ಕಂ || ಶ್ರೀಪದಮನೀವ ಮುಕ್ತಿ
ಶ್ರೀಪದಮಂ ಪುಣ್ಯಜಲದಿನರ್ಚಿಸಿದಂ ಧಾ
ತ್ರೀಪಾವನನುದ್ಭೂತ ರ
ಮಾಪೂರ್ಣಂ ಪ್ರಭುಗುಣಾಬ್ಜವನಕಳಹಂಸಂ   ೧

ಘನಸಾರಘನಸೃಣಚಂದನ
ಘನಸಾರದ್ರವದಿನಖಿಳ ಭವ್ಯಮನಃಕೋ
ಕನದಂಗಳನತಿಕೃತದೋ
ಕನದಂಗಳನನಘನಂಘ್ರಿಗಳನರ್ಚಿಸಿದಂ ೨

ಕಂದದ ಕುಂದದ ನವಬಿಸ
ಕಂದದ ಕುಂದದ ಬೆಡಂಗನಾಳ್ದಮಳತೆಮೆ
ಯ್ಸಂದಕ್ಷತದಿಂ ರುಚಿವೆರ
ಸಂದಕ್ಷತಗುಣರ ಚರಣಮಂ ಪೂಜಿಸಿದಂ          ೩

ಭ್ರಮರಹಿತಂ ಪೂಜಿಸಿದಂ
ಭ್ರಮರಹಿತಪ್ರಚುರಗಂಧಮೆನಿಸಿದ ನಾನಾ
ಸುಮನಸ್ಸಮಿತಿಯಿನಮಳಿನ
ಸುಮನಸ್ಸಮಿತಿಯುತ ಯತಿಪದಾಂಭೋರುಹಮಂ       ೪

ಪೊಗೆವಗರುವ ಧೂಪದಿನೊ
ಳ್ಪೊಗೆವೊಗೆದವಧೂಪದಾರ್ಥ ವಿರತಾತ್ಮಕ ಕೆಂ
ಪಗಲದಕಳಂಕಪದಮಂ
ಪಗಲದಳಂ ನಳಿನವೆನಪುದಂ ಪೂಜಿಸಿದಂ          ೫

ತರಣಾಂಶುಬಿಂಬಮೆಂಬಂ
ತರಣಾಂಶುವಿನೆಸೆದು ತಮಮನಳಱಿಪ ಮಣಿಭಾ
ಸುರದೀಪಕದಂಬಕದಿಂ
ಸುರದೀಪಕನರುಣಚರಣಮಂ ಪೂಜಿಸಿದಂ       ೬

ಕಾಂಚನಭಾಜನರತಮಧಿ
ಕಾಂಚನಭಾಜನಮೆನಿಪ್ಪ ಸುರುಚಿರಚರುವಿಂ
ಸಂಚಿತ ಗುಣನುಡಿಗಳನಿನಿ
ಸಂಚಿತಗುಣನಳಿನನಿಭಮನೊಸೆದರ್ಚಿಸಿದಂ       ೭

ಪೂಗದ ನವನಾಗಲತಾ
ಪೂಗದ ಫಲಪತ್ರದೊಡನೆ ಬಹುವಿಧಪಲದಿಂ
ರಾಗಯುತಕ್ರಮ ವಿರಹನ
ರಾಗಯುತಕ್ರಮಮನವನಿಭುಜನರ್ಚಿಸಿದಂ       ೮

ವ || ಅಂತಷ್ಟವಿಧಾರ್ಚನೆಗಳಿನರ್ಚಿಸಿ

ಕಂ || ಎರಡನೆಯ ಪದಾರ್ಚನೆಯಿಂ
ವಿರಚಿಸಿದಪನೆನಿಸಿ ಪೆರ್ಚೆ ನಿಜಮಕುಟಹಟ
ತ್ಕಿರಣಗಣನೆಱಗಿದಂ ಮುನಿ
ವರನಂಘ್ರಿಗೆ ಪುಷ್ಪಮಿತ್ರನಮಳ ಚರಿತ್ರಂ          ೯

ವ || ತದನಂತರ ವಿಧಿಪೂರ್ವಕಂ ಪ್ರಯತ್ನಪರನಾಗಿ

ಕಂ || ಪಸರಿಸಿದ ಮುನೀಂದ್ರನ ಮೃದು
ಕಿಸಲಯ ಸಮಪಾಣಿಪಾತ್ರದೊಳ್ ಶುದ್ಧಮನಂ
ವಸುಧೇಶನಿಕ್ಕಿದಂ ಪಾ
ಯಸಮಂ ಪುಣ್ಯಫಲಭೂತನಿಶ್ರೇಯಸಮಂ      ೧೦

ವ || ಅಂತಾ ಜಗತ್ಪವಿತ್ರಚಾರಿತ್ರಪಾತ್ರಂಗೆ ಪುಷ್ಪಮಿತ್ರಂ ವಿಶುದ್ಧಮಪ್ಪಾಹಾರ ದಾನಮಂ ನಿರಂತರಾಯಮಾಗಿ ಮಾಡಿದಾಗಳ್

ಕಂ || ಆ ರಾಜಭವನದೊಳ್ ವಸು
ಧಾರೆಯ ತಣ್ಣೆಲರ ಪುಷ್ಪವೃಷ್ಟಿಯ ಸುರಭೇ
ರೀರವದ ಪೊಗೞ್ವ ದೇವರ
ಹೋರಭಸದ ಪುದುವಿನಾಯ್ತು ಪಂಚಾಶ್ಚರ್ಯಂ          ೧೧

ವ || ಆಗ

ಮ || ಕ್ಷಿತಿಗೆಯ್ದೆನ್ನ ಗುಣಂ ಶಿಖಂಡಮಣಿಯಾಯ್ತೆನ್ನನ್ವಯಂ ಲೋಕಪೂ
ಜಿತಮಾಯ್ತೆನ್ನ ಪೆಸರ್ ಪ್ರಸಿದ್ಧಿಗೆಡೆಯಾಯ್ತೆನ್ನೀ ಭವಂ ಭವ್ಯಭಾ
ವಿತಮಾಯ್ತೆನ್ನ ಮನೋರಥಂ ಸಫಲಮಾಯ್ತೆನ್ನುಳ್ಳ ಸದ್ಭಕ್ತಿ ಚಿಂ
ತಿತ ಚಿಂತಾಮಣಿಯಾಯ್ತು ನಿನ್ನ ಬರವಿಂ ಕಾರುಣ್ಯಪುಣ್ಯಾಂಬುಧೀ            ೧೨

