ಕಂ || ಶ್ರೀವಲ್ಲಭನಖಿಳ ಕಳಾ
ಕೋವಿದನೀಕ್ಷಿಸಿದನೀಕ್ಷಣಾಕ್ಷೂಣಸುಖೋ
ಜ್ಜೀವನಜೀವನಮಂ ಶೋ
ಭಾವಿಳಸಿತನದಿಯನೊಸೆದು ಕವಿಕುಳತಿಳಕಂ ೧

ವ || ಆ ಸಮಯದೊಳ್‌

ಕಂ || ಅೞಿಪಿಂ ಪೆಂಡಿರ ಪೊರ್ಕುೞ
ಸುೞಿಯೊಳ್ ಸುೞಿತರ್ಪ ನೃಪನ ಕಣ್ಬೊಣರ್ಗಳನೇ
ನಿೞಿಸಿದುವೊ ನದಿಯೊಳೊದವಿದ
ಸುೞಿಗಳ ಬೞಿವಿಡಿದು ಸುೞಿದು ಪೊಳೆವೆಳಮಿಂಗಳ್‌೨

ವ || ಅಂತಾ ಮಹೀಕಾಂತನನುರಕ್ತೆಯಿಂ ರಕ್ತಾಖ್ಯಾನನದೀಲಕ್ಷ್ಮಿಯಂ ನಿರೀಕ್ಷಿಸುತ್ತುಮಿರೆ

ಕಂ || ಭೂಮೀಶನ ಮನಮಱೆದು ಮ
ಹಾಮಾತ್ಯಂ ನಿಲಿಸಿ ದಂತಿಯಂ ಬಿನ್ನವಿಕುಂ
ಪ್ರೇಮದ ಮಡದಿಯ ನುಡಿಯವೊ
ಲೇಮಾತಿದು ದಾಂಟಲರಿದು ನದಿ ನೃಪತಿಳಕಾ ೩

ವ || ಅಂತುಮಲ್ಲದೆ

ಚಂ || ಅನುಪಮಪುಂಡರೀಕಪರಿಶೋಭಿ ವಿನೋದನಿಮಗ್ನ ಕಾಮಿನೀ
ಘನಕುಚಕುಂಕುಮಾಂಕಭಿನಂದಿತನಂದನರಾಜಿ ರಾಜಹಂ
ಸನಿವಹಸೇವಿತಂ ವಿಧೃತಚಕ್ರಮುದಾರ ಪರೋಪಕಾರಜೀ
ವನನಿಧಿ ನಿವೋಲಧಿಪ ರಂಜಿಪುದೀ ನದಿಯಾತ್ತ ಸಮ್ಮದಂ ೪

ಉ || ಈ ವನವೀಥಿಯೊಳ್‌ಬೆಳೆದ ಬಾಳದ ಬೇರ್ಗಳ ಚಂದನಂಗಳಿಂ
ದೀವರದೊಕ್ಕ ಪಾದರಿಯ ಜಾದಿಯ ಕೇದಗೆಯಿಂಪುವೆತ್ತ ಕಂ
ಪಾವಗಮಿಲ್ಲಿ ಪಲ್ಲವಿಸೆ ಪಾಣಿಯವಾಸಮನಿಕ್ಕಿದಂತೆ ಸೌ
ಖ್ಯಾವುದೆಂದೊಡೀ ನದಿಯನೀಕ್ಷಿಸೆ ಪಾಂಥನ ತೃಷ್ಣೆ ಪೋಗದೇ ೫

ಕಂ || ಇಂಬಾದಿದಱಿರ್ತಡಿಯ ಬ
ನಂ ಬಯ್ತಲೆದೆಗೆದ ಕೇಶವನಮೆನಿಸೆ ಪರಾ
ಗಂಬೊರೆದ ಸಿಂಧು ಸೀಮಂ
ತಂಬೊಲಿಳಾಕಾಂತೆಗಧಿಪ ಮಿಗೆ ಸೊಗಯಿಸುಗುಂ ೬

ಭುವನಪತಿ ಬೆಸಸೆ ಸಂಚಳಿ
ಸುವರಸಿಯಂ ಮೀಱಲೀಯದೊಯ್ವಾ ಸಹವಾ
ಸಿವೊಲಿದಱ ವಜ್ರವೇದಿಕೆ
ನವವೇತ್ರಲತಾವನಂ ಕರಂ ಕಣ್ಗೊಳಿಕುಂ ೭

ವ || ಅಂತುಮಲ್ಲದೆಯುಂ

ಕಂ || ಪ್ರವಿಪುಳಲಕ್ಷ್ಮೀನಂದನ
ಮವಿಲಂಘ್ಯಂ ಭುವನರಕ್ಷಕಂ ಪ್ರಾಪ್ತಮಹಾ
ರ್ಣವಮಪ್ಪುದಱಿಂದವನಿಪ
ಭವದಾಜ್ಞೆವೊಲಿದಱ ಕನಕವೇದಿಕೆಯೆಸೆಗುಂ ೮

