ಕಂ || ಶ್ರೀಪತಿ ಹೃದಯಂಗಮನಭಿ
ರೂಪಂ ಶುಭವೃತ್ತನೊಪ್ಪಿದಂ ಪೃಥುತೇಜೋ
ವ್ಯಾಪೃತಯಶನಾಸ್ಥಾನಸು
ದೀಪಂ ಕೌಸ್ತುಭವಿಭಾಸಿ ಕವಿಕುಳತಿಳಕಂ           ೧

ಚಂ || ಅತುಳಪರಾಕ್ರಮಕ್ಕೆ ಸುನಯಂ ವಿಭವಕ್ಕೆ ಪರೋಪಕಾರಮ
ನ್ವಿತ ವಚನಕ್ಕೆ ಸತ್ಯಮಱಿವಿಂಗೆ ಸದಾಚರಣಂ ಕುಲಕ್ಕೆ ಪೆಂ
ಪತಿಶಯ ಪುಣ್ಯದೇೞ್ಗೆಗೆ ನಿಜೋದ್ಯಮಮೆಯ್ದೆ ಸಹಾಯಮಪ್ಪವೋಲ್
ಪತಿಗೆ ಸಹಾಯನಾಗಿ ಪಡೆದಂ ಮರುಭೂತಿ ಮಹಾವಿಭೂತಿಯಂ    ೨

ಮ || ಪತಿಯಾಶಾಪತಿ ಕೌಶಿಕಂ ಹತಬಳಂ ತನ್ನಾಖ್ಯೆಯುಂ ನೋಡೆ ಗೋ
ಪತಿಯೆಂದಂದು ಸುಮಂತ್ರಿಯಪ್ಪನೆ ದಿಟಕ್ಕೆಂದೇೞಿಕುಂ ಸ್ವಾಮಿಗಾ
ಶ್ರಿತಚಿಂತಾಮಣಿ ರಾಜಹಂಸನತುಳೋದ್ಯತ್ತಂತ್ರನೆಂಬೀ ಮಹೋ
ನ್ನತಿಯಂ ಮಾಡುವ ಮಂತ್ರಿ ಮುಖ್ಯನನಯೋದ್ಯೋಗಂ ಗುರೂದ್ಯೋಗಮಂ           ೩

ಕಂ || ಉದರಪರಿಪೂರ್ತಿಯುೞಿದಂ
ಗದ ಪುಷ್ಪಿನಿಮಿತ್ತಮಕ್ಕುಮಂತವನಿಪ ಸಂ
ಪದಮಂ ನಿಖಿಳಾಂಗದ ಸಂ
ಪದಕ್ಕೆ ಮೊದಲಾಗೆ ಮಾಡಿದಂ ಮಂತ್ರಿವರಂ     ೪

ವ || ಅಂತು ಮರುಭೂತಿ ನಿಜನಾಥಂಗೆ ನೀತಿನಿಧಾನಂ ಪ್ರೀತಿಯನೊದವಿಸುತ್ತುಂ ಬೆಸಕೆಯ್ಯುತ್ತುಮಿರೆ

ಕಂ || ಕೊ‌ಟ್ಟೆಯ್ದೆ ಕಪ್ಪಮಂ ಮಗು
ೞ್ದಟ್ಟಿದ ಬೞಿಗೊಲ್ದು ಪೇೞ್ದ ತಾಣಕ್ಕೆ ನೃಪರ್
ಬಿಟ್ಟು ಭುಜಗರ್ವಮಂ ಮೂ
ವಿಟ್ಟಿಗೆ ಬರೆ ನೆಗೞ್ದನಿಳೆಯೊಳರವಿಂದನೃಪಂ    ೫

ಮ || ಮುಳಿಸಿಂದೀಕ್ಷೆಸೆ ಸಾರ್ದುವೆಮ್ಮ ಧನಮುಂ ದೇಶಂಗಳುಂ ನಿನ್ನನ
ಗ್ಗಳಮಿನ್ನೆಮ್ಮಯ ಜೀವಮೆಂದಸಿಲತೋದ್ಯತ್ಪತ್ರಮಂ ನೆತ್ತಿಯೊಳ್
ತಳೆದಾ ವೈರಿಗಳಂಬು ದಿವ್ಯಮನೆ ಪೊಕ್ಕಂತುದ್ಘಕೌಕ್ಷೇಯಕೋ
ಜ್ವಳಧಾರಾಜಳದಲ್ಲಿ ಮೞ್ಗುವುದು ನಿಚ್ಚಂ ತದ್ಧರಾಧೀಶನಾ     ೬

ವ || ಅಂತಖಿಳ ಧರಾವಳಯಂ ವಳಯದಂತೆ ನಿಜಭುಜಮಂಡನಕ್ಕಳವಡೆ ವಿಜಯ ಲಕ್ಷ್ಮಿಯುಮಂ ವಶಂ ಮಾಡಿ ರೂಢಿವಡೆದತಿಪ್ರಾಜ್ಯಸಾಮ್ರಾಜ್ಯಸುಖಮನನು ದಿನಮನುಭವಿ ಸುತ್ತಮಿರ್ದೊಂದುದೆವಸಂ

