ಸ್ರ || ಶ್ರೀಪೌಲೋಮೀಶಭೂಭೃತ್ಸಮುದಯವಿನುತಂಗಳ್ ತಮಸ್ತೋಮ ಚೈತ್ರಾ
ದೀಪಂಗಳ್ ದರ್ಶಿತಾಶಾಂಬರಸಕಲಪದಾರ್ಥಕ್ರಮಂಗಳ್ ಸದಾ ಲೋ
ಕಾಪದ್ವಿಚ್ಛೇದಕಂಗಳ್ ಮಹದಮೃತನಿಧಿಸ್ಫೂರ್ತಿಗಳ್ ಪುಷ್ಪದಂತ
ಶ್ರೀಪಾದಂಗಳ್ ಸಮುತ್ಪಾದಿಸುಗೆಮಗೆ ಹೃದಿಂದೀವರಾನಂದದೊಳ್ಪಂ        ೧

ಮ || ಅನಿಶಂ ಸ್ವಾತ್ಮಗುಣಪ್ರಬುದ್ಧರೆನಸಿರ್ದುಂ ಮುಕ್ತಾರಾದಂ ನಿರಂ
ಜನರಾಗಿರ್ದುಮಶೇಷಲೋಕನಿಹಿತಾರ್ಥಗ್ರಾಹಿಗಳ್ ಯೋಗವ
ರ್ತನಮೊಂದುಂ ತಮಗೆಂದುಮಿಲ್ಲೆನಿಸಿಯುಂ ಸಿದ್ಧರ್ಕಳೆಂದೆಂಬ ಪೆಂ
ಪಿನಮೂರ್ತರ್ ಪರಮಾತ್ಮರುದ್ಧರಿಸುಗೆಮ್ಮಂ ಸಿದ್ಧಿಯಪ್ಪನ್ನೆಗಂ           ೨

ಮ.ಸ್ರ || ವರ ಪಂಚಾಚಾರಮಾಚಾರವನೊದವಿಸೆ ಷಟ್ತ್ರಿಂಶ[ದುದ್ಯ] ದ್ಗುಣಂ ಬಿ
ತ್ತರದಿಂದಂ ಸದ್ಗುಣವ್ರಾತದೊಳನುಮಿಸೆ ಸಮ್ಯಕ್ತಪಃಶೀಲಜಾಲಂ
ಪೊರೆದಂತೇವಾಸಿಭವ್ಯಾವಳಿಗತುಳತಪಃಶೀಲಮಂ ಮಾಡೆ ಲೋಕೋ
ತ್ತರರಾದಾಚಾರ್ಯರೆಮ್ಮಂ ನಿಯಮಿಸುಗೆ ನಿಜಾನುಗ್ರಹಪ್ರೌಢಿಯಿಂದಂ        ೩

ಮ || ನಯವಾದಂ ನಯಮಾಗಿ ಕೂಡೆ ಪೊಳೆಯಲ್ ನಿಕ್ಷೇಪಮಾಕ್ಷೇಪಮಾ
ರಯಮಿಲ್ಲೆಂದೆನಿಸಲ್ ಪ್ರಮಾಣಗದಿತಾರ್ಥಂ ಸಂಶಯಂಗೊಳ್ವವಾ
ದಿಯೊಳುಂಟಾಗೆ ಲಸತ್ಪ್ರಮಾಣಮತಿಯುಂರತ್ನತ್ರಯಂ ಮುಕ್ತ್ಯಲಂ
ಕ್ರಿಯೆಯಾಗಲ್ ಮಿಗೆ ಪೇೞ್ವರೀಗೆಮಗುಪಾಧ್ಯಾಯರ್ ಸುಖೋಪಾಯಮಂ            ೪

ಬಗೆ ತತ್ವಾರ್ಥವಿನಿಶ್ಚಯಂಬಡೆಯೆ ನೈರ್ಗ್ರಂಥ್ಯಂ ಪೊದೞ್ದತ್ತು ಶಾಂ
ತಿಗಡರ್ಪಾಗಿರಲುಗ್ರಕರ್ಮರಿಪುವಂ ನಿರ್ಮೂಲನಂ ಮಾಡುವು
ಜ್ಜಗಮಾಯ್ತೊಂದಿರಲಪ್ರಮತ್ತತೆಯೊಳನ್ಯಪ್ರೀತಿಶೀಲಕ್ಕೆ ಕೇ
ಡೊಗೆದತ್ತೆಂಬ ವಿರುದ್ಧವೃತ್ತರೆಮಗೊಳ್ಪಂ ಮಾೞ್ಕೆ ಸಾಧೂತ್ತಮರ್        ೫

