ಆರ್ಯಪ್ರತೋಷಕರಚಾ
ತುರ್ಯಂ ದೃಢಧೈರ್ಯನಂಗನಾಮೋಹನಸೌಂ
ದರ್ಯಂ ವಚನೋಚಿತಮಾ
ಧುರ್ಯಂ ವಿಭು ವಜ್ರವೀರ್ಯನವನಿಪವರ್ಯಂ ೫೧

ವಿಜಿಗೀಷುವನಾ ನೃಪನಂ
ಸುಜನನನವಯವದೆ ಗೆಲ್ವ ಚೆಲ್ವಿಂ ಚದುರಿಂ
ವಿಜಯಾಂಗನೆಯಂಗಜನೃಪ
ವಿಜಯಾಂಗನೆಯಂದದಿಂದಮೇನೊಪ್ಪಿದಳೋ ೫೨

ಎನಸುಮದಿೞಿಕುಂ ಭ್ರೂ ಕ
ರ್ವಿನ ಬಿಲ್ಲಂ ಪಕ್ಷ್ಮಪಾಳಿ ತುಂಬಿಯ ತಿರುವಂ
ನೆನೆಯಿಸೆ ನಯನದ್ಯುತಿ ಪೂ
ವಿನ ಸರಮಂ ಮದನನೆಸೆಯನಾಕೆಯ ನೋಟಂ ೫೩

ಚಂ || ಮೊಗಮಲರ್ದಬ್ಜದಂತೆ ನಯನಂ ನಗುವುತ್ಪಳದಂತೆ ಮೂಗು ಸಂ
ಪಗೆಮುಗುಳಂತೆ ದಂತರುಚಿ ಮಲ್ಲಿಗೆಯಂತಧರಂ ಸಮಂತು ಬಂ
ದುಗೆಯಲರಂತಿರೊಪ್ಪೆ ಕುಸುಮಾಯುಧಚಕ್ರಿಗೆ ಪಂಚಬಾಣಮಂ
ಬಗೆಗೊಳುತೀವ ಕಳ್ಪಲತೆಯಂತೆ ಲತಾಂಗಿ ಕರಂ ವಿರಾಜಿಪಳ್‌೫೪

ಕಂ || ಜನನಾಥನ ವನಿತೆ ಜಗ
ಜ್ಜನಸಂಸ್ತುತೆಯಗ್ರಮಹಿಷಿಯೆನೆ ಪೆಸರ್ವಡೆದುಂ
ಮುನಿಜನ ಸನಾಭಿಜನ ಬುಧ
ಜನ ಪರಿಜನಕಾಮಧೇನುವೆನಿಪಳಿದಣಕಂ ೫೫

ವ || ಆ ವಿಜಯಾಂಗನೆಯುಂ ಜಯಾಂಗನೆಯುಮಾ ಮಹೀಭುಜನ ಭುಜ ಮಂಡಲಕ್ಕೆ ಮಂಡನಮೆನಿಸಿಯತನುಸಾಮ್ರಾಜ್ಯಸುಖಸಂಪತ್ತಿಯಂ ಪಡೆಯುತ್ತುಮಿರೆ ಪರಸ್ಪರ ಪ್ರಣಯರೋಹಣವೃತ್ತಿಯಿಂದನೇಕ ದಿವಸಂ ಕ್ಷಣಂಗಳಂಗಜಸುಖರಕ್ಷಣಂಗಳಾಗಿ ಪೋಗುತ್ತುಮಿರೆ ಕೆಲವು ದಿವಸದಿಂ

ಕಂ || ಪುಷ್ಪವತಿಯಾಗಿ ಚೇತಃ
ಪುಷ್ಪಲಿಹಕ್ಕೆ ಹರುಷಮಂ ಪುಟ್ಟಿಪುದುಂ ಪತಿ
ಪುಷ್ಪೇಷುಗೆ ಸಮ್ಮದಮಂ
ನಿಷ್ಪಾದಿಪುದುಂ ಲತಾಂಗಿಗನ್ವಿತಮಲ್ತೇ ೫೬

ವ || ಅಂತು ನಿಜಪತಿಮನೋರಥಫಳಪ್ರದಕಾಮಕಳ್ಪಲತೆಯಂತೆ ಪುಷ್ಪವತಿಯಾಗಿ ಚತುರ್ಥಸ್ನಪನಪವಿತ್ರಗಾತ್ರೆ ತೀರ್ಥಮೆನಿಸಿ ಬೆಳ್ವಸದನಂಗೊಂಡು

ಉ || ರಾಜಿತಮೌಕ್ತಿಕಾಭರಣಕಾಂತಿಯುಮಿಕ್ಷಣಕಾಂತಿಯು ದಿಶಾ
ರಾಜಿಯನಾವಗಂ ಬೆಳಗೆ ಚಾರುತನೂಭವಸೌಖ್ಯರೂಪೆಯಾ
ರಾಜನ ಸೂೞ್ಗೆ ರಾಗದೊದವಿಂ ಬರುತುಂ ಸ್ಮರಸಾರಸೌಖ್ಯಕೃ
ದ್ರಾಜನ ಸೂೞ್ಗೆವರ್ಪಸಮರೋಹಿಣಿಯಂತಿರೆ ಕಾಂತೆಯೊಪ್ಪಿದಳ್‌೫೭

ವ || ಆ ಸಮಯದೊಳ್‌

ಕಂ || ಕನಕಶಯನಗೃಹವಾತಾ
ಯನದಿಂದೊಗೆವಗುರುಧೂಮಧೂಮಾವಳಿ ಕಾಂ
ಚನಮಂಚರುಚಿರಮಣಿರುಚಿ
ಗೆನಸುಂ ತಲ್ಲಣಿಸಿ ತಳರ್ವ ಕೞ್ತಲೆಯನಿಕುಂ ೫೮

ಕಾಂಚನಮಂಚಮುದಯಗಿರಿ
ಯಂ ಚೆಲ್ವಿಂ ಪೋಲೆ ತಳ್ಪತಳಲಲಿತದುಕೂ
ಲಂ ಚಂದ್ರಿಕೆಯವೊಲಿರೆ ರಾ
ಜಂ ಚಾರುವಿಳಾಸರಾಜನೆನೆ ರಾಜಿಸಿದಂ ೫೯

