ಕಂ || ಕ್ರಮರಾಜ್ಯಲಕ್ಷ್ಮಿಗವಚ
ತ್ತಮಳ ತಪೋಲಕ್ಷ್ಮಿಗೆಳೆಸುವನಘನ ಮನಮಂ
ಕುಮುದಿನಿಗವಚತ್ತ ದಳ
ತ್ಕಮಳಿನಿ ಪೇೞಾಗಳೇನುದಾಹರಿಸಿದಳೋ       ೬೧

ವ || ಅಂತು ನೇಸರ್ಮೂಡಲೊಡಮಾ ಮಹಾನುಭಾವನ ವಿರಾಗನಿರತಮಾನಸ ಸರೋಜಮನಲರ್ಚರ್ ಮನಂದಂದು

ಮ || ನೆರೆದೆೞ್ತರ್ಪಿನಮಂಡಳಂಗಳಿವು ಬೇಱೆಂಬಂತೆ ಬಂದರ್ ದಿಗಂ
ಬರಮಂ ವ್ಯಾಪಿಸೆ ಭೂಷಣಾಂಶುಪಟಳಂ ಸಾರಸ್ವತಾದಿತ್ಯವ
ಹ್ನ್ಯರುಣವ್ಯಾಹತಗರ್ದತೋಯತುಷಿತಾರಿಷ್ಟರ್ಕಳೆಂಬೆಣ್ಬರುಂ
ವರಲೋಕಾಂತಿಕದೇವ ರತ್ಯಮಳಭಾವರ್ ಬ್ರಹ್ಮಲೋಕಾಂತದಿಂ   ೬೨

ವ || ಅಂತು ಬಂದು

ಕಂ || ಸುರಲೋಕಸುರಭಿಕುಸುಮೋ
ತ್ಕರಗಂಧಾಕ್ಷತದಿನಭವನಡಿದಳಿರ್ಗಳನಾ
ದರದಿಂದರ್ಚಿಸೆ ಮುಕುಳಿತ
ಕರಕಮಳರ್ ನುಡಿದರತಿಗಭೀರಧ್ವನಿಯಿಂ        ೬೩

ಪರಮೇಷ್ಠಿಯೆ ಸಕಳ ಚರಾ
ಚರಗುರುವೆನೆ ವಿದಿತ ಸಕಳತತ್ವನೆ ತೀರ್ಥಂ
ಕರನೆ ಭವಜಲಧಿಕರುಣಾ
ಕರನಾದೈ ಪುಟ್ಟಿದಱಿತಸಂತಸಮೆಮ್ಮೊಳ್      ೬೪

ಮ || ಸಹಜಂ ಮುನ್ನಮೆ ದೇವ ನಿನ್ನ ಮನದೊಳ್ ವೈರಾಗ್ಯಮುಂಟಾದೊಡಂ
ಮಹಿಶಂ ರಕ್ಷಿಪ ಧರ್ಮಸಂತತಿನಿಮಿತ್ತಂ ರಾಜ್ಯಮಂ ತಾಳ್ದಿ ನಿ
ಸ್ಪೃಹನಾಗಿರ್ಪವೊಲಿರ್ದೆನಿನ್ನೆವರಮೀಗಳ್ ದ್ರೋಹದುರ್ಮೋಹನಿ
ಗ್ರನಿನಿಷ್ಠಾಗ್ರಹನಾದೆ ಲೋಕಹಿತರಾರೆಲ್ಲಂದ[1][ದಿನ್ನೇವರಂ]1       ೬೫

ನವ ಮಂದಾರಲತಾಂತಗಂಧಮಿರೆ ಮೆಯ್ವೆತ್ತನ್ಯಪುಷ್ಪಪ್ರತಾ
ನವನಾಘ್ರಾಯಿಪ ತುಂಬಿಯಂತೆ ವಿನಮದ್ಗೀರ್ವಾಣ ಸೌ
ಖ್ಯವಿರಲ್ಕೀ ಕ್ಷಿತಿರಾಜ್ಯಸಂಪದಮನುಂತುಂ ನಚ್ಚೆ ಮೆಚ್ಚಿರ್ದೊಡೀ
ಭುವನಾಧೀಶ್ವರ ನಿನ್ನೆ ಬೋಧದೆಸಕಂ ಚುನ್ನಕ್ಕೆ ಪಕ್ಕಾಗದೇ        ೬೬

ಕಂ || ಕಾಗೆ ಸವಿವಂತು ಸವಿಗುಮೆ
ರಾಗಿಸೆ ಮಿಂದುೞಿದು ನೀರನಂಚೆ ಜಡಾತ್ಮರ್
ಭೋಗಿಪವೋಲ್ ನಿಮ್ಮನ್ನರ್
ಭೋಗಿಸುವರೆ ದುರಿತಸುಖವನೈಹಿಕಸುಖಮಂ  ೬೭

ನಖದಿಂ ಕೆಱಂಕು ದುಱಿಸುವ
ಸುಖಮುಂ ಬೞಿಕೊಳ್ಳನುರಿವ ದುಃಕಮುಮೆಂತಂ
ತಖಿಳ ವಿಷಯೋಪಭೋಗದ
ಸುಖಲವ ಮನುದುಃಖಮನಘ ನೀನಱಿಯದುದೇ         ೬೮

ನಿನ್ನಂ ಪ್ರತಿಬೋಧಿಪುದೆ
ಗ್ಗೆನ್ನದಿರಧಿಕಾರಮೆಮಗಿದಱಿವಿನ ಮದವ
ಲ್ತುನ್ನತ ಪೇೞ್ ಬೆಳಗುವುದೇ
ಕನ್ನಡಿಯಂ ಬೆಳಗುವಂತೆ ಕೆಯ್ಗಾವಲಿಯಂ      ೬೯

ಗುರುಗಳ ಮುಂದೋದುವುದುಂ
ಪರಿವಿಡಿಗೆಯ್ವಂತೆ ನಿನ್ನ ಬಗೆದುದನೆ ಪುನಃ
ಸ್ಮರಣಕ್ಕೆ ತಂದೆವಲ್ಲದೆ
ಪರಿಬೋಧಿಪರಲ್ಲವಖಿಳ ರತ್ನಾಂಬುನಿಧೀ      ೭೦

