ಕವಿವಿಚಾರ:

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಇಬ್ಬರು ಗುಣವರ್ಮರು ಕಂಡುಬರುತ್ತಾರೆ. ಮೊದಲನೆಯ ಗುಣವರ್ಮ ಕ್ರಿ.ಶ.೯೦೦ರಲ್ಲಿದ್ದನೆಂದು ಊಹಿಸಲಾಗಿದೆ. ಈತ ಹರಿವಂಶ ಮತ್ತು ಶೂದ್ರಕ ಎಂಬ ಕಾವ್ಯಗಳ ಕರ್ತೃ. ಪ್ರಸ್ತುತ ಸಂಪುಟದ ಕವಿಯನ್ನು ಅಧ್ಯಯನದ ಅನುಕೂಲಕ್ಕಾಗಿ ಆರ್.ನರಸಿಂಹಾಚಾರ್ಯರು ಎರಡನೆಯ ಗುಣವರ್ಮ ಎಂದು ಗುರುತಿಸಿದರು. ಈತ ಪುಷ್ಪದಂತ ಪುರಾಣ ಮತ್ತು ಚಂದ್ರನಾಥಾಷ್ಟ ಎಂಬ ಕೃತಿಗಳನ್ನು ರಚಿಸಿದ್ದಾನೆ.

ಎರಡನೆಯ ಗುಣವರ್ಮ ತನ್ನ ಕಾಲವನ್ನು ಹೇಳಿಕೊಂಡಿಲ್ಲ. ಈ ಬಗ್ಗೆ ವಿವಿಧ ವಿದ್ವಾಂಸರು ಚರ್ಚಿಸಿದ್ದು ಅವರ ಅಭಿಪ್ರಾಯಗಳನ್ನು ಇಲ್ಲಿ ಕ್ರೋಢೀಕರಿಸಿದೆ. ಆರ್.ನರಸಿಂಹಾಚಾರ್ಯರು ಕವಿಚರಿತೆಯ ಮೊದಲ ಸಂಪುಟದಲ್ಲಿ “ಇವನು ಜೈನಕವಿ, ಇವನ ಪೋಷಕನು ಅಹಿತಕ್ಷ್ಮಾದ್ಬ್‌ಋಹದ್ವಜ್ರನಾದ ಕಾರ್ತವೀರ್ಯರಾಜನ ಕೈಯ ಒಳಗೆ ನಾೞ್ಪ್ರಭಿವಾಗಿದ್ದ ಶಾಂತಿವರ್ಮನು; ಗುರು ಕಾರ್ತವೀರ್ಯನ ಗುರುವಾದ ಮುನಿಚಂದ್ರನು” ಎಂದಿದ್ದಾರೆ. ಈತನ ಕಾಲ ನಿರ್ದೇಶಿಸುವಾಗ ಪೂರ್ವಕವಿಸ್ಮರಣೆಯ ಪದ್ಯವನ್ನು ಆಧರಿಸಿ ಜನ್ಮನನ್ನು (೧೨೩೦) ಸ್ತುತಿಸಿರುವುದರಿಂದ ಆ ಕವಿಗಿಂತ ಈಚೆಯವನಾಗಿರಬೇಕು, ಮಲ್ಲಿಕಾರ್ಜುನನು ಪುಷ್ಪದಂತ ಪುರಾಣದ ಉಲ್ಲೇಖಮಾಡಿರುವುದರಿಂದ (ಸು. ೧೨೪೫) ಈತನಿಗಿಂತ ಹಿಂದೆ ಇದ್ದಿರಬೇಕೆಂದು ಊಹಿಸಿದರು. ಇವರು ಕ್ರಿ.ಶ. ೧೨೨೯ರ ಸವದತ್ತಿ ಶಾಸನವನ್ನು ಬೆಂಬಲವಾಗಿ ತೆಗೆದುಕೊಂಡು ಈ ಶಾಸನೋಕ್ತ ಕಾರ್ತವೀರ್ಯ, ಮುನಿಚಂದ್ರ, ಶಾಂತಿನಾಥ ಎಂಬವರು ಪುಷ್ಪದಂತ ಪುರಾಣದಲ್ಲಿ ಉಕ್ತರಾದವರೇ ಇರಬೇಕೆಂದರು. ಶಾಸನದ ಪ್ರಕಾರ ಶಾಂತಿನಾಥನು ಮುನಿಚಂದ್ರನ ಮಂತ್ರಿ. ಶಾಸನದಲ್ಲಿ ಈತನನ್ನು ‘ಇಷ್ಟಶಿಷ್ಟ ಚಿಂತಾಮಣಿ ಎಂದು ವರ್ಣಿಸಿರುವುದು ಪುಷ್ಪದಂತ ಪುರಾಣದಲ್ಲಿ ಬರುವ ‘ಇಷ್ಟಶಿಷ್ಟ ಕಲ್ಪುಕುಜ’ ಎಂಬುದಕ್ಕೆ ಸಂವಾದಿಯಾಗಿದೆ. ಕಾರ್ತವೀರ್ಯನು ಕ್ರಿ.ಶ. ೧೨೦೨ – ೧೨೨೦ರವರೆಗೆ ಆಳಿದ್ದರಿಂದ ಈ ಕವಿಯ ಕಾಲವನ್ನು ಸು.೧೨೩೫ ಎಂದು ನಿರ್ಧರಿಸಿದರು. ಕಾರ್ತವೀರ್ಯನು ಕುಂತಳ ದೇಶದ ಕೂಂಡಿಯನ್ನು ಆಳುತ್ತಿದ್ದರಿಂದ ಕೂಂಡಿಯೇ ಕವಿಯ ಸ್ಥಳ ಇರಬೇಕೆಂಬುದು ಇವರ ಊಹೆ.

ಎ. ವೆಂಕಟಸುಬ್ಬಯ್ಯನವರು ಗುಣವರ್ಮನ ಕಾಲವನ್ನು ಚರ್ಚಿಸುತ್ತ ಕವಿಚರಿತೆಕಾರರು ಹೇಳಿರುವಂತೆ ಈ ಕವಿಯ ಕಾಲದಲ್ಲಿ ಎಂದರೆ ಕ್ರಿ.ಶ.೧೨೩೫ರಲ್ಲಿ ಕಾರ್ತವೀರ್ಯನಾಗಲಿ ಅವನ ಮಗ ಲಕ್ಷ್ಮೀದೇವನಾಗಲಿ ಇರಲಿಲ್ಲವಾದುದರಿಂದ ಈ ಕವಿಯು ನಾಲ್ಕನೆಯ ಕಾರ್ತವೀರ್ಯನ ಸಭೆಯಲ್ಲಿ ಪುಷ್ಪದಂತ ಪುರಾಣವನ್ನು ಬರೆದುದು ಅಸಂಭವವೆಂದು ಹೇಳಿ “ಜನ್ನನು ಯಶೋಧರ ಚರಿತ್ರೆ ಬರೆದ ಕಾಲದಿಂದ ಎಂದರೆ ೧೨೦೯ರಿಂದ ಈ ಕಾರ್ತವೀರ್ಯನ ಆಳ್ವಿಕೆಯ ಅಂತ್ಯಕಾಲವಾದ ೧೨೨೦ರೊಳಗೆ ಎಂದರೆ ೧೨೧೬ರಲ್ಲಿ ಈ ಕಾವ್ಯವನ್ನು ಬರೆದಿರುವನು” ಎಂದು ಪ್ರತಿಕ್ರಿಯೆ ತೋರಿದರು. ಇದನ್ನು ಗಮನಿಸಿದ ಕವಿಚರಿತೆಕಾರರು ಕವಿಚರಿತೆಯ ಮೂರನೆಯ ಸಂಪುಟದ ಗ್ರಂಥಶುದ್ಧಿ ಭಾಗದಲ್ಲಿ ಗುಣವರ್ಮನ ಕಾಲವನ್ನು ೧೨೧೫ ಎಂದು ಸ್ವೀಕರಿಸಿದರು.

ವೆಂಕಟರಾವ್ ಮತ್ತು ಶೇಷಯ್ಯಂಗಾರ್ಯರು ಪೂರ್ವೋಕ್ತ ವಿದ್ವಾಂಸರ ಚರ್ಚೆಯನ್ನು ಮುಂದುವರಿಸಿ ವಜ್ರದೇವ ಮತ್ತು ಲಿಪಿಕಾರ ಮಾದಿರಾಜನ ಮೇಲೆ ಕೇಂದ್ರೀಕರಿಸಿ ಕೆಲವು ತೀರ್ಮಾನಗಳನ್ನು ನೀಡಿದರು. ಪುಷ್ಪದಂತ ಪುರಾಣದ “ವಜ್ರದೇವನರನಾಸ್ಥಾನದೊಳ್ ಎಂದೋರಂತಿರೆ ಕೋವಿದರ್ ಕೂರ್ತ ನಣ್ಪಿಂದೆ ಕೊಂಡು ಕೊನೆಯಲ್ ಅದಂ ಶಾಂತಿವರ್ಮಂ ಕೇಳ್ದು ಎನ್ನಂ ಆದರಿಸಿ ಈಗಳ್ ನೀಂ ಈ ಪುರಾಣಮಂ ಪೇೞ್” ಎಂಬ ಪದ್ಯಭಾಗವನ್ನು ಒರೆಹಚ್ಚಿ ವಜ್ರದೇವನಿಗೂ ಈ ಪುರಾಣರಚನೆಗೂ ಯಾವ ಸಂಬಂಧವೂ ಇಲ್ಲ. ವಜ್ರದೇವನೇ ಆ ಕಾರ್ತವೀರ್ಯನೆಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ ಎಂದು ವಾದಿಸಿ ವಜ್ರದೇವನನ್ನು ಗುರುತಿಸಲೆತ್ನಿಸಿದರು. ಹಾಸನಜಿಲ್ಲೆಯ ೧೦೬ನೆಯ ಶಾಸನವನ್ನು ಸಾಕ್ಷಿಯಾಗಿರಿಸಿಕೊಂಡು ಇಲ್ಲಿಯ ಎರಡನೇ ಬಲ್ಲಾಳನ ಪ್ರತಿದ್ವಂದ್ವಿಯಾದ ವಜ್ರದೇವನೇ ಈ ಕವಿ ಉಲ್ಲೇಖಿಸಿರುವ ವಜ್ರದೇವನೆಂದು ನಿರ್ಧರಿಸಿದರು. ಈ ಕಾರಣಗಳನ್ನೊಡ್ಡಿ ಇವರು ಗುಣವರ್ಮನ ಕಾಲವನ್ನು ೧೨೨೦ – ೧೨೩೦ ಎಂದು ಅಂಗೀಕರಿಸಿದರು.

ಡಿ.ಎಲ್. ನರಸಿಂಹಾಚಾರ್ಯರು ಇವರೆಲ್ಲರ ಮಂಡನೆಗಳನ್ನು ಇಟ್ಟುಕೊಂಡು ಎ. ವೆಂಕಟರಾವ್ ಮತ್ತು ಹೆಚ್. ಶೇಷಯ್ಯಂಗಾರ್ಯರು ಹೇಳಿರುವ “ಈ ವಜ್ರನ ಆಸ್ಥಾನದಲ್ಲಿ ಪಂಡಿತರು ಗುಣವರ್ಮಕವಿಯ ಪಾಂಡಿತ್ಯವನ್ನು ಹೊಗಳಿದರೆಂದೂ ಆ ಹೊಗಳಿಕೆಯನ್ನು ನಾಲ್ಕನೆಯ ಕಾರ್ತವೀರ್ಯರಾಜನಲ್ಲಿ ನಾೞ್ಪ್ರಭುವಾಗಿದ್ದ ಶಾಂತಿವರ್ಮನು ಕೇಳಿದ” ಎಂಬ ಮಾತನ್ನು ಶಂಕಿಸಿದರು. ಕವಿಯನ್ನು ಹೊಗಳಿದ್ದು ಒಬ್ಬ ರಾಜನ ಆಸ್ಥಾನದಲ್ಲಿ; ಬೇರೊಬ್ಬ ರಾಜನಲ್ಲಿ ಮಾಂಡಲಿಕನಾದವನು ಕಾವ್ಯವನ್ನು ಬರೆಯುವಂತೆ ಪ್ರೇರಿಸಿದವನು ಈ ರೀತಿಯಾಗಿ ಅರ್ಥಮಾಡುವುದು ಸರಿಯಾಗಿರುವಂತೆ ತೋರುವುದಿಲ್ಲ ಎಂದು ಹೇಳುತ್ತ ಶಾಸನ ಶಾಸನದ ವಜ್ರದೇವನ ಗುಣವರ್ಮ ಹೇಳಿದ ವಜ್ರದೇವನೇ ಏಕಾಗಿರಬೇಕು ಎಂದು ಪ್ರಶ್ನಿಸಿ, ಗುಣವರ್ಮ ಕಾರ್ತವೀರ್ಯನಿಗೆ ‘ಅಹಿತಕ್ಷ್ಮಾಭೃದ್ಬೃಹದ್ವಜ್ರ’ ಎಂದು ವಿಶ್ಲೇಷಿಸಿರುವಲ್ಲಿಯೇ ಆ ರಾಜನಿಗೆ ವಜ್ರದೇವ ಎಂಬ ಹೆಸರೂ ಇತ್ತೆಂಬುದು ಧ್ವನಿತವಾಗುತ್ತದೆ ಎಂಬ ಹೊಸ ಅಂಶವನ್ನು ನೀಡಿದರು.

ಬಿ.ಎ. ವಿವೇಕ ರೈ ಅವರು ಈ ಎಲ್ಲ ವಿದ್ವಾಂಸರ ಚರ್ಚೆಗಳನ್ನು ಮುಂದಿಟ್ಟುಕೊಂಡು ಹೀಗೆ ನಿರ್ಧರಿಸಿದರು – “೨ನೆಯ ಗುಣವರ್ಮನು ೪ನೆಯ ಕಾರ್ತವೀರ್ಯನ ಆಳ್ವಿಕೆಯ ಕಾಲದಲ್ಲಿ ಅಂದರೆ ೧೧೯೯ರಿಂದ ೧೨೨೨ರ ಒಳಗೆ ಪುಷ್ಪದಂತ ಪುರಾಣವನ್ನು ರಚನೆ ಮಾಡಿರಬೇಕು.ಇದರಿಂದಾಗಿ ಗುಣವರ್ಮನ ಕೃತರಚನೆಯ ಕಾಲದ ಮೇಲಿನ ಗಡು ೧೨೨೨. ಗುಣವರ್ಮನು ತನ್ನ ಕೃತಿಯಲ್ಲಿ ಜನ್ನನನ್ನು ಸ್ಮರಿಸಿರುವ ಕಾರಣ ಅವನ ನಂತರ ಇದ್ದಿರಬೇಕು. ಎಂಬುದನ್ನು ಈ ಮೊದಲೇ ಅಭಿಪ್ರಾಯಿಸಿದೆ. ಜನ್ನನ ಅನಂತನಾಥ ಪುರಾಣದ ರಚನೆಯ ಕಾಲ ೧೨೩೦. ಆದರೆ ಈ ವೇಳೆಗೆ ೪ನೆಯ ಕಾರ್ತವೀರ್ಯ (೧೧೯೯ – ೧೨೨೨)ನು ರಾಜ್ಯವಾಳುತ್ತಿರಲಿಲ್ಲ. ಆದ್ದರಿಂದ ಜನ್ನನ ಯಶೋಧರಚರಿತ್ರೆಯನ್ನು (೧೨೦೯) ಗಮನಿಸಿ, ಗುಣವರ್ಮನು ಅವನನ್ನು ತನ್ನ ಕೃತಿಯಲ್ಲಿ ಸ್ಮರಿಸಿರಬೇಕು. ಜನ್ನನ ಅನಂತನಾಥ ಪುರಾಣ (೧೨೩೦) ಗುಣವರ್ಮನ ಕೃತಿಯ ನಂತರ ಬಂದಿರಬೇಕು. ‘ಜನ್ನಿಗನಿಂಪು’ ಎನ್ನುವ ಮಾತು ಅನಂತನಾಥ ಪುರಾಣಕ್ಕಿಂತ ಯಶೋಧರಚರಿತ್ರೆಗೆ ಹೆಚ್ಚು ಅನ್ವಯಿಸುತ್ತದೆ. ಇದರಿಂದಾಗಿ ೨ನೆಯ ಗುಣವರ್ಮನು ಜನ್ನನ ಸಮಕಾಲೀನ ಎನ್ನಬೇಕಾಗುತ್ತದೆ. ಅವನು ಪುಷ್ಪದಂತ ಪುರಾಣವನ್ನು ೧೨೦೯ರ ಬಳಿಕ ೧೨೨೨ರ ಒಳಗೆ ರಚಿಸಿರಬೇಕು. ಈ ದೃಷ್ಟಿಯಿಂದ ಆರ್. ನರಸಿಂಹಾಚಾರ್ ಮತ್ತು ಎ. ವೆಂಕಟಸುಬ್ಬಯ್ಯನವರು ಹೇಳುವ ಕಾಲಗಳು (ಅನುಕ್ರಮವಾಗಿ ಸುಮಾರು ೧೨೧೫ ಮತ್ತು ೧೨೧೬) ವಿಶೇಷವಾಗಿ ಬದಲಾವಣೆಗೊಳ್ಳುವ ಅಗತ್ಯ ಕಾಣುವುದಿಲ್ಲ.” ಈ ಮಾತಿಗೆ ಪೂರಕವಾಗಿ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.

