ಚಂ || ಸ್ಮರರಿಪು ದರ್ಪಕಂಗಿದುವೆ ಕೇದಗೆ ಕೈಪಿಡಿಯೆಂಬ ಕೋಪದಿಂ
ಪರಿಹರಿಸಿರ್ಪನುಂತಿದಱೆಸಳ್ಗಳ ಚೆಲ್ವಿದಱೊಂದು ಗಂಧಬಂ
ಧುರತೆಯೊಆವ ಪೂವುಗಳೊಳುಂಟದನೇೞಿಸುವಲ್ಲಿಗೆಂದು ನಿಂ
ದರಸನದಂ ಮುಂದಂಬೆರಸು ಬಣ್ಣಿಸಿದಂ ಕವಿರಾಜಶೇಖರಂ ೧೦೧

ಪರಿಮಳಕೀ ಮಧುವ್ರತಮೆ ಪಾಯ್ದೊಡೆ ಕಾಯ್ಗುಮನಂಗನೆಂದದಂ
ಪೊರೆಯಲೆವೇಡಿ ಮಾಡಿದನೆಸಳ್ ಪುದಿದಿರ್ಪವೊಲೆಯ್ದೆ ಕಂಟಕಂ
ಬೆರಸು ಬಸಂತನೆಂಬ ತೆಱದಿಂದೆಸೆದಿರ್ದಪುದೆಂದು ನಿಂದು ಭೂ
ವರವಿಭು ಮಚ್ಚಿ ಬಿಚ್ಚೞಿಸಿದಂ ಸ್ಮಿತಕೇತಕಿಯಂ ಕೃತೀಶ್ವರಂ ೧೦೨

ಕಂ || ಸ್ವೀಕೃತರಾಗಂ ರಾಗಮ
ನಾ ಕಂದರ್ಪಂಗೆ ಪಡೆಗದುಚಿತಂ ವಿದಿತಾ
ಶೋಕಮೆನಿಸಿರ್ದು ವಿರಹಿಗೆ
ಶೋಕಮನೊದವಿಪುದಿದನುಚಿತಂ ಪಲ್ಲವಿತಂ ೧೦೩

ತಳಿರ್ದೊಂಗಲನುಟ್ಟಲರ್ದಲ
ರ್ಗಳ ಗುಂಜೆಯ ಭೂಷಣಂಗಳಂ ತೊಟ್ಟು ಮನಂ
ಗೊಳಿಸಿರ್ದಶೋಕಲತೆ ರುವ
ದಳಿಮಿಳಿತಂ ಪಾಡುತಿರ್ಪ ಬೇಡಿತಿಯೆನಿಕುಂ ೧೦೪

ಪಂಬಲಿಸಿ ಪಾಯ್ದ ಮಧುಪಕ
ದಂಬಂ ನವಕರ್ಣಿಕಾರಕುಸುಮದೊಳೆನಸುಂ
ಚೆಂಬೊನ್ನ ಬಟ್ಟಲೊಳ್‌ರತಿ
ತಿಂಬಿದ ಕತ್ತುರಿಯ ತೆಱನನುಱುಸೆಱೆವಿಡಿಗುಂ ೧೦೫

ವ || ಎಂದದಱ ಮೆಯ್ಸಿರಿಯಱಿದು ಪೊಗೞ್ದ ಜಗತೀವಲ್ಲಭಂಗಾ ಸಮಯದೊಳ್‌ಸಮಯಂಬಡೆದು ಮಚ್ಚುಗುಡುವಂತೆ

ಮ || ಬರೆ ಭೂಪಂ ವನದೇವಿಯರ್‌ಪದೆಪಿನಿಂದೆಲ್ಲರ್ಗಮಭ್ಯಾಗತಂ
ಗುರುವೆಂದರ್ಘ್ಯಮನಿತ್ತನರ್ಘ್ಯಮಣಿಯಂ ಪ್ರಸ್ತುತ್ಯವಸ್ತ್ರಂಗಳಂ
ನಿರವದ್ಯಾಮೃತ ಹೃದ್ಯಪಕ್ವಫಳಮಂ ದಿವ್ಯಾನುಲೇಪಂಗಳಂ
ಧರಣೀಶಂಗೆ ಮನಃಪ್ರಮೋದದೊದವಿಂದಿತ್ತರ್‌ಗುಣೋದ್ಯುಕ್ತೆಯರ್‌೧೦೬

