ವ || ಅಂತು ಧೈರ್ಯಂಗೆಟ್ಟು ಬಾಯ್ವಿಟ್ಟು

ಚಂ || ಬಿರಿಯಿಸಿ ಬೇಂಟದೊಳ್ ಮನಮದಾಟಿಸೆಯುಂ ಮನಮೀಯದಿರ್ದುಮಂ
ತಿರದೆ ಬೞಿಕ್ಕಮಾ ಖಳನ ಲಲ್ಲೆಗೆ ತಾನೊಳಗಾದಳಾ ವಸುಂ
ಧರೆ ಮತಿಗೆಟ್ಟು ನೀಚಪಥವರ್ತಿನಿ ಮುನ್ನೆ ವಿರುದ್ಧಮಾದುದಂ
ಪರಿವವೊಲುದ್ಘಸೇತುವನೆ ಮೀಱಿ ನದೀಜಲಮಾತ್ತವೇಗದಿಂ      ೧೦೧

ಕಂ || ಚಿರವಿರಹದಿಂದೆ ಪೋಕುಂ
ತರುಣೀಜನದೊಲ್ಮೆಯಲ್ಲದಂದೇಕೆ ವಸುಂ
ಧರೆ ಮರುಭೂತಿಯೊಳೊದಿವಿದ
ಪರಮಪ್ರೀತಿಯನೆ ಮಱೆದು ಮೋಹಂಗೊಂಡಳ್          ೧೦೨

ಆಗಳೆ ಪೆಱತಿನ ಕರಸಂ
ಯೋಗಂ ಸಮನಿಸೆ ಸಮಗ್ರಮೆನಿಸಿಯುಮಬಳಾ
ರಾಗಂ ಪೊರೆದ ಹರಿದ್ರಾ
ರಾಗದವೋಲಿರದೆ ಪಾಱಿಪೋಕುಂ ಕ್ಷಣದಿಂ      ೧೦೩

ಉ || ಬೂದಿಯ ಬೊಟ್ಟು ಬೀದಿಯ ಸೊಡರ್ ವನಿತಾಜನದೊಲ್ಮೆಯಲ್ಲದಂ
ದಾ ದೊರೆವೆತ್ತ ವಲ್ಲಭನನೀಕ್ಷಿಸದಾ ಖಳನೊಂದು ಲಲ್ಲೆಗಂ
ತಾದಮೆ ತೂಂಕಡಿಪ್ಪವರನೊಪ್ಪುವ ಪಾಸಿನ ಮೇಲೆ ನೂಂಕಿದಂ
ತಾದುದೆನಿಪ್ಪಿನಂ ಸಲೆ ವಸುಂಧರೆ ತನ್ನಯ ಚಿತ್ತಮೀವಳೇ           ೧೦೪

ಕಂ || ತರುಣಿ ಗಡ ಸಕಳ ಸುಖಪರಿ
ಕರೆ ಗಡ ವಿರಹಿಣಿ ಗಡಳಿಮಿಳಿತ ಕುಸುಮ ಮನೋ
ಹರಲತೆ ಗಡಲ್ಲಿ ನವವಯ
ನೆರೆವಂ ಗಡ ನೆರೆಯದಾಕೆಯೇಂ ಸೈರಿಪಳೇ       ೧೦೫

ತಱಗೆಲೆ ತೆಂಕಣ ಗಾಳಿಯ
ನಱಸದೆ ಬಿಱುಗಾಳಿ ಸೋಂಕಿಯುಂ ಬೞಿಸಲ್ವಂ
ತಱೆಕೆಯ ಪುರಷನನಬಲೆಯ
ರಱಸದೆ ಕಠಿಣನುಮನೆಳಸುವರ್ ಸಂಚಲಿಯರ್ ೧೦೬

ಪೆಱರೊಲ್ಲದೊಡೆಡೆಯಿಲ್ಲದೊ
ಡಱಿಯೆಂ ಕಾಮಿನಿಯರಲ್ಲದಂದೊಲವಂ ಮೇ
ಣಱಿಕೆಯ ಕುಲಮಂ ಕಾಯಲ್
ಮಱೆದುಂ ನೆರೆದಪರೆ ದೋಷದೂಷಿತಮತಿಗಳ್ ೧೦೭

ರುಚಿ ಸಂಧ್ಯಾರುಚಿ ಪೆಂಡಿರ
ಶುಚಿತ್ವಮುಚಿರಾಂಶು ಸೂನೃತಂ ಸುರಚಾಪಂ
ರುಚಿರಾಚಾರಂ ಮಾಯಾ
ಪ್ರಚಾರಮಾಯತಿಕೆ ಮಿಕ್ಕ ಮಂಜಿನ ಪುಂಜಂ ೧೦೮

ಸುಗತಮತಕ್ಕೆಣೆಯೆನೆ ಶೌ
ಚಗುಣಂ ಕ್ಷಣಿಕಂ ಸಗರ್ವಚಾರ್ವಾಕಮತ
ಕ್ಕೆ ಗಡೆಣೆಯೆಂದೆನೆ ಪೆಂಡಿರ
ನೆಗೞ್ತೆ ಪರಲೋಕಸೌಖ್ಯಘಾತುಕಮಲ್ತೇ ೧೦೯

ಪತಿಹಿತೆಯರೆನಿಪ ವನಿತೆಯ
ರತಿ ದುರ್ಲಭಮಂದುಮಿಂದುಮಲ್ಲದೆ ಕುಲಟಾ
ತತಿ ಸುಲಭಂ ಸುಸ್ಪರ್ಶಮ
ದತಿ ದುರ್ಲಭಮಂತೆ ಕಾಚದೇಂ ದುರ್ಲಭಮೇ ೧೧೦

ವ || ಇಂತಾ ಪಾತಕಿ ಭೂತಳಂ ಪೞಿಯೆಯುಂ ಭೀತಿಯಿಲ್ಲದಾ ಕಾತರನೊಳೆ ಚೇತಃಪ್ರೀತಿಯಂ ಮಾಡೆ

ಕಂ || ಕಾಪೞಿಯೆ ಪೞಿಯೆ ಜಗಮವ
ನೇಪೊೞ್ತುಂ ತಾಯ ಪೆಂಡಿತಿಯ ಪೇೞ್ವ ಹಿತಾ
ಳಾಪಮನಾಪ್ತರ ನೀತಿಕ
ಳಾಪಮನುಱದವಳೊಳಾ ಕಳಂ ಮಱೆವಾೞ್ದಂ ೧೧೧

