ಕವಿ ವಿಚಾರ:

ಪಾರ್ಶ್ವನಾಥ ಪುರಾಣ ಮತ್ತು ಕಲ್ಪೊಳೆ ಶಾಸನದ ಕರ್ತೃ ಪಾರ್ಶ್ವ ಪಂಡಿತ. ಈತನ ಕಾಲ ನಿರ್ಣಯಿಸಲು ಈತನ ಕೃತಿಗಳು ಉತ್ತಮ ಆಧಾರ ಒದಗಿಸಿವೆ. ಕಲ್ಪೊಳೆ ಶಾಸನ “ಶಕವರ್ಷಂ ೧೧೨೭ನೆಯ ರಕ್ತಾಕ್ಷಿ ಸಂವತ್ಸರದ ಪೌಷ್ಯ ಶುದ್ಧ ಬಿದಿಗೆ ಶನಿವಾರದಂದು ದತ್ತರಾಯಣ ಸಂಕ್ರಮಣದಲ್ಲಿ” ಬರೆಯಲಾಯಿತೆಂದು ಹೇಳಿರುವುದರಿಂದ ಆರ್. ನರಸಿಂಹಾಚಾರ್ಯರು ಇದರ ಕಾಲವನ್ನು ಕ್ರಿ.ಶ.೧೨೦೫ ಎಂದು ನಿರ್ಣಯಿಸಿದ್ದರು. ಆರ್.ಎನ್. ಗುರುವ ಅವರು ಈ ಶಾಸನದ ಮರು ಓದಿನಲ್ಲಿ ಇಲ್ಲಿ ಬರುವ ರಕ್ತಾಕ್ಷಿ ಸಂವತ್ಸರ ಶಕವರ್ಷ ೧೧೨೭ಕ್ಕೆ ಗತವಾಗಿರದೆ ವರ್ತಮಾನವಾಗಿದೆ ಎಂದು ಗ್ರಹಿಸಿ ಇದರ ಕಾಲ ೧೨೦೪ಕ್ಕೆ ಸಮನಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾರ್ಶ್ವನಾಥ ಪುರಾಣವು ಶಾಸನ ರಚನೆಯಾದ ಹದಿನೇಳು ವರ್ಷಗಳ ಬಳಿಕ ಸೃಷ್ಟಿಯಾಗಿದೆ. ಈ ಕಾವ್ಯಾಂತ್ಯದಲ್ಲಿ –

ಶಕವರ್ಷಂ ಚತುರಬ್ಧಿ ಚಂದ್ರ ಶಶಿಸಂಖ್ಯಂ ಚಿತ್ರಭಾನೂತ್ಥ ಕಾ
ರ್ತಿಕ ಶುದ್ಧೋದಿತ ಪಂಚಮೀಧಿಷಣವಾರಂ ಪೂಣ್ಕೆ ಸಂಪೂರ್ಣಮಾ
ಯ್ತು ಕವಿ ಪ್ರಸ್ತುತ ಪಾರ್ಶ್ವನಾಥಚರಿತಂ ಪಾರ್ಶ್ವೋದಿತಂ ಕೂಡೆ ನ
ರ್ತಿಕೆ ತತ್ಕೀರ್ತಿವೋಲೂರ್ಜಿತಾರ್ಥ ವಿಲಸತ್ಕಾವ್ಯಂ ಧರಾಭಾಗದೊಳ್ (೧೬ – ೧೮೫)

ಎಂಬ ಪದ್ಯವಿದ್ದು ಇದು ಈಗಾಗಲೇ ವಿದ್ವಾಂಸರ ಚರ್ಚೆಗೆ ಗ್ರಾಸವಾಗಿದೆ. ಎಂ. ಮರಿಯಪ್ಪ ಭಟ್ಟ ಮತ್ತು ಎಂ. ಗೋವಿಂದರಾವ್ ಅವರು – “ಇಲ್ಲಿ ಹೇಳಲ್ಪಟ್ಟಿರುವ ಚಿತ್ರಭಾನು ಸಂವತ್ಸರವು ದಾಕ್ಷಿಣಾತ್ಯ ಸಂಪ್ರದಾಯಕ್ಕನುಸಾರವಾಗಿ ವ್ಯವಹೃತವಾದ ಚಿತ್ರಭಾನುವಾಗಿದ್ದ ಪಕ್ಷದಲ್ಲಿ ಕವಿಯ ಪೋಷಕನಾದ ನಾಲ್ಕನೆಯ ಕಾರ್ತವೀರ್ಯನು ಶಕ ೧೧೪೪ರಲ್ಲಿ ಎಂದರೆ ಕ್ರಿ.ಶ.೧೨೨೨ರಲ್ಲಿ ಆಳುತ್ತಿದ್ದಿರಬೇಕು; ಮತ್ತು ಕವಿಯು ತನ್ನ ಗ್ರಂಥವನ್ನು ಆ ವರ್ಷದಲ್ಲಿಯೇ ಮುಗಿಸಿರಬೇಕು. ಪಾರ್ಶ್ವ ನಿರ್ಮಿತವಾದ ಒಂದು ಶಾಸನದ ಕಾಲವು ಕ್ರಿ.ಶ. ೧೨೦೫. ಆದುದರಿಂದ ಕವಿಯ ಕಾಲವು ಸು. ೧೨೦೫ – ೧೨೨೨ ಎಂದು ಸ್ಥೂಲವಾಗಿ ನಿರ್ಧರಿಸಬಹುದು” ಎಂದು ಹೇಳಿದ್ದು ಸಮಂಜಸವೇ ಆಗಿದೆ. ಒಟ್ಟಿನಲ್ಲಿ ಪಾರ್ಶ್ವಪಂಡಿತನ ಕಾಲ ಕ್ರಿ.ಶ. ೧೨೦೪ ಎಂದು ನಿರ್ದಿಷ್ಟಗೊಂಡಿದೆ.

ಕವಿ ತನ್ನ ಮಾತಾಪಿತೃ, ಗುರು, ಸೋದರ, ಆಶ್ರಯದಾತ ಇವರ ವಿಚಾರವಾಗಿಯೂ ಕೃತಿಯಲ್ಲಿ ಪ್ರಸ್ತಾಪಿಸಿದ್ದಾನೆ –

ಲೋಕಣನಾಯಕಂ ವಿಬುಧಲೋಕನುತಂ ಪಿತೃ ಕಾಮಿಯಕ್ಕನ
ವ್ಯಾಕುಳಶೀಲೆ ತಾಯ್ ತನಗೆ ನಾಗಣನುತ್ತಮಭೋಗನಗ್ರಜಂ
ಶ್ರೀ ಕುಮುದೇಂದು ನಿರ್ಮಳ ಯಶಃಪ್ರಸರಂ ಗುರು ವಾಸುಪೂಜ್ಯನಾ
ತ್ಮೀಕೃತ ತತ್ವನಾಗಿ ನೆಗೞ್ದಂ ಗುಣಮಂಡನ ಪಾರ್ಶ್ವಪಂಡಿತಂ       (೧ – ೯೨)

ಎಂಬ ಪದ್ಯದಿಂದ ‘ವಿಬುಧಲೋಕನುತ’ ಎಂಬ ವಿಶೇಷಣಕ್ಕೆ ಪಾತ್ರನಾದ ಕವಿಯ ತಂದೆ ದೊಡ್ಡ ವಿದ್ವಾಂಸನಾಗಿರಬೇಕೆಂದು ತಿಳಿದುಬರುತ್ತದೆ. ತಾಯಿ ಕಾಮಿಯಕ್ಕ ಕೂಡ ‘ಅವ್ಯಾಕುಳ ಶೀಲೆ’ ಎನಿಸಿದ್ದಳು. ಪಾರ್ಶ್ವಪಂಡಿತನ ಗುರು ವಾಸುಪೂಜ್ಯಮುನಿ, ಸೋಡರ ನಾಗಣ. ಹೀಗೆ ಒಂದು ಉತ್ತಮ ಪರಿಸರ ಕವಿಗೆ ದೊರೆಯಿತೆನ್ನಬಹುದು.

ಪಾರ್ಶ್ವಕವಿ ತನ್ನ ಆಶ್ರಯದಾತನಾದ ಕಾರ್ತವೀರ್ಯ ಮತ್ತು ಆತನ ತಂದೆ ತಾಯಿಗಳ ಬಗೆಗೆ ಪಾರ್ಶ್ವನಾಥ ಪುರಾಣದ ಕಡೆಯಲ್ಲಿ ಮತ್ತು ಕಲ್ಪೊಳೆ ಶಾಸನದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದು ಈ ಕಾರಣದಿಂದಾಗಿ ಕಾವ್ಯಕ್ಕೆ ಚಾರಿತ್ರಿಕ ಮಹತ್ವವೂ ಪ್ರಾಪ್ತವಾಗಿದೆ. ವೀರ ಶ್ರೀನಿಧಿ ಕಾರ್ತವೀರ್ಯ (೧೬ – ೧೮೬), ಪೊಗರಂಭೋರುಹ ಸಂಭವಂ (೧೬ – ೧೮೭), ಶ್ರೀಕಾರ್ತವೀರ್ಯ (೧೬ – ೧೮೮) ಎಂಬ ಪದ್ಯಗಳಲ್ಲಿ ರಟ್ಟವಂಶದ ಪ್ರಸಿದ್ಧ ರಾಜರ ಉಲ್ಲೇಖವಿದೆ. ರಟ್ಟರು ಕಲಚೂರ್ಯರ ಕೈಕೆಳಗೆ ಸಾಮಂತರಾಗಿದ್ದು ಕೆಲವು ಕಾಲ ಸೌಂದತ್ತಿಯನ್ನೂ ಕೆಲವು ಕಾಲ ಬೆಳಗಾವಿಯನ್ನೂ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಪಾರ್ಶ್ವಕವಿ ವೀರ ಶ್ರೀನಿಧಿಯಾದ ಕಾರ್ತವೀರ್ಯ, ಇವನ ಪುತ್ರ ಲಕ್ಷ್ಮಣ ಕ್ಷೋಣಿಪ, ಈತನ ಪತ್ನಿ ಚಂದ್ರಿಕಾದೇವಿಯ ಗರ್ಭದಲ್ಲಿ ಜನಿಸಿದ ಕಾರ್ತವೀರ್ಯರ ಬಗೆಗೆ ಹೇಳಿದ್ದಾನೆ. ಇವರಲ್ಲಿ ಲಕ್ಷ್ಮೀದೇವನು ಕ್ರಿ.ಶ. ಸು. ೧೨೦೮ರಲ್ಲಿ ಆಳುತ್ತಿದ್ದ. ಈತನ ಮಗ ನಾಲ್ಕನೆಯ ಕಾರ್ತವೀರ್ಯನೇ ಕವಿಯ ಪೋಷಕ. ಲಕ್ಷ್ಮೀದೇವನು ಕವಿ ನೇಮಿಚಂದ್ರನಿಗೆ ಪೋಷಕನಾಗಿದ್ದ.

