ಕಂ || ಶ್ರೀಚಕ್ರರತ್ನಮಂ ಬಾ
ಹಾಚಳ ಬಾಳಾರ್ಕವಿಭವಮಂ ಪೂಜಿಸಿ ಧಾ
ತ್ರೀಚಂದನರಸಶೀತಳ
ವಾಚಂ ಸಂತಸಮನಾಂತು ಕವಿಕುಲತಿಳಕಂ ೧

ವ || ಅಂತು ಸಂತಸಮನಾಂತಿರೆ

ಕಂ || ಜನಿಯಿಸೆ ಸುದರ್ಶನಂ ಸಂ
ಜನಿಯಿಕುಮಖಿಳೇಪ್ಸಿತಾರ್ಥಮೆಂದಱಿಪುವವೋಲ್‌
ಜನಿಯಿಸಿದುವು ಚಕ್ರಧರಂ
ಗನಿತುಂ ಮೇಲಾದ ರತ್ನನಿವಹಂ ಕ್ರಮದಿಂ ೨

ಮಣಿ ವರಚಿಂತಾಮಣಿ ಕಾ
ಕಿಣಿ ಚಿಂತಾಜನನಿ ಚರ್ಮರತ್ನಂ ಜಳರ
ಕ್ಷಣಕಾರಣ ವಜ್ರಮಯಂ
ರಣರತಮದಭೇದಚಂಡವೇಗಂ ದಂಡಂ ೩

ಅಸಿ ಸೌನಂದಕಮಂಗನೆ
ಬಿಸಜಾಕ್ಷಿ ಸುಭದ್ರೆ ಭದ್ರಮುಖನಖಿಳಕಳಾ
ವಸತಂ ತಕ್ಷಕರತ್ನಂ
ಪ್ರಸನ್ನಮತಿ ಕಾಮವೃಷ್ಟಿ ಗೃಹಪತಿರತ್ನಂ ೪

ಗಜರತ್ನಂ ತುಂಗತೆಯಿಂ
ನಿಜಮಸ್ತಕವರ್ತಿಗಳ್ಗೆ ಖೇಚರಪದಮಂ
ಸೃಜಯಿಸುವುದಱಿಂ ತನಗದು
ವಿಜಯಾಚಳಮೆಂಬ ನಾಮಮನ್ವಿತಮೆನಿಕುಂ ೫

ಹಯರತ್ನಂ ಪವನಂಜಯ
ಮಯೋಧ್ಯನಾಮಂ ಚಮೂಪ ರತ್ನಂ ನಯಸಂ
ಚಯಬುದ್ಧಿಸಾಗರಂ ಸ
ತ್ಕ್ರಿಯಾವಿಧಂ ಪತಿಹಿತಂ ಪುರೋಹಿತರತ್ನಂ ೬

ಛತ್ರಂ ಸೂರ್ಯಪ್ರಭಮತಿ
ಚಿತ್ರಮನೊದವಿಸುಗುಮಖಿಳ ಕುವಳಯವಿಳಸ
ನ್ನೇತ್ರಾನಂದಕರಂ ಸುಚ
ರಿತ್ರೋರ್ಜಿತರಾಜನುದಯದೊಳ್‌ರಾಜಿಸುಗುಂ ೭

ವೃತ್ತಘನಸ್ತನೆಯರ್‌ತೊಂ
ಭತ್ತಱುಸಾಸಿರಮದಿರ್ದೊಡಂ ಸ್ತ್ರೀರತ್ನಂ
ಚಿತ್ತಜಸುಖಮಂ ಚಕ್ರಿಗೆ
ಬಿತ್ತರಿಕುಂ ಶಶಿವೊಲುಡುಶತಂ ನೆರೆದಿರೆಯುಂ ೮

ಆ ರಾಜನ ತೇಜೋವಿ
ಸ್ತಾರೆಂ ತಾನೆನಿಪ ಚಕ್ರಧಾರೆ ತೊಡರ್ದಂ
ದಾರಂ ಪರಿಭವಿಸದೊ ಕದ
ನಾರಂಭಕರೆನಿಪ ವೈರಿಭೂಪಾಳಕರಂ ೯

ವ || ಅಂತನ್ವರ್ಥನಾಮಮಂ ಪೆತ್ತುದಯಿಸಿದ ಚಕ್ರರತ್ನಂ ಮೊದಲಾದ ಚತುರ್ದಶ ಜೀವಾಜೀವರತ್ನಂಗಳಂ ಯಥಾಕ್ರಮದಿಂ ನೃಪಚೂಡಾರತ್ನಂ ಪೂಜಿಸಿ ರಾಜಲೀಲೆಯಿಂ ವಿರಾಜಿಸುತ್ತುಮಿರೆ ನಿಜದಿಗ್ವಿಜಯಪ್ರಯಾಣಶ್ರೀಯನನುಕರಿಸಿ

ಮ || ನಿರುತಂ ಸೋಗೆಯ ಸೋಗೆ ಸೀಗುರಿಯವೋಲ್‌ಚೆಲ್ವಪ್ಪಿನಂ ಮೇಘಡಂ
ಬರಮಿಂಬಾಗಿರೆ ಮುಂದೆ ವಾಹಿನಿ ಪೊದೞ್ದೊಪ್ಪಿರ್ಪಿನಂ ಖೞ್ಗದಂ
ತಿರೆ ಮಿಂಚುೞ್ಕಿಸೆ ಮಿಂಚಿ ತೀವ್ರಕರರಾಜುಸ್ಫುರತ್ತೇಜದೆ
ೞ್ತರಮಂ ಭಂಗಿಸಿ ಪೆಂಪುವೆತ್ತನಿಳೆಯೊಳ್‌ಕಾರೆಂಬ ಭೂಪಾಳಕಂ ೧೦

