ಕಂ || ಶ್ರೀಮುನಿಮುಖಮಂಬೋಧ
ಶ್ರೀಮಿತ್ರಾಭ್ಯುದಯದಿವಸಮುಖಮಂ ವಿಪುಳ
ಪ್ರೇಮದಿನೀಕ್ಷಿಸುತಿರ್ದುದು
ಸಾಮಜಪತಿ ಕೋಕದಂತೆ ಕವಿಕುಳತಿಳಕಂ ೧

ಅಂತವರ ಮುಖಾಂಬುಜಮಂ
ಮುಂತನಿಮಿಷಪದಮದೀ ತೆಱದೆ ತನಗಕ್ಕುಂ
ಭ್ರಾಂತಿಲ್ಲದೆಂಬುದಂ ಪೇ
ೞ್ವಂತೆಮೆಯಿಕ್ಕದೆ ನಿರೀಕ್ಷಿಸುತ್ತಿರೆ ಭರದಿಂ ೨

ಚಂ || ಅದಱುಪಶಾಂತಿಯಂ ನೆಗೞ್ದ ಹಿಂಸೆಗೆ ಕೊಕ್ಕರಿಸುತ್ತುಮಿರ್ಪುದಂ
ಪುದಿದಘಬಂಧಮಾವತೆಱದಿಂದಮೆ ಪೋಕುಮೆನುತ್ತೆ ಚಿಂತಿಪೊಂ
ದುದಿತವಿವೇಕಮಂ ನಿಜಪದಾಂಬುಜಭಕ್ತಿಯನಾತ್ಮನಿಂದೆಗೋ
ವದೆ ತಱಿಸುಂದುದಂ ಮುನಿ ಪರೀಕ್ಷಿಸಿದಂ ವರಬೋಧದೃಷ್ಟಿಯಿಂ ೩

ವ || ಅಂತು ನಿರೀಕ್ಷಿಸುತ್ತುಮಿರೆ

ಕಂ || ಎಲ್ಲಮುಮಂ ತಿಳಿಪಲ್‌ಮಿಗೆ
ಬಲ್ಲರಿವರ್‌ಬಗೆಗೆ ವಂದುದಂ ಬೆಸಗೊಳ್ವೊ
ಳ್ಪಿಲ್ಲೆನಗದಱಿನುಣಲ್‌ಕ
ಲ್ತಲ್ಲಿಯೆ ಪಸವಾದುದೆಂಬುದೆನಗಾಯ್ತಿಗಳ್‌೪

ವ || ಎಂದು ಚಿಂತಾಕ್ರಾಂತಮಾದ ದಂತಿಯಭಿಪ್ರಾಯಮನಱಿದು

ಕಂ || ಚಿಂತಿಸದಿರು ಭವದೀಯ
ಸ್ವಾಂತದೊಳೇನೇನನಱಿವದಕ್ಕುಂಟದನೋ
ರಂತೆ ನುಡಿದಾಮೆ ನಿನಗೆ ಸ
ಮಂತಱಿಪುವೆವವಧಿಲೋಚನಕ್ಕರಿದುಂಟೇ ೫

ಸ್ವರ್ಮೋಕ್ಷದೊಳ್‌ನಿರತಿಶಯ
ಕರ್ಮಪ್ರದದೊಳ್‌ಸಮಾಶ್ರಿತರನಿರಿಪುದೆ ಸ
ದ್ಧರ್ಮಮದು ತಾಂ ವಿಚಾರಿಸೆ
ನಿರ್ಮಳರತ್ನತ್ರಯಾತ್ಮಕಂ ತೊದಳುಂಟೇ ೬

ವ || ಆ ಪವಿತ್ರ ರತ್ನತ್ರಯಸ್ವರೂಪಮಂ ನಿರೂಪಿಸುವೊಡೆ

ಕಂ || ವಿನುತಪದಾರ್ಥದ ನಂಬುಗೆ
ಮನನಂ ನಿಷ್ಪಾಪವೃತ್ತಿಯೆನಿಸುವ ಸದ್ಧ
ರ್ಶನಬೋಧವೃತ್ತರೂಪಂ
ಜಿನಮಾರ್ಗಂ ಪೊರ್ದೆ ಸುಖದಮೆನಿಸುಗುಮಾರ್ಗಂ ೭