ಡಾಲಂಗಪ್ಪಯಿಸಿದುದು ಬಿ
ಡಾಳಕ್ಕಂ ಪಾಲ ಕಾಪನಿತ್ತವೊಲಾಯ್ತೆಂ

ದೀ ಲೋಕಮುಲಿಯೆ ನೀತಿನು
ತಾಲೋಕನ ರಹಿತನಹಿತಚರಿತದೆ ನೆಗೞ್ದಂ

ವ || ಅಂತವಂ ತನ್ನ ತಾಯ ಕುಲಸ್ತ್ರೀಯ ಕುಲವೃದ್ಧರ ಬುದ್ಧಿಯೊಳೊಂದುಮಂ ಬಾೞ್ತೆಗೆಯ್ಯದೆ ಧೂರ್ತರೆ ತನಗಾಪ್ತರಾಗೆಯುದ್ವೃತ್ತನಾಗಿ ನೆಗೞುತ್ತುಮಿರ್ದನನ್ನೆಗಮತ್ತಲಾ ಭೂಪೋತ್ತಮಂ ಪದ್ಮನಗರಮಂ ಪತ್ತೆ ಸಾರ್ದುಬಿಡುವುದುಂ ಕಂಡು ಕಡುಮಿಳಿದು ವ್ರವೀರನಿಂತೆಂದಂ

ಕಂ || ನಡೆದಿದಿರನೆನ್ನ ದೇಶದ
ಗಡಿಯೊಳೆ ಕಾದಲ್ಕೆವೇೞ್ಕುಮದು ಮಾಣ್ದೆನ್ನಿ
ರ್ದೆಡೆಗೆ ಪಗೆ ಬರೆಯುಮಿಂತಾಂ
ಸೆಡೆದೊಳಗಿರ್ದಂದು ನಾಡ ನಗೆಗೆಡೆಯಲ್ತೇ ೧೧೩

ವ || ಎಂದು ವಜ್ರವೀರಂ ವೀರಭಟರಂ ಮೂದಲಿಸಿ ಪೊಱಮಟ್ಟು ಕಾದಲೆಂದು ಪರಿಚ್ಛೇದಿಸಿ

ಕಂ || ಕರಿ ತುರಗ ರಥ ಪದಾತಿಯ
ಪರಿಸಂಖ್ಯೆಯನಱಿವನಾವನವನೊಡ್ಡುಗಳಂ
ನಿರುತಂ ಪವಣಿಪರಿಲ್ಲೆನೆ
ಪುರಮಂ ಪೊರಮಟ್ಟು ಧುರದೊಳೊಡ್ಡಿದನಧಟಂ ೧೧೪

ವ || ಅದಂ ಕಂಡು

ಕಂ || ಕ್ಷೋಣೀಪತಿ ಬರೆ ಜೀವ
ತ್ರಾಣಕ್ಷಮಮೆನಿಪ ದುರ್ಗಮಂ ಪೊಱಮಟ್ಟ
ಕ್ಷೂಣಬಳನಿದಿರ್ಗೆ ಬೀಸುವ
ಡಾಣೆಗೆ ತಲೆಯೊಡ್ಡುವಂತಿರೊಡ್ಡಿದನಲ್ತೇ ೧೧೫

ವ || ಎಂದು ತನ್ನನೆಂತುಂ ಸಂತೈಸಲಾಱದ ನಿಜಮಂತ್ರಿಗಳ್ ತಮ್ಮೊಳಗೆ ನುಡಿವಿನಂ ವಜ್ರವೀರಂ ವೀರರಸಾವೇಶದಿಂ ರೋಷಾವೇಶಂ ಕೆಯ್ಗಣ್ಮೆಯುನ್ಮಿ ಬಂದೊಡ್ಡಿ ನಿಲ್ವುದುಂ ಮುನ್ನಮೆ ತನ್ನ ಬಲಮಂ ಕಾಳೆಗಕ್ಕೆ ತೆರಪಪ್ಪಂತು ಪೆಱತೆಗೆದೊಡ್ಡಿ ಯರವಿಂದಮಹಾರಾಜನುಂ ಯಮರಾಜನಂತೆ ಯುದ್ಧಸನ್ನದ್ಧನಾಗಿ

ಕಂ || ಬೀಸೆ ಬಿಱುಗಾಳಿ ತಮ್ಮೊಳ
ಗಾಸುರಮೆನೆ ತಾಗುವಭ್ರದೊಡ್ಡುಗಳೆನೆ ಕೆ
ಯ್ವಾಸೆ ನೃಪರೊಡ್ಡಿ ರಕ್ತಂ
ಸೂಸುವಿನಂ ತಾಗಿ ಮೞ್ಗಿದರ್ ಕಡುಪಿಂದಂ ೧೧೬

ವ || ಆ ಸಮಯದೊಳ್

ಕಂ | ನೆಱೆತೆಗೆದಿಸೆ ಸೈಗೋಲರ್
ನೆಱೆಗೋಲುಂ ಪೆಣನುಮೊಡನೆ ಕೆಡೆದುವು ಲೆಕ್ಕಂ
ನೆಱೆದವರನೆ ಜವನಾಳ್ಗಳ್
ಮಱೆದವರನೆ ಜವನಾಳ್ಗಳ್
ಮರೇಯದೆ ಕೋಲ್ವೊಯ್ದು ಲೆಕ್ಕಿಪಂತೆವೊಲಾಗಳ್ ೧೧೭

ಪೂಣಿಗರೆನಿಸಿದರಱಿಕೆಯ
ಪ್ರಾಣದ ಬಿಲ್ದೆಗೆದ ಬಲ್ಮೆಯಂ ತೋಱುವವೋಲ್
ಬಾಣಂ ನೆಱೆಗೊಳೆ ತೆಗೆದರ್
ಪ್ರಾಣಮನವಯವದಿನೆಚ್ಚು ರಿಪುನೃಪಬಲದೊಳ್

