ಪರೆದಿರೆ ಕಜ್ಜಳದಳಕಂ
ತರುಣನ ಮೊಗಮುದಿತವಿದಿತಲಾಂಛನಶಶಿಯೊಳ್
ದೊರೆಯಾಗಿ ಮೆಱೆದು ಗೆಲ್ದ
ತ್ತುರುಚಳದಳಿಮಿಳಿತದಳಿತ ಲಳಿತಾಂಬುಜಮಂ ೬೧

ಬಗೆಯೆ ಮಧುಪ ಪ್ರಶಸ್ತಂ
ನೆಗೞ್ದಾಱಡಿದಾಣಮಬ್ಜಮೆನಗಡಱುವುದೇ
ಕೆ ಗಡೆಂದು ನಗುವ ತೆಱದಿಂ
ಸೊಗಯಿಸಿತನಿಮಿತ್ತ ಹಸಿತಲಸಿತಮುಖಾಬ್ಜಂ  ೬೨

ಅತಿಸೇವ್ಯದಿವ್ಯಭಾಷಾ
ಲತೆಗಗೆವೊಯ್ದರ್ಥಬೀಜದೆಳಮೊಳೆಯಂತೇಂ
ಸ್ಮಿತರಸದೊಳೆಸೆವ ಪನೆಗಳ್
ಜಿತಮದನನ ವದನದೊಳ್ ಮನಂಗೊಳಿಸಿದುವೋ         ೬೩

ಪದಪಿನ ದಾದಿಯರ ಮನ
ಕ್ಕಿದಿಷ್ಟಮೆನೆ ಮುದ್ದುನುಡಿಯನಿನಿಸಸಗಿದನಂ
ತದು ತಕ್ಕುದೆ ಧಾತ್ರೀಜನ
ಹೃದಯಪ್ರಿಯ ಹಿತಮಿತೋಕ್ತಿ ಜಿನಪತಿಗೆರವೇ ೬೪

ಅನುಪಾಂಶುಕೇಳಿ ಸದ್ಗುರು
ಜನಕ್ಕೆ ಸಂತಸಮನೀವುದೆಂದಱಿಪುವವೋ
ಲನುಪಾಂಶು ಕೇಳಿ ಸದ್ಗುರು
ಜನಕ್ಕೆ ಸಂತಸಮನೀಯೆ ಬಾಳಕನೆಸೆದಂ            ೬೫

ಅಳರೆಲೆಗಳಲುಗೆ ಮಾಂಗಾಯ್
ಚಳಿಯಿಸೆ ಕಿಂಕಿಣಿಗಳುಳಿಯೆ ಶಿಶು ನಡೆಗಲ್ವಂ
ದಿಳಿಸಿದನೆಳದಳಿರುಚ್ಚಳಿ
ಪೆಳಮಿಡಿ ತೊನೆವಳಿಗಳುಲಿನ ನವಸುರತರುವಂ  ೬೬

ಮೆಟ್ಟಿದೊಡಕ್ಕುಂ ತ್ರಸಸಮ
ಘಟ್ಟನಮೆಂದೋವುವಂತೆ ಮೆಲ್ಮೆಲನನಘಂ
ದಟ್ಟಡಿಯಿಡೆ ಪದನಖರುಚಿ
ಕುಟ್ಟಿಮದೊಳ್ ನಿಮಿರ್ದುವೊಡನೆ ಪಡಿಲೇಖಿಪವೋಲ್ ೬೭

ವ || ಅಂತಗಣ್ಯಪುಣ್ಯವಲ್ಲರೀಜಾಲಕನೆನಿಪ್ಪ ಬಾಲಕಂ ವಿವಿಧ ಮುಗ್ಧಭಾವ ಪಾಲ್ಯಮಂ ಬಾಲ್ಯಮಂ ಪಿಂಗಿಸಿ ಕುಮಾರಕಾಲದೊಳ್

ಮ || ಸಮಸಂದೋದದೆ ಸರ್ವಶಾಸ್ತ್ರವಿದನಾದಂ ಬಲ್ಲರೊಳ್ ಕಲ್ಲದೆ
ಲ್ಲಮನಕ್ಷೂಣ ಕಳಾವಳೀ ಕುಶಲನಾದಂ ಪುಷ್ಪದಂತಂ ಭವೋ
ತ್ತಮಸಂಸಾರನದಾವ ಚೋದ್ಯಮಲರ್ಗೊಳ್ಗಂಪುಂ ಶಶಾಂಕಂಗೆ ಶೈ
ತ್ಯಮುಮುಷ್ಣಾಂಶುಗೆ ತೇಜಮುಂ ನಿಜಮವಂ ಮತ್ತೊರ್ವರಾರ್ ಮಾಡಿದರ್           ೬೮

ಸಕಳ ವ್ಯಾಕರಣಾರ್ಥಶಾಸ್ತ್ರ ಗಣಿತಾಲೇಖ್ಯ ಕ್ರಿಯಾಕಾವ್ಯ ನಾ
ಟಕ ನಾಟ್ಯಾಗಮ ವಾಸ್ತು ವೈದ್ಯ ಗಜ ಮಹಾರೋಹ ಸಾಮುದ್ರ ಚಿ
ತ್ರಕಳಾನೀತಿನಿಮಿತ್ತ ಶಾಸ್ತ್ರಶಕುನಾದಿಪ್ರೌಢಿಯೊಳ್ ರೂಢಿಯಾ
ಯ್ತು ಕುಮಾರಂಗೆ ಮತಿಶ್ರುತಾವಧಿ ವಿಭೋಧಾತ್ಮಂಗಿದಾಶ್ಚರ್ಯಮೇ        ೬೯

