ವ || ಮತ್ತೊರ್ವಳ್‌ತನ್ನನಹರ್ನಿಶಮಿಸುವ ಕುಸುಮಶರನ ವಿದ್ಯೆ ಚೋದ್ಯಾವಹಮೆಂದಿಂತೆಂದಳ್‌

ಕಂ || ಪೂವಿಲ್ಲದೆಯುಂ ಪಲಸು ಫ
ಳಾವಳಿಯಂ ತಳೆವ ತೆಱದೆ ಪುಣ್ಣಿಲ್ಲದೆಯುಂ
ಪೂವಿಲ್ಲನ ಶರಹತಿಯಿಂ
ನೋವನೆ ತಳೆದಪುದಿದೆನ್ನ ಹೃದಯಂ ಕೆಳದೀ ೬೧

ವ || ಮತ್ತೊರ್ವಳ್‌ವಿರಹಾನಳದಗ್ಧೆಯಪ್ಪತಿವಿದಗ್ಧೆ ಸಂಸರ್ಗಜಾ ದೋಷಗುಣಾ ಭವಂತಿಯೆಂಬ ನುಡಿಯೊನ್ನೊಳೆ ತಪ್ಪದಾದುದೆಂದು ನೊಂದು ನಿಜಸಖಿಗಿಂತೆಂದಳ್‌

ಕಂ || ವಿಷಸಂಗಮದಿಂ ಪಾಲುಂ
ವಿಷಮಪ್ಪವೊಲೆಯ್ದೆ ವಿಷಮಬಾಣನ ಕಳೆಯಿಂ
ವಿಷಮಕರನಾಗಿ ನಿಂದೆ
ವಿಷಯುತಕರನಾಗಿ ಕೊಲ್ಗುಮೀಯಮೃತಕರಂ ೬೨

ವ || ಅಂತು ನೆಗೞ್ವ ವಿರಹಾಕ್ರಾಂತೆಯರೆಪ್ಪ ಕಾಂತೆಯರ ಕರುಣಾರಸದು ಚಿತವಚನಂಗಳಂ ಕೇಳ್ದು ದುಃಖಿತೇ ಮನಸಿ ಸರ್ವಮಸಹ್ಯಮೆಂಬ ನುಡಿಯಿವಳ್ದಿರೊಳ್‌ಮೊದೞ್ದುದೆಂದೋರೊರ್ವರೊಳ್‌ನುಡಿಯುತ್ತುಂ ಪೋಗೆವೋಗೆ ಮುಂದೊಂದೆಡೆಯೊಳ್‌ಸೂೞೆಕೆಳೆಯರೆಲ್ಲಂ ನೆರೆದಿರ್ದಲ್ಲಿಯೊರ್ವನಿಂತೆಂದಂ

ಉ || ಆಳ್ಗುಣಿ ಭೋಗಿ ಚಾಗಿ ಚತುರಂ ಸುಭಗಂ ಮೃದುಚಿತನುತಮಂ
ತೋಳ್ಗೆಸೆವಂ ಗಭೀರನವರಿಚ್ಚೆಯ ಮಚ್ಚುವ ರೂಪುಗೊಂಡವೋ
ಲೇೞ್ಗೆ ಸೊಗಕ್ಕೆ ಪೆರ್ಚು ಹರಿಸಕ್ಕೊದವೊಲ್ಮೆಗೆ ಕೂಡೆ ಕೂಡಿ ತ
ನ್ನೊಳ್ಗಣಿಕಾಳಿಯಂ ನಿಲಿಪನಲ್ಲದೆ ಸೂೞೆಗೆಯಲ್ಕೆ ಬಲ್ಲನೇ ೬೩

ವ || ಮತ್ತೊರ್ವ ವಚನರಚನಾಚತುರನಿಂತೆಂದಂ

ಚಂ || ಒಲಿಸುವ ಗಾಡಿ ಪಂಬಲಿಸುವಿಂಬಿನ ಚುಂಬನಮರ್ಥಿತಾರ್ಥಮಂ
ಸಲಿಸುವ ಚಾಗಮಗ್ಗಲಿಪ ಭೋಗಮೊಡಂಬಡೆ ಕೂಡೆ ಪೆರ್ಮೆಯಿಂ
ನಿಲಿಸುವ ಪೆಂಪು ಗೊಟ್ಟಿಗಳವಟ್ಟಿರೆಯೋದುವ ಪಾಡುವೋಜೆಯಂ
ಕಲಿಸುವ ಬಲ್ಮೆಯುಳ್ಳ ವಿಟನಂಗೆನೆಗಂಗಜನಸ್ತ್ರಮಲ್ಲನೇ ೬೪

ವ || ಮತ್ತೊರ್ವ ವಾತ್ಸ್ಯಾಯನತಾತ್ಪರ್ಯವಿಚಕ್ಷಣನಿಂತೆಂದಂ

ಉ || ಲೋಳಕಟಾಕ್ಷತೀಕ್ಷ್ಣಕರದಿಂ ತೆಗೆದಿಚ್ಛೆಗೆ ಸಲ್ವ ಮೇಳದಿಂ
ಮೇಳಿಸಿ ಕೇಳಿಯಿಂ ಪರಿಚಯಂಬಳೆದಂದೊಳಗಾದ ನಲ್ಲನಂ
ತೋಳ ತೊಡರ್ಪಿನಿಂ ಪಿಡಿದು ಚುಂಬನದಿಂದೆ ಮರಳ್ಚಿ ಸೌಖ್ಯಮಂ
ಪಾಳಿಪ ಕೂಟದಿಂದೊಲಿಸುವಾಕೆಯ ಕಾಮನ ಲೀಲೆಗಾಲಯಂ ೬೫

ವ || ಮತ್ತೊರ್ವ ಕಾಮಕಳಾಕಳಾಪಕುಶಳನಿಂತೆಂದಂ

ಉ || ರೂಪು ಮನೋಹರಂ ಹರೆಯವೀಕ್ಷಣಸೌಖ್ಯಕರಂ ಕಳಾಕಳಾ
ಪೋಪಚಯಂ ಪ್ರಗಲ್ಭಜನಮೋಹನಸಂಜನಕಂ ಸ್ವಭಾವವಿ
ಚ್ಛಾಪರಿಪಾಳಕಂ ರಸಿಕಸಂತತಿಗೆಂಬ ಸಿತಾಂಬುಜಾಕ್ಷಿಯು
ದ್ದೀಪನಭಾವನಾಯಕಿಯೆ ನಾಯಕಿಯಲ್ತೆ ಮನೋಜರಾಜನಾ ೬೬

ವ || ಮತ್ತೊರ್ವ ಸಂಭೋಗಸಂಭೂತಸುಖಸಾರ ಸರ್ವಸ್ವಿಸ್ವೀಕಾರಲೋಲುವನಿಂತೆಂದಂ

ಉ || ಚುಂಬನದಿಂಬು ಚುಂಬನದ ವಾಂಛೆಯನಪ್ಪಿನೊಳಪ್ಪೆ ಸೌಖ್ಯಮೆಂ
ದುಂ ಬಿಡದಪ್ಪುತಿರ್ಪುದನೊಡಂಬಡೆ ಕೂಡುವ ಬಲ್ಮೆ ಕೂಟಮಂ
ಪಂಬಲಿಸುತ್ತುಮಿರ್ಪದನೆ ಮಾೞ್ಪುದೆನಿಪ್ಪ ಕಳಾಪ್ರಗಲ್ಭೆಯಂ
ಚುಂಬಿಸುವಪ್ಪುವೊಲ್ದೆರೆದು ಕೂಡುವ ನಲ್ಲನೆ ಧನ್ಯನಲ್ಲವೇ ೬೭

