ವ || ಅಂತವರ ವರಗುಣಸ್ತವನದ ನೆವದಿಂ ವಿಷಯವಿರಕ್ತಿಯಿಂ ವ್ಯಕ್ತೀಕರಿಸಿದ ವಿಷಯವಲ್ಲಭನ ವಿವೇಕಕ್ಕವಧಿವಿಳೋಕನಂ ಸಂತಸಮನಾಂತು ಚಕ್ರವರ್ತಿಯಂ ಸಂಯಮಚಕ್ರವರ್ತಿಯಂ ಮಾಡೆ

ಕಂ || ಪೃಥಿವೀಪಾಳಸಹಸ್ರಂ
ಪ್ರಥಿತಮಹೀನಾಥನಂತೆ ದೀಕ್ಷೆಯನಾತೇಂ
ಕಥಿಯಿಪೊಡೆ ಯಥಾ ರಾಜಾ
ತಥಾ ಪ್ರಜಾಯೆಂಬ ನೀತಿಯಂ ಪ್ರಕಟಿಸಿತೋ ೫೧

ಚಂ || ಒಡವಳೆದಿರ್ದ ಮೋಹದ ಮಹೀಪತಿಸಂತತಿ ಮೆಲ್ಪಿನೊಳ್ಪಿನೊಳ್‌
ತೊಡರ್ದಬಳಾಜನಂ ಬಿಡದೆ ತನ್ನೊಡನುಗ್ರತಪಕ್ಕಮೊಡ್ಡಿದ
ತ್ತೊಡಲನದೆಂದೊಡಿಂಪೊರೆವ ಪೆಂಪುಮನಾ ನೃಪನಿಂಪುಮಂ ಪವ
ಣ್ಬಡಿಸುವೆನೆಂಬನುಂಟೆ ಚತುರಬ್ಧಿಪರೀತಮಹೀತಳಾಗ್ರದೊಳ್‌೫೨

ವ || ಅಂತು ತನ್ನೊಡನೆಲ್ಲರುಂ ಕರ್ಮವಲ್ಲರೀಲವಿತ್ರಪವಿತ್ರಚರಿತ್ರಪಾತ್ರರಾಗಿ ವರ್ತಿಸುತ್ತುಮಿರೆ ದುರಿತಗಿರಿವಜ್ರಂ ವಜ್ರನಾಭಿ

ಕಂ || ವ್ರತಸಮಿತೀಂದ್ರಿಯರೋಧ
ಸ್ಥಿತಿಭೋಜನಲುಂಚನೈಕಭುಕ್ತಾಚೇಳ
ಕ್ಷಿತಿತಳಶಯನಾವಶ್ಯಕ
ತತಿವಿಗತಸ್ನಾನವಿಧೃತದಂತಮಳತ್ವಂ ೫೩

ಪ್ರಾಯಶ್ಚಿತ್ತಂ ವಿನಯಂ
ವೈಯಾಪೃತ್ಯಂ ಸದಾಗಮಾಧ್ಯಾತ್ಮಸ್ವಾ
ಧ್ಯಾಯಂ ಕಾಯೋತ್ಸರ್ಗಂ
ಶ್ರೇಯೋನಿಳಯಾತ್ಮತತ್ತ್ವಲೀನಂ ಧ್ಯಾನಂ ೫೪

ಅವಮೋದರ್ಯಮನಶನಂ
ವಿವಿಕ್ತಶಯನಾಸನಂ ರಸತ್ಯಾಗಂ ಮ
ತ್ತವಿರಳಕಾಯಕ್ಲೇಶಂ
ಭುವನಸ್ತುತವೃತ್ತಿ ವೃತ್ತಿಪರಿಸಂಖ್ಯಾನಂ ೫೫

ತವದುತ್ತಮಕ್ಷಮಾಮಾ
ರ್ದವಾರ್ಜವಂ ಸತ್ಯಶೌಚಸಂಯಮ ತಪ ಮ
ತ್ತವಿಚಳಿತತ್ಯಾಗಿತೆಯ
ದ್ರವಿಣತ್ವ ಬ್ರಹ್ಮಚರ್ಯಮಾರ್ಯಪ್ರಣುತಂ ೫೬

