಲ
ವಿನನಿಲ್ಲದ ಪದದೊಳೊಗೆದೆ ತಮದೊಳ್ ಮೀಂಗಳ್     ೨೩

ವ || ಆಗಳರಸನಾಸ್ಥಾನಮಂ ವಿಸರ್ಜಿಸಿ ನಿಜಾಭರಣಕಿರಣಜಾಳಂಗಳೊಳ್ ಸೆಣಸಿ ಬೆಳಪ ಕಳದೀಪಿಕಾ ಕಳಾಪಮೆಳಸಿ ಬಳಸೆ ಬಂದು ಕತಿಪಯಾಂಗರಕ್ಷಕ ಪರೀತನಪಸಾರಿ ಕಾಭರಣಭಾರನಾಗೆ

ಮ || ಉದಯಾದ್ರೀಂದ್ರಮನೇಱಿದಂ ಹಿಮಕರಂ ಪ್ರಾಸಾದಮಂ ಭೂಪನೊ
ಪ್ಪಿದನಿರ್ವಕ್ಕದ ತಾರಕಾಪ್ರಕರದಿಂ ಚಂದ್ರಂ ನೃಪಂ ರಾಜಲೋ
ಕದಿನುದ್ಯೋತಿಸಿದಂ ಹಿಮಾಂಶುರುಚಿಯಿಂ ದೇಹಾಂಶುವಿಂ ಭೂಭುಜಂ
ಮುದಮಂ ಕೌಮುದಕಿತ್ತನಿತ್ತು ರಮಣೀನೇತ್ರಕ್ಕೆ ಧಾತ್ರೀಶ್ವರಂ     ೨೪

ವ || ಅಂತು ನಿಜರಾಜಲೀಲೆಯಂತೆ ಜಲಕ್ಕನಾದ ರಾಜಲೀಲೆಯಂ ಸವಯೋವಯಸ್ಯ ರಾಜಲೋಕ ಪರಿವೃತಂ ಪರಿಮಿತಾಂಗರಕ್ಷಕಪರೀತನಮೃತಕರಧಾಮ ಧವಳಪಟಳಪರಿಚ್ಛಿನ್ನ ಪರ್ಯಂಕನಿಷಣ್ಣನವಲೋಕಿಸುತ್ತುಮಿರ್ಪಲ್ಲಿ

ಶಾ || ಶ್ವೇತದ್ವೀಪಮಿದೆಂಬ ಶಂಕೆ ಮಿಗೆ ಜಂಬೂದ್ವೀಪಮಂ ಪಾಂಡುರುಕ್
ಖಾತಂ ಕೂಡಿ ಪೊದೞ್ದು ಪಜ್ಜಳಿಪ ಚಂದ್ರಾಲೋಕಮಂ ಕಂಡು ತ
ತ್ಪೂತಾತ್ಮಂ ನೆನೆದಂ ತನತ್ತು ಜನನಸ್ನಾನಕ್ಕೆ ಕಲ್ಪಾಮರ
ವ್ರಾತಂ ಮೇರುಗೆ ತಂದು ಪೊಯ್ಯೆ ಕವಿದಭ್ಧಿಕ್ಷೀರಪೂರೌಘಮಂ     ೨೫

ವ || ಆ ಸಮಯದೊಳ್

ಮ || ಇದು ರಾಗಾಂಗದ ಮೋಹವಾರ್ಧಿಗೆ ಪೊಸೞ್ದೌರ್ವಾನಳಜ್ವಾಲೆ ಮೇ
ಣಿದು ಸಂಸಾರಸುಖಾತ್ತಚಿತ್ತ ಗಹನಾತಂಕಕ್ಕೆ ಮೇಣ್ ದಾವಮಿಂ
ತಿದು ವೈರಾಗ್ಯದ ರೂಪುಗಾಣಿಸುವ ದೀಪಜ್ಯೋತಿಯೆಂಬಂತಿರಾ
ದುದು ಭೋಂಕಲ್ ನಭದಿಂ ಪ್ರಭಾಸುಭಗಮುಳ್ಕಾಪಾತಮತ್ಯದ್ಭುತಂ        ೨೬

