ಮ || ಕ್ರಮದಿಂ ದೀಕ್ಷೆ ಸುಶಿಕ್ಷಣಂ ಸ್ವಗುಣಪೋಷಂ ಕೂಡೆ ಶುದ್ಧೋಪಯೋ
ಗಮನೆಯ್ದಲ್ಕೆ ಶುಭೋಪಯೋಗಮನದಂ ತನ್ನಗ್ರಶಿಷ್ಯಂಗೆ ರಾ
ಜ್ಯಮನಾತ್ಮೀಯಸುತಂಗೆ ಕೊಟ್ಟ ತೆಱದಿಂ ಸಂಪ್ರೀತಿಯಿಂ ಕೊಟ್ಟು ಸಂ
ಯಮರಾಜಂ ಪರಿಹಾರಶುದ್ಧಿಯನುರುಶ್ರೀಸಿದ್ಧಿಯಂ ತಾಳ್ದಿದಂ ೧೦೧

ಕಂ || ದುರಿತಪರಿಹಾರಕರಮಂ
ಪರಿಹಾರವಿಶುದ್ಧಿಸಂಯಮಮನಾ ಮುನಿಪಂ
ಧರಿಯಿಸಿ ಸಮಸ್ತತೀರ್ಥೋ
ತ್ಕರಮಂ ವಿಹರಣದಿನೊಸೆದು ಬಂದಿಸಿ ಬಱಿಯಂ ೧೦೨

ಉ || ಶ್ರೀದೊರೆವೆತ್ತ ತೀರ್ಥಕರನಷ್ಟವಿಧಾತುಳಕರ್ಮ ಬಂಧಮಂ
ಭೇದಿಸಿ ಮುಕ್ತಿವೆತ್ತಡೆಯನುತ್ತಮಭಕ್ತಿಯೊಳಿಷ್ಟಸಿದ್ಧಿಸಂ
ಪಾದಕಮಂ ಸಮಸ್ತಜನಸಮ್ಮುದಸಾಧಕಮಂ ಪ್ರಸಿದ್ಧ ಸ
ಮ್ಮೇದಗಿರೀಂದ್ರಮಂ ಮಣಿವಿನಿನಿರ್ಮಿತನಿರ್ಮಳಜೈನಗರ್ಮ್ಯಮಂ ೧೦೩

ವ || ಬಂದಿಸಿ ಮುನೀಂದ್ರದಂ ಬರುತ್ತಮಿರೆ

ಉ || ಶ್ರೀವಿಭು ತಂತ್ರಗುಪ್ತನತಿನಿರ್ಮಳ ಧಾರ್ಮಿಕ ಚಂದ್ರಗುಪ್ರನೆಂ
ಬಾ ವರಸಾರ್ಥನಾಥರು ಮಾರ್ಗಪರಿಶ್ರಮದಿಂದೆ ಬಂದು ವೇ
ಗಾವತಿ ಸಲ್ಲಕೀವನವಿಹಾರಸಮಿಮಂದಚಾರುಶೋ
ಭಾವತಿ ಭಾವಿಪಂದು ಬಗೆಗೊಂಡಿರೆ ಬಿಟ್ಟರುದಾರತೀರದೊಳ್ ೧೦೪

ಕಂ || ಸೂರಿಗಳುಂ ತತ್ಸಿಂಧುವ
ತೀರದ ನಿರ್ಜಂತುಕಪ್ರದೇಶದೊಳುಚಿತಾ
ಚಾರಿಗಳೀರ್ಯಾಶುದ್ಧಿಯ
ನೋರಂತಿರೆ ಮಾಡಿ ನಿಯಮನಿಯಮಿತರಿರ್ದರ್ ೧೦೫

ವ || ಅಂತಿರ್ಪುದುಮಾ ಶಾಂತಾತ್ಮರಂ

ಕಂ || ಸಾರ್ಥಾಧಿಪತಿಗಳತಿಶಯ
ತೀರ್ಥಮೆ ತಮ್ಮದಿರ್ಗೆ ವಂದುದೆಂದನುಪಮಪು
ಣ್ಯಾರ್ಥಿಗಳಮಳಚರಿತಕೃ
ತಾರ್ಥರನೊಲವಿಂದೆ ಬಂದು ಬಂದಿಸಿದರವರ್ ೧೦೬

ವ || ಅಂತು ನಿರ್ಭರ ಗುರುಭಕ್ತಿಪೂರ್ವಕಂ ಬಂದಿಸಿ

ಮ || ವಿತತಾನೂನಜಡಾತ್ಮಿಕಾಪಗೆಯ ಸೇವಾಸಕ್ತಿಯಿಂದಂ ಚತು
ರ್ಗತಿಸಂಸಾರಪರಿಭ್ರಮಶ್ರಮಮನೀ ಯೋಗೀಂದ್ರರುಂದ್ರಾಚಳೋ
ತ್ಥಿತ ವಾಕ್ಯಾಮೃತಪೂರ್ಣಸಿಂಧು ಕಳೆಗುಂ ಕೇಳ್ದಂದೆನುತ್ತುಂ ಸಮು
ನ್ನತ ಧರ್ಮಶ್ರವಣಕ್ಕೆ ಸಾರ್ಥಪತಿಗಳ್‌ತಾಮಱ್ತಿಯಂ ಮಾಡಿದರ್‌೧೦೭