ವ || ಆ ನೂತ್ನರತ್ನತ್ರಯಂಗಳೊಳ್‌ಸಮ್ಯಗ್ದರ್ಶನವಿಷಯವಿಶೇಷಮಂ ವಿಶೇಷಿಸುವೊಡೆ

ಉ || ಆಪ್ತನಶೇಷದೋಷರಹಿತಂ ಜಿನನಾಗಮಕರ್ತೃ ವಿಶ್ವಸಂ
ವ್ಯಾಪ್ತಸಮಗ್ರಬೋಧನಿಧಿಯಾ ಜಿನಭಾಷಿತಮುತ್ತಮಂ ಸುಖ
ಪ್ರಾಪ್ತಿನಿಮಿತ್ತಮೆಂದದಱ ಪೇೞ್ಕೆಯಿನಾಚರಿಪರ್‌ಮುನೀಂದ್ರರೀ
ವ್ಯಾಪ್ತಿಯನೊಲ್ದು ನಂಬುವುದೆ ದರ್ಶನಮಷ್ಟವಿಧಾಘಕರ್ಶನಂ ೮

ಕಂ || ಪರಮಹಿತಂ ಪೂರ್ವಾಪರ
ವಿರೋಧರಹಿತಂ ತ್ರಿಳೋಕಮಹಿತಂ ಕುಮತೋ
ತ್ಕರಸಂಹರಣಂ ಬುಧಜನ
ಶರಣಂ ಸರ್ವಜ್ಞಗದಿತಮಾಗಮಮಕ್ಕುಂ ೯

ಆಗಮವಿದುರಂ ವಿಷಯವಿ
ರಾಗಂ ಪರಿಹೃತಪರಿಗ್ರಹಂ ಗತಪಾಪೋ
ದ್ಯೋಗನಿಜಾತ್ಮಂ ಯೋಗನಿ
ಯೋಗನಿಯೋಜಿತಮನಂ ಮುನೀಶವರನೆನಿಕುಂ ೧೦

ವ || ಆ ಸಮ್ಯಕ್ತ್ವಸ್ವರೂಪಸಾಮರ್ಥ್ಯಮಂ ಕೀರ್ತಿಪೊಡೆ

ಮ. ಸ್ರ || ಜ್ಯೋತಿಷ್ಕಂ ವ್ಯಂತರಂ ವಿಶ್ರುತಭವನಭವಂ ನಾರಕಂ ಕುತ್ಸಿತಾಂಗಂ
ಸ್ತ್ರೀ ತಿರ್ಯಗ್ಜಾತಿ ಷಂಡಂ ಬಡವನಕುಲನಲ್ಪಾಯುವಜ್ಞಾನಿಯಾಗಂ
ಮಾತೇಂ ಸಮ್ಯಕ್ತ್ವಯುಕ್ತಂ ವ್ರತವಿಕಳನುಮಾಗಿರ್ದುಮೆಂದಂದು ವೃತ್ತ
ವ್ರಾತಕ್ಕಂ ಪಾತ್ರಮಾದಂ ಪಡೆವುದಱಿದೆ ನಿರ್ಮಾಣಮಂ ಸೇವ್ಯಭವ್ಯಂ ೧೧

ಕಂ || ಸಂದ ಸುಚರಿತ್ರ ಬೋಧದೊ
ಳೊಂದದೆಯುಂ ದುಃಖಜನಕಮೆನಿಸುವ ನಾಲ್ವ
ತ್ತೊಂದು ತೆಱದಘದ ಬಂಧಮ
ನೆಂದುಂ ಕಿಡಿಸುವುದು ನಿರ್ಮಳಂ ಸಮ್ಯಕ್ತ್ವಂ ೧೨

ಅಸವಸದಿಂ ದೇಹಿಗೆ ಸಮ
ನಿಸಿ ಜಿನರುಚಿ ಮಾಣ್ದುದಾದೊಡಂ ಲೇಸಂ ಪು
ಟ್ಟಿಸುಗುಂ ಸುವರ್ಣತೆಯನಾ
ಯಸದೊಳ್‌ರಸಮೊರ್ಮೆ ಮುಟ್ಟೆಯುಂ ಪುಟ್ಟಿಪವೋಲ್‌೧೩

ಅದೆ ಸತ್ಕುಲಮದೆ ಸದ್ಗುಣ
ಮದೆ ಸದ್ಭಕ್ತಿಯದೆ ಸಚ್ಛ್ರುತಂ ನೋೞ್ಪೊಡಮಂ
ತದೆ ಸದುಪದೇಶಮೆನಿಸುಗು
ಮುದಯಿಸಿತಾವುದಱೊಳತಿಶಯಂ ಶ್ರದ್ಧಾನಂ ೧೪

