ಕಂ || ಶ್ರೀಲಲನಾಪತಿ ಕೃತಜಳ
ಕೇಳಿವಿಲಾಸಾವಭಾಸಿ ಶಿಬಿರಕ್ಕವನೀ
ಪಾಳಂ ನಡೆತಂದಂ ಸುಖ
ಲೋಲಂ ಕುಸುಮಾಸ್ತ್ರಮೂತಿ ಕವಿಕುಳತಿಲಕಂ ೧
ವ || ಅಂತು ಕುವಳಯವಿಳಸಿತವಿಳೋಕನಜಳಯಂತ್ರದಿಂ ಕಾಂತಿ ಮಳಯರು ಹಜಳಮಂ ತಳಿಯುತ್ತುಮಪೂರ್ವ ಜಳಕೇಳಿಯ ಲೀಲೆಯಂ ಪಾಳಿಸುತ್ತುಂ ಸುತ್ತಲುಂ ಬರ್ಪಬಳಾ ಜನಂ ಬೆರಸು ನಿಜಶಿಬಿರಕ್ಕೆ ಬಿಜಯಂಗೆಯ್ದು ನೂತ್ನರತ್ಗಳಿಂ ಸ್ಥಪತಿರತ್ನಂ ರಚಿಸಿದ ರಾಜಮಂದಿರಮಂ ರಾಜಾಧಿರಾಜಂ ಪುಗುವುದುಂ ನೀರಾಜನವಿಧಾನಕ್ಕಿಂಬಾಗೆ ಚೆಂಬೊನ್ನ ಪರಿಯಣಂಗಳೊಳ್‌ಬೆಳಗಿದ ಮಂಗಳಮಣಿದೀಪಂಗಳ ಬೆಳಗು ನವಯುವತಿಯರ ಕರತಳದ ರಮಣೀಯ ಕೆಂಪಿನಿಂ ಪುದಿದು ಪರಿಕಲಿಸಿದುದೆಂಬಂತೆ ಸಂಜೆಗೆಂಪು ರಂಜಿಸಿತ್ತದಲ್ಲದೆಯುಂ

ಕಂ || ಪಗಲೆಂಬಂಬುಜಮುಖಿಯುಂ
ಗಗನಮಣಿಯುಮೆಳಸಿ ಸಲಿಲಕೇಳಿಗೆ ತಾಮುಂ
ಮಿಗೆ ಪೂಸಿದ ಕುಂಕುಮೆನೆ
ಸೊಗಯಿಸಿದತ್ತಾಗಳೊಗೆದ ಸಂಧ್ಯಾರಾಗಂ ೨

ವ || ಅಂತುಮಲ್ಲದೆಯುಂ

ಕಂ || ತಡೆಯದಿನನಪರಯುವತಿಯೊ
ಳೊಡಗೂಡಲ್‌ಪೋಪ ತೆಱನನಱಿದರುಣಂ ಕೆಂ
ಪಿಡಿದಿರ್ದ ಕಾಂಡಪಟಮಂ
ಪಿಡಿದಿರ್ದವೊಲೆಸೆದುದಂದು ಸಂಧ್ಯಾರಾಗಂ ೩

ಉ || ಆಂ ಬಹುತಾಪಮಂ ಪಡೆದೆನೀ ಸಚರಾಚರಜೀವಸಂಕುಳ
ಕ್ಕೆಂಬ ವಿರಕ್ತಿಯಿಂ ತರಣಿ ಮುನ್ನಿನ ತೀಕ್ಷ್ಣತೆಯಂ ಬಿಸುಟ್ಟು ಲೀ
ಲಾಂಬುಜಲಕ್ಷ್ಮಿ ಪತ್ರಕರಮಂ ಮುಗಿಯುತ್ತಿರೆ ಮೀಱೆ ತಾಂ ಕಷಾ
ಯಾಂಬರಧಾರಿಯಾದನೆನೆ ಸಂಜೆಯನಾಂತಪರಾದ್ರಿಗೆಯ್ದಿದಂ ೪

ಕಂ || ಕೞಕುಳಮಸ್ತಾಚಳದಿಂ
ದಿೞವೆಡೆಗಳೊಳಾಗೆ ರವಿರಥಂ ಕೋಕಂಗಳ್‌
ಚೞಿಯೊಳೆ ರಥಾಂಗವೆಸರಂ
ಕೞಕುಳಮಾಗಿಯೆ ಜಲಕ್ಕನಱಪಿದುವಾಗಳ್‌೫

ಉ || ರೋಚಿಗಳಂ ದಿಶಾಂಬರಮಹೀತಳವರ್ತಿಗಳಂ ಖರಾಂಶು ಸಂ
ಕೋಚಿಸಿ ಪೊರ್ದೆ ಪಶ್ಚಿಮಯೋನಿಧಿಯಂ ಕಮಳಂಬೊಲಾತ್ಮಕಾಂ
ತಾಚಳಲಕ್ಷ್ಮಿ ಪಿಂಗೆ ಮದನಾಗ್ನಿಪರಾಗವಿಳಾಸಭಾಸಿ ಸಂ
ಕೋಚಿಚಿತ್ತಮಂದತುಳಶೋಕಮನಾಂತುದು ಕೋಕಮಾವಗಂ ೬

ಕಂ || ಇನನಗಲಲೊಡನೆ ಮುಗಿವ
ಬ್ಜಿನಿಯೊಳಗೊಳಪೊಕ್ಕು ಮೊಱೆವುದಂ ಮಾಣ್ದಳಿ ಕಾ
ಮನ ಕಣೆಯಮೆರ್ದೆಯನುಱೆನ
ಟ್ಟಿನಿಸುಂ ದನಿಯುಡುಗಿದಂದಮಂ ನೆನೆಯಿಸುಗುಂ ೭

ಉ || ಏವಿರಿದಾದೊಡಂ ಸಿರಿಯದೇವುದಿನಂ ಪ್ರಿಯಕಾಂತೆಯೆಂಬಿದಂ
ಭಾವಿಸದೆನ್ನನೀಗಳನುರಾಗದೆ ಸಂಜೆಯೊಳಿರ್ದನೆಂಬ ತ
ನ್ನೇವದಿನೞ್ತಪಳ್ ಪರಿದುಮಬ್ಜಿನಿಯೆಂಬವೊಲಸ್ತಕಾಲದೊ
ಳ್ಗಾವರಿಸುತ್ತುಮಿರ್ದುದಳಿಸಂಕುಳಮಂಬುರುಹಾನನಂಗಳೊಳ್‌೮