ಪಂಪ ರನ್ನ ಮೊದಲಾದ ಕವಿಗಳಂತೆ ಪಾರ್ಶ್ವಕವಿ ಕೂಡ ತನಗೆ ಪ್ರೋತ್ಸಾಹವಿತ್ತ ನಾಲ್ಕನೆಯ ಕಾರ್ತವೀರ್ಯನೊಂದಿಗೆ ಕಥಾನಾಯಕನನ್ನು ಸಮೀಕರಿಸಲು ಪ್ರಯತ್ನಿಸಿರುವುದು ಅಲ್ಲಲ್ಲಿ ಕಂಡುಬರುತ್ತದೆ. ರಟ್ಟರಾಜರು ಜೈನಮತಾವಲಂಬಿಯಾಗಿದ್ದರು. ನೇಮಿಚಂದ್ರ ತನ್ನ ಲೀಲಾವತಿ ಕಾವ್ಯದಲ್ಲಿ ಲಕ್ಷ್ಮೀದೇವನನ್ನು ‘ರೂಪಕಂದರ್ಪ’ ಎಂದು ಕರೆದಂತೆ ಪಾರ್ಶ್ವಕವಿಯೂ ವಜ್ರನಾಭಿಗೆ ರೂಪಕಂದರ್ಪ ಎಂಬ ವಿಶೇಷಣ ಬಳಸಿರುವುದನ್ನು ಎಂ.ಮರಿಯಪ್ಪ ಭಟ್ ಮತ್ತು ಎಂ. ಗೋವಿಂದರಾವ್ ಅವರು ಗುರುತಿಸಿದ್ದಾರೆ. ಮಹಾಮಂಡಳೇಶ್ವರ ಎಂಬುದು ರಟ್ಟರ ಬಿರುದು. ಈ ಬಿರುದನ್ನು ಪಾರ್ಶ್ವಕವಿ ಆನಂದನಿಗೆ (೧೩ – ೩) ಕೊಟ್ಟಿದ್ದಾನೆಂದು ತಿಳಿಯಲಾಗಿದೆ. ಕಾವ್ಯದಲ್ಲಿ ಆನಂದನು ಒಂದು ಜಿನಾಲಯವನ್ನು ಕಟ್ಟಿಸುವ ಪ್ರಸಂಗವನ್ನು ವರ್ಣಿಸಲಾಗಿದೆ –

ಪುರುಷಾರ್ಥನಿಧಿ ಶಲಾಕಾ
ಪುರುಷತೆಯಂ ಮಾೞ್ಪ ಪುಣ್ಯರಾಶಿಗಳೆಂಬಂ
ತಿರೆ ಸೊದೆವೞಿದ ಶಲಾಕೆಯ
ಪರಮಜಿನಾಲಯಮನರ್ತಿಯಿಂದೆತ್ತಿಸಿದಂ  ೧೩ – ೪೨

ಎಂಬ ಪದ್ಯದ ಹಿನ್ನೆಲೆಯಲ್ಲಿ ನಾಲ್ಕನೆಯ ಕಾರ್ತವೀರ್ಯನು ಶಾಂತಿನಾಥ ಜಿನಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಉಂಬಳಿ ನೀಡಿದ ಚಾರಿತ್ರಿಕ ಘಟನೆಯನ್ನು ಸಮೀಕರಿಸಲಾಗಿದೆ. ಪಾರ್ಶ್ವನಾಥ ಪುರಾಣದ ಆರಂಭದಲ್ಲಿ ಬರುವ ‘ಪಾರ್ಶ್ವಾನತ ಭುವನ ಪತಿ’ (೧ – ೯೬) ಎಂಬ ಉಕ್ತಿಯಲ್ಲಿರುವ ‘ಭುವನಪತಿ’ ಎನ್ನುವುದು ನಾಲ್ಕನೆಯ ಕಾರ್ತವೀರ್ಯನನ್ನು ಸೂಚಿಸುತ್ತದೆ ಎನ್ನಲಾಗಿದೆ. ಆನಂದಭವದ ಕಥೆಯಲ್ಲಿಯೇ “ಪಾರ್ಶ್ವಪಂಡಿತ ನಿರ್ಮಿತ ಕಾವ್ಯದವೋಲ್ ಜಿನಾಲಯಂ ಪಡೆದು” (೧೩ – ೪೫) ಎಂದಿರುವುದೂ ಕೂಡ ಸಮಕಾಲೀನ ಅಂಶವನ್ನು ಕಾವ್ಯದಲ್ಲಿ ಅಂತರ್ಗತಗೊಳಿಸಿರುವಂಥದಾಗಿದೆ.

ಪಾರ್ಶ್ವನಾಥ ಪುರಾಣದಲ್ಲಿ ಕವಿ ತನ್ನ ಬಿರುದಾವಳಿಗಳನ್ನು ಮತ್ತು ಅವು ಪ್ರಾಪ್ತವಾಗಲು ಕಾರಣಗಳೇನೆಂಬುದನ್ನು ತಿಳಿಸಿದ್ದಾನೆ. ‘ಸುಕವಿಜನ ಮನೋಹರ್ಷ ಸಸ್ಯ ಪ್ರವರ್ಷಂ’ , ‘ವಿಭುಧ ಜನ ಮನಃಪದ್ಮಿನೀ ಪದ್ಮಮಿತ್ರಂ’, ‘ ಕವಿರಾಜಶೇಖರ’, ‘ ಸರಸ ಸಾಹಿತ್ಯ ವಿದ್ಯಾಧರ’ ಮುಂತಾದ ಬಿರುದುಗಳಿದ್ದು ‘ಕವಿಕುಳತಿಳಕ’ ಎಂಬುದು ಪ್ರತಿ ಆಶ್ವಾಸದಲ್ಲಿ ಕಂಡುಬರುತ್ತದೆ. ಇದರಿಂದ ಈತ ಪ್ರಸ್ತುತ ಕಾವ್ಯ ರಚನೆಗೆ ಮೊದಲೇ ಕವಿಯಾಗಿ ಪ್ರಸಿದ್ಧಿ ಪಡೆದಿದ್ದನೆಂದು ತಿಳಿಯಬಹುದು. ‘ದೇವನಾಂಪ್ರಿಯ’ ಎಂಬುದು ಅಶೋಕನ ಬಿರುದು. ಪಾರ್ಶ್ವಪಂಡಿತ (೭ – ೧೫) ಇದನ್ನು ಬಳಸಿದ್ದು ಪರಿಶೀಲನಾರ್ಹವಾಗಿದೆ.

ಪಾರ್ಶ್ವಕವಿ ರಟ್ಟರ ಆಸ್ಥಾನದಲ್ಲಿದ್ದುದರಿಂದ ಸವದತ್ತಿ ಅಥವಾ ಕಲ್ಲುಹೊಳೆಯಲ್ಲಿ ನೆಲಸಿರಬೇಕೆಂದು ಹೇಳಬಹುದು. ಏಳನೇ ಆಶ್ವಾಸದಲ್ಲಿ ಬರುವ ವಿದೇಹ ನಾಡಿನ ವರ್ಣನೆಯು ಸುಗಂಧವತಿಯ ವರ್ಣನೆಯೇ ಇರಬೇಕೆಂಬ ಊಹೆಯಿದೆ. ಈತ ತನ್ನ ಗುರುಪರಂಪರೆಯನ್ನು ಕವಿಪರಮೇಷ್ಠಿಯಿಂದ ಆರಂಭಿಸಿ ವೀರಣಂದಿಯವರೆಗೆ ಬಹಳ ದೀರ್ಘವಾಗಿ ನಿರೂಪಿಸಿದ್ದಾನೆ. ಅನಂತರ ಪಂಪ, ಪೊನ್ನ, ರನ್ನ, ಕಣ್ಣಮಯ್ಯ, ಗುಣವರ್ಮ, ಅಗ್ಗಳಮ ನೇಮಿಚಂದ್ರ, ಬಾಳಚಂದ್ರ, ನಾಗಚಂದ್ರ, ಬೊಪ್ಪಣ್ಣ, ಕೇಶಿಯಣ್ಣ, ಕವಿಕಾಮ, ವಾಸುದೇವ ಮೊದಲಾದ ಕವಿಗಳನ್ನು ನೆನೆದಿದ್ದಾನೆ. ಪೂರ್ವಕವಿ ಸ್ಮರಣೆ ಪ್ರಾಚೀನ ಕಾವ್ಯಗಳಲ್ಲಿ ಸಾಮಾನ್ಯವಾದರೂ ಪಾರ್ಸ್ವಕವಿ “ನೂತನ ಕವಿಗಳುಮೆಮಗೆ ಪುರಾತನ ಕವಿಗಳ ಸಮಾನರತಿಶಯ ಸುಗುಣಾನ್ವೀತರ್” ಎಂಬ ಭಾವನೆ ವ್ಯಕ್ತಪಡಿಸಿರುವುದು ಅಪೂರ್ವವೆನಿಸಿದೆ. ಸಮಕಾಲೀನ ಕವಿಗಳನ್ನು ಇಷ್ಟು ಔದಾರ್ಯದಿಂದ ಕಂಡಿರುವುದು ಈತನ ವ್ಯಕ್ತಿತ್ವದ ಔನ್ನತ್ಯವನ್ನು ಬಿಂಬಿಸುತ್ತದೆ. ಪಾರ್ಶ್ವಪಂಡಿತ ಕೆಲವು ಕವಿ ಕೃತಿಗಳನ್ನು ಉಲ್ಲೇಖಿಸಿದ್ದು ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಉಪಯುಕ್ತವಾಗಿದೆ. ಈತ ಹೇಳಿರುವ ಅಗ್ಗಳನ ‘ರೂಪಸ್ತವನ ಮಣಿಪ್ರವಾಳ’, ‘ಜಿನನಾಸ್ಥಾನಸ್ತವನ’, ಕವಿಕಾಮನ ‘ಸ್ತನಶತಕ’, ಕೇಶಿಯಣ್ಣನ ‘ಸಿಂಹಪ್ರಾಯೋಪಗಮನ’ ಗ್ರಂಥಗಳು ಅನುಪಲಬ್ಧವಾಗಿವೆ.

ಪಾರ್ಶ್ವಕವಿ ವಿರಚಿತ ಕಲ್ಪೊಳೆ ಶಾಸನವು ಮುಖ್ಯವಾಗುವುದು ಅದರಲ್ಲಿರುವ ಚಾರಿತ್ರಿಕ ಅಂಶಗಳಿಂದ. ಇದರಲ್ಲಿ ೪೦ ಪದ್ಯಗಳಿವೆ. ಗದ್ಯ, ವೃತ್ತಗಳಿಂದ ಕೂಡಿದೆ. ಶಾಂತಿನಾಥ ಬಸದಿಯ ಜೀರ್ಣೋದ್ಧಾರ, ಜೈನಗುರುಗಳು, ಕಾರ್ತವೀರ್ಯನ ತಾಯಿ ಚಂದಲದೇವಿಯ ವರ್ಣನೆ ಮುಂತಾದ ವಿಚಾರಗಳನ್ನು ಕವಿ ಇಲ್ಲಿ ನಿರೂಪಿಸಿದ್ದು ಕಾವ್ಯಾತ್ಮಕತೆಗಿಂತಲು ಇತರ ಕಾವ್ಯೇತರ ಸಂಗತಿಗಳಿಗಾಗಿ ಮುಖ್ಯವಾಗಿದ್ದು ಪಾರ್ಶ್ವನಾಥ ಪುರಾಣ ರಚನೆಗೆ ಪೂರ್ವಭಾವಿಯಾಗಿ ಬರೆದ ಕವಿಯ ಬರಹಗಳಾಗಿವೆ.

ಕವಿಗೆ ಚಂದಲದೇವಿಯ ಬಗ್ಗೆ ಅಪಾರ ಗೌರವ. ಆಕೆಯನ್ನು ಈತ –

ಶ್ರೀಪತಿ ಲಕ್ಷ್ಮೀದೇವ ಮಹಿವಲ್ಲಭ ವಲ್ಲಭೆ ಕಾರ್ತವೀರ್ಯ ಧಾ
ತ್ರೀಪತಿ ಮಲ್ಲಿಕಾರ್ಜುನ ಮಹೀಶನ ಮಾತೃ ಮಹಾಸತೀತ್ವ ಸೀ
ತೋಪಮೆ ಜೈನಪೂಜನ ಸುರೇಂದ್ರ ವಧೂಪಮೆ ರೂಪಕಂತುಕಾಂ
ತೋಪಮೆ ರಂಜಿಪಳ್ ನೆಗೞ್ದ ಚಂದಲದೇವಿ ಸಮಸ್ತ ಧಾತ್ರಿಯೊಳ್

ಎಂದು ಆಪ್ತವಾಗಿ ವರ್ಣಿಸಿದ್ದಾನೆ. ಇಲ್ಲಿಯ ಚಂದಲದೇವಿ ಹಗರಟಿಗೆ ನಾಡಿಗೆ ಸೇರಿದವಳು. ರಟ್ಟರು ಮತ್ತು ಹಗರಟಿಗೆ ನಾಡಿನ ರಾಜರು ಬಂಧುಗಳು. ಈ ಕಾರಣದಿಂದ ಕವಿ ಹಗರಟಿಗೆ ನಾಡಿಗೆ ಸೇರಿರಬಹುದೆಂಬ ಊಹೆಯೂ ಇದೆ. ರಟ್ಟರ ಚರಿತ್ರೆಯನ್ನು ಕಟ್ಟಿಕೊಡಲು ಕಲ್ಪೊಳೆ ಶಾಸನ ಕೂಡ ಬೆಂಬಲವಾಗಿ ನಿಲ್ಲುತ್ತದೆ.

ಕಥಾಸಾರ:

ಜಂಬೂದ್ವೀಪದ ಸುರಮ್ಯ ದೇಶದ ಪೌದನಪುರದಲ್ಲಿ ಅರವಿಂದನೆಂಬ ರಾಜ ಆಳುತ್ತಿದ್ದನು. ಅವನಿಗೆ ವಿಶ್ವಭೂತಿ ಎಂಬ ಮಂತ್ರಿ. ಈತನ ಪತ್ನಿ ಅನುಂಧರೆ. ಈ ದಂಪತಿಗಳಿಗೆ ಕಮಠ ಮತ್ತು ಮರುಭೂತಿ ಎಂಬ ಮಕ್ಕಳು. ಕಮಠನಿಗೆ ವಾರುಣಿ ಎಂಬ ಹೆಂಡತಿ. ಮರುಭೂತಿಯ ಹೆಂಡತಿ ವಸುಂಧರೆ. ಕಮಠ ದುರಾಚಾರಿಯಾಗಿದ್ದರೆ ಮರುಭೂತಿ ಸುಗುಣಿ.

