ವ || ಅಂತು ಬರುತ್ತುಮನತಿದೂರಾಂತರದೊಳ್

ಮ || ಅದೆ ತೋಱಿತ್ತೆ ಕಱಂಗಿ ಸುತ್ತಿದ ವನಾನೀಕಂ ವನಾನೀಕಮ
ಧ್ಯದೊಳಾ ತೋರ್ಪುದೆ ಹೇಮಗೋಪುರಮದಾ ತೋಱಿತ್ತೆ ಜೈನೇಂದ್ರಗೇ
ಹದುದಂಚತ್ಕನಕೋಜ್ವಳತ್ಕಳಶಮಾ ತೋಱಿತ್ತೆ ಭೂಪಾಳನ
ಗ್ಗದ ಸೌಧಾಗ್ರಮೆನುತ್ತೆ ದೂತನಿರದೆಯ್ತಂದಂ ಪುರೋಪಾಂತಮಂ ೫೨

ವ || ಅಂತೆಯ್ದೆವಂದು ಕಂತುರಾಜನ ರಾಜಧಾನಿಯಂತೆ ವನರಾಜಿಯಿಂ ವಿರಾಜಿಸುವ ಪೊಱವೊೞಲ ಸಿರಿಯಂ ನಿರೀಕ್ಷಿಸುತುಂ ಪುರಗೋಪುರಮಂ ಪೊಕ್ಕು ವಾರಾಂಗನಾ ಸಮುತ್ತುಂಗಪಯೋಧರಕುಧರಮುತ್ಪನ್ನಪ್ರಸ್ನನಶೃಂಗಾರರಸತರಂಗಿಣೀ ಸಂಗತಾಭಿನವಖೇಟಮೆನಿಪ ವೇಶ್ಯಾವಾಟಮುಮಂ ನಿಜಕಾಂತಿವಿಜಿತಫಣಿಪತಿಫಣಾಮಣಿಗಣ ಮರೀಚಿಮೇಚಕಿತಮರುನ್ಮಾರ್ಗಮೆನಿಪ ವಿಪಣಿಮಾರ್ಗಮುಮಂ ನೋಡಿ ನೀಡುಂ ಕೌತುಕಂಬಡುತ್ತುಂ ನಯನೋತ್ಸವಕಾರಣ ಮಣಿತೋರಣಯೂಥಸನಾಥಮಪ್ಪ ರಾಜವೀಥಿ ಯೊಳಗನೆ ರಾಜಮಂದಿರಕ್ಕೆ ವಂದು ದೌವಾರಿಕನಿವೇದಿತ ನಿಜಾಗಮನವೃತ್ತಾಂತನಾಗಿ ಪೋಗಿ

ಮ || ಸಮರೋದಗ್ರಭಟಪ್ರತಾನಮನುದಾರೋರ್ವೀಶಸಂತಾನಮಂ
ಪ್ರಮದಾಸ್ಯಾಂಬುಜಗಂಧಮಗ್ನಮಧುಪಪ್ರಧ್ವಾನಮಂ ನೃತ್ಯವಾ
ದ್ಯಮಿಳಧ್ಧ್ವಾನಮನಾರ್ಯವರ್ಯಸುವಚಃಪೀಯೂಷದತ್ತಾವಧಾ
ನಮನೈಶ್ವರ್ಯನಿಧಾನಮಂ ಪದೆಪಿನಿಂ ಪೊಕ್ಕಂ ನೃಪಾಸ್ಥಾನಮಂ ೫೩

ವ || ಅಂತಾಸ್ಥಾನಮಂಟಪಮಂ ಪೊಕ್ಕು ಸ್ವಕೀಯಾಜ್ಞಾಮಾತ್ರಸ್ವೀಕೃತಾನೇಕ ಭೂಕಾಂತದೇಶಕೋಶನೆನಿಪ ಮದೀಶನಾದೇಶಮಿದೆಂದು ತನ್ನ ತಂದುಪಾಯನರತ್ನಕರಂಡಕಮಂ ಪ್ರಚಂಡಮಂಡಳಾಧೀಶನಪ್ಪ ವಜ್ರವೀರನ ಮುಂದಿೞಿಸಿ ನಿಜೋಚಿತಸ್ಥಾನದೊಳ್ ಕುಳ್ಳಿರ್ಪುದುಮದಂ ಸಮಗ್ರಸಂಧಿವಿಗ್ರಹಗುಣಾಗ್ರಣಿ ಕಳೆದುಕೊಂಡಪಮುದ್ರಿತಂ ಮಾಡಿಯುನ್ಮಯೂಖಲೇಖಾಮುದ್ರಿತ ಸಭಾವಳಯಮಪ್ಪ ಕರವಳಯಾದಿ ನೂತ್ನರತ್ನಾ ಭರಣಂಗಳಂ ಬೇಱೆವೇಱೆ ತೋಱಿ ತದನಂತರಂ

