ಕಂ || ಎಂದಿಂತು ಪೇೞೆ ಯತಿಪತಿ
ಸಂದೆಯಮಿಲ್ಲೆಂದೆ ನಂಬಿ ಪೊಣ್ಮಿದ ಪರಮಾ
ನಂದಭವ ಬಾಷ್ಪಜಳದಿಂ
ಮಿಂದೆಯ್ದೆ ಪವಿತ್ರಗಾತ್ರನಾಗಿರೆ ನಾಗಂ ೫೧

ತೊಳಗುವ ನೊಸಲೊಳ್‌ನಖರುಚಿ
ಮಳಯಜದಿಂ ತಿಳಕಮಿಟ್ಟು ಕಾರುಣ್ಯಸುನಿ
ರ್ಮಳಗಂಧೋದಕಮಂ ಯಮಿ
ತಳಿದು ಕರೀಂದ್ರದ ವಿಶಾಳಕುಂಭಸ್ಥಳದೊಳ್‌೫೨

ವ || ವೃಕ್ಷಾಯುರ್ವೇದನಿವೇದಿತ ದಿವ್ಯೌಷಧವಿಧಾನದಿಂ ಸದ್ಬೀಜಾಂಕುರಂ ಪಲ್ಲವ ಪ್ರಸವಸಂಪತ್ತಿಯನೊರ್ಮೊದಲೆ ಪಡೆವಂತೆ ಸದುಪದೇಶಲಬ್ಧಿವಶದಿಂ ನಿನ್ನಂತ ರಂಗದೊಳ್‌ಮುನ್ನಮೆ ಸಮ್ಯಗ್ದರ್ಶನರತ್ನಂ ಭಾವವ್ರತಪರಿಣತಮಾಗಿಯೆ ಪುಟ್ಟಿತ್ತಾದೊಡಂ ವ್ಯವಹಾರ ಸಮಾಶ್ರಯದಿಂ ದೃಢಂ ಮಾಡಲ್ವೇಡಿಯಾತ್ಮಾದಿ ಸಾಕ್ಷಿಕಮಾರಾಧಿ ಸಿದಪ್ಪೆವೆಂದು

ಮ || ಸಕಳ ಶ್ರಾವಕವಿಶ್ರುತವ್ರತಮನಾ ನಾಗಕ್ಕೆ ಸಮ್ಯಕ್ತ್ವಪೂ
ರ್ವಕಮಾಗಿತ್ತು ಮುನೀಶ್ವರರ್‌ಮಗುೞೆ ನಾನಾತೀರ್ಥಮಂ ಪುಣ್ಯಸಾ
ಧಕಮಂ ಬಂದಿಸಲೆಂದು ಪೋದರಿಭಮುಂ ತಾಂ ಮಾಡಿದತ್ಯುಗ್ರಪಾ
ತಕಮಂ ಚಿಂತಿಸಿ ನೋಂತೊಡಲ್ಲದಿದನಿನ್ನೆಂತುಂ ಗೆಲಲ್‌ಬರ್ಕುಮೇ ೫೩

ವ || ಎಂದಾ ಸಿಂಧುರಮರವಿಂದಮುನೀಂದ್ರರ್‌ಪರಮಕಾರುಣ್ಯದಿನಿತ್ತುತ್ತಮವ್ರತ ವಿತ್ತಮಂ ಚಿತ್ತದೊಳ್‌ತಾಳ್ದಿ ತತ್ಪರಿರಕ್ಷಣಪ್ರವರ್ಧನತತ್ಪರಂ ತನ್ನಂತರಂಗದೊಳಿಂತೆಂಗುಂ

ಕಂ || ಜೀವದಯಾಸಮಮೆನಿಸವ
ವಾವುಂ ಚರಿತಂಗಳಂತೆ ಚಿಂತಾಮಣಿಯೊ
ಲ್ದೀವುದನೀಪ್ಸಿತವಸ್ತುವ
ನೀವುದೆ ಶಿಲೆಯೆನಿತುಘನತೆಯಂ ಮಾಡಿದೊಡಂ ೫೪

ವ || ಎಂದು ಸಕಳಧರ್ಮಕಳ್ಪತರುಮೂಳಮೆನಿಪಖಿಳ ಸತ್ವಾನುಕಂಪಾಂಕುಶವಶನಾಗಿ

ಕಂ || ಪೋಪೆಡೆಯೊಳೊಱಗುವೆಡೆಯೊಳ್‌
ಮೇಪಂ ಕೊಳ್ವೆಡೆಯೊಳುದಕಮಂ ಕುಡಿವೆಡೆಯೊಳ್‌
ಪಾಪಲವಮಾಗದಂತೆವೊ
ಲೇಪೊೞ್ತುಂ ನೆಗೞ್ದುದಱಿದು ಕರಿ ಭದ್ರಗುಣಂ ೫೫

ಪಸಿವಿಂದಸು ಪೋಪೊಡಮದು
ಪಸಿಯಂ ಪಲ್ಲವಮನುಡಿದು ಮೇಯದು ತೃಷೆ ಭಾ
ಧಿಸೆಯುಂ ಕುಡಿಯದು ಸೈ
ರಿಸಿ ನಿರ್ಜರಜಳಮನಲ್ಲದುೞಿದಂಬುಗಳಂ ೫೬

ಉಪವಾಸದಿನಂಗಳೆ ಪಲ
ವು ಪಾರಣಾದಿನಮೆ ಕೆಲವುಮೆನೆ ನಮೆದೊಡಲಂ
ಕ್ಷಪಿಯಿಸಿತಿಭಮಘಬಂಧ
ಕ್ಕುಪಚಯಮದಱಿಂದಮಪ್ಪುದೆಂಬೀ ಮನದಿಂ ೫೭