ಮ || ತನಿವಣ್ಣಾದುವು ಮೈಂದವಾೞೆ ಸವಿಗಂ ಕಂಪಿಂಗಮಾಯ್ತಿರ್ಕೆ ಪ
ಣ್ತೆನಸುಂ ಬರ್ಕೆ ರಸಕ್ಕೆ ಪಕ್ಕೆನಿಸಿ ಕೊರ್ವಿತ್ತಾವಗಂ ಕರ್ವು ಸಾ
ಲ್ವನಿತಂ ಕಾಯ್ತುದು ತೆಂಗು ಪಣ್ಣಡಕೆಯಂ ಪೇಱಿರ್ದುದೀ ಕೌಂಗು ಪ
ಣ್ಣನೆ ತಿಣ್ಣಂ ತಳೆದತ್ತು ಮಾವೆನೆ ವನಂ ಚಿತ್ತೋತ್ಸವಾಲಂಬನಂ ೯

ಕಂ || ತಿಳಿನೀರಿಂದಂ ತೆಂಗಂ
ಬೆಳೆಯಿಸೆ ನದಿ ನದಿಯನೊಸರ್ವಯೆಳನೀರಿಂದಂ
ಬೆಳೆಯಿಸೆ ತೆಂಗೊಪ್ಪಿದುವವಿ
ರಳಮೊಂದಱ ಕಡವನೊಂದು ನೀಗುವ ತೆಱದಿಂ ೧೦

ಕೞ್ತಪೆಲೆವಳ್ಳಿಗಳಿಂ
ತಳ್ತೆಳೆಗೌಂಗಲ್ಲಿ ಮಲ್ಲಿಗೆಯ ವಲ್ಲರಿಯಿಂ
ತಳ್ತೆಳಮಾವು ಲತಾಂಗಿಯ
ತೋಳ್ತಳ್ತಿರ್ದೆಸೆವ ಕಾಂತನಂತೆಸೆದಿರ್ಕುಂ ೧೧

ಎನಿತೊಳವು ಕುಸುಮಸಮುದಯ
ಮನಿತುಮನಾತ್ಮೀಯಗಂಧದಿಂ ಪೊರೆದಳಿಗಂ
ತೆನಸುಂ ಚವತಮನೊದವಿಪು
ದೆನಿಸುವ ಸಂಪಗೆಯ ಕಂಪು ಪೊಂಪುೞಿ ಬನದೊಳ್‌೧೨

ಪೊಂಕಂಪಂ ಪಡೆದತ್ತೆನೆ
ಪೊಂಕಂ ಪಂಚೇಷುಗೊದವೆ ಚೈತ್ರದ ಪೆಸರ್ವೆ
ತ್ತಂಕಂ ಬಿರಯಿಗೆ ನೆಗೞ್ದೂ
ತಂಕಂ ಬಿಡದೆಡರೆ ಪೂತ ಸಂಪಗೆಯೆಸೆಗುಂ ೧೩

ಝಂಕಾರದಿಂದೆ ವಿರಹಿಯ
ಹಂಕಾರಮನುಗಿಯೆ ಚೈತ್ರಮೊಸೆದಳಿಮಾಳಾ
ಕಿಂಕರರ್ಗೆ ಕೊಟ್ಟ ಕಣಿಗಿಲೆ
ಯಂ ಕಣಿಗಿಲೆ ಪೋಲ್ತು ಪೂತು ಮಿಗೆ ಸೊಗಯಿಸುಗುಂ ೧೪

ಕತ್ತುರಿಗನುಲೇಪಂ ಕಂ
ಪೊತ್ತರಿಪೀ ಪೈತಿಗಲರ್ಗೆ ಎಣೆಯಿಲ್ಲೆನುತುಂ
ಚಿತ್ತಭವನಿತ್ತ ಜಯಸಂ
ಪತ್ತಿಯ ಕಹಳಾರವಂಬೊಲಳಿರವಮೆಸೆಗುಂ ೧೫

ಮಧುಬಿಂದು ಮಲ್ಲಿಗೆಯೊಳಿರೆ
ಮಧುಕರರುತಿ ಮಂತ್ರಮೆನಪಿನಂ ದ್ವಿಜರಾಜಂ
ಮಧುಮಿತ್ರನ ಮಧುವೆಗೆ ಮಿಗೆ
ಧುಪರ್ಕಮನೞ್ಕಱಿಂದೆ ಮಾೞ್ಪಂತೆಸೆಗುಂ ೧೬