ವ || ಎಂದು ಪೊಡೆವಡುವುದುಂ

ಮ || ನಿನಿಗನ್ನಕ್ಷಯದಾನಮೆಂಬ ಪರಮಶ್ರೀರತ್ನಮಂ ಪುಷ್ಪಮಿ
ತ್ರನ ಕರ್ಣಕ್ಕವತಂಸಮಾಗಿಸಿ ಬೞಿಕ್ಕಲ್ಲಿಂದವೆೞ್ದಂತೆ ಬೆ
ನ್ನನೆ ಭವ್ಯರ್ ಕೞಿಪುತ್ತೆ ಬಂದು ನಿಲೆ ಬಾಹ್ಯೋದ್ಯಾನದೊಳ್ ಬಂದನಂ
ದು ನಿಜಪ್ರಾಪ್ತಿನಿಮಿತ್ತ ಶೈಲಪುರದಿಂ ಶೀಲವ್ರಜಾಲಂಕೃತಂ          ೧೩

ವ || ಅಂತು ಸಫಳೀಕೃತಭವ್ಯಜನಮನೋರಥನಿಕಾಯಸ್ಥಿತಿಯಪ್ಪ ಕಾಯಸ್ಥಿತಿಯಂ ನಿರ್ವರ್ತಿಸಿ ಕೆಯ್ಯೆತ್ತಿಕೊಂಡು

ಕಂ || ತನತುಪದಪಾಂಸುವಿಂ ಗ್ರಾ
ಮ ನಗರ ಖರ್ವಡ ಮಡಂಬ ಖೇಟ ದ್ರೋಣಾ
ಖ್ಯನಿಗಮಪತ್ತನಪತಿ ಪಾ
ವನಮಾಗೆ ವಿಹಾರಿಸುತ್ತೆ ಮೌನವ್ರತದಿಂ          ೧೪

ಗತಗೌರವತ್ರಯಂ ನಿ
ರ್ಜಿತದಂಡತ್ರಯನಪೇತಶಲ್ಯತ್ರಯನ
ಪ್ರತಿಹತಯೋಗತ್ರಯನಪ
ಗತಕಾಲತ್ರಯನನಾಪ್ತಗುಪ್ತಿತ್ರಿತಯಂ ೧೫

ಪತ್ತುಂ ಧರ್ಮಂಗಳ್ ಮೂ
ವತ್ತಾಱುಂ ಗುಣದೊಳಮರೆ ಸನ್ಮಾರ್ಗಣ ಮೋ
ಕ್ಷಾತ್ತ ದೃಢಚಿತ್ತನುದ್ಭಟ
ವೃತ್ತಂ ಘಾತಿಸಲೊಡರ್ಚಿದಂ ಘಾತಿಗಳಂ         ೧೬

ವ || ಅಂತೊಡರ್ಚಿ ಬುದ್ಧಿಕ್ರಿಯಾದ್ಯಷ್ಟವಿಧರಿದ್ಧಿಯುಂ ನಾಮಸತ್ಯರೂಪ ಸತ್ಯಾದಿ ದಶವಿಧ ಸತ್ಯಮುಂ ಕಾಯಶುದ್ಧಿವಿನೇಯಶುದ್ಧ್ಯಾದ್ಯಷ್ಟವಿಧಶುದ್ಧಿಯುಂ ಉತ್ತಮಕ್ಷಮಾದಿ ದಶವಿಧ ಷಡಂತರಂಗತಪಮುಂ ಕ್ಷುತ್ಪಿಪಾಸಾದಿ ದ್ವಾಂಶತಿಪರೀಷಹಸಹಿಷ್ಣುತ್ವಮುಂ ಷಡ್ಜೀವನಿಕಾಯ ಜೀವದಯೆಯುಂ ಜೀವಾಜೀವಾದಿ ಸಪ್ತತತ್ವಚಾರಮುಂ ನೈಗಮಸಂಗ್ರಹಾದಿ ಸಪ್ತನಯಭಾವನೆಯುಂ ಅನಂತಾನುಬಂಧಿ ಕ್ರೋಧಮಾನಾದಿ ಚತುಃಕಷಾಯವ್ಯಪಾಯಮುಂ ಶಬ್ದಸ್ಪರ್ಶನಾದಿ ಪಂಚೇಂದ್ರಿಯವಿಷಯ ವಿಚ್ಛಿತ್ತಿಯುಂ ತನ್ನೊಳುಂ ಸಚ್ಛನ್ನಮಾಗಿ

ಕಂ || ಬಗೆಗೆ ಸುಖದುಃಖಮಂ ಪೞಿ
ಪೊಗೞ್ತೆಯುಂ ಹಾನಿವೃದ್ಧಿಯುಂ ಪೞುಪೊೞಲುಂ
ಪಗೆಕೆಳೆಯುಂ ಸಮನೆನೆಯಾಯೋ
ಗಿಗೆ ಸಮತೆ ಸಮಂತು ಸಮನಿಸಿತ್ತು ಸಮಗ್ರಂ     ೧೭

ವ || ಅಂತು ಪುಷ್ಪದಂತಯೋಗೀಶ್ವರಂ ಪುಷ್ಪದಂತಮಹಾತಪಶ್ರೀನಿವಾಸಿಯಾಗಿ ಮುನ್ನಿನ ಪುಷ್ಪೋದ್ಯಾನಕ್ಕೆ ವಂದು ಪರಮಯೋಗನಿಯೋಗದೊಳ್ ನಿಲೆ

ಉ || ಸಿಂಗದ ದಾಡೆಯಂ ಸೆಳೆಯೆ ದಂತಿಗಳಂತೆ ಮೃಣಾಳಮೆಂದು ಸಾ
ರಂಗದ ಪಿಂಡು ಪೆರ್ಬುಲಿಯ ಪಿಂಡಿನೊಳೊರ್ಬುಳಿಯಾಡೆ ಕೇಕಿ ಪಿಂ
ಛಂಗಳ ತಣ್ಣೆೞಲ್ಗೆಳಸಿ ಪಾವುಗಳಾತಪಭೀತಿಯಿಂ ಜಿತಾ
ನಂಗಮುನೀಂದ್ರಶಾಂತರಸದಿಂದತಿಪಾವನಮಾದುದಾ ವನಂ          ೧೮