ವ || ಅಂತವರ ಪರಿಣಾಮವಿಶೇಷಮಂ ಕಂಡು

ಕಂ || ಮದವಜ್ರಘೋಷಗಜಮಂ
ವಿದಿತಂ ತಿಳಿಪಲ್ಕೆ ಪೂರ್ವರಂಗಮಿದೆಂಬಂ
ದದೆ ತಿಳಿಪುತ್ತಿರ್ದರ್ ನವ
ಪದಾರ್ಥತತ್ತ್ವ ಸ್ವರೂಪಮಂ ಯತಿಪತಿಗಳ್ ೧೦೮

ವ || ಅಂತಾ ಧರ್ಮಶ್ರವಣರಮಣೀಯಮಾಗೆ ಶ್ರಮಣಾಗ್ರಣಿ ಏಕಾಗ್ರದಿಂ ಕೇಳ್ವ ಶ್ರಾವಕನಿಕಾಯಕ್ಕೆ ಮಾಡುತ್ತಿರ್ಪನ್ನೆಗಂ

ಕಂ || ಕುಂಜರಶೈಳಂ ತನ್ನಿಂ
ದಂ ಜಗದೊಳ್‌ನೆಗಱ್ದುದಾ ಪೆಸರಿನೆಂಬವೊಲೇಂ
ರಂಜಿಸಿ ಬಳೆಯುತ್ತಿರ್ದುದೊ
ಕುಂಜರಮಾ ವಜ್ರಘೋಷನಾಮಸುಧಾಮಂ ೧೦೯

ಸಲೆ ಪೋತ ಚಿಕ್ಕ ಸುಲಲಿತ
ಕಲಭ ಜವನ ಕಾಂತರೂಪಕಲ್ಯಾಣಸಮು
ಜ್ವಳಯೋದಯೋದತರ ಕೃಶ
ಬಳಹೀನ ಸ್ಥವಿರ ವೃದ್ಧಮೆಂಬಿವುದಶೆಗಳ್‌೧೧೦

ವ || ಅಂತೊಗೆದು ಸೊಗೆಯಿಸುವ ದಶವಿಧದಶೆಗಳೊಳ್‌

ಕಂ || ಜವನಮೆನಿಸಿರ್ದ ನಿಜದೆಶೆ
ಜವನನಧಃಲರಿಸೆ ವಿಳಯಜಳಧರಕುಲಭೈ
ರವರವಮನಿಱೆಸೆ ದೃಢಘನ
ರವರಭಸಂ ಕಣ್ಗೆವಂದುದಂದು ಗಜೇಂದ್ರಂ ೧೧೧

ಕಮನೀಯಕಾಯಮುಚ್ಛ್ರಯ
ಸಮಹಸ್ತಾಯತ್ತಮಖಿಳಶುಭಲಕ್ಷಣಮು
ತ್ತಮ ಭದ್ರಜಾತಿಜಾತಂ
ಸಮಸರ್ವಾಂಗಾತಿಸುಂದರಂ ಪೌಢಗಜಂ ೧೧೨

ಉ || ಶ್ರೀವರಸಲ್ಲಕೀವನದ ಪಲ್ಲವಮಂ ನಲವಿಂದೆ ಮೇದು ರಾ
ಜೀವಪರಾಗಪುಂಜಪರಿಪಿಂಜರಿತೋರುತರಂಗಸಂಗವೇ
ಗಾವತಿಯಂಬುವಂ ಕುಡಿದು ನಂದನಚಂದನಕುಂಜರಾದ್ರಿಕುಂ
ಜಾವಳಿಯೊಳ್‌ವಿಹಾರಿಸಿ ವಿರಾಜಿಸುತ್ತಿರ್ಪುದು ಗಂಧಸಿಂಧುರಂ ೧೧೩

ಚಂ || ಕದಪಿನ ಚಿಕ್ಕಪೋತ ಕರಿಣೀಗಣಮಂ ನವಪಲ್ಲವಂಗಳಂ
ಮುದದೊಳ್‌ಮುನ್ನೆ ಮೇಯಿಸಿ ಬಱಿಕ್ಕದು ಮೇದು ನದೀಜಳಂಗಳಂ
ಪದಪಿನೆ ಮುನ್ನ ಮೂಡಿಸಿ ಬೞಿಕ್ಕೊಲೆದೂಡಿ ಪೊದೞ್ದ ಶಯ್ಯೆಯೊಳ್
ಮದಕರಿ ಮುನ್ನಮೊಯ್ದಿರಿಸಿ ತಾಂ ಬೞಿಕಿರ್ಪುದು ರಮ್ಯಶಯ್ಯಯೊಳ್ ೧೧೪

ಕಂ || ವಿಕಸಿತ ಕಮಕಾಂಬುರುಹಾ
ಧಿಕರೇಣು ಕರೇಣು ಸೂಸೆ ಸಿಂಧುರಮೆನೆ ಮ
ಸ್ತಕದೊಳೆ ರಂಜಿಸುತಿರೆ ಸಲಿ
ಲಕೇಳಿಯೊಳ್ ಲೀಲೆವಡೆದುದಾ ಶುಂಡಾಳಂ ೧೧೫

