ಚಂ || ಕಳಕಂಠಂ ಕಳಿಕಾರಸಕ್ಕಳಿಕುಳಂ ಪುಷ್ಪಕ್ಕೆ ಕೀರಂ ಫಳಾ
ವಳಿಗೆನ್ನಂ ಬಳಸಿರ್ಪುವಾನವನವರ್ಕಾನಂದದಿಂದೀವೆನೆಂ
ದೆಳಮಾವೊಂದೆಳಗೊಂಬಿನೊಳ್‌ಕಳಿಕೆಯಂ ಮತ್ತೊಂದಱೊಳ್‌ಪೂಗಳಂ
ಫಳಮಂ ಮಿಕ್ಕಿನ ಕೊಂಬಿನೊಳ್‌ತಳೆದುದೆಂದಾನಂದದಿಂ ನೋಡಿದಳ್‌೫೧

ಚಂ || ಚಿಗುರ್ಗುಳನೊರ್ಮೆ ಕರ್ಚಿ ತಳಿರ್ದೊಂಗಲನೊರ್ಮೆ ಕರ್ದುಂಕಿ ಕೋಕಿಗಳಂ
ಮುಗುಳನದೊರ್ಮೆ ಜಕ್ಕುಲಿಸಿ ಪೂಗಳನೊರ್ಮೊದಲೀಂಟಿ ಷಟ್ಪದಂ
ಬಗೆಗೊಳೆ ಬಂದಮಾವುಗಳ ಕಾಯ್ಗಳನೊರ್ಮೆ ತುಡುಂಕಿ ತುಂಡದಿಂ
ಸೊಗಯಿಪ ಪಣ್ಣನೊರ್ಮೆ ಸವಿದೇಂ ಸೊಗಮಂ ಶುಕನೊಲ್ದು ತಾಳ್ದಿತೋ ೫೨

ಕಂ || ನನೆವೊಱೆಯಿಂ ಬಳ್ಕಿದ ಮಾ
ವಿನ ಕೊಂಬಿನೊಳಳಿಯ ಮಾಲೆ ಮೊಱೆಯುತ್ತುಂ ಪೂ
ವಿನ ಬಿಲ್ಲನತನು ಜೇವೊಡೆ
ದನುಗೆಯ್ದೇಱಿಸುವ ಚೆಲ್ವನೇಂ ಬೀಱಿದುದೋ ೫೩

ಸುಚ್ಛಾಯಮಲರ ಗೊಂಚಲ
ಗುಚ್ಛಂ ಮೇಗಣ್ಗೆ ನೆಗೆದ ಕೊಂಬಿನೊಳಿರ್ದಾ
ಹೃಚ್ಛಯನಂ ಕೂರ್ತಿತ್ತಸಿ
ತಚ್ಫತ್ರಮಿದೆನಿಸಿ ಚೂತರಾಜಂಗೆಸೆಗುಂ ೫೪

ಒಂದೊಂದಱಿಂದೆ ಚೆಲ್ವಂ
ಸಂದಿಸುವುವು ಸಕಳತರುಗಳುಂ ಕಳಿಕೆ ಚಿಗುರ್‌
ಕೆಂದಳಿರಲರ್‌ಮಿಡಿ ಕಾಯ್‌ಪ
ಣ್ಣೆಂದಿವಱಿಂದೆ ಚೆಲ್ವವೆತ್ತುದೀ ಚೂತಕುಜಂ ೫೫

ವ || ಎಂದು ತನ್ನ ಮನೋನಯನವಲ್ಲಭನಂತೆ ಸರ್ವಾಂಗಸೌಂದರ್ಯ ಮನಂಗೀಕರಿಸಿದ ಚೂತಕುಜಾತಮನತಿಪ್ರೀತಿಯಿಂ ಗುಣಪ್ರಿಯೆ ಪೊಗೞ್ದಳ್‌ಮತ್ತೊರ್ವಳ ಪೂರ್ವ ವಿಭ್ರಮಸಮನ್ವಿತೆ ಭ್ರಮರಸಮುದಯಮಂ ಸಮುಲ್ಲಸಿತಹಸಿತದಿಂ ತಮ್ಮಲ್ಲಿಗೆ ತೆಗೆವ ಮಲ್ಲಿಗೆಯಲ್ಲಿಗೆವಂದು

ಕಂ || ನನೆಯೊತ್ತೆ ಮಿಸುಪ ಮಲ್ಲಿಗೆ
ನನೆಯೊತ್ತುವುದತನುಸತಿಯ ಲಾವಣ್ಯರಸಾ
ಭಿನವನದಿ ಸುರಭಿಗಂಧದಿ
ನೆನಸುಂ ತೀವಿದೊಡೆ ತೀವುವುದು ತೊದಳುಂಟೇ ೫೬