ಶ್ರೀಗಂಧವಿನೂತನವ
ಶ್ರೀಗಂ ಧವಳಾಬ್ಪ ಸುರಭಿಸುರಭಿತಸಲಿಳಾ
ಭೋಗಕ್ಕಂ ಮನಮೆಱಗಿರೆ
ಭೋಗಕ್ಕಂಗನೆಯರೆಳಸಿದರ್‌ನೃಪತಿಳಕಾ ೧೭

ಕಾಂತಿಯನಾಂತೆಸೆವ ಲಲಾ
ಟಂ ತೊಳಗುವ ಸಸಿವೊಲೊಪ್ಪಿ ಕಾಯ್ವಂತೆ ಲಲಾ
ಟಂತಪನಾದಂ ತಪನಂ
ಶ್ರಾಂತಿಗೆ ನೆಲೆಯಾದರಂತವುರದಂಗನೆಯರ್‌೧೮

ಇನನಾರಂ ಮನ್ನಿಪನವ
ರನೆ ಪೊರ್ದುವುದುಚಿತಮೆಂಬ ತೆಱದಿಂದಂ ನೆ
ಟ್ಟನೆ ಕಾಯೆ ತಪನನಂಬುಜ
ವನಮಂ ಪೊರ್ದಿದುದು ರಾಜಹಂಸಸಮಾಜಂ ೧೯

ಕಡುಗಾಯ್ದಂ ರವಿ ಲೇಸಂ
ಕಡೆಗಣಿಸಲ್ಕಾಗದೆಂಬ ತೆಱದಿಂ ಲೇಸಿಂ
ಗೆಡೆಗೊಂಡಿರ್ದುದು ನದಿಯುಂ
ತಡಿವಿಡಿದೀ ಬನಮುಮಿಲ್ಲಿ ಬಿಡುವುದು ಬೀಡಂ ೨೦

ಈ ವನಲಕ್ಷ್ಮೀ ದಿಟಂ ತಾ
ನೀ ವನ ಲಕ್ಷ್ಮಿವೊಲೆ ಸರ್ವಜನಸೇವ್ಯಮಿದಂ
ಭಾವಿಸಿ ತಡೆಯದೆ ನಡೆವುದು
ದೇವರ್‌ವನಕೇಳಿಗುೞಿವುದಾಳೋಚನಮಂ ೨೧

ಎನೆ ಮನದೆಗೊಂಡು ಬೀಡಂ
ಜನಪತಿ ಬಿಡಿಸಲ್ಕೆವೇೞ್ದು ತಡೆಯದೆ ನಿಜವಾ
ಹನದಿನಿೞಿದು ಗಜಪತಿಯಂ
ನೆನೆಯಿಸಿ ವನಮಂ ವಿನೋದಪತಿ ಪುಗುತಂದಂ ೨೨

ವ || ಆ ಸಮಯದೊಳ್‌

ಚಂ || ಕೞಿಯೆ ಬೞಲ್ದ ತೋರಮುಡಿ ಜೋಲ್ದುಡೆ ಘರ್ಮಜಳಂಗಳಿಂದೆ ನಾಂ
ದೞಿದ ಲಲಾಮಕಂ ನಿಮಿರ್ವ ಸೂರ್ಯಮರ್ದೋಪ್ಪಿರೆ ವಾಹನಂಗಳಿಂ
ದಿೞಿಯುತುಮಿಕ್ಷಿಪರ್ಗೆ ವಿಪರೀತರತಕ್ಕೆಳಸಿರ್ದು ಮಂಚದಿಂ
ದಿೞಿವ ಬೆಡಂಗು ಸಂಗಳಿಸೆ ಕಣ್ಗೊಳಿಸಿತ್ತು ವಿಳಾಸಿನೀಜನಂ ೨೩

ಕಂ || ಲಲನೆಯರ ಲಲಾಟದಿನು
ಚ್ಚಳಿಸುವ ಬೆಮರಿಂದೆ ನಾಂದು ಪತ್ತಿದ ಮೃದುಕುಂ
ತಳಮೆಸೆದುವು ಸಾದ್ರತೆ ಸಂ
ಚಳರುಮನಳವಡಿಸಿ ಪಿಡಿಗುಮೆಂದಱಿಪುವವೋಲ್‌೨೪

ವೃತ್ತ ಕುಚೆಯರ್ಗೆ ಬೆಮರಿಂ
ದೊತ್ತರಿಸಿತ್ತಂಗದಲ್ಲಿ ಕತ್ತುರಿಯೆ ಹದಂ
ಬೆತ್ತಂತೆಲರೊಳ್‌ನೀರ್ದಳಿ
ದತ್ತನೆ ದೊರೆವೆತ್ತು ಸುರಭಿ ಪರಿಮಳಮಾಗಳ್‌೨೫

