ಕಂ || ಶ್ರೀದಾಕ್ಷಿಣ್ಯಾಶಾಸಂ
ಪಾದಿತ ಸುಖಕರ ವಿಳಾಸ ಭಾಸುರ ವಿಜಯ
ಶ್ರೀದಯಿತೆಂ ತೆಂಕಲ್‌ಮೊಗ
ನಾದಂ ಸಾಧಿಸಲೆ ವೇಡಿ ಕವಿಕುಳತಿಳಕಂ ೧

ವ || ಅಂತಖಿಳಕ್ಷಿತಿರಕ್ಷಣದಕ್ಷಿದಕ್ಷಿಣಭುಜಾದಂಡಂ ದಕ್ಷಿಣದಿಙ್ಮಖಕ್ಕಭಿ ಮುಖನಪ್ಪುದುಂ ಪ್ರಭಾಕರಪ್ರಭಾವಮಾತ್ಮೀಯತೇಜಃಪ್ರಭಾವದಂತೆ ರಿಪುಕುವಳಯಲಕ್ಷ್ಮಿಯಂ ಸ್ವಕೀಯ ಕರಕಮಳಕ್ಕತ್ಯಾಯತ್ತಂ ಮಾಡುತ್ತುಮತಿ ಪ್ರವೃದ್ಧಮಾಗೆ

ಮ || ಅತಿಥೇಜೋದಿಕನಪ್ಪವಂಗದಿರದಾವಂ ತೇಜಮಂ ತೋರ್ಕುಮಾ
ಕ್ಷಿತಿಭೃಂದ್ವಂಶಮವಶ್ಯದಿಂ ಕಿಡುಗುಮೆಂಬಂತರ್ಕ ತೀವ್ರಪ್ರಭೋ
ನ್ನತಿಗಂ ಮಾಱುರಿವರ್ಕಕಾಂತಮಣಿಯಂ ತಾಳ್ದಿರ್ದ ಧಾತ್ರಿಧರೋ
ದ್ಧತವಂಶಸ್ಥಳಿ ಬೇಯೆ ಬೇಸಗೆ ಕರಂ ಕೊರ್ವಿತ್ತು ಸರ್ವೋರ್ವಿಯೊಳ್‌೨

ಅಱಿದೇಂ ಚಂಡಮರೀಚಿರೋಚಿಯ ನೆಲನಂ ನಿರ್ನೀರಮಪ್ಪನ್ನೇಗಂ
ನೆಱೆ ಶೋಷಿಪುದುಮಪ್ಪುಗಳ್‌ಮುನಿಸಿನಿಸಿಂ ನಿಸ್ತೇಜಮಂ ತನ್ನೊಳೆ
ಚ್ಚಱಿಕುಂ ನಿಚ್ಚಲುಮೆಂದು ವಹ್ನಿಯ ನಿಜಪಾದಪ್ರಾಂತಮಂ ಪೊರ್ದೆ ಬೆ
ಳ್ಕುಱೆ ತೇಜಸ್ಪತಿ ಕಾಯ್ದು ಕಾಯ್ದುನುೞಿದಂದಿಂತೇಕೆ ತೀವ್ರಾತವಂ ೩

ಮ. ಸ್ರ || ಒಡಲಂ ಚಂಡಾಂಶುಚಂಡದ್ಯುತಿ ಕಿಡಿವಿಡುತಂ ಕಿರ್ಚಿನಂತಳಿನಂ ಘೀ
ಳಿಡುತುಂ ಕಾಡಾನೆ ನೀಡುಂ ಮುೞುಗೆ ಮಡುವಿನೊಳ್‌ಕಾಯ್ದ ಕರ್ಬೊನ್ನ ಬಟ್ಟಂ ಬಿಡೆ ತಂದಂದೞ್ದಿದಂತಾಗಳೆ ಜಳಮನಿತುಂ ಬತ್ತಿತೆಂದೊಡೇನು
ಗ್ಗಡಮಾಯ್ತೋ ಧಾತ್ರಿ ನಿರ್ಜೀವನಮೆನಿಸುವಿನಂ ಗ್ರೀಷ್ಮಮತ್ಯಂತಭೀಷ್ಮಂ ೪

ಚಂ || ಅಡಿ ಪುಗುೞಾಗೆ ತೀವ್ರಪತನದ್ಯುತಿ ನೆತ್ತಿಯನಗ್ನಿ ತಾಗುವಂ
ತುಡುಗದೆ ತಾಗೆ ಗಂಟಲೆರ್ದೆ ಬತ್ತೆ ಬೆಮರ್ತು ಬಿಗುರ್ತು ಪಾಂಥರೋ
ರಡಿಯನಿಡಲ್ಕಮಾಱದಱುನೀರ್ಗಳ ಮೀನವೊಲಂದು ಮಾರ್ಗದೊಳ್‌
ಬಿಡೆ ಮಱುಗುತ್ತುಮಿರ್ಪಿನೆಗಮುಗ್ಗಡಮಾಯ್ತು ನಿಧಾಘದಾಗಮಂ ೫

ಪರಹಿತರೊಲ್ದು ಸಾರ್ದ್ರಹೃದಯಕಷಿತಿಪಾಳಕರಾಜ್ಯದಲ್ಲಿ ಸಂ
ವರಿಸಿದ ಜೀವನೋಚಿತಧನಂಗಳನೀೞ್ಕುಳಿಗೊಳ್ವ ತೀವ್ರನ
ಪ್ಪರಸನ ಮಾೞ್ಕೆಯಿಂದಮೆ ಜಳಾಶಯದಂಬುದಕಾಲದಲ್ಲಿ ಸಂ
ವರಿಸಿದ ಜೀವನಂಗಳನೆ ತೀವ್ರಕರಂ ಕವರ್ದಂ ನಿದಾಘದೊಳ್‌೬

