ವ || ಎಂದು ಮರುಭೂತಿ ಬಂದು ಕಾಲ್ಗೆಱಗೆ

ಕಂ || ಅಲ್ಲಿ ಪರಿಭವಮನೆನಗಳ
ವಲ್ಲದುದಂ ತನ್ನ ನೃಪತಿಯಿಂ ಮಾಡಿಸಿ ಮ
ತ್ತಿಲ್ಲಿಗಮಱಿಪಲ್‌ಬಂದಂ
ನಿಲ್ಲದಿವಂ ಧೂರ್ತನೆಂದು ಮುಳಿಸಂ ತಳೆದಂ ೫೧

ಅಂತು ಮುಳಿದುಗ್ರತಪದಿಂ
ದಂ ತನಗಾಯ್ತುಗ್ರವೃತ್ತಿಯೆನೆ ಕಿಡಿ ಕಣ್ಣಿಂ
ದಂತರದೆ ಸೂಸುತುಂ ಭ
ಸ್ಮಾಂತರಿತ ಹುತಾಶನಂಬೊಲಿರ್ದಂ ಗೊರವಂ ೫೨

ಕೊಲ್ವ ಮುಳಿಸುಳ್ಳನಿನ್ನೇಂ
ಕೊಲ್ವನವಂ ಕ್ಷಮೆಯನೆನಿಸಿ ತಾಪಸಪಾಶಂ
ಕಲ್ವೊತ್ತು ನಿಂದ ಕಮಠಂ
ಕಾಲ್ವಿಡಿದನ ತಲೆಯೊಳಿಕ್ಕಿದಂ ಸೆಲೆಯನದಂ ೫೩

ವ || ಅಂತು ಪೊಡಮಡಲ್‌ಪೋಗೆ ದೇಗುಲಂ ಮೆಲ್ಕೆಡೆದುದೆಂಬ ನುಡಿ ನನ್ನಿಯಾಗೆ ತನ್ನ ತಲೆವೊಱೆಯಾಗಿರ್ದ ತಪಮನೊಡೆಯಿಕ್ಕುವಂತೆ

ಪಾತಕನಿಕ್ಕಿದ ದೃಷದಭಿ
ಘಾತದೆ ನಿರ್ಘಾತಘಾತದಿಂ ಗಿರಿಶಿಖರಂ
ಮಾತೇನೊಡೆವಂದದೆ ಮರು
ಭೂತಿಯ ತಲೆಯೊಡೆದು ನುಚ್ಚುನೂಱಾಯ್ತಾಗಳ್‌೫೪

ವ || ಅಂರ್ತಾಧ್ಯಾನಾಧೀನಮಾನಸಂ ಪ್ರಾಣಪರಿತ್ಯಾಗಮಂ ಮಾಡಿ

ಮ || ಧರಣೀಮಂಡನಮೊಪ್ಪುಗುಂ ಮಳಯದೇಶಂ ತನ್ಮಹಿಶ್ರೀಗೆ ಕುಂ
ಜರಶೈಳಂ ತೊಡವಂತದರ್ಕೆ ತಿಳಕಂ ವೇಗಾವತೀಸಿಂಧುವಾ
ಯೆರಡಕ್ಕ ಸಿರಿ ಸಲ್ಲಕೀಘನವನಂ ತನ್ನಂದನಕ್ಕಾದುದಾ
ಭರಣಂ ಬಬ್ಬರಿ ತತ್ಪ್ರಿಯಂ ಪೃಥಿವಿಘೋಷಾಖ್ಯಾನಗಂಧದ್ವಿಪಂ ೫೫

ಕಂ || ದೊರೆವೆತ್ತಾ ಕರಿಣಿಗಮಾ
ದೊರೆವೆತ್ತಾ ಕರಿಣಿಗಮಾ
ಕರಿಪತಿತಾಂ ವಜ್ರಘೋಷಮೆಂಬೀ ಪೆಸರಂ
ಧರಿಯಿಸಿ ವಿವೇಕರಹಿತ
ಚರಿತಂ ಮರುಭೂತಿ ವಜ್ರಗಂಧಸಿಂಧುರಮಾದಂ ೫೬

ವ || ಅಂತು ಮರುಭೂತಿ ವಜ್ರಘೋಷಮೆಂಬ ನಾಗಮಾಗಿ ಪುಟ್ಟಿ ಬಳೆಯುತ್ತು ಮಿರ್ದನತ್ತಲಾ ಭೂತಪರ್ವತದ

ಕಂ || ತಾಪಸರೆಲ್ಲರುಮಂತಘ
ರೂಪನ ನಿಸ್ತ್ರಿಂಶವೃತ್ತಿಯಂ ಕಂಡುನುಜಂ
ಗಾಪತ್ತಂ ಮಾಡುವವಂ
ಕೋಪಿಸಿದೊಡೆ ನಮಗಮಿ ಖಳಂ ಮಾಡದುದೇಂ ೫೭

ನಯಯುಕ್ತರಗ್ನಿವತ್ಸ್ವಾ
ಶ್ರಯಮೇವ ದಹಂತಿ ದುರ್ಜನಾಯೆಂಬುದನಾ
ರಯದಿರಿಸಿದಂದು ನಮ್ಮ
ನ್ವಯಕಂ ಕೇಡಕ್ಕುಮಿವನನೀಗಳೆ ಕಳೆವಂ ೫೮

ವ || ಎಂದು ತಮ್ಮೊಳಗಾಳೋಚಿಸಿಯಾ ಕ್ರೂರಕರ್ಮನಪ್ಪ ಕಮಠನನವರುಮಾರ್ದೆತ್ತಿ ಕಳೆಯೆ

ಮ || ಜಗತೀವಿಶ್ರುತದೇವಸಿಂಧು ಹಿಮಚ್ಛೈಳಾಗ್ರದೊಳ್‌ಪುಟ್ಟಿಯುಂ
ಪುಗುವಂತಾದಮಸೇವ್ಯಮಾದ ಲವಣಾಂಭೋರಾಶಿಯಂ ಪೊಕ್ಕನಾ
ಕುಗತಿಪ್ರಾಪ್ತನೆನಿಪ್ಪನುತ್ತಮಕುಲಪ್ರೋದ್ಭೂತನಾಗಿರ್ದೊಡಂ
ಪುಗುಗುಂ ನೀಚರನೆಂಬಿನಂ ಕಮಠನುದ್ಯತ್ಕ್ರೋಧರಂ ವ್ಯಾಧರಂ ೫೯

ವ || ಅಂತು ಬೇವಿನಮರನಂ ಕೈಪೆಸೊರೆ ಪೊರ್ದುವಂತೆ ನೀಚಾಚಾರರಪ್ಪ

ಚಂ || ಶಬರರೊಳೊಂದಿಯೂರನಿಱಿವಲ್ಲಿ ನಿಶಾತಶತಾಶ್ತ್ರಘಾತದಿಂ
ದವಿರಳರಕ್ತಧಾರೆ ನಿಜಕೋಪದವೋಲ್‌ಪೊಱಪೊಣ್ಮೆಜೀವನಂ
ತವುತರೆ ಪಾಪಕರ್ಮಕಮಠಂ ಗಜಭೂಷಣವಜ್ರಘೋಷನು
ದ್ಭವಿಸಿದ ಸಲ್ಲಕೀವನದೊಳಾದನವಂ ವಿಷಕುಕ್ಕಟೋರಗಂ ೬೦

ವ || ಅಂತು ಮರುಭೂತಿಯುಂ ಕಮಠನುಂ ವಾರಣಮುಂ ಕುಕ್ಕುಟೋರಗನು ಮಾಗಿ ಬಳೆಯುತ್ತುಮಿರ್ಪುದುಮಿತ್ತಲ್‌

ಮ || ಕರಿಯಂ ಭಂಗಿಸೆ ಸಿಂಗಮನ್ಯಮೃಗಮೆಲ್ಲಂ ಭೀತಿಗೊಳವಂತೆ ಸಂ
ಗರದೊಳ್‌ಭಂಗಿಸೆ ವಜ್ರವೀರನೃಪನಂ ಮೇಲಾದರುಳ್ಳೞ್ಕಿ ಭೂ
ವರರಾತ್ಮೀಯಪದಾರವಿಂದಮನೆ ಬಂದಾರಾಧಿಸುತ್ತಿರ್ಪಿನಂ
ಕರಮೊಪ್ಪಿರ್ದರವಿಂದನಾಂತನವನೀಸಂಪೂಜ್ಯಸಾಮ್ರಾಜ್ಯಮಂ ೬೧

ಉಪೇಂದ್ರವಜ್ರಂ || ನಿರಂತರಶ್ರೀಹೃದಯಾರವಿಂದಂ
ಸರಸ್ವತೀಚಾರುಮುಖಾರವಿಂದಂ
ನರೇಶ್ವರಾರಾಧ್ಯಪದಾರವಿಂದಂ
ವಿರಾಜಿಸಿರ್ದಂ ವಿನುತಾರವಿಂದಂ ೬೨

