ಕಂ || ಇರುಳಾತಪವಾರಣಮಂ
ತರತರದಿಂ ಪಗಲೆ ಪಲವು ಕೆಯ್ದೀವಿಗೆಯಂ
ತರಳತೆಯಿಂ ಪಿಡಿಯಿಸುವಂ
ನಿರರ್ಥಕಂ ತನ್ನ ಚರಿತಮೆಂದಱಿಪುವವೋಲ್   ೫೧

ಕುಂಕುಮದ ಕತ್ತುರಿಯ ಪುಡಿ
ಯಿಂ ಕನಕದ ಪುಡಿಯಿನಾದ ಪಿಷ್ಟಾತಕಮಂ
ಬಿಂಕದೆ ಕೆದಱಿಸುತುಂ ನಡೆ
ವಂ ಕಮಠಂ ಸಿರಿಯನಿರದೆ ತೂಱುವ ತೆಱದಿಂ    ೫೨

ಪರಿಮಳಮಂ ಪರಪುತ್ತುಂ
ಪರಕಲಸಿಯೆ ನೆಗೆವ ಧೂಪವರ್ತಿಯ ಪೊಗೆ ತ
ನ್ನುರಿಗೊಳ್ಳಿತನಮನವನಿಗೆ
ನಿರವಿಸುತಿರೆ ಪೊೞಲ ಬೀದಿಯೊಳ್ ಸೂೞಿವನವಂ         ೫೩

ಏವೇೞ್ವುದವನ ಸಿರಿಗು
ಜ್ಜೀವನಮಿಲ್ಲೆಂಬ ತೆಱದಿನಿರುಳುಂ ಪಗಲುಂ
ಭಾವಿಪರೋವೋ ಎನೆ ಕ
ಯ್ದೀವಿಯ ಕಪ್ಪುರದ ತೈಲದಿಂ ಪೊತ್ತಿಸುಗುಂ ೫೪

ಉ || ವಾರಣಮೇಱಿ ಬೆಳ್ಗೊಡೆಯನೆತ್ತಿಸಿ ಬರ್ಪುದದೊರ್ಮೆ ಮಲ್ಲರಂ
ಪೋರಿಪುದೊರ್ಮೆ ಕಂದುಕದ ಕೇಳಿಯೊಳಿರ್ಪುದದೊರ್ಮೆ ಸಾರಶೃಂ
ಗಾರವಿಳಾಸಮಂ ಮೆಱೆದೊರ್ಮೆ ಖಗೋದ್ಧತಮೇಷಯುದ್ಧಮಂ
ವಾರವಧೂಜನಂಬೆರಸು ನೋಡುವುದೊರ್ಮೆ ವಿನೋದಮಾತನಾ  ೫೫

ಕಂ || ಬಾಳಕನ ಕೆಯ್ಯ ಖೞ್ಗಂ
ಬಾಳಕನಂ ಕಿಡಿಸುವಂದದಿಂ ಮೂರ್ಖನ ದು
ಶ್ಶೀಳನ ಧನಮವನನೆ ನಿ
ರ್ಮೂಳಿಸುಗುಂ ತಕ್ಕುದಱಿಯದಾಚರಿಪುದಱಿಂ            ೫೬

ಚಂ || ಪಲತೆಱದಿಂದೆ ಜೊತ್ತಿಸಿ ಪರಾಂಗನೆಯರ್ಕಳೊಳೊಯ್ದು ಕೂಡುವ
ಗ್ಗಲಿಸಿದ ಜೂದನಾಡಿಪತಿಧೂರ್ತವಿಟರ್ಗೆ ನಟರ್ಗೆ ಭಂಡಮಂ
ಡಳಿಗೊಡನಾಡುವರ್ಗೆ ಗಣಿಕಾಳಿಗೆ ಬೇಡಿತನಿತ್ತಹರ್ನಿಶಂ
ಕುಲಧನಮಂ ಖಳಂ ಕಿಡಿಸಿದಂ ನಿಸದಂ ಕಮಠಂ ಮಹಾಶಠಂ          ೫೭

