ನಿಳ್ಪುಂ ಬೆಳ್ಪುಂ ತೆಳ್ಪುಂ
ತೆಳ್ಪೊಯ್ದಿರೆ ಸುಗ್ಗಿಯಚ್ಚ ಬೆಳ್ದಿಂಗಳನೀ
ಗಳ್ಪೊರೆಯೆತ್ತಿದರೆಂಬಂ
ತೊಳ್ಪಂ ಗೆಡೆಗೊಂಡು ಸೊಗಯಿಸುವ ಮಂಡಿಗೆಯಂ ೫೧

ಕೀರಸಮನಿನಿದೆನಿಪ ಸಹ
ಕಾರರಸಮನಸಮಸುರಭಿಘೃತಮಂ ಸಿತಮಂ
ಕ್ಷೀರಮನಮರ್ದಿರೆ ತೀವಿ ಮ
ನೋರಾಗದೆ ಬೆಱೆವೇಱೆ ಬಟ್ಟಲೊಳಿಟ್ಟರ್‌೫೨

ಪೊಂಗಿರ್ದಂಗರವೋೞಿಗೆ
ಯಂ ಗರಗರಮಪ್ಪ ತುಪ್ಪಮಂ ಸಕ್ಕರೆಯಂ
ಪಿಂಗದ ಹೂರಣಮೆನಿಸಿ ಮ
ನಂಗೊಳಿಪುವನಮೃತಪೂರಮಂ ಹೂರಿಗೆಯಂ ೫೩

ಲುಡ್ಡುಗೆಯನಿನಿದೆನಿಪ ಬಿಡು
ಲಡ್ಡುಗೆಯಂ ತುಪ್ಪದಲ್ಲಿ ತೇಂಕುವ ಕಂಪು
ಳ್ಳಿಡ್ಡಲಿಗೆಗಳಂ ಬೇಗಂ
ಬಡ್ಡಿಸಿದರ್‌ಜಾಣರೆಂಬಿನಂ ಬಾಣಸಿಗರ್‌೫೪

ಪ್ರಣತಹಿಮಕರಸುರಭಿಧಾ
ರಿಣಿಯಂ ಪಂಚೇಂದ್ರಿಯಪ್ರಿಯಾಕುಳಸುಖಕಾ
ರಿಣಿಯಂ ಪೊಸತೆನಿಸುವ ಶಿಖ
ರಿಣಿಯಂ ರಸರಸಿಕಜನಮನೋಹಾರಿಣಿಯಂ ೫೫

ಶಾಲ್ಯನ್ನಂ ಸ್ಮಿತಮಲ್ಲೀ
ಮಾಲ್ಯಮನತಿಮೃದುತೆಯಿಂದೆ ಪರಿಮಳದಿಂ ನೈ
ರ್ಮಾಲ್ಯದಿನೇೞೆಸಿ ಸಕಳಜ
ನಾಲ್ಯಾಶಯಹಾರಿಯಾಗಿಯೇಂ ಸೊಗಯಿಸಿತೋ ೫೬

ಕಳಧೌತದ ಪರಿಯಣದೊಳ್‌
ಕಳಮಾನ್ನಂ ತನ್ನ ಬೆಳ್ಪಿನಿಂದದಱೊಂದು
ಜ್ಜಳಿಕೆಯನೇೞಿಸೆ ಬೆಳ್ಳಿಯೊ
ಳಳವಡೆ ದುರ್ವರ್ಣನಾಮಮೆಸೆದುದು ನಿಸದಂ ೫೭

ಪಲತೆಱದ ಪಾನಕಂ ಪರಿ
ಮಳಮಂ ತೞ್ಕೈಸಿ ಹಿಮಮನೊಳಕೊಂಡಿಂಪಂ
ನೆಲೆಗೊಳಿಸಿ ಪಲ್ಲವಾಧರ
ಫಲರಸಪಾನದವೊಲೇಂ ಮನೆಂಗೊಳಿಸಿದುದೋ ೫೮

ಪಾಕವಿಶೇಷದೊಳೊಂದಿದ
ಶಾಕಚಯಂ ಬೇಱೆವೇಱೆ ಸಂಪ್ರೀತಿಯನ
ವ್ಯಾಕುಳದೊದವಿಸಿ ರಾಜಾ
ನೀಕದೊಳೊದವಿಸಿತು ಶಾಕಪಾರ್ಥಿವವೆಸರಂ ೫೯

ಸವಿದೊಡೆ ಕೂಟದಲಂಪಂ
ನವಯುವತಿಯರಧರಪಲ್ಲವಂ ಪಲ್ಲವಿಪಂ
ತೆವೊಲೂಟದಲಂಪಂ ಪ
ಲ್ಲವಿಸಿತು ಪುಳಿಯಲ್ಲ ಮಿೞಿಸಿ ಪವಳದ ಕುಡಿಯಂ ೬೦

ಚಂ || ಒಡನೆ ಕುಮಾರಕರ್‌ಕೆಲದೊಳಾಪ್ತನಿಯೋಗಿ ನೃಪಾಳಪಾಳಿ ಕಾ
ಣ್ಬೆಡೆಯೊಳೆ ಪಂಡಿತಪ್ರತತಿ ಕಣ್ಗೊಳಿಸಿರ್ಪ ವಿಳಾಸಿನೀಜನಂ
ಬಿಡದಿರೆ ಸುತ್ತಲುಂ ಮಧುರಗಾಯಕಗಾಯಿನಿಯರ್‌ನಿರಂತರಂ
ಗಡಣದೆ ಚಕ್ರಿಯಾರೊಗಿಸಿದಂ ಸುರರಾಜನವೋಲ್‌ಸುಧಾನ್ನಮಂ ೬೧

ಮ || ಸಕಳೋರ್ವಿಪತಿ ಸಾರವಸ್ತುತತಿಯಂ ಕಾರುಣ್ಯದಿಂದಟ್ಟೆ ಗಾ
ಯಕಿಯರ್ಗಂ ಮುದದಿಂ ವಿಳಾಸವತಿಯರ್ಗಂ ವ್ಯಂಜನಾಂತ್ವಾರ್ಧಮಾ
ತ್ರಕಮೆಂಬೀ ನುಡಿಹೀನಮಾಗೆ ತಣಿದತ್ತೆಲ್ಲಾ ಜನಂ ಪಾಲ್ಗಳಿಂ
ದೆ ಕುಳಿರ್ಕೋಡುವ ಕಂಪುವೆತ್ತ ದಧಿಯಿಂದಿಂಪುರ್ಳಳ ತಕ್ರಂಗಳಿಂ ೬೨