ವ || ಅಂತು ವನದೇವತೆಯರ್‌ಸಂಭಾವಿಸಿದಭ್ಯಾಗತಿಯುಮಂ ವನಲಕ್ಷ್ಮಿ ಯೋಲಗಿಸಿದ ಸರಸಕಿಸಲಯಕುಸುಮಫಳಾನೀಕಂಗಳುಮಂ ಕೆಯ್ಕೊಳುತ್ತುಂ ಸಂತುಷ್ಟಚಿತ್ತನಾದ ಚಕ್ರವರ್ತಿ ಜಳಕ್ರೀಡೆಯಾಡುವ ಖೇಟಕುೞಿಯ ಚೆಲ್ವನೊಳಕೊಂಡ ಸರೋಜಷಂಡಮಂ ಕಂಡನದೆಂತ ಪ್ಪೊಪ್ಪಮಂ ತಳೆದಿರ್ದುದೆಂದೊಡೆ

ಕಂ || ವರ ನೃಪತಿಯಂತೆ ವಸುದಾ
ಭರಣಂ ಪ್ರಾಸಾದದಂತೆ ಕುಮುದಾಕೀರ್ಣಂ
ಧುರದಂತರಣ್ಯದಂತಿರೆ
ಶರಭಾಕೀರ್ಣಂ ಸರೋವರಂ ಕರೆಮೆಸೆಗುಂ ೧೦೭

ಮ || ವರಕಾಂತಾಮುಖದಂತೆ ಸಸ್ಮಿತಸರೋಜಶ್ರೀವಿಳಾಸಂ ದ್ವಿಜೋ
ತ್ಕರಕಾಂತಂ ಪ್ರಚುರಪ್ರಸಾದ ಹಿತಂ ಕಿಂಜಲ್ಕ ಸೀಮಂತ ಭಾ
ಸುರಮ್ಮುನ್ಮತ್ತಮಧುಪ್ರವತಪ್ರಿಯತರಂ ಶ್ರೀರಾಜಹಂಸಾವಳೀ
ಪರಿಸೇವ್ಯಂ ಮಧುರಾಮೃತಂ ಸೊಗಯಿಕುಂ ಶ್ರೀಪದ್ಮಪದ್ಮಾಕರಂ ೧೦೮

ವ| ಎಂದದಱ ಸೌಂದರ್ಯಮಂ ರಾಜಹಂಸಂ ಪ್ರಶಂಸೆಯಂ ಮಾಡುತ್ತುಂ ತನ್ನ ವಿನೋದಕ್ಕನುರಕ್ತೆಯಪ್ಪ ರಕ್ತೆಯನೆಯ್ದೆವರ್ಪುದುಮಾ ಪ್ರಸ್ತಾವದೊಳ್‌

ಕಂ || ನೀರ್ವೂಗಳ ಪರಿಮಳಮಂ
ಪೀರ್ವಳಿಗಳ ಕಳಕಳಂಗಳೊಗೆದುವು ನದಿಯೊಳ್‌
ನೇರ್ವಡೆ ಮಕರಪತಾಕನ
ದುರ್ವಾರಜಯಪ್ರಶಸ್ತಿಯಂ ಪಾಡುವವೋಲ್‌೧೦೯

ಉ || ಭೂರಮಣಂ ಮಣಿಪ್ರಕರಮಂ ನದಿ ಸಿಂಧುಸಮಾಖ್ಯೆಗಾಗಳಾ
ಧಾರಮೆನಿಪ್ಪಿನಂ ಕೆದಱಿ ಮಿಶ್ರಿತ ವಿಶ್ರುತ ಯಕ್ಷಕರ್ದಮೋ
ದಾರ ರಸಪ್ರಸಂಗಪರಿಶೋಭಿತ ತುಂಗತರಂಗದಿಂದೆ ಶೃಂ