ಮ || ನೆಲನೆಲ್ಲಂ ತಪನಪ್ರತಾಪಶಿಖಿಯಿಂದಂ [ನಾಡೆಯುಂ]ಕಾಯ್ದ ಕಾ
ವಲಿಯಂತಾಗೆ ಮಣಲ್‌ಛಿಟಿಲ್ಲೆನುತರಲ್ವೋಪಂತು ನಾನಾನದೀ
ಜಲಮಾದಂ ಕುದಿದುರ್ಕೆ ಮಾರ್ಗರಜವೆತ್ತಂ ಪೊತ್ತಿ ಕಾಡೊಳ್‌ದವಾ
ನಳನಂ ಪುಟ್ಟಿಸೆ ಕೊರ್ವಿ ಪರ್ವಿದುದಗುರ್ವಿಂದುಗ್ರಘರ್ಮಾಗಮಂ ೭

ವ || ಅಂತಾಸುರಮಾದ ಬೇಸಗೆಯೊಳ್‌

ಚಂ|| ಮಳಯಜದಣ್ಪು ಕಪ್ಪುರದ ತಂಬುಲಮೊಪ್ಪುತುಮಿರ್ಪ ಮೌಕ್ತಿಕಂ
ಗಳ ತೊಡವುಜ್ಜಳಿಪ್ಪ ದುಗುಲಂ ಹಿಮಚಂದನಗಂಧವಾರಿ ಶೀ
ತಳನಿಳಯಂ ಮೃಣಾಳವಳಯಂ ಕೊಳನಂಬುಜಪತ್ರವೀಜನಂ
ಕಳೆಯೆ ನಿಧಾಘದಾದೊದವಂ ಪಡೆಯೇಂ ಪಡೆದತ್ತೊ ಸೌಖ್ಯಮಂ ೮

ಮ || ಇಡಿದುರ್ವೀರುಹಷಂಡದಿಂದೆ ಲತಿಕಾಸಂದೋಹದಿಂ ಕೋಡುತುಂ
ಕುಡದರ್ಕಾಂಶುಗಮಿರ್ಕೆಯಂ ಮಿಸುಪ ರಕ್ತೋದಾನದೀತಿರಮಂ
ಪಿಡಿದಾ ಗ್ರೀಷ್ಮದೊಳಾದ ಖೇದದೊದವಂ ಕೆಯ್ಕೊಳ್ಳದಾನಂದಮಂ
ಪಡೆಯುತ್ತುಂ ಪಡೆ ಪೊರ್ದಿದತ್ತು ವಿಜಯಾರ್ಧಾದ್ರೀಂದ್ರಮಂ ರುಂದ್ರಮಂ ೯

ಹರಿಯೂಥಂ ಖಗರಾಜಿ ಖೞ್ಗ ನಿವಹಂ ನಾಗವ್ರಜಂ ಸ್ಯಂದನೋ
ತ್ಕರಮುದ್ಗಂಧಮರುದ್ಗಣಂ ಕಟಕರತ್ನಶ್ರೇಣಿಗಳ್‌ತನ್ನೊಳೊ
ಪ್ಪಿರೆ ಷಟ್ಖಂಡಧರಿತ್ರಿ ಸೇವಿಸೆ ನಿಜಶ್ರೀಪಾದಮಂ ಪೆಂಪುವೆ
ತ್ತುರದಿಂ ಚಕ್ರಧರಂಗೆ ಮಿಕ್ಕು ವಿಜಯಾರ್ಧಂ ಸ್ಪರ್ಧೆಯಂ ಮಾಡುಗುಂ ೧೦

ವ || ಅಂತು ಸೊಗಯಿಸುವ ವಿಜಯಾರ್ಧನಗಮನೆಯ್ದೆವಂದು

ಕಂ || ನುತರಕ್ತೋದಾತೀರ
ಸ್ಥಿತಕುಸುಮಿತವನದಿನುತ್ಸವಾದುತ್ಸವಮಾ
ಪತಿತಮೆನುತ್ತುಂ ವಿಜಯಾ
ರ್ಧತಟದ ನಂದನಮನೆಯ್ದಿತಾ ನೃಪಕಟಕಂ ೧೧

ಚಂ || ಮಳಯಜ ಮಾಧವೀ ವಕುಳ ಚಂಪಕ ಲೋಧ್ರ ಲವಂಗ ಮಾಗಧೀ
ತಿಳಕ ತಮಾಳ ತಾಳ ಸರಳಾಮಳಕಾರ್ಜುನ ಸರ್ಜ ಭೂರ್ಜ ಗು
ಗ್ಗುಳಘನಸಾರ ಲುಂಗ ಲವಲೀ ಸಹಕಾರ ಕದಂಬ ಪೂಗಪಾ
ಟಳಿ ಗಿರಿಮಲ್ಲಿಕಾ ಸುರಭಿ ಶೋಭಿಸುತಿರ್ದುವು ತದ್ವನಾಂತದೊಳ್‌೧೨

ಕಂ || ಪ್ರಿಯಪವನಂ ಪಿಕನಿನದಂ
ಮಯೂರನೃತ್ಯಂ ಪ್ರಸೂನಗಂಧಮ ಫಳಸಂ
ಚಯಮೊದವಿಕ್ಕುಂ ಪಂಚೇಂ
ದ್ರಿಯಸುಖಮಂ ಪಡೆಗೆ ಪಡೆದುದಾ ನಂದನದೊಳ್‌೧೩

ಕುಸುಮಶರಚಕ್ರಿಸವನಮ
ನೆಸಗಲ್‌ಮಧುಚಕ್ರಿರಾಜ್ಯಸವನಮೆಸಗಲ್‌
ಮಿಸುಗಿರೆ ಪಸುರ್ವಂದಲನೆ
ತ್ತಿಸಿದನೊ ವಿಜಯಾರ್ಧನೆನಿಸಿ ರಂಜಿಸಿತು ವನಂ ೧೪

ವ || ಅಂತು ರಾಜಿಸುವ ವನರಾಜಿಯಂ ವನವೇದಿತಾತೋರಣದ್ವಾರದಿಂ ಪೊಕ್ಕು

ಕಂ || ರಮಣೀಯರತ್ನಮಯಮ
ಧ್ಯಮಕೂಟಾಸನ್ನ ಸನ್ನಿವೇಶಿತಬಳಭೂ
ರಮಣನಿರೆ ನಿಯಮದಾ ನಿಯ
ಮಮೆ ತನಗಟ್ಟಿದ ನಿಯಾಮಮಾಗಿರೆ ಬೇಗಂ ೧೫