ಕಂ || ಎಮಗೀಗೆ ಪಂಚಗುರುಪದ
ಕಮಲಂಗಳ್ ಕಡೆಯದೊಂದೆ ಕಲ್ಯಾಣಮನೇ
ವೆಮೊ ಮಿಕ್ಕಾ ನಾಲ್ಕುಮವನಿ
ಗೆ ಮಾಣ್ಗೆ ತಾಂ ಮೇಣಿದೊಂದೆ ಮುಖ್ಯಪ್ರಕೃತಂ          ೬

ಚಂ || ಜಿನಪರಮೇಷ್ಠಿ ಚಾರುಚತುರಾನನದಿಂದೊಗೆತಂದು ಸಂದ ಸೈ
ಪಿನ ಗಣನಾಥವಕ್ತ್ರಸರಸೀರುಹಕೇಳಿನಿವಾಸದಲ್ಲಿ ನ
ರ್ತನಮನೊಡರ್ಚಿ…ವಿನಯಾನದಿಂ……..
ದಿನಿಸು ಬೞಲ್ದ ವಾಗ್ವನಿತೆ ವಿಶ್ರಮಿಸಿರ್ಕೆ ಮದಾನನಾಬ್ಜದೊಳ್    ೭

ಶಾ || ಸ್ವಚ್ಛಂಗಳ್ ನಿಜದಿಂ ವಿರಕ್ತವಿನುತಂಗಳ್ ಸಂದನರ್ಘ್ಯಂಗಳ
ಸ್ತಚ್ಛಿದ್ರಂಗಳನೂನ ಮಂಗಳಕರಂಗಳ್ ಸಂತತಾಂತಸ್ತಮೋ
ವಿಚ್ಛೇದಂಗಳುಪಾತ್ತಸೂತ್ರಗತಿಗಳ್ ರತ್ನತ್ರಯಂಗಳ್ ಹೃದ
ವ್ಯುಚ್ನಿನ್ನಾಭರಣಂಗಳಕ್ಕೆಮಗೆ ಮುಕ್ತಿಶ್ರೀ ಮನಂಗೊಳ್ವಿನಂ         ೮

ಚಂ || ಇಹಪರಸೌಖ್ಯಮೆಂಬೆರಡುಮಿಲ್ಲದ ನಾಸ್ತಿಕಧರ್ಮದಿಂದಮೊಂ
ದಿಹಮನೆ ಖಲ್ವಂಬಿಲ್ವ ವಿಧಿಯಿಂದಿನಿಸೆಯ್ದಿಪ ಸೌಗತಾದಿ ದು
ರ್ವಿಹಿತ ಕುಧರ್ಮದಿಂದಮಿಹಮಂ ಪರಮಂ ಬಗೆದಂತೆ ಮಾೞ್ಪ ಸ
ನ್ಮಹಿತಜಿನೇಂದ್ರಧರ್ಮಮಭಿವಾಂಛಿತದಾಯಿಯೆನಿಪ್ಪುದೊಪ್ಪದೇ ೯

ಮ || ಕನಕಚ್ಛಾಯೆಯಿನಾಳ್ದ ದೇಹರುಚಿ ಚೆಲ್ವಂ ಬೀಱೆ ದೋರ್ವಲ್ಲಿ ನಾ
ಲ್ಕೆನಸುಂ ತಳ್ತಿರೆ ಖಡ್ಗಖೇಟಕ ಲಸದ್ವಜಾಬ್ಜಮೊಳ್ಪೊಪ್ಪುವಾ
…ತ್ರಿಶೂಲ ಡಮರುಗ ರಕ್ಷಿಪ್ಪ ಮಾಕಾಳಿ ಯ
ಕ್ಷಿ ನವೀನಾಭರಣಾಂಗೆ ಮತ್ಕೃತಿಗೆ ಮಾೞ್ಕೋರಂತೆ ನಿರ್ವಿಘ್ನಮಂ ೧೦

