ಕಂ || ಶ್ರೀರಮಣನನಂತರಮವ
ನೀರಾಜಿತ ರಾಜಭವನಮಂ ಮಣಿವಿಳಸ
ತ್ತೋರಣಮಂ ನಯನೋತ್ಸವ
ಕಾರಣಮಂ ಪೊಕ್ಕನೊಸೆದು ಕವಿಕುಳತಿಲಕಂ      ೧

ಅರಸನೊಡವಂದ ಮಂತ್ರೀ
ಶ್ವರರಂ ಮಂಡಳಿಕರಂ ಮಹೀನುತ ಸಾಮಂ
ತರನಖಿಳಪರಿಗ್ರಹಮಂ
ಪರಿವಿಡಿಯಿಂದಱಿದು ಬಿಡಿಸಿದಂ ಪಡೆವಳ್ಳಂ    ೨

ವ || ಅಂತರಸಂ ಪೊಱವೀಡಂ ಬಿಟ್ಟಿರೆ ಮರುಭೂತಿ ಭೂತಳಪತಿಯೊಡನೆ ನಡೆಯಲ್ವೇಡಿ ನಿಜಜನನಿಯಪ್ಪನುಂದರಿಯ ನಿಜಾಗ್ರಜನಪ್ಪ ಕಮಠನ ಸಮೀಪಕ್ಕೆ ವಂದು

ಕಂ || ಅರಸಂ ವೈಹಾಳಿಗೆ ಸಂ
ಚರಿಸಲೊಡಂ ಪಿಂದೆ ನಿಲ್ವುದನುಚಿತಮೆನೆ ಸಂ
ಗರದೆಡೆಗೆ ನಡೆಯೆ ತಡೆವುದು
ಪರಿಭಾವಿಸೆ ಸೇವಕಂಗೆ ಪಾೞಿಯೆ ಪೇೞಿಂ       ೩

ಅದುಕಾರಣದಿಂ ನೀಮುಂ
ಮದಗ್ರಜನುಮೆನಗೆ ನಿಯಮಿಸುವುದಂ ತಡಮಿ
ಲ್ಲದೆ ನಿಯಮಿಸಿ ಕಳಿಪುವುದೆಂ
ದುದಾತ್ತಮತಿ ನುಡಿದು ಮತ್ತವರ್ಗಿಂತೆಂದಂ     ೪

ನಿಮ್ಮ ಪರಿವಾರಮಂ ಸೊಸೆ
ಯಮ್ಮುನ್ನಿನ ಮಾೞ್ಕೆಯಿಂದೆ ಬೆಸಕೆಯ್ಸಿಕೊಳು
ತ್ತುಮ್ಮಳಿಸದಿರ್ಪುದಂಬಿಕೆ
ನಿಮ್ಮಾಶೀರ್ವಾದಮೆನೆಗ ವಜ್ರದ ಕವಚಂ         ೫

ಎನ್ನಿಂದಮಧಿಕಮೆನೆ ಸೊಸೆ
ಯನ್ನಡೆಯಿಪ ಸೊಸೆಯಿನಗ್ಗಳಂ ಕೆಳದಿಯರಂ
ಮನ್ನಿಸಿ ನಡೆಯಿಪ ಮೈಮೆ ನಿ
ಜನ್ನಿಮಗೆನೆ ಮಗುೞೆ ಜನನಿ ಬಿನ್ನವಿಸಲದೇಂ  ೬

ವ || ಎಂದು ಪರಿಜನಮಂ ಸಮರ್ಪಿಸುವ ನೆವದಿಂದ ಚತುರವಚನವಿಚಕ್ಷಣಂ ಪ್ರಾಣೇಶ್ವರಿಯೆನಿಪ್ಪ ವಸುಂಧರೆಯಂ ಸಮರ್ಪಿಸಿ

ಕಂ || ಭರದಿಂದೆಱಗಿದನನನುಂ
ದರಿ ಮಗನಂ ತೆಗೆದು ಬಿಗಿದು ತೞ್ಕೈಸಿ ಗುಣಾ
ಭರಣ ನಿಜವಿಜಯಭುಜದೊಳ್
ಧರಿಯಿಸು ಜಯವಧುವನೆಂದು ಪರಸಿದಳೊಲವಿಂ         ೭

ವ || ಅಂತು ತಾಯ ನಲ್ವರಕೆಗಳಂ ತಳೆದು ಬೞಿಯಂ ನಿಜಾಗ್ರಜಂಗೆ ಕೆಯ್ಗಳಂ ಮುಗಿದು

ಕಂ || ಗುರು ನಿಮ್ಮಂ ನಿಶ್ಚಿಂತದೊ
ಳಿರಿಸುವ ಭರದಿಂದೆ ಭಾರಮಪ್ಪುದನೆನ್ನೀ
ಶಿರದೊಳ್ ತಂದಿಟ್ಟೊಡಮೀ
ಗುರುಭಾರಂ ನಿಮ್ಮದೆನಗೆ ಗುರುವಪ್ಪದಱಿಂ   ೮

ಮ || ನಿಯತಂ ಸೇವಕನಪ್ಪವಂಗೆ ಪಸಿವಂ ನೀರೞ್ಕೆಯಂ ನೋಡದ
ಪ್ರಿಯಶೀತಾತಪಬಾಧೆಗೊಡ್ಡಿ ತನುವಂ ದುಃಖಂಬಡಲ್ವೇೞ್ಕುಮಾ
ರಯೆ ನೀಮಪ್ಪೊಡೆ ಸೌಖ್ಯಮೂರ್ತಿಗಳ ಪುಟ್ಟಿರ್ದಂತೆ ಕೆಯ್ ಬೇಯಲೇ
ಕೆಯೊ ಪೇೞೆಂದಿದನಾಂತೆನೀ ಪದಕೆ ನೀಮಿರ್ದಂತಿರಾ ಯೋಗ್ಯನೇ   ೯