ವ || ಎಂಬೀ ಪೆಸರಿಂದೆಸೆವ

ಕಂ || ಮೂರ್ಲೋಕಕುತ್ತರೋತ್ತರ
ಭೂಲೋಕಸ್ತುತಗುಣಾಂಕುಶದಿನಿಂದ್ರಿಯ ಶುಂ
ಡಾಳಮನುಗಿಯುತ್ತುಂ ಧೃತಿ
ಶೀಲಂ ಜಿತಕರ್ಮಜಾಳನೆನಿಸಿ ಮುನೀಶಂ ೫೭

ವ || ನೆಗೞುತ್ತುಂ ಗುರುಪಾದಮೂಳದೊಳ್‌ದೀಕ್ಷಾಕಾಲಮುಮಂ ಗುಣಗಣಪೋಷಣಮುಮಂ ಮಾಡುತ್ತುಂ ಗಣಪೋಷಣಕಾಲಮಂ ಕಳಿಪಿ ಬೞಕೇಕವಿಹಾರಿಯಾಗಿ ನಿಜಾತ್ಮಚಿಂತನಕ್ಕೆ ನಿರ್ಜಂತುಕಪ್ರದೇಶಮನಱಸುತ್ತುಂ ಬರ್ಪಾಗಳ್‌

ಮ || ಪಲಸಾಲಂ ತಡಸಾಸು ತೇಗು ತದುಕಿಂಚಿಲ್ಪೊನ್ನೆ ಚೆನ್ನಂಗಿ ಬೊ
ಬ್ಬುಲಿಯಿರ್ಬೀಡರನೇಱಲಿಪ್ಪೆ ಸಿರಿಸಂ ಹಾಡಂಗಿ ಭಾರಂಗಿ ನೇ
ಳಲೆರಂ ಪಾದರಿ ತಾಱೆ ತಂಡಸು ಬಿಳಿಲ್‌ಬಲ್ಮತ್ತಿ ಬೇವತ್ತಿ ಸೆ
ಳ್ಳೆಲವಂ ಸಂಪಗೆ ತುಂಬರಂಬಡೆ ಕವುಂಗಿಮ್ಮಾವು ಕಕ್ಕಿಮ್ಮರಂ ೫೮

ವ || ಎಂಬೀ ಮರದುಱುಗಲಿಱುಂಬಿನಿಂದತಿಗಹನಮೆನಿಪ ಗಹನಾಂತರದೊಳಗೆ

ಚಂ || ವಿಪುಳ ರಸಪ್ರಪೂರ್ಣ ಫಳರಾಜಿವಿರಾಜಿತ ಸಾರಭೂಜದಿಂ
ವಿಪುಳ ಸುಗಂಧಮಗ್ನಮಧುಪಪ್ರಕರಾಂಚಿತ ಪುಷ್ಪವಲ್ಲಿಯಿಂ
ವಿಪುಳ ವಿಳೋಲೋಚನವನೇಚರಕೋಮಳಕಾಂತೆಯರ್ಕಳಿಂ
ವಿಪುಳ ಮರೀಚಿರತ್ನಚಯದಿಂ ವಿಪುಳಾಚಳಮೊಪ್ಪಿ ತೋಱುಗುಂ ೫೯

ವ || ಆ ವಿಪುಳಾಚಳದ ವಿಪುಳಶಿಳಾತಳದೊಳಚಳಿತಪ್ರತಿಮಾಯೋಗದೊಳಾ ಯೋಗೀಶ್ವರಂ ನಿಲ್ವುದುಂ

ಕಂ || ಕರಿಗಂ ಕೇಸರಿಗಂ ಕೇ
ಸರಿಗಂ ಶರಭಕ್ಕಮಾಯ್ತು ಶರಭಕ್ಕಂ ಮ
ಚ್ಚರಿಸುವ ಭೇರುಂಡಕ್ಕಂ
ಪರಸ್ಪರಪ್ರೀತಿ ಯತಿಯ ತಪದುನ್ನತಿಯಿಂ ೬೦

ವ || ಅಂತು ಶಾಂತರಸಮಂ ಪಸರಿಸುತ್ತುಂ ಮುನಿಪೋತ್ತಮನಾತ್ಮಧ್ಯಾನಾಧೀನ ಮಾನಸನಾಗಿರ್ಪುದುಮಾ ಗಿರಿಗನತಿದೂರದೊಳ್‌

ಕಂ || ಪಕ್ಕಣಮಿರ್ಪುದು ಪುಣ್ಯದ
ಪಕ್ಕಣಮಿಲ್ಲಲ್ಲಿ ಪುಟ್ಟಿದರ ಬಗೆಯೊಳ್‌ಪಾ
ಪಕ್ಕೆ ನೆಲೆವೀಡು ನರಕಂ
ಬೊಕ್ಕವರ್ಗಳೆ ಮಗುೞೆ ಪುಗಲೆ ಪುಟ್ಟುವರದಱೊಳ್‌೬೧