ವ || ಅಂತು ಸಕಳ ವಿದ್ಯಾವಿಳಾಸಭವನನಾಗೆ

ಚಂ || ಸುವಿಧಿಕುಮಾರನಂ ಸುರಕುಮಾರಕರಚ್ಚರಿಯಾಗೆ ಮೆಚ್ಚಿಪು
ತ್ಸವದೊಳೆ ಮಲ್ಲ ಮೇಷ ಮಹಿಷ ದ್ವಿಪ ಲಾವಕರೂಪರಾಗಿ ಸಂ
ಭವಿಸಿದ ವಿಕ್ರಿಯಾವಿಭವದಿಂದೆ ವಿಗುರ್ವಿಸಿ ಬಂದು ಪೋರ್ವ ತಾ
ಗುವ ತಲೆಯಿಕ್ಕುವಾಂತಿಱಿವ ಕಾದುವ ದಂದುಗದಿಂದಮೊಪ್ಪಿದರ್            ೭೦

ಚಂ || ಅರಗಿಳಿಯಾಗಿ ಮಂಗಳಮನೋದುವ ತುಂಬಿಯ ಬಂಬಲಾಗಿ ಗಾ
ವರಿಸುವ ಗಂಡುಗೋಗಿಲೆಗಳಾಗಿ ಗೃಹಪ್ರತಿಹಾರವೃತ್ತಿ ಮಿ
ಕ್ಕಿರೆ ಪುಗಲೆಂಬ ಸೋಗೆನವಿಲಾಗಿ ವಿನರ್ತಿಸುವಂಚೆಯಾಗಿ ಸಂ
ಚರಿಪ ವಿಳಾಸಮಂ ಮೆಱೆವ ದೇವರೊಱಲ್ಚಿದರಿಂದ್ರವಂದ್ಯನಂ     ೭೧

ವ || ಮತ್ತಂ

ಕಂ || ಬಹುವಿಧವಾಹನರೂಪದಿ
ನಹಮಿಕೆಯಂ ಬಿಟ್ಟು ರಮ್ಯಮಪ್ಪೆಡೆಗಳೊಳಾ
ಗ್ರಹದಿಂದೊಯ್ದೊಯ್ದರೆಬರ್
ವಿಹಿತ ವಿನೋದಕ್ಕೆ ಪಕ್ಕುಮಾಡಿದರಮರರ್    ೭೨

ಚಂ || ಸಮದ ಮಯೂರಮಾಕ್ರಮಿಪ ಪೆರ್ಬುಲಿಯಾಕ್ರಮಿಪುಗ್ರಸಿಂಹಮಾ
ಕ್ರಮಿಪಹಿರೂಪದಿಂದೆ ಹರಿಣಾಕೃತಿಯಿಂದಿಭಮೂರ್ತಿಯಿಂದೆ ಸಂ
ಭ್ರಮಿಸೆ ಶರಣ್ಗೆವಂದ ವಿಕೃತಾಮರರಂ ಪರಿರಕ್ಷೆಗೆಯ್ಸಿತು
ತ್ತಮ ಕರುಣಾರಸಂ ವನವಿಹಾರವಿನೋದದೊಳಿಂದ್ರವಂದ್ಯನಾ      ೭೩

ವ || ಅದಲ್ಲದೆಯುಂ

ಕಂ || ಓರಂತೆ ಮಜ್ಜನಂಬುಗ
ಲಾರೋಗಿಸಲುಡೆ ತುಡಲ್ ತುಱುಂಬಲ್ ಪೂಸಲ್
ಸಾರಿರ್ದನುವಿಪ ಸುರವೃಂ
ದಾರಕರಿಂ ಸಂದು ವಂದು ನಿತ್ಯಕ್ರಿಯೆಗಳ್         ೭೪

ಮ || ಅಮೃತಾಹಾರಮನುಂಡು ದಿವ್ಯ ಸುರಭಿದ್ರವ್ಯಂಗಳಂ ಪೂಸಿ ಕ
ಲ್ಪಮಹೀಜಂಗಳ ಮಾಲೆವೂವನವತಂಸಂ ಮಾಡಿ ದೇವಾಂಗವ
ಸ್ತ್ರಮನುಟ್ಟಗ್ಗದ ಸಗ್ಗದಾಭರಣಮಂ ತೊಟ್ಟಿಂತು ನಿಚ್ಚಂ ಶಚೀ
ರಮಣಪ್ರಾಪಿತವಸ್ತುವಿಂ ಸಲಿಸಿದಂ ಭೋಗೋಪಭೋಗಂಗಳಂ     ೭೫

ವ || ಅಂತು ಸಮುಚಿತಕ್ರಿಯಾನಿಯೋಗದೊಳ್ ನಿಳಿಂಪನಿಕರಮೋಲೈಸೆ ನಿರಂತರೋಚಯದಿಂದಮಂತಂತೆ ಸಂಪೂರ್ಣನಾಗಿ

ಕಂ || ಅಮಳತೆಯನಂತವೀರ್ಯತೆ
ಸಮಚತುರಸ್ರಪ್ರಶಸ್ತಸಂಸ್ಥಾನತೆಯು
ತ್ತಮ ವಜ್ರವೃಷಭ ನಾರಾ
ಚ ಮಹಾಸಂಹನನ ದೃಢತೆ ಸೌಮ್ಯತೆ ಮತ್ತಂ   ೭೬

ಸುಸ್ವಾದು ಧವಳರುಚಿರತೆ
ನಿಸ್ವೇದೋದ್ಗಮತೆ ಸುರಭಿಗಂಧತೆ ಗಂಭೀ
ರಸ್ವರತೆ ಸುಲಕ್ಷಣತೆ ವಿ
ಭಾಸ್ವರಮೀ ದಶವಿಧಸ್ವಭಾತಿಶಯಂ ೭೭

ಸ್ಫುರಿಯಿಸೆ ತನ್ನೊಳ್ ಪರಮನ
ಪರಮೌದಾರಿಕಶರೀಮೊಪ್ಪಿದುದು ಸುಧಾ
ಪರಿಪಾಂಡುವರ್ಣದಿಂ ಸುರ
ನರನಯನಚಕೋರಚಂದ್ರಬಿಂಬಮಳುಂಬಂ      ೭೮