ವ || ಅದಂ ಕಂಡು ಮಹೀಮಂಡಳದ ಜನಂಗಳೆಲ್ಲಮಿಂತೆಂಗುಂ

ಕಂ || ತನಗಂಜಿದ ತೆಱದೆ ಯಶೋ
ಧನಮಂ ಪಿತೃದೆಸೆಯ ಕಡೆಯೊಳಿರಿಸಿದೊಡಂ ನೆ
ಟ್ಟನೆ ಕಿಡಿಸುವವಂ ಧನಮಂ
ಮನೆಯೊಳಗಿರಿಸಿದುದನಿರದೆ ಕಿಡಿಸುವುದರಿದೇ   ೫೮

ತೊಟ್ಟಂಗಿಗೆಯಂ ತುಡದಿ
ನ್ನುಟ್ಟುದನುಡದೀವುದಾವ ಕೌತುಕಮಾತಂ
ತೊಟ್ಟಾಭರಣಮನಾಗಳೆ
ನೆಟ್ಟನೆ ಬಿಡದೀವನರ್ಥಿಗೆಂದೊಡೆ ಕಮಠಂ        ೫೯

ಒಡೆಯರ ಕಣ್ ತಪ್ಪುವುದನೆ
ತುಡುಗುಣಿ ನಾಯಳಿಪಿ ನೋಡುವಂತೆವೊಲೀತಂ
ಜಡಮತಿ ತೆಱಪನೆ ಪಾರ್ದಿ
ರ್ದೆಡೆವಡೆದೊಡೆ ಸೈತು ನಡೆಯಲೇನಱಿದಪನೇ            ೬೦

ಕಲಿ ತರುಣಂ ಪ್ರಬಲಂ ಮದ
ಕಳಿತನನಾರೋಹಕಂ ಗಡೆನೆ ಮಾತಂಗಂ
ಖಳನಬಳನಧಿಪನುಚ್ಛೃಂ
ಖಳನಪಯನೆಂದೊಡಿನ್ನವಂ ನೆಗೞದುದೇಂ      ೬೧

ಶೂಲದ ಮೇಲಣ ತುಯ್ಯಲ
ನೀ ಲೋಲಚರಿತ್ರನುಣ್ಬ ತೆಱದಿಂದಂ ಭೂ
ಪಾಳಕನ ತೀವ್ರತೇಜಮ
ನೇೞಿಸಿ ಮಿಗೆ ರಾಜಲೀಲೆಯಂ ತಳೆದಿರ್ದಂ       ೬೨

ಭೂವಲ್ಲಭನಾಜ್ಞೆಯನುಱ
ದಾವನುಮಿಂತೆಸಗಲಣ್ಮನಿವನುಱದೆಸಪಂ
ಜೀವನಮನೊಲ್ಲನಕ್ಕುಂ
ಸಾವಂಗೆ ಸಮುದ್ರದಗಲಮೇಂ ನೀಳಮದೇಂ     ೬೩

ಸಿರಿಯಿಂದೊಗೆವ ಮದಂ ಬ
ಲ್ಲರುಮಂ ಬಗೆಗಿಡಿಸಿ ದುಶ್ಚರಿತ್ರದೊಳೆಸಪಂ
ತಿರೆ ಮಾೞ್ಕುಮೆಂದೊಡಿವನಂ
ಮರುಳಂ ಮರುಳಾಗಿ ಮಾೞ್ಪುದೇಂ ವಿಸ್ಮಯಮೇ        ೬೪

ತಲೆಗೆ ಪದರಕ್ಷೆಯಂ ನಾ
ಣಿಲಿ ಕಟ್ಟಿಸಿಕೊಂಡ ತೆಱದೆ ಲೋಕವಿರುದ್ಧಂ
ದಲಿದೆನಿಸಿ ನಡೆದಕೀರ್ತಿಗೆ
ನೆಲೆಯಾದಂ ಪಾಪಕರ್ಮಕರ್ಮಠಕಮಠಂ         ೬೫