ಒಂದು ದಿನ ವಿಶ್ವಭೂತಿ ತನ್ನ ತಲೆಯಲ್ಲಿ ನರೆಗೂದಲನ್ನು ಕಂಡು ವೈರಾಗ್ಯಪರನಾದ. ಸಂಸಾರವನ್ನು ತ್ಯಜಿಸಿ, ಹಿರಿಯ ಮಗ ದುಷ್ಟನಾಗಿದ್ದುದರಿಂದ ಮರುಭೂತಿಗೆ ಮಂತ್ರಿಪದವಿ ಒಪ್ಪಿಸಿದ.

ಒಮ್ಮೆ ಸಾಮಂತನೊಬ್ಬ ಮಲೆತಿರುವು ಸುದ್ದಿ ತಿಳಿದು ಮರುಭೂತಿ ತನ್ನ ಪ್ರಭುವಿನ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕಾಯಿತು. ಈ ಸಂದರ್ಭವನ್ನರಿತ ಕಮಠನು ಅಧಿಕಾರ ಅನುಭವಿಸುತ್ತ, ಸೋದರನ ಪತ್ನಿ ವಸುಂಧರೆಯನ್ನು ಒಲಿಸಿಕೊಂಡು ಅವಳಲ್ಲಿ ಅನುರಕ್ತನಾದನು. ಕೆಲವು ದಿನಗಳಾದ ಬಳಿಕ ಯುದ್ಧದಿಂದ ಹಿಂದಿರುಗಿದ ರಾಜ ಮತ್ತು ಮರುಭೂತಿಯರಿಗೆ ಗೂಢಚರರು ಕಮಠನ ವಿಷಯವನ್ನು ತಿಳಿಸಿದರು. ಆಗ ಮರುಭೂತಿ ಹೆಂಡತಿಯನ್ನು ಕೀಳಾಗಿ ಭಾವಿಸಿದನೇ ಹೊರತು ಅಣ್ಣನೊಡನೆ ಎಂದಿನಂತೆಯೇ ಇರತೊಡಗಿದ. ಇದರಿಂದ ರಾಜನೇ ಕಮಠನಂಥ ಕ್ರೂರಿಗೆ ತಕ್ಕನಾದ ಶಿಕ್ಷೆಗೆ ವಿಧಿಸಿ ನಾಡಿನಿಂದ ಹೊರಗಟ್ಟಿದ. ಇದನ್ನು ತಿಳಿದ ಮರುಭೂತಿ ಅಣ್ಣನಲ್ಲಿಗೆ ಹೋಗಿ ಕಾಲಿಗೆ ನಮಸ್ಕರಿಸುವಾಗ ಕಮಠನು ಮೋಸದಿಂದ ಮರುಭೂತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಂದನು.

ಮರುಭೂತಿ ಸಲ್ಲಕೀವನದಲ್ಲಿ ವಜ್ರಘೋಷನೆಂಬ ಆನೆಯಾಗಿ ಹುಟ್ಟಿದನು. ಆ ವೇಳೆಗೆ ಅರವಿಂದ ಮಹಾರಾಜನು ವಿರಕ್ತಿ ಹೊಂದಿ ಪ್ರತಿಮಾಯೋಗದಲ್ಲಿದ್ದನು. ಆನೆಯು ಆತನನ್ನು ಕಂಡು ಕೊಲ್ಲಲು ಹೋದಾಗ ಅರವಿಂದಮುನಿಯ ಎದೆಯಲ್ಲಿದ್ದ ಶ್ರೀವತ್ಸಲಾಂಛನ ಗೋಚರಿಸಿತು. ಪೂರ್ವಜನ್ಮದ ಸಂಬಂಧ ನೆನಪಾಗಿ ಅದು ತೊಂದರೆ ಕೊಡದೆ ಸುಮ್ಮನಾಯಿತು. ಅನಂತರ ಅದು ಉಗ್ರತಪಸ್ಸನ್ನಾಚರಿಸಿ ಒಂದು ದಿನ ನೀರು ಕುಡಿಯಲೆಂದು ವೇಗವತಿ ಮಡುವಿನಲ್ಲಿಳಿದಾಗ ಸರ್ಪರೂಪದಲ್ಲಿದ್ದ ಕಮಠನು ಕಚ್ಚಲಾಗಿ ಪ್ರಾಣಬಿಟ್ಟಿತು.

ವಜ್ರಘೋಷ ಆನೆ ಹೀಗೆ ಸತ್ತು ಸಹಸ್ರಾರು ಕಲ್ಪದಲ್ಲಿ ಶಶಿಪ್ರಭ ಎಂಬ ದೇವನಾಗಿ ಜನಿಸಿ ಸುಖವನ್ನು ಅನುಭವಿಸಿತು. ಜಿನೇಶ್ವರನನ್ನು ಮನಸ್ಸಿನಲ್ಲಿ ಸ್ಥಿರವಾಗಿ ಭಾವಿಸಲಾಗಿ ಸಮಾಧಿ ಮರಣ ಉಂಟಾಯಿತು. ಶಶಿಪ್ರಭನು ಮರುಭವದಲ್ಲಿ ಜಂಬೂದ್ವೀಪದ ತ್ರಿಲೋಕೋತ್ತಮ ನಗರದ ವಿದ್ಯುತ್ಪ್ರಭರಾಜನ ಪತ್ನಿ ವಿದ್ಯುನ್ಮಾಲೆಯ ಗರ್ಭದಲ್ಲಿ ರಶ್ಮಿವೇಗನಾಗಿ ಹುಟ್ಟಿದನು. ಈತ ಯೌವನಕ್ಕೆ ಕಾಲಿಟ್ಟಾಗ ದಾಟಲು ತಪಸ್ಸೇ ಯೋಗ್ಯವೆಂದು ತಪೋನಿರತನಾಗಿದ್ದಾಗ ಕಮಠನು ಹೆಬ್ಬಾವಾಗಿ ಹುಟ್ಟಿ ರಶ್ಮಿ ವೇಗಮುನಿಯನ್ನು ನುಂಗಿದನು.

ಐದನೆಯ ಜನ್ಮದಲ್ಲಿ ರಶ್ಮಿವೇಗಮುನಿಯು ಅಚ್ಯುತಕಲ್ಪದಲ್ಲಿ ಅಚ್ಯತೇಂದ್ರನಾಗಿ ಇಪ್ಪತ್ತೆರಡು ಸಾಗರೋಪಮಕಾಲ ಬದುಕಿದ್ದು, ಆರನೆಯ ಜನ್ಮದಲ್ಲಿ ಜಂಬೂದ್ವೀಪದ ಅಶ್ವಪುರವನ್ನಾಳುವ ವಜ್ರವೀರ್ಯ ಅರಸನ ಪತ್ನಿ ವಿಜಯಾಂಗನೆಗೆ ವಜ್ರನಾಭಿ ಎಂಬ ಮಗನಾದನು. ಈತ ಷಟ್ಖಂಡ ಸಾಮ್ರಾಜ್ಯ ಅನುಭವಿಸಿದ ಬಳಿಕ ವೈರಾಗ್ಯ ಹೊಂದಿ ಪ್ರತಿಮಾಯೋಗದಲ್ಲಿದ್ದಾಗ ಕಮಠನು ಕುರಂಗಕನೆಂಬ ಬೇಡನಾಗಿ ಹುಟ್ಟಿಬಂದು ಹಲವು ಬಗೆಯ ತೊಂದರೆಗಳನ್ನು ಕೊಟ್ಟನು. ವಜ್ರನಾಭಿ ದೇಹಭಾರ ಇಳಿಸಿದ ಬಳಿಕ ಏಳನೆಯ ಜನ್ಮದಲ್ಲಿ ಸುಭದ್ರ ವಿಮಾನದಲ್ಲಿ ಅಹಮಿಂದ್ರದೇವನಾಗಿ ಜನಿಸಿ ದಿವ್ಯಭೋಗವನ್ನು ಅನುಭವಿಸಿ ಅಲ್ಲಿಂದ ಚ್ಯುತನಾದ ತರುವಾಯ ಜಂಬೂದ್ವೀಪದ ಸಾಕೇತನಗರದಲ್ಲಿ ವಜ್ರಬಾಹು ಅರಸನ ಸತಿ ಪ್ರಭಂಕರೀ ದೇವಿಗೆ ಆನಂದನೆಂಬ ಮಗನಾಗಿ ಹುಟ್ಟಿದನು.

ಎಂಟನೇ ಜನ್ಮದ ಆನಂದನು ಮಹಾಮಂಡಲೇಶ್ವರನಾಗಿ ರಾಜ್ಯಭಾರ ಮಾಡಿದನು. ಒಂದು ದಿನ ವಿಪುಲಮತಿಯತಿಗಳಿಂದ ಜಿನಬಿಂಬಾರ್ಚನೆ ಜಿನಲಾಯಗಳ ಮಹತ್ವವನ್ನು ತಿಳಿದುಕೊಂಡು ಅನೇಕ ಜಿನಮಂದಿರಗಳನ್ನು ಕಟ್ಟಿಸಿದನು. ಅನಂತರ ನರೆಗೂದಲನ್ನು ಕಂಡು ನಿರ್ವೇಗಪರನಾಗಿ ತಪಸ್ಸಿನಲ್ಲಿದ್ದಾಗ ಕಮಠನು ಸಿಂಹರೂಪದಲ್ಲಿ ಜನಿಸಿ ಬಂದು ಆತನನ್ನು ಕೊಂದನು. ಆನಂದನು ಒಂಬತ್ತನೇ ಜನ್ಮದಲ್ಲಿ ಆನತಕಲ್ಪದಲ್ಲಿ ದೇವನಾಗಿ ಹುಟ್ಟಿ ಇಪ್ಪತ್ತು ಸಾಗರೋಪಮ ಕಾಲ ಸುಖದಲ್ಲಿದ್ದನು.

ಜಂಬೂದ್ವೀಪದ ವಾರಣಾಸಿ ನಗರದ ರಾಜ ಅಶ್ವಸೇನ. ಈತನ ಪತ್ನಿ ಬ್ರಹ್ಮದತ್ತೆ. ಈ ದಂಪತಿಗಳಿಗೆ ಆನತಕಲ್ಪದ ದೇವನು ಮಗನಾಗಿ ಹುಟ್ಟುವನೆಂದು ತಿಳಿದ ಇಂದ್ರನು ಕುಬೇರನಿಗೆ ರತ್ನದ ಮಳೆ ಸುರಿಸಲು ತಿಳಿಸಿದನು. ಬ್ರಹ್ಮದತ್ತಾದೇವಿಯ ಗರ್ಭದಲ್ಲಿ ಜಿನಶಿಶುವಿರುವುದನ್ನು ಅರಿತು ಗರ್ಭಶೋಧನೆ ಮಾಡಲು ಇಂದ್ರನು ಸ್ವರ್ಗದ ದೇವತಾ ಸ್ತ್ರೀಯರನ್ನು ಕಳಿಸಿದನು. ಬ್ರಹ್ಮದತ್ತಾದೇವಿ ಶುಭಸ್ವಪ್ನಗಳನ್ನು ಕಂಡಳು. ಇಂದ್ರನು ಗರ್ಭಾವತರಣ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದನು.

ಪುಷ್ಯಮಾಸ, ಕೃಷ್ಣಪಕ್ಷ, ಏಕಾದಶಿಯ ದಿನ ಶುಭವಾರ ಶುಭನಕ್ಷತ್ರ ಕೂಡಿಬರಲು ಬ್ರಹ್ಮದತ್ತಾದೇವಿ ಜಿನಶಿಶುವಿಗೆ ಜನ್ಮವಿತ್ತಳು. ಶಚಿದೇವಿ ತಾಯಿಯ ಬಳಿಯಲ್ಲಿ ಮಾಯಾ ಶಿಶುವನ್ನಿಟ್ಟು ಜಿನಶಿಶುವನ್ನು ಇಂದ್ರನ ಕೈಗಿತ್ತಳು. ಐರಾವತದಲ್ಲಿದ್ದ ಶಿಶುವಿಗೆ ಇಂದ್ರರು ಚಾಮರ ಬೀಸಿದರು. ಕ್ಷೀರಸಮುದ್ರದ ನೀರಿನಿಂದ ಅಭಿಷೇಕ ಮಾಡಿ ಧರ್ಮೋಪದೇಶ ವಚನಗಳು ಪಾರ್ಶ್ವದಲ್ಲಿರುವುದರಿಂದ ಪಾರ್ಶ್ವನಾಥನೆಂದು ಹೆಸರಿಟ್ಟು ಇಂದ್ರನು ತೆರಳಿದನು.