ವ || ಆದಱಿಂದಂ

ಮ || ಅದಟಂ ಮಿೞ್ತುವಮೊತ್ತಮಂ ಮಿದಿವ ಕಾಳವ್ಯಾಳದಂತಾಳಿಯಂ
ಮೊದಲಿಂ ಕೀೞ್ವ ಸದರ್ಪದರ್ಪಕನ ಕೂರ್ಪಂ ಮೊಟ್ಟೆಮಾೞ್ಪುಗ್ರಮೋ
ಹದವಜ್ವಾಳೆಯನಾಂತು ತೞ್ಗಿಸುವ ಮುಕ್ತಿಶ್ರೀಯ ಶೃಂಗಾರಪೂ
ರದೊಳೋಲಾಡುವ ನಿನ್ನಪೇಕ್ಷೆ ನಿಮಿರ್ಗುಂ ಭದ್ರಂ ಶುಭಂ ಮಂಗಳಂ           ೭೧

ವ || ಎಂದು ಪ್ರತಿಬೋಧಿಸಿ ಬೀೞ್ಕೊಂಡು ಪೋಗಲೊಡಂ

ಉ || ಶಾರದನೀರದಪ್ರಸರಮಧ್ಯದೊಳುಜ್ವಳಿಸಿರ್ದ ಚಂದ್ರಮ
ಶ್ರೀರುಚಿ ಗೌರಸಂಗತಿಯಿನಿರ್ಮಡಿನಿರ್ಮಳಮಪ್ಪವೋಲ್ ರಜೋ
ದೂರನ ನಿಶ್ಚಳಾಶಯದೊಳಾಗಳವರ್ ಪ್ರತಿಬೋಧಿಸಲ್ಕೆ ಸಂ
ಸಾರಶರೀಭೋಗವಿರತಿತ್ರಯಮಗ್ಗಳವಾಯ್ತನರ್ಗಳಂ     ೭೨

ವ || ತದನಂತರಂ

ಮ || ಅವನೀಶಂ ನಿಜಮಂತ್ರಿಮಂಡಳಮಹಾಸಾಮಂತಶುದ್ಧಾಂತಬಾಂ
ಧವವರ್ಗಕ್ಕೆ ಸಮಂತು ಸೂಚಿಸಿ ನಿಜಾಭಿಪ್ರಾಯಮಂ ತೂರ್ಯಘೋ
ಷವವಶ್ಯಂ ದೆಸೆಯಂ ಪಳಂಚೆ ಪಿರಿದೊಂದುತ್ಸಾಹಮಂ ಮಾಡಿ ಗೌ
ರವದಿಂ ಕೀರ್ತಿಧರಂಗೆ ಕೊಟ್ಟನಖಿಳಾಂಗಪ್ರಾಜ್ಯಮಂ ರಾಜ್ಯಮಂ    ೭೩

ವ || ಅಂತು ಚಿರಂತನನರೇಂದ್ರ ಚಾರುಚರಿತಕೀರ್ತಿಧರನಪ್ಪ ಕೀರ್ತಿಧರನ ನನ್ವಯಶ್ರೀಯೊಳಿಟ್ಟು ಮತ್ತುೞಿದ ನರದೇವಪ್ರಮುಖತನಯರುಮನವರ್ಗವರ್ಗೆ ತಕ್ಕ ವೃತ್ತಿ ಪ್ರಪತ್ತಿಯಿಂದೊಡಂಬಡಿಸಿದಾಗಳ್

ಚಂ || ಮಣಿಯದೆ ರಾಜ್ಯಲೋಭವಶದಿಂ ಪುರುಷಾರ್ಥಮನೊಕ್ಕು ಪಾರ್ಥಿವಾ
ಗ್ರಣಿಗಳನೇಕರುಂ ಜವನ ದಾಡೆಯೊಳೞ್ಗಿದರಿಂತು ಬಿಟ್ಟರಾ
ರಣ ಮಱೆದುಟ್ಟ ಮೈಲಗೆಯ ಸೂಡಿದ ಬಾಸಿಗದೊಲ್ಮೆಗುಂಡ ಮೇ
ಲುಣಿಸಿದ ಮೆಲ್ದ ತಂಬುಲದ ಪಾೞಿಗೆದಂದು ಸಮಸ್ತರಾಜ್ಯಮಂ  ೭೪

ವ || ಎಂದು ಲೋಕಮೆಲ್ಲಂ ಪೊಗೞೆ

ಕಂ || ಬಿಡಿಸಿ ವಧೂಜನಮನೊಡಂ
ಬಡಿಸಿ ಪಿತೃದ್ವಯಮನಖಿಳ ವಿಷಯಸುಖಕ್ಕೋ
ಗಡಿಸಿ ಭವಪಾಶಮಂ ಪಱಿ
ಪಡಿಸಿ ವಿಮೋಹಮನಳುರ್ಕೆಗಿಡಿಸಿ ನರೇಂದ್ರಂ    ೭೫

ಪರಿಚಿತಪರಿಜನಮಂ ಪರಿ
ಹರಿಸಿ ಪರಿಸ್ಪಂದಮೊಂದುಮಿಲ್ಲೆನೆ ತನ್ನೊಳ್
ಪರಿನಿಷ್ಕ್ರಮಣಕ್ಕೆ ಮನಂ
ಪರಿಯೆ ಪರಿಚ್ಛೇದಿಸಿದನದೇಂ ಪರಿಣತನೋ     ೭೬

ವ || ಆ ಪ್ರಸ್ತಾವದೊಳ್

ಮ || ತ್ರಿಜಗತ್ಕ್ಷೋಭಿಚತುರ್ವಿಧಾಮರಚಮೂಕೋಳಾಹಳಂ ವ್ಯೋಮಸಾ
ಮಜದಾನಾಂಬು ಕರಂಬಿತಾಂಬರತಳಂ ದೇವೀಜನಾಪಾಂಗದೀ
ಪ್ತಿಯಚಪ್ರಾವೃತ್ತದಿಕ್ತಟಂ ದಿವದಿನೆೞ್ತಂದಂ ಮಹೋತ್ಸಾಹದಿಂ
ನಿಜನೇತ್ರಾಳಿನಿಪೀಯಮಾನಶಚಿವಕ್ತ್ರಾಬ್ಜಾಸವಂ ವಾಸಂ  ೭೭

ವ| ಅಂತು ಬಂದಾ ಸಕಲಕಲ್ಪಾಮರಪ್ರಕರಪರಿವೃತಂ ರಾಜಭವನಮಂ ಪೊಕ್ಕು ಪೌಲೋಮಿಮೆರಸು ಪರಮನಡಿಗೆಱಗಿ ಪಿರಿದುವೊಸಗೆಮರುಳ್ಗೊಂಡು ಜಗತ್ರಿತಯಮಂಗಳನ ನುತ್ತುಂಗಮಂಗಳಸ್ನಾನಪೀಠದೊಳ್ ಕುಳ್ಳಿರಿಸಿ