ವ || ಅಲ್ಲಿ ತಿಲಮಸೂರಿಕಾಪ್ರಮುಖನವಶತವ್ಯಂಜನಂಗಳೊಳ್ ಕೂಡಿ

ಕಂ || ಶ್ರೀವೃಕ್ಷಸ್ವಸ್ತಿಕ ನಂ
ದ್ಯಾವರ್ತಚ್ಛತ್ರ ಚಾಮರಾದ್ಯಂ ನೂಱಿಂ
ಟಾವರಿಸೆ ಸೊಗಯಿಸಿರ್ದುವು
ದೇವನ ಲಕ್ಷಣಮವಿಂತು ಸಾಷ್ಟಸಹಸ್ರಂ          ೭೯

ವ || ಮತ್ತಂ

ಉತ್ಸಾಹ || ಶೀತ ವಾತ ವಿದ್ಯುದಾತಪಾಗ್ನಿ ಕಾಷ್ಠ ಕಂಟಕ
ವ್ರಾತ ಖಗ ಮೃಗೋರಗೋಪಳಾಭಿಘಾತ ಶಸ್ತ್ರಸಂ
ಘಾತ ಗರಳ ವನಚರಾದಿಬಾಧೆ ಪೊರ್ದವೆಂಬ ವಿ
ಖ್ಯಾತಿವೆತ್ತು ಪರಮಚರಮದೇಹಮೆಸೆದುದಸದಳಂ        ೮೦

ವ || ಅಂತಷ್ಟೋತ್ತರಸಹಸ್ರಲಕ್ಷಣೈಕಪೂರ್ಣಮುಂ ಕುಂದೇಂದುದಾಮಧವಳ ವರ್ಣಮುಂ ಶತಶರಾಸನೋತ್ಸೇಧಪರಿಮಾಣಮುಂ ದ್ವಿಲಕ್ಷಪೂರ್ವಪರಮಾಯುಃಪ್ರಮಾಣಮುಂ ನಿರಂತರಸುಖಾನುಭವಜನ್ಮಭೂಮಿಯುಂ ನಿಸರ್ಗಮಹಿಮಾತಿಶಯಗುಣಾನುಗಾಮಿಯುಮೆನಿಪ್ಪ ಮೂರ್ತಿಯಿಂ ಸ್ಫೂತಿವಡೆದಿರ್ಪಲ್ಲಿ

ಮ || ಎಳೆಮಾವಂ ಪೊಸಸುಗ್ಗಿ ಸುಗ್ಗಿಯಿರುಳಂ ಶೀತಾಂಶು ಶೀತಾಂಶುಮಂ
ಡಳಮಂ ಚಂದ್ರಿಕೆ ಚಂದ್ರಿಕೋಚ್ಚಳಿತ ದುಗ್ಧಾಂಭೋಧಿಯಂ ಫೇನಮಂ
ಡಳಿ ಚೆಲ್ವಿಂಗೆಡೆಮಾಡುವಂತಿರೆಡೆಮಾಡಿತ್ತಂಗನಾಲೋಚನೋ
ತ್ಪಳಮಾಲಾರ್ಚಿತನಂ ಕುಮಾರನ ಕುಮಾರನ ಜಗತ್ಸೇವ್ಯಾಂಗಮಂ ಜವ್ವನಂ            ೮೧

ಸ್ಮರಸಂತಾಪಮನುಂತೆ ಮಾಡಿದೆಳೆವೆಂಡಿರ್ಗಿತ್ತನಂತಾಗುಣಾ
ಭರಣಂ ತಾಂ ಬಸವಾದುದಿಲ್ಲವರ ಸೌಂದರ್ಯಕ್ಕಿದಾಶ್ಚರ್ಯಮ
ಲ್ತರುಣಾಶ್ಮಂ ನಿಜರಶ್ಮಿಯಿಂ ಸ್ಫಟಿಕಮಂ ರಾಗಾತ್ಮಕಂ ಮಾೞ್ಕುಮಾ
ಸ್ಫುರಿತಾಸ್ಫಾಟಿಕದೀಪ್ತಿ ಶೋಣಮಣಿಯಂ ಪಾಂಡೂಕೃತಂ ಮಾೞ್ಕುಮೇ    ೮೨

ಹರಣೀ || ಕೞಲನಳಲಂ ಬಾಡಂ ಕೋಡಂ ಹಿಮಾತಪಬಾಧೆಯಿಂ
ಬೞಲನೆಳಲಂ ನೋಯಂ ಬೇಯಂ ಮನೋಜಶರಾಗ್ನಿಯಿಂ
ಕುೞಿಯನೞಿಯಂ ಕಂದಂ ಕುಂದಂ ಕ್ಷುಧಾತಿ ತೃಷ್ಣಾರ್ತಿಯಿಂ
ದುೞಿದ ಜನನಜ್ವಾಲಾಮಾಳಾಪ್ರತಪ್ತರವೋಲ್ ಜಿನಂ  ೮೩

ವ || ಮತ್ತಂ

ಕಂ || ಆಗುಳಿಸುವ ತಳಮಳಿಸುವ
ಜೋಗಂಬೋಪಲಸುವಗಿವ ತೂಂಕಡಿಸುವ ಬಿ
ಳ್ತಾಗುವ ಬಿಕ್ಕುವ ತೇಂಕುವ
ತೇಗುವ ಕಂಟಳಿಸುವಖಿಳ ವಿಕೃತಿಗೆ ಸಲ್ಲಂ       ೮೪

ವಂದಿಪ ನಿಂದಿಪ ಮೋಹಿಪ
ಸಂದೇಹಿಪ ಪುಸಿವ ಕುಸಿವ ಬೆಸೆವೊಸೆವ ಮನಂ
ಗುಂದುವ ಮಲೆವಲೆವೊಂದುಂ
ದಂದುಗದೊಳಗೆಸಗನೆಲ್ಲಿಯುಂ ಮುನಿಮಾರ್ಗಂ           ೮೫