ಈಗಾಗಲೇ ನೋಡಿರುವಂತೆ ಇದೇ ಸಂಪುಟದ ಪಾರ್ಶ್ವಪಂಡಿತನು ರಟ್ಟರ ನಾಲ್ಕನೆಯ ಕಾರ್ತವೀರ್ಯನ ಆಸ್ಥಾನಕವಿ. ಕಾರ್ತವೀರ್ಯನೇ ವಜ್ರದೇವ ಎಂದು ಒಪ್ಪಿಕೊಳ್ಳುವುದಾದರೆ ಇವರಿಬ್ಬರೂ ಸಮಕಾಲೀನರೆಂದು ಹೇಳಬಹುದು. ಪಾರ್ಶ್ವಪಂಡಿತ ತನ್ನ ಕಾವ್ಯದಲ್ಲಿ ಒಬ್ಬ ಗುಣವರ್ಮನನ್ನು ಸ್ತುತಿಸಿದ್ದಾನೆ. ಈತ ಮೊದಲನೆಯವನೇ ಇರಬೇಕೆಂಬ ಈವರೆಗಿನ ತಿಳಿವಳಿಕೆಯನ್ನು ಪರಿಶೀಲಿಸಬೇಕಾಗುತ್ತದೆ. ಸದ್ಯದಲ್ಲಿ ಎರಡನೆಯ ಗುಣವರ್ಮನ ಕಾಲ ಕ್ರಿ.ಶ.೧೨೧೫ ಎಂದೇ ಒಪ್ಪಿತವಾಗಿದೆ.

ಗುಣವರ್ಮನ ವೈಯಕ್ತಿಕ ಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಯೇನೂ ದೊರೆಯುತ್ತಿಲ್ಲ. ಈತನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳೆಂದರೆ ಈತನ ಗುರು ಮುನಿಚಂದ್ರಪಂಡಿತ ಮತ್ತು ಆಶ್ರಯದಾತನಾದ ಶಾಂತಿವರ್ಮ. ಪ್ರತಿ ಆಶ್ವಾಸಾಂತ್ಯ ಗದ್ಯದಲ್ಲಿ ಮುನಿಚಂದ್ರಪಂಡಿತದೇವನನ್ನು ಉಲ್ಲೇಖಿಸಲಾಗಿದೆ. ಈತನ ದಯದಿಂದಲೇ ಕವಿತಾಶಕ್ತಿ ಅನುಗ್ರಹವಾಯಿತೆಂಬುದು ಕವಿಯ ನಂಬಿಕೆ –

ಭಾವಿಸೆ ಚಿತ್ರಮೆನಲ್ ವಿಬು
ಧಾವಳಿ ಗುಣವರ್ಮಬುಧನನತಿ ಕೃಪೆಯಿಂ ಕೂ
ರ್ತೋವಿ ಮುನಿಚಂದ್ರ ಪಂಡಿತ
ದೇವರ್ ಗುರುವಾಗೆ ಕವಿತೆ ಬಂದುದು ಚಿತ್ರಂ       ೧ – ೫೯

ಇದರಿಂದ ಈತ ಕವಿಗೆ ಕಾವ್ಯಗುರುವೂ ಆಗಿದ್ದನೆಂದು ತಿಳಿಯಬಹುದು. ಮುನಿಚಂದ್ರ ಪಂಡಿತನು ಕಾರ್ತವೀರ್ಯನಿಗೂ ಗುರು ಹಾಗೂ ಮಂತ್ರಿ ಲಕ್ಷ್ಮೀದೇವನಿಗೆ ಶಿಕ್ಷಾಗುರುವಾಗಿದ್ದ.

ಪಂಪ ಅರಿಕೇಸರಿಯ, ರನ್ನ ಅತ್ತಿಮಬ್ಬೆ ಚಾವುಂಡರಾಯರ ಜೀವನಚರಿತ್ರೆಯನ್ನು ಕಟ್ಟಿಕೊಟ್ಟಂತೆ ಗುಣವರ್ಮನು ತನ್ನ ಆಶ್ರಯದಾತನಾದ ಶಾಂತಿವರ್ಮನ ಕಿರುಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾನೆ. ಶಾಂತಿವರ್ಮನನ್ನು ವಿಷ್ಣುವಿಗೆ ಹೋಲಿಸುವ ಈ ಕವಿ ವಿಷ್ಣು ಹೇಗೆ ತನ್ನನ್ನು ಕ್ಷೀರಸಮುದ್ರಕ್ಕೆ ಸಮರ್ಪಿಸಿಕೊಂಡು ಲಕ್ಷ್ಮಿಯನ್ನೂ ಕೌಸ್ತುಭವನ್ನೂ ಪಡೆದನೊ ಹಾಗೆ ಈತ ಗುಣವರ್ಮನಿಗೆ ತನ್ನನ್ನೇ ಸಮರ್ಪಿಸಿಕೊಂಡು ಕಾವ್ಯರತ್ನವನ್ನು, ಕೀರ್ತಿಯನ್ನು ಪಡೆದ ಎನ್ನಲಾಗಿದೆ. ಶಾಂತಿವರ್ಮನ ಮೇಲಿನ ಪ್ರೀತಿ, ಭಕ್ತಿಯಿಂದಲೇ ಕವಿ ಈ ಕಾವ್ಯವನ್ನು ರಚಿಸಿರಬೇಕು. ಪಂಪ – ಅರಿಕೇಸರಿಯ ಸಂಬಂಧದಂತೆ ಗುಣವರ್ಮ – ಶಾಂತಿವರ್ಮರ ಸಂಬಂಧವಿದ್ದಿತೆನ್ನಬಹುದು. ಇಲ್ಲಿ ಕವಿಗುಣವರ್ಮ ಪಂಪನಿಂದ ನೇರವಾಗಿ ಪ್ರಭಾವಿತನಾಗಿದ್ದಾನೆ. ಏಕೆಂದರೆ ಪಂಪಭಾರತದಲ್ಲಿ ಶತ್ರು ಸೈನ್ಯಮಥನದಿಂದ ಜಯಲಕ್ಷ್ಮಿಯನ್ನು ಪಡೆದನು, ನಾರಾಯಣನಾದರೆ ದೇವದಾನವರು ಸೇರಿ ಸಮುದ್ರಮಥನ ಮಾಡಿದಾಗ ಹುಟ್ಟಿ ಬಂದ ಲಕ್ಷ್ಮಿಯನ್ನೂ ಏನೂ ಕಷ್ಟವಿಲ್ಲದೆ ಸ್ವೀಕರಿಸಿದನೆಂದು ಪಂಪನೇ ಹೇಳಿದ್ದಾನೆ. ಇದೇ ವಿಚಾರವನ್ನು ಸ್ವಲ್ಪ ಮಾರ್ಪಾಟಿನೊಂದಿಗೆ ಗುಣವರ್ಮ ಈ ಸಂದರ್ಭಕ್ಕೆ ಅನ್ವಯಿಸಿದ್ದಾನೆ. ಪಂಪನಂತೆ ಈತನೂ ಪ್ರಸ್ತುತ ಕಾವ್ಯವನ್ನು ಶಾಂತಿವರ್ಮನಿಗೆ ಅರ್ಪಿಸಿದ್ದಾನೆ.

ಶಾಂತಿವರ್ಮ ನಾಲ್ಕನೆಯ ಕಾರ್ತವೀರ್ಯನ ರಾಜ್ಯದಲ್ಲಿ ಸ್ಥಳೀಯ ಅರಸನಾಗಿದ್ದ. ‘ನಾೞ್ಪ್ರಭು ಶಾಂತಿವರ್ಮ’ ಎಂದೇ ಕವಿ ಬಣ್ಣಿಸಿದ್ದಾನೆ. ವಜ್ರದೇವನ ಆಸ್ಥಾನದಲ್ಲಿ ಗುಣವರ್ಮನ ಕವಿತಾಶಕ್ತಿಯನ್ನು ಕೊಂಡಾಡಲು, ಇದನ್ನು ಕೇಳಿದ ಶಾಂತಿವರ್ಮ ಜಿನಕಥೆಯನ್ನು ನಿರೂಪಿಸುವಂತೆ ಗುಣವರ್ಮನನ್ನು ಹುರಿದುಂಬಿಸಿದನು.

ಎಂದೋರಂತಿರೆ ವಜ್ರದೇವ ನರನಾಥನಾಸ್ಥಾನದೊಳ್ ಕೂರ್ತ ನ
ಣ್ಪಿಂದಂ ಕೋವಿದರೆಯ್ದೆ ಕೊಂಡು ಕೊನೆಯಲ್ ಕೇಳ್ದೞ್ಕಱಿಂ ಶಾಂತಿವ
ರ್ಮಂ ದೀನಾನತವರ್ಮನಾದರಿಸಿ ನೀಂ ಪೇೞಿಂದೊಡೀಗಳ್ ಮನಂ
ದಂದೆಂ ಪಾಲ್‌ಗಡ ಮರ್ದೆನಲ್ ಜೀನಕಥಾವಿಸ್ತಾರಮಂ ಸಾರಮಂ    ೧ – ೬೭

ಕಾವ್ಯವನ್ನು ಕನ್ಯೆಗೆ ಹೋಲಿಸಿ ಶಾಂತಿವರ್ಮನನ್ನೇ ಅಳಿಯನೆಂದು ಭಾವಿಸಿ ಅಳಿಯ ಎಂಬ ಪದವನ್ನೇ ಶ್ಲೇಷೆಯಿಂದ ಬಳಸಿರುವುದುಂಟು –

ಅಳಿಯಂ ಮೊಱಿಯಂ ಭಾಗ್ಯದಿ
ನಳಿಯಂ ಸೌಭಾಗ್ಯದಿಂದಮಳಿಯಂ ಗುಣದಿಂ
ದಳಿಯಂ ವಿತರಣಗುಣದಿಂ
ದಳಿಯನೆನಿಪ್ಪಂಗೆ ಕುಡುಗೆ ಕೃತಿಕನ್ಯಕೆಯಂ          ೧ – ೭೦

ಎಂದು ಕವಿತಾ ಚಮತ್ಕಾರವನ್ನೂ, ಪ್ರೀತಿಯನ್ನೂ ಒಟ್ಟಿಗೇ ವ್ಯಕ್ತಪಡಿಸಿದ್ದಾನೆ. ಉತ್ತಮ ಕಾವ್ಯವನ್ನೂ, ಉತ್ತಮ ಕನ್ಯೆಯನ್ನೂ ಅರಿಕೇಸರಿಗೆ ಅರ್ಪಿಸಬೇಕೆಂಬ ಪಂಪನ ಆಶಯವೇ ಇಲ್ಲಿ ಮಾರ್ದನಿಸಿದೆ. ಶಾಂತಿವರ್ಮನನ್ನು ಕೀರ್ತಿಪತಾಕ, ಪುರುಷೋತ್ತಮ, ಗುಣರತ್ನಭೂಷಣ, ಸರಸ್ವತೀ ಕರ್ಣಪೂರ, ಸತ್ಯರಾಧೇಯ, ಗಂಭೀರ ನೀರಾಕರ, ಕದನ ಕಠೀರವ, ಪ್ರಭುಕುಲ ಶಿರೋಮಣಿ, ವಿವೇಕ ಚತುರಾನನ, ಮಲ್ಲಿಕಾವಲ್ಲಭ, ಸಕಲಸುಕವಿಪಿಕಮಾಕಂದ, ಜಿನಾರ್ಣವ ಪೂರ್ಣಚಂದ್ರ, ಸಕಲಜನಮನೋಹರ, ಕರ್ಣಾಟಕೀ ಕರ್ಣಾವತಂಸ, ಮಳೆಯ ಮಾನಿನೀ ಮನೋಮಾನಸಹಂಸ, ಕೇರಳೀಕುಚಕಲಶತಾರಹಾರ, ಸಿಂಹಣ ಸೀಮಂತಿನೀ ಸಿಂಧೂರ ಎಂದು ಈತ ಹಲವು ವಿಶೇಷಣಗಳಿಂದ ಪ್ರಶಂಸಿಸಿದ್ದು ಇಲ್ಲಿಯ ಅನೇಕ ವಿಶೇಷಣಗಳು ಪಂಪನಿಂದ ಸ್ವೀಕರಿಸಿರುವಂಥವು.

ಗುಣವರ್ಮ ಶಾಂತಿವರ್ಮನನ್ನು ಕಾವ್ಯದಲ್ಲಿ ಬರುವ ಮಹಾಪದ್ಮನೊಡನೆ ಸಮೀಕರಿಸಿದ್ದಾನೆ. ಹಾಗಾಗಿ ಅಷ್ಟಮಾಶ್ವಾಸದಲ್ಲಿ ಕಥಾನಾಯಕನ ಜೊತೆ ಜೊತೆಯಲ್ಲಿಯೇ ಈತನ ವ್ಯಕ್ತಿತ್ವವನ್ನು ಬಿಡಿಸಿಟ್ಟಿದ್ದಾನೆ –

ಜನಕಂ ವಿಶ್ರುತವಂದಿವೃಂದಜನಕಂ ಬಪ್ಪಂ ಲಸನ್ಮಾತೆ ಮಾ
ನಿನಿ ಮಾದಾಂಬಿಕೆ ಭಾಮೆ ಭಾಮಲೆ ಜಿನೇಂದ್ರಂ ದೈವವಮ್ಮಮ್ಮ ಕೀ
ರ್ತಿನಿದಾನಂ ನೃಪಕಾರ್ತವೀರ್ಯನಹಿತಕ್ಷ್ಮಾಭೃದ್ಬೃಹದ್ವಜ್ರನಾ
ಳ್ವನೆನಲ್ ನಾೞ್ಪ್ರಭು ಶಾಂತಿವರ್ಮನನದಿನ್ನೇವಣ್ಣಿಪಂ ಬಣ್ಣಿಪಂ   ೮ – ೬೭

ಈ ಪದ್ಯದಿಂದ ಶಾಂತಿವರ್ಮನ ತಂದೆ ಬೊಪ್ಪ, ತಾಯಿ ಮಾದಾಂಬಿಕೆ, ಪತ್ನಿ ಭಾಮಲೆ, ರಾಜ ಕಾರ್ತವೀರ್ಯನೆಂಬುದು, ರಾಜನಿಗೆ ವಜ್ರ ಎಂಬ ವಿಶೇಷ ಹೆಸರಿರುವುದು ಸ್ಪಷ್ಟವಾಗುತ್ತದೆ.