ಗಾರದೀವಿಳಾಸಮನೆ ತಾಳ್ದಿರೆ ರಕ್ತೆ ವಿನೋದತತ್ಪರಂ ೧೧೦

ವ || ಅಂತು ನಿಜಾಂತರಂಗಮಂ ಪೋಲೆ ನದೀತರಂಗಮಂ ಕಸ್ತೂರಿ ಕರ್ಪೂರ ಕಾಶ್ಮೀರ ಕಾಳಾಗರುವಿಂದನುರಾಗಿಯಾಗೆ ಮಾಡಿ

ಕಂ || ನೀರಾಟಕ್ಕಾದರದಿಂ
ದೈರಾವತಮಿಂದ್ರಸಿಂಧುವಂ ಪುಗುವವೊಲು
ರ್ವೀರಮಣನಿಂದ್ರವಿಭವಾ
ಧಾರಂ ಪೊಕ್ಕಂ ಪ್ರಸನ್ನ ಗುಣಸಂಪನ್ನಂ ೧೧೧

ಪರವಾಹಿನಿಯ ಮಹತ್ವಂ
ಸ್ಥಿರತೇಜೋನಿಧಿಯ ಸನ್ನಿಧಿಯೊಳಿರದೆಂಬಂ
ತಿರೆ ದೇವೀಪ್ರೇರಣೆಯಿಂ
ಪರವಾಹಿನಿಯಾದುವಾಗಳೂರುದ್ವಯಸಂ ೧೧೨

ವ || ಅಂತು ಪೊಕ್ಕು ಮಹೀತಳಪತಿ ತಮ್ಮ ಶಂಕೆಯಂ ಕಳೆವುದುಮವನಿಪನ ಹೃದಯಮನೊಳಪುಗುವಂತೆ ನದೀಹೃದಯಮಂ ಮೃಗನಯನೆಯರ್‌ಪುಗಲೊಡನೆ

ಕಂ || ಶೃಂಗಾರವಾರಿನಿಧಿಯನ
ನಂಗನೃಪಂ ಸೇತುಗಟ್ಟಿದಂತೆಸೆಗುಂ ವಾ
ರಾಂಗನೆಯರ ಕುಚಗಿರಿಯ ಬೆ
ಡಂಗಿಡಿದಿರೆ ಮೃಗಮದಾಂಬುಸಂಭೃತನದಿಯೊಳ್‌೧೧೩

ಸರಸಿರುಹದೆ ಸತಿಯರ ಮುಖ
ಸರಸಿರುಹಕ್ಕಾಸ್ಯಕಮಳದಿಂ ಪೀನಪಯೋ
ಧರಹತವೀಚೀವಿತತಿಗೆ
ಪರಿಮಳಲೋಭದೊಳೆ ಪರಿದುವಳಿಗಳ ಬಳಗಂ ೧೧೪

ತರುಣಿಯರ ಕುಚದ ಕತ್ತುರಿ
ಪೊರೆದಿರ್ದ ತರಂಗಮಾಳೆಗಳ ಬೞಿಯಿಂದಂ
ಪರಿವಳಿಮಾಳೆಗಳೆಸೆದುವು
ತೆರೆ ತೆರೆಗಳನಟ್ಟುತಿರ್ಪ ತೆಱದಿಂ ನದಿಯೊಳ್‌೧೧೫

ಊರುದ್ವಯಸಂ ದೇವೀ
ಪ್ರೇರಣೆಯಿಂದಾಗಿ ರಕ್ತೆ ನಿಜಸತಿಯರ ಶೃಂ
ಗಾರರಸದಿಂದೆ ಮಗುೞ್ದುಂ
ಪೂರಿಸಿಯುಮಲಂಘ್ಯಮಾದುದವನಿಪನಿಂದಂ ೧೧೬

