ಕಂ || ಆರಯೆ ಮೃಗತೃಷ್ಣಿಕೆಯಂ
ನೀರೆಂದತಿತೃಷಿತನೀಂಟುವಂತೆವೊಲೀ ಸಂ
ಸಾರಸುಖಂ ಸುಖಮೆಂದವಿ
ಚಾರಿಗಳನುಭವಿಪರಱಿವರನುಭವಿಸುವರೇ ೫೧

ವ || ಅದೆಂತೆನೆ

ಕಂ || ಅನುಭವಿಸುವೊಡಿಂದ್ರಿಯಸುಖ
ಮುನಿತುಂ ಸ್ವರ್ಗದೊಳೆ ಸುಲಭಮಾ ದಿವಿಜರ್ಗಂ
ಜನಿಯಿಸುಗುಮಸುಖಮಂತ್ಯದೊ
ಳೆನೆ ಸುಖಮಂ ಬಯಸುವಂಗೆ ಶಿವಪದಮೆ ಪದಂ ೫೨

ತಪಮಿಲ್ಲದೊಡದು ಸಾರದು
ತಪಮಿಂದ್ರಿಯಜಯಮೆ ತಜ್ಜಯಂ ಜವ್ವನದೊಳ್‌
ತಪಮಂ ತಳೆವಂಗಕ್ಕುಂ
ತಪಮಂ ಜವ್ವನದೊಳಱಿನಾಂಪುದು ಚದುರಂ ೫೩

ಉ || ಆವನುದಗ್ರನಪ್ಪ ಪಗೆಯಂ ತವೆ ಕೊಲ್ವನವಂಗೆ ತಜ್ಜಯ
ಶ್ರೀವಧು ಕೂರ್ಪಳಂತೆ ನವಯೌನದೊಳ್‌ಕರಣಂಗಳಂ ಪೊಡ
ರ್ಪಾವರಿಸಿರ್ದುವಂ ಕಿಡಿಸಲಾವವನಾರ್ಪನವಂಗೆ ತಾಂ ತಪಃ
ಶ್ರೀವಧು ಕೂರ್ಪಳಲ್ಲದೊಡೆ ಕಾಮಿನಿಯರ್ಕಳ ಕೂರ್ಮೆ ಬಿಟ್ಟಿಯೇ ೫೪

ವ || ಎಂದಿಂತು

ಕಂ || ಉತ್ತರವಿತ್ತಯ್ಯನೆ ನಿ
ರುತ್ತರನಂ ಮಾಡಿ ಭವಸಮುದ್ರಮನಿರದಿ
ನ್ನುತ್ತರಿಸುವೊಡೆ ದಿಗಂಬರ
ವೃತ್ತಿಯೆ ತನಗುಚಿತಮೆಂದು ಖಚರಂ ಬಗೆದಂ ೫೫

ರವಿ ಗಗನಹೃದಯಮಂ ಬೆಳ
ಗುವ ತೆಱದಿಂ ರಶ್ಮಿವೇಗನಯ್ಯನ ಮನದೊಂ
ದವಿವೇಕತಮಮನುಕ್ತಿ
ಪ್ರವಿಮಳರುಚಿಯಿಂದೆ ತೂಳ್ದಿದಂ ಕುಳದೀಪಂ ೫೬

ವ || ಅದಂ ಕಂಡು ಸಚ್ಚರಿತ್ರದತ್ತಚಿತ್ತರಪ್ಪ ಸಭಾಸದರಿಂತೆಂದು ತಲೆದೂಗಿದರ್‌

ಉ || ಆವ ಪದಾರ್ಥದಿಂದಮಘಬಂಧಮಬೋಧಿಗೆ ಬಾಹ್ಯವಸ್ತುಸಂ
ಭಾವನೆವೆತ್ತವಂಗೆ ಮಗುೞ್ದಂತದೆ ತತ್ತ್ವವಿದಂಗರಾಗತಾ
ಭಾವಯುತಂಗೆ ಬಂಧನವಿನಾಶನಕಾರಣಮಪ್ಪುದೆಂದೊಡಿ
ನ್ನಾವನೊ ಭೇದಿಪಂ ವಿಭುಧವೃತ್ತಮನನ್ಯಜನಾಪ್ರವೃತ್ತಮಂ ೫೭

ಕಂ || ಕುಡದೆೞೆದುಕೊಳ್ವನಧಮಂ
ಕುಡೆ ಕೊಳ್ವವನಲ್ತೆ ಮಧ್ಯಮಂ ಪಿತೃ ಪದೆಪಿಂ
ಕುಡೆ ರಾಜ್ಯಮನೊಲ್ಲದವಂ
ಪಡೆವಾತೇಂ ಪುತ್ರನೀತನುತ್ತಮನಲ್ತೇ ೫೮

ಮ || ಸುದೃಢೋದಗ್ರಚರಿತ್ರಮೋಹನಿಗಳು ವೈರಾಗ್ಯಮೆಂಬೊಂದು ಚಾ
ಣದೆ ವಿಚ್ಛೇದಮನೆಯ್ದೆ ತನ್ನ ಗುಣಮಂ ನಿರ್ಬಂಧದಿಂದಂ ಸಭಾ
ಸದರೆಲ್ಲಂ ಪರಿಕೀರ್ತಿಸುತ್ತಿರೆ ಪರಿಚ್ಛೇದೋ ಹಿ ಪಾಂಡಿತ್ಯಮೆಂ
ಬುದನಾದಂ ದಿಟಮಾಗೆ ಮಾಡಿ ತೊಱೆದಂ ವಿದ್ಯಾಧರೈಶ್ವರ್ಯಮಂ ೫೯