ವ || ಅಂತುಮಲ್ಲದೆ

ಮ || ಸಸಿ ಜಾಗಂ ಕುಡುಮಿಂಚು ಸೊನ್ನಲಿಗೆ ಚಿತ್ರಾಭ್ರಾಳಿ ಭೃಂಗಾರಮಾ
ಗಸಮುತ್ಸಾಹಮಯೂರನಾಟ್ಯನಟನಪ್ರಾರಂಭಮೇಘಸ್ವನಂ
ನಿಸದಂ ಮಂಗಳತೂರ್ಯಮಾಗೆ ಸುರಚಾಪಂ ಬಾಸಿಗಂಬೋಲ್‌ವಿರಾ
ಜಿಸೆ ಕಾರ್ಗಾಲಮಿಳಾ ವಧೂವರನ ಪೋಲ್ತೇಂ ಲೀಲೆಯಂ ತಾಳ್ದಿತೋ ೧೧

ಕಂ || ಚಾದಗೆಯುತ್ಕಂಠತೆಗೊಳ
ಗಾದುದು ವಿರಹಿಗಳ ತೆಱದೆ ಕಡವಲರ್ದುದು ನೃ
ತ್ಯಾದರಶಿಖಿಹೃದಯದವೋ
ಲೂದೆ ಜನಾಹ್ಲಾದಕಾರಿ ಪಶ್ಚಿಮಪವನಂ ೧೨

ಚಂ || ಅತಿಶಯಸಿಂಹಪೀಠ ಚಮರೀಚಮರೀಜವಿಭಾಸಿ ಭೂಮಿಭೃ
ತ್ಪತಿಗೆ ನಿದಾಘಸಂಜನಿತಘರ್ಮಮನಾಱಿಪ ಮಜ್ಜನಾಂಬುಸಂ
ಭೃತನವನೀಳರತ್ನ ಕಳಶಂಗಳಿವೆಂಬಿನಮುನ್ನತಾಭ್ರಸಂ
ಗತಿ ಬಳಸಿರ್ದು ಕಣ್ಗೊಳಿಸುತಿರ್ದುವು ಶೈಲವಿಶಾಳವಪ್ರದೊಳ್‌೧೩

ಮ || ಪಗಲರ್ಕಂ ವಿಧು ರಾತ್ರಿಯೊಳ್‌ನಿಜಕರವ್ರಾತಂಗಳಿಂ ತಮ್ಮನಾ
ವಗಮೆೞ್ಬಟ್ಟಿದರೆಂದು ನೊಂದು ಮುಳಿಸಿಂದಾಯಿರ್ವರಂ ಗೆಲ್ವ ಬ
ಲ್ವಗೆಯಿಂ ತೀವ್ರತಮಂಗಳಂಬುದಸಮಗ್ರಾಕಾರಮಂ ಪೆತ್ತವೋಲ್‌
ಮುಗಿಲಂ ಕಾರ್ಮುಗಿಲೇೞ್ಗೆ ಪರ್ವಿದುವಗುರ್ವಿಂ ಕೊರ್ವಿ ಕಾರ್ಗಾಲದೊಳ್‌೧೪

ಕಂ || ಪ್ರಿಯಮೆನಿಪ ಮೇಘವೆೞ್ತರೆ
ನಯನಯುಗಂ ನೇಱೆಯದೆಂದು ನೋಡಲ್‌ಪಲವುಂ
ನಯನಂಗಳನಾಂತಂತಿರೆ
ಮಯೂರಿ ನಲಿದತ್ತು ಕೆದಱಿ ಕಣ್ಪೀಲಿಗಳಂ ೧೫

ಮ || ಸುರಚಾಪಂ ಸ್ಮರಚಾಪಮೂರ್ಜಿತ ಶರಾಸಾರಂ ಶರಾಸಾರಮ
ಭ್ರರವಂ ಜ್ಯಾರವಮೆಯ್ದೆ ಸಂಚಳಿಪ ಮಿಂಚುಗ್ರಾಸಿ ದಂಭೋಳಿ ಭಾ
ಸುರತೇಜಂ ಶಿಖಿನರ್ತನಂ ಝಷಪತಾಕಾನರ್ತನಂ ತನ್ನೊಳಾ
ಗಿರೆ ಕಾಮಿಪ್ರಕರಂ ಕರಂ ಬೆದಱಿದತ್ತಭ್ರಾಗಮೋದ್ಯೋಗದೊಳ್‌೧೬

ಪರಿಗೊಂಡತ್ತು ಕಲಂಕುತುಂ ಕುಱುವಮಂ ಪೂೞ್ದತ್ತು ತೀರಕ್ಕೆ ತಾಂ
ಸರಿಯಾಗುತ್ತೆರಡುಂ ತಟಂಗಳನೆ ಮಿಱುತ್ತಂಬಿಗರ್‌ನಾವೆಯಂ
ಭರದಿಂದಿಕ್ಕದ ಮಾೞ್ಕೆಯಾಯ್ತು ನದಿಯೆಂದೆಂಬನ್ನೆಗಂ ಧಾತ್ರಿ ಭೋ
ರ್ಗರೆದೆತ್ತಂ ಕಱೆದತ್ತು ಕಾರಮೞೆ ಝಂಝಾಮಾರುತಪ್ರೇರಿತಂ ೧೭