ಕಂ || ನವಯುವತಿಲೋಚನದ್ಯುತಿ
ಧವಳಿಸೆ ಮಣಿಭೂಷಣಾಂಶು ಚಿತ್ರಿಸೆ ನೇತ್ರೋ
ತ್ಸವಮೆನಿಪೋಲಗಸಾಲೆಯೊ
ಳವನೀಶ್ವರನಿಂದ್ರಲೀಲೆಯಿಂದೆಸೆದಿರ್ದಂ          ೭

ಮ || ನಗೆಗಣ್ಗಳ್ ನಗೆನೆಯ್ದಿಲಂ ನಗೆಮೊಗಂ ಸಸ್ಮೇರ ನೀರೇಜಮಂ
ನಗೆದಂತಾವಳಿ ಕುಂದಮಂ ನಗೆಶಿರೀಷೋದ್ದಾಮದಾಮಂಗಳಂ
ನಗೆತೋಳ್ಗಳ್ ದಶನಚ್ಛದಂ ವಿಕಸಿತ ಶ್ರೀಬಂಧುಬಂಧೂಕಮಂ
ನಗೆಪುಷ್ಪಾಸ್ತ್ರಕುಲಾಧಿದೇವತೆಯರೆಂಬಂತೊಪ್ಪಿದರ್ ಕಾಂತೆಯರ್ ೮

ಕುಂ || ಎಣೆ ತಮಗಿಲ್ಲೆನಿಪರ್ ಕಣ್
ತಣಿಯದ ಚೆಲ್ವಿಂದೆ ಚತುರಜನಚೇತೋಗ್ರಾ
ಹಿಣಿಯರನಂಗಶ್ರೀಗ್ರಾ
ಹಿಣಿಯರ್ ತನ್ನೃಪನ ಚಾಮರಗ್ರಾಹಿಣಿಯರ್  ೯

ವ || ಅಂತು ಸಮಸ್ತಾಂತಃಪುರ ಪುರಂಧ್ರಿನೀರಂಧ್ರಘನಸ್ತನೋದಾರಹಾರ ವಾರವಿಳಾಸಿನೀಸಮೇತಂ ನೀತಿನಿಧಾನ ಪ್ರಧಾನಪ್ರಮುಖನಿಖಿಳಪರಿವಾರಪರೀತನುತ್ತುಂಗ ಸಿಂಹಾಸನಾಸೀನನಾಸ್ಥಾನಮಂಡಳಮಧ್ಯಮನಳಂಕರಿಸಿ

ಮ.ಸ್ರ || ಎನಸುಂ ಕಾಮಂಗೆ ಕಾಂತಾಭಿನಯತತಿ ಷಡಂಗಂ ಷಡಂಗಂ ಬಳಂ ನ
ರ್ತನಭಾವಂ ತತ್ಪ್ರಭಾವಂ ಲಯಗತಿ ಗತಿ ನೃತ್ಯಾನುಗಂ ಹೃದ್ಯವಾದ್ಯ
ಸ್ವನಮುದ್ಯಜ್ಜೈತ್ರಭೇರೀಘನರುತಿ ಕಳಗೀತಾರವಂ ಪುಷ್ಪಚಾಪಾ
ಭಿನವಜ್ಯಾರಾವಮೆಂಬಂತಿರೆ ನೃಪನೊಸೆದಂ ಸಾರಸಂಗೀತದಿಂದಂ   ೧೦

ವ || ಅಂತು ಕಂತುರಾಜನಂತೆ ರಾಜರಾಜಂ ರಾಗಸಾಗರದೊಳ್ ನೀಡುಮೋಲಾಡುತ್ತುಮಿರೆ

ಮ || ಚರನೊರ್ವಂ ಪರಿತಂದು ಭೂಪತಿಗೆ ಬೇಗಂ ಕಾರ್ಯವಿಜ್ಞಾಪನಾ
ತುರಚಿತ್ತಂ ಪೊಡೆವಟ್ಟು ಬಿನ್ನವಿಸಿದಂ ನಿಮ್ಮಾಜ್ಞೆಯಂ ಮೀಱಿ ದೇ
ವರ ಠಾಣಾಂತರಮಂ ತಿರಸ್ಕರಿಸಿ ನಾಡಂ ವಜ್ರವೀರಂ ಧುರೋ
ದ್ಧರುಶೌರ್ಯಂ ಬಿಡೆ ಕಾದಿ ಗೋೞಿಡಿಸಿದಂ ಸ್ತ್ರೀ ಬಾಲರಂ ವೃದ್ಧರಂ        ೧೧

ಕಂ || ಅನುಕೂಲಜನಕ್ಕಿಂದ್ರನ
ನನುಕೂಲಜನಕ್ಕೆ ಯಮನೆ ನೀನೆಂಬುದನಿಂ
ತಿನಿತಂ ಬಗೆಯದೆ ವಿಘಟಿಸಿ
ದನುದಗ್ರಂ ವಜ್ರವೀರನತಿದುರ್ವಾರಂ ೧೨

