ಕಂ || ಶ್ರೀ ಸಾರ್ವಭೌಮಪದಲ
ಕ್ಷ್ಮೀಸಂಗತವಕ್ಷನಮಳಚರಿತಂ ವಿತತಾ
ಜ್ಞಾಸಫಳೀಕೃತವಿಭವಂ
ಭಾಸುರಯಶನೆಸೆದನಿಳೆಗೆ ಕವಿಕುಳತಿಳಕಂ ೧

ವ || ಮತ್ತಮಾ ಮಹೀವಲ್ಲಭಂ ಮೂವತ್ತಿರ್ಚ್ಛಾಸಿರವಿಷಯಂಗಳಿನೆೞ್ಪತ್ತೆರೞ್ಸಾ ಸಿರ ನಗರಂಗಳಿಂ ತೊಂಬತ್ತಾಱುಕೋಟಿ ಗ್ರಾಮಂಗಳಿಂ ತೊಂಬತ್ತೈಸಾಸಿರ ದ್ರೋಣಾಮುಖಂಗಳಿಂ ನಾಲ್ವತ್ತೆಣ್ಛಾಸಿರ ಪಟ್ಟಣಂಗಳಿಂ ಪದಿನಾಱುಸಾಸಿರಖೇಡಂಗಳಿನಯ್ವತ್ತಾಱು ಸಾಸಿರಾನ್ತರ್ದ್ವೀಪಂಗಳಿಂ ಪದಿನಾಱುಸಾಸಿರ ಸಂವಾಹಂಗಳಿನಱುಸಾಸಿರ ಕುಕ್ಷಿ ನಿವಾಸಂಗಳಿನೆಣ್ಬತ್ತೆರಡುಸಾಸಿರ ದುರ್ಗಾಟವಿಗಳಿನನೇಕಕೋಟಿಪ್ರಮಾಣಸ್ಥಳಿಗಳಿಂ ಶತಸಹಸ್ರ ಕೋಟಿಖೇಡಂಗಳಿಂ ನಾಲ್ಕುಸಾಸಿರಖರ್ವಡಂಗಳಿಂ ನಾಲ್ಕುಸಾಸಿರಮಡಂಬಂಗಳಿಂ ಮೂಱುಕೋಟಿ ಗೋಮಂಡಳಂಗಳಿಂ ಮನಂಗೊಳಿಸುವ ವಿಷಯ ಭಾಮಿನೀಪ್ರೇಮ ಭೂಮಿಯಪ್ಪುದಱಿಂ ಸಾರ್ವಭೌಮನುಂ ಕಾಮರೂಪಿಯುಂ ಕಾಮಚಾರಿಯುಮಪ್ಪ ವಿಜಯಾರ್ಧಮೆಂಬ ಹಸ್ತಿರತ್ನಮುಂ ಪ್ರಶಸ್ತಮಪ್ಪೆಣ್ಬತ್ತುನಾಲ್ಕುಲಕ್ಷಭದ್ರಗಜಂಗಳುಂ ಪವನಂಜಯಮೆಂಬಶ್ವರತ್ನಮುಂ ವಿಶ್ವಾವನೀವಿಶ್ರುತಮಪ್ಪ ಪದಿನೆಂಟುಕೋಟಿ ಜಾತ್ಯಶ್ವಂಗಳುಮಜಿತಂಜಯಮೆಂಬ ರಥಸನಾಥಮಾಗಿ ಮನೋರಥಮಂ ತೀರ್ಚುವೆಣ್ಬತ್ತು ನಾಲ್ಕುಲಕ್ಷರಥಂಗಳುಂ ಮೂವತ್ತಿರ್ಚ್ಛಾಸಿರ ಮಕುಟಬದ್ಧರುಂ ಪದಿನೆಣ್ಛಾಸಿರ ಮ್ಲೇಚ್ಛರಾಜರು ಮೆಣ್ಬತ್ತುನಾಲ್ಕುಕೋಟಿ ವೀರಭಟರ್ಕಳುಂ ನಿಮಿರ್ಕೆವಡೆದ ನಾಲ್ವತ್ತೆಂಟು ಕೋಟಿ ಪತಾಕೆಗಳುಂ ಪನ್ನೆರಡುಯೋಜನಂಬರಂ ಕೇಳಲೆ ಬರ್ಪ ಗಂಭೀರನಾದಮನಾಳ್ದಾನಂದಂಗಳೆಂಬ ಪನ್ನೆರಡುಂ ಭೇರಿಗಳುಂ ವಿಜಯಘೋಷಂಗಳೆಂಬ ಪನ್ನೆರಡುಂ ಪಟಹಂಗಳುಂ ಗಂಭೀರಾವರ್ತ ಮೆಂಬಿರ್ಪತ್ತುನಾಲ್ಕು ಶಂಖಂಗಳುಂ ತನ್ನುನ್ನತಿಯನತಿಶಯಿಸೆ ಮಹತ್ವಮನಪ್ಪುಕೆಯ್ದು ವಾಹಿನೀಪತಿಯಪ್ಪುದಱೆಂ ಬಳಜಳನಿಧಿಯುಂ ಶ್ರೀಭವನದೊಳು ದ್ಭವಿಸಿದ ಮಣಿಚ್ಛತ್ರಕಾಕಿಣೀ ಚರ್ಮರತ್ನಕ್ಕಮಾಯುಧಶಾಲೆಯೊಳ್‌ಸಂಭವಿಸಿದ ಚಕ್ರಾಸಿ ದಂಡರತ್ನಕ್ಕಂ ವಿಜಯಾರ್ಧನಗದೊಳೊಗೆದ ಗಜಾಶ್ವಸ್ತ್ರೀರತ್ನಕ್ಕಮಶವಪುರದೊಳ್‌ಪುಟ್ಟಿದ ಪುರೋಹಿತ ಸ್ಥಪತಿ ಗೃಹಪತಿ ಚಮೂಪತಿರತ್ನಕ್ಕಮಾಕರನಾದುದಱೆಂ ಗಂಭೀರಗುಣರತ್ನಾಕರ ನುಮೆನಿಸಿ ಕ್ಷಿತಿಸಾಗರಮೆಂಬ ವಜ್ರಪ್ರಾಕಾರದೊಳಂ ಸರ್ವತೋಭದ್ರಮೆಂಬ ಗೋಪುರದೊಳಂ ರಾಜಿಸುವ ವೈಜಂತಿಯೆಂಬ ಮೂಲಪ್ರಾಸಾದಮಂ ಬಳಸಿದುತ್ತುಂಗ ಸಿಂಹಾಸನಪ್ರಶಸ್ತಿಕಮೆಂಬ ಸಭಾಸದನಮುಂವರ್ಧಮಾನಮೆಂಬೀಕ್ಷಣಸುಖವರ್ಧಮಾನ ಪ್ರೇಕ್ಷಾನಿಧಾನಮುಂ ಮಹಾಘರ್ಮಾಂತಮೆಂಬ ತಿಕಾಂತಧಾರಾಗೃಹಮುಂ ಗೃಹಕೂಟಮೆಂಬ ಹರ್ಷಕರವರ್ಷಾಗಾರಮುಂ ಗಿರಿಕೂಟಮೆಂಬ ದಿಗವಳೋಕನಪ್ರಾಸಾದಮುಂ ಸಿಂಹವಿಧೃತ ಸಿಂಹವಾಹಿನೀನಾಮ ಶಯ್ಯಾಳಂಕೃತ ಪುಷ್ಕಳಾವರ್ತಿಯೆಂಬ ಶಯನಾಶ್ರಯಮುಂ ಸಿಂಹಾಟಕಮೆಂಬ ಕುಂತಕ್ಕಂಲೋಹವಾಹಿನಿಯೆಂಬ ಸುರಿಗೆಗಂ ವಜ್ರಕಾಂತ ಮೆಂಬ ಬಿಲ್ಗಂ ಅಮೋಘಮೆಂಬ ಶರಕ್ಕಂ ವಜ್ರತುಂಡಮೆಂಬ ಶಕ್ತಿಗಮಭೇದ್ಯಮೆಂಬ ಕವಚಕ್ಕಂ ಸೌನಂದಕಮೆಂಬ ಖೞ್ಗರತ್ನಕ್ಕಂ ಭೂತಮುಖಮೆಂಬ ಖೇಟಕಕ್ಕಂ ಮನೋವೇಗಮೆಂಬ ಕಣೆಯಂ ಮೊದಲಾದ ಪಲತೆಱದಾಯುಧಕ್ಕಂ ನೆಲೆಯಾಧಾಯುಧ ನಿಕೇತನಮುಂ ಜೀಮೂತಮೆಂಬ ಸಜ್ಜನನುತಮಜ್ಜನ ಮಂದಿರಮುಂ ದೇವರಮ್ಯಮೆಂಬ ಪಟಹರ್ಮ್ಯಮುಂ ಕುಬೇರಕಾಂತಮೆಂಬ ಕೋಶನಿವೇಶಮುಂ ವಸುಧಾಗಾರಮೆಂಬ ಕೋಷ್ಠಾಗಾರಮುಂ ದ್ವಾತ್ರಿಂಶನ್ನಾಟ್ಯಶಾಲೆಗಳಿಂ ಲೀಲೆವಡೆದ ನಂದ್ಯಾವರ್ತಮೆಂಬ ಶಿಬಿರಶರಣಮುಂ ಪಲತೆಱದ ಪಱೆಗಳುಮಂ ಷಟ್ಕರ್ಮಸಾಧಕ ಸಾರವಸ್ತುಗಳುಮಂ ವಿವಿಧಾಶ್ರಯಾಸನಶಯ್ಯಾ ವಿಶೇಷಂಗಳುಮಂ ಶಾಲ್ಯಾದಿ ನ್ಯಾನಾಧಾನ್ಯಂಗಳುಮಂ ಸುವರ್ಣಮಂ ರತ್ನಂಗಳುಮಂ ಕುಡುವ ಕಾಲ ಮಹಾಕಾಲ ನೈಸರ್ಪ ಪಾಂಡುಕ ಪದ್ಮ ಪಿಂಗಳ ಮಾಣವಕ ಶಂಖ ಸರ್ವರತ್ನಂಗಳೆಂಬ ನವನಿಧಿಗಳುಂ ವಿಷಮೋಚಿಕೆಗಳೆಂಬ ಪಾವುಗೆಗಳುಂ, ವೀರಾಂಗದಮೆಂಬ ಮಣಿಕಂಕಣಗಳುಂ ವಿದ್ಯುತ್ಪ್ರಭಮೆಂಬ ಮಣಿಕುಂಡಳಂಗಳುಮವತಂಸಿಕೆಯೆಂಬ ನವರತ್ನಹಾರಮುಂ ಚಿಂತಾಮಣಿಯೆಂಬುತ್ತಂ ಸಮುಂಯಕ್ಷಕರವಿಧೂಯಮಾನಾನುಪಮಾಭಿಧಾನ ದ್ವಾತ್ರಿಂಶಚ್ಚಮರರುಹಮುಮನತ್ತ ರಾಭಿಧಾನೋತ್ತುಂಗಸಿಂಹಾಸನಮುಂ ಸೂರ್ಯಪ್ರಭಮೆಂಬ ಧವಳಾಪತ್ರಮುಂ ಸ್ಥಾವರ ಜಂಗಮಕೃತ್ರಿಮ ವಿಷಪರಿಹರಣಪರಿಣತರಪ್ಪ ಮೂನೂಱಱುವತ್ತು ಮಾನಸ ಶರೀರವೈದ್ಯರಿಂ ಸೂಪಶಾಸ್ತ್ರಪ್ರವೀಣರಪ್ಪನಿಬರೆ ಬಾಣಸಿಗರಿಂ ಸುಪರೀಕ್ಷಿತಮುಂ ಸುಪ್ರಯತ್ನನಿಷ್ಪನ್ನಮುಮಪ್ಪ ಪರಮಕಲ್ಯಾಣಮೆಂಬನ್ನಮುಮಮೃತಗರ್ಭಮೆಂಬ ಭಕ್ಷ್ಯಂಗಳುಮಮೃತಕಲ್ಪಮೆಂಬಾಸ್ವಾದ್ಯ ಮುಮಪ್ಪಮೃತಪಾನಮೆಂಬಪಾನಮುಂ ತನ್ನ ಭೋಗಕ್ಕನುಕೂಲಮಾಗೆ ಮೂವತ್ತಿರ್ಚ್ಛಾ ಸಿರಮಕುಟಬದ್ಧತನೂಭವೆಯರುಮನಿಬರೆ ನಿರಂತರ ಶೋಭಾಕ್ರಾಂತಪ್ರತ್ಯಂತ ರಾಜ ತನೂಭವೆಯರುಂ ದ್ವಾತ್ರಿಂಶತ್ಸಹಸ್ರಾವರೋಧರಮಣಿಯರುಮಂತು ಷಣ್ಣವತಿಸಹಸ್ರ ಮೆನಿಸಿದಂತಃ ಪುರಕಾಂತೆಯರ್ಗೆಲ್ಲಮಗಣ್ಯಲಾವಣ್ಯಸೌಭಾಗ್ಯ ಭಾಗ್ಯಾದಿ ಲೀಲೆಗಳಿಂ ಮೇಲೆನಿಸುವ ಸಕಳಕಳಾವಿದ್ಯಾಧರಿ ವಿದ್ಯಾಧರಾಧಿಪಕುಮಾರಿ ಸುಭದ್ರೆಯೆಂಬ ಸ್ತ್ರೀರತ್ನಮುಂ ತನಗೆ ಮನೋರಥ ಜನ್ಮಭೂಮಿಯಾಗೆ