ಕಳಿಕೆಯನರಲಂ ತಳಿರಂ
ತಳೆವುತ್ಕಳಿಕೆಯೊಳೆ ಮಱೆದು ಗಮನಶ್ರಮಮಂ
ಗಳಗಳನೆ ನಡೆದರಬಲೆಯ
ರಳಸತೆಯೊಲ್ದೆಡೆಗೆ ಪೋಪರೊಳ್‌ಪುಟ್ಟುಗುಮೇ ೨೬

ಪಿಡಿಗಳ್‌ಮನೋಭವನ ಕೆ
ಯ್ಪಿಡಿಗಳ್‌ವನಕೇಳಿಗೆಳಸಿ ಗಜರಾಜನ ಬೆಂ
ಬಿಡಿದು ನಡೆತರ್ಪ ತೆಱದಿಂ
ನಡೆದರೆ ನೃಪನೊಡನೆ ಲಲಿತಗತಿಯರ್‌ಸತಿಯರ್‌೨೭

ಗುರುಕುಚದ ಪತ್ರಭಂಗಂ
ಪರೆದುದು ಬೆಮರಿಂದೆ ಪಲ್ಲವಗ್ರಾಹಿಣಿಯರ್‌
ತರುಣಿಯರಾಗದ ಮುನ್ನಂ
ಪರಿಹರಿಸುವುದೆಂದು ವಿಟರ್ಗೆ ಸೂಚಿಪ ತೆಱದಿಂ ೨೮

ವ || ಅಂತು ಬಟ್ಟೆವಯಣದಾಯಾಸದಿಂ ಘಾಸಿಯಾಗಿಯುಂ ಕತ್ತುರಿಯಂ ಪೂಸಿ ಮಾಡಿದಂತೆ ಲೇಸೆನಿಸುವ ಪರಿಮಳಮಂ ಸೂಸುತ್ತುಂ ಬರ್ಪ ವಿಳಾಸಿನೀಜನಂಬೆರಸರಸಂ ಬೆಮರ್ತ ಮೆಯ್ಗೆ ತಂಗಾಳಿಯಂತೆ ತನ್ನ ಮೇಳದಿಂದಾ ಲತಾಲಲಿತಾಂಗಿಯರನಲರ್ಚಿ ನವಯುವತೀ ಯೌವನವನವಸಂತವೆಂದುದನಿಂಬಾಗಱಿಪುತ್ತುಂ ಬಂದು ವಿರಹಿಗಳಂ ಪುಗಲ್‌ಪುಗಲೆಂದು ಜಡಿವ ಪಡಿಯಱವಕ್ಕಿಗಿರ್ಕೆಯಾಗಿ ತೋರಣಮಾಗಿ ಬೆಳೆದ ಬಾಳ ಸಹಕಾರಭೂರುಹಂಗಳ ದಾರವಟ್ಟದಿಂದಳವಟ್ಟ ಚೆಲ್ವಿಂಗಡರ್ಪಾದ ಪಾದರಿಯೊಳ್‌ಕೋದು ಬಳೆದ ಪೊಂಗೇದಗೆಯ ಬಲ್ಲಾಳ್ದಟ್ಟಿಯಿಂದೊಳಗೆ ದಿಟ್ಟಗಲಂಪಂ ಪುಟ್ಟಿಸುವ ಸಂಪಗೆಯ ಚಂಪೆಯದಿಂದುಳ್ಳಲರ್ದ ಬಳ್ಳಿಮಲ್ಲಿಗೆಯ ಮೊಗಸಾಲೆಯ ಲೀಲೆಯಂತೆಡೆಗೊಂಡು ಮಡಲ್ತ ಮಾಮರದ ಮಂಡವಿಗೆಯಿಂ ಮನೋಜರಾಜಂಗೆ ವಸಂತರಾಜಂ ವಿರಚಿಸಿದ ವಿಜಯ ಶಿಬಿರದಂತೆ ಸಮುಲ್ಲಸಿತಪಲ್ಲವಲಕ್ಷ್ಮಿಗಾಗರಮಾದಶೋಕಭೂಜರಾಜಿಯಂ ರಾಜವಿದ್ಯಾಧರನಳಂಕರಿಸುವುದುಮಲ್ಲಿ

ಕಂ || ತಳಿರ ನೆಲಗಟ್ಟು ಪೊಸದಳಿ
ರ್ಗಳ ಕಂಬಂ ತಳಿರ ಭಿತ್ತಿ ತಳಿರ್ಗಳ ಲೊವೆ ಕೆಂ
ದಳಿರ್ಗಳ ಜಂತೆಗಳೊಪ್ಪಿರೆ
ತಳಿರೋವರಿ ತಳಿಲವಯಣಮೆನೆ ಕಣ್ಗೊಳಿಕುಂ ೨೯

