ಕಂ || ಶ್ರೀದಯಿತಂ ಪೊಕ್ಕನಿಳಾ
ಹ್ಲಾದಕರಂ ರತ್ನತೋರಣಾದ್ಯಷ್ಟವಿಧೋ
ತ್ಪಾದಿತಶೋಭಾಕರಮಂ
ಪೌದನಪುರಮಂ ಯಶೋರ್ಥಿ ಕವಿಕುಳತಿಳಕಂ ೧

ವ || ಅಂತಖಿಳಭೂತಳನಾಥಸಮೇತಂ ಮಹಾವಿಭೂತಿಯಿಂದರವಿಂದ ಮಹಾರಾಜನಪಗತಗ್ಲಾನಿಯಂ ನಿಜರಾಜಧಾನಿಯಂ ಪೊಕ್ಕು ಸುಖದಿನಿರೆ

ಕಂ || ಮರುಭೂತಿಯುಮತಿಶೋಭಾ
ಕರಮಂ ದೃಕ್ಸೌಖ್ಯಕರಮನತಿಶಯಲೀಲಾ
ಕರಮಂ ಪೊಕ್ಕಂ ನಿಜಮಂ
ದಿರಮಂ ಶರದಿಂದುವಿಶದತರಕೀರ್ತಿಯುತಂ ೨

ವ || ಅಂತು ಸಕಳ ಸುಖಾವಾಸಮಂ ನಿಜನಿವಾಸಮಂ ಕೂಡೆ ಪೊಕ್ಕು

ಕಂ || ಜಗನಿಗಮಗ್ರಭವಂಗಂ
ವಿನಿಯದೆ ಪೊಡೆವಟ್ಟು ಪತಿಯ ಜಯಮಂ ರಿಪುಭೂ
ಪನ ವಸ್ತುವಾಹನಂ ನೆ
ಟ್ಟನಱಿಪೆಯುಂ ತೆಱೆಯೆ ನೆಱಯೆ ನಯನಿಧಿ ಪೇೞ್ದಿಂ ೩

ವ || ಅಂತು ಪೇೞ್ದನಂತರ ಪರಿಜನಪರಿವೃತೆಯಾಗಿ ಕೆಯ್ಗೆಯ್ದುಂ ಕೆಯ್ಗೆಯ್ಯದಂತಿರ್ದ ನಿಜಲಲನೆಯ ಕೆಲಕ್ಕೆವರೆ

ಕಂ || ಅಳವಿಗಿಡೆ ನೆಗೞ್ದಿ ದೋಷ
ಕ್ಕೆ ಲಜ್ಜೆಯಿಂ ಬೆಮರುಮೊಡನೆ ಕಂಪನಮುಂ ಬಂ
ದೆಳಸೆ ವಸುಂಧರೆಗದನಾ
ಗಳೊಲವುಗೆತ್ತಾತನೆಯ್ದಿದಂ ಮುದದೊದವಂ ೪

ಲಲನೆಯರ ಚರಿತಮನಿತುಂ
ಪಳಾಳಮದು ದಿಟವೆಗೆತ್ತು ಹರ್ಷಮನನ್ನಂ
ತಳೆದಪನೆಂದೊಡೆಯುೞಿದವ
ರ್ಗಳನಬಲೆಯರಾಳಿಗೊಳ್ವುದೇಂ ವಿಸ್ಮಯಮೇ ೫

ಅಂತು ಕೆಲದೆವಸಮಿರ್ಪುದು
ಮಂತರ್ವರ್ತಿಗಳುದಗ್ರನಪ್ಪಗ್ರಜವೃ
ತ್ತಾಂತಮನಱಿಪಿದೊಡೆ ನಿಜ
ಸ್ವಾಂತದೊಳಿಂತೆಂದು ಚಿಂತಿಸಿದನಾ ಸಚಿವಂ ೬

ಮಡದಿಯರನರ್ಥಮುಳ್ಳೊಡೆ
ಪಡೆಯಲ್ಬರ್ಕುಂ ಸಹೋದರರ್ಕಳನೆನಿತು
ಪಡೆವರೆ ಪೆಂಡಿರ ದೂಸಱಿ
ನೊಡವುಟ್ಟಿದರ್ಗೆಂತು ಮುಳಿಯಲಕ್ಕುಂ ತಕ್ಕಂ ೭