ಕಂ || ಅನುಪಮಪುರನಿಧಿಶಯ್ಯಾ
ಸನನರ್ತನ ಭೋಜ್ಯರತ್ನ ಸೈನ್ಯ ಸಭಾವಾ
ಹನ ನಾಮಭೇದದಿಂ ವ
ಜ್ರನಾಭಿ ವಿಭುಗೆಸೆದುವೀ ದಶಾಂಗಂ ಭೋಗಂ ೨

ಎತ್ತಿದೊಡುೞದ ನೃಪಾಳರ
ಸತ್ತಿಗೆಯವರಾತಪಾರ್ತಿಯನೆ ಕಳೆಗುಂ ಭೂ
ಪೋತ್ತಮ ಸೂರ್ಯಪ್ರಭನೊ
ಲ್ದೆತ್ತೆ ಬಳಾತಪದ ಬಾಧೆಯುಮನಳಱಸುಗುಂ ೩

ವ || ಚರ್ಮರತ್ನಮುಮದೊರ್ಮೆಯುಂ ಬಳಕ್ಕೆಳಸುವ ಭೂತಳೋಪಸರ್ಗಮಂ ನಿಸರ್ಗಸಾಮರ್ಥ್ಯದಿಂ ನಿವಾರಿಸುತ್ತುಮೆಸೆಯುತ್ತಿರೆ

ಕಂ || ಭೂಕಂಟಕನೃಪಜಯ ಕಾಂ
ತಾಕರ್ಷಣಯಂತ್ರಮಧಿಪಲಕ್ಷ್ಮೀಲಲನಾ
ಳೋಕನ ಮಣಿದರ್ಪಣಮೆನಿ
ಪಾಕೃತಿಯಿಂದೊಪ್ಪುತಿರೆ ಸುದರ್ಶನಚಕ್ರಂ ೪

ಮ || ಭುವನೇಶಂ ನಿಷಧಾಮನೀಧರದಿನಾ ಸೀತೋದೆ ಪರ್ಯಂತಮೊ
ಪ್ಪುವ ಷಟ್ಖಂಡಮಹೀತಳಂ ವಿಪುಳತೇಜಕ್ಕೞ್ಕೆ ವಿದ್ಯಾಧರರ್‌
ದಿವಿಜರ್‌ಮಾಗಧಮುಖ್ಯರೋಲಗಿಸೆ ಮೂಲೋಕಂಗಳೊಳ್‌ಕೀರ್ತಿಯಾ
ಜ್ಞೆವೊಲೊಪ್ಪುತ್ತಿರೆ ವಜ್ರನಾಭಿ ಮೆಱೆದಂ ಶ್ರೀಸಾರ್ವಭೌಮತ್ವದಿಂ ೫

ಅನುಕೂಲಂ ವನಿತಾಜನಂ ವಿನಯಸಂಪನ್ನಂ ಸುತಶ್ರೇಣಿ ಭ
ಕ್ತಿನಿಯುಕ್ತಂ ಪರಿವಾರಮಪ್ರತಿಮಿತಾಜ್ಞಾಧೀನರಾಜನ್ಯಕಂ
ಸುನಯೋದ್ಯೋಗನಿಯೋಗಿವರ್ಗಮನುರಾಗಶ್ರೀಗಡರ್ಪಾದ ಸ
ಜ್ಜನವಿದ್ವಜ್ಜನಪೂಜ್ಯವೈಭವನದೇಂ ಸೌಖ್ಯಕ್ಕೆ ಪಕ್ಕಾದನೋ ೬