ಶಾರೀರ ಪರಸ್ಪರ ವಸು
ಧೇರಿತ ಸಹಜಾತಮಾನಸಾಗಂತುಕ ದು
ರ್ವಾರ ಬಹುದುಃಖಮಂ ಪಾ
ಪಾರಂಭಕನುಂಡು ಷಷ್ಠನರಕೋರ್ವರೆಯೊಳ್‌೬೨

ವ || ಅಂತು ಮುನ್ನಿನ ಜನ್ಮದೊಳಜಗರನಾಗಿ ಮುನಿಪುಂಗವನಂ ನುಂಗಿದ ಪಾಪದ ಪರಿಪಾಕದಿಂ ಬೞೆಸಿಡಿಲ್ವೊಡೆಯ ಶತಚೂರ್ಣಶರೀರನಾಗಿ ಪೋಗಿ ತಮಃಪ್ರಭೆಯೊಳಿರ್ಪತ್ತೆರಡುಸಾಗರೋಪಮಂಬರಮೆವೆಯಿಕ್ಕುವನಿತು ಪೊೞ್ತುಂ ತೆಱಪಂ ಪಡೆಯದೆ ಪಲತೆಱದ ದುಃಖಮನನವರತಮನುಭವಿಸಿ ಬಂದು

ಕಂ || ಆ ಪಕ್ಕಣಕ್ಕಮಗ್ಗದ
ಪಾಪಕ್ಕಂ ಪೞಿಗಮಧಿಪನಾದಂ ಯತಿಪ
ಸ್ತ್ರೀಪಶುಶಿಶುವಿಷವಧೋ
ದ್ದೀಪಿತಕೋಪಂ ಕುರೂಪನಸದಾಳಾಪಂ ೬೩

ಆರಕ್ತನಯನಯುಗಳಂ
ಕ್ರೂರತ್ವಕೃತಾಂತದಾರಕಂ ಶ್ಮಶ್ರು ದೃಢೋ
ದಾರತರಶೃಂಗನಂತಕ
ಸೈರಿಭದಂತಿರ್ಪನಲ್ಲಿ ಕಠಿನಕುರಂಗಂ ೬೪

ಚಂ || ಕರಡಿಯ ಕಾರ್ಷ್ಣ್ಯಮಂ ಮಹಿಷದಕ್ಷಿಯ ತೀಕ್ಷ್ಣತೆಯಂ ವರಾಹದು
ದ್ಧುರತರದೇಹನಿಷ್ಠುರತೆಯಂ ಪುಲಿಯುಗ್ರತೆಯಂ ಮದಾಂಧಸಿಂ
ಧುರದ ಪೊಡರ್ಪನಗ್ಗಳಿಪ ಸಿಂಗದ ಸಾಸಮನೋವದಂತವಂ
ಗಿರಿದೆೞಕೊಂಡವೋಲತಿಭಯಂಕರನೆಯ್ದೆ ಕುರಂಗನಂಗದಿಂ ೬೫

ವಚನಚರನಾಗಿ ಕಾನನಚರಂ ಪೆಸರಿಂದೆ ಕುರಂಗನಾಗಿ ನೆ
ಟ್ಟನೆ ಗಜಸಿಂಹಮಂ ಕೊಲುವನಶ್ರಮದಿಂದಮೆ ಬೇಡನಾಗಿಯಾ
ತನ ಮೃಗಯಾರ್ಥಿಯುಚ್ಚತನುಸಂಗತನಾಗಿ ಸಮಂತು ನೀಚವ
ರ್ತನಯುತನಾದನಾರವನವೋಲ್‌ವಿಪರೀತಚರಿತ್ರರುರ್ವಿಯೊಳ್‌೬೬

ಕಂ || ಮುಳ್ಮರದ ಕೆಲದ ಮಾಳತಿ
ಯೊಳ್ಮೂರ್ಖನ ಕೆಯ್ಯ ರತ್ನದೊಳ್‌ಸಮನೆನಿಸಿ
ರ್ದಳ್ಮದನವಿಜಯಲಕ್ಷ್ಮಿ
ಬಾಳ್ಮೊದಲೆನೆ ಮಿಸುಪ ಶಬರಿ ಶಬರನ ಕೆಲದೊಳ್‌೬೭