ಕಂ || ಕಾರುಣ್ಯಾಮೃತದಿಂ ಪರಿ
ವಾರಂ ತಣಿದೊಡಮುದಾರವಿಭವಂ ವಿನಯಾ
ಧಾರಂ ತಣಿಪಿದನಮೃತಾ
ಹಾರದೆ ಪುನರುಕ್ತಮಪ್ಪಿನಂ ಚಕ್ರಧರಂ ೬೩

ವ || ಅಂತು ಕಲ್ಯಾಣಕಾಹಾರಮನಾರೋಗಿಸಿ ಸಾರ ಘನಸಾರಮಿಶ್ರಿತ ಶ್ರೀಖಂಡಮಂಕೆಯ್ಗಟ್ಟಿಗೊಂಡಖಂಡಪರಿಮಳಪಿಂಡಖದಿರಘಟ್ಟಿಕಾ ಕರ್ಪೂರಪಾರೀಪರಿಕಳಿತ ತಾಂಬೂಳರಾಗದ್ವಿಗುಣಿತಾಧರರಾಗಂ ಸುಖವಿಹಾರಾಧಾರಂ ಕತಿಪಯಪದಂಗಳಂ ವಿಹಾರಿಸಿ ವಿಸ್ತಾರಿತ ಕಸ್ತೂರೀವಿಲೇಪನನುನ್ಮೀಳಿತ ಮಾಳತೀಮಾಳಾಳಂಕೃತನುಮಾಗಿ

ಚಂ || ಕೆಲದೊಳತಿಪ್ರಸಿದ್ಧ ಕವಿಪುಂಗವರಗ್ರಭಾಗದೊಳ್‌ಸುಮಂ
ತೊಲಿಸುವ ಗಾಯಿನೀಪ್ರತತಿ ಪಿಂತೆ ಚಳಚ್ಚಮರೀಜಧಾರಿಣೀ
ವಳಯಕಳಸ್ವನಂ ನೆಗೞೆ ಚಕ್ರ ಮರಾಳ ಸುತೂಳತಳ್ಪದೊಳ್
ನೆಲಸಿ ವಿಳಾಸಿನೀಪರಿವೃತಂ ಕರಮೊಪ್ಪಿದನನ್ನವಾಸದೊಳ್‌೬೪

ವ || ಆ ಸಮಯದೊಳ್‌

ಕಂ || ರಸನೆಯಿನಮೃತಮನಾಸ್ವಾ
ದಿಸಿ ತಣಿದ ರಸಜ್ಞ ಜನಮೆ ಪೊಸತೆನಿಪ ಸುಧಾ
ರಸಮಂ ಕಿವಿಯಿಂದಾಸ್ವಾ
ದಿಸುವಿನಮಿನಿದೆನಿಸಿ ಪಾಡಿದರ್‌ಗಾಯಿನಿಯರ್‌೬೫

ಇದು ಗಾಯಿನಿಯರ ಕಳರವ
ಮಿದು ವೀಣಾನಾದಮೆಂದು ತೋಱದವೋಲ್‌ಪಾ
ಡಿದೊಡೊಂದೆ ಶ್ರುತಿಯೊಳಚ್ಚರಿ
ಯೊದವಿಸಿತು ಪಲವು ಶ್ರುತಿಯೊಳೊಲವಂ ಬುಧರಾ ೬೬

ಕಿವಿಯಂ ತಾಗುವ ಸರಮೇ
ಱೆ ವಿಚಿತ್ರಂ ಬಾಜಿಪೋಜೆಯಿಂ ವೈಣಿಕರಾ
ಭುವನೇಶನ ಮನಮಂ ತಾ
ಗುವ ಮೆಲ್ಟಿನ ಪೂವಿನಯ್ದುಸರಮೆಂದೆನಿಕುಂ ೬೭

ಅಂದಿನ ದಿನಮಂ ಪರಮಾ
ನಂದದಿನೀಯಂದದಿಂದೆ ಕಳೆದು ಸುಖಶ್ರೀ
ಮಂದಿರದಧಿಪಂ ಮಱುದೆವ
ಸಂ ದಿನಪೋದಯದೊಳತುಳ ಭಾಗ್ಯಾಭ್ಯುದಯಂ ೬೮

ಪೊಯ್ಸಲೊಡಮವನಿಪತಿ ತ
ೞ್ಕಯ್ಸಿದುದೆಣ್ದೆಸೆಯನಬ್ಧಿಘನಘೋಷಮನೊ
ಟ್ಟಯ್ಸಿದುದು ರಿಪುಮದಮನು
ಜ್ಜಯ್ಸಿದುದುರುಶಂಖ ಪಟಹ ಭೇರೀನಿನದಂ ೬೯

ಅಂಭೋಧಿವೃತಧರಿತ್ರೀ
ಸಂಭೂತಾರಾತಿಭೂಪ ಗಂಭೀರತೆಯಂ
ಸ್ತಂಭಿಪ ರವದಿಂ ಪಡೆದುವು
ಗಂಭೀರಾವರ್ತನಾಮಮಂ ಶಂಖಂಗಳ್‌೭೦

ಪಟುಪಟಹರವಮೆ ಧೂಳೀ
ಪಟಮಂ ಮಾಡಿದುದು ರೂಢಿವೆತ್ತವನೀಭೃ
ತ್ಕಟಕಮುಮಂ ರಿಪುಭೂಭೃ
ತ್ಕಟಮುಮಂ ತನ್ನಿತಂಬಿನೀಕಟಕಮುಮಂ ೭೧

ಪನ್ನೆರಡುಂ ಭೇರಿಗಳಾ
ತ್ಮೋನ್ನತಘೋಷಂ ಸಮುದ್ರಘೋಷಮಿದೆನಿಪಂ
ತುನ್ನತಮೊಗೆವುತ್ತಿರ್ಪುದ
ಱಿನ್ನೆಗೞ್ದ ಸಮುದ್ರಘೋಷವೆಸರಂದೆಸೆಗುಂ ೭೨