ವರನೆನಿಸಿದ ಸಹಕಾರದ
ಬರವಂ ಪೇೞ್ವಂತೆ ಕರೆಯೆ ಕೋಗಿಲೆ ಕೇಳ್ದು
ಬ್ಬರಿಸಿದ ಹರ್ಷದೆ ಬಿರಿವಂ
ತಿರೆ ಬಿರಿದುವು ಸುರಭಿಮಾಸದೊಳ್‌ಮಲ್ಲಿಗೆಗಳ್‌೫೭

ನನೆಯಿಂದಂ ತುಱುಗಿರೆ ತ
ನ್ನನೆಯಿಂದಿಮ್ಮಾವು ಕೂರ್ಮೆಯಿಂದಪ್ಪಿದುದೆಂ
ದನುರಾಗದಿಂದೆ ಮಲ್ಲಿಗೆ
ಘನಪುಳಕಮನಾಂತುದೆನಿಸಿ ಮುಗುಳ್ಗಳಿನೆಸೆಗುಂ ೫೮

ಅಲರಲರ್ದಪ್ಪದೆ ಪದಪಿಂ
ನೆಲಸಿರೆ ಮಱಿದುಂಬಿ ತುಂಬಿಗಱಿಗಟ್ಟಿದ ಕೂ
ರಲರ್ಗಣೆಯ ದೊಣೆಯಿದೆನೆ ವಿಚ
ಕಿಳವಿಳಸಿತಲತೆಯದೇಂ ಮನಂಗೊಳಿಸಿದುದೋ ೫೯

ತನಿಗಂಪನುಳ್ಳ ಪಗಲೊಳ
ಮನುನಯದಿಂದೊಪ್ಪುತಿರ್ಪ ತಾರಗೆಯೋ ವಾ
ಸನೆವೆತ್ತ ಮುತ್ತೊ ಪೇೞೆನೆ
ನನೆಗಳ್‌ಮಿಗೆ ಮಿಱುಗಿ ತಱುಗಿದುವು ಮಲ್ಲಿಗೆಯೊಳ್‌೬೦

ವ || ಎಂದೊರ್ವಳ್‌ಮಲ್ಲಿಕಾ ಕುಸುಮಕೋಮಳೆ ಮಲ್ಲಿಗೆಯಂ ಕೊಂಡುಕೊನೆಯುತ್ತುಮಿರೆ ಮತ್ತೊರ್ವಳ್‌ಚಂಪಕಚಾರುವರ್ಣಸೌರಭಾಕೀರ್ಣೆ ಚಂಪಕಪಾದಪಮಂ ಪೊರ್ದಿ

ಚಂ || ಇದು ಕುಸುಮಾಸ್ತ್ರನೋಲಗದ ಸಾಲೆಯೊಳೊಪ್ಪುವ ಕಲ್ಪವೃಕ್ಷಮ
ಲ್ತಿದು ಮದನಂಗೆ ಚೈತ್ರನೊಸೆದೆತ್ತುವ ಮಂಗಳದೀಪಜಾಳಮ
ಲ್ತಿದು ರತಿದೇವಿಗೆಂದು ಮಧುಮಾಡಿದ ರನ್ನದ ಚೆನ್ನಮಾಡಮ
ಲ್ತಿದು ನವರಾಗಮಂ ಕಱೆವ ಮೇಘಮದಲ್ತಿದು ಪೂತ ಚಂಪಕಂ ೬೧

ಕಂ || ಬಿಡೆ ಮಧುವಂ ಕಡಿವಾಱಡಿ
ಪೊಡರ್ದಿರ್ಪತಿ ಮಳಿನವರ್ಣಮೆಂದಳಿಸಂಗ
ಕ್ಕೆಡೆಗುಡದು ಸುವರ್ಣತೆಯುಂ
ಪಡೆದುದಱಿಂದುಂತೆ ಚಂಪಕಕ್ಕೆಱಗದುದೇ ೬೨

ವ || ಎಂದು ತುಂಬಿಗಳೊಳ್ ಸಂಪಗೆ ಪಗೆಗೊಂಡುದರ್ಕೆ ನಿಮಿತ್ತಮನುತ್ಪ್ರೇಕ್ಷಿಸುತ್ತು ಮಿರೆ ಮತ್ತೊರ್ವಳತಿಚತುರದೂತಿಕಾಪ್ರೇಷಣಪ್ರವೀಣೆ ವಸಂತದೂತಿಯೆನಿಸಿದ ಮಾಸಂತಿ ಕಾಂತೆಯಂತಿಕಕ್ಕೆ ವಂದು

ಉ || ತಾನಿದು ಮುನ್ನಮುಲ್ಲಸಿತಪಲ್ಲವದಿಂ ಗುಡಿಗಟ್ಟಿ ತೊಟ್ಟು ಭೂ
ಷಾನಿಚಯಂಗಳಂತಲರನೀ ಮಧು ಬಂದಪದೆಂದು ಮುಂದೆ ಮಂ
ದಾನಿಳನೆಯ್ದೆವಂದುದೆನೆ ನೀಮುಮಳಂಕೃತೆಯರ್ಕಳಾಗಿಮೆಂ
ದೀ ನವವಲ್ಲರೀವನಿತೆಯರ್ಗುಸಿರ್ವಂತಳಿರಾವಮೊಪ್ಪುಗುಂ ೬೩