ಕಂ || ಮಂದರದೊಳ್ ಮಾಡಿದೆವೀ
ಯಂದದೆ ಜನ್ಮಾಭಿಷವಮನಭವನ ಕಿಱಿಯಂ
ದಿಂದು ಪುರಜನಕೆ ತೋರ್ಪವೊ
ಲೆಂದಮರರ್ ನೀಡೆ ದುಗ್ಧಜಲನಿಧಿಜಲಮಂ    ೭೮

ಉ || ನೋಡೆ ಸಮಸ್ತಪೌರಜನವಾಡೆ ಮರುದ್ಗಣಿಕಾಳಿಮಂಗಳಂ
ಬಾಡೆ ಪುಳೋಮಪುತ್ರಿ ಮಿಗೆ ನಾಡೆ ವಿಭೂತಿಯನಿಂದ್ರಕೋಟಿ ಕೈ
ಗೂಡೆ ನಿಳಿಂಪತೂರ್ಯರವಮೋಡೆ ವಿನೇಯರ ಪಾಪಪೀಡೆ ಕೊ
ಡಾಡೆ ಜಗಂ ಜಿನಂಗೆಸಗಿದಂ ಪರಿನಿಷ್ಕ್ರಮಣಾಭಿಷೇಕಮಂ  ೭೯

ವ || ಅನಂತರಂ

ಕಂ || ದಿವ್ಯಾಂಬರ ಭೂಷಣಕುಸು
ಮವ್ಯಾಲೇಪನದೆ ವಜ್ರಿ ಕೆಯ್ಗೆಯ್ಸೆ ಜಗ
ತ್ಸೇವ್ಯ ತಪಃಶ್ರೀಯ ವಿವಾ
ಹವ್ಯಾಪ್ತಿಯ ನವವರಂಬೊಲೊಪ್ಪಿದನನಘಂ  ೮೦

ವ || ಅಂತೊಪ್ಪಿ ವೃಂದಾರಕವಂದವೃಂದ ಜಯಜಯಧ್ವಾನವಗ್ಗಳಿಸೆ ಹರಿಪೀಠದಿಂದೆೞ್ದು

ಮ || ಅನಿಮೇಷಾನಕ ಕೋಟಿಗಳ್ ಮೊೞಗೆ ಕಲ್ಪೇಂದ್ರಪ್ರತೀಹಾರತ
ರ್ಜನಕೋಳಾಹಳಮುಣ್ಮೆ ದೇವಗಣಿಕಾಸಂಗೀತಕಂ ಸೇವ್ಯಮಾ
ಗೆ ನಿಜಾವಾಸದಿನಿಂದ್ರಸಿಂಧುರ ಕರಸ್ಕಂಧಾವಳಂಬಂ ತಪೋ
ವನದತ್ತಲ್ ತಳರ್ದಂ ಪದದ್ಯುತಿವಿಳಾಸಂ ಪಾಸೆ ಪಂಕೇಜಮಂ       ೮೧

ವ || ಆಗಳ್

ಚಂ || ಇದು ದಿವಿಜೇಂದ್ರಮಂದಿರದ ಮಾೞ್ಕೆಯನೀೞ್ಕೆಳಿಗೊಂಡುದಿಕ್ಕಿ ಮೆ
ಟ್ಟಿದುದಿದು ಕಿನ್ನರೇಶ್ವರನ ಪುಷ್ಪಕದೊಪ್ಪಮನೊಪ್ಪುಗೊಂಡುದಿಂ
ತಿದು ನಿಜಲೀಲೆಯಿಂ ರಿತವಿಮಾನದ ಲೀಲೆಯನೆಂಬ ಚೆಲ್ವನಾ
ಳ್ದಿದಿರೊಳಳಂಕೃತಂ ಸಿವಿಗೆ ಬಂದೆಸೆದಿರ್ದುದು ದಿವ್ಯಕಲ್ಪಿತಂ        ೮೨

ಉ || ಯಾಮಿನಿಯಂತೆ ಚಂದ್ರರುಚಿರಾಜಿತವಕ್ಷಯಮೂರ್ತಿಯಂತೆ ಮು
ಕ್ತಾಮಯಭಾಸಿ ಬಾಲರವಿಯಂತೆ ಸಮುದ್ಗತಪದ್ಮರಾಗಮಿಂ
ದ್ರಾಮರನಂತೆ ವಜ್ರಕರಶೋಭಿ ವನಸ್ಥಲದಂತೆ ವಿದ್ರುಮ
ಸ್ತೋಮವಿಳಾಸಿ ವಾಯುಪಥದಂತದು ತಾಂ ಹರಿನೀಳಭಾಸುರಂ    ೮೩

ಕಂ || ಬಿಸುಪಂ ಬೀಱದು ಕುವಳಯ
ದ ಸೊಂಪುನುಡುಗಿಸದು ಮಿಕ್ಕ ಶತಪತ್ರಮನೆ
ೞ್ಬಿಸುತಂ ಸೂರ್ಯಪ್ರಭೆಯಂ
ತೆಸೆದುದು ಸೂರ್ಯಪ್ರಭಾಖ್ಯ ಶಿಬಿಕಾಯಾನಂ   ೮೪

ವ || ಅಂತಾ ಮಹೋತ್ಸವದೊಳುಚಿತಶಿಬಿಕಾನಿಜೋಪಖಚಿತ ಪದ್ಮರಾಗ ರುಚಿಯಿಂದೆ ರಾಗಮಂ ಬೀಱುವಂತೆ ಸೂಸಕದ ಮುತ್ತುಗಳ ಬೆಳಗಿನಿಂ ನಸುನಗೆಯನೆಸಗುವಂತೆ ಬಳಸಿಯುಮೆೞಲ್ವ ಬಾಸಿಗದ ಬಣ್ಣದಿಂ ಕಣ್ಣಾರೆ ನೋಡುವಂತೆ ಮಿಱುಪ ಕಿಱುಗೆಜ್ಜೆಯುಲಿಗಳಿಂ ನಲಿನಲಿದು ನುಡಿವಂತೆ ಘನಘಟಿತಘಂಟಾರವಂಗಳಿಂ ಮಂಗಳಂ ಬಾಡುವಂತೆ ಮಿಳಿರ್ವ ಪಳಯಿಗೆಯ ತುಱುಗಲಿಂ ಕೈನಿಱಿದು ನರ್ತಿಸುವಂತೆ ತೆತ್ತಿಸಿದ ಪುತ್ತಳಿಗಳಾಭರಣಕಿರಣದಿಂ ಸೇಸೆಯಂ ಸೂಸುವಂತೆ ದೇಸೆವಡೆದೆಸೆವ ಸಿವಿಗೆಯಂ ನಿರ್ವಾಣನಿಳಯ ನಿಶ್ರೇಣಿಕಾರೋಹಣಮಂ ಮುಂದುದೋಱಿದಂತೆಱಿದಾಗಳ್