ಕಂ || ಅವಧಾರಿಸುವುದು ದೇವರ್
ಭುವನೇಶಾದೇಶಮೆಂದು ಬಿನ್ನವಿಸಿ ಸಭಾ
ಶ್ರವಣರಸಾಯನಮೆನಿಪಂ
ತವಿರಳಗಂಭೀರರಾವದಿಂ ಬಾಜಿಸಿದಂ  ೫೪

ಉ || ಸ್ವಸ್ತಿ ಸಮಸ್ತರಾಜಗುಣರಾಜಿತ ರಾಜಸಮಾಜಮಸ್ತಕ
ನ್ಯಸ್ತ ಪದಾರವಿಂದನರವಿಂದಮಹೀಪತಿ ವಜ್ರವೀರನಂ
ವಾಸ್ತವಭಕ್ತಿಯುಕ್ತನನನಾಗ್ರಹದಿಂ ಬೆಸದಿರ್ಪನೆಂಬುದುಂ
ದುಸ್ತರ ಕೋಪವಹ್ನಿಗೆ ಘೃತಾಹುತಿಯಾಯ್ತದು ತನ್ನೃಪಾಳನಾ   ೫೫

ವ || ತತ್ಪತ್ರವಾಚನಾನಂತರಂ

ಚಂ || ಕುಡುವುದು ಕಪ್ಪಮಂ ನಡೆವುದಾಳ್ವೆಸದಿಂದಮೆ ಮುನ್ನಿನಂದದಿಂ
ಬಿಡುವುದು ದರ್ಪಮಂ ಪಡೆವುದಾಳ್ದನದೊಂದು ಮನಃಪ್ರಸಾದಮಂ
ತಡೆವುದು ಬುದ್ಧಿಯಲ್ತಧಿಕನಪ್ಪವನೊಳ್ ಬಳಹೀನನಪ್ಪವಂ
ತೊಡರ್ದೊಡೆ ಕೇಡು ತಪ್ಪದೆನುತುಂ ನುಡಿದಂ ನಯಶಕ್ತಿಕೋವಿದಂ            ೫೬

ಕಂ || ಎಱಗಿದನಿತಱೊಳೆ ಮಱೆವಂ
ಪೆಱರಱಿಯಮೆಗಳನೆನಿತ್ತನಾದೊಡಮದಱಿಂ
ದೆಱೆಗಿ ಪತಿಗಾತ್ಮಪದದೊಳ್
ಮೆಱೆದಿರು ನೃಪರೊಳಗೆ ಧರ್ಮವಿಜಯಿ ಮದೀಶಂ        ೫೭

ನಿನ್ನಾಚರಿಸಿದ ತಪ್ಪಂ
ಮುನ್ನಂ ಬೆಸಕೆಯ್ದುದರ್ಕೆ ಮನ್ನಿಪೆ ನಾನೆಂ
ಬುನ್ನತಿಗೆ ನೃಪತಿ ಕೞುಪಿದ
ನೆನ್ನನಿದಂ ಬಗೆದು ಪತಿಗೆ ವಿನಮಿತನಾಗಾ        ೫೮

ವ || ಎಂದು ತನ್ನನಧಃಕರಿಸಿದ ದೂತನ ಮಾತಂ ಕೇಳ್ದು

ಮ || ಘನದೂತೋಕ್ತಿಸಮೀರಣಪ್ರಚಳಿತಂ ಸ್ಥೂಳಾಯತಶ್ಮಶ್ರುಲೇ
ಖೆ ನವೀನೋದ್ಧತಧೂಮಲೇಖೆ ನಯನೋದ್ಯಚ್ಛೋಣಿಮ ಜ್ವಾಲೆ ಸಂ
ಜನಿತಸ್ವೇದಜಲಂ ಘೃತಾಹುತಿಯೆನಿಪ್ಪನ್ನಂ ಸ್ವವಂಶಪ್ರಣಾ
ಶನದಾವಾಗ್ನಿವೊಲುರ್ವಿ ಕೊರ್ವಿದುದು ಭೂಪಾಲಂಗೆ ಕೋಪಾನಳಂ           ೫೯

ವ || ಅಂತು ಮುನಿಸಂ ಮೊಗಕ್ಕೆ ತಂದಿಂತೆಂದಂ

ಕಂ || ಅಹಿತಹಿತ ನಿಗ್ರಹಾನು
ಗ್ರಹವಿಧಿದಕ್ಷಂಗೆ ವಿಹಿತಮಂ ನೀಂ ನಿನ್ನಾ
ಮಹಿಪಾಳನೊಳಾರೋಪಿಸಿ
ಮಹತ್ವಮಂ ನುಡಿದೊಡಾರುಮೇಂ ಸೈರಿಪರೇ ೬೦

ವಸುಧೆಗಧೀಶ್ವರನಾನೆಂ
ಬೆಸಕಂ ಮಿಗೆ ನಿನ್ನನಟ್ಟಿದಂ ನೆಟ್ಟನೆ ಭಾ
ವಿಸದಣಮೆ ವೀರಭೋಜ್ಯಾ
ವಸುಂಧರಾಯೆಂಬ ವಾಕ್ಯಮಂ ನಿನ್ನರಸಂ        ೬೧