ಎನಿತೊಳವು ಸೌಖ್ಯರಾಶಿಗ
ಳನಿತುಂ ಜೀವಕ್ಕೆ ಜಿನಿಯಿಕುಂ ದರ್ಶನದಿಂ
ದೆನಿತೊಳವು ದುಃಖಕೋಟಿಗ
ಳನಿತುಂ ಮಿಥ್ಯಾತ್ವದಿಂದೆ ಸಮನಿಕುಮಲ್ತೇ ೧೫

ಅದುಕಾರಣದಿಂ ಸಮ್ಯ
ಕ್ತ್ವದ ಸರಿ ಜೀವಕ್ಕೆ ಪೆಱತು ಮಿತ್ರಂ ಮಿಥ್ಯಾ
ತ್ವದ ಸರಿ ಪಗೆವಂ ಪೆಱನಿ
ಲ್ಲಿದು ನಿಶ್ಚಯಮಲ್ತೆ ಭದ್ರಗುಣ ಗಜರಾಜಾ ೧೬

ಜನಿಯಿಪ ಶಂಕಾದಿಗಳೆಂ
ಟನಾಯತನಸೇವೆಯಾಱುಂ ಮೂಢಂ ಮೂಱಂ
ತನುಗತಮದಮೆಂಟಿವು ದ
ರ್ಶನಕ್ಕೆ ಮಳಮೆಣಿಸೆ ಪಂಚವಿಂಶತಿಯಕ್ಕುಂ ೧೭

ವ || ಮತ್ತಮಾ ಸಮ್ಯಗ್ದರ್ಶನಮಂ ದರ್ಶನಮೋಹನೀಯಮುಮನಂತಾನುಬಂಧಿನಾ ಮಕಷಾಯಮುಮಾಗಲೀಯವವಱೊಳಗೆ

ಕಂ || ತತ್ತ್ವದೊಳತತ್ತ್ವಮತಿಯನ
ತತ್ತ್ವದೊಳಾ ತತ್ತ್ವಬುದ್ಧಿಯಂ ಪುಟ್ಟಿಸಿ ಮಿ
ಥ್ಯಾತ್ವಂ ಜೀವನೊಳಜ್ಞಾ
ನಿತ್ವಮನೀಗುಂ ಕುಯೋನಿಯೊಳ್‌ತೊೞಲಿಸುಗುಂ ೧೮

ತಥ್ಯಮುಮನತಥ್ಯಮುಮಂ
ತಥ್ಯಮೆನಿಪ್ಪ ತನುಬುದ್ಧಿಯಂ ಸಲೆ ಸಮ್ಯ
ಙ್ಮಿಥ್ಯಾತ್ವಂ ಮಾಡುತ್ತಮ
ಪಥ್ಯಮನಾಗಿಪುದು ದುಃಖಮಂ ದೇಹಿಗಳೊಳ್‌೧೯

ಖಳಕರ್ಮಮನಳಱಿಸಿ ನಿ
ರ್ಮಳನಿಶ್ಚಳಸುಖಮನೀವ ದೃಢದರ್ಶನದೊಳ್‌
ಸಲೆ ಸಮ್ಯಕ್ತ್ವಪ್ರಕೃತಿಯೆ
ಚಳಮಳಿನಾಗಾಧ ಕಿಟ್ಟಮಂ ಪುಟ್ಟಿಸುಗುಂ ೨೦

ಮ || ಅಲಘುಶ್ರೀಯುತನಂ ದರಿದ್ರನಖಿಳಾರ್ಥತ್ಯಾಗಿಯಂ ಲೋಭಿ ನಿ
ರ್ಮಲನಂ ಕರ್ಮಿ ಜಗತ್ತ್ರಯೈಕಪತಿಯಂ ಭೃತ್ಯಂ ದಯಾನ್ವೀತನಂ
ಖಳಕೋಪಂ ಸುಖಿಯಂ ಸುದುಃಖಿ ವಿಗತವ್ಯಾಮೋಹನಂ ವ್ಯಾಕುಳಂ
ಸಲೆ ಸರ್ವಜ್ಞನನಜ್ಞೆನೆಂದೆನಿಸುಗುಂ ಮಿಥ್ಯಾತ್ವಮಿ ಜೀವನೊಳ್‌೨೧

ಕಂ || ಮತಿ ಕುಮತಿ ಸುಶ್ರುತಂ ಕು
ಶ್ರುತಮವಧಿ ವಿಭಂಗಮೆನಿಸುಗುಂ ಮಿಥ್ಯಾಥ್ವಾ
ನ್ವಿತಮಾದೊಡೆ ಕರ್ಪೂರಂ
ಸತತಂ ತೈಲದೊಳೆ ಕೂಡೆ ವಿಷಮೆನಿಸುವವೋಲ್‌೨೨