ಉ || ಇಂತು ವಸಂತದೂತಿವೆಸರೀ ಲತೆಗಾದುದದೊಂದೆ ಕಾಮಸೀ
ಮಂತಿನಿಗಾಳಿಗಾಳಿಯ ಗುಣಕ್ಕೆಡೆ ತುಂಬಿಯ ಪಾಡುತಿರ್ಪ ನಿ
ಶ್ಚಿಂತಗೃಹಂ ಲತಾವಳಿಗಳಂಕರಿಸಲ್ಕಳಿಯಂ ಸುಗಂಧಮಿ
ತ್ತಂತಿರೆ ಪೋಷಿಸಲ್‌ಕಲಿಪ ನಾಯಿಕೆ ಕಾಮನಿಕಾಮಸಂಪದಂ ೬೪

ಕಂ || ಕಾಂತಾತಿಚತುರಮೆನಿಪ ವ
ಸಂತಂ ಬರೆ ಹರ್ಷಪುಳಕಮೆನಿಪಲರಂ ವಾ
ಸಂತಿ ತಳೆದಿರ್ದುದುಂತುಂ
ಕಾಂತರ ಬರವಾರ್ಗೆ ಹರ್ಷಮಂ ಪುಟ್ಟಿಸದೋ ೬೫

ವ || ಎಂದು ತನ್ನ ಬಗೆಯ ಬಯ್ಕೆಯಂ ಬಯಕೆಯ ಕಾಂಕ್ಷೆಯ ಮೇಲೆ ಲತಾಂಗಿಯಿಕ್ಕಿ ಜಳಕ್ಕನಱಿಪಿದಳ್‌ಮತ್ತೊರ್ವಳ್‌ಬಂದುಗೆಯಂದಮಂ ತಳೆದ ಬಾಯ್ದೆಱೆಯವನಿತೆ ಬಂದುಗೆಯ ಕೆಲದೊಳ್‌ನಿಂದು

ಕಂ || ರಾಗರತಿ ಸತಿಯರಧರದ
ರಾಗಮನನುಕರಿಸಿ ಕಂತುಕಾಂತಂಗೆ ಮನೋ
ರಾಗಮನೊದವಿಸಿ ನನೆಯಿಂ
ಬಾಗಿರ್ದುದು ಚಂಚರೀಕವೃತಬಂಧೂಕಂ ೬೬

ಪೋಗದೆ ಬಿರಯಿಗಳೆರ್ದೆಯಂ
ಪೂಗಣೆಯವನೆಚ್ಚೊಡುರ್ಚಿ ನೆತ್ತರ್‌ಪೊರೆದಿಂ
ತೀಗಳೆ ಬಂದಂತಿರೆ ಕೆಂ
ಪಾಗಿರ್ದುದು ಗಂಧಬಂಧುರಂ ಬಂಧೂಕಂ ೬೭

ಬಂದುಗೆಯ ಕುಸುಮರಸಮಂ
ಬಂದುಗೆಮಿಗೆ ಪೀರ್ವ ಷಟ್ಪದಂ ನೆನೆಯಿಸಿತೆ
ಯ್ತಂದು ನಯದಿಂದೆ ಪತಿ ಸಾ
ರ್ತಂದರುಣಾಧರಮನೀಂಟುವುದನಂಗನೆಯಾ ೬೮

ವ || ಎಂದು ಚಿತ್ತವಲ್ಲಭವನ ಚುಂಬನದಿಂಬನಿಂಬಾಗಿ ನುಡಿಯದಂತು ನುಡಿದಳ್‌ಮತ್ತೊರ್ವಳಭಿಜಾತಕೇತಕೀದಳಧವಳಾಪಾಂಗೆ ಕೇತಕೀದಳಂಗಳನಪಾಂಗದ ನೀಳ್ಪಿನೊಳ್‌ಪಡಿಯಿಡುವಂತಡರೆ ನೋಡಿ,

ಕಂ || ಬೆಳ್ದಿಂಗಳನಂಗಭವಂ
ನೀಲ್ದಿರೆ ಪೊರೆಯೆತ್ತಿ ರತಿಯ ಮುಖಗಂಧಮನಂ
ತಾಳ್ದಿರೆ ತೊಯ್ದವೊಲೊಳ್ಪಂ ೬೯