ವ || ಅಂತು ಸಮಸ್ತ ಧಾತ್ರಿಯನೇಕಚ್ಛತ್ರಮಂ ಮಾಡಿಯಾ ಕ್ಷತ್ರಿಯಪವಿತ್ರಂ ಪ್ರತಿಪಾಳಿಸುತ್ತುಮಿರೆ

ಚಂ || ತಿಳಿಯೆ ಜಳಾಶಯಂ ತೊಳಗಿ ತೋಱೆ ದಿಗಂಬರರಾಜಹಂಸಸಂ
ಕುಳಮಿತರಾರ್ಥಯುಕ್ತಸಮಯಂ ಕರಮೇೞಿದಮಾಗೆ ಭವ್ಯನಿ
ರ್ಮಳಮುಖಪುಂಡರೀಕಮಲರ್ದೊಪ್ಪೆ ಶರತ್ಸಮಯಪ್ರಭಾವಮು
ಜ್ವಳಿಸಿ ಜಿನೇಂದ್ರರುಂದ್ರಸಮಯಾನುಗಮಾಯ್ತು ಸಮಸ್ತಧಾತ್ರಿಯೊಳ್‌೬೩

ಕಂ || ಜಳದಂಗಳ ಮಳಿನತೆಯಂ
ಕಳೆದುದು ನಿಜದಿಂದಮೆನೆ ಜಳಾಶಯ ಜಳದಾ
ಮಳಿನತೆಯಂ ಕಳೆದುದಿದ
ತ್ತಳಗಮೆ ಪೇೞೆನಿಸಿ ವಿಮಳಮಾದುದು ಶರದಂ ೬೪

ವ || ಅಂತು ತನ್ನ ಸಮುನ್ನತರಾಜಲಕ್ಷ್ಮಿಯಂತೆ ಸಕಳಜನ ಮನೋಹರಮಾಗಿರ್ದ ಶರತ್ಸಮಯದೊಳಮರರಮಣಿಯರಂ ಪರಿಹಾಸಂ ಮಾೞ್ಪ ವಿಳಾಸಿನಿಯರ್ಬೆರಸರವಿಂದ ಮಹಾರಾಜಂ ದಿವಿಜರಾಜವಿಭವದಿಂ ಋತುವಿಮಾನದ ಸಿರಿಯನಧಃಕರಿಸುವುತ್ತುಂಗಸಪ್ತ ತಳಪ್ರಾಸಾದಪರಾಂಗಣದೊಳಿರ್ದು ಶರಲ್ಲಕ್ಷ್ಮಿಯಂ ನಿರೀಕ್ಷಿಸುತ್ತುಮಿರ್ಪನ್ನೆಗಂ

ಕಂ || ಜನನಾಥನ ನಯನಾನಂ
ದನಮಂ ಜನಿಯಿಸಿತು ಜಳದಜಂ ವಿಶದಶರ
ದ್ವನಿತೇಂದುಕಾಂತಮಣಿಸಂ
ಜನಿತ ಪ್ರಾಸಾದ ಸುರುಚಿರ ಪ್ರಾಸಾದಂ ೬೫

ವ || ಅಂತುಮಲ್ಲದೆ

ಮ || ಪ್ರಕೃತಿಪ್ರೋದ್ಭವಮಲ್ತು ಜೈನರುಸಿರ್ವಂತಾರಯ್ಯೆ ಲೋಕಂ ಸಕ
ರ್ತೃಕಮೆಂಬಾ ಮತಮಂ ನಿರಾಕರಿಪವೋಲ್‌ಪ್ರಾಸಾದಮಾಸಾದಿತಾ
ಧಿಕಶೋಭಾಖಿಳಲಕ್ಷಣಂ ಜಳದಜಾತಂ ತೋಱೆ ತತ್ಸಾಮ್ಯಮಾ
ಗೆ ಕಳಾಸಿಂಧು ಜಿನೇಂದ್ರಮಂದಿರಮನಾದಂ ಮಾಡಿಪುದ್ಯೋಗದಿಂ ೬೬

ಕಂ || ಬಟ್ಟಿಗೆವಲಗೆಯೊಳಾಗಳೆ
ದಿಟ್ಟಿಗೆ ನೇರ್ವಟ್ಟು ತೋಱೆ ನೆಟ್ಟನೆ ಭೂಪಂ
ತಿಟ್ಟಮಿಡಲ್‌ಬಗೆವುದುಮದು
ತೊಟ್ಟನೆ ಕರಗಿದುದು ನೃಪತಿಯೆರ್ದೆ ಕರಗುವಿನಂ ೬೭