ವ || ಅಂತನೇಕ ಸಹಸ್ರವರ್ಷಂಗಳ್‌ಸುಖಾಮೃತವರ್ಷಂಗಳಾಗಿ ಪೋಗುತ್ತಮಿರೆ ಮತ್ತೊಂದು ದೆವಸಂ ಸಿಂಹಕಟೀತಟಂ ಸಿಂಹಾಸನ ಶ್ರೀಕೇಕರಾಳೋಕನ ಕಾಂತಿಸಂತತಿ ನಿತಂಬಬಿಂಬಮಂ ಬಳಸಿದಂತೆಸೆಯೆ ಸಾಂದ್ರಚಂದ್ರಿಕೆಯ ಚೆಲ್ವಿಂಗನುಕೂಲಮಾದ ದುಕೂಲ ಮನುಟ್ಟು ಮಳಯಜವಲ್ಲಭಂ ವಿಳಾಸಿನೀದರಹಾಸದಂತೆ ನಯನಮನೋಹಾರಿಯುಂ ಸೌರಭವಿಸ್ತಾರಿಯುಮಪ್ಪ ಮಳಯಜಮಂ ಕೋಮಳತನುವಿನೊಳಮರೆ ತಿಮಿರ್ದು ಹದಂಬೆತ್ತ ಕತ್ತುರಿಯನೆ ಸರಿಗೆದೆಗೆದಂತೆಸೆವ ಕೇಶಪಾಶದ ಪರಿಮಳದಿನವಂ ಪೊರೆದಪನೆಂಬಂತೆ ಪರಿಮಳದುರುಳಿಯೆನಿಪಿರುವಂತಿಯ ಬಿರಿಮುಗುಳನಿಂಬಾಗೆ ತೋರದುಱುಂಬಿನೊಳ್‌ತುಱುಂಬಿ ಕುಂತಳಾಳಿಮಾಳಾಮೇಳನದಿಂ ಕುಸುಮ ಶರಶರಂಗಳಂತೆ ಕಾಂತೆಯರ ಮನಮನೀೞ್ಕುಳಿಗೊಳ್ವ ಚಂಚತ್ಪಂಚರತ್ನದ ತಲೆಸುತ್ತಂ ಸುತ್ತಿ ಮತ್ತಮಳಿಮಿಳಿತವಿಚಕಿಳಮುಕುಳದಿಂ ರತಿ ರಚಿಯಿಸಿದ ಕುಸುಮಚಾಪ ಚಕ್ರಧರನ ಕರಚಕ್ರದಂತೆ ಲೀಲೆವೆತ್ತ ನೀಲಮುತ್ತಿನೋಲೆಯಂ ಪಾಲೆಯೊಳಮರ್ಚಿ ಚಕ್ರಧರಂ ಪೀತಾಂಬರನೆಂಬ ತನ್ನ ಪೆಸರಂ ನನ್ನಿ ಮಾಡುವಂತೆ ಚೆನ್ನನಪ್ಪ ಸೊನ್ನೆಸಾರವಂಗಿಗೆಯಂ ತೊಟ್ಟು ನೇತ್ರವಿಚಿತ್ರಮೆನಿಪ ಚಿತ್ರಾವಳಿಯ ಪಾಂಗನಂಗನಾಪಾಂಗಾಂ ಗಜಗಜಮಂ ಕಟ್ಟುವಂತೆ ಕಟ್ಟಿ ವಿಜಯಶ್ರೀರಮಣೀಪೀಠದಂತಿರೆ ಕೇಯೂರಮಂ ಭೂರಿಭುಜದೊಳ್‌ತಳೆದು ಭಾಸುರರತ್ನವಳಯಮಂ ವಿಶೇಷಶೋಭಾಕರಕರಯುಗಳದೊಳಾಂತು ನಮೇರುಭೂರುಹಶಾಖಾವಳಿಗಳ್ಗುದಾರದಿಂ ವೀರಮುದ್ರೆಯನಿಕ್ಕುವಂತೆ ಕೋಮಳಾಂಗುಳಿಗಳೊಳ್‌ಮಣಿಮಯಾಂಗುಳೀಯಕಂಗಳಂ ಸಂಗಳಿಸಿ ರೋಹಣನಗ ನಿತಂಬಮೆಂಬಂತೆನಿಜನಿತಂಬಮೆಸೆಯೆ ಮಿಸುಪರತ್ನಘಟಿತ ಕಟಾರಮಂ ಕಟ್ಟಿ ಕೃಷ್ಣ ಹೃದಯಂ ತನಗಿರಲುಚಿತಮೆಂದು ತನ್ನ ಹೃದಯಕ್ಕವತರಿಸಿದ ಸಿರಿಯ ಸಹಜ ಸೌಹಾರ್ದದಿನನುಬಂಧಿಸಿ ಬಂದತಿಪ್ರಶಸ್ತಕೌಸ್ತುಭಮೆನಿಪನುಪಮನೂತ್ನ ರತ್ನ ಪದಕಮಂ ವಿಸ್ತೀರ್ಣ ವಕ್ಷಸ್ಸ್ಥಳಕ್ಕಲಂಕಾರಮಂ ಮಾಡಿ ಸಾರ್ವಭೌಮಶ್ರೀಧಾಮಲಲಾಟ ಲಲಿತೇಂದು ಮಂಡಳಮಂ ಗೆಡೆಗೊಂಡು ಚಿತ್ತಜನಂತೆ ವೃತ್ತಸ್ತನಿಯರ ಚಿತ್ತಮನೆೞಕುಳಿಗೊಳ್ವ ಚೆಲ್ವುವೆತ್ತ ಕತ್ತುರಿಯ ತಿಳಕಮುನಿಟ್ಟು ಗೃಹೀತತಾಂಬೂಳನಾಳೋಕಿತಮಂಗಳಮಣಿದಪರ್ಣಂ ಕೂರ್ಪಿಂದಾರ ಕೂರ್ಪುಮಂನೇರ್ಪುಗಿಡಿಪಲಗಂ ಪಿಡಿದಲರ್ಗಣೆಯನಲರಂಬಿನ ಬಂಬಲೆಂಬಂತೆ ಬಗೆಗೊಳಿಸಿ ವೀಳೆಯಂಗುಡುವ ಮೇಲುದಂ ಪಿಡಿವಣ್ಪಿಕ್ಕುವ ತಲೆಯಂ ಪಿಕ್ಕುವ ನೆಲನನುಗ್ಗಡಿಸುಗ್ಗಡಿಸುತುಂ ಬರ್ಪ ಚಮರಜವನಿಕ್ಕುತಿರ್ಪ ಮೇಳದಿಂ ನುಡಿವ ಕಳಕಳಮಂ ಜಡಿವ ವಿವಿಧವಧೂಕದಂಬಕಂ ಸರಸಚರಣಾಧರಪಲ್ಲವದಿಂ ಪಲ್ಲವಿಸಿ ಕೇಕರದರಹಾಸವಿಳಾಸದಿಂ ಕುಸುಮಿಸಿ ಮಿಸುಪ ತನುಲತೆಗಳಿನತನು ಲತಾಕೇಳೀ ಲೀಲೋದ್ಯಾನ ಲತೆಗಳಂತೆ ಬಳಸಿ ಬರೆ ವಸಂತರಾಜನ ವಿಳಾಸಮಂ ತಳೆದು ಪದನಖಮಯೂಖಂಗಳಿನಿಳಾಸಿನಿಗೆ ಪುಳಕಾಂಕುರಂಗಳಂ ಪುಟ್ಟಿಸುತ್ತುಂ ನಡೆತಂದು ತನ್ನಂತೆ ಸಮುನ್ನತ ಜಯಸ್ತಂಭವಿಶುಂಭತ್ಕೀರ್ತಿ ಸಾಲಭಂಜಿಕಾಮೂರ್ತಿ ದೀಧಿತಿಸುಧಾಧವಳಿತ ದಿಗ್ಭಿತ್ತಿಭಾಗಮುಂ ಸಂಪಾದಿತ ಸಕಳಜನಮನೋರಾಗಮುಂ ನಿಜವಕ್ಷಸ್ಸ್ಥಳದಂತೆ ಲಕ್ಷ್ಮೀನಿಳಯಮುಮಮಳ ಗುಣಮಣಿ ಪ್ರಕಾಶಿತಸಭಾವಳಯಮುಂ ಸ್ವಕೀಯವಿಭವದಂತುದಿತೋದಿತೋದಯಮುಮಾಸಾದಿತ ಸಹೃದಯಪ್ರಮೋದಮುಮೆನಿಸಿ ಸರಸಿಜಸಂಭವನೆ ಸೂತ್ರಧಾರನಾದಂತೆ ನೇತ್ರ ವೈಚಿತ್ರ್ಯಮಂ ಸೂತ್ರಿಸುವಾಸ್ಥಾನಮಂಡಪ ಮಧ್ಯಸ್ಥಿತಾನುತ್ತರಾಭಿಧಾನಸಿಂಹಾಸನಮನಳಂಕರಿಸಿದಾಗಳ್‌

ಮ || ಜಗದೀಶಂ ಬೆದಱಟ್ಟೆ ದೋರ್ವಳದಗುರ್ವಿಂದನ್ಯರಾಜನ್ಯಕಂ
ಬಗೆಗೆಟ್ಟುರ್ವರೆಯಂ ಬಿಸುಟ್ಟು ವನಮಂ ಪೊಕ್ಕುಂ ಭಯಂಗೊಳ್ವುದುಂ
ಮೃಗರಾಜಂ ಮಿಗೆ ಕಂಡು ತಾನುಮತಿಭೀತಾತ್ಮಂ ಶರಣ್ಬೊಕ್ಕವೋಲ್‌
ಸೊಗಯಿಕ್ಕುಂ ಮಣಿಭಾಸುರಂ ನಿರುಪಮಂ ಕ್ಷೋಣೀಶಸಿಂಹಾಸನಂ ೭

ಚಂ || ಅರಸಿಯರಂಗರೋಚಿಮಣಿಭೂಷಣಕಾಂತಿಗಳಿಂ ಸರಾಗದಿಂ
ಪೊರೆದ ಜಲಂಬೊಲೊಪ್ಪೆ ಕನಕಾಸನಭಾಸುರಶೋಭೆ ಹೇಮತಾ
ಮರಸವಿಳಾಸಮಂ ತಳೆಯೆ ಹಾರಲತಾಂಶುವೃತಂ ಸಭಾಸರೋ
ವರ ವರರಾಜಹಂಸನೆನೆ ರಾಜಿಸಿದಂ ವಸುಧಾಧಿನಾಯಕಂ ೮

ಉ || ಓಲಗದಲ್ಲಿ ಮಂಡಳಿಕಮೌಳಿವಿಘಟ್ಟಿತ ಪಾದಪೀಠಭೂ
ಪಾಳಕನಿರ್ಕೆಲಂಬಿಡಿದು ಕಣ್ಗೆಸೆದರ್‌ನಗೆಗಾರ್ತಿಯರ್‌ಸಮಂ
ತೋಲಗಕಾರ್ತಿಯರ್‌ನೆಗೞ್ದ ಜಾಣ್ಣುಡಿಗಾರ್ತಿಯಲ್ಮೆಕಾರ್ತಿಯರ್‌
ಲೀಲೆಯನಾಂತು ನಿಂದ ಬಿಯಗಾರ್ತಿಯರಗ್ಗದ ಗಾಡಿಕಾರ್ತಿಯರ್‌೯