ಕಂ || ಏೞಡಿಯಂ ಮುನ್ನವನಿಪ
ರೇೞಡಿಯಂ ಬೞಿಕೆ ನಭದೊಳಂಬರಚರರ
ತ್ತೇೞಡಿವರಂ ಸುರಾಸುರ
ರೇೞಡಿಯೊಯ್ದರ್ ಬೞಿಕ್ಕಮಭವನನಿಂದ್ರರ್ ೮೫

ಬಂಧುರ ಮಣಿಮಯಶಿಬಿಕಾ
ಕಂಧರರೊಯ್ವಲ್ಲಿ ಜಿನನ ದೇಹಪ್ರಭೆಯಿಂ
ಕಂಧರಪದಮೆಸೆದುದು ಸುರ
ಸಿಂಧುವ ಪೊನಲೊಳಗೆ ಮೂಡಿ ಮುೞ್ಕಾಡುವವೋಲ್   ೮೬

ಧೃತಪುಷ್ಪದಂತ ಸೌಮ್ಯ
ದ್ಯುತಿ ಗುರುಸಿತನೀಳಕೇತು ಚಿತ್ರಾರಸವಿ
ಸ್ತೃತಮೇಂ ಜ್ಯೋತಿರ್ಲೋಕ
ಸ್ಥಿತಿಯವೊಲೆನಿಸಿದುದು ಸಿವಿಗೆ ಖಚರರ ಮನದೊಳ್     ೮೭

ವ || ಅಂತು ಪುರವರಕ್ಕನತಿದೂರಮಪ್ಪ ಪುಷ್ಪಕೋದ್ಯಾನಕ್ಕೆ ಪುಷ್ಪದಂತ ಪರಮೇಶ್ವರಂ ಪೋಗೆವೋಗೆ

ಕಂ || ಬೞಿಸಂದು ಗುರುಜನಂಗಳ್
ಪೞಿಯರ ಮಂತ್ರಿಗಳ ನೃಪರ ಕುವರರ ಮೊತ್ತಂ
ಕೞಿಪಲ್ಕೆ ಪೋಗೆ ವಿಭುವಂ
ಪೊೞಲನುಕರಿಸಿದುದು ಬೀತ ನಂದನವನಮಂ   ೮೮

ವ || ಅಂತು ಪೊೞಲ ಜನ ಮೞಲನಪ್ಪುಕೆಯ್ದು

ಮ || ಪ್ರಕಟರ್ ನೀತಿವಿದರ್ ನೃಪರ್ ಪೞೆಯರಿರ್ದಂತಾಪ್ತರಿರ್ದಂತೆ ಸೇ
ವಕರಿರ್ದಂತೊಳಪೊಯ್ದುದೋ ಪೆಱರನೆಂದುಂ ಬಂದು ಬಂದಾಗಳ
ರ್ಥಕಮನ್ಯಕ್ರಿಯೆಯನ್ಯಜಾತಿಯೆನಿಪಿಂದ್ರರ್ ಪೊರ್ದಿ ವಿಶ್ವಾಸಘಾ
ತಕರೊಯ್ದರ್ ಮಱಪಿಕ್ಕಿ ನಮ್ಮರಸನಂ ತಮ್ಮಲ್ಲಿಗಿನ್ನೇವೆವೋ   ೮೯

ಕಂ || ಪೊಡವಿಯೊಳಿಲ್ಲದ ವಸ್ತುವ
ನಡಿಗಡಿಗೆಡೆಯಾಗಿ ತಂದು ತಂದೀಯುತ್ತುಂ
ಕಡುಕಠಕ್ಕನಿಕ್ಕಿ ಖಳರೆಡೆ
ವಡೆದಿಂತೊಯ್ವನ್ನಮೆಯ್ದೆ ಮಱುಗಿದರರೆಬರ್           ೯೦

ವ || ಎಂದು ನೊಂದು ನುಡಿವ ಜಡಮತಿಗಳಂ ಕೆಲರ್ ಕೃತಮತಿಗಳ್ ಮಾರ್ಕೊಂಡು

ಮ || ಪರಮಜ್ಞಾನಿ ಮರಳ್ವನೇ ಪೆಱರ್ಗಣಂ ನಿರ್ವೇಗಚಿಂತಾನಿರಂ
ತರಿತಸ್ವಾಂತನನಂತಲಕ್ಷ್ಮಿಗೆ ಮರಳ್ದೀ ರಾಜ್ಯಲಕ್ಷ್ಮೀಲವಂ
ಸ್ಥಿರಮಲ್ತೆಂದು ಬಿಸುಟ್ಟೊಡಂಬಡಿಸಿ ಪುತ್ರಂಗಿತ್ತು ತನ್ನೞ್ತಿಯಿಂ
ದರಸಂ ದೀಕ್ಷೆಗೆ ಪೋದನೇಕೆ ನುಡಿವಿರ್ ವೃಂದಾರಕರ್ ನಿಂದ್ಯರೇ    ೯೧

ವ || ಎಂದೋರೋರ್ವರ್ಗೆ ನುಡಿವ ಪುರಜನಂಗಳ ಗುಜುಗುಜಿಯನಂತಃ ಪುರಮಹತ್ತರಿನಱಿದು

ಮ.ಸ್ರ || ಬರುತುಂ ಪೋಗುತ್ತುಮುಳ್ಳಾಭರಣಕುಸುಮವಸ್ತ್ರಂಗಳಂ ಲಂಚಮಿತ್ತಿ
ತ್ತಿರದಿಂಬಿಂ ಸಗ್ಗದಗ್ಗಾಯಿಲೆಯರರಸನಂ ಮೆಚ್ಚಿಸಲ್ಕಾರ್ತು ಕೊಂಡೊಯ್ದು
ರಲಂಪಿಂದೇವೆವೆಂದಂದಗಿದು ಸುಗಿದು ಸುಯ್ವುತ್ತುೞಲ್ದರ್ ಕೞಲ್ದರ್
ಪುರಡಿಂ ಪ್ರಾಯೇಣ ಸೇರ್ಷ್ಯಾಃಸ್ತ್ರಿಯ ಎನೆ ನೃಪಶುದ್ಧಾಂತಕಾಂತಾಜನಂಗಳ್            ೯೨