ಕೋಡುಂ ಬೀಡುಂ ಕಾಣ್ಬುದು
ನಾಡೆಯುಮರಿದೆನಿಸಿ ಬಿಲ್ಲ ಬಲ್ಲಾಳೆಚ್ಚ
ೞ್ಕಾಡಿದುದಡ್ಡಣದೊಡ್ಡ
ೞ್ಕಾಡದೆ ತಾಗಿದುದು ತಾಳಮಂ ಕೊಟ್ಟೆನಸುಂ  ೧೧೯

ವ || ಅಂತು ನೆಲನುಮನಾಗಸಮುಮಂ ತಾಳಂಗುಟ್ಟಿದಂತೆ ಭಯಂ ಪುಟ್ಟೆ ತಾಳಂ ಗುಟ್ಟಿಯಸಿಘಟ್ಟನದಿಂ ನೆಟ್ಟನಾಡುವ ವೀರರಟ್ಟೆಯಾಟದೊಡನೆ ರುಧಿರಾಸವಸೇವೆಯಿಂ ಸೋಂಕಿದ ಭೂತಬೇತಾಳಜಾಳಮುಮನಾಡಿಸಿಯವರಾಟಕ್ಕಡ್ಡಂ ಬೀೞ್ವಂತೆ ಬಿೞ್ದಡ್ಡಣದೊಡ್ಡಣಂ ಪಡಲ್ವಡುವುದುಂ

ಕಂ || ಖುರಪುಟದ ದೂಳಿಯೇಱಿವೊ
ಲಿರೆ ಮಿಸುಪಸಿಘಾತದಿಂದೆ ಪೊಱಪೊಣ್ಮಿ ಕರಂ
ಪರಿವಿನಮಸೃಕ್ಟ್ರವಾಹಂ
ಭರದಿಂ ತಾಗಿದುವು ವಾಹಮಾಹವಧರೆಯೊಳ್  ೧೨೦

ಚಂ || ಖುರಪುಟಘಾತದುಬ್ಬರಿಪ ದೂಳಿ ದಿಶಾಳಿಯನುರ್ವಿ ಪರ್ವೆ ಮುಂ
ಪರಿಸಿಯಿಸಿದಾ ಸವಾರಿಗಳುದಗ್ರಭುಜಾಸಿಗಳಿಂದಮೊರ್ವರೊ
ರ್ವರನದಟಿಂದೆ ಪೊಯ್ಯೆ ಪೊಱಪೊಣ್ಮಿತನಾಱದೆ ದಾಂಟಲಾಗದು
ದ್ಧುರ ರಣರಂಗದೊಳ್ ಬೞಿಕ ನೂಂಕಿದ ವಾಹಮಸೃಕ್ಷ್ರವಾಹಮಂ           ೧೨೧

ವ || ಅಂತು ಘೋೞಾಯ್ಲರ ಕಾಳೆಗಮಗುರ್ವುವಡೆಯೆ

ಕಂ || ಆವರಿಸಿದ ಸೂನಗೆ ನ
ಟ್ಟೋವದೆ ಬಿೞ್ದವರ ಮೇಲೆ ಪರಿಯೆ ರಥಂ ನೀ
ರಾವಳಿ ಮುಮ್ಮೞಿಯಾದುದು
ಲೋವಿಸರದ ಮೇಲೆ ಭಂಡಿ ಪರಿದಂತಾಗಳ್     ೧೨೨

ವ || ಅಂತು ಚಕ್ರಹತಿಯಿಂ ದೋಣಿವೋದ ರಣಕ್ಷೋಣಿಯನಕ್ಷೂಣಬಾಣಘಾತದಿಂ
ಹತಮಾದ ಹಯದ ಸಾರಥಿಗಳ ರಥಿಗಳಟ್ಟೆಗಳೆಂಬ ಬೆಟ್ಟುಗಳಿಂ ಪೂೞ್ದು
ಸಮತಳಂ ಮಾಡಿಯಾಡುವ ಮರುಳ ತಂಡದ ಮನೋರಥಮಂ ತೀರ್ಚುವ
ಮಹಾರಥರ ಸಮರಂ ಕರಮಾಸುರಮಾಗೆ

ಕಂ || ಕ್ರೋಧಯುತರ್ ಮದಜಳಧಾ
ರಾಧರಮಂ ವಿಜಿತವಿಳಯಧಾರಾಧರಮಂ
ಯೋಧರ ಶರದಿಂ ಮುಂಚ
ಲ್ಕಾಧೋರಣರಣೆದು ನೂಂಕಿದರ್ ವಾರಣಮಂ            ೧೨೩

ವಾರಣದ ಬಿದು ಪಿಸುೞ್ದಾ
ಧೋರಣನಿರದುರುಳೆ ಬಿಸುಗೆ ರಿಪುನೃಪಕಾಂತಾ
ದಾರಾಭರಣದ ಬಿಸುಗೆವೊ
ಲೋರಂತಿರೆ ಕೞಲೆ ಭರದಿನೆಚ್ಚರ್ ಜೋದರ್   ೧೨೪

ಮದದಿಂದಂ ಕರಿಗಳ್ ದೋ
ರ್ಮದದಿಂದಾರೋಹಕವ್ರಜಂ ಮುಂದಂ ಕಾ
ಣದೆಯುಮಿಱಿದೇರ್ಗಳವು ತ
ಪ್ಪದೆ ನಟ್ಟುವು ನೆಟ್ಟನದ್ಭುತಂ ನೆಗೞ್ವಿನೆಗಂ  ೧೨೫

ವ || ಅಂತು

ಕಂ || ಕರಿ ಕರಿಯೊಳ್ ತೇರ್ ತೇರೊಳ್
ಹರಿ ಹರಿಯೊಳ್ ಪತ್ತಿ ಪತ್ತಿಯೊಳ್ ನೆತ್ತರ ಸು
ಟ್ಟುರೆ ಪುಟ್ಟೆ ತಾಗಿ ತಳ್ತಿಱಿ
ದೆರಡುಂಬಳಮೊಡನೆ ಬಿಡದೆ ಮಡಿದುವು ಧುರದೊಳ್     ೧೨೬