ವ || ಎಂದದಱ ಮೆಯ್ಸಿರಿಗನುಸಾರಿಯಾಗಿರಿಸಿ ನಿರಿವಿಸಿದಳ್‌ಮತ್ತೊರ್ವಳುದ್ದಾಮ ಮಾಲತೀದಾಮ ಕೋಮಳೆ ವಿರಹಾಕುಳೆಯಲರ್ದ ಲತೆಗಳಂ ಪೊರ್ದಲಣ್ಮದೆ ತನ್ನಂತೆ ಬಂಬಲಂ ಬಾಡಿರ್ದ ಜಾದಿಯಂ ನೋಡಿಯದಱ ನೆವದಿಂ ವಸಂತಮನಿಂತೆಂದಳ್‌

ಕಂ || ನೀತಿಯನೊಕ್ಕು ವಿಜಾತಿಯ
ಮಾತನೆ ಮನ್ನಿಪ ವಸಂತನೃಪನಿಂ ಕಿಡುಗುಂ
ಜಾತಿಯ ಸಿರಿಯುೞಿದಿರ್ಪ ಕು
ಜಾತಕುಲದ ಲಕ್ಷ್ಮಿ ಬಳೆವುದೇಂ ವಿಸ್ಮಯಮೇ ೭೦

ವ || ಎಂದು ತೆಱಪಱಿದು ವಸಂತಮಂ ತೆಗೞ್ದು ಮಗುೞ್ದಳ್ಕಿಯದಂ ಮಱೆಯಿಸಲೆಂದಿಂತೆಂದಳ್‌

ಉ || ಪಾದರಿ ಪಂಕಜಂ ಸುರಯಿ ಸಂಪಗೆ ಮಲ್ಲಿಗೆ ಮೊಲ್ಲೆ ಕೈರವಂ
ಕೇದಗೆಯಾದಿಯಾದ ಕುಸುಮಾವಳಿ ನೀನಲರ್ದಿರ್ದೊಡೆಮ್ಮನಾ
ರಾದರಿಪನ್ನರೀ ಸಮಯಮಂ ಕುಡು ನೀನೆಮಗೆಂದೊಡೆಂದುದಂ
ಜಾದಿ ವಸಂತದೊಳ್ ಸಲಿಸಿ ಮಾಣ್ದುದು ತನ್ನ ವಿಕಾಸಲಕ್ಷ್ಮಿಯಂ ೭೧

ವ || ಎಂದುತ್ಪ್ರೇಕ್ಷಿಸುತ್ತುಮಿರೆ ಮತ್ತೊರ್ವಳತ್ಯಭಿನವಸುರಭಿನಿಶ್ವಾಸೆ

ಕಂ || ಪರಿಮಳದಿಂದಮೆ ದಳಮಂ
ವಿರಚಿಸಿದಂ ಸುರಯಿಗಬ್ಜಭವನಲ್ಲದೊಡೋ
ಸರಿಸದ ಕಂಪಿನ ಪೊಂಪುೞಿ
ಮರುಳ್ಚಿ ಮಧುಕರಮನೆಂತು ಸೆಱೆವಿಡಿದಪುದೋ ೭೨

ಕುಸುಮಾಪಚಯಕ್ಕೆಳಸಿದ
ಬಿಸಜಾನನೆಯೆಸೆದಳಂಗಜಂಗಲರಂಬಂ
ಪೊಸನನೆಯನಾಯ್ದು ರತಿ ರಚಿ
ಯಿಸುತಿರ್ದಪಳೆಂಬ ಶಂಕೆಯಂ ಕೊನರಿಸುತುಂ ೭೩

ಬಂದುಗೆಯ ನನೆಗಳೊಳ್‌ತರ
ದಿಂದಂ ಮಲ್ಲಿಗೆಯ ನನೆಗಳಂ ಕೋದೊರ್ವಳ್‌
ಬಂಧಂಬಿಡದಿರೆ ಚಳಕಿಗೆ
ಯಂ ದರಹಸಿತಾಸ್ಯೆ ಮಾಡಿ ತೊಟ್ಟಳ್‌ಮುದದಿಂ ೭೪

ಎಳವೆಱೆಯಂ ಪೊಸಗೇದಗೆ
ಗಳ ಗಱಿಯಿಂ ಸಮೆದು ಚಿನ್ನಪೂಗಳ್‌ತಾರಾ
ವಳಿವೊಲಿರೆ ತುಱುಬಿ ಮಿಱುಗಿದ
ರೆಳವೆಂಡಿರ್‌ಮುಗಿಲನಿೞಿಸಿ ಸೊಗಯಿಸೆ ಮುಡಿಗಳ್‌೭೫

ಚಂ || ಸುರಯಿಯ ಚಿನ್ನಪೂವು ಸುರಹೊನ್ನೆಯ ಕನ್ನವುರಂ ಪೊದೞ್ದ ಕೇ
ಸರದಲರ್ವೊಟ್ಟು ಮೊಲ್ಲೆಯ ಬೞಲ್ಮುಡಿ ಬಣ್ಣದ ಬಣ್ಣದೈಸರಂ
ಸುರುಚಿರಮಪ್ಪ ಸಂಪಗೆಯ ಕಂಕಣಮಂಬುಜನಾಳದುಂಗುರಂ
ತರುಣಿಯರ್ಗಚ್ಚಮಲ್ಲಿಗೆಯರಲ್ಗಳ ಹಾರಮದೊಪ್ಪಿತಾಗಳುಂ ೭೬