ಕಂ || ಜಡಹೃದಯರನಾಶ್ರಯಿಸಿ
ರ್ದೊಡೆ ಮೂಳೋಚ್ಛಿತ್ತಿಯಮ್ಪದೆಂಬಿನೆಗಮೆರ
ೞ್ತಡಿವಿಡಿದಿರ್ದ ಮರಂಗಳ
ನಡಿಗೆಡಪಿದುವಿರದೆ ಪರಿವ ಪೂರದೆ ನದಿಗಳ್‌೧೮

ಪಿರಿದೆನಿಸಿ ಪುಗುವ ಪೊನಲಿಂ
ಸರೋವರಂ ಕದಡೆ ಮಾನಸಕ್ಕೆ ಮಾರಾಳೋ
ತ್ಕರಮಿರದೆ ಪೋಯ್ತು ವಿನುತಾ
ಚರಣಯುತಂ ಮಳಿನಹೃದಯರಂ ಪೊರ್ದುವರೇ ೧೯

ಚಂ || ಸಿರಿ ಪರಿಪಾಳಿಸಲ್‌ನೆಱೆವ ಬುದ್ಧಿಯನುಳ್ಳ ನರಂಗೆ ಸಾರೆ ಸು
ಸ್ಥಿರತೆಯಿನಿರ್ಕುಮಲ್ಲದೊಡೆ ನಿಲ್ಲದೆ ನೆಟ್ಟನೆ ಪೋಕುಮೆಂಬುದಂ
ನಿರವಿಸುವಂತೆ ತೀವಿದುವು ಪೆರ್ಗೆಱೆ ಕೋಡಿಯನುಳ್ಳವಿಲ್ಲದಿ
ರ್ಪರಗೆಱೆ ಪೂರದಿಂದೊಡೆದುಪೋದುವದಾಗಳೆ ಮೇಘಕಾಲದೊಳ್‌೨೦

ಕಂ || ಪದನಱೆದೀವ ಬೊಜಂಗಂ
ಸುದತಿಯನನುರಾಗಸಂಪದದಿನೊಂದಿಪವೋಲ್‌
ಪದವೞೆ ಸಸ್ಯಂಗಳ ಸಂ
ಪದದಿಂದೊಂದಿಸಿತಗುರ್ವಿನಿಂದುರ್ವರೆಯಂ ೨೧

ವ || ಅಂತು ಮಹೀಕಾಂತೆ ಸಕಳಮಹೀಕಾಂತನ ತೋಳೊಳಿರ್ದು ತಳೆದ ಪುಳಕಂಗಳಂತಳುಂಬಮಾಗಿ ಬೆಳೆದ ಸಸ್ಯಂಗಳಿಂ ಮನಂಗೊಳಿಸುತ್ತುಮಿರೆ

ಚಂ || ದಿವಸಪತಿಪ್ರಸಾದದೊದವಿಂ ದಿವಸಾಂಗನೆಯಾನನಾಬ್ಜದಂ
ತವಿರಳಮಂಬುಜಾಳಿಯಲರ್ದೊಪ್ಪಿದುವಾ ಸತಿಯಾಶಯಪ್ರಶೋ
ಭೆವೊಲೆ ಜಳಾಶಯಂ ತಿಳಿದುವಾ ವಧು ವುಟ್ಟಮಳಾಂಬರಪ್ರಲೀ
ಲೆವೊಲಮಳಾಂಬರಂ ಬಗೆಗೆವಂದುದು ರುಂದ್ರಶರತ್ಪ್ರವೇಶದೊಳ್‌೨೨

ಮ || ನೆಗೞ್ದಂಭೋನಿಧಿ ನೀರುಮಂ ನೆಱೆಯೆ ತಂದೀಗಳ್‌ಸುಧಾವಾರ್ಧಿವಾ
ರಗಳಂ ಪೇಱಿಯೆ ತಂದುವೆಂದೆನಿಸಿ ಕಣ್ಗಿಂಬಾಗಿ ಶುಭ್ರಾಭ್ರಮಾ
ಲೆಗಳೊಪ್ಪಿರ್ದುವು ಮಿತ್ರನಾತ್ಮಕರದಿಂ ಶ್ರೀಮಚ್ಛರಚ್ಚಕ್ರಿಗಾ
ವಗಮರ್ಘ್ಯಂಗುಡಲಿಂದುಕಾಂತಕಳಶಾನೀಕಂಗಳಂ ಪೊತ್ತವೋಲ್‌೨೩

ಕಂ || ಗಡಣದಿನದೆ ಮಾನಸದಿಂ
ನಡೆತರ್ಪುದು ರಾಜಹಂಸತತಿ ನಯದಿನದ
ಕ್ಕೆಡೆಗಿಱೆದಿರದೆತ್ತಿದ ಬೆ
ಳ್ಗೊಡೆಗಳಿವೆನೆ ಬಿಳಿಯ ಜಳದಮೊಗೆದುವು ನಭದೊಳ್‌೨೪