ವ || ಅಂತು ವಿಹ್ವಳೆಯರಾಗಿ

ಚಂ || ಪರಿಚಯಮಿಲ್ಲದಂತೆ ನೆಱೆ ಕಂಡಱಿತಂ ತನಗಿಲ್ಲದಂತೆ ನಿ
ಷ್ಕರುಣನಗಲ್ದುಪೋದನಧಿರಾಜನಿಳಾತಿಳಕಂ ರಮಾಧವಂ
ಸರಳನಶೋಕವೃತ್ತನಭಯಾತ್ಮಕನುದ್ಗುಣಪೂರನಾರ್ಜವಂ
ಪರಿಚಿತಸತ್ಕದಂಬನೆನಸುಂ ಮರವಾನಿಸನಾದನೆಂಬಿನಂ     ೯೩

ಕಂ || ಆವಿರೆಯಿರೆ ಭರ್ತೃ ತಪಃ
ಶ್ರೀವಧುಗೆಳಸಿರ್ದನೆಮಗದೆತ್ತಣ ಸೊಬಗೆಂ
ದೇವೈಸಿದಂತೆ ಜಿನದೀ
ಕ್ಷಾವಿಧಿಯನಪೇಕ್ಷೆಗೆಯ್ದರರಸಿಯರಾಗಳ್        ೯೪

ಆದರಿಸಿ ಪಿರಿಯಸಿರಿಗಾ
ಹ್ಲಾದದಿನೆಡೆಮಾಡಿ ಸುಖದಿನಿರಿಸಿದಧೀಶಂ
ಪೋದೊಡೆ ಪೆಂಡಿರ್ ಬೞಿಸಂ
ದಾದುದನಾಗದೊಡೆ ಸಜ್ಜನಿಕ್ಕೆಗೆ ಪೆಂಪೇಂ       ೯೫

ವ || ಎಂದಾ ವಿರಕ್ತೆಯರು ಮಾವಲ್ಲಭಾನುಗಮನಾಸಕ್ತೆಯರುಮೊಂದಾಗಿ

ಚಂ || ಅಡಪಮನತ್ತಲೊಯ್ ಡವೆಕಯಂ ಕಳೆ ಸೀಗುರಿ ಬೇಡ ಬೀಸದಿರ್
ಕೊಡೆಯ ವಿಡಂಬಮೇಕೆ ಸಿರಿಗನ್ನಡಿಂ ಪೆಱಸಾರ್ಚು ಭೂಮಿಯು
ಗ್ಗಡಣೆಯ ಮಾತು ಮಾಣ್ಗೆ ಬಿಸುಡಂದಣಮಂ ದಯೆಗೆಯ್ದು ವಲ್ಲಭಂ
ನಡೆದನದಾರ್ಗೆ ತೋಱಿದಪೆನಾಂ ನೆಱೆದೀ ಬಹುರಾಜ್ಯಚಿಹ್ನಮಂ  ೯೬

ಮ || ಎವಗಿನ್ನಂಜನರಂಜನಂ ತಿಲಕಲೀಲಾಡಂಬರಂ ಪತ್ರಂಭಂ
ಗವಿಳಾಸಂ ಮಣಿಮೇಖಾಳಾವಿಳಸನಂ ಮಂಜೀರಕೋಳಾಹಳಂ
ನವಶೃಂಗಾರವಿಕಾರಮೇವುದೆನುತುಂ ಬಾಷ್ಪಾಂಬುವುಂ ಗದ್ಗದಾ
ರವಮುಂ ಪೊಣ್ಮೆ ಸಖೀಜನಕ್ಕೆ ನುಡಿದರ್ ವಿಭ್ರಾಂತೆಯರ್ ಕಾಂತೆಯರ್      ೯೭

ವ || ಅಂತು ನುಡಿದನಂತರಂ ನಿಜವಾಸದ ವಿಳಾಸವಿಹಗಂಗಳಂ ನೋಡಿ ಬಂಬೞಂಬಾಡಿ

ಚಂ || ಬಿಡದಿರದಿಂತೆ ತಮ್ಮ ಬಿನದಕ್ಕೆನಸುಂ ಸೆಱೆಗೆಯ್ದರೆಮ್ಮನೆಂ
ದಡಱಿ ಮನಃಕ್ಷತಂ ಬಿಡದೆ ಪಾಳಿಸಿ ಮೇಳಿಸಿ ಪುತ್ರಮೋಹದಿಂ
ನಡೆಪಿದ ಕೂರ್ಮೆಯಂ ಬಗೆವುದಿಲ್ಲಿ ಸಲೀಲಮರಾಳವೇ ಮನಂ
ಬಡೆವ ಮಯೂರವೇ ಚಳಚಕೋರವೆ ರಾಜಿಪ ರಾಜಕೀರಮೇ        ೯೮

ವ || ಎಂದವರ್ಕೆ ಕ್ಷಮೆಗೊಂಡು

ಕಂ || ಲೀಳೆಯೊಳೆ ತಾಮೆ ನಡೆಪಿದ
ಕೇಳೀವನಲತೆಗಳಂ ನಿರೀಕ್ಷಿಸಿ ಸುಯ್ದಾ
ವಾಳವಳಯಂಗಳಂ ಭ್ರಮ
ರಾಳಕಿಯರ್ ಬಾಷ್ಪವಾರಿಯಿಂ ಪೂರಿಸಿದರ್    ೯೯

ವ || ಅದಲ್ಲದೆಯುಂ

ಚಂ || ಪಡಿಯಿಡೆ ನಿಮ್ಮನೆಮ್ಮವಯವಂಗಳಿನೇಡಿಸಿ ಕಾಡುತಿರ್ದುದಂ
ಕಡುದಿಟಮೆಂದು ನೋಯದೊಡನಾಡಿದ ನಣ್ಬನೆ ನೋೞ್ಪುದೆಂಬಿನಂ
ನುಡಿದನುನೈಸಿದರ್ ಕುಸುಮಕೋಮಳೆಯರ್ ವನಕುಂದ ಕೇತಕೀ
ಜಡರುಹ ಕರ್ಣಿಕಾರ ವಕುಳೋತ್ಪಳ ಪಾಟಳ ಚಂಪಕಂಗಳಂ          ೧೦೦

ವ || ಅಂತು ಸಮುಚಿತಚರಾಚರಪರಿಗ್ರಹಂಗಳಂ ಸರಸಸಾತ್ವಿಕೋಕ್ತಿಯಿಂದ ಮಾಱೆನುಡಿದನಂತರ ಮಂತಃಪುರದ್ವಾರದಿಂ ಪೊಱಮಡುವ ಶುದ್ಧಾಂತಕಾಂತೆಯರ ತಂಡಮಂ ಕಂಡು