ಜೋಕೋವರಂ ನೆಗೞ್ದಂ ಸುರ
ಲೋಕವಿರುದ್ಧಮನೆ ಕಮಠನಂದಧಿಕಂ
ಲೋಕವಿರುದ್ಧಮುಮಂ ಸುರ
ಲೋಕವಿರುದ್ಧಮುಮನಿರದೆ ನೆಗೞ್ದುದಱಿಂದಂ           ೬೬

ಖಳನೆಂದು ತನ್ನ ಪದದೊಳ್
ನಿಲಿಸದೊಡಂ ತಂದೆ ಮಗುೞೆ ಮುಖ್ಯತೆಯಿವನೊಳ್
ನೆಲಸಿರ್ದುದು ನಿಯತಿಃ ಕೇ
ನ ಲಂಘ್ಯತೇಯೆಂಬ ನೀತಿ ಸಂಭವಿಸುವಿನಂ       ೬೭

ಸಿರಿಯುಂ ಪ್ರಭುತ್ವಮುಂ ಸ
ಚ್ಚರಿತಂಗಾದಂದು ತನಗಮಾಶ್ರಿತರ್ಗಮಿಹಂ
ಪರಸುಖದಾಯಕಮುೞಿದಂ
ದೆರಡುಂ ಬಹುದುಃಖಜನಕಮೆನಿಕುಮಮೋಘಂ ೬೮

ವಂ || ಎಂದಿಂತನೇಕರುಮನೇಕಪ್ರಕಾರದಿಂ ತನ್ನ ದೌರ್ಜನ್ಯದ ಮಾತಂ ನುಡಿವಿನ ಮಾತಂ ಸ್ವೀಕೃತಾಪನಯಾನೀಕನೇಕಪ್ರಭುವಾಗಿರೆ

ಉ || ಧೂರ್ತಜನಂ ನಿಜವ್ಯಸನಮಂ ಪರಿತರ್ಪಿಸಲೆಂದಧರ್ಮದೊಳ್
ವರ್ತಿಸುವಂತು ಯೋಜಿಸುಗುಮಾಳ್ದರನೆಂದೊಡಂ ಸ್ವಭಾವದಿಂ
ಕೂರ್ತಪನೀತಿಯೊಳ್ ನೆಗೞುತಿರ್ದೊಡೆ ನಾಗರಕಂ ವಿಟಂ ಮೃಷಾ
ಮೂರ್ತಿ ವಿದೂಷಕಂ ಪದೆದು ಪೊರ್ದದೆ ಮಾಣ್ಗುಮೆ ಪೀಠಪುರ್ದಕಂ          ೬೯

ಕಂ || ಬೆಸನಿಗಳುಮಧರ್ಮದೊಳೊಸೆ
ದೆಸಗುವರೆ ಪಲಂಬರದಱಿನವಱೊಳ್ ನೆಗೞ್ವಂ
ಗೆ ಸಹಾಯರಾಗದಿರ್ಪರೆ
ನಿಸದಂ ಧರ್ಮದೊಳೆ ನೆಗೞ್ವವಂಗಸಹಾಯರ್  ೭೦

ವ || ಎಂಬಂತಾ ದುಷ್ಟಚತುಷ್ಟಯರಾ ದುರಾತ್ಮನ ಚತುರ್ಗತಿಭ್ರಮಣಕಾರಣಮಪ್ಪ ಚತುಷ್ಕಷಾಯದಂತೆ ಸಹಾಯರಾಗಿ ಮೂಗಿನೊಳುೞ್ವವಂಗೆ ಕುೞುವಂ ಕುಡುವಂತೆ ವಾತ್ಸ್ಯಾಯನಾದಿ ಕಾಮಕಳಾಶಾಸ್ತ್ರಮಂ ಕಲಿಸೆ

ಕಂ || ವ್ಯಸನಂ ಜೂದಿನೊಳೆ ರತಿ
ವ್ಯಸನಂ ಪರದಾರಗಮನದೊಳ್ ನಿಜದಾನ
ವ್ಯಸನಮಸಜ್ಜನರೊಳೆ ಪಸ
ರಿಸಿತು ಖಳಾನ್ವಿತರ್ಗೆ ಸದ್ಗುಣಂ ಸಮನಿಕುಮೇ ೭೧