ವ || ಅಂತು ಸಂಸಾರವೈಚಿತ್ರಯಂ ತನ್ನ ಚಿತ್ತಭಿತ್ತಿಯೊಳ್‌ತಿಟ್ಟಮಿಟ್ಟಂತು ನಿಲೆ ಬೞಿಕಮಿಂತೆಂದಂ

ಕಂ || ಪರಿಭಾವಿಸೆ ಪೀನಪಯೋ
ಧರಾಳಿಯಿಂ ಪೊಳೆವ ಸೌಖ್ಯಮಿ ತೆಱದಿಂದಂ
ಚಿರಮಲ್ಲದೆಂದು ಪೇೞ್ವಂ
ತಿರೆ ಪೀನಪಯೋಧರಾಳಿ ಕರಗಿದುದಲ್ತೇ ೬೮

ವಿಭ್ರಮವತಿಯರ ಮಿಸುಗುವ
ದಭ್ರವಿಳಾಸಂ ನವೀನಯೌವನದೊದವೀ
ಶುಭ್ರಾಭ್ರವಿಭ್ರಮದವೋಲ್‌
ವಿಭ್ರಂಶಮನೆಯ್ದದೇಂ ಕ್ಷಣಂ ನಿಂದಪುದೇ ೬೯

ಪೆಱರಾಪತ್ತಂ ಕಂಡುಂ
ತೊಱೆವರ್‌ವಿಷಯಾಭಿಲಾಷೆಯಂ ಸತ್ಪುರುಷರ್‌
ನೇಱೆ ತಮಗಾಪತ್ತಾದೊಡ
ಮೆಱಗುವವರ್‌ವಿಷಯಸುಖಕದೇಂ ಸಾಸಿಗರೋ ೭೦

ಕಿವಿ ಕಣ್‌ದಶನಂ ಮೊದಲಾ
ದವಯವಮುಂ ಕರಗೆ ಮುಪ್ಪಿನೊಳ್‌ವಿಷಯಸುಖ
ಕ್ಕವಚಱರಿತರರ್‌ನರಪತಿ
ಯವಚಿತ್ತಂ ಕರಗೆ ಮುಗಿಲದೇಂ ವಿಸ್ಮಯಮೋ ೭೧

ವ || ಅಂತು ನಿಸ್ಸಾರಸ ಸಾರಸ್ವರೂಪವಿಶಾರದಂ ಶಾರದ ನೀರದ ಸಂಚಳಾಕಾರವಿಳೋ ಕನಪ್ರಭೂತ ಪರಮವೈರಾಗ್ಯಪರಾಯಣಂ ವಿಮಳಗುಣಾಧಾರಂ ಧವಳಾರವಿಂದದಂತರ ವಿಂದಂ ಹಾರಾಜ ನಿರ್ಪುದಮಾ ಸಮಯದೊಳ್‌

ಕಂ || ವನಪಾಳಕನೊರ್ವಂ ಪಾ
ವನವನಸುರಭಿ ಪ್ರಸೂನಫಲಸಂಕುಳಮಂ
ಜನಪತಿಗೋಲಗಿಸಿ ಪದಾ
ವನತಂ ಹಿತಸಮುಚಿತೋಕ್ತಿವಿದನಿಂತೆಂದಂ ೭೨

ಉ || ಶ್ರೀನರಪಾಳ ನಿನ್ನತುಳಪುಣ್ಯದಿನಪ್ರತಿಮರ್‌ಸ್ವಯಂಪ್ರಭಾ
ಖ್ಯಾನಮುನೀಶ್ವರರ್‌ವಿಮಳಿನಾವಧಿಬೋಧವಿಳೋಚನರ್‌ನವೋ
ದ್ಯಾನವನಕ್ಕೆ ವಂದು ನೆಲಸಿರ್ದರೆನುತ್ತಿರೆ ಬೇಗದಿಂ ನಿಜಾ
ಸೀನ ಗಜಾರಿವಿಷ್ಟರದಿನೆೞ್ದವರಿರ್ದೆಡೆಯತ್ತಲೞ್ತಿಯಿಂ ೭೩