ವ || ಅದಱೊಳಗೆ

ಕಂ || ಅಲರೆ ಮನಮವನಿಪಾಳಕ
ನಲರ್ಗಳ ತಲೆಗಿಂಬಿನಿಂದಮಲರಮಲಂಗಿಂ
ದಲರ ದಳಿಂಬದಿನಿಂಬಾ
ದಲರ್ವಾಸಿನ ಮೇಲೆ ಲೀಲೆಯಿಂ ಕುಳ್ಳಿರ್ದಂ ೩೦

ವ || ಅಂತವಿಶ್ರಾಂತ ವಿದ್ಯಾವಿನೋದಮಂದಿರಂ ಮಂದಾನಿಳಾಂದೋಳಿತ ಬಾಳಚೂತಲತಿಕಾ ನರ್ತನಕ್ಕನುಗತಮಾದ ಕೋಕಿಳಕಳನಾದಗೀತನಾದದಿಂ ಮಧುಕರನಿಕರ ಝಂಕಾರದಿಂ ಮನಂಗೊಳಿಸಿ ಸಂಗೀತಕ್ಕಾಶ್ರಯಮೆನಿಪ ಲತಿಕಾಶ್ರಯದೊಳ್‌ವಿಶ್ರಮಿಸಿರೆ ಸಮಗ್ರ ಸೌಭಾಗ್ಯದ ಮದದೊದವಿಂದೊರ್ವರೊರ್ವರ ಗಂಧಕ್ಕೆ ಬಾರದೆ ತಮ್ಮ ತನುಗಂಧಕ್ಕೆಱಗಿ ಮಱಿದುಂಬಿವಿಂಡು ಮಂಡಳಿಸಿ ಮೊರೆಯುತ್ತುಂ ಮದಡಿಂಡಿಮಮನನುಕರಿಸೆ ಕಪ್ಪುರದೊಪ್ಪುವ ಜಗಲಿ ಧೂಳಿ ಸೆಜ್ಜರಮೆನಿಸೆ ಮನೋಭವನೆ ಬೆನ್ನ ತಕ್ಕಿನವನಾಗೆ ಶಿಶಿರೋಪಚಾರಮೆ ಮದೋಪಚಾರಮಾಗೆ ಚಾರುಕುಚಕುಂಭಸಂಭೃತೆಯರ್

ಕಂ || ಷಣ್ಣವತಿಸಹಸ್ರಂ ಪಸು
ರ್ವಣ್ಣದಲಸಗತಿಯರೆಸೆವ ದಂತದ್ಯುತಿಯಿಂ
ನುಣ್ಣಿಸುತುಂ ತರುಷಂಡದ
ತಣ್ಣೆೞಲೊಳ್‌ಮದನ ಮತ್ತಗಜದವೊಲೆಸೆದರ್‌೩೧

ವ || ಅಂತಂತಃಪುರಪುರಂಧ್ರಿಯರೊಪ್ಪಮನಪ್ಪುಕೆಯ್ದಿರ್ಪುದುಮುೞಿದ ವಿಳಾಸ ವತಿಯರ್‌

ಚಂ || ತಿಳಕದೊಳಂಗನಾತಿಳಕೆಯರ್‌ಲತಿಕಾಭವನಂಗಳೊಳ್‌ಲತಾ
ಲಲಿತೆಯರುಲ್ಲಸತ್ಕುಸುಮಪಾಟಳದೊಳ್‌ನವಪಾಟಳಾಧರಾ
ಕಳಿತೆಯರುದ್ಘಚಂದನದೊಳುಜ್ವಳಚಂದನಗಂಧಿಯರ್‌ಕರಂ
ಕೆಳೆತನಮೊಪ್ಪೆ ನಿಂದು ಗಮನಶ್ರಮಮಂ ಕಳೆದರ್‌ಲತಾಂಗಿಯರ್‌೩೨

ವ || ಅಂತು ಕಾಂತೆಯರ್‌ತಂತಮ್ಮ ಮನಕ್ಕಿಂಬಾದ ತಣ್ಬುೞಿಲ್ಗಳೊಳಂ ರತಿರಹಸ್ಯ ಗೃಹಂಗಳೆನಿಪ ಧಾರಾಗೃಹಂಗಳೊಳಮಂಗಭವನ ಭವನಂಗಳೆನಿಪ ಲತಾಭವನಂಗಳೊಳಂ ಸುಕುಮಾರಮುಕುಳ ಪರಿಮಳಮಗ್ನಮಧುಕರಸಂರಾವಕುಳಮೆನಿಪ ವಕುಳದೊಳಂ ಸುರತರತ ಪಾರಾವತಮಾಳೆಮೆನಿಪ ತಮಾಳವನದೊಳಂ ಮನಮೆಳಸಿ ನಿಲ್ವುದುಮಲ್ಲಿ