ವ || ಅಂತಾ ಮಹಾತ್ಮನಾತ್ಮವಿದ್ಯಾಧರವಿಭವಸಂಭವ ವಿಷಯಸುಖಶ್ರೀಫಳಮಂ ಶ್ರೀಫಲಮನೀಡಾಡುವಂತೀಡಾಡಿ ಮುಕ್ತಿರಮಣೀರಮಣೀಯಕೂಟಮಂ ಬಯಸಿ ಸಿದ್ಧಕೂಟಕ್ಕೆ ವಂದದಂ ತ್ರಿಃಪ್ರದಕ್ಷಿಣಂ ಮಾಡಿ ತನ್ನಿಂ ಮುನ್ನಮಾ ಪ್ರಸಿದ್ಧ ಸಿದ್ಧಕೂಟಚೈತ್ಯವಂದನಾ ನಿಮಿತ್ತಮಲ್ಲಿಗೆೞ್ತಿಂದಿರ್ದ

ಉ || ಆಪ್ತನಿರೂಪಿತಾಗಮವಿದಾತ್ಮವಿಚಾರಸಮುತ್ಥಸೌಖ್ಯಸಂ
ತೃಪ್ತ ಸಮಾಧಿಗುಪ್ತಯತಿಪಾದಪಯೋರುಹಸನ್ನಿಧಾನದೊಳ್‌
ದೃಪ್ತಮನೋಜಕುಂಜರವಿಭಂಜನನೊಪ್ಪಿರೆ ತಾಳ್ದಿದಂ ಯಶೋ
ವ್ಯಾಪ್ತದಿಶಂ ಗುಣಾಂಬುಧಿ ದಿಗಂಬರದೀಕ್ಷೆಯನಂಬರೇಶ್ವರಂ ೬೦

ವ || ಅಂತುಭಯಪರಿಗ್ರಹನಿವೃತ್ತಿಲಕ್ಷಣಮಪ್ಪ ಜಿನದೀಕ್ಷೆಯನಕ್ಷೂಣವಿಶುದ್ಧಿಯಂ ಕೆಯ್ಕೊಂಡು

ಮ || ಮುನಿನಾಥಂ ಮನಮಂ ಪ್ರತೀತವಿಷಯವ್ಯಾಪಾರದತ್ತೊಯ್ಯದೊ
ಯ್ದು ನಿಜಪ್ರಸ್ತುತ ತತ್ತ್ವಭಾವನೆಗಮೋಘಂ ಸಂಚಿತಾಘಪ್ರಬಂ
ಧನಮಂ ಭೇದಿಸುತ್ತುಂ ಪರೀಷಹಜಯಂ ಮೆಯ್ಯಪ್ಪಿನಂ ಪೆಂಪುವೆ
ತ್ತನುದಾತ್ತಂ ಶುಭಚಿತ್ತನುತ್ತಮ ತಪೋನುಷ್ಠಾನನಿಷ್ಠಾಪರಂ ೬೧

ಕ್ಷಯಿ ವೈಷಮ್ಯಯುತಂ ಸಬಾಧಮಘಸಂಬಂಧಂ ಪರಾಧೀನಮಿಂ
ದ್ರಿಯಜಂ ಸೌಖ್ಯಮದರ್ಕನೇಕಭವದೊಳ್‌ದುಃಖಂಬಡುತ್ತಿರ್ದೆನ
ನ್ನೆಯದಿಂದೆಂದೊಡತೀಂದ್ರಿಯಾಪ್ರತಿಮಸೌಖ್ಯಾರ್ಥಂ ತಪೋದುಃಖಮಂ
ನಿಯತಂ ಸೈರಿಪುದಾವಗಾಹನಮೆನುತ್ತಾ ಯೋಗಿ ತಾಂ ಸೈರಿಪಂ ೬೨

ಕಂ || ಎನಿತೆನಿತು ಪರೀಷಹಮಾ
ಯ್ತನಿತನಿತೆ ವಿಶುದ್ಧಭಾವಮಂ ಮುನಿ ತಳೆದಂ
ಕನಕಂ ಶಿಖಿಯೋಗಮದೆನಿ
ತೆನಿತೆನೆ ನಿರ್ಮಳಿನವೃತ್ತಿಯಂ ತಾಳ್ದುವವೋಲ್‌೬೩

ವ || ಅಂತು ನಿಜವಿಶುದ್ಧಭಾವನಾಪ್ರಧಾನನಪ್ಪ ಮುನಿಪ್ರಧಾನಂ ನಿಯಮಿಸಿದಂತೆ
ಪಲವುಕಾಲಂ ಗುರುಪಾದಮೂಲದೊಳ್‌ನೆಗೞುತ್ತುಮಿರ್ದು

ಚಂ || ವನಗಜಕುಂಭಸಂಭವಸಮುಜ್ವಳಮೌಕ್ತಿಕಜಾಳಮೌಳಿವೇ
ಷ್ಟನದಿನಳಿಪ್ರತಾನ ವಿಳಸನ್ಮೃಗನಾಭಿಸುಗಂಧಸಿಂಧುಚಂ
ದನಭುಜಪತ್ರದಿಂ ತಿಳಕದಿಂ ಮಣಿಮೇಖಳೆಯಿಂ ಸಮಗ್ರಮಂ
ಡನಮಧಿರಾಜನಂತಿರೆಸೆದತ್ತು ಮಹಾಹಿಮವನ್ಮಹೀಧರಂ ೬೪

ವ || ತನ್ಮಹೀಧರಾಭ್ರಂಕಷವಿಭ್ರಮಮಂ ಪೊಗೞ್ವೊಡೆ

ಕಂ || ಉತ್ಪನ್ನಪ್ರೇಮದಿನಲ
ರ್ದುತ್ಪಳಮಂ ಚಂದ್ರ್ಜಮಂ ರವಿ ತದ್ಭೂ
ಭೃತ್ಪತಿ ಶಿಖರಸರೋಜಸಿ
ತೋತ್ಪಳದಳ ತಳ್ಪತಳದೊಳೊಪ್ಪುತ್ತಿರ್ಕುಂ ೬೫