ಅತಿನಿಷ್ಠುರತರನಿಜಬೃಂ
ಹಿತಸಂಹತಿಯಿಂದಮೊಡೆಯೆ ವಿತತಕ್ಷಿತಿಭೃ
ತ್ತತಿಯಾ ಗಜಪತಿಗಂದ
ನ್ವಿತಮಾದುದು ವಜ್ರಘೋಷಮೆಂಬಭಿಧಾನಂ ೧೧೬

ಅತಿಚಿತ್ರಂ ಮದದಿಂ ತುಂ
ಗತೆಯಿಂ ಶುಭಲಕ್ಷಣಂಗಳಿಂ ಬಳದಿಂದ
ಪ್ರತಿಮಾಮನಮೆನಿಸಿ ಮತ್ತಂ
ಪ್ರತಿಮಾನವಿರಾಜಮಾನಮಾ ಗಜರಾಜಂ ೧೧೭

ವ || ಅಂತು ಬಳೆಯುತ್ತುಮಿರೆ

ಕಂ || ನವಯೌವನಲಕ್ಷ್ಮಿಯೊಳಾ
ಗೆ ವಿವಾಹಂ ತಿಳಕಮಿಟ್ಟವೋಲ್‌ತಿಳಕೆಯದೊ
ಪ್ಪುವ ಕತ್ತುರಿಯಂ ತೊಡೆದಂ
ತೆವೊಲರ್ಧಕಪೋಳೆ ಪುಟ್ಟಿದುದು ಗಜಪತಿಯೊಳ್‌೧೧೮

ವ || ಅನಂತರಂ

ಕಂ || ನೀಳದ ಕಂಠಿಕೆಯಂ ಶುಂ
ಡಾಳಶಿರೋಮಣಿಗೆ ಕಟ್ಟಿದಂತಿರೆ ಚೆಲ್ವಂ
ಪಾಳಿಸುತಿರ್ದುದು ಮಧುಕರ
ಮಾಳಾಶೋಭಿತಮದಾನುಬಂಧಿನಿಧಾನಂ ೧೧೯

ಮ || ನದಿಯೊಳ್‌ನೀರಜಗಂಧಮಂ ಕುಧರದೊಳ್ ಕಸ್ತೂರಿಕಾಗಂಧಮಂ
ಹೃದಯಾನಂದನ ನಂದನಾಂತರದೊಳುದ್ಯನ್ಮಾಲತೀಗಂಧಮಂ
ಮದಗಂಧಂ ಗೆಲೆವಂದ ಚಾರಿಣಿಯಿನುನ್ಮತ್ತಾಳಿಸಂದೋಹಸ
ಮ್ಮದಸಂಧಾರಿಣಿಯಿಂ ವಿರಾಜಿಸುತುಮಿರ್ಕುಂ ವಜ್ರಘೋಷದ್ವಿಪಂ ೧೨೦

ಕಂ || ಕಟನಿಕಟೋತ್ಕಟಮದಲಂ
ಪಟ ಮಧುಕರನಿಕರ ಮಧುರ ಝಂಕಾರವವಂ
ಪಟುಪಟಹಮೆನಿಸೆ ನೆರೆದು
ತ್ಕಟಕರಿಣೀಗಣದ ಸೋಂಕಿನಿಂದೆಸೆದಿರ್ಕುಂ ೧೨೧

ಎಡೆಯುಡುಗದ ದಾನಿಗಿದ
ಕ್ಕೆಡೆಯಱಿಯದೆ ಕೊಟ್ಟು ಮಾಣ್ಬ ಮಿಕ್ಕ ಗಜಂಗಳ್‌
ಪಡಿಯಪ್ಪುವೆ ಪೇೞೆಂಬವೊ
ಲೆಡೆಗಿಱಿದಳಿರುತಿಯಿನಾ ಗಜಂ ಸೊಗಯಿಸುಗುಂ ೧೨೨

ಮಾತಂಗದಾನವಿಭವಂ
ಮಾತೇನೆನಿವಿರಿದದಾದೊಡಂ ಚೇತಸ್ಸಂ
ಪ್ರೀತಿಯನತೀವಮಳಿನವಿ
ಜಾತಿಗೆ ಮಧುಪವ್ರಜಕ್ಕೆ ಮಾೞ್ಪುದೆ ಸಹಜಂ ೧೨೩

ಒದವಿದ ಮದಜಲದಿಂ ತೀ
ವಿದ ನಗದಿಡುವುಗಳೊಳೆಯ್ದೆ ಮುೞುಗಿರೆ ಯಮುನಾ
ಹ್ರದದೊಳ್‌ಮುೞುಗಿದವೋಲ್‌ತೋ
ರ್ಪುದು ನೋೞ್ಪೊಡೆ ನಾಡೆ ಚೆಲ್ವುವಡೆದು ಕರೀಂದ್ರಂ ೧೨೪

ಎರಡುಂ ತಟಮಳಿಮಿಳಿತಂ
ಸರೋವರಂ ಸುರಿವ ಮದಜಲಂ ನದಿಯೆನೆ ಪು
ಷ್ಕರ ವರಕರಪ್ರಣಾಳೀ
ಪರಿಕಳಿತಂ ನೀಳಗಿರಿಗೆ ಕರಿ ದೊರೆಯೆನಿಕುಂ ೧೨೫