ಉ || ಸ್ಫೂರಿಪ…ನವ್ಯ ಕುಮುದದ್ಯುತಿಮತ್ತನು ಕೂರ್ಮವಾಹನಂ
ಸ್ಫಾರಕಶಾ ತ್ರಿಶೂಲಘನದಂಡಕುಠಾರಚತುಷ್ಟಯೋಲ್ಲಸ
ದ್ಭೂರಿಭೂಜಾಚತುಷ್ಟಯನಶೇಷ ಜಿನೇಶ್ವರಧರ್ಮವರ್ತಿ ವಿ
ಸ್ತಾರಕನೀಗೆ ಕೂರ್ತ ಜಿತಯಕ್ಷನವಿಘ್ನ ವಚೋವಿಲಾಸಮಂ           ೧೧

ಚಂ || ಹರಿಹರಪದ್ಮಜಾದಿಗಳನೋವದೆ ಕಂತು ಲತಾಂಣಬಾಣಮೊಂ
ದೆರಡಱೆನಚ್ಚು ಗೆಲ್ದ ಜಯದಗ್ಗದ ಸುಗ್ಗಿಯ ಮೊೞ್ಗೆದೆಂದು ಬಂ
ದಿರದೆ ಪೊಣರ್ಚಿ ಸೋಲ್ತು ವಿಜಯಧ್ವಜಮಂ ತೆಱೆದಿತ್ತು ಪೋದುದಂ
ನಿರವಿಪ ಪುಷ್ಪದಂತಮಕರಧ್ವಜನೀಗೆ ಮನೋನುರಾಗಮಂ          ೧೨

ಕಂ || ಗೌತಮ ಸುಧರ್ಮ ಜಂಬೂ
ಖ್ಯಾತ ವಿಶುದ್ಧಾನುಬದ್ಧ ಕೇವಲಿಗಳಭಿ
ದ್ಯೋತಿಸುಗೆ ಭವತಮೋಹರ
ಣಾತಿಶಯಂಬಡೆವ ವಿಮಳರತ್ನತ್ರಯಮಂ       ೧೩

ಓವುಗೆ ಮನ್ಮತಿಯಂ ಶ್ರುತ
ಕೇವಲಿಗಳ್ ಮೊದಲ ವಿಷ್ಣುಮುನಿವೆರಸು ಜಗ
ತ್ಸೇವಿತ ನಂದ್ಯಪರಾಜಿತ
ಗೋವರ್ಧನ ಭದ್ರಬಾಹುವೆಂದಿಂತಯ್ವರ್       ೧೪

ದಶಪೂರ್ವಿಗಳೀವನುಪಮ
ದಶವಿಧಸಮ್ಯಕ್ತಮಣಿಗಳೊಲ್ದಂಗೈಕಾ
ದಶಧಾರಿಗಳೀವೇಕಾ
ದಶನಿಳಯದ ಸಂಪದಂಗಳಕ್ಕೆಮಗೆಂದುಂ         ೧೫

ಆಚಾರಾಂಗಧರರ್ ಪರ
ಮಾಚಾರಪವಿತ್ರರೆನಿಪ ಮುನಿಗಳ್ ಸಂ
ದಾಚಾರಸೂತ್ರಮಂ ಬಗೆ
ಗೋಚರಿಸುಗೆ ಕಳೆದು ಹೃದಯಮಣಿಗಳ ಮಲಮಂ        ೧೬

ಅತಿಶಯತಪದಿಂ ಪಡೆದೊಡೆ
ಚತುರಂಗುಳಚಾರಣರ್ಧಿಯಂ ಪದೆದರ್ಹ
ತ್ಪತಿ ಮೆಚ್ಚಿತ್ತಂ ತ್ರಿಪ್ರಾ
ಭೃತಮನೆನಲ್ ಕೊಂಡಕುಂದಮುನಿಪತಿ ಸಂದಂ ೧೭