ಕಪ್ಪಮನೆನ್ನೊಳ್ ಬೇಡುವ
ತಪ್ಪಂ ಸಾಧಿಸುವ ಸುಭಟನೃಪಾನಾವನೊ ಮುಂ
ತಪ್ಪವನಾಹವದೊಳ್ ಮುಂ
ತಪ್ಪವನೆಂದೆನೆ ಮದುಗ್ರಖೞ್ಗಾಹತಿಯಿಂ        ೬೨

ಆಳ್ವೆಸನಂ ಪೇೞ್ವೊಡದಂ
ಕೇಳ್ವುದು ನೀನೆಂಬುದುಚಿತಮಿದಿರಂ ಗೆಲ್ವೀ
ತೋಳ್ವಲಮನೆನ್ನ ದುರ್ಗಮ
ನಾಳ್ವಲಮಂ ಗೆಲ್ವ ಬಲ್ಪದುಳ್ಳೊಡೆ ಧುರದೊಳ್         ೬೩

ಉ || ತನ್ನ ಪೊಡರ್ಪಿನಿಂದಮೆ ಸಮಸ್ತ ಧರಿತ್ರಿಯ ದರ್ಪಮಪ್ಪುದಂ
ಮುನ್ನಮಡಂಗಿಪಾ ಸಿಡಿಲ ಡಾಣೆಗೆ ವಜ್ರದ ಕಟ್ಟುಗೊಟ್ಟವೋ
ಲೆನ್ನಯ ತೋಳ್ವಲಕ್ಕೆ ನೆರಮಾದರನೇಕ ಧರಾಧಿನಾಥರ
ತ್ಯುನ್ನತಶೌರ್ಯರೆಂದೊಡಿದಿರಾಂಪವರಾರೆನಗಾಜಿರಂಗದೊಳ್      ೬೪

ಕಂ || ವಾಹಿನಿ ಮೊದಲೊಳ್ ಕಿಱಿದಂ
ದಾ ಹದದೊಳ್ ದಾಂಟಿದಂತೆ ಬಹುವಾಹಿನಿಯಾ
ದೀ ಹದದೊಳ್ ದಾಂಟುವರಾ
ರೀ ಹದನಂ ನಿನ್ನಧೀಶನವಧಾರಿಸನೇ  ೬೫

ಬಿಡದೆನ್ನ ಕೋಂಟೆಯಂ ನೆನೆ
ವೊಡೆ ಮನಮೀಕ್ಷಿಪೊಡೆ ದಿಟ್ಟಿ ಕೊಳ್ಳವು ಕೇಳೆಂ
ದೊಡೆ ಮುಳಿದು ಕೊಳ್ವನಾವಂ
ಗಡೆನುತ್ತುಂ ನುಡಿದನಾರ್ಪುಮಂ ದರ್ಪಮುಮಂ            ೬೬

ಮಾರ್ಗವಿರೋಧಮನೊಡರಿಸಿ
ದುರ್ಗಮನಿದನಾರೊ ಕೊಳ್ವ ತೇಜಸ್ವಿಗಳಿಂ
ನಿರ್ಗಹನದಿನನ ತೇರ್ಗಂ
ಮಾರ್ಗವಿರೋಧಮನೆ ಮಾೞ್ಪುದೆನೆ ತುಂಗತೆಯಿಂ         ೬೭

ಆಶಂಕೆಯನುೞಿದು ನಿಜಾ
ಧೀಶಂ ನಯಹೀನನಟ್ಟಿದೊಡೆ ನೀಂ ತಮದಾ
ದೇಶಮಿದು ನಿಮ್ಮ ದೇಶವಿ
ನಾಶಮನಾಂ ಮಾಡುವೆಡೆಗೆ ಸಿದ್ಧಾದೇಶಂ       ೬೮

ಆದರಿಪರಲ್ಲಿಗಟ್ಟವು
ದಾದೇಶಮನುಚಿತಮಲ್ಲದೆನಗಟ್ಟಿದ ನಿ
ಮ್ಮಾದೇಶವೆಲವೊ ಚರ ನಿ
ಮ್ಮಾದೇಶಮನೀವುದರ್ಕೆ ಸೂಚಕಮಲ್ತೆ          ೬೯

ಅರಸಂ ವೃದ್ಧನಮಾತ್ಯಂ
ಪರಿಕಿಸೆ ಶಿಶು ದೇಶ ಕಾಲಮಂ ಸ್ವಪರಬಳಾಂ
ತರಮನಱಿವನ್ನರಿನ್ನಾರ್
ನಿರುಪಮಮತಿ ವಿಶ್ವಭೂತಿಯಿಲ್ಲಪ್ಪುದಱಿಂ  ೭೦