ಜಾದಿಯ ತನಿಗಂಪುಂ ಕೆಂ
ಜಾದಿಯ ತನಿಗಂಪುಮೆತ್ತಲುಂ ಪಸರಿಸೆ ಬೆ
ಳ್ಪಾದಂ ಚಂದ್ರಿಕೆಯೊಳೆ ರವಿ
ಪಾದಂ ಚಂಡತೆಯೊಳೊಂದಿ ನೆಗೞ್ದುದು ಶರದಂ ೨೫

ಶರದಂ ಬರೆ ಮದನೇಭಂ
ಶರದಂ ತಾವೆನಿಸಿ ಮಾಣ್ದುದೇಂ ತುಂಬಿಯ ಮೆ
ಲ್ಸರದಂದಮರಲ ಸರಲ ಪ
ಸರದಂದಂ ವಿರಹಿಗೆನಿಸಿತಲರ್ದುತ್ಪಳದೊಳ್‌೨೬

ಮುದಮುದಿತ ಪರಿಮಳಂ ರುತಿ
ಮದಾಳಿಯುಲಿ ಕುಂಭಮೆನಿಸೆ ಕುಸುಮಸ್ತಬಕಂ
ಮದನೇಭಮೆಂದೆ ಸಪ್ತ
ಚ್ಛದಕ್ಕೆ ಬೆದಱಿದುದು ವಿರಹಿ ಶರದಾಗಮದೊಳ್‌೨೭

ಚಂ || ದ್ಯುಮಣಿಗೆ ತೇಜಮುಜ್ವಳಿಸೆ ಪಜ್ಜಳಿಕುಂ ದ್ಯುತಳಂ ಸರೋಜಷಂ
ಡಮುಮಲರ್ದೊಪ್ಪೆ ನಿರ್ಮಳತೆಯಂ ತಳೆಗುಂ ಬಳಬಾಶಠಾಳಿಯು
ಕ್ತಮೆ ವಲಮೆಂದು ಬಂದು ಶರದಾಗಮದೊಳ್‌ಪೆಱರಂ ಪ್ರಭಾವಿಸು
ತ್ತಮೆ ತಮಗೊಳ್ಪನಾರ್ಜಿಸುವರೇೞ್ಗೆಯೊಳಾಳ್ಗಳ ಕೂಡೆ ರಂಜಿಸಲ್‌೨೮

ಉ || ಚಾರುತರೇಂದುವಕ್ತ್ರೆ ಚಪಳೇಕ್ಷಣೆ ಹಂಸವಿಳಾಸಯಾನೆ ನೀ
ಹಾರಕರ ಪ್ರಭಾಂಬರೆ ಸರೋವಿಮಳಾಶಯೆ ತಾರತಾರಕಾ
ಹಾರಮರೀಚಿ ಪಾಂಡುರಪಯೋಧರೆ ಕಾಶಲತಾಂತಕಾಂತಿ ವಿ
ಸ್ತಾರಸಿತಪ್ರಸಾಧನವೊಲೇಂ ಶರದಂಗನೆ ಕಣ್ಗೆವಂದಳೋ ೨೯

ವ || ಅಂತು ಬಂದ ಶಾರದಲಕ್ಷ್ಮಿಯೆ ವಿಜಯಲಕ್ಷ್ಮಿಯು ತನಗೋತು ಕಳಿಪಿದ ದೂತಿಯಾಗೆ ವಜ್ರನಾಭಿ ದಿಗ್ವಿಜಯೋದ್ಯೋಗಮಂ ಮನದೆಗೊಂಡನೇಕ ಮೌಹೂರ್ತಿಕ ಸಂಕೀರ್ತಿತ ಶುಭಮುಹೂರ್ತದೊಳ್‌ದಿಗ್ವಿಜಯಪ್ರಯಾಣಭೇರಿಯಂ ಪೊಯ್ಸೆ