ವ || ಅಂತು ಸಮಬಟ್ಟಾಗೆ ಪೆಣದೆ ಬೆಟ್ಟಾಗೆ ಪಡಲ್ವಡುವ ಪಡೆಯ ಸಾವಿಂಗೇವೈಸಿ

ಕಂ || ಎಕ್ಕತುಳದಿಂದೆ ಕಾದುವ
ತಕ್ಕಿಂದಂ ಭೂಪರಿರ್ವರುಂ ದೋರ್ವಳದಿಂ
ದಿಕ್ಕರಿಗಳನವಯವದಿಂ
ಧಿಕ್ಕರಿಪುದನಣೆದು ನೂಂಕಿದರ್ ನಿಜಗಜಮಂ    ೧೨೭

ವ || ಅಂತು ತಂತಮ್ಮ ದಂತಿಯಂ ನಿಃಶಂಕರಂ ಕುಶದಿಂದವುಂಕಿ ನೂಂಕೆ

ಕಂ || ಇರ್ವರ್ಗಂ ಮೆಯ್ಮಱೆದವ
ರಿರ್ವರ ದೋರ್ವಳದಗುರ್ವನೀಕ್ಷಿಸೆ ಕಡುಪಿಂ
ಪೂರ್ವಾದ್ರಿಯೊಳಪರಾದ್ರಿಯೆ
ನಿರ್ವಂದದೆ ತಾಗುವಂತೆ ತಾಗಿದುವು ಗಜಂ        ೧೨೮

ವ || ಆ ಸಮರಸಮಯದೊಳ್

ಚಂ || ಮದಜಳಧಾರೆಯಿಂ ಜಗುನೆ ಪುಟ್ಟಿದ ಪರ್ವತದಂತಗುರ್ವನ
ಪ್ಪಿದುದರವಿಂದರಾಜಗಜಮಾ ಗಜದುನ್ನತದಂತಘಾತದಿಂ
ಮದಮೊಳಸೋರೆ ಶೋಣನದಿ ಪುಟ್ಟಿದ ಪರ್ವತದಂತೆ ತೋಱುತಿ
ರ್ದುದು ಮಿಗೆ ವಜ್ರವೀರನ ಗಜಂ ಪೊಱಪೊಣ್ಮುವಸೃಕ್ಪ್ರವಾಹದಿಂ ೧೨೯

ವ || ಅಂತು ವಜ್ರವೀರನ ವಾರಣೇಂದ್ರಂ ನೊಂದು ಬೆಂಗುಡುವುದುಂ ಕಂಡಾತನ ಚಾತುರ್ದಂತಬಳಮೊಂದಾಗಿಯರವಿಂದನರೇಂದ್ರನ ಕರೀಂದ್ರಕ್ಕೆಡೆವೊಕ್ಕು ಬೇಗದಿಂ ತಾಗೆ

ಮ || ಕರದಿಂ ದ್ವಾದಶಮಾಯತೋರುರದದಿಂದಷ್ಟಾದಶಂ ಸಪ್ತಮಾ
ಸುರವದ್ವಾಳಧಿಯಂ ಪದಪ್ರಕರದಿಂ ನಾಲ್ವತ್ತುನಾಲ್ಕಾ ವಧೋ
ತ್ಕರಮಾಗುತ್ತಿರೆ ಪೊಯ್ದು ಸೀೞ್ದುಗಿದುದೆತ್ತಂ ಮೆಟ್ಟಿ ಕೊಂದತ್ತು ದು
ರ್ಧರವಿದ್ವಿಟ್ಚತುರಂಗಮಂ ನಿಮಿಷದಿಂ ಮತ್ತೇಭಮಾ ಭೂಪನಾ   ೧೩೦

ವ || ಅಂತುಮಲ್ಲದೆ

ಮಸು || ತಲೆಗಳ್‌ಕಲ್‌ಪೆಟ್ಟೆ ಮಾಂಸಂ ರುಧಿರಂ ತೋಯಮಾಗಿರ್ಪಿನಂ ಮುಂ
ಗೆಲೆ ಪಾದಾಘಾತದಿಂ ಘಟ್ಟಿಸೆ ನಿಹತಗಜಂ ತೋರಗುಂಡಾಗೆ ಬೇಗಂ
ನೆಲಗಟ್ಟಂ ಕಟ್ಟಿ ಚೈತ್ರಧ್ವಜಮನೆ ನಿಱಿಸಲ್ಕೆಂದು ಬಂದಿರ್ದ ಕರ್ಮಾ
ಯಿಲನಂ ಪೋಲ್ತಿರ್ದುದಾ ರಾಜನ ವಿಜಯಗಜಂ ಕಾಲರೂಪಪ್ರಕೋಪಂ ೧೩೧

ವ| ಅಂತು ಕೃತಾಂತನೆ ದಂತಿರೂಪಂ ಕೆಯ್ಕೊಂಡಂತರವಿಂದರಾಜನ ದಂತಿ ಮಾಮಸಕಂ ಮಸಗಿ ಕೊಲುತ್ತುಂ ಬರೆ ಬಯಲೊಳ್‌ನಿತ್ತಱಿಸಲಾಱದಾನೆಯಂ ಬಿಟ್ಟವುಡಲಕ್ಕೆಯಂ ಮಱಿಗೊಂಡರೆಂಬಂತೋಡಿ ಪೋಗಿ ಕೋಂಟೆಯಂ ಮಱೆಗೊಂಡುಂ ಗಂಡನುೞಿಯದೆ ತನ್ನ ಸಮುನ್ನತದುರ್ಗಮಂ ಬಲಿದು ವಜ್ರವೀರಂ ಕಾದಲೆಂದು ನಿಂದುದ ನರವಿಂದಮಹಾರಾಜಂ ಕಂಡು ದೂಳಿಗೋಂಟೆಯಂ ಕೊಂಡಲ್ಲದೆ ನಿಲ್ಲೆನೆಂದದಱ ಪಕ್ಕದೆಡೆಯನೊಳಪೊಕ್ಕು ನೋಳೞ್ಪಾಗಳ್‌

ಕಂ || ದಸಿಗಳುಱೆ ಬಸಿದ ಸೂಲದ
ಸಸಿಗಳವೋಲಗೞೊಳೆಯ್ದೆ ನೆಟ್ಟುವು ಪುಗದಂ
ತಸದಳದ ಕುದುರೆಗಂಡಿಗ
ಳೆಸೆದುವದಂ ಪೞದೆಂತು ಪೊಣಿಗರೆನಿಪರ್‌೧೩೨