ವ || ಅಂತು ನೆಗೆದು ಸೊಗಯಿಸುವ ಶಂಖಪಟುಪಟಹಭೇರೀರವಂ ದಿಕ್ತಟ ಸಂಚಯಮಂ ಪಳಂಚಲೆಯೆ

ಕಂ || ಗೋತ್ರೋನ್ನತಂಗಳಖಿಳ
ಕ್ಷತ್ರಿಯಪೂಜ್ಯಂಗಳತುಳ ದಾನಯುತಂಗಳ್‌
ಧಾತ್ರೀಶನಂತೆ ಸುಮಹಾ
ಮಾತ್ರಂಗಳ್‌ಚತುರಶೀತಿಲಕ್ಷಗಜಂಗಳ್ ೭೩

ಸ್ರ || ಮತ್ತಸ್ತಂಭೇರಮಕ್ಕೀ ಗಗನವಳಯಮಿನ್ನೆಯ್ದದೆಂದೇೞ್ಗೆಯಿಂದಂ
ಪೊತ್ತೆತ್ತುತ್ತಿರ್ಪವೋಲೆತ್ತಿದ ಕದಳಿಕೆ ಚೆಲ್ವಾಗೆ ಘಂಟಾರವಂ ದಿ
ಗ್ಭಿತ್ತಿವ್ರಾತಕ್ಕೆ ಧೀಂಕಿಟ್ಟೆಱಗಿಮೆಱಗಿಮಿಶಾಂಘ್ರಿಯೊಳ್‌ಭೂಪರೆಂಬಂ
ತ್ತೆಂ ತಾಂ ತೀವಿ ಕಣ್ಗೊಪ್ಪಿದುದು ನೆಱೆಯದೆಂಬನ್ನೆಗಂ ಭೂಮಿಭಾಗಂ ೭೪

ಕಂ || ಪವನಗತಿಪ್ರಯುತಂಗಳ್‌
ಧ್ರುವಾಭಿರಾಮಂಗಳುದ್ಘಕಲಿಗಳ್‌ಚಾರು
ಶ್ರವಣಂಗಳ್‌ನಭದವೊಲೆಸೆ
ದುವು ಮಿಗೆ ಪದಿನೆಂಟುಕೋಟಿ ಜಾತ್ಯಾಶ್ವಂಗಳ್‌೭೫

ಅನತನೃಪಕುವಳಯದ ಸಿರಿ
ಯನನಾರತಮಲೆವುದುಚಿತಮಿದು ಚೋದ್ಯಂ ಸಂ
ದಿನರಥಸಮುದಯಮಸುಹೃ
ಜ್ಜನಪಮನೋರಥರಥಾಂಗಮಂ ವಿಘಟಿಸುಗುಂ ೭೬

ಆರ್ಕಪ್ಪಮನೀಯದೆ ತೋ
ಪರ್ಕರ್ಕಡುಪಂ ಚಕ್ರಿಗೊಂದೆ ಮೆಯ್ಯೊಳಜೇಯರ್‌
ಸೊರ್ಕಾನೆಗಿದಿರ್ಚುವ ರಣ
ಕರ್ಕಶರೆಣ್ಬತ್ತುನಾಲ್ಕು ಕೋಟಿ ಭಟರ್ಕಳ್‌೭೭

ಚಂ || ಶರಧಿಸಮಗ್ರ ಬಂಧನಿಪುಣಂ ಗುಣಸಂಪದುದಾತ್ತನಾಯಕಂ ನಿರುಪಮ ಧರ್ಮಧಾರಣವಿವೇಕನಿದಾನಮಮೋಘಬಾಣಮಾ
ಸುರರಣರಂಗಸಂಗತಜಯಂ ನೇಱೆ ಪೋಲ್ತುದು ರಾಮನಂ ಧನು
ರ್ಧರಬಳಮತ್ಯುದಗ್ರರಿಪುಭೇದನ ಭಾಸ್ವದಖರ್ವದೋರ್ವಳಂ ೭೮

ಕಂ || ಒದವಿದ ಪದಾತಿಬಳಮೆ
ತ್ತಿದ ತೃಷೆಯಿಂದೀಂಟಿ ನೇಱೆಯೆ ಬತ್ತಿದ ನದಿಗಳ್‌
ಮದಲಾಳಾಜಳದಿಂ ತೀ
ವಿದುವೆನೆ ಪವಣಿಸುವರಾರೊ ಚಕ್ರಿಯ ಪಡೆಯಂ ೭೯

ಪಡೆಗೀ ನೆಲನೆಯ್ದದು ಕಾ
ಲಿಡಲೆಂದಱಿಪಂತೆ ದೇವವಿದ್ಯಾಧರರಾ
ಗಡೆ ನೆಗೆದು ಗಗನಮಂ ನೇ
ರ್ಪಡೆ ತೀವಿದರೆನೆ ವಿಮಾನಮೆಸೆದುವು ನಭದೊಳ್‌೮೦

ವ || ಅಂತು ಪೆಂಪನೊಳಕೊಂಡು ತಳರ್ವ ಷಡಂಗಬಲಂಗಳೊಳ್‌

ಕಂ || ವಿಪುಳಪ್ರತಾಪಮಂ ತೋ
ರ್ಪ ಪಗೆವರಾರೆಂದು ಚುಂಬಿಸುತ್ತಂಬರಮಂ
ತಪನಪ್ರತಾಪಮಂ ಲೋ
ಪಿಪ ನಾಲ್ವತ್ತೆಂಟುಕೋಟಿ ಪೞಯಿಗೆಯೆಸೆಗುಂ ೮೧

ಉ || ವಾರಣದಿಂದಮಂಕಿತಮರಾತಿನೃಪಾಳಕವಂಶಹಾರಿ ಕಂ
ಠೀರವಲಾಂಛಿತಂ ರಿಪುಮದೇಭವಿದಾರಿ ಗರುತ್ಮಲಕ್ಷಿತಂ
ವೈರಿನೃಪಾಹಿವೀರವಿಷಭೇದಿಯೆನಿಪ್ಪುದನೆಯ್ದೆ ಪೇೞ್ವವೋಲ್‌
ನೀರದಮಾರ್ಗದೊಳ್‌ಪವನರೋಧಕಮಾದುವು ಕೇತನೋತ್ಕರಂ ೮೨

ಕಂ || ಪದರಜದಿಂ ಗಿರಿದುರ್ಗಂ
ಮದಲಾಳಾಜಳಕುಳಂಗಳಿಂ ಜಳದುರ್ಗಂ
ಪುದಿದುತ್ತುಂಗಧ್ವಜದಂ
ಡದಿನದು ವನದುರ್ಗಮೆನಿಸಿದುದು ನೃಪಸೈನ್ಯಂ ೮೩

