ಕಂ || ಶ್ರೀಸುರಯುವತಿಮುಖಾಬ್ಜವಿ
ಕಾಸಿ ಸುರಾಶಯಸರಃಪ್ರಸಾದಕರಂ ಸಂ
ದಾ ಶರದದಂದದಿಂದೆ ವಿ
ಭಾಸಿಸಿದಂ ವಿಶದಕೀರ್ತಿ ಕವಿಕುಳತಿಳಕಂ ೧

ಷೋಡಶಕಳೇಂದುವಿಶದುಂ
ಷೋಡಶಸಹಜಾತಮಣಿವಿಭೂಷಣಮಹಿತಂ
ಷೋಡಶನಾಕಪ್ರಭವಂ
ಷೋಡಶವರ್ಷಪ್ರಪೂರ್ಣಯೌವನವಿಭವಂ ೨

ಸ್ಥಿತಿಯಿಪ್ಪತ್ತೆರಡಂಬುಧಿ
ಮಿತಮನಿತೆ ಸಹಸ್ರವತ್ಸರಕ್ಕೊರ್ಮೆ ಸುಧಾ
ಸ್ಮೃತಿಯಂ ಮಾೞ್ಪಂ ಪನ್ನೋಂ
ದುತಿಂಗಳಿಂಗೊರ್ಮೆ ಸುರಭಿತರಮೆನೆ ಸುಯ್ವಂ ೩

ಉ || ಚಾರುವಿಲೋಚನಾಂಶು ನವಕೌಮುದಿ ಕೈರವಮಂ ಪ್ರಮೋದವಿ
ಸ್ತಾರದಿನಪ್ಪಿದಂತೆಸೆವ ದೇವನಿತಂಬಿನಿಯರ್ಕಳೊಳ್‌ಕಳಾ
ಧಾರನುದಾರನನ್ಯದಿವದೊಳ್‌ದೊರೆಕೊಳ್ಳುದುದಂ ನಿರಂತರಂ
ಸಾರಮನೋಜಸೌಖ್ಯಸುರಸಾಮೃತಮಂ ಸವಿದಂ ಸುರಾಧಿಪಂ ೪

ಮ || ಜಿನಜನ್ಮಾಭಿಷವಕ್ಕದೊರ್ಮೆ ಜಿನಪಾರಿವ್ರಾಜ್ಯಪೂಜ್ಯಪ್ರಭಾ
ವನೆಗಂತೊರ್ಮೆ ಜಿನಪ್ರಬೋಧಜನನಶ್ರೀಗೊರ್ಮೆ ಸರ್ವಜ್ಞಪಾ
ವನನಿರ್ವಾಣವಿಭೂತಿಗೊರ್ಮೆ ಡಿವಿಜಂ ದಿವ್ಯಾರ್ಚನಾದ್ರವ್ಯಧಾ
ರಿ ನಿಜೋದ್ಯತ್ಪರಿವಾರನಂತನುದಿನಂ ಪೋಪಂ ಸುಧರ್ಮೋದ್ಯಮಂ ೫

ವ || ಅಂತಮರಲೋಕಸುಖಮಂ ನಿರಂತರಮನುಭವಿಸುತ್ತುಮಿರ್ಪಿನಮನ್ನೆಗಮಿತ್ತಲ್‌

ಕಂ || ಸಮವೃತ್ತಶೋಭೆಯಿಂ ಕವಿ
ಗಮಕೋಚಿತ ನವಪದಾರ್ಥದಿಂ ಜಂಬೂದ್ವೀ
ಪಮದೆಸೆಗುಂ ಕವಿಕುಳತಿಳ
ಕಮುಖಾಂಭೋಜಾತ ಜಾತ ಕಾವ್ಯಾಕೃತಿಯಿಂ ೬

ವ || ಆ ಜಂಬೂದ್ವೀಪಲಕ್ಷ್ಮೀವಕ್ಷೋರುಹಾಳಂಕಾರಮೆನಿಸಿ ವಿದೇಹಂಗಳೊಪ್ಪುತ್ತಿರ್ಪುವವಱ ವಿಭವಮಂ ಪ್ರಭಾವಿಸುವೊಡೆ

ಮ || ಗಣನಾತೀತಟದ್ರುಮಂಗಳೆಮೆಯಂ ಪೋಲ್ತೊಪ್ಪೆ ಸೌಂದರ್ಯಧಾ
ರಿಣಿ ವಿದ್ಯಾನಿಧಿ ಚಿತ್ತಹಾರಿಣಿ ವಿದೇಹಂ ತತ್ಸಮುದ್ಭೂತೆ ಸ
ತ್ಪ್ರಣುತಾಚ್ಛತ್ವ ಸಮನ್ವಿತಾಯತೆ ಕರಂ ಸೀತೋದೆ ಸೀತಾತರಂ
ಗಿಣಿ ನೇತ್ರದ್ವಯದಂತೆ ರಂಜಿಪುದು ಜಂಬೂದ್ವೀಪಭೂಕಾಂತೆಯಾ ೭