ವಿಜಯಾರ್ಧಕುಮಾರಂ ನಿಜ
ಭುಜಗರ್ವಂ ಪರ್ವತಂಬೊಲಿದುರ್ವಗೆ ಚಕ್ರಿ
ಧ್ವಜೀನಿ ಗಜರದಕುಳಿಶ
ವ್ರಜಹತಿಯಿಂದಪ್ಪುದೆನುತೆ ಕಂಡಂ ಭಯದಿಂ ೧೬

ಮ || ಕ್ರಮಕಂಜಕ್ಕಭಿಷೇಕಮಂ ಮಕುಟಮಾಣಿಕ್ಯಾಂಶುವಿಂ ಮಾಡಿ ವಿ
ಕ್ರಮಚಕ್ರಪ್ರಭುವಿಂಗಿದೆನ್ನಯ ನಿಯೋಗಂ ಪೂಜ್ಯರಾಜ್ಯಾಭಿಷೇಕ
ಮನಾಂ ಮಾೞ್ಪೆನೆನುತ್ತೆ ಬಿನ್ನವಿಸಿ ತೀರ್ಥಾಚ್ಛಾಂಬುವಿಂ ತೂರ್ಯಘೋ
ಷಮದೆತ್ತಂ ಪೊಱಪೊಣ್ಮೆ ಪೂಣ್ದು ವಿಜಯಾರ್ಧಂ ಪ್ರೇಮದಿಂ ಮಾಡಿದಂ ೧೭

ವ || ಅಂತು ರಾಜ್ಯಾಭಿಷೇಕಮನನೇಕ ಮಂಗಳಾನಕನಿನದಮೆಸೆವಿನಮೆಸಗಿ ರಾಜ್ಯಚಿಹ್ನ ಮಿವನವಧಾರಿಸುವುದೆಂದು

ಕಂ || ಧವಳಾತಪವಾರಣಮಂ
ಪ್ರವಿಮಳ ಚಮರಜಮನ ಸಮಸಿಂಹಾಸನಮಂ
ಭುವನಪ್ರಭುವಿಂಗಿತ್ತಂ
ಕುವಳಯವೈಭವಮನೊಳಗುಮಾೞ್ಪುವನೊಲವಿಂ ೧೮

ವ || ಅಂತು ತನ್ನಂ ಸಮಾರಾಧಿಸಿದ ವಿಜಯಾರ್ಧಕುಮಾರನನಗಣ್ಯಕಾರುಣ್ಯಾ ಮೃತದಿಂ ತಣಿಪಿ ಬೀೞ್ಕೊಳಿಸಿ ಕಳಿಪಿ ವನನಿಧಿಯಂ ತೋರಣದ್ವಾರದಿಂ ಪೊಱಮಟ್ಟು ತಮಿಸ್ರಗುಹಾದ್ವಾರಕ್ಕನತಿದೂರದೊಳ್‌ನಿಜಸ್ಕಂಧಾವಾರಮಂ ಬಿಡಿಸೆಂದು ಬೆಸಸಿದಾಗಳ್‌

ಉ || ವಾರಿಜಸೌರಭಾಕಳಿತಚಂದ್ರಮಣಿದ್ರವ ಶೈತ್ಯಯುಕ್ತ ಕ
ರ್ಪೂರ ಲವಂಗ ಚಂದನಲತಾ ಪರಿವರ್ತನಮಂದಚಾರವಿ
ಸ್ತಾರಸಮೀರದೊಳ್‌ಬಿಡಿಸಿದಂ ಪಡೆವಳ್ಳನುದಾರರಾಜಕಂ
ಠೀರವನಾಜ್ಞೆಯಿಂ ಕಟಕಮಂ ವಿಜಯಾರ್ಧನಗೋಪಕಂಠದೊಳ್‌೧೯

ಕಂ || ನೆಗೞ್ದ ಚತುರ್ದಶರತ್ನದೆ
ಸೊಗಯಿಪೆ ನಾನನ್ಯವಾಹಿನಿಗೆ ತನ್ನವೊಲಾ
ನಗಿದು ತೆಱಪೀಯೆನೆನುತುಂ
ನಗುವುದು ವಿಜಯಾರ್ಧಕಟಕಮಂ ವಿಭುಕಟಕಂ ೨೦

ವ || ಅಂತು ವಿಜಯಾರ್ಧಕಟಕಕ್ಕೆ ಮಾಱಂಡಲಮಾಗೆ ಕಟಕಮಂ ಬಿಡಿಸಿ

ಕಂ || ವಿಜಯಾರ್ಧಮನುತ್ತರಿಪೊಡೆ
ವಿಜಯಮಂ ನೆಱೆಯಕ್ಕುಮಲ್ಲದಿರ್ದೊಡೆ ಪೆಱತೇಂ
ವಿಜಯಾರ್ಧಮಕ್ಕುಮೆನುತದ
ನಜೇಯನುತ್ತರಿಪಾಪಾಯಮಂ ಬಗೆವಿನೆಗಂ ೨೧

ಕೃತಮಾಳಂ ಮೌಳಿಸ್ವೀ
ಕೃತಮಾಲಂ ಚಕ್ರಿ ಪುಣ್ಯಮಹಿಮಾಹೂತಂ
ವಿತತ ತಮಿಸ್ರಗುಹಾಸಂ
ತತ ರಕ್ಷಕನಿರದೆ ಬಂದು ಕಂಡಂ ನೃಪನಂ ೨೨

ಪ್ರವಿಮಳಗುಣದೆ ಚತುರ್ದಶ
ಭುವನಮೆ ಬೆಲೆಯೆನಿಪುವಂ ಮಹಾದರದಿಂ ಭೂ
ಪ್ರವರಂಗೆ ಚತುರ್ದಶ ರ
ತ್ನವಿಭೂಷಣಗಣಮನೞ್ತಿಯಿಂ ಸುರನಿತ್ತಂ ೨೩