ಎಂದು ನಿಜಪ್ರಿಯೆಯಂ ಪು
ಲ್ಲಿಂದಂ ಕೀೞಾಗಿ ಬಗೆದು ತೊಱೆದುಂ ಮನದೊಳ್‌

ನೊಂದಪನಗ್ರಜನದಱೆಂ
ದೆಂದೆನುತುಂ ಮುನ್ನಿನಂತೆ ನಡೆಯಿಸುತಿರ್ದಂ ೮

ಅನಿತೊಂದಗ್ರಜನ ನಯ
ಕ್ಕೆನಸುಂ ಮುನಿಯನೆ ನೃಪಾಳಕಂ ಕೇಳಲೊಡಂ
ಜನಿಯಿಕುಮಪಾಯಮಣ್ಣಂ
ಗೆನುತುಂ ಚಿಂತಿಸಿದನೇಂ ಮಹಾತ್ಮನೊ ಸಚಿವಂ ೯

ವ || ಅಂತು ಚಿಂತಿಸುತಿರ್ಪುದುಂ ಅಂಜಲಂಜಲ್ಬೆಳಗಾದುದು ಎಂಬಂತೆ ಭೂಕಾಂತನಾ ಕಮಠನ ದುರ್ವೃತ್ತವೃತ್ತಾಂತಮನಂತಶ್ಚಾರರಿಂದಂ ತಿಳಿದು ತನ್ನಂ ಬರಿಸೆ ಮರುಭೂತಿ ಬಂದು ಪೊಡೆವಟ್ಟು ಕಟ್ಟುಕಡೆದು ಸಶಂಕಿತನಾಗಿ ಸಿಂಹಾಸನದ ಕೆಲದೊಳ್‌ತನಗಿಕ್ಕಿದುಚಿತಾಸನದೊಳ್‌ಕುಳ್ಳಿರ್ಪುದುಂ ಸಚಿವಂಗರಸನಿಂತೆಂದಂ

ಕಂ || ಏಕಾಂತಮಾಗಿಯುಂ ಮಗು
ೞ್ದೇಕಾಂತಮೆನಿಪ್ಪುದಲ್ತು ನಿಮ್ಮಗ್ರಜನ
ವ್ಯಾಕುಳತೆಯಿಂದೆ ನೆಗೞ್ವುದು
ಲೋಕಾಂತಮದಂ ವಿಚಾರಿಪಂದಱಿಯದರಾರ್‌೧೦

ಆಮಿನಿತು ದೆವಸಮಱಿದುಂ
ನೀಮೆ ನಿಜಾಗ್ರಜನನಱಿದು ನೆಱೆದಪಿರೆಂ
ಬೀ ಮನದೊಳಿರ್ದೆವುಚಿತಮ
ನೇಮಾತಱಿದಪರೆ ಮೋಹವಿಘಟಿತಮತಿಗಳ್‌೧೧

ಮುನ್ನಮೆ ನಿಜಪಿತೃ ನಯಸಂ
ಪನ್ನನನಾಗತಮನಱಿದು ತೊಱೆದವನಂ ನೀ
ಮಿನ್ನೆವರಮಱಿದೊಮೊಳಕೊಂ
ಡನ್ನೆಯಮಿದೆ ಸಾಲ್ವುದಿರಿಸದಿಂ ಪರಿಹರಿಸಿಂ ೧೨

ಎನೆ ಜನಪತಿ ಸಚಿವಂ ಭೂ
ಪನ ಕೋಪಮನಱೆದು ದೇವ ಕೇಳದುದಂ ನೀ
ಮೆನಗೆ ಬೆಸಸುವಿರಿಯಾದೊಡ
ಮನುಕಂಪೆಯಿನಧಿಪ ನೀಂ ವಿಚಾರಿಪುದಿನ್ನುಂ ೧೩

ವ || ಎಂಬುದುಂ ಜಗತೀಪತಿ ಮುಗುಳ್ನಗೆ ನಗುತ್ತುಮಿಂತೆಂದರಂ

ಕಂ || ಮುಚ್ಚುಮಱೆಯಿಲ್ಲದರ್ಕೇ
ಪಚ್ಚು ನಿಜಾಗ್ರಜನ ಧೂರ್ತವೃತ್ತಿಗೆ ನೆಗೞ್ದು
ಮ್ಮಚ್ಚರದಿನೆಂತೊ ನೀಮಿಂ
ಮುಚ್ಚುವಿರೂರುಟ್ಟು ನಾಡು ಮೇಲ್ಕೊಂಡುದುದಂ ೧೪