ವ || ಅಂತು

ಉ || ಆವಂಗೀ ಜಿತಮೋಹವೀ ಜಿನನಜೇಯಂ ಸಲ್ಲದಿನ್ನಿಲ್ಲಿ ವೈ
ರಾವಷ್ಟಂಭವಿಡಂಬವೆಂದತನು ದೇವಂಗಳ್ಕಿ ತದ್ರೂಪವೀ
ಕ್ಷಾವಿಭ್ರಾಂತೆಯರಪ್ಪ ಕಾಂತೆಯರನೆಚ್ಚಾವಿಷ್ಕೃತಂ ಮಾಡಿದಂ
ದೇವಂಗಾಱದೆ ಧರ್ಮಿಯಂ ಬಡಿದರೆಂಬೀ ಸಂದ ನಾೞ್ಗಾದೆಯಂ     ೮೬

ವ || ಅಂತುಮಲ್ಲದೆಯುಂ

ಕಂ || ಅಸವಸದಿನಬಲೆಯರನೆ
ಚ್ಚಿಸನೆ ಕುಮಾರನನಿದೇನೋ ಮಾರನ ಬಗೆ ಭಾ
ವಿಸಿದೆಂ ಬಡವಂ ಬಡಿವಂ
ಜಸಮಂಬಲಿಗೆತ್ತನೆಂದನಕ್ಕುಂ ಭ್ರಾಂತಂ           ೮೭

ಉ || ಕಾತರನನ್ಯದೇವರವೋಲೞ್ಕುಗುವೀ ಜಿನನೆಂದು ಬಂದು ಹೃ
ಜ್ಜಾತನಿದಿರ್ಚಿ ಸೋಲ್ತು ಮಕರಧ್ವಜಮಂ ಬಿಸುಟೋಡಿ ಪೋಗೆ ವಿ
ಖ್ಯಾತಿಯ ಪುಷ್ಪದಂತನದನಿಳ್ಕುೞಿಗೊಂಡುದನಾವೆ ಪೇೞದಂ
ದೇತೊದಳೆಂಬಿನಂ ಮಕರಲಾಂಛನವಾದದು ತಾನೆ ಪೇೞದೇ          ೮೮

ವ || ಎನೆ ಜನಮನೋಹಾರಿಯಾದ ಮೋಹಾರಿಯ ನವಯವ್ವನವಿಳಾಸಾವಳಂಬ ನಮುಮಂ ನಿಸರ್ಗನಿಃಕಾಂಕ್ಷತಾಲಂಬನಮುಮುಂ ಕಂಡು ಸುಗ್ರೀವಮಹಾರಾಜನೊಂದುದಿವ ಸಮಾತ್ಮವಲ್ಲಭೆಯ ವದನಾರವಿಂದಮಂ ನೋಡಿ

ಮ || ಜಯಮಂ ಕಂತುಗೆ ಮಾೞ್ಪ ಜವ್ವನದೊಳಂ ವೈರಾಗ್ಯಮುದ್ದೀಪನ
ಕ್ರಿಯೆ ತಾನಾಗಿರೆ ಕಾಮಭೋಗಸುಖಮೆಂಬಾಳಾನದೊಳ್ ನಿಲ್ಲದೊ
ಟ್ಟಿಯಿಪೀ ಪುತ್ರನ ಚಿತ್ತಮತ್ತಗಜಮಂ ಸೀಮಂತಿನೀಶೃಂಖಳಾ
ನಿಯತಂ ಮಾಡಿವುಪಾಯಮಾವುದಱಿಯೆಂ ಪಂಕೇಜಪತ್ರೇಕ್ಷಣೇ    ೮೯

ಉ || ಈ ವಿಭು ಕಾಮಭೋಗಮನುಪೇಕ್ಷಿಸೆ ಕಾಮನ ಗಂಡುಬೆಂಡು ಕೇ
ಳೀವನಲೀಲೆ ಪಾೞ್‌ವಿಷಯದೊಟ್ಟಜೆ ಮೊಟ್ಟೆ ನಿತಂಬಿನೀವಪುಃ
ಶ್ರೀವಿಫಲಂ ವಸಂತದೆಸಕಂ ವೃಥೆ ಚಂದ್ರನ ದರ್ಪವೊಪ್ಪದೆಂ
ಬಾವುದುಮೇನೊ ಲೋಕದನಿತುಂ ವ್ಯವಹಾರಮಸಾರಮಾಗದೇ    ೯೦

ಕಂ || ಅದಱಿಂದಮೀ ಮಹಾತ್ಮಂ
ಮದುವೆನಿಲಲ್ವೇೞ್ಕುಮಂತು ನಿಂದೊಡೆ ರಾಜ್ಯಾ
ಭ್ಯುದಯಮಳವಡುಗುಮಳವಡೆ
ಪದುಳಂ ಲೋಕಕ್ಕೆ ಧರ್ಮಸಂತತಿ ನಿಲ್ಕುಂ       ೯೧

ವ || ಎಂದು ನುಡಿದಿರ್ವರುಂ ಗೀರ್ವಾಣಪೂಜ್ಯಮಪ್ಪ ನಿರ್ವಾಣಪದವಿಗೆ ಪಲುಂಬಿ ನಿಜಾಪತ್ಯನಪತ್ಯಫಲಸಂಕಲ್ಪ ಕಲ್ಪನಿಯಮಮಪ್ಪ ತಮ್ಮನುಷ್ಠಿತಕ್ಕನುಮತಮ ನೀಗುಮೀಯನೆಂಬ ಸಂದಿಗ್ಧರ ದಂದುಗದೊಳಾಂದೋಳಚಿತ್ತರಾಗುತ್ತುವೆೞ್ತಂದು ವಿನತವಿಷ್ಟಪನ ಕೆಲದೊಳುಚಿತ ವಿಷ್ಟರೋಪವಿಷ್ಟರಾಗಿ ವಿಹಿತ ವಿನೇಯಕ್ರಿಯಾನಿಯೋಗದಿಂದಮಿರ್ದು