ಕಂ || ಇನನ ಬೞಿಸಲಲೆ ಸಲೆ ಜೀ
ವನಮಂ ಬಿಟ್ಟಿರ್ಪ ವನಜವಧು ನಿಜಪತಿ ನೆ
ಟ್ಟನೆ ಪೋಗೆ ಸಿರಿಯನುೞಿವುದು
ಮನುನಯಮಂ ವಿಧುಗೆ ಮಾಡದುದುಮಚ್ಚರಿಯೇ ೯

ಇನನನುರಾಗದೆ ಸಂಧ್ಯಾಂ
ಗನೆಯೊಳ್‌ನೆರೆದಿರೆ ಇಷಾದಮಂ ತಳೆವವೊಲ
ಬ್ಜಿನಿ ಮೊಗಸಿದಳಿಯನೊಳಕೊಂ
ಡೆನಸುಂ ಮುಗಿದುದು ದಿನಾವಸಾನದೊಳಾಗಳ್‌೧೦

ವ || ಅಂತು ಪಸರಿಸಿದ ಸಂಧ್ಯಾಸಮಯಮನವಂಧ್ಯಮಂ ಮಾಡಲೆಂದು

ಕಂ || ಅಯಜನಕಜಿನೇಂದ್ರಪದ
ದ್ವಯಕ್ಕೆ ಮಣಿಮಕುಟಕಿರಣನೀರಾಜನಮಂ
ಪ್ರಿಯದಿಂದೊಡರಿಸಿ ಸಂಧ್ಯಾ
ನಿಯಮಮನಾ ಚಕ್ರವರ್ತಿ ನಿರ್ವರ್ತಿಸಿದಂ ೧೧

ವ || ಅಂತು ಸಂಧ್ಯಾಸಮಯನಿಯಮಮಂ ವಜ್ರನಾಭಿ ವಜ್ರಾಯುಧನಂದದಿಂ ಜಿನೇಂದ್ರಚಂದ್ರ ಚರಣಾರವಿಂದಮಂ ದಿವ್ಯಾರ್ಚನಾದ್ರವ್ಯಂಗಳಿಂದರ್ಚಿಸಿ ನಿಜಪದಾಂಬುಜ ಸೇವಾಸಕ್ತ ಸಕಳ ಮಕುಟಬದ್ಧ ಮೌಳಿಕೀಲಿತ ಶೋಣ ಮಾಣಿಕ್ಯರಶ್ಮಿಕಾಶ್ಮೀರಾರುಣಿತಪಾದನಾ ಸ್ಥಾನಮಂಡಳ ನಭೋಮಂಡಳಮಂಡನಂ ಮಂತ್ರಿ ಕವಿ ಬುಧಸಮನ್ವಿತಂ ನವಯುವತಿನಯನ ಕುವಳಯಮನಲರ್ಚುತ್ತುಂ ನರೇಂದ್ರಚಂದ್ರಮಂ ಲೀಲೆವೆರಸೋಲಗಂಗೊಟ್ಟಿರೆ

ಚಂ || ಉದಯವಿಶಾಳಶೈಳದ ತಳಮಾಳವನಂ ನವನೀಳರತ್ನಜಾ
ಳದ ರುಚಿ ನೀರಜಾಕರದ ನೀರರುಹಂ ಮುಗಿದಿರ್ದೊಡಿಂದ್ರದಿ
ಙ್ಮದಗಜದಾನಸೌರಭಕೆ ಬಂದೆಱಗಿರ್ದ ಮದಾಳಿಯೆಂಬವೋ
ಲಿದು ಬಗೆಗುಣ್ಮಿ ಪರ್ವಿದುದು ಪೂರ್ವದಿಗಂತಮನಾವಗಂ ತಮಂ ೧೨

ವ || ಅಂತುಮಲ್ಲದೆ

ಕಂ || ದಿಗಧೀಶಕಾಂತೆಯರ್‌ಮಿಂ
ದು ಗಡಾಗಳ್‌ತಂದು ಕೇಶಸಂಸ್ಕಾರಕ್ಕಾ
ವಗಮಾಂತ ಧೂಪವರ್ತಿಯ
ಪೊಗೆ ನೆಗೆದತ್ತೆನಿಸಿ ದೆಸೆಯೊಳೆಸೆದತ್ತು ತಮಂ ೧೩

ಮ.ಸ್ರ || ಒದವಿರ್ದುನ್ಮಾರ್ಗವರ್ತಿತ್ವಮನಖಿಳಪದಾರ್ಥಂಗಳೊಳ್‌ಸಂದ ಸಂದೇ
ಹದ ಕೊರ್ವಂ ಪರ್ವಿಸುತ್ತುಂ ಜನತತಿಗಕಳಂಕಾಗಮದ್ವೇಷಿ ಸೌಖ್ಯ
ಪ್ರದಸಮ್ಯಗ್ದರ್ಶನಶ್ರೀವಿಮಳಿನ ಗುಣಸಂರೋಧಕಂ ತೀವ್ರ ಮಿಥ್ಯಾ
ತ್ವದವೋಲ್‌ಭೀಮಾಂಧಕಾರಂ ಭುವನಭವನಮಂ ತೀವಿತತ್ಯಂತಘೋರಂ ೧೪

ಕಂ || ವರ್ಣವ್ಯವಸ್ಥೆ ವಾಸ್ತವ
ನಿರ್ಣಯಮಕಳಂಕ ಸುಜನವರ್ತನಮಿನಿತುಂ
ದುರ್ಣಯ ನೃಪರಾಜ್ಯದೊಳವ
ಕರ್ಣಿತಮಪ್ಪಂತೆ ತಮದೊಳಾದತ್ತಾಗಳ್‌೧೫

ಶಾ || ದುರ್ವಾರಂ ವಿಪುಳಾಂಧಕಾರಮನಯಾಧಾರಂ ಮಹಾಘೋರಮಂ
ತುರ್ವಿವ್ಯೋಮದಿಶಾಂಬುಧಿಪ್ರಕರ ನಾನಾವಸ್ತುವಿಸ್ತಾರಮಂ
ಪರ್ವಿತ್ತರ್ವಿಸುತುರ್ವಿಕೊರ್ವಿ ಜಗಮಂ ಕೃಷ್ಣತ್ವದಿಂದ ಕೂಡೆ ತಾಂ
ಸರ್ವಂ ಕೃಷ್ಣಮಯಂ ಜಗತ್ತೆನಿಪ ಮಾತೇಂ ತಥ್ಯಮಾಗಿರ್ದುದೋ ೧೬

ಕಂ || ಮರಕತಮಣಿಕುಟ್ಟಿಮದೊಳ್‌
ಪರಪಿದ ಪೂವಲಿಯನಿೞಿಸಿ ತೊಳಗಿದುದಸಿತಾಂ
ಬರ ವಿಪುಳಸ್ಥಳದೊಳ್‌ಸುರು
ಚಿರ ತಾರಾನಿಕರಮಸಮರೋಚಿಃಪ್ರಕರಂ ೧೭