ನೆಗೆದುದು ಬಳಪಾದರಜಂ
ಗಗನಮನಾವರಿಸೆ ಧರಣಿಗೆತ್ತಿನನ ಹಯಂ
ಗಗನಾಧ್ವಶ್ರಮಮಂ ಗೆಲ
ಲೆ ಗಡಂ ಖುರಪುಟಮನೂಱಲೆಂದನುಗೆಯ್ಗುಂ ೮೪

ಪರವಾಹಿನಿಗಳ ಪೆಂಪಂ
ಶರದದವೋಲ್‌ಕಿಡಿಸಿ ಕೀರ್ತಿಚಂದ್ರಿಕೆಗಿನನು
ದ್ಧುರತೇಜಕ್ಕುನ್ನತಿಯಂ
ನಿರಂತರಂ ಪಡೆದು ನಡೆಯೆ ಪಡೆ ಕಡುಪಿಂದಂ ೮೫

ವ || ದಿಕ್ಚಕ್ರಮಂ ತನ್ನಂತೆ ತೇಜಶ್ಚಕ್ರದಿನಾಕ್ರಮಿಸುವ ಚಕ್ರರತ್ನಪುರಸ್ಸರನಾಗಿ

ಕಂ || ಕ್ಷಿತಿಭೃತ್ಕುಳದೌದ್ಧತ್ಯಮ
ನತುಳಬಳಂ ಕಿಡಿಸಿ ನಮ್ರಧರಣಿಗೆ ನೆಗೞ್ದು
ನ್ನತಿಯನೊದವಿಸುತೆ ಸೇನಾ
ಪತಿರತ್ನಂ ಮುಂದೆ ನಡೆಯೆ ತನ್ನಯ ಬೆಸದಿಂ ೮೬

ಆಕ್ರಮಿಸಲ್ಕಿರ್ದೆಡೆಯಿಂ
ಚಕ್ರಂ ನೆಱೆವೊಡಮಶೇಷದಿಗ್ವಿಜಯಕ್ಕಾ
ಚಕ್ರಿ ರವಿ ನಭಮನಂಶುಗ
ಳಾಕ್ರಮಿಸೆಯುಮಿರದೆ ನಡೆವ ತೆಱದಿಂ ನಡೆದಂ ೮೭

ಮಯಮಂ ವೇಗೋಚಿತಗತಿ
ಮಯಮಂ ಮುಂತೇಱಿ ತೋಱುತುಂ ಕೂಡೆ ನಿರಾ
ಮಯಮಂದು ಬಂದುದೊಡನೆ ಸ
ಮಯಮಂ ಪಾರ್ದೆಯ್ದೆ ಸುದ್ದಿಯಂ ಪೇೞ್ವ ಜನಂ ೮೮

ಗಜಗಮನೆಯರ್ಗಿದು ಯುಕ್ತಂ
ಗಜಗಮನಮೆನುತ್ತೆ ಕೀರ್ತಿಸುತ್ತಿರೆ ಸುಜನರ್‌
ಗಜಕುಂಭಸ್ಥಳಮಂ ಮದ
ಗಜಕುಂಭಸ್ತನಿಯರೇಱೆ ನೀಱೆಯರೆಸೆದರ್‌೮೯

ಉ || ಪೀಲಿಯ ದಡ್ಡಿ ಪೀಲಿದೞೆ ವಾರುವಚೋವರ ಚೆಲ್ವುವೆತ್ತ ಕ
ಣ್ಪೀಲಿಯದೆತ್ತಲುಂ ಕುಸುಮಸೌರಭಚಂದನಗಂಧಮಗ್ನ ಮ
ತ್ತಾಳಿಗಳೊಪ್ಪೆ ನಂದನವನಕ್ಕೆಣೆಯಾಗೆ ವಸಂತಲಕ್ಷ್ಮಿವೋಲ್‌
ಲೀಲೆಯನಪ್ಪುಕೆಯ್ದು ನಡೆತಂದುದು ರಾಣಿಯ ವಾಸಮಿಶನಾ ೯೦

ಗಾಡಿಯ ಬೀಡು ಕೊರ್ಮೆಯ ತವರ್ಮನೆ ಕಂಪಿನ ಪೆಂಪು ಕಂತು ಕೊಂ
ಡಾಡುವ ದೇಸೆಯಾಸೆವನೆ ಕಾಂತಿಯ ತಿಂತಿಣಿ ಮೆಲ್ಪಿನೊಳ್ಪು ಮೆ
ಯ್ಮಾಡಿದ ಭೋಗದಾಗರಮಲಂಪಿನ ಪೊಂಪುೞಿ ಜಾಣ ಜವ್ವನಂ
ರೂಢಿಯ ಪೆಂಡವಾಸಮೆಸೆದೇನೊಡವಂದುದೊ ಚಕ್ರವರ್ತಿಯಾ ೯೧

ಕಂ || ಶೃಂಗಾರಮೆ ಸಹವಾಸಿಯ
ನಂಗನೆ ಮೆಯ್ಗಾಪಿನಂಗರಕ್ಷಕನೆನೆ ಚೆ
ಲ್ವಿಂಗೆ ತವರ್ಮನೆಯೆನಿಸಿ
ರ್ದಂಗನೆಯರ್‌ನಡೆದರೊಡನೆ ಚಕ್ರಾಯುಧನಾ ೯೨

ಉ || ರಾಣಿಯ ವಾಸದಂದಳಕೆ ದಡ್ಡಿ ಮುಸುಂಕುಮದುಂಟು ತಮ್ಮನೇ
ರಾಣಿಯ ಪೊಂಗಳದಳಕೆ ದಡ್ಡಿ ಮುಸುಂಕದನಿತ್ತೆ ಭೇದಮಾ
ರಾಣಿಯ ವಾಸದೊಳ್‌ತವಗೆನಿಪ್ಪ ವಿಳಾಸಿನಿಯರ್‌ವಿಳಾಸದಿಂ
ಜಾಣರ ಚಿತ್ತಮಂ ಪಿಡಿಯುತುಂ ನಡೆತಂದರದೊಂದು ಲೀಲೆಯಿಂ ೯೩