ಕಂ || ನಂಟರ್ ಕಿತವರೆ ಜೂದಿನ
ದೀಂಟೆಯೆ ನೆಲಸಿರ್ಪ ತಾಣಮನ್ಯಾಂಗನೆಯಂ
ಕಂಟಿಸದೆ ತಂದು ಕೂಡುವ
ಕುಂಟಣಿಗಳವಂಗೆ ಮಾನ್ಯರಿನ್ನೇವೇೞ್ವೆಂ         ೭೨

ನೋಡುವೊಡವನೇಕಾಂತದೊ
ಳಾಡುವೊಡದು ಪಾರದರಮೆ ದಿಟಮೆಲ್ಲರ ಮುಂ
ತಾಡುವೊಡೆಜೋಡೆಯೆನೆ ಮೆ
ಯ್ಮಾಡಿದನೀ ತೆಱದೆ ಪಾತಕಂ ಪಾತಕಮಂ       ೭೩

ಸಂದೆಯಮಿಲ್ಲದೆ ನಿಲ್ಲದೆ
ಮುಂದೀ ವಿಧಿ ತನಗುಮಕ್ಕುಮೆಂದಱಿಪುವವೋಲ್
ಕುಂದಱಿಯದೆ ಪೆಱವೆಣ್ಗಳ
ಮುಂದಲೆಯಂ ಕೊಯ್ವನಂತವಂ ಕಾಮಾಂಧಂ  ೭೪

ಮದಯುತನನ್ಯವಧೂವಿನ
ಹದ ಮೆಯ್ಯೊಳ್ ದುರ್ಯಶಃಪ್ರಶಸ್ತಿಯ ತೆಱದಿಂ
ಪುದಿದಿರೆ ವಿರಚಿಸುವಂ ನಖ
ಪದಮಂ ನಿಜಪದವಿನಾಶಮಂ ಪ್ರಕಟಿಪುದಂ      ೭೫

ವ || ಜನನಾಥಪ್ರಿಯಮಪ್ಪನರ್ಘ್ಯಮಣಿಭೂಷಾವ್ರಾತಮಂ ತೊಟ್ಟು ವ
ಸ್ತ್ರನಿಕಾಯಂಗಳನುಟ್ಟು ವಾಹಮನಲಂಪಿಂದೇಱಿ ವಾರಾಂಗನಾ
ಜನಮಂ ಭೋಗಿಸಿ ಮಾಣದಾ ಕುಮತಿ ಗಂಡಸ್ಯೋಪರಿ ಸ್ಫೋಟಮೆಂ
ಬ ನಯಜ್ಞೋಕ್ತಿಯನಾಂತು ನಾದಿನಿಯೊಳಂ ಸಂಸಕ್ತಿಯಂ ಮಾಡಿದಂ            ೭೬

ಕಂ || ವಾರುಣಿಯವಂಗೆ ಮದಮಂ
ತಾರಳೆ ನೆರೆದಿರ್ದುಮಸಮ ಲಾವಣ್ಯಸುಧಾ
ಧಾರೆ ವಸುಂಧರೆ ತಂದಳ್
ದೂರದೊಳಿರ್ದುಂ ಗಡಿನ್ನವಘಟಿತಮೊಳವೇ    ೭೭

ಸಿಂಧುರಬಂಧುರಗತಿಯ ವ
ಸುಂಧರೆಯ ವಿಳಾಸವಿಭ್ರಮಂ ಮನಮಂ ನಿ
ರ್ಬಂಧದಿನಲೆಯೆ ಲತಾಂತಶ
ರಂ ಧೃತಿಯಂ ತೂಳ್ದೆ ತಾಳ್ದಿದಂ ವಿಕಳತೆಯಂ  ೭೮