ವ || ಆಗಳದಂ ಕಂಡು ಗರ್ಜನ್ಮೃಗೇಂದ್ರದಂಷ್ಟ್ರಮಂ ಕಂಡ ವೇತಂಡದಂತೆಯುಂ ದಾವ ಪಾವಕಜ್ವಾಲೆಯಂ ಕಂಡ ವನಶಿಖಂಡಿಯಂತೆಯುಂ ಗರುಡಚಂಚುವಂ ಕಂಡ ಕಂಚುಕೀಂದ್ರನಂತೆಯುಂ ಭಯಂಗೊಂಡು

ಕಂ || ಪುತ್ರಕಳತ್ರಪರಿಗ್ರಹ
ಗಾತ್ರಧನೈಶ್ವರ್ಯಮೆಂಬಿವಾರ್ಗಮನಿತ್ಯಂ
ಧಾತ್ರಿಯೊಳೆಂಬುದನೀಗಳ್
ಸೂತ್ರಿಸಿತೆನ್ನೆರ್ದೆಯೊಳುಳ್ಕೆ ಬಿೞ್ದೀಯುಳ್ಕಂ    ೨೭

ವ || ಎಂದು ನಿರ್ವೇಗಪರನಾಗಿ

ಕಂ || ಸೊಡರಿರೆ ಕೞ್ತಲೆಗೋಡುವ
ಜಡರವೊಲಿನ್ನೆವರೆಮಱಿದುಮಱಿಯದೆ ಮಱೆದಿ
ರ್ದುಡುಪನಿನಾದುದು ಸಾಲ್ವುದು
ತಡೆದಿರದಾಂ ಪಱಿವೆನುಱದೆ ಸಂಸೃತಿಲತೆಯಂ  ೨೮

ಮ || ತನು ಪೆಂಪಿಂಗೆಡೆಯೇ ವಯೋಗತಿ ಕುಲೀನಾಚಾರಮೇ ಸೇವೆಯೊಳ್
ಕನಕಂ ಸೊಕ್ಕಿಸದೇ ಕಷಾಯಮಿನಿದೇ ಭೋಗಂ ಭಯಂದೋಱದೇ
ವನಿತಾಸಂಗಸುಖಂ ಜಘನ್ಯಮೆನೆ ತಪ್ಪೇ ರಾಜಲೀಲಾನುವ
ರ್ತನೆ ದೋಷಾವೃತಮಲ್ಲದೇ ಕ್ಷಿತಿಮನಕ್ಕುದ್ವೇಗಮಂ ಮಾಡದೇ ೨೯

ಉ || ನಿಟ್ಟೆಯಿದೇ ಬೆಡಂಗೆ ನರರೀಖಳಸಂಸೃತಿಯೊಳ್ ಜವಂಜವಂ
ಗೆಟ್ಟೊಡೆ ಮೃತ್ಯು ಸತ್ತೊಡೆ ಬಲಂ ಸಲೆ ನಿಂದೊಡೆ ಮುಪ್ಪು ತಪ್ಪುಕೀ
ಳ್ವಟ್ಟೊಡೆ ಪೊಗದಂತಿರಸುನಂಬುಗೆಗೊಟ್ಟೊಡೆ ರೋಗರಾಜಿ ಕೋ
ಳ್ಪಟ್ಟೊಡೆ ಕಾಲಮೆಯ್ದೆ ಕಡೆಗಾಲಮನೆಯ್ದದೊಡಾತ್ಮದೇಹಮಂ            ೩೦

ಮ || ಅತಿ ನಿಸ್ಸಾರಮಿದೆಲ್ಲಮೆಂದಱಿದುವೆನ್ನೊಳ್ ಮತ್ತೆ ಸಂಸಾರಮು
ಹ್ಯತೆ ಮತ್ತಾಪ್ತಕಳತ್ರಪುತ್ರಜಿನಮೋಹಂ ಮತ್ತೆ ರಾಜ್ಯಾಂಗಸಂ
ಗತಿ ಮತ್ತಿಷ್ಟಸುಖೋಭೋಗರತಿ ಮತ್ತರ್ಥಾರ್ಜನಾಪೇಕ್ಷೆ ಮ
ತ್ತೆ ತದಾನುಗ್ರಹನಿಗ್ರಹಕ್ರಿಯೆ ಗಡೇಂ ಚಿಃ ಕಷ್ಟಮೀ ಚೇಷ್ಟಿತಂ       ೩೧