ವ || ಸಪ್ತಪರಮಸ್ಥಾನಮಂ ಪೊರ್ದುವುದರ್ಕಿದುವೆ ಕಾರಣಂಗಳೆಂದು

ಕಂ || ಕೇಳೇೞಡಿಯಂ ಧಾತ್ರೀ
ಪಾಳಂ ನಡೆದೆಱಗಿ ಮುನಿಗೆ ನಿರ್ಮಳಗುಣಭೂ
ಷಾಳಿಗಳನೆ ಧರಿಯಿಸಿ ವನ
ಪಾಳಂಗಿತ್ತಂ ನಿಜಾಂಗಚಿತ್ತಮನಾಗಳ್‌೭೪

ತಾನಱಸಿ ಪೋಗಲಿರ್ಪ ನಿ
ಧಾನಮೆ ತನಗಿದಿರ್ಗೆ ವಂದುದೆಂಬುತ್ಸವದಿಂ
ದಾನಂದಭೇರಿಯಂ ಭ
ವ್ಯಾನಂದಂ ನೆಗೞೆ ಪೊಯ್ಸಿದಂ ವಸುಧೇಶಂ ೭೫

ಲಬ್ಧಿವಶದಿಂದೆ ಸಂಸಾ
ರಾಬ್ಧಿಯನಾನೀಸಲೆಂದು ಬಗೆದಾರೆ ಸಮಾ
ರಬ್ಧಮನೆ ತೀರ್ಚಲೆಂದು ಗು
ಣಾಬ್ಧಿಗಳಾ ಯಾನಪಾತ್ರದಂದದೆ ಬಂದರ್‌೭೬

ಉ || ಎಂದು ನರೇಂದ್ರನಿಂದ್ರನ ವಿಳಾಸಮನೇೞಿಪಲೀಲೆಯಿಂದಮಂ
ತೊಂದಿ ಸಮಸ್ತ ಧಾರ್ಮಿಕಜನಂ ಬೆರಸಾ ಮುನಿಪಾದಸೇವೆಯೊಳ್‌
ಸಂದಿರೆ ಚಿತ್ತವೃತ್ತಿ ಶುಕಕೋಕಿಕಳಭೃಂಗಕಳಸ್ವನಂಗಳಿಂ
ಕುಂದದ ಶೋಭೆಯಂ ತಳೆದ ನಂದನಮಂ ಮುದದಿಂದಮೆಯ್ದಿದಂ ೭೭

ವ || ಅಂತೆಯ್ದೆವಂದು ಮುನೀಂದ್ರನ ಬರವಿಂ ತನ್ನ ಜನ್ಮದಂದದಿಂ ಸಫಳಮಾದ ನಂದನವನಶ್ರೀಯಂ ನೋಡಿ

ಕಂ || ಅತುಳಸ್ವಯಂಪ್ರಭಾಹ್ವಯ
ಯತಿಚರಣಾಂಬುರುಹಸೇವೆಯಭಿಮತಫಳಮಂ
ಚತುರರ್ಗೇಂ ಕುಡದೆ ವನ
ಸ್ಪತಿಗಂ ಪಡೆದಿತ್ತುದೆಂದೊಡಭಿಮತಫಲಮಂ ೭೮

ವ || ಎಂದು ಪಾವನವನಮಂ ಪೊಗೞ್ವ ನೆವದಿಂದವರ ತಪಸ್ಸಾಮರ್ಥ್ಯಮಂ ಮುನಿಜನಪ್ರಾರ್ಥ್ಯಮಂ ಕೀರ್ತಿಸುತ್ತುಂ ಕ್ಷತ್ರಿಯಪವಿತ್ರಂ ಬರುತ್ತುಮಿರೆ

ಚಂ || ಮಿಸುಪ ಶಿಳಾತಳಂ ನೆಗೞ್ದ ಕೇಸರಿವಿಷ್ಟರಮಾಗೆ ಪಲ್ಲವೋ
ಲ್ಲಸಿತಮಶೋಕಭೂರುಹಮಶೋಕಮಹೀರುಹಮಾಗೆ ಚೆಲ್ವುವೆ
ತ್ತಸದೃಶನಂದನಂ ಸಮವಸೃತ್ಯವನೀತಳಮಾಗೆ ಯೋಗಿ ರಂ
ಜಿಸಿದನಗಾಧಬೋಧನಿಧಿಯಪ್ಪ ಜಿನೇಶ್ವರನಿರ್ಪ ಮಾೞ್ಕೆಯಿಂದ ೭೯

ವ || ಅಂತು ರಂಜಿಸುವಕ್ಷೂಣಗುಣನಿಧಿಯೆನಿಸಿದ ಮುಮುಕ್ಷುವಂ ನಿರೀಕ್ಷಿಸುತ್ತುಂ ಬಂದಪ್ರತಿಮಭಕ್ತಿಯಿಂ ತ್ರಿಃಪ್ರದಕ್ಷಿಣಂಗೆಯ್ದು