ವ || ಅಂತು ವಿಕಳನಾಗಿ

ಮ || ಅಸಿಧಾರಾಗೃಹಮಿಂದುಕಾಂತವಿಳಸದ್ಧಾರಾಗೃಹಂ ಶಸ್ತ್ರಶ
ಯ್ಯೆ ಸಮುತ್ಫುಲ್ಲಲತಾಂತಶಯ್ಯೆ ಮದನೋಗ್ರಾಗ್ನೀಂಧರಂ ಚಂದನಂ
ನಿಸದಂ ನಂಜಿನ ಗಾಳಿ ಶೀತಳೆಯಂ ತಾಳ್ದಿರ್ದ ತೆಂಗಾಳಿಯೆಂ
ದು ಸರೋಜಾಸ್ಯೆಯ ಚಿಂತೆಯಿಂದೆ ಪಿರಿದುಂ ವಿಭ್ರಾಂತಿಯಂ ತಾಳ್ದಿದಂ        ೭೯

ವ || ಅಂತು ದುಃಖಿತೇ ಮನಸಿ ಸರ್ವಮಸಹ್ಯಮೆಂಬೀ ನುಡಿಯೆ ದಿಟಮಾಗೆ

ಮ || ಮನದಿಂದಂ ಧೃತಿ ದೇಹದಿಂದೆ ಪಸಿವುಂ ನೀರೞ್ಕೆಯುಂ ನಿದ್ರೆ ಲೋ
ಚನದಿಂ ಪಿಂಗೆ ಮನೋಭವಾಗ್ನಿ ತನುವಂ ದಾವಾಗ್ನಿವೋಲುರ್ವೆ ನಂ
ದನಮಂ ಚಂದನಮಂ ಸರೋಜವನಮಂ ಶೈತ್ಯೋರುಧಾರಾನಿಕೇ
ತನಮಂ ಪೊರ್ದುವನುಣ್ಮಿ ಪೊಣ್ಮಿದ ವಿಯೋಗೋದ್ವೇಗದಿಂದೇಗಳುಂ       ೮೦

ಉ || ಆವಳ ರೂಪುಮಾವಳ ವಿಳಾಸಮುಮಾವಳ ಕಾಂತಿಯೊಳ್ಪುಮುಂ
ತಾವಳ ಸೋಂಕುಮಾವಳನುರಾಗಮುಮಾವಳ ಜಾಣುಮಾವಳಾ
ಭಾವಮುಮಾವಳೊಳ್ನುಡಿಯುಮಾವಳ ಯೌವನಮಂ ಮನಕ್ಕೆ ರಾ
ಜೀವನಿಭಾಸ್ಯೆ ಬಂದಿರೆ ವಸುಂಧರೆ ಬಾರವೆಯಾ ದುರಾತ್ಮನಾ        ೮೧

ವ || ಅಂತವನೆಂತುಂ ನಿಜಾಂತರಂಗಮಂ ಸಂತಯ್ಸಲಾಱದೆ ತನ್ನ ಮನದನ್ನನಪ್ಪ ಕೆಳೆಯನಂ ಕರೆದು

ಚಂ || ಪ್ರಿಯ ನಿನಗೆನ್ನವಸ್ಥೆಯನೆ ಪೇೞ್ವೊಡೆ ಚಂದನದಣ್ಪನೊಲ್ಲದಾ
ಕೆಯ ಕುಚಲಿಪ್ತಚಂದನಮನಲ್ಲದೆ ಮೆಯ್ ಮಿಗೆ ಕೇಳಲೊಲ್ಲದಾ
ಕೆಯ ನುಡಿಯಿಂಪನಲ್ಲದೆ ಪಿಕಸ್ವನಮಂ ಕಿವಿ ನೋಡಲೊಲ್ಲದೆ
ನ್ನಯ ನಯನಂ ವಸುಂಧರೆಯ ಚಾರುಮುಖೇಂದುವನಲ್ಲದಿಂದುವಂ         ೮೨