ಕವಿಗೆ ಕಾವ್ಯಲಕ್ಷಣ, ಸ್ವರೂಪ, ಕಾವ್ಯಮೀಮಾಂಸೆಯ ಪರಿಜ್ಞಾನ ಚೆನ್ನಾಗಿದೆ. ಈ ಬಗ್ಗೆ ಪಂಪನಂತೆ ಈತನೂ ಅನೇಕ ಪದ್ಯಗಳಲ್ಲಿ ಶಾಸ್ತ್ರಕಾರನಾಗಿ ಚಿಂತಿಸಿದ್ದಾನೆ. ಪಂಪನು ಕಾವ್ಯಬಂಧವು “ಮೃದುಬಂಧದೊಳೊಂದುವುದು…..” ಎಂದಂತೆ ಈತನೂ “ಮೃದುಪದ ಬಂಧಮುಂ ಸುರುಚಿರಾರ್ಥಮುಮುತ್ಕಟ ವೃತ್ತಿಯಾಗಿ ತೀವಿದ ರಸಮುಂ……” (೧ – ೪೦) ಎಂದು ಹೇಳಿದ್ದಾನೆ. ಈತ ಕವಿಯಾಗಿರುವುದಷ್ಟೇ ಅಲ್ಲ ಗಮಕಿ ವಾದಿ ವಾಗ್ಮಿಯೂ ಆಗಿರಬೇಕು. ಇದರಲ್ಲಿ ತನಗೆ ಸರಿಸಾಟಿಯಾಗಿರುವವರು ಯಾರಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಗುಣವರ್ಮ ಹಲವಾರು ಬಿರುದುಗಳನ್ನು ಪಡೆದಿದ್ದನು. ‘ಕವಿಕುಲತಿಲಕ’ ‘ಸರಸ್ವತೀ ಕರ್ಣಪೂರ’ ‘ಸಹಜಕವಿ ಸರೋವರ ಹಂಸ’ ‘ಪ್ರಭುಗುಣಾಬ್ಜಿನೀಕಳಹಂಸ’ ‘ಗುಣರತ್ನಭೂಷಣ’ ‘ಭವ್ಯರತ್ನಾಕರ’ ‘ಶ್ರೀರಾಜವಿದ್ಯಾಧರ’ ‘ಮಾನಮೇರು ‘ ‘ಸಾಕ್ಷರ ಸಮಯಾವಲಂಬಿ’ ಇತ್ಯಾದಿ ಬಿರುದುಗಳಿದ್ದು ಇದರಲ್ಲಿ ಕೆಲವು ಶಾಂತಿವರ್ಮ ಮತ್ತು ಗುಣವರ್ಮ ಇಬ್ಬರಿಗೂ ಅನ್ವಯವಾಗುವಂತಿವೆ.

ಗುಣವರ್ಮನ ಕವಿತಾಶಕ್ತಿ ರಾಜನ ಆಸ್ಥಾನದಲ್ಲಿ ಪ್ರಶಂಸೆಗೆ ಒಳಗಾಗಬೇಕಾದರೆ ಈತ ಪುಷ್ಪದಂತ ಪುರಾಣಕ್ಕೂ ಮೊದಲೇ ಕೆಲವೊಂದು ಚಿಕ್ಕ ಚಿಕ್ಕ ಕೃತಿಗಳನ್ನು ರಚಿಸಿರಬೇಕು. ಸದ್ಯಕ್ಕೆ ಉಪಲಬ್ಧವಿರುವ ಕೃತಿಯೆಂದರೆ ಚಂದ್ರನಾಥಾಷ್ಟಕ. ಇದು ಕೊಲ್ಲಾಪುರದ ಚಂದ್ರನಾಥನ ಮೇಲೆ ಬರೆದ ಸ್ತುತಿಮಾಲೆಯಾಗಿದೆ –

ಬಹುವಿದ್ಯಾಮಂಡನಂ ಪಂಡಿತಮುನಿಚಂದ್ರವ್ರತಿ ಶ್ರೀ ಪಾದಾಂಭೋ
ರುಹ ಸೇವಾಸಂಗಭೃಂಗಂ ಕ್ಷಿತಿನುತ ಗುಣವರ್ಮಂ ವಚೋಮಾಲೆಯಿಂದ
ನ್ವಹಮಾದಂ ಪೂಜಿಸಲ್ ರಾಜಿಪಪದನನಘಂ ಮಾೞ್ಕಿ ಬವ್ಯರ್ಗೆ ಸೌಖ್ಯಾ
ವಹಮಂ ಕೊಲ್ಲಾಪುರ ಶ್ರೀ ತ್ರಿಭುವನ ತಿಳಕಾಲಂಕೃತಂ ಚಂದ್ರನಾಥಂ         ೯

ಚಂದ್ರನಾಥಾಷ್ಟಕದಲ್ಲಿ ಒಂಬತ್ತು ಪದ್ಯಗಳಿವೆ. ಪ್ರತಿಯೊಂದು ಪದ್ಯವೂ ಚಂದ್ರನಾಥಾ ಎಂದು ಕೊನೆಗೊಳ್ಳುತ್ತದೆ. ಮೊದಲನೆಯ ಪದ್ಯ ಸ್ರಗ್ಧರೆಯಲ್ಲಿದೆ. ಉಳಿದ ಎಂಟು ವೃತ್ತಗಳು ಮಹಾಸ್ರಗ್ಧರೆಯಲ್ಲಿವೆ. ಕವಿಯ ಭಕ್ತಿಭಾವಗಳು ಈ ಮೂಲಕ ಪ್ರಕಟವಾಗಿವೆ. ಪುಷ್ಪದಂತ ಪುರಾಣದಲ್ಲಿ ಪರಮತ ಅಸಹಿಷ್ಣುತೆ ಕಂಡುಬರುವುದಿಲ್ಲ. ಆದರೆ ಇಲ್ಲಿ ಭಾವುಕತೆಯ ಪರಿಣಾಮವಾಗಿಯೋ ಏನೋ ‘ಕುಮತ’ ಎಂದು ಕರೆದಿದ್ದಾನೆ. ಇಲ್ಲಿಯ ರಚನೆಗಳಲ್ಲಿ ಬುದ್ಧಿ ತೀವ್ರತೆ ಕಂಡುಬರುತ್ತದೆ. ಜೈನಧರ್ಮದ ಹಿರಿಮೆ, ತೀರ್ಥಂಕರನ ಗುಣಾಧಿಕ್ಯವೇ ಇಲ್ಲಿನ ಹೂರಣ. ಸ್ತ್ರೀಯನ್ನಿಟ್ಟುಕೊಂಡು ಭಗವಂತನನ್ನು ಸ್ತುತಿಸುವ ಪದ್ಧತಿಗೆ ಪದ್ಧತಿಗೆ ಈತನೂ ಹೊರತಲ್ಲ. ಕಾವ್ಯ ಸೌಂದರ್ಯಕ್ಕಿಂತ ಕವಿಯ ಧನ್ಯತಾಭಾವವೇ ಇದರಲ್ಲಿದೆ.

ಕಥಾಸಾರ

ಮೇರುವಿನ ಪೂರ್ವ ಪಶ್ಚಿಮ ಪ್ರದೇಶದಲ್ಲಿ ೩೨ ನಾಡುಗಳಿಂದ ಕೂಡಿದ ವಿದೇಹ ದೇಶ. ಪೂರ್ವವಿದೇಹದ ಮಧ್ಯದಲ್ಲಿ ಸೀತಾನದಿ. ಇದರ ಎರಡೂ ತಟಗಳಲ್ಲಿ ಎಂಟೆಂಟು ಷಟ್ಖಂಡ ಮಂಡಳ. ಎಂಟನೆಯ ತಾಣದಲ್ಲಿ ಪುಷ್ಕಳಾವತಿ ನಗರ. ಇದು ಅತ್ಯಂತ ಮನೋಹರ, ಸಂಪದ್ಭರಿತ. ಇದರ ರಾಜಧಾನಿ ಪುಂಡರೀಕಿಣಿಪುರ. ಇಲ್ಲಿಯ ರಾಜ ಪದ್ಮ.

ರಾಜ ಪದ್ಮನು ನೀತಿಮಾರ್ಗದಿಂದ ರಾಜ್ಯವಾಳುತ್ತಿದ್ದ. ಈತನ ಕೀರ್ತಿ ಲೋಕ ಪ್ರಸಿದ್ಧವಾಗಿತ್ತು. ಪದ್ಮನ ಪಟ್ಟಮಹಿಷಿ ವನಮಾಲಾದೇವಿ. ಈಕೆ ಸುಂದರಿಯೂ, ಸದ್ಗುಣಿಯೂ ಆಗಿದ್ದಳು. ಒಂದು ದಿನ ಈಕೆ ಚಿಂತಾಕ್ರಾಂತಳಾಗಿದ್ದಳು. ರಾಜ ಕಾರಣ ಕೇಳಿದಾಗ ಚತುರಿಕೆ ಎಂಬ ಆಕೆಯ ಸಖಿ ರಾಣಿಯು ಜಿಂಕೆಯ ಮರಿಯನ್ನು ನೋಡಿದಾಗಿನಿಂದ ತನಗೆ ಸಂತಾನವಿಲ್ಲವೆಂದು ಚಿಂತಿಸುತ್ತಿದ್ದಾಳೆ ಎಂದಳು. ರಾಜ ಪತ್ನಿಯನ್ನು ಸಂತೈಸುತ್ತ – “ಈ ದಿನ ನಿನ್ನ ಇಷ್ಟ ಸಿದ್ಧಿಸುವ ಸಂಗತಿ ಜರುಗಿತು. ಇಂದಿನ ಅಷ್ಟಮಿಯಂದು ನಾನು ಚೈತ್ಯಾಲಯಕ್ಕೆ ಹೋಗಿ ವಂದಿಸುವಾಗ ದೇವನ ಪಾದದ ಹತ್ತಿರವಿದ್ದ ಮಾದಳದ ಹಣ್ಣು ಜಾರಿ ನನ್ನ ಹತ್ತಿರ ಬಂದಿತು. ಇದು ಪುತ್ರ ಪ್ರಾಪ್ತಿ ಸೂಚಕ” ಎಂದನು.

ಹೀಗಿರಲು ಒಂದು ದಿನ ರಾಣಿ ಬೆಳಗಿನ ಜಾವದಲ್ಲಿ ಶುಭಸ್ವಪ್ನದಲ್ಲಿ ಕಂಡಳು. ಗರ್ಭ ಚಿಹ್ನೆಗಳು ತಲೆದೋರಿದವು. ರಾಜನು ಪುಂಸವನ ಮೊದಲಾದ ಕರ್ಮಗಳನ್ನು ನೆರವೇರಿಸಿದನು. ರಾಣಿಗೆ ಪ್ರಸವ ಸಮಯ ಪ್ರಾಪ್ತವಾಗಿ ಗಂಡು ಮಗುವಿಗೆ ಜನ್ಮವಿತ್ತಳು. ಹತ್ತನೆಯ ದಿನ ಶಿಶುವಿಗೆ ಮಹಾಪದ್ಮ ಎಂದು ಹೆಸರಿಟ್ಟರು. ಮಗು ಬೆಳೆದು ಯುವರಾಜನಾದನು. ಒಮ್ಮೆ ಮಹಾಪದ್ಮ ದಿಗ್ವಿಜಯ ಹೊರಟನು. ಅಲ್ಲಿ ನಾಲ್ಕು ದಿಕ್ಕುಗಳ ರಾಜರನ್ನು ಗೆದ್ದನು. ಖೇಚರನ ನಾಗಪಾಶವನ್ನು ಬಿಡಿಸಿದನು. ಆಗ ಆತ ತನ್ನ ಬಗ್ಗೆ “ನಾನು ಚಿತ್ರಾಂಗ ಎಂಬ ವಿದ್ಯಾಧರ ರಾಜ. ನನ್ನ ಹೆಂಡತಿ ನಿದ್ರಿಸುತ್ತಿದ್ದ ಸಮಯದಲ್ಲಿ ಹಯಗ್ರೀವನು ನನ್ನನ್ನು ನಾಗವಿದ್ಯೆಯಿಂದ ಬಂಧಿಸಿ ತನ್ನ ಹೆಂಡತಿಯನ್ನು ಅಪಹರಿಸಿದ. ನಿನ್ನಂತಹ ಮಹಾತ್ಮನ ದರ್ಶನಕ್ಕೆ ಅವಕಾಶವಿತ್ತ ಆತ ನನಗೆ ಉಪಕಾರಿಯೇ ಆಗಿದ್ದಾನೆ. ನಿನ್ನ ಸೈನ್ಯದೊಡನೆ ಹೋಗಿ ಶತ್ರುವನ್ನು ಗೆದ್ದು ಹೆಂಡತಿಯನ್ನು ಕರೆತರುವೆ” ಎಂದು ಹೇಳಿ ಹೊರಟನು. ಇತ್ತ ಮಹಾಪದ್ಮನು ಮತಂಗ ರಾಜನನ್ನು ಸಂಹರಿಸಿ ಅವನ ರಾಜ್ಯ ವಶಪಡಿಸಿಕೊಂಡು ಭಂಗುರವೇಣಿಯೆಂಬ ನದಿಯ ದಡವನ್ನು ಸೇರಿದಾಗ ಒಬ್ಬ ವೃದ್ಧಪುರೋಹಿತನು ರಾಜನಿಗೆ ನಿನ್ನ ತಂದೆ ಇಲ್ಲಿ ಜಯಸ್ತಂಭ ಸ್ಥಾಪಿಸಿದ್ದ, ನೀನೂ ಸ್ಥಾಪಿಸು ಎನ್ನಲು ಅಲ್ಲಿಯೇ ಬೀಡುಬಿಟ್ಟನು.

ಚಿತ್ರಾಂಗನು ಹಯವದನನೊಡನೆ ಯುದ್ಧಮಾಡಿ ಹೆಂಡತಿಯನ್ನು ಕರೆದುಕೊಂಡು ಬಂದು ತಾನು ತಂದಿದ್ದ ಕುಲಧನಗಳನ್ನು, ಮೂರು ವಿದ್ಯೆಗಳನ್ನು, ಬಾಣ ಹಾರ ಕವಚ ಮೊದಲಾದುವನ್ನು ಕೃತಜ್ಞತೆಯ ಸೂಚಕವಾಗಿ ಮಹಾಪದ್ಮರಾಜನಿಗೆ ಕೊಟ್ಟನು. ಇತ್ತ ರಾಜನು ಸಿದ್ಧಶೇಖರ ಜಿನಾಲಯಕ್ಕೆ ನಂದೀಶ್ವರಪೂಜೆಗೆಂದು ಹೋಗಿ ಪ್ರದಕ್ಷಿಣೆ, ಅಭಿಷೇಕವನ್ನು ಮಾಡಿದನು.

ಒಂದು ದಿನ ಮಹಾಪದ್ಮ ಓಲಗದಲ್ಲಿರುವಾಗ ಈತನ ಸೋದರ ಅತ್ತೆಯ ಗಂಡ ಜಯವರ್ಮರಾಜನ ರಾಯಭಾರಿ ದಮನನೆಂಬವ ಬಂದು – “ನಿಮ್ಮ ಸಹಾಯ ಬಯಸಿ ಜಯವರ್ಮ ಕಳಿಸಿದ್ದಾನೆ. ನಿನ್ನ ಅತ್ತೆಯ ಮಗಳಾದ ಭಾನುಮತಿ ಎಂಬ ಸುಂದರಿಯನ್ನು ತನಗೆ ಕೊಡಬೇಕೆಂದು ಕನಕಪುರದ ಗಜಕರ್ಣನೆಂಬ ರಾಜನು ಜಯವರ್ಮ ದೂತನನ್ನು ಕಳಿಸಿದ್ದ. ನಮ್ಮ ರಾಜನು ದೂತನೊಡನೆ ಕನ್ಯೆಯನ್ನು ಕೊಡುವುದಾಗಿ ಹೇಳಿ ಅನಂತರದಲ್ಲಿ ಮಂತ್ರಿಗಳೊಡನೆ ಚರ್ಚಿಸಿ ಭಾನುಮತಿಗೆ ನನ್ನ ತಂಗಿಯ ಮಗ ಮಹಾಪದ್ಮನೇ ಯೋಗ್ಯವರನೆಂದು ನಿರ್ಣಯಿಸಿದ. ಆದುದರಿಂದ ಗಜಕರ್ಣನಿಗೆ ಕಿರಿಯ ಮಗಳಾದ ಮದಲೇಖೆಯನ್ನು ಕೊಡುವುದಾಗಿ ಹೇಳಿದನು. ಆಗ ದೂತನು ‘ನಮ್ಮ ರಾಜನಿಗೆ ನಿಮ್ಮಪಟ್ಟಮಹಿಷಿ ಮಗಳಾದ ಭಾನುಮತಿಯನ್ನು ಕೊಟ್ಟರೆ ಮಾತ್ರ ಸಂತೋಷವಾಗುತ್ತದೆ.’ ನಮ್ಮ ರಾಜನಿಗೆ ಮಗಳನ್ನು ಕೊಡದಿದ್ದರೆ ಬಲಾತ್ಕಾರದಿಂದ ಕೊಂಡೊಯ್ಯುವನಲ್ಲದೆ ನೀನು ರಾಜ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಬೆದರಿಸಿದನು. ಇದರಿಂದ ಜಯವರ್ಮನ ಮಂತ್ರಿಗಳು ಕುಪಿತಗೊಂಡು “ಇಂತಹ ಕೀಳು ಮನುಷ್ಯರನ್ನು ನಮ್ಮ ರಾಜಕುಮಾರಿ ಕಣ್ಣೆತ್ತಿಯೂ ನೋಡುವುದಿಲ್ಲವೆಂದು ಹೇಳಿದರು. ಈ ಮಾತನ್ನು ಆ ದೂತನು ಗಜಕರ್ಣನಿಗೆ ತಿಳಿಸಿರುವುದರಿಂದ ಅವನೀಗ ಯುದ್ಧಕ್ಕೆ ಬಂದಿದ್ದಾನೆ. ನಮ್ಮ ಮಂತ್ರಿಗಳು ನಿನ್ನ ಸಹಾಯ ಬಯಸುತ್ತಿದ್ದಾರೆ” ಎಂದು ಹೇಳಿದನು.