ಬಿತ್ತರದಿಂ ಬೆಳ್ದಿಂಗಳ
ಬಿತ್ತನೆ ತೊಳತೊಳಗಿ ತೊಳಪ ತಾರಗೆಯಿಂ ತಾ
ಳ್ದಿತ್ತದು ಮದನಂಗೆತ್ತಿದ
ಮುತ್ತಿನ ಮಂಡವಿಗೆಯೊಪ್ಪಮಂ ಗಗನತಳಂ ೧೮

ವ || ಅಂತು ಸ್ವೈರಿಣಿಯರ ಸ್ವೈರಾಚಾರಕ್ಕುಪಕಾರಿಯಾಗಿ ಕಾಮಾಂಧಕಾರದಂತೆ ವಿಸ್ತಾರಿಸಿದಂಧಕಾರದೊಳ್‌

ಚಂ || ಮಸುಳ್ದಿರೆ ಕಾಂತಿ ನೀಳಪಟದಿಂ ಮಸಿಗಪ್ಪಡದಿಂದೆ ರತ್ನಮಂ
ಮುಸುಕುವ ಭಂಗಿಯಿಂ ಮುಸುಕನಿಕ್ಕಿದೊಡಂ ನಱುಸುಯ್ಗೆ ಪಾಯ್ದು ಸೂ
ಚಿಸೆ ನಿಜಮಾರ್ಗಮಂ ಮಾಡಿದ ಪೊಗಳನಾಯಳಿಗೊತ್ತುಗೊಳ್ಳದಿ
ತ್ತ ಸತಿಯರೞ್ಕುತುಂ ನಡೆದರಂತೆ ಸಶಂಕಿತರಲ್ತೆ ದೋಷಿಗಳ್‌೧೯

ವ || ಅಂತು ತಮಸ್ಸಮುದಯಂ ಸೂಚೀನಿರ್ಭೇದ್ಯಮುಂ ಸ್ವೈರಿಣೀಹೃದ್ಯಮುಮಾಗಿರೆ

ಶಾ || ದಿಕ್ಕಾಂತಾಧರಪಲ್ಲವಕ್ಕೆ ಬೞಿಕಾ ದಿಕ್ಕಾಮಿನೀಭಾಳಪ
ಟ್ಟಕ್ಕಂ ತಾಂ ಬೞಿಕಾ ದಿಶಾಂಗನೆಯ ಕಾಶ್ಮೀರಾಂಗರಾಗೋಜ್ವಳಾ
ಸ್ಯಕ್ಕೆಯ್ದೆ ಸಮಾನಮಾಗಿ ನಯನಕ್ಕಿಂಬಾಗಿ ಪೂರ್ವಾದ್ರಿಕೂ
ಟಕ್ಕೆೞ್ತಂದನೊಡರ್ಚುತುಂ ಕುವಲಯಕ್ಕಾನಂದಮಂ ಚಂದ್ರಮಂ ೨೦

ವ || ಅಂತುಮಲ್ಲದೆ

ಚಂ || ಸ್ಮರಶಿಖಿಯಂ ವಿಯೋಗಿಹೃದಯಕ್ಕನುರಾಗಮನಾಗಳಾಗಳುಂ
ನೆರೆದೆಸೆದಿರ್ಪ ಕಾಮುಕಜನಾಶ್ರಯಕೊರ್ಮೊದಲೀಯಲೆಂದು ಬಿ
ತ್ತರಿಸಿರೆ ತಾಳ್ದುದೆಂದುದಯ ಶೋಣತೆ ಶೋಭೆಯನೀಯೆ ಪೂರ್ವದಿ
ಕ್ತರುಣಿಯ ಪದ್ಮರಾಗಮಣಿದರ್ಪಣದಂತೆಸೆದಂ ಸುಧಾಕರಂ ೨೧

ಕಂ || ಅಲರ್ವಿಲ್ಲನ ತೇಜೋಮಂ
ಡಲಮೆನೆ ಬಗೆಗೊಂಡು ಮಂಡಳಂ ವಿರಹಿಗಳೊಳ್‌
ತಲೆದೋಱುವ ಧೈರ್ಯಮನದ
ಟಲೆವಿನಮುದಯಿಸಿದನುತ್ಪಳೇಂದ್ರಂ ಚಂದ್ರಂ ೨೨

ಬಳೆದ ತಮಂ ಮಿತ್ರನ ಮಂ
ಡಳಮಂ ಬೆದಱಟ್ಟೆ ಮುಳಿದ ರಾಜನ ಕೋಪಾ
ನಳಮುಗುೞ್ವ ತೋರಗಿಡಿಯೆನೆ
ತೊಳಗಿದುವರುಣಾಂಶುರುಚಿರತಾರಾನಿಕರಂ ೨೩

ವೃತ್ತಮುಮಖಿಳ ಕಳಾಸಂ
ಪತ್ತಿಯುಮತಿ ವಿಶದಮೆನಿಕುಮಾಶೆಯನುೞದಂ
ದುತ್ತಮರ್ಗೆಂದಱಿಪುವವೊಲು
ದಾತ್ತ ವಿಧುವುೞಿದು ಬೞಕೆ ಧವಳತೆವೆತ್ತಂ ೨೪

ಮ.ಸ್ರ || ಚಲದಿಂದಂ ಸಾಂದ್ರಚಂದ್ರದ್ಯುತಿಗಳುಗಿವುತುಂ ಕೊರ್ವಿ ಪರ್ವಿರ್ದ ಬಲ್ಗ
ೞಲೆಯಂ ಬೆನ್ನಟ್ಟೆ ಮುನ್ನಂಬರಮನುೞದು ತೋರ್ಪಾಶೆಯೊಳ್‌ನಿಲ್ಲದೆಲ್ಲಾ
ನೆಲನಂ ಬಿಟ್ಟೋಡಿ ಬೆಟ್ಟಂಗಳ ಗುಹೆಗಳನಾ ಕುಂಜದೇಶಂಗಳಂ ತಾಂ
ತಲೆದೋಱಲ್ಕೞ್ಕೆ ಪೊಕ್ಕುಂ ಮಿಸುಗದು ಶಶಿಕಾಂತೇಭದಂತಾಂಶುವಿಂದಂ ೨೫