ವ || ಆ ನದಿಗಳಿರ್ತಡಿವಿಡಿದಿರ್ಪುವು

ಕಂ || ಎಂಟೆಂಟುನಾಡುಗಳ್‌ನಿ
ಷ್ಕಂಟಕವೃತ್ತಿಯೊಳೆ ತಮಗೆ ಪಾಸಟಿ ಕೀಱ್‌ಮೇ
ಲುಂಟಿವಱೊಳದಱಿನುಪಮೆಗೆ
ಗೆಂಟೆನುತವಯವದೆ ದಿವಮನಕರ್ಣಿಸುಗುಂ ೮

ಪದಿನಾಱೆನಿಪ್ಪ ಸಂಖ್ಯೆಯೊ
ಳೆ ದಿವಂಗಳ್‌ತಮಗೆ ಪಾಟಿಯುನ್ನತಿಯಂ ಪೊ
ರ್ದಿದ ಜನಕೆ ಸಮಾನಸ್ಥಿತಿ
ಯೊದವಂ ಮಾೞ್ಪೆಮೆಗೆ ಪಾಟಿಯಲ್ತೆನುತಿರ್ಕುಂ ೯

ಮ || ಕಮನೀಯಾಕೃತಿ ಕಾಮದೇವ ವಿಜಯಿ ಶ್ರೀವಿಷ್ಣುನೀಲಾಂಬರೋ
ತ್ತಮ ಬೋಧಾಧಿಪ ತೀರ್ಥನಾಥ ಸಕಲಶ್ರೀಚಕ್ರಿಸಪ್ತರ್ಧಿಯು
ಕ್ತ ಮುನೀಂದ್ರಾದಿ ವಿಶಿಷ್ಟದೇಹಜನತಾಸಂಭೂತಿಯಿಂದಂ ವಿದೇ
ಹಮೆನಿಪ್ಪಾ ಪೆಸಂತವರ್ಕನುಗುಣಂ ವಿಶ್ವಂಭರಾಭಾಗದೊಳ್‌೧೦

ಚಂ || ಜನಪತಿಗಳ್‌ಷಡಂಶಮನೆ ಕೊಂಡಿಳೆಯಂ ಪ್ರತಿಪಾಳಿಪರ್‌ಪದ
ಕ್ಕನುವಶಮಾಗಿ ಕೊಳವ ಮೞೆಯಿೞ್ದಿ ಬಱಂ ನೆಗೞ್ದಂಜೆ ಪಾಪವ
ರ್ತನಮನೆಯಂ ಪ್ರವರ್ತಿಸದು ವರ್ತಿಪುದೆಯ್ದೆ ಚತುರ್ಥಕಾಲವ
ರ್ತನಮೆನೆ ಕೂರ್ತು ಕೀರ್ತಿಸದರುಂಟೆ ವಿದೇಹಮಹೀವಿಳಾಸಮಂ ೧೧

ಮ. ಸ್ರ || ಜಿನಧರ್ಮಂ ವರ್ತಿಕುಂ ಮಿಕ್ಕಿನ ಕುನಯಚಯಕ್ಕಾ ವಿದೇಹಂಗಳೊಳ್‌ವ
ರ್ತನಮಿಲ್ಲೇಕೆಂದೊಡಾ ಕೇವಳಿಗಳುಮವಧಿಜ್ಞಾನಸಂಪನ್ನರುಂ ನೆ
ಟ್ಟನದೆಂದುಂ ವರ್ತಿಸುತ್ತಿರ್ಪುದಱಿನಮಳಭಾನೂದಯಂ ಕುಂದದಿರ್ದಂ
ದೆನಸುಂ ಘೋರಾಂಧಕಾರಂ ನೆಱೆಗುಮೆ ಜಗತೀಚಕ್ರಮಂ ಕೊರ್ವಿ ಪರ್ವಲ್‌೧೨

ಕಂ || ದಿವದೊಳ್‌ಪುಟ್ಟಿದವರ್‌ಸಂ
ಭವಿಪರ್‌ಕುಗತಿಗಳೊಳಲ್ಲಿ ಪುಟ್ಟಿದವರ್‌ಸಂ
ಭವಿಸುವರುತ್ತಮಗತಿಗಳೊ
ಳೆ ವಿದೇಹಂ ಸಗ್ಗದಿಂದಮಗ್ಗಳಮಲ್ತೇ ೧೩

