ವ || ಎಂದು ಚಕ್ರಧರಂಗಾ ನದಿಗಳ ವೈಷಮ್ಯಮನಗ್ರಾಮ್ಯಮಾಗೆ ಬಿನ್ನವಿಸೆ ಸರಿತ್ಸಮುತ್ತರಣೋಪಾಯದಲ್ಲಿ ಶಿಕ್ಷಕರತ್ನಮೆ ದಕ್ಷನೆಂದು ಬರಿಸಿ ವಸುಧೇಶಂ ಬೆಸಸೆ

ಕಂ || ಪದನಱಿದು ಪೇೞೆ ಪತಿಸೇ
ವ್ಯ ದಿವ್ಯಶಕ್ತಿಪ್ರಭಾವದಿಂದಂ ಪೆಂಪಿಂ
ಪುದಿದಿರ್ದ ಮಾನುಷಾರ
ಣ್ಯದ ತರುಗಳನಿರದೆ ತರಿಸಿ ತಕ್ಷಕರತ್ನಂ ೬೧

ಗಗನಮನಳ್ಳಿಱಿವಂತಿರೆ
ಮಿಗೆ ಬಳೆದ ಮಹೀರುಹಂಗಳಂ ನಡೆ ತತ್ಸಿಂ
ಧುಗಳೊಳ್‌ಪಾತಾಳಮನೆ
ಯ್ದಿಗಡ್ಡಱಿಪ ಮುದದಿಂದಮೆರಡಱ ಪವಣಂ ೬೨

ವ || ಅಂತಿಱುಂಬಿನಡವಿಯ ನಿಡಿಯ ಮರಂಗಳಿನಡವಿಯಂ ಪಡೆಗೆ ನಡೆಯಲಳವಡಿಕೆಯಪ್ಪಂತೊಡರಿಸೆ

ಕಂ || ಸೇತುವೊಲಳವಡೆಯಡವಿ ಮ
ಹೀತಳಪತಿ ವಿತತ ಕರಿತುರಂಗಮ ರಥ ಪಾ
ದಾತಿಬಳಂಬೆರಸು ಸಮೋ
ರ್ವಿತಳದೊಳ್‌ನಡೆದು ಪೋಪ ತೆಱದಿಂ ಪೋದಂ ೬೩

ವ || ಅಂತು ವಿಷಮಸರಿತ್ತುಗಳನಶ್ರಮದಿನುತ್ತರಿಸಿ ಕತಿಪಯಪರಯಾಣಂಗಳಂ ನಡೆದು

ಕಂ || ಪೋಗಿ ಜಳದೊಳಗೆ ಮುೞುಗಿ
ರ್ದಾಗಳೆ ಪೊಱಮಡುವ ಮಾೞ್ಕೆಯಿಂದೆ ಗುಹಾಂತ
ರ್ಭಾಗದೆ ಪೊಱಮಟ್ಟು ಮನೋ
ರಾಗಮನೆಯ್ದಿದುದು ಚಕ್ರವರ್ತಿಯ ಕಟಕಂ ೬೪

ಸಂತಮಸಗೃಹ ಗುಹಾಂತರ
ದಿಂ ತೊಲಗಿದ ಸೇನೆಯ ಪ್ರಸನ್ನೋಗ್ರತರ
ಸ್ವಾಂತನೃಪಾಳಕನೋಲಗ
ದಿಂ ತೊಲಗಿದ ಸೇವಕಂಬೊಲಾಂತುದು ಸುಖಮಂ ೬೫

ವ || ಅಂತು ಚಮೂಪಾಳಹೇಳೋತ್ಪಾಟಿತವಜ್ರಕವಾಟಮಹಾಗುಹಾದ್ವಾರದಿಂ ಪೊರಮಟ್ಟು ಪುಟ್ಟಿದ ಮನಃಪ್ರಸರದಿಂ ಪಸರಂಬಡೆದು ನಡೆವಾಗಳ್‌

ಕಂ || ಒಸರ್ವ ಶಶಿಕಾಂತಮಣಿಯಿಂ
ವಿಸರಮನಾಂತಮಳಕಮಳಪರಿಮಳಮಂ ಪೊ
ತ್ತೆಸಗುವ ಸಮೀರನಿಂದಾ
ಱೆಸಿದುದು ನೃಪವಿಪುಳಕಟಕಮಂ ಗಿರಿಕಟಕಂ ೬೬

ವ || ಅಂತು ತಣ್ಪುಮಂ ಕಂಪುಮಂ ತಳ್ಕಯ್ಸಿ ಮೆಲ್ಲನೆ ಬಂದಲೆವೆಲರಲಸಗಮನೆ ತನುಸೋಂಕಿಂ ಪುಳಕಾಂಕುರಮಂ ಪುಟ್ಟಿಸುವಂತು ಪುಳಕಾಂಕುರಮಂ ಪುಟ್ಟಿಸೆ ಮುಂಪುಟ್ಟಿದ ಪರಿತಾಪಂ ಪೋಗೆ ಪೋಗಿ ನವಪಲ್ಲವ ಸುಕುಮಾರಕೋರಕ ಸುರಭಿಕುಸುಮ ಸರಸಫಲ ತರುಷಂಡಮಂಡಿತಮಪ್ಪ ರಮ್ಯಪ್ರದೇಶದೊಳ್‌

ಮ || ಇದು ಪೂರ್ವಕ್ರಮಮೆನ್ನದಾವೆಡೆಯದಾರ್ಗಿಂಬಾದುದಾ ಮಾರ್ಗದಿಂ
ನದಿಯಿರ್ಮೆಯ್ಯುರು ವಜ್ರವೇದಿವಿಡಿದೆತ್ತತ್ತಂ ಬಿಡುತ್ತುಂ ಮನೋ
ಮುದದಿಂದಂ ಬರೆ ಸಾರಭೂರುಹವನಶ್ರೀ ಮಧ್ಯಮಮ್ಲೇಚ್ಛಖಂ
ಡದ ಮಧ್ಯಾವನಿಭಾಗದೊಳ್‌ಬಿಡಿಸಿದಂ ಬೀಡಂ ಚಮೂವಲ್ಲಭಂ ೬೭

ವ || ಅಂತು ನಾಡೆಯುಂ ಚೆಲ್ವುವಡೆಯ ಬೀಡಂ ಬಿಡಿಸಿ

ಕಂ || ಉರ್ವೀಪತಿ ಬೆಸಸುತ್ತಿರೆ
ಪೂರ್ವದಿಶಾಮ್ಲೇಚ್ಛಖಂಡಮಂ ದಂಡೇಶಂ
ದುರ್ವಾರಂ ಸಾಧಿಸಿದಂ
ಪೂರ್ವಕ್ರಮದಿಂದ ಖರ್ವದೋರ್ವಳ ಗರ್ವಂ ೬೮

ವ || ಅಂತಾ ಪೂರ್ವಮ್ಲೇಚ್ಛಖಂಡಾಧಿಪತಿಗಳಂ ದಂಡಾಧಿಪತಿ ಗಳಿತಗರ್ವರಂ ಮಾಡಿಯಪೂರ್ವೋಪಾಯನಂಬೆರಸು ಸಾರ್ವಭೌಮನಂ ಕಾಣಿಸಿ

ಕಂ || ಸಕಳನೃಪವಿತತಿ ನಾನಾ
ಮಕುಟೋಜ್ವಳಮಣಿಮರೀಚಿ ಸಂಚಯದಿಂಮೇ
ಚಕಿತಂ ಮಾಡಿದುದತಿಭಯ
ಚಕಿತಂ ಬಂದೆಱಗಿ ಚಕ್ರಚರಣಾಂಬುಜಮಂ ೬೯