ನುಡಿದುದೆ ತತ್ವಾರ್ಥಂ ಕೆ
ಯ್ವಿಡಿದುದೆ ಸತ್ವೈಕಹಿತಕರಂ ಕುಂದದೆ ತಾಂ
ನಡೆದುದೆ ಸನ್ಮಾರ್ಗಮಿದೇಂ
ಪೊಡವಿಯೊಳುತ್ತಮನೊ ಗೃಧ್ರಪಿಂಛಾಚಾರ್ಯಂ           ೧೮

ಚಂ || ಅನುಪಮ ಚೈನಶಾಸನಘನಾಗಮದೊಳ್ ಮಿಗೆ ಧರ್ಮವೃಷ್ಟಿಯಂ
ಘನಮೆನೆ ಸಂತತಂ ಸುರಿದರುನ್ನತವೃತ್ತ ಬಳಾಕಪಿಂಛಾರ್ಯಂ
ವಿನುತ ಮಯೂರಪಿಂಛಮುನಿಪರ್ ಸಫಲಂ ಸಲೆ ಭವ್ಯಸಸ್ಯವಾಂ
ತೆನಸುಮಱಲ್ಚಿರೋದಸಿಯೊಳೆಯ್ದೆ ಬಳಾಕಮಯೂರಪಿಂಛಮಂ  ೧೯

ಕಂ || ಅರ್ಹದ್ಬಲಿಮುನಿಪತಿಯ
ಭ್ಯರ್ಹಿತವೃತ್ತಿಯನದೇವೊಗೞ್ವುದೊ ನೆಗೞ್ದೊಂ
ದರ್ಹನ ಮತಮಲ್ಲದುದತಿ
ಗರ್ಹಿತಮೆಂದೆನಿಸಿದಂ ಮಹೀಮಂಡಲದೊಳ್    ೨೦

ಭೂತಬಲಿಮುನಿಪನೇ ವಿ
ಖ್ಯಾತಜಿನಂ ದಿವ್ಯಭಾಷೆಸಿದ್ಧಾಂತಂ ಮ
ತ್ತೇತೊದಳೊ ಗಣಾಗ್ರಣಿಯೇ
ಭೂತಳದೊಳ್ ಪುಷ್ಪದಂತಪರಮಾಚಾರ್ಯಂ  ೨೧

ಉ || ಬಿತ್ತರಮಾಗೆ ಸೂತ್ರಗತಿಯಿಂ ಮಿಗೆ ಪಣ್ಣಿದ ಗಂಧಹಸ್ತಿತೊಂ
ಬತ್ತಱುಸಾಸಿರಕ್ಕೆ ಶಿವಕೋಟಿಯ ಕೋಟಿ ವಿಪಕ್ಷವಿದ್ವದು
ನ್ಮತ್ತಗಜಂ ಮದಂಬಱತು ಕೆಯ್ಯೆಡೆಗೊಟ್ಟುದೆನಲ್ಕೆ ಪೇೞ್ವುದೇಂ
ಮತ್ತೆ ಸಮಂತಭದ್ರಮುನಿರಾಜನುದಾತ್ತ ಜಯಪ್ರಶಸ್ತಿಯಂ          ೨೨

ಕಂ || ಸತತಮಕಳಂಕಮಂದರ
ಕೃತಮಥನನಯಪ್ರಮಾಣ ಪಾರಾವಾರೋ
ದ್ಗತಯುಕ್ತ್ಯಮೃತಂ ವಿಬುಧ
ಪ್ರತತಿಯ ಮಿಥ್ಯಾತ್ವಮೃತಿಯನಳಱೆಪುದರಿದೇ           ೨೩

ಮ || ನಿಸದಂ ತನ್ನ ನಿರಾಮಯಾಕೃತಿ ಜಗದ್ಯಿಖ್ಯಾತಮಾದತ್ತು ಭಾ
ಮಿಸೆ ಸರ್ವಾರ್ಥದಸಿದ್ಧಿಯೊಳ್ ತೊಡರ್ದುಬೋಧಂ ಭವ್ಯಸಂಸೇವ್ಯಯಾ
ಯ್ತು ಸುಹೃತ್ಪದ್ಮದೊಳಿಂಬುವೆತ್ತುದು ಪದನ್ಯಾಸಂ ಗಡಾರಣ್ಣ ಬ
ಣ್ಣಿಸರೋರಂತೆ ಜಿನೇಂದ್ರಬುದ್ಧಿವೆಸರಂ ಶ್ರೀಪೂಜ್ಯಪಾದೇಶನಾ    ೨೪