ಮ || ಅಮೃತಾಂಭೋನಿಧಿಯಂ ಶಶಾಂಕಘಟಸಂಭೂತಂ ಭರಂಗೆಯ್ದು ಪೀ
ರ್ದುಮದಂ ಮತ್ತುಗುೞ್ವಂತೆ ಚಂದ್ರಮಣಿಧಾರಾಯಂತ್ರದಿಂ ವಾರಿಪೂ
ರಮನಾ ಚಂದನಸಾರಸಂಸ್ಕೃತಮನಾದಂ ಪೂರ್ವದಿಕ್ಕಾಂತೆ ದಿ
ಗ್ರಮಣೀಜಾಳದ ಮೇಲೆ ಸೂಸುವವೊಲಾ ಚಂದ್ರಾಂಶುವೇಂ ಸೂಸಿತೋ ೨೬

ಚಂ || ಕುವಳಯದಂದದಿಂ ಕುವಳಯಂ ಸಿರಿಯಂ ಕರವೊಲ್ದು ತಾಳ್ದೆ ಕೈ
ರವದೆಸಳಂದದಿಂ ದೆಸೆ ವಿರಾಜಿಸೆ ರಾಜಿಪ ಲಕ್ಷ್ಮಿಗೆತ್ತಿ ತೋ
ಱುವ ಧವಳಾತಪತ್ರದವೊಲೊಪ್ಪೆ ನಭಂ ಪರಿಪೂರ್ಣಮಂ ಸುಧಾ
ರ್ಣವಮೆನೆ ಚಂದ್ರನಪ್ಪಿದವೊಲಿರ್ದುದು ಚಂದ್ರಿಕೆ ಸಾಂದ್ರಭಾವದಿಂ ೨೭

ಉ || ಅಂಗಜಭೂಭುಜಂಗೆ ವಸುರಾಶಿ ಸುಕೋಶಮತುಚ್ಛಮಚ್ಛವೆ
ಳ್ದಿಂಗಳೆ ನಾಡು ಮಂಡಳಮೆ ಕೋಟೆ ಕಳಾಳಿಯೆ ಸೈನಿಕಂ ಪ್ರಧಾ
ನಂ ಗಡ ತಾಂ ಪ್ರಸನ್ನತೆ ಸಹಾಯನೆನುತ್ತಿರೆ ತನ್ನ ಪೆಂಪು ಸ
ಪ್ತಾಂಗಸಮೃದ್ಧಿಯಂ ಪಡೆಯೆ ಕಣ್ಗೆಸೆದಂ ನಿಸದಂ ಸುಧಾಕರಂ ೨೮

ಮ.ಸ್ರ || ಮಸೆದು ಮನೋಜನಸ್ತ್ರಮನಂಪಿನೊಳೇಱಿಸಿ ಪುಷ್ಟಚಾಪಮಂ
ಪೊಸೆಯಿಸಿ ಶೌರ್ಯಮಂ ಮೆಱೆದು ಮೈಮೆಯನಾಗಿಸಿ ರಾಗಮಂ ನಿಮಿ
ರ್ಚಿಸಿ ಜಸಮಂ ಪೊರೞ್ಚೆ ವಿರಹಾರ್ತರ ಮೂರ್ತಿಚಿತ್ತಲ
ಱಸಿ ಕರದಿಂದಮಿಂದುವೆಸೆದಂ ನಿಸದಂ ಕುಸುಮಾಯುಧಪ್ರಿಯಂ ೨೯

ಚಂ || ಸಮಧಿಕಕಾರ್ಮುಕಮನೇಱಸೆ ಪುಷ್ಪಶರಕ್ಕೆ ಕೊರ್ಪನಿ
ತ್ತಮೃತಕರಂ ಕರಪ್ರಕರದಿಂ ವಿರಹಾರ್ತರ ಮೂರ್ತಿಚಿತ್ತಲ
ಕ್ಷ್ಯಮನುಱೆ ತೋಱೆಮಿತ್ರತೆಗೆ ಪೂಗಣೆಯಂ ತಿರುವಾಯೊಳಿಟ್ಟುತೊ
ಟ್ಟಮರೆ ಮನೋಜನಾರ್ದಿಸುವ ತಾಣದೊಳಂ ನೆರಮಾದನೂರ್ಜಿತಂ ೩೦

ಉ || ಕಾಡೆ ಮನೋಭವಂ ವಿರಹಿಯಂ ಸಕಳೋರ್ವಿ ಸುಧಾಂಶುವಿಂದೆ ತೇಂ
ಕಾಡೆ ಚಕೋರಮುಂ ಯುವತಿಲೋಚನಕೈರವಮುಂ ಪ್ರಮೋದದಿಂ
ಕೂಡೆ ಶಶಾಂಕಕಾಂತಮಣಿಭಿತ್ತಿಗಳಂತೆ ದಿಶೋರು ಭಿತ್ತಿಗಳ್‌
ಕೂಡೆ ವಿರಾಜಿಸುತ್ತುಮಿರೆ ಕಣ್ಗೆಸೆದತ್ತಮೃತಾಂಶುಮಂಡಳಂ ೩೧

ಚಂ || ಇದು ವಿಧುಮಂಡಳಂ ಭಗಣಮಿಂತಿದು ಕಾಂತಿಯಿದೆಂಬ ಭೇದಮಾ
ದುದು ಮೊದಲೊಳ್‌ಬೞಕ್ಕೆ ವಿಧು ತಾರಗೆ ಕಾಂತಿಯಿದೆಂಬ ಭೇದಮಿ
ಲ್ಲದೆ ಗುಣಿಗಂ ಗುಣಾಳಿಗಮಭೇದಮೆನಿಪ್ಪ ಮತಾನುಸಾರಿಯಾ
ದುದು ನೆಲೆವೆರ್ಚಿ ಸಾಂದ್ರತರ ಚಂದ್ರಿಕೆ ರುಂದ್ರನಭೋವಿಭಾಗದೊಳ್‌೩೨

ಕಂ || ಕುವಳಯಮಂ ರಾಜನ ಪೆಂ
ಡವಾಸಮೆಂದಱದು ಮಂಡಳಾಗ್ರದ್ಯುತಿಗೋ
ಡುವ ತಿಮಿರತತಿ ಶರಣ್ಬೊ
ಕ್ಕವೊಲೊಪ್ಪಿದುವೆಳಸಿ ಬಳಸಿ ಮೊರೆವಳಿನಿವಹಂ ೩೩

ಉದಯದೊಳೆ ರಾಗಿ ರಾಗಮ
ನೊದವಿಸುಗುಚಿತಂ ಬೞಿಕ್ಕಮತಿ ಧವಳತೆಗಾ
ಸ್ಪದಮೆನಿಸಿಯುಮೊದವಿಸಿದಪ
ನಿದು ಚಿತ್ರಂ ಧಾತ್ರಿಗೆಲ್ಲಮುತ್ಪಳಮಿತ್ರಂ ೩೪