ಮಹಾಪದ್ಮನು ಸೈನ್ಯ ಸಮೇತ ಸಾಮಗ್ರಿಗಳೊಂದಿಗೆ ಜಯವರ್ಮನ ನೆರವಿಗೆ ಬಂದನು. ಗಜಕರ್ಣನನ್ನು ಹಿಮ್ಮೆಟ್ಟಿಸಿದನು. ಜಯವರ್ಮನು ಮಹಾಪದ್ಮನಿಗೆ ಮಗಳನ್ನು ಧಾರೆ ಎರೆದುಕೊಟ್ಟನು. ಹೀಗಿರಲು ಇವರಿಗೆ ಧನದೇವ ಎಂಬ ಪುತ್ರ ಜನಿಸಿದನು. ಮಹಾಪದ್ಮ ಸುಖದಿಂದಿರುವಲ್ಲಿ ಒಂದು ದಿನ ವೇಶ್ಯಾವಾಟಿಕೆಯನ್ನು ನೋಡಿ, ಚಂದ್ರಿಕಾವಿಹರಣ ಮುಗಿಸಿ, ಉದ್ಯಾನವನಕ್ಕೆ ಬರುತ್ತಿದ್ದಾಗ ಮುನಿಗಳನ್ನು ಕಂಡು ನಮಸ್ಕರಿಸಿದನು. ಅವರು ಈತನು ಆಸನ್ನಭವ್ಯನೆಂಬುದನ್ನು ಅರಿತು ಜಿನತತ್ವವನ್ನು ಬೋಧಿಸಿದರು. ಮಹಾಪದ್ಮ ಸಾವಿರ ರಾಜಕುಮಾರರೊಂದಿಗೆ ಜಿನದೀಕ್ಷೆ ಸ್ವೀಕರಿಸಿದನು. ಎಲ್ಲ ಕಡೆಗಳಲ್ಲಿ ವಿಹರಿಸುತ್ತ ತೀರ್ಥಂಕರ ಪುಣ್ಯವನ್ನು ಪಡೆದನು. ಆರಾಧನಾವಿಧಿಯಿಂದ ದೇಹವನ್ನು ಮುಡಿಪಿ ಪ್ರಾಣತಕಲ್ಪವೆಂಬ ಸ್ವರ್ಗದಲ್ಲಿ ಜನಿಸಿದನು.

ಜಂಬೂದ್ವೀಪದ ಕಾಶೀ ವಿಷಯದ ರಾಜಧಾನಿ ಕಾಕಂದಿಪುರ. ಇದನ್ನು ಸುಗ್ರೀವ ಎಂಬ ರಾಜ ಆಳುತ್ತಿದ್ದ. ಈತನ ಪಟ್ಟಮಹಿಷಿ ಜಯರಾಮೆ. ಇವರಿಬ್ಬರೂ ಸುಖದಿಂದಿರುವಾಗ ಸ್ವರ್ಗದಲ್ಲಿ ಇಂದ್ರನಿಗೆ ಆಸನಕಂಪವಾಗಿ ಭರತಕ್ಷೇತ್ರದಲ್ಲಿ ತೀರ್ಥಂಕರನ ಜನನವಾಗುವುದನ್ನು ಅರಿತು ಕುಬೇರನಿಗೆ ರತ್ನದ ಮಳೆ ಸುರಿಸುವಂತೆ ಅಪ್ಪಣೆ ಮಾಡಿದನು. ಆತ ಮೂರೂವರೆ ಕೋಟಿ ರತ್ನಗಳ ಮಳೆ ಸುರಿಸಿದ. ಇಂದ್ರನು ಜಯರಾಮೆಯ ಗರ್ಭಶೋಧಕ್ಕಾಗಿ ಶ್ರೀ ಹ್ರೀ ಮುಂತಾದ ದೇವಿಯರನ್ನು ಕಳಿಸಿದ. ಒಂದು ದಿನ ಜಯರಾಮೆಯು ಸ್ವಪ್ನದಲ್ಲಿ ಸಿಂಹ, ಆನೆ ಇತ್ಯಾದಿಯನ್ನು ಕಂಡುದಾಗಿ ಪತಿ ಸುಗ್ರೀವನಿಗೆ ತಿಳಿಸಿದಾಗ ಆತ ತೀರ್ಥಂಕರನು ಹುಟ್ಟುವುದಾಗಿ ನುಡಿದನು. ಪ್ರಾಣತಕಲ್ಪದಲ್ಲಿದ್ದ ಮಹಾಪದ್ಮಚರನು ಸ್ವರ್ಗದಲ್ಲಿ ಚ್ಯುತನಾದ ಬಳಿಕ ಜಯರಾಮೆಯ ಗರ್ಭ ಪ್ರವೇಶಿಸಿದನು.

ನವಮಾಸ ತುಂಬಲು ಮಾರ್ಗಶಿರ ಬಹುಳ ದಶಮಿಯಂದು ತೀರ್ಥಂಕರಶಿಶು ಜನಿಸಿತು. ದೇವದುಂದುಭಿ, ಪುಷ್ಪವೃಷ್ಟಿಗಳಾದವು. ಇಂದ್ರನಿಗೆ ಆಸನಕಂಪವಾಗಿ ಕಾಕಂದಿಪುರಕ್ಕೆ ಪರಿವಾರ ಸಮೇತ ಬಂದನು. ಪ್ರಸೂತಿ ಗೃಹದ ಬಾಗಿಲಲ್ಲಿ ನಿಂತಾಗ ಪತ್ನಿ ಶಚೀದೇವಿ ಜಿನಜನನಿಯ ಮಡಿಲಲ್ಲಿ ಮಾಯಾಶಿಶುವನ್ನು ಇರಿಸಿ ಜಿನಶಿಶುವನ್ನು ಎತ್ತಿಕೊಂಡು ಐರಾವತದ ಮೇಲೆ ಕುಳಿತಿದ್ದ ಇಂದ್ರನಿಗೆ ಕೊಟ್ಟಳು. ಆತ ಗಂಧಾಕ್ಷತೆ ಹೂವುಗಳಿಂದ ಶಿಶುವನ್ನು ಪೂಜಿಸಿ, ಜನ್ಮಾಭಿಷೇಕ ಕಲ್ಯಾಣಕ್ಕೆ ಮುಂದಾದನು. ಮೊದಲು ಪದ್ಮ ಮೊದಲಾದ ಸರೋವರಗಳ ನೀರಿನಿಂದ ಅಭಿಷೇಕವಾಯಿತು. ಅನಂತರ ಎಳನೀರು, ಕಬ್ಬಿನರಸ, ಮಾವಿನ ಹಣ್ಣಿನ ರಸದ ಅಭಿಷೇಕವಾದ ಬಳಿಕ ಕ್ಷೀರಸಮುದ್ರದ ನೀರನ್ನು ಸಾವಿರಾರು ತೋಳುಗಳಿಂದ ಕ್ಷೀರಾಭಿಷೇಕ ಮಾಡಿದನು. ಗಂಧೋದಕದ ಅಭಿಷೇಕವೂ ಆದ ಮೇಲೆ ಶಚೀದೇವಿ ಜಿನಶಿಶುವನ್ನು ಅಲಂಕರಿಸಿದಳು. ಇಂದ್ರನು ಮಗುವನ್ನು ಕಣ್ಣುಗಳಲ್ಲಿ ತುಂಬಿಕೊಂಡ ಬಳಿಕ ಐರಾವತದ ಮೇಲೆ ಕುಳ್ಳಿರಿಸಿಕೊಂಡು ಕಾಕಂದೀನಗರದಲ್ಲಿ ಸಿಂಹಾಸನದ ಮೇಲೆ ಇರಿಸಿದನು. ಅಲ್ಲಿಗೆ ಸುಗ್ರೀವ ಮಹಾರಾಜ ತನ್ನ ರಾಣಿಯೊಡನೆ ಬಂದನು. ಇಂದ್ರನು ಆತನನ್ನು ಉದ್ದೇಶಿಸಿ ಜಿನನು ನಿನಗೆ ಮಗನಾಗಿ ಹುಟ್ಟಿದ್ದಾನೆ, ನಾನು ಜನ್ಮಾಭಿಷೇಕ ಮಾಡಿ ಕೃತಾರ್ಥನಾಗಿ ಮಗುವನ್ನು ತಂದು ಇಲ್ಲಿ ಬಿಟ್ಟಿದ್ದೇನೆ ಎಂದನು. ರಾಜನು ಶಿಶುವಿಗೆ ಜಾತಕರ್ಮ ಮಾಡಿದಾಗ ಇಂದ್ರ ಆನಂದ ನೃತ್ಯ ಪ್ರದರ್ಶಿಸಿದನು. ಶಿಶುವಿಗೆ ಪುಷ್ಪದಂತ ಎಂದು ನಾಮಕರಣ ಮಾಡಿ ಶಿಶುವಿನ ಪಾಲನೆಗೆ ದಾದಿಯರನ್ನು ಇರಿಸಿದನು.

ಶಿಶುವಿನ ಬಾಲಲೀಲೆಗಳು ತಂದೆ ತಾಯಿಗಳಿಗೆ ಮುದ ನೀಡಿದವು. ಕೌಮಾರ್ಯಕ್ಕೆ ಕಾಲಿಟ್ಟ ಪುಷ್ಪದಂತ ಸಕಲ ವಿದ್ಯೆಗಳನ್ನು ಕಲಿತನು. ಮಗನು ಯೌವನಕ್ಕೆ ಕಾಲಿರಿಸಿದ್ದನ್ನು ಗಮನಿಸಿ ಸುಗ್ರೀವರಾಜನು ಸಾವಿರ ಮಂದಿ ಕ್ಷತ್ರಿಯ ಕನ್ಯೆಯರನ್ನು ತಂದು ಶುಭಲಗ್ನದಲ್ಲಿ ವಿವಾಹ ಮಾಡಿದನು. ಅನಂತರ ರಾಜ್ಯಭಾರ ವಹಿಸಿದನು. ಪುಷ್ಪದಂತ ಧರ್ಮಮಾರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದ. ಈತನಿಗೆ ಚಂದ್ರಿಳಪುರದ ರಾಜನ ಮಗಳಾದ ಚಂದ್ರಿಕಾದೇವಿ ಪಟ್ಟದ ರಾಣಿಯಾಗಿದ್ದಳು. ಈಕೆಯ ಗರ್ಭದಲ್ಲಿ ಕೀರ್ತಿಧರ ಜನಿಸಿದನು. ಆಮೇಲೆ ಇತರ ಪತ್ನಿಯರಲ್ಲಿಯೂ ಕೆಲವರಿಗೆ ಪುತ್ರರು ಜನಿಸಿದರು. ಕೀರ್ತಿಧರನಿಗೆ ಯುವರಾಜಪಟ್ಟ ಕಟ್ಟಲಾಯಿತು.

ಪುಷ್ಪದಂತನಿಗೆ ನಿದಾಘಕಾಲ ಪ್ರಾಪ್ತವಾಯಿತು. ಒಂದು ದಿನ ಈತ ಆಕಾಶದಿಂದ ಬಿದ್ದ ಉಲ್ಕೆಯನ್ನು ಕಂಡು ನಿರ್ವೇಗಪರನಾದನು. ಲೋಕಾಂತಿಕ ದೇವರುಗಳು ಆಗಮಿಸಿ ಈತನಿಗೆ ರಾಜ್ಯಭೋಗಗಳನ್ನು ತ್ಯಜಿಸಿ ಜಿನದೀಕ್ಷೆ ಪಡೆಯುವಂತೆ ತಿಳಿಸಿದರು. ಪುಷ್ಪದಂತನು ಮಗನಿಗೆ ರಾಜ್ಯವಹಿಸಿ ಪರಿನಿಷ್ಕ್ರಮಣಕ್ಕೆ ಸಿದ್ಧನಾದನು. ಸಿಂಹಾಸನದಿಂದ ಇಳಿದು ಸಿವಿಗೆ ಏರಿದನು. ಇದನ್ನು ಅರಸರು, ಆಕಾಶಗಾಮಿಗಳು, ಸುರಾಸುರರು, ಇಂದ್ರರು ಹೊತ್ತು ಪುಷ್ಪಕೋದ್ಯಾನದಲ್ಲಿ ತಂದಿರಿಸಿದರು. ಪುಷ್ಪದಂತ ಚಂದ್ರಕಾಂತಶಿಲೆಯಲ್ಲಿ ಕುಳಿತು ಕೇಶವನ್ನು ಹರಿದು ಬಿಸುಟನು. ದಿಗಂಬರತ್ವ ಪಡೆದ ಪುಷ್ಪದಂತನಿಗೆ ಇಂದ್ರನು ಕಲ್ಯಾಣೋತ್ಸವ ನೆರವೇರಿಸಿದ ಬಳಿಕ ಪುಷ್ಪದಂತ ಮುನಿ ಆರು ದಿನ ಧ್ಯಾನದಲ್ಲಿದ್ದನು. ಅನಂತರ ಆ ಉದ್ಯಾನ ಬಿಟ್ಟು ಬರುವಾಗ ಶೈಲಪುರದ ರಾಜ ಈತನಿಗೆ ಪಾಯಸವನ್ನಿತ್ತನು. ಆಹಾರದಾನದಿಂದಾಗಿ ರಾಜನ ಅರಮನೆಯಲ್ಲಿ ಪಂಚಾಶ್ಚರ್ಯಗಳಾದವು. ಅನಂತರ ಪುಷ್ಪದಂತ ತಪಸ್ಸು ಮಾಡಿ ಕರ್ಮಗಳನ್ನು ಘಾತಿಸಿ ಪ್ರತಿಮಾಯೋಗದಲ್ಲಿ ನಿಂತನು. ಆತ ನಿಂತ ವನದಲ್ಲಿ ಶಾಂತರಸ ಹರಡಿತು. ಕರ್ಮಗಳು ಘಾತಿಸಿದ ಬಳಿಕ ಕೇವಲಜ್ಞಾನ ಪ್ರಾಪ್ತವಾಯಿತು. ಇಂದ್ರನು ಕಲ್ಯಾಣೋತ್ಸವ ನೆರವೇರಿಸಿದನು. ಪುಷ್ಪದಂತಜಿನನು ಧರ್ಮೋಪದೇಶ ಮಾಡುತ್ತ ಒಂದು ತಿಂಗಳು ಕಾಲ ವಿಹರಿಸಿ ಮತ್ತೆ ಪ್ರತಿಮಾಯೋಗದಲ್ಲಿ ನಿಂತನು. ಭಾದ್ರಪದ ಶುಕ್ಲ ಅಷ್ಟಮಿ ಮೂಲನಕ್ಷತ್ರದಲ್ಲಿ ಮುಕ್ತಿ ಉಂಟಾಯಿತು. ಇಂದ್ರ ಪರಿನಿರ್ವಾಣ ಕಲ್ಯಾಣ ಎಸಗಿ ಆನಂದನೃತ್ಯ ಮಾಡಿದನು. ಪುಷ್ಪದಂತ ಜಿನ ಪರಮ ಸುಖ ತಳೆದನು. ತಂದೆಯ ನಿರ್ವಾಣವನ್ನರಿತ ಕೀರ್ತಿಧರ ಆ ನಿರ್ವಾಣಭೂಮಿಯನ್ನು ಪೂಜಿಸಿದನು.