ವ || ಅದಂದಾ ದುರಾಚಾರಂ ವಿಚಾರಗೋಚರಮಲ್ಲದಂತು ನೆಗೞ್ದುದಂ ನಾಮೆಂತು ವಿಚಾರಿಸುವಮೆಂದು ಮಱುಮಾತುಗುಡದಂತು ನುಡಿಯೆ ಲಜ್ಜಿತನಾಗಿ ತಲೆಯಂ ಬಾಗಿರೆಯರಸಂ ಮರುಭೂತಿಯ ಮನದ ಕಳಂಕಮಂ ಕಳೆಯಲೆಂದಿಂತೆಂದಂ

ಕಂ || ವಿನಯನಿಧಿ ವಿಶ್ವಭೂತಿಗೆ
ಜನಿಯಿಸಿ ನಿಮ್ಮಗ್ರಜಾತನೆನಿಸಿಯವಂ ದು
ರ್ಜನನಾದನಿಂಗಡಲ್ಗಮ
ರ್ದಿನೊಡನೆ ವಿಷಮುದಯಿಪಂದದಿಂದಂ ಕಮಠಂ ೧೫

ಜನನಸ್ಥಾನಮದೊಂದಾ
ದನಿತಱೊಳೆ ಸಮಾನಶೀಲಮಕ್ಕುಮೆ ಜನಕೇಂ
ಜನಿಯಿಸಲಾರ್ತುದೆ ಸಿಡಿಲದು
ಘನಸಂಭವಮೆನಿಸಿ ಹರ್ಷಮಂ ವರ್ಷದವೋಲ್‌೧೬

ವ || ಅದು ನಿಮಿತ್ತಮಾ ದುರ್ವೃತ್ತನ ಕೇಡಿಂಗೆ ಅಳಲಲಿಲ್ಲೇಕೆಂದೊಡೆ ಛಿಂದಿ ಬಾಹುಮಸಿ ದುಷ್ಟಮಾತ್ಮನಾಯೆಂಬ ನೀತಿಯಂ ನಿಮಱಿಯಡವರಲ್ಲೆಂದು ತನ್ನಂ ಪ್ರತಿಬೋಧಿಸಿದ ನಿಜಸ್ವಾಮಿಪ್ರಸಾದದೊಳಾದ ತೋಷಮುಮಗ್ರಜನ ಕೇಡಿನೊಳಾದ ದೋಷಮುಂ ಮನದೊಳಿರೆ ಪೀಯೂಷಮುಮಂ ಬಡಬಾನಳನುಮನೊಳಕೊಂಡ ಪಯಃಪಯೋಧಿಯಂ ನೆನೆಯಿಸುತ್ತುಂ ಜನಪತಿಯ ನಿಯಮದಿಂ ಮನಮಿಲ್ಲದ ಮನದಿಂ ಮನೆಗೆ ಪೋಪುದುಮಿತ್ತಲ್‌

ಕಂ || ಪರಿಹರಿಸಲ್ ಮರುಭೂತಿಗ
ಮರಿದಾದುದು ರಾಜಯಕ್ಷ್ಮಮನುಭವಿವೈದ್ಯಂ
ಗರಿದಪ್ಪ ತೆಱದೆ ಕಮಠನೊ
ಳರಸನ ರೋಷಂ ಸಮಸ್ತದೋಷಪ್ರಭವಂ ೧೭

ವ || ಅಂತರವಿಂದಮಹಾರಾಜನುದ್ದೀಪಿತಕೋಪನಾಗಳೆ ತಳಾಱನಂ ಬರಿಸಿ

ಕಂ || ಅತಿಕುಪಿತನಾಗಿಯುಂ ಕ್ಷಿತಿ
ಪತಿ ಯತಿಗಂ ಬ್ರಾಹ್ಮಣಂಗಮಾವುದು ಶಾಸ್ತ್ರೋ
ದಿತದಂಡಮದನೆ ಕಮಠಂ
ಗೆ ತೆಡೆಯದೆಸಗೆಂದು ಬೆಸಸಿದಂ ನೀತಿವಿದಂ ೧೮

ವ || ಅಂತು ವಸುಧೇಶಂ ಬೆಸಸೆ

ಕ || ಮರುಭೂತಿಯ ಕೂರ್ಪಿಂಗೋ
ಸರಿಸಿಯೆ ಕಮಠಂಗದೇನುಮಂ ಮಾಡದೆ ಪ
ಲ್ಮೊರೆವವನರಸನ ನಿಯಮವ
ನೆರಡಿಲ್ಲದೆ ಪಡೆದು ತಡೆಯಲೇನಱಿದಪನೇ ೧೯