ವ || ಅಂತಾ ಮ್ಲೇಚ್ಛರಾಜರಂ ರಾಜರಾಜನ ಪದಪಯೋಜಕ್ಕೆಱಗಿಸಿ ಮತ್ತಂ ಮಧ್ಯಮಮ್ಲೇಚ್ಛ ಖಂಡವರ್ತಿಗಳುಮಪ್ಪ ಚಿಲಾತಾವರ್ತರಂ ಚಮೂನಾಥಂ ನಿಜಪರಾಕ್ರಮ ದಿನಾಕ್ರಮಿಸಲೆಂದು ಚಕ್ರಾಧೀಶನಾದೇಶದಿಂ ವಿಜಯಪ್ರಯಾಣಭೇರಿಯಂ ಪೊಯ್ಸೆ

ಕಂ || ಶ್ರುತಿಯಂ ಭೇರೀರವಮ
ಶ್ರುತಪೂರ್ವಂ ತಾಗೆ ಜಾನಪದಜನಮನಿತುಂ
ಪ್ರತಿಹತಮಾದತ್ತಪ್ರತಿ
ಹತತೇಜಂ ಪತಿಯದೆಂತು ವಿಸ್ಮಿತಚಿತ್ತಂ ೭೦

ವ || ಗುಜಿಗುಜಿಗೊಳುತ್ತುಮೋರೋರ್ವರೊಳ್‌ನುಡಿಯುತ್ತುಂ ಕಿವಿಯುಂ ತಲೆಯುಮಾಡುತ್ತುಮಿರ್ಪುದುಮಾ ವಾರ್ತೆಯಂ ಚಿಲಾತಾವರ್ತರ್‌ಕರ್ಣಪರಂಪರೆಯಿಂ ಕೇಳ್ದು ಮದಾಂಧ ಸಿಂಧುರಕ್ಕೆ ಪಿಡಿಯಂ ತೋಱಿದಂತೆ ಕಡುಮುಳಿದು ಕಿಡಿಕಿಡಿವೋಗುತ್ತು ಮಿಂತೆಂದರ್‌

ಕಂ || ತಮದಿಂದೆ ನೋಡಿದರ ಕ
ಣ್ಣೆಮೆ ಸೀವುದು ಮದ್ಧರಿತ್ರಿಯಂ ಪೊಕ್ಕೊಡೆ ತೇ
ಜಮದಿರದೆ ಸುಡುಗುಮೆಂಬುದ
ನಮಾತ್ಯರಾ ಚಕ್ರಿಗಱಿದುಮಱಿಪರೊ ನಿರುತಂ ೭೧

ಅವರಱಿಪದೊಡಂ ಮದ್ಬಾ
ಣವಿತತಿಯಿನ್ನಱಿಪಿದಪ್ಪುದೆನುತುಂ ದರ್ಪ
ಪ್ರವರಚಿಲಾತಾವರ್ತರ್‌
ಬವರಕ್ಕುಯುಕ್ತರಾದರಪನಯಯುಕ್ತರ್‌೭೨

ವ || ಅದಂ ಕಂಡವರ ಮಂತ್ರಿಮಂಡಳಿಯೊಳೊರ್ವಂ ಮಾರ್ಕೊಂಡಿಂತೆಂದಂ

ಕಂ || ಬಲ್ಲಿದನೊಳೆಡಱವುದು ನಯ
ಮಲ್ಲದಿದಂ ಮೀಱಿ ಯುದ್ಧಮಂ ಮಾೞ್ಪೊಡೆತೆ
ಳ್ವಿಲ್ಲದೆ ಬಲಿವುದು ದುರ್ಗಮ
ನಲ್ಲಿರ್ದೊಡಜೇಯಮನ್ಯರಿಂ ನೃಪಸೈನ್ಯಂ ೭೩

ವ || ಎನೆ ಮತ್ತೊರ್ವನಿಂತೆಂದಂ

ಮ || ಒಡೆದಂ ವಜ್ರಕವಾಟಮಂ ಗುಹೆಯ ಸಿಂಧುಧ್ವಂದ್ವಮಂ ದಾಂಟಲಾ
ವೆಡೆಯಿಂ ಬಾರವೆನಿಪ್ಪುವಂ ನಿಮಿಷದಿಂದಂ ದಾಂಟಿದಂ ಬೆಟ್ಟದಿ
ಟ್ಟೆಡೆಯೊಳ್‌ಪುಟ್ಟಿದರಣ್ಯದೊಡ್ಡುರಿಯೆ ಸೇನಾಸಂಘಸಂಘಟ್ಟದಿಂ
ನಡೆತಂದಂ ನೃಪನೆಂದೊಡಿಂ ನಮಗೆ ದುರ್ಗಂ ಬಾಱಿಸಲ್‌ತೀರ್ಗುಮೇ ೭೪

ವ || ಮತ್ತಿತೆಂದಂ

ಉ || ಬೇಡಿತನೀಯದಾಕ್ರಮಿಸಿ ಚಕ್ರಧರಂಗಿದಿರಾಂಪರಾರ್‌ಜಳ
ಕ್ರೀಡೆಯೊಳೞ್ಕಿಪಂ ಜಳನಿಷಣ್ಣನೃಪಾಳಕಜಾಳಮಂ ವನ
ಕ್ರೀಡೆಯೊಳಂಜಿಪಂ ವನನಿಕುಂಜನಿವಾಸಮಹೀಶರಂ ಗಿರಿ
ಕ್ರೀಡೆಯೊಳೊಡ್ಡಿಪಂ ಗಿರವರಸ್ಥಿತರಾಜರನಾಜಿನಿಷ್ಠುರಂ ೭೫

ವ || ಅದುಕಾರಣದಿಂ

ಚಂ || ಗಿರಿಗಹನಾಂಬುದುರ್ಗಮಿರೆಯುಂ ಚತುರಂಗಬಲಂಗಳುಳ್ಳೊಡಂ
ನಿರವಧಿದೇವ ಖೇಚರಸಮಗ್ರಬಲಂ ಬರೆ ಕಾಯ್ಪಿನಿಂದೆ ನಿ
ತ್ತರಿಸವು ದಿವ್ಯಮಂತ್ರವಿನಿಯೋಗದಿನೀಗಳೆ ನಾಗರಾಜರಂ
ಬರಿಪುದು ದೇವ ದೈವಬಲಮಿಲ್ಲದೆ ಚಕ್ರಿಯನಾವನಾಂಪವಂ ೭೬

ಕಂ || ಎನೆ ಮನದೆಗೊಂಡು ನೆನೆದಂ
ದು ನಿಮಿಷದಿಂ ನಾಗರಾಜರೆೞ್ತರೆ ವಿನಯೋ
ಪನತ ನಿಜಮಕುಟಮಣಿಕಾಂ
ತಿ ನೀರದಿಂ ತೊಳೆದರುರಗಪತಿದಯುಗಮಂ ೭೭

ವ || ಅಂತು ವಿನಯವಿನಮಿತರಾದ ಚೆಲಾತಾವರ್ತರಂ ಪರಾರ್ಥತತ್ಪರರ್‌ಪರಮ ಕಾರುಣ್ಯದಿ ನಗಣ್ಯಪುಣ್ಯಭಾಗಿಗಳಾಗಿಮೆಂದು ಪರಸಿ ರೞಿಕಮಿಂತೆಂದರ್‌