ಕಂ || ಮಾಂದಿಸಿ ತಮಮಂ ದೃಷ್ಟಿಯೊ
ಳೊಂದಿಸಿ ತತ್ವಾರ್ಥಮಂ ಜಗದ್ವ್ಯವಹಾರ
ಕ್ಕಂದು[ಱೆ]ಮಾಡಿದ ವಿದ್ಯಾ
ನಂದಸ್ವಾಮಿಯ ಮಹೋದಯಂ ಕೇವಳಮೇ   ೨೫

ನಿರುಪಮ ಸರಸ್ವತೀ ಸುಂ
ದರಚತುರಾನನಶೇಷ ವಿಬುಧಸ್ತುತ್ಯಂ
ಪರಮಬ್ರಹ್ಮನೆನಲ್ ಕವಿ
ಪರಮೇಷ್ಠಿ ಪುರಾಣಪುರುಷನೆಂಬುದು ಪುಸಿಯೇ           ೨೬

ವರ ವೀರಸೇನ ಜಿನಸೇ
ನರೆಂಬ ಮುನಿವೃಷಭರಾಂತು ಕಲಿಯುಗದೊಳ್ ವಿ
ಸ್ತರಿಸಿ ಜಿನಧರ್ಮರಥಮಂ
ಪರಿಯಿಸಿದರ್ ಸಕಲ ವಸುಮತೀ ಮಂಡಲದೊಳ್          ೨೭

ಗುಣಭದ್ರಸ್ವಾಮಿಯ ಗುಣ
ದೆಣಿಕೆಗೆ ಜಿಹ್ವಾಸಹಸ್ರಮಂ ಪಡೆದುಮವಂ
ಫಣಿರೂಪದಿನಿರ್ಮಡಿಸಿದ
ಫಣೀಶನೇನಣ್ಣ ಬುದ್ಧಿಯೊಳ್ ಪೆರ್ಚಿದನೋ   ೨೮

ನಡೆವಳಿಯೊಳ್ ತನ್ನ ಸಮಂ
ಬಡೆದಾರುಂ ನಡೆದರಿಲ್ಲ ಗಡಮೆಂತೆರ್ದೆಯಂ
ನುಡಿಯುಂ ನಡೆದುವೊ ಪದುಳಿಕೆ
ಯೆಡೆಗೆ ಜಟಾಸಿಂಹಣಂದಿ ಮುನಿಪುಂಗವನಾ     ೨೯

ಏಲಾನದಿಯಾದುದು ಗಡ
ಕಾಲುದಕಂ ನಿಂದ ಭೂಮಿ ಸಿದ್ಧಾಂತವೆಸ
ರ್ಗಾಲಂಬನಮಾಯ್ತು ಗಡೆನ
ಲೇಲಾಚಾರ್ಯಪ್ರಸಿದ್ಧ ಸಾಧಾರಣಮೇ          ೩೦

ಕಲಿಕಾಲವಶದೆ ಬೋಧಾ
ಕುಲಿತ ಕುದೃಷ್ಟಿಗಳಡಂಗೆ ನಿಜರುಚಿಯಿಂ ಪ
ಜ್ಜಳಿಸಿ ದಿಗಂಬರಕುಲಮಂ
ಬೆಳಗಿದ ಯೋಗೀಂದುದೇವಚಂದ್ರನೆ ವಂದ್ಯಂ   ೩೧

ಚಂ || ವದನಮತಿಪ್ರಸನ್ನತೆಯನಾಳ್ದುದು ಶಾಂತಿಯನಾಂತುದಂತವೆ
ಯ್ದಿದುದತಿಕಾಂತಿಯಂ ತನು ದಯಾರ್ಣವಮಂ ನೆಲೆವೆರ್ಚಿಸಿತ್ತು ನೋ
ಡಿದೊಡೊಗೆತಂದ ಚಂದ್ರಿಕೆ ಕಳಾಕಳಿತಂ ವಚನಾಮೃತಂ ಮನೋ
ಮುದಮನೊಡರ್ಚಿದತ್ತು ವಿಬುಧರ್ಗಿಳೆಯೊಳ್ ಮುನಿಚಂದ್ರದೇವನಾ          ೩೨