ಸಂದ ನಿಜಸ್ನೇಹಭರಂ
ಕುಂದಿದೊಡಿನನುದಯದಲ್ಲಿ ತನಗಪದಶೆಯೊಳ್
ಮುಂದಱಿಯದತಿಮದಾಂಧಂ
ನಂದುವ ಸೊಡರುದ್ದಮುರಿವ ಮಾೞ್ಕಿಯಿನುರಿದಂ       ೧೩

ಶಲಭಂ ಪ್ರದೀಪತೇಜ
ಕ್ಕಲಘುತರಕ್ಕಿರದೆ ಕಾಯ್ವ ತೆಱದಿಂ ತೇಜೋ
ಬಲದ ಸಮೃದ್ಧಿಗೆ ಕಾಯ್ದಂ
ಚಲಪಕ್ಷೋದ್ವೃತ್ತನನಧಿಗತ ನಿಜಸತ್ತ್ವಂ         ೧೪

ವ || ಅಂತು ಶೃಂಗಾರರಸದಿನವಿರುದ್ಧ ವೀರರಸಾಭಿನಯವಿಶಾರದಸೂತ್ರಧಾರ ನೆನಿಪ ದೂತನ ಮಾತಿಂಗೆ ಸಭೆಗಂ ಸಭಾಪತಿಗಂ ರೌದ್ರರಸಂ ಪಸರಿಸೆ

ಕಂ || ಕಡೆಗಣ್ಗೊಳ್ ಕೆಂಪಿಡಿದಿರೆ
ಕಡುಗೊರ್ವಿರೆ ಬೆಮರ ಬಿಂದು ಗಂಡಸ್ಥಳದೊಳ್
ಬಿಡದೊಪ್ಪುವ ವೀರಾಂಗನೆ
ಯೊಡಗೂಡಿದ ತೆಱದಿನವನಿಪತಿ ಸೊಗಯಿಸಿದಂ ೧೫

ಅರವಿಂದಾಧಿಪನುದಯಿಸು
ವರವಂದಾಧಿಪನನಿೞಿಸಿ ಕೋಪೋದಯದಿಂ
ದರುಣೋದಯಮುಖನೆಸೆದಂ
ನಿರುಪಮಸಿಂಹಾಸನೋದಯಾದ್ರಿಯೊಳಾಗಳ್  ೧೬

ವ || ಅದಂ ಕಂಡೊರ್ವ ದೋರ್ವಳಶಾಲಿಯಿಂತೆಂದಂ

ಚಂ || ಪುದಿದಿರೆ ಕೆಂಪು ನಿನ್ನ ನಯನಂಗಳೊಳನ್ಯರ ರಕ್ತದಿಂದೆಮೀ
ಯದೆ ತುಟಿ ಕಿೞ್ತ ಶಸ್ತ್ರಕುಲಮಂ ಕಿೞದುಣ್ಮೆ ಬೆಮರ್ ಕಪೋಳದೊಳ್
ಮದವದರಾತಿಕಾಂತೆಯರ ಲೋಚನವಾರಿಗಳಿಂ ಕಪೋಲಪ
ತ್ರದ ಸಿರಿಯಂ ವಿಮರ್ದಿಸದೆ ಮಾಣ್ಬವನಲ್ತೆ ರಸಾಧಿನಾಯಕಾ       ೧೭

ವ || ಆಗಳ್ ಮತ್ತೊರ್ವಂ

ಉ || ಏಂ ಧರಣೀಶ ನೀಂ ಮುನಿದು ಕಾದಲೊಡರ್ಚುವೊಡೇನವಂ ಸಮ
ಸ್ಕಂಧನೆ ವಜ್ರವೀರನೆನಗೀ ಬೆಸನಂ ಬೆಸಸಾತನಂ ಗಜ
ಸ್ಕಂಧಕಳಾಧಿರೂಢನನಗುರ್ವಿಪ ಮಾರ್ಪಡೆ ನೋಡೆ ನೋಡೆ ಕೊ
ಲ್ವೆಂ ಧುರದಲ್ಲಿ ನಿಂದೊಡೊಳಸಾರ್ದೊಡೆ ಕೋಡಗಗಟ್ಟಗಟ್ಟುವೆಂ          ೧೮

ವ || ಮತ್ತೊರ್ವಂ

ಉ || ಆರಿದಿರಾಂತೊಡಂ ಯಮಮುಖಾಂತರದೊಳ್ ಮಿಗೆ ತೂಂತಿದೇವ ಕೈ
ಸಾರದ ವಜ್ರವೀರನನುಪಾಶ್ರಿತವೀರನನಿಕ್ಕುವೆಂ ಗೃಹೇ
ಶೂರ ಎನಿಪ್ಪ ನಾಣ್ಣುಡಿಗೆ ಕೇಳೆಡೆಯಪ್ಪವನಲ್ಲೆನೆಂದು ದು
ರ್ವಾರಪರಾಕ್ರಮಂ ನುಡಿದನೀ ಕ್ರಮದಾಹವಲಂಪಟಂ ಭಟಂ         ೧೯