ವ || ಮತ್ತೊರ್ವನೊಲ್ದೊಲಿಸಬಲ್ಲ ಬಸನದ ಲವಲವಿಕೆ ಕುಸಿಯದ ಬಸನಿಯಿಂತೆಂದಂ

ಚಂ || ಘನಜಘನಂ ಘನಸ್ತನಯುಗಂ ಘನವೇಣಿ ಮನಕ್ಕೆ ರಾಗಮಂ
ಜನಿಯಿಸುವಂದದಿಂ ಕುಸುಮಕೋಮಳೆಗಾದೊಡಮಿಂಗನೀವ ನ
ಲ್ಲನ ರತಿಕೇಳಿಭಾರಮೆನಿತುಂ ಘನಮಾದುದನಿತ್ತೆ ರಾಗಮಂ
ಜನಿಯಿಕುಮಂತೆ ಬೇಟಮಿರೆ ಕೂಟದೊಳಿಂ ತಣಿವರ್ಗೆ ಸಾರ್ಗುಮೇ ೬೮

ವ || ಮತ್ತೊರ್ವಳ ಗರ್ವದುರ್ವು ಮನಕ್ಕುಬ್ಬೆಗಮಂ ಕೊರ್ವಿಸೆ ಮುಳಿದು ಬಂದಿಂತೆಂದಂ

ಚಂ || ಬಗೆಯದ ಬಾೞ್ತೆಗೆಯ್ಯದೊಲವಂ ಪ್ರತಿಪಾಳಿಸದಾಳಿದೋರ್ಪ ಬ
ಲ್ಮೆಗೆ ಬೆಸೆದಿರ್ಪ ಭಾವಮಱೆದಪ್ಪದ ಕಣ್ಗಿನಿಸೊಪ್ಪದಿಚ್ಛೆಗ
ಚ್ಚಿಗಮನೆ ಮಾೞ್ಪ ಬೇೞ್ಪುದನೆ ಪೋಗೆನಿತಿತ್ತೊಡಮಿತ್ತನೆಂಬ ಮ
ಚ್ಚುಗೆ ತನಗಿಲ್ಲದಂಗನೆಗೆ ಕೂರ್ತವನಗ್ಗದ ಕೞ್ತೆಯಲ್ಲವೇ ೬೯

ವ || ಮತ್ತೊರ್ವನೆಲ್ಲಾ ತೆಱದಿಂ ತನ್ನ ಮನವಱಿದು ನಡೆವ ವನಿತೆಯಂ ನೆನೆದಿಂತೆಂದಂ

ಉ || ದಿಟ್ಟಿಯನಾಣೆಯಿಟ್ಟ ತೆಱದಿಂ ತೆಗೆವಾ ಕೃತಿ ಪಾಡುವೊಂದುವೀ
ಗೊಟ್ಟಿಗೆ ಸಲ್ವ ಬಲ್ಮೆ ಪಣಮುಳ್ಳವನಿಂ ಗುಣಮುಳ್ಳ ನಲ್ಲನಂ
ಕೊಟ್ಟುದೆ ಕೋಟಿಯೆಂದಱೆದು ಮನ್ನಿಪ ಮೈಮೆ ನಿಮಿರ್ಕೆ ಕೂಟದೊಳ್‌
ಪುಟ್ಟುವ ಸೋಂಕುಮುಳ್ಳವಳ್ಳೆ ಕಾಮವಶೀಕರಣಾಸ್ತ್ರಮಲ್ಲಳೇ ೭೦

ವ || ಎಂದಿಂತು ತಂತಮ್ಮ ಬಗೆಗೆವಂದ ಭಂಗಿಯಿಂದಂ ನುಡಿವುದುಮದಂ ವಿದೂಷಕಂ ಕೇಳ್ದಿವಂದಿರ ವಚನಮುಂ ಭಿನ್ನರುಚಿಯಾದೊಡಂ ರಸಾವಹಮಾದುದೆನುತ್ತರಸನಂ ಮಚ್ಚಿಸುತ್ತುಂ ಪೋಗೆ ವೃದ್ಧವಿಟಿಯೊರ್ವಳ್‌ತನ್ನ ಮೊಗದ ತೆರೆಯುಮಂ ಕಂಡಪರೆಂದಡಿಗಡಿಗೆ ಮೊಗಕ್ಕೆ ಸೀರೆಯಂ ತೆಗೆವುದಂ ಕಂಡು ಅಯಂ ಪಟಃ ಸಂವೃತಯೇವ ಶೋಭತೇಯೆಂಬ ನೀತಿಯಿಂ ಸಂವರಿಸುವ ಮುಸುಕಿನಿಂ ಮುಪ್ಪನೊಪ್ಪಮಂ ಮಾಡಿಕೊಂಡಿರ್ದಪ್ಪಳೆಂದಱಿದವಳ ಕೆಲಸಕ್ಕೆ ಪೋಗಿ

ಮ || ಇದು ಚಿತ್ರಂ ಮೃದುಪಾದಪಲ್ಲವದ ಮೆಲ್ಪುಂ ನೊೞ್ಪೊಡೀ ಕೇಶಪಾ
ಶದ ನೀಳ್ಪುಂ ಮೊಲೆಯಲ್ಲಿ ಲೋಚನದ ಬೆಳ್ಪುಂ ಮಧ್ಯದಲ್ಪತ್ವಮ
ಪ್ಪುದುಮಿಂತೀ ಮುಡಿಯಲ್ಲಿ ಮಾನಿನಿ ಕರಂ ಲಾವಣ್ಯವಾರಾಶಿ ಬ
ತ್ತಿದೊಡೇಂ ಪೇೞ್‌ತೆರೆ ಕಾಣಲಾದಪುದಿದೇಂ ನಿನ್ನೊಂದು ಸಾಮರ್ಥ್ಯಮೋ ೭೧

ವ || ಎಂದವಳಂ ಮಗುೞೊತ್ತೆಗೆ ಪೊಱಮಡದಂತು ಕೂಂಟಿಮಾಡಿ ಜಗತೀಪತಿಯ ಮೊಗಕ್ಕೆ ಮುಗುಳ್ನನಗೆಯನೋಲಗಿಸುತ್ತುಂ ಪೋಗೆ ಮುಂದೊಂದಿಂದುಕಾಂತ ರಮ್ಯಹರ್ಮ್ಯವಿಳಾಸನಿವಾಸನಿಳಯದೊಳ್‌

ಉ || ಈ ರತಿಗಾಸಾಗರೆಯೆನಿಪ್ಪ ಲತಾಂಗಿಯೊಳನ್ಯರಾಗಮಂ
ಸೈರಿಸನೆಂಬವೋಲಧರಪಲ್ಲವರಾಗಮುಮಂ ಕಪೋಳ ಕಾ
ಶ್ಮೀರ ಸುಪತ್ರರಾಗಮುಮನೀಂಟಿದನೞ್ತೆಯೊಳಂಗರಾಗಮಂ
ಸಾರೆಡೆವೊಕ್ಕೆಯೇಕೆ ಮರ್ದಿಪವೋಲ್‌ಬಿಗಿದಪ್ಪಿದಂ ಪ್ರಿಯಂ ೭೨