ವ || ಅದುಕಾರಣದಿಂ

ಕಂ || ಆ ವಿಷಯದೆ ಜನನಮನಾ
ದೇವರ್ಕಳೆ ಬಯಸುತಿರ್ಪರಲ್ಲಿಯ ಭವ್ಯರ್‌
ಭಾವಿಸಲೊಲ್ಲರ್‌ದಿವಮನ
ದೀವುದೆ ನಿರ್ವೃತಿಯನವಱವೋಲ್‌ಸುಖತತಿಯಂ ೧೪

ದೇವಾನಾಂಪ್ರಿಯನೆ ವಲಂ
ದೇವಗತಿಪ್ರೀತನಪ್ಪವಂ ತದ್ಗತಿಯಂ
ದೇವಗತಿಯೆಂದೆ ಬಯಸರ್
ಭಾವಿಸೆ ಭವ್ಯರ್ಕಳಲ್ಲಿ ನಿರ್ವೃತಿನಿರತರ್‌೧೫

ಪರಮಾಯು ಪೂರ್ವಕೋಟಿಯೆ
ನರರುದಯಂ ಪಂಚಶತಶರಾಸನಮೆ ನರೇ
ಶ್ವರ ಸಂಪೂಜ್ಯಶಲಾಕಾ
ಪುರುಷೋತ್ತಮರತ್ನಖನಿಯೆನಿಪ್ಪಾ ಧರೆಯೊಳ್‌೧೬

ವ || ಅಲ್ಲಿ ವಿಪಶ್ಚಿನ್ನಿವಾಸಮೆನಿಸಿದ ಪಶ್ಚಿಮವಿದೇಹಲಕ್ಷ್ಮೀಮಧ್ಯಮದೇಶಮಂ ಬಾಸೆಯಂತಳಂಕರಿಸಿ

ಮ || ಗಣನಾತೀತತಟೋರುಚೂತರಸಸಂದೋಹಪ್ರವಾಹಪ್ರಧಾ
ರಣದಿಂ ವಾಹಿನಿ ನಾಗಯೂಥ ಜಳಕೇಳೀಲೀಲೆಯಿಂದಂ ತರಂ
ಗಿಣಿಯೆಂಬೀ ನಿಜನಾಮನ್ವಿತಮೆನಿಪ್ಪಂತಂಬುಜಾಮೋದೇವೀ
ಕ್ಷಣ ಸಂತೋಷಕರಪ್ರಸಾದೆಯೆನಸುಂ ಸೀತೋದೆ ಕಣ್ಗೊಪ್ಪುಗುಂ ೧೭

ಕಂ || ದಕ್ಷಿಣನುತಮಾ ಸಿಂಧುವ
ದಕ್ಷಿಣದೊಳ್‌ನಿಷಧಶೈಳದುತ್ತರದಿಶೆಯೊಳ್‌
ವಕ್ಷಾರದಿಂ ಮೂಡಲ್‌
ವೀಕ್ಷಣಸುಖಭದ್ರಶಾಳಿವನದಿಂ ಪಡುವಲ್‌೧೮

ಮ || ವಿಳಸತ್ಸೌರಭಶಾಲಿ ವಾರವನಿತಾದೃಗ್ಭಾಸಿ ಷಟ್ಖಂಡಮು
ಜ್ವಳಪತ್ರಕ್ಕೆಣೆಯಪ್ಪಿನಂ ವೃಷಭಶೈಳಂ ಕರ್ಣಿಕಾಕಾರಮಂ
ತಳೆದೊಪ್ಪುತ್ತಿರೆ ರಾಜಹಂಸಸದನಂ ಪದ್ಮಂಬೊಲೊಪ್ಪಿರ್ಪುದ
ಸ್ಖಳಿತಶ್ರೀನಿಧಿ ಪದ್ಮೆ ಸದ್ಬ್ರಮರಲೀಲಾವಿಭ್ರಮಭ್ರಾಜಿತಂ ೧೯

ಚಂ || ವಿಳಸಿತಸತ್ಪಥಂ ಬುಧಸಮುದ್ಭವಶೋಭಿ ಸುಧಾನಿಧಾನಗೋ
ಕುಳಮಬಳಾಮನೋಹರಮಣಂಗಸಹಾಯವಿಳೇಶಕೋಶಸ
ಜ್ಜಳನಿಧಿವರ್ಧಕಂ ಸಕಳಸಸ್ಯಸಮೃದ್ಧಿಯನಾಂತು ಚಂದ್ರಮಂ
ಡಳಮನೆ ಪೋಲ್ತು ಮಂಡಳಮದಚ್ಚರಿಯೆಂದುಮನೂನಸಂಪದಂ ೨೦