ಬೆಳ್ವೆಳಗಂ ದೆಸೆದೆಸೆಗಮು
ಗುೞ್ವಲರ್ಗಣ್ಮಲರ ಸರಲ ತೆಱದಿಂ ಬಗೆಯಂ
ತಳ್ವಿಲ್ಲದುಗಿಯೆ ತೆಗೆದಂ
ತೋಳ್ವೊಣರಿದಿರ್ಗೊಳ್ವಿನಂ ಲತಾಂಗಿಯನರಸೆಂ ೬೦

ವ || ಅನಂತರಂ

ಮ. ಸ್ರ || ನೆರೆದಂ ಸ್ವೇದಾಂಬು ತೀರ್ಥೋದಕದಭಿಷವಮಂ ಮಾಡೆ ರೋಮಾಂಚದರ್ಭಾಂಕುರ ಲಾವಣ್ಯಾಂಬುಪೂರ್ಣಸ್ತನಕಳಶಧರಂ ಕಂಠನಾದೋಚ್ಚತೂರ್ಯೋ
ದ್ದುರರಾವಂ ಪೂಣ್ಮೆ ಕಾಂತಂ ವಿಷಮಶರಶಲಾಕಾಧಿಪಾಚಾರ್ಯನೆಂಬಂ
ತಿರೆ ಮೋಹಶ್ರೀಗೆ ತಾಂ ಕಣ್ದೆಱವಿಯನೊಸೆದಿತ್ತಂತೆ ಚೆಲ್ವಾಗೆ ಕಣ್ಗಳ್‌೬೧

ವ || ಅಂತಾ ರಂಭೋರು ನಿರ್ಭರಪ್ರಣಯಪರಿರಂಭಸಂಭವಾಭಾವಶಂಕಾವಹ ಕುಂಭಿ ಕುಂಭಾಭೋಗ ಭೋಗಸಾಗರಪಾರಗೆಯಾಗಿ

ಮ || ವಿಳಸತ್ಕೈರವನೇತ್ರೆ ಚಂದ್ರಮನನಂಭೋಜಾಸ್ಯೆ ಬಾಳಾರ್ಕಮಂ
ಡಳಮಂ ಕಲ್ಪಲತಾಂತಿ ಕಲ್ಪತರುವಂ ಗಂಭೀರೆಯಂಬೋಧಿಯಂ
ಕುಳಮಾನೋನ್ನತೆ ಮೇರುವಂ ಕಮಳಲೀಲಾಹಸ್ತೆ ಸಲ್ಲಕ್ಷ್ಮಿಯಂ
ಬೆಳಗಪ್ಪಾಗಳನೂನರಾಗೆದೊದವಿಂ ಕಂಡಳ್‌ಶುಭಸ್ವಪ್ನಮಂ ೬೨

ಕಂ || ತೇಜಶ್ಚಕ್ರಧರಂ ರಿಪು
ರಾಜೋಜೋಹಾರಿ ತನ್ನವೋಲುರ್ವಿವಿ
ಭ್ರಾಜಿತಕರನುದಯಿಸುವ ತ
ನೂಜಂ ನಿನಗೆಂದು ಪೇೞ್ವವೋಲಿನನೊಗೆದಂ ೬೩

ವ || ಆಗಳನೂನಾನುರಾಗಭರದಿಂ ಭುವನೇಶಭವನೋಪವನದ ವನರುಹವನದೊಳ್‌ನೆರೆವ ಚಕ್ರವಾಕಂಗಳ ಕಳರವಮುಂ ಚಕ್ರವಾಕಸ್ತನಿಯರೆನಿಪ ಗಾಯಿನಿಯರಿನಿದೆನಿಸುವ ಗೇಯರವಮುಂ ವಿಕಸಿತಸಿತಕಮಳಪರಿಮಳಮಗ್ನಮಧುಕರಝಂಕಾರಮುಂ ವ್ಯಾಪಾರ ಪರಿಚಕಿತಮಳಮುಖನಿಖಿಳಪರಿಚಾರಕೀ ಚಾರುತರಚರಣಮಣಿನೂಪುರ ಘನಜಘನಕಾಂ ಚಿದಾಮ ನಿಕಾಮ ಕೋಮಳ ಜಲತಾಕಳಿತ ಮಳಯ ಕಳಧೌತಕಂಕಣಝಂಕಾರಮುಂ ನವಪಲ್ಲವ ಕುಸುಮವಿಸರ ಶೋಭಾವಹ ಸಹಕಾರಕಳಿಕಾಸ್ವಾದ ವಿನೋದಲಂಪಟ ಕಳಕಂಠಪ್ರಣಾದಮುಂ ಕಳಕಂಠಪ್ರಾಭಾತಿಕಪಠನೀಯಪ್ರಚುರವಾಚಾಪ್ರಣಾದಮುಂ ಸುಖಪ್ರಬೋಧಮನೀಯೆ ಪುಳಿನತಳದಿನೆೞ್ಚತ್ತ ರಾಜಹಂಸಿಯಂತೆ ಶಯ್ಯಾತಳದಿನೆಱ್ಚತ್ತು ತ್ರಿಳೋಕಮುಖ್ಯ ಮಂಗಳ ಭವದರ್ಹತ್ಪರಮೇಶ್ವರಶ್ರೀಮುಖಾದರ್ಶನಹರ್ಷೋತ್ಕರ್ಷಪುಳಕಾಳಂಕಾರ ಕಮನೀಯಕಾಯೆ ವಿಮಳಮಣಿಮಯ ಮುಕುರಾವಳೋಕನಪ್ರಸಾದಿತ ಮಂಗಳ ಪ್ರಸಾಧನ ರಮನೀಯಪರಿವಾರರಮಣೀಪರಿವೃತೆ ನಿಜಮನೋರಮನ ಸಮೀಪಕ್ಕೆ ವಂದು ನಿಜಾಂಗ ಸಂಗಸಂಗತರೋಮಾಂಚದಿಂ ಸರ್ವಾಂಗಮನಳಂಕರಿಸಿ ತದರ್ಧಾಸನಮನಳಂಕರಿಸಿ ನಿಜಾದೃಷ್ಟದೃಷ್ಟಶುಭಸ್ವಪ್ನಂಗಳೆಲ್ಲಮಂ ನಿಜವಲ್ಲಂಭಂಗೆ ನಿವೇದಿಸುವುದುಮುದಿತ ಪ್ರಮೋದ ಹೃದಯಂ ತತ್ಫಳಂಗಳನಿಂತೆಂದು ವಿದಿತಂ ಮಾಡಿ