ಚಂ || ಇನಿಯಳ ಮೆಯ್ಗೆ ಮೆಯ್ನವಿರನಕ್ಷಿಗೆ ಸಂಚಳವೃತ್ತಿಯಂ ಮನ
ಕ್ಕನುಪಮಹರ್ಷಮಂ ಪಡೆದು ಕೂಡೆ ಕಳಾಕುಶಳಂ ನಿರಂತರಂ
ಘನಕುಚದೊಳ್ ಕಪೋಳತಳದೊಳ್‌ನಳಿತೋಳ್ಗಳೊಳೋಪನಿತ್ತ ನೂ
ತನ ನಖರೇಖೆಗಳ್‌ಸೊಗಯಿಸಿರ್ದುವು ರಾಗದ ಬಳ್ಳಿವಳ್ಳಿವೋಲ್‌೭೩

ವ || ಮತ್ತೊಂದುತ್ತುಂಗ ಮನಃಪ್ರಸಾದ ಪ್ರಾಸಾದೋಪರಿಮ ಭೂಮಿಭಾಗದೊಳ್‌

ಚಂ || ಲಳನೆ ಮನೋಭವಾಂಬುಧರ ಮಾೞ್ಕೆಯವೋಲ್‌ಪದನಿತ್ತು ಮಾಣೆ ಕಣ್‌
ಪೊಳೆಯದ ಮಿಂಚಿನಂತಿರೆ ಗಳಧ್ವನಿ ಪೊಣ್ಮದ ಮೇಘನಾದದಂ
ತಳವಡೆ ಕೇಶಪಾಶವೊಲೆದಾಡದ ಕೇಕಿಯವೋಲ್‌ರತಾಂತಮಂ
ತಲಘುತರೋಪಶಾಂತಘನಕಾಲದ ಲೀಲೆಯನಾಂತುದಾವಗಂ ೭೪

ವ || ಅಂತು ಮದನೋನ್ಮಾದಮಂದಿರಮಾದ ನಿಜಕಟಕವಿಟವಿಟೀಜನ ವಿನೋದಮಂ ವಿನೋದಚತುರಂ ನಿರೀಕ್ಷಿಸುತ್ತುಮಿರೆ ರಾಗಸಾಗರದ ವೇಳೆಯಂತೆ ವೇಳಾತಿಕ್ರಮಮಾದುದೆಂದು ವಿದೂಷಕನಿಂತೆಂದಂ

ಕಂ || ಕಡೆಗಣ್ಗಳ ಸೆಳೆಯಿಂ ಪೊ
ಯ್ದೊಡೆ ತಡೆದಿರ್ಪುದಲ್ಲದಿರ್ದೊಡೆ ದೇವರ್‌
ನಡೆವುದು ದೇವಿಯರ ಮನಂ
ಬಿಡಿವುದು ಕಾಲ್ವಿಡಿದು ಕೇಳ್ವೊಡೆನ್ನಯ ನುಡಿಯಂ ೭೫

ವ || ಎನೆ ದರಹಸಿತಮುಖಸರಸಿರುಹನರಮನೆಯತ್ತಲಭಿಮುಖನಾಗಿ ಪೋಗಿ ನರ್ಮಸಚಿವರಂ ಕಪ್ಪುರಂ ಬೆರಸಿದ ವೀಳೆಯಂಗಳಂ ಕೊಟ್ಟು ಕಳಿಪಿ ರಾಜಮನೋಜಂ ರತಿಗೃಹಮಂ ಪುಗುವಂತೆ ರಯ್ಯಮಪ್ಪ ಶಯ್ಯಾಗೃಹಮಂ ಪುಗುವುದುಂ ಮುನ್ನಮೆ ತನ್ನ ಬರವಂ ಪಾರುತ್ತಮಿರ್ದು ತಡೆದು ಬಂದುದರ್ಕೆ ಮುನಿದುಂ ಮುನಿದಿರಲಱಿಯದತಿಮುಗ್ಧೆ ಪುಸಿನಿದ್ದೆಯಂ ಮೊಗಕ್ಕೆ ತೆಗೆದು ಪಟ್ಟಿರ್ದುದನಱೆದು ನಿದ್ದೆ ಕೆಟ್ಟಪುದೆನುತ್ತುಂ ಮೆಲ್ಲನೆ ಸೋಂಕುವುದುಮೆಳಛ್ಚಿತ್ತ ಮೆಯ್ನವಿರ್ಗಳೆೞ್ಚತ್ತಿರ್ದುದನಱಿಪೆ ಮುನಿಸುಮಂ ನಿದ್ದೆಯು ಮನುಜ್ಜಯಿಸಿ ಲಜ್ಜೆಯನುಜ್ಜೀವಿಸುತ್ತುಮಿರ್ದ ಬಾಳೆಯಂ ಮೇಳದಿಂ ಮೇಳಯಿಸಿ

ಚಂ || ಪಲವು ಮತಂಗಳಿಂ ನೆಗೞ್ದ ಚುಂಬನದಿಂ ಪಲವಪ್ಪುವಪ್ಪಿನಿಂ
ಪಲವು ತೆಱಂಗಳಾಸನದಿನಂಬುರುಹಾಸ್ಯೆಗೆ ರಾಗದೇೞ್ಗೆಯುಂ
ಪುಳಕಮುಮಪ್ಪಿನಂ ಸಮರತಂ ಸಮನಪ್ಪಿನಮೋತು ಕೂಡಿ ಭೂ
ತಳಪತಿ ಮಾಡಿದಂ ಸೊಗದ ಸೊರ್ಕನಶೇಷಕಳಾವಿಚಕ್ಷಣಂ ೭೬

ವ || ಅಂತು ಸಂತಸಮಂ ಬಳೆಯಿಸುತ್ತುಂ ಬಳದೆ ಸುರರಶ್ರಾಂತಿಯ ಸುಖ ಸುಪ್ತಿಯನೀಯೆ ಕಾಂತೆಯ ನಳಿಳೋಳ ತಳ್ಪಿಂಗೊಳಗಾಗಿ ಮೃದುತಳ್ಪೆತಳದೊಳವನೀನಾಥಂ ಪವಡಿಸಿರೆ

ಚಂ || ವಿರಹಿಯ ಮನ್ಮಥಾನಳಮುಖೋದಿತಧೂಮದೆ ಕಂದಿದಂತೆ ಕಂ
ದಿರೆ ಶಶಿಬಿಂಬಮಸ್ತಗಿರಿಮಸ್ತಕದೊಳ್‌ಭಗಣಂ ನಿಶಾಂಗನಾ
ಭರಣದ ಮೌಕ್ತಿಕಂಬೊಲೊಡವೋಗೆ ಸುರೇಶದಿಶಾವಧೂಮುಖಾಂ
ಬರುಹಪರಾಗರಾಗಮೆನೆ ಸಂಜೆ ಪೊದೞ್ದುದು ಪೂರ್ವದಿಕ್ಕಿನೊಳ್‌೭೭

ಬಿಸಜದೆಸಳ್ಗಳಂ ಬಿಡೆ ಸಡಿಲ್ಚಿ ವಿಯೋಗವಿಷಾದದಿಂದೆ ಮೂ
ರ್ಛಿಸುವ ರಥಾಂಗಯುಗ್ಮಮನಲರ್ಚಿ ಸರೋವರವೀಚಿಮಾಳೆಯೊಳ್‌
ಪಸರಿಸಿ ತೇಂಕಿ ಪುಷ್ಟಿತಲತಾವಳಿಯಂ ನಲವಿಂದೆ ಸೋಂಕಿ ಬಂ
ದೆಸಗಿತು ಸುಪ್ರಭಾತದ ಸಮೀರಣಮಾಶ್ರೀತಸೌಖ್ಯಕಾರಣಂ ೭೮