ಕಂ || ಜಗತೀಭಾರಮನಿತರೋ
ರಗನಹಿರಾಜಂಗೆ ನಿರವಿಪುದನನುಕರಿಕುಂ
ನೆಗೞ್ದ ಗುರುಭಾರಮಂ ನೆ
ಟ್ಟಗೆ ನಿನಗಾನಗ್ರಜನ್ಮ ಬಿನ್ನವಿಪಂದಂ            ೧೦

ತಂದೆಯ ಪರೋಕ್ಷದೊಳ್ ನೀಂ
ತಂದೆಯೇ ಎನಗದಱಿನಮಳಗುಣಸಂಪದದೊಳ್
ನಿಂದ ನಿನಗಾವ ತೆಱದಿಂ
ನಿಂದೆ ದಿಟಂ ಪೊರ್ದದಂತು ನಡೆ ನಿಯತತೆಯಿಂ  ೧೧

ಜನನಿಗೆ ಬೆಸಕೆಯ್ವುದು ನಾ
ದುನಿಯಿಂ ಬೆಸಕೆಯ್ಸಿಕೊಳ್ವುದನವರತಂ ಸ
ಜ್ಜನಗೋಷ್ಠಿಯೊಳಿರ್ಪುದು ದು
ರ್ಜನವಂ ಪರಿಹರಿಪುದುೞಿವುದಸದಾಗ್ರಹಮಂ  ೧೨

ಭೋಗಮನನುಭವಿಸುವುದು
ದ್ವೇಗಂ ಪೆಱರ್ಗಾಗದಂದದಿಂ ತ್ಯಾಗಮನು
ದ್ಯೋಗಿಸುವುದು ಯಶಮಂ ಪು
ಣ್ಯಾಗಮಮಂ ಮಾಡಲಾರ್ಪುದಂ ನಯನಿಪುಣಾ            ೧೩

ವ || ಅಂತು ಮಂತ್ರಿಮುಖ್ಯಂ ಕಮಠಂಗೆ ಸಮಸ್ತಭಾರಮಂ ಸಮರ್ಪಿಸಿ ವಿನಯ ಪುರಸ್ಸರಂ ಬೀೞ್ಕೊಂಡಖಂಡಿತಪ್ರೇಮವಸುಂಧರೆಯೆನಿಸಿದ ವಸುಂಧರೆಯಂ ಸಾರಣೆ ಕರೆದು

ಕಂ || ತಡೆಯದೆ ಬರ್ಪೆಂ ನೆನೆದೆರ್ದೆ
ಗಿಡದಿರು ಮಜ್ಜನನಿಯಲ್ಲಿ ನೀಂ ನಯ ವಿನಯಂ
ಗಿಡದಿರು ದುಷ್ಟರ ನುಡಿಗೆಡೆ
ಗುಡದಿರು ಬಿಡದಿರು ಕುಲಕ್ರಮೋಚಿತಗತಿಯಂ  ೧೪

ಮ || ಇನಿಯಂ ಪೋದಪೆನೆಂದು ಬಂದಱಿಪೆ ದೀರ್ಘಶ್ವಾಸಮುಣ್ಮಿತ್ತು ಪ
ವ್ವನೆಪಾಱಿತ್ತೆರ್ದೆ ಗದ್ಗದಕ್ಕೆ ನುಡಿಗಳ್‌ಪಕ್ಕಾದುವಾಸ್ಯಂ ಹಿಮಂ
ತನಿ ಪೊಕ್ಕಿರ್ದಸರೋರುಹಕ್ಕೆ ಸರಿಯಾಯ್ತಂಗಂ ಗುರು ಗ್ರೀಷ್ಮತ
ಪ್ತ ನವೋದ್ಯಲ್ಲತೆಯಂತೆ ಕಂದಿತು ವಿಯೋಗೋದ್ವೇಗದಿಂ ಕಾಂತೆಯಾ       ೧೫

ಕಂ || ಇನನ ಬೞಿವಿಡಿದು ಪೋಗ
ಲ್ಕನುವಿಸಲಿನಿಯಂ ರಥಾಂಗಮಂ ಪೋಲೆ ಘನ
ಸ್ತನಿ ಚಕ್ರವಾಕದಂಗನೆ
ಯೆನೆ ನಿರ್ಭರವಿರಹವಿಧುರೆ ವಿಹ್ವಳೆಯಾದಳ್   ೧೬

ದಂಡಿಂಗೆ ಪೋಪೆನೆಂದೆನೆ
ಗಂಡಂ ನವಯುವತಿ ಭೀತಿಗೊಂಡಳ್ ಕೇಳ್ದು
ದ್ದಂಡಲತಾಂತಾಯುಧ ಕೋ
ದಂಡನ ದಂಡಿರದೆ ಮೇಲೆವಂದಂತಾಗಳ್         ೧೭

ವ || ಅದಂ ಕಂಡಿಂತೆಂದಂ

ಕಂ || ಕುಸುಮಸುಕುಮಾರ ತನು ನಸು
ವಿಸಿಲೆಳಸಿದ ಗಾಳಿ ಸೋಂಕಿದೊಡಮಿದು ಪೂವಂ
ಪೊಸೆದಂತೆ ಕಂದಿದಪುದೆಂ
ದಸಿಯಳೆ ಪೆಱಗಿರಿಸಿ ಪೋಪೆನಲ್ಲದಂದಿರಿಸುವೆನೇ          ೧೮