ಮ || ಪರಿಪೂರ್ಣೇಂದುವಿನಿಂದಖಂಡಧರಣೀನಾಥಂ ನಭಃಶೋಭಿಭಾ
ಸ್ಕರನಿಂ ಸತ್ಪಥವರ್ತಿ ಕಳ್ಪತರುವಿಂದಂ ನಂದನೋದ್ಭಾಸಿ ಸಾ
ಗರದಿಂದಂ ಮಹಿರಕ್ಷಣಕ್ಷಣಭುಜಂ ಶ್ರೀಕಾಂತೆಯಿಂದಂ ನರೇ
ಶ್ವರಪೂಜ್ಯಂ ಸುತನಾದಪಂ ನಿನಗೆ ಪಂಕೇಜಾತಪತ್ರೇಕ್ಷಣೇ ೬೪

ಕಂ || ಎನಲೊಡನೆ ಪುಳಕಗರ್ಭಂ
ತನು ಹೃದಯಂ ಹರ್ಷಗರ್ಭಮೀಕ್ಷಣಮಾನಂ
ದನಬಾಷ್ಪಗರ್ಭಮೆಸೆದಿರೆ
ಜನಪತಿಸತಿ ವಿನುತಗರ್ಭವತಿ ಸೊಗಯಿಸಿದಳ್‌೬೫

ವ || ಅನ್ನೆಗಮತ್ತಲ್‌

ಕಂ || ಅವಸಾನವಿರಸಮನಿತುಂ
ಭವಸುಖಮೆಂದಱಿಪುವಂದದಱುದಿಂಗಳೆ ತ
ದ್ದಿವಿಜಸ್ಥಿತಿಯೆನೆ ಬಾಡಿ
ರ್ದುವು ಸೂಡಿದ ಮಾಲೆ ಮಾಸಿತುಟ್ಟ ದುಕೂಲಂ ೬೬

ವ || ಆ ಸಮಯದೊಳ್‌

ಕಂ || ಚ್ಯುತಿಯಿಲ್ಲದ ತಾನಂ ನಿ
ರ್ವೃತಿಯೊಂದೆ ದಲುೞಿದ ತಾಣಮೆನಿತನಿತಱೊಳಂ
ಚ್ಯುತಿ ನಿಶ್ಚಯಮೆಂದಱಿದ
ಚ್ಯುತಸತ್ವಂ ಜೀವತತ್ವಮಂ ಭಾವಿಸಿದಂ ೬೭

ವ || ಅಂತು ಪರಿತ್ಯಕ್ತಶರೀರಭಾರನಾಗಿ ಅಚ್ಯುತಕಲ್ಪದಿಂದಚ್ಯುತೇಂದ್ರಂ ಬಂದು ವಿಜಯಾಂಗನಾಮಹಾದೇವಿಯ ಗರ್ಭದೊಳ್‌ನೆಲಸೆ ಗರ್ಭಮಂ ತಾಳ್ದಿ

ಚಂ || ಪ್ರಗುಣಚರಿತ್ರಗರ್ಭ ಜಿನಭಕ್ತಿಗೆ ಹೃದ್ಯನವಾರ್ಥಗರ್ಭ ಸೂ
ಕ್ತಿಗೆ ಜಯಗರ್ಭ ವಿಕ್ರಮವಿಭೂತಿಗೆ ಶಶ್ವದುದಾತ್ತಗರ್ಭಲ
ಕ್ಷ್ಮಿಗೆ ಬುಧಗರ್ಭ ತತ್ಸಭೆಗೆ ಭೂತಳ ಮೋಹನಗರ್ಭ ಮಂತ್ರಸಿ
ದ್ಧಿಗೆ ಪರಿಪೂರ್ಣಗರ್ಭವತಿಯೇಂ ಸಮನಾಗಿ ಮನಕ್ಕೆವಂದಳೋ ೬೮

ಕಂ || ಕರ್ಪು ಪಯೋಧರಮುಖದೊಳ್
ತೋರ್ಪೊಡೆ ನವರೋಮರಾಜಿ ನವಲೇಖೆಯೊಳಂ
ಕರ್ಪೆಸೆಗಾಸ್ಯೇಂದುವಿನೊಳ್‌
ತೋರ್ಪುದು ಚೆಲ್ವಿದುವೆ ವಿಸ್ಮಯಂ ನೃಪಸತಿಯಾ ೬೯

ಬಿಡೆ ಕೊರ್ವುವ ಮೊಲೆಯಿಂ ನಡು
ವುಡಿದಪುದತಿ ಭರದಿನೆಂದು ಬಡನಡುವದಱೊಳ್‌
ಕಡುಪುರುಡಿಂ ಬಳೆದಪುದೀ
ಗಡೆನೆ ಪೊದೆೞ್ದೆಸೆವುತಿರ್ಪುದಾಕೆಯ ಮಧ್ಯಂ ೭೦

ನತರ್ಗುನ್ನತಿಯಪಯಶಮು
ನ್ನತರ್ಗೀ ಸುತನಿಂದಮಕ್ಕುಮೆಂದಱಿಪುವವೋಲ್‌
ನತನಾಭಿಯೊಳುನ್ನತಿಯು
ದ್ಧತಕುಚಮುಖದಲ್ಲಿ ಕರ್ಪು ನೆಗೞ್ದುದು ಸತಿಯಾ ೭೧