ವಿದಿತಂ ಕೃತಮಾಲಂ ನಿಜ
ಹೃದಯೆಮನೊಪ್ಪಿಸುವೆ ತೆಱದೆ ವಿಜಯಾರ್ಧಗಿರೀಂ
ದ್ರದ ಗುಹೆಯ ಪಡಿಗಳಂ ತೆಱೆ
ವುದೀ ತೆಱದಿನೆಂದು ಬಿನ್ನವಿಪ್ಪುದುಮಾಗಳ್‌೨೪

ಮ.ಸ್ರ || ಕೃತಮಾಲಂ ಬಿನ್ನಪಂಗೆಯ್ದುದನತಿಮುದದಿಂ ಚಿತ್ತದೊಳ್‌ತಾಳ್ದಿ ತನ್ನಿಂ
ಕೃತಮಾಳಂಬಂ ಸ್ವಕೀಯಾಪ್ರತಿಮವಿಪುಳಕಾರುಣ್ಯಮೆಂದಾ ಸುರಂಗೂ
ರ್ಜಿತಮಂತ್ರಂ ದಾನಸಂತಾನಮನೊದವಿಸಿ ತನ್ನಂತೆ ಸನ್ಮಾನವಿಭ್ರಾ
ಜಿತಮಂ ಕಲ್ಪಾವನೀಜಂ ಕುಡದೆನಿಸಿದನಾ ದೇವನಿಂ ರಾಜರಾಜಂ ೨೫

ವ || ಅಂತಾತನಂ ಸಂತಸಬಂಡಿಸಿ ಬೀೞ್ಕೊಳಿಸಿ ಕಳಿಪಿ ದಕ್ಷಿಣದಿಶಾವಳಿಯಂ
ವಳಯದಂತೆ ದಕ್ಷಿಣಭುಜದಂಡಕ್ಕಳವಟ್ಟುದೆಂದತಿಪ್ರಮೋದಕ್ಕೆ ಪಕ್ಕಾಗಿರೆ

ಮ || ಧರಣೀಶಂ ವಿಜಯಾರ್ಧಮಂ ಪುಗದ ಮುನ್ನಂ ಕಾಣೆ ಕೆಯ್ಕೊಳ್ವನಾ
ದರದಿಂ ಕಾಣ್ಬುದೆ ಮಂತ್ರಮೆಂಬ ಬಗೆಯಿಂದಂ ರಕ್ತೆ ರಕ್ತೋದೆಯೆಂ
ಬೆರಡುಂ ಸಿಂಧುವ ಮಧ್ಯದೇಶದ ಮಹೀಶರ್‌ಕೋಶಯೋಷಾಮದ
ದ್ವಿರದಾಶ್ವಂಗಳನಿತ್ತು ಬಂದೆಱಗಿದರ್‌ಚಕ್ರೇಶಪಾದಾಬ್ಜದೊಳ್‌೨೬

ಕಂ || ಅವಿಲಂಘ್ಯಂ ಚಕ್ರಾಧಿಪ
ಭವದಾಜ್ಞೆಯದರ್ಕೆ ಬೆಸಸು ವಿಜಯಾರ್ಧಮನಂ
ತವಯವದೆ ದಾಂಟಿ ಕಂಟಿಸು
ವವನೀಪಾಳರನೆ ಲೀಲೆಯಿಂದೆಱಗಿಸಮೇ ೨೭

ವ || ಎಂದು ಬೆಸನಂ ಬೇಡಿದವರಂ ಬೀಡಿಂಗೆ ಕಳಿಪಿ ಬೆೞಿಯಂ ಬಳಾಧ್ಯಕ್ಷನಂ
ಬೞಿಯಟ್ಟಿ ಬರಿಸಿ ಪೇೞ್ದುದುಮಂ ನೆಱೆಯಱಿಪಿ

ಕಂ || ಗಿರಿಗುಹೆಯ ಪಡಿಗಳಂ ದಂ
ಡರತ್ನದಿಂ ತೆಱೆದು ಬೆಂಕೆಯಾಱುವಿನಂ ಚೆ
ಚ್ಚರಮಾಮ್ಲೇಚ್ಛಮಹೀಪಾ
ಳರ ತೇಜಮನಾಱಿಸೆಂದು ನಿಯಮಮನಿತ್ತಂ ೨೮

ನಿಯಮಿಸೆ ವರೂಥಿನೀಪತಿ
ಹಯರತ್ನಮನೇಱಿದಂಡರತ್ಮಮನಹಿತ
ಕ್ಷಯಕರಮಂ ಧರಿಯಿಸಿ ಕತಿ
ಪಯ ಹಯಬಳಪರಿವೃತಂ ಜಯಶ್ರೀನಿಳಯಂ ೨೯

ತಳರ್ದು ನದೀವೇದಿಯನಂ
ತೊಳವೊಕ್ಕಗತತಟದ ವೇದಿಕೆಯನೆಯ್ದಿ ಸಮು
ಜ್ಜಳಸೋಪಾನದೆ ರಜತಾ
ಚಳಜಗತೀತಳಮಳಮನೇಱೆ ಭುಜಬಳಕಳಿತಂ ೩೦

ಪಡೆಯಂ ರಕ್ತಾನದಿಯೊ
ಳ್ಪುಡುಗದೆ ಸೋಪಾನಮಾರ್ಗದಿಂ ಮ್ಲೇಚ್ಛನೃಪರ್
ನಡನಡನಡುಗುವಿನಂ ಮು
ನ್ನಡೆಯಿಸಿ ಪೂರ್ವಾಭಿಮುಖದೆ ದೋರ್ವಳದೃಪ್ತಂ ೩೧