ಗಗನೋನ್ನತಗಜದ ಮದಂ
ಪ್ರಗಂಡಗಳಿತಂ ಪ್ರವಾಹಮೆಸಗುಂ ಯಮುನಾ
ಪಗೆಯುಂ ಗಂಗೆಯವೋಲ್‌ತ್ರಿಪ
ಥಗೆಯೆನಿಸಿ ತ್ರಿಪ್ರವಾಹಮಂ ತಾಳ್ದಿದವೋಲ್‌೧೨೬

ಆ ವಜ್ರಘೋಷದಾನಾಂ
ಭೋವಿಸರಪಟುಪ್ರವಾಹಭರದಿಂದಂ ವೇ
ಗಾವತಿಯಂಬೀ ಪೆಸರಂ
ಭಾವಿಸೆ ತತ್ಸಿಂಧು ತಳೆದುದೆನೆ ಪೊಗೞದರಾರ್‌೧೨೭

ಮಸ್ರ || ಮದಗಂಧಕ್ಕನ್ಯವನ್ಯದ್ವಿರದನತತಿ ಬೆನ್ನಿತ್ತು ಮತ್ತೆಲ್ಲಿಯುಂ ನಿ
ಲ್ಲದೆ ಶಂಕೋದ್ರೇಕದಿಂದಂ ದೆಸೆಯ ಕಡೆವರಂ ಪೋದುವಾಶಾಧಿನಾಥ
ರ್ಗೆ ದಿಟಂ ವಾಹಂಗಳಾಗಿರ್ದಪುವೆನೆ ಪೆಱತೇಂ ವಜ್ರಘೋಷದ್ವಿಪೇಂದ್ರ
ಕ್ಕಿದಿರಾಂಪುನ್ಮತ್ತ ಹಸ್ತಿಪ್ರತತಿಯಱಸುವಂದಿಲ್ಲ ದಲ್‌ಕಾಡೊಳೆಲ್ಲಂ ೧೨೮

ಮ || ಮದಗಂಧಂ ಪುದಿರ್ದಿ ಕುಂಜರಕುಭೃತ್ಕುಂಜಕ್ಕೆ ವೇಗಾವತೀ
ನದಿಗುತ್ಪಲ್ಲವ ಸಲ್ಲಕೀವನಕೆ ವನ್ಯೇಭವ್ರಜಂ ಪೊರ್ದದಿ
ರ್ಪುದಱಿಂ ನಿಷ್ಪ್ರತಿಪಕ್ಷರಾಜ್ಯಪದದೊಳ್‌ತೇಜಸ್ವಿ ರಾಜಂ ಮನೋ
ಮುದದಿರ್ಪಂದದಿನಿರ್ಪುದಾ ವನಗಜಂ ನಾನಾವಿನೋದಪ್ರಿಯಂ ೧೨೯

ಚಂ || ಮದಜಳನೀಳಕಂಠಕಳಿತಂ ವಿಷಮಾನಳಭೀಮಲೋಚನಂ
ಪದನತದಾನವಾರಿ ಗಿರಿಶಂ ಗಿರಿಜಾಧಿಕನೂತ ಕೇಳಿ ಕ
ಣ್ಗೊದವಿದ ಶೋಭೆಯಂ ಕುಡುತುಮಿರ್ಪುದು ನಾಗಶಿರೋವಿಭೂಷಣಂ
ವಿದಿತಗಜಾಸುರೇಂದ್ರನನೆ ಮರ್ದಿಸಲುಗ್ರನಿಭೇಂದ್ರನಾದವೋಲ್‌೧೩೦

ಕಂ || ಕ್ರೋಧಿನಿ ಸಮಗ್ರತರ ಜಯ
ಬೋಧಿನಿ ದುರ್ವಾರವಾರಣಾಧಿಕಮದಸಂ
ರೋಧಿನಿ ನಗಮೃಗನಿಕರವಿ
ರೋಧಿನಿ ಮದಲಕ್ಷ್ಮಿಯುದಯಿಸಿತ್ತಿಭಪತಿಯೊಳ್‌೧೩೧

ವ || ಆ ಸಮಯದೊಳ್‌

ಕಂ || ಬಿಸುನೆತ್ತರೊಗೆಯೆ ರದಮಂ
ಬಿಸಮಂ ಕೀೞ್ವಂತೆ ಕಿೞ್ತು ಮತ್ತಗಜೇಂದ್ರಂ
ಮಸಕಮನಾಂತಿಭಕುಳಮಂ
ಮಸಕಮನೊರಸುವವೊಲೊರಸುವುದು ನಿಜಕರದಿಂ ೧೩೨