ಕಂ || ಭೂತಭವದ್ಭಾವಿ ಮುನಿ
ವ್ರಾತಂ ಸತತಂ ತ್ರಿಹೀನನವಕೋಟಿಸಂ
ಖ್ಯಾತಂ ಮಾನಸಹಂಸ
ಪ್ರೀತಿಯನೊಡರಿಕೆ ದಯಾಪಯೋವಾಹಿನಿಯಿಂ ೩೩

ಚಂ || ವಿಷಯವಿಲೀನಮಾನಸದ ಮಾನಸರಂ ತಿಳಿಪಲ್ಕೆವೇಡಿ ನಿ
ರ್ವಿಷಯಿಜಿನೇಂದ್ರರುಂದ್ರ ಕಥೆಯೊಳ್ ನವಭಾವರಸಂಗಳಂ ತಟಂ
ಕಷಮೆನೆ ತೋಱೆ ತದ್ರುಚಿಯ ಮೆಯ್ಯೊಳೆ ಸದ್ರುಚಿಯೊಳ್ ತೊಡರ್ಚುವೀ
ಮಿಷದ ಕವೀಂದ್ರರೀಗೆ ಸುಖಸೃಷ್ಟಿರತರ್ ಕವಿತಾಪ್ರಸಾದಮಂ       ೩೪

ಮ.ಸ್ರ || ಮಣಿಯಂತೇ ರಂಜಿಪಂತೊಪ್ಪಮನೆಸಗುಗೆ ಕೆಯ್ಕೊಂಡು ಕೊಂಡಾಡಿ ವಿದ್ಯಾ
ಗ್ರಣಿಗಳ್ ಭವ್ಯೌಘಸಂಸೇವ್ಯಮನಮಳ ವಚೋನವ್ಯಮಂ ಸ್ವಾರ್ಥಸಿದ್ಧಿ
ಪ್ರಣಯಿಪ್ರೋದ್ಯೋದ್ಯಮಂ ವಿಶ್ರುತನವರಸಭಾವಾಭಿಧಾನವ್ಯಮಂ ಸ
ದ್ಗುಣಿವಿದ್ವದ್ಭವ್ಯಮಂ ಶ್ರವ್ಯಮನನುಪ ಮತ್ಕಾವ್ಯಮಂ ಸತ್ಕವೀಂದ್ರರ್   ೩೫

ಚಂ || ಅನುಗುಣಮಾಗಿ ಕೂಡೆ ಗುಣವರ್ಮನ ಮೈಸಿರಿ ಪಂಪನೋಜೆ ಪೊ
ನ್ನನ ಪೊಸದೇಸಿ ರನ್ನನ ಗುಣೋನ್ನತಿಯಗ್ಗಳನೊಳ್ಪು ನಾಗವ
ರ್ಮನ ಬಹುರೀತಿ ನೇಮಿಯ ಚಮತ್ಕೃತಿ ಜನ್ನಿಗನಿಂಪು ನಾಗಚಂ
ದ್ರನ ರಸವೃತ್ತಿ ರಂಜಿಸುಗೆ ನಿರ್ಣಯಮೆನ್ನಯ ನವ್ಯಕಾವ್ಯದೊಳ್  ೩೬

ಕಂ || ಚತುರಾನನನಂ ಬಿಡಿಸಿದ
ರತಿಶಯಿತಾರ್ಥಮನೆ ತೋಱೆಪದಿರಿಂ ಪೆಱರಾರ್
ಪತಿಗಳೊಳನುರಕ್ತೆಯೆ ಸರ
ಸತಿ ದನಿಯಂ ತೋಱೆ ನೆರೆವಳೆಮ್ಮೊಳ್ ಚಿತ್ರಂ  ೩೭

ಎನಿತಂ ಪದಪದದೊಳ್ ಸಾ
ಲ್ವನಿತರ್ಥಮನಿತ್ತೊಡಂ ಮನಂಗೊಳ್ವಳೆ ನು
ಣ್ದನಿಯಂ ತೋಱುತ್ತುಮೆ ವಾ
ಗ್ವನಿತೆಯನೊಲಿಪೊಂದು ಸೊಬಗು ಸಮನಿಸವೇಡಾ       ೩೮