ಉ || ಅಲ್ಲದೊಡೇಕೆ ನಿನ್ನನಿನಿತಂ ನುಡಿದಟ್ಟದನಟ್ಟಿದಂದದಿಂ
ನಿಲ್ಲದೆ ನಾಳೆ ಕಾಳೆಗಕೆ ಸಂಗರರಂಗದೊಳೊಳ್ಕದೊಡ್ಡವೇೞ್
ಬಲ್ಲಿದರಾರ್ ವಿಹೀನಬಳರಾರ್ ವಿಭುವಾರ್ ಗೞ ಭೃತ್ಯರಾರಿವಿಂ
ತೆಲ್ಲವನಲ್ಲಿ ನಿನ್ನ ಪತಿಗಂ ನಿನಗಂ ನೆಱೆ ತೋಱಿದಪ್ಪೆನಾಂ        ೭೧

ವ || ಎನೆ ದೂತನಿಂತೆಂದಂ

ಕಂ || ವಿಕ್ರಮಜಸದೊಳ್ ಸೀಮಾ
ತಿಕ್ರಮಮಂ ಯುವತಿಕುಚದೊಳುದ್ವೃತ್ತತೆಯಂ
ವಕ್ರೋಕ್ತಿಯನತಿಶಯಕವಿ
ಚಕ್ರಂಗಳೊಳಲ್ಲದಧಿಪನೇಂ ಸೈರಿಪನೇ           ೭೨

ಲೋಕಾಧಿಪತಿಯನೇೞಿಸು
ವೀ ಕುನಯಮನಿತ್ತು ಕೇಡನೊಡರಿಸುವ ನೃಪಾ
ನೀಕದ ಪಕ್ಷಂಬಡೆದಿಂ
ತೇಕಿಱುಪೆಗೆಱಂಕೆ ಮೂಡಿದವೊಲಾದಪೆ ನೀಂ     ೭೩

ಚಂ || ಅಸಮಪರಾಕ್ರಮಾಧಿಕ ಮೃಗಾಧಿಪನೊಳ್ ಸಮರಕ್ಕೆವರ್ಪ ಸಾ
ಹಸದಿನಿಭೇಂದ್ರಮನ್ಯಮೃಗಜಾತಿಗಳೊಳ್ ನಿಜಜಾತಿವೈರಮಂ
ಬಿಸುಟೊಡಗೂಡುವಂದದೊಳೆ ನಿನ್ನೊಡಗೂಡಿದ ಭೂಪರುಂ ಮದ
ಪ್ರಸರದೆ ನೀನುಮಾಂತು ನಿಲೆ ಗೆಲ್ಲದೆ ನಿಲ್ಲನಧೀಶನಾಜಿಯೊಳ್    ೭೪

ಕಂ || ಪೆಸರ ಗಿರಿದುರ್ಗಮೊಲೆಗ
ಲ್ಗೆಸರ್ಗೆ ಜಲದುರ್ಗಮಿಂಧನಕ್ಕೆಯ್ದುವಗು
ರ್ವಿಸುವ ವನದುರ್ಗಮೆನೆ ಮ
ದ್ವಸುಧಾಧೀಶ್ವರನ ಬಲಮನಾಂಪವರೊಳರೇ ೭೫

ಜಿನಪತಿಯ ಸೇನೆಗಾಪೋ
ಶನಕ್ಕೆ ಜಲದುರ್ಗವಚಳದುರ್ಗಂ ಪದಘ
ಟ್ಟನೆಗದಱ ಗುಡಿಯ ಗೂಂಟ
ಕ್ಕೆನಸುಂ ವನದುರ್ಗಮೆಯ್ದವೆನೆ ಕಾದುವರಾರ್            ೭೬

ರಣಬಾಳಕನಪ್ಪೈ ನೀಂ
ರಣಪರಿಣತವಯಸನಪ್ಪನವನೀಪತಿ ನೀ
ನೊಣರ್ದಂತೆ ತರುಣತರಣಿಯೊ
ಳೆಣೆ ಸಚಿವಂ ನಯಪಥಪ್ರಕಾಶನಗುಣದಿಂ        ೭೭

ಪತ್ರಮನಿದನವನೀಪತಿ
ಸೂತ್ರಿಸಿದವೊಲುತ್ತಮಾಂದೊಳ್ ತಾಳ್ದಿ ಭವ
ದ್ಧಾತ್ರಿಯನಾಳಲ್ಲದೊಡಸಿ
ಪತ್ರಂ ನಿಜಮಸ್ತಕಕ್ಕೆ ತಡೆಯದೆ ಬರ್ಕುಂ           ೭೮

ವ || ಎಂದು ನುಡಿದ ನುಡಿಗೆ ಕಿಡಿಕಿಡಿವೋಗಿ ಸಿಡಿಲ ಕಿಡಿಯಂ ತಳದೊಳೊರ ಸುವಂತೋಲೆಯಂ ಮುಱಿದೊರಸಿ ಕಳೆಯೆ ದೂತಂ ಯಮದೂತನಂತೆ ಕನಲ್ದಿಂತೆಂದಂ

ಕಂ || ಆಳೋಚಿಸದವಲೇಪದಿ
ನೋಲೆಯಿನಿದನುಱದೆ ಮುಱಿದು ಕಳೆದೈ ನಿನಗಂ
ಕಾಳನೆ ಕನಲ್ದು ನಿಜವಂ
ಶ್ಶಾಳಿಗಮೋಲೆಯನೆ ಮುಱಿದನೆಂದಱಿ ಪೆಱತೇಂ          ೭೯