ಚಂ || ಜನಪರಿತಾಪಲೋಪಿಯ ಸುವೃತ್ತವಿಳಾಸನ ನಿರ್ಮಳಸ್ವಭಾ
ವನ ಭುವನಸ್ತುತಾತ್ಮನ ಮಹಾತ್ಮಗುಣಾರ್ಹನ ನಿನ್ನ ಜನ್ಮದಿಂ
ಜನನುತರಾದೆವಾವಮಳಮೌಕ್ತಿಕರತ್ನಕೆ ಜನ್ಮಭೂಮಿಯಾ
ದನುಪಮಶುಕ್ತಿಸಂಪುಟದವೋಲ್ ಸುರಶೇಖರರತ್ನಪೂಜಿತಾ        ೯೨

ಕಂ || ದೇವ ನಿಜೋದಯ ದಯದಿಂ
ಪಾವನಮಾಗಿರ್ದು ಪೂಜ್ಯರೆನಿಸಿದೆಮಾಮಿಂ
ತಾವನ ತಾಯ್ಗುಂ ತಂದೆಗ
ಮಾವಗಮೆಱಗಿದುದೆ ಸುರನರೋರಗಲೋಕಂ   ೯೩

ಉ || ನೀನೆ ಸಮಸ್ತವಿಷ್ಟಪಹಿತಾರ್ಥಚರಿತ್ರನೆ ನೀನೆ ಲೋಕರ
ಕ್ಷಾನಿಯಮೈಕಯಾಮಿಕನೆ ನೀನೆ ಜಗತ್ರಯಸೂತ್ರಧಾರವಿ
ಜ್ಞಾನವೆ ದೇವ ನಿನ್ನಱಿತದಿಂ ಪೊಱಗಿಲ್ಲ ಪದಾರ್ಥಮಾದೊಡಂ
ಮಾನಿತಮಕ್ಕೆ ಬಿನ್ನವಿಪೆವಾವಿನಿಸಂಜದೆ ಪೆತ್ತ ಮೇಳದಿಂ  ೯೪

ಮ || ಬಹಜಲ್ಪಂ ವೃಥೆ ಧರ್ಮಸಂತತಿನಿಮಿತ್ತಂ ಧರ್ಮಪತ್ನೀಪರಿ
ಗ್ರಹಮಂ ಕೈಕೊಳವೇೞ್ಪುದಲ್ಲದೊಡೆ ಲೋಕಕ್ಕಿಲ್ಲ ನಿಸ್ತಾರವೀ
ವಿಹಿತಪ್ರಾರ್ಥನೆಗಿಂಬುಗೆಯುದೆಮಗೆಂದೆಲ್ಲಂದದಿಂ ಮಾಣದಾ
ಗ್ರಹಮಂ ಮಾಡಿದ ತಾಯ್ಗೆ ತಂದೆಗಿನಿಸಂ ಸಸ್ನೇಹನಾದಂ ಜಿನಂ     ೯೫

ವ || ಅಂತು ನಿಜಮುಖಾರವಿಂದ ಮಂದಸ್ಮಿತಪರಿಸ್ಪಂದದಶನವಸನಾನುಮತನಾಗಿ

ಮ || ಸಮಸಂದಾತ್ಮಗುರೂಪರೋಧದಿನೊಡಂಬಟ್ಟಂ ನಿರಾಕಾಂಕ್ಷನ
ಪ್ಪಮಳಜ್ಞಾನವಿಭಾಸನಪ್ಪ ಜಿನನುಂ ಜಾಯಾಪರಿಸ್ಪಂದಬಂ
ಧಮನಿಂತೊಪ್ಪುಗುಮೇ ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮಯೆಂ
ಬ ಮುನೀಂದ್ರೋಕ್ತಿ ಶುಭಾಶುಭಾನುಭವ ವಾಕ್ಸಂಸಾರಿಜೀವಂಗಳೊಳ್       ೯೬

ಕಂ || ಪರಮಗುರು ಪುಟ್ಟಿದಂದಿನ
ಪರಿತೋಷದ ಪರಮಕೋಟಿ ಪೆಂಪಿನೊಳಿದಱೊಂ
ದೊರೆಗಂ ದೊರೆಗಂ ಬಾರದು
ಪರಿಕಿಪೊಡೆನೆ ಹೃಷ್ಟರಾದರಾ ದಂಪತಿಗಳ್      ೯೭

ಚಂ || ಒದವಿದ ನಾಥವಂಶದೆಸಕಂ ಕುರುವಂಶದ ಮೈಮೆಯಿಕ್ಷುವಂ
ಶದ ಜಸಮುಗ್ರವಂಶದುದಯಂ ಹರಿವಂಶದ ಪೆಂಪು ಸೂರ್ಯವಂ
ಶದ ದೆಸೆ ಸೋಮವಂಶದ ನೆಗೞ್ತೆಪೊಗೞ್ತೆಗಳುಂಬಮಪ್ಪಿನಂ
ಮದುವೆಗೆ ತತ್ಪ್ರಭೂತನೃಪಕನ್ನೆಯರಂ ಸಮಕಟ್ಟಿದಂ ನೃಪಂ       ೯೮

ವ || ಅಂತು ಸಮಕಟ್ಟಿ ಸಮುಚಿತಾನೂನದಾನಸನ್ಮಾನದಿಂದ ತನ್ಮಹೀನಾಥಯೂ ಥಮಂ ಸಂತೋಷಂಬಡಿಸಿ

ಕಂ || ಚೆನ್ನೆಯರಂ ವಿವಿಧಕುಲೋ
ತ್ಪನ್ನೆಯರಂ ಗುಣವಿವೇಕ ನವಯೌವನ ಸಂ
ಪನ್ನೆಯರಂ ಸಾಸಿರ್ವರ್
ಕನ್ನೆಯರಂ ದೇಹದೀಪ್ತಿಸಂಛನ್ನೆಯರಂ          ೯೯