ವ || ಅಂತುದಯಿಸಿದ ಕ್ರೋಧಿನಿಯಿಂ ಕ್ರೋಧಾವಿಳನುಮತಿವರ್ತಿನಿಯೊಳ ತಿವರ್ತಿಯುಂ ಸಂಭಿನ್ನಮದಮರ್ಯಾದೆಯೊಳ್‌ಮರ್ಯಾದೆಯಂ ಮೀಱಿ ಸ್ವಾತಂತ್ರ್ಯ ಮದಾಕ್ರಾಂತಸ್ವಾಂತನುಂ ಯೌವನ ಮದಿರೋನ್ಮತ್ತಚಿತ್ತನುಂ ದ್ರವಿಣಮದಗ್ರಹಗ್ರಸ್ತನು ಮವಿವೇಕಮದನವಿದ್ರಾವಿತವಿವೇಕನುಮಪ್ಪ ರಾಜಕುಮಾರನಂತಾ ಗಜರಾಜಕುಮಾರಂ ಮದಾಂಧಕಾರದಿಂ ಮುಂದುಗಾಣದನರ್ಥ ಸಾರ್ಥತತ್ಪರನಾಗಿ

ಮಸ್ರ || ವಿಳಯಾಬ್ಧಿಕ್ಷೋಭಮುಜ್ಜೃಂಭಿತ ಸಕಳಮದಕ್ಷೋಭಮುದ್ದೀಪ್ತಕಾಳಾ
ನಳನಾತ್ಮೀಯಪ್ರಕೋಪಂ ಪ್ರಳಯಸಮಯತೀವ್ರಾನಳಂ ವೇಗಮುಚ್ಛೃಂ
ಖಳಕಳ್ಪಾಂತಾಂತಕಂ ತಾನೆನೆ ಮಸಗಿ ಜಗಂ ಭೀತಿಗೊಳ್ವಂತು ಭೂತಾ
ವಳಿಯಂ ಕೊಂದತ್ತು ರಕ್ತಾರ್ಣವಮೊಗೆವಿನೆಗಂ ವಜ್ರಘೋಷದ್ವಿಪೇಂದ್ರಂ ೧೩೩

ಸ್ರ || ಕೋಡೊಳ್‌ಕೋದೆತ್ತುತುಂ ದಂತಿಗಳನೆ ತಿಱಿಕಲ್ಲಾಡುವಂತಂಬರಕ್ಕೀ
ಡಾಡುತ್ತುಂ ತುಂಗಶೈಳಂಗಳನೆ ಮೃಗಸಮೂಹಂಗಳಂ ಮೆಟ್ಟಿ ಸೀ
ೞ್ದೀಡಾಡುತ್ತುಂ ನೋಡಲಾರುಂ ನೇಱೆವ ಸುಭಟರಿಲ್ಲೆಂಬಿನಂ ತನ್ನ ಕಾಯ್ಪಂ
ನೀಡುಂ ನೀಡುತ್ತುಮೆಯ್ತಂದುದು ಪವನಜವಂ ರುಂದ್ರಗಂಧದ್ವಿಪೇಂದ್ರಂ ೧೩೪

ಉ || ಪೆರ್ಚಿದ ಕೋಪದಿಂದೆ ಮುಱಿಯುತ್ತೆ ಮಹೀರುಹಮಂ ಕಡಂಗಿ ಕೋ
ಡುರ್ಚೆ ಮೃಗಂಗಳಂ ವನಗಜಂಗಳನೋವದೆ ಸೀೞ್ದು ನೀಳ್ದ ಕಾ
ೞ್ಕಿರ್ಚಿನ ಮಾೞ್ಕೆಯಿಂ ತವಿಸುತುರ್ವಿದ ತೀವ್ರತೆಯಿಂ ಮದಾಂಧನಾ
ಸಾರ್ಚುಮನೆಯ್ದೆವಂದುದು ಜಗಂ ಬೆದಱುತ್ತಿರೆ ಗಂಧಸಿಂಧುರಂ ೧೩೫

ವ || ಅಂತಾ ಸಾರ್ಥಪತಿಗಳುಂ ಯತಿಪತಿಗಳುಮಿರ್ದ ಸಾರ್ಥಮನೆಯ್ದೆವಂದು

ಚಂ || ಬೆದಱಿದ ಬಾಳವೃದ್ಧರನೆ ಬಾಯ್ವಿಡೆ ಬಾಯ್ವಿಡೆ ಸೀೞ್ದು ಬಂ
ದದಿರದೆ ನಿಂದ ಬೀರರನೆ ಬೊಬ್ಬಿಡೆ ಬೊಬ್ಬಿಡೆ ತಗ್ಗುಗುಟ್ಟಿ ಲಾ
ಯದ ತುರಗಂಗಳಂ ತರದೆ ಗೋಳಿಡೆ ಗೋಳಿಡೆ ಕೋಡೊಳೆತ್ತಿ ಕ
ಟ್ಟಿದ ಮದದಂತಿಯಂ ಬಿಡದೆ ಘೀಳಿಡೆ ಘೀಳಿಡೆ ಕೊಂದುದಾ ಗಜಂ ೧೩೬

ಕಂ || ಏಕಾಶೀತಿವಿಧಂ ವಧೆ
ಲೋಕಸ್ಥಿತಿ ಚತುರಶೀತಿಲಕ್ಷಪ್ರಮಿತಾ
ವ್ಯಾಕುಳಯೋಗಿಯ ಜೀವ
ಕ್ಕಾಕಂಪಮನೀಯೆ ಕೊಂದುದಿಭಪತಿ ಪಲರಂ ೧೩೭