ಕಂ || ಕರಕಂಜಂ ಶಿಶಿರದವೋಲ್‌
ವಿರಚಿಸೆ ಪುಷ್ಪಾಪಚಯಮನುಗುರ್ವೆಳಗುಂ ಪೆಂ
ಡಿರ ಕಣ್ಬೆಳಗು ಚೈತ್ರದ
ದೊರೆಯೆನೆ ಕುಸುಮೋಪಚಯಮನಿತ್ತವು ಲತೆಯೊಳ್‌೭೭

ಕಡುಗೆಂಪಿಂದಧರಂ ಪ
ಣ್ಣಡಕೆವೊಲಿರೆ ಕೊರಳ ರೇಖೆಯಿಂ ಪೊಂಬಳೆಯಂ
ಪಿಡಿದಿರವಿಂ ಕೋಮಳಿಕೆಯಿ
ನಡಕೆಯ ಸಸಿಯಂತಿರಸಿಯಳೆಸೆದಳ್‌ನಿಸದಂ ೭೮

ಯುವತಿಯರ್ಗೆ ಚೂತಪಲ್ಲವ
ದವತಂಸಂ ಕಿವಿಗೆ ಸಾರ್ದು ನಲ್ಲರನಗಲ್ದಿ
ರ್ದವರಂ ಸ್ಮರನೆಚ್ಚಪನೆಂ
ದವು ಮಧುಕರಮಧುರರವದಿನುಸಿರ್ವಂತೆಸೆಗುಂ ೭೯

ಮಳಯಜದಣ್ಪಂದಂ ಕೋ
ಮಳೆಯರ ಕುಚಮಂಡಳಂಗಳಂ ಗಜರಾಜಂ
ಗಳವಡೆ ಪಿಡಿದಿರ್ಪಮಳ್ಗೊಡೆ
ಗಳಿವೆನೆ ತೊಳಗಿದುವು ಸುರಭಿಮಾಸೋದಯದೊಳ್‌೮೦

ವನಿತೆ ಮಕರಂದಮಂ ಕೊಸ
ಗಿನ ಕುಸುಮದೊಳಿರಿಸೆ ಕರ್ಣಿಕಾರಕ್ಕೊಲವಿಂ
ವನದೇವತೆ ತನಿಗಂಪಂ
ಜನಿಯಿಸಲೆಂದಿರಿಸಿದಂದಮಂ ನೆನೆಯಿಸುಗುಂ ೮೧

ಒಗೆದ ಕುಚದಲ್ಲಿ ಪೊಸಮ
ಲ್ಲಿಗೆಗಳ ಮುತ್ತುಗಳ ಹಾರಂ ರಮಣಿ ಸಮಂ
ಬಗೆದಿಕ್ಕೆ ಮಿಕ್ಕು ಚೆಲ್ವಿಂ
ನಗುವಂತವನರ್ದುವಂದು ವಿಚಕಿಳಮುಕುಳಂ ೮೨

ಬೀಸುವ ತೆಂಬೆಲರ್‌ಕೊಂಬಿಂ
ದೀಸುವ ಶೆಪ್ಪಮನೆ ಪೋಲೆ ಕಂಪಂ ತನ್ನಿಂ
ದೀಸುವಲರ್ದಲರ ಕಂಪಿನೊ
ಳೀಸುವವೋಲ್‌ಮೆಲ್ಲನಂದು ಬಂದುದು ಬನದೊಳ್‌೮೩

ಅಲರ್ವಚ್ಚಮನಚ್ಚರಿಯೆನೆ
ಜಲಜಾಕ್ಷಿಯರಿಟ್ಟು ನೆಟ್ಟನೊಲವಿಂ ತಮಗ
ಗ್ಗಲಿಸಿದ ಚೆಲ್ವಿಂದೆ ಲತಾ
ಲಲಿತಾಂಗಿಯರೆಂಬ ಪೆಸರಿನಸದಳಮೆಸೆದರ್‌೮೪

ವ || ಅಂತು ತಮ್ಮ ಬಗೆಗೆ ವಂದಳಂಕಾರಕ್ಕಾಧಾರಮಾದ ಸಾರಭೂರುಹಂಗಳಂ ಮಚ್ಚಿ ಬಿಚ್ಚಳಿಸಿ ಇಚ್ಚೆಗೆ ವಂದಲರ್ವಚ್ಚಮನಚ್ಚರಿ ಪುಟ್ಟಿ ತೊಟ್ಟು ಚಿತ್ತಜನ ಚಿತ್ತಮನಲರ್ಚುತ್ತುಂ