ನಯಮಂ ಕೈಕೊಳ್ಳದ ನಇ
ನ್ನಯ ವಕ್ರತೆಯಂ ಮದೀಶನಿಶಿತಾಸಿಭವಾ
ಗ್ನಿಯೆ ನೀಳ್ದು ತಿರ್ದುಗುಂ ಪು
ಳ್ಳಿಯ ಕೊಂಕಂ ಕಿರ್ಚು ತಿರ್ದುವಂತಾಹವದೊಳ್            ೮೦

ಮೃದುನಯಯುತಬಾಣಂ ನಿಜ
ಹೃದಯಂಗಮಮಾಗದಿರ್ದೊಡಂ ರಿಪುಭಯದಿಂ
ಮದಧೀಶನ ಘನಬಾಣಂ
ಹೃದಯಂಗಮಮಾಗದಿನಿಸಿದೇಂ ನಿಂದಪುದೇ    ೮೧

ಎನೆ ಮುನಿದು ವಜ್ರವೀರಂ
ಘನಪೀಠದಿನೆೞ್ದು ವಜ್ರನಿರ್ಷೋಷದವೋ
ಲನಯಪರಂ ಪೊಳೆವಸಿ ಮಿಂ
ಚನಿೞಿಸೆ ಪೊಯ್ಯಲ್ಕೆ ನಿಳ್ಕಿದಂ ನೃಪಚರನಂ     ೮೨

ವ || ಅಂತು ಕಲ್ಪಾಂತಕೃತಾಂತನಂತೆ ಮುಳಿದು ನಯಮನುೞಿದು ಬಾೞೆನೆಂಬುದಂ ಪೇೞ್ವಂತೆ ಬಾಳಂ ಕಿೞ್ತು ಪೊಯ್ಯಲೆೞ್ದನನಾರಯ್ಯದಿಂತಕಾರ್ಯಮಂ ದೂತನೇಗೆಯ್ದೊಡಂ ಪ್ರಭುವೆನಿಪಂ ನೆಗೞಲಾಗದೆಂದು ನುಡಿದು ಕೆಯ್ಯಂ ಪಿಡಿದಾತನಿಗಾಪ್ತರೆನಿಪ್ಪ ಮಾತ್ಯರ್ ನಯವಿದರ್ ನಿವಾರಿಸೆ ತದನಂತರಮಿಂತೆಂದಂ

ಕಂ || ಅವಿನಯಮಂ ಗೞಪಿದ ಚರ
ನವಧ್ಯನಾದೊಡಮಿವಿನಿತುಮಂ ಗೞಪಲ್ ಪೇ
ೞ್ದವನೆ ದಿಟನವಧ್ಯನೆ ಆ
ಹವದೊಳ್ ಚಂಡಾಸಿಯಿಂದೆ ಖಂಡಿಪೆನವನಂ    ೮೩

ವ || ಅಂತಾತನುದ್ಧತೆಯುಮನನ್ಮತ್ತತೆಯುಮಂ ಕಂಡು ದೂತಂ ಮತ್ತಮಿಂತೆಂದಂ

ಮ || ಪ್ರತಿಕೂಲೋಕ್ತಿಗಳೆನ್ನ ಮಾತುಗಳಿವಜ್ಞರ್ಗಂ ವಿವೇಕಾನ್ವಿತ
ರ್ಗತಿಪಥ್ಯಂಗಳೆನಿಕ್ಕುಮಿಂತಿನಿತುಮಂ ನೀನೀಗಳೆಂತುಂ ಮದೋ
ದ್ಧತನೈ ಕಾಣೆ ಮದೀಶ್ವರಂ ಬರೆ ರಣಪ್ರಾರಂಭದೊಳ್ ನಾಳೆ ನೀ
ಶ್ಚಿತಮಾಗುತ್ತಿರೆ ಕಾಣ್ಪೆಯೆಂದು ನುಡಿದಂ ನಿರ್ಭೀತಚೇತಂ ಚರಂ   ೮೪

ಚಂ || ಅವನತನಾದೊಡಂ ವಿಭುಗೆ ಭೀತಿಯಿನಾಜಿಯೊಳೋಡಿಪೋದೊಡಂ
ವಿವಿಧಮೃಗೇಕ್ಷಣಾಳಿ ವಿಳಸದ್ಭುವನಾಶ್ರಯಮುದ್ಘಸಾಲಮೊ
ಪ್ಪುವ ಕಟಕಂ ಸುವಂಶವಿಭವಂ ನೆಗೞ್ದೇಂ ಧನಮುಳ್ಳ ದೇಶಮೆಂ
ಬಿವು ದೊರೆಕೊಳ್ವುವೆಂಬ ಬಗೆಯಿಂದಮೆ ನೀಂ ನುಡಿವೈ ದುರುಕ್ತಮಂ         ೮೫