ಸದಮಳದರ್ಶನಮಂ ಭೂ
ವಿದಿತ ಸ್ವರ್ಗಾಪವರ್ಗಸುಖಕರಮಂ ತ
ಪ್ಪದೆ ನಿರ್ಮೂಳಿಕುಮಾತ್ಮನೊ
ಳೊದವಿದನಂತಾನುಬಂಧಿ ನಾಮಕಷಾಯಂ ೨೩

ಕೋಪಾವಿಳನೊಳ್‌ದಯೆ ಮಾ
ಯಾಪರನೊಳ್‌ಋಜುತೆ ಮೃದುತೆ ಮಾನಿಯೊಳಾ ಲೋ
ಭಾಪೀಡಿತನೊಳ್‌ಶೌಚಂ
ಪಾಪಹರಂ ಪುಟ್ಟದಲ್ತೆ ಧರ್ಮಂ ಕರ್ಮಂ ೨೪

ಪ್ರಕಟಿಪೊಡಿಂತಿವು ಸಪ್ತ
ಪ್ರಕೃತಿಗಳವಱ ಕ್ಷಯೋಪಶಮದಿಂದಂ ವೇ
ದಕಮಕ್ಕುಂ ಕ್ಷಯದಿಂ ಕ್ಷಾ
ಯಿಕಮುಪಶಮದಿಂದಮುಪಶಮಂ ಸಮ್ಯಕ್ತ್ವಂ ೨೫

ನಿತ್ಯಮಣುವ್ರತಮನದ
ಪ್ರತ್ಯಾಖ್ಯಾನಂ ಮಹಾವ್ರತಪ್ರತತಿಗಳಂ
ಪ್ರತ್ಯಾಖ್ಯಾನಂ ಕಿಡಿಕುಂ
ಸ್ತುತ್ಯ ಯಥಾಖ್ಯಾತಚರಿತಮಂ ಸಂಜ್ವಳನಂ ೨೬

ವ || ಅದುಕಾರಣದಿಂ

ಕಂ || ಹೇಯಂ ಮಿಥ್ಯಾತ್ವಮುಪಾ
ದೇಯಂ ಸಮ್ಯುಕ್ತ್ವಮಖಿಳವಿಷಯಕಷಾಯಂ
ಹೇಯಂ ನಿನಗೆಂದುಮುಪಾ
ದೇಯಂ ವ್ರತವಿತತಿ ಸೌಖ್ಯಫಳಕಳ್ಪಕುಜಂ ೨೭

ಮ || ಸ್ತುತಿವೆತ್ತುತ್ತಮಜಾತಿ ಸದ್ಗೃಹತೆ ಪಾರಿವ್ರಾಜ್ಯಮಿಂದ್ರತ್ವಮೂ
ರ್ಜಿತರಾಜ್ಯಂ ತ್ರಿಜಗತ್ಪ್ರಪೂಜ್ಯಪರಮಾರ್ಹಂತ್ಯಂ ಸುಖಾಕ್ರಾಂತನಿ
ರ್ವೃತಿಕಾಂತಾಪರಿರಂಭಮೆಂಬ ಪರಮಸ್ಥಾನಂಗಳೊಳ್‌ಪುಟ್ಟುಗುಂ
ವ್ರತಮಂ ತಾಳ್ದಿದ ಸೇವ್ಯಭವ್ಯನೆ ವಲಂ ಸಮ್ಯಕ್ತ್ವಸಂಯುಕ್ತಮಂ ೨೮

ವ || ಆ ವ್ರತಂಗಳಾವುವೆನಿತು ಭೇದಮಕ್ಕುಮೆನೆ

ಕಂ || ಅತಿಶಯಸುಖಜನಕಮಣು
ವ್ರತಮಯ್ದು ಗುಣವ್ರತತ್ರಯಂ ವರಶಿಕ್ಷಾ
ವ್ರತಮವು ನಾಲ್ಕೀ ದ್ವಾದರ್ಶ
ಮತುಳವ್ರತವಿತತಿ ಜೈನಜನಕಾದೇಯಂ ೨೯

ಶ್ರುತಸಮ್ಯಕ್ತ್ವಮಹಿಂಸಾ
ಋತವಿಗತಸ್ತೇಯವಸ್ತ್ವಮೂರ್ಛಾಬ್ರಹ್ಮಂ
ನುತಕರಿಪತಿ ಪೆಸರೊಳಣು
ವ್ರತಮಲ್ಲದೆ ನಿನಗಿವನಣುಸೌಖ್ಯಮನೀಗುಂ ೩೦