ವ || ತರಿಸಿ ಶುಭದಿನದೊಳ್ ಗೃಹಮಹತ್ತರಂಗೆ ವಿವಾಹಗೇಹಮಂ ಸಮೆಯಿಸೆಂದು ಬೆಸಸುವುದುಮಲ್ಲಿಂ ಮುನ್ನೆ ಸುತ್ರಾಮಸೂತ್ರಧಾರಸೂತ್ರಿತಮಾಗಿ ಕಲ್ಪಶಿಲ್ಪಿಗಳ್ ಸಮೆಯೆ

ಉ || ಶ್ರೀರಮಣೀನಿವಾಸಮೆನೆ ಮುತ್ತಿನಸೂಸಕದೋಳಿ ತುಂಗಭೃಂ
ಗಾರದ ಶೋಭೆ ಜಾಗದಕಿಲ್ಗಳೊಡಂಬಡೆ ಚಿತ್ರಭಿತ್ತಿವಿ
ಸ್ತಾರದ ಚೆಲ್ವು ಚೀನದ ವಿತಾನದ ನೇರ್ಪುರುರತ್ನರಂಜಿತಾ
ಕಾರದ ಕಂಬದೊಪ್ಪಮಮರ್ವಂತೆಸೆದತ್ತು ವಿವಾಹಮಂಡಪಂ        ೧೦೦

ವ || ಅಲ್ಲಿ

ಕಂ || ಗುಡಿ ತೋರಣಮಕ್ಷತೆ ಕ
ನ್ನಡಿ ಕಳಶಂ ದಧಿ ಕಱುಂಕೆ ಪೂಮಾಲೆ ಫಳಂ
ಸೊಡರೆಳದಳಿರೆಂಬಿವು ನೆಗೆ
ದೆಡೆಗಿಱಿದೊಪ್ಪಿದುವು ಮಂಗಳದ್ರವ್ಯಂಗಳ್    ೧೦೧

ವ || ಅದಲ್ಲದೆಯುಂ

ಚ || ಕಡೆಯಿಕ್ಕೆಂಬುಪವೇದಿಯಂ ರಚಿಯಿಸೆಂಬೊಳ್ಪೂವನೆತ್ತೆಂಬ ಕ
ನ್ನಡಿಯಂ ಮುಂತಿರಿಸೆಂಬ ಪೊಂಗಳಸಮಂ ನೀಡೆಂಬ ಕಾಶ್ಮೀರಮಂ
ತೊಡೆಯೆಂಬೀಸೊಡವೊತ್ತಿಸೆಂಬ ಪಸೆಯಂ ಪಾಸೆಂಬ ನೀಂ ಬಾಯಿನಂ
ಗುಡು ತಂದೆಂಬ ನರಾಮರಾಂಗನೆಯರಿಂದಾಯ್ತಂದು ಕೋಳಾಹಳಂ            ೧೦೨

ವ || ಆಗಳಮರಲೋಕದಿಂದೆ ಬಂದು ಬಂಧುರ ನಮೇರು ಮಂದಾರ ಪಾರಿಜಾತ ಹರಿಚಂದನ ಪ್ರಮುಖಸುರತರುವ್ರಜದ ಸರಸಸರಸೀರುಹ ಸುರಭಿಪರಿಮಳಪರಿಭ್ರಾಂತ ಭೃಂಗಸಂಘಾತಲಂಘಿತ ಲತಾಂತಮಾಲೆಗಳೊಳಮುಭಯಕರ್ಮಕಾರೋಹಣ ದುಕೂಲ ದೇವಾಂಗ ನಾರಂಗ ಪಟ್ಟ ಸೂತ್ರ ನೇತ್ರ ಚೀನ್ಯಾದ್ಯತಿಮೀಚೀನ ವಸನ ವಿಸರಂಗಳೊಳಮಗರು ಸಾರಘಸಾರ ಕಾಶ್ಮೀರ ಮಳಯರುಹ ಯಕ್ಷಕರ್ದಮಬಂಧುರ ಸುಗಂಧಲೇಪನಂಗಳೊಳಮಖಿಳ ಭುವನಪಾವನಪರಾರ್ಧ್ಯ ರತ್ನರಾಜಿ ರಚ ನಾ ವಿಚಿತ್ರಕಟಿಸೂತ್ರ ಕೇಯೂರ ಹಾರಕುಂಡ ಲೋತ್ತಂಸ ಮುಖ್ಯ ವಿವಿಧಭೂಷಣವಿಶೇಷಂಗಳೊಳಮಖಂಡಮಂಡನ ಕ್ರಿಯಾಸುಭಗ ಶೋಭಾಚಮತ್ಕಾರಕರಣ ಪರಿಣತ ಸಾಂದ್ರಸೌಂದರೀ ಸಂದೋಹಮಾ ವಧೂಕದಂಬಕಮುಂಸಮುತ್ತುಂಗಮಾಂಗಲ್ಯ ಶೃಂಗಾರರಸಶಿಕ್ಷಾಚಕ್ಷಣನಿಳಿಂಪನಿಕರಮುಂ ತ್ರಿಲೋಕತಿಲಕನು ಮನಳಂಕರಿಸಿದಾಗಳ್

ಕಂ || ರತಿ ಪೊರೆದನಂಗಜಂಗಮ
ಲತೆಗಳ್ ಕುಸುಮಿಸಿದುವಖಿಳಭುವನತ್ರಯಕ
ಲ್ಪಿತ ಕಲ್ಪಭೂರುಹಂ ಪು
ಷ್ಟಿತಮಾಯ್ತೆನಿಸಿರ್ದರಾಕೆಗಳ್ಮಾ ವಿಭುವಂ      ೧೦೩

ಉ || ಮಂಗಳಮಂಡನಕ್ಕೆ ನೆಲೆಯಾದ ಕುಮಾರನ ಭೂಷಣಾಂಶು ದಿ
ವ್ಯಾಂಗದ ಕಾಂತಿಯೊಳ್ ತೊಡರ್ದು ರಂಜಿಸಲಾಱದೆ ಧೀಪ್ರದೀಪಿಕಾ
ಸಂಗತದೀಪ್ತಿಜಾಳಮೆನಿತಗ್ಗಳಮಾದೊಡಮೊಂದಿದಚ್ಚವೆ
ಳ್ದಿಂಗಳ ರಶ್ಮಿಯೊಳ್ ತೊಡರ್ದು ಪಳ್ಚನೆ ರಂಜಿಸಲಾಱದಂದದಿಂ   ೧೦೪