ವ || ಅಂತು ಪುಣ್ಯನದಿಯನಗಣ್ಯಲಾವಣ್ಯತೋಯದಿಂ ತೀವಿ

ಚಂ || ಜಳರುಹವಕ್ತ್ರೆಯರ್‌ಜಳರುಹೋಪಮಮಂ ಕಳಹಂಸಯಾನೆಯರ್‌
ಸುಲಲಿತಹಂಸಸನ್ನಿಭಮನುತ್ಪಳನೇತ್ರೆಯರುತ್ಪಳಾಭಮಂ
ವಿಳಸಿತ ಚಕ್ರವಾಕಕುಚೆಯರ್‌ಘನಚಕ್ರಸಮಾನಮಂ ಸಮು
ಜ್ವಳಜಳಯಂತ್ರಮಂ ತಳೆದುಕೊಂಡರಿಳೇಶನ ವಾರನಾರಿಯರ್‌೧೧೭

ಕರಿಣಿಗಳೞ್ಕಱೆಂದಮೆ ಕರೀಂದ್ರನ ಮೇಲೆ ಪರಾಗಪುಂಜಪಿಂ
ಜರಿತಜಲಂಗಳಂ ನಿಜಕರಂಗಳಿನಾಂತು ತುಳುಂಕುವಂದದಿಂ
ನಿರುಪಮ ಭದ್ರಲಕ್ಷಣನೃಪಾಲನ ಮೇಲೆ ಸಕುಂಕುಮಾಂಬುವಂ
ಗುರುಕುಚಕುಂಭೆಯರ್‌ಲಲಿತಯಾನೆಯರಾದರದಿಂ ತುಳುಂಕಿದರ್‌೧೧೮

ಉ || ಕುಂಕುಮಪಂಕದಿಂದುದಯಿಪಿಂದುವಿನಂದಮನಪ್ಪುಕೆಯ್ಯ ವ
ಕ್ತ್ರಂ ಕುಡೆ ಕುಂಕುಮಾಂಬುಜಳಯಂತ್ರದಿನಂಗನೆಯೊತ್ತೆ ತತ್ಪ್ರಭಾ
ಳಂಕೃತಲಕ್ಷ್ಮಿಯಂ ನೃಪನ ಹೃತ್ಕುಮುದಂ ಮುದವೇೞೆತಂಗಸ
ಸ್ಯಂ ಕಡುಚೆಲ್ವನೆಯ್ದಿದುದು ನರ್ತಿಸುತಿರ್ದುವು ದೃಕ್ಚಕೋರಿಗಳ್‌೧೧೯

ಕಂ || ಲಲನೆ ಜಲಯಂತ್ರಮಂ ಕುಚ
ಕಳಶದೊಳಿಟ್ಟೊತ್ತೆ ನೃಪತಿಯುರದೊಳ್‌ಘುಸೃಣೋ
ಜ್ವಳರಸಮೆಸೆದುದು ರಾಗಂ
ಬಳೆದಿರೆ ತನ್ನೃಪನ ಮನಮುಮಂ ತೀವುವವೋಲ್‌೧೨೦

ಮ || ಪ್ರಿಯಕಾಂತಾಕುಚಕುಂಭಕುಂಕುಮ ಸುಪಂಕಕ್ಲೇಶದಿಂದಂ ಜಡಾ
ಶಯಮುಮಂ ರಾಗದೊಳೊಂದಿತೆಂದೊಡಬಳಾಸಂಸರ್ಗದಿಂ ಚಕ್ರವ
ರ್ತಿಯ ಚೇತಕ್ಕನುರಾಗಮಪ್ಪುದರಿದೇ ಪೇೞೆಂಬವೋಲ್‌ವಾರಿಕೇ
ಳಿಯೊಳಾದತ್ತು ಸುವರ್ಣಶೃಂಗವಿಳಸತ್ಕಾಶ್ಮೀರನೀರಂಗಳಿಂ ೧೨೧

ವ || ಅನಂತರಂ ಮಹೀಕಾಂತಂ ಶಶಿಕಾಂತಮುಖಜಳಯಂತ್ರಮಂ ತಳೆದುಕೊಂಡು

ಕಂ || ವಾರಾಂಗನೆಯರ ಕಬರೀ
ಭಾರಕ್ಕನುರೂಪಮಪ್ಪ ಕರ್ಪಂ ಕಂಪಂ
ಭೂರಮಣಂ ಪಡೆಯಲ್‌ಕ
ಸ್ತೂರೀ ಪ್ರಸ್ತುತ್ಯಜಳಮನೇನೊತ್ತಿದನೋ ೧೨೨