ಮ || ಋತದಿಂ ಸುಕ್ತಿಯ ಹಿಂಸೆಯಿಂ ಸಕಳಮೈತ್ರೀಭಾವಮಸ್ತೇಯದಿಂ
ವಿತತ ಶ್ರೀಪರದಾರದೊಳ್‌ವಿರತಿಯಿಂ ಸೌಭಾಗ್ಯಮಾಕಾಂಕ್ಷಣ
ಕ್ಷತಿಯಿಂದಕ್ಷಯಮೋಕ್ಷಸಂಜನಿತಸೌಖ್ಯಂ ಮತ್ತಸತ್ಯಾದಿಯಿಂ
ಪ್ರತಿಕೂಳಂ ಫಳಮಿಂತಿವರ್ಕೆ ಸಮನಿಕ್ಕುಂ ಕುಂಜರಾಧೀಶ್ವರಾ ೩೧

ವ || ಎಂದಿಂತು

ಮಸ್ರ || ನಯನಿಕ್ಷೇಪಪ್ರಮಾಣಂಗಳಿನಿಭಪತಿಗಾವಾವ ತತ್ತ್ವಂಗಳೊಳ್‌ಸಂ
ಶಯಮುಂಟಾಗಿರ್ಕುಮಂತೆಲ್ಲಮನಱೆಪಿ ದಯಾಂಬೋಧಿ ಹಸ್ತಸ್ಥರೇಖಾ
ತ್ರಯಮಂ ಪ್ರತ್ಯಕ್ಷಮಂ ಮಾಡುವ ತೆಱದಿನವಂ ವ್ಯಕ್ತಮಂ ಮಾಡೆ ಬೋಧ
ತ್ರಯನನ್ಯೂನಾತಿರಿಕ್ತಂ ತಿಳಿದು ತಳೆದುದಾನಂದಮಂ ತತ್ಕರೀಂದ್ರಂ ೩೨

ಕಂ || ಅವಿವೇಕರುಜೆಯನಿಭಪುಂ
ಗವನಱೆಪಲ್ಕಱೆಯದಿರ್ದೊಡಂ ಕಳೆದರ್‌ತ
ಮ್ಮವಧಿರಸಾಯನದಿಂ ಬಾ
ಳವೈದ್ಯನವೊಲಱೆದು ಬೋಧನಿಧಿ ಯತಿಪತಿಗಳ್ ೩೩

ಎಂತೆಂತು ತಿಳಿಪುಗುಂ ಯತಿ
ಯಂತಂತಾ ದಂತಿಯಂತರಂಗದೊಳುದ್ಬೋ
ಧಂ ತಲೆದೋಱಿದುದಿನರುಚಿ
ಸಂತತಿ ತೞ್ಕೈಸಿದಮಳಕಮಳದ ತೆಱದಿಂ ೩೪

ಚಂ || ಪರಿಹರಿಸುತ್ತೆ ಸಂಶಯವಿಮೋಹನವಿಭ್ರಮಮಂ ಸ್ವಕೀಯ ವಾಕ್‌
ಸ್ಫುರಿತ ಖನಿತ್ರದಿಂ ನಯಪವಿತ್ರದಿನಪ್ರತಿಮಂ ಯತೀಶ್ವರ
ಕರಿವರಹೃತ್ಸರೋಭವ ವಿವೇಕಶುದ್ಧಜಲಪ್ರವಾಹಮಂ
ನಿರುಪಮ ಧರ್ಮನಂದನಮನೆಯ್ದಿಸಿದಂ ವನಪಾಳನಂದದಿಂ ೩೫

ಕಂ || ಈಯಂಶಂ ತಿಳಿದುದು ಮ
ತ್ತೀಯಂಶಂ ತಿಳಿಯದೆಂಬುದಂ ತಿಳಿದು ಸುಖೋ
ಪಾಯದಱಿವದಱೊಳೆಸೆದಿರೆ
ಹೇಯೋಪಾದೇಯ ತತ್ತ್ವಮಂ ನಿರವಿಸಿದರ್‌೩೬

ವ || ಅಂತು ಸಮ್ಯಗ್ದರ್ಶನಾದ್ಯುಪಾದೇಯತತ್ತ್ವಮುಮಂ ಮಿಥ್ಯಾತ್ವಾದಿ ಹೇಯ ತತ್ತ್ವಮುಮಂ ಪ್ರಶಸ್ತಮತಿಗಳ್‌ಸವಿಸ್ತರಮಱಿಪೆ ಕರಿಪತಿ ತನ್ಮುನಿಪತಿಯ ನಯ ರುಚಿರುಚಿರವಚನದೀಪವರ್ತಿಯಂ ಪಿಡಿದನೂನ ಶ್ರದ್ಧಾನನಿಧಾನಧಾನಮಂ ಸಾಧಿಸಲೆಂದುದರ್ಕ ತುಚ್ಛಾಚ್ಛಾದನಮೆನಿಸಿದ ದರ್ಶನಮೋಹನೀಯಕ ಷೋಣೀಪಟಳವಿಘಟನಪಟುಖನಿತ್ರ ಮೆನಿಸಿರ್ದುವಂ