ಚಂ || ಉರಗವಿಷಾವಿಳಾನಿವಿಘಾತವಿಮೂರ್ಛಿತಜೀವಜಾತಮಂ
ಸ್ಫುರಿತಮಹೌಷಧಿಪ್ರಯುತಮಾರುತನೆೞ್ಚಿಱಿಸುತ್ತುಮಿರ್ಕುಮಾ
ಗಿರಿವರದೊಳ್‌ದ್ವಿಜಿಹ್ವಪರಿಪೀಡಿತರಂ ಸುಜನಂ ಲಸತ್ಸುಧಾ
ಪರಿಗತದಿವ್ಯಸೇಕಮಱಿದೆೞ್ಚಱಿ ಪಂತವನೀಶವಾಸದೊಳ್‌೬೬

ಮಸ್ರ || ಸ್ಫುರಿತಚ್ಛಾಯಂ ಸ್ವಕೀಯಾನುಜವಿಷಯಮನಂ ವ್ಯಾಳಪಾಶಾವಕಾಶಂ
ಖರದಂಷ್ಟ್ರಂ ಲೋಕಸಂತ್ರಾಸನಕರಚರಿತಂ ಪ್ರೋತ್ಫಣಾಚಂಡದಂಡಂ
ಧರೆಯಂ ಫೂತ್ಕಾರತೀವ್ರಾನಳನೆ ಬಳಸೆ ನಾನಾಮೃಗಾನೀಕಮಂ ಸಂ
ಹರಿಸುತ್ತಂ ಕ್ರೋಧದಿಂದಂ ನೆನೆಯಿಪುದದಱೊಳ್‌ಕಾಳನಂ ಕಾಳಸರ್ಪಂ ೬೭

ಚಂ || ಉರಿಯನೆ ತೋರ್ಪ ದಿಟ್ಟ ಸಿಡಿಲರ್ವಿಪ ನಾಲಗೆ ನೀಳ್ದ ಮಿಂಚು ಫೂ
ತ್ಕರಣಮೆ ಗರ್ಜನಂ ತನಗದಾಗೆ ಭಯಂಕರಮೂರ್ತಿ ಲೋಕಸಂ
ಹರಣವಿಷಯಂಗಳಂ ವಿಷಧರಂ ವಿಳಯಾಂಬುದಮೆಂಬ ಮಾೞ್ಕೆಯಿಂ
ಸುರಿಯುತುಮಿರ್ಕುಮಾ ಗಿರಿಗುಹಾಂತರಸಂತತಿಯಲ್ಲಿ ಸಂತತಂ ೬೮

ವ || ಅಂತಗುರ್ವನೊಳಕೊಂಡ ದರ್ವೀಕರನಿಕರಭೀಕರಪರ್ವತಪ್ರದೇಶಕ್ಕೆ ಫುಲ್ಲಶರಪ್ರತಿ ಮಲ್ಲನನೇಕಭವಗಹನೈಕ ವಿಹಾರಶ್ರಮಹಾರಿಯಪ್ಪೇಕವಿಹಾರಿತ್ವಮಂ ಪೂಣ್ದು ಬಂದು

ಕಂ || ಶೀಳನಿಧಿ ತನ್ಮುನೀಂದ್ರ
ಮೂಳಗುಣೋತ್ಕರಮನುತ್ತರೋತ್ತರಗುಣಮಂ
ಪಾಳಿಸುತುಮನುದಿನಂ ತ
ಚ್ಛೈಳಗುಹಾಂತರದೊಳಚಳಯೋಗದೊಳಿರ್ದಂ ೬೯

ವ || ಅಂತಿರ್ಪುದುಮತ್ತಲಾ ಕುಂಜರಕುಧರತಟದೊಳಿರ್ಪ ಕಮಠಚರನಪ್ಪ

ಕಂ || ಸ್ಥೂಳಾಂಗದೊಳ್‌ಮೊದಲ್‌ಶುಂ
ಡಾಳಂ ತನುತನುಗಳಲ್ಲಿ ಕುಂಥುವೆ ಕಡೆ ಜೀ
ವಾಳಿಯೊಳೆನೆ ತವೆ ಕೊಂದುದು
ಕಾಳನವೋಲ್‌ಕುಕ್ಕುಟೋರಗಂ ಕ್ರೂರಾತ್ಮಂ ೭೦

ಪೞುಗೞಿದ ಪಾಪಮಂ ತಾಂ
ತೞೆವಿನಮಿ ತಱದೆ ನೆರಪಿ ಪಾಪದ ಭರದಿಂ
ದಿೞಿವಂತೆ ಜೀವಿತಾಂತ್ಯದೊ
ಳಿೞಿದುದು ಗೞಗೞನೆ ನರಕಧರೆಗೆ ತದುರಗಂ ೭೧

ವ || ಆ ನರಕಧರೆಗಳಿರವಿನಂದಮೆಂತೆಂದೊಡೆ ಮಂದರಮಹೀಧರಾಧ್ತನಭಾಗಂ ಬಿಡಿದು ಸಲಕ್ಷಾಶೀತಿ ದ್ವಾತ್ರಿಂಶದಷ್ಟಾವಿಂಶತಿ ಚತುರ್ವಿಂಶತಿವಿಂಶತಿ ಷೋಡಶಾಷ್ಟಸಹಸ್ರ ಯೋಜನಬಾಹುಲ್ಯಸಹಿತಂಗಳುಂ ರತ್ನ ಶರ್ಕರಾವಾಳುಕಾಪಂಕಧೂಮ ತಮೋಮಹಾತಮಃ ಪ್ರಭಾಭಿಧಾನಾಭಿಹಿತಂಗಳುಂ ಸರ್ವೇಂದ್ರಿಯ ದುಸ್ಸಹದುಃಖಕರ ಸಮಸ್ತ ವಸ್ತುಭರಿತ ಬಿಲಪರಿಕಳಿತಂಗಳುಂ ಕಿಂಚಿದೊನೈಕ್ಯಕ ರಜ್ವಂತರಿತಂಗಳುಮಾಗಿರ್ಕುಮವಱಲ್ಲಿ