ಕಂ || ಮುನಿಪದಮಂ ಭಕ್ತಿಭರಾ
ವನತಂ ಜಲಗಂಧಕಳಮತಂಡುಳಪುಷ್ಪಾ
ಶನ ದೀಪ ಧೂಪ ಫಳದಿಂ
ಜನಪತಿ ಪೂಜಿಸಿದನಖಿಳಸುಖಸಾಧಕಮಂ ೮೦

ವ || ಆ ಸಮಯದೊಳ್‌

ಕಂ || ಧವಳಾಕ್ಷತಹರಿಚಂದನ
ನವ ಗಂಧದೊಳಲರೊಳೆಱಗದೆಱಗಿದುವು ಯತಿ
ಪ್ರವರಪದಾಂತಿಕದೊಳ್‌ಮಧು
ನಿವೃತ್ತಿಯಂ ಮಾಡಿದಂದದಿಂ ಮಧುಪಂಗಳ್‌೮೧

ವ || ಅಂತಾ ಮುನಿರಾಜಹಂಸನಂ ರಾಜಹಂಸಂ ಪೂಜಿಸಿ ತತ್ಪದಪಯೋಜಾಸನ್ನ ಪ್ರದೇಶದೊಳಾಸನ್ನಭವ್ಯಂ ಕುಳ್ಳಿರ್ದು ಕರಕಮಲಯುಗಳಮಂ ಮುಗಿದು

ಕಂ || ಜೀವಾದಿ ದ್ರವ್ಯಪದಾ
ರ್ಥಾವಳಿ ತತ್ತ್ವಸ್ವರೂಪಮಂ ದರ್ಶನಮಂ
ಶ್ರವಕಯತಿಧರ್ಮಮನಘ
ದಾವಾನಳಮಂ ಸಮಸ್ತಸುಖಸತ್ಫಳಮಂ ೮೨

ಬೆಸಗೊಳೆ ನರಪತಿ ಯತಿಪತಿ
ಬೆಸಸಿದನತಿವಿಶದದಶನವಿಸರಾಂಶು ದಯಾ
ರಸಮುಚ್ಚಲಿಸಿದಪುದು ಹೃದ
ಯಸರೋವರದಿಂದಮೆನಿಸಿ ಸೊಗಯಿಸುವಿನೆಗಂ ೮೩

ಮುನ್ನಮೆ ವಿರಾಗತಾಸಂ
ಪನ್ನನನಾ ಮುನಿ ತಿಳಿಪುವುದು ಬೆಳಗುವವೋಲ್‌
ಕನ್ನಡಿಯಂ ಪದೆಪಿಂ ವ್ಯು
ತ್ಪನ್ನನನೋದಿಸುವ ತೆಱದಿನಾದುದು ಸುಗಮಂ ೮೪

ವ || ಅಂತು ತತ್ತ್ವವಿದಂ ತತ್ತ್ವಸ್ವರೂಪನಿರೂಪಣಮಂ ಮಾೞ್ಪುದುಮಪಗತ ಪದಾರ್ಥಸಂಶಯ ತಮಸ್ಸಮೂಹಾಶಯಕುಶೇಶಯಂ ವಿಕಾಸಿವಿಳಾಸ ಭಾಸುರವದನಾರವಿಂದನರ ವಿಂದಮಹಾರಾಜನನಂತರಂ ಶಾಂತರಸಾಕ್ರಾಂತಸ್ವಾಂತಂಗೆ ಮತ್ತಮಿಂತೆಂದಂ

ಕಂ || ಶಾಂತಗುಣನೆೞ್ದುಪೋಗಿ ಕ
ರಂ ತಡೆದಂ ಸಚಿವನೇಕೆ ತಡೆದನದೆಲ್ಲಿ
ರ್ಪಂ ತಿಳಿಪಿಮೆಂದೊಡಾ ವೃ
ತ್ತಾಂತಮನಱಿದವಧಿಬೋಧದಿಂ ಯತಿ ಪೇೞ್ದಂ ೮೫

ಪೇೞಲೊಡಮದುವೆ ಧಾತ್ರೀ
ಪಾಳನ ವೈರಾಗ್ಯಮಪ್ಪುದಂ ದ್ವಿಗುಣಿಸೆ ತ
ಚ್ಛೀಳನಿಧಿ ಸನ್ನಿಧಿಯೊಳಘ
ಜಾಳಮನಳಱಿಸುವ ದೀಕ್ಷೆಯಂ ತಳೆವಾರ್ಪಿಂ ೮೬