ವ || ಅಂತು ಮೂಡಣಮ್ಲೇಚ್ಛಖಂಡಕ್ಕೆ ದಂಡರತ್ನದಿಂದೊಗೆದ ಬೆಂಕೆ
ಸೋಂಕದಂತು ಪಡೆಯಂ ಮುನ್ನಮೆ ನಡೆಯಿಸಿ ಗುಹೋತ್ಸಂಗಮನುತ್ಸಾಹದಿಂದೊರ್ವನೆ
ಪರಾಕ್ರಮಸಿಂಹಂ ಪೊರ್ದಿ ತುರಂಗರತ್ನದ ಬೆಂಗೆ ಚಮೂಪತಿರತ್ನಂ ಬಂದು ಪೂರ್ವಾಭಿಮುಖ
ವಾಗಿ ಚಕ್ರವರ್ತಿ ಗೆಲ್ಗೆಂದು

ಕಂ || ಇಡೆ ವಿಜಯಾರ್ಧಾದ್ರಿಗುಹೆಯ
ಪಡಿಗಳನಾ ದಂಡರತ್ನದಿಂ ದಂಡೇಶಂ
ಬಿಡದೆಱಗುವೆ ಖೇಚರರೆರ್ದೆ
ಪಡಿದೆಱೆದವೊಲಾಗೆ ತೆರಱೆದುವಾಗಳೆ ಪಡಿಗಳ್ ೩೨

ಶ್ರೀವಜ್ರನಾಭಿತೇಜಃ
ಪಾವಕಮಾವರಿಸುವಂತೆ ರಿಪುಹೃದಯಮನೇ
ನಾವರಿಸಿತೊ ತದ್ಗಿರಿಯ ಗು
ಹಾವಿವರಮನ್ನಗ್ನಿದಂಡರತ್ನಪ್ರಭವಂ ೩೩

ತೊಡೆ ಕೆಯ್ ಬೈಸಿಕೆಯಳವಡೆ
ಮಡದಿನವುಂಕಿದೊಡೆ ಪನ್ನೆರಡುಯೋಜನಮಂ
ಗಡ ಲಂಘಿಸಿ ಹಯರತ್ನಂ
ಪಡೆದುದು ಪವನಂಜಯಾಖ್ಯೆಗನ್ವರ್ಥತೆಯಂ ೩೪

ಮನದನ್ನಮಾಗಿಯುಂ ಮನ
ಮನೆ ಮೀಱೆ ಜವಾತಿರೇಕದಿಂ ಪತಿಗೊಲವಂ
ಜನಿಯಿಸಿತು ತುರಗಮರ್ಥಿಗೆ
ನೆನೆದರ್ಥದಿನಧಿಕಮಿತ್ತ ದಾನಿಯ ತೆಱದಿಂ ೩೫

ಗಿರಿಗುಹೆಯ ಮುಖದಿನೊಗೆತ
ರ್ಪುರಿ ತಾಗದ ತೆಱದೆ ತುರಗರಥಿನೀಪತಿಯಂ
ಪರಿರಕ್ಷಿಪ ಯುಕ್ಷಕುಳಂ
ಹರಿಜವದೊಡನೊಂದಿದಂತೆ ಬೇಗದಿನಾಗಳ್‌೩೬

ಕೊಂಡೊಯ್ದಖಂಡಶೋಭಾ
ಮಂಡಿತದೊಳ್ ಮ್ಲೇಚ್ಛಖಂಡದೊಳ್‌ಬಿಟ್ಟಿರ್ದು
ದ್ದಂಡನಿಜಬಲಮನೆಯ್ದಿಸೆ
ದಂಡೇಶಂ ಕೂಡಿಕೊಂಡು ಸಂಗರಶೌಂಡಂ ೩೭

ವ || ಪ್ರದಕ್ಷಿಣಂಗೆಯ್ದಪೂರ್ವ ಶೋಭಾಕಳಿತಮಪ್ಪ ಪೂರ್ವಮ್ಲೇಚ್ಛಖಂಡಮನುಂಡಿಗೆ ಸಾಧ್ಯಂ ಮಾಡಿಯತ್ಯುಚ್ಛವಿಭವಮ್ಲೇಚ್ಛ ಮಹೀಶರನವರವರ ಸಾರವಸ್ತುವಾಹನಾದಿಗಳ್ವೆರಸು ಮುಂದಿಟ್ಟೊಡಗೊಂಡು ಮುನ್ನಿನಂತೆ ಸಮುನ್ನತ ತೋರಣದ್ವಾರದಿಂದೊಳಪೊಕ್ಕು ರಕ್ತಾನದೀನಂದನವನವೇದಿಕೆಯ ನಡುವಣಿಂ ಬಂದು ಮಣಿಮಯ ಸೋಪಾನಂಗಳಿಂ ಮನಂಗೊಳಿಸುವ ರಜತಾಚಳದ ತಟವೇದಿಕೆಯಂ ಕಳೆದು ಜಗತೀತಳಮನೇಱಿ ನೋೞ್ಪನ್ನೆಗಳಂ

ಕಂ || ಅತುಳ ಮಹಿಭೃದ್ಗುಹಾಂತಃ
ಪ್ರತಾಪಮುಪಶಾಂತಮಾಯ್ತು ರಥಿನೀಶಸಮೂ
ರ್ಜಿತದಂಡಹತಿಗೆ ಮಹಿಭೃ
ತ್ಪ್ರತಾಪಮೀ ತೆಱದೆ ಪೋಕುಮೆಂದಱಪುವವೋಲ್‌೩೮

ಉ || ಅಂತುಪಶಾಂತಮಾದ ಗುಹೆಯಂ ಪರಿಶೋಧಿಸಿದಂ ತನ್ನನೂನಸೈ
ನ್ಯಂ ತಡವಿಲ್ಲದಂತು ನಡೆವಂತಿರೆ ಮಾಡಿಸಿ ಕಾಪುವೇೞ್ದು ಸಾ
ಮಂತ ಸಮಗ್ರಮಂಡಳಿಕಮಂಡಳಿ ತನ್ನೊಡನೊಪ್ಪಿ ಬರ್ಪಿನಂ
ಕಾಂತಮನೆಯ್ದಿದಂ ಶಿಬಿರಮಂ ರಥಿನೀಪತಿ ಚಕ್ರವರ್ತಿಯಾ ೩೯