ವ || ಎಂದಿಂತು ಮೊದಲಾದ ಪಲವು ತೆಱದ ಸಾಂತ್ವವಚನಂಗಳಂ ನುಡಿದೆಂತಾನುಂ ಸಂತಯ್ಸೆ

ಮ || ಪುರುಷ ಕ್ಷೇಮವಿಶೇಷಮಂ ಬಯಸಿ ತನ್ನಂ ತಾನೆ ಸಂತೈಸಿ ಚೆ
ಚ್ಚರಮಾರ್ದ್ರಾಕ್ಷತಪುಂಜಮಂ ಪಿಡಿಯೆ ಮೆಯ್ವೆತ್ತಂಗಸಂತಾಪದಿಂ
ಪುರಿದಂತಾದುವು ಮತ್ತೆ ಘರ್ಮಜಲದಿಂದಂ ನಾಂದು ಸಾರ್ದ್ರಂಗಳಾ
ಗಿರೆ ಸಸ್ಮೇರಸರೋಜನೇತ್ರೆ ಭರದಿಂದಂ ಶೇಷೆಯಂ ತೀವಿದಳ್        ೧೯

ವ || ಅಂತುಮಲ್ಲದೆ

ಚಂ || ಸಮಧಿಕದೇಹದಾಹಮನೆ ಸೈರಿಸಲಾರದೆ ಮಂಗಳೋಪಚಾ
ರಮೆ ಶಿಶಿರೋಪಚಾರಮೆನಿಸುತ್ತಿರೆ ತನ್ನಯ ಮೆಯ್ಗೆ ದೂರ್ವೆಯಿಂ
ದಮೆ ಮೊಸರ್ವಟ್ಟನಿಟ್ಟು ಹಿಮಚಂದನಗಂಧಮನಿಟ್ಟನಂತರಂ
ರಮಣಿ ಮನೋರಮಂಗೆ ಬಿಡುಮುತ್ತಿನ ಸೇಸೆಯನೊಲ್ದು ತೀವಿದಳ್          ೨೦

ವ || ಅಂತು ನಿಜಪ್ರಿಯಕಾಂತಾಕೇಕರಕಾಂತಿಸಂತಾನ ನವೀನಮಾಳತೀ ಮಾಳೆಯೊಡನೆ ಬಿಡುಮುತ್ತಿನ ಸೇಸೆಯಂ ತಳೆದು ವಿಜಯರಮಣೀಪರಿಣಯನೋತ್ಸವಕ್ಕೆ ಪೊಱಮಡುವ ಪೊಸಮದವಣಿಗನಂತೆ ಶುಭಶಕುನಪುರಸ್ಸರಮಂ ಸಚಿವಾಗ್ರೇಸರಂ ಸಮಗ್ರ ಪರಿಗ್ರಹಂಬೆರಸರಸನಿರ್ದ ವಿಜಯಶಿಬಿರಕ್ಕೆ ನಡೆತಂದು ಮುನ್ನಮೆ ತನ್ನ ಪದವಿಗುಚಿತಮೆನಿಸಿದ ಪ್ರದೇಶದೊಳ್ ಸುರುಚಿರಮೆನೆ ರಚಿಯಿಸಿರ್ದ ಚೆಲ್ವಿಂಗಾಲಯಮಾದ ವಸ್ತ್ರಾಲಯದೊಳ್ ಲೀಲೆವೆತ್ತಿರೆ ಮತ್ತಮಾ ಭೂಪೋತ್ತಮನ ಬೀಡಿನೊಳೊರ್ವಂ ವಿಪುಳಕಳಾಪ್ರವೀಣಂ ಪ್ರಾಣವಲ್ಲಭೆ ಗಾತ್ಮೀಯಪ್ರಯಾಣಮಂ ಸೂಚಿಸುವ ಬಾಣಂ ಕಾಮಬಾಣದಂತಾಗೆ ತಾಗೆ ನಿಡುಸುಯ್ದೊಡನೆ ಕಾಂತೆಯಿಂತೆಂದಳ್

ಕಂ || ಪೋದಪೆನೆಂಬೀ ನುಡಿಯಿಂ
ಪೋದಪೆನಾಂ ಮುನ್ನಮೆಂದು ಮತ್ಪ್ರಾಣಂ ಚೇ
ತೋದಯಿತ ಪೇೞ್ವ ತೆರದಿಂ
ದಾದಮೆ ಸುಯ್ ನಿಮಿರ್ದುವೆಂತು ಪೇೞ್ ಪೆಱಗಿರ್ಪೆಂ    ೨೧

ವ || ಮತ್ತೊರ್ವಂ ಚಿತ್ತಪ್ರಿಯೆಗೆ ನಿಜಗಮನವೃತ್ತಾಂತಮನಱಿಪೆ ಬಗೆ ಬೆದಱಿ ಮೃಗನಯನೆ ಇಂತೆಂದಳ್

ಕಂ || ಅಪ್ಪು ಸಡಿಲ್ದೊಡೆ ಕೇಳಿನಿ
ಸಪ್ಪೊಡಮಿಲ್ಲದೊಡೆ ಚುಂಬನಂ ನಲ್ಲನ ಕೆಯ್
ತಪ್ಪಂ ಸ್ಮರನೆನ್ನೊಳ್ ಬಾ
ಯ್ತಪ್ಪಂ ಪೊರ್ದಿಸುವನೆನ್ನ ನೀನೆಂತಗಲ್ವೈ     ೨೨

ವ || ಮತ್ತೊರ್ವಂ ತನ್ನಗಲ್ಕೆಗೆ ತಲ್ಲಣಿಸುವ ನಲ್ಲಳಂ ತಡವಿಲ್ಲದೆ ಬರ್ಪೆನುಮ್ಮಳಿಸ ದಿರ್ಪುದೆಂದೊಡಾಕೆ ಇಂತೆಂದಳ್