ಕಂ || ಅವಿಕಳಮಂ ತಳೆದುದಧಃ
ಪ್ರವೃತ್ತಕರಣಮನಪೂರ್ವಕರಣಮನನಿವೃ
ತ್ತಿವಿಶಷಕರಣಮಂ ಕೃತ
ಭವದರ್ಶನ ಮೋಹನೀಯಬಳಭೇದಕಮಂ ೩೭

ವ || ಅಂತನಂತಸುಖಸಂತತಿ ನಿಮಿತ್ತಸಮ್ಯಕ್ತ್ವಲಕ್ಷ್ಮೀನೇತ್ರಶತಪತ್ರತರುಣತರಣಿ ಕಿರಣಮೆನಿಪ ಕರಣತ್ರಯದೊಳ್‌ಪ್ರತಿಸಮಯಮನಂತಗುಣವಿಶುದ್ಧಿಯುಂ ಸ್ಥಿತಿಬಂಧಾಪ ಸರಣಮುಂ ಪ್ರತಿಕ್ಷಣಮನಂತಗುಣಾಧಿಕಹೀನ ಶುಭಾಶುಕರ್ಮಾನುಭಾಗಬಂಧಂಗಳುಮೆಂಬ ಚತುರಾವಶ್ಯಕಚತುರಂ ಪ್ರಥಮಕರಣದೊಳಂತರ್ಮುಹೂರ್ತಂ ಪ್ರವರ್ತಿಸಿ ಮತ್ತಂ ಪೂರ್ವೋಕ್ತಾ ಶ್ಯಕಯುಕ್ತಂ ಗುಣಶ್ರೇಣಿ ಗುಣಸಂಕ್ರಮಣಸ್ಥಿತ್ಯನುಭಾಗ ಕಾಂಡಕಘಾತ ವಿನೂತಾವಶ್ಯಕ ಚತುಷ್ಪಯ ವಿಶಿಷ್ಟಂ ದ್ವಿತೀಯಕರಣದೊಳನಿತೆ ಪೊೞ್ತು ವರ್ತಿಸಿ ಸದ್ದರ್ಶನವನಿತಾವಶೀಕರಣವಶ್ಯಾವಶ್ಯಕೋತ್ಕೃಷ್ಪಾನಿವೃತ್ತಿಕರಣ ಪರಿಣತಂ ಸ್ವಾಂತಮುಹೂರ್ತ ಚರಮಭಾಗದೊಳ್‌ದರ್ಶನಮೋಹನೀಯಭಾಗಾಂತರ ಕರಣಾಂತಃಕರಣಮಂ ನಿರ್ವರ್ತಿಸಿ ಮತ್ತಂ ಕಿಱಿದುಪೊೞ್ತಿಱೊಳಧೋನಿಷೇಕ ಪ್ರಥಮಸ್ಥಿತಿಯನನುಭವಿಸುತ್ತುಮುಪರಿತನ ದ್ವಿತೀಯಸ್ಥಿತಿಯೊಳ್‌

ಕಂ || ಘನವಿಷಯವಿಷಾನ್ವಿತ ದ
ರ್ಶನ ಮೋಹಮಹಾಹಿಕೋಪದೃಢದಾಡಾಬಂ
ಧನಮನುಪಶಮವಿಧಿಯಿಂ
ಜನಿಯಿಸಿತದು ತರಳವೈದ್ಯನೆನೆ ಗಜರಾಜಂ ೩೮

ವ || ಆಗಳುಪಶಾಂತದೃಙ್ಮೋಹಧ್ವಾಂತಾಂತರ ಪ್ರಥಮಸಮಯದಿವಸಮುಖದೊಳ್

ಕಂ || ಪ್ರತಿಕೂಲಕರ್ಮಮೇಘಂ
ಪ್ರತಿಸಮಯಾನಂತಗುಣಿಶೋಧಿ ಮಹಾಮಾ
ರುತನಿಂ ಕಿಡೆ ದರ್ಶನರವಿ
ಮತಂಗಭವಹೃದಯನಭದೊಳೇನೊಪ್ಪಿದುದೋ ೩೯