ಕಂ || ಶರಭಂಗಳ್ ಕೇಸರಿಕೇ
ಸರಂಗಳಂ ಕ್ರೂರಘೋರಮಾರ್ಜಾರಂಗಳ್
ತರುಣಾಖುಶಾಬಶತಕಂ
ಧರಮಂ ನಖಮುಖದಿನುಱಿಸಿತುಱಿಸಿದುದೊಲವಿಂ       ೧೯

ಗಿಡಿಗಂಗಳೊಡನೆ ಸಾರಿಕೆ
ಬಿಡುಗುದುರೆಗಳೊಡನೆ ವನಲುಲಾಯಚಯಂ ಕಾ
ಡೊಡೆಯರ ಕೌಲೇಯವ್ರಜ
ದೊಡನೆ ಮೊಲಂ ನಲಿದು ಸಂತವಿರ್ದುವು ಪದಪಿಂ          ೨೦

ವ || ಅಂತು ಪರಸ್ಪರವಿರೋಧಿಗಳಪ್ಪ ಬಹುವಿಧಪ್ರಾಣಿಗಳ್ ನಿಜನಿಸರ್ಗ ವೈರಮಂ ಮಱೆದು ಶಾಂತರಸತರಂಗಿಣಿಯೊಳೋಲಾಡುತ್ತಿರ್ದುವದಲ್ಲದೆಯುಂ

ಚಂ || ಉಪಶಮನಿಶ್ಚಳಾಸನಗತಂ ವಿಮಳಾಯತನೇತ್ರಶೋಭೀತಂ
ವಿಪುಳಜಟಾವಳಂಬಿ ಸುಮನೋದೃಢಬೋಧವಿಭಾಸಿ ಮನ್ಮಥಾ
ನಪಹತರಾಗಿ ತಾಱಿ ತಱಿಸಂದಿರವಿಂ ಸಮನಾಯ್ತು ಯೋಗಿಗಾ
ವಿಪಿನಮುಮಂತೆ ದಲ್ ಸಮತೆ ಸನ್ಮುನಿಸಂಗದಿನಾರಿಗಾಗದೋ      ೨೧

ವ || ಮತ್ತಂ

ಮ || ವನದುರ್ಗಸ್ಥಿತಕಾಮನಾಮುನಿಗೆ ಬೆಂಗೊಟ್ಟೋಡೆ ಪಿಂದಿರ್ದ ಪ
ದ್ಮಿನಿ ನೀರ್ವೊಕ್ಕುದು ತುಂಬಿ ಸಂಭ್ರಮಿಸಿತಾಮ್ರಂ ಕೈದೊವಲ್ಗೊಂಡುದಂ
ದನಿಲಂ ಸಂಚಳವಾಯ್ತು ಕೀರಪಿಕವೃಂದಂ ಗೂಡುಗೊಂಡಿರ್ದುವೆಂ
ಬಿನವಂತಿರ್ದವನಾಥತಂತ್ರಮಧಿಕರ್ ಬಂದೆಯ್ದೆ ಬಲ್ಗೆಯ್ಗುಮೇ   ೨೨

ಚಂ || ಅರಗಿಳಿವಿಂಡು ಬಂಡಲಿಪ ಸಾರಿಕೆ ಚಾವಳಿಪುನ್ಮದಾಳಿಗಾ
ವರಿಸುವ ಸೋಗೆ ಕೇಗುವ ಪಿಕಂ ಜಡಿವಂಚೆ ಕುಕಿಲ್ವ ಕೊಂಚೆಯ
ಬ್ಬರಿಪ ವಿಕಾರಮಿಲ್ಲದಿರೆಯುಂ ಬನಮೊಪ್ಪಿದುದಾ ಮುನೀಂದ್ರನೊಳ್
ಪರಿಚಯವಾದೊಡೊಪ್ಪದವರಾರೊ ಬಿಸುಟ್ಟು ವಯೋವಿಕಾರಮಂ          ೨೩

ವ || ಅಂತುಮಲ್ಲದೆಯುಂ

ಚಂ || ಸ್ಮರಪರಿವಾರಮಂದು ಮುನಿದೀ ಮುನಿ ದೀಪ್ತಿ ತಪೋಗ್ನಿಯಿಂ ಕಱು
ತ್ತುರಿಪುಗುಮೆಂದು ಬಿರ್ಚಿ ಬೆಸಕೆಯ್ದೊಸೆದುಳ್ಳುದನಿತ್ತು ತೆತ್ತು ನಿ
ತ್ತರಿಪವೊಲಾದುದಲ್ಲುಗುವ ವೃಕ್ಷಲತಾಫಲಪುಷ್ಪದಿಂ ವನಾಂ
ತರಮೆನೆ ಸಾಮಿ ಬಂದೊಡೆ ವಿನೀತಗುಣರ್ ಬೆಸಕೆಯ್ಯದಿರ್ಕುಮೇ    ೨೪

ವ || ಮತ್ತಂ

ಚಂ || ಉಲಿಯದಿರೀ ತಪೋನಿಧಿ ಸಮಾಧಿಯೊಳಿರ್ದಪನೆಂದು ಸನ್ನೆಯಿಂ
ಜಲವಿಹಗವ್ರಜಕ್ಕೆ ಜಲದೇವತೆಯರ್ ತಲೆದೂಗಿ ಬಾರಿಪಂ
ತಲೆವೆಲರಿಂದವೊಯ್ಯನಲುಗಾಡುವ ತಾವರೆಗಳ್ ನಿಜಾಗ್ರಮಂ
ಡಲಿತಮದಾಲಿಗಳ್ ಸೊಗಯಿಸಿರ್ದುವು ಪಾಂಡುಸರಃಪ್ರದೇಶದೊಳ್           ೨೫

ವ || ಮತ್ತಂ

ಉ || ಆಱಡಿಗೊತ್ತುಗೊಟ್ಟು ಮಧುವಂ ತವೆ ಪೀರ್ದು ರಜೋವಿಕಾರಮಂ

ಪೇಱಿ ಕುಜಾತಿಯೊಳ್ ಬೆರಸಿ ಪುಷ್ಪಿತೆಯಂ ಲತೆಯಂ ಪಳಂಚಿ ಮೆ
ಯ್ದೋಱುವುದಿಲ್ಲಿ ಸಲ್ಲದೆನಗೆಂಬವೊಲೋಸರಿಗೊಂಡು ಪೋಗುತಂ
ತೂಱದೆ ಪಣ್ಣನೂದಿದುದು ತಣ್ಣೆಲರಾ ತಣ್ಣೆಲರಾ ಮುನಿಯಿರ್ದ ತಾಣದೊಳ್        ೨೬