ಅರಿವಿತತಿ ತೆನೆಗೆ ಪಾಯ್ದಪು
ದುರವಣೆಯಿಂದೆಂದದಂ ನಿವಾರಿಪ ಬಗೆಯಿಂ
ನೆರಪಿದ ಕಲ್ಲುಂ ಕವಣೆಯು
ಮಿರೆ ಮಂಚಿಗೆಯಂತಿರೆಸದುವಟ್ಟಳೆ ಪಲವುಂ ೧೩೩

ಜೆಟ್ಟಿಗರ ವೀರರಸಮಂ
ನೆಟ್ಟನೆ ತೊಲ್ಕೆ ದಿಟ್ಟಿದೊಲೆಯಿಂದಧಟರ್‌
ಕಟ್ಟಿದ ಕಟ್ಟಳೆಯೆನಿಸಿದು
ದಿಟ್ಟಳಮೆನೆ ಕೋಟೆವೞಿಯ ಸೆಱೆಗೆಯ್ದಱೆಗಳ್‌೧೩೪

ತೆನೆಯೆಡೆಯ ಗಾಳಿಗೋಟೆಯ
ತೆನೆಯೆಡೆಯಿಂ ಪೋಪ ರವಿರಥದ ಗಾಲಿಗೆ ಮ
ತ್ತೆನಿಸದೆಣೆಯಾದುದೆಂಬಂ
ತೆನಸುಂ ಸೊಗಯಿಸಿದುವೀಕ್ಷಣಕ್ಕಾ ಕ್ಷಣದೊಳ್‌೧೩೫

ವ || ಮತ್ತಂ ತರಂತರಂಗೊಂಡ ಗಂಡಶೈಳಂಗಳನಿೞಿಸೆ ಬೞೆಯೊಳ್‌ಸೆಱೆಗೆಯ್ದ ಸೆಲೆಯ ಗುಂಡುಗಳಿಂ ಬಿದಿರ ಪೊದಱಿನಂತೆ ತಱುಗೆ ನಿಱೆಸಿದ ಡೆಂಕಣಿಯ ಸಬಳಂಗಳಿಂ ಕುಂಜಂಗಳಂತೆ ರಂಜಿಸುವ ಕೊತ್ತಳಂಗಳಿಂ ಶಿಖರಂಗಳಂತೆ ಮುಗಿಲಂ ಮುಟ್ಟುವಟ್ಟಳೆಗಳಿಂದ ಪೂರ್ವಪರ್ವತದಂತಗುರ್ವುವಡೆದರ್ವಿಸುವ ಕೋಂಟೆಯಂ ಬಳಸಿ ಬಂದವರ್ಕವರ್ಕೆ ತಕ್ಕ ಪೆಡ್ಡಿಯಂ ಸಮಕಟ್ಟಿಸಿ ಸಬ್ಬಲಗ್ಗೆಯಂ ಮಾಡಿಸಲುರ್ವೀಶ್ವರ ಕೆಯ್ವಿಸೆ

ಕಂ || ಆಳೋಕಿಸೆ ಮೊದಲೊಳ್‌ಬಾ
ಯ್ಗಾಳೆಗಮಲ್ಲಿಂ ಬೞಿಕ್ಕನುಕ್ರಮದಿಂ ಕ
ಲ್ಗಾಳೆಗಮುಮಗುರ್ವಿಪ ಬಿ
ಲ್ಗಾಳೆಗಮುಂ ನೆಗೆೞ್ದುದದ್ಭುತಂ ನೆಗೞ್ವಿನೆಗಂ ೧೩೬

ಕಣಿ ವೀರಕ್ಕೆನಿಸುವ ಬ
ಲ್ಕಣಿಯಣಿಯುಂ ಬೆದಱಿದತ್ತು ಬಿಡೆ ಭೈರವಡೆಂ
ಕಣಿಯಿಂದಂ ಚಿಮ್ಮುತೆ ಡೆಂ
ಕಣಿಯಿಂದಂ ಪಾಯ್ವ ಕಲ್ಗೆ ಭೋಂಕೆನಲಾಗಳ್‌೧೩೭

ಕಲ್ಲೊಳ್‌ತಾಗಿದ ಡೆಂಕಣಿ
ಗಲ್ಲೊಡೆದು ಸಿಡಿಲ್ದು ಸಿಡಿಲ ಗಡಣದವೋಲ್‌ತ
ಳ್ವಿಲ್ಲದೆ ಪೊಡೆದೊಡೆ ಸೆಡೆದೆರ್ದೆ
ಝಲ್ಲೆಂದೋಡಿದುದು ನೆರವಿ ನಗೆ ಪುರವರದಾ ೧೩೮

ಉ || ದೂರದೊಳಿರ್ದ ಮೋಹರಕೆ ಭೈರವಡೆಂಕಣಿ ಪತ್ತೆ ಸಾರ್ದುದ
ರ್ಕ್ಕಾರಯೆ ಬಿಮ್ಮೆನುತ್ತಿರದೆ ಚಿಮ್ಮುವ ಡೆಂಕಣಿ ಮತ್ತುಮಂತಱಿಂ
ಸಾರೆಯದರ್ಕೆ ಬಲ್ಗವಣೆಮಿಟ್ಟೆಗಳುಂ ಪಗುತಿರ್ಪುದರ್ಕೆ ವೀ
ರಾರಿಗೆ ಕೆಯ್ಯ ಕಲ್ಸರಿಗೆ ಪತ್ತುವುದರ್ಕೆಳಸಿತ್ತು ಪೊತ್ತ ಕಲ್‌೧೩೯

ಕಂ || ಪುದಿದಸಿಘಟ್ಟನದಿಂ ಪು
ಟ್ಟಿದ ಕಿಡಿಯುಂ ಕವಣೆಗಲ್ಗಳುಂ ಕೆಯ್ಗಲ್ಲುಂ
ಮದವದರಿಪ್ರಳಯದೊಳೊದ
ವಿದ ಕೆಂಡದ ಕಲ್ಲ ಮೞೆಯನನುಕರಿಸಿರ್ಕುಂ ೧೪೦

ಬಿಟ್ಟೇಱಿಂ ನೊಂದನ ಬಾ
ಯ್ವಿಟ್ಟೇಱಿಂದುಗುವ ಖಂಡಮಂ ಕಂಡಧಟಿಂ
ಬಿಟ್ಟೇಱಿಂದಂ ಸೆಡೆದನೆ
ನೆಟ್ಟನೆ ಮೆಯ್ವತ್ತಿ ಲಗ್ಗೆಯಂ ಮಾೞ್ಪಾಗಳ್‌೧೪೧