ಕುಂದನಿಭದಶನೆಯರ ವದ
ನೇಂದುಗೆ ಮುದದಿಂದೆ ಚಂದ್ರಿಕೆಯನಧಿರಾಜಂ
ತಂದೋಲಗಿಸುವ ತೆಱದಿಂ
ಚಂದನಸಮ್ಮಿಶ್ರಜಳಮನೊತ್ತಿದನಾಗಳ್‌೧೨೩

ರಮಣಿಯರ ವಿಮಳಲೋಚನ
ಕುಮುದಕ್ಕೆ ವಿಕಾಸಲಕ್ಷ್ಮಿ ಪಸರಿಸುವಿನೆಗಂ
ಹಿಮಕಳಿತ ಮಳಯರುಹ ತೋ
ಯಮನೊತ್ತಿದನಿಂದುರಶ್ಮಿಯಂ ಸೂಸುವವೋಲ್‌೧೨೪

ಬಾಲೆಯರ ಬಾಹುಲತಿಕೆ ಮೃ
ಣಾಳಕ್ಕೆಣೆ ಕಂಟಕ್ಕೌಘದಿಂದ ಪುದಿದೊಡೆನು
ತ್ತಾಳೋಚಿಸಿ ಭೂಪಂ ಭುಜ
ಮೂಳಕ್ಕೊತ್ತಿದನತೀವ ಹಿಮಯುತಜಳಮಂ ೧೨೫

ವೃತ್ತಸ್ತನಿಯರ ಘನಕುಚ
ಕೊತ್ತಿದ ಜಳಧಾರೆ ಮಮೞ್ದು ತನ್ನಯ ಮೊಗದೊಳ್‌
ತೆತ್ತಿಸಿದೊಡಗಿದು ಕದಪಿಂ
ಗೊತ್ತಿದನತಿಮೃದುವನುಱದೆ ಬಾಧಿಸದವರಾರ್‌೧೨೬

ವೃತ್ತಸ್ತನಿಯರ ಕುಚತಟ
ಕೊತ್ತೆ ನೃಪಂ ಮೃಗಮದಾಂಬುವಂ ಬಗೆಗೊಳಿಕುಂ
ಚಿತ್ತಜಗಜಕುಂಭತಟಾ
ಯತ್ತಾಯತದಾನವಾರಿಧಾರೆಯ ತೆಱದಿಂ ೧೨೭

ಮಳಯಜಮೃಗಮದಕುಂಕುಮ
ಜಳಮಂ ಜಳಜಾತದೆಲೆಗಳಿಂ ಕಟ್ಟಿ ಮನಂ
ಗೊಳಿಸುತೆ ಪೊಟ್ಟಳದಿಂದವಿ
ಚಳನಿಟ್ಟಂ ಕಠಿನಕುಚೆಯರಂ ಚಕ್ರಧರಂ ೧೨೮

ಕರಮಚ್ಚರಿ ಕಾಮಿನಿಯರ
ಗುರುಕುಚದೊಳ್‌ತೊಳಪ ಕದಪಿನೊಳ್‌ಕತ್ತುರಿಯಿಂ
ವಿರಚಿಸಿದ ಪತ್ರಭಂಗಮ
ನರಸಂ ವಿರಚಿಸಿದನೊತ್ತಿ ವಾರ್ಧಾರೆಗಳಿಂ ೧೨೯

ಸೂಸಿದ ಮೃಗಮದಜಳದಿಂ
ಬಾಸೆ ಕುಚಂ ಕರ್ಪನಾಳ್ದು ಕಂರ್ಪಜಯ
ಶ್ರೀಸಂಪತ್ತಂ ಪಡೆದ ವಿ
ಳಾಸಿನಿಯರ ಗರ್ಭಚಿಹ್ನಮೆನೆ ಸೊಗಯಿಸುಗುಂ ೧೩೦

ಜಳಯಂತ್ರದಿಂದೆ ಮೃಗಮದ
ಜಳಮಂ ನೃಪನೊತ್ತೆ ನಾಭಿಮಂಡಳಮೇಂ ಕ
ಣ್ಗೊಳಿಸಿತೊ ಶೃಂಗಾರಸೋ
ವಿಳಾಸಮಂ ತಳೆದು ವಿಮಳಕಮಳಾಸ್ಯೆಯರಾ ೧೩೧