ಕಂ || ಉದಯಗಿರಿಯರುಣಮಣಿಗಳ್‌
ಪೊದೞ್ದು ಪರಿತತರ್ಪ ಹರಿಯ ಹರಿಪದರಥಚ
ಕದ ಹತಿಯಿನೊಡೆಯೆ ರಜಮೊಗೆ
ದದೆ ತೋಱುವುದೆನಿಸಿತೆಸೆವ ಸಂಧ್ಯಾರಾಗಂ ೭೯

ನೆರೆಯೆ ರುಚಿ ಚಕ್ರವಾಕಂ
ನೆರೆಯೆ ತಮಂ ಪರಿಯೆ ಪರೆಯೆ ನಿಜದೀಧಿತಿ ಭಾ
ಸ್ಕರನಬ್ಜಾಕರಲಕ್ಷ್ಮೀ
ಕರನನುಪಮನೊಗೆದನುದಯಗಿರಿಮಸ್ತಕದೊಳ್‌೮೦

ಮ || ಜಿನಪೂಜಾಷ್ಪವಿಧಾರ್ಚನಾವಿವಿಧ ದಿವ್ಯಾಮೋದದೊಳ್‌ಶ್ರವ್ಯನೂ
ತನಸಂಗೀತನಿನಾದದೊಳ್‌ವನಲತಾಂತಾಮೋದಮಂ ಮತ್ತಭೃಂ
ಗನಿನಾದಂಗಳನೊಯ್ದು ಕೂಡಿ ಜನತಾಸಂಪ್ರೀತಿಯಂ ಮಾಡಿ ಮೆ
ಲ್ಲನೆ ತೀಡಿತ್ತಘಚಾಳಚಾಳನಸುಶೀಳಂ ಸುಪ್ರಭಾತಾನಿಳಂ ೮೧

ವ || ಅಂತು ನೇಸರ್ಮೂಡುವುದುಮಾ ಸಮಯದೊಳ್‌ಮಂಗಳಪಾಠಕಂ ಬಿಂದು

ಚಂ || ಕಿಡೆ ರಿಪುರಾಜತೇಜದೊಡನೂರ್ಜಿತರಾಜನ ತೇಜಮನ್ಯರೊ
ಳ್ಗೊಡೆಗಳೊಳೊಂದಿ ಕಣ್ಗೆಸೆವ ಮೀರಂಗಳಡಂಗೆ ವಿರೋಧಿಭೂಪರೊ
ಳ್ಪಿಡಿದ ಸಹಾಯಹರ್ಷದೊಡನೊಂದಿ ಚಕೋರದ ಹರ್ಷಮೋಡೆ ಪೆಂ
ಪೊಡರಿಪ ನಿನ್ನ ತೇಜದುದಯಕ್ಕೆಣೆಯಾಯ್ತುದಯಂ ದಿನೇಶನಾ ೮೨

ಕಂ || ರವಿರಥಹಯದಂತೆ ದಿಶಾ
ನಿವಹಮನಾಕ್ರಮಿಸಲೆಂದು ನಿಜಹಯಮಾಶಾ
ಪ್ರವರಗಜದಂತೆ ಗಜತತಿ
ಭುವನಾಧಿಪ ದಿಗ್ಗಜಕ್ಕೆ ಬಯಸಿದುದಲ್ತೇ ೮೩

ವ || ಎಂದು ಬಿನ್ನವಿಸಿದನಂತರಂ

ಕಂ || ಜಿನಪನಖಮಣಿದೀಧಿತಿ
ಜಿನಮುಖಮಣಿದರ್ಪಣಂ ಜಿನಾಭಿಷವಾಜ್ಯಂ
ಜಿನದಿವ್ಯಾಷ್ಪವಿಧಾರ್ಚನೆ
ಯನವರತಂ ಚಕ್ರವರ್ತಿಗೊದವಿಸುಗೊಳ್ಪಂ ೮೪

ವ || ಎಂದು ಪೊಗೞ್ವ ಪುಣ್ಯಪಾಠಕರವದೊಡನೆ ನೆಗೞ್ವ ಸುಪ್ರಭಾತಶಂಖ ತೂರ್ಯರವಮುಂ ಹಯಹೇಷಾರವದೊಡನೆ ಪೊಡರ್ದ ಸಮದಗಜಸಂಹತಿರವ ಮುಮುಪವನವನರುಹಷಂಡ ಚಂಡಾಳಿರವದೊಡನೆ ಸಮನಾಗಿ ನೆಗೆವ ಭಂಡಾಳಿಮಧುರಗೇ ಯರವಮಂ ಕಿವಿಗವತಂಸಮಪ್ಪುದುಮುಪ್ಪವಡಿಸಿ

ಕಂ || ನಯನಿಳಯಂ ಪ್ರಾಭಾತಿಕ
ನಿಯಮಮನಾಚರಿಸಿ ತೊಟ್ಟು ಮಣಿಭೂಷಣ ಮಂ
ಜಯ ಜೀವ ರವಂ ನೆಗೞೆ ವಿ
ಜಯಪರ್ವತಗಜದ ಬೆಂಗೆವಂದು ನರೇಂದ್ರಂ ೮೫

ಪಡೆಮಾತಂ ಮಾಗಧನಂ
ಪಿಡಿದಲ್ಲದ ಮಾಣೆನೆಂದು ತನ್ನಯ ಪಡೆಯಂ
ಪಡೆವಳ ಬಡಗಮೊಗದೆ ನೀಂ
ನಡೆಯಿಸುವುದೆನುತ್ತ ಕರೆದು ನಿಯಮಮನಿತ್ತಂ ೮೬

ವ || ಅಂತು ಬಳಾಧ್ಯಕ್ಷನಂ ಬರಿಸಿ ನಿಯಮಿಸುವುದುಮಾತನ ಮಾತಂ ಕೇಳ್ದು ಪಡೆ ನಡೆಯೆ ನಡೆಯೆ

ಕಂ || ಆದರದೆ ರಕ್ತೆಯಿಂ ರ
ಕ್ತೋದೆವರೆಗಮಗೞನಗಿದು ಮಾಗಧವಿಭು ಸೀ
ತೋದೆಗೆ ನೇರ್ಗಿಱೆದೆನೆ ಸಂ
ಪಾದಿಸಿದವೊಲೆಸೆದುದಾ ನದೀಜಲಪೂರಂ ೮೭

ವ || ಅದಂ ರಕ್ತಾನದೀವೇದಿಕೆವಿಡಿದು ದಾಂಟಿ

ಮ || ಪಡೆಯೆಯ್ದಿತ್ತಧಿನಾಥನೆಂದ ತೆಱದಿಂ ರಕ್ತಾನದೀತೀಮಂ
ಪಿಡಿದಂತಾ ನದಿಯುಂ ನಿಸರ್ಗವಿಳಸತ್ಸೀತೋದೆಯುಂ ಕೂಡಿದೊಂ
ದೆಡೆಯುಂ ಭೂಪತಿ ಬರ್ಪ ಸಂತಸದೆ ಸೀತೋದಾನದೀದೇವಿ ನೇ
ರ್ಪಡೆ ತಾಂ ಕಟ್ಟಿದ ತೋರಣಮೆಂಬೊಲೆಸೆದಿರ್ದಾ ತೋರಣದ್ವಾರಮಂ ೮೮