ಕಂ || ನವಖಂಡಾವನಿಯೊಳಗಿ
ರ್ಪವನೀಶರ ಹೃದಯಮೆಯ್ದೆ ಶತಖಂಡಮೆನಿ
ಪ್ಪವೊಲೊಡೆಯೆ ಭೂರಿಭೇರೀ
ರವಮೊಗೆದುದು ಚಕ್ರಿವಿಜಯಯಾತ್ರೋತ್ಸವದೊಳ್‌೩೦
ವ || ಆಗಳನೂನಸನ್ಮಾನಂಬೆರಸಿದ ದಾನಗುಣಮಂ ಪಡೆವ ಬಯಕೆಯಿಂ ಸನ್ಮಾನ ದಾನವಿನೋದಿಯಂ ಮೆಯ್ವೞಿಯಿಂದಾರಾಧಿಸಿದಪುದೆಂಬಂತಿರೆ ಹರಿಚಂದನರಸದಿನಣ್ಪು ವಡೆವಿನಮಣ್ಪನಿಕ್ಕಿ ಶೃಂಗಾರಗಂಗಾನದೀಕೂಲಮೆನಿಸಿದ ದುಕೂಲಮನುಟ್ಟು ಶತಪತ್ರನೇತ್ರೆಯರ್ಗನುರಾಗೋದಯಮನಾಗಿಸುವುದಯರಾಗದಂಗಿಗೆಯಂ ತೊಟ್ಟು ಸಕಳ ತೇಜಸ್ವಿಗಳ ತೇಜಂ ತನಗೆ ಹಸ್ತಸ್ಥಮೆಂಬುದನಱಿಪುವಂತೆಸೆವ ನವಗ್ರಹದ ಕಂಕಣಮನಿಕ್ಕಿ ವಿಜಯ ರಮಣೀರಮಣೀಯ ಮಣಿಮಯಾಸನವಿಳಾಸನವಿಳಾಸಕ್ಕಾವಾಸಮಾಗೆ ಕೇಯೂರಮಂ ಭೂರಿಭುಜದೊಳ್‌ತಳೆದು ಮನಮೊಸೆದು ಮನಸಿಶಯನಂ ಮುಖಮೆಂಬ ತಾರಾಪತಿಯ ಬೆಸದಿಂ ತಾರಾವಳಿಗಳಗಲದೋಲಗಿಸುವ ಲೀಲೆಯಂ ಪಾಲಿಸೆ ಪೇರುರದೊಳ್‌ತೋರ ಮುತ್ತಿನ ಹಾರಮನಾಂತು ನಿಜಮಣಿಕ್ಕಿರಣಾಂಕರಂಗಳ್‌ಪುಲಕಾಂಕುರಂಗಳಾಗೆ ರಾಗದು ತ್ಕಟತೆಯಿಂ ಕಂಠಮಂ ಶ್ರೀಲಲನೆಯಾಲಿಂಗಿಸಿದ ಭಂಗಿಯಿಂ ಬೆಡಂಗುವಡೆಯ ಕಂಠಿಕೆಯಂ ರಾಜಕಂಠೀರವಂ ರಾರಾಜಿಸುವಂತಿರಾಂತು ಲಲಿತಾಕೃತಿ ವಿಜಿತಮಕರಧ್ವಜಂ ಮಕರ ಕುಂಡಳಮನಿಕ್ಕಿಕೊಂಡು ಗುಣಸಮನ್ವಿತಮಪ್ಪುತ್ತಮಜಾತಿಯನಾರಾದೊಡಮಾದರಿಸುವರೆಂಬುದಂ ಪ್ರಕಟಿಸುವಂತೆ ವಿನೂತಜಾತಿಮಾಳೆಯಿಂ ಮಕುಟತಟಮನಳಂಕರಿಸಿ ಮದನಂ ಮದಿರಾಕ್ಷಿಯರನೀಕ್ಷಣಮಾತ್ರದೊಳೆ ತನ್ನ ಪಾದಾಕ್ರಾಂತರಂ ಮಾೞ್ಪ ಮಿತ್ರನ ಚರಿತ್ರಕ್ಕೆ ಮೆಚ್ಚಿ ಚಂದ್ರಮನಮರ್ದಪ್ಪಿದೊಪ್ಪಮನಪ್ಪುಕೆಯ್ಯೆ ಜಗತ್ತಿಳಕಂ ಕತ್ತುರಿಯ ತಿಳಕಮನಿಟ್ಟು, ಕರ್ಪೂರ ಪಾರೀಪರಿಚುಂಬಿತತಾಂಬೂಳನಾಳೋಕಿತ ಮಂಗಳಮಣಿದರ್ಪಣಂ ದರ್ಪಕನಂತೆ ಕಾಂತಾಹೃದಯಹಾರಿ ಶೃಂಗಾರಾಗಾರದಿಂ ಪೊಱಮಡುವ ಸಮಯದೊಳ್‌

ಕಂ || ಕ್ಷಿತಿಚತುರಯುವತಿನವಸಂ
ಗತಿಯೊಲ್‌ಕಂಪನಮನಾಂತುದೆಂಬಂತೆವೋಲು
ನ್ನತದಕ್ಷಿಣಭುಜದಂಡ
ಕ್ಷಿತಿಧರದೊಳ್‌ರಂಜಿಸಿತು ಮಂದಸ್ಪಂದಂ ೩೧

ಮದದೊದವನುೞಿದು ನಿಜಮೃದು
ಪದಮಂ ಕುಲಧನಮನಿತ್ತು ಧಾತ್ರೀಶರ್‌ಕಾ
ಣ್ಬುದನೊಲ್ದು ಕಾಣ್ಬುದಂ ಪೆ
ೞ್ದುದು ಚಕ್ರಧರಂಗೆ ದಕ್ಚಿಣಾಕ್ಷಿಸ್ಪಂದಂ ೩೨

ವ || ಅಂತು ನೆಗೞ್ವ ಪಲತೆಱದ ಶುಭಚಿಹ್ನಕಕೆ ಸಂತಸಬಡುತ್ತುಮಿದು ದಿಗ್ವಿಜಯ ರಮಣೀಪಾಣಿಗ್ರಹಣಮುಹೂರ್ತಮತ್ಯಾಸನ್ನಮೆಂದು ಬಿನ್ನವಿಸೆ ಪರಸುವ ಹಿತ ಪುರೋಹಿತರ ಪರಮಾಶೀರ್ವಚನನಿಚಯಂಗಳಂ ಸುವರ್ಣಕರ್ಣಾವತಂಸಂ ಮಾಡುತ್ತುಂ ಪಣ್ಣ ಬಂದಿರ್ದ ಗಜೇಂದ್ರದ ಸಮೀಪಕ್ಕೆ ವಂದಾನಂದದಿಂದದಂ ನೋಡಿ