ಕಂ || ನೇವುರದ ಕನ್ನವುರದೆ
ಕ್ಕಾವಳಿಯ ತೊಳಪ್ಪ ಮುತ್ತಿನಾರದ ಕಟಿಸೂ
ತ್ರಾವಳಿಯ ಘನಸ್ತನೆಯರ್‌
ಭಾವಜಗಜಘಟೆಯನಿೞಿಸಿ ಕಣ್ಗೊಳಿಸಿರ್ದರ್‌೧೦

ಚಂ || ಗುರುಕುಚಸಂಗದಿಂ ತರಳವೃತ್ತಿಗೆ ಮುತ್ತೊಳಗಾದುದೆಂದೊಡಿಂ
ತರಳಕಟಾಕ್ಷದಿಂದಡರೆ ನೋಡಿದೊಡನ್ಯರ ಚಿತ್ತವೃತ್ತಿಯೊಳ್‌
ತರಳತೆ ತೋರ್ಪುದಚ್ಚರಿಯೇ ಪೇೞೆನೆ ಕಾಮಶರಕ್ಕೆ ಕಾಂತರಂ
ತರುಣಿಯರೊಲ್ದು ನೋಡಿ ಗುಱೆಮಾಡುವರೋಲಗದೊಳ್‌ನೃಪಾಳನಾ ೧೧

ಮ || ನವಶೃಂಗಾರಸಮುದ್ರದೊಳ್‌ತಳೆದು ಲಾವಣ್ಯಾಂಬುವಂ ಕಾಮಿನೀ
ನಿವಹೋತ್ತುಂಗಪಯೋಧರಂ ಬಯಸಿ ನೋಡುತ್ತಿರ್ಪರಂಗೋರ್ವಿಯೊಳ್‌
ವಿವಿಧ ಸ್ವೇದಜಲಂಗಳಿಂ ಪುಳಕಸಸ್ಯಾನೀಕಮಂ ಮಾಡೆ ನಾ
ಡೆ ವಿಳಾಸಂಬಡೆದತ್ತು ಚಕ್ರಧರನಾಸ್ಥಾನಂ ಘನಶ್ರೀನುತಂ ೧೨

ಸಕಳಾಂತಃಪುರಮಂತ್ರಿಮಂಡಳಿಕ ರಾಜಶ್ರೇಷ್ಠಿ ತಂತ್ರಾಧಿನಾ
ಯಕ ಸಾಮಂತ ಕವೀಂದ್ರ ವಾಗ್ಮಿ ಗಮಕೋದ್ಯದ್ವಾದಿ ವಾಗ್ಗೇಯಕಾ
ರಕಥಾದ್ಯೋತಕ ಪುಣ್ಯಪಾಠಕ ಲಸದ್ಗೇಯ ಪ್ರವೀಣಪ್ರವಾ
ದಕವೈತಾಳಿಕನರ್ತಕೀ ಪ್ರಕರದಿಂದೊಪ್ಪಿರ್ದುದೊಡ್ಡೋಲಗಂ ೧೩

ಕಂ || ಜಗದೀಶಪಾದಪೀಠಂ
ಸೊಗಯಸಿದುದು ಮಕುಟಬದ್ಧಮೌಳಿಮಣಿದ್ಯೋ
ತಿಗಳ ಬೆಳಗಿಂದೆ ರೋಹಣ
ನಗಪಾದವಿಳಾಸವಿಭವಮಂ ಮಿಗೆ ನಗುತುಂ ೧೪

ಚಂ || ಮಣಿಮಯ ಚಾರುಚಾಮರಮನುಜ್ವಳಹಸ್ತನಖಾಂಶು ನೀಳ್ದು ಬಾ
ಸಣಿಸೆ ಸುಕಾಂತಮಪ್ಪಧರಪಲ್ಲವಮಂ ಸುಲಿಪಲ್ಲ ಕಾಂತಿ ಬಾ
ಸಣಿಸೆ ನವೀನಯೌವನ ಸಭಾಜನಮಂ ಕಡೆಗಣ್ಣ ಕಾಂತಿ ಬಾ
ಸಣಿಸೆ ವಿಳಾಸದಿಂ ವಿಭುಗೆ ಚಾಮರಮಿಕ್ಕಿದರಂಬುಜಾಕ್ಷಿಯರ್‌೧೫

ಮ || ಸಕಳಕ್ಷತ್ರಕುಳಾನುಲೇಪ ರಮಣೀವೇಣೀದಳತ್ಪುಷ್ಪದಾ
ಮಕ ವಕ್ತ್ರಾಂಬುಜಗಂಧಮಂ ತಳೆದು ಕಸ್ತೂರೀ ಲಸಚ್ಚಂದನೋ
ದಕ ಸಾರ್ದ್ರೀಕೃತ ರತ್ನಕುಟ್ಟಿಮಮನಾದಂ ಸೋಂಕಿ ಮಂದಾನಿಳಂ
ಸೊಕಮಂ ಮಾಡುತೆ ತೀಡೆ ನೀಡುಮೆಸೆದತ್ತಾಸ್ಥಾನಭೂಮಂಡಳಂ ೧೬

ವ || ಆ ಸಮಯದೊಳ್‌ಸಮಯಂಬಡೆದು ಮುಖರಿಗಾಣಸ್ಥಾನಮಧ್ಯರಂ ಗಮಂ ಸಂಗೀತ ಪ್ರಸಂಗಮಂ ಪುಟ್ಟಿಸಲೆಂದಳಂಕರಿಸೆ

ಕಂ || ಝಂಕಾರಂ ಪೆಣ್ದುಂಬಿಯ
ಝಂಕಾರಮೆನಿಪ್ಪ ಮೆಲ್ಪಿನಿಂ ಬಾಜಿಸಿದಂ
ಬಿಂಕದೆ ಮದನಧನುರ್ಗುಣ
ಟಂಕಾರಮೆನಿಪ್ಪ ಶಂಕೆಗೆಡೆಗುಡುವಿನೆಗಂ ೧೭

ತಾಳಾನುಗತಮೆನಿಪ್ಪು
ಲ್ಲಾಳಂ ಮೊದಲಾಗೆ ಸೊಗಯಿಸುವ ಪದಿನಾಱುಂ
ಪಾಳಕಳೆಯಿನಮರ್ದಂ ವಿಧು
ಲೀಲೆಯಿನಾವುಜಿಗನೀವುತುಂ ಬಾಜಿಸಿದಂ ೧೮

ಪಣವಂ ಸಭೆಗೆ ಸುಖಪ್ರಾ
ಪಣವಂ ನಿನದಮೆನೆ ತಾಳ್ದೆ ಪಾಣವಿಕರ್‌ಪೂ
ಗಣೆಯನ ಜಯಪಟಹಧ್ವನಿ
ಗೆಣೆಯನೆ ಬಾಜಿಸಿದರೆಸೆಯೆ ಲಯಗತಿ ಪಲವುಂ ೧೯

ಮಾರ್ದಂಗಿಕರಿನಿದೆನಿಸುವ
ಮಾರ್ದವದಿಂದೊಂದಿ ರತಿಯ ಕರವೀಣೆಯ
ಮಾರ್ದನಿಯೆನೆ ಬಾಜಿಸಿದರ್‌
ತಿರ್ದುವವೋಲ್‌ಸುಖಲತಾಳಿಗಮೃತದ ಪೊನಲಂ ೨೦