ವ || ಅಂತು ಮೆಯ್ವತ್ತಿ ಲಗ್ಗೆಯಂ ಮಾೞ್ಪಾಳ್ಗಳಂ ದುರ್ಗದವರ್ಗಳ್‌ನುರ್ಗುಮಾಡೆ ನಾಡೆಯುಂ ಸಿಗ್ಗಾಗಿ ಲಗ್ಗೆಯಂ ತೆಗೆಸಿ ಕಱೆಗೊಂಡು ಪೋಗದೆ ನಿಂದು ಕೋಂಟೆಯಂ ಕೊಳ್ವುಪಾಯ ಕೋಟಿಯಂ ಚತುರುಪಾಯಪ್ರೌಢನಪ್ಪ ಮರುಭೂತಿ – ಭೂತಳಪತಿಗಱೆಪಿದೊಡಾ ಸಚಿವನೆಂದ ತೆಱದಿಂದೆಲ್ಲಮಂ ನೆಱೆಯೆ ಮಾಡಿಸಿ ಮಱುದೆವಸಂ ದಿವಸಮುಖದೊಳ್‌ಪಲವುಮುಖದಿಂ ಗುಮ್ಮನಂ ಸಾರ್ಚಿಣ್ಮಿ ಕಾದುವರ ಕಾಣ್ಪಂ ಕಿಡಿಸುವಂತಗೞ ಗುಣ್ಪಂ ಕಿಡಿಸಿಯುಂ ಲಗ್ಗೆಯಂ ಪೊಯ್ಸಿಯುಂ ದುರ್ಗದ ನಾಯಕನ ಗರ್ವಪರ್ವತಮಂ ನುರ್ಗ್ಗುಮಾಡುವಂತೆ ತೆನೆಗಳಂ ನುರ್ಗುಮಾಡಿಸಿಯುಂ ನೆಲಗನ್ನದಿಂ ನೆಲವಲಕ್ಕೆ ಲಕ್ಕೆ ತೆಱದಿಂ ಕಾದುವರೆರ್ದೆ ಬಿಕ್ಕನೆ ಬಿರಿಯೆ ಕೋಂಟೆಯಂ ಜರಿಯಿಸಿಯುಂ ಲಗ್ಗೆಯಂ ಮಾಡಿಸೆ

ಕಂ || ಎಡಱಿದ ವಿಪಕ್ಷಬಲಮಂ
ಗಿಡಿಗಂ ಕಡುಪಿಂದೆ ಕಿಡಿಸಿ ರಣಬಾಳಕರಂ
ಬಿಡದೆಸೆವ ಗುಮ್ಮನಂಜಿಸಿ
ಪಡೆದುವು ತಂತಮ್ಮ ಸಂಜ್ಞೆಗನ್ವರ್ಥತೆಯಂ ೧೪೨

ಸಾರಂ ವೈರಿಗಳಂ ನಿ
ಸ್ಸಾರಂ ಮಾಡಿದುದು ಗುಱುವನೊಳವುಗುವವರಂ
ವೀರರನಧಟಲೆದುದು ನಿ
ರ್ಧಾರಂ ನಿರ್ಧಾಟಿಸಿತ್ತು ವೀರರ ಧೃತಿಯಂ ೧೪೩

ಕಲ್ಲೆರ್ದೆಯಂ ತಾಗಿದೊಡಂ
ಕಲ್ಲಿರ್ದೆಗಳ್‌ಬೆದಱದಿದಿರನದಿರದೆ ನಡೆದಾ
ಬಿಲ್ಲಾಳ್ಗಳ್‌ಬೇಗದಿನಿಂ
ಬಿಲ್ಲಾಳ್ಗಿನ್ನಿಱಿಯಲೆನಿಸಿ ನೆಱೆತೆಗೆದೆಚ್ಚರ್‌೧೪೪

ಗವನಿಯ ಮಱೆಗೊಂಡಿಱಿವಿಸು
ವವರ್ಗಳ ಕೆಯ್ಮಿಕ್ಕು ಮಿಕ್ಕು ತೋಱದವೋಲು
ಕೈವಮಿಲ್ಲದೆಚ್ಚು ಪಾರಿದೇ
ಱುವಾಳ್ಗೆ ಸನ್ನಾಹಮೆನಿಸಿದರ್‌ಬಿಲ್ಲಾಳ್ಗಳ್‌೧೪೫

ಬಾಳ್ಗಿತ್ತು ಬಸಿರ್‌ತೊಡೆ ನಡು
ತೋಳ್‌ಗಂಟಲುರಂ ಕರಂಗಳುಂ ಪಱಿವಿನೆಗಂ
ತೋಳ್ಗಡಿಯರಿಱಿಯೆ ಬಿಡೆ ಬಿ
ಲ್ಲಾಳ್ಗಳ್‌ಸರಿಗೇಱಿ ಮೞ್ಗಿದರ್‌ಕಡುಪಿಂದಂ ೧೪೬

ಅಳವಿಂದಂ ಪೊಯ್ದೊಡೆ ಕೆ
ಯ್ಗಳ ಬಳೆಗಳ್‌ಪೋಗೆ ಪೊಗದಾಂತಿಱಿದರ್‌ಕೆ
ಯ್ಗಳ ಬಳೆಗಳ್‌ಪೋದೊಡೆ ಪೆ
ಣ್ಗಳೞ್ಕುಗುಂ ಗಂಡರೞ್ಕಿ ಮಾಣ್ಬರೆ ಧುರಮಂ ೧೪೭

ರಯ್ಯಮೆನೆಸಿದುವು ಮಿಗೆ ಮುಂ
ಗೆಯ್ಯೇಱುಂ ಮುಡುಹಿನೇಱುಮುರದೇಱುಮವಾ
ರಯ್ಯೆ ವರವೀರವನಿತೆಗೆ
ಜಯ್ಯನವರ್‌ಕೂರ್ತು ಕೊಟ್ಟವೋಲ್‌ಕೂರಾಳ್ಗಳ್‌೧೪೮