ಕಂ || ಕ್ಷಣದರ್ಶನವಿಘಟಸಮ
ರ್ಪಣ ಪಕ್ಷ್ಮಸ್ಪಂದನಕ್ಕಮಗಿದ ಮದೀಯ
ಪ್ರಣಯಕ್ಕೆ ಪಯಣಮಂ ಹೃ
ತ್ಪ್ರಣಯಿಯೆ ಪೇೞದಱ ಪೇೞ್ಕೆಯಿಂದಾನೆಸೆಪೆಂ            ೨೩

ವ || ಮತ್ತೊರ್ವಂ ತನ್ನ ಕನಸಿನೊಳಮಗಲ್ದೊಡಂ ಬೆಗಡುಗೊಳ್ವ ಸಾತ್ವಿಕಸ್ನೇಹ ಸಂಪನ್ನೆಗೆ ತನ್ನ ಪಯಣಮಂ ಕಲ್ಲೆರ್ದೆತನದಿಂದ ನಿಲ್ಲದೆ ಪೇೞೆ ಬಾಲೆ ಇಂತೆಂದಳ್

ಕಂ || ಮನಮನೆ ಮನೆಯಂ ಮಾಡಿ
ರ್ಪಿನಿಯನೆ ನೀನಿಂತು ಬಂಚಿಸುತ್ತಿಸುವವನೀ
ತನುವಂ ಬಂಚಿಸುತೆನ್ನಯ
ಮನಮಂ ಮನಸಿಶಯನಿಸುವುದೇಂ ವಿಸ್ಮಯಮೇ           ೨೪

ವ || ಮತ್ತೊರ್ವಂ ಚಿತ್ತವಲ್ಲಭೆಯಗಲ್ಕೆಗೆ ನಿತ್ತಸಱಿಲಾರದಾ ವೃತ್ತಸ್ತನೆಗಿಂತೆಂದಂ

ಕಂ || ಪ್ರಾಣದಿನಧಿಕಮೆನಗೆ ನೀಂ
ಪ್ರಾಣಮನಾಂ ತೃಣಮೆಗೆತ್ತು ನಡೆಯುತ್ತಾಜಿ
ಕ್ಷೋಣಿಗೆ ನಿನ್ನ ವಿಯೋಗಮ
ನೇಣೇಕ್ಷಣೆಯಿನಿತು ಸೈರಿಸದ ಕಾರಣದಿಂ          ೨೫

ಅಲಗಂಬಿಂಗೞ್ಕದ ಮನ
ಮಲರಂಬಿಂಗೞ್ಕಿದಪ್ಪುದಸಿಯಳೆ ಮಸೆದಿ
ರ್ದಲಗಂಬು ತನುವನಲ್ಲದ
ದಲರಂಬಿನ ತೆಱದೆ ಮನಮನೇಂ ಭೇದಿಕುಮೇ   ೨೬

ವ || ಅಂತು ತಂತಮ್ಮ ಕಾಂತರ ಗಮನಕ್ಕೆ ಮನಂ ವಿಕಳಮಾಗೆ ತಳಮಳಿಸುವ ಕಾಂತೆಯರಗಲ್ಕೆಗೆ ಬಗೆ ಬೆದಱೆ ಮಱಗುವ ಕಾಂತರ ಸಂತತಿಯಸ್ತಮಯಸಮಯದ ರಥಾಂಗಮಿಥುನಂಗಳೆನಿಸಿಯುಂ ಸುರತಸುಖಸುಧಾಸೇವನೆಗೆ ವಿಘ್ನಕಾರಿಯೆನಿಪ ಸೂರ್ಯೋದಯಕ್ಕೆ ಕಂಗನೆಕನಲ್ವ ಚಕೋರಮಿಥುನಂಗಳನಿೞಿಸಿಯುಂ ಕಣ್ಣೊಳೆ ಬೆಳಗಂ ಮಾಡುತ್ತುಮಿರೆ

ಮ.ಸ್ರ || ಸುರತಾಂತಶ್ರಾಂತ ಕಾಂತಾಶ್ರಮಜಳಗಿಳನೋಪಾತ್ತಶೈತ್ಯಂ ತದಾಸ್ಯಾಂ
ಬುರುಹಾಮೋದಪ್ರಮೋದಂ ತದಳಕಲತಿಕಾನರ್ತಕೀಸೂತ್ರಧಾರಂ
ಸ್ಮರಚಕ್ರಾಧೀಶ ಚಂಚಚ್ಚಮರರುಹ ಸಮೀರೋಪಮಾನೈಕಪಾತ್ರಂ
ವಿರಹಾಗ್ನಿ ಪ್ರಾಣಮಿತ್ರಂ ಸುೞಿದುದು ಪವನಂ ಸುಪ್ರಭಾತಪ್ರಭೂತಂ         ೨೭

ವ || ಅನಂತರಂ

ಮ || ಪಿರಿದುಂ ಶೋಕಿಪ ಕೋಕಸಂತತಿ ವಿಯೋಗೋದ್ವೇಗಮಂ ನೀಗೆ ನೀ
ರರುಹಕ್ಕುತ್ಸವಮಾಗೆ ಪರ್ವಿದ ತಮಂ ನಿರ್ವ್ಯಾಕುಳಂ ಪೋಗೆ ಭಾ
ಸುರ ವೈಭಾತಿಕಶಂಖತೂರ್ಯನಿನದಂ ರೋದೋಂತಮಂ ತಾಗೆ ಶೇ
ಖರನಾದಂ ರುಚಿರೋದಯಾದ್ರಿಶಿಖರಕ್ಕುದ್ಯತ್ಕರಂ ಭಾಸ್ಕರಂ      ೨೮