ವ || ಮತ್ತಮಾ ಶಬರಶಿಬಿರದೊಳ್

ಚಂ || ಬೆಳತಿಗೆಗಣ್ಣ ಬೆಳ್ಪಿನೊಳೆ ಕೌಮುದಿಯಿಂ ಪುದಿದಿರ್ದ ಸಸ್ಮಿತೋ
ತ್ಪಳಿನಿಯನುಟ್ಟ ಪಲ್ಲವನಿಕಾಯದೆ ಪಲ್ಲವಭೃತ್ತಮಾಳಕೋ
ಮಳಲತೆಯಂ ನಿರಾಕರಿಸಿ ಪೆರ್ಮೊಲೆಪೊಂಗೊಡನಂತಿರೊಪ್ಪೆ ಪ
ಜ್ಜಳಿಸುವ ನೀಳದಿಂ ಸಮೆದ ಪುತ್ತಳಿಯಂತೆ ಪುಳಿಂದೆಯೊಪ್ಪಿದಳ್‌೬೮

ಕಂ || ತುಂಗಕುಚಂ ಮಂಗಳಕಳ
ಶಂ ಗುರುಜಘನಂ ನಿತಂಬಮನಿಸುವುದುಚಿತಂ
ಸಂಗಳಿಸಿದ ಪಲ್ಲವದಿಂ
ದಂ ಗೆಡೆಗೊಳೆ ಚೆಲ್ವು ಸೊಗಯಿಸಿತು ವನಚರಿಯಾ ೬೯

ಅಂಗಜಗಜಕುಂಭದ ಚೆ
ಲ್ವಿಂಗಿವು ಗುರುಗುಂಜಿಯಿಂದಮಗ್ಗಳಮೆನೆ ಪೀ
ನಂಗಳ್‌ಗುಂಜಾಭರಣದೆ
ತುಂಗಕುಚಂಗಳ್‌ವಿರಾಜಿಕುಂ ಬೇಡಿತಿಯಾ ೭೦

ಮನಮನೆಱಗಿಸಿತಶಿಕ್ಷಿತ
ವನೇಚರೀಸರಗೀತರುಚಿ ಸಹಜಕವೀಂ
ದ್ರನ ಕಾವ್ಯದಂತೆ ಮುಗ್ಧಾಂ
ಗನೆಯೊಲವಿನ ತೆಱದಿನಲರ ತನಿಗಂಪಿನವೋಲ್‌೭೧

ಕೋಗಿಲೆಗೆ ಮನೋರಾಗಮ
ನಾಗಿಪೆ ರೂಪುಂಪೊದಳ್ದವೋಲ್‌ಕಳರವಮಿಂ
ಬಾಗೆಸೆವ ರೂಪು ಮನಮಂ
ಪೂಗಣೆಯೆನೆ ತಾಗೆ ಶಬರಿ ಪಾಡಿದಳೊರ್ವಳ್‌೭೨

ಚಂ || ಕದಪು ವಿಚಿತ್ರಪತ್ರಚಯಮಿಲ್ಲದಕ್ತಕಜಾತರಾಗಮಿ
ಲ್ಲದ ಪದಪಲ್ಲವಂ ಮಿಸುಪ ತಿರ್ದಣಮಿಲ್ಲದ ಪುರ್ವು ಹಾರಮಿ
ಲ್ಲದವುರ ವಸ್ತ್ರಮಿಲ್ಲದ ಕಟೀತಟಿ ಮಂಜನಮಿಲ್ಲದಕ್ಷಿಗಳ್‌
ಮುದಮನನಾರತಂ ಪಡೆಯೆ ಬೇಡಿತಿ ಗಾಡಿಯನೊಲ್ದು ತಾಳ್ದಿದಳ್‌೭೩

ವ || ಅಂತುಂ ಮುತ್ತುಂ ಮೆೞಸುಂ ಪೆಡೆವಣಿಯುಂ ಫಣಿಯುಂ ಅಮೃತಮುಂ ವಿಷಯಮುಂ ಬೆರಸಿರ್ಪಂತೆ ಬೇಡಿಯರುಂ ಬೇಡರುಂ ಕೂಡಿರ್ಪ ಶಬರಶಿಬಿರಕ್ಕಾ ಕುರಂಗನಧಿಪನಾಗಿರ್ದು ಪಾರ್ಧಿಲಂಪಳನೊಂದುದೆವಸಂ