ಕಂ || ಪೆಱತೇನೆಮಗೆಱಗಿದ ಶಿರ
ಮೆಱಗಿದೊಡಾವೆಱಗಿದವರೆವನ್ಯರ್ಗದಱಿಂ
ದೆಱದಿರಿಮಾವೆ ಬೆದಱಿಪೆ
ವೆಱಗಿಸಲೆಂದುಱದೆ ಮೇಲೆ ವಂದರನೀಗಳ್‌೭೮

ವ || ಎಂದು ಮನಂಬೊಯ್ದನಂತರಂ

ಕಂ || ಆಕಾಶದಲ್ಲಿ ವಿದ್ಯಾ
ಪ್ರಕಾರಮನುರಗನಾಯಕರ್‌ವಿರಚಿಸೆ ನಿ
ರ್ವ್ಯಾಕುಳತೆಯಿಂದೆ ಸೈನ್ಯಾ
ನೀಕಂಬೆರಸಿದಱೊಳಿರೆ ಚಿಲಾತಾವರ್ತರ್‌೭೯

ವ || ಅದೆಂತಿರ್ದುದೆಂದೊಡೆ

ಕಂ || ಪಡೆಗವಱ ಪೆಡೆದಣಿಯಿತೆನೆ
ಮಡುಗಟ್ಟಿದ ವಿಷಮವಿಷಮೆ ಜಳಖಾತಿಕೆ ಕಾ
ಯ್ಪುಡುಗದೆ ನಿಂದ ಫಣಿಗಳಿಂ
ಪಡೆದೊಡೆ ಪಡೆದತ್ತು ದುರ್ಗಮತ್ಯುಗ್ರತೆಯಂ ೮೦

ವ || ಅಂತು ಮರುನ್ಮಾರ್ಗದೊಳಮಾರ್ಗಮತಿದುಗಮಪ್ಪ ದುರ್ಗಮಂ ಕೆಯ್ಗೆಯ್ದು ಕಾದಲುದ್ಯೋಗಿಗಳಾಗಿರ್ದುದಂ ದಂಡಾಧಿಪಂ ಕಂಡು ಕಡುಮುಳಿದು

ಕಂ || ಸ್ವರ್ಗಕ್ಕೆ ಪೋಪೊಡಿಂತಿದು
ನಿರ್ಗಮಮೆಂಬಂತೆ ದುರ್ಗಮಂ ರಚಿಸಿರ್ಪರ್‌
ಸ್ವರ್ಗಮನೆ ಕುಡುವೆನಾನಹಿ
ತೆರ್ಗನುತುಂ ನಡೆದು ಮುತ್ತಿದಂ ರಥಿನೀಶಂ ೮೧

ವ || ಅಂತು ಪುರಹಂ ತ್ರಿಪುರಮಂ ಮುತುವಂತೆ ಸೇನಾಗಣಪತಿ ಮುತ್ತುವುದುಂ

ಮ || ಸಿಡಿಲಂ ಜೇವೊಡೆ ಕಾರ್ಮುಗಿಲ್ಗಳನುದಂಚತ್ಕಾರ್ಮುಕಂ ಮಿಂಚನು
ಗ್ಗಡಮಪ್ಪಸ್ತ್ರಮರೀಚಿ ಪೋಲೆ ನವಿಲಂ ನೃತ್ಯಕ್ಕಬಂಧವ್ರಜಂ
ಕಡುಪಿಂದಂ ಪ್ರಳಯಾಭ್ರದಂತಿರೆ ಚಿಲಾತಾವರ್ತರರ್ಕಾಂಶುಓಲ್‌
ಕಿಡುವನ್ನಂ ನೃಪಸೈನ್ಯಮಾರ್ದು ಶರವರ್ಷವ್ರಾತಮಂ ಬೀಱೆದರ್‌೮೨

ವ || ಅದಲ್ಲದೆಯಂ

ಕಂ || ಸಿಡಿಲುಂ ಮಿಂಚುಂ ಮೊೞಗುಂ
ಕಡುಗಾಳಿಯುಮಿಂದ್ರಚಾಪಮುಂ ಭಯಮಂ ತಾ
ನೆಡೆವಱಿಯದೀಗುಮೆನೆ ಮೞೆ
ಯೆಡೆವಱಿಯದೆ ಕಱಿದು ಭಯಮನೀವುದು ಪಿರಿದೇ ೮೩

ವ || ಅಂತು ಸೇನೆ ನಾಡೆಯುಂ ಮೊಗಸೇಡುಗೊಳ್ವಂತೆ ಕೊಳ್ವ ಮೞೆಯುಮಂ ಪೊಡೆವ ಸಿಡಿಲುಮಂ ದಂಡಾಧಿಪಂ ಕಂಡು

ಮ || ಒಡೆವೆಂ ಭೂಧರದುರ್ಗಮಂ ಕುಡಿವೆನಂಭೋದುರ್ಗಮಂ ಬೇಗದಿಂ
ಸುಡುವೆಂ ಕಾನನದುರ್ಗಮಂ ಸಲೆ ಚಿಲಾತಾವರ್ತರಂ ಲಾಂತಮಂ
ಪಿಡಿದರ್ಪಂತಿರೆ ಮಾೞ್ಪೆನಾಂ ಮುಳಿಯೆ ದುರ್ಗಂ ದುರ್ಗಮಾಗಿರ್ಕುಮ
ಪ್ಪೊಡೆ ಭೂಪರ್‌ಗಡ ಭೂಪರೆಂದೆನಿಪೊಡಿನ್ನೆಲ್ಲಿತ್ತೊ ಮತ್ಪೌರುಷಂ ೮೪

ವ || ಎಂದು ಮುಳಿಸಂ ಮೊಗಕ್ಕೆ ತಂದು

ಮ || ಅಡಿಯೊಳ್‌ಪಾಸಿದ ಚರ್ಮರತ್ನಮದಱಿಂ ಮೇಲಾತಪತ್ರಂ ಬೆಡಂ
ಗಿಡಿದೊಪ್ಪುತ್ತಿರೆ ಧಾತ್ರಿಯಂ ಗಗನಮಂ ಗಂಟಿಕ್ಕಿದಂತಲ್ಲಿ ಪೆ
ರ್ವಡೆಯಿರ್ದತ್ತು ಸಿಡಿಲ್ಗೆ ಕೊಳ್ವ ಮೞೆಗಾ ಮಿಂಚಿಂಗೆ ತಾನೞ್ಕದಾರ್‌
ಪಡೆವರ್‌ಬಲ್ಲಿದರಪ್ಪರಲ್ಲಿ ಭಯಮಂ ತಮ್ಮೊಂದು ಸಾಮರ್ಥ್ಯದಿಂ ೮೫

ಕಂ || ವಿದ್ಯಾನಿರ್ಮಿತಮಂ ಪರ
ವಿದ್ಯಾಚ್ಛೇದನ ಸಮಗ್ರಸಾಮರ್ಥ್ಯಯುತಂ
ಚೋದ್ಯಮರಿಗೊದವುವಿನಮನ
ವದ್ಯಯಶಂ ದುರ್ಗದುಗ್ರತೆಯನಳಱಿಸಿದಂ ೮೬

ಚಂ || ಜಳಧರಮದ್ರಿಯಂ ಮುಸುಱಿ ಗರ್ಜಿಸುತುಂ ಸುರಿವಂಬುವರ್ಷದಿಂ
ಚಳಿಯಿಸಲಾಱದಗ್ಗಳಿಪ ಲಜ್ಜೆಗೆ ಬೆಳ್ಗೊಗಮಪ್ಪ ಮಾೞ್ಕೆಯಿಂ
ದಳವಿಗಳುಂಬಮಪ್ಪ ಶರವರ್ಷದೆ ಧೀರಚಮೂಪರತ್ನಮಂ
ಚಳಿಯಿಸಲಾಱದೇಱೆ ಮೊಗದೊಳ್‌ಮಿಗೆ ಬೆಳ್ಪೊಳಸೋರ್ದರುದ್ಧತರ್‌೮೭