ಆತನು ತಮಮಂ ನಿವಾರಿಸು
ತತನು ತಮಮನೀವುದತನುತಾಪಮನುಗಿಯು
ತ್ತತನುಪ್ರತಾಪಮಂ ಮ
ತ್ತತಿಶಯಿಪುದು ಚಿತ್ರಮಮೃತಕರನ ಚರಿತ್ರಂ ೩೫

ಸನ್ನುತಚಂದ್ರಿಕೆ ವಿರಹಿಗ
ಳಂ ನೋಯಿಸಿ ನನ್ನಿಮಾಡಿದುದು ಜಗದೊಳ್‌ಕೈ
ಗನ್ನಡಿಯೆನಿಸಿದ ರಾಜಾ
ಸನ್ನಃ ಕೋ ನಾಮ ಸಾಧುವೆಂಬೀ ನುಡಿಯಂ ೩೬

ಮ || ಮಿಗೆ ಸಸ್ಯೋನ್ನತಿಯಂ ನಿಮಿರ್ಚಿ ಘನಕಾಲಂ ಕೂಡೆ ನೈರ್ಮಲ್ಯಮಂ
ಮುಗಿಲೊಳ್‌ಪುಟ್ಟಿಪ ಪೆಂಪಿನಿಂದೆ ಸರದಂ ಶೀತಕ್ಕೆ ಪಕ್ಕಾಗಿ ಮಾ
ಗಿಗುರು ಶ್ರೀ ಶಿಶಿರಂ ಜನೋತ್ಸವಕರಶ್ರೀಯಿಂದೆ ಚೈತ್ರಂ ವಿಯೋ
ಗಿಗೆ ಸಂತಾಪಮನಿತ್ತು ಬೇಸಗೆಯೆನಿಕ್ಕುಂ ಚಾರುಚಂದ್ರಾತಪಂ ೩೭

ವ || ಅಂತಾತ್ಮೀಯಸಾಮ್ರಾಜ್ಯಶ್ರೀಯಂತೆ ಸಾರ್ವಭೌಮಮುಂ ಉದ್ದಾಮ ಸುದರ್ಶನಾಭಿರಾಮಮುಮಾದ ಕೌಮುದೀಮಹೋತ್ಸವದೊಳ್‌ವಾರಾಂಗನಾಶೃಂಗಾರಜಲನಿಧಿ ನೆಲೆವೆರ್ಚೆ ಪೆರ್ಚಿದುತ್ಸವದಿನದ ನಾಳೋಕಿಸಲೆಂದೋಲಗಮಂ ಪರೆಯಲ್ವೇೞ್ದೊಂದೆ ಹರೆಯದ ತನ್ನ ಮನದನ್ನರಪ್ಪತಿ ಚತುರತ್ರಿಚತುರಜನಂಬೆರಸರಮನೆಯಂ ಪೊಱಮಟ್ಟು ಪುಷ್ಪಾಯುಧ ನಂದದಿಂ ಮೆಯ್ಗರೆದು ಚಕ್ರಾಯುಧಂ ರಾಜವೀಥಿಯೊಳಗನೆ ಬರೆವರೆ

ಚಂ || ವಿರಹಿಗೆ ತಾಪಮಂ ಪ್ರಿಯಜನಕ್ಕನುರಾಗಮನೀಯುತಾವಗಂ
ಮರುಗಮನಾಳ್ದ ಮಲ್ಲಿಗೆಯ ಸಂಸದಿರುವಂತಿಯೊಳೊಂದಿ ನಿಂದ ಪಾ
ದರಿಯಲರಚ್ಚಗಂಪನಱದೋಲಗಿಸಿತ್ತು ವಸಂತನಟ್ಟೆ ಮುಂ
ಪರಿಚಿತನಂತೆ ಬಂದು ಭುವನಪ್ರಭುಗಂದತಿ ಮಂದಮಾರುತಂ ೩೮

ವ || ಅಂತು ಪರಿಮಳಮಾಳಾಧಾರಿಣಿಯರಪ್ಪ ಮಾಳಾಧಾರಿಣಿಯರ ನಱುಸುಯ್ಯ ಕಂಪಿನಿಂ ಬೆರಸಿದ ಬೆರಕೆಗಂಪನುಪಾಯನಮನಿತ್ತು ಚಿತ್ತಮನೀೞ್ಕುಳಿಗೊಳುತ್ತುಂ ಬಂದ ಮಂದಾನಿಳದ ಪರಿಮಳದ ಪಜ್ಜೆವಿಡಿದು ಪೋಗಿ

ಕಂ || ಕಂತುನೃಪಾಯುಧಶಾಲೆ ವ
ಸಂತದ ಸಿರಿಯೇೞ್ಗೆ ಮಧುಪ ಮಧುಪಾನಗೃಹಂ
ಭ್ರಾಂತೆನಿಸುತಿರ್ಪ ಪೂವಿನ
ಸಂತೆಯನೀಕ್ಷಿಸಿದನೊಸೆದು ವಸುಧಾಧೀಶಂ ೩೯

ಕಂಡರಿಸಿದ ಕಪ್ಪುರದ ಕ
ರಂಡಗೆಯಂ ನಗುವ ಬಾಯ್ತೆಱೆಗೆ ನೃಪನಯನಂ
ಮಂಡನಮೆನಿಸಿರ್ದರಲ ಕ
ರಂಡಗೆಗಳಿಯೆಱಗೆ ಮಾಲೆಗಾರ್ತಿಯೆರೆಸೆದರ್‌೪೦

ಉ || ತೋಳೊ ಶಿರೀಷಮಾಳೆಯೊ ವಿಳೋಕನಕಾಂತಿಯೊ ಫಲ್ಲಮಲ್ಲಿಕಾ
ಮಾಲೆಯೊ ಕುಂತಳೋತ್ಕರಮೊ ವಕ್ತ್ರಸರೋರುಹಗಂಧಮಗ್ನಮ
ತ್ತಾಳಿಯೊ ಪೇರೞೆನುತ್ತುಮೊಸೆದೀಕ್ಷಿಪರಕ್ಷಿಯುಮಂ ಬೆಡಂಗಿನಿಂ
ಮಾಲೆಯುಮಂ ಕರಂ ತಳೆದು ರಂಜಿಸಿದರ್‌ಪೊಸಮಾಲೆಗಾರ್ತಿಯರ್‌೪೧

ಚಂ || ಮಿಱುಗೆ ಮನೋಜಭೂಪತಿ ಮನೋಗೃಹಮಂ ಪುಗೆ ಯಾನನೇಂದುವ
ೞ್ಕಱೊಳೆ ಮೃಣಾಳನಾಳದೊಳೊಡಂಬಡೆ ದೀಪ್ತಿ ದುಕೂಲವಸ್ತ್ರಮಂ
ನಿಱವಿಡಿದೊಪ್ಪೆ ಕಟ್ಟಿದವೊಲಳ್ಗುಡಿಯಂ ಪಿಡಿದರ್ದರೊರ್ಮೆಯುಂ
ತುಱುಗಿರೆ ತುಂಬಿ ಮಲ್ಲಿಗೆಯ ಮಾಲೆಯನಗ್ಗದ ಮಾಲೆಗಾರ್ತಿಯರ್‌೪೨