ಕಂ || ಕಳಹಂಸಲಲಿತಗತಿಯಂ
ಕಳಹಂಸಕ ನೆರಪು ನೆರಪದಿರ್ದೊಡೆ ಕೇಳೀ
ಕಳಹಂಸಚಕ್ರಸಮ್ಮದ
ಕಳಹಂಸಮೆನಿಪ ಸರಂ ದವಾಗ್ನಿಯ ಪಸರಂ      ೮೩

ಉ || ಬಾಲೆಯ ಬಾಹುಶಾಖೆಗೆ ಮೃಣಾಳಮನಾನನಕಂಬುಜಾತಮಂ
ಲೋಲವಿಲೋಚನಕ್ಕೆ ನವಕೈರವಮಂ ಕುಟಿಳಾಳಕಕ್ಕೆ ಭೃಂ
ಗಾಳಿಯನಿಂಚರಕ್ಕೆ ಪಿಕನಿಸ್ವನಮಂ ಸರಿಮಾಡಿ ತಮ್ಮನಾ
ನೇಳಿಪೆನೆಂಬುದರ್ಕೆನಗಿವಿತ್ತವುವುತ್ಕಟಮಾದ ಖೇದಮಂ   ೮೪

ವ || ಎಂದಿಂತುರಿವರಿವ ವಿರಹರಹಸ್ಯಮಂ ಪ್ರಿಯವಯಸ್ಯಂಗಱಿಪಿದೊಡಾತನಿಂತೆಂದಂ

ಕಂ || ಪರಿಭಾವಿಸೆ ತಮಗಮಗೋ
ಚರಮನುಪಾಯಪ್ರವೀಣರಳವಡಿಪರ್ ಗೋ
ಚರಮೆನಿಪ ಕಾರ್ಯಮಿದನಾಂ
ತ್ವರಿತಂ ನಿನಗಾಗುಮಾೞ್ಪುದಾವುದು ಗಹನಂ  ೮೫

ಎನಗಿನಿತು ದೆವಸಮಱಿಪದೆ
ನಿನಗಿನಿತಾಯಾಸಮಾದುದಲ್ಲದೆ ಪೇೞೌ
ವನಿತೆಯನೀಗಳೇ ತಂದಾಂ
ಮೆನದೊೞ್ತಂ ಮಾಡಿ ಕುಡುವೆನುೞಿಯದವಳಲಂ          ೮೬

ವ || ಎಂದು ಸಂತೋಷಂಬಡೆ ನುಡಿದು ಕಳಹಂಸಂ ಕಳಹಂಸಗಮನೆಯಪ್ಪ ವಸುಂಧರೆಯ ಸಮೀಪಕ್ಕೆ ವಂದು ನಿಮ್ಮ ಭಾವನುಣ್ಮಿದತನುಪರಿತಾಪದಿಂ ಬೇಸಗೆಯ ಬಿಸಿಲೆಸಕದಿಂ ಬಱವಱಬತ್ತಿದ ಕೆಱೆಯ ಕಮಠನಂತೆ ಕಮಠಂ ಮಮ್ಮಲಮಱುಗುತ್ತುಮಿರ್ದಪನೆಂಬುದಂ ಬೆಗಡುಗೊಂಡೀಗಳಿಂತೆನ್ನನೊಡಗೊಂಡು ಪೋಗೆಂದೊಡಾತನಿಂದುಮುಖಿಯನಂದಳಮ ನೇಱಿಸಿಕೊಂಡು ಡೋಳಾಯಮಾನಮಾನಸನುಂ ಕುಸುಮಿತಲತಾಂತಾಗಾರ ಲೀಲೋಪಕಂಠದೊಳುಕ್ಕಂಠತೆಯಿಂ ತನ್ನ ಬರ್ಪ ಬಟ್ಟೆಯತ್ತಲೆ ದತ್ತದೃಷ್ಟಿಯಾಗಿರ್ದ ಕೆಳೆಯನ ಕೆಲಕ್ಕೆ ತಂದೊಡನೆ ಬಂದಂಗರಕ್ಕರೆಲ್ಲರುಮಂ ಪೊಱಗೆ ನಿಲಿಸಿಯೊಳಗಣ್ಗೊರ್ವಳನೆ ಕಳಿಪುವುದುಮಾಕೆಯಾ ಕಮಠನೆಯ್ದೆವಂದಿಂತೆಂದಳ್