ಅವಮೋದರ್ಯದಿನುಪವಾ
ಸವಿಧಿಗಳಿಂ ಕರಮೆ ನೋಂತು ಬಡವಾಯ್ತು ಭವಾ
ರ್ಣವಮಂ ದಾಂಟಿಪ ಜಿನಮತ
ನವಪೋತಮನೇಱಿತಕ್ಕೆ ಕರಿಗುಚಿತಮೆ ದಲ್‌೫೮

ತ್ರಸಮಂ ಕರಿಪತಿ ಪರಿರ
ಕ್ಷಿಸುವುದದೇವಿರಿದು ಬಹುವಿಧಸ್ಥಾವರಮಂ
ಪಸರಿಪ ದಯೆಯಿಂ ಪರಿರ
ಕ್ಷಿಸಿದಪುದೆನೆ ವಿಪುಳಪಾಪಭೀತಮನಸ್ಕಂ ೫೯

ಸತ್ವಂಗಳೊಳನುಗತಮಿ
ಥ್ಯಾತ್ವಂ ತಲೆದೋಱೆ ದೋಷಮಕ್ಕುಂ ಮಿಗೆ ಭ
ವ್ಯತ್ವಮಿರೆ ಗುಣವಿಕಾಸಂ
ತತ್ತ್ವವಿದರ ಮತದಿನದುವೆ ದಿಟಮಾಯ್ತಿಭದೊಳ್‌೬೦

ವ || ಅಂತು ನಿರಂತರಮುತ್ತರೋತ್ತರಚರಿತ್ರದಿಂ ನೆಗೞುತ್ತುಮಿರ್ದೊಂದುದೆವಸಂ

ಉ || ಆವಗಮನ್ಯವನ್ಯಕರಿಸಂತತಿ ನೀರುಣೆ ತಾಂ ಬೃೞಿಕ್ಕೆ ವೇ
ಗಾವತಿಗಾ ಗಜಾಳಿ ನಡೆದಧ್ವದೊಳೊಯ್ಯನೆ ನೀರನೂಡಲೆಂ
ದಾ ವರವಜ್ರಘೋಷಕರಿ ಪೋಗುತೆ ತತ್ತಟದಾನೆಗಂಪಲೊಳ್‌
ಭಾವಿಸದೆಯ್ದೆ ಪೊಕ್ಕು ಬಳವೞ್ಗಿರೆ ಕಂಡತಿರೋಷದೂಷಿತಂ ೬೧

ಕಂ || ಕಮಠಚರಕುಕ್ಕುಟೋರಗ
ಮಮರ್ದಿರೆ ಮಸ್ತಕಕ್ಕೆ ವಾರಣಾರಿಯ ತೆಱದಿಂ
ದಮೆ ಪಾಯ್ದುಕೊಂಡೊಡದಱ ವಿ
ಷಮವಿಷಮಾವರಿಸೆ ತನ್ನನವಹಿತಚೇತಂ ೬೨

ಚಂ || ಕರ್ದಮದೊಳ್‌ಗಜರಾಜಂ
ಬಿೞ್ದಲ್ಲಿಂದೇೞ್ವ ಬಗೆಯನೊಲ್ಲದದೇನಃ
ಕರ್ದಮದಗಲ್ವ ಬಗೆಯಂ
ಪೊರ್ದಿದುದು ಜಿನೇಂದ್ರಚಾರುಚರಣಸ್ಮರಣಂ ೬೪

ಒಡಲುಮನಾ ಕರ್ದಮದೊಳ್‌
ಪಡಿಯೆನೆ ಬೇರ್ಕೆಯ್ದು ನಿಜದ ಭಾವನೆ ಮನದೊಳ್‌
ತೊಡರ್ದಿರೆ ಕರ್ಮದ ತೊಡರಂ
ತೊಡರಂ ಪಱಿವಂತೆ ಪಱೆದುದಾ ಗಜರಾಜಂ ೬೫

ಜೈನಪದಂಬಿಡಿದು ಸುಖ
ಸ್ಥಾನಾಮರಪದವಿಗಾನೆ ಬಿೞ್ದೊಡೆ ತನ್ನಂ
ತಾನೆ ನೆಗಪುವುದೆನಿಪ್ಪಿದ
ನಾ ನಾಗಂ ನನ್ನಿ ಮಾಡಿ ನೆಗಪಿತು ತನ್ನಂ ೬೬

ಉ || ಅಗ್ಗಳಮಪ್ಪ ವಿದ್ಯೆ ಕುಲಮೆಂಬಿವು ದರ್ಶನಶುದ್ಧಿಯಿಲ್ಲದಿ
ರ್ಪೆಗ್ಗನೊಳಪ್ಪುದಲ್ತೆ ವಿಫಳಂ ಮರುಭೂತಿಗಿವಿರ್ದುಮಾಯ್ತು ತಿ
ರ್ಯಗ್ಗತಿಯಂತಮಿಲ್ಲದ ಕುಯೋನಿಯೊಳಂ ಜಿನಭಕ್ತಿಯೊಂದಱಿಂ
ಸಗ್ಗಮದಾದುದಂತದಱಿನಾರ್ಜಿಸುಗೂರ್ಜಿತ ಜೈನಭಕ್ತಿಯಂ ೬೭