ಚಂ || ಅನುಗುಣಮಾಗೆ ವರ್ಣನಮೊಡಂಬಡೆ ರೀತಿ ರಸಕ್ಕೆ ಭಾವವ
ಚ್ಚೆನಿಸಿರೆ ಭಾವದೊಳ್ ಪದುಳಮಾಗಿರೆ ಚೌತೆಱನರ್ಥವೃತ್ತಿಯೊ
ಳ್ದನಿ ಪೊಸದೇಸಿ ಮಾತಿನೊಳುದಾರತೆವೆತ್ತಿರೆ ಸಯ್ತು ಪೇೞ್ವುದಿಂ
ಪೆನಿಸೆ ಕವೀಶ್ವರಂ ಕೃತಿಯನಲ್ಲದೊಡೇಕದಱೊಂದು ದಂದುಗಂ   ೩೯

ಮೃದುಪದಬಂಧಮುಂ ಸುರುಚಿರಾರ್ಥಮುಮುತ್ಕಟವೃತ್ತಿಯಾಗಿ ತೀ
ವಿದ ರಸಮುಂ ಮನಂಗೊಳಿಪ ಭಾವಮುಮಾರಯಲಿಲ್ಲ ನೂತ್ನಕಾ
ವ್ಯದೊಳೆನವೇಡೆ ಚೈತ್ರದ ರಸಾಳದ ಗಾಳಿಯ ಕೋಕಿಲಪ್ರಣಾ
ದದ ನೆಱೆದಿಂಗಳಿಂಗದಿರ ಸೊಂಪತಿನೂತನಮಿಂಪುವೀಱದೇ           ೪೦

ಕಂ || ರಸವೃತ್ಯಭಿನಯ ಭಾವದ
ಪೊಸದೇಸಿಯ ರೂಪನೀಕ್ಷಿಪಂ ಪ್ರೌಢಂ ನಿ
ಟ್ಟಿಸಿ ಮೈಸಿರಿ ನವಕಾವ್ಯಮಂ
ಕೇಳಿ ಸಂತೋಷಿಪರ್ ಚಿತ್ತದೊಳ್[1]೪೧

ಉ || ನೋಡಿರೆ ಪೂರ್ವದೊಳ್ ಗಣಧರಾದಿ ಮಹಾಮುನಿಸತ್ಕವೀಶ್ವರರ್
ಮಾಡಿದ ಪುಷ್ಪದಂತಜಿನನಾಥಪುರಾಣಮನಿಂದು ಕನ್ನಡಂ
ಮಾಡುವೆನೆಂದು ಪೂಣ್ದೆನಿದು ಶಕ್ತಿಯೊ ಭಕ್ತಿಯೊ ವೈನತೇಯನಿ
ರ್ದಾಡಿದ ಗಾಳಿವಟ್ಟೆಗೆ ಮನಂಬಿಡೆ ಧೀಂಕಿಡುವಂತೆ ಟಿಟ್ಟಿಭಂ        ೪೨

ಚಂ || ಕತೆ ಕಿಱೆದಾದೊಡಂ ಕತೆಯ ನಾಯಕನುನ್ನತವಂಶವೀರ್ಯ ವಿ
ಶ್ರುತಮಹಿಮಪ್ರಪಂಚಿತಗುಣಂ ಪಿರಿದಂತದಱೆಂದೆ ವರ್ಣನ
ಸ್ಥಿತಿ ಮಿಗೆ ಸಾಲ್ವುದೇ ಗಣಧರಾದಿಗಳುಳ್ಳುದನುಳ್ಳ ಮಾಱ್ಕತಿಯಿಂ
ಕಥಿಸಿದರಿಲ್ಲಿ ಪೇೞ್ವ ಕವಿಕಲ್ಪಮಿದೆಂಬವನಲ್ಪನಲ್ಲನೇ ೪೩