ಪಾರ್ಶ್ವನಾಥನು ಬಾಲ್ಯವನ್ನು ಕ್ರಮಿಸಿ ಕೌಮಾರ್ಯಕ್ಕೆ ಕಾಲಿಟ್ಟನು. ಲೋಕಕ್ಕೆಲ್ಲ ಉನ್ನತವಾಗಿದ್ದನು. ಒಂದು ದಿನ ಆತ ಪುರದ ಸಿರಿಯನ್ನು ನೋಡಲು ಹೋದಾಗ ಪಂಚಾಗ್ನಿಗಳ ಮಧ್ಯದಲ್ಲಿ ತಪದಲ್ಲಿದ್ದ ಒಬ್ಬ ಮುನಿಯನ್ನು ಕಂಡನು. ಜೀವಾದಿ ತತ್ವಗಳನ್ನು ತಿಳಿಯದೆ ಮಾಡುವ ತಪಸ್ಸು ಪುಣ್ಯವನ್ನು ನಾಶಪಡಿಸಿ ಪಾಪವನ್ನುಂಟುಮಾಡುತ್ತದೆ ಎಂದು ಆ ತಪಸ್ವಿಯ ಅವಿವೇಕವನ್ನು ಪಾರ್ಶ್ವನು ತಿಳಿಸಿದನು. ಆತ ಕೋಪದಿಂದ ದೋಷವಿದ್ದರೆ ತಿಳಿಸು ಎಂದಾಗ ಅಲ್ಲಿ ಹತ್ತಿ ಉರಿಯುತ್ತಿದ್ದ ಕಟ್ಟಿಗೆಯ ತುಂಡನ್ನು ಸೀಳಿಸಿ ಅದರಲ್ಲಿ ಬೆಂದುಹೋಗಿದ್ದ ಉರಗ ದಂಪತಿಗಳನ್ನು ತೋರಿಸಿದನು. ಆ ಸರ್ಪಗಳಿಗೆ ಜೀವದಾನ ಮಾಡಿದನು. ಗಂಡುಸರ್ಪವು ಧರಣೇಂದ್ರನಾಗಿ, ಹೆಣ್ಣುಸರ್ಪವು ಪದ್ಮಾವತಿಯಾಗಿ ಜನಿಸಿದವು. ಅನಂತರ ಪಾರ್ಶ್ವನು ಅಹಿಂಸೆಯ ಮಹತ್ವವನ್ನು ಬೋಧಿಸಿದನು.

ಯೌವನದಿಂದ ಕೂಡಿದ್ದ ಪಾರ್ಶ್ವನಿಗೆ ತಂದೆತಾಯಿಗಳು ವಿವಾಹ ಮಾಡಲು ನಿಶ್ಚಯಿಸಿದರು. ಹಲವಾರು ದೇಶದ ರಾಜಕುಮಾರಿಯರನ್ನು ತೋರಿಸಿದರೂ ಈತನಿಗೆ ವಿವಾಹದಲ್ಲಿ ಆಸಕ್ತಿ ಮೂಡಲಿಲ್ಲ. ಮದುವೆಯು ಮುಕ್ತಿಸಂಪಾದನೆ ಮಾಡುವವರಿಗೆ ಯೋಗ್ಯವಿಲ್ಲ, ಅಜ್ಞಾನಿಗಳಂತೆ ನೀವು ನನ್ನನ್ನು ಒತ್ತಾಯಿಸಬೇಡಿ ಎಂದು ತಂದೆತಾಯಿಗಳಿಗೆ ತಿಳಿಸಿದನು.

ಒಂದು ದಿನ ಸಾಕೇತಪುರದ ಜಯಸೇನರಾಜನು ಪಾರ್ಶ್ವನಿಗೆ ಒಂದು ಕುದುರೆಯನ್ನು ಮಹತ್ತರನ ಮೂಲಕ ಕಳಿಸಿಕೊಟ್ಟನು. ಪಾರ್ಶ್ವನು ಆತನಲ್ಲಿ ನಿಮ್ಮ ರಾಜನ ಪಟ್ಟಣವು ವೃಷಭನಾಥನ ಜನನದಿಂದ ಹೇಗೆ ಪವಿತ್ರವಾಯಿತೆಂದು ಕೇಳುತ್ತ ಭವಸ್ಮರಣೆ ಉಂಟಾಗಿ ವೈರಾಗ್ಯಪರನಾದನು. ಇದನ್ನರಿತ ಇಂದ್ರನು ದೇವತೆಗಳೊಂದಿಗೆ ಪರಿನಿಷ್ಕ್ರಮಣ ಕಲ್ಯಾಣವನ್ನು ನೆರವೇರಿಸಿದನು. ಅನಂತರ ಪಾರ್ಶ್ವನು ದಿಗಂಬರನಾಗಿ ತಪಸ್ಸಿಗೆ ತೊಡಗಿ ಪ್ರತಿಮಾಯೋಗದಲ್ಲಿ ಏಳು ದಿನಗಳವರೆಗೆ ನಿಂತನು. ಆ ಸಂದರ್ಭದಲ್ಲಿ ಪಂಚಾಗ್ನಿ ಮಧ್ಯದಲ್ಲಿ ತಪಸ್ಸು ಮಾಡುತ್ತಿದ್ದ ಆ ಮುನಿ ಕೋಪವನ್ನಿಟ್ಟುಕೊಂಡು ಸತ್ತು ಭೂತಾನಂದನೆಂಬ ಅಸುರನಾಗಿ ಜನಿಸಿ ಆಕಾಶಮಾರ್ಗದಲ್ಲಿ ಬರುತ್ತಿದ್ದನು. ಪಾರ್ಶ್ವನನ್ನು ಕಂಡು ಅಸುರನ ವಿಮಾನ ನಿಂತುಕೊಂಡಿತು. ಪೂರ್ವಜನ್ಮದ ದ್ವೇಷದಿಂದ ಅಸುರನು ನಾನಾ ರೀತಿಯ ಉಪಸರ್ಗಗಳನ್ನು ನೀಡಿದರೂ ಪಾರ್ಶ್ವನು ನಿಶ್ಚಲನಾಗಿದ್ದನು. ಆಗ ಪಾತಾಳಲೋಕದಲ್ಲಿದ್ದ ನಾಗರಾಜನಿಗೆ ಆಸನಕಂಪವಾಗಿ ಪದ್ಮಾವತಿಯೊಂದಿಗೆ ಬಂದು ತನ್ನ ಹೆಡೆಗಳನ್ನು ಪಾರ್ಶ್ವನ ತಲೆಯ ಮೇಲೆ ಎತ್ತಿಹಿಡಿದನು. ಪದ್ಮಾವತಿ ವಜ್ರದ ಛತ್ರಿಯನ್ನು ಎತ್ತಿಹಿಡಿದಳು. ಪಾರ್ಶ್ವನು ಕರ್ಮಗಳನ್ನು ಗೆದ್ದು ಚೈತ್ರಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ವಿಶಾಖಾ ನಕ್ಷತ್ರದಲ್ಲಿ ಕೇವಲಜ್ಞಾನವನ್ನು ಪಡೆದನು. ಇಂದ್ರ ಹಾಗೂ ಇತರ ದೇವತೆಗಳು ಕೇವಲಜ್ಞಾನಕಲ್ಯಾಣ ನೆರವೇರಿಸಿದರು. ಅನಂತರ ಪಾರ್ಶ್ವನು ಪಾರ್ಶ್ವನಾಥ ಎಂಬ ತೀರ್ಥಂಕರನಾದನು.

ಪಾರ್ಶ್ವನಾಥನು ಒಂಬತ್ತು ಗಣಧರರು, ಐನೂರರವತ್ತು ಪೂರ್ವಧರರು, ಸಾವಿರದ ಒಂಬೈನೂರು ಶಿಕ್ಷಕರು, ಐದು ಸಾವಿರ ನಾನೂರು ಅವಧಿಜ್ಞಾನಿಗಳು, ಒಂದು ಸಾವಿರ ಕೇವಲಿಗಳು, ಏಳುನೂರೈವತ್ತು ಮನಃಪರ್ಯಾಯ ಜ್ಞಾನಿಗಳು, ಅಸಂಖ್ಯಾತ ದೇವಸಮೂಹ ಹಾಗೂ ತಿರ್ಯಕ್ ಸಂಘದವರೊಡನೆ ಕೂಡಿ ಸುಮಾರು ಎಪ್ಪತ್ತು ವರ್ಷ ಧರ್ಮಬೋಧೆ ಮಾಡಿದನು. ಅದಕ್ಕಾಗಿ ಕರಹಾಟ, ಆಂಧ್ರ, ಕಳಿಂಗ, ವಂಗ, ಮಗಧ, ಅಂಗ, ಆಭೀರ, ಸೌವೀರ, ಗೂರ್ಜರ, ಕರ್ಣಾಟ, ವರಾಳ, ಮಾಳವ, ಮಹಾರಾಷ್ಟ್ರ ಮುಂತಾದೆಡೆ ಸಂಚರಿಸಿದನು. ಹಲವರು ಈತನಿಂದ ಧರ್ಮೋಪದೇಶ ಪಡೆದು ಪುನೀತರಾದರು. ಈತನ ತಂದೆತಾಯಿಗಳೂ ಅವರಲ್ಲಿ ಇದ್ದರು. ಪಾರ್ಶ್ವನಾಥನು ಸಮ್ಮೇದಪರ್ವತದ ಶಿಖರದಲ್ಲಿ ಪ್ರತಿಮಾಯೋಗದಲ್ಲಿದ್ದು ಮುಕ್ತಿ ಪಡೆದನು. ಇಂದ್ರನು ಆಗಮಿಸಿ ಪರಿನಿರ್ವಾಣ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದನು.

ಕಾವ್ಯಸಮೀಕ್ಷೆ: ಜೈನರ ಪ್ರಮುಖ ತೀರ್ಥಂಕರರಲ್ಲಿ ಒಬ್ಬನಾದ ಪಾರ್ಶ್ವನಾಥನು ೨೩ನೆಯ ತೀರ್ಥಂಕರ. ಈತನನ್ನು ಕೇಂದ್ರವಾಗಿಟ್ಟುಕೊಂಡು ರಚಿತವಾದ ಕಾವ್ಯವೇ ಪ್ರಸ್ತುತ ಪಾರ್ಶ್ವನಾಥ ಪುರಾಣ. ಮಹಾವೀರನಂತೆ ಈತ ಕೂಡ ಐತಿಹಾಸಿಕ ವ್ಯಕ್ತಿ. ಮಹಾವೀರನಿಗಿಂತ ಸು.೨೫೦ ವರ್ಷ ಮೊದಲು ಕ್ರಿ.ಪೂ. ೭೭೭ರಲ್ಲಿ ಈತ ಇದ್ದನೆಂದು ಹೇಳಲಾಗಿದೆ. ಗೌತಮಬುದ್ಧ ಮತ್ತು ಮಹಾವೀರರು ಈತನ ತತ್ವಗಳಿಂದ ಪ್ರಭಾವಿತರಾಗಿದ್ದರೆಂಬ ಅಭಿಪ್ರಾಯವಿದೆ. ಪಂಚಾಣು ವ್ರತಗಳಲ್ಲಿ ಅಹಿಂಸೆಯನ್ನು ಹೊರತುಪಡಿಸಿದ ಇತರ ನಾಲ್ಕು ವ್ರತಗಳನ್ನು ಈತನೇ ಬೋಧಿಸಿದ್ದನೆನ್ನುತ್ತಾರೆ. ಬುದ್ಧ ‘ಪಾರ್ಶ್ವಚಿಜ್ಜ’ (ಪಾರ್ಶ್ವನಾಥನ ಶಿಷ್ಯ) ಎಂಬ ಮಾತು ಬಳಸಿದ್ದಾನೆ. ಇದರಿಂದ ಬುದ್ಧನ ಕಾಲಕ್ಕೆ ಈತನ ಶಿಷ್ಯರಿದ್ದರೆಂದು ತಿಳಿಯಬಹುದು. ಜೈನವಾಸ್ತುವಿನಲ್ಲಿ ಪಾರ್ಶ್ವತೀರ್ಥಂಕರರ ಪ್ರತಿಮೆಗಳಷ್ಟು ಹೇರಳವಾಗಿ ಬೇರಾವ ತೀರ್ಥಂಕರರದೂ ದೊರೆಯುವುದಿಲ್ಲ. ಸಾಹಿತ್ಯಿಕವಾಗಿಯೂ ಶಿಷ್ಟದಿಂದ ಜನಪದದವರೆಗೆ ಈತನ ಖ್ಯಾತಿಯಿದೆ –

ಜಿನದತ್ತ ಜಿನಸ್ವಾಮಿ ಹೊನ್ನ ಪಾರ್ಶ್ವನಾಥ
ನಿನ್ನಂಥ ಒಬ್ಬ ಮಗ ಬೇಕ ಬಸ್ತ್ಯಾನ
ಪದ್ಮಾವತಿಯಂಥ ಸೊಸಿ ಬೇಕ

ಎಂದು ಹಳ್ಳಿಯ ಹೆಣ್ಣುಮಗಳು ಪ್ರಾರ್ಥಿಸುವುದುಂಟು. ಜೈನರು ಯಂತ್ರ ಮಂತ್ರದ ಸಂದರ್ಭದಲ್ಲಿಯೂ ಪಾರ್ಶ್ವನಾಥನನ್ನು ಪೂಸಿಸುವುದುಂಟು. ಜನಸಾಮಾನ್ಯರ ನಡುವೆ ಈತ ವೈದ್ಯದೇವತೆಯ ಸ್ಥಾನಮಾನ ಪಡೆದಿರಬಹುದು.