ಕಂ || ಅಂಜಿಸೆ ಸಾರ್ಚಿದ ಕಹಳೆಯ
ಱುಂಜೆಯ ದನಿ ಜವನ ವಿಜಯಪಟಹದ ದನಿವೋಲ್‌
ಬಿಂಜದಡವಿಯ ಮೃಗಂಗಳು
ಮಂ ಜಳಚರಕುಳಮುಮಂ ವಯೋನಿವಹಮುಮಂ ೭೪

ಜಾಲಂ ಬಲೆ ಸಿಡಿವಲೆ ಬಡಿ
ಕೋಲಲಗಂಬಿಟ್ಟಿ ಕೊಡಲಿ ಬಿಲ್‌ಕೆಯ್ಪೊಡೆ ಬೆ
ಳ್ಳಾಲಂ ಗಾಳದ ಕಟ್ಟಿಗೆ
ಕೌಳೇಯಕವಿತತಿ ಸೆಂಡುಕೋಲಸಿ ಚಕ್ರಂ ೭೫

ವ || ಮತ್ತಂ ಪಲವು ಚಂದದ ಬಲೆಗಳ್ವೆರಸು ಬೇಂಟೆಗೆ ಜವನ ಬಂಟರೆನಿಸುವ ವನಚರಪರಿವೃತನಾಗಿ ಪೊಱಮಟ್ಟು ಕಾಳಂ ದಾೞಿಟ್ಟು ಗಹನದುರ್ಗಮಂ ನಿರ್ಘೃಣವೃತ್ತಿಯಿಂ ಮುತ್ತುವಂತೆ ಮುತ್ತಿ

ಕಂ || ಟಂಕಾರರವಂ ಕಿವಿಯಂ
ಭೋಂಕೆನೆ ಮಿಗೆ ತೀವೆ ಪುಗಲೆ ದೆಸೆಗಾಣದೆ ತ
ಳ್ಳಂಕಗೊಳುತಿರ್ಪ ವನಮೃಗ
ಮಂ ಕವಿತಂದೆಚ್ಚುದಾಗ ವನಚರನಿಕರಂ ೭೬

ಮೃಗಮಂ ಪತಿಯಿಂದಂ ಗೋ
ರಿಗೆ ಪತ್ತಿಸಿ ಕೊಲಿಪ ಶಬರಿ ಪಥಿಕರನೊಳ್ಮಾ
ತುಗಳಿಂ ಸಿಲ್ಕಿಸಿ ಪತಿಯಿಂ
ದುಗಿಯಿಪ ನೇಣ್ಕಾರ್ತಿಯಂದಮಂ ನೆನೆಯಿಸಿದಳ್‌೭೭

ಕಣೆಯಿಂದಂ ಕಾಮನ ಪೂ
ಗಣೆ ಕೂರಿದುವಲ್ಲದಂದು ಗೋರಿಗೆ ಸಂದಿ
ರ್ದೆಣಿಸದೆ ವನಚರನೇಸಂ
ಪ್ರಣಯದೆ ನೆರೆದತ್ತು ಹರಿಣಿಯೊಳ್‌ಮಿಗೆ ಹರಿಣಂ ೭೮

ಕಾಯ್ದು ಹರಿಣಕ್ಕೆ ನಾಯ್ಗಳ
ನೊಯ್ದುಱೆ ಬಿಡಲೆಯ್ದಲಾಱದಿರೆ ತಾನವಱಿಂ
ದೆಯ್ದುವ ಗತಿ ಹಿರಿದೆಂಬವೊ
ಲೆಯ್ದಿದ ಶಬರನವನಿರಱಿದು ತೋಱೆದನಾಗಳ್‌೭೯

ಅಲಗಂಬಿಂದಿಸೆ ಬೆದಱದೆ
ಮಲೆದಿದಿರನೆ ಬಂದು ಮೇಲೆವಾಯ್ದೊಡೆ ತೀವಿ
ರ್ದಲಂಗಿದೆಕ್ಕಲನಂ ಕೊಲೆ
ಕಲಿತನವಾಯ್ತೆಕ್ಕಲಾವಣಂ ಲುಬ್ಧಕನೊಳ್‌೮೦

ಪ್ರತಿಮಾನಮನಾರ್ದಿಸೆ ಕಣೆ
ಮತಂಗಜದ ಪೇಚಕಾಂತರದೆ ಪೋಪುದಱೆಂ
ಪ್ರತಿಮಾನಂ ಶರವಿದ್ಯೆಯೊ
ಳಿತರರ್‌ತನಗಿಲ್ಲೆನಿಪ್ಪನಲ್ಲಿ ಕುರಂಗಂ ೮೧