ಕಾವ್ಯಸಮೀಕ್ಷೆ: ಪುಷ್ಪದಂತ ಒಂಬತ್ತನೆಯ ಜೈನ ತೀರ್ಥಂಕರ. ಈತನಿಗೆ ‘ಸುವಿಧಿಜಿನ’ ‘ಸುವಿಧಿಕುಮಾರ’ ಎಂಬ ಹೆಸರುಗಳೂ ಇರುವುದು ಪುಷ್ಪದಂತ ಪುರಾಣದಿಂದ ತಿಳಿದುಬರುತ್ತದೆ. ಈತನ ಲಾಂಛನ ಮಕರ, ಯಕ್ಷ, ಅಜಿತ, ಯಕ್ಷಿ ಮಹಾಕಾಳಿ. ಇತರ ತೀರ್ಥಂಕರರಿಗೆ ಹೋಲಿಸಿದರೆ ಈತನ ಬಗೆಗೆ ಸ್ವತಂತ್ರ ರಚನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಸಂಸ್ಕೃತ, ಪ್ರಾಕೃತ, ಅಪಭ್ರಂಶ ಸಾಹಿತ್ಯದಲ್ಲಿ ಈತನ ಸಾಹಿತ್ಯ ದೊರೆತರೂ ಅವುಗಳಲ್ಲಿ ಬಹುಪಾಲು ಅರವತ್ಮೂರು ಶಲಾಕಾ ಪುರುಷರ ಚರಿತ್ರೆಯನ್ನು ನಿರೂಪಿಸುವಾಗ ಪ್ರಾಸಂಗಿಕವಾಗಿ ಸಂಕ್ಷಿಪ್ತವಾಗಿ ಬಂದಿರುವಂಥವು. ಪ್ರಾಕೃತದಲ್ಲಿ ಒಂದು ಪುಷ್ಪದಂತ ಪುರಾಣ ಇರಬಹುದೆಂದು ಎಚ್.ಡಿ.ವೇಲಂಕರ್ ಅವರು ಊಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣವರ್ಮನ ಕೃತಿಗೆ ಮಹತ್ವವಿದೆ.

ಕನ್ನಡದಲ್ಲಿ ಚಾವುಂಡರಾಯನ ತ್ರಿಷಷ್ಟಿಶಲಾಕಾ ಪುರುಷ ಚರಿತೆ (ಚಾವುಂಡರಾಯ ಪುರಾಣ)ಯಲ್ಲಿ ಪುಷ್ಪದಂತನ ಕಥೆ ಮೊಟ್ಟಮೊದಲಿಗೆ ಕಾಣಿಸಿಕೊಳ್ಳುತ್ತದೆ. ಅನಂತರದಲ್ಲಿ ಸ್ವತಂತ್ರವಾಗಿ ಸಮಗ್ರ ಕಾವ್ಯದಲ್ಲಿ ಈ ಕಥೆ ಮೂಡಿಬಂದಿದ್ದು ಗುಣವರ್ಮನಲ್ಲಿಯೇ. ಇತರ ಜೈನಕವಿಗಳಂತೆ ಈತನೂ ಸಾಂಪ್ರದಾಯಿಕವಾಗಿ ಪುಷ್ಪದಂತ ತೀರ್ಥಂಕರ ಸಾಹಿತ್ಯದ ಕಥಾಪರಂಪರೆಯನ್ನು ಹೇಳಿದ್ದಾನೆ. ಆ ಪ್ರಕಾರ ಈ ಕಥೆ ಮೊದಲು ನಾಲ್ಕು ಅನುಯೋಗದ ನಾಲ್ಕು ಶ್ರುತಸ್ಕಂದಗಳ ಪೂರ್ವಾನುಯೋಗದಲ್ಲಿ ಕಾಣಿಸಿಕೊಂಡಿತು (೧ – ೮೩). ಮುಂದೆ ಇದನ್ನು ತೀರ್ಥಂಕರರು ರೂಪ್ಯಗಿರಿಯಲ್ಲಿ ಭರತನಿಗೆ, ಅಂತಿಮತೀರ್ಥಂಕರರ ವಾಣಿಯಿಂದ ಕೇಳಿದ ಗೌತಮಗಣಧರರು ವಿಪುಳಗಿರಿಯಲ್ಲಿ ಶ್ರೇಣಿಕನಿಗೆ ನಿರೂಪಿಸಿದರೆನ್ನಲಾಗಿದೆ (೧ – ೮೪). ಆದರೆ ಗುಣವರ್ಮ ತನ್ನ ಕೃತಿಗೆ ಆಕರವಾದ ಗ್ರಂಥದ ಬಗ್ಗೆ ಖಚಿತವಾಗಿ ಹೇಳದಿದ್ದರೂ ಕನ್ನಡೇತರ ಕೃತಿಗಳನ್ನು ಗ್ರಂಥ ರಚಿಸುವ ಕಾಲಕ್ಕೆ ಪರಿಭಾವಿಸಿರಬೇಕು ಎಂಬುದಕ್ಕೆ –

ನೋಡಿರೆ ಪೂರ್ವದೊಳ್ ಗಣಧರಾದಿ ಮಹಾಮುನಿ ಸತ್ಕವೀಶ್ವರರ್
ಮಾಡುವೆನೆಂದು ಪೂಣ್ದೆನಿದು ಶಕ್ತಿಯೊ ಭಕ್ತಿಯೊ ವೈನತೇಯನಿ
ರ್ದಾಡಿದ ಗಾಳಿವಟ್ಟೆಗೆ ಮನಂಬಿಡೆ ಧೀಂಕಿಡುವಂತೆ ಟಿಟ್ಟಿಭಂ                   ೧ – ೪೨

ಎನ್ನುವಲ್ಲಿ ಸೂಚನೆಯಿದೆ. ಕನ್ನಡ ತೀರ್ಥಂಕರ ಚರಿತೆಗಳು ಜಿನಸೇನ ಗುಣಭದ್ರರ ಸಂಸ್ಕೃತ ಮಹಾಪುರಾಣದಿಂದ ಪ್ರೇರಣೆ ಪಡೆದಿರುವುದು ಸುವಿದಿತ. ಇದಕ್ಕೆ ಗುಣವರ್ಮ ಕವಿ ಹೊರತೇನಲ್ಲ. ಕಾವ್ಯದ ಆರಂಭದಲ್ಲಿ ಜಿನಧರ್ಮರಥವನ್ನು ಎಳೆದ ಜಿನಸೇನರನ್ನು, ಗುಣಗಳ ಖಣಿಯಾದ ಗುಣಭದ್ರರನ್ನು ಸ್ತುತಿ ಮಾಡಲು ಕವಿ ಮರೆತಿಲ್ಲ. ಗುಣಭದ್ರರ ಉತ್ತರಪುರಾಣದಲ್ಲಿ ಬರುವ ಪುಷ್ಪದಂತ ಚರಿತೆಯ ಕಥಾಚೌಕಟ್ಟನ್ನು ಇಟ್ಟುಕೊಂಡು ಈತ ವಸ್ತು ನಿರ್ವಹಣೆ ಮಾಡಿರುವುದು ತೌಲನಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಪುಷ್ಪದಂತನ ಕಥೆ ಕೇವಲ ೬೨ ಶ್ಲೋಕಗಳಲ್ಲಿ ಚಿಕ್ಕದಾಗಿ ಬಂದಿದೆ. ಇದನ್ನು ಗುಣವರ್ಮ ೧೪ ಆಶ್ವಾಸಗಳಿಗೆ ವಿಸ್ತರಿಸುವಲ್ಲಿಯೇ ಈ ಕೃತಿಕಾರನ ಆಶಯ ಗೃಹೀತವಾಗುತ್ತದೆ. ಗುಣವರ್ಮ ಉತ್ತರಪುರಾಣದಂತೆ ಪುಷ್ಪದಂತ ತೀರ್ಥಂಕರ ಸ್ತುತಿಯಿಂದ ಕಾವ್ಯಾರಂಭ ಮಾಡಿದ್ದರೂ ಭಿನ್ನವಾಗಿದೆ. ಉತ್ತರಪುರಾಣದಲ್ಲಿ –

ವಿಧಾಯ ವಿಪುಲೇ ಮಾರ್ಗೇ ವಿನೇಯಾಂಶ್ಚೌಮಲೇ ಸ್ವಯಂ
ಸ್ವಯಂ ಚ ಸುವಿಧಿರ್ಯೋ ಭೂದ್ವಿದೇಯಾನ್ನಸ್ಸ ತಂ ವಿಧಿಂ         || ೧ ||

ಎಂದು ಪ್ರಾರ್ಥಿಸಿದ್ದರೆ ಗುಣವರ್ಮ –

ಶ್ರೀ ಪೌಲೋಮೀಶ ಭೂಭೃತ್ಸಮುದಯ ವಿನುತಂಗಳ್ ತಮಸ್ತೋಮ ಚೈತ್ರಾ
ದೀಪಂಗಳ್ ದರ್ಶಿತಾಶಾಂಬರ ಸಕಲ ಪದಾರ್ಥ ಕ್ರಮಂಗಳ್ ಸದಾಲೋ
ಕಾಪದ್ವಿಚ್ಛೇದಕಂಗಳ್ ಮಹದಮೃತನಿಧಿಸ್ಫೂರ್ತಿಗಳ್ ಪುಷ್ಪದಂತ
ಶ್ರೀಪಾದಂಗಳ್ ಸಮುತ್ಪಾದಿಸುಗೆಮಗೆ ಹೃದಿಂದೀವರಾನಂದದೊಳ್ಪಂ        ೧ – ೧

ಎಂದು ಮೂಲಕ್ಕಿಂತ ವಿಸ್ತೃತವಾಗಿ ತನ್ನದೇ ಆದ ರೀತಿಯಲ್ಲಿ ಸ್ತುತಿಸಿ ಕಾವ್ಯ ಸಾಮರ್ಥ್ಯವನ್ನು ಪ್ರಕಟಿಸಿದ್ದಾನೆ. ಉತ್ತರ ಪುರಾಣದಲ್ಲಿ ೨ನೆಯ ಶ್ಲೋಕದಿಂದಲೇ ಕಥೆ ಶುರುವಾಗುತ್ತದೆ. ಗುಣವರ್ಮನ ಕಾವ್ಯ ಸ್ವತಂತ್ರ ರಚನೆಯಾಗಿರುವುದರಿಂದ ಕಾವ್ಯಲಕ್ಷಣಕ್ಕನು ಗುಣವಾಗಿ ಸಿದ್ಧರು ಆಚಾರ್ಯರು ಉಪಾಧ್ಯಾಯರು ಮುಂತಾದವರ ಸ್ತುತಿ, ಪೂರ್ವಕವಿಸ್ಮರಣೆ, ಸ್ವಕಾವ್ಯ ಪ್ರಶಂಸೆ ಇತ್ಯಾದಿ ಪದ್ಯಗಳಿಂದ ಕೂಡಿ ಪೀಠಿಕಾರೂಪದಲ್ಲಿ ಪ್ರಥಮ ಆಶ್ವಾಸ ಆಕಾರ ಪಡೆದಿದೆ.

ಉತ್ತರ ಪುರಾಣದಲ್ಲಿ ಪುಷ್ಕಲಾವತಿದೇಶದ ಪರಿಚಯವನ್ನು ಒಂದು ಶ್ಲೋಕಕ್ಕೆ ಪರಿಮಿತಗೊಳಿಸಿದ್ದರೆ, ಪುಷ್ಪದಂತ ಪುರಾಣದಲ್ಲಿ ಇದು ೩೦ ಪದ್ಯಗಳಲ್ಲಿ (೭:೧ – ೩೧) ವರ್ಣನೆಗೊಂಡಿದೆ. ಅಲ್ಲಿರುವ ಪುಂಡರೀಕಿಣಿ ನಗರವನ್ನು ಸುಮಾರು ೬೦ ಪದ್ಯಗಳಲ್ಲಿ (೭:೩೨ – ೯೫) ಲಂಬಿಸಿ ಅಚ್ಚುಕಟ್ಟಾದ ನಗರ ವರ್ಣನೆಗೆ ಅವಕಾಶ ಮಾಡಿಕೊಂಡಿರುವುದನ್ನು ಗಮನಿಸಬಹುದು. ಪುಷ್ಪದಂತನ ಕಥಾಚೌಕಟ್ಟು ಅತ್ಯಂತ ಕಿರಿದಾದುದು. ಹೀಗಿರುವಾಗ ಪುಷ್ಪದಂತ ಪುರಾಣದಲ್ಲಿ ಬರುವ ಕೆಲವು ಸನ್ನಿವೇಶಗಳು ಉತ್ತರ ಪುರಾಣದಲ್ಲಿ ಕಂಡುಬರುವುದಿಲ್ಲ. ಮಹಾಪದ್ಮನ ತಂದೆ ಪದ್ಮರಾಜನ ವೃತ್ತಾಂತ ಉತ್ತರ ಪುರಾಣದಲ್ಲಿಲ್ಲ. ಗುಣವರ್ಮ ಮಹಾಪದ್ಮನನ್ನು ತನ್ನ ಆಶ್ರಯದಾತನಾದ ಶಾಂತಿವರ್ಮನೊಡನೆ ಸಮೀಕರಿಸಿರುವುದರಿಂದ ಆತನ ಉನ್ನತ ವ್ಯಕ್ತಿತ್ವವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾನೆ. ಮಹಾಪದ್ಮ ಪೃಥ್ವಿಯನ್ನು ಚೆನ್ನಾಗಿ ಪೋಷಿಸುತ್ತಿದ್ದನೆಂದು ನಿರೂಪಿಸುವಾಗ ಉತ್ತರ ಪುರಾಣದಲ್ಲಿ –

ಸಂಪೋಷ್ಯ ಪಾಲಯಾ ಮಾಸ ಗಾಂ ಸಸಾ ಚ ಸ್ವಯಂ ಮುದಾ
ಪ್ರಸ್ನುತಾ ನಿಜಸಾರೇಣ ತಂ ಸದಾ ಸಮತರ್ಪಯತ್          ೫

ಎಂದಿರುವುದನ್ನು ಗುಣವರ್ಮ –

ವಸುವಂ ಸನ್ಮಾರ್ಗದೊಳಾ
ರ್ಜಿಸುವಂ ವರ್ಧಿಸುವನೆಯ್ದೆ ರಕ್ಷಿಸದೀವಂ
ನಿಸದಂ ವಿಬುಧರ್ಗಿದು ಭಾ
ವಿಸೆ ಚಿತ್ರಂ ರಾಜವೃತ್ತಮಾಯ್ತನ್ಯೂನಂ   ೩ – ೯

ಎಂದು ಅದೇ ಭಾವವನ್ನು ಮುಂದುವರಿಸಿದ್ದರೂ ಇಂಥ ನಿದರ್ಶನಗಳು ವಿರಳ. ಉತ್ತರ ಪುರಾಣದಲ್ಲಿ ಪುತ್ರದೋಹಳದ ವರ್ಣನೆಯಾಗಲಿ, ಚಿತ್ರಾಂಗದ ಪ್ರಸಂಗವಾಗಲಿ ಇಲ್ಲ. ಗುಣವರ್ಮ ಈ ಭಾಗಗಳನ್ನು ಅನ್ಯಮೂಲಗಳಿಂದ ಪಡೆದಿದ್ದಾನೋ ಅಥವಾ ಈತನ ಸ್ವಂತ ಸೃಷ್ಟಿಯೊ ಸ್ಪಷ್ಟವಾಗುವುದಿಲ್ಲ. ಈತ ಉತ್ತರ ಪುರಾಣದ ಕೆಲವು ಭಾಗಗಳನ್ನು ಮೂಲಕ್ಕಿಂತ ಉತ್ತಮಪಡಿಸುವುದುಂಟು. ಮಹಾಪದ್ಮ ಸಂಸಾರದಿಂದ ನಿರ್ವೇಗಪರನಾದಾಗ ಆತನ ಮನಸ್ಸಿನಲ್ಲಿ ಉಂಟಾದ ತಳಮಳವನ್ನು ಗುಣಭದ್ರನು ವರ್ಣಿಸಿದ್ದಾರೆ. ಉದಾಹರಣೆಗೆ –