ಪಾರ್ಶ್ವತೀರ್ಥಂಕರ ಚರಿತ್ರೆ ಸಂಸ್ಕೃತ, ಪ್ರಾಕೃತ, ಕನ್ನಡ ಮೊದಲಾದ ಭಾಷೆಗಳಲ್ಲಿ ಸ್ವತಂತ್ರವಾಗಿ ಆನುಷಂಗಿಕವಾಗಿ ಕಾಣಿಸಿಕೊಂಡಿದೆ. ಸಂಸ್ಕೃತದಲ್ಲಿ ಜಿನಸೇನ ಗುಣ ಭದ್ರಾಚಾರ್ಯರ ಮಹಾಪುರಾಣ, ಜಿನಸೇನಾಚಾರ್ಯರ ಪಾರ್ಶ್ವಾಭ್ಯುದಯ, ವಾದಿರಾಜ ಸೂರಿಯ ಪಾರ್ಶ್ವನಾಥ ಚರಿತೆ, ಮಾಣಿಕಚಂದ್ರ ಸೂರಿಯ ಪಾರ್ಶ್ವನಾಥ ಚರಿತ, ಭವದೇವ ಸೂರಿಯ ಪಾರ್ಶ್ವನಾಥ ಚರಿತ ಮುಂತಾದ ಗ್ರಂಥಗಳನ್ನು ಪಾರ್ಶ್ವಕವಿಗೆ ಪೂರ್ವದಲ್ಲಿಯೇ ಕಾಣಬಹುದು. ಪ್ರಾಕೃತದಲ್ಲಿಯೂ ನಾಗದೇವನ ಪಾರ್ಶ್ವನಾಥ ಪುರಾಣ, ಜಿನಪ್ರಭಸೂರಿಯ ಪಾರ್ಶ್ವನಾಥ ಜನ್ಮಾಭೀಷೇಕ, ಶೀಲಾಂಕನ ಚುಉಪನ್ನ ಮಹಾಪುರಿಸ ಚರಿಉ, ಪದ್ಮಕೀರ್ತಿಯ ಪಾಸಣಾಹ ಚರಿರು, ಶ್ರೀಧರನ ಪಾಸಣಾಹ ಚರಿಉ ಇತ್ಯಾದಿ ಗ್ರಂಥಗಳಿದ್ದವು. ಕನ್ನಡದಲ್ಲಿ ಈ ವಸ್ತು ಚಾವುಂಡರಾಯ ಪುರಾಣದಲ್ಲಿ ಪಾರ್ಶ್ವಿಕವಾಗಿ ಕಾಣಿಸಿಕೊಂಡ ಬಳಿಕ ಪಾರ್ಶ್ವಕವಿಯಲ್ಲಿ ಮೊದಲು ಸಮಗ್ರವಾಗಿ, ಅನಂತರ ಶಾಂತಿಕೀರ್ತಿ ಚಂದ್ರಸಾಗರವರ್ಣಿಯರ ಕಾವ್ಯಗಳಲ್ಲಿ ಹೊರಹೊಮ್ಮಿತು.

ಪಾರ್ಶ್ವಕವಿ ತನ್ನ ಕೃತಿಗೆ ಆಕರವನ್ನು ನೇರವಾಗಿ ಸೂಚಿಸಿಲ್ಲ. ಆದರೆ ಇತರ ಕವಿಗಳಂತೆ ಈತನೂ ತನ್ನ ಕೃತಿ ಪರಂಪರೆಯನ್ನು ಸಾಂಪ್ರದಾಯಿಕವಾಗಿ ಹೇಳಿದ್ದಾನೆ –

ಪುರುಜಿನ ಪಾರ್ಶ್ವದೊಳ್ ವೃಷಭಸೇನಗಣಾಗ್ರಣಿ ತಜ್ಜಿನೋಕ್ತಮಂ
ಭರತನೃಪಂಗೆ ವೀರಜಿನ ಪಾರ್ಶ್ವದೊಳಾ ಜಿನರಾಜಸೂಕ್ತಮಂ
ಗುರುಗುಣಗೌತಮರ್ ಮಗಧ ಮಾಂಡಳಿಕಂಗೊಲವಿಂದೆ ಪೇೞ್ವುದಂ
ನಿರುಪಮ ವಿಶ್ರುತ ಶ್ರುತಧಶಾಘ ಪರಂಪರೆಯಿಂದೆ ಬಂದುದಂ        ೧ – ೯೪

ಈ ಪದ್ಯದ ಪ್ರಕಾರ ವೃಷಭತೀರ್ಥಂಕರ ಸಮವಸರಣ ಮಂಟಪದಲ್ಲಿ ಭರತೇಶ ಚಕ್ರವರ್ತಿಗೆ, ವರ್ಧಮಾನತೀರ್ಥಂಕರ ಸಮವಸರಣ ಮಂಟಪದಲ್ಲಿ ಗೌತಮಗಣಧರರು ಶ್ರೇಣಿಕನಿಗೆ ತಿಳಿಸಿದ ಜಿನಸೂಕ್ತಿಗಳು ಶ್ರುತಕೇವಲಿಗಳ ಮೂಲಕ ಹರಿದುಬಂದಿತು. ಆದರೆ ಪಾರ್ಶ್ವನಾಥ ಪುರಾಣಕ್ಕೆ ಗುಣಭದ್ರರ ಉತ್ತರ ಪುರಾಣ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣಗಳು ಪ್ರಮುಖವಾಗಿ, ಇತರ ಕೆಲವು ಸಂಸ್ಕೃತ ಕೃತಿಗಳು ಸಾಂದರ್ಭಿಕವಾಗಿ ಆಕರಗಳಾಗಿವೆ. ಉತ್ತರ ಪುರಾಣದಲ್ಲಿ ಈ ಕಥೆ ೧೭೦ ಶ್ಲೋಕಗಳಲ್ಲಿ ಮುಕ್ತಾಯವಾಗುತ್ತದೆ. ಇದೇ ಕಥಾಚೌಕಟ್ಟು ಉಳಿಸಿಕೊಂಡು ಪಾರ್ಶ್ವಕವಿ ತನ್ನ ಕಾವ್ಯವನ್ನು ೧೬ ಆಶ್ವಾಸಗಳಲ್ಲಿ ಬೆಳೆಸಿದ್ದಾನೆ.

ಉತ್ತರ ಪುರಾಣಕಾರನದು ಸಂಕ್ಷಿಪ್ತ ಮಾರ್ಗ. ಪಾರ್ಶ್ವಪಂಡಿತನದು ವಿಸ್ತೃತ ಮಾರ್ಗ ಉದಾಹರಣೆಗೆ ಗುಣಭದ್ರರಲ್ಲಿ ಮೊದಲ ಭವದ ಕಥೆಯಲ್ಲಿ ಜಂಬೂದ್ವೀಪದ ಭರತಕ್ಷೇತ್ರದ ಪೌದನಗರ, ಅಲ್ಲಿ ಪ್ರಜೆಗಳಿಗೆ ಪ್ರೀತಿಪಾತ್ರನಾದ ಅರವಿಂದರಾಜನು ರಾಜ್ಯಭಾರ ಮಾಡುತ್ತಿದ್ದ ಎಂದಷ್ಟೇ ಇದ್ದರೆ ಪಾರ್ಶ್ವಪಂಡಿತನು ಪೌದನಪುರವನ್ನು, ಅರವಿಂದ ಮಹಾರಾಜನ ವ್ಯಕ್ತಿತ್ವವನ್ನು ದೀರ್ಘವಾಗಿ ವರ್ಣಿಸಿ ಒಂದು ಸ್ಪಷ್ಟಚಿತ್ರ ನೀಡುತ್ತಾನೆ. ಸಂಸ್ಕೃತದ ವಾದಿರಾಜಸೂರಿಯಲ್ಲಿ ಈ ಬಗೆಯ ವಿವರಗಳಿರುವುದನ್ನು ಪಾರ್ಶ್ವಪಂಡಿತ ಗಮನಿಸಿದ್ದರೂ ಅದನ್ನು ಯಥಾವತ್ತಾಗಿ ಸ್ವೀಕರಿಸದೆ ಸ್ವಂತಿಕೆ ಮೆರೆದಿದ್ದಾನೆ.

ಪಾರ್ಶ್ವಪಂಡಿತ ಸಂದರ್ಭವರಿತು ಕೆಲವೊಮ್ಮೆ ಗುಣಭದ್ರರನ್ನೂ ಮತ್ತೆ ಕೆಲವೆಡೆ ವಾದಿರಾಜಸೂರಿಯನ್ನೂ ಅನುಸರಿಸಿದ್ದಾನೆ. ಉದಾಹರಣೆಗೆ ವಿಶ್ವಭೂತಿಗೆ ವೈರಾಗ್ಯ ಉಂಟಾಗಲು ಕಾರಣವಾದ ಅಂಶವನ್ನು ಉತ್ತರ ಪುರಾಣದಲ್ಲಿ ನಿರ್ಲಕ್ಷಿಸಲಾಗಿದೆ. ಆದರೆ ಈ ಅಂಶ ಜೈನಧರ್ಮದಲ್ಲಿ ಕಂಡುಬರುವ ವಿಶೇಷವೆಂಬುದು ಕವಿಯ ಗಮನದಲ್ಲಿದೆ. ಹಾಗಾಗಿ ವಾದಿರಾಜಸೂರಿಯಲ್ಲಿದ್ದ ನರೆಗೂದಲಿನ ಪ್ರಸಂಗವನ್ನು ಈತ ಅಳವಡಿಸಿ ಕೊಂಡಿರುವುದು ಔಚಿತ್ಯಪೂರ್ಣವಾಗಿದೆ.