ಕತಕಫಳೋಪಮಶುಭಪರಿ
ಣತಿಯಿಂದೆ ನಿಜಾಂತರಂಗವಿಪುಳಸರಸ್ಸಂ
ಗತಸಪ್ತಪ್ರಕೃತಿ ಕಳಂ
ಕತೆ ತೊಲಗಿರೆ ಪುಟ್ಟಿತುಪಶಮಂ ಸಮ್ಯಕ್ತ್ವಂ ೪೦

ಘನಬೋಧಲೋಹರಸಸಂ
ಜನಿತಸ್ಪರ್ಶನಮನಮೃತಯುವತಿಮುಖಾದ
ರ್ಶನಮಂ ಕರಿ ಸಮ್ಯಗ್ದ
ರ್ಶನಮಂ ಪಡೆದತ್ತನಾದಿಭವದುರ್ಲಭಮಂ ೪೧

ವ || ಅಂತುದಯಿಸಿದ

ಕಂ || ವರ ದರ್ಶನಕುಳಿಶದಿನು
ದ್ಧರ ಮಿಥ್ಯಾತ್ವಾದ್ರಿಪಕ್ಷಮಂ ದ್ವಿರದೇಂದ್ರಂ
ಭರದಿಂ ಖಂಡಿಸೆ ಮುಕ್ಕಡಿ
ನಿರತಂ ತಾನಾಯ್ತು ದುಸ್ತರಂ ಮಿಥ್ಯಾತ್ವಂ ೪೨

ವ || ಅಂತಾ ಪ್ರಥಮೋಪಶಮ ಸಮ್ಯಕ್ತ್ವಮಂತರ್ಮುಹೂರ್ತ ನಿಃಪ್ರತಿಪಕ್ಷವೃತ್ತಿಯಿಂ ಮತ್ತಗಜಚಿತ್ತಗೃಹದೊಳ್‌ತೊಳಗಿ ಬೆಳಗುತ್ತುಮಿರೆ

ಕಂ || ಪ್ರಕೃತಿಗಳೊಳ್‌ಸಮ್ಯಕ್ತ್ವ
ಪ್ರಕೃತಿಯೆ ತಲೆದೋಱೆಯುಪಶಮಕ್ಕುೞಿದಾಱುಂ
ಪ್ರಕೃತಿಗಳೊಳಗಾಗಿರೆ ವೇ
ದಕಮುದಯಿಸಿತಾ ಗಜೇಂದ್ರನೊಳ್‌ಸಮ್ಯಕ್ತ್ವಂ ೪೩

ವ || ಅಂತಾ ಸುದೃಷ್ಟಿರತ್ನಂ ಗಜರತ್ನದದೃಷ್ಟವಶದಿನನಂತಾನುಬಂಧಿ ಪ್ರತಿಬಂಧಿಕ ಪ್ರಕರಕರಕ್ಕೊಳಗಾಗದೆ ಮಿಥ್ಯಾತ್ವದ ವಜ್ರಘಾತದಿಂ ಶತಚೂರ್ಣಮಾಗದೆ ಸಮ್ಯಗ್ಮಿಥ್ಯಾತ್ವಕರ್ದಮಮಂ ಪೊರ್ದದೆ ಸಮ್ಯಕ್ತ್ವಪ್ರಕೃತಿಯೆಂಬ ಮಿತ್ರನ ಕೆಹ್ಗೆವಿೞ್ದು ಬರ್ದುಂಕಿ ಬಂದುದನಾ ಮುಮುಕ್ಷುಗಳ್‌ಪ್ರತ್ಯಕ್ಷೇಕ್ಷಣದಿಂ ನಿರೀಕ್ಷಿಸಿ ತಮ್ಮಂತರಂಗದೊಳ್‌

ಕಂ || ಉಗ್ರತರ ದುರಿತವಿಪಿನ ಸ
ಮಗ್ರದವಾನಳಮೆನಿಪ್ಪ ನಿರ್ಮಳ ಸಮ್ಯ
ಕ್ತ್ವಗ್ರಹಣಂ ನಿರ್ವೃತಿಪಾ
ಣಿಗ್ರಹಣಂ ಪ್ರಾಣಿಗಳ್ಗದೇಂ ತೊದಳುಂಟೇ ೪೪

ಆ ನೆಗೞ್ದ ಸಪ್ತಪರಮ
ಸ್ಥಾನಂ ಸಮ್ಯಕ್ತ್ವದಿಂದಮತಿದುಃಸಹದುಃ
ಖಾನೀಕಸಪ್ತನರಕ
ಸ್ಥಾನಂ ಮಿಥ್ಯಾತ್ವದಿಂದೆ ಜೀವಕ್ಕಕ್ಕುಂ ೪೫