ಕಂ || ವಾರಣಮಿಂತಿದು ರಿಪುಕಾ
ಳೋರಗನೆಂದಱಿಪುವಂತಿರಲ್ಲಲ್ಲಿಗೆ ಕ
ಸ್ತೂರಿರಸದಿಂದೆ ಬರೆದಸಿ
ತೋರಗತತಿ ನೋಡೆ ನಾಡೆಯುಂ ಕಣ್ಗೊಳಿಕುಂ ೩೩

ಮದಲಕ್ಷ್ಮಿಯ ಕೇಕರರುಚಿ
ಕೆದಱಿದವೊಲೆ ಕರ್ಣಚಾಮರಂ ಸಿಂಧೂರಂ
ಮೃದುಕರದ ಕೆಂಪು ಪುದಿದುದು
ಪದೆದು ಪಿಡಿಯೆ ಕುಂಭಯುಗಮನೆನೆ ಸೊಗಯಿಸುಗುಂ ೩೪

ವ || ಮತ್ತಮಾ ಹಸ್ತಿ ನಿಜಾಗ್ರಹಸ್ತದ ಹತಿಯಿಂದುದಿರ್ದ ತಾರಾಳಿಯಂ ಮಾಲೆಗೋದು ಕಟ್ಟಿದಂತೆಸೆವ ನಕ್ಷತ್ರಮಾಲೆಯಿಂ ಲೀಲೆವಡೆದು ಚಂದನದಣ್ಪನಿಕ್ಕಿದಂತೆ ಚಂದಂಬಡೆಯೆ ಪೂಸಿದ ಶಂಖದಿಂ ಬೆಳ್ಳಿಯ ಬೆಟ್ಟಮೆಂಬ ಶಂಕೆಯನಾಂಕೆಗೊಂಡು ಭೂಮಂಡಳಮನುಂಡಿಗೆ ಸಾಧ್ಯಂ ಮಾಡಿ ಕುಡುವೆನೆಂದಱಿಪುವಂದದಿಂ ದಕ್ಷಿಣಪಾದದಿಂ ಮೇದಿನಿಯಂ ಬಱಂಟುತ್ತುಮುತ್ತುಂಗವಿಜಯಧ್ವಜಮನೆತ್ತುವಂತೆ ದಕ್ಷಿಣದಂತದೊಳ್ ತೋಱೆಕೆಯ್ಯಂ ಪೇಱಿ ಶುಭಚಿಹ್ನಮಂ ಬೀಱುತ್ತಂ ತನ್ನಂ ಪೋಱೆಯೇಱೆಸುತ್ತುಮಿರ್ದ ವಿಜಯಾಚಳಮೆಂಬ ಗಜರತ್ನದ ಪೂರ್ವಾಚಳಶಿಖರಮಂ ರಮಣಿಯರ್‌ತಮತಮಗೆಕ್ಕೆಕ್ಕೆಯಿಂತನಗಿಕ್ಕುವ ಬಿಡುಮುತ್ತಿನ ಸೇಸೆಗಳರ್ಘ್ಯಮಂ ಕುಡುವನರ್ಘ್ಯರತ್ನಂಗಳಾಗೆಯುಂ ಮಂಗಳತೂರ್ಯಗೇಯ ಪುಣ್ಯಪಾಠಕಕೋಲಾಹಳಮೆ ಕೊಳರ್ವಕ್ಕಿಗಳ ಕೋಳಾಹಳ ಮಾಗೆಯುಮಲರ್ವ ಪುಂಡರೀಕಂಗಳಲರ್ವ ಪುಂಡರೀಕಂಗಳಾಗೆಯುಂ ಬೀಸುವ ಧವಳಚಾಮರಂಗಳೆ ನಲಿವ ಕಳಹಂಸಸಂಕುಳಮಾಗೆಯುಮರುಣಮಣಿಕಿರಣಂಗಳೆ ಕಿರಣಸಹಸ್ರಂಗಳಾಗೆಯುಂ ಚಕ್ರಧರಂ ಬಂದು ಚಕ್ರ ಮನೋಹರಾಗಮಂ ಬಾಳಭಾಸ್ಕರನಂತೆ ಬಳೆಯಿಸುತ್ತುಮಳಂಕರಿಸಿ

ಕಂ || ದ್ವಾತ್ರಿಂಶಚ್ಚಮರರುಹಂ
ಛತ್ರೇಂದುಮರೀಚಿ ಮದವದಿಭಮೆ ನಭಃಶ್ರೀ
ಪಾತ್ರಮೆನೆ ಚೆಲ್ವುವಡೆಯೆ ಧ
ರಿತ್ರೀಪತಿ ಖಚರರಾಜನೆನೆ ರಾಜಿಸಿದಂ ೩೫

ಕುಂಭನಿಭಸ್ತನಿಯರ್‌ಗಜ
ಕುಂಭದೊಳಿರೆ ಚಕ್ರ ಜಯವಧೂಪರಿಣಯನಾ
ರಂಭೋಚಿತಪೂರ್ಣಚತುಃ
ಕುಂಭಂಗಳ ತೆಱದಿನೇಂ ಮನಂಗೊಳಿಸಿದುದೋ ೩೬