ಕವುತಂ ದೇಂಕಾರಂ ಮಲ
ಪವಥೆ ತುಡುಂಕೊತ್ತು ಜಂಕೆಯಂತರಿಜತಿ ರಿ
ಗ್ಗವಣೆ ಪಹರಣೆಯೆನಿಪ್ಪೀ
ಪ್ರವಂದಮಂ ಶ್ರೋತ್ರಬಂಧುವೆನೆ ಬಾಜಿಸಿದರ್‌೨೧

ವ || ಅಂತು ವಾದ್ಯಂಗಳ ಗಡಣೆ ಹೃದ್ಯಮಾಗೆ

ಕಂ || ಪರಿಕಿಪೊಡೆ ಪೌರನುಂ ಸು
ಸ್ವರನುಂ ಸುಗುಣನುಮೆನಿಪ್ಪಿನಂ ಸಪ್ತವಿಧಂ
ಸ್ಫುರಿತಾದಿ ಗಮಕಮಮರು
ತ್ತಿರೆ ವಾಂಶಿಕನತಿಸುರಾಗಮೆನೆ ಬಾಜಿಸಿದಂ ೨೨

ವ || ಅಂತು ವಾಂಶಿಕಂ ಶ್ರುತಿಗೆ ಸೊಗಯಿಸೆ ಶ್ರುತಿಯಂ ಪವಣಿಸಿ ಕುಡುವುದುಮಾ ಶ್ರುತಿಯೊಳಾ ಲಪ್ತಿಯಂ ಪಲವಂ ವ್ಯಾಪ್ತಿವೆರಸು ಮಾಡಿ

ಕಂ || ಗಾಣರ್‌ತಮಗೊಳ್ಪಿಂ ಸರಿ
ಗಾಣರೆನಿಪ್ಪವರೆ ಮೆಚ್ಚಿ ಬಿಚ್ಚಳಿಸುವಿನಂ
ಗಾಣರ್‌ಸವಸುತಿಯಿಂ ರತಿ
ವೀಣೆಯನೆೞ್ಚಱೆಸಿದಂತೆ ಪಾಡಿದರಾಗಳ್‌೨೩

ಚಂ || ಜವನಿಕೆಯಾಗಳೋಸರಿಸೆ ಬೇಸಗೆಯಂತೆ ಪಯೋಧರಂ ನಭೋ
ವಿವರಮನೆಯ್ದೆ ತೀವೆ ಮಣಿಭೂಷಣಕಾಂತಿ ಸುರೇಂದ್ರಚಾಪಲೇ
ಖೆವೊಲಿರೆ ಕೇಕರಾಂಶು ಕುಡುಮಿಂಚೆನೆ ತಾಂ ರಸಭಾವಮೂರ್ತಿ ಪಾ
ರ್ಥಿವಸುಖಸಸ್ಯವೃಷ್ಟಿಯೆನೆ ದೃಷ್ಟಿಗೆ ನರ್ತಕಿ ನೀಡುಮೊಪ್ಪಿದರ್‌೨೪

ಕಂ || ವನಲತೆ ಪಲ್ಲವಪುಟದಿಂ
ಮನಸಿಶಯಂಗರ್ಘ್ಯಮೀವವೋಲ್‌ಧವಳವಿಳೋ
ಚನರುಚಿನಿಭಪುಷ್ಪಾಂಜಳಿ
ಯನಿತ್ತು ನರ್ತಕಿ ವಿಚಿತ್ರಮೆನೆ ನರ್ತಿಸಿದಳ್‌೨೫

ಉ || ಲೀಲೆಯಿನಂಗಜಂಗೆ ಕುಸುಮಾಸ್ತ್ರಮನಾ ರತಿ ನೀಡುತಿರ್ಪವೋಲ್‌
ಮೇಳಿಸೆ ಲೋಲದೃಷ್ಟಿರುಚಿ ಹಸ್ತಚಯಂಗಳೊಳಾದ ಚಾಳೆಯಂ
ಚಾಳಿಸೆ ಚಿತ್ತಮಂ ಪಯದ ಪದ್ಧತಿ ವಾದ್ಯಲಯಾನುಕೂಳಗೇ
ಯಾಳಿಯೊಳೊಂದೆ ನರ್ತಿಸುವ ನರ್ತಕಿಯಚ್ಚರಿಯಂ ನಿಮಿರ್ಚಿದಳ್‌೨೬

ಕಂ || ಲುಳಿತಮಳವಟ್ಟು ಬಂದುದು
ಜಲಶಯನಂ ನಯನಹಾರಿಯಾದತ್ತೊಪ್ಪ
ಕ್ಕೊಳಗಾಯ್ತು ದರ್ಪಸರಳಂ
ವಿಳೋಕನಕ್ಕುಚಿತಮೆನಿಸಿ ರುಚಿಯಿಸಿ ರಚಿತಂ ೨೭

ಉ || ಭಂಗಿಯಾಳೆ ನಿಜ್ಜವಣೆ ರೇಖೆ ಮನೋಹರಮಾಗೆ ರೂಪು ಚೆ
ಲ್ವಿಂಗೆಡೆಯಾಗೆ ತಾಳದನುಕೂಲತೆಯಿಂ ವಳನೋರುನರ್ತನಂ
ಸಂಗತಮಾಗೆ ಗೀತದೊಳಮೊಂದಿದ ವಾದ್ಯದೊಳಂ ಲತಾಂಗಿ ಸ
ರ್ವಾಂಗದೆ ಪಾಡುವಂತೊಸೆದು ಬಾಜಿಸುವಂತೆವೊಲಾಯ್ತು ನರ್ತನಂ ೨೮

ಕಂ || ಗೀತಮನೊಡನುಗ್ಘಯಿಪವೊ
ಲಾತೋದ್ಯಲಯಂ ಪ್ರಶಸ್ಯಲಾಸ್ಯಂ ಪರಿಷ
ತ್ಪ್ರೀತಿಯನುತ್ಪಾದಿಸೆ ಸಂ
ಗೀತವೆಸರ್‌ಗೀತವಾದ್ಯನೃತ್ಯದೊಳೆಸೆಗುಂ ೨೯

ಆಂಗಿಕದಿಂ ನಟಿ ವಾಚಿಕ
ದಿಂ ಗಾಯಕ ವಾದ್ಯಲಯಮನಭಿನಯಿಪುದಱಿಂ
ಸಂಗತಮಾದುದು ವಾದ್ಯದೊ
ಳಂ ಗೀತದೊಳಂ ಪ್ರತೀತ ತೂರ್ಯಾಖ್ಯಾನಂ ೩೦

ಪಲವಂಗಹಾರಮೊಪ್ಪುವ
ಪಲವು ಪಯಂ ನೆಗೞೆ ನರ್ತಿಸುತ್ತುಂ ಮತ್ತಂ
ಚಳಿಯಿಸದೆ ಸಭೆಯ ಬಗೆಯೊಳ್‌
ನೆಲಸಿದಳುತ್ಪದಳಾಕ್ಷಿ ನರ್ತಕಿ ಚಿತ್ರಂ ೩೧