ಕಂ || ಎಂತುಱದಿಱಿದೈ ದೇಶಮ
ನೆಂತೀಶಾದೇಶಮಂ ಸಮುಲ್ಲಂಘಿಸಿದೈ
ಎಂತೆನ್ನೊಳೆಡಱಿ ನುಡಿದೈ
ಅಂತೆ ರಣಾಂಗಣದೊಳೊಡ್ಡಿ ನಿಲ್ ನಿರ್ಭಯದಿಂ           ೮೬

ವ || ಅಂತು ನಯಾಕ್ರಾಂತಸ್ವಾಂತರ್ಗೆ ಸಂತೋಷಮುಮಂ ದುರಾಗ್ರಹಗ್ರಸ್ತರ್ಗೆ ವಿಗ್ರಹಾಗ್ರಹಮುಮಂ ಪುಟ್ಟಿಸುತ್ತುಮಾಸ್ಥಾನಮಂ ಪೊಱಮಟ್ಟು ಕತಿಪಯಪ್ರಯಾಣದಿಂ ನಿಜರಾಜಧಾನಿಯನೆಯ್ದೆವಂದು ಪುರಮುಮನರಮನೆಯುಮಂ ಪೊಕ್ಕು ಸಮುದ್ದಂಡ ಮಂಡಳಿಕಮಂಡಳಿಮಂಡಿತಾಸ್ಥಾನಮಂಡಪ ಮಧ್ಯಸ್ಥಿತ ಸಿಂಹಾಸನಾಸೀನನಾಗಿರ್ದರವಿಂದ ಮಹಾರಾಜನ ಪಾದಾರವಿಂದಕ್ಕೆ ಸಾಷ್ಟಾಂಗಮೆಱಗಿ ಪೊಡಮಟ್ಟು ತನ್ನ ಪೋದ ಬಂದ ವೃತ್ತಾಂತಮೆಲ್ಲಮಂ ಮುಕುಳಿತಹಸ್ತಂ ಸವಿಸ್ತರಂ ಬಿನ್ನವಿಸಿ ಮತ್ತಮಿಂತೆಂದಂ

ವೃ || ಘನವಜ್ರೋದ್ಗರ್ವದವಾಗ್ನಿ ಮತ್ಪತಿಯ ಕೋಪಾಟೋಪಮೆಂದಂದು ವೈ
ರಿನಿಕಾಯಕ್ಕೆ ಮಹೀಧ್ರವಾರಿವನದುರ್ಗಂ ನಿಷ್ಫಳಂ ದುರ್ಗಮಾ
ತನ ಕಾರುಣ್ಯಮೆ ನೀನಿದಂ ಪಡೆವುದೆಂದಾನೆಂದೊಡಂ ವಜ್ರವೀ
ರನುದಗ್ರಂ ನಿಜದುರ್ಗಮಂ ಬಲಿದುಕೊಂಡಿರ್ಪಂ ರಣೋದ್ಯೋಗದಿಂ           ೮೭

ಕಂ || ಭೀತರನಪಮಾನಿತರಂ
ಮಾತೇನೊಡಗೂಡಿಕೊಂಡು ನಮ್ಮೊಳ್ ರಣಸಂ
ಜಾತಪ್ರೀತಿಯೊಳಿರ್ದಪ
ನೀ ತೆಱದಿಂ ವಜ್ರವೀರನತಿದುರ್ವಾರಂ ೮೮

ಬವರಂ ನಮ್ಮೊಳ್ ಬೇಡೆಂ
ಬವರಂ ಕಡೆಗಣಿಸಿ ಜಡಿದು ಕಡುಪಿಂ ನುಡಿವಂ
ಜವನಂ ತೊಡರ್ದೆಡೆಯೊಳಗಂ
ಜವನಂ ನೀನಲ್ಲದುೞಿದರಳವಡಿಸುವರಾರ್    ೮೯

ವ || ಎಂದಿಂತು

ಶಾ || ದೂತಂ ಸಂಗರಮಂ ನಿರೂಪಿಸೆ ಜಯಶ್ರೀಸಂಗಮಂ ತನ್ನೊಳೀ
ಮಾತಿಂದಾದಪುದೆಂಬ ವಾರ್ತೆಯನೆ ಕೇಳ್ದಂತಾಹವಕ್ಷೋಣಿ ಸಂ
ಕೇತ ಸ್ಥಾನಮೆನುತ್ತುಮಾದೊಲವಿನಿಂದೇಕಾಂಗದಿಂ ಪೋಪ ವಿ
ಖ್ಯಾತೋತ್ಸಾಹಮನಪ್ಪುಕೆಯ್ದನತಿ ಧೀರೋದಾತ್ತ ಭೂಪೋತ್ತಮಂ         ೯೦

ಕಂ || ಸ್ಪಷ್ಟಮೆನಗಿಷ್ಟಮೇವ ಹಿ
ಚೇಷ್ಟಿತಮೆಂಬುಕ್ತಿಯಾಯ್ತು ನೆರೆದರ್ ತಮ್ಮೊಳ್
ದುಷ್ಟನೃಪರೆಂದು ಭೂಪಂ
ಹೃಷ್ಟತೆಯಂ ತಳೆದನೊರ್ಮೊದಲ್ ತವಿಪಾರ್ಪಿಂ           ೯೧