ವ || ಆ ನಾಕಲೋಕದಾಕಾರಮೆಂತೆಂದೊಡೆ ಮಂದರಶೈಳಮೂಳದಿಂ ಲೋಕಾಗ್ರಕ್ಕ ಮಗ್ರಮೆನಿಸಿದ ಸಪ್ತರಜ್ಜಾಯಾಮಕ್ಕೆ ವ್ಯೋಮದೊಳೇಕಲಕ್ಷಯೋಜನಂ ಕುಂದಿದೊಂದು ವರೆರಜ್ಜುವರಂ ಷಷ್ಟಿಲಕ್ಷಸಂಖ್ಯಾನವಿಮಾನಂಗಳನೊಳಕೊಂಡು ಗಗನ ಮಂಡಳಮಂಡನಮೆನಿಸಿ ಸೌಧರ್ಮೇಶಾನಕಲ್ಪದ್ವಯಂ ಅಲ್ಲಿಂ ಮೇಲೆ ತತ್ಪ್ರಮಾಣಾಯಾಮ ರಜ್ಜುವಿನೊಳ್‌ವಿಂಶತಿಲಕ್ಷತ್ರಿದಶದಸದನಶೋಭಿತ ಸನತ್ಕುಮಾರಮಾಹೇಂದ್ರ ಕಲ್ಪದ್ವಂದ್ವಂ ತತ್ಪರಿಮಿತನ ಭೋಭಾಗದೊಳನುಕ್ರಮದಿಂದಾಱೆಡೆಯೊಳರ್ಧಾರ್ಧರಜ್ಜುವಿಸ್ತಾರಿಗಳಾಗಿ ಚತುರ್ಲಕ್ಷವಿಬುಧಾಲಯೋಪಲಕ್ಷಿತ ಬ್ರಹ್ಮಬ್ರಹ್ಮೋತ್ತರಕಲ್ಪದ್ವಿತಯಂ ಪಂಚಾಶತ್ಸಹಸ್ರನಿರ್ಜರನಿವಾ ಸಾಂಚಿತ ಲಾಂತವಕಾಪಿಷ್ಠ ಕಲ್ಪಯುಗ್ಮಂ ಚತ್ವಾರಿಂಶತ್ಸಹಸ್ರದೇವಗೇಹಮಹಿತಶುಕ್ರಮಹಾಶುಕ್ರಕಲ್ಪಯುಗಂ ಷಟ್ಸಹಸ್ರದಿವಿಜಭವನವಿನುತ ಶತಾರ ಸಹಸ್ರಾರಕಲ್ಪಯುಗಳಂ ಸಪ್ತಶತಾಮರಧಾಮಾಭಿರಾ ಮಾನತಪ್ರಾಣತಕಲ್ಪಯುಗಂ ಆರಣಾಚ್ಯುತಕಲ್ಪಯುಗದೊಳ್‌ಶತಚತುಷ್ಟಯಂ ತದಗ್ರಿಮಭಾಗದೊಳೇಕರಜ್ಜೂಚ್ಛ್ರಯವಿಯತ್ತಳದೊಳ್‌ಮೇಲೆ ಮೇಲೆ ಲೀಲೆವಡೆದೇಕಾದಶೋತ್ತರ ಶತಾಮರ್ತ್ಯಹರ್ಮ್ಯರಮ್ಯಾಧಸ್ಥನವಗ್ರೈವೇಯಕತ್ರಯಂ ಸಪ್ತಾಧಿಕಶತಸುಮನಶ್ಶರಣಸಮುದಿ ತಮಧ್ಯಮಗ್ರೈವೇಯಕತ್ರಿತಯಮೇಕಾಗ್ರನವತಿನಾಕಿನಿವಸನಲಸಿತೋಪರಿಮ ಗ್ರೈವೇಯಕತ್ರಯಂ ನವರ್ನರಂಜಿತನವಾನುದಿಶೆ ಪಂಚರತ್ನಾಂಚಿತಪಂಚಾಣೂತ್ತರೆ ಚೆಲ್ವುವೆತ್ತಿರ್ಕುಂ ಇವೆಲ್ಲಂ ಕೂಡಿಚತುರಶೀತಿಲಕ್ಷಸಪ್ತನವತಿಸಹಸ್ರತ್ರಯೋವಿಂಶತಿಸಂಖ್ಯಾನಂಗಳುಮಿಂದ್ರಕಶ್ರೇಡೀ ಬದ್ಧಪ್ರಕೀರ್ಣಕಾಭಿಧಾನಂಗಳುಂ ಸಂಖ್ಯಾತಾಸಂಖ್ಯಾತೋಭಯ ವಿಸ್ತಾರಂಗಳುಮಮರ ಸಮಿತಿರುಚಿರಚಿತ ನಿತ್ಯಪೂಜಾವಿರಾಜಿತಾವಳಯ ಜಿನನಿಳಯವಿಳಸಿತಂಗಳುಮಾಗಿರ್ಪುವು ಮತ್ತವಱಚೆಲ್ವಂ ಬಿತ್ತರಿಸುವೊಡೆ

ಕಂ || ಸುರಕುಧರಮಧಿಷ್ಠಾನದ
ಸಿರಿಯಂ ಪಡೆವಿನೆಗಮಿರ್ತರದಿನೆಂಟೆಂಟಂ
ಕರುಮಾಡಮನಡಕಿಲ್ಗೊಂ
ಡಿರೆ ಸರಸಿಜಭವನೆ ಮಾಡಿದಂತೆಸೆದಿರ್ಕುಂ ೬೮

ಕಲ್ಪಂಗಳ್‌ಪದಿನಾಱು ವಿ
ಕಳ್ಪಿಸೆ ಶಶಿಕಳೆಗಳಂದದಿಂದಂ ನಯನ
ಕ್ಕೊಳ್ಪಂ ಪಡೆಯುತ್ತಿರ್ಪುವ
ನಳ್ಪಸುಖಾಮೃತಮನಾವಗಂ ಕಱೆಯುತ್ತುಂ ೬೯