ಬಿಟ್ಟಱೆಯ ಪೊಯ್ಲಿನಸುವೆಯೊ
ಳಿಟ್ಟರೆದವೊಲಾಗೆ ಮುನ್ನಮೇಱಿದವರ್‌ಪಿ
ಮ್ಮೆಟ್ಟದವಂದಿರ ಪೆಣನಂ
ಮೆಟ್ಟಿಯೆ ಬೊಬ್ಬಿಟ್ಟು ಸರಿಗೆವತ್ತಿದರಧಟರ್‌೧೪೯

ಅಳವಳಿಯದೆ ಕೋಟೆಯ ತೆನೆ
ಗಳೊಳೆತ್ತಂ ಸುತ್ತಿ ನೇಲ್ವ ಬಿರುದರ ಕರುಳಂ
ತಳದಿಂ ಪಿಡಿದಡರ್ದರ್‌ಬ
ಲ್ಮಿಳಿಯಂ ಪಿಡಿದಡರ್ದರ್‌ಬ
ಲ್ಮಿಳಿಯಂ ಪಿಡಿದಡರ್ವ ಮಾೞ್ಕೆಯಿಂ ಮೆಯ್ಗಲಿಗಳ್‌೧೫೦

ಸರಿಗೆವರಲಾರುಮಿಲ್ಲೆನೆ
ಸರಿಗೇಱಿ ಬೆಡಂಗುವಡೆದು ಸುಗ್ಗಿಯ ಗಿಳಿಯಂ
ತಿರೆ ತೆನೆಗಳನೆಡಗಲಿಸಿದು
ದುರುಕೋಪಾರುಣಿತತುಂಡಮಧಟರ ತಂಡಂ ೧೫೧

ಮ || ಮದವತ್ಕುಂಭಿಯ ಕುಂಭಮಂಡಳಕೆ ಕೋಪಾಟೋಪದಿಂ ಪಾಯ್ವ ಸಿಂ
ಗದವೋಲ್‌ಲಂಘಿಸಿ ದುರ್ಗದಟ್ಟಳೆಗೆ ಕಟ್ಟಾಳ್‌ಖೞ್ಗದಿಂ ಪೊಯ್ಯೆ ಕೊ
ಳ್ಮಿದುಳುದ್ವೃತ್ತರ ನೆತ್ತಿಯಿಂ ಸುರಿದು ದೇವಾನೀಕಮಾ ಯುದ್ಧಮಂ
ಪದೆಪಿಂದೀಕ್ಷಿಸಿ ಪುಷ್ಪವೃಷ್ಟಿಯನೆ ನೀಡುಂ ಮಾಡಿದಂತೊಪ್ಪುಗುಂ ೧೫೨

ವ || ಆ ಸಮಯದೊಳ್‌

ಕಂ || ಖಂಡಂ ಕೆದಱಿದೊಡಂ ಕೆಯ್‌
ಕಂಡಿಕೆವೋಗಿರ್ದೊಡಂ ಕರುಳ್‌ಸೂಸಿಯದೊಡಂ
ಕಂಡಿಯ ಬಾಯಿಯಂ ತೊಲಗದೆ
ಕಂಡರ್‌ಕಂಟಳಿಸೆ ಕಾದಿದರ್‌ಬಲ್ಗಂಡರ್‌೧೫೩

ಪಲ್ಗಳ್‌ಕೆದಱಿದೊಡಂ ಕಂ
ದಲ್ಗಳ್‌ಕನ್ನೆತ್ತರಿರ್ಪಿನಂ ಪುಟ್ಟಿದೊಡಂ
ಬಲ್ಗಂಡಂ ಸೂಸಿದೊಡಂ
ಬಲ್ಗಂಡರ್‌ಬೆದಱದಿಱೆದು ಕುಱೆದಱೆಯಾದರ್‌೧೫೪

ವ || ಅಂತು ದುರ್ಗಾಧಿಪ ವಾಚಾಳಭೂಪಾಳನ ತೋಳ್ಗಳ್‌ಬೀೞ್ವಂತೆ ಬಲ್ಲಾರ್ಳಗಳ್‌ಬೀೞ್ವುದುಂ ಕೋಂಟೆ ಡಿಳ್ಳಮಾದೊಡಳ್ಳೆರ್ದೆಗಳ್‌ಕೆಲಬರ್‌ಬಾಳಂ ಬಿಟ್ಟು ಬಾೞನಾಸೆಗೆಯ್ಯೆಯುಂ ಬಿಲ್ಲ ಬಲ್ಕಣಿಗಳ್‌ಕೆಲರ್‌ಕಣೆಯುಮನೀಡಾಡಿ ಕಣೆಯಮಂ ಕೊಂಡಾಡೆಯುಂ ಸಬಳಿಗರ್‌ಮಾನಸ ಬಳಸವೞಿಯೆ ಸಬಳಮಂ ಬಿಸುಡೆಯುಂ ಕುಂತದವರ್‌ಪಿಡಿವಡೆದ ಶಕುಂತದಂತೆ ಬಾಯ್ವಿಡೆಯುಂ ಕೆಲರ್‌ಬಲ್ಲಾಳ್ತನಮಂ ಬಿಟ್ಟಾಳ್ತನಮಂ ಪೂಣೆಯುಂ ಶಕ್ತಿಧರರ್‌ಶಕ್ತಿಯಂ ಬಿಟ್ಟು ಶಕ್ತಿಯಂ ಮಱೆಗೊಳೆಯುಂ ಮಾಸವಾರಿಗಳಾಸವಾರಿಗಳಾಗೆಯುಮಿಂತು ತನ್ನ ತಂತ್ರಂ ಭಯಾಕ್ರಾಂತಸ್ವಾಂತಮಾದುದಂ ಕಂಡು

ಕಂ || ಆರಯ್ಯೆ ವಜ್ರವೀರನ
ವೀರರಸಂ ಪಾದರಸವೋಲರವಿಂದೋ
ರ್ವೀರಮಣನ ತೇಜೋವಿ
ಸ್ತಾರಾಗ್ನಿ ಮುಖಕ್ಕೆ ಪಾಱೆ ಪೋದತ್ತಾಗಳ್‌೧೫೫