ಶಾ || ಸ್ತ್ರೀರತ್ನಂ ಸಿರಿ ಚಕ್ರಮಿಂದು ಹಯರತ್ನಂ ವಿಶ್ರುತೋಚ್ಛೈಶ್ರವಂ
ಮೇರೂತ್ತುಂಗಮದೇಭಮಿಂದ್ರ ಕರಿ ಚಂಚಚ್ಚಾಮರಂ ವೀಚಿನಾ
ನಾರತ್ನಂ ನವರತ್ನಮಿಂತಮರ್ದಿರಲ್‌ಕ್ಷೀರಾಬ್ಧಿವಿಸ್ತಾರದಿಂ
ಭೇರೀಭಾಂಕೃತಿ ಘೋಷಮಾಗೆ ನಡೆದತ್ತನ್ಯೂನಸೈನ್ಯೋತ್ಕರಂ ೩೭

ಮಾಲಿನಿ || ನೆಗೞೆ ಪಟಹಭೇರೀಶಂಖತೂರ್ಯಪ್ರಣಾದಂ
ಪೊಗೞೆ ಪರಸೆ ನಾನಾವಂದಿವಿಪ್ರಪ್ರತಾನಂ
ಮಿಗೆ ಸೊಗಯಿಸೆ ವೀಣಾಸಂಗಿ ಮಾಂಗಲ್ಯಗೀತಂ
ನೆಗೆಯೆ ಪದರಜಂ ಶ್ರೀ ಶ್ರೀವಧೂವಶ್ಯಚೂರ್ಣಂ ೩೮

ಕಂ || ಶುಭತಿಥ್ಯಂ ಶುಭ ದಿವಸಂ
ಶುಭನಕ್ಷತ್ರಂ ಶುಗ್ರಹಶ್ರೇಣ್ಯುದಯಂ
ಶುಭಯೋಗಂ ಶುಭಕರಣಂ
ಶುಭಶಕುನಂ ನೆಗೞೆ ಧರಣಿಪತಿ ಪೊಱಮಟ್ಟಂ ೩೯

ವ || ಅಂತು ಚಕ್ರಾಯುಧಂ ವಜ್ರಾಯುಧನನಧಃಕರಿಸಿ ಸಕಳ ಮಕುಟಬದ್ಧಪರಿವೃತಂ ರತ್ನತೋರಣರಾಜಿವಿರಾಜಿತರಾಜಭವನದಿಂ ಪೊಱಮಟ್ಟು ವಾರನಾರೀದೃಗ್ವಿಜಯ ಸೂಚಕಮಂ ನಿಜರೂಪಾತಿಶಯದಿಂ ಪಡೆಯುತ್ತುಂ ನಡೆತರ್ಪಾಗಳ್‌

ಕಂ || ಮದಲೇಖೆಗೆ ಸದೃಶಂ ಮೃಗೆ
ಮದತಿಳಕಂ ಕರಿಕರಕ್ಕೆ ಸರಿ ಕರಮೆನುತುಂ
ಮದಗಜಮನೇಱಿ ಬರುತಿರೆ
ಸುದತಿ ನಿರೀಕ್ಷಿಸಿದಳೊಸೆದು ವಸುಧಾಧಿಪನಂ ೪೦

ಪಿಡಿವೆತ್ತಧರಂ ಮನಮಂ
ಪಿಡಿವಿನಮುಗಿವೆತ್ತ ವೃತ್ತಕುಚಕುಂಭಯುಗಂ
ಬಿಡದುಗಿಬಗಿಮಾೞ್ಪಿನೆಗಂ
ಬೆಡಂಗಿ ಮೆಯ್ಮಱೆದು ನೋಡಿದಳ್‌ಮತ್ತೊರ್ವಳ್‌೪೧

ಗಾಡಿಗೆ ಸೋಲ್ತಂಗನೆ ಕ
ಣ್ಗಾಡಿಗೆ ಸರಿದಿರೆಯುಮಂಶುಕಂ ಜೋಲ್ದಿರೆಯುಂ
ನೋಡದೆ ಕೆಳದಿಯ ನುಡಿಗಿ
ನ್ನೋಡದೆ ನೋಡಿದಳದೊರ್ವಳುರ್ವೀಶ್ವರನಂ ೪೨

ಮದನಮದದ್ವಿರದಂ ಕದ
ಡಿದ ಚೇತೋನದಿಯೊಳುಣ್ಮಿ ಪೊಣ್ಮಿದ ಝಷಯು
ಗ್ಮದ ತೆಱದಿನೊಪ್ಪೆ ನಗೆಗಣ್‌
ಪದೆದೊರ್ವಳ್‌ಸಾರ್ವಭೌಮನಂ ವೀಕ್ಷಿಸಿದಳ್‌೪೩

ಉ || ಕಂಜನಿಭಾಸ್ಯೆ ಪೀವರಪಯೋಧರೆ ರತ್ನ ವಿಭೂಷಣಾಂಶುವಿಂ
ರಂಜಿತಗಾತ್ರೆ ಸೌಮ್ಯನೃಪರೂಪನಿರೀಕ್ಷಣದಿಂದೆ ಚಿತ್ರರೂ
ಪಂಜನನೇತ್ರಹಾರಿ ತನಗಂ ದೊರೆವೆತ್ತಿರೆ ರಮ್ಯಹರ್ಮ್ಯದೊಳ್‌
ಲಂಜಿಕೆ ಸಾಲಭಂಜಿಕೆಯನೇೞಿಸುತೀಕ್ಷಿಸಿದಳ್‌ನೃಪಾಳನಂ ೪೪