ಗ್ರೈವೇಯಕಮಮರಶ್ರೀ
ಗ್ರೈವೇಯಕಮೆನಿಸಿ ಸೊಗಯಿಕುಂ ನವರತ್ನ
ಶ್ರೀವಿಳಸಿತಮದು ನಯನೇಯಂ
ದೀವರಹರ್ಷಾವಕಾಶ ಶಶಿಸಂಕಾಶಂ ೭೦

ಸುರಸದ್ಮಪ್ರಾಸಾದ
ಕ್ಕುರುಮಣಿರುಚಿರಂ ನವಾನುದಿಶೆ ಘಂಟೆಯವೋಲ್‌
ಪರಿಶೋಭಿಸೆ ಪಂಚಾಣೂ
ತ್ತರೆ ಶಶಿಮಣಿಕಳಶದಂತೆ ಕಣ್ಗೊಳಿಸಿರ್ಕುಂ ೭೧

ವ || ಅಂತುಮಲ್ಲದೆ

ಮಸ್ರ || ವರ ಮುಕ್ತಿಸ್ಥಾನಜೈನಾಶ್ರಯದ ಸುಖನಿವಾ[ಸಂ ಕರಂ] ಸನ್ನುತಾನೂ
ತ್ತರೆ ಲಕ್ಷ್ಮೀಮಂಡಪಂ ಮಿಕ್ಕನುದಿಶೆ ವಿತತ ದ್ವಾರವಾ ರತ್ನರಾಜಿ
ಸ್ಫುರಿತಗ್ರೈವೇಯಕಶ್ರೇಣಿಗಳೆನೆ ಗಣಿಕಾವಾಟದೊಂದಂದದಿಂದಿ
ರ್ತೆರದಿಂದೆಂಟೆಂಟು ಕಲ್ಪಂ ಮಿಗೆ ಸೊಗಯಿಸುಗುಂ ದೇವಕಾಂತಾಳಿಕಾಂತಂ ೭೨

ವ || ಆ ಕಳ್ಪಜರ ಕಳ್ಪಾತೀತತರನಲ್ಪಸುಖಸುಧಾಸಮುದ್ರಮೆನಿಸಿದಾಯುರಾದಿಗಳಂ ವಿಕಳ್ಪಿಸುವೊಡೆ

ಕಂ || ವರ ಸೌಧರ್ಮೇಶಾನದೊ
ಳೆರಡೆಸೆವ ಸನತ್ಕುಮಾರಮಾಹೇಂದ್ರದೊಳೇೞ್‌
ನಿರುತಂ ಬ್ರಹ್ಮಬ್ರಹ್ಮೋ
ತ್ತರದೊಳ್‌ಪತ್ತಕ್ಕುಮಾಯುರಂಭೋನಿಧಿಗಳ್‌೭೩

ಲಾಂತವ ಕಾಪಿಷ್ಠದೊಳೋ
ರಂತಿರೆ ಪದಿನಾಲ್ಕು ಮತ್ತಮುೞಿದಿರ್ದವಱೊಳ್‌
ಭ್ರಾಂತೇನೆರಡೆರಡಧಿಕಂ
ಕಾಂತಾಚ್ಯುತಕಲ್ಪಮವಧಿಯೆನೆ ವನನಿಧಿಗಳ್‌೭೪

ಗ್ರೈವೇಯಕಮೊಂಬತ್ತಱೊ
ಳಾವಗಮೊಂದೊಂದೆ ಪೆರ್ಚೆಯನುದಿಶೆಗಕ್ಕುಂ
ಮೂವತ್ತೆರಡುಸಮುದ್ರಂ
ಭಾವಿಸೆ ಮೂವತ್ತುಮೂಱನುತ್ತರೆಗಕ್ಕುಂ ೭೫

ದ್ವಿತಯ ದ್ವಿತಯ ಚತುಷ್ಕ
ದ್ವಿತಯ ಚತುಷ್ಕ ಪ್ರತೀತ ತ್ರಿತಯ ತ್ರಿತಯ
ತ್ರಿತಯಚತುರ್ದಶ ಸ್ಥಳದೊಳ್‌
ವಿತತಸ್ಥಳದಮರಸಮಿತಿಯಂಗೋತ್ಸೇಧಂ ೭೬

ಮೊದಲಿಂ ಮೊೞನೇೞಾಱ
ಯ್ದದಱೆಂ ನಾಲ್ಕು ಮೂಱುವರೆ ಮೂಱು ಬೞಿ
ಕ್ಕದಱಿಂ ದಳಹೀನಂ ಬೞಿ
ಕದಱೆಂದಂ ಬೞಿಕಮೊರ್ಮೋೞನೆ ತೊದಳುಂಟೇ ೭೭

ಮೊದಲೆರಡೆರಡಱೊಳಂ ತ
ಪ್ಪದೆ ಕಾಯಸ್ಪರ್ಶನಪ್ರವೀಚಾರಂ ಭೂ
ವಿದಿತತ್ರಿ ಚತುಷ್ಕದೊಳ
ಪ್ಪುದು ದಿವದೊಳ್‌ರೂಪಶಬ್ದಚೇತಃಕಾಮಂ ೭೮

ಕ್ರಮದಂಗಸ್ಪರ್ಶನರೂ
ಪ ಮನೋಹರಶಬ್ದ ಹೃತ್ಪ್ರವೀಚಾರಮನಂ
ತಮರತತಿ ನಿಃಪ್ರವೀಚಾ
ರಮಾಂತುದು ಕಾಮೆಸುಖಮುಮೆಂದಱಿಪುವವೋಲ್‌೭೯