ವ || ಅಂತು ಪಲವು ದೆವಸದಿಂದುದ್ದಂಡನಂ ದಂಡಿಸಲ್‌ಪಡೆದೆನೆಂದು ಸಂತಸಮನಾಂತು

ಕಂ || ಪುಟ್ಟಿದ ಮುಳಿಸಿಂದಂ ಚೌ
ವಟ್ಟದೆಡೆಗೆ ತಂದು ಕಟ್ಟಿ ಕುಟ್ಟುವೆನೆನುತಂ
ನಿಟ್ಟಿಸಿ ಕಂಡನವಂ ಚೌ
ವಟ್ಟದ ದೀಂಟೆಯೊಳೆ ನಿಂದು ಜೂದಾಡುವನಂ ೨೦

ವ || ಅಂತು ನೀಡುಂ ಜೂದಾಡುವ ಕಮಠನಂ ಕಂಡು ತನ್ನಂತರಂಗದೊಳಿಂತೆಂದಂ

ಕಂ || ನಿಯಮಮನೀವನ ಸೆಂಗಂ
ನಿಯತಂ ಶಿಕ್ಷಿಸಲೆವೇಡಿದೆನಗಂ ಮನದೊಳ್‌
ದಯೆ ಪುಟ್ಟುವಂತೆ ನೆಗೞ್ದನೆ
ನಯಹೀನಂ ಮೆಚ್ಚಿದಂದದಿಂದಂ ನೆಗೞ್ದಂ ೨೧

ವ || ಅದೊಡಮೀ ದುರಚಾರಪರಿಣತಂ ಮರುಭೂತಿಯ ಮನೆಯೊಳಿರದೀ ಯೆಡೆಯೊಳಿರ್ದನಾಯಾಸಮಂ ಮಾಡಿದನಲ್ಲದಂದಕ್ಷೂಣಗುಣನಿಧಿಯ ದಾಕ್ಷಿಣ್ಯಮನೆಂತುಂ ಮೀಱಲ್ಬಾರದೆಂದಾ ಕ್ರೂರಾತ್ಮನುಂ ತನ್ನ ಚಿತ್ತದೊಳ್ ಬಗೆಯುತ್ತುಮೆಯ್ದೆವಂದು

ಕಂ || ನೃಪನೀಯೆ ನಿಯಮಮಂ ದಂ
ಡಪಾಶಿಕಂ ಕಟ್ಟಿ ಕುಟ್ಟಿ ಕಮಠನನವನಂ
ತಪಮಾನಮನೆಯ್ದಿಸಿತ
ನ್ನ ಪೆಸರನನ್ವರ್ಥಮೆನಿಸಿದಂ ಜನದಿಂದಂ ೨೨

ವ || ಅನಿತರ್ಕಲ್ಲಿ ನೆರೆದು ಜೂದಾಡುತಿರ್ದ ಧೂರ್ತಜನಂಗಳೆಲ್ಲಂ ತಮತಮಗೆ ಕಮಠಂಗನಯಪರಂಗೆ ಮುನಿದು

ಕಂ || ವನಮಂ ಸುಡುವಗ್ನಿಗೆ ವಾ
ಯು ನಂಟನದೆ ದೀಪನಾಶಮಂ ಮಾಡುವವೋಲ್‌
ಘನತೇಜಂ ಕಿಡೆ ಕಮಠಂ
ಗನುಕೂಲಜನಾಳಿಯಾಯ್ತು ತಾಂ ಪ್ರತಿಕೂಲಂ ೨೩

ವ || ಅಂತವನ ಘನಶ್ರೀಯಪರ ಸಂಧ್ಯಾಶ್ರೀಯಂದದಿಂ ದೋಷಾಭಿವೃದ್ಧಿಗೆ ಕಾರಣವಾಗಿ ಪಾಱಿ ಪೋಗೆ ರಾಗಿಜನಂಗದಳೊಂದಾಗಿಯುದ್ಧಂಂಡನ ಮಂಡೆಯನೇೞುಬಟ್ಟೆ ಗಿಋಷಿದು ಸಗಣದಿನಿಡಿಸುತ್ತುಂ

ಕಂ || ಕುಂದಾಗೆ ಗುಣಕೆ ಕಾಮದೊ
ಳೊಂದಿರೆ ಗೋಧರ್ಮಮಿರದೆ ಕೆಱಹಂ ಸೊರೆಯಂ
ತಂದಾ ಚೆಂಡಿಕೆಯೊಳ್‌ತರ
ದಿಂದಮವಂಗುಚಿತಮೆನಿಸೆ ಕಟ್ಟಿದರರೆಬರ್‌೨೪