ಕಂ || ಶಾಳಿ ನಿಜಗಂಧಮತ್ತಾ
ಶಾಳಿನಿ ಕಣ್ಗೊಳಿಸಿದತ್ತು ಪರಿಮಳಮಿಳಿತಾ
ಶಾಳಿ ನಿರತಿಶಯಗುಣಕಣಿ
ಶಾಳಿ ನಿಮಗ್ನೋರು ಕೀರಕುಳ ಪರಿಕಳಿತಂ ೨೧

ಕಳಮಕಣಿಶಂಗಳಂ ಬ
ಲ್ಗಿಳಿಗಳ್‌ನಲಿಗರ್ಚಿ ಜಡಿಯೆ ಪಾಮರಿಯರ್‌ಮಂ
ಡಳಿಸಿ ನಭದಲ್ಲಿ ತಳೆದುವು
ವಳಯಾಕೃತಿವೆತ್ತು ಶಕ್ರಚಾಪದ ಚೆಲ್ವಂ ೨೨

ಚಂ || ಮಡಿಗಳೊಳಿರ್ದ ಕೈರವಮನಾನಚಂದ್ರಮನಿಂದಲರ್ಚಿ ಕಂ
ಪೊಡರಿಸುವಾ ಸುಗಂಧದಲರ್ದುತ್ಪಳಗಂಧದೆ ಗಂಧಶಾಳಿಯಂ
ಬಿಡೆ ಪೊರೆದೊಲ್ದು ಬಂದೆಱಪ ತುಂಬಿಯ ಗಾವರದಿಂದಮಾವಗಂ
ಗಡ ಗಿಳಿಸೋವುದಾ ವಿಷಯಭೂಮಿಯ ಕೋಮಳಪಾಮರೀಜನಂ ೨೩

ವ || ಅಂತು ಬೆಳೆದ ಕಳವೆಯ ಕೆಯ್ವೊಲಂಗಳ ಸಿರಿಯೆ ಕಣ್ಬೊಲನಾದಂತೆ

ಚಂ || ನಿರುಪಮಪಾಮರೀಮುಖಸರೋರುಹಸೌರಭಗಂಧಶಾಳಿಬಂ
ಧುರತರಗಂಧಮಂ ಮೃಗಮದಾಕಳಿತಾಚಳಸಾನುಗಂಧಸಿಂ
ಧುರಮದಗಂಧಮಂ ತಳೆದು ಗಾಳಿ ಸುಗಂಧವಹಾಭಿಧಾನಮಂ
ಧರಿಯಿಸಿ ತೀಡುತಿರ್ಪುದು ನಿರಂತರಮಾ ವಿಷಯಾಂತರಾಳದೊಳ್‌೨೪

ಮ || ನವನೀರೇಜವನಂ ಸಿತೇಕ್ಷು ಸಹಕಾರಶ್ರೇಣಿ ಮತ್ತಾಳಿ ನೀ
ರವಮುನ್ಮೀಳಿತ ಮಾಳತೀಪರಿಮಳಂ ತೆಂಗಾಳಿಯೆಲ್ಲೆಲ್ಲಿ ನೋ
ಡುವೊಡಲ್ಲಲ್ಲಿಯೆ ರಯ್ಯಮೆಂದೆನೆ ವಿಯೋಗೋದ್ವೇಗದಿಂದಿರ್ಪ ಮಾ
ನವರಂ ಮರ್ದಿಸುವಲ್ಲಿಯಿಲ್ಲ ಮದನಂಗಾಯಾಸಮಾ ದೇಶದೊಳ್‌೨೫

ಕಂ || ವನಮೆನಿತನಿತುಂ ಮದನನ
ವನಕೇಳಿಕೆಗೆ ತಿಳಿಗೊಳಂಗಳೆನಿತನಿತುಂ ನೂ
ತನ ಜಳಕೇಳಿಗೆ ಶೈಳಮ
ವೆನಿತನಿತುಂ ಶೈಳಕೇಳಿಗೆನೆ ಪೊಗೞದರಾರ್‌೨೬

ವ || ಅಂತು ಸಕಳವಿಷಯಸುಖಕ್ಕಂ ವಿಷಯಮಾದಾ ವಿಷಯದೊಳ್‌

ಕಂ || ಶ್ರೀಪದಮಾ ಜನಪದಲ
ಕ್ಷ್ಮೀಪದಕಮಿದೆನಿಸಿ ವಿನುತನಾಯಕತೇಜೋ
ವ್ಯಾಪೃತಮಶ್ವಪುರಂ ಮಣಿ
ಗೋಪುರಮೆಸೆಗುಂ ವಿಳಾಸಜಿತದಿವಿಜಪುರಂ ೨೭