ಕಂ || ಸಮನಿಸುವ ಸಹಜಶಾರೀ
ರಮಾನಸಾಗಂತುಕಪ್ರಕರಮೆನಿಸಿದ ನಾ
ಲ್ಕುಮುದಗ್ರಪೀಡೆಗೆಡೆಯಾ
ದ ಮಾನವಂಗಾವ ಭವದೊಳಂ ಸುಖಮುಂಟೇ  ೩೨

ಒಡಲಂ ಸಂಸೃತಿಲತಿಕೆಯ
ಮಡಲಂ ಬಹುದುಃಖಬಹಳಲಹರಿಕೆಗಳ ಪೆ
ರ್ಗಡಲಂ ಸುಖಮುಖಮುದ್ರೆಯ
ಹೊಡಲಂ ಬಿಡಲಱಿಯದಂಗೆ ನಿರ್ವೃತಿಯುಂಟೇ           ೩೩

ಚಂ || ಬಗೆಗಿಡೆ ಮುಪ್ಪು ಚಪ್ಪರಿಸದನ್ನೆಗಮುನ್ನತಶಕ್ತಿ ಕುಂದದ
ನ್ನೆಗವೆಳವೆಂಡಿರಿಚ್ಚೆ ಕಿಡದನ್ನೆಗಮೆತ್ತಿದ ಕುತ್ತವೊತ್ತದ
ನ್ನೆಗ ಮನುಜೀವಿಗಳ್ ಮನದೆ ಬೇಸಱದನ್ನೆಗಮುಗ್ರಮೃತ್ಯು ಬಂ
ದುಗುೞ್ದುಗದನ್ನೆಗಂ ಪರಮದೀಕ್ಷೆಗುಪೇಕ್ಷಿಸಿದಂ ವಿವೇಕಿಯೇ        ೩೪

ಗತಬಲನಾಗಿ ವಜ್ರಧರನಲ್ತು ವಯೋಧಿಕನಾಗಿ ತಾರ್ಕ್ಷ್ಯನ
ಲ್ತತಿಜಡಭಾವಿಯಾಗಿ ಕಡಲಲ್ತು ನಿಜಶ್ರುತಿಶೂನ್ಯನಾಗಿ ಮಾ
ರುತಭುಗುಮಲ್ತು ದಂಡಧರನಾಗಿ ದಿಟಂ ಜವನಲ್ತು ನೀರದ
ಸ್ಥಿತಿಗವಕಾಶನಾಗಿ ಗಿರಿಯಲ್ತೆನೆ ವೃದ್ಧನಿದೇಂ ವಿರುದ್ಧನೋ        ೩೫

ಸುದತಿಯರಾನನಾಂಬುಜವನಕ್ಕೆ ಹಿಮಂ ನಯನೋತ್ಪಲಕ್ಕೆ ಘ
ರ್ಮದ ಬಿಸಿಲಂಗವಲ್ಲರಿಗೆ ರೌದ್ರದವಾಗ್ನಿ ಮನೋಗಜಕ್ಕೆ ಸಿಂ
ಗದ ದನಿ ರಾಗನಾಗನಿವಹಕ್ಕೆ ನವಿಲ್ ಪ್ರಣಯಪ್ರದೀಪಸಂ
ಪದಕೆ ಸಮೀರನಲ್ತೆ ರತಿಲಂಪಟವೃದ್ಧನ ಭೋಗದಾಗ್ರಹಂ           ೩೬

ಕಂ || ನಿಱಿದಲೆಯಿಂ ಹಲ್ಲಿಂದಂ
ನೆಱೆ ತಣಿದಿರದಾತ್ಮಸಾರ ಸರ್ವಸ್ವಮುಮಂ
ನೆಱೆಗೊಂಡು ತೇಪೆ ಜರೆ ಮ
ತ್ತುಱುದಂಡಂ ಕೊಂಡೊಡಲ್ಲದೆಂತುಂ ನಡೆಸಳ್            ೩೭