ಕಂ || ಓಲಗದೊಳ್‌ಕಂಡು ಮಹೀ
ಪಾಳಕನಂ ವಿನತಮಸ್ತಕಂ ಪತಿ ಕಾರು
ಣ್ಯಾಳೋಕನಸಂಭವಪುಳ
ಕಾಲಂಬಂ ಮ್ಲೇಚ್ಛರಾಜರಂ ಕಾಣಿಸಿದಂ ೪೦

ಶಾ || ಧೀರೋದಾತ್ತಚಮೂಪಮೇರುಮಥಿತಂ ಮ್ಲೇಚ್ಛಾವನೀಪಾಳಕ
ಕ್ಷೀರಾಂಭೋನಿಧಿಕೌಸ್ತುಭೋಜ್ವಳಮಣಿ ಶ್ರೀಕನ್ಯಕಾನೀಕಮಂ
ಕಾರುಣ್ಯಂಬಡೆವಂತು ಚಕ್ರಿಚರಣಾಂಭೋಜಕ್ಕೆ ಮಾಣಿಕ್ಯಕೋ
ಟೀರದ್ಯೋತಿಯಿನರ್ಘ್ಯಮೆತ್ತಿ ಮೊದಲೊಳ್‌ತಾನಿತ್ತನಾನಂದದಿಂ ೪೧

ಕಂ || ಸೇವಾನಭಿಜ್ಞರಂ ಮ್ಲೇ
ಚ್ಛಾವನಿಪರನುಚಿತಮಂತ್ರದಿಂ ಚಕ್ರಿಪದಾ
ಬ್ಜಾವನತರೆನಿಸಿ ಮೆಱೆದಂ
ಸೇವಾಚಾತುರ್ಯ್ಯಮಂ ಚಮೂಪತಿರತ್ನಂ ೪೨

ವ || ಅಂತವನಾಜ್ಞಾವಿಧೇಯರಂ ಮಾಡಿ ತದನಂತರಂ

ಕಂ || ಅವರವರ ದೇಶವಂಶವಿ
ಭವವಿಕ್ರಮನಾಚಿಹ್ನಮಂ ಚಕ್ರಿಗೆ ಬಿ
ನ್ನವಿಸಿ ಪಸಾಯಮನವರ್ಗು
ತ್ಸವಮಪ್ಪವೊಲೀಸಿ ಬೀೞ್ಕೊಳಿಸಿ ಭೂಭುಜರಂ ೪೩

ವ || ತಂತಮ್ಮ ನೆಲೆಗೆ ಪೋಪಂತು ಚಕ್ರವರ್ತಿಯಿಂ ನಿಯಮಮನೀಸಿ ಸಂತಸಂಬಡಿಸಿ ಕಳಿಪಿ ಬೞಿಯಂ ದಕ್ಷಿಣತ್ರಿಖಂಡಮಂಡಳವಿಜಯಯಾತ್ರೆಯಂ ಕಟಕಕ್ಕಱೆಪಲೆಂದು ವಿಜಯಪ್ರಯಾಣಭೇರಿಯಂ ಕ್ಷೋಣಿಪತಿಯನುಮತಿಯಂ ಪೊಯ್ಸಿದಾಗಳ್‌

ಮ. ಸ್ರ || ಪ್ರಳಯಪ್ರಕ್ಷೋಭಿತಾಂಭೋನಿಧಿ ಸಮುದಯಸಂಭೂತ ಗಂಭೀರನಾದಂ
ವಿಳಯಪ್ರಸ್ಥಾನವಿಸ್ತಾರಿತವಿಪುಳತರಾಂಭೋದ ಸಂಘಾತನಾದಂ
ಬಳೆದತ್ತೆಂಬಂದದಿಂದಂ ಕುಳಗಿರಿ ತಳರ್ವಂತುದ್ಧತಾಶಾಗಜೌಘಂ
ಪೆಳಱುತ್ತಿರ್ಪಂತು ಪೊಣ್ಮಿತ್ತಧಿಪತಿವಿಜಯೋತ್ಪಾದಿಭೇರೀನಿನಾದಂ ೪೪

ಕಂ || ನಡೆವ ಷಡಂಗಬಲಕ್ಕಿ
ಟ್ಟೆಡೆಯಾಶಾಭಿತ್ತಿಯೆನುತುಮೊಡೆವಂದದೆ ಧೀಂ
ಕಿಡುತೆಣ್ದೆಸೆಗರಿಭಯಮಂ
ಪಡೆದುದು ದಿಗ್ವಿಜಯಭೂರಿಭೇರೀರಾವಂ ೪೫

ಉ || ಪೂಜಿಸಿ ಚಕ್ರಮಂ ಶುಭಮುಹೂರ್ತದೊಳುತ್ಕಟದಾನವಾರಿಯಿಂ
ರಾಜಿಸುತಿರ್ಪುದಂ ವಿಜಯಪರ್ವತಮಂ ನಿಜತೇಜದಂತೆ ದಿ
ಗ್ರಾಜಿಯನಾವಗಂ ಬೆಳಗೆ ಮಂಗಳಭೂಷಣರತ್ನಕಾಂತಿಗಳ್‌
ರಾಜಮನೋಜನೇಱಿ ನಡೆದಂ ಜಯ ಜೀವರವಂ ನೆಗೞ್ವಿನಂ ೪೬

ವ || ಅಂತಗಣ್ಯಪುಣ್ಯಮೂರ್ತಿ ಯತಿವರ್ತಿಗಳಂ ನಿಜಪದಪದ್ಮಸಮೀಪವರ್ತಿಗಳಂ ಮಾಡಲೆಂದು ಚಕ್ರವರ್ತಿ ರಾಜನಿಳಯದಿಂ ತಳರ್ವಾಗಳ್‌

ಚಂ || ಕರಿಮಕರಂಗಳಿಂದೆ ಬಡವಾಮುಖಫೇನವಿತಾನದಿಂ ಭಯಂ
ಕರ ಭಟಹಸ್ತಶಸ್ತ್ರರುಚಿವೀಗಳಿಂ ರಥಭೈತ್ರದಿಂ ಚಮೂ
ವರ ದೃಢವಜ್ರವೇದಿಕೆಯಿನಾಶ್ರಿತಭೂಧರರತ್ನದಿಂದಳಂ
ಕರಿಸಿ ಮನಕ್ಕೆ ಸಂತಸಮನಿತ್ತುದು ಚಕ್ರಿಗೆ ಸೈನ್ಯಸಾಗರಂ ೪೭