ಚಂ || ಅದು ವಿಬುಧಾಶ್ರಯತ್ವದಮರಾವತಿಯಂ ಧನದಾಲಯತ್ವದಿಂ
ದದು ವಿದಿತಾಳಕಾಪುರಮನಂತದನಂತಭುಜಂಗಸಂಗಮ
ತ್ವದಿನಹಿರಾಜಪತ್ತನಮನೀ ತೆಱದಿಂ ನೆಱೆ ಪೋಲ್ತು ಚೆಲ್ವಿನಿಂ
ದೊದವಿಯಿವರ್ಕೆ ಮೇಲೆನಿಪುದೆಂದೊಡೆ ಪೊಲೀಸಲುಂಟೆ ಪಟ್ಟಣಂ ೨೮

ಕಂ || ಒಸರ್ವ ಸಿತಸಿತೇಕ್ಷುವ ರಸ
ವಿಸರದ ಪರಿಕಾಲ್ಗಳಿಂದೆ ಕಳಮವನಂಗಳ್‌
ಪಸರಿಸಿ ಬೆಳೆದೊಱಗಿದುವೆಱ
ಗಿಸುವುವು ಗಿಳಿಗಳುಮನಾ ಪುರದ ಪೊಱಪೊೞಲೊಳ್‌೨೯

ದೆಸೆವೆಣ್ಗಳ ಪಸುರ್ವಟ್ಟೆಯ
ಪಸರಿಸಿ ತೋರ್ಪಂಶುಕಂಗಳೆನಿಸಿ ಶುಕಂಗಳ್
ದೆಸೆದೆಸೆಯಿಂ ಬಂದೆಱಗುವ
ವಸದೃಶ ಪರಿಮಳ ವಿಶಾಳಶಾಳಿಯೊಳೊಲವಿಂ ೩೦

ಉ || ತೀವಿದ ನಿರ್ಮಳಾಂಬು ಶಶಿಕಾಂತದ ಕುಟ್ಟಿಮಭೂಮಿ ಕಾಂತಪೊಂ
ದಾವರೆ ಹೇಮಪೀಠಮೆಱಗಿರ್ದಳಿಮಾಳೆ ಪಿನದ್ಧನೀಳರ
ತ್ನಾವಳಿ ರಾಜಹಂಸಿ ಪರಿಚಾರಕಿಯಾಗೆ ಮನೋಜರಾಜಲ
ಕ್ಷ್ಮೀವಧುವಿರ್ಪ ಮಂದಿರವೋಲ್‌ಬನದೊಳ್‌ಕೊಳನಿರ್ಪುದೊಪ್ಪುತುಂ ೩೧

ಉ || ತುಂಗಸಿತೇಕ್ಷುದಂಡಸಹಕಾರ ರಸಾಕುಳಮಾತುಳುಂಗ ನಾ
ರಂಗಫಲಂಗಳಿಂ ಸುರಯಿ ಸಂಪಗೆ ಮಲ್ಲಿಗೆ ಮೊಲ್ಲೆಯೆಂಬ ಪು
ಷ್ಟಂಗಳಿನಲ್ಲಿ ಪಾಡುವ ಮದಾಳಿಯಿನೋದುವ ರಾಜಕೀರದಿಂ
ದಂಗಜರಾಜಮಂಗಳನಿವಾಸಮೆನಿಪ್ಪುದು ತದ್ಬಹಿಃಪುರಂ ೩೨

ವ || ಅಂತುಮಲ್ಲದೆ

ಮ || ಪರಿರಂಭೋರುಪಯೋಧರಸ್ಮಿತಸರೋಜಾತಾನನಾಮೋದಿ ಸು
ಸ್ಥಿತ ಮತ್ತಭ್ರಮರಾವಳೀವಿಳಸಿತಂ ಸಂಪನ್ನಪುನ್ನಾಗಮಂ
ದಿರಮಾನಂದಿತರಾಜಹಂಸತತಿ ನಾನಾಚಿತ್ರಪತ್ರೋತ್ಕರಾ
ಕರಮಂತಾ ಪುರಮುಂ ಬಹಿಃಪುರಮುಮೇಕಾಕಾರದಿಂದೊಪ್ಪುಗುಂ ೩೩

ವ || ಅಂತು ಸೊಗಯಿಸುವ ವನಮೆ ವೇಳಾವನಂ ಸಿತಾಂಬುಜಂಗಳೆ ಕಂಬುಗಳ್‌ಎಂಬಂತೆಸೆಯೆ ಮಿಸುಪರುಣಕಂಜಕಿಂಜಲ್ಕ ರಜೋರಂಜಿತ ತರಂಗಮಾಳೆಗಳೆ ನವಪ್ರವಾಳ ಲತಾಮಾಳೆಗಳಾಗೆ ಸಾಗರಮೆ ಬಡವಾನಳಭೀತಿಯಿಂ ಭೂಭೃತ್ಪತಿಯಂ ಶರಣ್ಬೊಕ್ಕುದೆಂಬಂತೆ ಕಣ್ಗಿಂಬಾಗಿ