ಜನ್ಮ ದುಃಖಜರಾಮೃತ್ಯು ಮಹಾಮಕರ ಭೀಕರೇ
ಇತಿಸಾಮ್ರಾಜ್ಯಲಕ್ಷ್ಮೀಂ ಸ ತಿತ್ಯಕ್ಷುರಭವತ್ತದಾ    ೪೪

ಎಂಬ ಶ್ಲೋಕದ ಜಾಡಿನಲ್ಲಿ ಗುಣವರ್ಮ ಕ್ರಮಿಸಿದರೂ –

ಅತಿನಿಸ್ಸಾರಮಿದೆಲ್ಲಮೆಂದಱಿದುವೆನ್ನೊಳ್ ಮತ್ತೆ ಸಂಸಾರಮು
ಹ್ಯತೆ ಮತ್ತಾಪ್ತ ಕಳತ್ರ ಪುತ್ರಜನಮೋಹಂ ಮತ್ತೆ ರಾಜ್ಯಾಂಗ ಸಂ
ಗತಿ ಮತ್ತಿಷ್ಟ ಸುಖೋಪಭೋಗರತಿ ಮತ್ತರ್ಥಾರ್ಜನಾಪೇಕ್ಷೆ ಮ
ತ್ತೆ ತದಾನುಗ್ರಹನಿಗ್ರಹಕ್ರಿಯೆ ಗಡೇಂ ಚಿಃ ಕಷ್ಟಮೀಚೇಷ್ಟಿತಂ        ೧೩ – ೩೧

ಎಂದು ಸಂಸಾರದ ನಿಸ್ಸಾರತೆಯನ್ನು ಮೂಲಕ್ಕಿಂತ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದ್ದಾನೆ. ಉತ್ತರ ಪುರಾಣದಲ್ಲಿ ಪುಷ್ಪದಂತನು ಪುತ್ರನಾದ ಸುಮತಿಗೆ ರಾಜ್ಯವನ್ನು ಒಪ್ಪಿಸಿದನೆಂದಿದೆ. ಆದರೆ ಗುಣವರ್ಮನಲ್ಲಿ ಹಿರಿಯಮಗನೂ ಯುವರಾಜನೂ ಆಗಿದ್ದ ಕೀರ್ತಿಧರನಿಗೆ ರಾಜ್ಯ ಒಪ್ಪಿಸಿದಂತೆ ವ್ಯತ್ಯಾಸ ಮಾಡಿಕೊಳ್ಳಲಾಗಿದೆ. ಇದು ಕೇವಲ ನಾಮ ವ್ಯತ್ಯಯವೊ ಅಥವಾ ಪುಷ್ಪದಂತನಿಗೆ ಸುಮತಿ ಎಂಬ ಮಗನಿದ್ದನೊ ತಿಳಿಯುವುದಿಲ್ಲ. ಈ ಕೆಲವು ಅಂಶಗಳಿಂದ ಕನ್ನಡ ಪುಷ್ಪದಂತ ಪುರಾಣವು ಉತ್ತರಪುರಾಣದ ಪುಷ್ಪದಂತ ಚರಿತೆಯನ್ನು ನೇರವಾಗಿ ಅನುಸರಿಸಲು ಹೋಗದೆ ಕನ್ನಡಕ್ಕೊಂದು ಹೊಸ ಕಥನಕ್ರಮಕ್ಕೆ ಅಡಿಪಾಯ ಹಾಕಿದ್ದಾನೆ. ಚಾವುಂಡರಾಯನದು ಗುಣಭದ್ರರ ಸಂಪ್ರದಾಯವಾದರೆ, ಇಲ್ಲಿಯ ಕಥೆ ಗುಣವರ್ಮನ ಸಂಪ್ರದಾಯವೆನ್ನಬಹುದು. ಹೀಗೆ ಗುಣವರ್ಮ ಉತ್ತರ ಪುರಾಣದ ಕಥಾಸೂತ್ರವನ್ನು ಇಟ್ಟುಕೊಂಡಿದ್ದರೂ ಆತನ ಕೃತಿಯನ್ನು ಪೂರ್ತಿಯಾಗಿ ಬಳಸಿಕೊಂಡಿರುವಂತೆ ತೋರುವುದಿಲ್ಲ. ಯಾವುದಾದರೂ ಪ್ರಾಕೃತ ಪುಷ್ಪದಂತ ಪುರಾಣವನ್ನು ಬಳಸಿಕೊಂಡಿದ್ದಾನೆಯೆ ಎಂಬುದು ಇನ್ನೂ ತಿಳಿಯಬೇಕಾಗಿದೆ.

ಕವಿ ಪುಷ್ಪದಂತನ ಕಥೆಯನ್ನು ದೊಡ್ಡ ಕಾವ್ಯವಾಗಿ ವಿನ್ಯಾಸಗೊಳಿಸುವಾಗ ತನಗಿಂತ ಪೂರ್ವದಲ್ಲಿದ್ದ ಕನ್ನಡ ತೀರ್ಥಂಕರ ಚರಿತೆಗಳನ್ನೆಲ್ಲ ಅಭ್ಯಾಸ ಮಾಡಿದ್ದಾನೆ. ಪಾರ್ಶ್ವಪಂಡಿತನಂತೆ ಈತನೂ ತನ್ನ ಕಾವ್ಯವನ್ನು ನವ್ಯಕಾವ್ಯ ಎಂದು ಕರೆದಿದ್ದು ಈ ಕಾವ್ಯದಲ್ಲಿ ಗುಣವರ್ಮನ ಕಾವ್ಯಸಂಪತ್ತು, ಪಂಪನ ಓಜೆ, ಪೊನ್ನನ ದೇಸಿ, ರನ್ನನ ಗುಣಾತಿಶಯ, ನಾಗಮರ್ವನ ರೀತಿ, ನೇಮಿಚಂದ್ರನ ಚಮತ್ಕಾರ, ಜನ್ನನ ಇಂಪು, ನಾಗಚಂದ್ರನ ರಸವೃತ್ತಿ (೧ – ೩೬) ಇವು ನೆಲಸಲೆಂದು ಆಶಿಸಿದ್ದಾನೆ. ಈ ಪದ್ಯ ಈತನ ವಿಮರ್ಶನ ಪ್ರಜ್ಞೆಗೂ ಸಾಕ್ಷಿ. ಕಾವ್ಯಶಿಲ್ಪಕ್ಕೆ ಸಂಬಂಧಿಸಿದಂತೆ ಪಂಪನಿಗೆ ಬಹಳ ಋಣಿಯಾಗಿದ್ದಾನೆ. ಈತನಿಗೆ ಪಂಪಭಾರತದ ಪ್ರಭಾವವಿರುವುದನ್ನು ಸ್ವಲ್ಪ ಮಟ್ಟಿಗೆ ಶೇಷಯ್ಯಂಗಾರ್ಯರು ಗುರುತಿಸಿದ್ದಾರೆ. ಆದರೆ ಇನ್ನೂ ಅನೇಕ ಪದ್ಯಗಳಲ್ಲಿ ನೇರ ಪ್ರಭಾವವಾಗಿರುವುದನ್ನು ಪಟ್ಟಿ ಮಾಡಬಹುದು. ಮರುದೇವಿಯ ಗರ್ಭವರ್ಣನೆಯ ಸಂದರ್ಭದಲ್ಲಿ ಪಂಪ –

ಬಸಿಱ ತೆಳ್ಪಳಿದತ್ತೆ ಮೊಗಂ ಬೆಳ್ಪೇಱಿದುದೇ ಕುಚಚೂಚಕಂ
ಮಸುಳ್ದವೇ ತ್ರಿವಳೀರುಚಿ ಪೇೞ್ ಕುಂದಿರ್ದುದೆ ಮುನ್ನಿನ ಚೆಲ್ವನ
ಪ್ಪಸಿಯ ಬಾಸೆಗೆ ಕರ್ಪೆಸೆದತ್ತೇ ಚೋದ್ಯಮಿದೆಂದು ಮಗುಳ್ದು ಬ
ಣ್ಣಿಸಿದರಿಂದ್ರನ ಕಾಂತೆಯರಂತರ್ವತ್ನಿಯನಾ ನೃಪಪತ್ನಿಯಂ         ೭ – ೩೨

ಎಂದು ಆದಿಪುರಾಣದಲ್ಲಿ ಬಣ್ಣಿಸಿದಂತೆಯೇ ಗುಣವರ್ಮನು –

ತನು ರೋಮಾವಳಿಗೊಯ್ಯನೊಯ್ಯನೆ ಪಸುರ್ಪಂ ಚೂಚಕಕ್ಕೊಯ್ಯನೊ
ಯ್ಯನೆ ಕರ್ಪಂ ವಳಿಗೊಯ್ಯನೊಯ್ಯನೞವಂ ಶಾತೋದರಕ್ಕೊಯ್ಯನೊ
ಯ್ಯನೆ ಕೋರ್ವಂ ಮೊಗಕೊಯ್ಯನೊಯ್ಯನೆ ಬೆಳರ್ಪಂ ಕುಂತಳಕ್ಕೊಯ್ಯನೊ
ಯ್ಯನೆ ನೀಳ್ಪಂ ಮಿಗೆ ಮಾಡುವಾ ಸತಿಯ ಗರ್ಭಾದಾನಮೇನೊಪ್ಪಿತೋ       ೯ – ೧೧೬

ಎಂದು ಪಂಪನನ್ನು ಗಮನಿಸಿ ಅದೇ ರೀತಿ ರಮ್ಯವಾಗಿ ಚಿತ್ರಿಸಲು ಪ್ರಯತ್ನ ಪಟ್ಟಿದ್ದಾನೆ.

ಅಗ್ಗಳನ ಚಂದ್ರಪ್ರಭಪುರಾಣದಲ್ಲಿ ಅಜಿತಸೇನ ಗಗನಮಂಡಲವನ್ನು ನೋಡಿ ನಿರ್ವೇಗ ಪರನಾದಾಗ – “ಇದು ಸುೞಿಗಾಳಿಯಿಂ ನೆಗೆದು ತೋಱುವ ಕಿಂಶುಕಪತ್ರಮಿಂತಿದು” ಎಂಬ ಪದ್ಯದಲ್ಲಿ ಹೇಳಿರುವಂತೆಯೇ ಗುಣವರ್ಮನಲ್ಲಿ ಉಲ್ಕಾಪಾತವನ್ನು ಕಂಡು ಪುಷ್ಪದಂತ ವೈರಾಗ್ಯ ಪರನಾದಾಗ –

ಇದು ರಾಗಾಂಗದ ಮೋಹವಾರ್ಧಿಗೆ ಪೊದೞ್ದೌರ್ವಾನಳಜ್ವಾಲೆ ಮೇ
ಣಿದು ಸಂಸಾರ ಸುಖಾತ್ತ ಚಿತ್ತ ಗಹನಾತಂಕಕ್ಕೆ ಮೇಣ್ ದಾವಮಿಂ
ತಿದು ವೈರಾಗ್ಯದ ರೂಪುಗಾಣಿಸುವ ದೀಪಜ್ಯೋತಿಯೆಂಬಂತಿರಾ
ದುದು ಭೋಂಕಲ್ ನಭದಿಂ ಪ್ರಭಾಸುಭಗಮುಳ್ಳಾಪಾತಮತ್ಯದ್ಭುತಂ        ೧೩ – ೨೬

ಎಂದು ಅನ್ಯರ ಪ್ರಭಾವದಿಂದ ಉತ್ತಮವಾಗಿ ವರ್ಣಿತವಾಗಿರುವುದನ್ನು ಕಾಣಬಹುದು. ಹೀಗೆ ಈತ ಕಾವ್ಯಾವಲೋಕನದ ಕೆಲವು ಪದ್ಯಗಳಿಗೂ ಋಣಿಯಾಗಿದ್ದಾನೆ. ಆದರೆ ಎಲ್ಲಿಯೂ ಮೂಲದ ಯಥಾವತ್ತಾದ ಸ್ವೀಕರಣೆ ಕಂಡುಬರುವುದಿಲ್ಲವೆನ್ನುವುದು ಈತನ ಹೆಚ್ಚುಗಾರಿಕೆ.

ಪುಷ್ಪದಂತ ಪುರಾಣದ ಕಥಾಭಿತ್ತಿ ಎಷ್ಟೆಂಬುದರ ಅರಿವು ಕವಿಗಿದೆ. ಆದುದರಿಂದ ” ಕತೆ ಕಿಱಿದಾದೊಡಂ ಕತೆಯ ನಾಯಕನುನ್ನತ” (೧ – ೪೩) ಎಂದು ಕವಿಯೇ ಸಮರ್ಥನೆ ನೀಡಿದ್ದಾನೆ. ತೀರ್ಥಂಕರಜೀವ ಹಲವು ಭವಗಳನ್ನು ಹಾದು ಬರುವುದು ಸಾಮಾನ್ಯ. ಆದರೆ ಇಲ್ಲಿ ಭವಾವಳಿಗಳ ಗೊಂದಲವಿಲ್ಲ. ಪಾರ್ಶ್ವನಾಥನಿಗೆ ಒಂಬತ್ತು ಭವದ ಕಥೆಯಾದರೂ ಹಿನ್ನೆಲೆಗಿದೆ. ಪುಷ್ಪದಂತನಿಗೆ ತೀರ್ಥಂಕರಭವವನ್ನು ಬಿ‌ಟ್ಟರೆ ಕೇವಲ ಒಂದು ಭವದ ಕಥೆ ಮಾತ್ರ ಬರುತ್ತದೆ. ಹಾಗಾಗಿ ಕವಿ ಅಷ್ಟಾಂಗಗಳು, ಪಂಚಕಲ್ಯಾಣಗಳು, ಅಷ್ಟಾದಶ ವರ್ಣನೆಗಳ ಮೂಲಕ ೧೪ ಆಶ್ವಾಸಗಳವರೆಗೆ ವಿಸ್ತರಿಸಿದ್ದಾನೆ. ಈ ಕಾವ್ಯದಲ್ಲಿ ಈತನ ಕವಿತಾಶಕ್ತಿಯನ್ನು ಹೊರಸೂಸುವ ಪದ್ಯಗಳು ಅಲ್ಲಲ್ಲಿ ಮಿಂಚಿದರೂ ರಸಘಟ್ಟಿಯಾದ ಸನ್ನಿವೇಶಗಳು ಕಡಿಮೆಯೇ. ಇಡೀ ಕಾವ್ಯದಲ್ಲಿ ಮನ ಸೆಳೆಯುವ ಭಾಗವೆಂದರೆ ವನಮಾಲಾದೇವಿಯ ಪುತ್ರದೋಹಳದ ಪ್ರಸಂಗ. ಕವಿ ಇದನ್ನೊಂದು ಸುಂದರ ಸನ್ನಿವೇಶವಾಗಿ ಮಾಡಿದ್ದಾನೆ. ಪುತ್ರದೋಹಳ ಜೈನ ಕಾವ್ಯಗಳ ವಿಶೇಷ. ಪ್ರಸ್ತುತದಲ್ಲಿ ಈ ಚಿತ್ರಣದ ಯಶಸ್ಸು ಬಲುಮಟ್ಟಿಗೆ ಗುಣವರ್ಮನದೆ.