ವ || ಅಂತಾ ಕಾಂತೆಗೆ ಗರ್ಭಚಿಹ್ನೆಂಗಳುಂ ತೋಱೆಯವಿಧೇಯಧರಾನಾಯಕರುಳ್ಳೞ್ಕಿ ಕಳಿಪಿದನೇಕ ರತ್ನೋಪಾಯನಮಂ ಗಾಯಕಸ್ತ್ರೀಯರ್ಗೆ ಬಾಯಿನಮಂ ಕುಡಲುಂ ಶರಣಾಗತಧರಣೀಕಾಂತಸೀಮಂತಿನೀ ಸಿಂಧೂರಸೀಮಂತರಜಃಪುಂಜದಿಂ ಪದಕಂಜಮಂ ರಂಜಿಸಲುಂ ಖಚರವಧೂಜನಪ್ರಧಾನನೆಯರ್‌ಮಾನಸಸೇವಾದತ್ತಾವಧಾನೆಯರ್‌ಕಳಹಂಸಯಾನೆ ಯರೆಂಬಾಖ್ಯಾನಮಂ ನನ್ನಿಮಾಡಿ ತನ್ನನಾಗಳುಮಗಲದೋಲಗಿಸೆ ಲೀಲೆಯೊಳಿರಲುಂ ಪರಿಮಳವಿಳಸದ್ರಮಣಿಯರ್‌ಸುಮನಃಸ್ತ್ರೀಯರೆಂಬುದಂ ಸುಮನೋವಿಭೂಷಣಮಂ ತನಗೆ ತುಡಿಸಿ ಪಡೆಯುತ್ತುಂ ಸುತ್ತಲುಮಿರೆ ಚೆಲ್ವುವೆತ್ತಿರಲುಂ ಬಯಸುವಳಂತುಮಲ್ಲದೆಯುಂ

ಚಂ || ವರಕರಿಯಾನಕಾಂತೆಯರ ನರ್ತನಮಿರ್ದವೊಲನ್ಯವನ್ಯ ಕುಂ
ಜರಕುಳಯಾನಮಂ ನಯದಿನೀಕ್ಷಿಸಲಂಬುಜನೇತ್ರೆ ಕಂಬುಕಂ
ಧರೆಯರ ಗೇಯನಾದಮಿರೆ ಕಂಬುನಿನಾದಮನಾಲಿಸಲ್‌ಮನೋ
ಹರಿ ಬಯಸುತ್ತುಮಿರ್ಪಳೆ ತನೂಭವವೈಭವಸೂಚಕಂಗಳಂ ೭೨

ಕಂ || ತರಳತರವಿಮಳಮುಕ್ತಾ
ಭರಣಂ ತನಗೆಸೆಯೆ ಖಡ್ಗದಳಿತಾಹಿತಕುಂ
ಜರಕುಂಭಗಳಿಂ ಮುಕ್ತಾ
ಭರಣಂಗಳನಬಳೆ ತಳೆಯಲೆಂದೆಸೆದಿರ್ಪಳ್‌೭೩

ವ || ಅಂತಾ ಕಾಂತೆಯ ಬಯಕೆ ತನ್ನ ಬಯಕೆಯಂ ಕೂಡಿ ರೂಢಿವಡೆಯೆ

ಮ || ವಿಳಸತ್ಪಂಕಜನೇತ್ರೆ ಸಚ್ಚರಿತೆ ದಾನೋದ್ಯುಕ್ತೆ ಸಾಧೂಕ್ತೆಯೆಂ
ಬುದಱಿಂದಂ ಪತಿ ಭವ್ಯರಾಜಿ ಪರಿವಾರಂ ಬಂಧುಗಳ್‌ಕೂಡಿ ಬೇ
ಡಿದ ಕಾಡೊಳ್ ಮೞೆಕೊಂಡುದೆಂಬ ತೆಱದಿಂ ಸಂತೋಷಮಂ ತಾಳ್ದೆ ತಾ
ಳ್ದಿದಳಂತಾ ಗುಣಗರ್ಭೆ ಗರ್ಭಮನಶೇಷೋರ್ವಿಶಚಕ್ರೇಶನಾ ೭೪

ಕಂ || ಕಾಂತೆಗೆ ಪುಂಸವನಂ ಸೀ
ಮಂತೋನ್ಮೀಳನಮೆನಿಪ್ಪ ಮಂಗಳವಿಧಿಯಂ
ಸಂತಸದಿಂದಖಿಳಮಹೀ
ಕಾಂತಂ ಮಾಡಿಸಿದನೊಸೆಯೆ ಬಾಂಧವನಿವಹಂ ೭೫

ವ || ಅಂತು ನವಮಾಸಂ ಸುರಭಿಮಾಸದಂತೆ ಮಾಕಂದನಂದನಸಂಪತ್ತಿಯುಮಂ ಧಾತ್ರೀಜನಸುಖಸಂಪತ್ತಿಯುಮಂ ಪಡೆಯುತ್ತುಂ ಪರಿಪೂರ್ಣಮಾಗೆ

ಮ || ಕುಲಹೇಮಾದ್ರಿಸುರದ್ರುಮಂ ಕುಲಧರಿತ್ರೀಭಾರಧಾತ್ರೀಧರಂ
ಕುಲವಾರಾಶಿಸುಧಾಕರಂ ಕುಲಮರುನ್ಮಾರ್ಗಸ್ಫುರದ್ಭಾಸ್ಕರಂ
ವಿಲಸದ್ದಾನನಿಧಾನನುನ್ನತಗುಣಂ ನೇತ್ರಪ್ರಿಯಾಕಾರನು
ಜ್ವಲತೇಜೋನಿಧಿ ಪುಟ್ಟಿದಂ ಪದನತೋರ್ವಿಚಕ್ರಚಕ್ರಾಧಿಪಂ ೭೬

ವ || ಆಗಳ್‌

ಕಂ || ರಸೆ ಗಗನಂ ದಿಶೆಯನಿತುಂ
ಜಸದವೊಲತಿವಿಶದಮಾದುವನಲಂ ತೇಜಃ
ಪ್ರಸರದವೊಲೆಸೆದುದಮಳನ
ಮಿಸುಗುವ ಸುಯ್ಯಂತೆ ಸುರಭಿಯೆನಿಸಿತ್ತನಿಲಂ ೭೭

ಪರಿದು ಕುಮಾರೋತ್ಸವಮಂ
ನಿರವಿಸಿ ರೋಮಾಂಚಕಂಚುಕಮನಿತ್ತವನೀ
ಶ್ವರನಂಗಚಿತ್ತಮಂ ಸಾ
ದರದಿಂ ದಯೆಗೆಯ್ಯೆ ವೃದ್ಧಕಂಚುಕಿ ಪಡೆದಂ ೭೮

ಪರಿಚಾರಕಿಯರುಮತ್ಯಾ
ದರದಿಂ ಪರಿವೆಡೆಯೊಳಮಳಮಣಿಕಂಕಣನೂ
ಪುರರಶನಾರವಮಂತಃ
ಪುರದೊಳ್‌ನೆಗೞ್ದತ್ತು ರಾಗಸಾಗರದುಲಿವೋಲ್‌೭೯