ವ || ಅಂತು ಚಿಲಾತಾವರ್ತರುಂ ನಾಗರಾಜರುಂ ನಿರ್ಬಂಧದಿಂ ಸರ್ವಶಕ್ತಿಯಿಂ
ಮಾೞ್ಪ ವಿಗುರ್ವಣೆಗಳಂ ಗಣಿಯಿಸದೆ ಪ್ರತಿವಿಧಾನಮಂತ್ರವಿಧಾನಮಂ ಬೆರೆಸಿ ಸಾಮಾನ್ಯಾಸ್ತ್ರದಿಂ ಕಾದುತ್ತುಂ ಮಂತ್ರಾಸ್ತ್ರದಿಂದಲ್ಲದೆ ಗೆಲಲ್‌ಬಾರದೆಂದು ಬರಮನವಱಿಂ ಮಾೞ್ಪುದಂ ಕಂಡು

ಕಂ || ರವಿರಥದಂತಾಕಾಶದೊ
ಳವಯವದಿಂ ಪರಿವ ರಥಮುಮಂ ಗಿಡುಗಮುಮಂ
ಪ್ರವಿಪುಳ ಮಂತ್ರಯತಂ ಸ್ಥಪ
ತಿ ವಿರಚಿಸಿದನೊದವೆ ಬಲ್ಪು ರಥಿನೀಪತಿಯೊಳ್‌೮೮

ವ || ಅಂತಪ್ರತಿಮಪ್ರತಾಪಕ್ಕಗಣ್ಯಪುಣ್ಯಂ ಸಹಾಯಮಪ್ಪಂತು ಚಮೂಪತಿಗೆ ತಕ್ಷಕರತ್ನಂ ನೆರಮಾಗೆ

ಮ || ಉರಗಾಸ್ತ್ರಂ ಗರುಡಾಸ್ತ್ರದಿಂ ಪೃಥುಪಯೋದಾಸ್ತ್ರಂ ಸಮೀರಾಸ್ತ್ರದಿಂ
ಕರಿಶಸ್ತ್ರಂ ನಖರಾಯುಧಾಸ್ತ್ರದೆ ತಮೋಸ್ತ್ರಂ ತೀವ್ರದೀಪ್ತ್ಯಸ್ತ್ರದಿಂ
ಗಿರಿಶಸ್ತ್ರಂ ಕುಳಿಶಾಸ್ತ್ರದಿಂ ಜಳಧಿಶಸ್ತ್ರಂ ಬಾಡಗೋಗ್ರಾಸ್ತ್ರದಿಂ
ಪಿರಿದುಂ ಬೆಂಗುಡೆ ನಾಗರಾಜರನೆ ಬೆಂಗೊಂಡಂ ಚಮೂವಲ್ಲಭಂ ೮೯

ಕಂ || ಕುಲದೈವದ ಬಲಮೆನಸುಂ
ನೆಲಸಿರೆಯುಂ ಮೊಘೆಗೆ ಚಂದ್ರಬಲಮುಳ್ಳೊಡಮೇಂ
ಸಿಲೆಗಾನದವೋಲಾನರೆ
ಕಲಹದೊಳಪಕಠಿನಬಲ ಚಿಲಾತಾವರ್ತರ್‌

ವ || ಅಂತು ಸೇಂದ್ರಾಯ ತಕ್ಷಕಾಯಯೆಂಬಂತೆ ತಮಗೆ ಶರಣ್ಯರಪ್ಪುರಗ ರಾಜರುಮಂ ತಮ್ಮುಮನೊರ್ಮೊದಲೆ ಕರ್ಮುಕನಿರ್ಮುಕ್ತನಿಶಿತಶಿಳೀಮುಖಂಗಳಿಂ ಪರಾಙ್ಮುಖರಂ ಮಾಡೆ ಹತಪ್ರತಿಭರಾಗಿ ನಾಗರಾಜರ್‌ಪೋಗೆ ವಿಗತಪ್ರಾಣತ್ರಾಣರಾಗಿ ಭಯಕ್ಕೆ ಪಕ್ಕಾಗಿ

ಕಂ || ಮಾಡುವ ಸಾಹಸಮಂ ಮಿಗೆ
ಮಾಡಿ ಬೞಿಕ್ಕಂಬು ತಪ್ಪೆಯಭಿವಾದಯೆನಿ
ಪ್ಪೀ ಡೊಂಬಿನವರ್‌ಚಕ್ರಿಗೆ
ಬೇಡಿತನಿತ್ತೆಱಗಿದರ್‌ಚಿಲಾತಾವರ್ತರ್‌೯೧

ವ || ಅಂತುದ್ವೃತ್ತರಪ್ಪ ಚಿಲಾತಾವರ್ತರಂ ತೊೞ್ತುವೇಷಕ್ಕೆ ಪಕ್ಕುಮಾಡಿದ ಪೃತನಾವಲ್ಲಭಂಗೆ ಪೃಥ್ವೀವಲ್ಲಭನಂಗಚಿತ್ತಮನಿತ್ತು ರಕ್ತಾಖ್ಯಾನದೀತೀರಂ ಬಿಡಿದು ಬೀಡಂ ನಡಯಿಸೆಂದು ನಿಯಮಿಸಿದಂದದಿಂ ನಡೆಯಿಸಲೊಡನೆ

ಕಂ || ರಕ್ತಾಸರಿದಧಿದೇವತೆ
ದಿಕ್ತಟಸಂವ್ಯಾಪ್ತಶೋನದೀಪ್ತ್ಯನ್ವಿತಮಂ
ರಕ್ತತೆಯಂ ಚಕ್ರಿಗೆ ಸು
ವ್ಯಕ್ತಂ ಮಾೞ್ಪಂತನರ್ಘ್ಯವಸ್ತುವನಿತ್ತಳ್‌೯೨

ವ || ಅವನವನೀರಕ್ಷಕಂ ಸ್ವೀಕರಿಸಿ ದಕ್ಷಿಣದಿಶಾಭಾಗಕ್ಕೆ ಪೋಗೆವೋಗೆ ನಿಷಧ ಶೈಲದ ಲೀಲೆ ಕಣ್ಬೊಲನಾಗೆ

ಮ || ಬಡವಂ ಪೆತ್ತ ಧನಂಬೊಲಿರ್ದ ಮಣಿಯಂ ಬಯ್ತಿಟ್ಟು ರತ್ನಾಕರಂ
ಗಡದೆಂತೊಪ್ಪುಗುಮೆಂದು ಮೂದಲಿಪವೋಲ್‌ಪೂರ್ವಾಪರಾಂಭೋಧಿಯಂ
ಬಿಡೆ ಮುಟ್ಟಿರ್ದಖಿಳಾಸೆಗಂ ಕೆದಱಿ ಮಾಣಿಕ್ಯಾಂಶುವಿಂ ಶ್ರೀಯನೋ
ಳ್ಪೆಡೆವೆತ್ತಿರ್ದುದನೀಶನೆಯ್ದೆ ನಿಷಧಕ್ಷೋಣೀಧ್ರಮಂ ನೋಡಿದಂ ೯೩