ಚಂ || ಕವಿದಿರೆ ದಡ್ಡಿ ರಾಣಿಯರ್ಗೆ ತಮ್ಮೊಳದಿಲ್ಲದೊಡೊಪ್ಪುತಿರ್ದೊಡೀ
ಯವಯವ ಶೋಭೆಯಿಲ್ಲವರೊಳುಳ್ಳೊಡದೇಕೆ ಮುಸುಂಕದೆಂದು ನೋ
ಡುವರೊಲವಿಂದೆ ನೋಡೆ ಪರಿಚಾರಿಕೆಯರ್‌ಬರುತಿರ್ದರೊಡ್ಡಿಸು
ತ್ತವರನೆ ಕೆಯ್ತದಿಂ ಮೊಗವಡಂಗಳೆದಂಗಜಕುಂಭಿಯೆಂಬಿನಂ ೯೪

ವದನಸರೋಜಸೌರಭಕೆ ಮಂಡಳಿಸಿರ್ದ ಮದಾಳಿಯಿಂದಮೆ
ತ್ತಿದ ಧವಳಾತತ್ರಮದು ಪೀಲಿಯ ಸತ್ತಿಗೆಯಂತೆ ತೋಱಿ ಚೆ
ಲ್ವಿದಿರ್ಗೊಳುತಿರ್ಪ ಪೀಲಿದೞೆ ಬೆಳ್ಗೊಡೆಯಂತೆ ಕಟಾಕ್ಷಕಾಂತಿಯಿಂ
ಪುದಿದೆಸೆವಂತೆ ಲೀಲೆಯೊಳೆ ಬಂದುದು ವಾರವಧೂಕದಂಬಕಂ ೯೫

ಮ || ಕರಿದಾನಾಂಬುಗಳಿಂದಮಬ್ದಸಮಯಂ ಶ್ವೇತಾತಪತ್ರಾಭ್ರದಿಂ
ಸರದಂ ಚಾಮರವಾತದಿಂದೆ ಹಿಮಕಾಲಂ ಚಂದನಾಲೇಪದು
ಬ್ಬರದಿಂದಂ ಶಿಶಿರ ವಧೂತನುಲತಾಶ್ರೀಯಿಂ ವಸಂತಂ ನೃಪಾ
ಭರಣಾಸ್ತ್ರದ್ಯುತಿಯಿಂದೆ ಬೇಸಗೆ ಕರಂ ಮೆಯ್ದೋಱಿತಾ ಸೈನ್ಯದೊಳ್‌೬೯

ಕರಿಘಂಟಾರುತಿ ವಾಜಿರಾಜಿಖುರಹೇಷಾನಿಸ್ವನಂ ಸ್ಯಂದನೋ
ತ್ಕರಚಕ್ರವ್ರಜಚೀತ್ಕೃತಂ ಪಟಹಭೇರೀಶಂಖನಾದಂ ದಿಶಾಂ
ತರಮಂ ತೀವಿದುವಾವಚೋದ್ಯಮವನೀಚಕ್ರಂ ದಿಶಾಚಕ್ರಮಂ
ಬರಚಕ್ರಂ ಕಿಱಿದಾಯ್ತು ಚಕ್ರಿಯ ಚಮೂಚಕ್ರಕ್ಕೆ ತದ್ಯಾತ್ರೆಯೊಳ್‌೯೭

ವ || ಅಂತು ಪಗೆವರ ಬಗೆಗಂ ಸಂದಣಿಯಾಗೆ ಸಂದಣಿಸಿ ಬಲ್ಕಣಿಯೆನಿಸಿದಣಿ ಬರುತ್ತುಮಿರೆ ದುರ್ವಾರಪೌರುಷಂ ವಾರುಣವಾಯವ್ಯದಿಶಾಮುಖಕ್ಕೆ ಅಭಿಮುಖವಾಗಿ

ಕಂ || ಎಡೆಯಣ ಬಡವುಗಳಂ ಗಡ
ಕಿಡಿಸುವುದಂ ಮಾಣ್ದು ಕೆಱೆಯನಗುೞ್ವೊ ಕೊರಡಂ
ಕಡಿಯಲ್ವೇೞ್ಕು ಪೇೞೆನೆ
ನಡೆದಂ ಬಲ್ಲಿದರ ಮೇಲೆ ಮುಂ ಚಕ್ರಧರಂ ೯೮

ಚಂ || ನಡೆಯದೆ ಮುಂದೆ ಬಂದು ಶರಣೆಂದು ಬರ್ದುಂಕುವೆವೆಂಬ ಭೂಭುಜರ್‌
ನಡೆದೊಡೆ ಬಂದು ಕಂಡರೆನೆ ವಿಸ್ಮಯಮೇನೆನೆ ಚಕ್ರವಲ್ಲಭಂ
ನಡೆವ ದಿಶಾಮುಖಸ್ಥಿತ ಮಹೀಶರವೋಲಿತರಾಶೆಯಲ್ಲಿ ನೇ
ರ್ಪಡೆ ನೆಲಸಿರ್ದ ಭೂಭುಜರ ಕಾಣ್ಬಿನೆಗಂ ನಡೆದಂ ಜಯಾಶ್ರಯಂ ೯೯

ವ || ಅಂತು ನಿಖಿಳಭುವನತಳವಿಳಸಿತಸರೋಜರಾಜ ರಾಜತೇಜಕ್ಕೆ ಸುಗಿದೊರ್ಮೊದ ಲಾತ್ಮೀಯಶ್ರೀಯನೊಪ್ಪಿಸಿ ತಲೆವಾಗುವಂತೆ ಪ್ರಸ್ಥಾನಗಭೀರಭೇರೀಭಾಂಕಾಭಿನ್ನ ಹೃದಯರಾಗಿ

ಉ || ಸುಸ್ವರಗಾಯಕೆಪ್ರತತಿ ಜಾತಿಹಯಂ ಮದಗಂಧಸಿಂಧುರಂ
ಭಾಸ್ವರರತ್ನ ಭೂಷಣಗಣಂ ಮೃಗನಾಭಿ ಮೃಗಾಯತಾಕ್ಷಿ ಕಾ
ರ್ತಸ್ವರರಾಶಿ ಸಾರವಸನಂ ಘನಸಾರಮಿವಾದಿಯಾದ ಸ
ರ್ವಸ್ವಮನಿತ್ತು ಚಕ್ರಿಯ ಮನಂಬಡೆಯಿತ್ತು ನೃಪಾಳಜಾಳಕಂ ೧೦೦