ಉ || ಚಿಂತಿಪ ಸುಯ್ವ ಜಾನಿಸುವ ಕಂದುವ ಕುಂದುವ ದಿಟ್ಟಿಗೆಟ್ಟು ವಿ
ಭ್ರಾಂತಿಪ ಲಜ್ಜೆಯಂ ಮಱೆವ ಕೊಳ್ವುಗದಾಪ್ತರ ಮಾತುಗೇಳದಿ
ರ್ಪಂತುಟನೊಲ್ದಗಲ್ದವರೊಳಾಗಿಪರಂಗನೆಯರ್ಕಳೀಜರಾ
ಕಾಂತೆ ನರಂಗೆ ತಾನಗಲದಾಗಿಪಳೇಂ ವಿಪರೀತವೃತ್ತಿಯೋ ೩೮

ವ || ಆದಲ್ಲದೆಯುಂ

ಮ || ನರಕೋದ್ಯದ್ಗತಿ ಕಟ್ಟು ಕುಟ್ಟು ಕಡಿ ಸೀಳ್ ಕೊಲ್ಲೆಂಬ ದುಃಖಕ್ಕೆ ತಾ
ಯ್ಗರು ತಿರ್ಯಗ್ಗತಿ ಪೂಡು ಪೊಯ್ ನಡೆಸು ಕೊಯ್ ಮೂಗುಱಿ ಪೇಱೆಂಬ ನಿ
ಷ್ಠುರ ನಿಷ್ಪೀಡೆಗಡರ್ಪು ಮರ್ತ್ಯಗತಿ ಕುತ್ತಂ ಮುಪ್ಪು ತೇೞ್ಪಾವುದ
ಳ್ಳುರಿ ಶೋಕಂ ಸಿಡಿಲಸ್ತ್ರಮೆಂಬಿವಱಿನಪ್ಪುಗ್ರಾರ್ತಿಗಾಲಂಬನಂ      ೩೯

ಚಂ || ಸುರಗತಿ ಜೀವಿತಾಂತ್ಯಮಱುದಿಂಗಳದಿನ್ನೆನೆ ಮುನ್ನೆ ಶೋಕದಿಂ
ಕೊರಗುವ ಸುಯ್ವ ಬಾಯೞಿವ ನಲ್ಲರಗಲ್ಕೆಗೞಲ್ವವಸ್ಥೆಗಾ
ಗರಮದಱಿಂ ಚತುರ್ಗತಿಯ ನಾರಕರೊಳ್ ತಿರಿಕಂಗಳೊಳ್ ಮನು
ಷ್ಯರೊಳನಿಮೇಷರೊಳ್ ಸುಖಮನೀ ಖಲ ಸಂಸೃತಿ ಪುಟ್ಟಲೀಗುಮೇ          ೪೦

ಉ || ಪುಟ್ಟದ ಯೋನಿ ಪೊಂದದೆಡೆ ಮಾಡದ ಪಾತಕಮೆಯ್ದದಚ್ಚಿಗಂ
ಮುಟ್ಟದ ನೋವು ಮಚ್ಚಿರದತಿವ್ಯಸನಂ ಗೆಡೆಗೊಳ್ಳದಾಶ್ರಯಂ
ಕಟ್ಟದ ಕರ್ಮಮಾಗದ ಪರಾಭವವೊತ್ತದ ಕುತ್ತವನ್ಯರಿಂ
ಕಿಟ್ಟದ ಕೇಡು ದೇಹಿಗಳೊಳಿಲ್ಲೆನೆ ಸಂಸೃತಿ ಸೌಖ್ಯಸಾರಮೇ         ೪೧