ಕಂ || ಎಲರಲೆಪದಿನುದಿರ್ದುಪವನ
ದಲರ್ದಲರ್ವುಡಿಯಿಂದೆ ಪೊರೆದು ಪರಿಖಾವಳಯಂ
ಸುಲಲಿತೆ ಘುಸೃಣೋಜ್ವಲೆ ಪುರ
ಲಲನೆ ಜಲಕ್ರೀಡೆಯಾಡಿದವೊಲೆಸೆದಿರ್ಕುಂ ೩೪

ಬಳಸಿರ್ದುಪವನದೊಳರ
ಲ್ದಲರ್ಗಳ ಬಳಗಂ ಬಳಸೆ ಮುಟ್ಟಿ ಮುಗಿಲಂ ಪೊಸಪೊಂ
ಗಳ ತೊಳಪ ಕೋಂಟೆ ತಾರಗೆ
ಬಳಸಿದ ಕನಕಾಚಳಂಬೊಲೆಸೆವುದು ನಿಸದಂ ೩೫

ವ || ಮತ್ತಮದುತ್ತುಂಗ ವಿಶಾಳಾಟ್ಟಾಳಚೂಳಿಕಾಪಿನದ್ಧ ಚುಂಬಿತಾಂಬರಕೇತುಹಸ್ತ ವಿಸ್ತಾರದಿಂ ನಿಳಿಂಪನಗರಸಂಪತ್ತಿಯೆಲ್ಲಂ ತನಗೆ ಹಸ್ತಸ್ಥಿತಮೆಂಬುದನಭಿನಯಿಸುವಂತೆ ಕಮನೀಯಮಾಗಿರ್ಪು ದಕ್ಷೂಣಲಕ್ಷ್ಮೀಸಮಾಗಮನದ್ವಾರೋಪಮ ನಿರುಪಮ ನೂತ್ನ ರತ್ನ ತೋರಣಕಳಾಗೋಪುರಮೆನಿಪ ಗೋಪುರದಿಂದಂ ರೂಪುವಡೆದುದದಱೊಳಗಭ್ಯುದಯ ನಿಃಶ್ರೇಯಸ ನಿಶ್ರೇಣಿಯುಂ ನಿರೀಕ್ಷಣಸುಖಸಸ್ಯಕ್ಷೋಣಿಯುಮೆನಿಸಿ

ಕುಂ || ಆವಾವ ಬೀದಿಯೊಳ್‌ಪರಿ
ಭಾವಿಸೆ ಭಾವುಕರ ಭಾವಮಂ ಸೋಲಿಪ ವೇ
ಶ್ಯಾವಾಟಿ ರುಚಿರ ನವರಚ
ನಾವಳಿ ಮಣಿಕಳಶಕಳಿತಜಿನಗೃಹಮೆಸೆಗುಂ ೩೬

ಮಾರನ ಚಾಪಾಗಮವಿ
ಸ್ತಾರಮನೀಕ್ಷಿಪ ತವಂಗಮಂಗನೆಯರ ಶೃಂ
ಗಾರರಸಂ ತೀವಿದ ನಡು
ಗೇರಿಯಿದೆನೆ ಸೂಳೆಗೇಱಿ ಮಿಗೆ ಸೊಗಯಿಸುಗುಂ ೩೭

ಚಂ || ಮಸೆದ ಮನೋಜನಸ್ತ್ರನಿಚಯಂ ನಗೆಗಣ್‌ನಿಡುವುರ್ವು ಕರ್ವುವಿ
ಲ್ಲಸದೃಶಚಿತ್ತಹಾರಿ ಹೊಗರೆತ್ತಿದ ಕೂರಸಿ ಬಾಸೆಯಿಂ ಕರಂ
ಮಿಸುಗುವ ತೆಳ್ವಸಿರ್‌ಪಳಕಮಾಗೆ ಕಪೋಳತಳಂ ವಿಳಾಸದಿಂ
ದಸದಳಮೇೞಿಕುಂ ಜಯನಶಾಲೆಯ ಲೀಲೆಯನಲ್ಲಿ ಬಾಲೆಯರ್‌೩೮

ಶಾ || ಆಕಾಶಸ್ಫಟಿಕಾಶ್ರಯೋಪರಿಮ ಭೂಭಾಗಂಗಳೊಳ್‌ಕೇಕರಾ
ಳೋಕಂ ಭಾವುಕಚಿತ್ತಮಂ ತೆಗೆದು ಚಾರುಸ್ಮೇರಮಂಗೋದ್ಭವಂ
ಗೇಕಚ್ಛತ್ರಜಗತ್ಪ್ರಯಪ್ರಭುತೆಯಂ ತಂದೀಯೆ ನಿಂದಂಗನಾ
ನೀಕಂ ತಮ್ಮ ವಿಳಾಸದಿಂದಿೞಿಸುತಿರ್ಕುಂ ಖೇಚರಸ್ತ್ರೀಯರಂ ೩೯