ಕಮಠ ತನ್ನ ತಮ್ಮನ ಹೆಂಡತಿಯನ್ನು ಮೋಹಿಸುವ ಭಾಗದಲ್ಲಿ ಶ್ವೇತಾಂಬರ ಸಂಪ್ರದಾಯದಲ್ಲಿ ಭಿನ್ನವಾದ ಕೆಲವು ಸಂಗತಿಗಳಿವೆ. ಪಾರ್ಶ್ವಪಂಡಿತ ಇಲ್ಲಿ ದಿಗಂಬರ ಸಂಪ್ರದಾಯದಲ್ಲಿರುವ ಕಥಾಭಾಗವನ್ನೇ ಇಟ್ಟುಕೊಂಡಿದ್ದಾನೆ. ಹಾಗೆಯೇ ಪಾರ್ಶ್ವ ತೀರ್ಥಂಕರನ ತಂದೆತಾಯಿಗಳು ವಿಶ್ವಸೇನ ಬ್ರಾಹ್ಮಿಲಾ ಎಂದು ಉತ್ತರ ಪುರಾಣದಲ್ಲಿದ್ದರೆ ಈತ ಅಶ್ವಸೇನ ಬ್ರಹ್ಮದತ್ತೆ ಎಂದು ಮಾರ್ಪಾಟು ಮಾಡಿಕೊಂಡಿದ್ದಾನೆ. ವಿವಾಹ ಪ್ರಸಂಗದಲ್ಲಿಯೂ ಪಾರ್ಶ್ವನಾಥನು ತಂದೆಯ ಇಚ್ಛೆಯಂತೆ ಪ್ರಭಾವತಿಯನ್ನು ಮದುವೆಯಾಗಿದ್ದನೆಂದು ಕೆಲವು ಗ್ರಂಥಗಳು ತಿಳಿಸುತ್ತವೆ. ಪಾರ್ಶ್ವಕವಿ ಇದರಲ್ಲಿ ಯುವರಾಜರನ್ನು ಎದುರಿಸಿದ ಪ್ರಸಂಗ ಹಾಗೂ ಪಾರ್ಶ್ವನಾಥ ವಿವಾಹಿತನೆಂಬ ಅಂಶವನ್ನು ಕೈಬಿಟ್ಟು ಉತ್ತರ ಪುರಾಣದ ಕಥಾಮಾರ್ಗವನ್ನೇ ಅನುಸರಿಸಿದ್ದಾನೆ. ವಸ್ತುವಿನ ನಿರ್ವಹಣೆಯಲ್ಲಿ ಪಾರ್ಶ್ವಪಂಡಿತ ಒಂದೇ ಆಕರವನ್ನು ಇಟ್ಟುಕೊಳ್ಳದೆ ಹಲವು ಮೂಲಗಳಿಂದ ಸ್ವೀಕರಿಸಿ ವಿಸ್ತರಿಸುತ್ತ, ಮೂಲವನ್ನು ಉಜ್ವಲಗೊಳಿಸುತ್ತ ತನ್ನ ಸೋಪಜ್ಞತೆಯನ್ನು ತೋರಿರುವುದು ಇವನು ಸಾಧಾರಣ ಕವಿಯಲ್ಲವೆಂಬುದನ್ನು ತಿಳಿಸುವಂತಿದೆ.

ಪಾರ್ಶ್ವನಾಥ ಐತಿಹಾಸಿಕ ವ್ಯಕ್ತಿಯಾದರೂ ಪಾರ್ಶ್ವಕವಿ ಈತನನ್ನು ಜೈನತೀರ್ಥಂಕರ ಪುರಾಣಗಳ ನಾಯಕನಂತೆಯೇ ಚಿತ್ರಿಸಹೊರಟಿರುವುದರಿಂದ ಜೈನಪುರಾಣಗಳ ಕ್ರಮವನ್ನು ಚಾಚೂತಪ್ಪದೆ ಅನುಸರಿಸಿದ್ದಾನೆ. ಪಾರ್ಶ್ವನಾಥನ ಚರಿತ್ರೆಯು ಮರುಭೂತಿ, ವಜ್ರಘೋಷ, ಸಹಸ್ರಾರ ಕಲ್ಪದೇವ, ರಶ್ಮಿವೇಗ, ಅಚ್ಯುತಕಲ್ಪದೇವ, ವಜ್ರನಾಭಿ, ಆನತಕಲ್ಪೇಂದ್ರ, ಪಾರ್ಶ್ವ ಹೀಗೆ ಹತ್ತು ಭವಗಳಲ್ಲಿ ಸಾಗುತ್ತದೆ. ಇತರ ತೀರ್ಥಂಕರರ ಚರಿತೆಗಳಿಗೆ ಹೋಲಿಸಿದರೆ ಇಲ್ಲಿ ಭವಾವಳಿಗಳ ತೊಡಕಿಲ್ಲ. ಇಂಥ ಸರಳ ಕಥೆಯನ್ನು ಒಂದು ಪ್ರೌಢ ಚಂಪೂಕಾವ್ಯವಾಗಿ ರೂಪಿಸ ಹೊರಟಾಗ ಪಂಚಕಲ್ಯಾಣಗಳು ಮತ್ತು ಅಷ್ಟಾವರಣ ವರ್ಣನೆಗಳಿಗೆ ಕವಿ ಮಹತ್ವ ನೀಡಿರುವುದು ಅನಿವಾರ್ಯವಾಗಿದೆ.

ಕಮಠ ಮತ್ತು ಮರುಭೂತಿಯ ಕಥೆ ಹಾಗೂ ಪಾರ್ಶ್ವತೀರ್ಥಂಕರನ ಯಕ್ಷಯಕ್ಷಿಯರಾದ ಧರಣೇಂದ್ರ ಪದ್ಮಾವತಿಯರ ಪ್ರಸಂಗ ಕಾವ್ಯದ ಆಕರ್ಷಕ ಭಾಗಗಳೆನ್ನಬಹುದು. ನಾಟಕೀಯ ಸನ್ನಿವೇಶಗಳಿಂದ ಕೂಡಿದ ಈ ಭಾಗಗಳಲ್ಲಿ ಕವಿಪ್ರತಿಭೆ ಸುವ್ಯಕ್ತವಾಗಿದೆ. ದುರ್ಗುಣಗಳ ಮೊತ್ತವಾಗಿದ್ದ ಕಮಠ ತನ್ನ ತಮ್ಮನೂ ಸುಗುಣಿಯು ಆದ ಮರುಭೂತಿಯ ಪತ್ನಿಯನ್ನು ಒಲಿಸಿಕೊಳ್ಳುತ್ತಾನೆ. ಇದು ಅನಂತನಾಥಪುರಾಣದ ಸುನಂದ – ಚಂಡಶಾಸನ, ರಾಮಚಂದ್ರ ಚರಿತ ಪುರಾಣದ ರಾವಣ – ಉಪರಂಭೆ ವೃತ್ತಾಂತವನ್ನು ನೆನಪಿಗೆ ತರುವುದಾದರೂ ಇಲ್ಲಿಯ ಕಮಠ ರಾವಣನಂತಲ್ಲ, ವಸುಂಧರೆ ಸುನಂದೆಯಂಥ ಉನ್ನತ ವ್ಯಕ್ತಿತ್ವದವಳಲ್ಲ. ತೀರ್ಥಂಕರ ಜೀವಿಯಾದ ಮರುಭೂತಿಯ ಪಾತ್ರವನ್ನು ಉತ್ಕರ್ಷಿಸುವ ಸಲುವಾಗಿ ಈ ಸನ್ನಿವೇಶವನ್ನು ದೀರ್ಘವಾಗಿ ಬೆಳೆಸಲಾಗಿದೆ. ಇಲ್ಲಿ ಗೃಹಕೃತ್ಯ ಜೀವನದಲ್ಲಿ ಅನುಸರಿಸಬೇಕಾದ ನೀತಿ ಸಂಹಿತೆ ಮೊದಲಾದ ಸಂಗತಿಗಳೆಲ್ಲ ಮೇಳೈಸಿದ್ದು ಕವಿಯ ವಿಶಿಷ್ಟತೆ ಎದ್ದುಕಾಣುತ್ತದೆ. ಮರುಭೂತಿಗೆ ಅಣ್ಣನ ದುರ್ವರ್ತನೆ ತಿಳದಾಗ ಕೂಡ –

ಮಡದಿಯರನರ್ಥಮುಳ್ಳಡೆ
ಪಡೆಯಲ್ ಬರ್ಕುಂ ಸಹೋದರನೇನಿತ್ತುಂ
ಪಡೆವರೆ ಪೆಂಡಿರ ದೂಸಱಿ
ನೊಡವುಟ್ಟಿದರ್ಗೆಂತು ಮುಳಿಯಲಕ್ಕುಂ ತಕ್ಕಂ     ೪ – ೭

ಎಂದು ಒಡಹುಟ್ಟಿದವ ಎಂಬ ಸಂಬಂಧವನ್ನು ಮುಂದೆ ಮಾಡಿಕೊಂಡು ಅಣ್ಣನ ಬಗ್ಗೆ ಕೋಪಿಸಿಕೊಳ್ಳದೆ ಹೆಂಡತಿಯನ್ನು ಮಾತ್ರ ದೂಷಿಸುವಲ್ಲಿ ಆ ಕಾಲದಲ್ಲಿದ್ದ ಪುರುಷ ಪ್ರಧಾನ ಧೋರಣೆಯೇ ಪ್ರತಿಫಲಿಸಿದೆ.

ಜೈನತೀರ್ಥಂಕರ ಚರಿತೆಗಳ ಅವಿನಾಭಾಗವಾಗ ಗರ್ಭಾವತರಣ, ಜನ್ಮಾಭಿಷೇಕ, ಪರಿನಿಷ್ಕ್ರಮಣ, ಕೇವಲಜ್ಞಾನ, ಪರಿನಿರ್ವಾಣ ಕಲ್ಯಾಣಗಳು, ಪಾರ್ಶ್ವನಾಥ ಪುರಾಣದಲ್ಲಿಯೂ ಸಮುಚಿತ ಸ್ಥಾನ ಪಡೆದಿದ್ದು ಇದನ್ನು ಪ್ರಸ್ತುತಪಡಿಸುವಾಗ ಕವಿಪಾರ್ಶ್ವ ಪಂಪನಿಂದ ಪ್ರೇರಣೆ ಪಡೆದಂತೆ ತೋರುತ್ತದೆ. ತೀರ್ಥಂಕರ ಚರಿತೆಯನ್ನು ನಿರ್ವಹಿಸುವಾಗ ಪಂಪ ಈತನಿಗೆ ಆದರ್ಶವಾಗಿರಬೇಕು. ಏಕೆಂದರೆ ಕಾವ್ಯದ ಆರಂಭದಲ್ಲಿಯೇ ‘ಪರಮ ಜಿನೇಂದ್ರವಾಣಿಯೆ ಸರಸ್ವತಿ’ ಎಂದು ಪಂಪ ಹೇಳಿರುವಂತೆ ಪಾರ್ಶ್ವಕವಿ ಕೂಡ “ಜಿನವಾಣಿಯೆನಿಪ್ಪ ಭಾರತಿದೇವಿಯೇ ಸರಸ್ವತಿ” (೧ – ೧೦) ಎಂದು ಹೇಳಿದ್ದಾನೆ. ಪಾರ್ಶ್ವನಾಥನು ಕೇವಲಜ್ಞಾನ ಪ್ರಾಪ್ತಿಗಾಗಿ ಉಗ್ರತಪಸ್ಸು ಕೈಕೊಂಡು ಯೋಗದ ಪರಮಸ್ಥಿತಿಯನ್ನು ತಲಪಿದ ಸಂದರ್ಭದಲ್ಲಿ ಪಾರ್ಶ್ವಕವಿ –

ಕರಣಂ ಕೂಡೆ ಕನುಂಗಿಕೊಂಡಿರೆ ಮನಂ ಭಾಳಾಗ್ರದೊಳ್ ನಿಟ್ಟಿವೆ
ತ್ತಿರೆ ನೇತ್ರದ್ವಯಮುಳ್ಳಲರ್ದಿರೆ ಭುಜಾಕಾಂಡಂಗಳಾ ಜಾನುಗ
ಳ್ವರೆಗಂ ನೀಳ್ದಿರೆ ದಂತಮೊಂದಿಯನಿತು ತಮ್ಮೊಳ್ ಸಮಾನಂಗಳಾ
ಗಿರೆ ಯೋಗಂ ಪರಭಾಗಮಂ ಪಡೆದುದಾ ನಿಷ್ಪಂದ ಯೋಗೀಂದ್ರನೊಳ್        ೧೫ – ೯೭

ಎಂದು ವರ್ಣಿಸಿರುವುದು ಕೂಡ ಪಂಪನ ಆದಿಪುರಾಣದಲ್ಲಿ ಬರುವ –

ಕರಣಗಣಂ ಕನುಂಗಿರೆ ಮನಂ ನೊಸಲಲ್ಲಿರೆ ಲೋಚನಂಗಳು
ಳ್ಳರೆ ಮಗುೞ್ದಿಂಬುವೆತ್ತಿರೆ ಕರದ್ವಯಪಲ್ಲವಮಂಕದೊಳ್ ಮರ
ಲ್ದಿರೆ ತನು ನಿಷ್ಪ್ರಕಂಪಮಿರೆ ದಂತಚಯಂ ಸಮನಾಗೆ ತನ್ನೊಳೊಂ
ದಿರೆ ಸಮಸಂದುದಾ ಪರಮಯೋಗಿಗೆ ಯೋಗವಿಯೋಗ ಭಾವನಂ     ೧೦ – ೧೪

ಎಂಬ ಪದ್ಯದ ಛಾಯೆಯಾಗಿದೆ. ಪಾರ್ಶ್ವನಾಥ ಪುರಾಣದ ಲೀಲಾಂಜನಾ ನೃತ್ಯ ಕೂಡ ಆದಿಪುರಾಣದ ನೀಲಾಂಜನೆಯ ನೃತ್ಯದ ನೆನಪು ತಂದುಕೊಡುತ್ತದೆ. ಆದರೆ ಈ ಭಾಗದಲ್ಲಿ ಪಂಪನ ಭವ್ಯತೆ ಕಂಡುಬರುವುದಿಲ್ಲ.