ಕಂ || ಪನ್ನೆರಡುಯೋಜನಂ ನೀ
ಳನ್ನವಯೋಜನಮದಗಲಮೆನೆ ಬಿಡಿಸಲ್‌ಬೀ
ಡನ್ನೆಲನೆಯ್ದದೆ ಪಡೆವ
ಳ್ಳನ್ನೆಱೆಯೆ ಕುಱುಂಬುಗೊಳಿಸಿ ಬಿಡಿಸಿದನಾಗಳ್‌೮೯

ಕಂ || ಭೃಂಗವೃತವನಜಸುರಭಿತ
ರಂಗೋಭಯಸಿಂಧು ಸಂಗಮೋದಿತಮರುದಾ
ಸಂಗಮಮಭಿನವಮಂ ಸುಖ
ಸಂಗಮಮಂ ಪಡೆಗೆ ಪಡೆದದೇಂ ಸೊಗಯಿಸಿತೋ ೯೦

ಚಕ್ರಧರಂ ವಾಹನದಿಂ
ಚಕ್ರಘನಸ್ತನಿಯರೊಡನೆ ಕಡೆಗಣ್ಗಳ್‌ದಿ
ಕ್ಚಕ್ರಮನೆಳವಳಗಗಳಿಂ
ದಾಕ್ರಮಿಸುತ್ತಿೞಿಯೆ ಮೂರ್ತಿಮನ್ಮಥನಿೞಿದಂ ೯೧

ವ || ಅಂತು ಪೆರ್ವಿಡಿಗಳಿನಿೞಿದ ವಿಳಾಸಿನೀಜನಂಬೆರಸು ನದೀವಿಳಾಸಮಂ ನೋಡಿ

ಮ || ಇದು ಕೂಡುತ್ತಿರೆ ವಾರಿರಾಶಿವೆಸರಂ ತಾಳ್ದಿತ್ತು ಗಂಭೀರಮಾ
ದುದು ಮುನ್ನೀರೆನೆ ಪೆಂಪಿನೊಪ್ಪುವ ನಿಳಿಂಪರ್‌ಕ್ರೀಡಿಪರ್‌ಬಂದು ಸ
ಮ್ಮದದಿಂದೆಂದೊಡೆ ಚೆಲ್ವನಾರ್‌ಪೊಗೞರೆಂದುರ್ವೀಶ್ವರಂ ಸಮ್ಮದ
ಪ್ರದಸೀತೋದೆಯನೞ್ತಿವಟ್ಟು ಪೊಗೞ್ದಂ ವಿಶ್ವಾರ್ತಿವಿಚ್ಛೇದೆಯಂ ೯೨

ಮ || ಗಗನಂ ತನ್ನವೊಲಾವಗಂ ಭುವನಮಂ ತಾಳ್ದಿರ್ಪುದೆಂಬೊಂದು ಮೈ
ಮೆಗೆ ಮುಯ್ವಾಂತಮರ್ದೊಪ್ಪುವಂತೆ ನಳಿತೋಳಿಮ ತೋರಮುಕ್ತಫಳ
ಳಿಗಳಂ ತಾರಗೆಯಲ್ಲಿ ತಾಂ ಪಡಿಯಿಡಲ್‌ಪೋದಪ್ಪುದೆಂಬಂತೆ ನೆ
ಟ್ಟಗೆ ಸೀತೋದೆ ಪೊದೞ್ದ ಪೆರ್ದೆರೆಗಳಿಂ ತಳ್ಕೈಸಿತಾಕಾಶಮಂ ೯೩

ವ || ಎಂದು ಗುಣಸಿಂಧು ಸಿಂಧುವಿನ ಗಭೀರತೆಯನಭಿವರ್ಣಿಸಿ

ಕಂ || ಜಲಮಂ ಪೊಕ್ಕಿರ್ದಪನೆನೆ
ಜಲಮಂ ಮಾಗಧನೊಳೞಿಂಸಲಲ್ಲಿ ವಿಲಂಘ್ಯಂ
ದಲಿದೆಂದು ಬಂದು ಕಾಣದೆ
ನಿಲೆ ತವಿಸುವೆನದನೆ ಬೞಕವನ ಜೀವನಮಂ ೯೪

ತವಿಸುವೆನೆಂದುದ್ಯೋಗಿಪ
ಭುವನಾಧೀಶ್ವರನನಖಿಳಕುಳವೃದ್ಧರ್‌ಬಿ
ನ್ನವಿಸಿದರಂತುಟೆ ದೇವ
ರ್ಗವಿಧೇಯಮೆನಿಪ್ಪ ಜನಕೆ ಜೀವನಮುಂಟೇ ೯೫

ಆದೊಡಮೇನವನಿಪ ನೀ
ನಾದಿನೃಪಾಳಕಚರಿತ್ರನದಱಂದಾದ್ಯ
ಶ್ರೀದಯಿತಚಕ್ರಿಗಳ್‌ಪರ
ಮಾದರದಿಂದೆ ನೆಗೞ್ದ ತೆಱದೆ ನೆಗೞಲೆವೇೞ್ಕುಂ ೯೬

ವ || ಎನೆ ಮನದೆಗೊಂಡು

ಕಂ || ಧೃತಧವಳವಸ್ತ್ರನಧಿವಾ
ಸಿತ ಜೈತ್ರಶರಾಸನಾಶ್ತ್ರಚಯನುಪವಾಸ
ತ್ರಿತಯಯುತಂ ಜಲ್ಪಿತಜಲ
ನುತಮಂತ್ರಂ ದರ್ಭಶಯ್ಯೆಯೊಳ್‌ವಿಭುವಿರ್ದಂ ೯೭

ಇರೆ ದರ್ಭಶಯ್ಯೆಯೊಳ್‌ವಿಭು
ವಿರಚಿಸಿ ಪರಮೇಷ್ಠಿಪೂಜೆಯಂ ಶಾಂತಿಕಮಂ
ನಿರುತಂ ಪೌಷ್ಟಿಕಮಂ ಹಿತ
ಪುರೋಹಿತಂ ಮಾಡೆ ಸಿದ್ಧಮಾದುದು ಮಂತ್ರಂ ೯೮

ವ || ಅಂತು ಸಿದ್ಧಮಂತ್ರನಾಗಿ ಮಱುದೆವಸಂ ಪ್ರಾತಃಸಮಯದೊಳ್‌

ಕಂ || ಮಂಗಳವಸದನದಿಂದೆ ಮ
ನಂಗೊಳಿಸುತುಮಿರ್ದು ಪಡೆಯ ಕಾಪಂ ಪಡೆವ
ಳ್ಳಂಗೆ ಸಮರ್ಪಿಸಿ ಮಾಗಧ
ನಂ ಗೆಲ್ವುದ್ಯೋಗದಿಂದಮುತ್ತಮಸತ್ವಂ ೯೯

ರವಿರಥಹಯದೊಳ್‌ಮಚ್ಚರಿ
ಸುವ ವೇಗದ ಗಿಳಿಯಬಣ್ಣದಶ್ವಂಗಳಿನೊ
ಪ್ಪುವಿನಂ ಪೂರಿತನೇಱಿದ
ನವನೀಶ್ವರನೊಸೆದು ರಥಮನಜಿತಂಜಯಮಂ ೧೦೦

ವ || ಅಂತು ವಿವಿಧಾಯುಧಂಗಳಿಂ ಮನಂಗೊಳಿಸುವ ಮನೋರಥಮಂ ತೀರ್ಚುವ ರಥಮನೇಱಿ ಮಾಗಧನ ವಿಕ್ರಮಮನತಿಕ್ರಮಿಸುವುದಂ ನಿವೇದಿಸಿ ವಜ್ರವೇದಿಕೆಯಂ ದಾಂಟಿ ಸೀತೋದೆಯಂ ತೋರಣದ್ವಾರದಿಂ ಪೊಕ್ಕು ಚೋದಿಸೆನೆ