ವ || ಮತ್ತೊರ್ವಂ

ಶಾ || ಸಿಂಗಂ ತುಂಗಕರೀಂದ್ರ ಕುಂಭತಟಮಂ ಸೀಳ್ದಿಕ್ಕುವಂತೞ್ಕದ
ಷ್ಟಾಂಗದ್ರೋಹನನಾಹವಾಂಗಣದೊಳುತ್ಯುಗ್ರಾಸಿಯಿಂ ಸೀಳ್ದು ದೋ
ರ್ಭಂಗಂಬೆತ್ತನ ವಜ್ರವೀರನ ದಳತ್ಖಂಡಂಗಳಿಂದಷ್ಟದಿ
ಕ್ಕಿಂಗಂ ಕೇಳ್ ಬಲಿಗೊಟ್ಟು ದೇವ ಮೆಱೆವೆಂ ದುರ್ವಾರಮಂ ವೀರಮಂ       ೨೦

ವ || ಮತ್ತೊರ್ವ ವೀರಭಟಂ

ಮ || ಕದನಕ್ರೂರನ ವಜ್ರವೀರನ ಸಮಗ್ರೋತ್ತುಂಗಮಾತಂಗನು
ನ್ಮದವತ್ಕುಂಜರದುಗ್ರದಂತಯುಗಮಂ ಸಂಘಟ್ಟದಿಂದೆನ್ನ ಖ
ೞ್ಗದ ಬಲ್ವೋೞ್ವೆಡೆಯಾದ ತನ್ನೃಪ ಶಿರಃಪ್ರೋದ್ಭಾಳದಿಂದುಣ್ಮಿ ಪೊ
ಣ್ಮಿದ ಕಿರ್ಚಿಂದಮೆ ಕಾಸಿ ದೇವ ಕಳೆವೆಂ ದೋರ್ದಂಡ ಕಂಡೂತಿಯಂ ೨೧

ವ || ಮಗೞ್ದೊರ್ವಂ

ಉ || ತುಂಗಪರಾಕ್ರಮೈಕನಿಧಿ ನೀಂ ಬೆಸಸೆನ್ನನಧೀಶ ಪಿಂಗದೇ
ಕಾಂಗದಿನಾಜಿರಂಗದೊಳಿದಿರ್ಚಿದುದಂ ಚತುರಂಗಸೈನ್ಯಮಂ
ಭಂಗಿಸಿ ವಜ್ರವೀರನ ವಿರೋಧಿಕಠೋರನ ಸಾರಮಪ್ಪ ಸ
ಪ್ತಾಂಗಮನೀೞ್ದುತಂದು ನಿನಗಿತ್ತಪೆನೇವುದಿದಕ್ಕೆ ಮಂತಣಂ         ೨೨

ವ || ಮತ್ತೊರ್ವನೇಕಾಂಗವೀರಂ

ಚಂ || ಮಣಿಯೆ ಮಹೋಗ್ರಖೞ್ಗಹತಿಯಿಂದ ಸುಹೃಚ್ಚತುರಂಗಸೈನಿಕಂ
ತಣಿಯೆ ವಿರೋಧಿಭೂಪರುಧಿರಾಸವಪಾನದೆ ರಾಕ್ಷಸೀಕುಳಂ
ಕುಣಿಯೆ ಕಬಂಧಕೋಟಿಯೊಡನೆಯ್ದೆ ಪಿಶಾಚಸಮೂಹಮಾಹವಾಂ
ಗಣದೊಳೆ ಕೊಂದಪೆಂ ಕದನಧೀರನನಗ್ಗದ ವಜ್ರವೀರನಂ ೨೩

ವ || ಮತ್ತೊರ್ವನಾರೂಢವಿದ್ಯಾಪ್ರೌಢಂ

ಉ || ಬಿಲ್ವಡೆಯೊಡ್ಡಿದಡ್ಡಣಮನಡ್ಡಣಮಾ ರಥಮಂ ರಥೋತ್ಕರಂ
ಸಾಲ್ವಿನಮಶ್ವಮಂ ತುರಗಮಾನೆಯಸೇನೆಯನಾನೆ ಪೊರ್ದೆ ಬಂ
ಬಲ್ವರಿದೆನ್ನ ದಂತಿ ತುೞಿದಾತನ ದಂತಿಯನೆಯ್ದೆ ಕೊಲ್ವಿನಂ
ಕೊಲ್ವೆನುದಗ್ರಖೞ್ಗಮುಖದಿಂದೆ ವಿದಾರಿಸಿ ವಜ್ರವೀರನಂ            ೨೪