ವ || ಅದಲ್ಲದೆಯುಂ

ಕಂ || ಮನಮೊಸೆದು ಗೂಢಕಮಳಾ
ಸನಮಂ ಗುಪ್ತಾತಪತ್ರಮಂ ಶತಪತ್ರಾ
ನನೆ ಸುಖನೀರಧರಂಗಾ
ಮುನಿಗವಟಯ್ಸಿದಳದೇನಗಣ್ಯವೊ ಪುಣ್ಯಂ     ೨೭

ಖರಕಿರಣತಾಪಮೆನಿತು
ಬ್ಬರಿಸಿದೊಡಂ ಕಂದಿ ಕುಂದಿದರವಿಂದದವೋಲ್
ಕೊರಗದೆ ಕರಗದೆ ಪರಮನ
ಚರಮಾಂಗಂ ದೀಪ್ರದೀಪಮೆನಿತೊದವಿದೊಡಂ ೨೮

ಮುನಿಪನ ಪರಮೌದಾರಿಕ
ತನುವಂ ದುಸ್ಸಹಪರೀಷಹಂ ಬಾಧಿಸಿತಿ
ಲ್ಲೆನಿಸುವುದು ಚಿತ್ರಮಲ್ಲದು
ತನಿಗೆಂಡಮನೊಱಲೆ ಪತ್ತಲೇನಱಿದಪುದೇ       ೨೯

ವ || ಎನಿಸಿದನುಪಮ ತಪಃಪ್ರಭಾವದಿಂದೆಸೆದು ತದ್ವನಮಧ್ಯಪ್ರದೇಶದೊಳ್ ಚಿರಂತನಚಿತ್ರಕರನಪ್ಪ ಚೀರಘಟ್ಟಿ ಶಂಖವಿಟ್ಟ ಬಟ್ಟಗೆವಲಗೆಯಂತಚ್ಚಬೆಳ್ಪಿನಿಂ ಪಳಚ್ಚನಿರ್ದ ಪಳಿಕಿನ ವಿಶಾಲಪಟ್ಟದ ಮೇಲೆ ನೂಲುವೊಯ್ದು ತಿಟ್ಟವಿಟ್ಟಣ್ಕೆಗೆಯ್ದು ರುಜಾಸ್ಥಾನಕದ ಸಮವರಿಜಿನ ನಂದನಕ್ಕೆ ಪಡಿಚಂದಮಾಗಿ

ಕಂ || ಚತುರಂಗುಲಪ್ರಮಾಣಂ
ವಿತಸ್ತಿಪರಿಮಾಣಮೆರಡುಮಡಕಂಗುಷ್ಠ
ದ್ವಿತಯದ ತೆಱಪೆನೆ ಸುವಿಧಿ
ವ್ರತಿ ಕಾಯೋತ್ಸರ್ಗಮಿರ್ದನಾಲಂಬಭುಜಂ      ೩೦

ವ || ಮತ್ತಂ

ಮ || ಕರಣಗ್ರಾಮಮಳುರ್ಕೆಗುಂದಿರೆ ಮನಂ ಭ್ರೂಮಧ್ಯದೊಳ್ ಸಯ್ತು ತ
ಳ್ತಿರೆ ನಾಸಾಗ್ರದೆ ದಿಟ್ಟ ಮಟ್ಟಮಿರೆ ಹಸ್ತದ್ವಂದ್ವಮೇಕಸ್ಥಮಾ
ಗಿರೆ ದಂತಂ ಸಮಸಂದು ತಮ್ಮೊಳಿರೆ ಪರ್ಯಂಕಾಸನನಾಸೀನನೇಂ
ಕರಮೊಪ್ಪಿರ್ದನೊ ಪುಷ್ಪದಂತಮುನಿಪಂ ಯೋಗೋಪಯೋಗಸ್ಥಿತಂ         ೩೧

ಕಂ || ಧ್ಯಾನಾಧೀನೈಕಸಮಾ
ಧಾನಮನಂ ಸ್ತಿಮಿತದೃಷ್ಟಿ ಪೋಲ್ತಂ ಮುನಿ ಮಂ
ದಾನಿಳನಲೆಪಿಲ್ಲದ ಪಾ
ಠೀನಕುಲಂ ಪೊಳೆಯದಮಳ ಕಮಳಾಕರಮಂ    ೩೨

ತವದಾಜ್ಞಾವಿಚಯಮಪಾ
ಕವಿಚಯವೆನೆಯುಂ ವಿಪಾಕವಿಚಯಂ ಸಂಸ್ಥಾ
ನವಿಚಯವೆನೆಯುಂ ಪೆಸರ್ವೆ
ತ್ತುವು ನಾಲ್ಕುಂ ತಮ್ಮೊಳೆಸೆಯೆ ಧರ್ಮಧ್ಯಾನಂ ೩೩

ಸತತಮನಂತಚತುಷ್ಟಯ
ವಿತರ್ಕಮವಹನ ಶಕ್ತಿ ಸೂಕ್ಷ್ಮತೆ ನಿರ್ಬಾ
ಧತೆ ಗುರುಲಘುತ್ವ ಬಾಹ್ಯಾ
ತ್ಮತೆ ಸಿದ್ಧಗುಣಂಗಳೆಂಟವೆನುತಂ ನೆನೆದಂ        ೩೪

ಸನ್ನುತ ಸಿದ್ಧಪದಾಂಬುಜ
ಮನ್ನೆನೆದನಿತಱೊಳೆ ತಣಿದು ಮಾಣ್ದನೆ ಮುನಿಪಂ
ಪನ್ನೆರಡುಮನುಪ್ರೇಕ್ಷೆಗೆ
ತನ್ನ ಮನಂ ಲಕ್ಷ್ಯಮಾಗೆ ನಿಲೆ ಭಾವಿಸಿದಂ        ೩೫

ಭಾವದೊಳೆ ಪಾರಿಣಾಮಿಕ
ಭಾವಮನೊಳಪೊಯ್ದು ಬಿಟ್ಟು ಸಕಳೇಂದ್ರಿಯ ದು
ರ್ಭಾವಮನವಿನಾಭಾವದಿ
ನಾವಿಷ್ಕೃತತತ್ವನಿರ್ದಪಂ ಸುವಿಧೀಶಂ            ೩೬