ಮ || ವಿದಿತಂ ವಪ್ರಭೆ ವಜ್ರವೇದಿಕೆ ವಧೂಲಾವಣ್ಯಪುಣ್ಯಾಂಬು ತೀ
ವಿದ ಶುಂಭತ್ಪುರಮಂಬುರಾಶಿಯೆನೆ ನಾನಾವಸ್ತುಸಂಪತ್ತಿಗೆ
ತ್ತಿದ ತುಂಗಧ್ವಜದಿಂ ಮಣಿವ್ರಜನೊಪ್ಪಂಬೆತ್ತು ಬಿಣ್ಗುಂಡನಿ
ಕ್ಕಿದ ಭೈತ್ರಕ್ಕೆಣೆಯಾಗಿ ಕಣ್ಗೊಳಿಸುಗುಂ ವೈಶ್ಯಾಳಿವೇಶ್ಯೋತ್ಕರಂ ೪೦

ಕಂ || ಪುರದ ಮನೆಯೆನಿತದನಿತುಮು
ಪರಿಮಾಡಂ ಮನೆಯ ಪಿಂತಿಲೆನಿತವನಿತ್ತುಂ
ಸರಸಿರುಹಾಕರಕಳಿತಂ
ಪುರುಷರೆನಿಬರನಿಬರುಂ ವದಾನ್ಯರ್‌ಧನ್ಯರ್‌೪೧

ಚಂ || ಮೃಗಮದಗಂಧಮಂ ಸುರಭಿಚಂದನಗಂಧಮನಬ್ಜಗಂಧಮಂ
ನಗನಿಕಟಪ್ರಸೂನನವಗಂಧಮನುತ್ಪಳಗಂಧಮಂ ಸಮಂ
ತೊಗುಮಿಗೆ ಪೇಱಿ ನೀಱೆಯರ್ಗೆ ಬೀಱುತುಮಾ ಪುರಮಂ ನಿರತರಂ
ಪುಗುವುದು ಘಟ್ಟಿವಳ್ಳನೆನೆ ಗಂಧವಹಂ ಬಹುಗಂಧಬಂಧುರಂ ೪೨

ಮ || ತನುಗಂಧಕ್ಕೆಱಗಿರ್ದ ತುಂಬಿ ಮುಗಿಲಂ ನೇತ್ರಾಂಶು ಮಿಂಚಂ ಸುಕಾಂ
ಚನಕಾಂಚೀರುತಿ ಮೇಘನಾದಮನನೂನಂ ಪೋಲೆ ಲಾವಣ್ಯವಾ
ಹಿನಿ ಮೆಯ್ವೆರ್ಚೆ ಮನೋಜಕೇಕಿ ಕುಣಿವನ್ನಂ ಕಾರವೋಲಂಗನಾ
ಜನಮಿಯುತ್ತುಮೆ ಬರ್ಪುದೊಪ್ಪಿಪುರದೊಳ್‌ಶೃಂಗಾರದಾಸಾರಮಂ ೪೩

ಕಂ || ಪೊಱಗಣ ಚೆಲ್ವಱಿಯದರ್ಗಳ
ನೆಱಗಿಸಿ ತನಗೊಳಗುಮಾೞ್ಪುದೆನೆ ಪುರದೊಳಗಿಂ
ತುಱುಗಿದ ಚೆಲ್ವಱಿವವರ್ಗಳ
ನೆಱಗಿಸಿ ತನಗೊಳಗುಮಾೞ್ಪುದೇಂ ಕೌತುಕಮೇ ೪೪

ವ || ಅಂತಳವಿಗೞಿದ ಚೆಲ್ವನೊಳಕೊಂಡ ನಗರವಿಳಾಸಿನಿಗೆ ಮಂಡನಮೆನಿಸಿಯನೂನ ದಾನಾಮೋದ ಮತ್ತಮಧುಕರ ಝಂಕಾರಾಕರ್ಣನಾಸಕ್ತಿ ತ್ಯಕ್ತದುಷ್ಟಚೇಷ್ಟಿತಗಂಧ ಸಿಂಧುರರುಂದ್ರೇಂದ್ರನೀಳ ಶಾಲಾವಿಸರವಿವ ಸ್ವದಶ್ವಸದೃಶವಾಜಿರಾಜಿವಿರಾಜಿತ ವಿಶಾಲಾಶಾಲಾ ನಿಚಯರುಚಿರಪಂಚರತ್ನಾಂಚಿತ ಕಾಂಚನಪಂಚದಳ ಪ್ರಾಸಾದಂ ಮನಃಪ್ರಸಾದ ಸಂಪಾದ ಕಾಂತಃಪುರ ಕಾಂತಾನಿವಾಸಭಾಸುರ ಪ್ರತ್ಯಂತಪರ್ವತಸಂವೃತಿರತ್ನರೋಚಿರ್ಜಳನಿರ್ಝರ ಪ್ರವಾಹದಿಂ ರೋಹಣಾಚಳಮನಿೞಿಸಿ ಮನಂಗೊಳಿಸೆ