ಸಿಂಗಮನದಱಟ್ಟುವ ಮುನಿ
ಸಿಂಗಮವನ ಸಾಹಸಕ್ಕಮುೞಿದ ಮೃಗಂಗಳ್‌
ಸಂಗಡದೆ ಸಾಯದವನೇ
ಸಂಗಡದೇಂ ಮೀಱುವನ್ನವಿನ್ನೇನೊಳವೇ ೮೨

ಪಕ್ಕಿಗೆ ಗಿಡುಗಂ ಕ್ರೂರಮೃ
ಗಕ್ಕೆ ಮೃಗಾರಾತಿ ಹರಿಗೆ ಶರಭಂ ಶರಭೌ
ಘಕ್ಕಷ್ಟಾಪದರಿಪುವೆನೆ
ಕೊಕ್ಕರಿಸದೆ ಕೊಂದನಂದು ನಿಂದು ಪುಳಿಂದಂ ೮೩

ವ || ಅಂತಾ ಕುರಂಗಂ ಕೃತಾಂತನಂತೆ ಜಳಸ್ಥಳ (ವನಸ್ಥಳ) ನಭಸ್ಥಳಚರಂಗಳಪ್ಪ ಜೀವನಂಗಳನೋವದೆ ಕೊಂದುಂ ತಣಿಯದೆ ದೆಸೆಗಳನವ್ವಳಿಸಿ ನೋಡುತ್ತುಂ ವಿಪುಳಾಚಳದೊಳ್‌ಯೋಗನಿಯೋಗದೊಳ್‌ನಿಂದಿರ್ದಾ ಯೋಗಿಶ್ವರನಂ ಕಂಡುಂ ಪರಿತಂದು ಭವಬದ್ಧಕ್ರೋಧದಿಂ ಭವನಂತೆ ವನೇಚರಂ ವಿಷಮಲೋಚನನಾಗಿ ನುಂಗುವಂತೆ ನೋಡಿ

ಕಂ || ಪೆಱತೇನೊ ಬಗೆಗೆ ತನ್ನನೆ
ಗುಱೆಮಾಡಿದ ಮುನಿಯ ತನುವನೊದವಿದ ಮುನಿಸಿಂ
ಗುಱಿಮಾಡಿ ನೆರೆಯದಘಮಂ
ನೆಱಪುವೆನಾನೆಂಬ ತೆಱದೆ ತೆಗೆನೆರೆದೆಚ್ಚಂ ೮೪

ನಿಶಿತಾಸ್ತ್ರಹತಿಯಿನಾ ಮುನಿ
ಯ ಶರೀರಂ ಕೂಡೆ ಜಾಳರಂಬೋಗಿರೆ ತ
ನ್ನ ಶರೀರದೇಱು ವಾಯೊಳೆ
ವಿಶೇಷದಿಂ ನುಸುೞೆ ಕಂಡು ಮುಳಿಯದ ಮುನಿಸಿಂ ೮೫

ಕರಚಕ್ರದಿಟ್ಟು ಖಂಡಿಸು
ತಿರೆ ಶಬರಂ ತನುವನಾಮೆ ಬೇರ್ಕೆಯ್ವೆಡೆಯೊಳ್‌
ನೆರಮಾದನೆಂದೆ ಯತಿಪತಿ
ಪರಮಧ್ಯಾನದೊಳೆ ನಿಂದನೇಂ ಧೃತಿಯುತನೋ ೮೬

ವನಮೃಗನಿವಹಂ ತವಗಾ
ವನೇಚರನಿನಪ್ಪ ಬಾಧೆಯಂ ಬಗೆಯದೆ ಕ
ಣ್ಬನಿಯಂ ತೀವುತ್ತುಂ ನಿಜ
ತನುವಂ ಶರಚಕ್ರಹತಿಗೆ ಸಾರ್ಚಿದುವಾಗಳ್‌೮೭

ವನದೇವತೆಯರೊಳಾಕ್ರಂ
ದನನಿನದಂ ಪುಟ್ಟಿತಲ್ಲಿ ಜವನಂ ಬಾರಿ
ಪ್ಪನುಮಾವನೊ ಕಟ್ಟಿತನಾ
ವನೊ ಕಳೆವನೆನಿಪ್ಪ ಮಾತದೇಂ ತಪ್ಪುಗುಮೇ ೮೮