ಕಂ || ಸಾರಥಿ ಮನೋರಥಕ್ಕಂ
ಸಾರಥಿಯೆನೆ ಹರ್ಷಮೊದವೆ ಚಕ್ರಿಗೆ ರಥಮಂ
ಧಾರಿಣಿಯೊಳ್‌ಪರಿಯಿಪವೋಲ್‌
ನೀರೊಳ್‌ಚೋದಿಸಿದನೇನವಂ ಪರಿಣತನೋ ೧೦೧

ತೆರೆಮುಗಿಲ ಬೞೆವಿಡಿದು ಭಾ
ಸ್ಕರರಥಹರಿ ಹರಿವ ತೆಱದೆ ತೇಜಶ್ಚಕ್ರಾ
ಭರಣನ ರಥಹರಿ ಹರಿದುವು
ತೇಱೆದುಱುಗಲನಟ್ಟುವಂದದಿಂ ಸಿಂಧುವಿನೊಳ್‌೧೦೨

ಹಯಖುರಮುಂ ಚಕ್ರದ ನೇ
ಮಿಯಮೂರ್ಜಿತವಜ್ರಮಕ್ಕುಮೆನೆ ವಾಹಿನಿಯೊಳ್‌
ನಿಯತಮದಾೞದೆ ಸಮಭೂ
ಮಿಯೊಳದಿರದೆ ಪರಿವ ತೆಱದೆ ಪರಿದತ್ತು ರಥಂ ೧೦೩

ಸರಸಿಜಪರಾಗದಿಂದಂ
ಪೊರೆದ ತರಂಗಾಳಿ ರಂಗವಲಿಯಂ ಭೂಪಂ
ಬರುತಿರೆ ತಜ್ಜಲದೇವತೆ
ವಿರಚಿಸಿದವೊಲೆಸೆದುವಸದಳಂ ಸಿಂಧುವಿನೊಳ್‌೧೦೪

ಮ || ಸಕಳೋರ್ವಿಶನಲಂಘ್ಯಮೆಂದಿರದೆ ಕೇಳಕ್ಲೇಶದಿಂ ವಜ್ರವೇ
ದಿಕೆಯಂ ದಾಂಟಿದನೆನ್ನ ಗುಣ್ಪನೆನಸುಂ ಕೀೞ್ಮಾಡಿದಂ ನಿನ್ನನಿಂ
ಪ್ರಕಟಂ ರಕ್ಷಿಪರಿಲ್ಲ ಮಾಗಧ ಶರಣ್ಬೊಕ್ಕೆಯ್ದೆ ಬಾೞೆಂದು ವೀ
ಚಿಕಳಾಪದ್ವನಿಯಿಂದೆ ಪೇೞ್ವ ತೆಱದಿಂ ಸೀತೋದೆಯೇನೊಪ್ಪಿತೋ ೧೦೫

ಕಂ || ಪನ್ನೆರಡುಯೋಜನಂ ಬರೆ
ಗಂ ನಿಲ್ಲದೆ ಪರಿದು ಜಳಚರಂ ರಥಹತಿಯಿಂ
ದಂ ನೊಂದಪುವೆಂದಾ ನದಿ
ಯುನ್ನತದೇವತೆಯೆ ಕರುಣದಿಂ ನಿಲಿಸಿದವೋಲ್‌೧೦೬

ಪರಿಯದೆ ನಿಲೆ ರಥಮುರಿವರಿ
ವರಿದಧಿಪನ ಕೋಪಮಳುರ್ವ ಬಡಬಾನಳನಂ
ತುರಿಪಲೊಡರ್ಚಿತ್ತಹಿತನ
ಪುರದೊಡನಂಬುಧಿಗೆ ಸದೃಶಮೆನಿಸಿದ ನದಿಯಂ ೧೦೭

ಮುಳಿದು ಕುಳುಂಪೆಯ ಜಳಮೀ
ಜಳಮೆಂದು ತುಳುಂಕಲಿದಱ ಜಳಚರಮನಿತುಂ
ಪೆಳಱುಗುಮೆಂದೊಲ್ಲದೆ ರಿಪು
ನಿಳಯಮನನಳಾಸ್ತ್ರದಿಂದ ಮುಱೆಪುವೆನೆನುತಂ ೧೦೮

ಪೊಡವಿ ಪೆಳಱಿತ್ತು ಕುಳಗಿರಿ
ನಡುಗಿತ್ತಾಶಾಗಜಾಳಿ ಮದವುಡುಗಿತ್ತಾ
ಜಡಧಿ ಕಲಂಕಿತ್ತರಿಯೆರ್ದೆ
ಯೊಡವಿನೆಗೆಂ ನೃಪತಿ ಜೇವೊಡೆಯೆ ನಿಜದನುವಂ ೧೦೯

ಮ || ಅರಿದರ್ಪೋಚ್ಚಾಟನಾನ್ಯಕ್ಷಿತಿಪತಿವಿಭವಾಕರ್ಷನಾಕ್ಷೂಣಮಂತ್ರಾ
ಕ್ಷರಮೆಂಬಂತಿರ್ದ ನಾಮಾಕ್ಷರಮನೆ ತಳೆದಿರ್ದಸ್ತ್ರಮಂ ಜ್ಯಾರವಂ ಮೇ
ಘರವಪ್ರಸ್ಪರ್ಧಿ ಪೊಣ್ಮುತ್ತಿರೆ ನರಪತಿ ತೊಟ್ಟೆಚ್ಚೊಡುರ್ಚಿತ್ತು ವಜ್ರ
ಸ್ಫುರಿತಾಂಗಂ ಮಾಗಧಾತ್ಯುನ್ನತನಿಳಯಶಿಳಾಸ್ತಂಭಮಂ ಚಕ್ರಿಬಾಣಂ ೧೧೦

ಕಂ || ಸ್ತಂಭಮನಂಬುರ್ಚೆ ಗತಿ
ಸ್ತಂಭಂ ಕೆಲಬರ್ಗೆ ಕೆಲರ್ಗೆ ದೋರ್ವಳ ಗರ್ವ
ಸ್ತಂಭಂ ಕೆಲಬರ್ಗೆ ಮತಿ
ಸ್ತಂಭಂ ಸಂಭವಿಸಿತಮರವಿಭುವಿನ ಸಭೆಯೊಳ್‌೧೧೧

ವ || ಅಂತಾ ಶಿಳೀಮುಖಸಂಭವರವಕ್ಕೆ ವಿರಹಿಗಳಂತೆ ಭಯಾಕ್ರಾಂತಸ್ವಾಂತರಾದರಂ ವೀರಾಂಗನಾಸಂಗತರಾದರೆಂತಾನುಂ ಸಂತೈಸಿ ಹಸ್ತಾಂಜಳಿ ಮೌಳಿಯೊಳ್‌ಲೀಲೆವಡೆಯೆ ತಮ್ಮೊಡೆಯಂಗಿಂತೆಂದರ್‌

ಕಂ || ಪಲದೆವಸಕ್ಕೆತ್ತಾನುಂ
ಕಲಹಂ ದೊರೆಕೊಂಡೊಡಿಲ್ಲಿ ದೋರ್ವಳದಿಂ ಮಾ
ರ್ಬಲಮನದಟಲೆಯದಿರ್ದೊಡೆ
ನಲವಿಂ ರಕ್ಷಿಸಿತು ದೇವ ನಿಷ್ಫಳಮಲ್ತೇ ೧೧೨