ಒಳ್ಪಿಂ ನೆಗೞ್ದಿಂದ್ರಾದಿ ವಿ
ಕಳ್ಪಾತೀತರ್‌ಸ್ವಯಂಪ್ರಭಾತ್ತ ವಿಶಿಷ್ಟರ್‌
ತಳ್ಪೊಯ್ದು ಕಾಮಸುಖದೊಂ
ದೊಳ್ಪಡರಹಮಿಂದ್ರರತಿಶಯಾನಲ್ಪಸುಖರ್ ೮೦

ಒಳಗಣ ಶುಭಲೇಶ್ಯಾಸಂ
ಕುಳಕ್ಕೆ ಸಲೆ ಸದೃಶಮೆನಿಸಿ ಸುರರ ಶರೀರಂ
ಪಳಿಕಿನ ಕರಡಿಗೆಯೆನೆ ನಿ
ರ್ಮಳಿನಂ ತದ್ರುಚಿಯನಾಂತು ಕಣ್ಗೊಳಿಸಿರ್ಕುಂ ೮೧

ಮಾಸಾರ್ಧಕ್ಕೊರ್ಮೆ ಗಡು
ಚ್ಛ್ವಾಸಂ ಸಮನಿಸುವುದೇಕಶರಧಿಸ್ಥಿತಿವೆ
ತ್ತಾ ಸುರರ್ಗಮೃತಾಹಾರದೊ
ಳಾಸಕ್ತಿ ಸಹಸ್ರವತ್ಸರಕ್ಕೊಡರಿಸುಗುಂ ೮೨

ದಿವ್ಯ ಕಳೇವರ ಕಳಿತರ್‌
ದಿವ್ಯಾಂಬರ ದಿವ್ಯಗಂಧ ದಿವ್ಯಾಭರಣರ್‌
ದಿವ್ಯಾನ್ನ ದಿವ್ಯಮಾಳಾ
ದಿವ್ಯವಧೂಮಧೂರಭೋಗನಿಧಿಗಳ್‌ದಿವ್ಯರ್‌೮೩

ಮೇಗಣಮೇಗಣ ಸುರರ ಸು
ಖಾಗಮಮಱಿವಾಯು ಬೋಧಮಧಿಕಂ ದೇಹಾ
ಭೋಗಂ ಕುಂದುವುದೆಂದು ಜಿ
ನಾಗಮವಿದಱಿವರುೞಿದ ಜಡಱಿದಪರೇ ೮೪

ವ || ಅಂತು ನಿರಂತರೈಕಾಂತನಿಸರ್ಗಸುಖಸಂಸರ್ಗಮೆನಿಪ್ಪ ಸ್ವರ್ಗಂಗಳೊಳಗೆ

ಕಂ || ಮನದೊಳ್‌ಭಾವಿಸಿ ಪನ್ನೆರ
ಡನನೂನವ್ರತಮನನಿತನುಪ್ರೇಕ್ಷೆಗಳಂ
ಜನಿಯಿಸಿತದು ಕರಿ ಪನ್ನೆರ
ಡನೆಯ ಸಹಸ್ರಾರಕಲ್ಪದೊಳ್‌ಸುಖಪದದೊಳ್‌೮೫

ಕರಮೆಸೆವ ಮುತ್ತು ಸಿರ್ಪಿನ
ಪೊರೆಯೊಳ್‌ಪಜ್ಜಳಿಸಿ ತೋರ್ಪ ತೆಱದಿಂ ಚೆಲ್ವಾ
ವರಿಸಿದುಪಪಾದತಳ್ಪದ
ಪೊರೆಯೊಳ್‌ಸಂಭವಿಸಿ ತೊಳಗಿ ಬೆಳಗಿದನಮರಂ ೮೬

ಅಱಿಕೆಯ ಮನಸಿಜಸುಖದೊಂ
ದೆಱೆವೆಟ್ಟೆನಿಪಮರರಮಣಿಯರ ಪುಣ್ಯಮೆ ಕ
ಣ್ದೆಱೆವಂತೆ ವಿಮಾನದ ಪಡಿ
ತೆಱೆದುದು ದೆಸೆದೆಸೆಗೆ ಕಂಪು ಪಸರಿಸುವಿನೆಗಂ ೮೭

ಸುಮನೋವಲ್ಲಭನಿವನೆಂ
ದಮರಗಣಕ್ಕೆಲ್ಲಮಱಿಪುವಂತಾ ಕ್ಷಣದೊಳ್‌
ಸುಮನೋವರ್ಷಂ ಸುರಿದುದು
ನಮೇರುಮಂದಾರಪಾರಿಜಾತಪ್ರಭವಂ ೮೮

ಪರಿವೃಢಜನನಸಮುದ್ಭವ
ಪರಿವಾರಮನೋನುರಾಗಲುತಿಕಾಂಕುರಮಂ
ತರದಿಂ ನೆಗಪುತ್ತುಂ ಬಿ
ತ್ತರದಿಂ ತೀಡಿತ್ತು ಮಂದಚಾರುಸಮಿರಂ ೮೯

ಚಂ || ಗುಡಿ ಗೃಹದೇವತಾನಿಕರದೊಳ್‌ನಿರಿಯಂತೆ ವಿಮಾನರಾಜಿಯೊಳ್‌
ಗೆಡೆಗೊಳೆ ರತ್ನ ತೋರಣದ ಸಂತತಿ ತತ್ಕಟಿಸೂತ್ರಶೋಭೆಯಂ
ಪಡೆಯೆ ತದೀಯನರ್ತನಲಯೋಚಿತವಾದ್ಯನಿನಾದದಂದದಿಂ
ದೊಡರಿಸೆ ಮಂಗಳಾನಕರವಂ ಜನನೋತ್ಸವಮೊಪ್ಪಿತಾತನಾ ೯೦