ಕಂ || ಸಂಧಿಸಿ ಪದಿಮೂಱುಂ ಪ
ನ್ನೊಂದುಮದೊಂಬತ್ತುಮೇೞುಮಯ್ದುಂ ಮೂಱಂ
ತೊಂದುಮೆನೆ ಪಟಳಮಿ ಕ್ರಮ
ದಿಂದೇೞಾ ನರಕಧರಣಿಯೊಳ್‌ನೆಲಸಿರ್ಕುಂ ೭೨

ಸಯ್ದಮೆ ಮೂವತ್ತಿರ್ಪ
ತ್ತಯ್ದುಂ ಪದಿನಯ್ದು ಪತ್ತು ಮೂಱಲ್ಲಿಂದ
ತ್ತಯ್ದೂನಮೊಂದುಲಕ್ಕೆಯ
ವಯ್ದೆ ಬೞಿಕ್ಕೆಣಿಪೊಡವಱ ನರಕಬಿಲಂಗಳ್‌೭೩

ಕ್ರಮದೇೞುಂ ನರಕದೊಳೊಂ
ದು ಮೂಱು ಬೞಿಕೇೞು ಪತ್ತು ಪದಿನೇೞಾಯುಃ
ಪ್ರಮಿತಿಯದಿರ್ಪತ್ತೆರಡ
ತ್ತಮರ್ದುದು ಮೂವತ್ತುಮೂಱು ಪಾರಾವಾರಂ ೭೪

ಪದಿನೆಂಟಂಗುಳದಿಂ ಕುಂ
ದಿದೆಂಟು ಧನು ಮೊದಲ ನಾರಕರ್ಗುತ್ಸೇಧಂ
ಅದೆ ತದ್ವಿಗುಣಕ್ರಮದಿಂ
ದೊದವುಗುಮೇೞನೆಯ ನಿರಯಮೇದಿನಿವರೆಗಂ ೭೫

ಮೊದಲ ನರಕಂ ಮೊದಲ್ಗೊಂ
ಡುದಯಿಸುಗುಮಸಂಜ್ಞಿ ಸರಿಸೃಪಂ ವಿಹಗಂ ತ
ಪ್ಪದೆ ಪಾವು ಸಿಂಹಸಂತತಿ
ಸುದತೀತತಿ ಮರ್ತ್ಯ ಮತ್ಸ್ಯನಿಕರಂ ಕ್ರಮದಿಂ ೭೬

ತಮಮನಿತುಂ ನರಕಂಗಳೊ
ಳಮರ್ದಿರ್ಕುಂ ನಿರಯಜಾತಚೇತೋಮಿಥ್ಯಾ
ತಮಮಶುಭಲೇಶ್ಯೆಗಳ್‌ಪೊಱ
ಗುಮನಾವರಿಸಿರ್ದುವೆಂಬಿನಂ ನಿಬಿಡತಮಂ ೭೭

ಓರೋರ್ವರ ಮರ್ಮಂಗಳ
ನೋರೋರ್ವರ್‌ಕಂಡು ದಂಡಿಪರ್‌ನಾರಕರಾ
ಘೋರತಮಮಾದೊಡಂ ಮಾ
ರ್ಜಾರಂ ಕಾಣ್ಬಂದದಿಂದೆ ನರಕಾವನಿಯೊಳ್‌೭೮

ಅಹಿಲೋಕ ಸರ್ಪಸಂಕುಳ
ಮಹನೀಯವಿಷಪ್ರವಾಹಸಂತತಿಯಂತಾ
ಮಹಿಗಿೞಿದುದೆಂಬ ತೆಱದಿಂ
ದಹರ್ನಿಶಂ ಪರಿವುವುಗ್ರತರವಿಷನದಿಗಳ್‌೭೯

ಪೀರ್ವೊಡೆ ವಿಷಮಯಮುದಕಂ
ಸಾರ್ವೊಡೆ ವಿಷಯಮೆನಿಪ್ಪ ಮೃತ್ತಿಕೆ ನೆೞಲಂ
ಪಾರ್ವೊಡೆ ವಿಷಮಯರಸಮರ
ಸೋರ್ವ ವಿಷದ್ರುಮಸಮೂಹಮೆಲ್ಲಡೆಗಳೊಳಂ ೮೦

ಕ್ರೂರತೆಯಿಂ ಜೀವಂಗಳ
ನೋರಂತಿರೆ ಕೊಂದು ತಿಂಬವಂ ಬಿಡೆ ಪಾಣ್ಬಂ
ಚೋರಂ ಮೃಷಾರತಂ ಬ
ಹ್ವಾರಂಭಕನೆಯ್ದುಗುಂ ಮಹಾರೌರವಮಂ ೮೧

ಅಯ್ದಿಂದ್ರಿಯದಿಚ್ಛೆಗೆ ಸಂ
ದೆಯ್ದೆ ಮಹಾಪಾತಕಂಗಳೊಳ್‌ವರ್ತಿಸುವರ್‌
ಮಾಯ್ದ ನರಕದೊಳೆ ದುಃಖಮ
ನೆಯ್ದುವುದಂ ಪೊಗೞಲಾರುಮೇನೆಯ್ದುವರೇ ೮೨