ವ || ಎಂದು ನುಡಿವ ಸುಭಟಾಳಾಪಮೆ ಕೋಪಾನಳಕ್ಕುದ್ದೀಪನಭಾವಮಂ ಪಡೆಯ

ಕಂ || ಬಿಡದೆ ಮೞೆಯೊಡನೆ ಕಾಯ್ಪಿಂ
ಸಿಡಿಲೊಡರಿಪ ತೆಱದೆ ಘರ್ಮಜಳದೊಡನೆ ಪೊಡ
ರ್ಪುಡುಗದ ಕೋಪಾನಳಮಂ
ದೊಡರಿಸಿದುದು ಘನಮದಾಂಧನೊಳ್‌ಮಾಗಧನೊಳ್‌೧೧೩

ಮೆಚ್ಚನನುವರದೊಳೆಂಬಿನ
ಮೆಚ್ಚವನೀ ಶರಮೆ ಮಗುೞ್ದು ತಾಗಿದ ತೆಱದು
ಮ್ಮಚ್ಚಮಿರದೊದವೆ ಮನದೊ
ಳ್ಮಚ್ಚರಮಱಿವಿನೆಗಮಳಱಿಪೆಂ ದೋರ್ವಳದಿಂ ೧೧೪

ವ || ಎನೆ ಸಚಿವಂ ಮಾರ್ಕೊಂಡು

ಕಂ || ಆರಿದನೆಚ್ಚವರೆಂಬುದ
ನಾರಯ್ಯದೆ ವೀರವೃತ್ತಿಯಂ ನುಡಿವುದೆ ಸಾ
ಧಾರಣನೋ ರಣಧೀರನೊ
ಬಾರಿಸಿ ನೋಡುವುದು ತತ್ಪ್ರಶಸ್ತ್ರಿಕ್ರಮಮಂ ೧೧೫

ಭರತೈರಾವತದೊಳ್‌ನಿಯ
ತರೆನಿಸಿ ಸಂಜನಿಯಿಕುಂ ತ್ರಿಷಷ್ಟಿಶಲಾಕಾ
ಪುರುಷರ್‌ವಿದೇಹದೊಳ್ ಕುಂ
ದರೆಂದುಮದಱೆಂದೆ ಚಕ್ರಿಯಾಗಲೆವೇೞ್ಕುಂ ೧೧೬

ನಿನ್ನನೆಱಗಿಪೊಡೆ ಚಕ್ರಧ
ರಂ ನೆಱೆಗುಂ ಪೆಱರ ವಿಕ್ರಮಕ್ಕೆಡೆಗುಡದ
ತ್ಯುನ್ನತಗಭೀರತಾಸಂ
ಪನ್ನಂ ನಿಜವಾಸಮಸ್ತಮಿತಸಂತ್ರಾಸಂ ೧೧೭

ಬಾಣಮಿದಧಿಪತಿನಿಗದಿತ
ಬಾಣಮನೊಳಕೊಂಡು ದಂಡಮಂ ಸಾಮನನ
ಕ್ಷೂಣಮನಱಪಲ ನೆಱೆಗುಂ
ಕ್ಷೋಣೀಶರ್ಗಧಿಕ ಶೌರ್ಯ ಮಂತ್ರಿಯ ತೆಱದಿಂ ೧೧೮

ವ || ಎಂದಿಂತದಱೊಳಿರ್ದಂಕಮಾಲೆಯ ಬಿಂಕಮಂ ಕೇಳ್ವುದೆಂದ ಸಚಿವನ ವಚನಮುಚಿತ ಮೆನಿಸ ಮನಕ್ಕೆವರೆ ಮಾಗಧಂ ಮಹಾಸಂಧಿವಿಗ್ರಹಿಯ ಮೊಗಮಂ ನೋೞ್ಪುದು ಮಾತಂ ಶಿಲಾಸ್ತಂಭದೊಳ್‌ವಿಜೃಂಭಿಸುತ್ತುಂ ತೆತ್ತಿಸಿರ್ದ ವಿಶಿಖಗತಲಿಖಿತ ಸುವರ್ಣ ಪತ್ರಮಂ ನೋಡಿ

ಚಂ || ಜಲಚರವೃತ್ತಿಯಂ ತಳೆದು ವರ್ತಿಸುತಿರ್ಪವರ್ಗುಂಟೆ ಬೇಱೆದೋ
ರ್ವಳಮದಱೆಂದೆ ಕಾಲ್ವೊೞೆಯಿದಾದುದು ತಾಂ ನೆಲಸಿರ್ಪ ಸಿಂಧು ಮಾ
ರ್ಮಲೆಯಲೆವೇಡ ಜೀವನಮನೊಲ್ವೊಡೆ ಕಾಣ್ಬುದು ವಜ್ರನಾಭಿಯಂ
ಬಲನಿಧಿಚಕ್ರವರ್ತಿಯನದಕ್ಕಭಯಂ ಭುವನೈಕರಕ್ಷಕಂ ೧೧೯

ವ || ಎಂದು ಬರೆದಿರ್ದ ರಾಜಾದೇಶಮಂ ಗುಱಯಂ ಧಾನುಷ್ಕನೆಂಬಂತೆ ತ
ಪ್ಪದಿದಂ ಕಂಬಮನೆಚ್ಚುದಂ ತನಗೆ ಬಾಹಾ ಗರ್ವಮಂ ತೋಱು ಬೇ
ಡಿದಪಂ ಕಪ್ಪಮನೆನ್ನ ವಾಹಿನಿಯುಮುದ್ಯನ್ಮದ್ಭುಜಾದಂಡಮುಂ
ಕದನಕ್ರೌರ್ಯಮನೀಯದಂತವಱವೋಲೆಂತುಂ ಸಮಂತಿರ್ಕುಮೇ ೧೨೦

ವ || ಎಂದು ಮುನಿಸಂ ಮೊಗಕ್ಕೆ ತಂದಾಸ್ಥಾನರಂಗದಿಂದೆೞ್ದು ರಣರಂಗಕ್ಕುದ್ಯೋಗಿಸುತ್ತಿರ್ದನಂ ಚಕ್ರವರ್ತಿಯ ಸಾಮರ್ಥ್ಯಮನಱವ ಹಿತಮಹತ್ತರರುದ್ವೃತ್ತನಂ ಮಾಗಧನಂ ಮಾರ್ಕೊಂಡು

ಕಂ || ಏಕಾಕಿಯ ಕಲಹಮುಮ
ಸ್ವೀಕರಣೀಯಂ ವಿವೇಕಿಗಳಿನೆಂದೊಡಿದೇಂ
ಲೋಕಾಧಿಪತಿಯ ಕದನಂ
ಸ್ವೀಕರಣೀಯಮೆ ಬಿಸುೞ್ಪುದಸದಾಗ್ರಹಮಂ ೧೨೧

ಪೂಜಿಸು ರಾಜಿತ ಶರಮಂ
ರಾಜಾದೇಶಮನೆ ಮೌಳಿಯೊಳ್‌ತಳೆ ನಡೆ ನಿ
ರ್ವ್ಯಾಜದೊಳೆ ಚಕ್ರಿಚರಣಾಂ
ಭೋಜಕ್ಕೊಲ್ದೆಱಗು ಪಡೆವೊಡಧಿಕಶ್ರೀಯಂ ೧೨೨