ವ || ಅಂತು ಕಟ್ಟಿ ಮಿಟ್ಟೆಯಿಂ ಬೂತುಗಳಿನಾತನ ಮಂಡೆಯನಣೆಯಿಸುತ್ತುಂ

ಕಂ || ಮತ್ತಗಜಮೇಱಿ ಬೆಳ್ಗೊಡೆ
ಯೆತ್ತಿಸಿ ಬರುತಿರ್ದ ಬೀದಿಯೊಳ್‌ಕೞ್ತೆನು
ದ್ವೃತ್ತನನೇಱಿಸಿ ಹಱೆಮೊಱ
ನೆತ್ತಿಸಿ ಜೀಯೆಂಬ ಜನಮೆ ಚೀಯೆನೆ ತಂದರ್‌೨೫

ಕಿಱಿದೆಡೆಯಯಶದ ಭವದಿಂ
ತಱಟಾದವೊಲಣೆಯೆ ಬುಗುಟು ನೆಗೆದೊಡೆ ಶಿರದೊಳ್‌
ತರದಿಂದೆ ತರ್ದು ನೆಗೆದಂ
ತಿರೆ ಪಿರಿದಪಮಾನಮೆಯ್ದಿದಂ ದುಶ್ಚರಿತಂ ೨೬

ಎೞ್ತಿನೊಳೆಣೆಯೆನಿಪಿವನ ನೆ
ಗೞ್ತೆಯದಂ ನೆಱೆಯೆ ಗೆಲ್ದುದೆಂದಱಿಪುವವೋಲ್‌
ಕೞ್ತೆಯನೇಱಿಸೆಯಂತಾ
ಪೊೞ್ತಿಱೊಳೀತಂಗಿದುಚಿತಮೆಂದರ್‌ಕೆಲಬರ್‌೨೭

ಹಱೆಮೊಱನಂ ಪಿಡಿಯಿಸೆ ಮುಂ
ದಱೆಯದಿವಂ ತನ್ನ ವಂಶದೌನ್ನತ್ಯಮನೀ
ತೆಱಿದಿಂ ನೆಱೆ ಕಿಡಿಸಿದನೆಂ
ದಱಿಪುವ ತೆಱದಿಂದಮಿರ್ದುದಱಿವರ ಬಗೆಯೊಳ್‌೨೮

ಬಿಡದಯಶಮೆಂಬ ಕಸದೊಂ
ದೆಡೆಯಿವನೆಂದಱಿಪುವಂದದಿಂ ಸಗಣದಿನಾ
ರ್ದಿಡುತುಂ ಧೂರ್ತನ ಮಂಡೆಯ
ನಡೆಯುತ್ತುಂ ಪೊಗೞ್ವ ವಂದಿಗಳ್‌ತೆಗಳುತ್ತುಂ ೨೯

ವ || ಅಂತು ಬೆಚ್ಚರಂ ಬೆಂಬೆನ್ನೊಳ್‌ಬರೆ ತನ್ನ ನಾದುನಿಯೊಳೀ ಖಳಂ ಮಱೆವಾೞ್ದನ್ಯಾಯವರ್ತಿಯೆಂದು ಡಂಗುರಂಬೊಯ್ಸುತ್ತುಂ ನಾಡಿಂದಮೆತ್ತಿ ಕಳೆವುದುಮಾಗಳ್‌ಕೆಲರಿಂತೆಂದರ್‌

ಕಂ || ಆ ತಂದೆಗೆ ಪುಟ್ಟಿಯುಮೀ
ಖ್ಯಾತನ ಮರುಭೂತಿಯೊಡನೆ ಪುಟ್ಟಿಯುಮಿವನಿಂ
ತೀ ತೇಱದವಸ್ಥೆವಡೆದನ
ನೀತಿಪರಂಗಿನಿತಱಿಂದಮಗ್ಗಳಮಕ್ಕುಂ ೩೦

ಗುಣಹೀನನೆನಿಪ ಕಮಠನ
ಪಣಮುಂ ಕುಲಮುಂ ಮಹೋನ್ನತಿಯುಮದೇಕ
ಕ್ಷಣಮಿರಿಸಲಾಱವದಱಿಂ
ಗುಣಮೆ ಮಹೋನ್ನತಿಗೆ ಕಾರಣಂ ಪೆಱತುಂಟೇ ೩೧

ಪಲರಂ ಬಾಧಿಪ ಪುಲಿಯಂ
ಕೊಲೆ ಸಂತಸಮಪ್ಪ ತೆಱದೆ ಕಮಠನನನಯಾ
ಕಲಿತನನರಸಂ ದಂಡಿಸೆ
ತಲೆದೋಱಿದುದಖಿಳಪುರಜನಕ್ಕನುರಾಗಂ ೩೨