ಶಲ್ಯಂಗಳಿರ್ದೊಡಂ ವೈ
ಕಲ್ಯಕ್ಕೆಡೆಗುಡದೆ ಧೃತಿಯನವಳಂಬಿಸಿ ನಿಃ
ಶಲ್ಯೋವ್ರತಿಯೆನಿಸಿದ ವಾ
ತ್ಸಲ್ಯಪರಂ ಪರಮತತ್ತ್ವಮಂ ಭಾವಿಸಿದಂ ೮೯

ವ || ಅಂತು ನಿರ್ಮಳಾಂತರಂಗಧರ್ಮಧ್ಯಾನಪರಾಯಣನಾಗೆ

ಕಂ || ಗಿಡುವಿಂದಂ ತೊಲಗಿದಲರ್‌
ಪಡೆದು ಗುಣಮನುತ್ತಮಾಂಗದೊಳ್‌ಸೊಗಯಿಪವೋ
ಲೊಡಲಿಂ ತೊಲಗಿದ ಮುನಿಯಸು
ಪಡೆದು ಗುಣಮನುತ್ತಮಾಂಗದೊಳ್‌ಸೊಗಯಿಸುಗುಂ ೯೦

ಮಂದರಧೃತಿಯತಿತನುವಂ
ಮಂದಾರನಮೇರುಪಾರಿಜಾತಕಮುಚಿತಂ
ಬಂದು ಸುರಿದತ್ತು ದೆಸೆ ತಂ
ಪಿಂದಂ ಪುದಿವಂತು ದಿವಿಜಕರತಳಗಳಿತಂ ೯೧

ವ || ಅಂತು ಪರಿತ್ಯಕ್ತಶರೀರಭಾರನಾದ ಮುನಿನಾಯಕಂ ಸುಭದ್ರಾಭಿಧಾನ ಸುಖನಿಧಾನ ಮಧ್ಯಮ ಗ್ರೈವೇಯಕ ನಾಯಕರ್ನನುಂ ಸಪ್ತವಿಂಶತಿರತ್ನಾಕರಪ್ರಮಿತಜೀವಿತನುಂ ತತ್ಸಮಾನ ಸಂವತ್ಸರಸಹಸ್ರಸಂಕಳ್ಪಿತಾಮೃತಾಶನನುಂ ಸಾರ್ಧತ್ರಯೋದಶಮಾಸ ನಿರ್ಯತ್ಸುರಭಿ ನಿಶ್ವಾಸನುಮಣಿಮಾದಿಗುಣಮಣಿಪಾರಾವಾರನುಂ ನಿಃಪ್ರವೀಚಾರನುಮಾಗಿ

ಕಂ || ನೂತ್ನಶಶಿಕಾಂತನಿರ್ಮಳ
ರತ್ನಚ್ಛವಿ ಸಹಜವಸನಭೂಷಣಮಾಳಂ
ರತ್ನಿದ್ವಯಾರ್ಧತನು ಸಾ
ಪತ್ನರಹಿತಮಹಿಮನೆಸೆದನಂದಹಮಿಂದ್ರಂ ೯೨

ಅಪ್ರತಿಮಪುಣ್ಯಸಂಜನಿ
ತಾಪ್ರತಿಮನಿಜಾಯುರಬ್ಧಿಭವಸುಖಸುಧೆಯಿಂ
ಶ್ರೀಪ್ರಭು ತಣಿದನವರತಮ
ಯಪ್ರಿಯನಲ್ಲಿರ್ದ ಜಿನರ್ಗೆ ವಿನಮಿತನಪ್ಪಂ ೯೩

ವ || ಅಂತು ಕಳ್ಪಾತೀತದೊಳನಲ್ಟಾನಂದಪೀಯೂಷಮಂ ಪೀರ್ದು ನಿಜಾಯುರವ ಸಾನದೊಳನೂನಜ್ಞಾನಜೈನಮೂರ್ತಿಯಂ ಧ್ಯಾನಿಸುತ್ತುಮಲ್ಲಿಂದಮಹಮಿಂದ್ರಂ ಬಂದು ಜಂಬೂ ವೃಕ್ಷೋಪಲಕ್ಷಿತದ್ವೀಪದ ಭರತಕ್ಷೇತ್ರದೊಳ್‌