ಈಗಳೆ ದೇವ ನೀಂ ಬೆಸಸು ಶತ್ರುನೃಪಾಳಕಕಂಠರಕ್ತಧಾ
ರಾಗಣದೊಳ್ ವಿರೋಧಿಕರಿಮಸ್ತಕಮೌಕ್ತಿಕರಮ್ಯಖೞ್ಗಧಾ
ರಾಗೃಹದೊಳ್ ಜಯಪ್ರಮದೆ ಮುನ್ನಿನ ವೀರವಿಯೋಗವೇಗದು
ದ್ವೇಗಮನಾಱಿಸಲ್ ನೆಲಸುವಂತಿರೆ ಮಾಡುವೆನಾಜಿರಂಗದೊಳ್   ೨೫

ಶ್ರೀಪರಿಪೂರ್ಣ ನೀನೊಸೆದೊಡಿಂದ್ರನೊಳಿಂದ್ರಸಮಾಖ್ಯೆ ವೈರಿಸಂ
ತಾಪಕರೂಪ ನೀಂ ಪಡೆದೊಡಾ ಯಮನೊಳ್ ಯಮಸಂಜ್ಞೆ ಶೋಭಿಕುಂ
ಜ್ಞಾಪಿಪೊಡಂತೆ ನೀಂ ಮುನಿಯದಿರ್ದುದಱಿಂದಮೆ ವಜ್ರವೀರನೆಂ
ಬೀ ಪೆಸರಿರ್ದುದಾ ಖಳನೊಳಲ್ಲದೆ ನೀಂ ಮುಳಿದಂದದಿರ್ಕುಮೇ    ೨೬

ಕರ್ಕಶಗಂಧಸಿಂಧುರಕರಪ್ರಕರಂ ನಿಶಿತಾಘಾತದಿಂ
ದಿರ್ಕಡಿಯಾಗಿ ಜೀರ್ಕೊಳವಿಯಾಗಿರೆ ವೀರವಿರೋಧಿರಕ್ತದಿಂ
ಸೊರ್ಕಿದ ಶಾಕಿನೀನಿವಹಮೋಕುಳಿಯಾಡೆ ಪಿಶಾಚಸಂಕುಳಂ
ಪೋರ್ಕುಳಿಯಾಡೆ ಪಂದಲೆಗೆ ಕೊಲ್ವೆನಿದಿರ್ಚಿದ ವಜ್ರವೀರನಂ        ೨೭

ವ || ಎಂದಿಂತು ವೀರರಸಾರ್ಣವಂ ಘೂರ್ಣಿಸುವಂತೆ ತಮತಮಗೆ ವೀರಭಟರಾರ್ಧಟೆಯಿಂ ಘೂರ್ಣಿಸುವುದುಂ ನಿರೂಢಾಹಂಕಾರನುಂ ಧೀರೋದಾತ್ತವಚನಾಧಾರನುಮದಂ ನಿವಾರಿಸಿ

ಕಂ || ಮುನಿಸೊಸಗೆಗಳಂ ರಿಪುಜನ
ವಿನಾಶದಿಂ ಮಿತ್ರಜನಸಮೀಹಿತಸುಖವ
ರ್ಧನದಿಂದುಪಲಕ್ಷಿಸುವಂ
ತು ನೆಗೞದಿತರರವೊಲಾಚರಿಪ್ಪಂ ಪ್ರಭುವೇ     ೨೮

ಬೆಸನಂ ಬೇೞ್ಪುದಱಿಂ ಭಟ
ರ್ಗುಸಿರ್ವುದೆ ಗುಣಮಲ್ಲದಧಿಪನುಂ ಮಾಮಸಕಂ
ಮಸಗಿ ನುಡಿದಂದು ಪೆಂಪೆಂ
ತೆಸೆದಪುದದಱಿಂದೆ ಮಾಡಿ ಬೞಿಕ್ಕಮಿಂತೆಂದಂ

ವ || ಎಂಬಿದಂ ಬಗೆಯೊಳ್ ಬಗೆದು ಬೞಿಕ್ಕಮಿಂತೆಂದಂ
ಕಂ || ಇನ್ನೆವರಂ ಪರಚಕ್ರ
ಕ್ಕೆನ್ನಯ ದೆಸೆಯಿಂದೆ ಭೀತಿಯಲ್ಲದೆ ಪೆಱರಿಂ
ದೆನ್ನ ಜನಪದಕೆ ಭಯಮಿ
ಲ್ಲಿನ್ನದು ವಿಪರೀತಮಾದೊಡಾಂ ಸೈರಿಪೆನೇ   ೩೦

ಪಗೆವಂ ದೂರದೊಳಿರೆ ಗ
ದ್ದುಗೆವೊಯ್ದೊಡೆ ತೀರ್ವುದುಂಟೆ ವಿಜಯಪ್ರಸ್ಥಾ
ನ ಗಭೀರಭೇರಿಯಂ ಪೊ
ಯ್ಸು ಗಡೆಂದು ಬಳಾಧಿಪಂಗೆ ವಿಭು ನಿಯಮಿಸಿವಂ        ೩೧