ಪರದಾರಗಮನಪರರೆನಿ
ಪರದಾರ ಮನಕ್ಕೆ ವರ್ಪರದಱಿಂದವನಂ
ಕರಮೆ ಪರಿಭವಿಸೆ ವಿಬುಧೋ
ತ್ಕರಮೆ ಸುಖಂಬಡೆದುದುೞದವರ್‌ಪಡೆಯದರಾರ್‌೩೩

ವ || ಅಂತು ಪರಿಭವಿಸಿ ಪುರದಿಂ ಪೊಱಮಡಿಸಿ ಕಳೆಯೆ

ಕಂ || ಭೂತಾದ್ರಿಗೆ ಶೋಭಾಪರಿ
ಭೂತಾದ್ರಿಗೆ ಚಂದ್ರಕಾಂತನಿರ್ಮಳಜಳಸಂ
ಭೂತಾದ್ರಿಗೆ ತರಿ ಚೇತೋ
ಭೂತ ಕ್ರೀಡಾದ್ರಿಗದ್ರಿಗಳ್‌ಸಮನೊಳವೇ ೩೪

ವ || ಅಂತಾ ರಾಜಧಾನಿಗೆ ದಶಯೋಜನದೊಳ್‌ವಿರಾಜಿಸುತಿರ್ಪ

ಉ || ಭೂತನಗಕ್ಕೆ ಪೋಗಿ ಪರಿಭೂತನನಕ್ಷರಕುಕ್ಷಿಯಂ ಜಟಾ
ವ್ರಾತ ಸಮಗ್ರ ಭಾರವಹ ಗರ್ದಭನಂ ದೃಢಕಿಲ್ಮಿಷಾಭನಂ
ಭೌತಿಕನಂ ಕರಂ ವಟುಕನಂ ಕಮಠಂ ಶಠನೆಯ್ದಿ ಪೊರ್ದಿ ನಿ
ನ್ನೀ ತಪಮಂ ಕುಡೆಂದೊಡಪನೀತಿಯನಾತನುಮೆಂದು ಪೊೞ್ತಱೊಳ್‌೩೫

ಕಂ || ತಡೆಯದೆ ಮುಂತಿಱಿದ ಶಿರಂ
ಜಡೆಗಟ್ಟಲ್‌ಬಾರದೆಂದು ಬೋೞಿಸಿ ಬೋಧಂ
ಗುಡೆ ಕೊಂಡನವಂ ತಪಮಂ
ಗೆಡೆಗೊಂಡಿರೆ ದಂಡು ಬೂದಿ ಸೊರೆ ರುದ್ರಾಕ್ಷಂ ೩೬

ನಿರವಿಸಿದುದ ಸೇವ್ಯತೆಯಂ
ಸೊರೆ ಭಸ್ಮಂಶ್ವಪದೃತ್ತಿಯಂ ದಂಡು ವಿನಿ
ಷ್ಠುರದಂಡದಂತೆಯಂ ತಾಂ
ಧರಿಸಿದ ರೌದ್ರಕ್ಷನೆಂಬುದಂ ರುದ್ರಾಕ್ಷಂ ೩೭

ವ || ಅಂತಾ ದುರಾಚಾರಂ ದುರಾಚರಣಕ್ಕೆ ಬೆರಲೆತ್ತುವಂತೂರ್ಧ್ವಬಾಹುವಾಗಿ ತಪಮಂ ಮಾಡುತ್ತಮಿರ್ದನಿತ್ತಲ್‌

ಕಂ || ಆಳೋಚಿಸಿ ನರಪತಿ ದುಃ
ಶೀಲನನಿರದೆತ್ತಿ ಕಳೆಯೆ ನೆನೆದಗ್ರಜನಂ
ಮೇಳಿಸಿದ ಮೋಹದಿಂ ಕರ
ಮೇೞಿಸಿದಂ ಕೂೞ ನೀರ ನಿದ್ದೆಯ ದೆಸೆಯಂ ೩೮