ಚಂ || ಇದು ಕಳಕಂಠನಾದಮಿದು ಕಾಮಿನಿಯರ್ಕಳ ಗೇಯನಾದಮಿಂ
ತಿದು ಕಳಹಂಸಯಾನಮಿದು ಕಾಮಿನಿಯಜರ್ಕಳ ಮಂದಯಾನಮಿಂ
ತಿದು ನವಪದ್ಮಗಂಧಮಿದು ಸೌಂದರಿಯರ್ಕಳ ವಕ್ತ್ರಗಂಧಮಿ
ನ್ನಿದಱಿವನ್ನರಿಲ್ಲೆನಿಸಿದರ್‌ವನಕೇಳಿಯೊಳಾ ಲತಾಂಗಿಯರ್‌೮೫

ವ || ಅಂತು ವನಕೇಳೀಪರಿಶ್ರಮಸಮನ್ವತೆಯರ್‌ಜಳಕೇಳೀಲೀಲೆಯಂ ಬಯಸುತ್ತು ಮಿರ್ಪುದುಮಿತ್ತಲ್‌

ಉ || ಕಳಕಂಠಧ್ವನಿ ಪಂಚಮಸ್ವರಮದಂ ವೀನಾಪ್ರವೀಣಾಂಗನಾ
ವಳಿಯಾಗಳ್‌ಶ್ರುತಿನಿಶ್ಚಯಕ್ಕೆಳಸಿ ಮೆಲ್ಪಿಂ ಬಾಜಿಸುತ್ತುಂ ಮನಂ
ಗೊಳೆ ಪಾಡುತ್ತಿರೆ ತಂತ್ರಿ ಗಾತ್ರಮೆರಡುಂ ಸಮ್ಮೇಳಮಂಬೆತ್ತುವೀ
ಗಳೆನುತ್ತುಂ ಪತಿ ಮಚ್ಚಿ ಬಿಚ್ಚಳಿಸಿದಂ ನಾನಾಕಳಾಕೋವಿದಂ ೮೬

ವ || ಅಂತು ಚಕ್ರವರ್ತಿ ಮುಚ್ಚುತ್ತುರ್ಮಿರ್ಪುದುಮಾ ಪ್ರಸ್ತಾವದೊಳ್‌

ಚಂ || ಅನುಪಮಪದ್ಮವಕ್ತ್ರೆಯ ನವೋತ್ಪಳನೇತ್ರೆಯ ಪುಷ್ಪಮಂಜರೀ
ಸ್ತನಿಯ ಲತಾಂಗಿಯಪ್ಪ ವನಲಕ್ಷ್ಮಿಯ ಯೌವನಲಕ್ಷ್ಮಿ ದೇವ ನಿ
ನ್ನನುಭವಸೌಖ್ಯದಿಂದೆ ಸಫಳಂ ಬಿಜಯಂಗೆಯವೇೞ್ಕುಮೆಂಬ ತ
ದ್ವನಿತೆಯ ದೂತನಂದದೊಳೆ ಬಂದುದು ನಂದನಮಂದಮಾರುತಂ ೮೭

ವ || ಅಂತು ಬಂದಮಂದಮೆನಿಪ ರಾಗಮನೀವ ಪರಾಗಮಂ ಸ್ತುತ್ಯಮೆನಿಪ ಶೈತ್ಯಮನಲಭ್ಯಮೆನಿಪ ಸೌರಭ್ಯಮನೋಲಗಿಸಿ ತನ್ನ ಗುಣಕ್ಕನುಚರಂಗಳೆನಿಸಿದ ಚಂಚರೀಕಂಗಳಿಂ ಬಿನ್ನವಿಸುವ ಮಂದಾನಿಳನ ಮಾತಂ ಮನ್ನಿಸಿ

ಚಂ || ಬಿಡದೆಡಗೆಯ್ಯೊಳೊಪ್ಪೆ ಮಱಿದುಂಬಿಯನಾಂತಲರ್ಗೊಂಬು ಚಿತ್ತಮಂ
ಪಿಡಿಯೆ ಪೊದೞ್ದ ಮಲ್ಲಿಗೆಯಲರ್‌ಬಲಗೆಯ್ಯೊಳುದಾತ್ತಚೈತ್ರನಂ
ತೊಡವರುತೊಪ್ಪೆ ನರ್ಮಸಚಿವಂ ರತಿಯಂ ಸತಿ ಪೋಲೆ ಮೂರ್ತಿಯಂ
ಪಡೆದ ಮನೋಜನಂತೆ ಡೆತಂದನಿಳೇಶ್ವರನಾ ವನಾಂತದೊಳ್‌೮೮