ವ || ಆ ಸಮಯದೊಳ್‌

ಕಂ || ದಿಕ್ಕರಿಯನೇಱಿದಿಂದ್ರನ
ಪಕ್ಕದೊಳಿಭಪತಿಯನೇಱದಗ್ನಿಯವೋಲ್‌ತೇ
ಜಕ್ಕೆ ನೆಲೆಯಾಗಿ ಚಕ್ರಿಯ
ಪಕ್ಕದೊಳೆಸೆದಂ ಚಮೂಪನಿಭಮಸ್ತಕದೊಳ್‌೪೮

ವ || ಅಂತಪ್ರತಿಮಪ್ರತಿಪಕ್ಷಭೇದಿಪಕ್ಷ ಗಜಾಧಿರೂಢನಧಿರಾಜಂಗೆ ಕೆಯ್ಗಳಂ ಮುಗಿದಿಂತೆಂದಂ

ಶಾ || ಹೇಳೋನ್ಮೂಳಿತವೈರಿವರ್ಗವನದುರ್ಗಂ ಖೞ್ಗೆ ನಿರ್ಭಿನ್ನಶುಂ
ಡಾಳಂ ನಿರ್ದಳಿತಾದ್ರಿದುರ್ಗನಿವಹಂ ವಿಧ್ವಸ್ತವಾಜಿವ್ರಜಂ
ಲೀಲೋಲ್ಲಂಘಿತತೋಯದುರ್ಗನಿಕರಂ ನಿರ್ಭೇದಿಸ್ಯಂದನಂ
ಕಾಳೋಗ್ರಂ ವಿಳಸತ್ಪದಾತಿಯಿದು ದಲ್‌ಕರ್ಣಾಟಸೈನ್ಯಂ ನೃಪಾ ೪೯

ಚಂ || ಪ್ರಳಯಘನಪ್ರಭೀಷಣವಿಷಾಣವಿನಿರ್ಮಿತ ಚಾಪದಂಡಮಂ
ಡಳಿಶರವರ್ಷಮೇಘಸಮಯಂ ವರವೀರವಧೂಸುವರ್ಣಕುಂ
ಡಳಮಿದು ಮಂಡಳಾಗ್ರವರಿಶೋಭಿ ವರಾಟಪಕ್ಷರಕ್ಷಣಾ
ಕಳಿತತುರಂಗಮಂ ನೃಪ ವರಾಟಬಳಂ ವಿಹತಾನ್ಯದೋರ್ವಳಂ ೫೦

ಮ || ತುರಗವ್ಯೂಹಗಜಂ ಗಜವ್ರಜಮೃಗೇಂದ್ರಂ ಸ್ಯಂದನೇಭದ್ವಿಷ
ಚ್ಛರಭಂ ವೀರಪದಾತಿಯೂಥಶರಭೌಘೋದ್ದಂಡಭೇರುಂಡಮು
ದ್ಧುರಖೞ್ಗಂ ಧೃತಶೀರ್ಷಕಂ ವಿಧೃತ ನಾನಾಚರ್ಮವರ್ಮರಿ ನೃಪೇ
ಶ್ವರ ನೋಡಿಂತಿದು ಸೈನ್ಯಮನ್ಯಭಯಕೃನ್ಮುದ್ರಾವಿಳಂ ದ್ರಾವಿಳಂ ೫೧

ಮ. ಸ್ರ || ನುತಕಸ್ತೂರೀ ವಿಳಾಸೋಚಿತ ತಿಳಕಲಲಾಟಂ ನಿಶಾತಾಸಿಧುರಾ
ಹತ ವಿದ್ವಿಡ್ಮಾಂಸಂಸಂತರ್ಪಿತ ನಿಖಿಳನಿಶಾಟಂ ದೃಢಾಬದ್ಧಕೂರ್ಚಾ
ಯತಜೂಟಂ ವೀರಘಂಟಾರುತಿ ವಿದಳಿತ ವಿದ್ವಿಷ್ಪಚೇತಃಕವಾಟಂ
ಕ್ಷಿತಿಪಾಳೋತ್ತಂಸಸಂಶೋಭಿಪ ಬಳಮಿದು ಲಾಟಂ ದ್ವಿಷತ್ಕಾಳಕೂಟಂ ೫೨

ಪ್ರತಿಪಕ್ಷಕೋಣಿಪಾಳಪ್ರಕರ ಹೃದಯಶೂಲೋಪಮ ಸ್ಥೂಳ ಶಾತಾ
ಯತಕುಂತನ್ಯಸ್ತಹಸ್ತಂ ವಿಚಕಿಳ ವಿಳಸನ್ನೀಳಮೌಳಿ ಪ್ರಶಸ್ತಂ
ಚತುರಸ್ತ್ರೀತುಂಗಪೀನಸ್ತನ ಮಳಯರುಹಾ ಲಿಪ್ತಕಾಯಂ ಸ್ಕೀಯಂ
ಕೃತಭಾಸ್ವಚ್ಚಕ್ರಭೂಷಾರುಚಿಭರಿತ ದಿಶಾರಂಧ್ರಮೀ ಸೈನ್ಯಮಾಂಧ್ರಂ ೫೩

ವ || ಅಂತನೇಕ ದೇಶಾಧೀಶ ಪೃಥುರಥಿನೀಪ್ರತಾನಮಂ ಭೂಷಾವೇಷಸನ್ನಾಹವಾಹನಾದಿ ವಿಶೇಷದಿಂ ವಿಶೇಷಿಸಿಯಶೇಷವಸುಧಾವಲ್ಲಭಂಗೆ ಬೇಱೆವೇಱೆ ತೋಱುತ್ತುಂ