ವ || ಅಂತು ಪುಣ್ಯಪುಂಜನ ಜನನಕ್ಷಣ ವಸಂತಸಮಯದೊಳಮರಸಮಿತಿಚೇತೋ ನಂದನಾನಂದಮನೆತ್ತಂ ಬಿತ್ತರಿಸೆ

ಚಂ || ಸ್ತನಕಳಶಕ್ಕೆ ಪೊಂಗಳಸಮಾನನಶೋಭೆಗೆ ರತ್ನದರ್ಪಣಂ
ವಿನುತವಿಶಾಳಲೋಚನಮರೀಚಿಗೆ ಮಲ್ಲಿಗೆಯಚ್ಚಮಾಲೆ ಬೆ
ಳ್ಪನೆ ಕಱೆಯುತ್ತುಮಿರ್ಪ ನಗೆಗಕ್ಷತಮಂತೆಣೆಯಾಗೆ ಬಂದರಂ
ದನುಪಮರಾಗದಿಂದ ತಳೆದು ಮಂಗಳವಸ್ತುಗಳಂ ಲತಾಂಗಿಯರ್‌೯೧

ವ || ಅಂತು ತನತನಗೆ ಸೇಸೆಯಿಕ್ಕಲೆಂದು ಬಂದ ನಿಕಾಮಕೋಮಳಾಮರಕಾಮಿನಿ ಯರುಮನೇಕ ಭಂಗಿ ಸಂಗತ ಸರಸಭಾವ ಸಂಭಾವನಾ ರಂಭೋರುಹ ರಂಭಾನೃತ್ಯಾನುಗ ಗಂಧರ್ವಗಣಗೇಯಮಾನ ಬಂಧುರಗೇಯ ದಿವಿಜವಾದಕವಾದ್ಯಹೃದ್ಯನಿನಾದಮುಂ ನಿಳಿಂಪ ಪುಣ್ಯಪಾಠಕವರ್ಯಸಮುಚ್ಛಾರ್ಯಮಾಣ ಜಯಜೀವನಂದವರ್ಧಸ್ವ ರವಮುಂಲೋಚನಗೋಚರಮುಂ ಶ್ರವಣರಮಣೀಯಮುಮಾಕಸ್ಮಿಕಮುಮಾಗೆ

ಚಂ || ತುಱುಗಿದನೂನಕಾನನದೊಳೊರ್ವನೆ ದಿಗ್ಭ್ರಮೆಯಿಂ ತೊೞಲ್ದು ಬಂ
ದೊಱಗಿದನಂ ತದರ್ಜಿತ ಸಮೂರ್ಜಿತಪುಣ್ಯದಿನೊರ್ವನಿಂದ್ರನ
ೞ್ಕಱೊಳೆ ನಿಜಾಲತಾಲಯದ ಶಯ್ಯೆಯೊಳೊಯ್ದಿರಿಸಿಟ್ಟೊಡಾಗಳೆ
ೞ್ಚಱುತುಮೆ ವಿಸ್ಮಯಂಬಡುವವೋಲ್‌ಮಿಗೆ ವಿಸ್ಮಿತನಾದನಾ ಸುರಂ ೯೨

ಮ || ಇದು ತಾನಾವುದೊ ಲೋಕಮಿ ಪರಿಜನಂ ತಾನಾವುದಾನಾರ್ಗೆ ಆ
ವುದನಾರಿಂದಮೆ ನೋಂತೆನೆಂಬಿನೆಗಮಾ ದೇವಂ ಭವತ್ಪ್ರತ್ಯಯಂ
ವಿದಿತಂ ತೊಟ್ಟನೆ ಪುಟ್ಟೆ ಬೋಧಮದಱಿಂ ಸ್ವರ್ಲೋಕಮಿ ಸೈನ್ಯಮೆ
ನ್ನದು ಮುನ್ನಾಂ ಗಜಮಂದು ನೋಂತೆನರವಿಂದಶ್ರೀಮುನೀಂದ್ರೋಕ್ತಿಯಿಂ ೯೩

ಚಂ || ಸೊಗಯಿಪ ಪಾರಿಜಾತ ಹರಿಚಂದನಪುಷ್ಪದಿನಾದ ಬಣ್ಣವಾ
ಸಿಗಮುಮನೊಪ್ಪುತಿರ್ಪತಿವಿಚಿತ್ರಸುವಸ್ತ್ರಸುರತ್ನಭೂಷಣಾ
ಳಿಗಳುಮನಾಗಳೋಲಗಿಸಿ ಮುತ್ತಿನ ಸೇಸೆಯನಿಕ್ಕಿ ಸಂತಸಂ
ಮಿಗೆ ಪೊಡೆವಟ್ಟು ಬಿನ್ನವಿಸಿದರ್‌ವಿಭುಗಾ ಸುರಮಂತ್ರಿಕಾಂತೆಯರ್‌೯೪

ತ್ರಿವಿದಶನಿವಾಸಮಿಂತಿದು ನಿಜಾರ್ಜಿತಪುಣ್ಯದಿನಾದುದೀ ವಿಮಾ
ನದೊಳನುಬಂಧಿಸಿರ್ಪ ವನಿತಾಜನಮಿ ಪರಿವಾರಮೆಯ್ದೆ ನಿ
ನ್ನದು ಮದನಾಸ್ತ್ರಮೂರ್ತಿ ರಮನೀನಯನೋತ್ಪಲಹರ್ಷದಾಯಿಯ
ಪ್ಪುದಱೊಳೆ ದೇವ ನೀಂ ವರಶಶಿಪ್ರಭನೈ ಸುಖವಾರ್ಧಿವರ್ಧನಾ ೯೫