ಕಂ || ಕುಸುಮದ ಪರಿಮಳದಿಂದಲ
ರ್ವಾಸಲರ್ದಂಬುರುಹ ಬಹಳ ಸೌರಭದಿಂ ನೀ
ರ್ವಾಸು ಪೊರೆದಿರ್ದು ಕಂಪಿನ
ರಾಸಿಯೆ ಪರಿಕಲಿಸಿದಂತೆ ಕರಮೆಸೆದಿರ್ಕುಂ ೩೩

ವ || ಅಂತು ರಮ್ಯಮಪ್ಪ ಶಯ್ಯೆಗಳೊಳೊಯ್ಯನೆ ಮೆಯ್ವೞಿಯನೆ ಮೆಯ್ನವಿರಂ ಕೊನರಿಸುತ್ತುಂ ಸೋಂಕುವಿನಿಯನಂತೆ ಸೋಂಕುವ ತೆಂಕಣೆಲರ್ಗೆ ಲಲನೆಯರ್‌ಮೆಯ್ಯಂಸಾರ್ಚಿ ಕುಳ್ಳಿರೆ ಪರಿಚಾರಿಕೆಯರ್‌ಪದಪಲ್ಲವಕ್ಕೆ ಮೆಲ್ಲಿದುವಪ್ಪ ಪಲ್ಲವಮಂ ಮೆಲ್ಲನಿಚ್ಛೆಯಱಿದು ಸಾರ್ಚೆ

ಕಂ || ಬಾಲೆಯರಸುಕೆಯ ತಳಿರ್ಗಳ
ಮೇಲಿಡೆ ಕಾಲಂ ವಿಳಾಸದಿಂ ಮೇಲೆಂತುಂ
ಮೇಲೆನಿಪುದುಚಿತಮಾಯ್ತೆನೆ
ಮೇಲೆನಿಸಿದುದೆಸೆವ ಕೆಂಪಿನಿಂ ಮೆಲ್ಪಿಂದಂ ೩೪

ವ || ಅಂತು ವಿಳಾಸಕ್ಕಾವಾಸಮಾಗಿರ್ದು

ಕಂ || ಈೞೆಯ ತನಿವಣ್ಣಂ ಸ್ಮರ
ಕೇಳಿಯನೀವಿಕ್ಷುರಸಮನಾಸ್ವಾದಿಸಿ ಮೆ
ಲ್ಗಾಳಿಗೆ ಮೆಯ್ಯಂ ತಮತಮ
ಗಾಳಿಗೆ ಕಪ್ಪುರಮನಿತ್ತರೊಸೆದಂಗನೆಯರ್‌೩೫

ಉಳ್ಳಲರ್ದ ಬಳ್ಳಿಮಲ್ಲಿಗೆ
ಯೊಳ್ಳಲರಂ ಮುಡಿದು ಮುದದಿನೆಳ ಅಡಕೆಯನಿಂ
ಪುಳ್ಳವನೊಪ್ಪುವ ಕಪ್ಪುರ
ವಳ್ಳಿಯ ಬಿಳಿಯೆಲೆಯನೊಲ್ದು ಮೆಲ್ದರ್‌ಸತಿಯರ್‌೩೬

ರಾಗಾನ್ವಿತೆಯರ್‌ಪಾಡಿದ
ರಾಗಳ್‌ರಮಣರ್ಗೆ ಚುಂಬನಾಲಿಂಗನಸಂ
ಭೋಗಂಗಳಂತಿರೊದವಿಸೆ
ರಾಗಮನುದ್ಗ್ರಾಹಮೇಳದಾಭೋಗಂಗಳ್‌೩೭

ವ || ಅಂತು ಚಾಪಳವಿಳೋಚನೆಯರಭಿರೂಪರೂಪಕಳಾಸಮುದ್ದೀಪನಭಾವಮಂ ಪಡೆಯೆ

ಕಂ || ತಳಿದು ಮಳಯರುಹಜಳಮಂ
ತಳಿರ್ವಾಸಿನೊಳಿರಿಸಿ ಪೊಸತಳಿರ್ಗಳನಿನಿಯರ್‌
ಕಳೆದದ್ಚಶ್ರಮಮನದೇಂ
ಬಳೆಯಿಸಿದರೊ ತರುಣಿಯರ್ಗೆ ಸುರತಶ್ರಮಮಂ ೩೮