ವ || ಅಂತು ನಿಜಾಗ್ರಜಂ ಪೋದ ದೆಸೆಯನಱಿಯದೆ ದೆಸೆಗೆಟ್ಟ ಪುಲ್ಲೆಯಂತೆ ಚಿಂತಿಸುತಿರ್ಪನ್ನೆಗಮಾತಂಗೆ ಯಮದೂತಂ ಬರ್ಪಂತಿರೊರ್ವ ದುರ್ಬೋಧಂ ಬೋಧಲಿಂಗಿ ಬಂದು ನಿಮ್ಮಗ್ರಭವನುಗ್ರವ್ಯಾಘ್ರತೀಕ್ಷ್ಣ ತರಕ್ಷು ಕ್ರೂರಕಂಠೀರವ ಗಂಡಭೇರುಂಡ ಪರುಷತರ ಶರಭ ರಭಾಸಾತಿಗಹನ ಗಹನಪರೀತ ಭೂತಶೈಳದ ಸಮಿಪದ ತಾಪಸಾಶ್ರಮದೊಳ್‌ತಾಪಸನಾಗಿರ್ದನಂ ಕಂಡೆವೆಂದೊಡಾನಂದಮಂದಿರಹೃದಯನರವಿಂದಮಹಾರಾಜನ ಮಂದಿರಕ್ಕೆ ವಂದು

ಉ || ದೇವ ದಯಾಳು ನೀನೆ ವಲಮಲ್ಲದೊಡುಗ್ರಮದಗ್ರಜನ್ಮನು
ದ್ಗ್ರೀವತೆಗಾರೊ ಸೂಕ್ತ ವಿಧಿಯಂ ನೆಱೆ ಮಾಡದೆ ಮನ್ನಿಪನ್ನರು
ರ್ವೀವರರೆಂಬಿದಂ ಬಗೆದು ನಿರ್ಭಯನಾಗಿಯೇ ಬಿನ್ನನಿಪ್ಪೆನೊ
ಲ್ದೀವುದದಾಗದೆನ್ನದೆ ನಿಯಾಮಮನಪ್ರತಿಮಪ್ರಭಾವ ನೀಂ ೩೯

ವ || ಎಂದು ನುಡಿದ ನಿಜಸಚಿವನ ವಚನಮನರಸನವಧಾರಿಸಿ

ಕಂ || ಏನೆನೆ ಮದಗ್ರಭವನವ
ಮಾನಾನಳದಗ್ಧನೆಂಬುದಂ ಭೌತಿಕನೆಂ
ಬೀ ನೆವದಿಂದಱಿಪುತ್ತುಂ
ತಾನಿರ್ಪಂ ಭೂತನಗದೊಳೆಂದೆನಗೀಗಳ್‌೪೦

ಮಾನವನೊರ್ವಂ ಬಂದವ
ಮಾನಮನೆಯ್ದಿದನ ವಾರ್ತೆಯಂ ಪೇೞ್ದನದ
ರ್ಕಾನಲ್ಲಿಗೆ ಪೋಗಿ ಮನೋ
ಗ್ಲಾನಿಯನಪಹರಿಪೆನುಚಿತವಚನಾಮೃತದಿಂ ೪೧

ವ || ಎಂದೊಡರವಿಂದಮಹಾರಾಜಂ ಮುಗುಳ್ನಗೆಯಂ ನೆಗುತ್ತುಮಿಂತೆಂದಂ

ಕಂ || ಮನೆಯೊಳಗಣ ಪಾವಂ ನೆ
ಟ್ಟನೆ ಕಳೆವಂತವನನೆತ್ತಿ ಕಳೆದೊಡೆ ನಿಮಗೇ
ಕಿನಿತೊಂದು ಖೇದಮಾ ದು
ರ್ಜನನಿರೆ ಕೇಡಲ್ಲದೊಳ್ಳಿತೇನಾದಪುದೇ ೪೨

ಅವನನಪನೀತಿಭವನನ
ನವಿವೇಕದೆ ಪೋದ ಪಡಣಮಂ ತಲೆವಿಡಿವಂ
ತೆವೊಲಱಸಿ ಪೋಪುದಿದು ಮಿ
ೞ್ತುವನಱಿಸಿಯೆ ಪೋವ ತೆಱನನಱಿಪುಗುಮಲ್ತೇ ೪೩

ಮತಿಗೆಟ್ಟವನಿರ್ದೆಡೆಗಱ
ಸಿ ತಿಂಬ ದೈವಕ್ಕೆ ಪೋಗಿ ಪಾಳಂ ಬಡುವಂ
ತತಿಮೋಹದಿಂದೆ ಪೋದೊಡೆ
ಗತಿ ಕಿಡುಗುಂ ಪ್ರಾಣಬಾಧೆಯಕ್ಕುಮಮೋಘಂ ೪೪