ಚಂ || ಲಲನೆಯರೞ್ಕಱಿಂ ತಳಿಯುತಿರ್ಪ ಲಸತ್ಕುಸುಮೋಪಹಾರಮು
ಜ್ವಳನಖಕಾಂತಿಯಂ ಪರಮವಂತಿರೆ ಸೂಸುವ ಸೌಸವಂ ಮನಂ
ಗೊಳಿಪಧರಾಂಶುವಂ ಕೆದಱುವಂತಿರೆ ನಿರ್ಮಿಸುತಿರ್ಪ ಮೌಕ್ತಿಕಂ
ಗಳ ಕಡೆಗಣ್ಣ ಕಾಂತಿಯನೆ ಬೀಱುವವೋಲಿರೆ ಲೀಲೆವೆತ್ತುದೋ ೮೦

ಕಂ || ಮನದೊಳ್‌ಗುಡಿಗಟ್ಟಿದುದಂ
ಮನೆಯೊಳ್‌ಗುಡಿಗಟ್ಟಿ ಕುಂಕುಮಾಂಬುಗಳಂ ನೆ
ಟ್ಟನೆ ತಳಿದಂಗಣದೊಳ್‌ಮನ
ದನುರಾಗಮನಱೆಪಿದತ್ತು ಪುರಜನಮನಿತುಂ ೮೧

ವಿಕ್ರಮಚಕ್ರದಿನಾಸೆಯ
ನಾಕ್ರಮಿಸುಗುಮೆಂದು ಪೇೞ್ವ ತೆಱದಿಂದಾಶಾ
ಚಕ್ರಮನಾತನ ಜನನದೊ
ಳಾಕ್ರಮಿಸಿದುದಖಿಳಮಂಗಳಾನಕನಿನದಂ ೮೨

ಮಂಗಳಪಾಠಕರವಮಂ
ಮಂಗಳಗಾಯಕನಿಕಾಯಗೇಯ್ವನಮಂ
ಮಂಗಳತೂರ್ಯಧ್ವನಿಯಂ
ಪೊಂಗಳ ದನಿ ಮಿಕ್ಕುದವನಿಪಂ ಕುಡುವೆಡೆಯೊಳ್‌೮೩

ನಿಧಿಪುರುಷಂ ಪುಟ್ಟುವುದುಂ
ನಿಧಿಗಂಡುದು ನಿಖಿಳಲೋಕಮೆನೆ ಜನನದೊಳ
ತ್ಯಧಿಕೋತ್ಸವದಿಂದ ಧನ
ರ್ಗಧನತೆ ತಲೆದೋಱದಂತು ಪಾರ್ಥಿವನಿತ್ತಂ ೮೪

ಮ || ನವರತ್ನಚ್ಛವಿ ಭೂಷಣಾವಳಿಗಳೊಳ್‌ಕಸ್ತೂರಿಕಾಚಂದನ
ದ್ರವಕಾಶ್ಮೀರಸಮಗ್ರಗಂಧಮನುಲೇಪವ್ರಾತದೊಳ್‌ಮಿಕ್ಕು ತೋ
ರ್ಪವನೀಪಾಳಕಮಂತ್ರಿವರ್ಗವಿಳಸತ್ಸಾಮಂತಸೀಮಂತಿನೀ
ನಿವಹಂ ಬಂದಿರೆ ಕಣ್ಗೆವಂದುದು ಧರಿತ್ರೀಕಾಂತನಂತಃಪುರಂ ೮೫

ವ || ಅಂತು ಶೋಭಿಸುವಂತಃಪುರದ ಮನೆಗೆ ಸಕಳಮಕುಟಬದ್ಧರುಂ ಬಾಂಧವರುಂ ಬೆರಸರಸಂ ಬಂದು ಜಾತಕರ್ಮೋತ್ಸವಮನುತ್ಸವದಿಂ ಮಾಡೆ ಮಱುದೆವಸಂ

ಕಂ || ಜಳಜಾನನೆ ಕುೞಿವುಗೆ ಕ
ಣ್ಗೊಳಿಸುವ ಖೇಡಕುೞಿವೊಕ್ಕಳೆಂಬಂತೆವೊಲು
ಚ್ಚಳಿಸುವನುರಾಗರಸದೋ
ಕುಸಿಯಾಡಿದುದಾಗಳಖಿಳಬಾಂಧವನಿವಹಂ ೮೬

ಅತಿಚಿತ್ರಂ ಕುೞಿವೊಕ್ಕುಂ
ಕ್ಷಿತಿಪಾಳಕನಗ್ರಮಹಿಷಿ ಮಹಿತಳದೊಳಗು
ನ್ನತಿಯಂ ತಳೆದಳೆನುತ್ತಂ
ಚತುರಜನಂ ಸ್ತುತಿಯಿಸಿತ್ತು ತನತನಗಾಗಳ್‌೮೭

ವನಿತೆಯರ್ಗೆ ಬೀಱಿದರ್‌ತೆಂ
ಗಿನ ಹೋೞಂ ಬೀಱುವಂತೆ ಕಪ್ಪುರವಳಿಕಂ
ತನತನಗೆ ಪಚ್ಚೆಗಪ್ಪುರ
ಮನೆ ಜಳಜಾನನೆಯರಕ್ಕಿಯಂ ಬೀಱುವವೋಲ್‌೮೮

ವಸುಧೇಶಂಗಂ ಬಾಂಧವ
ವಿಸರಕ್ಕಂ ಪರಿಜನಕ್ಕಮೆಯ್ದೆ ಕುಮಾರ
ಪ್ರಸವಂ ಸುಖಫಳಮಂ ಪು
ಟ್ಟಿಸುವುದು ಕರಮುಚಿತಮೆನಿಸಿ ಜನಿಯಿಸಿತೆನಸುಂ ೮೯

ಎಡೆಗಿಱಿದೆಲ್ಲೆಡೆಗಳೊಳಂ
ಗುಡಿ ನಾನಾರತ್ನತೋರಣಾವಳಿ ಚೆಲ್ವಂ
ಕುಡೆ ಬೇೞ್ಪಿರ್ಗಭಿಮತಮಂ
ಕುಡೆ ಜನಪತಿ ಸೊಗಯಿಸಿತ್ತು ಜನನೋತ್ಸಾಹಂ ೯೦