ರನ್ನನ ಗದಾಯುದ್ಧದಲ್ಲಿನ ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬ ಮಾತು ಬಹು ಪ್ರಸಿದ್ಧ. ಪಾರ್ಶ್ವಪಂಡಿತ ಈ ಉಕ್ತಿಯನ್ನಿಟ್ಟುಕೊಂಡು ಶೃಂಗಾರ ಸನ್ನಿವೇಶದಲ್ಲಿ ‘ನೀರೊಳಗಿರ್ದುಂ ಬೆಮರ್ತಳೊರ್ವಳ್ ಮುಳಿಸಿಂ’ (೯ – ೧೩೧) ಎಂದು ಬಳಸಿದ್ದಾನೆ. ಈ ಕವಿಗೆ ನಾಗಚಂದ್ರ ನೆಚ್ಚಿನ ಕವಿ. ಪಾರ್ಶ್ವನಾಥ ಪುರಾಣದ ಆಶ್ವಾಸಾಂತ್ಯ ಗದ್ಯದಲ್ಲಿ ‘ಪಾರ್ಶ್ವನಾಥ ಚರಿತ ಪುರಾಣ’ ಎಂಬ ಶೀರ್ಷಿಕೆ ನೀಡಿರುವುದೂ ನಾಗಚಂದ್ರನ ಪ್ರಭಾವದಿಂದಲೇ ಎನ್ನಬಹುದು. ಗುಣದ ಮಹತ್ವ ತಿಳಿಸುವಾಗ ನಾಗಚಂದ್ರನ ರಾಮಚಂದ್ರ ಚರಿತ ಪುರಾಣದ –

ಗುಣಹೀನನೆನಿಪ ಕಮಠನ
ಪಣಮುಂ ಕುಲಮುಂ ಮಹೋನ್ನತಿಕೆಯುಮದೇಕ
ಕ್ಷಣಮಿರಿಸಲಾರವದಱಿಂ
ಗುಣಮೆ ಮಹೋನ್ನತಿಗೆ ಕಾರಣಂ ಪೆಱತುಂಟೇ     ೪ – ೩೧

ಎಂಬ ಪದ್ಯದ ಪ್ರೇರಣೆಯಿಂದಲೇ ಪಾರ್ಶ್ವಕವಿ –

ಗುಣಹಾನಿಯಿಂದಭೋಗತಿ
ಗುಣದಿಂ ಸ್ವರ್ಗಾಪವರ್ಗ ಸುಖಮಕ್ಕುಮೆನಲ್
ಗುಣಹೀನನ ಸಿರಿಯಿಂದಂ
ಗುಣಿಗಳ ಬಡತನಮೆ ನಾಡೆಯುಂ ಲೇಸಲ್ತೇ         ೯ – ೧೮೨

ಎಂದಿದ್ದಾನೆ. ಯುದ್ಧ ವರ್ಣನೆಯಲ್ಲಿ ಸೈನಿಕರು ತಮ್ಮ ಕಾಂತೆಯರನ್ನು ಅಗಲುವ ದೃಶ್ಯ, ತಳಮಳಗಳು, ರಣರಂಗದ ವಿನೋದಗಳು, ಕೋಟೆಕಾಳಗ ಮೊದಲಾದೆಡೆ ಅಗ್ಗಳವ ಚಂದ್ರಪ್ರಭ ಪುರಾಣ, ಶೃಂಗಾರ ಸನ್ನಿವೇಶದಲ್ಲಿ ವಾತ್ಸಾಯನನ ಕಾಮಸೂತ್ರ ಗ್ರಂಥಗಳನ್ನು ಕವಿ ನೋಡಿರುವಂತೆ ಕಂಡುಬರುತ್ತದೆ. ಹೀಗೆ ಪೂರ್ವಕವಿಗಳ ಪ್ರಭಾವವನ್ನು ಗುರುತಿಸಬಹುದಾದರೂ ಈತ ಎಲ್ಲಿಯೂ ಮೂಲದ ಪಡಿಯಚ್ಚಾಗದೆ ಅಲ್ಲಿಯ ಭಾವಗಳನ್ನು ಪುನರ್ರೂ‍ಪಿಸಿ ತನ್ನ ಸಾಮರ್ಥ್ಯವನ್ನು ತೋರಿದ್ದಾನೆ.

ಪಾರ್ಶ್ವಪಂಡಿತನಿಗೆ ಲಲಿತ ಕಲೆಗಳಲ್ಲಿ ಅಭಿಜ್ಞತೆ ಇರುವುದನ್ನು ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ಕುರಿತ ಪದ್ಯಗಳಲ್ಲಿ ಕಾಣಬಹುದು. ಧರ್ಮ ಕಾವ್ಯಧರ್ಮಗಳನ್ನು ಸಮನ್ವಯಗೊಳಿಸುವ ಪರಂಪರೆಗೆ ಈತನೂ ಬದ್ಧನಾಗಿದ್ದಾನೆ. ಹಾಗಾಗಿ “ಇದು ಸದ್ಧರ್ಮ ಸುಕಾವ್ಯ ಧರ್ಮವಿಭವ” (೧೬ – ೧೮೭) ಎಂದು ಹೇಳಿ ಇದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾನೆ. ತನ್ನ ಕೃತಿಯನ್ನು ಪ್ರೌಢ ಚಂಪೂಕಾವ್ಯವಾಗಿ ಬೆಳೆಸುವಾಗ ಪಾಂಡಿತ್ಯವನ್ನು ಅವಲಂಬಿಸಿದ್ದಾನೆ. ಸಾಂಪ್ರದಾಯಿಕ ವರ್ಣನೆಗಳ ಜೊತೆಗೆ ಕಾವ್ಯ ಕೌಶಲ್ಯಕ್ಕೆ ಕನ್ನಡಿ ಹಿಡಿಯುವ ಅನೇಕ ವರ್ಣನೆಗಳು ಎಡೆಪಡೆದಿವೆ. ಅಲಂಕಾರವಿಲ್ಲದ ಹೆಣ್ಣು ಹೇಗೆ ಶೋಭಿಸುವುದಿಲ್ಲವೊ ಹಾಗೆ ಅಲಂಕಾರವಿಲ್ಲದ ಕಾವ್ಯವೊ ಶೋಭಿಸುವುದಿಲ್ಲ (೧ – ೭೪) ಎಂಬ ಧೋರಣೆ ವ್ಯಕ್ತಪಡಿಸಿರುವ ಕವಿ ಶಬ್ದಾಲಂಕಾರ, ಅರ್ಥಾಲಂಕಾರಗಳನ್ನು ಧಾರಾಳವಾಗಿ ಬಳಸಿದ್ದಾನೆ. ಹಳದಿ ಬಣ್ಣದ ತೆನೆಗಳನ್ನು ಹೊತ್ತ ಹಸಿರು ಬಣ್ಣದ ಗಿಳಿಗಳು ಹಾರುತ್ತಿರುವುದನ್ನು ಕವಿ –

ಕಳಮ ಕಣಿಶಂಗಳಂ ಬ
ಲ್ಗಿಳಿಗಳ್ ನಸುಗರ್ಚಿ ಜಡಿಯೆ ಪಾಮರಿಯರ್ಮಂ
ಡಳಿಸಿ ನಭದಲ್ಲಿ ತಳೆದವು
ವಳಯಾಕೃತಿವೆತ್ತ ಶಕ್ರಚಾಪದ ಚೆಲ್ವಂ

ಎಂದು ಹಕ್ಕಿಗಳನ್ನು ಕಾಮನಬಿಲ್ಲಿಗೆ ಹೋಲಿಸಿರುವ ಕಲ್ಪನೆ ಬಹಳ ಸೊಗಸಾಗಿದೆ. ‘ಇಱುಪೆ ಗೆಱಂಕೆ ಮೂಡಿದವೊಲ್’ (೨ – ೭೨) ‘ಜಳಧಿಯ ನಡುವಣ ಭೈತ್ರದವೊಲ್’ (೩ – ೪೭) ‘ಬಱವಱ ಬತ್ತಿದ ಕೆಱೆಯ ಕಮಠನಂತೆ’ (೩ – ೮೬ ವ) ‘ಪ್ರೇಮದ ಮಡದಿಯ ನುಡಿಯವೊಲ್’ (೯ – ೩) ದೀಪವರ್ತಿ ನಿಧಿಗೆಱಗುವವೋಲ್ (೮ – ೪೭) ಇತ್ಯಾದಿ ದೊಡ್ಡಪಟ್ಟಿ ನೀಡಬಹುದು. ಗದ್ಯಭಾಗದಲ್ಲಿ ಮಾಲೋಪಮೆಗಳನ್ನು ಬಳಸಲಾಗಿದೆ.

ಸಾವಿರಾರು ವರ್ಷದ ಹಿಂದಿದ್ದ ಪಾರ್ಶ್ವತೀರ್ಥಂಕರ ಚರಿತ್ರೆಯನ್ನು ನಿರ್ಮಾಣ ಮಾಡುವಾಗ ಕೂಡ ಕವಿ ತಾನು ನಿಂತ ನೆಲದ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳಿಗೆ ವಿಮುಖನಾಗಿಲ್ಲ. ಈ ನಾಡಿನ ಸಸ್ಯಸಂಪತ್ತನ್ನು ಕುರಿತಂತೆ ಗಿಡ ಮರ ಹೂವುಗಳನ್ನು, ಭತ್ತದ ಗದ್ದೆಗಳನ್ನು ವರ್ಣಿಸುವ ಕವಿ ಆ ಕಾಲದಲ್ಲಿ ಧರಿಸುತ್ತಿದ್ದ ಕಡಗ, ಡಾಬು, ಕಂಠಿಕೆ, ಕುಂಡಲ ಇತ್ಯಾದಿ ಆಭರಣಗಳನ್ನು ಉಲ್ಲೇಖಿಸಿದ್ದಾನೆ. ಪಾರ್ಶ್ವಪಂಡಿತ ಸಮಕಾಲೀನ ಪಾಕ ವಿಶೇಷಗಳಾದ ಸರವಳಿಗೆ ಪಾಯಸ (೮ – ೫೦), ಶಾಲ್ಯನ್ನ, ಮಾವಿನಹಣ್ಣಿನ ಶೀಖರಣೆ, ಮಂಡಗೆ, ಹೂರಿಗೆ, ಲಡ್ಡುಗೆ, ಇಡ್ಡಲಿ, ಶಾಲ್ಯನ್ನ, ಸುಧಾನ್ನ, ಶ್ರೀಖಂಡ ಮುಂತಾದವನ್ನು ವರ್ಣಿಸಿದ್ದು ಇವುಗಳಲ್ಲಿ ಕೆಲವು ಇಂದಿಗೂ ಉಳಿದುಕೊಂಡು ಬಂದಿರುವುದನ್ನು ಗಮನಿಸಬಹುದು.