ವ || ಅನಂತರಂ

ಮ || ಸ್ರ || ಸುರತೂರ್ಯಧ್ವಾನಮೆಲ್ಲಾ ದೆಸೆಗೆ ನಿಮಿರೆ ಮಾಂಗಲ್ಯಗೀತಾರವಂ ಕಿ
ನ್ನರನಾರೀವೃಂದದಿಂ ಸಂಧಿಸೆ ಪರಿಣಯನೋತ್ಸಾಹಗೇಹಕ್ಕೆ ಬಂದಂ
ಸುರವೃಂದಂ ಲೀಲೆಯಿಂದಂ ತರೆ ವಿಹಿತಲಸನ್ಮಂಗಳದ್ರವ್ಯ ದೇವೀ
ಪರಿವಾರಂ ನಿರ್ವಿಕಾರಂ ಸುರತರುಸುಮನಃಕರ್ಣಪೂರಂ ಕುಮಾರಂ  ೧೦೫

ವ || ಆಗಳಾ ಮನೋಜಮಂಗಳಪತಾಕೆಗಳನಾತ್ಮೀಯ ಮಹನೀಯ ಮಹಿಮಾತಿಶಯ ವಿಭೂತಿಯಿಂದೆ ಮುಂದಿಟ್ಟು ತಂದು ತಜ್ಜನಕರಪ್ಪ ಜನಪರಿಜನಂಗಳ್ ವಿವಾಹಮಂಡಪಕ್ಕೆ ಮಂಡನಂ ಮಾಡಿ

ಮ || ನಿಮಿರ್ದೊಳ್ಗಣ್ಬೊಣರಿಂ ಕುರುಳ್ದುಱುಗಲಿಂ ವಕ್ಷೋಜದಿಂ ವಕ್ತ್ರ ವಿ
ಭ್ರಮದಿಂ ಕೆಂದಳದಿಂ ಸ್ಮತೋತ್ಪಳಮಯಂ ಭೃಂಗೀಮಯಂ ಚಕ್ರವಾ
ಕಮಯಂ ಚಂದ್ರಮಯಂ ಪ್ರವಾಳಮಯಮಾಯ್ತೀ ಲೋಕಮೆಂಬಂತದೇಂ
ಸಮಸಂದಿರ್ದುದೊ ಬಂದು ಗೊಂದಣಿಸಿ ತದ್ರಾಜನ್ಯಕನ್ಯಾಜನಂ     ೧೦೬

ವ || ಅನಂತರಮಪಾರ ಗಂಭೀರ ಮಂಗಳಾತೋದ್ಯ ನಾದಂಗಳೆಸೆದು ಘೂರ್ಣಿಸೆ ಯಥೋಚಿತ ವಿಧಾನಪೂರ್ವಕಮುದಾರ ತಾರಾಸಮೂಹಮಂ ಚಂದ್ರನೊಳ್ ನೆರಪುವಂತೆ ಇಕ್ಷ್ವಾಕುವಂಶವಾರಾಶಿಚಂದ್ರನೊಳ್ ಪವಿತ್ರಕ್ಷತ್ರಕುಳಗಗನರಂಗನೇತ್ರಮಾಳಿಕೆಗಳಂ ಪಾಣಿಗ್ರಹಣಂ ಗೆಯ್ಸಿದಾಗಳ್

ಮ || ಕರಿಣೀವೇಷ್ಟಿತ ಪುಷ್ಪದಂತದಿಗಿಭೇಂದ್ರಾಕಾರದಿಂದಾಗಳಾ
ತರುಣೀವೇಷ್ಟಿತ ಪುಷ್ಪದಂತನೆಸೆದಂ ವಂಶೋನ್ನತಂ ಸ್ಫಾರಪು
ಷ್ಕರಹಸ್ತಂ ಧೃತಭದ್ರಲಕ್ಷಣಗುಣಂ ಪದ್ಮಾಭಿರಾಮಂ ನಿರಂ
ತರದಾನಂ ಮೃದುದೀರ್ಘವಾಳನಧಿಕವ್ಯಾಳಂ ಸದಾಪಾಶ್ರಯಂ      ೧೦೭

ಮ.ಸ್ರ || ಘನಗಂಭೀರಸ್ವನಂ ಮೌಕ್ತಿಕಮಣಿದಶನಂ ಪದ್ಮರಾಗಾಧರಂ ವ
ಜ್ರನಖಂ ಪಾಠೀನನೇತ್ರಂ ಕಮಠಚರಣನಕ್ಷೂಣಲಾವಣ್ಯಲಕ್ಷ್ಮೀ
ಜನಕಂ ಡಿಂಡೀರಪಾಂಡುಪ್ರಭನೆನಿಪ ಗುಣಾಂಭೋಧಿಯೊಳ್ ಕೂಡಿ ಚೆಲ್ವಾ
ಯ್ತನುಕೂಲಂ ಸ್ವಚ್ಛಶೀಲಂ ಕುಲನದಿಯವೋಲಾ ಕ್ಷತ್ರಪುತ್ರೀಸಹಸ್ರಂ        ೧೦೮

ಮ || ಪ್ರಣತೇಂದ್ರಂ ವರನಂದು ಬಂದೆಸೆವ ಸೌಧರ್ಮಾದಿಗಳ್ ಬಂದ ನಿ
ಬ್ಬಣಿಗರ್ ಕಲ್ಪದನಲ್ಪವಸ್ತುನಿವಹಂ ತೆಲ್ಲಂಟಿ ದೇವಾಂಗನಾ
ಗಣ ಮತ್ತಿತ್ತೆಡೆಯಾಡುವೈದೆಯರದಂ ಕೊಂಡಾಡಿ ಮಾೞ್ಪಂ ನೃಪಾ
ಗ್ರಣಿ ಸುಗ್ರೀವನೆನಲ್ಕದೇವೊಗಳ್ವೆನಾಂ ವೈವಾಹಿಕೋತ್ಸಾಹಮಂ  ೧೦೯