ದಶಮದಿನದಂದು ವಿಭು ದಶ
ದಿಶೆಯಂ ಯಶದಂತೆ ತೀವೆ ತೂರ್ಯಧ್ವನಿ ವ
ಜ್ರಶರೀರನೆಂಬುದರ್ಕಸ
ದೃಶವಿಭವಂ ವಜ್ರನಾಭಿನಾಮಮನಿಟ್ಟಂ ೯೧

ವ || ಅಂತು ಪೆಸರ್ವಡೆದಾ ಕುಮಾರಂ ಸುಕುಮಾರಶರೀರನುಮಾರಕ್ತ ಚಾರು ಚರಣಕರತಳಾಧರಪಲ್ಲವನುಂ ಬಂಧುಜನನಯನಕುಮುದಸೌಂದರ್ಯ ಸಿಂಧುವುಮೆನಿಸಿ ಬಳೆಯುತ್ತುಂ

ಸ್ಖಳನಂ ಪದದೊಳ್‌ನೆಗೞ್ವಿನ
ಮಿಳಾಮನೋಹರಿಯನಡಿಗಡಿಗೆ ಪಿಡಿದಪ್ಪ
ಲ್ಕೆಳಸಿದವೋಲಖಿಳಮಹೀ
ತಳಪತಿ ತನುಸಂಭವಂ ತಳರ್ನಡೆ ನಡೆದಂ ೯೨

ಪೊಡೆ ಸೇಡುಗೊಂಡು ತನ್ನಯ
ಪಡೆವುರವಣಿಗಗಿದೆಸೆವ ತೊದಳ್ನುಡಿ ಪೊಚೞ್ದಾ
ನುಡಿ ಬಾಳನ ರಂಜಿಪ ತಳ
ರ್ನಡೆ ಪದಮೊಸೆಯಿಸಿತು ತಾಯುಮಂ ತಂದೆಯುಮಂ ೯೩

ನೆಗೞ್ದಹಿತಮಹಿಪರೊಡನೇ
ೞಗಮಂ ಬಂದೇಱಿ ತನ್ನ ಕೀರ್ತ್ಯಂಗನೆಯೇ
ೞಗಮನೊಸೆದೇಱಿ ಮಿಗೆ ಬಂ
ಧುಗಳುಮನಾ ತಂದೆಯೊಡನೆ ಪೊರೆಯೇಱಿಸಿದಂ ೯೪

ವದನಾಬ್ಜದೊಡನೆ ಮಾಣಿಕ
ದೊದವುಳ್ಳರಳೆಲೆಯ ಹುಲಿಯುಗುರ ಕೆಂಜೆಡೆಯ
ಗ್ಗದ ಕಾಂತಿಯ ತಿಂತಿಣಿ ಕೆಂ
ಗದಿರಂತಿರೆ ಬಾಳರವಿಯ ಪೋಲ್ತಂ ಬಾಳಂ ೯೫

ಶೈಶವಕೇಳಿ ಮನಕ್ಕಮೃ
ತಾಶನಸೇವನೆವೊಲೀಯೆ ಸುಖಮಂ ಶಿಶುಗು
ರ್ವಿಶಂ ಮಾಡಿದನನ್ನ
ಪ್ರಾಶನ ಚೌಲೋಪನಯನವಿಧಿಯಂ ಕ್ರಮದಿಂ ೯೬

ವ || ಮತ್ತಮಯ್ದನೆಯ ವರ್ಷಮೆಯ್ದುವನಿತರ್ಕೆ ಶುಭಮುಹೂರ್ತದೊಳ್‌ರೂಢರಾಜವಿದ್ಯಾಪ್ರೌಢಚಾರ್ಯವರ್ಯರಂ ಶಬ್ದಶಾಸ್ತ್ರಾದ್ಯರ್ಥಶಾಸ್ತ್ರಂಗಳುಮಂ ಮುಕ್ತಾಮುಕ್ತ ಮುಕ್ತಕರ ಮುಕ್ತಯಂತ್ರ ಮುಕ್ತಮಂತ್ರ ಮುಕ್ತಪ್ರಭೇದ ವಿವಿಧ ಶಸ್ತ್ರವಿದ್ಯೆಗಳುಮಂ ಸೂಕರಾಶ್ವವ್ಯಾಳ ಶುಂಡಾಳಶಿಕ್ಷಣಾಕ್ಷೂಣರೂಢವಿದ್ಯೆಗಳುಮಂ ಶಿಕ್ಷಿಸುವಂತು ನಿಯೋಜಿಸೆ

ಕಂ || ಒಂದುಕೊಡದಮೃತಮಂ ಮ
ತ್ತೊಂದುಕೊಡದೊಳೆಱೆವ ಮಾೞ್ಕೆಯಾಯ್ತೆನೆ ವಿಬುಧರ್‌
ಸಂದೇಹಸ್ಥಿತಿಯಿಂ ಕ
ಲ್ತಂ ದುರ್ಗಮಶಾಸ್ತ್ರಮೆಲ್ಲಮಂ ಗುರುಮುಖದಿಂ ೯೭

ವಿಶದಪ್ರಜ್ಞಂಗೆ ಚತು
ರ್ದಶವಿದ್ಯಾರತ್ನಮೆಯ್ದೆ ಸಮನಿಸಿತು ಚತು
ರ್ದಶರತ್ನಮುಮಿ ತೆಱದಸ
ದೃಶವಿಭವಂಗಕ್ಕುಮೆಂಬುದಂ ಸೂಚಿಪವೋಲ್‌೯೮

ಚತುರಾಸ್ಯನತುಳಮತಿಯಿಂ
ವಿತತ ಚತುಃಷಷ್ಟಿಕಳೆಯನವಯವದಿಂದ
ನ್ವಿತಮೆನಿಸೆ ಕಲ್ತು ನೆಗೞ್ದಂ
ಚತುರ್ಗುಣಂ ಸಕಳರಾಜನೀತಿಯೊಳಾತಂ ೯೯