ಹೃದಯದೊಳಿರ್ಪನಂಗಪತಿಗೆಮ್ಮಯ ನಿರ್ಮಳಕೇಕರಾಸ್ತ್ರಪಾ
ತದೊಳೆ ಮಗುೞ್ದು ನೋೞ್ಪರೆರ್ದೆಗಳ್‌ಮೃದುವಾದುವು ನೋಡಿ ಮುನ್ನ ಮೆ
ಚ್ಚಿದ ಕುಸುಮಾಸ್ತ್ರದಿಂದಿಸುವುದೆಂದವನೀವವೊಲೆತ್ತಿ ಪೂಗಳಂ
ಪದೆದು ಕಟಾಕ್ಷದಿಂ ನೃಪನನೀಕ್ಷಿಸಿದರ್‌ಮಿಗೆ ಮಾಲೆಗಾರ್ತಿಯರ್‌೪೩

ವ || ಅಂತೊಪ್ಪಮನಪ್ಪುಕೆಯ್ದು ಪುಷ್ಪಲಾವೀನಿವಹಧವಳಕಟಾಕ್ಷ ಕುವಳಯ ಮಾಳೆಯಂ ಕುವಳಯಪತಿ ನಿಜನವಸೌಂದರ್ಯ ಸಂಪೂರ್ಣ ಸುವರ್ಣಸಂಪತ್ತಿಯಂ ಬೀಱಿ ಮಾಱುಗೊಳುತ್ತುಮೀ ಪ್ರಸೂನಂಗಳನೂನ ಸೌರಭಕ್ಕಂ ಸುಕುಮಾರತೆಗಂ ಸೈರಿಸದೆ ನಿಚ್ಚಂ ಮಚ್ಚರಿಸುವುದೆಂದು ಪಿಡಿಗಟ್ಟಿಂಗೊಳಗುಮಾಡಿದುದೆಂಬಂತೆ ಪುಷ್ಪಲಾವೀಕದಂಬಂ ಪುಷ್ಪಮಾಲೆಗಳಂ ಪಿಡಿದಿರ್ದಪುದೆಂದುತ್ಪ್ರೇಕ್ಷಿಸುತ್ತುಂ ಚತುರರಂ ಚಾತುರ್ಯಚತುರ್ಮುಖಂ ಮಚ್ಚಿಸುತ್ತುಂ ಪೋಗಿ ಸೂೞೆಗೇರಿಗಳಂಕಾರಮಾಗೆ ಮಕರಧ್ವಜಂ ಮರಕತದ ಮಕರತೋರಣಮಂ ವಿರಚಿಸಿದಂತೆ ವಿಚಿತ್ರಪತ್ರಕಳಿಕಾಸಂಕುಳಂ ಮನಂಗೊಳಿಸುವ ಸಹಕಾರಭೂರುಹಂಗಳ ಕಂಭಂಗಳೊಳಿಂಬಾಗೆ ಕಟ್ಟಿ ದಿಟ್ಟಿಗಳವಟ್ಟಿರೆ

ಉ || ಏಱೆ ಪೊಗರ್‌ಕದಂಪಿನೊಡಂಗರಾಜನ ತೋಳ ಬಾಳ್ಗೆ ಕೂ
ರ್ಪೇಱೆ ಕಟಾಕ್ಷಬಾಣದೊಡನಂಗಭವಾಸ್ತ್ರಕುಳಕ್ಕೆ ಕಾಮನು
ರ್ಕೇಱೆ ಘನಸ್ತನಂಗಳೊಡನುತ್ಸವದಿಂ ಪೊರೆಯೇಱೆ ರೂಪು ಕ
ಣ್ಗೇಱೆ ವಿಳಾಸದಿಂದೆ ತಳಿರುಯ್ಯಲನೇಱದ ನೀಱೆಯೊಪ್ಪಿದಳ್‌೪೪

ವ || ಈಕೆಯನಾಳೋಕಿಸಲೊಡಮೀಯಾಂದೋಳದಂತಾರ ಮನಮುಂ ಡೋಳಾಯಮಾನ ಮಾಗದಿರದೆನುತ್ತವಳ ಮೇಲೆ ನಟ್ಟ ದಿಟ್ಟಿಯನೆಂತಾನುಂ ತೆಗೆದು ಪೋಗೆವೋಗೆ ಮುಂದೊಂದಿಂದುಕಾಂತದ ಕಾಂತಮಾದ ಕುಡುವಾಟಮಲ್ಲದೆ ಮತ್ತೊಂದಲ್ಲವೆಂದು ಸೌಂದರ್ಯಮಂ ಸೌಂದರ್ಯ ಸಂಕ್ರಂದನಂ ಪೊಗುೞುತ್ತುಂ ನಡೆಯೆ ನಡೆಯೆ ಮುಂದೊಂದೆಡೆಯೊಳ್‌

ಮ.ಸ್ರ || ಅಲರ್ಗಣ್ಗಳ್‌ಬೀಱೆ ಪೂಮಾಲೆಗಳನೆ ಬೆಳಗಂ ಬೀಱೆ ದಂತಚ್ಛದಂ ಪಾ
ಟಳವರ್ಣಂ ಬೀಱೆ ಕಾಶ್ಮೀರಮನನುನಯದಿಂ ಬೀಱೆ ತನ್ನಂದದಿಂದಂ
ಸಲೆ ಚೆಲ್ವಂ ಬೀಱುತಿರ್ಪುಯ್ಯಲನತಿಮುದದಿಂದೇಱೆದಳ್‌ನೀಱೆಯೊರ್ವಳ್‌೪೫

ಉ || ಚಾರುವಿಳಾಸಮೀಕ್ಷಿಸುವರೀಕ್ಷಣಮಂ ಸೆಱೆಗೆಯ್ಯೆ ಪೀನವ
ಕ್ಷೋರುಹಪಾತದಿಂದಮೊಲೆದಾಡುವ ನಾಯಕರತ್ನರಂಜಿತಂ
ಹಾರಮನಂಗನುಯ್ಯಲವೊಲೊಪ್ಪಿರೆ ತಾನೊಸೆದಾಡಿದಂದದಿಂ
ಮಾರನುಮಾಡುತಿರ್ಪುದನೆ ತೋರ್ಪವೊಲಾಡಿದಳೊರ್ವಳುಯ್ಯಲಂ ೪೬