ಮ || ಬಹುಪಲ್ಯೋಪಮಸಾಗರೋಪಮಮೆನಿಪ್ಪಾಯುಷ್ಯರಂ ವಿಸ್ಮಯಾ
ವಹ ಸಾಮರ್ಥ್ಯರುಮಪ್ಪ ದೇವರುಮನೇಕ ಸ್ವರ್ಗದುರ್ಗಸ್ಥರಂ
ಗಹನಂಗೆಯ್ಯದೆ ಕೊಲ್ವನೆಂದೊಡುೞಿದಲ್ಪಾಯುಷ್ಯಸಾಮರ್ಥ್ಯಮೀ
ಮಹಿಯೊಳ್ ಮಾನವಕೀಟಕೋಟಿಯುಮಿದೇಂ ಕಾಳಂಗೆ ಹೇಳಾಂಚಿತಂ         ೪೨

ನಿಜಸೇನಾಪತಿ ಮುಪ್ಪು ದಕ್ಷಸಚಿವಂ ಮೋಹಂ ಮಹಾದೇವಿ ತೃ
ಷ್ಣೆ ಜಯೋದಗ್ರಪರಿಗ್ರಹಂ ವಿಷಯರಾಗಂ ಚಕ್ರಮಂಗಾಮಯಂ
ಗಜವಾಜಿಪ್ರಕರಂ ಕಷಾಯಮೆನೆ ಮೆಯ್ವೆತ್ತಿರ್ದ ಸಂಸಾರಘೋ
ರಜಗದ್ರಾಜ್ಯದೊಳಾರನಾಕ್ರಮಿಸನುಗ್ರಂ ಕಾಲಚಕ್ರೇಶ್ವರಂ            ೪೩

ವ || ಎಂದಿಂತು ಪರಮ ನಿರ್ವೇಗಪರವಾಗಿ ನುಡಿದನಿತಱಿಂ ಮಾಣದೆ ಮತ್ತಂ ದ್ವಾದಶಾನುಪ್ರೇಕ್ಷೆಗಳನನುಗತಿಯಿನನುಸ್ಮರಿಸಲ್ ಬಗೆದು

ಮ.ಸ್ರ || ಜಳರೇಖಾಸಂಚಳಂ ಜವ್ವನಮಮಧನುರ್ಜಾಲಮಂಗಂ ತಟಚ್ಚಂ
ಚಳಮೈಶ್ವರ್ಯಂ ನದೀಬುದ್ಬುದಚಯಚಪಳಂ ಪುತ್ರಮಿತ್ರಾನುಬಂಧಂ
ಜಳಭೃದ್ವಾರಿಪ್ಲವಂ ಸಂಚಿಸಿದೊಡಮೆ ಹಿಮವ್ಯಾಕುಳಂ ಸ್ತ್ರೀಕುಳಂ ಸಾ
ನಿಳವೀಥೀದೀಪ್ತರೋಚಿಸ್ತರಳಮಖಿಳಭೋಗೋಪಭೋಗಾನುಬಂಧಂ         ೪೪

ಉ || ಕಾಯದು ಪುತ್ರಮಿತ್ರತತಿ ಕಾಯದು ತಂದೆಯ ತಾಯ ಕೆಯ್ವೊಲಂ
ಕಾಯದು ದೇವತಾಗಣದ ರಕ್ಷಣೆ ಕಾಯದು ವಜ್ರಪಂಜರಂ
ಕಾಯದು ಮಂತ್ರತಂತ್ರವಿಧಿ ಕಾಯದು ದುರ್ಗಮದುರ್ಗದಾಶ್ರಯಂ
ಕಾಯದನಂತವಾಹಿನಿ ಜವಂ ಕೊಲೆ ಧರ್ಮಮೆ ಕಾಯ್ಗುಮಾರುಮಂ            ೪೫

ಕಂ || ಸಮಸಂದು ಪುಣ್ಯಮಂ ನೆರ
ಪುವಲ್ಲಿ ಪಾಪಮನುಪಾರ್ಜಿಪಲ್ಲಿ ಬೞಿಕ್ಕಂ
ತವಱ ಫಲಮಪ್ಪ ಸುಖದುಃ
ಖಮನನುಭವಿಪಲ್ಲಿ ಜೀವನೊರ್ವನೆ ಪೆಱನೇ    ೪೬