ಚಂಡಿಕೆ ಭೃಗು ಬೇತಾಳಂ
ಚಂಡತೆಯಿಂ ಕೆಯ್ದುವಿಡಿದು ನಿಂದಾಂತೊಡೆ ಮಾ
ರ್ಕೊಂಡು ಗೆಲಲ್ನೆಱೆವೆಡೆಗೆಡೆ
ಗಂಡಿಕೆಯಾಚಾರ್ಯನೆನಿಸಿದಂ ಬಿನ್ನಣದಿಂ ೧೦೦

ತನುಶಸ್ತ್ರಕ್ರಮದಿಂ ಬ
ಲ್ಪೆನಿಪ್ಪ ಮನಮರ್ಥಶಾಸ್ತ್ರನಿಯತಶ್ರಮದಿಂ
ದನುಪಮವಿವೇಕದಿಂ ನೆ
ಟ್ಟನೆ ತಾಳ್ದಿರೆ ಶಸ್ತ್ರಶಾಸ್ತ್ರ ಪರಿಣತನಾದಂ ೧೦೧

ಚಂ || ಪ್ರವಿಮಳವಿದ್ಯೆ ಮೂರ್ತಿ ತನಗೆಂಬರಮಾತನೆ ನನ್ನಿಮಾಡುವಂ
ತವಯವವೃದ್ಧಿಯೊಳ್‌ಬಳೆಯೆ ವಿದ್ಯೆಗಳುಂ ಶಶಿಯಂದದಿಂ ಶೈ
ಶವದಿನಗಳ್ದು ಷೋಡಶಕಳಾಪರಿಪೂರ್ಣತೆಯಂ ಕುಮಾರನೆ
ಯ್ದುವುದುಮಶೇಷಕಾಂತೆಯರ್ಗೆ ಸಜ್ಜನಸಂತತಿಗಾಯ್ತು ಸಂತಸಂ ೧೦೨

ಸುದತಿಯರಿಗೆ ತೋಷಂ ರಿಪು
ಹೃದಯಕ್ಕೆ ಭಯಂ ಧನಾರ್ಥಿಗತ್ಯುತ್ಸವಮೊ
ರ್ಮೊದಲೆ ಬಳೆವಂತು ಬಳೆದಂ
ಮದನಾಭಂ ವಜ್ರನಾಭಿಯಪಗತಲೋಭಂ ೧೦೩

ಮ || ಲಲಿತಾಸ್ಯಂ ಶಶಿಯಂ ಪಳಂಚಲೆವ ಚೆಲ್ವಂ ತಾಳ್ದಿತೀ ರಾಜಮಂ
ಡಳಮಂ ಭೂಪತಿ ಧಿಕ್ಕರಿಪ್ಪೆಸಕಮಂ ಪೇೞ್ವಂತೆ ಹಸ್ತಂ ದಿಶಾ
ಖಿಳಶುಂಡಾಳಕರಕ್ಕೆ ಮಚ್ಚರಿಸಿ ನೀಳ್ಪಂ ತಾಳ್ದಿತೀ ವಿಶ್ವಭೂ
ತಳಮಂ ತಾನಸಹಾಯವೃತ್ತಿಯೊಳೆ ತಾಳ್ದಿಪೇೞ್ಗೆಯಂ ಪೇೞ್ವವೋಲ್‌೧೦೪

ಕಂ || ವಾರವಧೂಮದಹಾರಕು
ಮಾರನ ಸುಕುಮಾರಬಾಹುದಂಡಂ ಮಕರಾ
ಧಾರಕರತಳಪತಾಕಂ
ಮಾರನ ವಿಜಯಧ್ವಜೋರುದಂಡಮೆನಿಕ್ಕುಂ ೧೦೫

ಶ್ರೀರಮಣಿಯ ಸುರುಚಿರಕಾ
ಶ್ಮೀರಾರುಣಕಠಿನಕುಚದ ಸಂಸ್ಪರ್ಶನದಿಂ
ದಾರಕ್ತತೆ ಕಠಿನತೆ ವಿ
ಸ್ತಾರಿಸಿತೆನೆ ನೃಪಕುಮಾರ ಕರತಳಮೆಸೆಗುಂ ೧೦೬

ಅಸದಳಮೆನಿಸುವ ತೇಜಃ
ಪ್ರಸರಮನುಜ್ವಳಿಪ ಕೀರ್ತಿಯಂ ಲೋಕದೊಳೀ
ಕ್ಷಿಸೆ ಪಸರಿಪುದಂ ಕುವರನ
ಕಿಸುಸೆರೆವರೆದಿರ್ದ ಲೋಚನಂ ಸೂಚಿಸುಗುಂ ೧೦೭

ಧರಣೀಚಕ್ರಂ ಪದಪಂ
ಕರುಹಮನೀ ತೆಱದಿನಗಲದೋಲಗಿಸುವುದಂ
ನಿರವಿಸುತಿರ್ದುದು ನೃಪಸುತ
ಚರಣಾಂಬುಜಚಾರುಚಕ್ರಚಿಹ್ನವಿಳಾಸಂ ೧೦೮

ಲಲನಾಸಹಸ್ರಕುಚಮಂ
ಡಳಕುಳಮಂ ಸಕಳಸಾರ್ವಭೌಮಶ್ರೀಯಂ
ತಳೆವ ನೃಪಾಲನ ವಕ್ಷ
ಸ್ಥಳದ ವಿಶಾಲತೆಯನಾವವಂ ನೇಱೆ ಪೊಗೞ್ವಂ ೧೦೯

ವ || ಅಂತು ಸಂಸಾರಸುಖಾನುಭವನಜೀವನಮಾದ ಯೌವನಂ ಬಳೆಯೆ ಬಳೆದ ನಿಜಕುಮಾರನಕ್ಷೂಣ ವಿಜಯಲಕ್ಷ್ಮೀವಿಳಾಸವಿಹರಣೋಚಿತ ವಿಶಾಳ ಕೇಳೀಶೈಳಮೆನಿಪ ದಕ್ಷಿಣಭುಜಾದಂಡಮಂ ಕಂಡು ಪಲದೆವಸಕ್ಕಂ ನಿನ್ನನೆನ್ನ ತೋಳ್ವಲಕ್ಕೆ ನೆರವಂ ಪಡೆದನೆಂಬ ಸಂತೋಷದಿಂ ತಿಂತಿಣಿಯನಾಂತು ವಜ್ರವೀರ್ಯಂ ಸಮಸ್ತ ಸಾಮಂತಮಂತ್ರಿಮಂಡಲಮಂ ಬರಿಸಿ