ಉ || ಬಟ್ಟೆಯ ಹಂದಿಯಾನನದ ಮಾೞ್ಕೆಯಿನರ್ಬಿಸುತಟ್ಟಿನಾಱುತಿ
ರ್ಪಟ್ಟುಗಳಲ್ಲಿ ಪುಟ್ಟಿ ಬೞಿಕೊಟ್ಟಿದ ಶಸ್ತ್ರದ ಮೇಲೆ ಬಿೞ್ದು ಬಾ
ಯ್ವಿಟ್ಟೆರ್ದೆಗೆಟ್ಟು ಪುಯ್ಯಲಿಡೆಯಾ ದನಿಗೆಯ್ದಿ ಪುರಾಣನಾರಕರ್‌
ಕಟ್ಟಿಱಿ ಕುಟ್ಟು ಸೀೞೆನುತುಮೆಯ್ದುವರುಗ್ರತರ ಪ್ರಕೋಪದಿಂ ೮೩

ಕಂ || ಆತತ ದುಃಖಾನಳ ಸಂ
ಭೂತಿಗೆ ತಳ್ತರಣಿಯುಂ ಪ್ರತಾಪಕ್ಕಿನ್ನೇ
ವೈತರಣಿಯುಮೆನಿಸಿರ್ದಾ
ವೈತರಣಿಯನಧಿಕ ತೃಷ್ಣೆಯಿಂದಂ ಪುಗುವರ್‌೮೪

ಆವಾವ ಜೀವನಿವಹಮ
ನೋವದೆ ಮುಂಕೊಂದರವಱವಱ ರೂಪಂ ಕೋ
ಪಾವಿಳರಾಂತೋರೊರ್ವರ
ನಾವಗಮುಱದಿಱಿವರಲ್ಲಿ ನಿರಯಭವರ್ಕಳ್‌೮೫

ಅಡಗಿಲ್ಲದೆತ್ತೆ ತುತ್ತಿದೆ
ಯಡಗಂ ಪಿಡಿಯೆಂದು ಕತ್ತಿಗೆಯಿನವನೊಡಲೊಳ್‌
ಬಿಡದಡಗುಳ್ಳೆಡೆಯನೆ ಕೊ
ಯ್ದಡಗಿಲ್ಲದ ಬಾಯೊಳಡಿಸಿ ಗಿಡಿವರ್‌ಕಡುಪಿಂ ೮೬

ಕುಡಿಯದೊಡಾಗಳೆ ನಾಲಗೆ
ಯೊಡೆವುದು ಗಡ ಕಳ್ಳನದಱಿನೆಡೆಯುಡುಗದೆ ನೀಂ
ಕುಡಿಯೆಂದು ಲೋಹರಸಮಂ
ಕುಡಿಯಿಪರೊಡನೊಡನೆ ನಾಲಗೆಯುಮೊಡೆವಿನೆಗಂ ೮೭

ಮಧುಮಧುರಮೆಂದು ಬಹುತರ
ವಧೆಯಿಂ ಸಮನಿಪುದನಱಿದು ತೊಱೆಯದವಂದಿರ್‌
ಮಧುಬಿಂದು ಕಲಹಕಿಕ್ಕಿತೆ
ನೆ ಥರಣಿ ವಧಿಯಿಸುಗುಮಲ್ಲಿಯೋರ್ವರನೋರ್ವರ್‌೮೮

ಒಪ್ಪುವ ವರವನಿತಾಜನ
ದಪ್ಪು ಸಡಿಲ್ದಂದು ನಿಲ್ಲನಿವನೆಂದಱಿದಿ
ನ್ನಪ್ಪು ಸಡಿಲದವೊಲಿರ್ಕೆಂ
ದಪ್ಪಿಸುವರ್‌ಕಾಯ್ದು ಕಾಯ್ದಯಃಪುತ್ರಿಕೆಯಂ ೮೯

ಸುಲಿಪಲ್ಲಂ ಮೆಱೆವೈ ಪರ
ಲಲನೆಯರ್ಗೆಂದಿರ್ಕುೞಿಂದೆ ಕೀೞ್ವರ್‌ಪಲ್ಲಂ
ಸಲೆ ಕಣ್ಣಂ ಕೆತ್ತುವೆಯೆಂ
ದು ಲಕ್ಕಚಣದಿಂದೆ ಮಿಂಟಿ ಕಳೆವರ್‌ಕಣ್ಣಂ ೯೦

ಪಡೆಮಾತೇಂ ಹಿಂಸಾದಿಯ
ನೊಡರಿಸೆಯುಂ ಸ್ವರ್ಗಮೆಂಬ ಕಾಳಾಗಮಮಂ
ಪಿಡಿದು ಪುಸಿನುಡಿವ ಧೂರ್ತರ
ಪೆಡತಲೆಯಿಂ ತೆಗೆವರಿರ್ಕುೞೊಳ್‌ನಾಲಗೆಯಂ ೯೧

ಉ || ಒರ್ಮೆಯುಮಾತ್ರ ರೌದ್ರದೊಳೆ ವರ್ತಿಸುತುಂ ಸುಖಕಾರಿಯಪ್ಪ ಸ
ದ್ಧರ್ಮಮನೊಲ್ಲದಾರ್ಜಿಸಿದವಂದಿರ ದಾರುಣದುಃಖದಾಯಕಂ
ಕರ್ಮಮೆ ಮೂರ್ತಿಗೊಂಡಿರದೆ ದಂಡಿಸುವಂತೆವೊಲೊರ್ವರೊರ್ವರಂ
ಮರ್ಮಮನುರ್ಚೆ ಸಶ್ತ್ರದೆ ವಿಘಾತಿಸುವರ್‌ಕಡುಕೆಯ್ದು ನಾರಕರ್‌೯೨