ವ || ಅಂತು ಸಂಗೀತೆಕಪ್ರಸಂಗಂ ಮನಂಗೊಳಿಸುತ್ತುಮಿರ್ಪುದುಮಾ ಪ್ರಸ್ತಾವದೊಳ್‌

ಮ || ಕ್ಷಿತಿನಾಥೋನ್ನತ ನಿನ್ನ ಪುಣ್ಯವಶದಿಂ ದುಃಕರ್ಮದಾವಾನಳಾ
ಮೃತವರ್ಷಂ ನಿಜಸೂಕ್ತಿಜನ್ಮಿಗದಱಿಂ ಕ್ಷೇಮಂಕರಾಖ್ಯಾನಮ
ನ್ವಿತಮಾಗೊಪ್ಪುವ ದಿವ್ಯಯೋಗಿ ಬಹಿರುದ್ಯಾನಪ್ರದೇಶಕ್ಕೆ ವಿ
ಶ್ರುತಬೋಧಾಂಬುಧಿ ಬಂದು ದೇವ ನೆಲಸಿರ್ದಂ ಭವ್ಯಸೌಖ್ಯಪ್ರದಂ ೩೨

ವ || ಎಂದು ಬಿನ್ನವಿಸಿದ ಋಷಿನಿವೇದಕಾಭಿಲಷಿತಫಳಮನುತ್ಪುಳಕ ಕಳಿಕಾಂಚಿತಾಂಗ ಶೋಭಾ ವಿಜಿತಕಳ್ಪಾಂಘ್ರಿಪನಿತ್ತುತ್ತುಂಗಸಿಂಹಾಸನದಿನಿೞಿದು ಮುನಿಪೋತ್ತಮನಿರ್ದತ್ತ ಲೇೞಡಿಯಂ ನಡೆದು ವಿನಯವಿನಮಿತೋತ್ತಮಾಂಗನಾಗಿ

ಕಂ || ವಿನುತಮುನಿಪಾಗಮಾಕ
ರ್ಣನಮೆ ವಿಶೋಧಿಗೆ ಜಿನಾಗಮಾಕರ್ಣನದಂ
ತನುಕೂಲಮಾಗೆ ಶುಭಭಾ
ವನೆಯತ್ತಲೆ ಚಿತ್ತವೃತ್ತಿಯಂ ವಿಭುವಿತ್ತಂ ೩೩

ಸರದಾಶಯಕ್ಕೆ ವಿಶದಕೆ
ಸರದಾಗಮದಿಂದಮಪ್ಪ ತಱದಿಂದೆ ಮುನೀ
ಶ್ವರರಾಗಮದಿಂದವನೀ
ಶ್ವರಾಶಯಕ್ಕಾದುದತಿಶಯಂ ವಿಶದತ್ವಂ ೩೪

ಸಾತಿಶಯಬೋಧಸಸ್ಯವಿ
ಘಾತಿ ತ್ರಿಪರಿಗ್ರಹೇಚ್ಛೆಯಂ ಯತಿಪತಪಃ
ಸ್ವಾತಿ ಬೆದಱಟ್ಟೆ ಬಳೆದುದು
ಭೂತಳಪತಿಚಿತ್ತದಲ್ಲಿ ತತ್ತ್ವವಿವೇಕಂ ೩೫

ಚಕ್ರಂಬಿಡಿದಾಯ್ತು ಮಹೀ
ಚಕ್ರಪರಿಭ್ರಮಣದಂತೆ ಬಹ್ವಾರಂಭೋ
ಪಕ್ರಮದಿಂ ಮಱೆದಿರೆ ಭವ
ಚಕ್ರಪರಿಭ್ರಮಮುಮಕ್ಕುಮೆಂದಗಿದಧಿಪಂ ೩೬

ಏಕಿನಿತು ಪರಿಗ್ರಹಮಂ
ಸ್ವೀಕರಿಸಿದೆನಿವಱಿವಾರ್ತಮಲ್ಲದೆ ಸುಖಮಾ
ಳೋಕಿಸುವೊಡಿಲ್ಲ ಬಱೆದವಿ
ವೇಕಿಗಳೇನೆಂದೊ ಬಯಸುವರ್‌ನೃಪಪದಮಂ ೩೭

ತನುತನುಪರಿಗ್ರಹದ ಮುನಿ
ಜನಕಂ ಸಾವದ್ಯಮೊದವುತಿರ್ಪುದು ಗಡಮಿ
ನ್ನೆನಗೆ ಬಹುವಿಧ ಪರಿಗ್ರಹ
ವನಧಿಗೆ ಸಾವಧ್ಯಮಪ್ಪುದಂ ಪವಣಿಪರಾರ್‌೩೮

ಎನಿತೆನಿತು ಪರಿಗ್ರಹಮಾ
ಯ್ತನಿತನಿತಘವೃದ್ಧಿ ಹಾನಿ ತನ್ನಯ ಗುಣಕೆಂ
ದೆನೆ ದುರಿತದ ಪರಿಜನಮಂ
ತನತೆಂಬನನಡಸಿ ಕಟ್ಟದಿರ್ಕುಮೆ ಕರ್ಮಂ ೩೯

ಚಂ || ನೆರೆಯದ ಮುನ್ನಮರ್ಥಮದೆ ಸಾರ್ದೊಡೆ ಸೌಖ್ಯಮೆ ಸಾರ್ಗುಮೆಂದದಂ
ನೆರಪಿ ಸುಖಪ್ರಸೇವೆಯನೊಡರ್ಚುವೆನೆಂದೆನೆ ಮೇಲೆಮೇಲೆ ಬಿ
ತ್ತರಿಪತಿತೃಷ್ಣೆ ದುಃಖಮನೆ ಕೊರ್ವಿಸುತಿರ್ಪುದಱಿಂದಮರ್ಥಸಂ
ವರಣೆಯನರ್ಥಮಂ ಪಡೆಗುಮಲ್ಲದೆ ಸೌಖ್ಯಮನೀಯಲಾರ್ಕುಮೇ ೪೦

ಕಂ || ಬಯಸಿದರುಂ ದೋಷಿಗಳೆ ವಿ
ಷಯಮಂ ಗಡ ಬಯಸಿ ನೆರಪಿದೆನ್ನಿಂ ದೋಷಾ
ಶ್ರಯನಾವನೆನುತೆ ಕೊಕ್ಕರಿ
ಕೆಯನಾಂತಂ ತತ್ತ್ವವೇದಿಗದು ಕೌತುಕಮೇ ೪೧

ಚಂ || ಚಿರತರಮಿರ್ದೊಡಂ ವಿಷಯಸಂತತಿ ಪೋಪುದಗಲ್ದವಶ್ಯಮೀ
ನರರವನೇಕೆ ತಾಮೆ ಬಿಡರೋ ಗಡಗಲ್ಕೆಯೊಳುಂಟೆ ಖೇದಮಂ
ತಿರದವು ತಾವೆ ಪೋಗೆ ಬಗೆಗಪ್ಪುದು ದುಃಖಮನಂತಮಂತವಂ
ಪರಿಹರಿಪಂಗೆ ಸೌಖ್ಯಮದಱೆಂ ತೊಱೆವೆಂ ವಿಷಯೋತ್ಕರಂಗಳಂ ೪೨