ಮ || ವಿವಿಧಾತೋದ್ಯನಿನಾದಮಾವರಿಸೆ ಧಾತ್ರೀವ್ಯೋಮದಿಗ್ಫಾಗಮಂ
ನವಮಾಣಿಕ್ಯಮಣಿಪ್ರತಾನಸುವಿತಾನೋದಂಶು ಮಧ್ಯಾಹ್ನಭಾ
ನುವ ಬಿಂಬಕ್ಕುದಯಾರ್ಕಬಿಂಬತೆಯ ಚೆಲ್ವಂ ಬೀಱೆ ಕೊಟ್ಟಂ ಮಹೀ
ಶವರಂ ತನ್ನ ಸುತಂಗೆ ಚಾರುಯುವರಾಜ್ಯಪ್ರಾಜ್ಯಸಂಪತ್ತಿಯಂ ೧೧೦

ವ || ಅಂತು ವಜ್ರನಾಭಿಯುವರಾಜಂ ನೃಪಸಮಾಜಮಂ ನಿಜಾಜ್ಞಾವಿಧೇಯತೆಗೆ ಸಲಿಸಿ ತಾನುಂ ತನ್ನ ತಂದೆಯಾಜ್ಞೆಯೆಂಬ ವಜ್ರಪ್ರಾಕಾರಾಂಕಮಾಳದೊಳ್‌ಸುಖದಿನಿರೆಯಿರೆ

ಉ || ಅಂತು ನಿರಂತರೋಪಚಯದಿಂ ತನು ಯೌವನಮಂ ಲಸತ್ಕಳಾ
ಸಂತತಿ ಭಾವಕತ್ವಮನುದಾರಮುದಾರಯಶೋವಿಳಾಸಮಂ
ಸಂತತಮಿಂತಳಂಕರಿಸೆ ವಿಕ್ರಮಲಕ್ಷ್ಮಿಗೆ ಚಕ್ರರತ್ನಮೋ
ರಂತನುಕೂಲಮಾಗೊಗೆದುದಾಯುಧಶಾಲೆಯೊಳಾ ನೃಪಾಲನಾ ೧೧೧

ವ || ಅಂತು ಚಕ್ರರತ್ನಂ ತನ್ನಗಣ್ಯ ಪುಣ್ಯೋದಯಮಂ ನೆಲಕ್ಕೆ ಜಲಕ್ಕನಱಿಪುತ್ತ ಮುದಯಂಗೆಯ್ವುದುಮದನಾಯುಧಾಗಾರ ನಿಯೋಗಿ ಬಂದು ಬಿನ್ನವಿಸೆ ಪ್ರಸನ್ನವದನಾರ ವಿಂದನಾಗಿ ಕುಮಾರನ ಮೊಗಮಂ ನೋಡಿ

ಮ. ಸ್ರ || ನಿನಗೇಕಚ್ಛತ್ರಮಾಯ್ತುರ್ವರೆ ಜಿನಪದರಾಜೀವಸೇವಾಸುರೇಂದ್ರಾ
ವನಿಜಂ ಪ್ರಾಗ್ಜನ್ಮಸಂವರ್ಧಿತಮದು ಸಫಳಂ ನೋೞ್ಪೊಡಿಂದಾದುದಿನ್ನುಂ
ತನುಜಾತ ಪ್ರೀತಿಯಿಂ ಪೆರ್ಚಿಪುದದನೆ ಜಗನ್ಮಂಗಳಂ ಮುಖ್ಯಮಲ್ಲಿ
ನ್ನೆನಸುಂ ಬೇಱುಂಟೆ ಪೇೞೆಂದೆನೆ ಗುರು ಮನದೊಳ್‌ಕೂರ್ತು ಕೆಯ್ಕೊಂಡನಾಗಳ್‌೧೧೨

ವ || ಅಂತು ನಿಜಗುರೂಪದೇಶಂ ಸಹಕಾರಭೂರುಹಕ್ಕೆ ಮಧುಸಮಯಪವನ ಸಂಶ್ಪರ್ಶದಂತುತ್ಸುಕಕಳಿಕಾವಿಶೇಷಮಂ ಪಡೆಯೆ ಚಕ್ರವರ್ತಿನಿರ್ವರ್ತಿತಮಪ್ಪ ಮಹಾಮಹಿಮೆಗಳಂ ಸಮಸ್ತ ಚೈತ್ಯಾಲಯಂಗಳೊಳ್‌ನಿರ್ವರ್ತಿಸಿ

ಕಂ || ಉದ್ಧತರಾಜ್ಯಾಕರ್ಷಣ
ಸಿದ್ಧಿಗೆ ನಿರ್ಮಳಯಶೋವಶೀಕರಣಕ್ಕಾ
ಯುದ್ಧಾರ್ಥಿ ಮಾರಣಕ್ಕೆಂ
ದುದ್ಧರಿಸಿದ ಸಿದ್ಧಚಕ್ರದಂತಿರೆ ಚಕ್ರಂ ೧೧೩

ಮ. ಸ್ರ || ಅವಿಧೇಯೋಚ್ಚಾವಲೇಪಾಪ್ರತಿಮತಿಮಿರವಿಚ್ಛೇದಕಾಚ್ಛಾಂಶುಚಕ್ರ
ಕ್ಕವತಂಸಂ ಲೋಕಪಾಳರ್ಗೆನಿಸೆ ವಿವಿಧಮಾಂಗಲ್ಯತೂರ್ಯಪ್ರಣಾದಂ
ಧವಳಾಬ್ಜವ್ರಾತದಿಂದರ್ಚಿಸಿ ರುಚಿರುಚಿತಾನರ್ಘ್ಯರತ್ನಂಗಳಿಂದಂ
ರವಿಗೀವಂತರ್ಘ್ಯಮಿತ್ತಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೧೧೪

ಗದ್ಯ

ಇಂದು ವಿದಿತ ವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್‌ವಜ್ರನಾಮಾಭಿರಾಮ ಚಕ್ರಧರ ಚಕ್ರಾಭ್ಯುದಯವರ್ಣನಂ ಸಪ್ತಮಾಶ್ವಾಸಂ