ಜನಪದರು ನಂಬುವ, ಪೂಜಿಸುವ ದೈವಗಳ ಬಗ್ಗೆ ಪಾರ್ಶ್ವಪಂಡಿತ –

ಮಸಗುವ ಮಾರಿ ಬೊಬ್ಬಿಱಿವ ಬೆಂತರದಿಂ ಸಿಡಿಲೇೞ್ಕಿಯೇೞ್ವರ
ಕ್ಕಸಿ ಕುಡುದಾಡೆಯಂ ಮಸೆವ ಡಾಕಿನಿ ಕೂರಸಿಯಿಂದೆ ಕೊಂಕಿ ಝಂ
ಕಿಸುವ ಕುಮಾರಿ ಮಾಂಕರಿಪ ಪೂತಿನಿ ಹೂಂಕೃತಿಗೆಯ್ವ ಭೈರವಂ
ನೊಸಲುರಿಗಣ್ಣನಾೞ್ವ ಚವುಡೇಶ್ವರಿ ಕೂಂಕಿರಿದಾರ್ವ ಕಾಟಿಯಿಂ    ೧೫ – ೧೧೩

ಎಂದು ಅವುಗಳ ವೈಶಿಷ್ಟ್ಯದೊಂದಿಗೆ ಹೆಸರಿಸಿರುವುದು ಜನಪದ ದೇವತೆಗಳ ಅಧ್ಯಯನಕ್ಕೆ ಉಪಯುಕ್ತವಾಗಿದೆ. ಕುಮಾರಿಪೂಜೆ ಇಂದಿಗೂ ತೀರ್ಥಹಳ್ಳಿ ಭಾಗದಲ್ಲಿ ಚಾಲ್ತಿಯಲ್ಲಿದೆ. ಈತ ಜಟಿಂಗ ಭೂತವನ್ನು ಉಲ್ಲೇಖಿಸಿದ್ದು ಇವೆಲ್ಲ ಗ್ರಾಮೀಣ ಜನರನ್ನು ಹಿಂದಿನಿಂದಲೂ ನಿಯಂತ್ರಿಸುತ್ತಿವೆ. ಉತ್ತರ ಕರ್ನಾಟಕದ ಜನಪದದಲ್ಲಿ ಪ್ರಸಿದ್ಧನಾದ ಜೋಕುಮಾರ (೩ – ೬೬) ನನ್ನೂ ಕವಿ ನೆನಪಿಸಿಕೊಂಡಿದ್ದಾನೆ. ಹುಟ್ಟಿದ ಏಳೇ ದಿನಕ್ಕೆ ಸಾಯುವ ಈತ ಕಾಮುಕತ್ವದಿಂದ ಕಂಟಕನಾಗಿದ್ದ. ಕಮಠವನ್ನು ವರ್ಣಿಸುವಾಗ ಜೋಕುಮಾರನಿಗೆ ಹೋಲಿಸಿರುವುದು ಸಮಂಜಸವಾಗಿದೆ. ಮಕ್ಕಳು ‘ತಿರಿಕಲ್ಲಾಟ’ , ‘ಟಗರುಕಾಳಗ’ ವನ್ನು ಆಡುತ್ತಿದ್ದ ಚಿತ್ರವೂ ಲಭ್ಯವಿದೆ. ಪಾರ್ಶ್ವಪಂಡಿತ ತನ್ನ ಕಾಲದ ವಿದ್ಯಾಭ್ಯಾಸದ ಬಗ್ಗೆ ವಿವರಿಸುವಾಗ ಶಬ್ದಶಾಸ್ತ್ರ, ಅರ್ಥಶಾಸ್ತ್ರ, ಮುಕ್ತಾಮುಕ್ತಶಾಸ್ತ್ರಗಳನ್ನು ಹೇಳಿದ್ದು ಇದು ಆ ಕಾಲದ ಪಠ್ಯದಲ್ಲಿದ್ದಿತೆನ್ನಬಹುದು.

ಪಾರ್ಶ್ವಪಂಡಿತನ ಭಾಷೆ ಶೈಲಿ ಆ ಕಾಲದ ಚಂಪೂಕಾವ್ಯಗಳ ಲಕ್ಷಣಗಳಿಂದ ಕೂಡಿದೆ. ಈತ ಮಾರ್ಗ – ದೇಸಿ ಎರಡನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ. ಸಂಸ್ಕೃತ ಭೂಯಿಷ್ಠ ಪ್ರೌಢಶೈಲಿಗೆ ಮತ್ತು ಸರಳಶೈಲಿಗೆ ಈ ಕಾವ್ಯದಲ್ಲಿ ಉದಾಹರಣೆಗಳು ದೊರೆಯುತ್ತವೆ. ಸಂಸ್ಕೃತ ಭೂಯಿಷ್ಠ ಶೈಲಿಗೆ ನಿದರ್ಶನವಾಗಿ ಒಂದು ಪದ್ಯವನ್ನು ಇಲ್ಲಿ ಉದ್ಧರಿಸಬಹುದು –

ಸಮರೋದಗ್ರಭಟಪ್ರತಾನಮನುದಾರೋರ್ವೀಶ ಸಂತಾನಮಂ
ಪ್ರಮದಾಸ್ಯಂಬುಜಗನ್ಧಮಗ್ನ ಮಧುಪಪ್ರಧ್ವಾನಮಂ ನೃತ್ಯವಾ
ದ್ಯಮಿಳದ್ದಾನಮನಾರ್ಯವರ್ಯ ವಚನಃ ಪೀಯೂಷದತ್ತಾವಧಾ
ನಮನೈಶ್ವರ್ಯ ನಿಧಾನಮಂ ಪದಪಿನಿಂ ಪೊಕ್ಕಂ ನೃಪಾಸ್ಥಾನಮಂ  ೨ – ೫೩

ಆದರೆ ಕವಿ ಕನ್ನಡಪದ ಪ್ರಾಚುರ್ಯದಿಂದಲೂ ಬಹಳ ಸುಂದರವಾಗಿ ಪದ್ಯಗಳನ್ನು ರಚಿಸಬಲ್ಲ –

ಕುಡುವುದು ಕಪ್ಪಮಂ ನಡೆವುದಾಳ್ವೆಸದಿಂದಮೆ ಮುನ್ನಿನಂದದಿಂ
ಬಿಡುವುದು ದರ್ಪಮಂ ಪಡೆವುದಾಳ್ದನದೊಂದು ಮನಃಪ್ರಸಾದಮಂ
ತಡೆವುದು ಬುದ್ಧಿಯಲ್ತಧಿಕನಪ್ಪವನೊಳ್ ಬಲಹೀನನಪ್ಪವಂ
ತೊಡರ್ದೊಡೆ ಕೇಡು ತಪ್ಪದೆನುತುಂ ನುಡಿದಂ ನಯಶಕ್ತಿಕೋವಿದಂ೨ – ೫೬

ಈತನ ಕಥನ ಸರಣಿಯಲ್ಲಿ ನಾಗಚಂದ್ರನ ಪ್ರಸಾದ ಗುಣವನ್ನು ರಂ.ಶ್ರೀ.ಮುಗಳಿ ಅವರು ಗುರುತಿಸಿದ್ದಾರೆ. ಪಾರ್ಶ್ವಕವಿ ತನ್ನ ಕಾಲದ ನುಡಿಗಟ್ಟುಗಳನ್ನು, ಗಾದೆ ಮಾತುಗಳನ್ನು, ಶ್ಲೋಕಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾನೆ. “ತೂಂಕಡಿಪ್ಪವರನೊಪ್ಪುವ ಪಾಸಿನ ಮೇಲೆ ನೂಂಕಿಂದತಾದುದು” (೧ – ೧೦೪) ‘ಅತಿಮೋಹಂ ಗತಿಯಂ ಕರಂ ಕಿಡಿಗುಂ’ (೩ – ೫೭), ‘ನೆಚ್ಚಿನೆಮ್ಮೆ ಕೋಣನನೀಂದತ್ತೆಂಬವೊಲ್’ (೬ – ೪೪), ‘ವನಮಂ ಸುಡುವಗ್ನಿಗೆ ವಾಯು ನಂಟು’ (೩ – ೨೩), ‘ಬಿಡಾಳಕ್ಕಂ ಪಾಲ ಕಾಪನಿತ್ತವೊಲ್’ (೧ – ೧೧೨) ಮೊದಲಾದ ಹಲವಾರು ಗಾದೆಗಳು ದೇಸೀಯ ಮೆರುಗು ನೀಡಿವೆ. ಈತನ ಶಬ್ದಸಂಪತ್ತು ವಿಶಿಷ್ಟ. ಒಡ್ಡಣ (೨ – ೨೪), ಒಣರ್ (೨ – ೨೭), ಅಣಿಯಿಸು (೩ – ೭೬ ವ), ಗಂಪಲ್ (೫ – ೬೧), ಇಟ್ಟಳ (೧೩ – ೧೦೩), ಕಂಟಿಸು (೩ – ೭೨), ಬೈಸಿಕೆ (೧೧ – ೩೪) ಇತ್ಯಾದಿ ಉದಾಹರಿಸುತ್ತ ಹೋಗಬಹುದು.

ಪಾರ್ಶ್ವಪಂಡಿತನಿಗೆ ತನ್ನ ಕವಿತಾ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ. ‘ನುಡಿ ಪೊಸತಾಯ್ತು ದೇಸೆ ಪೊಸತಾಯ್ತು’ (೧ – ೭೩) ‘ಘನಶಬ್ದಾಡಂಬರೋತ್ಪತ್ತಿಯಿನಖಿಳ ರಸೋತ್ಪಾದನಾ ಪ್ರೌಢಿಯಿಂ’ (೧ – ೮೮) ಎಂದೆಲ್ಲ ಹೇಳಿಕೊಂಡಿದ್ದಾನೆ. ಆದರೆ ಹೊಸತನವನ್ನು ಅರಸಬೇಕಷ್ಟೆ. ಈತನೊಬ್ಬ ಪಂಡಿತಕವಿಯಾಗಿ ಕಂಡುಬರುತ್ತಾನೆ. ಪಾರ್ಶ್ವನಾಥನ ಕಥೆಯನ್ನು ಕನ್ನಡದಲ್ಲಿ ಮೊದಲ ಬಾರಿಗೆ ಕಾವ್ಯಕ್ಕೆ ಅಳವಡಿಸಿ ತನ್ನ ಕಾಲದ ಓದುಗರ ಅಭಿರುಚಿಗನುಗುಣವಾಗಿ ರಚಿಸಿ ಚಂಪೂವಿನಲ್ಲಿ ಪ್ರಸ್ತುತಪಡಿಸಿರುವಲ್ಲಿ ಈತನ ಅತಿಶಯವಿದೆ. ಈತನ ಪ್ರಭಾವ ತರುವಾಯದ ಶಾಂತಿಕೀರ್ತಿಯ ಪಾರ್ಶ್ವನಾಥಚರಿತೆ (೧೭೩೩) ಚಂದ್ರಸಾಗರವರ್ಣಿಯ (೧೯ನೇ ಶತ.) ಪಾರ್ಶ್ವನಾಥ ಪಂಚಕಲ್ಯಾಣಗಳ ಮೇಲೆ ಆಗಿರುವುದೂ ಪಾರ್ಶ್ವಪಂಡಿತನ ಕಾವ್ಯದ ಹಿರಿಮೆಯನ್ನು ಅರುಹುತ್ತದೆ. ಈ ಎರಡೂ ಕೃತಿಗಳು ರಟ್ಟ ಅರಸರ ಚರಿತ್ರೆಯನ್ನು ನಿರ್ಮಿಸುವಲ್ಲಿ ಆಕರ ಗ್ರಂಥಗಳಾಗಬಲ್ಲವು.

ಗ್ರಂಥಸಂಪಾದನೆ:

ಪಾರ್ಶ್ವಪಂಡಿತನ ಪಾರ್ಶ್ವನಾಥ ಪುರಾಣಂ ಕಾವ್ಯವನ್ನು ಎಂ.ಮರಿಯಪ್ಪಭಟ್ಟ ಮತ್ತು ಎಂ.ಗೋವಿಂದರಾವ್ ಅವರು ಮೊಟ್ಟಮೊದಲಿಗೆ ಸಂಪಾದಿಸಿ ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದರು. ಈ ಪರಿಷ್ಕರಣವು ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿದ್ದ ಏಕೈಕ ಹಸ್ತಪ್ರತಿಯನ್ನು ಆಧರಿಸಿತ್ತು. ಅನಂತರ ಎಸ್.ಬೊಮ್ಮರಸ ಪಂಡಿತರು ೧೯೫೬ರಲ್ಲಿ ಮತ್ತೊಂದು ಪರಿಷ್ಕರಣವನ್ನು ಹೊರತಂದರು. ಅವರು ಇದರಲ್ಲಿ ಹಿಂದಿನ ಅಚ್ಚಾದ ಪ್ರತಿಯ ಜೊತೆಗೆ ಶ್ರವಣಬೆಳಗೊಳದ ಜೈನಮಠದ ಓಲೆಪ್ರತಿ ಮದರಾಸಿನ ಶೇಷಯ್ಯಂಗಾರ್ಯರ ಪ್ರತಿ ಮತ್ತು ಮೂಡಬಿದರೆಯ ಎರಡು ಓಲೆಪ್ರತಿಗಳನ್ನು ಬಳಸಿಕೊಂಡರು. ಇದಾದ ಬಳಿಕ ಎಚ್.ಶೇಷಯ್ಯಂಗಾರ್ಯರು ೧೯೬೦ರಲ್ಲಿ ಮೂರು ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಿಸಿ ಪ್ರಕಟಿಸಿದರು.

ಪ್ರಸ್ತುತ ಪರಿಷ್ಕರಣವು ಬೊಮ್ಮರಸ ಪಂಡಿತರ ಆವೃತ್ತಿಯನ್ನು ಆಕರವಾಗಿಟ್ಟುಕೊಂಡಿದ್ದರೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಕೆ ೧೧೧೩, ಕೆ ೧೧೧೪ ಕೆಬಿ. ೫೮,೫೯ ಹಸ್ತಪ್ರತಿಗಳನ್ನು ಬಳಸಿಕೊಂಡಿದೆ.

ವೈ. ಸಿ. ಭಾನುಮತಿ