ಮ || ವನಭೂಜಂ ಪೃಥುಸೈನ್ಯಪಾದಹತಿಯಿಂ ನುರ್ಗಕ್ಕುಮೆಂದಿಂತುಪಾ
ಯನಮಂ ಮುನ್ನಮೆ ಚಕ್ರಿಗೞ್ಕಿ ವಿಜಯಾರ್ಧೋರ್ವಿಧರಂ ಸಾರವ
ಸ್ತುನಿಕಾಯಂಗಳನಟ್ಟಿದಂತೆ ಘನಸಾರೋದಾರ ಕಸ್ತೂರಿಕಾ
ವನಜಾಮೋದನಾದಮೋಲಗಿಸಿತಂದೆಯ್ತಂದು ಮಂದಾನಿಳಂ ೫೪

ವ || ಅಂತಲಂಪನೀವ ಕಂಪುಮಂ ತಣ್ಪುಮಂ ತೆರಳ್ಚಿ ಪಣ್ಣನೆ ಬಂದ ತಣ್ಣೆಲರ ತೀಟದಿಂ ನಿದಾಫದಾಹಕ್ಕಗಿದು ವಿಗತ ಕಂಚುಕಮಾಗಿರ್ದುದಂ ರೋಮಾಂಚಕಂಚುಕಿತ ಗಾತ್ರಮಂ ಮಾಡಿ ನಾಡೆಯುಂ ಪ್ರಮೋದಮಂ ಪಡೆದು ನಡೆದು ರಜತಾಚಳದ ಜಗತೀತಳಮನೇಱಿ

ಉ || ಸಾರಮಣಿಪರಸಾನುವಿಜಯಾರ್ದಮಹೀಧರಗೋಮಿನೀಮುಖಾ
ಕಾರಮನತ್ಯುದಾರಮನಮೇಯಜಯಪ್ರಮದಾಸಮಾಗಮ
ದ್ವಾರಮನುದ್ಘ ತೋರಣಮಣಿಪ್ರಕರದ್ಯುತಿಪೂರಮಂ ಗುಹಾ
ದ್ವಾರಮನೆಯ್ದಿದತ್ತು ಪಡೆ ಲೋಚನಚಾರುಸುಖಾವತಾರಮಂ ೫೫

ವ || ಅಂತು ಕಾಂತಮಾದ ಗುಹಾದ್ವಾರಮನೆಯ್ದೆವಂದು

ಕಂ || ಪಡಿ ತೆಱೆದಿರೆಯುಂ ಗುಹೆಯಂ
ಪಡೆ ಕೞ್ತಲೆಗಗಿದು ಪುಗದೆ ನಿಂದಿರೆ ಕಂಡಾ
ಗಡೆ ರಥಿನೀಪತಿ ತಮಮಂ
ಕಿಡಿಸುವುಪಾಯಮನೆ ಕುಡೆ ಪುರೋಹಿತರತ್ನಂ ೫೬

ಮಣಿಯಿಂದೆ ಸೂರ್ಯನಂ ಕಾ
ಕಿಣಿಯಿಂ ಚಂದ್ರಮನನಾ ಗಹೆಯ ಭಿತ್ತಿಯೋಳೀ
ಕ್ಷಣ ರುಚಿರಮೆನೆ ಬರೆದನಾ
ಕ್ಷಣದೊಳೆ ಕಣ್ಬಡೆದ ತೆಱದೆ ಪಡೆ ನಡೆವಿನೆಗೆಂ ೫೭

ವ || ಅಂತುಮಲ್ಲದೆ

ಕಂ || ರವಿಶಶಿಗಳ್‌ನಿಜತೇಜ
ಕ್ಕವಕಾಶಂ ಗುಡದ ಗುಹೆಯ ಕೞ್ತಲೆಯಂ ತೂ
ಳ್ದುವ ಭರದಿಂ ಮಣಿಕಾಕಿಣಿ
ಯ ವಶಕೆ ಸಂದಂತೆ ಬರೆಯೆ ತೂಳ್ದಿದರದಱೊಳ್‌೫೮

ಬರೆದ ಶಶಿರವಿಗಳಿಂ ಭಾ
ಸುರತೇಜಶ್ಚಕ್ರ ಚಕ್ರರತ್ನದ್ಯುತಿಯಿಂ
ಪರೆಯೆ ತಮಂ ರಕ್ತಾನದಿ
ಯೆರಡುಂ ತಡಿವಿಡಿದು ಬೀಡು ನಡೆದುದು ಪದೆಪಿಂ ೫೯

ವ || ಅಂತು ಚಮೂಪತಿಯ ನಿಯಮದಿಂ ಕೆಲವು ಪಯಣಂಗಳಂ ನಡೆದು ತದ್ಗುಹಾಮಧ್ಯದಿರ್ದೆಸೆಯ ಚೆಲ್ವನೊಳಕೊಂಡ ಕುಂಡಂಗಳಿಂ ಪುಟ್ಟಿ ಬಂದ ರಕ್ತಸಿಂಧುವಿನೊಳ್‌ಸಂಗತಂಗಳುಮುತ್ತರಂಗಳುಮಪ್ಪ ನಿಮಗ್ನೋನ್ಮಗ್ನಾಪಗೆಗಳ್‌ಪಗೆಗಳಂತೆ ಗಮನವಿಗ್ನಮಂ ಮಾಡಿಯಡ್ಡಂಬರೆ ಪಡೆ ನಡೆಯದೆ ನಿಲ್ವುದುಂ ಕಂಡು ದಂಡಾಧಿಪನವಱ ತಡಿಗಳೊಳೆ ಬೀಡಂ ಬಿಡಿಸಿ

ಕಂ || ಪ್ರವಿಪುಳವಾಹಿನಿ ಪುಣ್ಯ
ಪ್ರವಾಹದಂತೊಂದು ನೆಗೆಪುವುದು ಮೇಗಣ್ಗ
ೞ್ದುವುದು ತಳಕೊಂದು ಪಾಪ
ಪ್ರವಾಹದಂತುನ್ನಿಮಗ್ನೆ ಮಗ್ನೆ ವಿಚಿತ್ರಂ ೬೦