ಮ || ಉರುಬೋಧಾವರಣೀಯವಾರ್ಧಿಗೆ ಪೊದೞ್ದೌರ್ವಾನಳಂ ದರ್ಶನಾ
ವರಣೀಯೋತ್ಕರತಾಮಸಕ್ಕೆ ರವಿಬಿಂಬಂ ಮೊಹನೀಯಾದ್ರಿಗು
ದ್ಧುರಚಂಡಾಶನಿಯಂತರಾಯವನಕುದ್ದ್ಯದ್ದಾವಮೆಂಬಂತು ಘಾ
ತಿರಿಪುವ್ರಾತವಿಘಾತಿಯಾಯ್ತು ಭವಶುಕ್ಲಧ್ಯಾನಚಾತುರ್ಬಳಂ       ೩೭

ವ || ಅಂತು ಘಾತಿಕರ್ಮಚತುಷ್ಟಯಂ ನಷ್ಟಮಾಗಲೊಡಂ

ಕಂ || ವಿಭುದಾನಲಾಭಭೋಗೋ
ಪಭೋಗ ವೀರ್ಯಾಂತರಾಯ ಪಂಚಕಹಾನಿ
ಪ್ರಭವಮನಂತಚತುಷ್ಟಯ
ವಿಭವಂ ನಿಜವಾದಬೋಧಮಂ ಕೆಯ್ಕೊಂಡಂ     ೩೮

ಸ್ಮರಮಥನನೆಂಬರೋಹಣ
ಗಿರಿಯೊಳ್ ಕೈವಲ್ಯಬೋಧಚಿಂತಾಮಣಿ ಭಾ
ಸ್ವರವೊಗೆದು ಬೆಲಗಿತವಿನ
ಶ್ವರಲಕ್ಷ್ಮಿಯನೀವುದಿನ್ನದಕ್ಕಚ್ಚರಿಯೇ         ೩೯

ಸವಿದಂ ದೂರಂ ಪ್ರತ್ಯಂ
ತವಿದೆನ್ನದೆ ಭೂತಭಾವಿಭವದಖಿಳಪದಾ
ರ್ಥವನೊರ್ಮೆಯೆ ಕರಣವನಾ
ಸೆವಡೆಯದೆ ನೆಗೞ್ದತ್ತಗಾಧಭೋಧಂ ಜಿನನೊಳ್           ೪೦

ವ || ಆ ಪ್ರಸ್ತಾವದೊಳ್

ಕಂ || ಸುರಿದುದು ನಮೇರುಕುಸುಮದ
ಸರಿ ಮೊೞಗಿದುದಮರಪಟಹಮೆಱಗಿದುದು ನಿಳಿಂ
ಪರ ಮಕುಟಕೋಟಿ ನೆಗೞ್ದುದು
ಸುರಜಯರವಮಾದುದಿಂದ್ರನಾಸನಕಂಪಂ       ೪೧

ವ || ಮತ್ತಂ

ಕಂ || ಅನುಗತಿಯಿನೊಡನೆ ಶಂಖ
ಧ್ವನಿ ಭೇರೀಧ್ವನಿ ಮೃಗಾಧಿಪಧ್ವನಿ ಘಂಟಾ
ಧ್ವನಿಯಭವನ ಜ್ಯೋತಿಃಕ
ಲ್ಪನಿವಾಸದೊಳೆಸೆದುದಮರರಱಿದೆಱಗುವಿನಂ ೪೨

ವ || ಅಂತೀ ಸ್ಪಷ್ಟವಿಷ್ಟಪಾಶ್ಚರ್ಯದೃಷ್ಟಹೇತುವಾದ ನಷ್ಟಘಾತಿ ಚತುಷ್ಟಯನ ಚತುರ್ಥ ಕಲ್ಯಾಣದೊಸಗೆಗೆ ನಿಜಮನೋಮಧುಕರಕ್ಕೆ ಮಂದಾರಮಕರಂದ ಸುಂದರಸುಗಂಧ ಸಂದೋಹಮಾಗಿಬರೆ ತೆಗೆಯೆ ಸರಭಸಾನಂದನಿರ್ದು

ಕಂ || ಸುರಪತಿ ಕರಿಪತಿಯಿಂ ಶಚಿ
ವೆರಸೇಱೆ ವಿಳಾಸದಿಂದೆ ತಳರ್ವುದುಮಖಿಳಾ
ಮರಕೋಟಿ ತಳರ್ದುದೊಡನೆಯೆ
ನೆರೆದು ನಿಗುಂಬಿಸೆ ನಿಯುಕ್ತನಿಜ ನಿಜವಿಭವಂ     ೪೩

ಚಂ || ಬಳಸಿಚತರ್ವಿಧಾಮರನಿಕಾಯದ ವಾಹನಕೋಟಿ ಭೂಷಣಂ
ಗಳ ಬೆಳಗಿಂದಮೊಪ್ಪಿ ನಿಲೆ ಶಕ್ರಶರಾಸನರಶ್ಮಿ ರಾಜಮಂ
ಡಳಿತವಿಚಿತ್ರಮೇಘಪಟಳಂ ಬಳಸಲ್ಕೆಸೆದಿರ್ದು ಮಂದರಾ
ಚಳಮನೆ ಪೋಲು ಬಂದುದು ಪುರಂದರನೇಱಿದ ಗಂಧಸಿಂಧುರಂ    ೪೪

ವ || ಅಂತು ಬರೆ

ಮ || ಅಮರಸ್ತ್ರೀನಿಚಯಂ ವಿಚಿತ್ರಲತೆಯಂ ಛತ್ರಾಳಿ ಭೂಜಂಗಳಂ
ಚಮರೀಜಾವಳಿ ಪುಷ್ಪಮಂಜರಿಯನುತ್ಕೇತುವ್ರಜಂ ಪಲ್ಲವೋ
ದ್ಗಮ ಶಾಖಾಳಿಯನಾನಕಧ್ವನಿ ವಿಹಂಗಧ್ಯಾನಮಂ ಪೋಲೆ ವಿ
ಭ್ರಮದಿಂ ಬಂದನದೊಂದು ನಂದನವನಂ ಬರ್ಪಂತೆ ಸಂಕ್ರಂದನಂ     ೪೫