ನೋಡಲಗಮ್ಯಮಪ್ಪಡವಿಯಂ ಗಿರಿಸಾನುವಿನಗ್ಗದಿಕ್ಕೆಯಂ
ಮಾಡಿದ ಬೇಡರುಂ ಪುಲಿಯ ಚರ್ಮಮನಾನೆಯ ದಂತಮಂ ತಡಂ
ಮಾಡದೆ ತಂದು ತಮ್ಮೊಡಮೆಯಂ ವಿಭುಗೊಪ್ಪಿಸಿ ಕಂಡರೆಂದೊಡಿಂ
ನಾಡು ಪೊದೞ್ದ ಬೀಡು ತಮಗಣ್ಣವರಾರ್ಗಳ ಕಪ್ಪಮಿಯದರ್‌೧೦೧

ವ || ಅಂತು ಸಕಳ ದಿಶಾನೀಕಸ್ಥಿತರಾಲೋಕಮೊರ್ಮೊದಲೆ ತಲೆವಾಗಿ ನಿಜಕು ಳಧನಕುಳಮನೊಪ್ಪಿಸಿಯಾಳ್ವೆ ಸಮನಪ್ಪುಕೆಯ್ವಿನಮಾಜ್ಞಾವಿಧೇಯಮಂ ಮಾಡುತ್ತುಂ

ಕಂ || ಸುದತಿಯ ಸೌಮ್ಯಾಕೃತಿಯಂ
ಮುದದಿಂದೀಕ್ಷಿಸುವತೀವಭಾವುಕನ ನಯಾ
ಸ್ಪದನಯನದಂತೆ ರಮ್ಯ
ಪ್ರದೇಶದೊಳ್‌ಚಕ್ರಿ ಬೀಡುವಿಡುತುಂ ನಡೆದಂ ೧೦೨

ಮ || ವನಜಾಮೋದಮನಂಗ ನಾಸ್ಯವನಜಾತಾಮೋದದೊಳ್‌ವಾರಿಬಿಂ
ದುನಿಕಾಯಂಗಳನುದ್ಘಘರ್ಮಜಳದೊಳ್‌ಸಪ್ತಚ್ಛದಾಮೋದಮಂ
ಘನಮಾತಂಗ ಮದೋತ್ಥಸೌರಭದೊಳೋತಂತೊಂದಿಸುತ್ತುಂ ನದೀ
ವನಮಂದಾನಿಳನೊಂದಿಸಿತ್ತು ಪಡೆಗತ್ಯಾನಂದಸಂದೋಹಮಂ ೧೦೩

ವ || ಅಂತು ವನಜಳಕೇಳಿಗನುಕೂಳಮಾದ ನದ್ಯುದ್ಯಾನವಿಳಾಸಪ್ರದೇಶದೊಳೇನು ಮನುದಾಸೀನಂ ಮಾಡದೆ ಬೀಡುವಿಡುತ್ತುಂ ಪೋಗೆವೋಗೆ

ಮ || ಪನಿಪುಲ್‌ಕುಂಭಿಮದಾಂಬುವಿಂ ಹಿಮಸಮೀರಂ ಸಾರಕರ್ಪೂರಚಂ
ದನ ಗಂಧೋಚಿತಮಾರಾನಿಳದಂತುಣ್ಮೆ ಚಕ್ರೇಶಸಾ
ಧನಮಂ ಪೋಲ್ತೊದವಿತ್ತು ತೀವ್ರಕರತೇಜೋವೈಭವಂ ವಿದ್ವಿಷ
ದ್ವನಿತಾಸ್ಯಾಂಭುಜಲಕ್ಷ್ಮಿಯೋಸರಿಪಿನಂ ಹೇಮಂತಮೇಂ ಮಂತಣಂ ೧೦೪

ಚಂ || ದಿವದೊಳಮೌಷ್ಣ್ಯಮಂ ಬಿಸುಟು ಶೀತಕರಂಗೆಣೆಯಾಗೆ ಭಾನು ಕೈ
ರವಮಲರ್ದಿರ್ದುವಂಬುಜವನಂ ಮುಗಿದಿರ್ದುವು ಬೆಳ್ಮುಗಿಲ್ತಳ
ರ್ದುವು ಹಿಮಮಂ ಕಱುತ್ತು ಕಱೆದಂತೆ ಚರಕ್ಕಚರತ್ವಮಾಗೆ ಕೋ
ಡುವ ಪವನಂ ಪೊದೞ್ದು ಪೊದೞ್ಪಿರೆ ಮಾಗಿ ಮಹೀವಿಭಾಗದೊಳ್‌೧೦೫

ಕಂ || ಹಿಮಮಂ ಪೊತ್ತೆಸೆಪನಿಳ
ಶ್ರಮಜಳಮಲ್ಲೊಕ್ಕುವೆನೆ ಸುರಿವ ಪನಿಪುಲ್ಗಳ್‌
ಗಮನಕ್ಕೆ ಜಳಾಂಜಳಿಯಂ
ನಿಮಿರ್ಚೆ ಪಥಿಕರ್ಗೆ ಪೆರ್ಚಿದುದು ಹೇಮಂತಂ ೧೦೬

ಹಿಮಸಮಯದೊಳಹಿಮಕರಂ
ಹಿಮಹತಿಗುಳ್ಳೞ್ಕೆ ಕರಮನುಡುಗುವನುೞಿದಂ
ತಮಳಕ್ಕಮಳಂಗಳೆ ಕೊ
ಪ್ಪಮರಲ್‌ಪರಿವಾ ಬಿಸಿಲ ಪಸರಮೈಕಿಲ್ಗಳ್‌೧೦೭

ದಿವಸವಧು ಕುಂದುವಳ್‌ರಾ
ತ್ರಿವನಿತೆ ಪೆರ್ಚುವಳದುಚಿತಮಿ ಮಾಗಿಯೊಳೊ
ಪ್ಪುವ ಪತಿಯ ಹಾನಿವೃದ್ಧಿಯೆ
ಯುವತಿಯರೊಳಮಕ್ಕುಮೆಂಬುದದು ತಕ್ಕುದೆ ದಲ್‌೧೦೮

ಕರಚರಣಂಗಳ್‌ಹಿಮದಿಂ
ದುದೆ ಕೋಡಗಗಟ್ಟಿದಂತಿರೆ ಶಾಖಾ
ಚರಮಾಗಿಯುಮೇಂ ಶಾಖಾ
ಚರಮೆನಿಸಿದುವಂದು ಕೋಟಿ ಕೋಡಗಮನಿತುಂ ೧೦೯