ವ || ಅಂತು ಪಲತೆಱದ ಪೊಗೞ್ತೆಗೆ ವಿಷಯಮಾದ ನಿಷಧಗಿರಿಯಂ ವಿಷಯವಲ್ಲಭಂ ನಿರೀಕ್ಷಿಸುತ್ತುಮಿರೆ ಚಮೂವಲ್ಲಭಂ ಚಕ್ರಿಗಿಂತೆಂದಂ

ಮ || ಇದು ನಿಜ್ಜಾಜ್ಞೆಗೆ ಸೀಮೆಯೆಂದೆನಿಸಿಯುಂ ನಿಸ್ಸೀಮಶೋಭಾಗುಣಾ
ಸ್ಪದಮತ್ಯಾಯತಿವೆತ್ತುಮಿಂತಿದಣಕಂ ಕಾಲತ್ರಯಸ್ಥಾಯಿ ಶ
ಶ್ವದಿನದ್ಯೋತಿಸಮೇತಮಾಗಿಯುಮನಸ್ತದ್ಯೋತಿ ವಿದ್ಯಾಧರೀ
ವದನಾಂಭೋರುಸೌರಭಾಕರಸರೋಲಕ್ಷ್ಮೀಧರಂ ಕ್ಷ್ಮಾಧರಂ ೯೪

ವ || ಅಂತಾ ಮಹಾಮಹೀಧರ ಮಹಿಮೆಯಂ ಪೊಗೞ್ವಂತೆ ದಿಗ್ವಿಜಯಕ್ಕೆ ಸೀಮೆಯೆಂಬುದಂ ಮುಖಾಂತರದಿಂ ನಿರವಿಸೆ ಚಮೂನಾಥನ ಚಾತುರ್ಯಕ್ಕೆ ವಕ್ರೋಕ್ತಿವಿಶಾರದಂ ಮಹೀರಮಣಂ ಮನದೊಳೆ ಮೆಚ್ಚಿ

ಕಂ || ವೇದಿಕೆಯಂ ಜಳನಿಧಿ ಮ
ರ್ಯಾದೆಗೆ ದಾಂಟದವೊಲಾ ನಿಷಧನಗಮಂ ಧಾ
ತ್ರೀದಯಿತಂ ದಾಂಟನೆ ಮೊದ
ಲಾದಂತು ಪೊಸಂತಿಲೆಂದೆ ದಾಂಟನೆ ದಿಟದಿಂ ೯೫

ನಿಷಧಾದ್ರಿನಿತಂಬದೊಳೆ ನಿ
ಮಿಷಮಾತ್ರಂ ದರ್ಭಶಯನದೊಳ್‌ಮಂತ್ರಮುಖಂ
ವಿಷಯವಿಭು ನಿಯಮದಿಂದಿರೆ
ನಿಷಧಾಮರನಿರದೆ ಬಂದು ಕಂಡಂ ನೃಪನಂ ೯೬

ವ || ಅಂತು ಸೀತಾಸಿಂಧುವಿನ ನಿಷಧಮಹೀಧರದ ಮಧ್ಯವರ್ತಿಗಳಪ್ಪ ದೇವವಿದ್ಯಾಧರಧರಾಧಿನಾಥರನಾಜ್ಞಾಯತ್ತರಂ ಮಾಡಿ ಮಗುೞ್ದುತ್ತರದಿಶಾಭಾಗಕ್ಕೆ ಮಹಾಭಾಗನನುರಾಗದಿಂ ಬರ್ಪಾಗಳ್‌

ಮ || ಪ್ರಗುಣಶ್ರೀಮಣಿರಾಜಯೋಜನಶತೋತ್ಸೇಧಂ ಸುವರ್ಣಾತ್ಮಕಂ
ನೆಗೞ್ವಂತಾ ವೃಷಭಾಚಳೋನ್ನತಿಯವಿಚ್ಛಿನ್ನಾದ್ಯಚಕ್ರೀಪ್ರಶ
ಸ್ತಿಗಳಂ ತೆಕ್ಕನೆ ತೀವಿ ಕಾಲಮುಮನಾದ್ಯಚ್ಛಿನ್ನಮೆಂಬೀ ಜನೋ
ಕ್ತಿಗೆ ದೃಷ್ಟಾಂತಮದಾಗೆ ದೃಷ್ಟಿಗೊಲವಂ ತಂದತ್ತು ಧಾತ್ರೀಶನಾ ೯೭

ಚಂ || ಅಳವಿನೊಳಾಜ್ಞೆಯೊಳ್ನಯದೊ ಳನ್ವಯೊದೊಳ್ವಿಭವಪ್ರಭಾವದೊಳ್‌
ಬಲದೊಳತಿಪ್ರತಾಪದೊಳಗಾರೆಣೆಯೆಂದೊಗೆದಾ ಮದಜ್ವರಂ
ಗಳಿಯಿಸಿದತ್ತು ಯಂತ್ರಪಟದಂತೆಸೆಯುತ್ತಿರೆ ಪೂರ್ವಚಕ್ರಿಸಂ
ಕುಳ ವಿಜಯಪ್ರಶಸ್ತಿ ವೃಷಭಾದ್ರಿಯನೀಕ್ಷಿಸೆ ಚಕ್ರವರ್ತಿಯಾ ೯೮

ಕಂ || ಮೊದಲಗಲಂ ಯೋಜನಶತ
ಮುದಯಂ ಶತಯೋಜನಂ ತದರ್ಧಪ್ರಮಿತಂ
ತುದಿಯಗಲಮೆನೆ ವಿರಾಜಿಸು
ವುದು ವೃಷಭಾಮರಶುಭ್ರಾಶ್ರಯಂ ವೃಷಭನಗಂ ೯೯

ವ || ಅಂತು ಶೋಭಿಸುವ ವೃಷಭಭೂಧರಧಾಮ ವೃಷಭಾಮರನಿಂ ರಾಜವೃಷಭಂ ಪೂಜಿತನಾಗಿ ಬೞಿಕ್ಕಮದಱ ಸಮೀಪಕ್ಕೆ ಪೋಗಿ

ಕಂ || ವಿದಿತಾದಿನೃಪರ ಪೆಸರಿಂ
ಪುದಿದು ಸುವರ್ಣಾತ್ಮಕಂ ಸುವರ್ಣಾತ್ಮಾಕಮ
ಪ್ಪುದು ಯುಕ್ತಮೆನೆ ವಿರಾಜಿಸು
ವುದನೀಕ್ಷಿಸಿ ಬರೆಯಿಸಲ್ಕೆ ತನ್ನಯ ಪೆಸರಂ ೧೦೦

ತಡೆಯದುರುದಂಡರತ್ನದಿ
ನೆಡೆಯಿಲ್ಲದೊಡಾದ್ಯನೃಪರ ಪಸರ್ಗಳೊಳೊಂದಂ
ತೊಡೆಯಿಸಿ ತನ್ನಯ ನಾಮ
ಕ್ಕೆಡೆಮಾಡಿಸಿದಂ ನೃಪಾಳಚೂಡಾರತ್ನಂ ೧೦೧

ವ || ಅಂತು ತೆಱಪಂ ಮಾಡಿಸಿ ತದನಂತರಂ

ಮ || ಚಲಮಂ ಚಾಗಮನಾಜ್ಞೆಯಂ ವಿನಯಮಂ ಪೇೞ್ವಂದು ಷಟ್ಖಂಡಮಂ
ಡಳದೊಳ್‌ಮಾರ್ಮಲೆವನ್ನರಿಲ್ಲ ಬಡವರ್‌ತಾಂ ರಕ್ಷಿಪೆಲ್ಲಾಜನಂ
ಗಳೊಲ್ಲನ್ನೆಯದಿಂದೆ ವರ್ತಿಸುವರಿಲ್ಲಾರ್ಯರ್‌ಸಮರ್ಯಾದೆಯಂ
ತಳೆದೈಶ್ವರ್ಯಮನಪ್ಪುಕೆಯ್ಯದವರಿಲ್ಲೆಂದುಂ ನಿಜಕ್ಷೋಣಿಯೊಳ್‌೧೦೨