ಕಣ್ಣೆಮೆಯಿಕ್ಕುವನ್ನೆವರಮುಂ ಬಱಿದಲ್ಲಿರದೋರ್ವರೋರ್ವರಂ
ಬಣ್ಣಿಗೆಗೆಯ್ದುವಂ ಪಿಡಿದು ನಾರಕರೋವದೆ ಕುತ್ತಿ ಕೊಯ್ದೊಡಂ
ಸಣ್ಣಿಗೆಯಿಂದಮಿಟ್ಟರೆದೊಡಂ ತನು ಮುನ್ನಿನ ಮಾಳ್ಷಕೆಯಕ್ಕುಮಾ
ತಿಣ್ಣಮೆನಿಪ್ಪ ಪಾಪಪರಿಪಾಕದೆ ಪಾದರಸಪ್ರಕಾರದಿಂ ೯೩

ಚಂ || ಝಷಮಕರಾದಿ ಪಾದಹತಿ ನಾರಕಶಸ್ತ್ರವಿಘಾತಿ ಬಾಡವಂ
ವಿಷಯಮಸಮಗ್ರಕೋಪಶಿಖಿಯಾ ಸುರರೋಗ ಶತಪ್ರಭೂತಮಾ
ನುಷ ಸಹಜಾತದುಃಖನಿವಹಂ ಬಹುತುಂಗತರಂಗಮಪ್ಪಿನಂ
ವಿಷನಿಧಿಯಾದುದಿಂತು ಪರಮಾಯು ವಿಚಾರಿಸೆ ನಾರಕರ್ಕಳಾ ೯೪

ಶಾ || ಏನಂ ಪೇೞ್ವೆನೊ ನಾರಕರ್ಗೆ ಸಲೆ ಸಂಸ್ಥಾನಂಗಳೊಳ್‌ಹುಂಡಸಂ
ಸ್ಥಾನಂ ವಿಶ್ರುತವೇದನೀಯದೊಳಸಾತಾವೇದನೀಯೋದಯಂ
ಜ್ಞಾನಾನೀಕದೊಳಪ್ರಯೋಜಕವಿಭಂಗಜ್ಞಾನಮಾ ಧ್ಯಾನದೊಳ್‌
ನಾನಾದುಃಖಕರಾರ್ತರೌದ್ರಮಶುಭಧ್ಯಾನದ್ವಯಂ ವರ್ತಿಕುಂ ೯೫

ಕಂ || ಉದಧಿಯನೀಂಟಿದೊಡಂ ತ
ಗ್ಗದು ತೃಷೆ ಮೂಜಗಮನೆಯ್ದೆ ನುಂಗಿದೊಡಂ ಪೋ
ಗದು ಪಸಿವು ನಿರಯಭವರ್ಗಿ
ನ್ನುದಕಾಶನಲವಮುಮಿಲ್ಲದೇಂ ದುಃಖಿತೆರೋ ೯೬

ಮ. ಸ್ರ || ಪಸಿವಿಂ ನೀರೞ್ಕೆಯಿಂ ತೀರದ ಬಹುರುಜೆಯಿಂ ನಾರಕಾನೀಕಶಸ್ತ್ರ
ಪ್ರಸರಪ್ರೋದ್ಭೂತದಿಂ ತಾಪಮನತಿಹಿಮಮಂ ಬೀಱುತಿರ್ಪುರ್ವಿಯಿಂ ಮಾ
ನಸ ಕೋಪಾಟೋಪದಿಂ ನಿರ್ದಯ ದನುಜಸಮೂಹಂಗಳಿಂದುಣ್ಮುವೀ ದುಃ
ಖಸಮುದ್ಘಾಂಭೋಧಿಯೊಳ್‌ನಾರಕತತಿ ಸತತಂ ಮೂಡಿ ಮೂೞ್ಕಾಡುತಿರ್ಕುಂ ೯೭

ವ || ಅಂತು ನಿರಂತರಾನಂತದುಃಖಸಂತತಿಸಾಗರಮೆನಿಪೇೞುಂ ನರಕಂಗಳೊಳಗೆ

ಕಂ || ಸಂಚಳಿಸದೆ ಕರಿಗಳನೆ ಪ
ಳಂಚಲೆವ ಪಟುಪ್ರತಾಪದಿಂದಾದುದು ತಾಂ
ಪಂಚಾನನನೆಂಬವೊಲಹಿ
ಪಂಚಮನರಕಮನೆ ಪಡೆದುದಘಸಂಚಯದಿಂ ೯೮

ವ || ಆ ನಿರಯಧರಣಿಯ ಮಧ್ಯಪ್ರದೇಶದೊಳ್‌ಪಾಪಕ್ಕೆ ನೆಲೆಯಾದರಂ ನುಂಗಲೆಂದು ನೆಲನೆ ಬಾಯ್ದೆಱೆದಂತಿರ್ದ ಬಿಲದ ಮೇಗಣಭಾಗದ ದುರ್ವರ್ಣದುಃಸ್ಪರ್ಶ ದುರ್ಗಂಧಾನುಬಂಧಿಗಳಪ್ಪುಷ್ಟ್ರಾದಿಮುಖಾಕಾರೋಪಪಾದ ಸ್ಥಾನದೊಳ್ ಪುಟ್ಟಿ ಪುಟ್ಟಿದಂತರ್ಮುಹೂರ್ತಕ್ಕೆ

ಕಂ || ವ್ಯವಧಾನಂ ದುಃಖಮನನು
ಭವಿಸುವೊಡೇಕೆಂಬ ತೆಱದಿನಾಹಾರಾದಿ
ಪ್ರವಿಪುಳಪರ್ಯಾಪ್ತಿಗಳಂ
ತವಾಱುಮಘವಶದಿನಾವಗಂ ನೆಱೆಯಲೊಡಂ ೯೯