ವ || ಆಗಳಶೇಷಭಾಷಾವಿದುರವಿದೂಷಕನಿಂತೆಂದಂ

ಚಂ || ಜಡಮೆನಿಸಿರ್ದ ಮೇಘಸಮಯಂ ನಿಜಜೀವನಮಂ ಲತಾಂಗಿಗಿ
ತ್ತೊಡಮಲರ್ದೊಪ್ಪದೂರ್ಜಿತಕಳಾಧರಮೂರ್ತಿ ವಸಂತಮಿಯದಿ
ರ್ದೊಡಮಲರ್ದೊಪ್ಪುತಿರ್ದುವು ಲತಾಂಗಿಯರೀವನನೊಲ್ಲದಿಚ್ಛೆಯೊಳ್‌
ನಡೆವನನೊಲ್ದು ಮನ್ನಿಸುವೆಂಬುದನಿಂಬೆನೆ ಸೂಚಿಪಂದದಿಂ ೮೯

ವ || ಆಂತು ವಸಂತವರ್ಣನಾಪ್ರಸ್ತಾವಮಂ ವಿಸ್ತರಿಸಿ ಮತ್ತಮಿಂತೆಂದಂ

ಕಂ || ಇಂದೋಳಗೀತದಾಗರ
ಮಿಂದುವಿನ ವಿಳಾಸಮುಖಿಳಲತೆಗಳ ಕಾಂತಂ
ಸುಂದರಿಯರ ಸುರತಸುಖಂ
ಬಂದುದು ಮಧುಮಾಸಮತನುವಿಭವಾವಾಸಂ ೯೦

ಎಳಮಾವುಗಳೊಡನಿಳೆಗಂ
ಪುಳಕಾಂಕುರಮೊದವೆ ಮಳಯರುಹಪರಿಮಳಂ
ತಳೆದು ಮಳಯಾನಿಳಂ ಬಂ
ದೆಳಸುತ್ತಿರೆ ಸುರಭಿಮಾಸದುದು ಚೈತ್ರಂ ೯೧

ಚಂ || ಸ್ಮರಶಶಿಯಿಂದಮೊಂದಿ ಶಶಿರಶ್ಮಿಶರದ್ಗುಣಮಂ ನಿದಾಘಮಂ
ತರೆ ತಮಗಂಬುಸೇಚನದೆ ವೃಷ್ಟಿಯನಂಬುಜಪತ್ರವೀಜನೋ
ತ್ಕರದೊಳೆ ಮಾಗಿಯಂ ರಿಸುತುಂ ಋತುಸಂಕರಮಾಗೆ ಮಾಡಿದರ್‌
ವಿರಹಿಗಳಿಂತಿದಚ್ಚರಿ ವಸಂತದೊಳಂ ಶಿಶಿರೋಪಚಾರಮಂ ೯೨

ವ || ಅಂತು ವಸಂತವಿಭವಮಂ ವ್ಯಾವರ್ಣಿಸಿಯದರ್ಕೆ ಮಂಡನಮಾಗಿ ಬಂದ ಮಾಕಂದಮನಿಂತೆಂದಂ

ಉ || ಕಳಕಂಠಾಖ್ಯಾನಮಂ ಕೋಕಿಳಕೆ ಕಳಿಕೆಯಿಂ ಮಾಡಿ ಮತ್ತಂ ವಸಂತ
ಕ್ಕೆ ಲತಾಂತಶ್ರೇಣಿಯಿಂದಂ ಸುರಭಿಸಮಯಮುದ್ಯನ್ಮಧುವ್ರಾತದಿಂದಂ
ವಿಳಸಚ್ಟ್ರೀಮಾಥವಂ ಪಲ್ಲವಕುಸುಮಪಳಾನೇಕವರ್ಣಂಗಳಿಂ ಕೆ
ಯ್ಕ್‌ಒಳಿಸುತ್ತುಂ ಚೈತ್ರಮೆಂಬೀ ಪೆಸರಿನಸದಳಂ ಕಣ್ಗೆ ವಂದತ್ತು ಚೂತಂ ೯೩

ಮ || ತಳಿರಿಂ ಮಂಗಳಗೇಹಮಚ್ಚನನೆಯಿಂ ಭೂಷಾಗೃಹಂ ಪುಷ್ಪಸಂ
ಕುಳದಿಂ ಕಾಮನ ಶಸ್ತ್ರಶಾಲೆ ಮಿಡಿಯಿಂ ಭಂಡಾರಮಿರ್ಪಾಲಯಂ
ಫಳದಿಂ ಸಿದ್ಧರಸಪ್ರಪೂರ್ಣಕಳಶಸ್ಥಾನಂ ರುವತ್ಕೋಕಿಳಾ
ವಳಿಯಿಂದೋಲಗಸಾಲೆಯೆಂಬ ತೆಱದಿಂ ಚೆಲ್ವಾಯ್ತು ಚೂತದ್ರುಮಂ ೯೪