ತ್ರಿದಶಾಧೀಶನ ಮುಂದೆ ಸಿಂಧುರಘಟಾಸಂದೋಹದಿಂ ವಾಜಿವ
ರ್ಗದ ಪರ್ವಿಂ ರಥುಕುಡ್ಯದೊಡ್ಡಣದಿನೊಳ್ಳಾಳೋಳಿಯಿಂದುಕ್ಷಯೂ
ಥದ ಸೊಂಪಿಂ ನವನರ್ತಕೀನಿವಹದಿಂ ಗಂಧರ್ವಸಂದೋಹದಿಂ
ದಿದು ಸಪ್ತಾಬ್ಧಿಯೆನಲ್ಕೆ ಸಪ್ತವಿಧ ಸೇನಾಚಕ್ರಮೇನೊಪ್ಪಿತೋ    ೪೬

ಮುಗಿಲೊಡ್ಡಂ ಕುಡುಮಿಂಚನಬ್ದರವಮಂ ಶಕ್ರಾಸ್ತ್ರಮಂ ತಂದಲ
ನಗಭಿದ್ಗೋಪಕಾಳಪಂ ಕಚಭರಂ ದೃಗ್ದೀಪ್ತಿ ಕಾಂಚೀರವಂ
ಸೊಗಯಿಪ್ಪಾಭರಣಾಂಶು ದೇಹರುಚಿ ಕೆಂಬಾಯ್ ಪೋಲೆ ಕಾರ್ಗಾಲಮಂ
ಗಗನಾಭೋಗದೊಳೆಯ್ದೆ ತೋಱುತಿಳೆಗೆೞ್ತರ್ಪಿಂದ್ರಕಾಂತಾಜನಂ    ೪೭

ಮದನಾರಾತಿಯ ಮುನ್ನಿನುತ್ಸವಕೆ ಬರ್ಪಂದಲ್ಲಮೀಯೊಪ್ಪವಿ
ಲ್ಲಿದು ಮತ್ತೊಂದು ಮದೇಭಶೋಭೆಯಿದು ಮತ್ತೊಂದಿಂದ್ರಸೌಂದರ್ಯಮಿಂ
ತಿದು ಮತ್ತೊಂದಮರೀವಿಲಾಸಮಿದು ಮತ್ತೊಂದುದ್ಬಲಾಟೋಪಮೆಂ
ಬುದುನೆಂಬಂತೆಸೆದುರ್ವಿಗೇಂ ಪಡೆದುದೋ ದೇವಾಗಮಂ ರಾಗಮಂ            ೪೮

ವ || ಅಂತು ಚತುರ್ನಿಕಾಯಾಮರಕುಳ ಕಳಕಳನಿನಾದಂ ದೆಸೆಯಂಪಳಂಚಲೆಯೆ ಸೌಧರ್ಮೆಂದ್ರಂ ಬಂಧು ಧನದಂಗೆ ಸಮವಸೃತಿಯಂ ನಿರ್ಮಿಸಲ್ವೇಡಿ ಬೆಸಸುವುದುಂ

ಸ್ರ || ಶ್ರೀಮತ್ಪ್ರಾಸಾದಚೈತ್ಯಾವನಿ ವನಪರಿಖಾಶೋಭೆ ವಲ್ಲೀವನಂ ದೃ
ಗ್ರಾಮೋದ್ಯಾನಂ ಕನತ್ಕೇತನಮಹಿ ಸುರಭೂಜೋರ್ವಿ ಸಂಗೀತಸದ್ಮ
ಸ್ತೋಮಂ ಲಕ್ಷ್ಮೀಲಸನ್ಮಂಡಪಮೆಸೆಯೆ ಗಣವ್ಯಾವೃತೋದ್ಯತ್ತ್ರಿಪೀಠೀ
ಧಾಮಾಗ್ರೋದ್ಭಾಸಿ ಸಿಂಹಾಸನದೊಳೆಸೆದಪಂ ಪುಷ್ಪದಂತಾಧಿನಾಥಂ          ೪೯

ವ || ಅಂತು ಯಕ್ಷನಿರ್ಮಿತ ಸಮವಸೃತಿಯಂ ನೋಡಿ ಶಚಿಯುಂ ಶಚೀಪತಿಯುಂ ಪರಮಭಕ್ತಿಯಿಂ ಪರಮನಿರ್ದ ಗಂಧಕುಟಿಯಂ ತ್ರಿಪ್ರದಕ್ಷಿಣಂ ಬಂದನೇಕ ವಸ್ತುಸ್ತವ ರೂಪ ಸ್ತವ ಗುಣಸ್ತವಂಗಳಿಂ ಸ್ತುತಿಯಿಸಿ ದೇವಲೋಕದನೇಕನವ್ಯದಿವ್ಯಾರ್ಚನೆಗಳಿಂದರ್ಚಿಸಿ ಕೇವಲಜ್ಞಾನಮಹಾಕಲ್ಯಾಣಪೂಜೆಯಂ ಮಾಡಿ

ಕಂ || ಸಾಸಿರದೆಂಟನ್ವರ್ಥೋ
ದ್ಭಾಸುರನಾಮಂಗಳುಂ ಮಹೋತ್ಸವದಿಂದಂ
ವಾಸವನೊಲ್ದಿಡೆ ತಾಳ್ದಿದ
ನಾ ಸುವಿಧಿಜಿನೇಂದ್ರನುರು ದಯಾಂಬುಧಿಚಂದ್ರಂ          ೫೦