ಕಂ || ಒಗೆದೊಡೆ ರುಜೆ ನಿನಗೆಮ್ಮ
ತ್ತೆಗಮೆಮ್ಮಕ್ಕಂಗಮೆನಗಮಱಿಪದೆ ನೀನು
ಬ್ಬೆಗದಿಂ ಪ್ರವಾಸಿಗನವೋ
ಲಗಲದೆ ವನದೊಳಗೆ ನಿಲ್ವುದನುಚಿತಮಲ್ತೇ   ೮೭

ಕಳಹಂಸಕನಱಿಪಿದೊಡೀ
ಗಳಱಿದೆನೀ ರೋಗಮಾವುದಾವನೊ ವೈದಂ
ತಳರದೆ ನೋಡುವನೆನಿತಾ
ಯ್ತೊ ಲಂಘನಂ ಯೋಗಮಾವುದೀ ರುಜೆಗಱಿಪಿಂ           ೮೮

ವ || ಅಂತಾ ಕಾಂತೆ ತನ್ನ ಋಜುಸ್ವಭಾವದಿಂ ನುಡಿದೊಡಾ ವಕ್ರಸ್ವಭಾವಂ

ಕಂ || ಶ್ಲೇಷಾರ್ಥಿಯವಳ ನುಡಿಯಂ
ಶ್ಲೇಷಮನಭಿರೂಪರೂಪಮಂ ಬಯಸುವವಂ
ತೋಷಕರರೂಪಕಮನಘ
ಪೋಷಕನೀ ತೆಱದೆ ಮಾಡಿ ಧೂರ್ತಂ ನುಡಿದಂ   ೮೯

ಕುವಳೆಯದಳಲೋಚನೆ ನಿ
ನ್ನ ವಚನಮಿದು ಸತ್ಯಮಲ್ತೆ ಪರಿಭಾವಿಪೊಡಾಂ
ಭವದೀಯವಿರಹದಿಂದಂ
ಪ್ರವಾಸಿಗನುಮಾದೆನಿಂತು ವನವಾಸಿಗನುಂ       ೯೦

ರೋಗಂ ನಿನ್ನ ವಿಯೋಗಮೆ
ಯಾಗಮನಮೆ ವೈದ್ಯನಿಂದುಚಂದನ ಹಿಮಧಾ
ರಾಗೃಹಲಂಘನಮಾದುದು
ಯೋಗಂ ಸಂಯೋಗಮೀ ರುಜೆಗೆ ಪೆಱತುಂಟೇ   ೯೧

ಎನಗಾದ ರುಜೆಗೆ ನಿನ್ನೊಂ
ದು ನೋಟಮೆಂಬ ಮರ್ದಿನಿಂದಮಲ್ಲದೆ ವಿಚ್ಛೇ
ದನಮಿಲ್ಲಂತೆ ಸುಹೃದ್ದ
ರ್ಶನಮೌಷಧಮೆಂಬ ಸೂಕ್ತಿಯುಂಟಪ್ಪುದಱಿಂ ೯೨

ಚಂ || ಹಿಮರುಚಿಯಂ ಮುಖೇಂದು ಲತೆಯಂ ತನು ಚಂದನಮಂದರಸ್ಮಿತಂ
ಕಮಳಮನಂಘ್ರಿ ಕುಂದಕುಳಮಂ ದಶನಾಳಿ ಮೃಣಾಳಮಂ ಭುಜಂ
ಕುಮುದಮನಕ್ಷಿಗಳ್ ಪುಳಿನಮಂ ಜಘನಂ ಗೆಲೆವಂದುವಂಗತಾ
ಪಮನುೞಿದಂತಿರೆಂತು ಕಳೆದಪ್ಪುವೊ ಸೋಂಕಲೊಡಂ ತಳೋದರೀ            ೯೩