ವ || ಆ ಸಮಯದೊಳ್

ಕಂ || ಪರಿಪಾಂಡುರತನುಗೆ ನಿಶಾ
ಕರಕರಪೀಡಿತೆಗೆ ಸರಸಿಜಾಂಗನೆಗೆ ಸರೋ
ವರಮಗ್ನೆಗೆ ವಿರಹಾರ್ತೆಗೆ
ಕರದಿಂ ರವಿ ಸೋಂಕಿ ಹರ್ಷಮಂ ಪುಟ್ಟಿಸಿದಂ     ೨೯

ಮ || ಘನತೇಜಂ ಸ್ಮಿತಪುಂಡರೀಕನಕಳಂಕಂ ನೂತನನಕ್ಷತ್ರವೇ
ಷ್ಟನವಿಭ್ರಾಜಿತರಾಜರಾಜಿತಮಹೌಜೋಹಾರಿ ಧಾತ್ರೀಪ್ರಸಿ
ದ್ಧನಿಜೋದ್ಯತ್ಕರನಾಂತನಭ್ಯುದಯಮಂ ನಿನ್ನಂದದಿಂ ದೇವ ಪಾ
ವನವೃತ್ತಂ ನಯಮಾರ್ಗದರ್ಶಿಯರವಿಂದಾಧೀಶ್ವರಂ ಭಾಸ್ಕರಂ    ೩೦

ವ || ಎಂದು ಪೊಗೞ್ವಗಣ್ಯ ಪುಣ್ಯಪಾಠಕರ ಮೃದುಮಧುರಗಂಭೀರಾರವಮೆ ಕರ್ಣಾವತಂಸಮಾಗೆ ರಾಜಹಂಸನುಪ್ಪವಡಿಸಿ ಮಂಗಳಮಣಿದರ್ಪಣ ನಿರೀಕ್ಷಣಾಜ್ಯಾವೇಕ್ಷಣಾದಿ ಪ್ರಾಭಾತಿಕಕ್ರಿಯೆಯಂ ನಿರ್ವರ್ತಿಸಿ ಶುಚಿಜಳಸ್ನಪನಪವಿತ್ರಿತಗಾತ್ರನಾಸಾದಿತ ಧೌತವಸ್ತ್ರಂ ನಾನಾಮಣಿವಿತಾನಾಂದಮಾನಿತ ಜ್ಯೋತಿರ್ಲೋಕಮನನೇಕಪ್ರಕಾರ ಪೂಜಾವಿಶೇಷ ಸಂತೋಷಿತವಿನೇಯಾನೀಕಮಂ ನವ್ಯದಿವ್ಯೋಪಕರಣಪ್ರವ್ಯಕ್ತ ಸಮವಸೃತಿ ವ್ಯವಹಾರಮಂ ದೇಹಾರಮಂ ಪೊಕ್ಕು ವಿರಚಿತ ಪರಮೇಶ್ವರ ಶ್ರೀಮುಖದರ್ಶನಸ್ತವಂ ದೂರೀಕೃತಕೈತವಂ ಕೃತೇಯಾಪಥಶುದ್ಧಿ ವಿಶುದ್ಧ್ಯತಿಶಯಬುದ್ಧಿ ಸಮಾಧಿರೂಢಸಾಮಾಯಿಕನನಂತೈಶ್ವರ್ಯಪ್ರಸಿದ್ಧ ಸಿದ್ಧಭಕ್ತಿಯಿಂ ಸಮೀಪೀಕೃತ ಸಮೀಚೀನ ಸಮುಚಿತೋಪಕರಣದ್ರವ್ಯನವ್ಯಗ್ರಚಿತ್ತಂ ಸಪರಿ ಚಾರಕೇಂದ್ರನಿಂದ್ರಲೀಲೆಯಿಂ

ಉ || ಶ್ರೀ ವಿಳಸತ್ಕುಶಾಳಿ ಮಹಿತೋಜ್ಜಳಪೀಠದೊಳಿಂದ್ರವಂದ್ಯನಂ
ದೇವನನೊಪ್ಪಿ ಪೂಜಿಸಿ ದಿಶಾಧಿಪರ್ಗಿತ್ತಖಿಳೋಚಿತಾರ್ಘ್ಯಮಂ
ಪಾವನವಾರಿಸಾರಘೃತದುಗ್ಧದಧಿಸ್ತುತಕಲ್ಕಸತ್ಕಷಾ
ಯಾವಿಳಗಂಧತೋಯದೊಳೆ ಮಜ್ಜನಮಂ ಜಿನಪಂಗೆ ಮಾಡಿದಂ   ೩೧

ವ || ಅಂತು ಮುಕ್ತಿಮುಗ್ಧಸ್ನಿಗ್ಧಾವಳೋಕದ ದುಗ್ಧಾಭಿಷಿಕ್ತಂಗೆ ಪುನರುಕ್ತಂ ಮಾೞ್ಪಂತ ಭಿಷೇಕಮಂ ಮಾಡಿ ಸುಗಂಧಬಂಧುರಗಂಧೋದಕಪವಿತ್ರೀಕೃತೋತ್ತಮಾಂಗನಾಗಿ

ಶಾ || ಆನಂದಾಶ್ರುವಿಮಿಶ್ರನೇತ್ರನರಸಂ ರೋಮಾಂಚಸತ್ಕಂಚುಕಾ
ದಾನಾಳಂಕೃತಗಾತ್ರನಪ್ರತಿಮ ಸೇವಾಯತ್ತಚಿತ್ತಂ ಜಿನಾ
ನೂನಸ್ತೋತ್ರಪವಿತ್ರರಂಗಕೃತಜಿಹ್ವಾನರ್ತಕೀನೃತ್ಯನ
ನ್ಯೂನ ಶ್ರೀಜಿನರಾಜನಂ ಸುರನರಸ್ತುತ್ಯಕ್ರಮಾಂಭೋಜನಂ          ೩೨