ಮ. ಸ್ರ || ಜಿನಪೂಜಾಳೋಕನಂ ಲೋಚನಕೆ ಜಿನಗುಣೋತ್ತುಂಗಸಂಪತ್ತಿ ಸಂಕೀ
ರ್ತನವಾಚಾನರ್ತನಂ ನಾಲಗೆಗೆ ಜಿನಮುಖೋಕ್ತಾಗಮಾರ್ಥವ್ರಜಂ ಭಾ
ವನೆಗೆಂದುಂ ಬಂದುವೆಂಬುನ್ನತಿಯೊಳೆ ನಿಜಸಮ್ಯಕ್ತ್ವಮಂ ಧಾತ್ರಿಗೆಲ್ಲಂ
ಜನತಾಸಂಸ್ತುತ್ಯವೃತ್ತಂ ಮೆಱೆವನುರುಕಳಾಚಾರುಚಾತುರ್ಯವರ್ಯಂ ೧೦೩

ಕಂ || ಅಱಿಯದ ಕಳೆಯಿಲ್ಲಱಿವರ
ನೆಱಗಿಸದ ಮೃದೂಕ್ತಿಯಿಲ್ಲ ದಶದಿಶೆಗಳೊಂ
ಮೆಱೆಯದ ಗುಣಮಿಲ್ಲುಚಿತಮ
ನಱೆಯದ ಕಳೆಯಿಲ್ಲಱಿವರ ೧೦೪

ಶಶಿವಿಶದಗುಣಂ ವಿಜಯ
ಪ್ರಶಸ್ತಿಯಂ ವಿಮಳಕಾಕಿಣೀರತ್ನದೆ ವಾ
ಕ್ಕುಶಳಂ ಬರೆಯಿಸಿದಂ ದಶ
ದಿಶೆಯೊಳ್‌ನಿಜಕೀರ್ತಿ ಬಳೆಯೆ ಗುಣಮಾಳಿಕೆಯಂ ೧೦೫

ಸ್ವಸ್ತಿ ಪ್ರಸ್ತುತಪುಣ್ಯಭಾಙ್ಮಕುಟಬದ್ಧಶ್ರೇಣಿಚೂಡಾಮಣಿ
ನ್ಯಸ್ತಶ್ರೀಪದ ವಜ್ರನಾಭಿ ವಿಪುಳಶ್ರೀವಜ್ರವೀರ್ಯಾತ್ಮಜಂ
ಧ್ವಸ್ತಾರಾತಿ ಸಮಗ್ರ ದಿಗ್ವಿಜಯಜಾತಖ್ಯಾತಿಯಂ ಚಕ್ರಿ ಜೈ
ತ್ರಸ್ತಂಭಂ ತನಗೆಂಬಿನಂ ಬರೆದೊಡೇನೊಪ್ಪಿತೊ ತದ್ಭೂಧರಂ ೧೦೬

ವ || ಅಂತಾ ವೃಷಭಾಚಳಮಂ ನಿಜಾಂಕಮಾಳೆಗನಿನಳಂಕರಿಸಿ ಚಕ್ರಿ ಪಶ್ಚಿಮ ದಿಗ್ವಿಭಾಗಕ್ಕೆ ನಡೆಯೆ

ಕಂ || ಭಾಸುರಮಣಿನಿರ್ಮಿತಸಿಂ
ಹಾಸನಮಂ ಸಾರ್ವಭೌಮಲಕ್ಷ್ಮೀಪದವಿ
ನ್ಯಾಸನಮನೊಸೆದು ರಕ್ತೋ
ದಾಸರಿದಧಿದೇವಿ ಭೂವರಂಗೊಲಿದಿತ್ತಳ್‌೧೦೭

ವ || ಅಂತನುತ್ತರಾಭಿಧಾನಸಿಂಹಾಸನಮನಾತ್ಮಾಯತ್ತಂ ಮಾಡಿ ತತ್ತರಂಗಿಣೀತೀರಂ ಬಿಡಿದುತ್ತರಾಭಿಮುಖನಾಗಿ ನಡೆತಂದಿಂಬಾದ ವಿಜಯಾರ್ಧನಗನಿತಂಬದೊಳ್‌ಬೀಡಂ ಬಿಡಿಸಿದಾಗಳ್‌

ಕಂ || ಸಾನುಮಸೃಣೇಂದುಮಣಿ ಯಿನಿ
ಸಾನುಮಲಸದೀವ ಸಲಿಲಶೀಕರಕಳಿತಂ
ದಾನಗಜಂಗಳ ಸೋಂಕಿಂ
ದಾ ನಗಜಂ ಸುರಭಿ ಪಡೆಯನಾಱಿಸಿತನಿಲಂ ೧೦೮

ವ || ಅಂತು ಗಮನಶ್ರಮಮನದಂಗಿಸಿ ಪಡೆಗಲಂಪಂ ಪಡೆವ ನಗೋಪ ಕಂಠದೊಳ್‌ರಾಜಕಂಠೀರವನುಪ್ಪಯಣಮಂ ಮಾಡಿರ್ಪುದುಮಾ ಪ್ರಸ್ತಾವದೊಳ್‌

ಕಂ || ಕರಮೞ್ಕಿ ನಾಟ್ಯಮಾಳಾ
ಮರನವನತನಾಗೆ ಚಕ್ರಿಪದನಖರಂಗಾಂ
ತರದೊಳ್‌ತತ್ಪ್ರತಿಬಿಂಬಂ
ವಿರಚಿಸಿದುದು ನಾಟ್ಯಮಾಳೆಯಂ ತತ್ಕ್ಷಣದೊಳ್‌೧೦೯

ವ || ಅಂತು ನಾಟ್ಯಾಮಾಳಾಮರನಿಂ ರಾಜರಾಜಂ ಪೂಜಿತನಾಗಿ ಬೞಿಯಂ ಬಳಮುಖ್ಯನಂ ಬರಿಸಿ ಗಿರಿಗುಹಾದ್ವಾರವಜ್ರಕವಾಟಮನುದ್ಘಾಟನಂ ಮಾಡೆಂದು ನಿಯಮಿಸೆ

ಕಂ || ಮುನ್ನಿನ ತೆಱದಿಂ ತೆಱೆದು ಮ
ಹೋನ್ನತವಿಜಯಾರ್ಧಗಿರಿಗುಹಾದ್ವಾರಮನು
ತ್ಪನ್ನ ವಿಜಯನಪರದಿಶಾ
ಸನ್ನಮ್ಲೇಚ್ಛಾಧಿರಾಜರಂ ಸಾಧಿಸಿದಂ ೧೧೦