ವನಮಾಲಾದೇವಿ ಜಿನಾಲಯಕ್ಕೆ ಹೋಗಿ ಜಿನವನ್ನು ಪೂಜಿಸಿ ಹಿಂದಿರುಗುವಾಗ ಉದ್ಯಾನವನದಲ್ಲಿ ಜಿಂಕೆಯ ಮರಿಯನ್ನು ನೋಡುತ್ತಾಳೆ. ಈಕೆಯೇ ಸಾಕಿದ ಜಿಂಕೆ ಮರಿ ಹಾಕಿದೆ. ಅದಕ್ಕೀಗ ತನ್ನ ಮರಿಯ ಸೆಳೆತ. ಆದುದರಿಂದ ವನಮಾಲೆಯನ್ನು ಕಂಡ ಕೂಡಲೇ ಆಕೆಯ ಬಳಿಗೆ ಓಡಿಬರುವುದಿಲ್ಲ. ಅದು ತನ್ನ ಮರಿಗೆ ಗರಿಕೆಯ ಎಸಳನ್ನು ತನ್ನ ಬಾಯಿಂದ ಕೊಡುತ್ತ, ಮುಖಕ್ಕೆ ಮುಖ ಕೊಟ್ಟು ಮುದ್ದಿಸುತ್ತ, ಮೊಲೆಯೂಡುತ್ತ ತಾಯ್ತನದ ಮೋಹರಸದಲ್ಲಿ ಓಲಾಡುವುದನ್ನು ಕವಿ ಒಂದು ಸೊಗಸಾದ ಗದ್ಯದಲ್ಲಿ ಚಿತ್ರಿಸಿದ್ದಾನೆ. ಆ ಹುಲ್ಲೆಯನ್ನು ನೋಡಿದ ವನಮಾಲಾದೇವಿ ಪುತ್ರಸುಖ ಎಷ್ಟು ದೊಡ್ಡದು ಎಂಬುದನ್ನು ತಿಳಿದು ತನ್ನ ಕೊರತೆಯ ಬಗ್ಗೆ ಚಿಂತಿಸುತ್ತ ಅರಮನೆಗೆ ಹಿಂದಿರುಗುತ್ತಾಳೆ. ಈಕೆಯ ಪತಿ ಅರಮನೆಗೆ ಉತ್ಸಾಹದಿಂದ ಬಂದಾಗ ಪತ್ನಿಯ ಮುಖ ಎಂದಿನಂತೆ ಇರುವುದಿಲ್ಲ. ಆಕೆಯ ಮ್ಲಾನವದನವನ್ನು ಕಂಡು ” ಒಸರದಿದೇಕೆ ನಿನ್ನ ವದನೇಂದು ವಚೋಮೃತಮಂ” (೩ – ೬೯) ಎಂದು ಮರುಗುತ್ತಾನೆ. ಸಖಿಯರಿಂದ ಕಾರಣವನ್ನು ತಿಳಿದುಕೊಳ್ಳುತ್ತಾನೆ.

ವನಮಾಲಾದೇವಿಗೆ ತನ್ನ ಓರಗೆಯ ಹೆಣ್ಣು ಮಕ್ಕಳನ್ನು ಹಡೆದು ಮುದ್ದಾಡುವುದನ್ನು ನೋಡಿದಾಗ ತಾಯ್ತನದ ಶ್ರೀಮಂತಿಕೆಯು ತನ್ನ ಶ್ರೀಮಂತಿಕೆಯನ್ನು ಜರಿಯುವಂತೆ ಭಾಸವಾಗುವುದನ್ನು ಕವಿ ವಿವರವಾಗಿ ವರ್ಣಿಸಿದ್ದಾನೆ –

ನಡಪಿದ ಪುಲ್ಲೆ ನೋಡ ಕೊಣಸಂ ಪಡೆದಿಂತೆಸೆದಿರ್ದುದೀಗಳೀ
ನಡಪಿದ ಪಕ್ಕಿಗಳ್ ಮಱಿಗಳೊಳ್ ಗಱಿ ಸೋಂಕಿ ಸುಖಕ್ಕೆ ಸಂದುವಾ
ನಡಪಿದ ಬಳ್ಳಿಗಳ್ ಪಲವು ಸೂೞ್ ಸುಫಲ ಪ್ರಸವಕ್ಕೆ ವಂದುವಾಂ
ಪಡೆಯದೆ ಸರ್ವಲೋಕ ಹಿತನಂ ಸುತನಂ ತಡೆದಿರ್ದೆನೇಕೆಯೋ         ೩ – ೭೯

ಎಂದು ಪ್ರಾಣಿ ಪಕ್ಷಿ ಗಿಡಮರಗಳಲ್ಲಿ ವನಮಾಲಾದೇವಿ ತಾಯ್ತನದ ಭಾವವನ್ನು ಕಾಣವುದು ಅಪೂರ್ವವಾಗಿದೆ. ಈಕೆಯನ್ನು ಸಮಾಧಾನಪಡಿಸಲು ಪತಿ ಹೇಳುವ –

ಪಡೆದೊಡದೇನೊ ಕಾಡಲತೆಗಳ್ ಫಲವಂ ಪಲವುಂ ಫಲಂ ದಿಟಂ
ತಡೆದೊಡಮೇನೊ ಕಲ್ಪಲತೆ ಲೋಕದ ದೃಷ್ಟದೆ ಸೇವ್ಯ ಸತ್ಫಲಂ
ಬಿಡಿಯದುದಲ್ತು ಮಿಕ್ಕ ವಧುಗಳ್ ಪಡೆದೇಂಗಳ ಮಕ್ಕಳಂ ಮಗಂ
ಬಡೆದಪೆ ನೀನೆ ದಲ್ ಜಗದ ಭಾಗ್ಯದ ಮುಂಬಿನೊಳಂಬುಜಾನನೇ    ೩ – ೮೪

ಎಂಬ ಮಾತು ಆತನ ವ್ಯಕ್ತಿತ್ವಕ್ಕೆ ತಕ್ಕುದಾಗಿದೆ. ಇದೇ ಭಾವ ಮಧುರನ ಧರ್ಮನಾಥ ಪುರಾಣದಲ್ಲಿ ಪುತ್ರದೋಹಳದ ಸಂದರ್ಭದಲ್ಲಿಯೇ –

ಬಂದು ನಱುಸುಯ್ಗೆ ನೆಱಿ ಮೆ
ಯ್ಗುಂದದ ಕೆಲಪಿಂಗೆ ಸೋಲ್ತು ಬಿಂಬಾಧರಮಂ
ಕಂದಿಸು ನೀನೆಂದೆಸುಕೆಯ
ಕೆಂದಳಿರೇಂ ಲಂಚಮಿತ್ತುದೇ ಲಲಿತಾಂಗೀ  ಧರ್ಮ. ಪು. ೩ – ೧೩೮

ಎಂದು ಮರುಕೊಳಿಸಿದೆ. ಹೀಗೆಯೇ ‘ಅಂದುಗೆಯ ನೂಲ ಕಂಕಣ’ (೩ – ೯೫) ‘ಬಾಳ ಮರಾಳಮಂ’ (೩ – ೯೬) ಎಂಬ ಪುಷ್ಪದಂತ ಪುರಾಣದ ಪದ್ಯಗಳ ಭಾವ ಧರ್ಮನಾಥ ಪುರಾಣದ (೩ – ೧೧೮,೧೧೯) ಪದ್ಯಗಳಲ್ಲಿಯೂ ಕಾಣಿಸಿಕೊಂಡಿದೆ. ಮಧುರ ಈ ಪದ್ಯಗಳನ್ನು ಗುಣವರ್ಮನಿಂದ ಸ್ವೀಕರಿಸಿದನೊ ಅಥವಾ ಇವರಿಬ್ಬರೂ ಯಾವುದೋ ಒಂದು ಮೂಲವನ್ನು ಆಧರಿಸಿ ಬರೆದರೊ ಪರಿಶೀಲನಾರ್ಹ. ಒಟ್ಟಿನಲ್ಲಿ ಈ ಪದ್ಯಗಳು ಮಗುವಿಗಾಗಿ ಹಂಬಲಿಸುತ್ತಿರುವ ತಾಯಿಯ ಭಾವನೆಗಳನ್ನು, ಆಕೆಯ ಮಾನಸಿಕ ತೊಳಲಾಟವನ್ನು ಸೂಕ್ಷ್ಮವಾಗಿ ಪ್ರಕಟಿಸುತ್ತವೆ.

ಪುಷ್ಪದಂತ ಪುರಾಣ ವರ್ಣನಾ ಪ್ರಧಾನವಾದ ಕಾವ್ಯ. ದೇಶ ವರ್ಣನೆ, ಪುರ ವರ್ಣನೆ, ನಾಯಕಾಭ್ಯುದಯ, ಕುಮಾರೋದಯ, ದಿಗ್ವಿಜಯ ವರ್ಣನೆ, ದೂತ ವರ್ಣನೆ, ಜಲಕೇಳೀ ವರ್ಣನೆ ಮೊದಲಾದೆಡೆ ದೀರ್ಘವಾದ ವರ್ಣನೆಗಳು ಬಂದಿದ್ದು ಕೆಲವು ಸಾಂಪ್ರದಾಯಿಕ ವೆನಿಸಿದರೂ ಕವಿ ಪ್ರತಿಭೆಯನ್ನು ಅಭಿವ್ಯಕ್ತಿಸುವ ಪದ್ಯಗಳು ಮುದ ನೀಡುತ್ತವೆ. ಸೀತಾ ನದಿಯ ವರ್ಣನೆಯಲ್ಲಿ ಕವಿ ಸೀತೆ, ಸೀತಾ ನದಿ ಹಾಗೂ ರಾಮಾಯಣವನ್ನು ಒಂದೇ ಸೂತ್ರದಲ್ಲಿಟ್ಟು ವರ್ಣಿಸಿರುವುದು ವಿಶಿಷ್ಟವಾಗಿದೆ –

ಕುಲಭೂಭೃದ್ಭವೆ ಲಕ್ಷ್ಮಣಾಭಿನುತೆ ರಾಮೋತ್ಕಂಠೆ ವೈಧೇಹಿ ಮಂ
ಜುಲವೇಣೀ ರಮಣೀಯೆ ಸತ್ಕುಶಲವ ವ್ಯಾಸಂಗೆ ಕಂದರ್ಪಜೋ
ತ್ಕಳಿಕಾಕ್ರಾಂತೆ ದಶಾನನಾತ್ಮೆ ವಿಮಲಶ್ರೀಮಜ್ಜನಸ್ಥಾನೆ ಕ
ಣ್ಗೊಳಿಕುಂ ವಾಹಿನಿ ಸೀತೆ ಪೋಲ್ತು ಭುವನ ಪ್ರಖ್ಯಾತೆಯಂ ಸೀತೆಯಂ        ೨ – ೮

ಸೀತೆ ಭೂಮಿಯಲ್ಲಿ ಹುಟ್ಟಿದಳು, ಲಕ್ಷ್ಮಣನಿಂದ ನಮಸ್ಕರಿಸಲ್ಪಟ್ಟಳು, ರಾಮನಿಗೆ ಪ್ರಿಯಳಾದವಳು ವೈದೇಹಿ, ಕುಶಲವರಿಗೆ ವ್ಯಾಸಂಗ ಮಾಡಿಸಿದವಳು, ರಾವಣನ ಆತ್ಮದಲ್ಲಿ ನೆಲಸಿದವಳು. ಸೀತಾನದಿ ಲೋಕಪ್ರಸಿದ್ಧಳಾದ ಸೀತೆಯನ್ನು ಹೋಲುತ್ತಿದ್ದಳೆಂದು ಕವಿ ವರ್ಣಿಸಿದ್ದಾನೆ.

ಸ್ತ್ರೀಯರನ್ನು ನಖಶಿಖಾಂತ ವರ್ಣನೆ ಮಾಡಿರುವುದರಿಂದ ಅನಾವಶ್ಯಕವಾದ ವರ್ಣನೆಗಳೂ ಸೇರಿಕೊಂಡಿವೆ. ಆದರೆ ಯುವರಾಜನನ್ನು ನೋಡುತ್ತಿದ್ದ ಸ್ತ್ರೀಯರ ಶೃಂಗಾರ ಭಾವನೆಗೆ ಕವಿ –

ಬೆಳತಿಗೆಗಣ್ಣ ಬೆಳ್ಪು ನಗೆಗಣ್ಣ ಮುಗುಳ್ನಗೆ ಚೆಲ್ಲಗಣ್ಣ ಚಾ
ಪಳಮಲರ್ಗಣ್ಣ ಬಳ್ವಳಿಕೆ ಮೀಂಬೊಣರ್ಗಣ್ಣ ನಿಮಿರ್ಕೆ ಸೊರ್ಕುಗ
ಣ್ಣಳಸತೆ ಪುಲ್ಲೆಗಣ್ಣೆಳತೆ ತಳ್ತೆಮೆಗಣ್ಣ ತಗುಳ್ದು ತೋಱಿ ಕ
ಣ್ಬೆಳಸಿನ ಸುಗ್ಗಿಗಾಣಲಣಮಾಯ್ತು ಪುರ ಪ್ರಮದಾಜನಂಗಳೊಳ್   ೫ – ೨೪

ಎಂದು ಮೂರ್ತರೂಪ ನೀಡಿದ್ದು ಈತ ಹೇಳುವ ವಿವಿಧ ಬಗೆಯ ಕಣ್ಣುಗಳು ಅಲ್ಲಿ ವ್ಯಕ್ತವಾದ ವಿವಿಧ ಭಾವವನ್ನು ಅಭಿವ್ಯಕ್ತಿಸುವಲ್ಲಿ ಸಫಲವಾಗಿವೆ.

ಗುಣವರ್ಮನ ಯುದ್ಧವರ್ಣನೆ ಸಾಂಪ್ರದಾಯಿಕವಾಗಿರದೆ ಸಹಜವೆಂಬಂತೆ ಚಿತ್ರಿತವಾಗಿದೆ. ಜಯತುಂಗದೇವನ ಸೈನ್ಯವನ್ನು –

ಬಳೆದುದೊ ಭೂತಳಂ ಬೆಸಲೆಯಾಯ್ತೊ ದಿಶಾವಳಿ ಮೇರೆದಪ್ಪಿತೋ
ಜಳಮಯಮಾಗಿ ವಾರ್ಧಿ ಭುವನತ್ರಯವಾಸಿಗಳೆಲ್ಲಗಳೆಲ್ಲಮಿಲ್ಲಿಗೀ
ಗಳೆ ನರನಾಗಿ ಬಂದು ನಡೆವಂದಮೊ ಪೇೞಿಮೆನಲ್ಕಗುರ್ವನಾ
ಳ್ದಳವಿಗಳುಂಬಮಾದುದು ಬಳಪ್ರಚಳಂ ಜಯತುಂಗದೇವನಾ        ೮ – ೩೩

ಎಂದು ಚಿತ್ರವತ್ತಾಗಿ ವರ್ಣಿಸಿದ್ದಾನೆ. ಕೋಟೆಕಾಳಗ (೭ – ೩೪)ದ ಪ್ರಸ್ತಾಪ ಇಲ್ಲಿಯೂ ಎಡೆಪಡೆದಿದೆ.