ವ || ಅಂತುಮಲ್ಲದೆ

ಚಂ || ಲಲಿತಪಯೋಧರೋನ್ನತಿಗೆ ನರ್ತಿಸುವಂತೆವೊಲಾಗಳೇಱದು
ಯ್ಯಲೆ ನಮಿಲುಯ್ಯಲೆಂದೆನಿಸೆ ಸೋರ್ಮುಡಿ ಸೋಗೆವೊಲಾಡೆ ಕಾಮನೆ
ಚ್ಚಲರ್ಗಣೆಯಂತೆ ಕೇಳ್ವರೆರ್ದೆಯಂ ಕಳನಾದಮೆ ತಾಗೆ ರಾಗಮ
ಗ್ಗಲಿಸೆ ವಸಂತರಾಗದೊಳೆ ಪಾಡುತುಮಾಡಿದಳೊರ್ವಳುಯ್ಯಲಂ ೪೭

ಉ || ಇಂಚರಮೀಂಟಿಪಂತಮೃತಮಂ ಕಿವಿಯಿಂ ಸವಿಯಪ್ಪ ನುಣ್ಪಿನಿಂ
ದಂಚೆಯ ತುಪ್ಪುಳಂ ತಿರಿಪಿದಂತೆವೊಲಾ ತಿರಿಪೆಯ್ದೆ ಮೆಲ್ಪನಾ
ಳ್ದಂ ಚಿರಮಲ್ಲದೊಪ್ಪೆ ವಳಿ ನಲ್ಲಳ ಮೆಯ್ವಳಿಯಂತೆ ರಾಗಮಂ
ಸಂಚಿಸೆ ನಾಯಿಕಾಮಧುರಗೇಯಮದೇಂ ಮನಮಂ ಮರುಳ್ಚಿತೋ ೪೮

ವ || ಅದಂ ಕೇಳ್ದೀ ಕುಸುಮಸುಕುಮಾರಿಯ ಸರಸಗೇಯಮಲರಂಬಿನ ತನಿಗಂಪಿನಂತೆ ಮನಮನುರಾಗದಿಂ ಪೊರೆದಪುದೆಂದು ಭರತಕಳಾಪರಿಣತರಂ ನಿರವಿಸುತ್ತುಂ ನಡೆಯೆ ಮುಂದೊಂದು ಸಮುತ್ತುಂಗಮತ್ತವಾರಣದೊಳ್‌

ಉ || ಆರಮನಕ್ಕಮೀಕ್ಷಿಪೊಡೆ ಮೂರ್ಛೆಯನರ್ಪಿಸುತಿರ್ಪ ಕಾಮಕಾ
ಳೋರಗವಕ್ತ್ರದುಣ್ಮುವ ವಿಷಂಭೊಲಳುಂಬಮೆನಿಪ್ಪ ಕೇಶಸಂ
ಸ್ಕಾರದ ಧೂಪವರ್ತಿಗಳ ಧೂಮಲತಾವಳಿ ಸುತ್ತೆ ಮನ್ಮಥಾ
ಕಾರರೆ ಮುಂದುಗಾಣದಿರೆ ಮೋಹಿಸಿದರ್‌ಮಿಗೆ ವಾರನಾರಿಯರ್‌೪೯

ವ || ಆ ಲತಾಕೋಮಳೆಯರೊಳಗೆ

ಚಂ || ವಿಳಸಿತಚಂದ್ರಮಂಡಳಮನೊಪ್ಪಿರೆ ರೋಹಿಣಿಯಪ್ಪಿದಂತೆ ನಿ
ರ್ಮಳಮುಖಚಂದ್ರದೊಳ್‌ತೊಳಗೆ ಮುತ್ತಿನ ಮೂಗುತಿ ಲೋಳಲೋಚನೋ
ತ್ಪಳರುಚಿ ವಿಭ್ರಮದ್ಬ್ರಮರಸಂಕುಳಮಂ ತೆಗೆವುತ್ತುಮೊಪ್ಪೆ ಕೋ
ಮಳೆ ಮದನಾಜ್ಞೆ ಮೂರ್ತಿವಡೆದಿರ್ದವೊಲೊತ್ತೆಗೆ ನಿಂದಳೊಪ್ಪಿದಳ್‌೫೦

ವ || ವೃತ್ತಸ್ತನಿ ಮತ್ತೊರ್ವಳ್‌

ಉ || ಪಂಕಜನೇತ್ರೆ ಹಂಸಗಮನಾನ್ವಿತೆ ನಿರ್ಮಳೆ ಚಂಚರೀಕನೀ
ಳಾಂಕಿತಕೇಶಪಾಶೆ ಕಮನೀಯಪಯೋಧರೆ ನುಣ್ಪುವೆತ್ತ ಸ
ತ್ಕುಂಕುಮದಣ್ಪಿನಿಂದೆಳವಿಸಿಲ್‌ಮುಸುಕಿರ್ದ ಸರೋವಿಳಾಸಮಂ
ಮಾಂಕರಿಪಾಕೆ ಪೇೞ್‌ಭ್ರಮರಜಾಳಮನೇೞೆಸೆ ಪೋಗಲೀಗುಮೆ ೫೧

ಸಂಗತಮಧ್ಯಲಕ್ಷ್ಮಿ ಮದನಾಧಿಪದಿಗ್ವಿಜಯಕ್ಕೆ ಹರ್ಷದಿಂ
ಪೊಂಗಳಸಂಗಳಂ ರುಚಿರಪಲ್ಲವದರ್ಪಣಶೋಭಿತಂಗಳಂ
ಪಿಂಗದೆ ಪೊತ್ತವೋಲ್‌ಕುಚಯುಗಂ ಲಲಿತಾಧರಗಂಡಮಂಡಳಾ
ಲಿಂಗಿತಮೊಪ್ಪಿದತ್ತೆನುತೆ ನೋಡಿದನೊರ್ವಳನುರ್ವರೇಶ್ವರಂ ೫೨

ವ || ಮತ್ತೊರ್ವಳ್‌ಚಿತ್ತಪ್ರಿಯನಿನಿಸು ಪೊೞ್ತಂ ತಡೆಯೆ ಮನಮಂ ಸೈರಿಸಲಾಱದೆ ರೂಪಕಂದರ್ಪನ ಬರ್ಪ ಬಟ್ಟೆಯತ್ತಲೆ ದತ್ತ ದೃಷ್ಟಿಯಾಗಿ