ಭ್ರಾಂತೇಂ ವಜ್ರದ ತೆಱದಿಂ
ದಂ ತನ್ನಯ ವೀರಮಾಜಿಯೊಳ್‌ತೂಗಿದೊಡ
ತ್ಯಂತಲಘುವಾದುದೃಷಿನಾ
ಯ್ತಿಂತವನೊಳ್‌ವಜ್ರವೀರವೆಸರನ್ವರ್ಥಂ ೧೫೬

ಬಲವೞಿಯೆ ವಜ್ರವೀರಂ
ಚಲಮಂ ದೋರ್ವಲಮನುೞಿದು ಜೀವನದೊಳ್‌ತ
ನ್ನೊಲವಿರೆ ರಂಜಿಪ ಸಂಜೆಯ
ಬಲದಿಂದಂ ಪಾರ್ವನಂತಿರೊರ್ವನೆ ಸರಿದಂ ೧೫೭

ಬಿಡೆ ಬೆಳಗುವ ಗುಣಮಣಿಗಳ
ನಡಿಗೃೞ್ದುವ ತರಳಸತ್ತ್ವನತ್ಯುದ್ವೃತ್ತಂ
ಜಡಧಿಯ ಸೇವ್ಯಂ ಭಂಗಂ
ಬಡುವುದು ನೆಲೆಗಿಡುವುದೆಂಬುದದು ತಕ್ಕುದೆ ದಲ್‌೧೫೮

ವ || ಅಂತು ವಜ್ರವೀರಂ ತನ್ನ ಜಸದೆಸಕಂ ಮೆಯ್ಗರೆಯೆ ಮೆಯ್ಗರೆದೋಡಿಪೊಗೆ

ಕಂ || ಮಾನಸದೊಳೆಸೆವ ಗುಣಮಭಿ
ಮಾನಂ ಕಿಡೆ ಹರಿಯಿಪಂತೆ ಬಸನಂ ಭಟಸಂ
ತಾನಂ ಕೆಟ್ಟೊಡೆ ನಗರದ
ನಾನಾವಸ್ತುವನೆ ಹರಿಯಿಸಿತ್ತಹಿತಜನಂ ೧೫೯

ಸ್ರ || ರಾಮಂ ಮುಂ ಲಂಕೆಯಂ ವಾರಿಧಿಪರಿವೃತಮಂ ಕೋತಿಭಾರಃ ಸಮರ್ಥಾ
ನಾಮೆಂಬೀ ಮಾತ ಮೆಯ್ತ್ವತ್ತೆಸೆದಿರೆ ತನಗಾಯತ್ತಮಂ ಮಾಡಿದಂತು
ದ್ದಾಮಂಬೆತ್ತಿರ್ದ ವಿದ್ವಿಟ್ಟುರಮನತಿಭರಂಗೆಯ್ದು ತಾಂ ಕಾದಿ ಕೊಂಡಂ
ಸಾಮರ್ಥ್ಯಂ ಧಾತ್ರಿಯೊಳ್‌ಬಿತ್ತಿರಿಪಿನಮರವಿಂದಾಹ್ವಯಂ ಕ್ಷೋಣಿಪಾಳಂ ೧೬೦

ಕಂ || ಆ ಪದದೊಳಮೆಱಗೆ ನಿಜ
ಶ್ರೀಪದಕಾ ವಜ್ರವೀರತನಯಂ ನಯದಿಂ
ಭೂಪತಿ ಕಾದನದಂತುಟೆ
ಶಾಪಾನುಗ್ರಹಸಮರ್ಥನಲ್ಲದನರಸೇ ೧೬೧

ಉ || ಓಡಿಸಿ ವಜ್ರವೀರನ ಕುಲಾಗತಭಾಸುರಕೋಶಮಂ ರಣ
ಕ್ರೀಡನ ಯೋಗ್ಯಭದ್ರಗಜವಾಜಿಗಳಂ ಮದನಂಗೆ ಹರ್ಷಮಂ
ಮಾಡುವ ರೂಪ ಯೌವನ ಕಳಾವಿಳಸದ್ಗಣಿಕಾಜನಂಗಳಂ
ನೋಡಿ ನೃಪಾಳಕಂ ತರಿಸಿಕೊಂಡನಖಂಡಿತಶೌರ್ಯಮಂಡಿತಂ ೧೬೨

ವ || ಎಂದು ತನ್ನಂ ಜಗಂ ಪೊಗೞೆ ಪದ್ಮನಗರದೊಳ್‌ಗುಣಸದ್ಮನಾ ವಜ್ರವೀರನ ಸುತನಪ್ಪ ಸುವೀರನಂ ನಿಲಿಸಿಯಾತನ ಮನೋರಥಮಂ ಸಲಿಸಿ

ಕಂ || ನಿಜರಾಜಧಾನಿಗನ್ವಿತ
ವಿಜಯಂ ಶ್ರೀಧರ್ಮನಂದನಂ ತಾನೆನೆ ಭೂ
ಭುಜಭನಭಿಮುಖನಾದಂ ತ
ನ್ನ ಜಸಂ ದಶದಿಙ್ಮಖಕ್ಕೆ ಪಸರಿಸುವಿನೆಗಂ ೧೬೩

ಮಸ್ರ || ಲಲಿತಶ್ರೀಪುಂಡರೀಕಂ ಸೊಗಯಿಸೆ ಕುಮುದಂ ಕೊರ್ವೆ ಪುನ್ನಾಗಪತ್ರಾ
ವಳಿ ಚೆಲ್ವಂ ತಾಳ್ದೆ ತೇಜೋರವಿಯೆಸೆಯೆ ಯಶಶ್ಚಾರುಚಂದ್ರಾಂಶು ದಿಙ್ಮಂ ಡಳಮಂ ತಳ್ಪೊಯ್ಯೆ ಜೈತ್ರೋತ್ಸವಮೆನೆ ಪುರಮಂ ರಾಜನಂದೆಯ್ದೆವಂದಂ
ಕಳಕಂಠೋದ್ಭೂತಗೀತಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೧೬೪

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತವಿನೇಯಜನವನಜನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವ ನಾಥಚರಿತಪುರಾಣದೊಳ್‌ಅರವಿಂದಮಹಾರಾಜ ವಿಜಯವರ್ಣನಂ ಅರವಿಂದಮಹಾರಾಜ ವಿಜಯವರ್ಣನಂ ತೃತೀಯಾಶ್ವಾಸಂ