ವ || ಅಂತಾ ವೈರಾಗ್ಯಸಂಪನ್ನಂ ತನ್ನಂತರಂಗದೊಳಿಂತೆಂದಂ

ಕಂ || ತನ್ನೊರ್ವನ ದೆಸೆಯಿಂದಾ
ದನ್ನೆರಪಿದ ದುರಿತಬಂಧಮಂ ಗೆಲಲರಿದೋ
ವಿನ್ನೆಂತಖಿಳಪರಿಗ್ರಹ
ದಿಂ ನೆರಪಿದ ದುರಿತಬಂಧಮಂ ವಿಭು ಗೆಲ್ವಂ ೮೭

ಎಂತುಂ ರಾಜ್ಯಮನಱೆವ ನೃ
ಪೆಂ ತೊಱೆಯಲೆವೇೞ್ಕುಮನುಭವಿಪ ಕಾಲದೊಳಂ
ಚಿಂತೆಯನೊದವಿಪುದಂ ರಾ
ಜ್ಯಾಂತಂ ನರಕಂ ದಲೆಂಬ ನುಡಿಯುಂಟದಱಿಂ ೮೮

ವ || ಎಂದು ತನ್ನ ರಾಜ್ಯಮನಭೋಜ್ಯಮಂ ಸಚ್ಚರಿತಂ ಪರಿಹರಿಪಂತೆ ಪರಿಹರಿಸಿ

ಕಂ || ನರಪತಿ ನಿಜಸಮಪದಮಂ
ನರೇಂದ್ರನೆಂಬಗ್ರನಂದನಂಗಾನಂದಂ
ಬೆರಸಿತ್ತಂ ಮಂಗಳತೂ
ರ್ಯರವದೊಡನೆ ತೀವೆ ನಿಜಯಶಂ ದಶದಿಶೆಯಂ ೮೯

ಭೂರಾಜ್ಯಂ ತನುಜರ್ಗೆ ತ
ಪೋರಾಜ್ಯಂ ತಮಗೆ ಯೋಗ್ಯಮೆಂಬವಸರಮಂ
ಭೂರಮಣರ್‌ಮುಂ ಕಳಿಪದೆ
ಚಾರುಗುಣರ್‌ನೆಗೞ್ದರೇನವರ್‌ಪರಿಣತರೋ ೯೦

ಒದವಿದ ನಿಜರಾಜ್ಯಪರಿ
ಚ್ಛದಮಂ ಭೋಗಿಸದೆ ಜೀರ್ಣಮೆನಿಸಿದುದಂ ಪ್ರ
ಚ್ಛದಮಂ ಬಿಸುಡುವ ತೆಱದಿಂ
ದುದಾತ್ತಮತಿ ಬಿಸುಟನೇಂ ಮಹಾತ್ಮನೊ ಮಹಿಪಂ ೯೧

ಚೊಕ್ಕಳನೆನಿಪಂ ನಿಜವಧು
ಮಕ್ಕಳ್ವಡೆದಂದು ಭೋಗಿಸಲೆ ಪೇಸಿಯೆ ಪಿಂ
ತಿಕ್ಕುವ ತೆಱದಿಂದಂ ಪಿಂ
ತಿಕ್ಕಿದನಾ ರಾಜ್ಯವನಿತೆಯಂ ತತ್ತ್ವವಿದಂ ೯೨

ಈ ತೆಱದಿಂ ತನ್ನುಪಮಾ
ತೀತ ಪರಿಚ್ಛೇದಗುಣಮನಱೆವವರ್ಗಳ್‌ಸಂ
ಪ್ರೀತಿಯೊಳೆ ಪೊಗೞೆ ದುರಿತಾ
ರಾತಿಯನವಯವದೆ ಗೆಲ್ವ ಬಗೆಯನೆ ಬಗೆದಂ ೯೩

ವ || ಅಂತು ಬಗೆದು

ಕಂ || ಜ್ಞಾನಂ ವೈರಾಗ್ಯಂ ದುರಿ
ತಾನದಳದಳನಾಂಬುವಿಮಳಚಾರಿತ್ರಂ ಸು
ಧ್ಯಾನಂ ದೊರೆಕೊಂಡುದಱಿಂ
ನೀನೆ ಕೃತಾರ್ಥನೆ ಮುನೀಂದ್ರ ನಿರ್ಜಿತತಂದ್ರಾ ೯೪