ಉ || ಕಾಮನ ವೀರಮಂಕುರಿಸುತ್ತಿರೆ ಭೂಮನೋಜ ತೇ
ಜೋಮಯಮಾಯ್ತು ಕೆಂದಳಿರ್ಗಳಿಂ ತುಱುಗುತ್ತಿರೆ ಇತ್ತಜನ್ಮನನು
ದ್ದಾಮಯಶಂ ವಿಶೇಷತರಮಾದುದು ಪುಷ್ಟಿತಮಾಗೆ ಕಂತು ನಿ
ಸ್ಸೀಮನೋರಥಂ ಸಫಳಮಾಯ್ತು ಫಳಾನ್ವಿತಮಾಗೆ ಮಾಮರಂ ೯೫

ಕಂ || ಶ್ರುತಿಸುಭಗರವದ್ವಿಜಸಂ
ತತಿಯಿಂದಂ ಸಾಮರುಚಿರ ಶಾಖೆಗಳಿಂದ
ನ್ವಿತಮೆನಿಸಿ ರಂಜಿಕುಂ ರತಿ
ಪತಿಸರ್ವನಮಸ್ಯದಂದದಿಂ ಮಾಕಂದಂ ೯೬

ಎಳಗಿಳಿಯ ತುಂಡಮಂ ಕೆಂ
ದಳಿಕೆಯಿದೆಂದೆಳಸಿ ಕೋಕಿಳಂ ಕರ್ದುಕಿತ್ತಂ
ತೆಳವೆಯೊಳಱಿವಕ್ಕುಮೆ ಸಂ
ಚಳಿಸುವ ಪರಮಪುಷ್ಪಪಲ್ಲವಗ್ರಾಹಕದೊಳ್‌೯೭

ವ || ಅಂತು ಚೂತಕುಜಾತಮಂ ಸಮವೇತಮಪ್ಪ ಮಾತುಗಳಿಂ ಪೊಗೞ್ದು ಚೂತವಲ್ಲ ಭನ ಮನೋವಲ್ಲಭೆಯಪ್ಪ ಮಲ್ಲಿಕಾವಲ್ಲರಿಯ ಸಮುಲ್ಲಸಿತ ಕುಸುಮಗಳಂ ನೋಡಿ

ಚಂ || ಕುಸುಮಶರಾಸ್ತ್ರಮಂ ಸಸಿಯ ಸಾಣೆಯೊಳೀ ಮಧುವೆಂಬ ಕಮ್ಮರಂ
ಮಸೆಯಲೆವೇಡಿ ತೀಡಿದನೊ ಮುನ್ನೆ ಪಸುರ್ಪಿನೊಳೆಂಬವೋಲ್‌ಪಸು
ರ್ಪೆಸೆದುದು ಮುಂ ಬೞಿಕ್ಕೆ ಮಸೆದಂತಿರೆ ಬೆಳ್ಪೆಳಸಿತ್ತು ಕಂಪನೆ
ಣ್ಗೆಸೆಗಮಲಂಪಿನಿಂ ಪರೆಯ ಚೆಲ್ಲವು ಮಲ್ಲಿಗೆಯೊಳ್‌ಮಹೀಪತೀ ೯೮

ವ || ಎಂದು ತನ್ನ ಮಚ್ಚೞಿದು ಬಿಚ್ಚಳಿಸಿದ ಚತುರವಚನವಿಚಕ್ಷಣಂಗಾ ಕ್ಷಣದೊಳೆ ಮಚ್ಚುಗೊಟ್ಟೆಲ್ಲಾ ಮೆಯ್ಯಿಂ ಮೆಚ್ಚಿಸಿದ ಮಾಕಂದಕ್ಕೆ

ಚಂ || ಇದು ತಳಿರೊಂದುಲೀಲೆಗಿದು ನಿನ್ನಯ ಬಲ್ನನೆಯೊಂದು ಲಕ್ಷ್ಮಿಗಿಂ
ತಿದು ಕುಸುಮಂಗಳೊಂದೆಸಕಕಿಂತಿದು ಕಾಯ್ಗಳದೊಂದು ಕಾಂತಿಗಿಂ
ತಿದು ಪೊಸಪಣ್ಗಳೊಂದುರಸಮಷ್ಟಿಗೆನುತ್ತುಮೆ ಚಕ್ರವರ್ತಿ ಸ
ಮ್ಮದದೊದವಿಂದೆ ಚೂತತರುಗಿತ್ತನಶೇಷವಿಭೂಷಣಂಗಳಂ ೯೯

ಕಂ || ಪಾದರಿ ವಸಂತನೊಸೆದಿ
ರ್ಪಾದರಿಸುವ ರಮಣಿಯಲ್ಲದಂದೇಕೆಯೊ ಮೇ
ಲಾದ ಲತೆಗಿನಿತು ಸಿರಿಯಿ
ಲ್ಲಾದಮೆನುತ್ತದನೆ ನೋಡಿದಂ ನೃಪತಿಳಕಂ ೧೦೦