ಮ || ಅರಸಂ ಬಂದಪನೀಗಳಿಂತೆ ನಿಮಗಿಂ ಭ್ರಾಂತೇಕೆ ಕೊಂಡೊಯ್ಯುತುಂ
ತರುತುಂ ಸ್ವಾಮಿಯೆನಿಪ್ಪುದೇಂ ಪೊಸತೆ ಪೇೞ್ ದೇವರ್ಕಳಂತಾದೊಡಂ
ಧರಣೀಶಾಜ್ಞೆಯನಲ್ಲದೊರ್ವರುಮನಿಲ್ಲಿಂ ಪೋಗಲಾವೀಯೆವಿಂ
ತಿರಿಮೆಂದಲ್ಲಿಯೆ ತಾಗಿದರ್ ವಿಹಿತರಕ್ಷಾಕೋವಿದರ್ ಸೌವಿದರ್    ೧೦೧

ವ || ಅನ್ನೆಗಮಿತ್ತ

ಕಂ || ವನದೇವಿಯರಭವನ ಬರ
ವನಾರಯಲ್ ಮುದದಿನಿದಿರನಟ್ಟಿದ ಚರನೆಂ
ಬಿನಮಾಱಿಸೆ ಬಂದೆಲರನ
ಘನನಂದೊಯ್ದಿರಿಸಿದಮರರಂದಾ ಬನದೊಳ್  ೧೦೨

ವ || ಆಗಳಲ್ಲಿ

ಮ || ಇದಿರೆೞ್ತಂದಮರ್ದಪ್ಪುವಂತೆ ನಯದಿಂ ಸಂಭಾವಿಪಂತರ್ಘ್ಯಮಂ
ಪದೆದೀವಂತಸೆದಿರ್ದುದುಚ್ಚಳಿಪ ಕೇತುವ್ರಾತದಿಂ ರೂಪಗಂ
ಧದ ತಣ್ಗಾಳಿಯಿನಾದ ಪೂವಲಿಯಂ ಭೃಂಗೀರಾವದಿಂ ಪಂಚರ
ತ್ನದ ಸಂದರ್ಭದಿನಿಂದ್ರಶಿಲ್ಪಿರಚಿತ ಶ್ರೀಮಂಡಿತಂ ಮಂಡಪಂ         ೧೦೩

ಚಂ || ಅದು ಭುವನಕ್ಕೆ ಮಂಗಳದ ಮುಂಗುಡಿ ಮೋಹದಪೋಹಭೂಮಿ ಸ
ಗ್ಗದ ಸಿರಿಯೊಗ್ಗು ಧರ್ಮದ ತವರ್ಮನೆ ಶೋಭೆಯ ನಾಭಿ ಭವ್ಯರ
ಭ್ಯುದಯದ ಸಂಕುಮುತ್ಸವದ ತಾಯ್ಗರು ಚಿತ್ತದ ಗೊತ್ತಗಣ್ಯಪು
ಣ್ಯದ ಬೆಳಸೊಳ್ಪಿನುದ್ಭವಗೃಹಂ ಬಹುಲಕ್ಷ್ಮಿಯ ಲಾಸ್ಯಮಂದಿರಂ            ೧೦೪

ವ || ಅಂತು ಮಹನೀಯಮಹಿಮಾವಳಂಬಿಯಾದ ತನ್ಮಹಾಮಂಟಪದೊಳ ಮರೇಂದ್ರವೃಂದಮಿೞಿಪೆ ಶಿಬಿಕೆಯಿಂದಮವತರಿಸಿ ವಿವಿಧ ಮಂಗಳೋಪಕರಣ ಪ್ರಶಸ್ತಹಸ್ತ ವಾಸವವಿಳಾಸಿನೀವಿಕೀರ್ಣಶೇಷಾಕ್ಷತಂಗಳುಮನೇಕ ವೃಂದಾರಕಾನಂದ ದುಂದುಭೀಗಭೀರ ಸ್ವರಂಗಳುಮಶೇಷಾನಿಮಿಷ ಜಯಜಯವಿಶೇಷಘೋಷಂಗಳುಂ ನೆಗೞೆ ತಳರ್ವಘಬಲಾಂತಕಂಗೆ ಬಲಾಂತಕ ಕೆಯ್ಗೊಟ್ಟೊಳಯಿಂಕೆ ಬಿಜಯಂಗೆಯ್ಯಿಸಿ

ಕಂ || ಧೃತಕನಕವೇತ್ರಲತೆ ಚಿ
ತ್ರಿತಮಾಗೆ ಕರಾಂಗುಳೀಯಕ ಪ್ರಭೆಯಿಂದಂ
ಪ್ರತಿಹಾರಪದವಿಯಂ ತಳೆ
ದು ತರ್ಜಿತದ್ಯುಚರಖಚರಕಳಕಳನಿರ್ದಂ           ೧೦೫

ವ || ಆಗಳಾ ಗೃಹಾಭ್ಯಂತರದೊಳ್

ಮ || ವಿಶದೋತ್ತಾಳ ದುಕೂಲ ಕಾಂಡಪಟದಿಂ ಮಂದಾರಪುಷ್ಪೋಪಹಾ
ರ ಶತಶ್ರೀಯನನೇಕ ಮಂಗಳಶುಚಿದ್ರವ್ಯಂಗಳಿಂ ಪ್ರಾಡಕ
ರ್ಮಶಚೀನಿರ್ಮಿತರತ್ನರಂಗವಲಿಯಿಂದೊಪ್ಪಿರ್ದುದಂ ಚಂದ್ರಕಾಂ
ತಶಿಲಾಪಟ್ಟಮನೇಱಿದಂ ದೃಢಗುಣಂ ನೀರೇಱೆ ಭವ್ಯೋತ್ಕರಂ   ೧೦೬

ವ || ಅಂತು

ಚಂ || ಸದಮಲಬೋಧನಾ ಶಿಲೆಯನೇಱಿದೊಡಂಗಜನಂಜಿ ಪುತ್ತನೇ
ಱಿದನಿನನುಟ್ಟುದಂ ಬಿಸುಡೆ ತಲ್ಲಣದಿಂ ಮದನಂ ಬಿಸುಟ್ಟನು
ಟ್ಟುದನಘಮರ್ದನಂ ಕಳೆಯೆ ಮಂಗಳಭೂಷಣಮಂ ವಿಯೋಗವೇ
ಗದೆ ಕಳೆದಳ್ ಮನೋಜವಧು ತನ್ನಯ ಮಂಗಳಭೂಷಣಂಗಳಂ    ೧೦೭