ವ || ಎಂದು ಗುಣಾರ್ಥಿ ತನ್ನಂ ಹಿತೋಪದೇಶದಿಂ ಕೃತಾರ್ಥನಂ ಮಾಡಿದ ಗುಣನಿಧಿಗಳಂ ಪೊಗೞ್ದು

ಕಂ || ನಿಧಿಗಂಡು ಜರಗು ಕರ್ಚುವ
ನಧಮನೆನಿಕ್ಕುಂ ಗಡಖಿಳ ಸುಖದಾಯಿ ತಪೋ
ನಿಧಿ ನಿನ್ನಂ ಕಂಡೈಹಿಕ
ವಿಧಿಗೊಡರಿಪೊಡಾನುಮಧಮನೆನಿಸೆನೆ ಪೇೞಿಂ ೯೫

ವ || ಎಂದು ತನ್ನ ಪರಿಚ್ಛೇದಮಂ ಪ್ರಕಟಿಸೆ

ಕಂ || ದೀಕ್ಷೆಯನೀವುದೆನುತ್ತೆ ಮು
ಮುಕ್ಷುಗೆ ಬಿನ್ನವಿಸೆ ಪತಿ ಮಹಾಬ್ರತಮಂಬೋ
ದೇಕ್ಷಣನಿತ್ತನಹಿಂಸಾ
ಲಕ್ಷಣಲಕ್ಷಿತಮನತುಳವಿಧಿರಕ್ಷಿತಮಂ ೯೬

ವ || ಅಂತು ಸಾಕ್ಷಾನ್ಮೋಕ್ಷಮಾರ್ಗಮೆನಿಪ ದಿಗಂಬರದೀಕ್ಷೆಯಂ ಕೆಯ್ಕೊಂಡು

ಉ || ಮೂಲಗುಣೋತ್ಕರೋತ್ತರ ಗುಣೋತ್ಕರ ಸದ್ಗುಣದೊಳ್ ಮುನೀಶ್ವರಂ
ಶೀಲಸಮನ್ವಿತಂ ನೆಱಿದು ಪನ್ನೆರಡುಂ ತಪಮಯ್ದುಸಂಯಮಂ
ಮೇಳಿಸೆ ತತ್ತ್ವಭಾವನೆಯೊಳಾವಗನುದ್ಯತನಾಗಿ ಕರ್ಮನಿ
ರ್ಮೂಳನಧರ್ಮತತ್ಪರತೆಯಂ ತಳೆದಂ ವಿಜಿತಾಖಿಳೇಂದ್ರಿಯಂ ೬೭

ಕಂ || ದೀಕ್ಷಾಕಾಲಮನಾಗಮ
ಶಿಕ್ಷಣದಿಂ ಕಳೆದ ಬಱೆಕೆ ಕಳೆದಂ ಗುಣಸಂ
ರಕ್ಷಣಕಾಲಮನಖಿಳವಿ
ಚಕ್ಷಣರಂ ಮಾಡಿ ಶಿಷ್ಯರಂ ಮುನಿತಿಳಕಂ ೯೮

ವ || ಅಂತು ಕಳೆದು

ಮ || ಬುಧಸಂಪೂಜಿತ ದರ್ಶನೋರ್ಜಿತ ತಪೋವಿಜ್ಞಾನಶುಂಭದ್ದಯಾಂ
ಬುಧಿ ಚಾರಿತ್ರಮೆನಿಪ್ಪ ನಾಲ್ಕು ತೆಱನಪ್ಪಾರಾಧನಾರೂಪ ಸ
ದ್ವಿಧಿಯಂ ನಿರ್ಮಳನೊಲ್ದು ತಾಳ್ದೆ ಸುಜನಸ್ತುತ್ಯಂ ಗುಣಪ್ರತ್ಯಯಾ
ವಧಿ ಪಿಟ್ಟಿತ್ತು ಯತೀಂದ್ರನೊಳ್ ಸಕಲರೂಪಿ ದ್ರವ್ಯಸಂವ್ಯಾಪಕಂ ೯೯

ಕಂ || ಸ್ಫುರಿತಾವಧಿಬೋದಧಿನಾ
ಯುರವಧಿ ಪನ್ನೆರಡುಬರಿಸಮೆಂದಱೆದು ಗುಣಾ
ಭರಣಂ ಸಲ್ಲೇಖನೆಯಂ
ನಿರಂತರ ಮಾಱ್ಪ ಕಾಲಮೆನಗಿದೆನುತ್ತುಂ ೧೦೦