ಅನುಪಮಯೋಗೀಶ್ವರನವೊ
ಲೆನಿತೊಳವು ಧರಿತ್ರಿಯಲ್ಲಿ ಸಚರಾಚರಮಂ
ತನಿತುಮನೊರ್ಮೊದಲೊಳೆ ನೆ
ಟ್ಟನೆ ತನ್ನಿಂ ಭಿನ್ನಮೆನಿಸಿ ಭಾವಿಸಿತು ಗಜಂ ೧೩೮

ರದನದೊಳೆರಡಱೊಳಂ ಸು
ತ್ತಿದ ಕರುಳ ಪಿಣಿಗ್ಲಳಲ್ಲಿ ತೊಡರ್ದೆೞಲ್ವ ಪೆಣಂ
ಮದಲಕ್ಷ್ಮಿಯ ಲೀಲಾಂದೋ
ಳದ ಲೀಲೆಯನಾಂತುಗೊಂದಾ ಶುಂಡಾಳಂ ೧೩೯

ಉ || ಅಂತು ಕೃತಾಂತನಂತೆ ಕೊಲುತೆಯ್ದುವ ದಂತಿಯನಾ ಮುನೀಶ್ವರಂ
ಶಾಂತರಸಾಬ್ಧಿ ಕಂಡಿದಱಿನಪ್ಪುಪಸರ್ಗಮೆ ಪಿಂಗುವಂತಿರೋ
ರಂತೆ ಶರೀರಸನ್ಯಸನಮಿನ್ನೆಮಗೆಂದಿರೆ ಸಾರ್ಥನಾದರುಂ
ಭ್ರಾಂತಿವಿಹೀನರಾ ತೆಱದೆ ನಿಶ್ಚಳರಾಗಿರೆ ಮಂದರಾದ್ರಿವೋಲ್ ೧೪೦

ಕಂ || ಅತಿನಿಷ್ಠುರತರವಾತಾ
ಹತಿಗೆ ಪರಲ್‌ಪಾಱುವಂದದಿಂದ ಮದೇಂ ಪ
ರ್ವತಮುಂ ಪಾಱುವಂದದಿಂದಮದೇಂ ಪ
ರ್ವತಮುಂ ಪಾಱುಗುಮೋಯೆನೆ
ಧೃತಿಧೃತಿಗಳ್‌ನಿಂದರಿತರರಿರದೋಡಿದೊಡಂ ೧೪೧

ವ || ಅಂತು ಮೂವರುಮಜಯ್ಯಮನರ್‌ಜನಮೆಲ್ಲಂ ಪುಯ್ಯಲಿಡೆಯಿಡೆ ಕೆಯ್ಯಿಕ್ಕಿ ನಿಲೆ

ಕಂ || ಕೋಡಿನೊಳೊತ್ತುವೆನಿರ್ವರ
ನೀಡಾಡುವೆನಿರದೆ ಕರದಿನೊರ್ವರ
ನೀಡಾಡುವೆನಿರದೆ ಕರದಿನೊರ್ವನನೆನುತುಂ
ಕಾಡಾನೆ ಕಡುಪಿನಿಂ ಜನ
ಮೋಡುವಿನಂ ಮುಟ್ಟೆವಂದುದಾ ಮೂವರುಮಂ ೧೪೨

ಮಾತೇಂ ಋಷಿವಧೆಗಂ ವಿ
ಖ್ಯಾತೋನ್ನತಜಾತಿ ಜಾತವಧೆಗಂ ಕ್ರೋಧಾ
ನ್ವೀತಂ ಪೇಸುಗುಮೇಯೆನೆ
ಮಾತಂಗಂ ಮುಳಿದು ಮುಟ್ಟಿವಂದತ್ತವರಂ ೧೪೩

ಮುನಿಕುಂಜರನಾಮಕ್ಕದು
ಮುನಿದೆಯ್ದುವ ತೆಱದಿನೆಯ್ದಿ ಘನಸತ್ವಂ ನೆ
ಟ್ಟನೆ ಕೆಯ್ಯಿಕ್ಕಿರೆ ಬೆದಱಿ
ತ್ತೆನೆ ಪೆಱಮೆಟ್ಟಿತ್ತು ವಿಸ್ಮಯಂ ಪುಟ್ಟುವಿನಂ ೧೪೪

ಮ || ಮುನಿವಕ್ಷಸ್ಸ್ಥಿ ತಮಂ ಸ್ವಕೀಯಹಿತಮಂ ಶ್ರೀವತ್ಸವಿಖ್ಯಾತಲಾಂ
ಛನಮಂ ತತ್ತ್ವವಿವೇಕಲೋಚನಮನಾತ್ಮಾತೀತಜನ್ಮಪ್ರಕಾ
ಶನಮಂ ಸಚ್ಚರಿತೋಪದೇಶನಮನಾಗಳ್‌ಕಂಡು ಕೆಯ್ಕೊಂಡು ತಾ
ನೆನಸುಂ ಶಾಂತಿಯನಪ್ರಮತ್ತನವೊಲೇನಿರ್ದತ್ತೊ ಮತ್ತದ್ವಿಪಂ ೧೪೫