ಬಳಸಿದ ಬೆಳ್ಮುಗಿಲ್ ತೊಲಗೆ ನಿರ್ಜರವಂಚಿರವಾಗೆ ಮಿಂಚು ಸಂ
ಚಳಿಸಿಯಡಂಗೆ ರಂಜಿಪ ದಿನಾಧಿಪನಂತಿರೆ ಜಾತರೂಪಮಂ
ಜುಳನೆಸೆದಂ ತ್ರಿಸಾಕ್ಷಿಯಿನಪೇತ ನತಾಂಶುಕನಾಗಿ ಮುಕ್ತಿಮಂ
ಗಳಶುಚಿಧಾಮನಾಗಿ ವಿಗತಾಭರಣಪ್ರಭನಾಗಿ ನಿಶ್ಚಳಂ    ೧೦೮

ವ || ಅನಂತರಂ

ಕಂ || ಬಗೆ ವನದಾನದ್ವಿಪದಾ
ದಿಗಳೊಳ್ ವಿಥ್ಯಾತ್ವಮಾನಮಾಯಾದಿಗಳೊಳ್
ಪುಗದಿರೆ ಬಾಹ್ಯಾಭ್ಯಂತರ
ಯುಗಲಪರಿಸ್ಪಂದರಹಿತನುಪಶಮಸಹಿತಂ                  ೧೦೯

ಮಾಳಿನಿ || ಸ್ವಗತ ನಿಬಿಡ ಪಲ್ಯಂಕಾಸನೋಲ್ಲಸನೈಂದ್ರೀ
ದಿಗಿಭಮುಖನುದಂಚತ್ಪಂಚಮುಷ್ಟಿಪ್ರಪಂಚಂ
ಪ್ರಗುಣಮತಿ ನಮಸ್ಸಿದ್ಧೇಭ್ಯಯೆಂದಾತ್ಮಕೇಶಾ
ಳಿಗಳನಘದ ಬೇರಂ ತೀರೆ ಕೀೞ್ವಂತೆ ಕಿೞ್ತಂ        ೧೧೦

ಕಂ || ನಾಕೇಶನಾಗಲೊಡನೊಡ
ನಾಕೇಶಮನಾಂತ ಶೋಣಮಣಿಪಟಳಕಮಾ
ಲೋಕನದ ತಣಿವನಿತ್ತುದು
ಕೋಕನದಮಿದಳಿಕಳಾಪವೃತಮೆಂಬಿನೆಗಂ         ೧೧೧

ವ || ಆಗಳಮರಭೇರಿಗಳ್ ಮೊೞಗೆ

ಮ|ಸ್ರ || ಜಳದೇವೀಪತ್ರರೇಖಾಮೃಗಮದರುಚಿ ವೇಳಾವನಂ ತುಚ್ಛತಾಪಿ
ಚ್ಛಳತಾಗುಚ್ಛಪ್ರಭಾಮಂಜರಿ ವಿಮಳಜಳಸ್ಪಷ್ಟದೃಷ್ಟೇಂದ್ರ ನೀಳೋ
ಪಳರೋಚಿರ್ಜಾಳಮೆಂಬಂತೆಸೆದಮೃತಸಮುದ್ರಕ್ಕಳಂಕಾರಮಾಯ್ತಾ
ಗಳೆ ದೇವೆಂದ್ರರ್ಕಳೊಯ್ದಿಂತಭವನ ನವಲೋಲಾಳಿನೀಲಾಳಕೌಘಂ ೧೧೨

ವ || ಅಂತು ಷಷ್ಠೋಪವಾಸದಿಂ

ಕಂ || ನುತಮಾರ್ಗಶಿರದ ಶುದ್ಧ
ಪ್ರತಿಪದ್ದಿನದಪರಯಾಮದೊಳ್ ಸಾಸಿರ್ವರ್
ಕ್ಷಿತಿಪತಿಗಳ್ವೆರಸು ಜಗ
ತ್ಪತಿ ತಳೆದಂ ತಪಮನತನು ತಿಮಿರಾತಪಮಂ   ೧೧೩

ವ || ಅಂತು ಪಂಚಶರಪ್ರಮಾದವಿಜಯಿ ಪಂಚಮಗತಿಪ್ರಾಪ್ತಿಗೆ ಸಂಚಕರಮಂ ಕೊಳ್ವಂತೆ ದೀಕ್ಷೆಯಂ ಕೆಯ್ಕೊಳಲೊಡಂ

ಕಂ || ಪ್ರವರಪನಃಪರ್ಯಯಬೋ
ಧಮೊಗೆಯೆ ಸಪ್ತರ್ಧಿನಿಧಿ ಚತುರ್ಜ್ಞಾನಧರಂ
ಸುವಿಧಿ ಮಣಿದೀಪರುಚಿ ಬೆಳ
ಗುವ ಪಳಿಕಿನ ನಿಳಯದೆಸಕಮಂ ಪೊಸಯಿಸಿದಂ  ೧೧೪

ವ || ಆಗಳನೇಕಾರ್ಚನೆಗಳಿಂದೆ ನಿರ್ವಾಣಪತಿಯನರ್ಚಿಸಿ ಗೀರ್ವಾಣಪತಿ ನಿರ್ವರ್ತಿತ ತೃತೀಯಕಲ್ಯಾಣನಾಗಿ

ಮ.ಸ್ರ || ಪರಮ ವ್ಯಾಮೋಹದಿಂ ಬೆಂಬೞಿಯನುೞಿಯದೆೞ್ತಂದ ಸುಗ್ರೀವಧಾತ್ರೀ
ಶ್ವರನಂ ತತ್ಕಾಂತೆಯಂ ಕೀರ್ತಿಧರಸಹಿತಮಾತ್ಮಪ್ರಬೋಧೋಕ್ತಿಯಿಂದಂ
ನಿರುತಂ ಸಂತೈಸಿ ಕಾಕಂದಿಗೆ ಕಳಿಪಿ ಬಳಿಕ್ಕಂತೆ ಬೀೞ್ಕೊಂಡು ತೀರ್ಥೇ
ಶ್ವರನಂ ಪೋದಂ ಶಚೀಲೋಚನಚಪಳಚಕೋರೀಶರಚ್ಚಂದ್ರನಿಂದ್ರಂ          ೧೧೫

ವ || ತದನಂತರಮಾ ಮುನೀಶ್ವರಂ ಧ್ಯಾನಾಧೀನಮಾನಸನಂದಿನ ದೆವಸ ಮಿರ್ದು ಮಱುದೆವಸಂ ಕೆಯ್ಯೆತ್ತಿ ಪಾರಣೆಯಿರ ಮಾರ್ಗಪ್ರಕಾಶಮಂ ಮಾಡಲೆಂದು