ಕಂ || ಪಿರಿದುಂ ಜಿನನುತಿಗಲ್ಲದೆ
ಪರಮ ಶ್ರೀವಿಭವಮೆಯ್ದದೆಂದಾರೆಂದರ್
ಪರಮಾಣುಮಾತ್ರಮಮೃತದ
ಪರಿಸೇವನೆ ಘಟಿಸಲಮರದೇನಮರತ್ವಂ         ೪೪

ಎಣೆಯಾಗಿ ಸುಕವಿಯೊಳ್ ಸಂ
ದಣಿಸುದರೇಕಯ್ಯ ವಿಬುಧಸಭೆಯೊಳ್ ತಾಮೇಂ
ಗಣನೀಯರೆ ಕುಕವಿಗಳಾರ್
ಗಣಿಸಿದಪರ್ ಮುಸುಱೆ ಪರಿವ ನೊರಜಂ ನೊೞಮಂ     ೪೫

ಪದಮಿಡಲಱೆಯಂ ಗಡ ಮಾ
ರ್ಗದೊಳಂತವನೆಂತೊ ನಡೆವೊನರ್ಥದ ಸೊಂಪಿ
ಲ್ಲದ ಕುಕವಿ ನವರಸಾನುಭ
ವದೆ ತನ್ನಂ ಪೆಱರನೆಂತೊ ಪೇೞ್ ತಣಿಪಿದಪಂ ೪೬

ಥಳಥಳಿಪ ಪದಾರ್ಥವನೇಂ
ಗಳ ಕಾಣ್ಬನೆ ದೋಷದೃಷ್ಟಿ ದುರ್ಮತಿ ಗಡದೇಂ
ತಿಳಿವನೆ ಗುಣಸಂತತಿಯಂ
ಖಳಂ ಗಡೆಂತುಂ ರಸಂಗಳೊಳ್ಪೊರೆದಪನೇ       ೪೭

ತೊಳಗುವ ನಭದೊಳ್ ಪಿತ್ತಾ
ವಿಳದೃಷ್ಟಿಗವಿದ್ಯಮಾನಮೇಚಕರುಚಿಯೊಂ
ದೆಳಸಿ ಮಿಗೆ ತೋರ್ಪ ತೆಱದಿಂ
ಖಳಂಗೆ ಪೊಲನಲ್ತೆ ಕೃತಿಯೊಳಿಲ್ಲದ ದೋಷಂ  ೪೮

ತಲೆದೂಗನೆ ಖಳನದು ಮೂ
ದಲೆಯಕ್ಕುಂ ಮುಂದೆ ಕೇಳ್ದು ಸತ್ಕವಿಕೃತಿಯಂ
ತಲೆದೂಗೆ ಖಳರ್ಗೆಂದಾ
ತಲೆ ಭೂಮಿಗೆ ಭಾರಮೆಂತೊ ಪೇೞ್ ತೂಗಿದಪಂ          ೪೯

ಉ || ಮೆಚ್ಚಿಯುಮೇನೊ ಮೆಚ್ಚದೆಯುಮೇನೊ ಖಳರ್ ವಿಬುಧಾಂತರಂಗಮಂ
ಮೆಚ್ಚಿಪ ಕಾವ್ಯರತ್ನಮವರಂ ಮಿಗೆ ಮೆಚ್ಚಿಸದೇ ಸುವೃಷ್ಟಿ ಸೊಂ
ಪಚ್ಚರಿಯಾಗೆ ಸಸ್ಯಚಯಮಂ ಪರಿವರ್ಧಿಸುತಿರ್ಪುದಣ್ಣ ಪೇ
ೞೊಚ್ಚತಮಾಗೆ ಪೆರ್ಚಿಸದೆ ಮಿಕ್ಕ ತೃಣಾಂಕುರಸಂಕುಳಂಗಳಂ       ೫೦

 

[1] ೪೧ನೆಯ ಕಂದದ ಕೊನೆಯಪಾದವೂ ಮತ್ತೊಂದು ವೃತ್ತದ ಮೂರುವರೆಪಾದಗಳೂ ಲುಪ್ತವಾದಂತಿದೆ. “ಕೇಳಿ ಸಂತೋಷಿಪರ್ ಚಿತ್ತದೊಳ್” ಎಂಬುದು ವೃತ್ತದ ಕೊನೆಯ ಭಾಗವಾಗಿರಬಹುದು.