ಮ || ಪುರಪೀತಾಂಬರನಾಭಿಮಂಡಲದವೋಲ್‌ಮಧ್ಯಪ್ರದೇಶಕ್ಕಳಂ
ಕರಣಂ ರಾಜಿತರಾಜಹಂಸನಿವಹಂ ಪ್ರೀತಿಪ್ರದಶ್ರೀಸುಮಂ
ದಿರಕಾಂತಾಸ್ಯಪಯೋಜಗಂಧಸಹಿತಂ ವಿಖ್ಯಾತವಾಣೀವಧೂ
ವರವಿಭ್ರಾಜಿ ವಿರಾಜಿಕುಂ ಸುಖಪದೋರ್ವಿಪಾಳಲೀಲಾಗೃಹಂ ೪೫

ವ || ಅಂತುಮಲ್ಲದೆ

ಮ.ಸ್ರ || ವಿನುತ ಶ್ರೀಭದ್ರಶಾಲಂ ವಿಚಕಿಳವಿಳಸತ್ಪಾಂಡುಕಂ ಶ್ರೀಲಸತ್ಸೌ
ಮನಸಂ ಸನ್ನಂದನಂ ಬಂಧುರಸುರಭಿಮಧೂಚ್ಚಾರಸಾರಪ್ರದೇಶಂ
ಘನಪುನ್ನಾಗಾನ್ವಿತಂ ಸತ್ಪಥನುತರುಚಿಮದ್ರಾಜಹಂಸಪ್ರಸೇವ್ಯಂ
ಕನಕಾದ್ರೀಂದ್ರಂಬೊಲಿಂಬಾಗೆಸೆವುದು ಮಣಿವಿಭ್ರಾಜಿತಂ ರಾಜಗೇಹಂ ೪೬

ಉ || ಮಂದರದಂತೆ ರಾಜಿಸುವ ರಾಜಗೃಹಾಂತರದೊಳ್‌ಜಿನಾರ್ಚನಾ
ನಂದವಿಳೋಕನಂ ವಿತರಣಪ್ರಭು ವಿಕ್ರಮಶಾಳಿ ಸಂದಸಂ
ಕ್ರಂದನನಿಂದ್ರಶಾಖ ಹರಿಯಿರ್ಪವೊಲೂರ್ಜಿತಶೌರ್ಯವಜ್ರವೀ
ರ್ಯಂ ದೊರೆವೆತ್ತು ರಂಜಿಸುತುಮಿರ್ಪನಿಳಾವಳಯಾಧಿನಾಯಕಂ ೪೭

ಮ || ಅತುಳಾನರ್ಘ್ಯಗುಣಪ್ರಸನ್ನವದನಂ ಸ್ವಚ್ಛಂ ಪ್ರತಾಪಾರ್ಜಿತೋ
ರ್ಜಿತತೇಜಂ ನಿರವದ್ಯವೃತ್ತನಬಳಾಹೃತ್ಕಾಂತರೂಪಂ ಸಮಾ
ಶ್ರೀತ ಸರ್ವೇಷ್ಟಫಳಪ್ರದಂ ಸಮುಚಿತಾಸ್ಥಾನಪ್ರದೀಪಂ ಜಗ
ನ್ನುತನಾ ನಾಯಕರತ್ನದಂತಿರೆಸೆವಂ ಸರ್ವೋರ್ವರಾನಾಯಕಂ ೪೮

ಕಂ || ಅಶ್ವಪುರವಲ್ಲಭಂ ಹರಿ
ದಶ್ವಪ್ರತಿಮಪ್ರತಾಪನಿಧಿ ವೈಭವನಾ
ಕೇಶ್ವರನಾಕ್ರಮಿಸಿದನೀ
ವಿಶ್ವಾವನಿಯಂ ಮನೋರಥಾಗ್ರಸಮಗ್ರಂ ೪೯

ಸಸ್ಯನಿಧಿ ನಿಖಳಧರೆಯಂ
ಯಶ್ಯಾಶ್ವಾಸ್ತಸ್ಯ ಮೇದಿನೀಯೆಂಬುದನ
ಬ್ಜಾಸ್ಯಂ ದಿಟಮೆನಿಸಲನಾ
ಲಸ್ಯನನೂನಾಶ್ವನಾಳ್ದನಶ್ವಪುರೇಶಂ ೫೦