ಮಸ್ರ || ಮಹನೀಯಂ ಮಂತ್ರಸಿದ್ಧಂ ಬಿಡೆ ಪಿಡಿದ ಮಹಾಮುದ್ರೆಯಂ ಕಂಡು ದುಷ್ಟ
ಗ್ರಹಮಾದಂ ಶಾಂತಿಯಂ ತಾಳ್ದುವ ತೆಱದರವಿಂದಾಖ್ಯಯೋಗೀಂದ್ರವಕ್ಷೋ
ವಿಹಿತಶ್ರೀವತ್ಸಮಂ ಲಾಂಛನಮನೊಲವಿನಿಂ ಕಂಡು ಮೆಯ್ವೆತ್ತುದಂ ದು
ರ್ವಹಕೋಪಾಟೋಪಮುಂ ಬಿಟ್ಟೆಸೆದುದು ಶಮದಿಂ ವಜ್ರಘೋಷದ್ವಿಪೇಂದ್ರಂ ೧೪೬

ಚಂ || ರವಿರುಚಿಯಿಂದೆ ಬೆಂದಚಳಮಾಗಳೆ ನೀಳಘನಂಗಳಿಂದಮಾ
ೞುವವೊಲುದಗ್ರಕೋಪವಶಮಾಗಳೆ ಪೆತ್ತುಪಶಾಂತಮಾದುದೊ
ಪ್ಪುವ ಕರಿ ಕಾಲಲಬ್ಧಿವಶದಿಂ ಕ್ಷಣದಗ್ಗಳಮಾತ್ಮನಲ್ಲಿ ಪು
ಟ್ಟುವ ಪರಿಣಾಮಮಪ್ಪುದಿರದೆಂಬ ಜಿನೋಕ್ತಿಯೆ ಸತ್ಯಮಪ್ಪಿನಂ ೧೪೭

ಉ || ಅಂತು ನಿರಂತರಂ ತಳೆದ ಶಾಂತರಸಂ ಕರೆಗಣ್ಮುವಂದದಿಂ
ದಂ ತರದಿಂದೆ ಸೂಸುತಿರೆ ಕಣ್ಬನಿ ಸಂಯತನಪ್ಪುದಕ್ಕಿದೋ
ರಂತಿರೆ ಸೂಚಕಂ ಗಡೆನೆ ದುರ್ಮದಮಂ ಬಿಸುಟಾ ಮುನೀಂದ್ರಪಾ
ದಾಂತಿಕದಲ್ಲಿ ಬಂದೆಱಗಿದತ್ತುಪಶಾಂತಮನಂ ಮಹಾಗಜಂ ೧೪೮

ವ || ಅಂತು ಜಾತಿಸ್ಮರನಾಗಿ ಭದ್ರಜಾತಿ ಜಾತರೂಪಧರರ ಪಾದಪಯೋಜಾತಕ್ಕೆ ಪೂರ್ವಭವದ ನಿಜಸ್ವಾಮಿಯೆಂಬುದನಱಿದೆಱಗಿದಪ್ಪುದುಮದಱ ಮುನ್ನಿನ ತೀವ್ರತೆಯುಮಂ ಬೞೆಕ್ಕಾದುಪಶಮಭಾವಮುಮಂ ಕಂಡಿದು ಜಾತಿಸ್ಮರಣಪರಿಣತಮಾಗಲೆವೇೞ್ಕುಮೆಂದು ನಿಶ್ಚಯಿಸಿ ಸಾರ್ಥಪತಿಗಳುಂ ಯತಿಪತಿಗಳ್ಗೆ

ಕಂ || ಅಧಿವಿಲೋಚನದಿಂದೆಸೆ
ವವರ್ಗಳೆ ತಿರಿಕಂಗಳಪ್ಪುವಂ ತಿಳಿಪುಗುಮೆಂ
ದವಱ ಪರಿಣಾಮಮಂ ಮಿ
ಕ್ಕವರ್ಗಳ್‌ತಿಳಿಗುಮೆ ವಿವೇಕವಿರಹಿತಮತಿಗಳ್‌೧೪೯

ಮಾತಂಗಂ ನಿಜತಿರ್ಯ
ಗ್ಜಾತಿತ್ವಮನೀಗಳಿಂತೆ ಭವದಂಘ್ರಿಪಯೋ
ಜಾತಪ್ರಸಾದದೊಳೆ ಬಿಡು
ವೀ ತೆಱನಂ ಜಳಕನೆಮಗಮಱಿಪುಗುಮಲ್ತೇ ೧೫೦

ವ || ಎಂದದಱ ಜಾತಿಸ್ಮರತ್ವಮಂ ತಿಳಿದು ಬಿನ್ನವಿಸೆ ಬುದ್ಧಿಗಸಾಧ್ಯಮಿಲ್ಲೆಂದು ಮೆಚ್ಚುತ್ತುಮವಧಿಬೋಧದಿನವಗತವೃತ್ತಾಂತರಾಗಿ ನಾಗಪತಿಯಂ ತಿಳಿಪುವ ನೆವದಿಂದ ವರ್ಗಮದಱತೀತಜನ್ಮಮಂ ಪ್ರಕಟಂ ಮಾಡಲ್ವೇಡಿ ಮುನಿಪತಿಗಳಾ ಕರಿಪತಿಗಿಂತೆಂದರ್‌