ಕಂ || ಎಂದು ಮನದಳಿಪನಱಿಪೆ ಖ
ಳಂ ದೃಢಘನರವಮನಾಲಿಸಿದ ಹಂಸಿಯಿದೆಂ
ಬಂದದೆರ್ದೆಗಟ್ಟು ಕೋಗಿಲೆ
ಯಂದದೆ ವಧು ಮೂಗುವಟ್ಟು ವಿಸ್ಮಿತೆಯಾದಳ್         ೯೪

ವ || ಅಂತು ವಿಸ್ಮಯಾಕ್ರಾಂತಸ್ವಾಂತೆಯಾಗಿ

ಕಂ || ಈ ತೆಱದೆ ನುಡಿದು ತನ್ನಯ
ಚೇತೋವೃತ್ತಿಯನೆ ಧೂರ್ತನಱಿದಪನೆಂಬೀ
ಭೀತಿಯೊಳೆ ಬಗೆಯನೊಪ್ಪಿನ
ದಾ ತರುಣಿಯವಂಗೆ ಕೃತಕದಿಂದಿಂತೆಂದಳ್       ೯೫

ಪೊಲ್ಲದುದಂ ಬಗೆದೈ ನಿನ
ಗಲ್ಲದುದಂ ನೆಗೞ್ಧೆ ನಮ್ಮ ಕುಲದುನ್ನತಿ ಮೇ
ಗಿಲ್ಲದಪವಾದ ಭರದಿಂ
ನಿಲ್ಲದೆ ಕುಸಿದಪ್ಫುದುೞಿವುದಸದಾಗ್ರಹಮಂ   ೯೬

ಎಂದುಚಿತಮನುಸಿರ್ದೊಡೆಯದ
ನೊಂದುಮನವಧರಿಸದವಳನೊಲಿಸುವ ಬಗೆಯಂ
ತಂದಂ ಕಾತರನಂತೆ ದ
ಲೆಂದುಮದೇಂ ಮುಂದುಗಾಣ್ಬರೇ ಕಾಮಾಂಧರ್          ೯೭

ಪೆಱದೆಗೆದ ಬಾಣಮಪ್ಪುದು
ನೆಱೆ ನಡುವಂತವನ ಮನಮನಾಕೆಯ ಬಾಣಂ
ಪೆಱದೆಗೆದುದು ನೆಱೆ ನಟ್ಟುದು
ಪೆಱತೇಂ ವಾಮೋರುಧರ್ಮಗುಣಸಮ್ಮಿಳಿತಂ   ೯೮

ಆವೆಡೆ ದುರ್ಗಮಮಲ್ಲಿಯೆ
ಭಾವಭವಂ ಬಟ್ಟೆಗಳ್ವ ಕಳ್ಳನ ತೆಱದಿಂ
ದೋವೋವೋ ಮೇಲ್ವಾಯ್ದಿಸು
ತೋವದೆ ಧೃತಿಗೆಡಿಪನಾರುಮಂ ಕ್ರೂರಾತ್ಮಂ   ೯೯

ವ || ಅಂತವಳೆಱಗಿಯುಮೆಱಗದಂತೆ ಬಿಡೆ ಬೀಸಿದ ನುಡಿಯೆ ತನ್ನ ವಿರಹಾಗ್ನಿಯ
ನುದ್ದಮುರಿಸಲ್ ಬಿಡದೆ ಬೀಸಿದ ಗಾಳಿಯಂತಾಗೆ ಕಂತುಶರಮಂತರಂಗಮಂ ತಾಗೆ ಬೇಳಾಗಿ ಮತ್ತಮಿಂತೆಂದಂ

ಕಂ || ಅಂಬುರುಹವದನೆ ಮನಸಿಜ
ನಂಬಿನ ನೆಱೆಯೇಱು ಮುಚ್ಚುವೊಡೆ ಕಪ್ಪುರದಿಂ
ದಂ ಬೆರಸಿ ಮಿಸುಪ ನಿನ್ನಯ
ತಂಬುಲದೀ ಕವಳದಿಂದೆ ಮುಚ್ಚುಗುಮಲ್ತೇ    ೧೦೦