ವ || ಅಂತವರ ದರ್ಪಮನದಿರ್ಪಿ ಕುಲಧನಕನ್ಯಾರತ್ನ ಕರಿ ತುರಗಾದಿ ಸಾರವಸ್ತುಗಳನೊತ್ತಿ ಕಪ್ಪಂಗೊಂಡು ಷಟ್ಖಂಡಮಂಡಳಾಧಿಪತಿಯ ಪದಪಯೋಜಮನಾ ಮ್ಲೇಚ್ಛರಾಜರಂ ಚಮೂಪತಿ ಬಂದು ಕಾಣಿಸೆ ಚಕ್ರವರ್ತಿಯವರಂ ಸಮುಚಿತ ಪ್ರತಿಪತ್ತಿಯನಿತ್ತು ಕೃತಾರ್ಥರಂ ಮಾಡಿ ಬೀೞ್ಕೊಳಿಸಿ ಕಳಿಪಿ ಕಾಲಮಂ ಕಳಿಪದೆ ಪೂರ್ವಕ್ರಮದಿಂ ಪರ್ವತ ಗುಹಾದ್ವಾರಮಂ ಪೊಕ್ಕು ರಕ್ತೋದಾನದಿಯ ತಡಿವಿಡಿದು ಪೋಗಿ ತತ್ಕ್ಷೋಣೀ ಧರದಕ್ಷೂಣಶೋಭಾ ನಿರೀಕ್ಷಣೀಯದತ್ತಚಿತ್ತಂ ತತ್ಕಟದೊಳ್‌ಕಟಕಮಂ ಬಿಡಿಸಿ ಸಾರ್ವಭೌಮನಿರೆ

ಕಂ || ನಿಶ್ಚಿತಮಂತ್ರಚಮೂಪತಿ
ಪಶ್ಚಿಮದಿಙ್ಲ್ಮಿಚ್ಛನೃಪತಿಗಳನೆಱಗಿಸಿದಂ
ನಿಶ್ಚಳಿತಧೈರ್ಯಮೇರು ವಿ
ಪಶ್ಚಿನ್ನುತಕೀರ್ತಿ ಚಕ್ರಿಚರಣಾಂಬುಜದೊಳ್‌೧೧೧

ಅಂತೆಱಗಿಸುವುದುಮವನೀ
ಕಾಂತಂ ವಿಕ್ರಾಂತಭೂಮಿ ಕೃತದಿಗ್ವಿಜಯಂ
ಭ್ರಾಂತೇಂ ಕೃತಕೃತ್ಯಂ ಮಿಗೆ
ಸಂತಸಮಂ ತಳೆದನಂತರಂಗದೊಳಾಗಳ್‌೧೧೨

ವ || ಅಂತು ಸ್ವಸಾಧ್ಯಂ ಪ್ರಸಾದ್ಯಾಶ್ರಿತತೋಷೀ ದೋಷಾಭಾವಾತ್ತೆಂಬಂತೆ ಕತಿಪಯ ಸಂವತ್ಸರಂಗಳಿಂ ಸಿದ್ಧದಿಗ್ವಿಜಯನಾಗಿ ಮನೋರಾಗಕ್ಕೆ ನೆಲೆಯಾಗಿ ನಿಜಪ್ರಚಾರ ಪ್ರಸಾದದಿಂ ಪ್ರಮೋದನಾ ಮ್ಲೇಚ್ಛರಾಜರೊಳೊದವಿಸಿ ತದನಂತರಂ ಜಗತೀಪ್ರಭು ಶುಭಮಹೂರ್ತದೊಳ್‌

ಮ || ಧ್ವಜಿನೀಮುಖ್ಯಕುಮಾರ ಮಂಡಳಿಕ ಮಂತ್ರಿ ಮ್ಲೇಚ್ಛರಾಜಾಂಗನಾ
ವ್ರಜ ಸಾಮಂತ ಖಗಾಮರಾಟವಿಕಪಲ್ಲೀಪಾಳಧಾನುಷ್ಕ ಸಾ
ಮಜ ಪಾದಾತಿ ರಥಾಶ್ವವಿಶ್ವಗುಣಬದ್ಧಾಂತಃಪುರಚ್ಛತ್ರಿಕಾ
ಧ್ವಜಚಂಚಚ್ಚಮರೀಜಶಂಖಪಟಹಪ್ರಸ್ಫಾರಭೇರೀರವಂ ೧೧೩

ವ || ಅಂತೆಸೆಯೆ

ಉ || ದಿಕ್ಕರಿಕುಂಭರಂಗದೊಳೆ ನರ್ತಿಸೆ ಕೀರ್ತಿ ಜಯಾನಕಸ್ವನಂ
ಮಿಕ್ಕಿರೆ ವಜರನಾಭಿ ಕೃತದಿಗ್ವಿಜಯಂ ನವಯೌವನಾಂಗನಾ
ದೃಕ್ಕುಮುದಂ ಮುಖೇಂದುಗಲರ್ದೊಪ್ಪೆ ನಿಜಾನ್ವಯರಾಜಧಾನಿಯಂ
ಪೊಕ್ಕನನೇಕ ಸಾರಮಣಿತೋರಣ ರಾಜಿತ ರಾಜವೀಥಿಯಂ ೧೧೪

ವ || ಅಂತು ವಿಶಿಷ್ಟಾಷ್ಟಶೋಭೆಗಳಿಂ ಶೋಭಿಸುವನಶ್ವರಾಶ್ವಪುರಮಂ ಪೊಕ್ಕು ಪುರಾಂಗನಾ ಜನಂಗಳಪಾಂಗಸಂತತಿಯೊಡನೆ ಸೂಸುವ ಲಾಜಾವರ್ಷಮುಮಂ ಪೆರ್ವೆಂಡಿರಾಶೀರ್ವಾದದೊಳ್‌ಬೆರಸಿ ಪರಸುವ ಕುಲವೃದ್ಧರ ನಲ್ವರಕೆಗಳುಮಂ ತಳೆಯುತ್ತುಂ ನಿಖಿಳಮಂಗಳನಿಳಯಮೆನಿಪ ರಾಜನಿಳಯಮಂ ರಾಜರಾಜಂ ಪೊಕ್ಕು ಸನ್ಮಾನದಾನ ಪುರಸ್ಸರಂ ಸಕಳಮಕುಟಬದ್ಧಾದಿ ರಾಜಲೋಕಮಂ ವಿಸರ್ಜಿಸಿ ನಿರ್ಜಿತಾರಾತಿ ಜಾತಂ ಜಾತಮನೋರಥಂ ಮನೋನುರಾಗಕ್ಕಾಗರಮಾಗಿರ್ಪಿನಂ ಮೌಹೂರ್ತಿಕ ಪರಿಕೀರ್ತಿತ ಪಟ್ಟಬಂಧ ಮಹೋತ್ಸವ ಮುಹೂರ್ತಮತ್ಯಾಸನ್ನಮಾಗೆ

ಕಂ || ಶ್ರೀಸುದತೀಪತಿಗಾತ್ಮನ
ದೀಸಲಿಲದೆ ಸೀತೆ ರಕ್ತೆ ರಕ್ತೋದೆಯೆನಿ
ಪ್ಪೀ ಸರಿದಧಿದೇವತೆಯರ್‌
ಮಾಸರಮಪ್ಪಂತು ಮಜ್ಜನಮನೊಡರಿಸಿದರ್‌೧೧೫

ವ || ಅನಂತರಂ

ಕಂ || ಕೃತಮಾಲನಾಟ್ಯಮಾಳಾ
ನ್ವಿತ ಮಾಗಧವರತನುಪ್ರಭಾಸಾಮರರುಂ
ವಿತತವಿಜಯಾರ್ಧನಿಷಧಾ
ಪ್ರತಿಮಾಮರರುಂ ಮನೋನುರಾಗದಿನಾಗಳ್‌೧೧೬