ವ || ವಿಕಸಿತಸಿತಾಂಬುಜಾತಜಾತಪರಿಮಳಮಿಳಿತ ಕಳಧೌತ ಕಳಶಕಳಿತ ಸಂಸಾರ ಕಾರಣ ಪಾಪಸಂತಾಪಾಪನೋದನ ಸಮಸ್ತತೀರ್ಥಜಲಂಗಳಿಂದಂ ತರುಣತರಣಿಕಿರಣಶಂಕಾವಹ ಕುಂಕುಮಪಂಕಪಂಕಿಳಸಾರ ಘನಸಾರ ಸಾರೀಭೂತ ಶಾರದೇಂದು ನಯನಾನಂದನ ಚಂದನ ಚರ್ಚೆಗಳಿಂದಂ ಮುಕ್ತಿವಿಳಾಸಿನೀವಿಕಸಿತ ಮುಖಸರಸಿರುಹ ದರಹಾಸವಿಳಾಸ ಭಾಸುರ ಸುರಭಿಧವಳಕಳಮಾಕ್ಷತಾಪುಂಜಂಗಳಿಂದಂ ಬಂಧುರಗಂಧಪ್ರವಾಹಪವನಚಂಚಳಚಂಚರೀ ಕಾಂಚಿ ತವಿಕಚವಿಚಳಿಳೋನ್ಮೀಳಿತ ಮಾಳತೀ ವಕುಳಾದಿ ಕುಸುಮಸಂಕುಳಂಗಳಿಂದಂ ಸುಸ್ವಾದುಸೌರಭಾಕರಶಾಕಾನೀಘೃತಪೂರಪೂರಿಕಾದಿ ವಿವಿಧಮಧುರಭಕ್ಷ್ಯ ಪರಿವೃತಸುರುಚಿರಪರಮಾನ್ನನಿರವದ್ಯನೈವೇದ್ಯಂಗಳಿಂದಂ ವಿಶದಶಶಿಕಳಾಶಕಳಾನುಕಾರಿ ಕರ್ಪೂರಪಾರೀನಿರೂಪಿತದೀಪ್ರದೀಪಕಳಾಪಂಗಳಿಂದಂ ದಶದಿಶಾವಳಯವಳಯಿತನಿಜಾಮೋದ ಮತ್ತಾಳಿಮಾಳಾದ್ವಿಗುಣಿತೋದ್ದಾಮ ಧೂಮಲೇಖಾನೀಕ ದಶಾಂಗಧೂಪಂಗಳಿಂದಂ ಪರಿಪಕ್ವರಸಸೌರಭಸಾರ ಸಹಕಾರ ಜಂಬು ಜಂಬೀರ ನಾರಂಗ ಮಾತುಳುಂಗ ಕನಕ ಕದಳಾದಿ ವಿಪುಳಫಳಂಗಳಿಂದಂ ಗಂಗಾತರಂಗರುಚಿರಚಮರರುಹ ನಿಜಾತ್ಮಸಂವೇದನ ಸಮರ್ಪಣ ಮಣಿದರ್ಪಣದುರಿತಾತಪ ವಾರಣಾತಪ ವಾರಣನೇತ್ರ ರಮಣೀಯನೇತ್ರಾದಿ ವಿಚಿತ್ರವಸ್ತ್ರ ಪ್ರಮುಖ ನಿಖಿಳಮಂಗಳದ್ರವ್ಯಂಗಳಿಂದಮಾರಾಧಿಸಿ, ಪರಿಮಳಮತ್ತಾಳಿಕಳರುತಿಮಂಜುಳ ಪುಷ್ಪಾಂಜಲಿಪುರಸ್ಸರಂ ಸಕಳಶಾಂತಿಕರಶಾಂತಿಧಾರೆಯಂ ಸಂಗೀತಕಪ್ರಸಂಗಂ ಮನಂಗೊಳುತ್ತಮಿರೆ ಕೊಟ್ಟು ಮತ್ತಂ ವಿಶಿಷ್ಟಾಷ್ಟಮಹಾಪ್ರಾತಿಹಾರ್ಯೋಪೇತ ಗುಣಧರ ಗಣಧರಪ್ರಣೂತಾಷ್ಟಸಹಸ್ರಲಕ್ಷಣಲಕ್ಷಿತಾಮೇಯಕಾಯಸೌಂದರ್ಯಸಂಪನ್ನನಂ ವಿನಮಿತ ವಿನೇಯಜನಪ್ರಸನ್ನನಂ ಜಿನೇಂದ್ರಚಂದ್ರನನಗಣಿತಗುಣ ವಸ್ತು ರೂಪ ಸ್ತವನರೂಪಾನವದ್ಯ ಹೃದ್ಯಪದ್ಯಂಗಳಿಂ ಸಹಜಸಾಹಿತ್ಯವಿದ್ಯಾಧರಂ ಚತುರ್ಭಕ್ತಿಪೂರ್ವಕಂ ಸ್ತುತಿಯಿಸಿ ಪ್ರಪಂಚಿ ತಾಂಚಿತ ಪಂಚೋಪಚಾರದಿಂ ನಿರ್ವರ್ತಿತ ದೇವತಾರ್ಚನಂ ತ್ರಿಳೋಕಶೇಖರಚರಣಸರಸಿ ರುಹಸಮರ್ಚಿತಕುಸುಮಶೇಖರಂ ಜಗತ್ತಿಳಕಪದಳಿನ ಮಳಯಜ ಲಲಿತಲಲಾಟತಿಳಕಂ ಪುನಃಪುನಃಪ್ರಾರ್ಥ್ಯಮಾನ ಪುನರ್ದರ್ಶನನನಂತದರ್ಶನನಂ ಬೀೞ್ಕೊಂಡು ಪೊಱಮಡುವ ಸಮಯದೊಳ್