ವ || ಇಟ್ಟಳಮಾಗಿ ಮುಂ ಕಟ್ಟಿದ ದುಷ್ಕರ್ಮದವೊಟ್ಟೆಯೆ ಭುಜ್ಯಮಾನ ತಿರ್ಯಗಾಯುಷ್ಯಮೆಂಬ ಕಟ್ಟು ಪಱಿಯೆ ತೊಟ್ಟನೆ ಬೀೞ್ವಂತೊಟ್ಟಿದ ಶಸ್ತ್ರಕೋಟಿ ಕೋಟಿನಿಶಿತ ವಜ್ರದ ಶಿಲೆಯ ಮೇಲಪ್ಪಳಿಸಿ ದೊಪ್ಪನೆ ಬಿೞ್ದು ನಿರಯಜರ್‌ನೆರಂ ಬರ್ಪನ್ನೆವರಂ ತಡವೆಂಬಂತು ತ್ಸುಕತೆಯಿಂ ತನ್ನ ಮುಂ ನೆರಪಿದ ಪಾಪಮೆ ಕೋಪದಿಂ ಪೊಡೆಸೆಂಡುವೊಡೆಯುತ್ತಿರ್ದುದೆಂಬಂತೆ ಪೊಡೆದೊಡೆ ಪುಟಂ ನೆಗೆದು ಮಗುೞೆ ಮಗುೞಾ ಶಿಲೆಯ ಮೇಲೆ ನುಚ್ಚು ನೂಱಾಗಿ ಬಿೞ್ದು ಪಾಪಪರಿಪಾಕದಿಂ ಪರೆದ ಪಾದರಸಮೊಂದಿದಪ್ಪಂತವಯವಂಗಳವಯವದಿಂ ಸಂಧಿಸೆ ಕಿಱಿದುಬೇಗಂ ಮೂರ್ಛೆಯಿನಿರ್ದೆೞ್ಚಱುತಿರ್ಪನ್ನೆವರಂ ಬೇಡರ ಬೀಡಿಂಗೆ ಬೆಳ್ಮಿಗಮೋಡಿಪುಗೆ ನೀಡುಮಿರದೆ ಕೂಡಿ ಕೆಯ್ದುಗೊಂಡು ಕವಿತರ್ಪಂತೆ

ಸ್ರ || ಕರ್ಣವ್ಯಾಘಾತಗಾಂಡೀವದ ಜಯವೊಡೆವೋಲ್‌ರಾವಮಂಗಾರಪುಂಜೋ
ತ್ಕೀರ್ಣಂಬೋಲ್‌ರೂಪು ರೂಕ್ಷಂ ತಮಗಳವಡೆ ಕೊಲ್‌ಕೊಲ್‌ಭರಂಗೆಯ್ಯೆನುತ್ತ
ಭ್ಯರ್ಣಕ್ಕೆಯ್ತಂದು ತನ್ನೊಳ್‌ಬಹುವಿಧವಧೆಯಂ ಮಾಡೆ ಸಂಪೂರ್ಣದುಃಖಾ
ಕೀರ್ಣಾತ್ಮಸ್ವಾಂತದೊಳ್‌ತೊಟ್ಟನೆ ನೆಗೞೆ ವಿಭಂಗಂ ಕ್ಷತಕ್ಷೋಭಿತಾಂಗಂ ೧೦೦

ಕಂ || ಅಂತುದಯಿಸಿದಶುಭವಿಭಂ
ಗಂ ತನಗಂ ಪೆಱರ್ಗಮಧಿಕದುಃಖಮನಿರದೋ
ರಂತೀವ ಕೋಪಶಿಖಿಬೀ
ಜಂ ತಾನೆನೆ ಪುಟ್ಟಿಸಿತ್ತು ತೊಟ್ಟನೆ ಮುನಿಸಂ ೧೦೧

ಪುಟ್ಟಿದ ಮುನಿಸೆನಸುಂ ಕೈ
ಗೊಟ್ಟೆತ್ತಿದ ತೆಱದಿನೆೞ್ದು ಕೋೞ್ಮಿಗಮಿಱಿದೆ
ೞ್ಬಿಟ್ಟುವ ತೆಱದಿಂದಂದಱೆ
ಯಟ್ಟಿಱಿದಂ ನಿಶಿತಶಸ್ತ್ರದಿಂ ನಾರಕರಂ ೧೦೨

ಕ್ರೂರಾನ್ಯೋನ್ಯಕ್ಷೇತ್ರೋ
ದೀರಿತ ಸಹಜಾತಮಾನಸಾಗಂತುಕ ಶಾ
ರೀರೋತ್ಥದುಃಖನಿಚಯಮ
ನೋರಂತನುಭವಿಸಿ ಷೋಡಶಾಂಬುಧಿಮಿತಮಂ ೧೦೩

ಕಮಠಚರ ಕುಕ್ಕುಟೋರಗ
ನಮಿತಾಖಿಳದುಃಖಧಾಮಧೂಮಪ್ರಭೆಯೊಳ್‌
ನಮೆದಲ್ಲಿಂ ಬಂದು ಮಹಾ
ಹಿಮವದ್ಗಿರಿಯೊಳ್‌ಮಹಾಹಿಯಾದುದು ಮಗುೞ್ದುಂ ೧೦೪

ಪ್ರೇಮದೊಳೆ ತನ್ನ ಬೆನ್ನನೆ
ಧೂಮಪ್ರಭೇನಾರಕತ್ವಮೆೞ್ತಂದವೊಲಾ
ಧೂಮಪ್ರಭೆ ವಿಕಟಾಂಗತೆ
ಏಮಾತತ್ಯುಗ್ರವೃತ್ತಿ ನೆಲಸಿತ್ತಹಿಯೊಳ್‌೧೦೫

ಘನಕಾಯಂಗಳನವಯವ
ದೆ ನುಂಗಲಹಿ ಬಯಸಿ ಮನದ ತೃಷ್ಣೆಗೆ ಪಡೆದ
ತ್ತನುಕೂಲತನುವನೆನೆ ಯೋ
ಜನಶತವಿಸ್ತೀರ್ಣಮಾಯ್ತು ಕರ್ಬುರವರ್ಣಂ ೧೦೬