ವ || ಆಗಳುತ್ಸಾಹಕಾರ್ಯ ಸಹಚರ್ಯಪರ್ಯಷ್ಟಿನಿಷ್ಠಿತನಿಳಿಂಪಕುಳ ನೃಪಕುಳ ಕುಟುಂಬಿ ನೀಜನ ಪರಿವೃತೆಯಪ್ಪ ಜಯರಾಮಾಮಹಾದೇವಿವೆರಸೊಸಗೆ ಮರುಳ್ಗೊಂಡು ವಿತರಣ ಸಮಗ್ರನಪ್ಪ ಸುಗ್ರೀವಮಹಾರಾಜಂ ಮಹಾಮಹಿಮೆಯಂ ಮೆಱೆದು

ಚಂ || ಪರಿಜನಮುರ್ವೆ ಬಂಧುತತಿ ಕೊರ್ವೆ ಯಶೋಲತೆ ಪರ್ವೆಯಿಷ್ಟಶಿ
ಷ್ಟರ ಬಗೆ ತೀರೆ ವಂದಿಜನಮಾರೆ ಸುರದ್ರುಮದಾರ್ಪು ಸಾರೆ ಸ
ತ್ಪರಹಿತವೃತ್ತ ನಸ್ಖಳಿತಚಿತ್ತನಲಂಪಿನೊಳಿತ್ತನಂಬರಾ
ಭರಣ ಗಜಾಶ್ವಾಸಾರ್ಥಮನನರ್ಘ್ಯಪದಾರ್ಥಮನರ್ಥಿ ಸಾರ್ಥಮಂ ೧೧೦

ವ || ಅಂತೊಸಗೆಮಾಡಿ ನಿರ್ವರ್ತಿತವಿವಾಹೋತ್ಸವನಾಗಿ ಸುಖದಿನಿರ್ಪಲ್ಲಿ

ಕಂ || ಆ ಪುಷ್ಪಚಾಪಮಂಗಳ
ದೀಪಲತಾಕೃತಿಗಳೆಳಸಿ ಬೆಳಗಿದುವೊಲವಿಂ
ಶ್ರೀಪುಷ್ಪದಂತವಿಷಯ
ವ್ಯಾಪಾರಾಭ್ಯುದಯ ಹೃದಯ ರಮ್ಯಸ್ಥಳದೊಳ್        ೧೧೧

ವ || ಅದಲ್ಲದೆಯುಂ

ಮ || ಚಳಮೀನೇಕ್ಷಣೆಯರ್ ಮೃಣಾಳಭುಜೆಯರ್ ಪದ್ಮಾಸ್ಯೆಯರ್ ಭೃಂಗಕುಂ
ತಳೆಯರ್ ಕೈರವಗಂಧಿಯರ್ ಜಳವಿಹಂಗೀನಾದೆಯರ್ ಶೀತಳೋ
ಲ್ಲಳಿತಭ್ರೂಲತೆಯರ್ ಮರಾಳಗತಿಗಳ್ ಚಕ್ರಾಂಕವಕ್ಷೋಜಮಂ
ಡಳೆಯರ್ ವರ್ತಿಸಿದರ್ ಕುಮಾರನ ಮನಶ್ಶ್ರೀಸಾರ ಕಾಸಾರದೊಳ್ ೧೧೨

ಕ || ಜಳಮೆನಿತಗ್ಗಲಿಸಿದೊಡಂ
ಜಳದಿಂದಂ ಮೇಲೆ ಮಿಗುವ ಜಳಜದವೋಲ್ ಕೋ
ಮಳೆಯರನುಬಂಧಮೆನಿತ
ಗ್ಗಳಿಸಿದೊಡಂ ಮೇಲೆ ಮಿಕ್ಕುದರತಿನಿಬಂಧಂ    ೧೧೩

ವ || ಅನಂತರಂ ಮತ್ತೊಂದು ಪುಣ್ಯದಿನದೊಳ್ ಉತ್ಸವಪರಂಪರಾಗತಸ್ವಾಂತನಾ ಮಹೀಕಾಂತನನೇಕ ಮೂರ್ಧಾಭಿಷಿಕ್ತ ಪಾರ್ಥಿವಜನಂಗಳ್ವೆರಸು ತೀರ್ಥಸಲಿಲಂಗಳಿಂ ರಾಜ್ಯಾಭಿಷೇಕಂಗೆಯ್ದು

ಮ.ಸ್ರ || ದಿವಿಜೇಂದ್ರಂ ಬಂದು ಮುನ್ನಂ ಜಿನನ ಸವನಮಂ ಮಾಡುವಂದುಂ ವಿವಾಹೋ
ತ್ಸವಮಂ ಕೊಂಡಾಡುವಂದುಂ ವಿಭವಮನಿನಿತಂ ಕಾಣೆವೆಂಬನ್ನವಿಂಬಿಂ
ಸುವಿಧೀಶಂಗಾತ್ಮಪುತ್ರಂಗಧಿಕಮಹಿಮೆಯಂ ಮಾಡಿದಂ ಪಟ್ಟಬಂಧೋ
ತ್ಸವಮಂ ಸುಗ್ರೀವಭೂಪಾಳಕನತಿಮುದದಿಂ ಭವ್ಯರತ್ನಾರ್ಣವಾಂಕಂ          ೧೧೪

ಗದ್ಯ

ಇದು ಸಮಸ್ತ ಭುವನಜನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿ ಕಮಳಗರ್ಭ ಸುವ್ಯಕ್ತಸೂಕ್ತಿ ಚಂದ್ರಿಕಾಪರಿಪುಷ್ಟಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಕುಮಾರಪರಿಣಯನೋತ್ಸವ ಪರಿವರ್ಣನಂ ದ್ವಾದಶಾಶ್ವಾಸಂ ಸಂಪೂರ್ಣಂ