ವಾರಿಯ ಬೞಿಯನೆ ಸವತಿಯ
ತೋರಿದುವೆನಿಸಿರ್ದ ಮೊಲೆಯ ಮೇಲಧಿಪನ ಕ
ಣ್ಣೋರಂತೆ ಪರಿದು ನೆಲಸಿರೆ
ನೀರೊಳಗಿರ್ದುಂ ಬೆಮರ್ತಳೊರ್ವಳ್‌ಮುಳಿಸಿಂ ೧೩೨

ಸವತಿಯ ಗಾಡಿಗೆ ಸೋಲ್ತಾ
ಡುವುದಂ ಮಱೆದೀಕ್ಷಿಸಿನಿಯನಲರ್ಗಣ್ಗಳೊಳಾ
ಡುವ ನೆವದಿಂ ತುೞ್ಕಿದಳಂ
ಬುವನೊರ್ವಳ್‌ತರುಣಿಯರ್ಗೆ ಪುರುಡಿಪುದೆ ನಿಜಂ ೧೩೩

ತುಳ್ಕುವ ಜಳದಿಂ ಮುನ್ನಮೆ
ತುಳ್ಕುವ ಚೆಲ್ಲಕ್ಕೆ ಸೋಲ್ತು ಪೂಗಣೆ ಮನಮಂ
ಪಿಳ್ಕುವರಂ ನಡೆನೀರಿಂ
ತುಕುವುದಂ ಮಱೆದು ಮೊಗಮನಿನನೀಕ್ಷಿಸಿದಂ ೧೩೪

ಮ || ಜನಚೇತೋಮೃಗಮಂ ಸಮಂತಿಸಲೆ ಕೊಂಬಾಗಿರ್ದ ಸೌಭಾಗ್ಯನಂ
ದನಕಂಗೋದ್ಭವನೊಲ್ದು ನೀರೆರೆವ ಚೆಲ್ವಂ ಬೀಱತಾ ಪುಷ್ಪಮಂ
ಡನಸಂಶೋಭಿತ ಕಾಮಿನೀತನುಲತಾನೀಕಂಗಳೊಳ್ ಚಕ್ರವ
ರ್ತಿ ನಿತಾಂತಂ ಜಳಯಂತ್ರದಿಂ ತಳಿಯೆ ಶುಂಭಚ್ಚಂದನಾಚ್ಛಾಂಬುವಂ ೧೩೫

ನಯಸಂಪಲ್ಲತೆಯುಂ ವಸಂತನೃಪನುಂ ಶ್ರೀಕಾಮದೇವಪ್ರತಿ
ಷ್ಠೆಯನೊಪ್ಪುತ್ತಿರೆ ಮಾಡಿ ಮಿಕ್ಕವಭೃಥಸ್ನಾನೋಚಿತೋತ್ಸಾಹದೇ
ೞ್ಗೆಯೊಳಾಳ್ದೋಕುಳಿಯಾಡುವಂತೆ ವನಿತಾಸಂದೋಹಮುಂ ಚಕ್ರವ
ರ್ತಿಯುಮಾಡುತ್ತಿರೆ ಮಾಡಿದತ್ತು ಪದೆಪಂ ವಾಃಕೇಳಿಲೀಲೋದ್ಯಮಂ ೧೩೬

ವ || ಅಂತು ರತಾಂತದೊಳ್ ತನ್ನ ವಿಮಳಾಶಯದೊಳುತ್ಕಳಿಕೆಯಂ ಬಳೆಯಿಸುವಂತೆ ಜಳಕ್ರೀಡಾಂತದೊಳಾ ಜಳಾಶಯದೊಳುತ್ಕಳಿಕೆಯಂ ಕಠಿಣಕುಚಹತಿಯಿಂ ಬಳಯಿಸುತ್ತುಮಿರ್ದ ವೃತ್ತಸ್ತನಿಯರ್ಬೆರಸು ಜಳಕ್ರೀಡೆಯಂ ನಿರ್ವರ್ತಿಸಿ ಪೊಱಮಡಲೊಡನೆ