ಚಂ || ಗಿರಿತಟದೊಳ್‌ಗುಹಾಮುಖಮೆಗೆತ್ತಟವೀನಿಕಟಂಗಳಲ್ಲಿ ಭೂ
ಮಿರುಹದ ಪೋೞಲೆಂದು ತೆಱೆದಾನನಮಂ ಮೃಗಸಂಕುಳಂ ಪೊದ
ೞ್ದುರಿವರಿವಂದು ಬೇಸಗೆಗೆ ಬೆರ್ಚಿ ಕರಂ ಪುಗುತಿರ್ಪುದೆಂದೊಡಾ
ಯುರಗನ ದೇಹದುನ್ನತಿಯನಾಯತಿಯಂ ನಱೆ ಬಣ್ಣಿಪನ್ನರಾರ್‌೧೦೭

ವ || ಅಂತಗುರ್ವಿಸುವ ಪೆರ್ವಾವಾಗಿ

ಕಂ || ಪಲಕಾಲಂ ನರಕದೊಳಶ
ನಲವಮುಮಂ ಪಡೆಯದಿರ್ದ ತನ್ನಯ ಜಠರಾ
ನಳನಳುರೆ ಪಲವುಜೀವಾ
ವಳಿಯಱಸಿ ನೊಣೆದು ನುಂಗಿ ತಣಿಯದೆ ಮತ್ತಂ ೧೦೮

ವ || ಎರೆಗೊಳಲ್‌ತೊೞಲುತ್ತುಮಾರಾಧಕಜನಪುಣ್ಯಾಗಮನದ್ವಾರಮುಂ ವಿರೋಧಕಲೋಕಾನೀಕಪಾಪಾಗಮನದ್ವಾರಮುಮೆನಿಸಿದ ರಶ್ಮಿವೇಗಯೋಗೀಶ್ವರರಿರ್ದ ಗುಹಾವಾರಕ್ಕೆ ವಂದಖಂಡಿತಯೋಗನಿಯೋಗದೊಳಿರ್ದವರಂ ಕಂಡು

ಭವಬದ್ಧಕ್ರೋಧಂ ಸಂ
ಭವಿಸಿರೆ ಭವವಾರ್ಧಿವರ್ಧನೋದ್ಯೋಗಪರಂ
ಭವಹಾರಿಯೆನಿಪ ಮುನಿಪತಿ
ಗೆ ವಿಶೇಷಂ ಮುನಿವುದುಚಿತಮೆನೆ ಮುನಿದೆನಸುಂ ೧೦೯

ಅಹಿ ತನ್ನಂ ನುಂಗಿದೊಡೇ
ನಹಿತಂ ತನಗೆಂದು ಬಗೆದನೇ ಮುನ್ನಿರ್ದಾ
ಗುಹೆಯಿಂದಹಿಮುಖಗುಹೆಯೊಳ
ಗು ಹಿತಂ ತನಗೆಂದು ಬಗೆದನೇಂ ಗುಣನಿಧಿಯೋ ೧೧೦

ಉ || ಕ್ರೂರಮಹಾಹಿ ನುಂಗುತಿರೆ ತನ್ಮುಖದಿಂದಮಗಲ್ವ ಚಿತ್ತಮಂ
ತಾರದೆ ದಿವ್ಯಯೋಗಿ ನಿಜಯೋಗನಿಯೋಗದಿನುಗ್ರಕಾಳಕಾ
ಳೋರಗತೀವ್ರವಕ್ತ್ರದಿನಗಲ್ವದಟಂ ಗೆಡೆಗೊಂಡು ನಿಶ್ಚಳಂ
ಘೋರತರೋಪಸರ್ಗಮನೆ ಸೈರಿಸಿದಂ ಗಡ ಧೀರರನ್ನರಾರ್‌೧೧೧

ಕುಂ || ಚ್ಯುತಿಯುಳ್ಳ ತನುವನುೞಿದ
ಚ್ಯುತಮೆನಿಪಾತ್ಮಸ್ವರೂಪಮಂ ಭಾವಿಸಿಯ
ಚ್ಯುತನಪ್ಪುದುಚಿತಮೆನೆಯ
ಚ್ಯುತೇಂದ್ರನಾದಂ ಖಗೇಂದ್ರನಪ್ಪ ಮುನೀಂದ್ರಂ ೧೧೨

ಮಸ್ರ || ಉಪಪಾದಾನಳ್ಪತಳ್ಪಂ ಸಿತಜಳಧರಮಂ ಪೋಲ್ವಿನಂ ರಶ್ಮಿವೇಗಂ
ಚಪಳೋದ್ಯಲ್ಲೇಖೆಯೆಂಬಂತುದಯಿಸಿ ಪುಳಕಾನೀಕಸಸ್ಯಂಗಳಂ ಹ
ರ್ಷಪಯೋವರ್ಷಂಗಳಿಂ ಕೊರ್ವಿಸಿ ಸುರವನಿತಾದೇಹಕೇದಾರದೊಳ್‌ದೇ
ವಪರೀತಂ ರಂಜಿಸಿರ್ದಂ ಸುಕವಿಜನಮನೋಹರ್ಷಸಸ್ಯಪ್ರವರ್ಷಂ ೧೧೩

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾ ಸಾದಿತ ನಿರ್ಮಳ ಧರ್ಮವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪ/ಆರ್ಶ್ವನಾಥಚರಿತ ಪುರಾಣದೊಳ್‌ರಶ್ಮಿವೇಗಮುನೀಶ್ವರಾಚ್ಯುತ ಕಳ್ಪಪ್ರಭವವಿಭವವರ್ಣನಂ ಷಷ್ಠಾಶ್ವಾಸಂ