ಅಂತು ಪುರಾಂಗನಾತರಳಲೋಚನ ಚಾರುಮರೀಚಿಮಾಳತೀ
ಸಂತತಿಯಂ ಸ್ವಕೀಯಸುಭಗತ್ವಗುಣಂ ತಳೆದೊಪ್ಪೆ ಶೇಷೆಯಂ
ಸಂತಸದಿಂದೆ ತೀವಿ ಪರಸುತ್ತಿರೆ ಪುಣ್ಯವಧೂಜನಂ ಪುರೋ
ಪಾಂತದೊಳಿರ್ದು ತನ್ನ ಬರ ಪಾರ್ವವನೀಶ್ವರರಂ ನೃಪೇಶ್ವರಂ ೪೫

ವ || ಎಯ್ದೆವಂದಾಗಳ್‌

ಚಂ || ಗಿರಿ ಪರಲಾತ್ಮಸನ್ನಿಧಿಯೊಳೆಂದೆನಿಪುನ್ನತ ಮತ್ತಹಸ್ತಿಯಂ
ಗರುಡನುದಗ್ರ ವೇಗವಿಭವಂ ತುಷಮೆಂಬ ತುರಂಗಮಂ ರಿಪೂ
ತ್ಕರಮಣುಸನ್ನಿಭಂ ತನಗೆನಿಪ್ಪ ರಥವ್ರಜಮಂ ರಣಾಂಗಣಂ
ತರುಣಿಯರಂಗಣಂ ಗಡಮೆನಿಪ್ಪ ಪದಾತಿಯನೊಲ್ದು ನೋಡಿದಂ ೪೬

ಕಂ || ಪದಪಿಂದೆ ಸಾರ್ವಭೌಮನ
ಪದಪಂಕರುಹಕ್ಕಶೇಷನೃಪಮಕುಟಂ ರ
ತ್ನದ ಕಾಂತಿ ಮಿಱುಗುವಿನಮೆಱ
ಗಿದುದಾಗಳ್‌ದೀಪವರ್ತಿ ನಿಧಿಗೆಱಗುವವೋಲ್‌೪೭

ವ || ಅಂತಾತ್ಮೀಯಮೌಲೀಕೀಳಿತಪದ್ಮರಾಗದಿಂ ಪದಪದ್ಮರಾಗಮಂ ದ್ವಿಗುಣಿಸಿದಶೇಷ ದೇಶಾಧೀಶ ಮನೋರಾಗಮಂ ಪ್ರಚುರಪ್ರಸಾದದಿಂ ಸಂಪಾದಿಸುತ್ತುಂ ಸ್ಥಪತಿರತ್ನಂ ನೂತ್ನರತ್ನಂಗಳಿನತಿ ಪ್ರಯತ್ನದಿಂ ಬೊಮ್ಮಂಗಂ ನಿರ್ಮಿಸಲರಿದೆನಿಸಿ ಕೂರ್ಮೆಯಿಂ ನಿರ್ಮಿಸಿದುದಂ

ಕು || ಭೂರಮಣೀರಮಣಂ ರಣ
ಧೀರ ಧರಾಧೀಶ ವಾರನಾರೀವಿಭವಾ
ಧಾರತೆಯಿಂ ವೀರದ ಶೃಂ
ಗಾರದ ನೆಲೆವೀಡೆನಿಪ್ಪ ಬಿಡಂ ಪೊಕ್ಕಂ ೪೮

ವ || ಅಂತು ಕಾಂತಮಪ್ಪ ನಿಜವಿಜಯಶಿಬಿರಮಂ ಶುಭಶಕುನಂಗಳುಮಂ ಮಂಗಳ ತೂರ್ಯಗೇಯನಾದಂಗಳುಮನಾಲಿಸುತ್ತುಮುತ್ಸಾಹಚಿತ್ತಂ ಪೊಕ್ಕನಂತರಂ

ಕಂ || ಸೊದೆವಳಿದ ಭಿತ್ತಿ ಪೊಸದುಗು
ಲದ ಮೇಲ್ಕಟ್ಟಿಂದುಕಾಂತಕುಟ್ಟಿಮಧುರೆ ರ
ನ್ನದ ದೀವಿಗೆಯಿವಱಿಂದಮೃ
ತದ ಕಡಲಂ ಪೋಲ್ತುದನ್ನವಾಸವಿಳಾಸಂ ೪೯

ವ || ಅದಲ್ಲದೆಯುಂ ವಿಬುಧಭವ್ಯಂ ಮಾೞ್ಪನೂನ ದಾನದಂತೆ ಸುವರ್ಣಸತ್ಪಾತ್ರ ಪವಿತ್ರಮಾಗಿ ಮನಂಗೊಳಿಸುವ ಭೋಜನಗೃಹಕ್ಕೆ ರಾಜಾಧಿರಾಜಂ ಜಾಂಗಳವಿದ್ಯಾ ವಿದುರರ್‌ಬೆರಸು ಬಿಜಯಂಗೆಯ್ವುದುಂ

ಕಂ || ಸರವಳಿಗೆಗಳನಿತುಂ ಪಾ
ಲುರುಳಿವೊಲಿರೆ ಪಾಲೊಳೊಂದಿ ಮಗಮಗಿಸುವುದಂ
ಸರವಳಿಗೆಯ ಪಾಯಸಮಂ
ಸುರುಚಿರ ಸಿತಘೃತವಿಮಿಶ್ರಿತಮನತಿಹಿತಮಂ ೫೦