ವ || ಎಂದನ್ವಿತರುಂ ಹಿತಾನ್ವೇಷಿಗಳುಮಪ್ಪ ಮಹಾಪ್ರಧಾನರ್‌ನುಡಿದ ನುಡಿಗೊಡಂಬಟ್ಟು ಚಲಮಂ ಬಿಟಟು

ಉ| ಗಾಲಿಯನೆತ್ತಿ ಪತ್ತಿಗೆಯ ವಾಹಖುರಂಗಳ ಘಾತದಲ್ಲಿ ಕ
ಲ್ಲೋಲಮದಾಗದಿರ್ದುಮಿನರಶ್ಮಿಗೆ ಕೊಳ್ಗುದಿಗೊಳವವೋಲಿಳಾ
ಪಾಳನ ತೇರಜದೇೞ್ಗೆಗಗಿವಂಬುಚರಂಗಳ ಮೋಹದಿಂದವಂ
ಪಾಳಿಸವೇರೞ್ಕುಮೆಂದು ವರುಣಂ ಬರುತಿರ್ಪ್ಪವೊಲೊಪ್ಪಿ ಮಾಗಧಂ ೧೨೩

ವ || ಬಂದು ವಿನಯವಿನಮಿತೋತ್ತಮಾಂಗನಾಗಿ

ಕಂ || ವರುಣನ ಭಂಡಾರದೊಳೆಸೆ
ವರುಣಮಣಿಪ್ರಕರದಂತೆ ರಂಜಿಪ ರತ್ನಾ
ಭರಣಂಗಳಿನೋಲಗಿಸಿದ
ನೆರಡಿಲ್ಲದ ಭಕ್ತಿಯಿಂದೆ ಚಕ್ರಿಗೆ ದಿವಿಜಂ ೧೨೪

ವ || ಓಲಗಿಸುವುದುಮಾತನ ವಿನಯಮೆ ತನಗೆ ಬಾೞ್ತೆಯಪ್ಪುದಱನಾ ಪದಾರ್ಥಮಂ ಬಾೞ್ತೆಗೆಯ್ಯದೆಯುಮಾತನ ಬಿನ್ನಪಮಂ ಮನ್ನಿಸಲ್ವೇೞ್ಕುಮೆಂದುನ್ನತ ಚಿತ್ತನೊಂದೆರಡು ರತ್ನಂಗಳಂ ಕಳೆದುಕೊಂಡುೞದುವಂ ತಾಂ ಕುಡುವ ಪಸಾಯದೊಡನೆ ಕೊಟ್ಟು ಸಂತಸಂ ಬಡಿಸೆ ಮಾಗಧನಾಗಳಿಂತೆಂದಂ

ಕಂ || ಅನುಪಮಪದನಖಮಣಿಯಿಂ
ಸನಾಯಕಂ ಮಕುಟಮಾಯ್ತು ಭವದೀಯ ದಯಾ
ಜನಿತಪ್ರಸಾದದಿಂದಂ
ಸನಾಥಮಾದತ್ತು ಮತ್ಕುಲಂ ಭುವನಪತೀ ೧೨೫

ವ || ಅಂತಾ ವಿಬುಧಪತಿಯಂ ವಿಬುಧಪತಿ ಸಂತಸಂಬಡಿಸಿ ಬೀೞ್ಕೊಳಿಸಿ ಪರಿಜನಂ ಬೆದಱುಗುಂ ಬೇಗಂ ಪೋಗೆಂದು ಕಳಿಪಿ

ಕಂ || ಉದಯಾಚಳಕಟಕಕ್ಕಿನ
ನುದಧಿಯಿನೆೞ್ತರ್ಪ ತೆಱದೆ ನಿಜಕಟಕಕ್ಕಾ
ನದಿಯಿಂದಂ ಸೈನಿಕಚ
ಕ್ರದ ಹರ್ಷಂ ಬಳೆಯೆ ಚಕ್ರವಿಭುವೆೞ್ತಂದಂ ೧೨೬

ರವಿ ದೂರದೊಳಿರ್ದುಮಭೀ
ಷುವಿಂದೆ ಕುವಳಯದ ಲಕ್ಷ್ಮಿಯಂ ಹರಿಯಿಪವೋಲ್‌
ದಿವಿಜಕುಲಧನಮುಮಂ ಚ
ಕ್ರವರ್ತಿ ಹರಿಯಿಸಿದನಿಷುವಿನಿಂ ಘನತೇಜಂ ೧೨೭

ವ || ಎಂದು ಮಾಗದನೊಳ್‌ಮಾಡಿದವಾರ್ಯಶೌರ್ಯಮಂ ಮಾಗಧರ್‌ಮನೋರಾಗದಿಂ ಪರಿಕೀರ್ತಿಸುತ್ತುಂ ಬರೆ ತೀರದೇಶದೊಳ್‌ತನ್ನ ಬರವಂ ಪಾರುತಮಿರ್ದ ಮಹಾಸಾಮಂತ ಮಕುಟಬದ್ಧಮಣಿ ಕುಟಸ್ಯಂದನರುಚಿರುಚಿರಚರಣಾರವಿಂದಂ ಸ್ಯಂದನದಿಂದಮಿೞಿದು ಬಳಸಿಬರ್ಪ ಪರಿಜನಂಬೆರಸಶೇಷಶಿಬಿರಯೋಷಿದ್ದತ್ತಶೇಷಾಕ್ಷ ತಂಗಳನುತ್ತಂಸಂ ಮಾಡುತ್ತುಂ ಮಗಳಪಾಠಕಗಾಯಕರ ನಂಗಳಂ ಕರ್ಣಾವತಸಂ ಮಾಡುತ್ತುಂ ರಾಜಹಂಸಂ ರಾಜನಿಳಯಮನಳಂಕರಿಸಿ ಮಱುದೆವಸಂ ದಿವಸಮುಖದೊಳ್‌ಪೂರ್ವಾಭಿಮುಖವಾಗಿ ನಡೆದು ನಿಜಕಟಕಮಂ ನದೀತಟದೊಳ್‌ಬಿಡಿಸಿ

ಮ.ಸ್ರ || ಸ್ಥಿರತೇಜಂ ವೈಜಯಂತೀಮುಖದೆ ವರತನುಖ್ಯಾತನಂ ಭೂರಿಶೋಭಾ
ಕರರಕ್ತೋದಾನದೀದ್ವಾರದಿವಯದಿಂ ಪೊಕ್ಕು ಮಿಕ್ಕಾ ಪ್ರಭಾಸಾ
ಮರನಂ ಪೂರ್ವಕ್ರಮಂ ನೇರ್ಪುಡೆ ಪದನತರಂ ಮಾಡಿ ಸಾಶ್ಚರ್ಯಶೌರ್ಯಾ
ಭರಣಂ ವಿಖ್ಯಾತಿವೆತ್ತಂ ಸುಕವಿಜನಮನೋಹರ್ಷಸಸ್ಯಪ್ರವರ್ಷಂ ೧೨೮

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯವಾಸುಪೂಜ್ಯಜಿನಮುನಿ ವಸಾದಾಸಾಧಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳೆಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥ ಪ್ರಣೀತಮಪ್ಪ ಪಾರ್ಶ್ವನಾಥಚರಿತ ಪುರಾಣದೊಳ್‌ಮಾಗಧಾಮರವರತನುಪ್ರಭಾಸಾಮರ ದರ್ಪದಳನ ವರ್ಣನಂ ದಶಮಾಶ್ವಾಸಂ