ರಿಪುವೆನಿಪ ಚಂದ್ರನಂ ರಾ
ಹು ಪೂರ್ಣನಂ ಕಿಡಿಸುವಂತೆ ವಿಕ್ರಮಿಯೆನಿಪಾ
ನೃಪನುಂ ಪಗೆಯಂ ಲಕ್ಷ್ಮೀ
ಪ್ರಪೂರ್ಣನಂ ಕಿಡಿಸದಂದದೇಂ ಸಾಹಸಮೇ      ೯೨

ವ || ಎಂದು ತನ್ನುದಾತ್ತವೃತ್ತಿಯಂ ರಾಜಲೋಕಕ್ಕೆ ತಿಳಿಪಿ ಬೞಿಯಂ ಬಳಾಧ್ಯಕ್ಷನ ನಕ್ಷೂಣಸಮರದಕ್ಷನಂ ಬರಿಸಿ ವಿಜಯಪ್ರಯಾಣಭೇರಿಯಂ ಪೊಯ್ಸೆಂದು ನಿಯಾಮಿಸೆ

ಮ || ಧರೆಯೊಳ್ ತಂಗತರಂಗವಾರಿಧಿರವಂ ಶೈಳಂಗಳೊಳ್ ಸಿಂಹಸಂ
ಘರವಂ ನೀರದಮಾರ್ಗದೊಳ್ ಘನರವಂ ದಿಗ್ವ್ರಾತದೊಳ್ ದಿಕ್ಕರೀಂ
ದ್ರರವಂ ಪೊಣ್ಮಿದುದೆಂಬಿನಂ ಭುವನಮಂ ತೀವಿತ್ತು ವಿಖ್ಯಾತನ
ಪ್ಪರವಿಂದಕ್ಷಿತಿನಾಥವಿಸ್ತೃತಜಯಪ್ರಸ್ಥಾನಭೇರೀರವಂ   ೯೩

ಜಯಸಂವಾದಕವಂದಿವೃಂದಕುಲವೃದ್ಧಾಶೀರ್ನಿನಾದಂ ಶುಭೋ
ದಯಗೇಯಧ್ವನಿ ಪುಣ್ಯಪಾಠಕರವಂ ತೂರ್ಯಸ್ವನಂ ತೀವೆ ದಿ
ಕ್ಚಯಮಂ ಪುಣ್ಯ ವಧೂಜನಂ ಪರಸಿ ಮುಕ್ತಾನೀಕದಿಂ ತೀವೆ ಶೇ
ಷೆಯನುದ್ಯಚ್ಛುಭಲಗ್ನದೊಳ್ ವಿಜಯಯಾತ್ರೋದ್ಯುಕ್ತನಾದಂ ನೃಪಂ     ೯೪

ವ || ಅಂತು ಸಮರೋದ್ಯುಕ್ತಚಿತ್ತನಾಗಿ ಮೌಹೂರ್ತಿಕ ಸಂಕೀರ್ತಿತ ಶುಭಮುಹೂರ್ತದೊಳುತ್ತುಂಗ ಮದಾಂಧಸಿಂಧುರಸ್ಕಂಧಾಧಿರೂಢನಾಗಿ ಆರೂಢವಿದ್ಯಾಪ್ರೌಢಂ ಪ್ರಬಳ ಬಳರಾಜಸಮಾಜಂಬೆರಸು ಪಣಿತೋರಣರಾಜಿವಿರಾಜಿತ ರಾಜವೀಥಿಯೊಳಗಾನೆಯ ಮೇಲಪೂರ್ವ ರೂಪಕಂದರ್ಪನಂತೆ ಬರ್ಪಲ್ಲಿ

ಕಂ || ಅರವಿಂದರಾಜನಂ ಪುಂ
ಡರೀಕಮೋಲಗಿಸಲೆಂದು ಬರೆ ಹಂಸೆಗಳಾ
ದರದಿನೊಡವಂದುವೆಂಬಂ
ತಿರೆ ಬೆಳ್ಗೊಡೆ ಚಾಮರಂಗಳೆಸೆದುವು ನಿಸದಂ     ೯೫

ಕೂರಂಕುಶದಿಂದರಸಂ
ವಾರಣಮಂ ಪಿಡಿಯೆ ಹಾರಮಬಳಾಚೇತೋ
ವಾರಣಮನಮರೆ ಪಿಡಿದುದು
ರೋರಂಗದೊಳೆಸೆಯೆ ನರ್ತಿಸುತ್ತಾ ಕ್ಷಣದೊಳ್  ೯೬

ಕಂ || ಅರವಿಂದಮಹಾರಾಜನ
ಬರವಿಂ ಮುಖಕಮಳಮಲರೆ ನಲಿವ ರಥಾಂಗ
ಕ್ಕಿರದೆ ಕದಕ್ಕದಿಪ ಕುಚಂ
ದೊರೆಯೆನೆ ಪರಿತಂದು ತರುಣಿ ನೋಡಿದಳೊರ್ವಳ್       ೯೭