ವ || ಅಂತು ಬಳಾಧ್ಯಕ್ಷನಂ ಬರಿಸಿ ನಿಯಮಿಸುವುದುಮದಂ ನಿವಾರಿಸಲೆಂದು ಸಹಜ ಪ್ರಜ್ಞನುಮಶೇಷನೀತಿಶಾಸ್ತ್ರಜ್ಞನುಮಪ್ಪ ಮರುಭೂತಿಮುಖ್ಯರಪ್ಪ ಮಹಾಪ್ರಧಾನರ್ ಮಂತ್ರಪೂರ್ವಕಾಸ್ಸರ್ವೇಪ್ಯಾರಂಭಾಃ ಕ್ಷಿತಿಪತೀನಾಮೆಂಬ ನೀತಿಯಂ ದೇವರ್ ಪರಿಭಾವಿಸುವುದೆಂಬುದುಮದಂ ಮನದೆಗೊಂಡು ಸಮಸ್ತರಾಜನ್ಯಕಮಂ ಬೀಡಿಂಗೆ ತಾಂಬೂಲ ದಾನಪುರಸ್ಸರಂ ವಿಸರ್ಜಿಸಿ ಮಂತ್ರಿಮಂಡಳಿವೆರಸು

ಕಂ || ಅಪವಿವರಾಪ್ರತಿಶಬ್ದಮ
ನಪಸಾರಿತ ಕೀರಸಾರಿಕಾಸಂಕುಳಮಂ
ನೃಪಚೂಡಾಮಣಿ ಹಿತಚರ
ಸುಪರೀಕ್ಷಿತಮಂತ್ರಶಾಲೆಯಂ ಪುಗುತಂದಂ       ೩೨

ವ || ಅಂತು ಮಂತ್ರಶಾಲೆಯಂ ಪೊಕ್ಕು

ಕಂ || ಬೆಸಗೊಳ್ಳದೊಡಂ ಕಾರ್ಯಮ
ನುಸಿರ್ಗುಂ ಪರಿಣಾಮಪಥ್ಯಮಂ ಪತಿಹಿತಮಂ
ಬೆಸಗೊಳೆ ನಿರ್ಭಯದಿಂ ನೀ
ತಿಸಾರಮಂ ನುಡಿಯದಿರ್ಪರೇ ನೀತಿವಿದರ್       ೩೩

ಉಚಿತಮನುಸಿರಲೆವೇೞ್ಪುದು
ಸಚಿವಂ ವಿಭುವದನೆ ನೆಗೞವೇೞ್ಪುದು ಭಯದಿಂ
ಸಚಿವನುಸಿರದೊಡೆ ವಿಭವದ
ನೆ ಚಿರಂ ನೆಗೞದೊಡೆ ಮೂರ್ಖರಾಜ್ಯಮದಕ್ಕುಂ            ೩೪

ಆಗಳೆ ಪುಟ್ಟಿದ ಕಾರ್ಯಮ
ನಾಗಳೆ ನಿರ್ಣಯಿಸುವಂದು ದುಷ್ಕರಮದಱಿಂ
ಬೇಗಂ ತ್ರಿಕಾಲದರ್ಶಿ ದ
ಲಾಗಲೆವೇೞ್ಕುಂ ನಿಯೋಗಿ ಯೋಗಿಯ ತೆಱದಿಂ ೩೫

ವ || ಎಂದು ಸುಪ್ರಸನ್ನ ಮುಖೇಂದುನಿಸ್ಸರನ್ನಯ ಪ್ರಚುರಪ್ರಶ್ನವಚೋಮೃತ ರಶ್ಮಿಗಳಿಂ ಮಂತ್ರಿಜನದ ಮಾನಸಕುಮುದಿನಿಗೆ ಮುದಮನೊದವಿಸುವುದುಮಾ ಪ್ರತಿಭಾವಿಭೂತಿ ಮರುಭೂತಿ ಮುಕುಳಿತಾಂಜಲಿಪುಟನಾಗಿ

ಕಂ || ಅಂಬುಜಸಖನಿರ್ದಂತಿರೆ
ಮಿಂಬುೞು ಖದ್ಯೋತಮೆನಿಪವೊಲ್ ಮಂತ್ರಿವೆಸರ್
ನೀಂ ಬಹುನಯವಿದನಿರೆ ಬೇ
ಳಂಬವಿದೆಮ್ಮಂದಿಗರ್ಗೆ ವಸುಧಾಧಿಪತೀ          ೩೬

ನಯಶಾಸ್ತ್ರದರ್ಥಮಂ ನಿ
ನ್ನಯ ನಡೆವಳಿ ಜಡರ್ಗಮಱಿಯೆ ಕನ್ನಡಿಸುವುದೆಂ
ದಯನಯವಿಧಿ ನೀಂ ಮಾಡಿದ
ನಿಯೋಗಿಗಳಮೆಂದು ದೇವ ನೀಂ ಬೆಸಸಿದಪೈ    ೩೭

ಉಕ್ಕೆವಮಿಲ್ಲದ ಶಕುನದ
ಪಕ್ಕಿಗಳಂ ನುಡಿಸಿ ನಯವಿದರ್ ನಯಮಂ ಕೆ
ಯ್ಮಿಕ್ಕುದನಱಿವವೊಳೞಿದಪೆ
ಯಕ್ಕುವದರ್ಕೞ್ಕದಧಿಪ ಬಿ‌ನ್ನವಿಸಿದಪೆಂ         ೩೮