ಕಂ || ಇನಿತುವಿಭವಂ ನಿನಗೆ ಸಂ
ಜನಿಯಿಸಿದುದು ಜಿನಪದಾಬ್ಜಭಕ್ತಿಯಿನಿನ್ನುಂ
ಜಿನನನೆ ಪೂಜಿಸು ಪುಣ್ಯಮ
ನನುಭವಿಸುತುಮಱಿವನದನೆ ನೆರಪಲವೇೞ್ಕುಂ ೯೬

ಎನೆ ಮನದೆಗೊಂಡು ವಿವಿಧಾ
ರ್ಚನೆಯಿಂ ಜಿನಚೈತ್ಯರಾಜಿಯಂ ಭಕ್ತಿಭರಾ
ವನತಂ ಪೂಜಿಸಿ ತಳೆದಂ
ಘನಪುಳಕಮನಮರಕಾಮಿನೀಮುಖತಿಳಕಂ ೯೭

ವ || ಅಂತು ತಳೆದು ಬೞೆಯಂ

ಮ || ಪರಿವಾರಂಬೆರಸಾ ಶಶಿಪ್ರಭಸುರಂ ತಾರೇಶನೆಂತಂತುಟಂ
ಬರಮಂ ಚಿತ್ರಿಸೆ ಬಂದು ದಿವ್ಯಮಣಿಯಿಂ ದಿವ್ಯಾರ್ಚನಾದ್ರವ್ಯದಿಂ
ದರವಿಂದವ್ರತಿನಾರ್ಥನಿರ್ದ ಶಿಲೆಯಂ ತತ್ಕುಂಜರೋದ್ಯತ್ಕಳೇ
ವರಮಂ ಪೂಜಿಸಿದಂ ಸ್ವಕೀಯಸುರಲೋಕಶ್ರೀನಿಮಿತ್ತಂಗಳಂ ೯೮

ವ || ಅಂತು ಪೂಜಿಸಿ ಮಗುೞ್ದು ಬಂದು

ಕಂ || ಪರಿವೃತವಿಮಾನಮಣಿಗಣ
ಮರೀಚಿಯಂ ತನ್ನ ರುಚಿಯಿನಿನರುಚಿ ದೀಪಾಂ
ಕುರಮನಿೞಿಪಂತಿರಿೞಿಪುದು
ವರ ಸ್ವಯಂಪ್ರಭವಿಮಾನಪ್ರತಿಮಾನಂ ೯೯

ನಾನಾರತ್ನ ವಿಮಾನಾ
ನೂನಪ್ರಭೆಯಂ ಸ್ವಯಂಪ್ರಭಾಖ್ಯಾನಸುಖ
ಸ್ಥಾನವಿಮಾನಪ್ರಭೆ ಗೆ
ಲ್ದಾ ನಾಮಂ ತನಗೆ ಸಾಮ್ಯಮೆನೆ ಸೊಗಯಿಸುಗುಂ ೧೦೦

ವ || ಆ ವಿರಾಜಮಾನವಿಮಾನದೊಳ್‌

ಚಂ || ಸುರುಚಿರರತ್ನ ಗೇಹಸಹಜಾಭರಣಪ್ರಭೆಯಂ ಸ್ವದೀಪ್ತಿ ಬಿ
ತ್ತರಿಸೆ ಸುರದ್ರುಮಪ್ರಸವಶೇಖರಸೌರಮಂ ನಿಜಾಂಗಬಂ
ಧುರತರಗಂಧಮಿರ್ಮಡಿಸೆ ಕಾಂತಿಯ ತಿಂಥಿಣಿ ಸಾರಸೌರಭಾ
ಕರನೆನೆ ಕಣ್ಗೆ ವಂದನಮರೀಜನಕಂತುನಿಭಂ ಶಶಿಪ್ರಭಂ ೧೦೧

ಕಂ || ಮೂಱುವರೆಮೊೞನೆನಿಪ ತನು
ಬೀಱುತ್ತಲರಂಬಿನಂದದಿಂ ತನಿಗಂಪಂ
ನೀಱೆಯರ ಮನಮನೆಱಗಿಸೆ
ಜಾಱೇಂ ಜವ್ವನದಿನಮರನೆಸೆದಂ ನಿಸದಂ ೧೦೨

ಅಯಮೂರ್ತಿ ಶುಕ್ಲಶೋಣಿತ
ಮಯಮಲ್ಲಂ ಮೌಕ್ತಿಕಾರುಣಾಶ್ಮದ್ಯುತಿಸಂ
ಚಯದಿಂದೆ ಶುಕ್ಲಶೋಣಿತ
ಮಯನೆನಿಪಂ ದಿವಿಜನಿಂತು ಚಿತ್ರಚರಿತ್ರಂ ೧೦೩

ಸಹಜಾಂಬರಭೂಷಾಸ್ತ್ರ
ಙ್ಮಹಿತಂ ಮಳರಹಿತನಾತ್ತ ಯೌವನಶೋಭಾ
ವಿಹಿತಂ ನೆನೆವಂ ಷೋಡಶ
ಸಹಸ್ರವರ್ಷಕ್ಕದೊರ್ಮೆ ದಿವ್ಯಾಶನಮಂ ೧೦೪

ಲಲಿತಮುಖಕಮಳಪರಿಮಳ
ಮಿಳಿತಂ ಮಳಯರುಹಪವನನಂ ನೆನೆಯಿಸೆ ನಿ
ರ್ಮಳನೆಂಟುತಿಂಗಳಂದಿಂ
ಗಲಘುಸುಖಾಂಭೋಧಿ ಸುಯ್ವನೊರ್ಮೆ ಸುರೇಶಂ ೧೦೫