ಚಂ || ಪುರದ ಸಮಸ್ತ ಚೈತ್ಯನಿಳಯಂಗಳೊಳೆಯ್ದೆ ಜಿನೇಂದ್ರಪೂಜೆಯಂ
ನಿರುಪಮಭಕ್ತಿಯಿಂ ಹಿತಪುರೋಹಿತನೊಪ್ಪಿರೆ ತನ್ನ ಪೇೞ್ಕೆಯಿಂ
ನಿರವಿಸಿ ಗಂಧಶೇಷೆಗಳನುತ್ಸವದಿಂ ಕುಡೆ ಕೊಂಡು ಹರ್ಷಮಂ
ಧರಿಯಿಸಿದಂ ಜಯಕ್ಕಿದುವೆ ಸಂಚಕರಂ ತನುಗಾದುದೆಂಬಿನಂ         ೩೩

ವ || ಅಂತು ಸಿದ್ಧಶೇಷೆಯನಶೇಷಗುಣಾಭರಣಂ ತಳೆದುಕೊಂಡನಂತರಂ ರನ್ನದ ಪಡಲಿಗೆಗಳೊಳ್ ತೀವಿದ ವಿಚಿತ್ರವಸ್ತ್ರಾಭರಣಂಗಳಂ ಭಂಡಾರಿಗಂ ಕೊಂಡು ಬಂದು ಮುಂದಿೞಿಪೆ

ಕಂ || ಅಳವಡೆ ದುಕೂಲವಸನಮ
ನಿಳೇಶನುಟ್ಟುದಯರಾಗಮಂ ಕುಡೆ ಬೆಳ್ದಿಂ
ಗಳನೊಳಕೆಯ್ದುದು ತಪನೋ
ಜ್ವಳರುಚಿಯೆಂಬೊಂದು ಶಂಕೆಗೇನೆಡೆಯಾಯ್ತೋ           ೩೪

ಭಾವಭವಂಗೆಣೆಯಾದಂ
ಭೂವಲ್ಲಭನೊಪ್ಪೆ ಕುಂಡಳಂ ಕಂಕಣಮೇ
ಕಾವಳಿ ಮುತ್ತಿನತಲೆಸು
ತ್ತಾವಗಮೆಸೆವಂಗುಳೀಯಕಂ ಕೇಯೂರಂ        ೩೫

ವ || ಅಂತು ನೆಱೆಯೆ ಶೃಂಗಾರಮಂ ಮಾಡಿ ಮಣಿಮಯಶೃಂಗಾರಭವನದಿಂ ಗೃಹೀತ ತಾಂಬೂಳನಾಳೋಕಿತಮಂಗಳಮಣಿದರ್ಪಣಂ ದರ್ಪಕನಂತೆ ಪೊಱಮಟ್ಟು ಮುನ್ನಮೆ ಪಣ್ಣಿ ಬಂದಿರ್ದ

ಉ || ವಾರಣಮಂ ವಿರೋಧಿಮದವಾರಣಮಂ ಶುಭಚಿಹ್ನತೋಷಿತಾ
ಧೋರಣಮಂ ಲಸದ್ವಿಭವಕಾರಣಮಂ ಸಮದಪ್ರಚಾರಸಂ
ಧಾರಣಮಂ ವಿನಿರ್ಜಿತಮಹಾರಣಮಂ ನೃಪನೇಱಿದಂ ನಯ
ಪ್ರೇರಣನೋಜೆಯಿಂ ಘನಗುಣಸ್ತವನಪ್ರತಿಪನ್ನಚಾರಣಂ ೩೬

ವ || ಆ ಸಮಯದೊಳ್

ಕಂ || ಅರವಿಂದರಾಜತೇಜಃ
ಸ್ಫುರಿತಕ್ಕುಳ್ಳೞ್ಕಿ ಚಂದ್ರದೀಧಿತಿ ಚಂದ್ರಂ
ಭರದಿಂದೋಲಗಿಪಂತಿರೆ
ಕರಮೆಸೆದುವು ಚಾಮರಂಗಳುಂ ಬೆಳ್ಗೊಡೆಯುಂ            ೩೭

ಚಂ || ಮೃಗರಿಪುವಿಕ್ರಮಾಕ್ರಮಿತವೈರಿಗಳುಜ್ವಳಹಾರ ಚಿತ್ತಹಾ
ರಿಗಳತಿ ದುಷ್ಟಚೇಷ್ಟಿತ ತುರಂಗಮಶಿಕ್ಷಣ ಸೂರ್ಯಜಾನುಕಾ
ರಿಗಳಸಿಘಾತವಾರಿತವಿರೋಧಿಮತಂಗಜ ಪೀನದಾನವಾ
ರಿಗಳಧಿರಾಜಸನ್ನಿಧಿಯೊಳೊಪ್ಪಿದರಂದರಸಾ ಸವಾರಿಗಳ್            ೩೮

ಕಂ || ಭದ್ರಗಜಂಗಳ್ ಸೈನ್ಯಸ
ಮುದ್ರದೊಳೊಪ್ಪಿದುವು ಹರಿಯ ಭಯದೆ ಶರಣ್ಪೊ
ಕ್ಕದ್ರಿಗಳೆನೆ ಘನಮದಸಲಿ
ಲದ್ರುತಕರ ನಿರ್ಝರಂಗಳತಿ ತಂಗಂಗಳ್           ೩೯

ಹರಿಯೊರ್ವನ ಚರಣದ ಸಂ
ಚರಣಕ್ಕೆಯ್ದದ ಧರಿತ್ರಿ ಪರಿಭಾವಿಪೊಡೀ
ಹರಿಸೇನೆಯ ಚರಣದ ಸಂ
ಚರಣಕ್ಕಿನ್ನೆಯ್ದದೆಂಬುದೊಂದಚ್ಚರಿಯೇ       ೪೦