ಭವಜಳಧಿಯ ತಡಿ ಕಡುಸಾ
ರೆ ವಲಂ ನಿನಗಲ್ಲದಂದು ಸಮನಿಪುದೆ ಸುಖಾ
ರ್ಣವಪೂರ್ಣಚಂದ್ರನಘತಿಮಿ
ರ ವಿಭೇದನ ತರಣಿ ಗುಣದ ಕಣಿ ಸಮ್ಯಕ್ತ್ವಂ ೪೬

ಮೊದಲೊಳುದಯಸಿದುದುಪಶಮ
ಮದಱಿಂ ಬೞಿಕಾದುದಲ್ತೆ ವೇದಕಮದು ತ
ಪ್ಪದೆ ನಿನ್ನ ಹೃದಯದೊಳ್‌ನೆಲ
ಸಿದೊಡಕ್ಕುಂ ಕ್ಷಾಯಿಕಂ ಸುದರ್ಶನರತ್ನಂ ೪೭

ಮ || ಪರಮಾರ್ಥಂ ಪರಮೋಪಶಾಂತಿಗೆ ನಿಧಾನಂ ಜೈನಧರ್ಮಕ್ಕುದಾ
ಹರಣಂ ನೀನಿನಿತರ್ಕ್ಕುದಾಹರಣಮಾ ನಿನ್ನಗ್ರಜನ್ಮಂ ದುರಾ
ಚರಣಂ ಚಂದ್ರಮನಂ ತಮಂ ವಿಮಳನಂ ನಿಷ್ಕಾರಣಂ ಪೀಡಿಪಂ
ತಿರೆ ನಿನ್ನಂ ಬಿಡದೆಯ್ದೆ ಪೀಡಿಸುತವಂ ದುಸ್ಸ್ಥಾನದೊಳ್‌ಪುಟ್ಟುಗುಂ ೪೮

ವ || ಅದೆಂತೆನೆ

ಮ || ಕಮಠಂ ಕುಕ್ಕುಟಸರ್ಪನುಗ್ರಭಯಕೃದ್ಧೂಮಪ್ರಭೋತ್ಥಂ ಮಹಾ
ಹಿಮವಚ್ಛೈಳಮಹಾಹಿ ಷಷ್ಠನರಕೋರ್ವೀನಾರಕಂ ವ್ಯಾಧನ
ಪ್ರಮದುಃಖಾಬ್ಧಿತಮಃಪ್ರಭಾವನಿಭವಂ ಕಂಠೀರವಂ ಷಷ್ಠಭೂ
ಭ್ರಮಿತಂ ತೀವ್ರತಪಸ್ವಿ ದೈತ್ಯನೆನೆ ಕೇಳ್‌ದುಃಖಕ್ಕೆ ಪಕ್ಕಾದಪಂ ೪೯

ವ || ಗುರುತ್ವಾದಶಧಃಪಾತಯೆಂಬ ಉಕ್ತಿಯಂ ವ್ಯಕ್ತಂ ಮಾೞ್ಪ ದುರ್ಗತಿಭಾಜನಂ ನಿಸರ್ಗಕೋಪದಿಂ ನಿನಗೆಸಗುವುಪಸರ್ಗಂ ಸುವರ್ಣಕಗ್ನಿಸಂಯೋಗಂ ವರ್ಣೋತ್ಕರ್ಷಮಂ ಪಡೆವಂತುತ್ತರೋತ್ತರ ಸುಖಪದಮನೂದವಿಸುತ್ತುಂ ಸಕಳ ಕಳಂಕನಿರ್ಮುಕ್ತಿಪದಮಂ ಕೆಲವೆ ಭವದೊಳೆ ಪಡೆಗುಮದೆಂತೆನೆ

ಮ || ಅಭಿಜಾತಂ ಮರುಭೂತಿ ಭದ್ರಗುಣಮಾತಂಗಂ ಸಹಸ್ರಾರಕ
ಳ್ಪಭವಂ ಖೇಚರನಚ್ಯುತಂ ನೃಪವರಂ ಗ್ರೈವೇಯಕೋದ್ಭಾಸಿ ಭೂ
ವಿಭುವಾನಂದಕನಾನತೇಂದ್ರನಮರೇಂದ್ರಾಹೀಂದ್ರಭೂಪೇಂದ್ರವ
ಲ್ಲಭ ಪಾರ್ಶ್ವಾಧಿಪನಾಗಿ ನೀನೆ ಪಡೆವೈ ಸತ್ಸೌಖ್ಯ ಸನ್ಮೋಕ್ಷಮಂ ೫೦