ವ || ಅಂತರ್ಚಿಸಿ ಸುರಪತಿ ಜಿನಪತಿಯಂ ಬೀೞ್ಕೊಂಡು ಪೋದನನ್ನೆಗೆಮಿತ್ತಲ್ ವಿದರ್ಭಸ್ವಾಮಿಗಳ್ ಮೊದಲಾಗೆಂಭತ್ತೆಣ್ಬರ್‌ಗಣಧರರುಂ, ಸಾಸಿರದಯ್ನೂರ್ವರ್ ಪೂರ್ವಧರರುಂ ವೊಂಬತ್ತುಲಕ್ಕೆಯುಮಯ್ವತ್ತುಸಾಸಿರದಯ್ನೂರ್ವರ್ ಶಿಕ್ಷಕರುಂ ಎಂಟುಸಾಸಿರದ ನಾನೂರ್ವರವಧಿಜ್ಞಾನಿಗಳುಮೆಣ್ಫಾಸಿರ್ವರ್ ಕೇವಳಿಗಳುಂ ಪದಿಮೂಱುಸಾಸಿರ್ವರ್ ವಿಕ್ರಿಯರ್ಧಿಪ್ರಾಪ್ತರುಂ ಎಣ್ಫಾಸಿರದೈಯ್ನೂರ್ವರ್ ಮನಃಪರ್ಯಯಜ್ಞಾನಿಗಳುಂ ಆಱುಸಾಸಿರದಱುನೂರ್ವರ್ ವಾದಿಗಳುಂ ಘೋಷಾರ್ಯಿಕೆಯರ್ ಮೊದಲಾಗೆ ಮೂಱುಲಕ್ಕೆಯುಮೆಂಭತ್ತು ಸಾಸಿರರ್ಜಿಕೆಯರುಮೆರಡುಲಕ್ಕೆ ಶ್ರಾವಕರುಂ ನಾಲ್ಕುಲಕ್ಕೆ ಶ್ರಾವಕಿಯರುಮಸಂಖ್ಯಾತದೇವರುಂ ದೇವಿಯರುಮಸಂಖ್ಯಾತತಿರ್ಯಗ್ಜಾತಿಗಳುಂ ಬೆರಸು ಧರ್ಮೋಪದೇಶಂಗೆಯ್ಯತ್ತುಮಿಪ್ಪತ್ತೆಂಟು ಪೂರ್ವಾಂಗಮುಂ ನಾಲ್ಕುವರ್ಷದಿಂ ಕುಂದಿದೊಂದುಪೂರ್ವಂ ವಿಹಾರಿಸುತ್ತುಮಿರ್ದು

ಕಂ || ಮಹಿಮಾಬ್ಧಿವೊಂದುತಿಂಗಳ
ವಿಹರಣಮಂ ಮಾಣ್ದು ಬಂದು ಸಮ್ಮೇದಮಹಾ
ಮಹಿಧರದೊಳ್ ಸಾಸಿರ್ವರ್
ಮಹಿಮಹಿತಮುನೀಂದ್ರರೊಡನೆ ಯೋಗದಿಳಿರ್ದಂ          ೫೧

ವ || ಅಂತಪ್ರತಿಮ ಪ್ರತಿಮಾಯೋಗಾನಿಯೋಗದೊಳಿರ್ದನಂತರಂ ಸ್ವಸ್ಥಾನಸ್ವಯೋಗ ಕೇವಳ ಪ್ರದೇಶ ನಿರ್ಜರೆಯಂ ಮಾಡುತ್ತುಮಂತರ್ಮುಹೂರ್ತಕಾಲದೊಳ್ ದಂಡಕವಾಟಪ್ರಕರಣಾಲೋಕಪೂರಣಸಮುದ್ಭೂತಕ್ರಿಯಾಸಮಾಪ್ತಿಯಂ ಕ್ರಮಕ್ರಮದಿಂ ನಾಮಗೋತ್ರವೇದನೀಯಾಯುಷ್ಯಾಭಿಧಾನಾಘಾತಿಚತುಷ್ಟಯಮಂ ದಗ್ಧರಜ್ಜುಸಮಾನಂ ಮಾಡಿ ಪಂಚಾಕ್ಷರೋಚ್ಚಾರಣ ಕಾಲಪರ್ಯಂತಂ ತೞಲೊಳಗಣ ಬೀಜದಂತೆ ದ್ರವ್ಯಮನೋವಾಕ್ಕಾಯದೊಳೊಂದದೆ ಸಮುಚ್ಛಿನ್ನಕ್ರಿಯಾ ಪ್ರತಿಪತ್ತಿ ಶುಕ್ಲಧ್ಯಾನಾಪೂರ್ಣತೆಯಿನ ಶೇಷಶೀಲಗುಣನಿಳಯನಘಾತಿಸಮ್ಮಂಧಮಪ್ಪವುತ್ತರೋತ್ತರ ಪ್ರಕೃತಿಗಳಂ ಕ್ರಮಕ್ರಮದಿಂ ನಿರವಶೇಷಂ ಕಿಡಿಸಿ

ಕಂ || ಅನುಪಮಮಪ್ಪೆಂಟುಗುಣಂ
ತನಗಮರ್ದಿರೆ ಸೌಖ್ಯನಿಧಿಯುಮಖಿಳಜಗತ್ಪಾ
ವನನೇಂ ಮುನಿಜನಗಮ್ಯನು
ಮೆನೆ ತನ್ನೊಳೆ ನೆಱೆದು ಸುವಿಧಿ ಮುಕ್ತಿಗೆ ಸಂದಂ           ೫೨

ಸ್ಥಿರಭಾದ್ರಪದಸಿತಾಷ್ಟಮಿ
ಗಿರದೊಪ್ಪಿರೆ ಮೂಲಭಗಣಮಪರಾಹ್ನಕದೊಳ್
ವರ ಪುಷ್ಪದಂತಜಿನಪತಿ
ಪರಮಶ್ರೀಮುಕ್ತಿಲಕ್ಷ್ಮಿಯಂ ಕೆಯ್ಕೊಂಡಂ         ೫೩

ವ || ಅಂತು ಪುಷ್ಪದಂತಸ್ವಾಮಿ ಸಕಳ ಕರ್ಮವಿಪ್ರಮೋಕ್ಷೋಮೋಕ್ಷಃ ಎಂಬ ನಿಜಮುಖಕಮಳನಿರ್ಗತಾರ್ಹತಮತವಚನಮನನ್ವರ್ಥಂ ಮಾಡಿ ತ್ರಿಲೋಕ ಶಿಖರಿಶೇಖರ ನಾಗಿಯನಂತಸಹಜ ಸೌಖ್ಯಾಮೃತವನಧಿವಿಧುವಾಗಿ ನೆಲಸಿರ್ದನ್ನೆಗಮಿತ್ತ ಚತುರ್ನಿಕಾಯಾಮರ ನಿಕಾಯಂ ಸುವಿಧೀಶ್ವರಂಗೆ ಪರಿನಿರ್ವಾಣಕಲ್ಯಾಣಮಹಾಪೂಜೆಯಂ ಮಾೞ್ಪ ಭಕ್ತಿಯಿಂ ಬಂದು ನಿರ್ವಾಣಭೂಮಿಯಂ ದೇವಲೋಕದನೇಕಸುರಭಿ ಸುರತರುಕುಸುಮವಿಸರ ಬಂಧುರಗಂಧಾಕ್ಷತೆಗಳಿಂದರ್ಚಿಸಿ