ಉ || ಬಂಬಳಬಾಡಿ ಮುಂಬಗಲನೆಯ್ದಿದ ನೆಯ್ದಿಲವೋಲ್‌ಕುರುಳ್ಗಳಾ
ತುಂಬಿಯ ಮಾೞ್ಕೆಯಿಂ ಪರೆಯೆ ದೂರಿಸಿ ತನ್ನನೆ ಕಣ್ಣ ನೀರ ಘ
ರ್ಮಾಂಬುವ ಕಾೞ್ಪುರಂಗಳೊಳೆ ತೇಂಕುವ ಕಾಂತೆಯನೆಹ್ದೆವಂದು ಚಂ
ದ್ರಂಬೊಲಲರ್ಚಿದಂ ಕರದಿನಪ್ಪಿ ಕಳಾನಿಳಯಂ ಮನಃಪ್ರಿಯಂ ೫೩

ವ || ಮತ್ತೊರ್ವಳೆಂತೆಂತು ಕಂತುಪ್ರತಾಪದಂತೆ ಚಂದ್ರಾತಪಂ ಪಸರಿಸುಗುಮಂತಂ ತಂತರಂಗಮಂ ಸಂತಯ್ಸಲಾಱದಿಂತೆಂದಳ್‌

ಚಂ || ಎನಗೆ ಮನಃಪ್ರಿಯಂ ಮುನಿದುಪೋದನಿವಂ ನನೆಗೋಲ ಕೋೞ್ಗದೆ
ನ್ನನೆ ಗುಱೆಮಾಡಿದಂ ಮನಸಿಜಂ ಪತಿಯಂ ಗುಱಿಮಾಡನಕ್ಕ ಮ
ನ್ಮನದೊಳಹರ್ನಿಶಂ ನೆಲಸಿ ನಿಂದೊಡನಾಡಿಗಳಾದ ದೂಸಱೆಂ
ದಿನಿಯನದರ್ಕೆ ಬಾರನವನಂ ಬರಿಸಲ್ಲದೊಡಿಲ್ಲ ಜೀವನಂ ೫೪

ವ || ಮತ್ತೊರ್ವಳುರ್ವಿದ ಬೆಳ್ದಿಂಗಳನಂಗಜನೆಂಬ ಬೇಂಟೆಕಾಱಂ ತಗುಳ್ಚಿದ ಕಾೞ್ಗೆರ್ಚೆಗೆತ್ತು ಮೃಗನಯನೆ ಭಯಂಗೊಂಡು

ಚಂ || ಇನನುೞಿದಂದು ರಾತ್ರಿಗಿನನಾಗಿಯೆ ನಿಂದವನಲ್ಲನಿಂದು ಕೇ
ಳೆನಗಮಿನಂ ದಲಾಗಿ ಸಖಿ ಸಾಧಿಸಿ ಕಾಯ್ದಪನೇವೆನೆಂದು ಕಾ
ಮಿನಿ ಬಿಸುಸುಯ್ದು ಹಾಸಿದ ತಳಿರ್ನನೆಗಳ್‌ತನುತಾಪದಿಂದೆ ಕ
ಣ್ಬನಿಗಳಿನಾವಗಂ ನೆಗಪಿದಂತಿರೆ ತಾಪಮನೋಪಳೆಯ್ದಿದಳ್‌೫೫

ವ || ಮತ್ತೋರ್ವಳಿಂದುಮುಖಿ ಪೂರ್ಣೆಂದುವಂ ನೋಡಿ

ಕಂ || ಅಗಲೆ ಮದೀಶ್ವರನೆರ್ದೆವ
ತ್ತುಗೆಮಾಡಿರಿಸಿದ ಮನೋಜನುಗಿಬಗಿ ಮಾೞ್ಕುಂ
ಬಗೆಯನೆನೆ ಮಾಡದಿರ್ಕುಮೆ
ಮೊಗದೊಳ್‌ಮಚ್ಚರಿಪ ಚಂದ್ರನೆಂದಳವೞಿದಳ್‌೫೬

ವ || ಮತ್ತೂರ್ವಳ್‌ಕುಂಟಣಿಯ ನಿವಹಕ್ಕೆ ಕಿನಿಸಿ ಗೆಂಟಾದ ಕಾಲನಂ ನೆನೆದು

ಕಂ || ಇನಿಯನೊಡಗೂಡದೆನ್ನಂ
ಮುನಿದಿಸುವಂಗಜನುಮಲೆವ ತೆಂಬೆಲರುಂ ಕೆ
ಳೆನಗೆ ಪಗೆಯಲ್ಲಗಲ್ಚಿದ
ಜನನಿಯೆ ಪಗೆಯೆಂದು ನೊಂದು ಕೆಳದಿಗೆ ನುಡಿದಳ್‌೫೭

ವ || ಮತ್ತೊರ್ವಳ್‌ತನ್ನ ಕನ್ನೆವೇಟದ ಕಾಂತಂ ಗ್ರಾಮಾಂತರಕ್ಕೆ ಪೋಗಿ ತಡೆಯೆ

ಕಂ || ಸ್ತನದ ಕಠಿನತೆಯ ನೆವದಿಂ
ಮನದೊಳ್‌ನೆಲಸಿರ್ದ ಕಠಿನಭಾವಂ ಪೋದ
ತ್ತೆನ ಮೆಲ್ಪುವಡೆದು ಸೆಡೆದುದು
ವನಿತೆಯ ಮನಮರಲಸರಲ ಹತಿಗತನುವಿನಾ ೫೮

ವ || ಅಂತು ಕಂತುಶರಜಾಳಮುದರಂಬುಗೆ ಬೆಗಡುಗೊಂಡು ಗಂಡುನೊೞದ ಸೋಂಕುಮಂ ಸೈರಿಸದೆ

ಕಂ || ಇನಿಯವನಿಲ್ಲದೊಡೂರ್‌ಕಾ
ನನಮೆನಗದಱೆಂದಮೆನ್ನ ಜವ್ವನದೊದವಂ
ಗನೆ ಮೊಲದ ಜವ್ವನಂ ಗಿಡು
ವಿನೊಳೞ್ಕಾಡುವವೊಲಕ್ಕುಮೆಂದುಱೆ ಸುಯ್ದಳ್‌೫೯

ವ || ಮತ್ತೊರ್ವಳ್‌ತನಗೆ ಶಿಶಿರೋಪಚಾರಮಂ ಮಾಡಲೆಂದು ಚಂದನಮಂ ತಂದಕೆಳದಿಗಿಂತೆಂದಳ್‌

ಕಂ || ಅಮೃತಕರಂ ಮೃತಿಯಂ ಕೌ
ಸುಮಹಾರಂ ದುಃಖಮಂ ನಿಜಾಂಗಭವಂ ತಾ
ಪಮನಕ್ಕ ಮಾೞ್ಕುಮೆನೆ ತಾ
ಪಮನೀಯದೆ ಪೇೞು ಚಂದನಂ ವಿಷಜನಿತಂ ೬೦