ಚಂ || ಕರಿ ನಗದೊತ್ತುಗೊಂಡುಮಿಡುಕಲ್ಕಣಮಾಱದೆ ನಿಂದೊಡಂದು ಕೇ
ಸರಿ ಹಿಮಸಂಗಮಕ್ಕಗಿದಳುರ್ಕೆಯನೊಕ್ಕು ಕರೀಂದ್ರಪಾರ್ಶ್ವಮಂ
ಗಿರಿಯ ನಿತಂಬಮೆಂದು ಗಡ ಸಾರ್ದು ನಿಕುಂಚಿತಗಾತ್ರಮಿರ್ದುದಾ
ಯೆರಡಱ ಕೋಪವಹ್ನಿಯುಮಡಂಗಿದುದಕ್ಕುಮೆ ಶೀತಘಾತದಿಂ ೧೧೦

ಕಂ || ಸರದೊಳ್ ಸಲಿಲಂ ವಿಮಳ
ಸ್ವರೂಪಮಂ ಪಡೆದು ಮಾಗಿಯೊಳ್‌ಶೈತ್ಯಗುಣಾ
ಕರಮೆನಿಸಿತಂತೆ ಶಾಂತತೆ
ದೊರೆಕೊಳ್ವುದು ಸುಪ್ರಸನ್ನಹೃದಯರ್ಗರಿದೇ ೧೧೧

ಒದವಿಸೆ ಸರದಂ ಸಪ್ತ
ಚ್ಛದದೊಳ್‌ಸಮ್ಮದಮನಳಿಗೆ ಮನುಜಾಳಿಗೆ ತಾ
ನೊದವಿಸಿತೆಸೆವ ನವಪ್ರ
ಚ್ಛದದೊಳ್‌ಸಮ್ಮದಮನೊರ್ಮೆಯುಂ ಹಿಮಸಮಯಂ ೧೧೨

ಘನಘುಸೃಣಮಲ್ಲದನುಲೇ
ಪನಮಂ ಸಂಶ್ಲೇಷಮಲ್ಲದಣಮೊಲ್ಲದು ಮಿ
ಕ್ಕಿನ ಕಾಮಕೇಳಿಯಂ ವಿಷ
ಯನಿಮಗ್ನಂ ಭಗ್ನಮಾಗಿ ಮಾಗಿಯೊಳೆ ಜನಂ ೧೧೩

ಚಂ || ಮಡದಿಯರಾತ್ಮಕೇಕರವಿಳೋಕನದಿಂ ಜನಚಿತ್ತಮಂ ಪದಂ
ಬಡಿಸೆ ಬೞಿಕ್ಕೆ ತಮ್ಮ ಕೆಲಸಂ ಗಡದಲ್ಲದೆ ಮಾಗಿಯಲ್ಲಿ ತಾ
ವೆಡೆವಱಿಯುತ್ತುಮಿರ್ದಪುವಿವೇವುವೆನುತ್ತಿೞಿಕೆಯ್ದು ಪೂಗಳಂ
ಗಡ ಕಡೆಗಣ್ಣ ಕೂರ್ಗಣೆಗಳಿಂದಿಸುವಂ ಮದನಂ ವಿಯೋಗಿಯಂ ೧೧೪

ಜಗಕಪಕಾರಿ ತೀವ್ರನೆನಿಸಿರ್ದಧಿಕಾರಿ ನಿರಾಕುಳಂ ಕುಟುಂ
ಬಿಗಳ ಧನಂಗಳಂ ಕವರ್ದು ಮೇಲುದುಮಂ ಸುಗಿವಂತೆ ವೃಕ್ಷರಾ
ಜಿಗಳ ನವಪ್ರಸೂನಫಲಮಂ ಶಿಶಿರಾನಿಳನೀೞ್ದುಕೊಂಡು ನೆ
ಟ್ಟಗೆ ನೆಲಸಿರ್ದ ಪಣ್ಣೆಲೆಯನೆಯ್ದೆ ಕಳಲ್ಚಿದುದೆಲ್ಲಿ ನೋೞ್ಪೊಡಂ ೧೧೫

ಮ || ಘನಸಾರಾನುಭವಕ್ಕೆ ಚಂದನರಸಾಶ್ಲೇಷಕ್ಕೆ ವಿದ್ವೇಷಿಯಾ
ಗಿ ನಿತಾಂತಂತಂ ಶಿಶಿರಂ ವಸಂತಸಮಯರ್ಶರೀಪ್ರೀತಿಯಂ ಪುಟ್ಟಿಸಿ
ತ್ತೆನಸುಂ ಭೂವಳಯಕ್ಕನಿಷ್ಟದೊದವಂ ಸಂಪಾದಿಸುತ್ತಿರ್ಪ ಭೂ
ಪನ ಸಂಪತ್ತಿ ಜನಪ್ರಸನ್ನನೃಪತಿಶ್ರೀಪ್ರೀತಿಯಂ ಮಾೞ್ಪವೋಲ್‌೧೧೬

ಚಂ || ಹಿಮವಿಭವಂ ಪ್ರತೀತ ಶಿಶಿರಂ ಸಮಯಾಸಮಯಜ್ಞನಂದದಿಂ
ದಮೆ ಪೆಱಪಿಂಗಿದತ್ತು ಜಳಕೇಳಿಗೊಡರ್ಚಿದಪಂ ಸಮಸ್ತಭೂ
ರಮಣನದಕ್ಕೆ ತಮ್ಮಿರವು ಸಲ್ಲದೆನುತುೞಿದಂತೆ ಸಿಂಧುತೀ
ರಮನವನೀಜಪುಷ್ಪಫಳಸಾರಮನೆಯ್ದದ ಮುನ್ನಮಾವಗಂ ೧೧೭

ಕಂ || ವಿಶದಸುಮನಸ್ಸಮೂಹ
ಪ್ರಶಸ್ತವಿಭವಾಪಹಾರಿಯೆಂಬೀ ಮುಳಿಸಿಂ
ಕುಶಳನೃಪನಂತೆ ಬಂದುದು
ಶಿಶಿರಮನದಟಲೆಯ ಕಾಂತಮೆನಿಸಿ ವಸಂತಂ ೧೧೮