ನಯನಿಪುಣರುಪಾಯಚತು
ಷ್ಟಯದೊಳ್ ಸಾಮಮನಗಣ್ಯಷಾಡ್ಗುಣ್ಯದೊಳಾ
ರಯೆ ಸಂಧಿಯಂ ಮೊದಲ್ ಮಾ
ಡಿಯೆ ಪೇೞ್ದರ್ ನಾಮುಮಂತೆ ನೆಗೞಲೆವೇೞ್ಕುಂ          ೩೯

ವ || ಎಂಬುದುಮರಸನಿಂತೆಂದಂ

ಕಂ || ಸಾಮದೊಳಳವಡುವೊಡೆ ಸಂ
ಗ್ರಾಮಂ ರಿಪುನೃಪರೊಳೇಕೆ ಪಾಲ್ಸಕ್ಕರೆಯಿಂ
ದಾಮಯಮುಪಶಮಪೊಡೆವಿ
ದ್ಯಾಮಯ ಸೇವಿಸಲದೇಕೆ ಕಟುಕ ತ್ರಯಮಂ    ೪೦

ಅವನಳ್ಕದೆ ನಮ್ಮೊಳ್ ಕಾ
ದುವ ಭರದಿಂ ನಾಡನಿಱಿದೊಡಂ ಕಾದದೆ ಮ
ತ್ತವನೊಳ್ ಸಾಮಮನಾಚರಿ
ಸುವುದೆಂಬುದು ನೋಡೆ ನಾಡೆ ನಗೆಗೆಡೆಯಲ್ತೇ  ೪೧

ನಯವಿದನಂ ಸಾಮದಿನಪ
ನಯನಂ ದಂಡದೊಳೆ ಗೆಲ್ವುದೆಂತೆನ ಕಟುಕ
ತ್ರಯದಿಂದದಲ್ಲದೆ ಮಧುರ
ಪ್ರಯೋಗದಿಂ ಕಫಮನಾವನುಪಶಮಿಸಿದಪಂ    ೪೨

ವ || ಎಂಬುದುಮಾ ಭೂಪತಿಯ ಮಾತಿಂಗೆ ಮರುಭೂತಿಯಿಂತೆಂದಂ

ಕಂ || ಜನಿಯಿಸಿದ ಶೋಫಮದು ಲೇ
ಪನದಿಂ ಪೋಗದೊಡೆ ಶಸ್ತ್ರಕರ್ಮವನೆಸಪಂ
ತನುನಯಕೊಳಗಾಗದನಂ
ಮೊನೆಯೊಳ್ ದಂಡಿಸುವುದು ನಯಪರಾಕ್ರಮಯುಕ್ತಂ    ೪೩

ವ || ಎಂಬುದುಂ ಪರುಭೂತಿನಿಮಿತ್ತ ಮರುಭೂತಿಸಮರ್ಪಿತಮಂತ್ರರತ್ನಮುಂ ಮುನ್ನಮೆ ತನ್ನ ಮನೋಮುದ್ರಿಕೆಯನಳಂಕರಿಸಿರ್ದೊಡಂ ತತ್ಪರೀಕ್ಷಾವ್ಯಾಜದಿಂದವರ ನಯವಿಚಕ್ಷಣತೆಯಂ ಪರೀಕ್ಷಿಸಲೆಂದಿತರಮಂತ್ರಿಗಳ ಮೊಗಮಂ ನಿರೀಕ್ಷಿಸುವುದುಮವರ್ ವಿನಯವಿನಮಿತ್ತೋತ್ತಮಾಂಗರಾಗಿ

ಕಂ || ಆನನಸನ್ನಿಧಿಯಿಂ ಪಂ
ಚಾನನಪಾದಕ್ಕಮಾನನವ್ಯಪದೇಶಂ
ತಾನೆಸೆವ ತೆಱದಿನೀತನ
ಧೀನತೆಯಿಂದಂ ಪ್ರಧಾನವೆಸರೆಮಗೆಸೆಗುಂ        ೪೪

ವ || ಎಂಬುದುಂ ನಿರ್ಮತ್ಸರಚಿತ್ತರುಂ ಗುಣವತ್ಸಳಾನುವೃತ್ತರುಮಪ್ಪುದಱಿಂ ಮರುಭೂತಿದೃಷ್ಟಮಂತ್ರಮೆ ಗುಣಗರಿಷ್ಠಮುಮನುಷ್ಠೇಯಮುಮೆಂದದನೆ ಪುರಸ್ಕರಿಸಿ ಇಂತೆಂಗುಂ