ವ || ಎಂದು ವಿಭಾವ ಪರಿಣಾಮಮಂ ಪತ್ತುವಿಟ್ಟು

ಕಂ || ಇದೆ ಕಾಲಲಬ್ಧಿ ದೊರೆಕೋಂ
ಡುದು ವಿಷಯವಿರಕ್ತಿಯಲ್ಲದಂದೇಕೆಯೊ ಪೇ
ೞೊದವಿದುಪದೇಶಲಬ್ಧಿಯು
ಮುದಯಿಸುಗುಂ ಮುನಿಪದಾಂಬುಜಾರಾಧನೆಯಿಂ ೪೩

ಕ್ಷೇಮಂಕರಯತಿಪತಿಗಳ
ನಾಮಗ್ರಹಣದೊಳೆ ವಿಷಯವೈರಾಗ್ಯಂ ನಿ
ಸ್ಸೀಮಮೆನಿಸಿತ್ತು ದರ್ಶನ
ಮೇಮಾತೆಮಗಖಿಳಸುಖಮನೊದವಿಕುಮಲ್ತೇ ೪೪

ಮ.ಸ್ರ || ಎನಿತುಂಟಾಸ್ವಾದ್ಯಮಾ ವಸ್ತುವನೆ ನೆರಪಿ ನಿರ್ಬಂಧದಿಂ ಮೆಲ್ದು ಸಲ್ಲೇ
ಖನಮಂ ಮಾೞ್ಪಂ ಬೞಕ್ಕಂತವನೆ ತೊಱೆವವೋಲ್‌ಚಕ್ರಿ ಷಟ್ಖಂಡಮಂ ಸಾ
ಲ್ವನಿತಂ ಸಾಮ್ರಾಜ್ಯಮಂ ಮುನ್ನನುಭವಿಸಿ ತೃಣಪ್ರಾಯಮಂ ಮಾಡಿಬಿಟ್ಟಂ
ಘನತತ್ತ್ವಜ್ಞಾನಿ ಸಾಂಸಾರಿಕಸುಖಮನಿದಂ ಸೌಖ್ಯಮೆಂದೊಲ್ವನಾವಂ ೪೫

ವ || ಎಂದು ಪರಮವೈರಾಗ್ಯಪರಾಯಣನಾಗಿ

ಚಂ || ಕವಚಹರಂ ಮನೋಹರಗುಣಂ ನಿಮಗೀತನೆ ನಾಥನೆಂದು ಪಾ
ರ್ಥಿವರ್ಗೆ ನಿಯೋಗಿಗಳ್ಗೆ ಪತಿ ಪೇೞ್ದು ಸಮೂರ್ಜಿತರಾಜ್ಯದೊಳ್‌ತನೂ
ಭವನನುದಾತ್ತನಂ ನಿಱಿಸಿ ಕೀರ್ತಿಯ ಡಿಂಡಿಮರಾವಮೆಂಬವೋಲ್‌
ರವಮಖಿಳಾಶೆಯಂ ಬಳಸೆ ಪೊಯ್ಸಿದನುತ್ಸವಕಾರಿಭೇರಿಯಂ ೪೬

ವ || ಅಂತು ಸಕಳ ಸಾಮ್ರಾಜ್ಯಪಟ್ಟಮನಗ್ರನಂದನಂಗೆ ಕಟ್ಟಿ ಪಟ್ಟಬಂಧೋತ್ಸವ ತೂರ್ಯರವಮುಮಾನಂದಭೇರೀರವಮುಂ ದಿಗ್ವಳಯಮಂ ಬಳಸೆ ಪೊಯ್ಸಿ ತಪೋರಾಜ್ಯಮಂ ಸ್ವೀಕರಿಸಲೆಂದುದ್ಯುಕ್ತನಾದ ಚಕ್ರವರ್ತಿಗೆ ಸಮೀಪವರ್ತಿಗಳಪ್ಪ ಪಾರ್ಥಿವರುಮಮಾತ್ಯರು ಮಿಂತೆಂದರ್‌

ಮಾಳಿನಿ || ದುರಿತರಿಪುವನಿಕ್ಕಲ್‌ದೇವ ನೀನಾರ್ತು ಪೋಗು
ತ್ತಿರೆ ಪೆಱರಗಿದಿರ್ಪಂತಿರ್ಪುದೇಂ ಪಾೞೆಯೇ ಪೇೞ್‌
ಪರಿಜನಕದಱೆಂದಂ ಪೂಣ್ದು ನಿನ್ನಿಂದೆ ಮುನ್ನ
ನ್ನರಿವೆವಘಮನಾತ್ಮಧ್ಯಾನತೀವ್ರಾಸಿಯಿಂದಂ ೪೭

ವ || ಅಂತುಮಲ್ಲದೆ

ಕಂ || ಸ್ವಾಯತ್ತಸಾರ್ವಭೌಮ
ಶ್ರೀಯಂ ಜವ್ವನದೊಳುಱದೆ ನೀಂ ತೋಱೆದೆ ಗತ
ಪ್ರಾಯರೆಮಾವಲ್ಪತರ
ಶ್ರೀಯಂ ತೋಱೆದಾತ್ಮಹಿತದೊಳೆಸಗುವುದರಿದೇ ೮೪

ಎಂದು ತಱೆಸಂದು ರಾಜ್ಯದೊ
ಳೊಂದಿದ ನೃಪನಂದನಂಗೆ ನಿಜನಂದನರಂ
ತಂದೊಪ್ಪಯಿಸಿ ಪತಿಯ ಬೞಿ
ಸುಂದರ್‌ನೃಪತಿಗಳುಮುಚಿತಮತಿಮಂತ್ರಿಗಳುಂ ೮೯

ವ || ಅಂತು ಪರಿತ್ಯಕ್ತಪರಿಗ್ರಹಮಾದ ಪರಿಗ್ರಹಂಬೆರಸು ಪರಮಾನುರಾಗದಿಂ ಪೋಗಿ ನೀರಜನೆನಿಪ ಮುನಿರಾಜಚರಣನೀರಜಕ್ಕೆ ನೀರಾಜನಮಂ ರಾಜರಾಜಂ ಮೌಳಿಕೀಳಿತ ಶೋಣಮಾಣಿಕ್ಯಕಿರಣದೀಪಕಳಾಪದಿಂದೊಡರ್ಚಿ ವಿಶಿಷ್ಟಾಷ್ಟವಿಧಾರ್ಚನಾಪರಿಕರ ದಿಂದರ್ಚಿಸಿ ಭಕ್ತಿಭರದಿನೆಱಗುವಂತೆಱಗಿ ಪೊಡೆವಟ್ಟನಂತರಂ

ಕಂ || ಕ್ಷೇಮಂಕರಮುನಿಪತಿ ನಿಜ
ನಾಮಗ್ರಹಣದೊಳೆ ಬಹುಪರಿಗ್ರಹಬಂಧ
ವ್ಯಾಮೋಹಮನಳೞೆಸಿದ
ತ್ತೀ ಮಹಿಮೆಯಿನಾಯ್ತು ನಿನ್ನ ಪೆಸರನ್ವರ್ಥಂ ೫೦