ನೆಗೞ್ದೆನಗೆ ತಂದೆ ತಾಯ್ ಸೊಸೆ
ಮಗಳಕ್ಕಂ ತಂಗಿ ತಮ್ಮನಣ್ಣಂ ಭಾವಂ
ಮಗನಳಿಯಂ ಮೆಯ್ದುನನ
ತ್ತಿಗೆ ನಾದಿನಿ ಮಾವನತ್ತೆ ಪೆಂಡಿತಿ ಗಂಡಂ          ೪೭

ಎಂಬೀ ಮೋಹದ ಬಂಬಲ
ಪಂಬಲೊಳೇಂ ಮುನ್ನೆ ತನ್ನ ದೇಹಾಶ್ರಯದಿಂ
ದಂ ಬಂದನು ಬಂಧನ ತನು
ತಾಂ ಬೇಱೆನೆ ದೇಹಿಗನ್ಯವಸ್ತುವದುಂಟೇ        ೪೮

ಮ || ಬಿಸುನೆತ್ತರ್ ತೊಗಲೆಲ್ವು ಕರ್ಬಸು ಕರುಳ್ ಹಿಂದೊಂಡೆ ಖಂಡಂ ಮಿದುಳ್
ಬಸೆ ಶುಕ್ಲಂ ಕ್ರಿಮಿ ಕೀವು ಕೀಣಿ ಕೊಳೆ ಸಿಂಬುಳ್ ಸಿಳ್ಳುಗಳ್ ಲೋಳೆ ಲಾ
ಳೆ ಸರನ್ಮೂತ್ರಜಳಂ ಮಳಂ ಮಱುಕಮುಗ್ರವ್ಯಾಧಿ ದುರ್ಗಂಧಮು
ರ್ವಿಸುಗುಂ ಪೇಸುಪತಂಕರಂ ಕಿಸುಗುಳಂ ಕಾಯಂ ಶುಚಿಪ್ರಾಯಮೇ ೪೯

ಕಂ || ನಿಯತಂ ಬಳಸಿದ ವಾಯು
ತ್ರಯದಿನಧಸ್ತಿರ್ಯಗೂರ್ಧ್ವಭೇದವಿಕಲ್ಪ
ತ್ರಯದಿಂ ದ್ವಿಸಪ್ತರಜ್ಜೂ
ಚ್ಛ್ರಯದಿಂ ತ್ರಸನಾಳಗರ್ಭಮಿರ್ಕುಂ ಲೋಕಂ    ೫೦

ವ್ರತವಂ ಕೊಂಡೞಿದೊಡೆ ಪರ
ಮತವಂ ನಂಬಿದೊಡೆ ಖಳಕಷಾಯಂ ಮನದೊಳ್
ವೃತಮಾದೊಡೆ ವಿಷಯದೊಳಭಿ
ಮತಮಾದೊಡೆವಷ್ಟಕರ್ಮದಾಶ್ರಯಮಕ್ಕುಂ  ೫೧

ಪರಮಗುಣಮೊಂದೆ ಸಂಯಮಿ
ಗೆರಡು ತಪಂ ಮೂಱು ಗುಪ್ತಿ ನಾಲ್ಕು ಕಷಾಯೋ
ತ್ಕರದೞಿವೆಯ್ದಾಚಾರಂ
ದೊರೆಕೊಳಿಸಿದ ಸುಕೃತದೊದವು ಸಂವರೆಯಕ್ಕುಂ          ೫೨

ಚಾರುತಪೋವ್ರತಗರುಡೋ
ದ್ಗಾರದ ಮಣಿಯಿಂದೆ ದೋಷವಿಷಧರವಿಷಸಂ
ಹಾರಮನಾಗಿಪ ಮುನಿವೃಂ
ದಾರಕನ ನೆಗೞ್ತೆ ಕರ್ಮನಿರ್ಜರೆಗಾರ್ಮಂ           ೫೩

ಪ್ರತಿಭೆಗೆ ಫಲಮಱಿವಿನ ಗತಿ
ಗತಿಗೆ ಫಲಂ ವಿಷಯವಿರತಿ ವಿರತಿಗೆ ಫಲಮಾ
ರ್ಹತಪರಮದೀಕ್ಷೆ ದೀಕ್ಷೆಗೆ
ಸುತಪಂ ಫಲಮೆನೆ ನೆಗೞ್ದುದದೆ ಬೋಧಿವಲಂ  ೫೪