ಕಂ || ಮಾತಂ ಕೇಳದೆ ಮುಂ ಮರು
ಭೂತಿಯನೀತಿಯೊಳೆ ನಡೆದು ಪುಟ್ಟಿದೆ ತಿರ್ಯ
ಗ್ಜಾತಿಯೊಳವಿವೇಕಮೆ ಸುಖ
ಘಾತುಕಮಱಿವೊಂದೆ ದೇಹಿಗಪ್ಪುದು ಸುಖದಂ ೧೫೧

ಒಂದಾರ್ತದಿನೊಗೆದಘದಿಂ
ದಂ ದುರ್ಗತಿವಡೆದೆಯೆಂದೊಡವಿರಳ ಹಿಂಸಾ
ನಂದನದಿನಾರ್ತರೌದ್ರದಿ
ನೊಂದುವ ದುಷ್ಕರ್ಮದಳವನಾರ್‌ಪವಣಿಸುವರ್‌೧೫೨

ಎನೆ ವಿನಯವಿನತಮಿಭಪತಿ
ಮುನಿಪತಿಯ ಮುಖಾರವಿಂದಮಂ ನೋಡಲ್‌ನೆ
ಟ್ಟನೆ ನಾಣ್ಚಿತಂತೆ ಸಜ್ಜನ
ರ್ಗನುಚಿತವರ್ತನಮೆ ಲಜ್ಜೆಯಂ ಮಾೞ್ಪುದೆ ದಲ್‌೧೫೩

ವ || ಅಂತಾ ದಂತಿ ತಾಗಿಬಾಗುವಂದದಿಂದವರ ಪದಾಂಬುಜಕ್ಕೆ ಬಾಗಿ ಕೆಯ್ಗಣ್ಮುವ ಕಣ್ಬನಿಯ ಪೊನಲೊಳೋಲಾಡುತ್ತಮಿರೆ ಕಾರುಣ್ಯರಸಾದ್ರಚಿತ್ತಂ ಮುನಿಕುಂಜರಂ ಕುಂಜರಂಗೆ ಮತ್ತಿಂತೆಂದರ್‌

ಮಸ್ರ || ಅವಿವೇಕಂ ಪೂರ್ವಜಾತಂ ಕಮಠನದು ದಲೆಂದೊಲ್ಲದನ್ಯೂನವಿಜ್ಞಾ
ನವಿದಂ ನೀನೆಂದು ನಿಮ್ಮಮ್ಮನೆ ನಲಿದೆಮಗಪ್ಪಯ್ಸೆ ದುರ್ಮೋಹದಿಂದ ನೀ
ನವನಂ ತರ್ಪಂತು ದೇವರ್‌ಬೆಸಸುವುದೆನಲಾಂ ಬೇಡಬೇಡೆಂದೊಡಂ ನೀ
ನವಕರ್ಣಂಗೆಯ್ದಿನಿತ್ತುಗ್ರತರವಿಷಮದುಃಖಕ್ಕೆ ಪಕ್ಕಾದೆಯಲ್ತೇ ೧೫೪

ಕಂ || ಅಂದಱಿಯದೆಸಗಿದ ನಯ
ಕ್ಕಿಂದೀ ತಱದಿಂದಮೞಲುತಿರ್ದೊಡೆ ನಿನಗೇ
ವಂದಪುದೊ ಪೋದ ತೊಱೆಯಂ
ಪಿಂದಂ ಕಟ್ಟುವರೆ ಧರ್ಮಮಂ ನೆನೆ ಮನದೊಳ್‌೧೫೪

ವ || ಅಂತು ಕಾರುಣ್ಯಜಳಧಿಗಳ್‌ತಿಳಿಪೆ ತಿಳಿದು

ಮಸ್ರ || ಶುಭದ ಪ್ರಾಯೋಗ್ಯತಾಘೋಪಶಮನ ಸುವಿಶಾದಾಖ್ಯ ಲಬ್ಧಿತ್ರಯಂಗಳ್‌
ವಿಭವಂಬೆತ್ತೊಪ್ಪೆ ಸದ್ದರ್ಶನಮಹಿತ ಸಮಾಲಬ್ಧಿ ಮೆಯ್ದೋಱೆ ವಿದ್ಯಾ
ವಿಭು ಕಾರುಣ್ಯಾರ್ದ್ರಚಿತ್ತಂ ಯತಿ ಬೆಸಸುವುದಂ ಕೇಳಲುದ್ಯುಕ್ತಮಾದ
ತ್ತಿಭರಾಜಂ ಪುಣ್ಯಬೀಜಂ ಸುಕವಿಜನಮನೋಹರ್ಷಸಸ್ಯವರ್ಷಂ ೧೫೫

ಗದ್ಯ

ಇದು ವಿದಿತ ವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾ ಸಾದಿತ ನಿರ್ಮಳಧರ್ಮ ವಿನುತವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತ ಪುರಾಣದೊಳ್‌ಮರುಭೂತಿಚರ ಗಜರಾಜಾರವಿಂದ ಮುನಿರಾಜದರ್ಶನವರ್ಣನಂ ಚತುರ್ಥಾಶ್ವಾಸಂ