ಮ || ತಳಿರ್ಗಳ್‌ತಳ್ಪತಳಂ ಲಸತ್ಕುಸುಮಪುಂಜಂ ಪ್ರಚ್ಛದಂ ಸೌರಭ
ಕ್ಕೆಳಸುತ್ತಿರ್ಪಳಿಸಂಕುಳಂ ಶಕುನಿ ನೀರ್ವೆಱಿರ್ದ ಚೆಂದೆಂಗು ತ
ಣ್ಗಳಸಂ ತಣ್ಣಿನ ಗಾಳಿ ಬಿಜ್ಜಣಿಗೆಯೆಂಬಂತೊಪ್ಪೆ ಸಂಭೋಗಲಂ
ಪಳರಾ ದಂಪತಿಗಳ್‌ಲತಾಭವನದೊಳ್‌ಸಂಭೋಗಮಂ ಮಾಡಿದರ್‌೩೯

ಮ || ಪುಳಕಾನೀಕ ಲತಾಂತಮುಣ್ಮೆ ತನುವಲ್ಲಿಶ್ರೀಯೋಳತ್ಯಂತ ಕೋ
ಮಳಕಾಂತಾಧರನೂತಚೂತಕಳಿಕಾಸ್ವಾದಪ್ರಮೋದೋತ್ಥಿತಂ
ಕಳಕಂಠಧ್ವನಿ ಪೊಣ್ಮೆ ಚಂದನಸುಗಂಧೋಚ್ಛ್ವಸದಿಂ ದಕ್ಷಿಣಾ
ನಿಳನೆಂತಂತೆಸಗುತ್ತುಮೊಪ್ಪೆ ರತಿಯೇಂ ಚೈತ್ರಂಬೊಲಿಂಬಾದುದೋ ೪೦

ವ || ಅಂತು ನಿಜಪ್ರಿಯರ ಬಳಕೆಯಂ ತೀರ್ಚಿ ತರುಚಯದ ಬಯಕೆಯಂ ತೀರ್ಚಲೆಂದು

ಕಂ || ನಲ್ಲಳೊಸೆದೊದೆಯೆ ರಾಗಂ
ಪಲ್ಲವಿಸುವ ನಲ್ಲನಂತೆ ಪಲ್ಲವಿಸಿತು ಕಂ
ಕೆಲ್ಲಿ ನವಯುವತಿ ಮೃದುಪದ
ಪಲ್ಲವದಿಂದೊದೆಯೆ ಚೆಲ್ವು ಪಲ್ಲವಿಸುವಿನಂ ೪೧

ಎತ್ತಾನುಮೊರ್ಮೆ ತಾನೊದೆ
ವೆತ್ತುಂ ಕಂಕೆಲ್ಲಿ ರಾಗಪಲ್ಲವಮಂ ತಾ
ಳ್ದಿತ್ತೆನೆ ಸಲೆ ಸತಿಯರಿನೊದೆ
ವೆತ್ತಿನಿಯರ್‌ತಳೆವುದೆಂಬುದೇಂ ವಿಸ್ಮಯಮೇ ೪೨

ವ || ಮತ್ತೊರ್ವಳುತ್ತುಂಗಪೀನಯೋಧರೆ ಮನಃಪ್ರಿಯನಂ ಸೋಂಕಿ ಪುಳಕಾಂಕುರಮಂ ಕೊನರಿಸುವುದಂ ತೋರ್ಪಂತೆ ಬಿಗಿದಪ್ಪಿ ಕುರವಕಮನಂಕುರಿತಂ ಮಾಡೆ ಪ್ರೌಢೆಯೊರ್ವಳಿಂತೆಂದಳ್‌

ಕಂ || ಕುರವಕತರುಗಂಕುರಮಂ
ಪರಿರಂಭಾರಂಭದಿಂದಮೊದವಿಸಿ ನಿರುತಂ
ನಿರುಪಮ ಲಾವಣ್ಯಪಯೋ
ಧರತ್ವಮಂ ತಳೆದುವಮಳಕುಚಕುಂಭಂಗಳ್‌೪೩

ಅವಳೋಕನದಿಂ ತಿಳಕದೊ
ಳವಿರಳಕಳಿಕೆಗಳನಿತ್ತಳುತ್ಕಳಿಕೆಗಳಂ
ನವಯುವರೊಳ್‌ಪಡೆವುದನವ
ಯವದಿಂ ತೋರ್ಪಂತೆ ಲೋಳಲೋಚನೆಯೊರ್ವಳ್‌೪೪

ವ || ಮತ್ತೋರ್ವಳಾಸವಾಸೇಕದಿಂ ಸುರಭಿಶ್ವಾಸೆ ವಕುಳಮಂ ಮುಕುಳದಿನಳಂಕರಿಸೆ

ಕಂ || ಸೂಸುವ ಸುದತಿಯ ಮುಖಕಮ
ಳಾಸವದಿಂದಲರ್ದ ವಕುಳಮಳಿಯಂ ಸ್ಮಿತಪು
ಷ್ಪಾಸವದಿಂ ಸೊರ್ಕಿಸುವ ವಿ
ಳಾಸಮುಚಿತಮೆಂದು ಚತುರಭಾಷಿಣಿ ನುಡಿದಳ್‌೪೫