ಕಂ || ಮನದನುನಯದಿಂದಾನಂ
ದನೃತ್ಯಮಂ ದಿವಿಜರಾಜನಖಿಳ ಧರಿತ್ರೀ
ಜನದ ಮನಕ್ಕಚ್ಚರಿಯ
ಪ್ಪಿನಮೊಡರಿಸಿ ಪರಮಸುಖಮನೇಂ ತಾಳ್ದಿದನೋ        ೫೪

ವ || ಆಗಳ್ ನಿಜಗುರುವಿಯೋಗದಿಂ ಕೀರ್ತಿವರ್ಮನಾದಂ ರೋದನಾನಳ ದಂದಹ್ಯಮಾನನಾ ವಿದರ್ಭಗಣಧರಸ್ವಾಮಿಗಳ್ ಬೆಸಸೆ ರೋದನಂ ಮಾಣ್ದು ತಾನುಂ ಗುರುನಿಯಾಮದಿಂ ಗುರುನಿರ್ವಾಣಭೂಮಿಯನಪೂರ್ವಾರ್ಚನೆಗಳಿಂದರ್ಚಿಸಿ ಕೃತಾರ್ಥನಪ್ಪೆನೆಂದು

ಮ || ಸುರಪಂ ಮಾಡಿದನೂನದಿವ್ಯಪರಿನಿರ್ವಾಣೋದ್ಘಕಲ್ಯಾಣ ವಿ
ಸ್ತರಪೂಜಾತಿಶಯಕ್ಕಮಿಂತಿದೆನಸುಂ ಮೇಲೆಂಬಿನಂ ಮಾಡಿದಂ
ಪರಮಾರ್ಹತ್ವದಪೂಜೆಯಂ ಬಹುವಿಧದ್ರವ್ಯಾರ್ಚನಾನೀಕದಿಂ
ಧರಣೀವಿಶ್ರುತಕೀರ್ತಿ ಕೀರ್ತಿಧರಭೂಪಂ ಭವ್ಯರತ್ನಾರ್ಣವಂ         ೫೫

ಚಂ || ನವರಸಮಂ ನಿಮಿರ್ಚುವ ಬೆಡಂಗನಮರ್ಚುವ ದೋಷಮಂ ತಳ
ರ್ಚುವ ಗುಣಮಂ ಕೞಲ್ವುವಮರ್ದಿಂಪನೊಡರ್ಚುವ ಬಂಧಮಂ ತೊಡ
ರ್ಚುವ ಕಿವಿವೊಕ್ಕಲರ್ಚುವೆಳೆನುಣ್ಪನೊಡರ್ಚುವ ಕಾವ್ಯಸತ್ಕಳಾ
ರ್ಣವ ಮೃಗಲಕ್ಷ್ಮಲಕ್ಷಣ ವಚೋವಧುವಂ ಬುಧರೊಲ್ದು ವರ್ಣಿಕುಂ          ೫೬

ಗದ್ಯ

ಇದು ಸಮಸ್ತಭುವನಸಂಸ್ತುತ ಜಿನಾಗಮ ಕುಮುದ್ವತೀ ಚಾರುಚಂದ್ರಾಯಮಾಣ ಮಾನಿತ ಶ್ರೀಮದುಭಯಕವಿ ಕಮಳಗರ್ಭ ಮುನಿಚಂದ್ರಪಂಡಿತದೇವ ಸುವ್ಯಕ್ತ ಸೂಕ್ತಿ ಚಂದ್ರಿಕಾಪಾನ ಪರಿಪುಷ್ಪಮಾನಸ ಮರಾಳ ಗುಣವರ್ಮನಿರ್ಮಿತಮಪ್ಪ ಪುಷ್ಪದಂತ ಪುರಾಣದೊಳ್ ಪರಿನಿರ್ವಾಣ ಮಹಾಕಲ್ಯಾಣಾಭಿವರ್ಣನಂ ಚತುರ್ದಶಾಶ್ವಾಸಂ ಪುಷ್ಪದಂತಪುರಾಣಂ ಸಂಪೂರ್ಣಂ ಮಂಗಳಮಹಾಶ್ರೀ

—-

* ಈ ಕೆಳಗಿನ ಎರಡು ಪದ್ಯಗಳು ಲಿಪಿಕಾರರಿಗೆ ಸಂಬಂಧಪಟ್ಟಿದ್ದು ಚೆನ್ನೈ ಓರಿಯಂಟಲ್ ಲೈಬ್ರರಿಯಿಂದ ಬಂದ ಪ್ರತಿಯಲ್ಲಿ ಮಾತ್ರ ೫೬ನೆಯ ಪದ್ಯದ ಬಳಿಕ ಬಂದಿದೆ.

ಶಲ್ಯವಿದೂರ ಬಂಕರಸನಂಕದ ಮಾಚೆಯ ತಂದೆ ನಿತ್ಯಮಾಂ
ಗಲ್ಯಸುಶೀಲಯುಕ್ತೆ ಮಹದೇವಿಯ ವಲ್ಲಭನೋೞ್ಪುವೆತ್ತ ಸಾ
ಕಲ್ಯ ಕುಲಾಮೃತಾಂಬುನಿಧಿ ಸೋಮನ ಚಾಮನ ಸೂನುವೊಲ್ದು ಸಾ
ಕಲ್ಯ ಗುಣಾಸ್ಪದಂ ಬರೆದಪಂ ಬುಧಮಾಧವನೀಪ್ರಬಂಧಮಂ         ೫೭

ಬಿಂದುವಿನೊಂದು ಶೋಭೆ ತಲೆಕಟ್ಟಿನ ಪೊರ್ಕುೞ ಚೆಲ್ವು ಮಾತ್ರೆಯೊಳ್
ನಿಂದ ಬೆಡಂಗು ಬಳ್ಳಿಯೊಳೊಡಂಬಡುತಿರ್ಪ ನಯಂ ವಿಸರ್ಗದೊ
ಳ್ಪೊಂದಿರಲಕ್ಕರಕ್ಕೆ ಬರೆವಂ ಚತುರರ್ ಪರಿವರ್ಣಿಸಲ್ ನವಿ
ಲ್ಗುಂದದ ಮಾದಿರಾಜವಿಬುಧಂ ವಿಬುಧೋತ್ಥಿತ ನವ್ಯಕಾವ್ಯಮಂ   ೫೮