ಕಂ || ಆರ್ಯನುತಂ ಕಣ್ಗಳ್ ತಾ
ತ್ಪರ್ಯದೆ ಯುಗಮಾತ್ರಧಾತ್ರಿಯಂ ಪರಿಕಿಸೆ ಮುಂ
ದೀರ್ಯಾವಿಶುದ್ಧಿ ಸಮನಿಸೆ
ಚರ್ಯೆಗೆ ನಡೆತಂದನಮಳಹೃದಯಂ ಸದಯಂ  ೧೧೬

ದ್ರುತವಿಳಂಬಿತಂ || ದ್ರುತವಿಳಂಬಿತಸಂಭ್ರಮವಿಸ್ಮಯಾ
[ವೃ]ತದಿಗಂತವಿಲೋಕವಿಕಾರವ
ರ್ಜಿತಗತಿಕ್ರಮಮೊಪ್ಪೆ ವನಾಂತದಿಂ
ವ್ರತಿ ಬರುತ್ತಿರೆ ಕಂಡತಿರಾಗದಿಂ         ೧೧೭

ಮ || ಪುಳಕಂ ಕೆಯ್ಮಿಗೆ ಪುಷ್ಯಮಿತ್ರಮಹಿಪಂ ಕೈಗೆಯ್ಸೆ ಸಂಪೂರ್ಣಮಂ
ಗಳಮಂ ಶೈಳಪುರಂ ವಿರಾಜಿಸಿತೊ ಕಾಶ್ಮೀರಾಕ್ಷತಾಲೀಲೆಯಿಂ
ವಿಳಸದ್ವಂದನಮಾಳೆಯಿಂ ತತಪತಾಕಾನೀಕದಿಂ ಕೀರ್ಣ ಪು
ಷ್ಟಳಸತ್ಸಂಗದಿನಂಗನಾಲಟಹ ವಾದ್ಯವ್ರಾತದಿಂ ಗೀತದಿಂ            ೧೧೮

ವ || ಆಗಳ್

ಉ || ಪಾಸುವ ಪಲ್ಲವಂಬೊಲಿರೆ ಕೇಸಡಿಗೆಂಪುಪಹಾರಪುಷ್ಟವಿ
ನ್ಯಾಸಮನುಂಟುಮಾಡೆ ನಖದೀಪ್ತಿ ಮುಖೇಂದುಮಯೂಖಮಾನತೋ
ಪಾಸಕಪಾಣಿಪದ್ಮವನಮಂ ಮುಗಿಸುತ್ತಿರೆ ತತ್ಪುರಾಂತದೊಳ್
ಸೂಸೆ ಲತಾಂತವೃಷ್ಟಿ ಪುಗುದಂತನನಶ್ವರನಾ ಮುನೀಶ್ವರಂ        ೧೧೯

ವ || ಅಂತು ಪೊಕ್ಕು ವಿಳೋಕನಕುತೂಹಳಾಕಳಿತಪುರಜನಾನುಗಮ್ಯಮಾನನಾ ನರೇಂದ್ರ ಮಂದಿರದ ಮುಂದಣ್ಗೆ ಬರಲೊಡಂ

ಉ || ಬಾಜಿಸೆ ತೂರ್ಯಕೋಟಿ ಕಳಶಂ ಗುಡಿ ಕನ್ನಡಿ ಸೇಸೆ ಬಾಸಿಗಂ
ಲಾಜೆ ಫಲಂ ಕಱುಂಕೆ ಲಲನಾಜನಮೆಂಬುಪಚಾರಮಂಗಳಂ
ರಾಜಿಸೆ ಹೇಮವರ್ಣದ ನಿಜಚ್ಛವಿ ಮಂಗಳದೀಪದಂತೆ ನೀ
ರಾಜಿಸೆ ಪುಷ್ಯಮಿತ್ರನಿದಿರ್ಗೊಂಡನಖಂಡಿತ ಭವ್ಯಮಿತ್ರನಂ            ೧೨೦

ವ || ಅಂತಿದಿರ್ಗೊಂಡು ಪಂಚಮುಷ್ಟಿಯಿಂ ಬಂದಿಸಿ

ಕಂ || ಅವನೀಪತಿ ನಿಲ್ಲಿಸಿದಂ
ಸುವಿಧಿಮುನೀಶ್ವರನನಂದು ಸಮಸಂದಿರೆ ಸ
ಪ್ತವಿಧಗುಣಂ ಶ್ರದ್ಧಾದ್ಯಂ
ನವವಿಧಪುಣ್ಯಂ ಪ್ರತಿಗ್ರಹಾದ್ಯಂ ತನ್ನೊಳ್      ೧೨೧

ವ || ಆಗಳ್

ಕಂ || ಸುರಧೇನುವೊಸೆದು ಬಂದಂ
ತಿರೆ ನಿಧಿ ಬಂದಂತಿರಮರಭೂಜಂ ಬಂದಂ
ತಿರೆ ಚಿಂತಾಮಣಿ ಬಂದಂ
ತಿರೆ ಸಿರಿ ಬಂದಂತಿರೊಸಗೆಯಾಯ್ತರಮನೆಯೊಳ್           ೧೨೨

ಮ || ಮುನಿರಾಜಕ್ರಮಕಂಜಪುಂಜಿತರಜೋಲಾಲಾಮನುದ್ದಾಮ ಕಾಂ
ಚನಪೀಠಾಗ್ರದೊಳುಯ್ದು ಕುಳ್ಳಿರಿಸಿ ತತ್ಪಾದೋದಕಶ್ರೀನಿಷೇ
ಚನದಿಂ ಪುತ್ರಕಳತ್ರಮಿತ್ರಸಹಿತಂ ಧಾತ್ರೀಪವಿತ್ರಾತ್ಮನಾ
ದನುಮಾಹ್ಲಾದನತಿ ಪ್ರಮೋದನರಸಂ ಶ್ರೀಭವ್ಯರತ್ನಾಕರಂ         ೧೨೩

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿಕಮಳಗರ್ಭ ಮುನಿಚಂದ್ರ ಪಂಡಿತದೇವ ಸುವ್ಯಕ್ತ ಸೂಕ್ತಿ ಚಂದ್ರಿಕಾಪಾನಪರಿಪುಷ್ಪಮಾನಸಮರಾಳಂ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಪರಿನಿಷ್ಕ್ರಮಣಕಲ್ಯಾಣವರ್ಣನಂ ತ್ರಯೋದಶಾಶ್ವಾಸಂ

 

[1] ದಿಂ ನೀಂ ಬರಂ (ಮೂ)