ಅಂಗನೆಯರ ಸೊಗಯಿಪ ಕೆ
ಯ್ತಂಗಳೊಳೊಂದೊಂದೆ ತರುಚಯಕ್ಕಮಲಂಪಂ
ಸಂಗಳಿಕುಮೆಂದೊಡನಿತ
ಕ್ಕಂ ಗುಱಿಯೆನಿಸಿದರ ಸುಖಮನಾನೇವೊಗೞ್ವೆಂ ೪೬

ವ || ಅಂತಾ ಕಾಂತೆಯರ್‌ತರುಸಂದೋಹದ ದೋಹದಂ ತೀರ್ಚೆ ಅಲ್ಲೊರ್ವಳ್‌ಮಲ್ಲಿಗೆಯ ಮುಗುಳ ಹಾರಕ್ಕೊಯ್ಯಾರಮಪ್ಪ ಪಚ್ಚೆಸಾರಮಂ ಸಮೆಯಲೆಂದು ಮಿಡಿದೊಡೆದಪುದೆನಿಪುದೇಱುಂ ಜವ್ವನದ ಮಡದಿ ಮಾಮಿಡಿಯಂ ಮಾಮರದ ಮೇಲ್ಗೊಂಬಿಗಿಂಬಾಗಿ ನೀೞ್ಕಿ ತಿಱಿಯೆ ನುಡಿಜಾಣೆಯೆನಿಪ ಕೆಳದಿಯಾಕೆಗಿಂತೆಂದಳ್‌

ಕಂ || ನಿಡಿದಡರೆ ಮಿಗೆ ಬಳೆದ ಮೊಲೆ
ಗೊಡನುಂ ಪೊಱವಾಱುಮೆಲಿಗೆ ಮಾಮಿಡಿಯಂ ಚೆ
ಲ್ವೊಡರಿಸಿರೆ ನೀೞ್ಕು ನೀಂ ತಿಱಿ
ವೆಡೆಯೊಳ್‌ತೆರಪಾದುವಲ್ತೆ ಲಲಿತಲತಾಂಗೀ ೪೭

ವ || ಮತ್ತೂರ್ವಳ್‌ಸಹಜಸೌಂದರ್ಯಸಂಪನ್ನೆ ತನ್ನಂತೆ ಕಂತುವಿಜಯ ಸಹಕಾರಿಯಾದ ಸಹಕಾರಮಂ ನೋಡಿ

ಕಂ || ಬರಲೊಡನೆ ಮಲ್ಲಿಕಾವ
ಲ್ಲರಿ ತಳ್ತಮರ್ದಪ್ಪೆ ಘರ್ಮಜಳಮುಂ ಪುಳಕಾಂ
ಕುರಮುಮೊಗೆದಂತೆ ಸೊನೆ ಬಿಡು
ತರೆ ಕಳಿಕೆಗಳೊದವೆ ಬಾಳಚೂಲಮಿದೆಸೆಗುಂ ೪೮

ಚಂ || ಸೊನೆ ತನಗಿಂಬುವೆತ್ತ ಮದಧಾರೆ ಕವಲ್ತೆಳಗೊಂಬು ಕೊಂಬು ಮೆ
ಲ್ಲನೆ ತೊನೆದಾಡುತಿರ್ಪ ಸೆಳೆಗೊಂಬು ಕರಂ ತಳಿರಗ್ರಪಲ್ಲವಂ
ಧ್ವನಿ ಮಧುಪಸ್ವನಂ ಕುಸುಮಮಂಜರಿ ರಂಜಿಸುತಿರ್ಪ ಕುಂಭಮೆಂ
ಬಿನಮಿದೆ ಬಂದು ಕೊಂದಪುದು ಕಾಮಿಗಳಂ ಸಹಕಾರಕುಂಜಂ ೪೯

ವ || ಅಂತುಮಲ್ಲದೆ

ಚಂ || ತುಱುಗಿದೆ ಕೆಂದಳಿರ್‌ತಟದ ಶೋಣಮಣಿಪ್ರಭೆ ಪುಷ್ಪಸಂಚಯ
ಕ್ಕೆಱಗಿದ ಚಂಚರೀಕತತಿ ಮೇಘಚಯಂ ಸೊನೆ ನಿರ್ಝರಾಂಬು ಕಾಯ್‌
ಮಿಱುಗುವ ಪಚ್ಚೆಗಲ್ಲೆನೆ ಮನೋಜಮಹೀಶನ ಕೇಳಿಶೈಳಮಂ
ನೆಱೆನಗುತಿರ್ಪುದೊಪ್ಪಿ ಸಹಕಾರಕುಜಂ ಜನತಾಮನೋಹರಂ ೫೦