ಮ || ಅಲರಂಬಂ ಗೆಲೆ ಕಣ್ಮಲರ್ ಮದನಚಾಪಾಟೋಪಮಂ ಪುರ್ವುಗಳ್
ಗೆಲೆ ಪೂರ್ಣೇಂದುವನಾನನಂ ಗೆಲೆ ಶಿರೀಷೋದ್ದಾಮದಾಮಂಗಳಂ
ಗೆಲೆ ತೋಳ್ಗಳ್ ಗೆಲೆವಂದು ಕಾಮಸತಿಯಂ ಕಣ್ಗೊಪ್ಪುತಿರ್ಪಾಕೆ ಪೋ
ಲ್ತಿಳೆಯಂ ಪಾಲಿಸುವಂಗೆ ವೈರಿಜಯಮಂ ಸೂಚಿಪ್ಪವೋಲ್ ನೋಡಿದಳ್    ೯೮

ವ || ಅಂತು ಸಕಲಕಾಂತಾಜನಸ್ವಾಂತಮಂ ಕಂತುಶರಾಕ್ರಾಂತಮಂ ಮಾಡುತ್ತುಂ ರಾಜರಾಜಂ ರಾಜಧಾನಿಯಂ ಪೊಱಮಟ್ಟು

ಕಂ || ಎತ್ತಿದ ಗುಡಿಗಳೆ ಗೆಲ್ವಿಂ
ಗೆತ್ತಿದ ಗುಡಿ ತೂರ್ಯರವಮೆ ಜಯತೂರ್ಯರವಂ
ಮತ್ತೆನಿಸದಪ್ಪುದೆನೆ ಭೂ
ಪೋತ್ತಮನಾತ್ಮೀಯಶಿಬಿರಮಂ ಪುಗುತಂದಂ   ೯೯

ವ || ಅಂತು ಮುನ್ನಮೆ ತನ್ನ ನಿಯಮದಿಂ ಗೃಹಮಹತ್ತರಂ ಬಿತ್ತರಿಸಿದ ಬೀಡಿನ ಚೆಲ್ವಂ ನೀಡುಂ ಭಾವಿಸಿ ನೋಡೆ

ಉ || ಕೆಂಗುಡಿಗಳ್ ತಳಿರ್ತಸುಕೆ ಕರ್ಗುಡಿ ಬಾಳತಮಾಳಮಾ ಪಸು
ರ್ಪಿಂಗೆಡೆಗೊಂಡು ತೋರ್ಪ ಗುಡಿ ತಳ್ತು ಮಡಲ್ತೆಳೆಮಾವು ಬೆಳ್ಪನಾ
ಲಿಂಗಿಸೆ ಚೆಲ್ವುವೆತ್ತ ಗುಡಿ ಮಲ್ಲಿಗೆಯಂದದಿನೊಪ್ಪೆ ಕಂತುರಾ
ಜಂಗಿರವಾದ ನಂದನವನಕ್ಕೆಣೆಯಾದುದು ಬೀಡು ಭೂಪನಾ         ೧೦೦

ವ || ಮತ್ತಮಲ್ಲಿ

ಕಂ || ಅಳಿರುತಿಯಂ ಗೆಲೆ ಲಲನಾ
ವಳಿ ಮಂಗಳಗೀತಕಳನಿನಾದಂ ಕ್ರೀಡಾ
ಚಳಮಂ ಗೆಲೆ ಗೂಡಾರಂ
ಗೆಲೆವಂದುದು ಚಂಪೆಯಂ ಲತಾಮಂಡಪಮಂ   ೧೦೧

ವ || ಅಂತುಪೂರ್ವೋಪಮೆ ಗಡರ್ಪಾಗಿರ್ಪುದುಂ

ಮ.ಸ್ರ || ಅರವಿಂದಕ್ಷೋಣಿಪಾಳಂ ಪಟುಪಟಹರವಾಕ್ರಾಂತ ದಿಕ್ಚಕ್ರವಾಳಂ
ಪುರುಸೈನ್ಯಂ ಸದ್ವದಾನ್ಯಂ ಸಕಳಶಕುನಸಂಸೂಚಿತಾರಾತಿಚೈತ್ರಂ
ಸ್ಥಿರಸತ್ವೋದ್ಯಚ್ಚರಿತ್ರಂ ವಿಜಯಶಿಬಿರಮಂ ಬಂದು ಪೊಕ್ಕಂ ಯಶೋಮಂ
ದಿರವಂದಿಸ್ತೋತ್ರಪಾತ್ರಂ ಸುಕವಿಜನಮನಃಪದ್ಮಿನೀಪದ್ಮಮಿತ್ರಂ   ೧೦೨

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳ ಧರ್ಮ ವಿನುತ ವಿನೇಯಜನವನಜವನ ವಿಳಸಿತ ಕವಿಕುಳತಿಳಕ ಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್ ಅರವಿಂದಮಹಾರಾಜ ವಿಜಯಯಾತ್ರೋತ್ಸವ ವರ್ಣನಂ ದ್ವಿತೀಯಾಶ್ವಾಸಂ