ಗುಣವರ್ಮ ತನ್ನ ಕಾವ್ಯದ ರಸದೃಷ್ಟಿಯನ್ನು ಕುರಿತು “ವೀತರಾಗ ಕಥಾಂತರ್ಗತ ಮಾದೊಡಾವ ರಸಮುಂ ಶಾಂತತ್ವಮಂ” ಎಂದು ಇಲ್ಲಿ ಎಲ್ಲ ರಸಗಳೂ ಶಾಂತರಸದಲ್ಲಿಯೇ ಪರ್ಯವಸಾನವಾಗುವುದನ್ನು ಹೇಳಿದ್ದಾನೆ. ಈ ಮಾತು ಎಲ್ಲ ಜೈನಕಾವ್ಯಗಳಿಗೂ ಅನ್ವಯಿಸುವಂತಿದೆ. ಕಾವ್ಯಸೌಂದರ್ಯವನ್ನು ಹೆಚ್ಚಿಸಲು ಅಲಂಕಾರಗಳೂ ಇರಬೇಕೆಂಬ ಆಶಯದಿಂದ ಅದಕ್ಕೆ ಸೂಕ್ತ ಸ್ಥಾನ ನೀಡಿದ್ದಾನೆ. ಪ್ರಾಸ ಅನುಪ್ರಾಸ ಯಮಕ ಇತ್ಯಾದಿ ಶಬ್ದಾಲಂಕಾರಗಳನ್ನು ಉಪಮೆ ದೃಷ್ಟಾಂತ ಶ್ಲೇಷೆ ಮೊದಲಾದ ಅರ್ಥಾಲಂಕಾರಗಳನ್ನು ಔಚಿತ್ಯವರಿತು ತಂದಿದ್ದಾನೆ. ಮುದ್ರಾಲಂಕಾರವೂ ಕಾಣಸಿಗುತ್ತದೆ. ಹೆಣ್ಣಾನೆಯ ಪ್ರಸವದ ಸಂದರ್ಭದಲ್ಲಿ ಸ್ವಭಾವೋಕ್ತಿಯನ್ನು ಬಳಸಿದ್ದು ಕಣ್ಣಿಗೆ ಕಟ್ಟುವಂತಿದೆ –

ಬೇನೆಯಿನಕ್ಷಿಗಳ್ ನಸುಮುಗುಳ್ತಿರೆ ಪಿಂತು ಕುನುಂಗಿ ಜೋಲೆ ಪೇ
ರಾನೆಯ ಕರ್ಣವಾಯು ಬೆಮರಾಱಿಸೆ ತಾಯ್ಪಿಡಿ ನೀಡೆ ಹಸ್ತದಿಂ
ತಾನವಳಂಬಿಸಿರ್ದು ತಟಭೂಜದೊಳೊಂದು ಕರೇಣು ಸೂಲಿಸು
ತ್ತೇನಣದಲ್ಲಿ ಮಾಡಿದುದೊ ಬೇಡರೊಳಂ ಕರುಣಾನುಭಾವಮಂ    ೫ – ೮೨

ಹೀಗೆ ಬಿಡಿಪದ್ಯಗಳನ್ನು ಅಲಂಕಾರದಿಂದ ಶೃಂಗರಿಸಿ ಸುಂದರಗೊಳಿಸಲಾಗಿದೆ

ಪದ್ಯದಂತೆ ಗದ್ಯದಲ್ಲಿಯೂ ಗುಣವರ್ಮ ಅಲಂಕಾರಗಳನ್ನು ತರಬಲ್ಲ. ಉದಾಹರಣೆಗೆ “ಮಾತಂಗಸಂಗಿಯಾಗಿಯುಂ ಸದ್ವಂಶವಿರಹಿತಮಲ್ತು ಬಂಧುಜೀವಹಾರಿಯಾಗಿಯು ವಧೀಕೃತ ಗೋತ್ರಮಲ್ತು ಮದನವಿಜಯಾಭಿವೃದ್ಧಿಕರಯಾಗಿಯುಂ ವಿರಾಗದೂರಮಲ್ತು ವಿವಿಧ ಶಬ್ದ ರಚಿತಮಾಗಿಯುಂ ಶಬ್ದಾವಕಾಶಮಲ್ತೆನಿಪ” (೫ – ೮೬ ವ.) ಎಂಬ ಭಾಗದ ವಿರೋಧಾಭಾಸ ಅಲಂಕಾರ ಗಮನಾರ್ಹ. ಪ್ರಕೃತಿ ವ್ಯಾಪಾರಕ್ಕೆ ಲೋಕವ್ಯಾಪಾರವನ್ನು ತಳುಕು ಹಾಕಿರುವಲ್ಲಿ (೮ – ೧೧೭) ಯೂ ಕವಿಯ ಕೌಶಲ ಪ್ರಕಟವಾಗಿದೆ.

ಗುಣವರ್ಮ ತನ್ನ ಸಮಕಾಲೀನ ಕೆಲವು ಸಂಗತಿಗಳನ್ನು ಕಾವ್ಯದಲ್ಲಿ ಅಂತರ್ಗತಗೊಳಿಸಿದ್ದು ಅವು ಆ ಕಾಲದ ಸಾಮಾಜಿಕ ಇತಿಹಾಸ ತಿಳಿಯಲು ನೆರವಾಗಬಲ್ಲವು. ವಿದ್ಯಾಭ್ಯಾಸಕ್ಕಾಗಿ ವಿದ್ಯಾಮಂಟಪ (೪ – ೫೪), ಅಕ್ಷರಾಭ್ಯಾಸ ಮಾಡಿಸುತ್ತಿದ್ದ ರೀತಿ, ವಿದ್ಯಾರಂಭಕ್ಕೆ ಮೊದಲು ವಿದ್ಯಾದೇವತೆಯ ಪೂಜೆ, ವಿದ್ಯಾಚಾರ್ಯ ಪೂಜೆ ಮತ್ತು ಆ ಕಾಲದ ಪಠ್ಯಗಳೇನಿದ್ದವೆಂಬ ಬಗ್ಗೆಯೂ ಸೂಚನೆಗಳು ದೊರೆಯುತ್ತವೆ. ರಾಜಕುಮಾರರು ಲಿಪಿ ಶಬ್ದಶಾಸ್ತ್ರ ಅಭಿದಾನ ನಾಟಕ ಕಾವ್ಯ ನೃಪನೀತಿ ಜ್ಯೋತಿಷ್ಯ ರತ್ನಪರೀಕ್ಷೆ ಗಣಿತ ಹಯಶಾಸ್ತ್ರ ವಾಸ್ತು ಯಂತ್ರ ಮಂತ್ರ ಹೀಗೆ ಹಲವಾರು ಬಗೆಯ ವಿದ್ಯೆಗಳನ್ನು ಕಲಿಸುತ್ತಿದ್ದ ವಿಚಾರ ವಿವರವಾಗಿ ಬಂದಿದೆ.

ಮಹಾಪದ್ಮನಿಗೆ ಯುವರಾಜಪಟ್ಟ ಕಟ್ಟುವ ಸನ್ನಿವೇಶದಲ್ಲಿ ಆ ಸಂದರ್ಭದ ಕೆಲವು ಸಂಪ್ರದಾಯಗಳು (೪ – ೭೯) ಕಾವ್ಯದಲ್ಲಿ ಕಂಡುಬರುತ್ತವೆ. ಮಹಾಪದ್ಮನ ಜನನ ಸಂದರ್ಭದಲ್ಲಿ ಹಣ್ಣು ಉರುಳಿ ಬರುವುದು ಶುಭಶಕುನವಾಗಿ ಬಂದಿದ್ದು ಶಿಷ್ಟ ಮತ್ತು ಜನಪದ ಸಂಸ್ಕೃತಿಗಳ ಅಂಶಗಳನ್ನು ತಂದಿದ್ದಾನೆ. ರಾಣಿಗೆ ಪ್ರಸವವಾದಾಗ ರಾಜನಿಗೆ ತಿಳಿಸಲು ಶಂಖ ಊದುತ್ತಿದ್ದ (೪ – ೨೧) ಸಂಪ್ರದಾಯ ಇಲ್ಲಿ ದಾಖಲಾಗಿದೆ.

ಗುಣವರ್ಮನಿಗೆ ಹಲವು ಶಾಸ್ತ್ರಗಳ ಪರಿಜ್ಞಾನವಿರುವಂತೆ ತೋರುತ್ತದೆ. ನ್ಯಾಯಶಾಸ್ತ್ರ, ನೃತ್ಯ ಮೊದಲಾದ ಶಾಖೆಗಳ ಪರಿಭಾಷೆಗಳು ಇಲ್ಲಿ ಬಂದಿವೆ. ಅಂಧವರ್ತಕ ನ್ಯಾಯ ಅಚೌಕೃಪಾಣೀಯ ಕಾಕತಾಳೀಯ ನ್ಯಾಯಗಳನ್ನು ಹೇಳಿದ್ದಾನೆ. ಛಂದಸ್ಸಿನಲ್ಲಿಯೂ ಈತನಿಗೆ ಉತ್ತಮ ಪರಿಶ್ರಮವಿದೆ. ಈತ ಖ್ಯಾತ ಕರ್ನಾಟಕಗಳಲ್ಲದೆ ಹರಿಣೀವೃತ್ತ, ಮಂದಾಕ್ರಾಂತ, ಸ್ವಾಗತಂ ಮುಂತಾದ ವಿರಳ ವೃತ್ತಗಳನ್ನೂ ಬಳಸಿದ್ದಾನೆ. ಪ್ರಾಣಿಗಳನ್ನು ವರ್ಣಿಸುವಾಗ ಶಾರ್ದೂಲದ ವರ್ಣನೆಗೆ ಶಾರ್ದೂಲ ವಿಕ್ರೀಡಿತ ವೃತ್ತವನ್ನು, ವ್ಯಾಘ್ರದ ವರ್ಣನೆಗೆ ಮತ್ತೇಭ ವಿಕ್ರೀಡಿತ ವೃತ್ತವನ್ನು ಬಳಸಿರುವುದು ಚಮತ್ಕಾರಯುತವಾಗಿದೆ. ಪ್ರಾಸವನ್ನು ತ್ಯಜಿಸಿ, ರಗಳೆ ಛಂದಸ್ಸಿನಲ್ಲಿ ಕೆಲವು ಪ್ರಯೋಗ ಮಾಡಿರುವುದೂ (೧೦ – ೪೫) ಉಂಟು. ವಸ್ತುಕ ವರ್ಣಕಗಳ ಬಗ್ಗೆ ಕವಿಗೆ ಸ್ಪಷ್ಟ ತಿಳಿವಳಿಕೆಯಿದೆ

ಗುಣವರ್ಮನ ಭಾಷೆ ಶೈಲಿಗಳು ಸಮಕಾಲೀನ ಚಂಪೂ ಕವಿಗಳಂತೆಯೇ ಇವೆ. ಈತ ಪಂಡಿತಕವಿಯಾಗಿರುವುದರಿಂದ ಸಂಸ್ಕೃತ ಭೂಯಿಷ್ಠ ರಚನೆಗಳಿರುವಂತೆ ಸರಳವಾದ ದೇಸೀ ನುಡಿಗಳಿಂದ ಕೂಡಿದ ಅಚ್ಚಗನ್ನಡ ಶೈಲಿಯನ್ನೂ ಕಾಣಬಹುದು. ಸಂಸ್ಕೃತದಲ್ಲಿಯೂ ಈತನಿಗೆ ಪ್ರಭುತ್ವವಿದೆ. ಅನೇಕ ಶ್ಲೋಕಗಳನ್ನು ಮಧ್ಯೆ ಮಧ್ಯೆ ಬಳಸಿದ್ದಾನೆ. ಲ ಕಾರದ ಸ್ಥಾನದಲ್ಲಿ ಳ ಕಾರದ ಬಳಕೆ ಹೆಚ್ಚಾಗಿದೆ. ಕವಿ ತನ್ನ ಕಾಲದ ಕೆಲವು ಗಾದೆ ಮಾತುಗಳನ್ನು ಬಳಸಿದ್ದಾನೆ – “ದೇವಂಗಾಱದೆ ಧರ್ಮಿಯಂ ಬಡಿದರೆಂಬೀ ಸಂದ ನಾೞ್ಗಾದೆ” (೧೨ – ೮೬) ಎಂಬ ಗಾದೆಯಲ್ಲಿ ಆ ಕಾಲದಲ್ಲಿದ್ದ ಧಾರ್ಮಿಕ ಘರ್ಷಣೆಯ ಸೂಚನೆಯಿದೆ. ಹಾಗೆಯೇ ನೀರಡಸಿದಂಗೆ ತುಪ್ಪಂ ಮರ್ದೆ (೭ – ೫೬) “ಬಡವಂ ಬಡಿದಂಜಿಸುವಂ ಬಲ್ತಿತ್ತನ್” (೧೨ – ೮೭) ಇತ್ಯಾದಿ ಗಾದೆ, ನುಡಿಗಟ್ಟುಗಳನ್ನು ಉದಾಹರಿಸಬಹುದು.

ಒಟ್ಟಿನಲ್ಲಿ ಗುಣವರ್ಮ ಕಾವ್ಯ ಸಾಮರ್ಥ್ಯ ಉಳ್ಳ ಪ್ರೌಢಕವಿ. ಈತನ ಪದ್ಯಗಳು ಕಾವ್ಯಾವಲೋಕನ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ಉದಾಹೃತವಾಗಿವೆ. ಹೀಗೆ ಈ ಕಾವ್ಯ ಸಮಕಾಲೀನ ವಿದ್ವಜ್ಜನರ ಮೆಚ್ಚುಗೆ ಪಡೆದಿತ್ತು. ಪುಷ್ಪದಂತಿತೀರ್ಥಂಕರನ ಮೇಲೆ ಅನೇಕ ಭಾಷೆಗಳಲ್ಲಿ ಸ್ವತಂತ್ರ ಕಾವ್ಯವೇ ಇಲ್ಲದಿರುವಾಗ ಗುಣವರ್ಮ ಪ್ರೌಢಕಾವ್ಯ ರಚಿಸಿ ಕನ್ನಡಕ್ಕೆ ಆ ಕೀರ್ತಿಯನ್ನು ತಂದುಕೊಟ್ಟ ಕಾರಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈತನಿಗೊಂದು ವಿಶಿಷ್ಟ ಸ್ಥಾನವಿದೆ. ಚಾರಿತ್ರಿಕ ಅಂಶವಿರುವುದರಿಂದ ಕೃತಿಯ ಮೌಲ್ಯ ಹೆಚ್ಚಿದೆ.

ಗ್ರಂಥಸಂಪಾದನೆ :

ಗುಣವರ್ಮ ವಿರಚಿತ ಪುಷ್ಪದಂತ ಪುರಾಣವನ್ನು ಎ.ವೆಂಕಟರಾಜು ಮತ್ತು ಹೆಚ್.ಶೇಷಯ್ಯಂಗಾರ್ಯರು ೧೯೩೩ರಲ್ಲಿ ಸಂಪಾದಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದರು. ಇದರ ಪರಿಷ್ಕರಣೆಯಲ್ಲಿ ಅವರು ಎರಡು ಓಲೆ ಪ್ರತಿ ಒಂದು ಕಾಗದದ ಪ್ರತಿಯ ನೆರವು ಪಡೆದರು. ಈ ಪ್ರತಿಗಳಲ್ಲಿ ಒಂದು ಓಲೆ ಪ್ರತಿಯ ಲಿಪಿಕಾರ ನವಿಲ್ಗುಂದದ ಪ್ರತಿಯ ನೆರವು ಪಡೆದರು. ಈ ಪ್ರತಿಗಳಲ್ಲಿ ಒಂದು ಓಲೆ ಪ್ರತಿಯ ಲಿಪಿಕಾರ ನವಿಲ್ಗುಂದದ ಮಾದಿರಾಜ. ಈತ ಕಾವ್ಯಾಂತ್ಯದಲ್ಲಿ ರಚಿಸಿರುವ ಪದ್ಯಗಳಲ್ಲಿ ‘ಬಿಂದುವಿನೊಂದು ಶೋಭೆ’ ಎಂಬುದು ಕನ್ನಡ ಗ್ರಂಥಸಂಪಾದನೆಯಲ್ಲಿ ಪ್ರಸಿದ್ಧವಾಗಿದೆ. ಈ ಪದ್ಯದಷ್ಟೇ ಸುಂದರವಾದ ಅಕ್ಷರಗಳಿಂದ ಈತ ಪ್ರತಿ ಮಾಡಿದ್ದಾನೆ. ಈ ಪರಿಷ್ಕರಣದಲ್ಲಿ ಬಳಸಿದ ಮದ್ರಾಸಿನ ಎರಡೂ ಹಸ್ತಪ್ರತಿಗಳು ಈಗ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿವೆ. ಪ್ರಸ್ತುತ ಸಂಪಾದನೆಯು ಇಲ್ಲಿನ ಮುದ್ರಿತ ಪ್ರತಿ ಹಾಗೂ ಹಸ್ತಪ್ರತಿಗಳಿಗೆ ಋಣಿಯಾಗಿದೆ. ಡಿ.ಎಲ್. ನರಸಿಂಹಾಚಾರ್ಯರು ಪ್ರಥಮ ಪರಿಷ್ಕರಣವನ್ನು ಕುರಿತು ವಿಮರ್ಶೆ ಮಾಡುವಾಗ ಅನೇಕ ತಿದ್ದಿದ ಪಾಠಗಳನ್ನು ನೀಡಿದ್ದರು. ಅವುಗಳನ್ನು ಪ್ರಸ್ತುತ ಸಂಪುಟದಲ್ಲಿ ಬಳಸಿಕೊಳ್ಳಲಾಗಿದೆ. ಸೂಕ್ತಿ ಸುಧಾರ್ಣವದ ಪಾಠವನ್ನು ಗಮನಿಸಲಾಗಿದೆ.