ಕಂ || ಕೋಶಾಭಿವೃದ್ಧಿಯಂ ವಸು
ಧೇಶಂಗೆ ಸಮಸ್ತಧ್ಯಾನರತ್ನಾಕರಮ
ಪ್ಪೀ ಶೋಭೆಯಿಂದೆ ಪಡೆದು ಸು
ಕೌಶಲಮನ್ವರ್ಥನಾಮಮೆಸೆಗುಂ ದೇಶಂ ೯೪

ವ || ಆ ವಿಷಯವಿಳಾಸಿನಿಗಳಂಕಾರಮೆನಿಸಿ

ಕಂ || ಸಾತಿಶಯರೂಪಯೌವನ
ಚಾತುರ್ಯನಿಕೇತನಾಂಗನಾನಿಚಿತಂ ಸಾ
ಕೇತಪುರಿ ಮಕರಕೇತನ
ಮಂ ತನ್ನೊಳ್‌ನೋಡೆ ಲೀಲೆಯಿಂದೆತ್ತಿಸುಗುಂ ೯೫

ವ || ಆ ಪುರಶ್ರೀಪತಿಯುಂ ಕಾಶ್ಯಪಾನ್ವಯಪ್ರಶಸ್ತ್ಯನುಮಿಕ್ಷ್ವಾಕುವಂಶೋತ್ತಂಸನುಮಪ್ಪ

ಉ || ಶ್ರೀವಿಭುವಜ್ರಬಾಹುವಸುಧಾಪತಿಗಂ ವಿಳಸತ್ಪ್ರಭಂಕರೀ
ದೇವಿಗಮಿಂದ್ರಭೂರುಹಕಮಪ್ರತಿಮಪ್ರಿಯಕಳ್ಪವಲ್ಲಿಗಂ
ಭೂವಳಯಾರ್ತಿಹಾರಕಮುದಾರಗುಣೋನ್ನತಿ ಪುಟ್ಟುವಂತೆ ವಿ
ಶ್ವಾವನಿಪೂಜ್ಯನೂರ್ಜಿತಯಶಃಪ್ರಸರಂ ಕವಿತಾಮನೋಹರಂ ೯೬

ಕಂ || ಆನಂದಂ ಪರಿಜನಕ
ತ್ಯಾನಂದಂ ಪುರಜನಕ್ಕೆ ಜನಿಯಿಸುತಿರೆ ನೇ
ತ್ರಾನಂದನಮೂರ್ತಿ ಗುಣಾಂ
ಭೋನಿಧಿಯಾನಂದನೆಂಬ ನಂದನನಾದಂ ೯೭

ವ || ಅಂತು ತನ್ನಭಿಧಾನಕ್ಕನ್ವರ್ಥಮಪ್ಪಂತು ಪುಟ್ಟಿ

ಮ.ಸ್ರ || ಸ್ಮಿತಹೇಮಾಂಭೋಜವಕ್ತ್ರಂ ಕುವಳಯನನದ್ವಂದ್ವಮಾಜಾನುಬಾಹು
ದ್ವಿತಯಂ ವಿಸ್ತೀರ್ಣವಕ್ಷಂ ಘನಜಘನಯುಗಂ ಚಾರುರಂಭೋರುಯುಗ್ಮಂ
ನುತಜಂಘಾಕಾಂಡಮಂಚನ್ಮೃದುಪದಯುಗಳಂ ರಂಜಿಪನ್ನಂ ಕುಮಾರಂ
ಚತುರಸ್ತ್ರೀಹಾರಿಯಾದಂ ವಿಬುಧಜನಮನಃಪದ್ಮಿನೀಪದ್ಮಮಿತ್ರಂ ೯೮

ಗದ್ಯ

ಇದು ವಿದಿತ ವಿಬುಧಲೋಕನಾಯಕಾಭಿಪೂಜ್ಯ ವಾಸುಪೂಜ್ಯಜಿನಮುನಿ ಪ್ರಸಾದಾಸಾದಿತ ನಿರ್ಮಳಧರ್ಮ ವಿನುತ ವಿನೇಯಜನವನಜವನವಿಳಸಿತ ಕವಿಕುಳತಿಳಕಪ್ರಣೂತ ಪಾರ್ಶ್ವನಾಥ ಪ್ರಣೀತಮಪ್ಪ ಪಾರ್ಶ್ವನಾಥಚರಿತಪುರಾಣದೊಳಾ ನಂದಕುಮಾರಾಭ್ಯುದಯವರ್ಣನಂ ದ್ವಾದಶಾಶ್ವಾಸಂ