ದಯೆ ವೃಕ್ಷಮೂಲಮೆನಿಕುಂ
ನಿಯಮಂ ವ್ರತಶೀಲಮಾಳವಾಳಮೆನಲ್ಕೇ
ೞ್ಗೆಯನಾಳ್ದು ಸುಖದ ಫಲಪ್ರಾ
ಪ್ತಿಯನಾಗಿಪ ಕಲ್ಪವೃಕ್ಷಮಲ್ಲದೆ ಧರ್ಮಂ      ೫೫

ನಾರಕತಿರ್ಯಗ್ನರ ಬೃಂ
ದಾರಕರೆನೆ ಗತಿಚತುಷ್ಟಯಂಗಳೆ ಸಲೆ ಸಂ
ಸಾರದ್ರವ್ಯಕ್ಷೇತ್ರಾ
ದ್ಯಾರೋಪಿತಭೇದದಿಂದಮದು ಪಂಚಾತ್ಮಂ    ೫೬

ವ || ಎಂದು ಭಾವಿಸುತ್ತುಮಾ ಮಹಾತ್ಮಂ

ಕಂ || ಆವಳುಮನುೞಿದು ಮುಕ್ತಿ
ಶ್ರೀವಧುಗೆ ಪಲುಂಬುತಿರ್ಪನೀ ವಿಭು ಬಿಡನೆಂ
ದೇವಯ್ಸಿ ಮುಳಿದವೋಲ್ ನಿ
ದ್ರಾವಧು ಬಾರದಿರೆ ಕಳೆದನಂದಿನ ದಿನಮಂ       ೫೭

ವ || ಆ ಸಮಯದೊಳ್

ಕಂ || ಕಮಳಾರ್ಥಿ ಮಂದಭಾವಂ
ಕುಮುದಾತ್ತಮಪಾಯಗಮನಮೋಚನಚತುರಂ
ಭ್ರಮರಹಿತಂ ವೈಭಾತಿಕ
ಸಮೀರನೆಸಗಿದುದು ಪೋಲ್ತು ಸುವಿಧಿಯ ಬಗೆಯಂ       ೫೮

ಉ || ಮಿತ್ರಸಮಾಗಮಕ್ಕೆ ಸೆಡೆದಂಬರಮಂ ಬಿಡುವಾತ್ಮಸೇವ ನ
ಕ್ಷತ್ರಗಣಂ ಕಳಲ್ವಿನಮಗಲ್ಚಿ ನಿಶಾಂತವಿರಕ್ತನಪ್ಪ ನಿ
ರ್ಗೋತ್ರನೆನಿಪ್ಪ ಸತ್ಕುವಳಯೋದ್ಗತಲಕ್ಷ್ಮಿಯನೊಕ್ಕು ಪೋಗಲಿ
ರ್ಪತ್ರಿಜನೆಂದು ಕನ್ನಡಿಸಿದಂ ಸುವಿಧೀಶನ ಚಿತ್ತವೃತ್ತಿಯಂ            ೫೯

ವ || ತದನಂತರಂ

ಚಂ || ತವೆ ತಮದೊಡ್ಡು ರಾಜಿಸಲೊಡರ್ಚೆ ದಿಗಂಬರಲೀಲೆ ಪುಟ್ಟೆ ಭೂ
ಭುವನಜನಕ್ಕೆ ದರ್ಶನವಿಶುದ್ಧತೆ ಕುಂದೆ ಬಹುಪ್ರತಾರಕೋ
ದ್ಭವರುಚಿ ನೀರಜಸ್ಥಿತಿಯನಾತಪದೇೞ್ಗೆಯನಾಗಿಸಲ್ ಜಿನಂ
ಸಿವಿಗೆಯನೇಱುವಂತುದಯಶೈಲಮನೇಱಿದನಂಬುಜಪ್ರಿಯಂ       ೬೦

 

[1] ಗ (ಮೂ)