ವ || ಅದೆಂತೆನೆ
ಚಂ || ಅಲರ್ದಲರ್ಗಣ್ಗಳೊಪ್ಪೆ ನಳಿನಾನನಮಾಗೆ ವಿಕಾಸಮಂ ಸುಪಾ
ಟಳದಶನಚ್ಛದಂ ಸ್ಮಿತದೊಳೊಂದೆ ಸಮುನ್ನತರಾವದಂತೆ ಕೋ ||
ಕಿಳಕಳರಾವಮುಣ್ಮೆ ನವನಂದನಲಕ್ಷ್ಮಿಗೆ ಪುಷ್ಪಧಾಮಕೋ
ಮಳೆಗೆಸುವಂದು ಬರ್ಪ ತೆಱದಿಂದಮೆ ಬಂದುದು ದಕ್ಷಿಣಾನಿಳಂ ೧೧೯

ಮ. ಸ್ರ || ಲಲನಾಲಾವಣ್ಯವಾರಾಶಿಯೊಳೆ ಗುರುಕುಚಂ ಪೊನ್ನ ಬಿಣ್ಗುಂಡು ಶುಂಭ
ತ್ಫಳಿತಾಮ್ರಂ ಕೂವಕಂಬಂ ವಿಚಕಿಳಮೆಸಳಂ ಚಂದ್ರಮಂ ಕೂವಕಂಬ
ಕ್ಕೆಳಸಿರ್ಪಂ ಕಂತು ಸಾಂಯಾತ್ರಿಕನೆನಿಸೆ ಮನೋವೇಗದಿಂ ದಕ್ಷಿಣಾಶಾ
ನಿಳ ಸಂಪಚ್ಛೋದಿತಂ ಬಂದುದು ಸುಖಭರಿತಂ ಭೈತ್ರಮಂ ಪೋಲ್ತು ಚೈತ್ರಂ ೧೨೦

ಮ || ಹರಿ ಪುನ್ನಾಗದಿನುದ್ಘಖೇಟನ ಮರುದ್ವ್ರಾತಂಗಳಿಂ ಚಾರುಬಾ
ಣರುಚಿಸ್ಯಂದನದಿಂ ವನೇಚರಪದಾತಿ ವ್ಯೂಹದಿಂ ಷಡ್ವಿಧಂ
ಪರಿವಾರಂ ತನಗೊಪ್ಪೆ ಚಕ್ರಪದವೀ ಸಂಪೂಜಿತಂ ರಾಜನಂ
ತಿರೆ ವಿಭ್ರಾಜಿಸಿ ಬಂದದೇನೆಱಗಿಸಿತ್ತೋ ಚೈತ್ರಮಿ ಧಾತ್ರಿಯಂ ೧೨೧

ಚಂ || ಸುರಗಿ ಮನೋಹರಂ ಸುರಭಿ ಕಳ್ಪಕುಜಂ ಸಹಕಾರಭೂರುಹಂ
ವಿರಹಿಗಿರಿಪ್ರಭೇದಿ ಕಳಕಂಠರವಂ ಪವಿ ಬಿಂಬಕುಂಭಭಾ
ಸ್ವರಶಶಿಕಾಂತಿದಂತಿಯೆನೆ ಬಂಧುರಗಂಧಮರುದ್ವಿಳಾಸ ಭಾ
ಸುರತರನಂದನಪ್ರಭು ಸುರೇಶ್ವರನಂತೆ ವಸಂತಮೊಪ್ಪುಗುಂ ೧೨೨

ಮ. ಸ್ರ || ಲತಿಕಾಲಕ್ಷ್ಮೀವಿಳಾಸಂ ಮಳಯಪವನವಿನ್ಯಾಸಮಬ್ಜಪ್ರಹಾಸಂ
ಚತುರಾಶ್ವಾಸಂ ಸಮುತ್ಪಾದಿತವಿರಹಿಜನತ್ರಾಸಮರ್ಕಪ್ರತಾಪಾ
ಪ್ರತಿಮವ್ಯಾಸಂ ಶಶಾಂಕದ್ಯುತಿವಿಭವವಿಭಾಸಂ ವರಸ್ತ್ರೀವಿಳಾಸಂ
ಕ್ಷಿತಿಗತ್ಯಾನಂದಮಂ ಸಂಧಿಸಿತು ಸುರಭಿಮಾಸಂ ಸ್ಮರಶ್ರೀವಿಳಾಸಂ ೧೨೩

ವ || ಅಂತು ಸಮಸ್ತಧಾತ್ರಿಯೊಳಂ ಪ್ರಶಸ್ತಪ್ರಮೋದಮಂ ವಿಸ್ತಾರಿಸಿ

ಉ || ಇತ್ತುದಶೇಷರಾಜನಿವಹಂ ತನಗುಳ್ಳ ಸುವಸ್ತುವಾಹಮಂ
ತೆತ್ತಪೆನಾನುಮೆಂಬ ಬಗೆಯಿಂದಮೆ ಬಂದು ವಸಂತರಾಜನೇ
ನಿತ್ತನೊ ಪಲ್ಲವಪ್ರಸವಸತ್ಫಳಮಂ ಕಳಕಂಠಗಾಯಕೋ
ದ್ಯತ್ತತಿಯಂ ಜಗತ್ಪ್ರಭುಗೆ ದಕ್ಷಿಣಮಾರುತಚಾಮರೌಘಮಂ ೧೨೪

ವ || ಅಂತು ವಸಂತರಾಜಂ ತನಗಿತ್ತಪೂರ್ವ ವಸ್ತುಗಳಂ ಸಮಸ್ತ ಧಾತ್ರೀಪತಿ ಕೊಳ್ಳುತ್ತುಂ

ಮ. ಸ್ರ || ಅನುಕೂಲಾಗಾಧ ಪದ್ಮಾಕರ ಗುಣವಿಳಸದ್ರಾಜಹಂಸಾಳಿವಿಭ್ರಾ
ಜಿನಿಯಂ ದಾನಾಂಬುವಾಹೋಚಿತಗತಿ ವಿಳಸಚ್ಚಕ್ರಸಂರಾವ ಸಂಶೋ
ಭಿನಿಯಂ ತನ್ನೊಪ್ಪುವೀ ವಾಹಿನಿಯವೊಲೆಸೆಯುತ್ತಿರ್ಪ ರಕ್ತಾಖ್ಯೆಯಂ ವಾ
ಹಿನಿಯಂ ತಾನೆಯ್ದೆವಂದಂ ಸುಕವಿಜನಮನೋಹರ್ಷಸಸ್ಯಪ್ರವರ್ಷಂ ೧೨೫

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥ ಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್‌ವಸಂತಾಗಮನವರ್ಣನಂ ಅಷ್ಟಮಾಶ್ವಾಸಂ