ಕಂ || ಕದಡಿದ ಕುಂಕುಮದಿಂ ಮೃಗ
ಮದದಿಂ ಮಳಯಜದೆ ಪೊರೆದ ತೆರೆಗಳ್‌ಬಹುವ
ರ್ಣದ ರಂಗವಲಿವೊಲಿರೆ ನದಿ
ಮದನನ ಮಂಗಳ ಗೃಹಾಂಗಣಕ್ಕೆಣೆಯಾಯ್ತೋ ೧೩೭

ವ || ಅಂತುಮಲ್ಲದೆ

ಚಂ || ಮಳಯಜಪಂಕದಿಂ ಮೃಗಮದದ್ರವದಿಂ ಘುಸೃಣಾನುಲೇಪದಿಂ
ವಿಳಸಿತಯಕ್ಷಕರ್ದಮದ ಕರ್ದಮದಿಂ ಘನಸಾರದಿಂ ಮನಂ
ಗೊಳಿಪ ತರಂಗಸಂಗದೆ ತರಂಗಿಣಿ ಕಣ್ಗೆಸೆದಿರ್ದುದಾಗಳು
ಜ್ವಳಿಸುವ ಪಂಚರತ್ನ ರುಚಿಯಿಂ ಪುದಿದಿರ್ದ ಸಮುದ್ರಂದದದಿಂ ೧೩೮

ಕಂ || ಮುಂ ಪೂಸಿದ ಕುಂಕುಮಪಂ
ಕಂ ಪೋದೊಡೆ ರಕ್ತಕಂಜಕಿಂಜಲ್ಕಂ ಮೆ
ಯ್ಯಂ ಪುದಿದಿರೆ ನವಯೌವನ
ಸಂಪನ್ನೆಯರಂದು ಮುನ್ನಿನಂದದಿನೆಸೆದರ್‌೧೩೯

ಚಿತ್ರಿಸಲೆಂದಂಗೋದ್ಭವ
ಚಿತ್ರಕನೊಲವಿಂದಮಿತ್ತ ಪಟವಾಸದವೋಲ್‌
ನೇತ್ರಕ್ಕೆಸೆದಿರ್ದುದು ಶತ
ಪತ್ರಾಕ್ಷಿಯರಂಗದಲ್ಲಿ ಪತ್ತಿದ ದಗುಲಂ ೧೪೦

ವನಕೇಳಿ ಯುವತಿಯೌವನ
ವನಕೇಳಿಗೆ ಸುಜಲಕೇಳಿ ಶೃಂಗಾರನದೀ
ಘನಜಳಕೇಳಿಗೆ ಕಾರಣ
ಮೆನೆ ಮೆಱೆದಂ ಚಕ್ರಿ ತಾಂ ಸಕಲ ಭೋಗಮುಮಂ ೧೪೧

ಮ. ಸ್ರ || ಅರಸಂ ನಾನಾವಿನೋದಪ್ರಿಯನಮಳಜಳಕ್ರೀಡೆಯೊಳ್‌ಮಗ್ನರಾಗಿ
ರ್ದರನುದ್ಯುದ್ರತ್ನನೂತ್ನಾಭರಣ ವಿವಿಧವಸ್ತ್ರಂಗಳಂ ಕೊಟ್ಟು ಶೃಂಗಾ
ರರಸಕ್ರೀಡಾನಿಗಮಗ್ನಾಶಯರೆನಿಸಿ ವರಸ್ತ್ರೀಯರಂ ಕೀರ್ತಿಸುತ್ತುಂ
ಸುರಭೊಜೋದಾರವೃತ್ತಂ ವಿಬುಧಜಮನಃಪದ್ಮಿನೀ ಪದ್ಮಮಿತ್ತಂ ೧೪೨

ಗದ್ಯ

ಇದು ವಿದಿತವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳ ಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳ್‌ವಜ್ರನಾಭಿಚಕ್ರವರ್ತಿಯ ವನಕೇಳೀವರ್ಣನಂ ನವಮಾಶ್ವಾಸಂ