ಕಂ || ಅನುವಶನೆನಿಸಿರ್ದಂ ಭೋಂ
ಕೆನೆ ಶಂಕೆಯನುೞಿದು ಕಲಹಮಂ ಮಾಡುವುದಾ
ತನ ಗರ್ವದುರ್ವೊ ಮೇಣ
ನ್ಯ ನೃಪೋದ್ಬಳಬಳವೊ ತಿಳಿಯವೇೞ್ಪುದು ನೃಪತೀ     ೪೫

ರಾಯಸಮಂ ಪೆಸರ್ವೆತ್ತ ಪ –
ಸಾಯಂಬೆರಸಟ್ಟಿ ದೂತನಿಂ ಪಗೆವನಭಿ
ಪ್ರಾಯಮನುಜ್ಜುಗಮನವಂ
ಗಾಯತ್ತರನಹಿತರಂ ವಿಚಾರಿಪುದುಚಿತಂ          ೪೬

ವ || ಎನಲೊಡಮಖಿಳಾಮಾತ್ಯೈಕಮತ್ಯನಿಶ್ಚಿತಮಂತ್ರಮೆ ಕೃತ್ಯಮೆಂದು

ಮ || ಸಹಜಪ್ರಜ್ಞನಶೇಷ ದೇಶಲಿಪಿ ಸದ್ಭಾಷಾವಿಶೇಷಜ್ಞತಾ
ಸಹಿತಂ ನೀತಿವಿನೂತಸೂಕ್ತಿಸಹಿತಂ ದಕ್ಷಂ ಜಿತಾಕ್ಷಂ ನಿರಾ
ಗ್ರಹನುದ್ಯದ್ಗುಣರತ್ನ ಸಂಗ್ರಹನೆನಿಪ್ಪಂಗಾ ಮಹಾಸಂಧಿವಿ
ಗ್ರಹಿಗಾಳೋಚಿಸಿದಂದದಿಂದೆಸಗು ನೀನೆಂದಂ ಧರಾಧೀಶ್ವರಂ         ೪೭

ವ || ಅಂತು ಸಮಯೋಚಿತವೇದಿಯುಂ ಪದೇಕವಾದಿಯುಮಪ್ಪ ಸಂಧಿವಿಗ್ರಹಿಗೆ ನೆಗೞ್ವ ರಾಜಕಾರ್ಯಮಂ ನಿಯೋಜಿಸಿ

ಉ || ಸಾಧಿತಮಂತ್ರನುನ್ನತಗಿರೀಂದ್ರಗುಹಾಂತರದಿಂ ಪ್ರಸಿದ್ಧ ವಿ
ದ್ಯಾಧರನಾತ್ಮಮಂದಿರಕೆ ಬರ್ಪವೊಲೊಪ್ಪುವ ಮಂತ್ರಶಾಲೆಯಿಂ
ದಾ ಧರಣೀಶ್ವರಂ ಸೊಗಯಿಪೋಲಗಶಾಲೆಗೆ ಸಿದ್ಧಮಂತ್ರನಾ
ಜ್ಞಾಧರನೞ್ಕಱಿಂದೆ ನಡೆತಂದು ವಿನೋದದೊಳಿರ್ದನೂರ್ಜಿತಂ       ೪೮

ವ || ಅಂತಿರ್ಪುದುಮತ್ತಿತ್ತಲಾ ಪ್ರಧಾನೋತ್ತಮಂ
ಕಂ || ಬೆಸಗೊಳ್ಳದೆಡಪದನುಮಾ
ನಿಸದುಚಿತಮೆನಿಪ್ಪ ವಚನದಿಂದೆಸೆದಿರೆ ರಾ
ಯಸಮಂ ಬರೆದಾಗಳೆ ಮು
ದ್ರಿಸಿ ಕಟ್ಟಿ ಪಾಸಯಮಂ ನೃಪೋಕ್ತಕ್ರಮದಿಂ    ೪೯

ದೃಷ್ಟಂ ವರವಕ್ರೋಕ್ತಿವಿ
ಶಿಷ್ಟಂ ನಿಃಶಂಕನನ್ವಿತಂ ನಯನಿಪುಣಂ
ಸ್ಪಷ್ಟಪರಚಿತ್ತವೃತ್ತಿ ನಿ
ಸೃಷ್ಟಾರ್ಥನೆನಿಪ್ಪ ದೂತಮುಖ್ಯನನಾಗಳ್     ೫೦

ವ || ಕರೆದು ಬರೆದ ರಾಯಸಮುಮಂ ಕಟ್ಟಿ ಮುದ್ರಿಸಿದ ಪಸಾಯಮುಮಂ ಕೊಟ್ಟು ವಿಜಯಕಾರ್ಯಸಿದ್ಧಿಯಕ್ಕೆಂದು

ಕಂ || ಇರದೆ ನಿಜಾಂತರ್ಗತಮಂ
ನಿರವಿಸಿ ಕೞುಪಿದೊಡೆ ಕೞೆದು ಬಹುಜನಪದಮಂ
ತ್ವರಿತಗತಿಯಿಂದೆ ಪದ್ಮಾ
ಪುರಿಯಂ ಕಡು ಚೆಲ್ವಿನಾಗರಮನೆಯ್ತಂದಂ      ೫೧