ತರದಿಂ ತೀವಿದ ಮೂವ
ತ್ತೆರಡಾಯುಧಮೆಸೆಯಲಾಂತರಂ ರಿಪುನೃಪರಂ
ನಿರಿವ ಕೃತಾಂತನ ಮುಖದಂ
ತರವಿಂದನೃಪಾಳರಥವಿತತಿ ಸೊಗಯಿಸುಗುಂ    ೪೧

ಬಿತ್ತರಿಸಿದ ಪತ್ತಿಯ ಸಂ
ಪತ್ತಿಯನಾರ್ ಪವಣಿಪನ್ನರಾ ಬಲದೊಳ್ ತ
ಳ್ತೆತ್ತಿದ ಪೞಯಿಗೆಗಳುಮಂ
ಸತ್ತಿಗೆಯುಮನೆಣಿಸುವನ್ನರಿಲ್ಲೆನೆ ನಿರುತಂ      ೪೨

ವ || ಅಂತು ನೆರೆದ ಸಮಸ್ತ ಸಾಧನಮುಂ ಮಕುಟಬದ್ಧರುಂ ಬೆರಸು ಧರಣೀಶ್ವರಂ ನಡೆವಾಗಳ್

ಕಂ || ವಾರಣದುರಗನ ಗರುಡನ
ಭೇರುಂಡನ ಪುಲಿಯ ಸೂಕರದ ಮಕರದ ಕಂ
ಠೀರವದ ಕಪಿಯ ಚಿಹ್ನದ
ಭೂರಮಣರ ಬಿಡು ಕೂಡೆ ನಡೆದತ್ತಾಗಳ್       ೪೩

ತುರಗ ರಥ ಗಜ ಪದಾತಿಯ
ಖುರಪುಟಪಟುಚಕ್ರರದನಪದಹಿತಿಯಿಂದಂ
ಗಿರಿಗಳೊಡೆದವನಿ ಸಮಮಾ
ಗಿರೆ ನಡೆದುದೆ ಬಟ್ಟೆಯೆನಿಸಿ ನಡೆದುದು ಸೈನ್ಯಂ            ೪೪

ವ || ಆ ಸಮಯದೊಳ್

ಉ || ಸಂದಣಿಸಿರ್ದ ಮಲ್ಲಿಗೆಯ ಮೊಲ್ಲೆಯ ಜಾದಿಯೆಸಳ್ಗಳೊಳ್ ಕರಂ
ಸಂದು ಸುಗಂಧಮಂ ಬಿಡದೆ ತಂದು ಸರೋವರಶೀಕರಂಗಳಿಂ
ನಾಂದು ನವಪ್ರಸೂನತರುಶಾಖೆಗಳಲ್ಲಿಯೆ ನಿಂದು ಬಂದು ತಾಂ
ಮಂದಸಮೀರಣಂ ಕಳೆದುದಾ ಬಳದಧ್ವದೊಳಾದ ಖೇದಮಂ       ೪೫

ಕಂ || ಅಂತಕರಾಕ್ಷಸಚಾತು
ರ್ದಂತಬಳಂ ತನ್ನೃಪಾಳನುನ್ನತ ಚಾತು
ರ್ದಂತಬಳಂ ನಡೆತಂದೋ
ರಂತಿರೆ ಮುತ್ತಿದುದು ವಜ್ರವೀರನ ಪುರಮಂ     ೪೬

ಪಡೆಯಂ ಪವಣಿಸಲಱಿಯೆಂ
ಕಡುವಿರಿದೆನಿಸಿರ್ದ ವಜ್ರವೀರನ ದುರ್ಗಂ
ಪಡೆ ಮುತ್ತಲೊಡಂ ಜಳಧಿಯ
ನಡುವಣ ಭೈತ್ರದವೊಲಿರ್ದುದೆಂಬದನಱಿವೆಂ  ೪೭

ವ || ಅಂತು ಮೂವಳಸಾಗಿ ಸುತ್ತಿ ಮುತ್ತಿರ್ಪುದುಮಿತ್ತಲ್

ಕಂ || ರವಿಶಶಿಗಳಗಲೆ ಗಗನ
ಕ್ಕವತಮಸಮಧೀಶನಪ್ಪವೋಲ್ ನೃಪಸಚಿವರ್
ಭುವನೇಕ್ಷಣರಗಲೆ ಪುರ
ಕ್ಕವಿನಯಪರನೆನಿಪ ಕಮಠನಧಿಪತಿಯಾದಂ     ೪೮

ಪತಿ ಯೆೞ್ಪತ್ತೆರಡುನಿಯೋ
ಗತತಿಗಳೊಳಮೊಂದನಪ್ಪೊಡಂ ಕುಡದೊಡಮೇ
ನತಿನಿರ್ಲಜ್ಜಂ ಪೆಱಗು
ದ್ಧತನಾಸ್ಥಾಪಿತ ಮಹತ್ವಮಂ ತಳೆದನವಂ     ೪೯

ವ || ಅದೆಂತೆನೆ

ಚಂ || ನೃಪನ ಲಸಲ್ಲತಾಂಗಿಯಾರೆ ತನ್ನ ಲತಾಂಗಿಯರಾವಗಂ ನೃಪ
ದ್ವಿಪಮೆ ನಿಜದ್ವಿಪಂ ನೃಪನ ಭೂಷಣರಾಜಿಯೆ ತನ್ನ ಭೂಷಣಂ
ನೃಪನ ತುರಂಗಮಂ ನಿಜತುರಂಗಮಮಾಗೆ ನೃಪಾಳಲೀಲೆಯಂ
ಚಪಳಚರಿತ್ರನಾಂತು ನೃಪಮಂದಿರದೊಳ್ ನೆಲಸಿರ್ದನುದ್ಧತಂ      ೫೦