ಒಡೆತನಮನಿತ್ತು ಹರ್ಷಮ
ನೊಡರಿಸಿ ಮುಂ ಪಡೆದ ಲೇಸದೇಂ ಪರಿಭವದಿಂ

ಕಡುಮುಳಿಸು ತೊಡರ್ದ ಜಡನಿ
ರ್ದೆಡೆಗೞ್ಕದೆ ಪೋಗೊ ಪಡೆವುದೇನೆಮಗಱೆಪೈ ೪೫

ನೀತಿವಿದರ್‌ನಿಮ್ಮಂದಿಗ
ರೀ ತೇಱದಿಂ ನುಡಿವುದಪನಯಂ ಮಗುೞ್ದಿನ್ನೀ
ಮಾತಂ ನುಡಿಯದಿರಿಂ ಪರಿ
ಭೂತನವಂ ನಿಮಗಪಾಯಮಂ ಚಿಂತಿಸುಗುಂ ೪೬

ವ || ಅದುಕಾರಣದಿನಾ ದುರಾತ್ಮನೆಂತುಂ ಪರಿಹರಣೀಯನಲ್ಲದೆ ಸ್ವೀಕರಣೀಯನಲ್ಲೆಂದು ಮಱುಮಾತು ಪುಟ್ಟದಂತು ಮುಟ್ಟೆ ಮೂದಲಿಸಿ ಪಲತೆಱದಿಂನಯಮಂ ಕಲಿಸಿಕಳಿಪಿ ಮನಮಿಲ್ಲದ ಮನದಿಂ ಮನೆಗೆ ವಂದು

ಮ || ಅತಿಮೋಹಂ ಗತಿಯಂ ಕರಂ ಕಿಡಕುಮೆಂಬೀ ಮಾತೆ ಕೆಯ್ಗೂಡೆ ಸ
ನ್ಮತಿಹೀನಂ ಮರುಭೂತಿಯಗ್ರಭವನೊಳ್‌ಮೆಯ್ವೆತ್ತ ದುರ್ಮೋಹಸಂ
ಗತಿಯಿಂ ಮುಂದಣಜನ್ಮದೊಳ್‌ಜನಿಯಿಪಾ ಹಸ್ತಿತ್ವದಿಂ ಮುನ್ನೆ ಮೂ
ರ್ಖತೆ ಬಂದಿರ್ದವೊಲಣ್ಣಂ ತಿಳಿಪಿ ತರ್ಪುದ್ಯೋಗಮಂ ತಾಳ್ದಿದಂ ೪೭

ವ || ಅಂತು ತಿಳಿಪಿ ತರ್ಪುಪಾಯಮಪ್ಪ ಬಗೆಯನೆ ಬಗೆದು

ಚಂ || ಅೞಲಿರದಗ್ರಜಾತನ ವಿಯೋಗದೊಳಾಗೆ ಮನಕ್ಕೆ ಮೊಕ್ಕಳಂ
ಪೞುಗಳಿದಿರ್ದ ತನ್ನ ಸಿರಿಯಂ ಮರುಭೂತಿ ಬಿಸುಟ್ಟು ಕಟ್ಟಿತಂ
ಕೞಿವವನಾವನೆಂಬಿನೆಗಮೊರ್ವನೆ ಕಪ್ಪಡಮುಟ್ಟು ನಟ್ಟಿರುಳ್‌
ಘೞಿಲನೆಯೆೞ್ದು ಪೋಗಿ ಪರಿದೆಯ್ದಿದನಾಗಳೆ ಭೂತಶೈಳಮಂ ೪೮

ಕಂ || ವಸುವಿರಹಿತನಂಬರಮಂ
ಬಿಸುಟೆಯ್ದಿದನಾತ್ಮಬಂಧುಚಕ್ರದೊಳೞಲ
ರ್ವಿಸೆಯಸ್ತಸಮಯ ರವಿಯಂ
ತೆ ಸಚಿವನಾ ನಗಮನಪರಶೋಭಾಪರಮಂ ೪೯

ವ || ಅಂತಾ ಗಿರೀಂದ್ರಮನೆಯ್ದೆವಂದು ತಾಪಸರೂಪಮಂ ಸ್ವೀಕರಿಸಿರ್ದ ಸಹೋದರನ ವಿಳೋಕನದಿಂ ಶೋಕೋದ್ರೇಕಮಾಗೆ ಮನ್ಯುಮಿಕ್ಕಾ ಕಮಠನಂ

ಕಂ || ನೀನಿಲ್ಲದೊಡೆನಗೇವುದೊ
ಭೂನಾಯಕನಿತ್ತಮಾತ್ಯಪದಮದಱಿಂದಂ
ನೀನಾದುದನಪ್ಪೆಂ ಪೆಱ
ತೇನಗ್ರಜ ನಿನ್ನದೊಂದುಲೋಕಮೆ ಲೋಕಂ ೫೦