ಮಾತಿನೊಳೆ ವಿನೂತಮನೋ
ಜಾತಸುಖಮನಮರರಮಣಿಯರ್‌ಸಕಳಕಳಾ
ನ್ವೀತಂಗೆ ಪಡೆದು ಶಬ್ದಾ
ದ್ವೈತಮನಭಿನಯಿಪ ವಾಣಿಯಂ ನೆನೆಯಿಸಿದರ್‌೧೦೬

ಮ || ಹರಿ ನೀಳಂ ಶನಿ ಮಾಣಿಕಂ ಮಹಿಸುತಂ ಮುಕ್ತಾಫಳಂ ಭಾರ್ಗವಂ
ಗರುಡೋದ್ಗಾರ ಶಶಾಂಕಜಂ ಮರಕತ ಸ್ವರ್ಭಾನು ಗೋಮೇಧಿಕಂ
ಗುರುವಾಗಂಬರಮಂ ಸ್ವಯಪ್ರಭವಿಮಾನಂ ಪೋಲೆ ಪುಣ್ಯೋದಯಂ
ಬೆರಸಿರ್ದಂ ಶಶಿವೋಲ್‌ಶಶಿಪ್ರಭಸುರಂ ರುಕ್ಚಂದ್ರಿಕಾಭಾಸುರಂ ೧೦೭

ಚತುರಸ್ತ್ರೀಕಮಳಾಂಚಿತಂ ವಿನಯರತ್ನಂ ಪುಣ್ಯವೇಳಾಸಮ
ನ್ವಿತಮಾಹ್ಲಾದಿವಿನೋದವಿಭ್ರಮಯುತಂ ನಾನಾಮರೋರ್ವಿಜರ್‌
ಜಿತಮಾ ಷೋಡಶಸಾಗರೋಪಮಮಲಂಪಿಂ ಸಾರಸೌಖ್ಯಾಮೃತೋ
ನ್ನತಿಯಿಂ ಮಾಡೆ ಶಶಿಪ್ರಭಂ ಸೊಗಯಿಸುತ್ತಿರ್ದಂ ಕಳಾವಲ್ಲಭಂ ೧೦೮

ಉ || ಮೆಲ್ಪಳವಟ್ಟು ತೋಱೆ ನಡೆಯಲ್‌ದನಿ ಮುಟ್ಟೆಪಾಡಲೊಂ
ದಲ್ಪೊಸತಾಗೆ ನರ್ತಿಸಲಭೀಕ್ಷಿಸೆ ನಲ್ಮೆಯನುಂಟುಮಾಡೆ ಪೊ
ರ್ದಲ್‌ಪರಿಹಾಸಮಂ ಮೆಱೆಯಲಿಂಬೆನೆ ಬಲ್ಲಮರಾಂಗನಾಳಿ ಸಂ
ಕಲ್ಪಿತಸೌಖ್ಯಮಂ ಸಲಿಸೆ ಕಲ್ಪಜನೊಪ್ಪುತುಮಿರ್ಪನಾಗಳುಂ ೧೦೯

ಕಂ || ದೃಶ್ಯಂ ಸುರವನಿತಾಜನ
ವಶ್ಯಂ ನಿಜಮೂರ್ತಿ ವಾಣಿ ಸರಸಂ ವಾಣೀ
ವಶ್ಯಮೆನೆ ಶುಕ್ಲಶುಭಕರ
ಲೇಶ್ಯೆಯನೊಳಕೊಂಡು ಸೊಗಯಿಪಂ ಸುರರಾಜಂ ೧೧೦

ಚಂ || ಗರಿಮಮಯಕ್ಕೆ ಮಿಕ್ಕಣಿಮಮಜ್ಞತೆಗರ್ಚ್ಯಜಿನೇಶ್ವರಾರ್ಚನಾ
ಪರಿಕರವೃದ್ಧಿಯೊಳ್‌ಮಹಿಮೆಯಾಶಿತೆ ತತ್ಪರಿಚರ್ಯೆಯಲ್ಲಿ ಬಿ
ತ್ತರಿಸುವ ಕಾಮರೂಪತೆ ಸುಭ್ರತ್ಯವಶಿತ್ವಮದೊಪ್ಪೆ ವಿಶ್ರುತಾಂ
ಬರತಳಯಾನದೊಳ್‌ಲಘಿಮಮಾಖ್ಯೆಯೊಳೊಪ್ಪೆ ಸುರಂ ವಿರಾಜಿಪಂ ೧೧೧

ಮ. ಸ್ರ || ರಸಗೇಯಂ ಭಾವನೃತ್ಯಂ ಪಡೆಯಲೆಸೆವ ವಾದ್ಯಂ ಮನಕ್ಕೆಂದುಮೊಳ್ಪಂ
ಪಸಿವುಂ ನೀರೞ್ಕೆಯುಂ ನಿದ್ದೆಯುಮಲಸುಗೆಯುಂ ಮಾಣ್ದುದೆಂಬಂದದಿಂ ಮಾ
ಣಿಸೆ ಲೀಲಾಪಾಂಗದೇವೀನಿವಹಸರಶಬ್ದ ಪ್ರವೀಚಾರದಿಂ ಸಂ
ತಸಮಂ ತಾಳ್ದುತ್ತುಮಿರ್ದಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೧೧೨

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್‌ಶಶಿಪ್ರಭದೇವವಿಭವವರ್ಣನಂ ಪಂಚಮಾಶ್ವಾಸಂ