ಮ || ಕನಕಾಂಭೋಜರಜಃಪಿಶಂಗಿತ ಸರಸ್ತೋಯಂಗಳಿಂ ಖೇಚರೀ
ಜನಪೀನಸ್ತನಚಂದನೋಜ್ವಳ ನದೀನೀರಂಗಳಿಂ ಶ್ರೀಮುಖಾ
ಬ್ಜನಿಸರ್ಗೋದಿತಗಂಧಸಿಂಧುಜಳದಿಂ ಸಂಪೂರ್ಣಮಂ ಸ್ವರ್ಣಕುಂ
ಭನಿಕಾಯಂಗಳನಾಂತುಕೊಂಡು ಸುರಿದರ್‌ಧಾತ್ರೀಶಮೂರ್ಧಾಗ್ರದೊಳ್‌೧೧೭

ವ || ಅಲ್ಲಿಂ ಬೞಿಕ್ಕೆ

ಕಂ || ಮೂವತ್ತಿರ್ಚ್ಛಾಸಿರ್ವರ್‌
ಭೂವಿಶ್ರುತಮಕುಟಬದ್ಧರತ್ಯುತ್ಸವದಿಂ
ತೀವೆ ದಿಶಾವಳಯಮನು
ದ್ಭಾವಿತ ರಸಗೇಯ ತೂರ್ಯ ಶಂಕನಿನಾದಂ ೧೧೮

ಮ || ಸುಮನೋರತ್ನಸಮೇತ ಸತ್ಕುಲಮಹೀಭೃತ್ಸಂಗೆ ತನ್ನಿಚ್ಛೆ ಪ
ದ್ಮೆ ಮಹಾಪದ್ಮೆಯೆನಿಪ್ಪ ನಿರ್ಮಳಸರಸ್ತೋಯಂಗಳಿಂ ರತ್ನ ಹೇ
ಮಮಯೋದ್ಯತ್ಕಳಶಂಗಳಿಂ ತಳೆದು ತದ್ಭೂಮೀಧ್ರಮಂ ಪೋಲ್ತ ವಿ
ಕ್ರಮಿಚಕ್ರಪ್ರಭುಗೞ್ಕಿಂದೆಸಗಿದರ್‌ಸನ್ಮಾನದಿಂ ಸ್ನಾನಮಂ ೧೧೯

ವಿವಿಧಾತೋದ್ಯರವಂ ದಿಶಾವಳಯಮಂ ತಳ್ಕೈಸೆ ಮಾಕಂದ ಪ
ಲ್ಲವ ಸರ್ವೌಷಧಸಾರ ಸಾರಸಪಯಸ್ಸಂಪೂರ್ಣ ಸೌವರ್ಣ ಕುಂ
ಭವಿತಾನಂಗಳನೆತ್ತಿ ವಿಪ್ರ ಜಯ ಜೀವ ಸ್ವಸ್ತಿ ವರ್ಧಸ್ವನಂ
ದ ವಚಂ ವರ್ತಿಸೆ ಚಕ್ರವರ್ತಿಗಭಿಷೇಕಂ ಮಾಡೆ ಸಂಪ್ರೀತಿಯಿಂ ೧೨೦

ಲಲಿತಶ್ರೀಲಲನಾವಿಲೋಚನಮರೀಚಿ ಕ್ಷೀರವಾರಾಶಿ ನಿ
ರ್ಮಳವಸ್ತ್ರಪ್ರಕರಾಂಚಿತಂ ಮಕುಟಮುಕ್ತಾಹಾರಕೇಯೂರಕುಂ
ಡಳಮುದ್ರಾಕಟಿಸೂತ್ರಕಂಕಣಮಣಿಗ್ರೈವೇಯಕಾದ್ಯುದ್ಘಮಂ
ಗಳಭೂಷಾವಳಿಯಿಂ ಮನಂಗೊಳಿಸಿದಂ ಶೃಂಗಾರಲೀಲಾಕರಂ ೧೨೧

ವ || ಅಂತು ಸಕಳಸಾಮ್ರಾಜ್ಯಲಕ್ಷ್ಮೀವಶೀಕರಣ ಮಂಗಳಾಳಂಕರಣಂಗಳಿಂದಳಂ ಕರಿಸಿದನನಧಃಕೃತಸಿಂಹಪರಾಕ್ರಮನೆಂಬುದಂ ಸೂಚಿಸುವಂತೆ ಸಿಂಹಾಸನಾರೂಢನಂ ಮಾಡಿ

ಉ || ಮುಟ್ಟೆ ದಿಗಂತಮಂ ಸಕಳಮಂಗಳತೂರ್ಯ ಸುಗೇಯನಿಸ್ವನಂ
ಪುಟ್ಟೆ ಮಹೋತ್ಸವಂ ಪುರಗೃಹಂಗಳೊಳಂ ಗುಡಿರತ್ನತೋರಣಂ
ಕಟ್ಟೆ ಸಮಗ್ರ ರಾಜ್ಯಪದವೀಪರಿವೀತಲಲಾಟಪಟ್ಟದೊಳ್‌
ಪಟ್ಟಮನೊಪ್ಪೆ ಕಟ್ಟಿದರಶೇಷಶುಭಪ್ರವಿಲಗ್ನಲಗ್ನದೊಳ್‌೧೨೨

ವ || ಅಂತವನೀಪೂಜ್ಯಪ್ರಾಜ್ಯಸಾಮ್ರಾಜ್ಯಪಟ್ಟಮಂ ಕಟ್ಟಿ

ಮ || ಸ್ಥಿರಸಂಪತ್ಸುರಶೈಳಪಟ್ಟದೊಳಭೀಷ್ಟಾರ್ಥಪ್ರದಂ ಕಳ್ಪಭೂ
ಮಿರುಹಂ ವಿಶ್ರುತಸೂರ್ಯಮಂಡಳದೊಳುದ್ಯತ್ತೇಜಮಂಭೋಧಿಯೊಳ್‌
ವರಮರ್ಯಾದೆ ವಿರಾಜಿಸಿರ್ಪ ತೆಱದಿಂ ತತ್ಪ್ರಾಭವಂಬೆತ್ತು ನಿ
ನ್ನುರದೊಳ್‌ರಾಜಿಸುತಿರ್ಕೆ ರಾಜ್ಯವಿಭವಂ ಚಂದ್ರಾರ್ಕತಾರಂಬರಂ ೧೨೩

ವ || ಎಂದು ಪರಮಾನಂದದಿಂ ಪರಸಿ ಶೇಷೆಯನಶೆಷಮಕುಟಬದ್ಧರ್‌ತೀವೆ

ಮ. ಸ್ರ || ತಳೆದಂ ಸಾಮ್ರಾಜ್ಯಸಂಪತ್ತಿಯನಖಿಳಕಳಾವಲ್ಲಭಂ ವಲ್ಲಭಂ ಭೂ
ವಳಯಕ್ಕುರ್ವೀಶಚೂಡಾಮಣಿಚರಣನಖಂ ಸತ್ಯವಾಣೀಸಖಂ ಕೋ
ಮಳ ಕಾಂತಾಗೀತದತ್ತಶ್ರವಣನವನತಕ್ಲೇಶವಿದ್ರಾವಣಂ ಭೂ
ತಳವಂದಿಸ್ತೋತ್ರಪಾತ್ರಂ ವಿಬುಧಜನಮನಃಪದ್ಮಿನೀಪದ್ಮಿತ್ರಂ ೧೨೪

ಗದ್ಯ

ಇದು ವಿದಿತ ವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನ ವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥ ಪ್ರಣೀತಮಪ್ಪ ಪಾರ್ಶ್ವನಾಥ ಪುರಾಣದೊಳ್‌ವಜ್ರನಾಭಿನಾಮಾಭಿರಾಮಚಕ್ರವರ್ತಿ ದಿಗ್ವಿಜಯ ವರ್ಣನಂ ಏಕಾದಶಾಶ್ವಾಸಂ